Chapter VII
ಪಯಣದ ಅಂತ್ಯ
ಅಕ್ಟೋಬರ್ 28ರಂದು ಕ್ಯಾಪ್ಟನ್ ಸೇವಿಯರ್ ಅವರ ನಿಧನ ವಾರ್ತೆಯು ತಿಳಿದುಬಂದ ತಕ್ಷಣ ಸ್ವಾಮೀಜಿಯವರು ಮಾಯಾವತಿಗೆ ಶ್ರೀಮತಿ ಸೇವಿಯರ್ ಅವರು ಸಂತೈಸುವುದಕ್ಕಾಗಿ ಹೊರಟರು. 1901, ಜನವರಿ 3 ರಂದು ಆ ಊರನ್ನು ಸೇರಿ ಎರಡು ವಾರಗಳ ಕಾಲ ಅಲ್ಲಿಯೇ ತಂಗಿದ್ದರು. ಅದ್ವೈತಕ್ಕಾಗಿ ನಿವೇದಿಸಿರುವ ಹಿಮಾಲಯದ ಆಶ್ರಮದ ಭವ್ಯದೃಶ್ಯ ಇವರನ್ನು ಸಂತೋಷಗೊಳಿಸಿತು. ಮೊದಲೇ ಅಸ್ವಸ್ಥರಾಗಿದ್ದ ಅವರು ಶೀತಬಾಧೆಯಿಂದ ಪೀಡಿತರಾದರು. ಆದರೂ ಅದನ್ನು ಲೆಕ್ಕಿಸದೆ ನಿಶ್ಚಿಂತರಾಗಿ ಆನಂದದಿಂದ ಕಾಡಿನಲ್ಲಿ ಮತ್ತು ಅಲ್ಲಿದ್ದ ಸರೋವರದ ದಂಡೆಯಲ್ಲಿ ಸಂತೋಷದಿಂದ ಅಡ್ಡಾಡಿದರು.
ಅಲ್ಲಿಂದ ಬೇಲೂರಿಗೆ ಹಿಂದಿರುಗಿ ಏಳುವಾರಗಳ ಕಾಲ ಮಠದಲ್ಲಿ ತಂಗಿದ್ದು ನಂತರ ಅಸ್ಸಾಂ ಮತ್ತು ಪೂರ್ವ ಬಂಗಾಳಕ್ಕೆ ಹೋದರು. ಪುಣ್ಯಕ್ಷೇತ್ರಗಳಿಗೆ ಭೇಟಿನೀಡಬೇಕೆಂಬ ತಮ್ಮ ಅಭಿಲಾಷೆಯನ್ನು ಸ್ವಾಮೀಜಿಯವರ ತಾಯಿ ತಿಳಿಸಿದಾಗ ಸ್ವಾಮೀಜಿ ಅವರೊಂದಿಗೆ ಹೊರಟರು. "ಇದು ಹಿಂದೂ ದೇಶದ ವಿಧವೆಯ ಮಹತ್ತರವಾದ ಆಸೆ." ನನ್ನ ಕುಟುಂಬದವರಿಗೆ ಸದಾ ಆತಂಕ, ದುಃಖವನ್ನೇ ನೀಡಿರುವೆ. ಈಗ ನಾನು ಅಮ್ಮನ ಒಂದು ಅಭಿಲಾಷೆಯನ್ನಾದರೂ ಈಡೇರಿಸಲು ಪ್ರಯತ್ನಿಸುತ್ತಿದ್ದೇನೆ" ಎಂದು ಶ್ರೀಮತಿ ಬುಲ್ ಅವರಿಗೆ ಸ್ವಾಮಿ ವಿವೇಕಾನಂದರು ಬರೆದಿದ್ದಾರೆ. ತಮ್ಮ ಪ್ರವಾಸದಲ್ಲಿ ನಾಗಲ್ ಬಂದ್, ಕಾಮಾಖ್ಯಾ ಮತ್ತು ಶಿಲ್ಲಾಂಗಿಗೆ ಭೇಟಿಯನ್ನಿತ್ತು ಢಾಕಾ ಮತ್ತು ಶಿಲ್ಲಾಂಗಿನಲ್ಲಿ ಕೆಲವು ಉಪನ್ಯಾಸಗಳನ್ನು ನೀಡಿ 1901ರ ಮೇ 2ನೇ ವಾರದಲ್ಲಿ ಬೇಲೂರು ಮಠಕ್ಕೆ ಹಿಂದಿರುಗಿದರು.
ಮಠದಲ್ಲಿ ಯಾವುದನ್ನೂ ಹಚ್ಚಿಕೊಳ್ಳದ ರೀತಿಯಲ್ಲಿ ಜೀವನ ನಡೆಸಬೇಕೆಂದು ಪ್ರಯತ್ನಿಸಿದರು. ಅನೇಕ ವೇಳೆ ತುಂಡು ದಟ್ಟಿಯನ್ನೇ ಧರಿಸಿಕೊಂಡು ಮಠದ ಸುತ್ತಲೂ ಓಡಾಡುತ್ತಾ ಅಥವಾ ಅಡಿಗೆ ಮಾಡುತ್ತಿರುವುದನ್ನು ವೀಕ್ಷಿಸುತ್ತಾ, ಇಲ್ಲವೇ ಸಂನ್ಯಾಸಿಗಳೊಂದಿಗೆ ಭಕ್ತಿಗೀತೆಗಳನ್ನು ಹಾಡುತ್ತಾ ಇದ್ದರು. ಕೆಲವೊಮ್ಮೆ ಅತಿಥಿ ಅಭ್ಯಾಗತರಿಗೆ ಆಧ್ಯಾತ್ಮಿಕ ವಿಷಯಗಳನ್ನು ಕುರಿತು ಉಪದೇಶ ನೀಡುತ್ತಿದ್ದರು. ಉಳಿದ ವೇಳೆಯಲ್ಲಿ ತಮ್ಮ ಕೊಠಡಿಯಲ್ಲಿ ಕುಳಿತು ಶ್ರದ್ಧೆಯಿಂದ ಓದುತ್ತಿದ್ದರು, ಇಲ್ಲವೇ ಮುಂದೆ ಕಾರ್ಯಾಗೈಯಬೇಕಾಗಿದ್ದರ ಯೋಜನೆಯನ್ನು, ಜಟಿಲವಾದ ಶಾಸ್ತ್ರ ಪ್ರಕ್ರಿಯೆ ಅಥವಾ ಪಂಕ್ತಿಗಳನ್ನು ಕುರಿತು ಮಠದ ಸದಸ್ಯರಿಗೆಲ್ಲಾ ವಿವರಿಸುತ್ತಿದ್ದರು. ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನೆಲ್ಲಾ, ಬೇಲೂರು ಮಠದ ಸಹ ಸೋದರ ಶಿಷ್ಯರ ಹೆಸರಿಗೆ ಕಾನೂನುಬದ್ಧ ಪತ್ರವನ್ನು ಬರೆದು ಎಲ್ಲ ಔಪಚಾರಿಕ ಕರ್ತವ್ಯಗಳಿಂದ ಬಿಡುಗಡೆಯನ್ನು ಹೊಂದಿದರು.
1901ರ ಅಂತ್ಯದಲ್ಲಿ ಜಪಾನಿನಿಂದ ಇಬ್ಬರು ಬೌದ್ಧ ವಿದ್ವಾಂಸರು ಮುಂದೆ ನಡೆಯಲಿರುವ ಧರ್ಮ ಸಮ್ಮೇಳನಕ್ಕೆ ಆಹ್ವಾನಿಸಲು ಇವರಲ್ಲಿಗೆ ಬಂದರು. ಆದರೆ ಸ್ವಾಮಿ ವಿವೇಕಾನಂದರು ಆ ಆಹ್ವಾನವನ್ನು ಸ್ವೀಕರಿಸಲಾಗದೆ, ಅವರೊಂದಿಗೆ ಗಯಾಕ್ಕೆ ಮಾತ್ರ ಹೋದರು. ಅಲ್ಲಿಂದ ವಾರಾಣಸಿಗೆ ತೆರಳಿದರು. ಅವರಲ್ಲಿ ಇವರ ಸಂದೇಶದಿಂದ ಸ್ಫೂರ್ತಿ ಹೊಂದಿದ ಕೆಲವು ತರುಣರು, ಬಡವರಿಗೆ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುತ್ತಿರುವುದನ್ನು ಕಂಡು ಸಂತೋಷಪಟ್ಟರು. ಇದು ಮುಂದೆ ರಾಮಕೃಷ್ಣ ಮಿಷನ್ನಿನ ಸೇವಾ ಗೃಹಕ್ಕೆ ಕೇಂದ್ರವಾಯಿತು.
ತಮ್ಮ ಅವಸಾನವು ಸಮೀಪಿಸುತ್ತಿದೆ ಎಂಬುದನ್ನು ಸ್ವಾಮೀಜಿ ಅರಿತರು. ಕೊನೆಯ ದಿನಗಳ ಇವರ ಕಾರ್ಯವೆಲ್ಲವೂ ವಿಚಾರ ಪೂರ್ವಕವಾಗಿತ್ತಲ್ಲದೆ ಅರ್ಥಗರ್ಭಿತಾಗಿತ್ತು. "ವಿಶಾಲವಾದ ಮರದ ನೆರಳಿನಲ್ಲಿ ಸಣ್ಣ ಗಿಡಗಳು ಬೆಳೆಯಲಾರವು" ಎಂದಿದ್ದರು ಇವರು. ಜುಲೈ 4, 1902ರಂದು ಬೆಳಗ್ಗೆ 8 ರಿಂದ 11ರವರೆಗೆ ವಾಡಿಕೆಗಿಂತಲೂ ಅಪರೂಪವಾಗಿ ಧ್ಯಾನಸ್ಥರಾಗಿದ್ದರು. ನಂತರ ಮಧ್ಯಾಹ್ನ ಸ್ವಾಮೀಜಿ ಪ್ರೇಮಾನಂದ ಅವರೊಂದಿಗೆ ವಿಹರಿಸುತ್ತಿರುವಾಗ ಅವರಿಗೆ ವೇದಾಂತದ ಶಾಲೆಯನ್ನು ಪ್ರಾರಂಭಿಸಬೇಕೆಂಬ ತಮ್ಮ ಯೋಜನೆಯನ್ನು ವಿವರಿಸಿದರು. ಸಂಜೆ ಮತ್ತೆ ಒಂದು ಗಂಟೆಕಾಲ ಧ್ಯಾನಸ್ಥರಾಗಿಯೇ ತಮ್ಮ ಕೊಠಡಿಯಲ್ಲಿ ಕಳೆದು, ಮಲಗಿ ಎರಡು ಬಾರಿ ನಿಡಿದಾದ ಉಸಿರನ್ನು ಎಳೆದು ಚಿರಶಾಂತಿಯನ್ನು ಪಡೆದರು.
ಸ್ವಾಮಿ ವಿವೇಕಾನಂದರು ತಮ್ಮ ಶರೀರವನ್ನು ತ್ಯಜಿಸಿದ್ದರೂ ಸಹ 1892ರಲ್ಲಿ ಎರಿಕ್ ಹ್ಯಾಮಂಡ್ ರಿಗೆ ಹೇಳಿದ್ದ ಮಾತುಗಳು ಶಾಶ್ವತ ಸ್ಫೂರ್ತಿಯಾಗಿ ಪ್ರತಿಯೊಬ್ಬರಿಗೂ ಭರವಸೆ ಮೂಡಿಸುತ್ತವೆ: "ಹರಿದ ಅರಿವೆಯನ್ನು ಎಸೆಯುವಂತೆ ಈ ದೇಹವನ್ನು ಒಗೆದು ಇದರಿಂದ ನಿರ್ಗಮಿಸುವುದು ನನಗೇನೂ ಒಳ್ಳೆಯದು. ಆದರೆ ನಾನು ಕೆಲಸವನ್ನು ನಿಲ್ಲಿಸುವುದಿಲ್ಲ. ನಾನು ಎಲ್ಲೆಡೆಯೂ ಜನರನ್ನು ಪ್ರೇರೇಪಿಸುತ್ತೇನೆ, ಎಲ್ಲಿಯ ತನಕ ಅವರಿಗೆ ತಾವುಗಳು ದೇವರಿಂದ ಅಭಿನ್ನರೆಂದು ಅರಿವಾಗುವುದೋ ಅಲ್ಲಿಯವರೆಗೂ".

Comments
Comments
Sign in to leave a comment