Chapter IV
ಜಗತ್ತಿನ ವೇದಿಕೆಯ ಮೇಲೆ
ಚೈನಾ, ಜಪಾನ್, ಕೆನಡಾ ಮೂಲಕ ಸ್ವಾಮಿ ವಿವೇಕಾನಂದರು ಅಮೆರಿಕಾಗೆ ಪ್ರಯಾಣ ಬೆಳಸಿ. ಜುಲೈ ಮಧ್ಯದಲ್ಲಿ ಚಿಕಾಗೊವನ್ನು ಸೇರಿದರು. ಬೌದ್ಧ ಸಂನ್ಯಾಸಿಗಳ ಹಲವು ಮಠಗಳನ್ನು ಕಾನ್ ಟನ್ ನಲ್ಲಿ ನೋಡಿದರು. ಕೈಗಾರಿಕೆಯಲ್ಲಿ ಜಪಾನೀಯರು ಅಭಿವೃದ್ಧಿ ಹೊಂದಿದ ರೀತಿ ಮತ್ತು ಅವರ ಸ್ವಚ್ಛತೆಯನ್ನು ಮೆಚ್ಚುಗೆಯಿಂದ ಗಮನಿಸಿದರು. ಚಿಕಾಗೊವನ್ನು ತಲುಪಿದಾಗ ಅವರು ಪಾಶ್ಚಾತ್ಯ ರಾಷ್ಟ್ರಗಳ ಕಣ್ಣು ಕೋರೈಸುವಂತಹ ಶ್ರೀಮಂತಿಕೆ ಮತ್ತು ಕಲ್ಪನಾಶಕ್ತಿಯನ್ನು ಕಂಡು ಮಗುವಿನಂತೆ ತಬ್ಬಿಬ್ಬಾದರು. ಸೆಪ್ಟಂಬರ್ ತಿಂಗಳವರೆಗೂ ಸರ್ವಧರ್ಮ ಸಮ್ಮೇಳನ ಸೇರುವುದಿಲ್ಲವೆಂದೂ, ಪರಿಚಯ ಪತ್ರವಿಲ್ಲದೆ ಯಾರೂ ಪ್ರತಿನಿಧಿಸಲಾಗುವಂತಿಲ್ಲವೆಂಬ ಸಂಗತಿ ತಿಳಿದು ನಿರಾಶರಾದರು. ಸ್ವಾಮೀಜಿ ಹತಾಶರಾದರೂ, ದೈವಸಂಕಲ್ಪಕ್ಕೆ ಅಧೀನರಾಗಿ ಮನಸ್ಸನ್ನು ಗಟ್ಟಿಮಾಡಿಕೊಂಡು ಚಿಕಾಗೊಗಿಂತ ಅಲ್ಪವೆಚ್ಚದ ನಿರ್ವಹಣೆಗಾಗಿ ಬಾಸ್ ಟನ್ನಿಗೆ ಹೊರಟರು. ರೈಲಿನಲ್ಲಿ ಕು. ಕ್ಯಾಥರಿನ್ ಸ್ಯಾನ್ ಬಾರ್ನ್ ಅವರ ಪರಿಚಯ ಆಕಸ್ಮಿಕವಾಗಿ ಆಯಿತು. ಅವಳು ಸ್ವಾಮೀಜಿಯವರನ್ನು ಬಾಸ್ ಟನ್ ನಲ್ಲಿ ತನ್ನ ಅತಿಥಿಯಾಗಿರಬೇಕೆಂದು ಆಹ್ವಾನಿಸಿದಳು. ಅವಳ ಮೂಲಕ ಹಾರ್ ವರ್ಡ್ ವಿಶ್ವವಿದ್ಯಾನಿಲಯದ ಪ್ರೊ|| ಜಾನ್ ಹೆನ್ರಿ ರೈಟ್ ಅವರ ಪರಿಚಯವಾಯಿತು. ನಂತರ ಅವರೇ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಅಧ್ಯಕ್ಷರಿಗೆ "ನಮ್ಮಲ್ಲಿ ಪಾಂಡಿತ್ಯ ಪಡೆದಿರುವ ಎಲ್ಲ ಪ್ರೊಫೆಸರ್ಗಳನ್ನು ಮೀರಿಸುವಂತಹ ವ್ಯಕ್ತಿ" ಎಂದು ಪರಿಚಯ ಪತ್ರದಲ್ಲಿ ಬರೆದುಕೊಟ್ಟರು.
ಸರ್ವಧರ್ಮ ಸಮ್ಮೇಳನ ಪ್ರಾರಂಭವಾಗುವುದಕ್ಕೆ ಎರಡು ದಿನಗಳ ಮುಂಚೆಯೇ ಸ್ವಾಮೀಜಿ ಚಿಕಾಗೊಗೆ ಹಿಂತಿರುಗಿದರು. ಪೌರಸ್ತ್ಯ ರಾಷ್ಟ್ರಗಳಿಂದ ಬಂದಂತಹ ಪ್ರತಿನಿಧಿಗಳನ್ನು ಸ್ವಾಗತಿಸಿ ಉಪಚರಿಸುವಂತಹ ಸಮಿತಿಯ ವಿಳಾಸವನ್ನು ಇವರು ಕಳೆದುಕೊಂಡು ಭಯಭ್ರಾಂತರಾದರು. ಆ ರಾತ್ರಿ ಸರಕು ರವಾನೆಯ ಸ್ಥಳದಲ್ಲಿ ಖಾಲಿಯಾದ ದೊಡ್ಡ ಪೆಟ್ಟಿಗೆಯೊಂದರಲ್ಲೇ ತಂಗಿದ್ದರು. ಮಾರನೆಯ ಬೆಳಿಗ್ಗೆ ಈ ಕಷ್ಟದಿಂದ ಪಾರಾಗಲು ಯಾರಾದರೂ ಸಹಾಯವನ್ನು ನೀಡಬಹುದೆಂದು ಹುಡುಕಲು ಹೊರಟರು. ಆದರೆ ಅಲ್ಲಿ ವರ್ಣೀಯರಿಗೆ ಅಷ್ಟು ಸುಲಭವಾಗಿ ಸಹಾಯ ಲಭ್ಯವಾಗುವಂತಿರಲಿಲ್ಲ. ನಿಷ್ಪ್ರಯೋಜಕ ಅಲೆತದಿಂದ ಬಳಲಿ ಬೀದಿಯ ಪಕ್ಕದಲ್ಲಿ ತಮ್ಮನ್ನು ದೈವ ಇಚ್ಛೆಗೆ ಒಪ್ಪಿಸಿಕೊಂಡು ಕುಳಿತುಬಿಟ್ಟರು. ಇವರು ಕುಳಿತಿದ್ದ ಸ್ಥಳಕ್ಕೆ ಎದುರಾಗಿ ನವೀನ ಮಾದರಿಯ ಮನೆಯಿಂದ ಓರ್ವ ಸಿರಿವಂತ ಮಹಿಳೆ ಇವರಿದ್ದಲ್ಲಿಗೆ ಬಂದು ಸಹಾಯ ನೀಡಲು ಮುಂದಾದಳು. ಇವಳೇ ಶ್ರೀಮತಿ ಜಾರ್ಜ್ ಡಬ್ಲ್ಯು. ಹೇಲ್. ಮುಂದೆ ಜಾರ್ಜ್ ಡಬ್ಲ್ಯು. ಹೇಲ್ ಅವರ ಮನೆಯೇ ಸ್ವಾಮೀಜಿಯವರು ಅಮೆರಿಕಾದಲ್ಲಿರುವಾಗಲೆಲ್ಲಾ ತಂಗುವ ಸ್ಥಳವಾಯಿತು. ಹೇಲ್ ಕುಟುಂಬದವರು ಇವರಿಗೆ ನಿಷ್ಠಾವಂತ ಶಿಷ್ಯರಾದರು.
1893ರ ಸೆಪ್ಟಂಬರ್ 11 ರಿಂದ ಸರ್ವಧರ್ಮ ಸಮ್ಮೇಳನ ಪ್ರಾರಂಭವಾಯಿತು. ಕಾಲಾಸಂಸ್ಥೆಯ ವಿಶಾಲ ಸಭಾಂಗಣದಲ್ಲಿ ಸುಮಾರು ಏಳುಸಹಸ್ರ ಜನರು ಉಪಸ್ಥಿತರಾಗಿದ್ದರು. ಇವರುಗಳು ಬೇರೆ ಬೇರೆ ರಾಷ್ಟ್ರಗಳ ಉತ್ತಮ ಸಂಸ್ಕೃತಿಯ ಪ್ರತಿನಿಧಿಗಳಾಗಿದ್ದರು. ಜಗತ್ತಿನ ಪ್ರತಿಯೊಂದು ಕಡೆಯಿಂದಲೂ ಧರ್ಮದ ಪ್ರತಿನಿಧಿಗಳು ವೇದಿಕೆಯ ಮೇಲೆ ಮಂಡಿಸಿದ್ದರು. ಉತ್ತಮ ಚಿಂತಕರು ತುಂಬಿರುವ ಅಷ್ಟು ದೊಡ್ಡ ಸಭಾಭವನದಲ್ಲಿ, ಸ್ವಾಮಿಗಳು ಎಂದೂ ಉಪನ್ಯಾಸವನ್ನು ನೀಡಿರಲಿಲ್ಲ. ತಮ್ಮ ಸರದಿ ಬಂದಾಗ ಅವರಿಗೆ ಅಂಜಿಕೆಯ ಅನುಭವವಾಯಿತು. ಜ್ಞಾನದ ಅಧಿದೇವತೆ ಸರಸ್ವತಿಯನ್ನು ಮನದಲ್ಲೇ ಧ್ಯಾನಿಸಿ, ನಂತರ "ಅಮೆರಿಕದ ಸೋದರ ಸೋದರಿಯರೇ !" ಎಂದು ಸಭೆಯನ್ನು ಕುರಿತು ಸಂಭೋಧಿಸಿದ ಕ್ಷಣವೇ ಅಸಂಖ್ಯಂತ ಜನರಿಂದ ಎರಡು ನಿಮಿಷಗಳ ಕಾಲದವರೆಗೂ ಅಭಿನಂದನೆಯ ಕರತಾಡನದ ಮೊಳಗು ಕೇಳಿ ಬಂತು. 'ಆ ಏಳು ಸಹಸ್ರ ಮಂದಿಯೂ ಅರಿಯದೇ ಎದ್ದುನಿಂತು ಗೌರವವನ್ನು ಅರ್ಪಿಸಿದರು.' ಕಿತ್ತಳೆ ಬಣ್ಣದ ನೀಳ ಉಡುಪಿನ, ತೇಜೋಮಯ ಮುಖವುಳ್ಳ ಮಹಿಮಾತಿಶಯನ ಕಡುಸತ್ಯವಾದ ಸರಳ ನುಡಿಗಳ ರುಚಿ ಎಷ್ಟು ಮಹತ್ವದ್ದಾಗಿತ್ತೆಂದರೆ ಸರ್ವಧರ್ಮದ ಸಭೆಯ ಮಹಾನ್ ವ್ಯಕ್ತಿ ಎಂದು ಎಲ್ಲಾ ಪತ್ರಿಕೆಗಳೂ ಅಂದು ವಿವೇಕಾನಂದರನ್ನು ವರ್ಣಿಸಿದ್ದವು. ಭಿಕ್ಷೆಯ ಪಾತ್ರೆ ಹಿಡಿದಿದ್ದ ಓರ್ವ ಸಾಮಾನ್ಯ ಸಂನ್ಯಾಸಿ ಕ್ಷಣಾರ್ಧದಲ್ಲಿಯೇ ಶ್ರೇಷ್ಠ ವ್ಯಕ್ತಿ ಆದನು.
ಸ್ವಾಮೀಜಿಯ ಉಳಿದ ಭಾಷಣವನ್ನೆಲ್ಲಾ ಅತ್ಯಂತ ಆದರದಿಂದ ಮತ್ತು ಮೆಚ್ಚುಗೆಯಿಂದ ಜನರು ಆಲಿಸಿದರು. ವಿಶ್ವವ್ಯಾಪಕತ್ವ ಎನ್ನುವುದೇ ಎಲ್ಲರ ಪ್ರಧಾನ ವಿಷಯವಾಗಿತ್ತು. ಪ್ರತಿಯೊಬ್ಬ ಪ್ರತಿನಿಧಿಯೂ ತಮ್ಮ ತಮ್ಮ ಧರ್ಮವನ್ನು ಕುರಿತು ಮಾತನಾಡಿದರೆ , ಸ್ವಾಮಿ ವಿವೇಕಾನಂದರು ಮಾತ್ರ "ಬಾನಿನಷ್ಟು ವಿಸ್ತಾರ, ಸಮುದ್ರದಷ್ಟು ಆಳವಾದುದು" ಎಂದು ಧರ್ಮದ ಬಗ್ಗೆ ಮಾತನಾಡಿದರು. ಮಹಾ ಸಭೆಯ ಮುಕ್ತಾಯದೊಂದಿಗೆ, ಸ್ವಾಮಿಗಳ ವಿಶ್ರಾಂತಿ ದಿನಗಳು ಮುಗಿದವು. ಇನ್ನುಮುಂದೆ ಅಮೆರಿಕಾದ ಪ್ರತಿಯೊಂದು ಭಾಗದಲ್ಲೂ ಸ್ವಾಮಿಗಳು ಎಡಬಿಡದಂತಹ ಉಪನ್ಯಾಸಗಳನ್ನು ನೀಡಿದರು. ಉಪನ್ಯಾಸ ನೀಡುತ್ತೇನೆಂದು ಕಾರ್ಯಶಾಲೆಯೊಂದಿಗೆ ಕರಾರಿಗೆ ಸಹಿ ಮಾಡಿದ ಮೇಲೆ ಭಿನ್ನ ಭಿನ್ನ ಜನರಿಗೆ ಭಾಷಣ ನೀಡುತ್ತಾ ಚಲಿಸಬೇಕಾಯಿತು. ಈ ಪ್ರವಾಸವು ಪಾಶ್ಚಿಮಾತ್ಯರ ಅನೇಕ ರೀತಿಯ ಜೀವನದ ಪರಿಚಯವನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಿತು. ಆದರೂ ಈ ಕಾರ್ಯಶಾಲೆ ಸ್ವಪ್ರಯೋಜನಕ್ಕಾಗಿ ತಮ್ಮನ್ನು ಹೀಗೆ ಬಳಸಿಕೊಂಡು ನಾಚುವಂತೆ ಮಾಡಿದರೆಂಬ ತಿಳಿವು ಬಂದು ಅದರೊಂದಿಗಿದ್ದ ಸಂಬಂಧವನ್ನು ಕಡಿದು ಹಾಕಿದರು. 'ಶ್ರದ್ಧೆಯುಳ್ಳ ಪ್ರಾಮಾಣಿಕ ಅಮೆರಿಕ ಶಿಷ್ಯರ' ಗುಂಪನ್ನು ಕಟ್ಟಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗಾಗಿ ನಿಶ್ಶುಲ್ಕವಾಗಿ ತರಗತಿಗಳನ್ನು ಆರಂಭಿಸಿದರು. 1896ರ ಡಿಸೆಂಬರ್ನಲ್ಲಿ ಇವರ ಪೂರ್ವರಾಷ್ಟ್ರಗಳ ಭೇಟಿ ಕೊನೆಗೊಳ್ಳುವವರೆಗೂ ತೀವ್ರ ಕಾರ್ಯ ಚಟುವಟಿಕೆಗಳಿಂದ ಕೂಡಿದ್ದರು. ನ್ಯೂಯಾರ್ಕಿನಲ್ಲಿ ಅನೇಕ ತರಗತಿ ಮತ್ತು ಉಪನ್ಯಾಸಗಳನ್ನು ನೀಡಿದರಲ್ಲದೆ ವೇದಾಂತ ಸೊಸೈಟಿಯನ್ನು ಸ್ಥಾಪಿಸಿದರು. ಥೌಸೆಂಡ್ ಐಲ್ಯಾಂಡ್ ಪಾರ್ಕಿನಲ್ಲಿ ತಮಗೆ ಆತ್ಮೀಯರೆನಿಸಿದ ಶಿಷ್ಯವೃಂದಕ್ಕೆ ತರಬೇತಿಯನ್ನು ನೀಡಿದರು. 'ರಾಜಯೋಗ'ವನ್ನು ಕುರಿತು ಬರೆದರಲ್ಲದೆ, ಇಂಗ್ಲೆಂಡಿಗೆ ಎರಡು ಬಾರಿ ಭೇಟಿ ಇತ್ತರು. ಇಂಗ್ಲೆಂಡಿನಲ್ಲಿ ಇವರ ಉದ್ದೇಶ ಸಾಧನೆ ಕೈಗೊಂಡಿತು. ಇಲ್ಲಿ ನೀಡಿದ ಉಪನ್ಯಾಸ ಮಾಲೆಯೇ ಇದೀಗ 'ಜ್ಞಾನಯೋಗ' ಎಂದು ಅಂಕಿತವಾಗಿದೆ. ಕ್ಯಾಪ್ಟನ್ ಮತ್ತು ಶ್ರೀಮತಿ ಸೇವಿಯರ್, ಸಿಸ್ಟರ್ ನಿವೇದಿತ, ಇ. ಟಿ. ಸ್ಟರ್ಡಿ ಮೊದಲಾದ ಮಹನೀಯರು ಇವರ ಶಿಷ್ಯರಾದರು. ಇದಕ್ಕೆ ಮೊದಲು ನ್ಯೂಯಾರ್ಕ್ ನಲ್ಲಿ ಜೆಜೆ. ಗುಡ್ ವಿನ್ ಎಂಬ ಇಂಗ್ಲೀಷ್ ತರುಣ ಶೀಘ್ರಲಿಪಿಕಾರನ ಶಿಷ್ಯತ್ವವನ್ನು ಒಪ್ಪಿಕೊಂಡರು. ಈ ಭೇಟಿಯ ಅವಧಿಯಲ್ಲಿ ವಿದ್ವಾಂಸರೆಂದು ಪ್ರಖ್ಯಾತರಾಗಿದ್ದ ಮ್ಯಾಕ್ಸ್ ಮುಲ್ಲರ್ ಅವರನ್ನು ಭೇಟಿಯಾಗುವ ಸಂತೋಷ ಇವರದ್ದಾಯಿತು. 1895ರಲ್ಲಿ ಬೇಸಿಗೆಯಲ್ಲಿ ಯುರೋಪಿನ ಪ್ರವಾಸದಲ್ಲಿದ್ದ ಪ್ರಸಿದ್ಧ ಪೌರಸ್ತ್ಯ ಭಾಷಾ ಸಾಹಿತ್ಯಗಳ ಜರ್ಮನ್ ಪಂಡಿತನಾದ ಪಾಲ್ ಡಾಯ್ ಸನ್ ಎಂಬಾತನನ್ನು ಭೇಟಿಯಾದರು.
ಪಾಶ್ಚಾತ್ಯ ರಾಷ್ಟ್ರಗಳಿಗೆ, ಎಲ್ಲಾ ಧರ್ಮಗಳಿಗೂ ಮೂಲಭೂತವಾಗಿರುವುದು ವಿಶ್ವವ್ಯಾಪೀ ತತ್ತ್ವವನ್ನೊಳಗೊಂಡ ವೇದಾಂತ ಸಂದೇಶ ಎಂದು ಬೋಧಿಸಲು ಬಹಳ ಪ್ರಯಾಸವಾಯಿತು. ಅವರ ಶ್ರಮದ ಫಲವಾಗಿ ಆಗಲೇ ವೇದಾಂತ ಕಾರ್ಯವು ಅಮೆರಿಕೆಯಲ್ಲಿ ನಿಯತವಾಗಿ ಪ್ರತಿಷ್ಠಿತವಾಯಿತು. ಲಂಡನ್ನಿನಲ್ಲಿ

Comments
Comments
Sign in to leave a comment