Chapter V
ಆಗಮನದ ವಿಜಯೋತ್ಸವ
1890ರ ಡಿಸೆಂಬರ್ 12 ಸ್ವಾಮಿ ವಿವೇಕಾನಂದರು ಲಂಡನನ್ನು ಬಿಟ್ಟು ಸೇವಿಯರ್ಸ್ ರೊಂದಿಗೆ ರೋಮ್ ಮತ್ತು ಇಟೆಲಿಯ ಕೆಲವು ಪ್ರದೇಶಗಳಿಗೆ ಭೇಟಿಯಿತ್ತು. ಡಿಸೆಂಬರ್ 30 ರಂದು ನೇಪಲ್ಸ್ನಲ್ಲಿ ಹಡಗನ್ನು ಹತ್ತಿ ಭಾರತಕ್ಕೆ ಹೊರಟರು. ಮಿ|| ಗುಡ್ ವಿನ್ ಅವರು ನೇಪಲ್ಸಿನಲ್ಲಿ ಇವರ ತಂಡವನ್ನು ಸೇರಿದರು. ಅವರುಗಳು 19ನೇ ಜನವರಿ 1897ರಂದು ಕೊಲಂಬೋ ಸೇರಿದರು. ಸ್ವಾಮಿ ವಿವೇಕಾನಂದರ ಆಗಮನದ ಸುದ್ದಿ ಆಗಲೇ ಭಾರತವನ್ನು ತಲುಪಿತ್ತು. ಭಾರತದ ಪ್ರತಿಯೊಂದು ವಲಯದಿಂದಲೂ ವಿವೇಕಾನಂದರನ್ನು ಸ್ವಾಗತಿಸಲು ಜನರು ಸಂಭ್ರಮಭರಿತರಾಗಿದ್ದರು. ಈಗ ಅವರು ಕೇಳರಿಯದ ಸಂನ್ಯಾಸಿಯಾಗಿರಲಿಲ್ಲ ಅವರಿಗೆ ಯೋಗ್ಯವಾದ ರೀತಿಯಲ್ಲಿ ಸ್ವಾಗತ ಸಮಾರಂಭವನ್ನೇರ್ಪಡಿಸಲು ಪ್ರತಿಯೊಂದು ಚಿಕ್ಕ ಹಾಗೂ ದೊಡ್ಡ ನಗರಗಳಲ್ಲಿ ಸಮಿತಿಗಳು ರಚಿತವಾದವು. "ಸ್ವಾಮೀಜಿ ಅವರು ಪ್ರತೀಕ್ಷಾವಿಷ್ಟರಾದ ಜನರಿಗೆ ತಮ್ಮ ಸಂದೇಶದ ಮೂಲಕ - ರಾಮ, ಶಿವ ಮತ್ತು ಕೃಷ್ಣರ ನಾಡನ್ನು ಪುನಃ ಪ್ರತಿಷ್ಠಾಪಿಸುವ ಶಂಖಧ್ವನಿಯನ್ನು ಮೊಳಗಿಸಿದರು. ಅಲ್ಲದೆ ವೀರ ಚೈತನ್ಯ - ಅಮೃತ ಆತ್ಮಕ್ಕೆ ಸಮರಕ್ಕಾಗಿ ಮುನ್ನುಗ್ಗಲು ಕರೆಯಿತ್ತರು. ಅವರು ದಂಡ ಯಾತ್ರೆ ಹಂಚಿಕೆಯನ್ನು ವಿವರಿಸುವ ಓರ್ವ ಸೇನಾಧಿಪತಿಯಾಗಿದ್ದರು. "ಜೀವನಾಧಾರಕ್ಕೆ ಇರಬೇಕಾದ ಶಕ್ತಿ ನಿಮ್ಮಲ್ಲಿ ಎಲ್ಲಿದೆ ! ನಿಮ್ಮ ಅಮರವಾದ ಅತ್ಮದಲ್ಲಿಯೇ !! ಎದ್ದೇಳಿ ! ಎಂದೇ ಜನಸಮೂಹಕ್ಕೆ ಎಚ್ಚರಿಸುತ್ತಿದ್ದರು" ಎಂದು ರೋಮಾರೋಲ ಹೇಳಿದ್ದಾರೆ. ಸ್ವಾಮೀಜಿ ಮದ್ರಾಸಿನಲ್ಲಿ 5 ಸಾರ್ವಜನಿಕ ಉಪನ್ಯಾಸಗಳನ್ನು ನೀಡಿದರು. ಅವು ಪ್ರತಿಯೊಂದೂ ಮೂಢನಂಬಿಕೆ ಮತ್ತು ದುರ್ಬಲತೆಯನ್ನು ಹೊರ ದೂಡಿ ನವಭಾರತದ ನಿರ್ಮಾಣಮಾಡಬೇಕೆಂದು ಹುರಿದುಂಬಿಸುವ ಕಹಳೆಯ ಕರೆಯಾಗಿತ್ತು. "ಸಮಗ್ರ ವಿಶ್ವದ ಆಧ್ಯಾತ್ಮಿಕ ಏಕತೆಯನ್ನು ಬೋಧಿಸುವುದು ನಮ್ಮ ಧರ್ಮ. ಈ ಧರ್ಮವೇ ನಮ್ಮ ರಾಷ್ಟ್ರಜೀವನ ಸಂಗೀತದ ಮುಖ್ಯ ಭಾವವಾಗಿದೆ. ಅದು ಬಲಿಷ್ಠವಾಗಿದ್ದರೆ ಉಳಿದಿದ್ದೆಲ್ಲವೂ ತನಗೆ ತಾನೇ ಸರಿಹೋಗುತ್ತದೆ" ಎಂದು ಒತ್ತಿ ಹೇಳಿದರು. ಅವರು ತಮ್ಮ ರಾಷ್ಟ್ರದ ಜನರ ಪಾಶ್ಚಾತ್ಯ ಅನುಸರಣೆ, ಜಾತಿ ಮತ್ಸರ ಮತ್ತು ಹಳೆಯ ಮೂಢನಂಬಿಕೆ ಮೊದಲಾದವುಗಳನ್ನು ಕಂಡು ಛೀಮಾರಿ ಹಾಕುವುದನ್ನು ಬಿಡಲಿಲ್ಲ.
ಸ್ವಾಮೀಜಿಯವರು ಮದ್ರಾಸಿನಿಂದ ಕಲ್ಕತ್ತಾಗೆ ಹಡಗಿನ ಮೂಲಕ ಫೆಬ್ರವರಿ 20 ರಂದು ಬಂದು ಮುಟ್ಟಿದರು. ಅವರಿಗೆ, ಅವರ ಹುಟ್ಟೂರು ಅದ್ಭುತ ಸ್ವಾಗತವನ್ನು ನೀಡಿತು. "ನಾನಾ ವಿಚಾರದಿಂದ ಅಥವಾ ನುಡಿಯಿಂದ ಅಥವಾ ನಡೆಯಿಂದ ಏನನ್ನಾದರೂ ಸಾಧಿಸಿದ್ದೇ ಆದರೆ, ನಾನು ನುಡಿದ ಮಾತಿನಿಂದ ಜಗತ್ತಿನಲ್ಲಿ ಯಾರಿಗಾದರೂ ಸಹಾಯವಾಗಿದ್ದರೆ ಅದೆಲ್ಲವೂ ನನ್ನ ಗುರುಗಳ ಕೃಪೆಯಿಂದಲೇ ಆಗಿದ್ದು. ಈ ರಾಷ್ಟ್ರ ಉದ್ಧಾರವಾಗಬೇಕಾದರೆ, ಅದೂ ಸಹ ನನ್ನ ಗುರುಗಳ ನಾಮಬಲದಿಂದಲೇ, ನನ್ನಿಂದ ಆಗುವುದಿಲ್ಲ" ಎಂದು ಗುರುಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದರು.
ಸ್ವಾಮೀಜಿಯವರು ತಾವು ಮಾಡಬೇಕಾದ ಕಾರ್ಯವು ದೃಢ ನೆಲೆಗಟ್ಟಿನ ಮೇಲೆ ನಿಲ್ಲಬೇಕೆಂದು ಶಿಷ್ಯವೃಂದಕ್ಕೆ ಮತ್ತು ಸಂನ್ಯಾಸಿಗಳಿಗೆ ಬಲರಾಮಬೋಸ್ ಅವರ ನಿವಾಸದಲ್ಲಿ ಸೇರಲು ಕರೆ ಇತ್ತರು. 1897ರ ಮೇ ತಿಂಗಳಲ್ಲಿ ರಾಮಕೃಷ್ಣ ಸಂಸ್ಥೆಯ ಪ್ರಾರಂಭವಾಯಿತು. ಸ್ವಾಮಿ ವಿವೇಕಾನಂದರು ಹುಟ್ಟುಹಾಕಿದ ಸಂಘವು ಮಾನವ ಹಿತ ಸಾಧನೆ ಮತ್ತು ಆಧ್ಯಾತ್ಮಿಕತೆಯನ್ನು ತನ್ನ ಧ್ಯೇಯ ಮತ್ತು ಆದರ್ಶವನ್ನಾಗಿಟ್ಟು ಕೊಂಡಿತ್ತು. ತಮ್ಮ ಉದ್ದೇಶವನ್ನು ಕಾರ್ಯಗತಗೊಳಿಸಲು ಈ ಸಂಸ್ಥೆಯನ್ನು ಅವರು ಉದ್ಘಾಟಿಸಿದರು.
ಮೇ 1898ರಲ್ಲಿ ಕಲ್ಕತ್ತಾದಲ್ಲಿ ಪ್ಲೇಗ್ ಕಾಯಿಲೆ ಹರಡಿದಾಗ ಸ್ವಾಮಿ ವಿವೇಕಾನಂದರ ತಮ್ಮ ಶಿಷ್ಯ ಸಂನ್ಯಾಸಿಗಳಿಗೆ ಪರಿಹಾರ ಕೆಲಸವನ್ನು ವ್ಯವಸ್ಥಿತಗೊಳಿಸಿದರು. ಪ್ಲೇಗ್ ಕಾಯಿಲೆ ಶಮನವಾದ ಮೇಲೆ ಪಾಶ್ಚಾತ್ಯ ಶಿಷ್ಯರೊಂದಿಗೆ ಸ್ವಾಮೀಜಿಯವರು ನೈನಿತಾಲ್ ಮತ್ತು ಅಲ್ ಮೊರಾಗೆ ಹೊರಟರು. ಈ ಪ್ರವಾಸದಿಂದ ಪಾಶ್ಚಾತ್ಯ ಶಿಷ್ಯರಿಗೆ; ವಿಶೇಷವಾಗಿ ಸಿಸ್ಟರ್ ನಿವೇದಿತಾ ಅವರಿಗೆ ಒಳ್ಳೆಯ ಸಿದ್ಧತೆ ಮತ್ತು ತರಬೇತಿಗೆ ಅವಕಾಶ ದೊರಕಿದಂತಾಯಿತು. ಈ ಕೆಲವು ಶಿಷ್ಯರೊಂದಿಗೆ ಜೂನ್ 16 ರಂದು ಸ್ವಾಮೀಜಿಯವರು ಕಾಶ್ಮೀರಕ್ಕೆ ಹೊರಟರು. ಕಾಶ್ಮೀರದ ಸಂಚಾರ ಸ್ವಾಮೀಜಿಯವರಿಗೆ ಮತ್ತು ಅವರ ಶಿಷ್ಯರಿಗೆ ಅಚ್ಚಳಿಯದಂತಹ ಅನುಭವವನ್ನು ತಂದುಕೊಟ್ಟಿತು. ಜುಲೈ ತಿಂಗಳ ಕೊನೆಯಲ್ಲಿ ಸ್ವಾಮಿ ವಿವೇಕಾನಂದರು ಸಿಸ್ಟರ್ ನಿವೇದಿತಾ ಅವರೊಂದಿಗೆ ಪವಿತ್ರ ಸ್ಥಳವಾದ ಅಮರ್ ನಾಥ್ ಗೆ ಹೋಗಿಬಂದರು. ನಡೆದುಕೊಂಡುಬಂದಿರುವ ಸಂಪ್ರದಾಯವನ್ನು ಚಾಚೂತಪ್ಪದಂತೆ ಅನುಸರಿಸುತ್ತಾ ತುಂಡುದಟ್ಟಿಯನ್ನು ಧರಿಸಿ, ವಿಭೂತಿಯನ್ನು ಲೇಪಿಸಿಕೊಂಡು, ಸ್ವಾಮೀಜಿ ಆಗಸ್ಟ್ 2 ರಂದು ಅಮರನಾಥ ಗುಹೆಯನ್ನು ಹೊಕ್ಕರು. ಇಡೀ ದೇಹವೇ ಭಾವನೆಯಿಂದ ಕಂಪಿಸುತ್ತಿತ್ತು..... ಅತೀಂದ್ರಿಯ ಅನುಭವವಾಯಿತು. ಶಿವನೇ ಮುಂದೆ ಆವಿರ್ಭವಿಸಿದನೆಂದಷ್ಟೆ ನುಡಿದರು. ಶ್ರೀನಗರದಿಂದ ಕೆಲವು ಮೈಲುಗಳಾಚೆ ಮಾತೃ ದೇವತೆಯಾದ ಕ್ಷೀರ್ ಭವಾನಿಯ ದೇವಸ್ಥಾನಕ್ಕೆ ಒಬ್ಬರೇ ಹೋದರು. ಇದೂ ಸಹ ಸ್ವಾಮೀಜಿ ಅವರಿಗೆ ಮರೆಯಲಾಗದಂತಹ ಅನುಭವವನ್ನು ತಂದುಕೊಟ್ಟಿತು. ಮಾತೆಯವರನ್ನು ಮನದಲ್ಲಿ ತುಂಬಿಕೊಂಡು ಉದ್ಗಾರ ಮಾಡಿದರು. ಅವರ ಕವನದಿಂದಲೇ ಉದಾಹರಿಸುವುದಾದರೆ "ಪ್ರತಿಯೊಂದು ನಿಜವಾಯಿತು, ಪ್ರತಿಯೊಂದು ಪದವೂ ಸಹ ಮತ್ತು ಅದನ್ನು ನಾನು ಸಾಧಿಸಿ ತೋರಿಸಿದ್ದೇನೆ. ಮೃತ್ಯುವಿನ ಆಕಾರವನ್ನು ನಾನು ಆಲಂಗಿಸಿದ್ದೇನೆ."
ಅಕ್ಟೋಬರ್ 18ರಂದು ಕಲ್ಕತ್ತಾವನ್ನು ಸೇರಿದಾಗ ಸ್ವಾಮೀಜಿಯವರು ಅನೇಕ ಕಾಯಿಲೆಗಳಿಂದ ನರಳುತ್ತಿದ್ದರಲ್ಲದೆ ಬಹಳ ನಿಶ್ಶಕ್ತರಾಗಿದ್ದರು. ಆದರೂ ಅವುಗಳನ್ನು ಕಡೆಗಾಣಿಸಿ ಅನೇಕ ಕಾರ್ಯಗಳಲ್ಲಿ ತೊಡಗಿದರು. ಬೇಲೂರಿನ ಗಂಗಾ ನದಿಯ ಪಡುವಣ ದಿಕ್ಕಿನಲ್ಲಿ ಕಲ್ಕತ್ತಾದಿಂದ 5 ಮೈಲಿ ಆಚೆ ಸ್ವಲ್ಪ ಭೂಮಿಯನ್ನು ತೆಗೆದುಕೊಂಡು ಮಠವನ್ನು ಕಟ್ಟಲು ಪ್ರಾರಂಭಿಸಿದರು. ಅದೇ ಇಂದು ಬೇಲೂರು ಮಠವೆಂದು ಪ್ರಸಿದ್ಧವಾಗಿದೆ. ಇದಕ್ಕಿಂತ ಮುಂಚೆಯೇ ನಿವೇದಿತಾ ಗರ್ಲ್ಸ್ ಸ್ಕೂಲು ಪ್ರಾರಂಭವಾಗಿತ್ತು. 'ಉದ್ಭೋಧನ' ಎಂಬ ಬಂಗಾಲಿ ಮಾಸಿಕವು ಈ ಅವಧಿಯಲ್ಲಿಯೇ ಪ್ರಾರಂಭವಾಯಿತು. ಮಾರ್ಚ್ 1899ರಲ್ಲಿ ಮಾಯಾವತಿಯಲ್ಲಿ (ಅಲ್ ಮೋರಾ) ಅದ್ವೈತ ಆಶ್ರಮವನ್ನು ಆರಂಭಿಸುವುದರ ಮೂಲಕ ಹಿಮಾಲಯದಲ್ಲಿ ಮಠವನ್ನು ಸ್ಥಾಪಿಸುವ ಸ್ವಾಮೀಜಿಯವರ ಕನಸನ್ನು ಸೇವಿಯರ್ ದಂಪತಿಗಳು ನನಸು ಮಾಡಿದರು. 'ಪ್ರಬುದ್ಧ ಭಾರತ' ಎಂಬ ಇಂಗ್ಲೀಷ್ ಮಾಸಿಕ ಇದಕ್ಕಿಂತ ಮೊದಲು ಮದ್ರಾಸ್ನಿಂದ ಪ್ರಕಟವಾಗುತ್ತಿತ್ತು. ಆದರೆ 1898ರಲ್ಲಿ ಆ ಮಾಸಿಕದ ಸಂಪಾದಕರ ಅಕಾಲ ಮರಣದಿಂದ ಆ ತಿಂಗಳ ಸಂಚಿಕೆ ಮಾತ್ರ ಹೊರಬರಲಿಲ್ಲ. ಅಲ್ ಮೋರಾದಲ್ಲಿ ಸ್ವಾಮಿ ವಿವೇಕಾನಂದರ ಶಿಷ್ಯರಾದ ಸ್ವಾಮಿ ಸ್ವರೂಪಾನಂದರ ಸಂಪಾದಕತ್ವದಲ್ಲಿ ಆ ಮಾಸಿಕವು ಪುನರಾರಂಭವಾಯಿತು. ಅನಂತರ ಅದನ್ನು ಮಾಯಾವತಿಯ ಅದ್ವೈತ ಆಶ್ರಮಕ್ಕೆ ವರ್ಗಾಯಿಸಿದರು.
ಈ ಅವಧಿಯಲ್ಲಿಯೇ ಸ್ವಾಮೀಜಿಯವರು ಮಠದ ಸಂನ್ಯಾಸಿಗಳನ್ನು, ಬ್ರಹ್ಮಚಾರಿಗಳನ್ನು ತೀವ್ರ ಆಧ್ಯಾತ್ಮಿಕ ಜೀವನ ಮತ್ತು ಸೇವಾ ಪ್ರವೃತ್ತಿಯೆಡೆಗೆ ಆಕರ್ಷಿತರಾಗುವಂತೆ ಸತತವಾಗಿ ಪ್ರೇರೇಪಿಸಿದರು. ಏಕೆಂದರೆ ನಾವು ನಮ್ಮ ವಿಮೋಚನೆಯನ್ನು ಸಾಧಿಸಬೇಕು. ಅಲ್ಲದೆ ಅವರು - "ಆತ್ಮನೋ ಮೋಕ್ಷಾರ್ಥಂ ಜಗತ್ ಹಿತಾಯ ಚ" ಎಂದಿದ್ದಾರೆ. ಆದರೆ ಈ ವೇಳೆಗಾಗಲೇ ಸ್ವಾಮೀಜಿಯವರ ಆರೋಗ್ಯ ಬಹಳ ಕೆಟ್ಟಿತ್ತು. ಪಶ್ಚಿಮಕ್ಕೆ ಮತ್ತೊಮ್ಮೆ ಭೇಟಿ ನೀಡಬೇಕೆಂಬ ಅವರ ಹವಣಿಕೆಯನ್ನು ಇದರಿಂದಲಾದರೂ ಆರೋಗ್ಯ ಉತ್ತಮವಾಗಬಹುದೆಂದು ತರುಣ ಸಂನ್ಯಾಸಿಗಳು ಸ್ವಾಗತಿಸಿದರು.

Comments
Comments
Sign in to leave a comment