Chapter VI
ಮತ್ತೊಮ್ಮೆ ವಿದೇಶಕ್ಕೆ
ಸಿಸ್ಟರ್ ನಿವೇದಿತಾ ಮತ್ತು ಸ್ವಾಮಿ ತುರಿಯಾನಂದ ಅವರನ್ನು ಜೊತೆಗೂಡಿ ಸ್ವಾಮಿ ವಿವೇಕಾನಂದರು ಜೂನ್ 20, 1899ರಂದು ಭಾರತವನ್ನು ಬಿಟ್ಟು ಪ್ರವಾಸ ಹೊರಟರು. ಇವರಿಬ್ಬರಿಗೂ ಸ್ವಾಮೀಜಿಯವರೊಡನೆ ಪ್ರವಾಸವು ಒಳ್ಳೆಯ ಶಿಕ್ಷಣವನ್ನು ತಂದುಕೊಟ್ಟಿತು. ಸಿಸ್ಟರ್ ನಿವೇದಿತಾ ಈ ರೀತಿ ಬರೆದಿದ್ದಾರೆ. "ಕಣ್ಣಿಗೆ ಕಟ್ಟುವಂತಹ ಕಥೆಗಳ ಪ್ರವಾಹ ಪ್ರಾರಂಭದಿಂದ ಕೊನೆವರೆಗೂ ಹರಿಯಿತು. ಹೊಚ್ಚ ಸತ್ಯ ನುಡಿಯ ಮತ್ತು ಸ್ಫೂರ್ತಿಯ ಮಿಂಚು, ವಾಕ್ ಶಕ್ತಿಯ ಅಸಾಧಾರಣತೆ ನಿರೀಕ್ಷೆಯನ್ನು ಮೀರಿ ಯಾವ ಗಳಿಗೆಯಲ್ಲಿ ಬೇಕಾದರೂ ಮಿಂಚಿಬಿಡುತ್ತಿತ್ತು."
ಮದ್ರಾಸ್, ಕೊಲಂಬೋ, ಏಡನ್ ಮತ್ತು ಮಾರ್ ಸೆಲ್ಲೀಸ್ ನಿಂದ ಹಡಗು ಜುಲೈ 31ರಂದು ಲಂಡನ್ ಸೇರಿತು. ಈ ಪ್ರವಾಸ ಸ್ವಾಮೀಜಿಯವರ ಆರೋಗ್ಯವನ್ನು ಉತ್ತಮಪಡಿಸಿತು.
ಲಂಡನ್ನಿನಲ್ಲೇ 2 ವಾರ ತಂಗಿದ್ದು ನ್ಯೂಯಾರ್ಕಿಗೆ ಪ್ರವಾಸ ಬೆಳಸಿದರು. ನ್ಯೂಯಾರ್ಕಿಗೆ ಹೋದ ತಕ್ಷಣ ಸ್ವಾಮೀಜಿಯವರು ಲೆಗ್ಗೆಟ್ ಮತ್ತು ಅವರ ಮನೆಯವರೊಂದಿಗೆ ಹಡ್ ಸನ್ ನದಿಯ ತೀರದಲ್ಲಿರುವ ಅವರ ಸುಂದರವಾದ ಮನೆ ರಿಡ್ ಜ್ಲಿ ಮೇನರ್ ನಲ್ಲಿ ನವೆಂಬರ್ 5ರ ವರೆಗೆ ಏಕಾಂತದಲ್ಲಿ ಕಳೆದರು. ಅಲ್ಲಿಂದ ಸ್ವಾಮೀಜಿಯವರು ಪಶ್ಚಿಮ ತೀರದ ಲಾಸ್ ಏಂಜಲೀಸ್, ಓಕಲ್ಯಾಂಡ್, ಸ್ಯಾನ್ ಫ್ರಾನ್ಸಿಸ್ಕೊಗಳಿಗೆ ಭೇಟಿ ಇತ್ತರಲ್ಲದೆ ಚಿಕಾಗೋ ಮತ್ತು ಡೆಟ್ರಾಯ್ಟಗೂ ಅಲ್ಪಾವಧಿ ಭೇಟಿ ನೀಡಿದರು. ಪೂರ್ವ ಮತ್ತು ಪಶ್ಚಿಮ ರಾಷ್ಟ್ರಗಳ ಪರಸ್ಪರ ಒಡನಾಟ ಮತ್ತು ಒತ್ತಾಸೆಯು ಏರ್ಪಡಬೇಕೆಂಬ ಮನವರಿಕೆ ಇನ್ನೂ ದೃಢವಾಯಿತು. ಪಚ್ಚಿಮ ರಾಷ್ಟ್ರಗಳ ಕೇವಲ ಐಹಿಕ ಭೋಗದ ಮೆರಗು ಅವರನ್ನು ಬೆರಗುಗೊಳಿಸಲಾರದು. ಹಾಗೆಯೇ ಭಾರತದ ಆಧ್ಯಾತ್ಮಿಕತೆಯ ಪ್ರಾಶಸ್ತ್ಯವು ತನ್ನ ಸಾಮಾಜಿಕ ಹಾಗೂ ಆರ್ಥಿಕ ನ್ಯೂನತೆಗಳನ್ನು ಮುಚ್ಚಿಡಲಾರದು.
ನಿವೇದಿತಾ ಅವರಿಗೆ ಸ್ವಾಮೀಜಿಯವರು ಈ ರೀತಿ ಹೇಳಿದರು : "ಪಾಶ್ಚಾತ್ಯಾತರಿಗೆ ಸಾಮಾಜಿಕ ಜೀವನವೆಂಬುದು ಮೇಲ್ನೋಟದಲ್ಲಿ ನಗುವಿನ ತರಂಗ, ಆದರೆ ಆಳದಲ್ಲಿ ಹಲುಬುವಿಕೆ ಅಷ್ಟೇ. ಬಿಕ್ಕಿ ಬಿಕ್ಕಿ ಅಳುವಿನಲ್ಲಿ...... ಅದರ ಅಂತ್ಯ..... ಆದರೆ ಭಾರತೀಯರಿಗೆ ಮೇಲುನೋಟಕ್ಕೆ ವಿಷಾದ ಮತ್ತು ಮಬ್ಬುಕವಿದಂತೆ, ಆದರೆ ಆಂತರ್ಯದಲ್ಲಿ ನಿಶ್ಚಿಂತೆ ಮತ್ತು ಉಲ್ಲಾಸಾನುಭವ ಇದೆ." ಪಶ್ಚಿಮವು ಬಾಹ್ಯಪ್ರಕೃತಿಯನ್ನು ಗೆಲ್ಲಲು ಪ್ರಯತ್ನಿಸಿದರೆ, ಪೂರ್ವವು ಆಂತರಿಕ ಪ್ರಕೃತಿಯನ್ನು ಗೆಲ್ಲಲು ಪ್ರಯತ್ನಿಸಿತು. ಈಗ ಪೂರ್ವ ಮತ್ತು ಪಾಶ್ಚಾತ್ಯ ರಾಷ್ಟ್ರಗಳು ಇಬ್ಬರ ಒಳಿತಿಗಾಗಿಯೇ, ಜೊತೆಗೂಡಿಯೇ ಒಬ್ಬರಿಗೊಬ್ಬರ ವಿಶೇಷ ಗುಣವನ್ನು ಹಾಳುಮಾಡದೇ ಕಾರ್ಯಪ್ರವೃತ್ತ ರಾಗಬೇಕಾಗಿದೆ. ಪಶ್ಚಿಮ ರಾಷ್ಟ್ರ ಪೂರ್ವದಿಂದ ಅರಿಯುವುದಿದೆ. ಈ ಇಬ್ಬರ ಆದರ್ಶ ಧ್ಯೇಯದ ಬೆಸುಗೆಯಿಂದ ಒಳ್ಳೆಯ ಭವಿಷ್ಯವನ್ನು ರೂಪಿಸಬೇಕಾಗಿದೆ. ಆಗ ಪೂರ್ವ ಪಶ್ಚಿಮ ಎನ್ನದೆ 'ಮಾನವತ್ವ' ಎಂಬುದು ಉಳಿಯುತ್ತದೆ.
ಆ ಅವಧಿಯಲ್ಲಿ ನಡೆದ ಮುಖ್ಯ ಘಟನೆಯೆಂದರೆ ಕ್ಯಾಲಿ ಫೋರ್ನಿಯಾದ ಉತ್ತರದೆಡೆಯಲ್ಲಿ ಸ್ವಾಮಿ ತುರೀಯಾನಂದರ ನೇತೃತ್ವದಲ್ಲಿ ಶಾಂತಿಧಾಮವನ್ನು ಆರಂಭಿಸಿದ್ದು. ಸ್ಯಾನ್ಫ್ರಾನ್ಸಿಸ್ಕೋದಲ್ಲಿ ವೇದಾಂತ ಕೇಂದ್ರವನ್ನು ಉದ್ಘಾಟಿಸಿದರು. ಈ ಸಮಯದಲ್ಲಿ ಆ ರಾಷ್ಟ್ರದ ಪಶ್ಚಿಮ ನಗರಗಳಲ್ಲಿ ಉಪನ್ಯಾಸಗಳನ್ನು ನೀಡಿದರು. ತಮ್ಮ ಅಂತ್ಯವು ಸಮೀಪಿಸುತ್ತಿರುವುದು ಸ್ವಾಮೀಜಿಯವರಿಗೆ ದಿನೇ ದಿನೇ ಸ್ಪಷ್ಟವಾಗುತ್ತಾ ಬಂದಿತು. "ಪ್ರಶಾಂತವಾದ ಬಂದರಿನ ಸಮೀಪ ನನ್ನ ಹಡಗು ಸಾಗುತ್ತಿದೆ. ಅಲ್ಲಿಂದ ಅದನ್ನು ಮುಂದೆ ತಳ್ಳಲು ಸಾಧ್ಯವಾಗದ ರೀತಿಯಲ್ಲಿದೆ" ಎಂದು ಸ್ವಾಮೀಜಿ ಕುಮಾರಿ ಮೆಕ್ಲಾಯ್ಡ್ ಅವರಿಗೆ ಬರೆದಿದ್ದಾರೆ.
ಸಾರ್ವತ್ರಿಕ ಮೇಳದ (Universal Exposition) ಸಂದರ್ಭದಲ್ಲಿ 1900ರ ಆಗಸ್ಟ್ 1 ರಂದು ಜರುಗುವ ಧರ್ಮಸಮ್ಮೇಳನಕ್ಕೆ ಭಾಗವಹಿಸಲು ಸ್ವಾಮಿ ವಿವೇಕಾನಂದರು ಪ್ಯಾರಿಸ್ಗೆ ಬಂದರು. ಕಾನ್ ಸ್ಟಾಂಟಿನೊಪಲಿಗೆ ಹೋಗುವುದಕ್ಕೆ ಮುನ್ನ ಸ್ವಾಮೀಜಿ ಕೆಲವು ಸ್ನೇಹಿತರೊಂದಿಗೆ ಅಕ್ಟೋಬರ್ ತಿಂಗಳಲ್ಲಿ ಪ್ಯಾರಿಸ್ಸನ್ನು ಬಿಟ್ಟು ಹಂಗೇರಿ, ರುಮೇನಿಯಾ, ಸರ್ ಬಿಯಾ ಮತ್ತು ಬಲ್ ಗೇರಿಯಾಗೆ ಭೇಟಿ ಇತ್ತರು ನಂತರ ಅಥೆನ್ಸ್ ಮತ್ತು ಕೈರೋಗೆ ಹೋದರು. ಸ್ವಾಮೀಜಿ ಕೈರೋದಲ್ಲಿದ್ದಾಗ ಮರುಕ್ಷಣವೇ ಭಾರತಕ್ಕೆ ಹಿಂದಿರುಗಬೇಕೆಂದು ಚಡಪಡಿಸಿದರು. ಇವರಿಗೆ ಕ್ಯಾಪ್ಟನ್ ಸೇವಿಯರ್ರವರ ಮರಣದ ಪೂರ್ವಸೂಚನೆಯಾಗಿತ್ತು. ಮುನ್ಸೂಚನೆಯನ್ನೇ ನೀಡದೆ ಸ್ವಾಮೀಜಿ ಡಿಸೆಂಬರ್ 9, 1900 ರಂದು ಬೇಲೂರು ಮಠಕ್ಕೆ ಮೊದಲ ಹಡಗಿನಲ್ಲೇ ಬಂದು ಸೇರಿದರು. ಇವರ ಆಗಮನ ತರುಣ ಸಂನ್ಯಾಸಿಗಳಿಗೆ ಶಿಷ್ಯರಿಗೆ ಆಶ್ಚರ್ಯಕರವಾಗಿಯೂ, ಆಹ್ಲಾದಕರವಾಗಿಯೂ ಆಗಿತ್ತು. ಎಲ್ಲರೂ ಅತ್ಯಂತ ಸಂತೋಷಗೊಂಡರು.

Comments
Comments
Sign in to leave a comment