Chapter III

ಪರಿವ್ರಾಜಕ ಸಂನ್ಯಾಸಿ

1888ರ ಕೊನೆ ಮತ್ತು 1890ರ ನಡುವಿನ ಅವಧಿಯಲ್ಲಿ ನರೇಂದ್ರನಾಥರಲ್ಲಿ ಅಸಾಧಾರಣವಾದ ಬದಲಾವಣೆ ಕಂಡುಬಂದಿತು. 1888ರ ಕೊನೆಯ ಭಾಗದಲ್ಲಿ ಸಣ್ಣ -ಪುಟ್ಟ ಸಂಚಾರಗಳನ್ನು ಕೈಗೊಳ್ಳಲು ಆರಂಭಿಸಿದ್ದರು. ಕೊನೆಗೆ 1890ರಲ್ಲಿ ತಮ್ಮ ಸಂನ್ಯಾಸಿ ಸೋದರರಿಂದ ಬೇರೆಯಾಗಿ ಏಕಾಕಿಯಾಗಿ ಅಜ್ಞಾತ ಭಿಕ್ಷುವಾಗಿ ತೀರ್ಥಯಾತ್ರೆ ಕೈಗೊಂಡರು. ತಮ್ಮ ಪರಿಚಯವನ್ನು ಮರೆಮಾಚುವಂತೆ ವಿಶಾಲಭಾರತದಲ್ಲಿ ಒಂದಾಗುವಂತೆ ಅನೇಕ ನಾಮಗಳನ್ನು ಧರಿಸಿ ಅವರು ಸಂಚರಿಸಿದರು.

ಸಾಧಾರಣವಾಗಿ ಭಾರತೀಯ ಸಂನ್ಯಾಸಿಯಾಗಿ ಇರುವ ಸಹಜವಾದ ಏಕಾಂತತೆಯ ಅಭಿಲಾಷೆಯು ಅವರಲ್ಲಿ ಉದ್ದೇಶವನ್ನು ಸಾಧಿಸಬೇಕೆಂಬ ಮಹತ್ತರವಾದ ಭಾವನೆಗೆ ಎಡೆಮಾಡಿಕೊಟ್ಟಿತು. ವೈಯಕ್ತಿಕ ಮುಕ್ತಿಗಾಗಿ ಹೆಣಗಾಡುವ ಸಾಮಾನ್ಯ ಸಾಧುವಿನಂತೆ ತಮ್ಮ ಬದುಕಲ್ಲ. ಪರಕೀಯರ ದಬ್ಬಾಳಿಕೆಯಿಂದ ಕಂಗಾಲಾದ ಭಾರತದ ಮೌನದ ಮೊರೆಗೆ ಓಗೊಟ್ಟು ಮತ್ತು ಭಾರತದ ವೈವಿಧ್ಯವನ್ನು ನೋಡಬೇಕೆಂಬ ಉತ್ಕಟ ಬಯಕೆಯ ಪ್ರಭಾವದಿಂದ ವಿವೇಕಾನಂದರು ಪರಿವ್ರಾಜಕರಾಗಿ ಹೊರಟರು. ಮೊಟ್ಟಮೊದಲಿಗೆ ಹಿಂದೂಗಳ ಅತ್ಯಂತ ಪವಿತ್ರ ಕ್ಷೇತ್ರವಾದ ವಾರಾಣಸಿಗೆ ಭೇಟಿ ಇತ್ತರು. ನಂತರ ಲಕ್ನೋ,ಆಗ್ರಾ, ವೃಂದಾವನ, ಹತ್ರಾಸ್, ಹೃಷಿಕೇಶ್ ಮೊದಲಾದ ಪ್ರದೇಶಗಳಿಗೆ ಭೇಟಿ ಇತ್ತು ಬಾರಾನಾಗೋರಿಗೆ ಹಿಂದಿರುಗಿದರು. ವಿವೇಕಾನಂದರ ಮೊದಲ ಶಿಷ್ಯರಾದ ಶರತ್ ಚಂದ್ರಗುಪ್ತ (ಸ್ವಾಮಿ ಸದಾನಂದ) ಅವರನ್ನು ಹತ್ರಾಸಿನಲ್ಲಿ ಭೇಟಿಯಾದರು. ಹತ್ರಾಸಿನ ರೈಲ್ವೇ ಶಾಖೆಯಲ್ಲಿ ನೌಕರರಾಗಿದ್ದ ಶರತ್ ರು ತಮ್ಮ ಹುದ್ದೆಗೆ ರಾಜಿನಾಮೆಯಿತ್ತು, ವಿವೇಕಾನಂದರ ಕಾರ್ಯದಲ್ಲಿ ನೆರವು ನೀಡಲು ಗುರುವನ್ನು ಹಿಂಬಾಲಿಸಿದರು. 1890ರಲ್ಲಿ ವಿವೇಕಾನಂದರ ಜೀವನದಲ್ಲಿ ಮಹತ್ತರವಾದ ಘಟನೆಯೊಂದು ಜರುಗಿತು. ಘಾಜಿಪುರದ ಪವಹಾರಿಬಾಬಾ ಅವರ ಸಾಧನೆ, ಸಂತಗುಣದ ಬಗ್ಗೆ ವಿವೇಕಾನಂದರಿಗೆ ಜೀವಮಾನವಿಡೀ ಮೆಚ್ಚುಗೆಯಿತ್ತು. ಪವಹಾರಿ ಬಾಬಾ ಅವರನ್ನು ಸ್ವಾಮೀಜಿ ಮೊದಲಿಗೆ 1890ರಲ್ಲಿ ಭೇಟಿಯಾದರೆ, ಈ ವೇಳೆಯಲ್ಲಿ ಶಾಶ್ವತವಾದ ಮೌನ (eternal silence of the absolute)ದಲ್ಲಿ ಮಗ್ನವಾಗುವ ಆಕಾಂಕ್ಷೆ ಒಂದೆಡೆ, ಮತ್ತೊಂದೆಡೆ ಗುರುವಿನ ಮಹೋದ್ದೇಶ ಪೂರೈಕೆ-ಈ ಎರಡರ ಹೊಯ್ದಾಟದಲ್ಲಿ ಸ್ವಾಮೀಜಿ ಸಿಲುಕಿಕೊಂಡರು.


ಗುರುವಹಿಸಿದ ಕಾರ್ಯದಿಂದ ವಿಮುಖವಾಗಿಸುವ, ದೈವದಲ್ಲಿಯೇ ತಲ್ಲೀನವಾಗುವ ಕನಲು ಇವರ ಹೃದಯವನ್ನು ಭಾಧಿಸುತ್ತಿತ್ತು. ಈ ಅನುತಾಪವನ್ನು ಪವಹರಿಬಾಬಾ ಅವರು ಸಾಂತ್ವನಗೊಳಿಸಬಹುದೆಂದು ಸ್ವಾಮೀಜಿ ನಂಬಿದ್ದರು. 21 ದಿವಸಗಳು ಈ ಪ್ರಲೋಭನೆಗೆ ಒಳಪಡುವಾಗ ಶ್ರೀರಾಮಕೃಷ್ಣರ ಜ್ಯೋತಿರ್ಮಯರೂಪದ ದರ್ಶನವು ಇವರನ್ನು ಪ್ರತಿಬಾರಿಯೂ ಆ ಪ್ರಯತ್ನದಿಂದ ಹಿಂತೆಗೆಯುವಂತೆ ಮಾಡುತ್ತಿತ್ತು.

1890ರ ಜುಲೈನಲ್ಲಿ ಗುರುವಿನ ನಂತರ ತರುಣ ಸಂನ್ಯಾಸಿಗಳಿಗೆ ಆಧ್ಯಾತ್ಮಿಕ ಮಾರ್ಗದರ್ಶಕರಾಗಿದ್ದ ಶ್ರೀರಾಮಕೃಷ್ಣರ ದಿವ್ಯ ಪತ್ನಿಯಾದ ಶಾರದಾದೇವಿಯವರಿಂದ ಆಶೀರ್ವಾದವನ್ನು ಸ್ವಾಮಿ ವಿವೇಕಾನಂದರು ಪಡೆದು, ಎಲ್ಲ ಸಂಬಂಧವನ್ನು ತೊರೆಯುವ ಅಚಲ ಮನದೊಂದಿಗೆ ಸಹೋದರ ಸಂನ್ಯಾಸಿಗಳನ್ನು ಬೀಳ್ಕೊಟ್ಟು ಹಿಮಾಲಯದ ಏಕಾಂತ ಪ್ರದೇಶಕ್ಕೆ ಹೋದರು. ರೋಮೆರೋಲಾ ಅವರ ಮಾತಿನಲ್ಲಿ ಹೇಳುವುದಾದರೆ ಅದೊಂದು ಮಹಾ ಪಯಣ. ಮುಳುಗು ಹಕ್ಕಿಯ ರೀತಿಯಲ್ಲಿ ಸ್ವಾಮೀಜಿ ಭಾರತ - ಸಾಗರದಲ್ಲಿ ಮುಳುಗಿಹೋದರು. ಮತ್ತು ಭಾರತ-ಸಾಗರವು ಅವರ ಹಾದಿಯನ್ನು ಆವರಿಸಿತು. ನಾಶವಾದ ಹಡಗಿನಿಂದ ತೇಲಿ ಬಂದ ಮತ್ತು ಅಪಾಯದ ವೇಳೆ ಹಡಗಿನಿಂದೆಸೆದ ಸಾಮಾನುಗಳಂತೆ ಸಾವಿರಾರು ಮಂದಿ ಅನಾಮಧೇಯ ಸಂನ್ಯಾಸಿಗಳಲ್ಲೊಬ್ಬರಾಗಿ ಇವರು ಜನಸಾಗರದಲ್ಲಿ ಒಂದಾದರು. ಆದರೆ ಅಸಾಧಾರಣ ಪ್ರತಿಭೆಯ ತೇಜಸ್ಸು ಅವರ ಕಣ್ಣುಗಳಲ್ಲಿ ಪ್ರಜ್ವಲಿಸುತ್ತಿತ್ತು, ಈ ಎಲ್ಲ ಸೋಗಿನ ಮರೆಯಲ್ಲೂ ದೊರೆಯಂತೆ ಕಂಗೊಳಿಸುತ್ತಿದ್ದರು!



ಅವರ ಪರ್ಯಟನವು ಅವರನ್ನು ಉತ್ತರ ಪ್ರದೇಶ, ರಾಜಸ್ಥಾನ,ಗುಜರಾತ್, ಮಹಾರಾಷ್ಟ್ರ, ಮೈಸೂರು, ಕೇರಳ, ಮದ್ರಾಸ್, ಹೈದರಾಬಾದ್ ಪ್ರದೇಶಗಳಲ್ಲಿನ ಚಾರಿತ್ರಿಕ ಮತ್ತು ಯಾತ್ರಾಸ್ಥಳಗಳಿಗೆ ಕರೆದೊಯ್ದಿತು. ಪ್ರಾಚೀನ ಭಾರತದ ಸಾಂಸ್ಕೃತಿಕ, ರಾಜಕೀಯ ಮತ್ತು ಆಧ್ಯಾತ್ಮಿಕ ವೈಭವದ ಚಿತ್ರವು ಜೀವಂತವಾಗಿ ಅವರ ಕಣ್ಮುಂದೆ ಗೋಚರಿಸಿತು. ಇಂತಹ ಭವ್ಯ ಶಿಕ್ಷಣದೊಂದಿಗೆ ಭಾರತೀಯ ಜನ ಸಮುದಾಯದ ದಟ್ಟ ದಾರಿದ್ರ್ಯವು ಅವರ ಮನಸ್ಸಿನಲ್ಲಿ ಸ್ಪಷ್ಟವಾಗಿ ಮೂಡಿತು. ಅವರ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಂಚರಿಸಿ, ಶ್ರೀಸಾಮಾನ್ಯನ ದುರವಸ್ಥೆಯನ್ನು ಸುಧಾರಿಸುವ ಹಾದಿಯನ್ನು ಅನ್ವೇಷಿಸಲು ಪ್ರಯತ್ನಿಸಿದರು. ಆ ಪ್ರದೇಶಗಳನ್ನಾಳುತ್ತಿರುವ ಆಡಳಿತಗಾರರ ಮತ್ತು ಪ್ರಭಾವಶಾಲಿಗಳ ಪರಿಚಯ ಇವರಿಗಾಯಿತು. ಅವರಲ್ಲಿ ಖೇತ್ರಿಯ ಮಹಾರಾಜ ಅಜಿತ್ ಸಿಂಗ್ ಮೊದಲಿಗೆ ನಿಕಟವಾದ ಸ್ನೇಹಿತರಾದರಷ್ಟೆ ಅಲ್ಲದೆ ಉತ್ಸಾಹಿ ಶಿಷ್ಯರೂ ಆದರು. ಸ್ವಾಮಿಜಿಯವರು ಪತಂಜಲಿಯ ಮಹಾಭಾಷ್ಯವನ್ನು ಆಳ್ ವಾರ್ ನಲ್ಲಿ ಅಭ್ಯಸಿಸಿದರು. ಇವರು ಪುಣೆಯಲ್ಲಿ ರಾಷ್ಟ್ರದ ಮಹಾನೇತಾರರಾದ ಬಾಲಗಂಗಾಧರ ತಿಲಕರೊಂದಿಗಿದ್ದರು. ಪ್ರಾರಂಭದಲ್ಲಿ ಸ್ವಾಮಿಗಳೊಂದಿಗೆ ತಿಲಕರು ಬಿಗುಮಾನದಿಂದ ವರ್ತಿಸಿದರೂ ನಂತರದಲ್ಲಿ ಅವರ ಅಗಾಧವಾದ ಚಿಂತನಶಕ್ತಿ ಹಾಗೂ ಗಾಢ ಅಧ್ಯಯನದಿಂದ ಪ್ರಭಾವಿತರಾಗಿ, ತಮ್ಮೊಡನೆ ಇರಲು ಅವರನ್ನು ಆಹ್ವಾನಿಸಿದರು. ಅಲ್ಲಿಂದ ಬೆಳಗಾವಿಯಲ್ಲಿ ತಂಗಿದ್ದು ಬೆಂಗಳೂರು ಮತ್ತು ಮೈಸೂರಿಗೆ ಭೇಟಿ ಇತ್ತರು. ಸ್ವಾಮಿ ವಿವೇಕಾನಂದರು ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಗಿ ಸನಾತನ ಧರ್ಮವನ್ನು ಬೋಧಿಸಿ ಅವರಿಂದ ಭಾರತಕ್ಕೆ ಸಹಾಯವನ್ನು ಕೋರಬೇಕೆಂಬ ಉದ್ದೇಶ ಹೊಂದಿದ್ದನ್ನು ತಿಳಿದ ಮೈಸೂರಿನ ಮಹಾರಾಜರು ಇವರ ವಿದೇಶ ಪ್ರಯಾಣಕ್ಕೆ ಆರ್ಥಿಕ ಸಹಾಯ ನೀಡುವುದಾಗಿ ಭರವಸೆಯನ್ನಿತ್ತರು. ನಂತರ ಮೈಸೂರಿಂದ ತ್ರಿವೆಂಡ್ರಮ್ ಮತ್ತು ಕನ್ಯಾಕುಮಾರಿಗೆ ಭೇಟಿ ನೀಡಿದರು.

ಇವರು ಭೇಟಿ ನೀಡಿದ ಪ್ರಮುಖ ಪ್ರದೇಶ ಅಥವಾ ಪ್ರತಿಷ್ಠಿತ ಜನರು ಇವರ ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರಲಿಲ್ಲ. ಭೀಕರತೆ ಹುಟ್ಟಿಸುವಂತಹ ಸಾಮಾನ್ಯ ಜನಸಮುದಾಯದ ದಾರಿದ್ರ್ಯ ಮತ್ತು ದೈನ್ಯವು ಇವರ ಹೃದಯವನ್ನು ಮಮ್ಮಲ ಮರುಗಿಸಿತು. ಸುಮಾರು ಮೂರು ವರುಷಗಳ ಕಾಲ ಪಾದಚಾರಿಯಾಗಿ ಇಡೀ ಭಾರತವನ್ನು ಪರ್ಯಟನ ಮಾಡಿ ಖುದ್ದಾಗಿ ಭಾರತವೇನೆಂಬುದನ್ನು ಅರಿತರು. ಪ್ರವಾಸದ ಕೊನೆಯ ಕುರುಹಾಗಿ ಕನ್ಯಾಕುಮಾರಿಯ ಮಾತೆ ಕುಮಾರಿಯ ವಿಗ್ರಹದ ಮುಂದೆ ಭಾವಾನ್ವಿತರಾಗಿ ಸಾಷ್ಟಾಂಗ ಪ್ರಣಾಮ ಮಾಡಿದರು. ಬಳಿಕ ಈಜುತ್ತಾ ಸಮುದ್ರದ ದಕ್ಷಿಣ ಬಂಡೆಯೊಂದರ ಮೇಲೆ ಕುಳಿತು ಇಡೀ ರಾತ್ರಿ ಧ್ಯಾನದಲ್ಲಿ ಮಗ್ನರಾದರು. ಪ್ರವಾಸದಿಂದುಂಟಾಗಿದ್ದ ವಿವಿಧ ಅನುಭವದ ದೃಶ್ಯಗಳು ಸುರುಳಿ ಸುರುಳಿಯಾಗಿ ಮನಃಚಕ್ಷುವಿನ ಮುಂದೆ ಸುಳಿಯಿತು. ಭಾರತ ದೇಶದ ಆಗಿನ ಅವನತಿಗೆ ಕಾರಣಗಳನ್ನು ಗುರುತಿಸಿ ಪುನರುಜ್ಜೀವನದ ಉಪಾಯಗಳನ್ನು ಅವರು ಇಲ್ಲಿ ಕಂಡುಕೊಂಡರು. ಭಾರತ ದೇಶದ ಭೂತ, ವರ್ತಮಾನ ಹಾಗೂ ಭವಿಷ್ಯವನ್ನು ಕುರಿತು ಚಿಂತಿಸಿದರು. ತಮ್ಮ ಜೀವನದ ಧ್ಯೇಯಕ್ಕೆ ಸರಿಯಾದ ರೂಪ ಕೊಡಲು ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಗಿ ಭಾರತೀಯ ದಾರಿದ್ರ್ಯ ನಿರ್ಮೂಲನಕ್ಕೆ ಸಹಾಯವನ್ನು ಕೋರಬೇಕೆಂಬ ದೃಢನಿರ್ಧಾರವನ್ನು ಕೈಗೊಂಡರು.

ಈ ನಿರ್ಧಾರದಿಂದಲೇ ರಾಮೇಶ್ವರ ಮತ್ತು ಮದುರೈಗಳಿಗೆ ಪ್ರಯಾಣ ಮಾಡಿದರು. ನಂತರ ಮದ್ರಾಸಿಗೆ ಭೇಟಿ ಇತ್ತರು. ಅಲ್ಲಿ ಅಳಸಿಂಗ ಪೆರುಮಾಳ್ ಅವರ ನೇತೃತ್ವದಲ್ಲಿ ಅನೇಕ ಯುವಕರು ಇವರ ಆಗಮನದ ನಿರೀಕ್ಷಣೆಯಲ್ಲೇ ಇದ್ದರು. ವಿವೇಕಾನಂದರು ಚಿಕಾಗೋದಲ್ಲಿ ನಡೆಯಲಿರುವ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಬೇಕೆಂಬ ತಮ್ಮ ಆಕಾಂಕ್ಷೆಯನ್ನು, ಅದಕ್ಕಾಗಿ ಅಮೆರಿಕವನ್ನು ಭೇಟಿ ಮಾಡಬೇಕೆಂದಿರುವುದನ್ನು ಅವರಿಗೆ ಬಹಿರಂಗಪಡಿಸಿದರು. ಅವರ ಪ್ರಯಾಣಕ್ಕಾಗಿ ತರುಣ ಶಿಷ್ಯವೃಂದವು ಚಂದಾ ಎತ್ತಲು ಮುಂದಾಯಿತು. ಆದರೆ ಅವರು ದಿವ್ಯಮಾತೆಯ ಸಂಕಲ್ಪವೇನೆಂದು ಸರಿಯಾಗಿ ತಿಳಿಯದೆ ಇರುವ ಕಾರಣವನ್ನುಮುಂದೊಡ್ಡಿ ಸಂಗ್ರಹಿಸಿದ ಹಣವನ್ನು ಬಡವರಿಗೆ ದಾನಮಾಡಲು ಸೂಚಿಸಿದರು. ಈ ಮಧ್ಯೆ ಶ್ರೀರಾಮಕೃಷ್ಣರು ಸಮುದ್ರದಲ್ಲಿ ನಡೆದು, ತನ್ನನ್ನು ಅನುಸರಿಸುವಂತೆ ಸೂಚಿಸಿದ ರೀತಿಯಲ್ಲಿ ಸಾಂಕೇತಿಕವಾದ ಕನಸನ್ನು ವಿವೇಕಾನಂದರು ಕಂಡರು. ಇದೇ ಹೊತ್ತಿನಲ್ಲಿ ಶಾರದಾದೇವಿಯವರೂ ಸಹ ಕನಸಿನಲ್ಲಿ ನರೇಂದ್ರರ ಈ ಯೋಜನೆಗೆ ಶ್ರೀರಾಮಕೃಷ್ಣರು ಸಮ್ಮತಿಸಿದ್ದನ್ನು ಕಂಡರು. ಶ್ರೀಮಾತೆಯವರ ಆಶೀರ್ವಾದ ಮತ್ತು ಅನುಮತಿಗಳ ಮೂಲಕ ಇವರ ಯೋಜನೆಗೆ ಒಪ್ಪಿಗೆ ದೊರಕಿದಂತಾಯಿತು. ಇವರ ತರುಣ ಶಿಷ್ಯರು ಮತ್ತೆ ಅವಶ್ಯವಿದ್ದ ಹಣವನ್ನು ಸಂಗ್ರಹಿಸಲು ಪ್ರಾರಂಭಿಸಿದರು.

ಇರುವ ಅಲ್ಪ ಕಾಲಾವಕಾಶದಲ್ಲಿಯೇ ಸ್ವಾಮೀಜಿ ಹೈದರಾಬಾದಿಗೆ ಭೇಟಿ ಇತ್ತರು. ಅಮೆರಿಕಾಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಾಗ, ಖೇತ್ರಿ ಮಹಾರಾಜರಿಗೆ ಮಗ ಹುಟ್ಟಿದ ಪ್ರಯುಕ್ತ ಆ ಸಮಾರಂಭದಲ್ಲಿ ಭಾಗವಹಿಸಬೇಕೆಂದು ಆಕಸ್ಮಿಕ ಆಹ್ವಾನ ಬಂದಿತು. ತಮ್ಮ ಶಿಷ್ಯನ ಆಹ್ವಾನವನ್ನು ತಿರಸ್ಕರಿಸುವಂತಿಲ್ಲ. ಸ್ವಾಮೀಜಿಯವರನ್ನು ಮಹಾರಾಜರು ಬಹಳ ಆದರದಿಂದ ಸ್ವಾಗತಿಸಿದರಲ್ಲದೆ ಅವರ ಪ್ರವಾಸಕ್ಕೆ ಬೇಕಾದ ಯಾವುದೇ ಸಹಾಯವನ್ನು ಮಾಡುವುದಾಗಿ ಅಶ್ವಾಸನೆಯಿತ್ತರು. ಈ ಸಂದರ್ಭದಲ್ಲಿ ಮಹಾರಾಜರ ಸೂಚನೆಯ ಮೇರೆಗೆ ಸ್ವಾಮೀಜಿ 'ವಿವೇಕಾನಂದ' ಎಂಬ ನಾಮಾಂಕಿತವನ್ನು ಉಳಿಸಿಕೊಂಡರು. ಮಹಾರಾಜರು ತಮ್ಮ ಆಪ್ತಕಾರ್ಯದರ್ಶಿಯನ್ನು ಸ್ವಾಮೀಜಿಯವರ ಪ್ರವಾಸದ ಸಿದ್ಧತೆಗಾಗಿ ಮತ್ತು ಅವರನ್ನು ಮುಂಬಯಿಯಲ್ಲಿ ಬೀಳ್ಕೊಳ್ಳಲು ಕಳುಹಿಸಿದರು. ಮೇ 31,1893ರಂದು ಇವರ ಅಮೆರಿಕದ ಪ್ರಯಾಣ ಆರಂಭವಾಯಿತು.

Share
Comments

Comments

Sign in to leave a comment