Chapter II

ಶ್ರೀರಾಮಕೃಷ್ಣರ ಪದತಲದಲ್ಲಿ

ತಾರುಣ್ಯದಲ್ಲಿ ನರೇಂದ್ರನು ಗಂಭೀರ ಚೆಲುವಿನ ಕೆಚ್ಚಿನ ಯುವಕನಾಗಿದ್ದನು. ಒಳ್ಳೆಯ ಕ್ರೀಡಾಪಟುವಿನ ಮೈಕಟ್ಟು, ಅನುರಣಿಸುವ ಧ್ವನಿ, ತೀಕ್ಷ್ಣ ಬುದ್ಧಿಯವನಾಗಿದ್ದನು. ಕ್ರೀಡೆ, ತತ್ತ್ವಶಾಸ್ತ್ರ, ಸಂಗೀತ ವಿದ್ಯೆಗಳಲ್ಲಿ ಪ್ರವೀಣನಾಗಿದ್ದು ತನ್ನ ಸಹಪಾಠಿಗಳಲ್ಲಿ ಪ್ರತಿ ವಿರೋಧಿಯೇ ಇಲ್ಲದ ಮುಂದಾಳಾಗಿದ್ದನು. ಕಾಲೇಜಿನಲ್ಲಿ ಪಾಶ್ಚಾತ್ಯ ಚಿಂತನೆಯನ್ನು ಅಭ್ಯಸಿಸಿ ಅದರ ಹಿರಿಮೆಯನ್ನು ಅರಿತುಕೊಂಡನು. ಇದು ಅವನಲ್ಲಿ ವಿಮರ್ಶಾತ್ಮಕ ಸ್ವಭಾವವು ನೆಲೆಗೊಳ್ಳಲು ಕಾರಣವಾಯಿತು. ಆಧ್ಯಾತ್ಮದ ಬಗ್ಗೆ ಸಹಜಸಿದ್ಧವಾದ ಒಲವು ; ಮತ್ತು ಪ್ರಾಚೀನ ಧಾರ್ಮಿಕ ಸಂಪ್ರದಾಯಗಳಲ್ಲಿ ಗೌರವ ಒಂದು ಕಡೆ, ಇನ್ನೊಂದೆಡೆ ಮೊನಚಾದ ಬುದ್ಧಿಶಕ್ತಿಯೊಂದಿಗೆ ವಿಮರ್ಶೆ ಮಾಡುವಂತಹ ಶಕ್ತಿ, ಅವನ ಇವೆರಡು ಮನಸ್ಥಿತಿಗಳ ನಡುವೆ ಪರಸ್ಪರ ಸಂಘರ್ಷ ನಡೆಯುತ್ತಲೇ ಇತ್ತು. ಈ ಸಂದಿಗ್ಧ ಸ್ಥಿತಿಯಲ್ಲಿ ಆಗಿನ ಸಾಮಾಜಿಕ-ಧಾರ್ಮಿಕ ಕ್ರಾಂತಿಗೆ ಪ್ರಖ್ಯಾತವಾಗಿದ್ದ ಬ್ರಹ್ಮ ಸಮಾಜದಿಂದ ಸಮಾಧಾನ ಪಡೆಯಲು ಪ್ರಯತ್ನಿಸಿದನು. ಬ್ರಹ್ಮ ಸಮಾಜ ನಿರಾಕಾರ ಬ್ರಹ್ಮದಲ್ಲಿ ನಂಬಿಕೆಯನ್ನಿಟ್ಟುಕೊಂಡಿತ್ತು. ಮೂರ್ತಿಪೂಜೆಯನ್ನು ಬಹಿಷ್ಕರಿಸಿತ್ತಲ್ಲದೆ ವಿವಿಧ ರೀತಿಯ ಸಾಮಾಜಿಕ ಸುಧಾರಣೆಗಳಿಗೆ ಹೆಸರಾಂತವಾಗಿತ್ತು. ನರೇಂದ್ರನಾಥನು ಪ್ರಖ್ಯಾತರಾದ ಧರ್ಮ ಪ್ರಚಾರಕರನ್ನು ಭೇಟಿಯಾದರೂ ಸಹ ದೇವರ ಅಸ್ತಿತ್ವದ ಬಗೆಗಿನ ಇವನ ಪ್ರಶ್ನೆಗಳಿಗೆ ಸಮರ್ಪಕವಾದ ಯಾವ ಉತ್ತರವೂ ಸಿಗಲಿಲ್ಲ. ಇದು ಅವನಲ್ಲಿ ಆಧ್ಯಾತ್ಮಿಕ ಘರ್ಷಣೆಯನ್ನು ಮತ್ತಷ್ಟು ವೃದ್ಧಿಗೊಳಿಸಿತು.

ಈ ಕುತ್ತಿನ ಪರಿಸ್ಥಿತಿಯಲ್ಲಿ ;'ದಿ ಎಕ್ಸ್ ಕರ್ಷನ್' ಪದ್ಯದಲ್ಲಿ ವರ್ಡ್ಸ್‌ವರ್ತ್ ಕವಿಯು ವರ್ಣಿಸಿರುವ ಅನಿರ್ವಚನೀಯತೆಯ ಪರವಶತೆಯನ್ನು ಅನುಭವಿಸಿರುವ, ಕಲ್ಕತ್ತಾದ ಹೊರವಲಯದ ದಕ್ಷಿಣೇಶ್ವರದಲ್ಲಿರುವ ಸಾಧು ಒಬ್ಬರ ಬಗ್ಗೆ, ತಮ್ಮ ಪ್ರಾಧ್ಯಾಪಕ ಹೇಸ್ಟಿಯವರು ಹೇಳಿದ್ದ ಮಾತುಗಳನ್ನು ನೆನಪಿಸಿಕೊಂಡನು. ಆ ಸಾಧುವನ್ನು ಒಮ್ಮೆ ಸಂದರ್ಶಿಸಬೇಕೆಂದು ಅವನ ಸಂಬಂಧಿಕನಾದ ರಾಮಚಂದ್ರದತ್ತನು ಸಹ ಪ್ರೋತ್ಸಾಹಿಸಿದನು. ಹೀಗೆ 1881ರಲ್ಲಿ ಆಧುನಿಕ ಭಾರತದ ಪ್ರವಾದಿ ಮತ್ತು ಅವರ ಸಂದೇಶವಾಹಕ ಅನುಚರ ಈ ಎರಡು ಮಹಾಚೇತನಗಳ ಐತಿಹಾಸಿಕ ಮಿಲನ ಜರುಗಿತು. ಶ್ರೀ ರಾಮಕೃಷ್ಣರನ್ನು ಕುರಿತು ನರೇಂದ್ರನಾಥನು, "ಮಹಾಶಯ ನೀವು ದೇವರನ್ನು ನೋಡಿದ್ದೀರಾ ?" ಎಂದು ಪ್ರಶ್ನೆ ಹಾಕಿದನು. ರಾಮಕೃಷ್ಣರು "ಹೌದು ನಿನ್ನನ್ನು ಈಗ ಇಲ್ಲಿ ನೋಡುತ್ತಿರುವುದಕ್ಕಿಂತಲೂ ಗಾಢವಾಗಿ ಅವನನ್ನು ನೋಡಿದ್ದೇನೆ" ಎಂದು ಉತ್ತರವಿತ್ತರು. ಅಲ್ಲಿಗೆ ದೇವರ ಅಸ್ತಿತ್ವದ ಬಗ್ಗೆ ಅನುಭವದಿಂದ ನುಡಿಯುವ ಒಬ್ಬ ವ್ಯಕ್ತಿ ದೊರೆತು, ಅವನ ಸಂದೇಹ ಪರಿಹಾರವಾಗಿ ಅವನ ಶಿಷ್ಯವೃತ್ತಿ ಪ್ರಾರಂಭವಾಯಿತು.



ನರೇಂದ್ರನಾಥನನ್ನು ಶ್ರೀರಾಮಕೃಷ್ಣರು ಅನೇಕ ರೀತಿಯಲ್ಲಿ ಪರೀಕ್ಷಿಸುತ್ತಿದ್ದಂತೆಯೇ ನರೇಂದ್ರನಾಥನೂ ಸಹ ಶ್ರೀರಾಮಕೃಷ್ಣರ ಆಧ್ಯಾತ್ಮಿಕ ಅಧಿಕಾರವಾಣಿಯ ಸತ್ಯವನ್ನು ಅರಿಯಲು ಅವರನ್ನು ಪರೀಕ್ಷಿಸಿದನು. 1884ರಲ್ಲಿ, ತನ್ನ ತಂದೆಯ ಮರಣದ ನಂತರ ನರೇಂದ್ರನ ಕುಟುಂಬವು ಬಹಳ ಕಷ್ಟ-ಕೋಟಲೆಗಳು, ಕುಂದು-ಕೊರತೆಗಳಿಗೊಳಗಾದಾಗ ಗುರುಗಳ ಸೂಚನೆಯ ಪ್ರಕಾರ ತನ್ನ ಸಂಸಾರದ ಕಷ್ಟಗಳ ನಿವಾರಣೆಗಾಗಿ, ದಕ್ಷಿಣೇಶ್ವರದ ಮಹಾಮಾತೆ ಯಾದ ಕಾಳಿಯನ್ನು ಪ್ರಾರ್ಥಿಸಲು ಪ್ರಯತ್ನಿಸಿದನು. ಆದರೆ, ಅವನಿಗೆ ಹಣದ ಅಗತ್ಯವಿದ್ದರೂ ಜ್ಞಾನ ಮತ್ತು ಭಕ್ತಿಗಾಗಿ ಮಾತ್ರ ಪ್ರಾರ್ಥಿಸಲು ಸಾಧ್ಯವಾಯಿತು.

ಕ್ರಮೇಣ ನರೇಂದ್ರನಾಥನು ಶ್ರೀರಾಮಕೃಷ್ಣರಿಗೆ ಶರಣಾಗತನಾದನು. ಶ್ರೀರಾಮಕೃಷ್ಣರು ಅಪಾರವಾದ ತಾಳ್ಮೆಯಿಂದ, ತಮ್ಮ ತರುಣ ಶಿಷ್ಯನ ಹೋರಾಟ ಮನೋಭಾವವನ್ನು ಶಾಂತಗೊಳಿಸಿ, ಸಂದೇಹದಿಂದ ನಿರ್ಧಾರದ ಕಡೆಗೆ, ಬೇಗುದಿಯಿಂದ ಆಧ್ಯಾತ್ಮಿಕ ಅನಂದದೆಡೆಗೆ ಕರೆದೊಯ್ದುರು. ಆದರೆ ಶ್ರೀರಾಮಕೃಷ್ಣರ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಬೆಂಬಲಕ್ಕಿಂತ ಹೆಚ್ಚಾಗಿ ಅವರ ಪ್ರೀತಿಯು ನರೇಂದ್ರನಾಥನನ್ನು ಗೆದ್ದಿತು. ನರೇಂದ್ರ ಸಹ ಪ್ರತಿಯಾಗಿ ಅವರ ಪ್ರೀತಿಗೆ ಸಂಪೂರ್ಣವಾಗಿ ಸ್ಪಂದಿಸಿದನು.

ಶ್ರೀ ರಾಮಕೃಷ್ಣರು ಅನಾರೋಗ್ಯದಿಂದಾಗಿ ಕಲ್ಕತ್ತಾನಗರದ ಹೊರವಲಯದಲ್ಲಿರುವ ಕಾಶೀಪುರಕ್ಕೆ ತೆರಳುವುದರೊಂದಿಗೆ ನರೇಂದ್ರನಿಗೆ ಗುರುವಿನಿಂದ ಪಡೆಯುವ ಶಿಕ್ಷಣ ಕೊನೆಯ ಘಟ್ಟ ತಲುಪಿತು. ಅವನಲ್ಲಿ ತುಂಬಿದ್ದ ಅಸಾಧಾರಣವಾದ ಆಧ್ಯಾತ್ಮಿಕ ಕಿಚ್ಚು, ವಿವಿಧ ರೀತಿಯ ತೀವ್ರ ಅನುಷ್ಠಾನಗಳಿಂದ ಹೊರಹೊಮ್ಮಲು ಅದು ಸಂಧಿಕಾಲವಾಗಿತ್ತು. ಶ್ರೀರಾಮಕೃಷ್ಣರು ನರೇಂದ್ರನ ನೇತೃತ್ವದಲ್ಲಿನ ತಮ್ಮ ತರುಣ ಶಿಷ್ಯರನ್ನು ಬೆಳಸಲು ಈ ಸದವಕಾಶವನ್ನು ಉಪಯೋಗಿಸಿಕೊಂಡರು. ಆಧ್ಯಾತ್ಮಿಕ ಅನುಭವದ ಪರಾಕಾಷ್ಠೆಯಾದ ನಿರ್ವಿಕಲ್ಪ ಸಮಾಧಿಯನ್ನು ಅನುಗ್ರಹಿಸಬೇಕೆಂದು ನರೇಂದ್ರನು ಗುರುವನ್ನು ಕೇಳಿದಾಗ "ಆಲದ ಮರದಂತೆ ಮಹಾವೃಕ್ಷವಾಗಿ ಬೆಳೆದು, ಸಂಸಾರದ ಕಷ್ಟಕೋಟಲೆಯಿಂದ ನರಳುತ್ತಿರುವ ಸಾವಿರಾರು ಜನರಿಗೆ ಶಾಂತಿಯನ್ನು ನೀಡುವೆಯೆಂದು ತಾನು ತಿಳಿದಿದ್ದೆ. ಆದರೆ ನೀನು ಅದನ್ನು ಬಿಟ್ಟು ಸ್ವಂತ ಮುಕ್ತಿಗಾಗಿ ಹಾತೊರೆಯುತ್ತಿರುವೆಯಲ್ಲಾ ನಾಚಿಕೆಯಾಗುವುದಿಲ್ಲವೇ?" ಎಂದು ಛೀಮಾರಿ ಹಾಕಿದರು. ನರೇಂದ್ರನ ಈ ಉತ್ಕಟ ಬಯಕೆ ಕಡೆಗೆ ನೆರವೇರಿತಾದರೂ ನಿರ್ವಿಕಲ್ಪ ಸಮಾಧಿಯ ಕೀಲಿಯು ತಮ್ಮ ಕೈಯಲ್ಲಿರುವುದೆಂದು, ಅದರ ಬಾಗಿಲು ತಮಗೆ ಸೂಕ್ತವೆನಿಸಿದಾಗ (ಬೇಕೆನಿಸಿದಾಗ) ಮಾತ್ರ ತೆಗೆಯುವುದೆಂದೂ ತಿಳಿಸಿದರು. ಅಲ್ಲದೆ ಯಾವ ಕಾರ್ಯಕ್ಕಾಗಿ ನರೇಂದ್ರನು ಜನ್ಮ ತಾಳಿದನೊ ಆ ಕಾರ್ಯವನ್ನು ಪೂರ್ಣಗೊಳಿಸುವವರೆಗೆ, ನಿರ್ವಿಕಲ್ಪ ಸಮಾಧಿಯ ಮಾರ್ಗವನ್ನು ತೋರಿಸುವುದಿಲ್ಲವೆಂದು ನುಡಿದಾಗ ನರೇಂದ್ರನಿಗೆ ವಾಸ್ತವತೆಯ ಅರಿವಾಯಿತು. ಶ್ರೀರಾಮಕೃಷ್ಣರು ಮಹಾಸಮಾಧಿಸ್ಥರಾಗುವ ಮೂರು-ನಾಲ್ಕು ದಿನಗಳ ಮುಂಚೆ ತಮ್ಮ ಶಕ್ತಿಯನ್ನೆಲ್ಲಾ ನರೇಂದ್ರನಿಗೆ ಧಾರೆ ಎರೆದು"ನಾನು ನಿನಗೆ ಧಾರೆ ಎರೆದ ಶಕ್ತಿಯ ಫಲದಿಂದ ಅನೇಕ ಮಹತ್ತಾದ ಕಾರ್ಯವನ್ನೆಸಗುವೆ. ಅನಂತರವೇ ನೀನು ಎಲ್ಲಿಂದ ಬಂದಿರುವೆಯೋ ಅಲ್ಲಿಗೆ ಮರಳುವೆ" ಎಂದು ತಿಳಿಸಿದರು.

ಆಗಸ್ಟ್ 1882ರಲ್ಲಿ ತಮ್ಮ ಗುರುವಿನ ಮಹಾಸಮಾಧಿಯ ನಂತರ ನರೇಂದ್ರನ ನೇತೃತ್ವದಲ್ಲಿ ಬಾರಾನಾಗೋರ್‌ನ ಶಿಥಿಲಮನೆಯೊಂದರಲ್ಲಿ ತರುಣ ಶಿಷ್ಯರು ಒಟ್ಟಾಗಿ ಸೇರಿದರು. ಇಲ್ಲಿ ಕಠಿಣ ತಪಶ್ಚರ್ಯೆ, ಆಧ್ಯಾತ್ಮಿಕ ಅನುಷ್ಠಾನಗಳೊಂದಿಗೆ ಶ್ರೀರಾಮಕೃಷ್ಣರ ಸೋದರ ಶಿಷ್ಯರ ಮಹಾಸಂಘವು ಆರಂಭವಾಯಿತು. ಆ ದಿನಗಳಲ್ಲಿಯೇ ನರೇಂದ್ರನು ಒಮ್ಮೆ ಸೋದರ ಶಿಷ್ಯರೊಂದಿಗೆ ಆಂಟ್ಪುರಕ್ಕೆ ಭೇಟಿ ಇತ್ತನು. ಅಲ್ಲಿ 1882ರ ಕ್ರಿಸ್‍ಮಸ್ ಶುಭದಿನದಂದು ದೊಡ್ಡದಾಗಿ ಅಗ್ನಿಯನ್ನು ಹೊತ್ತಿಸಿ, ಎಲ್ಲರೂ ಅದರ ಸುತ್ತುವರೆದೂ ದೀಕ್ಷೆಯನ್ನು ಪಡೆದರು. ಅಧ್ಯಯನ ಮತ್ತು ಆಧ್ಯಾತ್ಮಿಕ ಸಾಧನೆಯಿಂದ ಬಾರನೋಗೊರ್ ನ ದಿನಗಳು ಅತ್ಯಂತ ಆನಂದದ ದಿನಗಳಾಗಿದ್ದವು. ಆ ಸಮಯದಲ್ಲಿ ಸಂನ್ಯಾಸಿಗಳಲ್ಲಿ ಅನೇಕರಿಗೆ ಸಂಚಾರ ಕೈಗೊಳ್ಳಬೇಕಂಬ ಅಭಿಲಾಷೆ ಉಂಟಾಯಿತು. ನರೇಂದ್ರ ಸಹ ಮಠದಿಂದ ಸಂಚಾರಯಾತ್ರೆ ಕೈಗೊಂಡನು.



Share
Comments

Comments

Sign in to leave a comment