೧೮೯೨ರಲ್ಲಿ ಬೆಳಗಾಂನಲ್ಲಿ ಸ್ವಾಮಿ ವಿವೇಕಾನಂದರನ್ನು ಅತಿಥಿಯಾಗಿ ಪಡೆಯುವ ಸೌಭಾಗ್ಯ ನನ್ನದಾಗಿತ್ತು. ದಿನಾಂಕ ನೆನಪಿಲ್ಲ, ಆದರೆ ಅವರು ಮದ್ರಾಸಿಗೆ ಹೋಗಿ ಪ್ರಸಿದ್ಧರಾಗುವುದಕ್ಕೆ ಆರು ತಿಂಗಳ ಮುಂಚೆ. ಈಬಾರಿಯೇ ಅವರು ಮದ್ರಾಸ್‌ನಲ್ಲಿ ಚಿಕಾಗೋ ಧರ್ಮಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಆರಿಸಲ್ಪಟ್ಟರು. ಅವರು ಈ ರೀತಿ ಪ್ರಸಿದ್ದಿಗೆ ಬರುವುದಕ್ಕೆ ಮುಂಚೆ ಅವರನ್ನು ಅರಿತವರು ಅತ್ಯಲ್ಪ ಮಂದಿಯಾದುದರಿಂದ ಅವರ ಈ ವ್ಯಕ್ತಿಚಿತ್ರ, ಅಷ್ಟೊಂದು ಸ್ಪಷ್ಟವಾಗಿಲ್ಲದಿದ್ದರೂ ಹೆಚ್ಚು ಕುತೂಹಲ ಕಾರಿ ಎಂದು ಭಾವಿಸುತ್ತೇನೆ.

ಸ್ವಾಮಿಗಳು ಕೊಲ್ಹಾಪುರದಿಂದ ಅಲ್ಲಿಯ ಮಹಾರಾಜರ ಖಂಗಿ ಕರ್ಭಾರಿ ಶ್ರೀ: ಗೋಲ್ವಾಲ್ಕರ್‌ರಿಂದ ಒಂದು ಪತ್ರದೊಡನೆ ಬೆಳಗಾಮಿಗೆ ಬಂದರು. ಕೊಲ್ಹಾಪುರಕ್ಕೆ ಅವರು ಭಾವನಗರದ ದರ್ಬಾರಿನಿಂದ ಒಂದು ಪತ್ರದೊಡನೆ ಬಂದಿದ್ದರು. ಸ್ವಾಮಿಗಳು ಮುಂಬಯಿಯಲ್ಲಿ ತಂಗಿದ್ದರೊ ಅಥವಾ ಅದರ ಮೂಲಕ ಹಾಗೆಯೇ ಬಂದುಬಿಟ್ಟರೂ ತಿಳಿಯದು. ಗೋಲ್ವಾಲ್ಕರ್ ನನ್ನ ತಂದೆಯ ಸ್ನೇಹಿತರು, ಸ್ವಾಮಿಗಳದು ಆಕರ್ಷಕ ರೂಪ ನೋಡಿದ ಕೂಡಲೇ ಇವರು ಎಲ್ಲರಂತಲ್ಲ ಎಂದೆನಿಸುತ್ತಿತ್ತು. ಆದರೂ ಅವರು ಅಂಥ ಅದ್ಭುತ ವ್ಯಕ್ತಿಯೆಂಬುದು ನನ್ನ ತಂದೆಗಾಗಲಿ ಅಥವಾ ಕುಟುಂಬದ ಇತರರಿಗಾಗಲಿ ಹೊಳೆಯಲಿಲ್ಲ.

ಸ್ವಾಮಿಗಳು ಬಂದ ದಿನದಿಂದ ಸಂಭವಿಸಿದ ಸಾಧಾರಣ ಘಟನೆಗಳು ಅವರ ಬಗೆಗಿನ ನಮ್ಮ ಅಭಿಪ್ರಾಯವನ್ನು ಬದಲಿಸುವಂತೆ ಮಾಡಿದವು. ಅವರು ಎಲ್ಲ ಸಂನ್ಯಾಸಿಗಳಂತೆ ಕಾವಿವಸ್ತ್ರವನ್ನು ಧರಿಸಿದ್ದರೂ ಅವರ ಉಡುಪು ಇತರ ಸಂನ್ಯಾಸಿಗಳಂತಿರಲಿಲ್ಲ. ಅವರು ಜುಬ್ಬ ಧರಿಸುತ್ತಿದ್ದರು. ದಂಡದ ಬದಲು ಉದ್ದನೆಯ ವಾಕಿಂಗ್ ಸ್ಟಿಕ್‌ನಂಥ ದೊಣ್ಣೆ ಹಿಡಿದಿದ್ದರು. ಅವರಲ್ಲಿದ್ದ ವಸ್ತುಗಳು ಇಷ್ಟೆ – ಒಂದು ಕಮಂಡಲು, ಒಂದು ಗೀತೆ, ಮತ್ತೆರಡು ಪುಸ್ತಕಗಳು. ಇಂಗ್ಲಿಷ್ ಮಾತನಾಡುವ, ಜುಬ್ಬ ಧರಿಸುವ, ಪ್ರಚಂಡ ಬುದ್ಧಿಶಕ್ತಿಯ, ಅನೇಕ ವಿಷಯಸಂಗ್ರಹವಿರುವ ಸಂನ್ಯಾಸಿಗಳನ್ನು ನಾವು ಹಿಂದೆ ನೋಡಿರಲಿಲ್ಲ. ಅವರಿಗೆ ಹಿಂದಿಯೂ ಚೆನ್ನಾಗಿ ಬರುತ್ತಿತ್ತು, ಆದರೆ ನಮ್ಮ ಮಾತೃಭಾಷೆ ಮರಾಠಿಯಾದುದರಿಂದ ಅವರು ಹೆಚ್ಚಾಗಿ ಇಂಗ್ಲಿಷಿನಲ್ಲಿಯೇ ಮಾತನಾಡುತ್ತಿದ್ಧರು.

ಸ್ವಾಮಿಗಳು ಬಂದ ಮೊದಲನೆಯ ದಿನವೇ ತಾಂಬೂಲಬೇಕೆಂದು ಕೇಳಿದರು. ಆನಂತರ ಅದೇ ದಿನವೊ ಅಥವಾ ಮರು ದಿನವೊ ಹೊಗೆಸೊಪ್ಪನ್ನು ಕೇಳಿದರು. ಸಾಮಾನ್ಯವಾಗಿ ಸಂನ್ಯಾಸಿಗಳೆಂದಮೇಲೆ ಅವರು ಈ ರೀತಿಯ ಅಲ್ಪ ಆಶೆಗಳನ್ನು ಮೀರಿ ಹೋಗಿರಬೇಕು. ಆದರೆ ಇವರು ಈ ರೀತಿ ಕೇಳುತ್ತಿರುವುದು ನಮಗೆ ಎಂತಹ ದಿಗ್ಭ್ರಮೆಯನ್ನು ಉಂಟುಮಾಡಿರಬಹುದೆಂಬುದನ್ನು ಊಹಿಸಬಹುದು. ಅವರು ಬ್ರಾಹ್ಮಣೇತರ ಜಾತಿಯವರು, ಆದರೂ ಸಂನ್ಯಾಸಿಗಳು ಮತ್ತು ಸಂನ್ಯಾಸಿಯಾಗಿಯೂ ಗೃಹಸ್ಥರು ಆಶೆ ಪಡುವ ವಸ್ತುಗಳನ್ನು ಬಯಸುವುದಾಗಿ ಅವರೇ ಹೇಳಿದರು. ಇದೆಂಥ ವಿಪರ್ಯಾಸ! ಆದರೂ ಅವರು ನಮ್ಮ ಭಾವನೆಯನ್ನು ಬದಲಿಸುವುದರಲ್ಲಿ ಯಶಸ್ವಿಯಾದರು. ನಿಜವಾಗಿಯೂ ಒಬ್ಬ ಸಂನ್ಯಾಸಿ ತಾಂಬೂಲ ಅಥವಾ ಹೊಗೆಸೊಪ್ಪನ್ನು ಸೇವಿಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಅವರು ಕೊಟ್ಟ ವಿವರಣೆ ನಮ್ಮನ್ನು ಸಂಪೂರ್ಣ ಬಾಯಿಮುಚ್ಚಿಸಿತು. ಅವರು ಅತ್ಯಂತ ಉತ್ಸಾಹದ ಯುವಕರಾಗಿದ್ದರು ಮತ್ತು ಕೊಲ್ಕಾತ ವಿಶ್ವವಿದ್ಯಾಲಯದ ಪದವೀಧರರು; ಶ್ರೀರಾಮಕೃಷ್ಣ ಪರಮಹಂಸರನ್ನು ಸಂಧಿಸುವುದಕ್ಕೆ ಮುಂಚೆ ಅವರು ಮುಂದೇನಾದರೊ ಅದಕ್ಕಿಂತ ಅತ್ಯಂತ ಬೇರೆಯೆ ಆಗಿತ್ತು ಅವರ ಜೀವನ. ಶ್ರೀರಾಮಕೃಷ್ಣರ ಉಪದೇಶದಿಂದ ಅವರ ಇಡೀ ಜೀವನವೇ, ದೃಷ್ಟಿಕೋನವೇ ಬದಲಾಯಿತು. ಆದರೆ ಈ ಕೆಲವನ್ನು ಅವರಿಗೆ ಬಿಡಲಾಗಲಿಲ್ಲ. ಅವೇನೂ ಅಂಥ ಕೆಟ್ಟದ್ದಲ್ಲವೆಂದು ಉಳಿಸಿಕೊಂಡರು. ತಾವು ಸ್ವೀಕರಿಸುವುದು ಸಸ್ಯಾಹಾರವೊ ಅಥವಾ ಮಾಂಸಾಹಾರವೊ ಎಂದು ಕೇಳಿದಾಗ, ತಾವು ಸಾಮಾನ್ಯ ಸಂನ್ಯಾಸಿಗಳ ಗುಂಪಿಗೆ ಸೇರದೆ ಪರಮಹಂಸರಾದುದರಿಂದ ಆಹಾರದಲ್ಲಿ ಯಾವ ನಿಯಮವೂ ಇಲ್ಲ ಎಂದರು. ಪರಮಹಂಸರು ಕೊಟ್ಟಿದ್ದನ್ನು ತಿನ್ನಬೇಕು, ಏನೂ ಸಿಗದಿದ್ದರೆ ಉಪವಾಸವಿರಬೇಕು ಮತ್ತು ಪರಮಹಂಸರು ಯಾರಿಂದಲಾದರೂ, ಜಾತಿ ಧರ್ಮಗಳ ನಿರ್ಬಂಧವಿಲ್ಲದೆ, ಆಹಾರವನ್ನು ಸ್ವೀಕರಿಸಬಹುದು. ಹಿಂದೂಗಳಲ್ಲದವರಿಂದಲೂ ಆಹಾರ ಸ್ವೀಕರಿಸುವಿರಾ ಎಂದು ಕೇಳಿದಾಗ ತಾವು ಅನೇಕ ಬಾರಿ ಮುಸ್ಲಿಮರಿಂದ ಊಟ ಸ್ವೀಕರಿಸಿರುವುದಾಗಿ ಹೇಳಿದರು.

ಸ್ವಾಮಿಗಳು ಸಂಸ್ಕೃತದಲ್ಲಿ ಪ್ರಗಾಢ ಪಂಡಿತರಿರುವುದಾಗಿ ಕಂಡು ಬಂದಿತು. ಆ ಸಂದರ್ಭದಲ್ಲಿ ನಾನು ‘ಅಷ್ಟಾಧ್ಯಾಯಿ’ ಯನ್ನು ಓದುತ್ತಿದ್ದೆ. ಅವರು “ಅಷ್ಟಾಧ್ಯಾಯಿ”ಯಿಂದ ಲೀಲಾಜಾಲವಾಗಿ ಉದ್ದರಿಸುವುದನ್ನು ನೋಡಿ ನನಗೆ ಪರಮಾಶ್ಚರ್ಯವಾಯಿತು. ಇನ್ನೂ ಬಾಲಕನಾದ ನಾನು ಅದರ ಸೂತ್ರಗಳನ್ನು ನೆನಪಿಟ್ಟುಕೊಳ್ಳಲು ಹೆಣಗಾಡುತ್ತಿದೆ. ನಾನು ಅಧ್ಯಯನ ಮಾಡುತ್ತಿದ್ದ ಕೆಲವು ಭಾಗವನ್ನು ನನ್ನ ತಂದೆ ಉಚ್ಚರಿಸಲು ಹೇಳಿದಾಗ ನಾನು ಮಧ್ಯದಲ್ಲಿ ಸ್ವಲ್ಪ ತಪ್ಪಿದೆ. ಆಗ ಸ್ವಾಮೀಜಿ ಮುಗುಳ್ನಗುತ್ತ ಸರಿಪಡಿಸಿದರು. ನನಗೆ ನಾಚಿಕೆಯಾಯಿತು. ಇದರಿಂದಾಗಿ ಅವರ ಬಗೆಗಿನ ನನ್ನ ಭಾವನೆಯಲ್ಲಿ ಗಮನಾರ್ಹ ಬದಲಾವಣೆಯಾಯಿತು. ಇನ್ನೊಮ್ಮೆ “ಅಮರಕೋಶ”ದ ಕೆಲವು ಭಾಗವನ್ನು ಉಚ್ಚರಿಸಬೇಕಾಗಿ ಬಂತು. ಈಗ ನನ್ನ ಮೂರ್ಖತನವನ್ನು ಪ್ರದರ್ಶಿಸಲು ಇಷ್ಟಪಡದೆ ನನ್ನ ಅಸಮರ್ಥತೆಯನ್ನು ಒಪ್ಪಿಕೊಂಡೆ. ಇದರಿಂದ ನನ್ನ ತಂದೆಗೆ ಸ್ವಲ್ಪ ಕೋಪ ಬಂತು. ಹೊಸದಾಗಿ ಬಂದ ಅತಿಥಿಯ ಮುಂದೆ ಆಗುವ ಅವಮಾನಕ್ಕಿಂತ ತಂದೆಯ ಕೋಪವೇ ಇರಲೆಂದು ನಾನು ಸುಮ್ಮನೇ ಇದ್ದೆ.

ಸ್ವಾಮಿಗಳು ಬಂದು ಎರಡು ದಿನಗಳಾದ ಮೇಲೆ ನನ್ನ ತಂದೆ ಅವರ ಯೋಗ್ಯತೆಯನ್ನು ಅಳೆಯಲಾರಂಭಿಸಿದರು. ಅವರಿಗಾಗ ತಿಳಿಯಿತು ತಮ್ಮ ಅತಿಥಿ ಸಾಮಾನ್ಯರಲ್ಲ, ಅಸಾಧಾರಣ ವ್ಯಕ್ತಿತ್ವ ಅವರದು ಎಂದು. ತಮ್ಮ ಈ ಅಭಿಪ್ರಾಯವನ್ನು ದೃಢಪಡಿಸಲು ತಮ್ಮ ಕೆಲವು ಸ್ನೇಹಿತರನ್ನೂ ಕರೆಸಿದರು. ಸ್ಥಳೀಯ ಮುಂದಾಳುಗಳು ಮತ್ತು ವಿದ್ವಾಂಸರು ಇವರನ್ನೆಲ್ಲ ಕರೆಸುವುದು ಉಚಿತವೆಂದು ಅವರೆಲ್ಲ ಒಮ್ಮತದಿಂದ ಅಭಿಪ್ರಾಯಪಟ್ಟರು. ಪ್ರತಿದಿನ ನಮ್ಮ ಮನೆಯಲ್ಲಿ ಜನರ ದೊಡ್ಡ ಸಭೆಯೇ ಸೇರತೊಡಗಿತು. ಈ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬಂದ ಸ್ವಾಮೀಜಿಯವರ ಒಂದು ವೈಶಿಷ್ಟ್ಯವೆಂದರೆ ಅವರು ಮಾತಿನ ಸಂದರ್ಭದಲ್ಲಿ ಯಾವಾಗಲೂ, ಬಿಸಿಬಿಸಿ ಚರ್ಚೆಯ ಸಮಯದಲ್ಲಿಯೂ, ತಮ್ಮ ಹಾಸ್ಯಪ್ರವೃತಿಯನ್ನು ಬಿಡದೇ ಇದ್ದುದು. ಅವರು ಕೆಲವೊಮ್ಮೆ ಕಟುವಾಗಿ ನುಡಿದರೂ ಅದರಲ್ಲಿ ಮುಳ್ಳಿರುತ್ತಿರಲಿಲ್ಲ. ಚರ್ಚೆಯ ಸಂದರ್ಭದಲ್ಲಿ ಅವರು ಹೇಗೆ ಶಾಂತವಾಗಿರುತ್ತಿದ್ದರೆಂಬುದರ ಒಂದು ಸುಂದರ ದೃಷ್ಟಾಂತ ನಮಗೆ ಒಂದು ದಿನ ದೊರಕಿತು.

ಆಗ ಬೆಳಗಾಮಿನಲ್ಲಿ ಒಬ್ಬರು ಎಕ್ಸಿಕ್ಯೂಟಿವ್ ಇಂಜಿನಿಯರ್ ಇದ್ದರು. ಅವರು ತುಂಬ ವಿಷಯ ತಿಳಿದವರೆಂದು ನಮ್ಮಲ್ಲಿ ಪ್ರಸಿದ್ಧಿ. ಅವರು ದಿನನಿತ್ಯದ ಜೀವನದಲ್ಲಿ ನಿಷ್ಠಾವಂತ ಹಿಂದೂವಿನಂತಿದ್ದರು. ಆದರೆ ಆಂತರಿಕವಾಗಿ ಅವರು ಸಂಶಯವಾದಿ. ಆಗಿನ ಕಾಲದಲ್ಲಿ ಯಾವುದನ್ನು ವೈಜ್ಞಾನಿಕ ಮನೋಭಾವ ಎಂದು ಕರೆಯುತ್ತಿದ್ದರೊ ಅದಕ್ಕೆ ಬಲವಾಗಿ ಅಂಟಿಕೊಂಡಿದ್ದರು. ಧರ್ಮಕ್ಕೆ ಯಾವ ಆಧಾರವೂ ಇಲ್ಲ, ಧಾರ್ಮಿಕ ಆಚರಣೆ ನಂಬಿಕೆಗಳೆಲ್ಲ ಕೇವಲ ರೂಢಿಯಿಂದ ಬಂದವುಗಳು, ತಾನೊಬ್ಬ ಮಹಾವಿಚಾರವಾದಿ ಎಂದು ಹೆಮ್ಮೆಯಿಂದಿದ್ದ ಅವರಿಗೆ ಸ್ವಾಮೀಜಿ ನುಂಗಲಾರದ ತುತ್ತಾದರು. ಏಕೆಂದರೆ ಅವರು ಹೆಚ್ಚು ಅನುಭವವುಳ್ಳವರು, ಮತ್ತು ತತ್ತ್ವಶಾಸ್ತ್ರ ವಿಜ್ಞಾನಗಳ ಬಗ್ಗೆ ಅವರ ಜ್ಞಾನ ಅಗಾಧವಾದದ್ದು. ಸ್ವಾಭಾವಿಕವಾಗಿಯೇ ಆ ಸ್ಥಳೀಯ ಪಂಡಿತರು ಚರ್ಚೆಯ ಮಧ್ಯದಲ್ಲಿ ಆಗಾಗ ಕೋಪಗೊಳ್ಳುತ್ತಿದ್ದರು, ಸ್ವಲ್ಪ ಅಸಭ್ಯವಾಗಿಯೂ ನಡೆದುಕೊಂಡರು. ನನ್ನ ತಂದೆ ವಿರೋಧಿಸಿದಾಗ, ಸ್ವಾಮೀಜಿ ತಡೆದು ಮುಗುಳ್ನಗುತ್ತ ಇಂಜಿನೀಯರರ ಕೋಪಪ್ರದರ್ಶನದಿಂದ ತಮಗೇನೂ ತೊಂದರೆಯಾಗಿಲ್ಲವೆಂದು ಹೇಳಿದರು. ಇಂಥ ಸಂದರ್ಭದಲ್ಲಿ ಕುದುರೆ ಪಳಗಿಸುವವನು ಅನುಸರಿಸುವ ಮಾರ್ಗವನ್ನು ಹಿಡಿಯಬೇಕು, ಎಂದರು ಸ್ವಾಮೀಜಿ, ಎಳೆ ಕುದುರೆಯನ್ನು ಪಳಗಿಸುವಾಗ ಸವಾರನು ಮೊದಲು ಹೇಗೊ ಅದರ ಬೆನ್ನಿನ ಮೇಲೆ ಕೂತು ಬಿಡುತ್ತಾನೆ. ಅನಂತರ ಅವನ ಪ್ರಯತ್ನ ತಾನು ಕೆಳಗೆ ಬೀಳದಂತೆ ನೋಡಿಕೊಳ್ಳುವುದಷ್ಟೆ. ಅದು ಮನಬಂದಂತೆ ಓಡುವುದು, ಸವಾರನನ್ನು ಬೀಳಿಸಲು ಪ್ರಯತ್ನಿಸುವುದು. ಆದರೆ ಇವನೇನೂ ಮಾಡುವುದಿಲ್ಲ, ಕುದುರೆಯ ಶಕ್ತಿಯೆಲ್ಲ ಮುಗಿದಮೇಲೆ ಸವಾರನ ಕೆಲಸ ಪ್ರಾರಂಭವಾಗುವುದು. ಅವನಾಗ ಕುದುರೆಯ ಒಡೆಯನಾಗುವನು, ಕುದುರೆಯೂ ತಲೆಬಾಗುವುದು. ಈಗ ಅದನ್ನು ಪಳಗಿಸುವುದು ಸುಲಭ. ಚರ್ಚೆ ಮತ್ತು ಸಂಭಾಷಣೆಗಳಲ್ಲಿಯೂ ಇದೇ ವಿಧಾನವನ್ನೇ ಅನುಸರಿಸಬೇಕೆಂದು ಸ್ವಾಮೀಜಿ ಹೇಳಿದರು. ನಿಮ್ಮ ವಿರೋಧಿ ತನ್ನೆಲ್ಲ ವಾಕ್ ಶಕ್ತಿಯನ್ನು ಹೇಗಾದರೂ ಉಪಯೋಗಿಸಲಿ. ಅವನು ಸುಸ್ತಾದ ಮೇಲೆ ಅವನನ್ನು ಮೆಲ್ಲಗೆ ನಿಮ್ಮ ಅಭಿಪ್ರಾಯವನ್ನು ಒಪ್ಪಿಕೊಳ್ಳುವಂತೆ ಮಾಡಬಹುದು. ಅಂದರೆ ವಿರೋಧಿಯನ್ನು ಕೇವಲ ಬಾಯಿಮುಚ್ಚಿಸುವುದಕ್ಕಿಂತ ಅವನಿಗೆ ನಿಮ್ಮ ಅಭಿಪ್ರಾಯದಲ್ಲಿ ನಂಬಿಕೆಯುಂಟಾಗುವಂತೆ ಮಾಡುವುದು ನಿಮ್ಮ ಗುರಿಯಾಗಬೇಕು.

ಮತಾಂಧರಾದ ತಾಳ್ಮೆಯಿಲ್ಲದ ವಾದಿಗಳಿಗೆ ಸ್ವಾಮೀಜಿ ಸಿಂಹಸ್ವಪ್ನವಾಗಿದ್ದರು. ಆ ನಗರದ ಎಲ್ಲ ಪ್ರತಿಭಾನ್ವಿತರನ್ನೂ ತಮ್ಮ ವಾದದಿಂದ ಮಣ್ಣುಮುಕ್ಕಿಸಿದ್ದರು. ಆದರೆ ಸುಮ್ಮನೆ ವಾದದಲ್ಲಿ ಜಯಗಳಿಸುವುದು ಅವರ ಉದ್ದೇಶವಾಗಿರಲಿಲ್ಲ. ಈ ದೇಶ ಮತ್ತು ಇಡೀ ಪ್ರಪಂಚದ ಜನತೆಗೆ ಹಿಂದೂಧರ್ಮ ಇನ್ನೂ ಸತ್ತಿಲ್ಲ, ಅದು ಖಂಡನಾರ್ಹವಲ್ಲ ಎಂದು ತೋರಿಸುವುದೇ ಅವರ ಮುಖ್ಯ ಉದ್ದೇಶವಾಗಿತ್ತು. ವೇದಾಂತದಲ್ಲಿರುವ

ಅಮೂಲ್ಯ ಸತ್ಯಗಳನ್ನು ಪ್ರಪಂಚಕ್ಕೆ ಬೋಧಿಸುವ ಕಾಲ ಬಂದಿದೆ ಎಂದವರು ಹೇಳುತ್ತಿದ್ದರು. ನನಗನಿಸುವಂತೆ ಅವರ ವೇದಾಂತ ಭಾವನೆಗಳು ಸಾಂಪ್ರದಾಯಿಕ ಭಾವನೆಗಳಿಗಿಂತ ಬೇರೆಯೆ ಆಗಿದ್ದವು. ವೇದಾಂತವು ಇತರ ಹಿಂದೂಧರ್ಮದ ಮತಗಳೊಡನೆ ಸ್ಪರ್ಧಿಸುವ ಒಂದು ಮತವಾಗಿರದೆ ಅದು ಜೀವದಾನಮಾಡುವ ಶಾಶ್ವತ ಸ್ಫೂರ್ತಿಯ ನೆಲೆಯಾಗಿದೆ-ಎಂಬುದವರ ಅಭಿಪ್ರಾಯ. ವೇದಾಂತ ತತ್ತ್ವಗಳು ಹೇಡಿಗಳ ಕೈಸೇರಿರುವುದು ಅಪಾಯಕರ, ಅತ್ಯಂತ ಧೈರ್ಯಶಾಲಿಗಳು ಮಾತ್ರ ಆ ತತ್ತ್ವಗಳನ್ನು ಅನುಷ್ಠಾನ ಮಾಡಬಲ್ಲರು. ಅವರ ಮೆಚ್ಚಿನ ದೃಷ್ಟಾಂತವಿದು: ಪ್ರತೀಕಾರ ಮಾಡುವ ಶಕ್ತಿಯಿದ್ದೂ ಅದನ್ನು ನಿಗ್ರಹಿಸಬಲ್ಲ ವ್ಯಕ್ತಿ ಮಾತ್ರ ಅಹಿಂಸೆಯನ್ನು ಆಚರಿಸಲು ಸಾಧ್ಯ. ಒಬ್ಬ ಬಲಶಾಲಿಯಾದ ವ್ಯಕ್ತಿ ದುಡುಕಿನ ಅಥವಾ ದುರ್ಬಲನಾದ ವಿರೋಧಿಯ ಮೇಲೆ ತನ್ನ ಬಲಪ್ರಯೋಗ ಮಾಡದಿದ್ದರೆ ಆಗ ಅವನ ಕೃತಿಯನ್ನು ಉದಾತ್ತವಾದುದೆಂದು ಪರಿಗಣಿಸಬಹುದು. ಅದಿಲ್ಲದೆ ವ್ಯಕ್ತಿ ದುರ್ಬಲನಾಗಿದ್ದರೆ ಅಥವಾ ವಿರೋಧಿಯು ಇವನಿಗಿಂತ ಬಲಶಾಲಿಯಾಗಿದ್ದರೆ ಆಗ ಅವನ ಅಹಿಂಸೆ ದೌರ್ಬಲ್ಯದ ಚಿಹ್ನೆಯಾಗಿರಬಹುದು. ಅರ್ಜುನನಿಗೆ ಶ್ರೀಕೃಷ್ಣನ ಉಪದೇಶದ ಸಾರವೇ ಇದು ಎಂದವರು ಹೇಳುತ್ತಿದ್ದರು. ಅರ್ಜುನ ತನ್ನ ಬಲಪ್ರಯೋಗ ಮಾಡಲು ನಿರಾಕರಿಸಿದುದಕ್ಕೆ ಕಾರಣ ವೈರಾಗ್ಯವಾಗಿರಲಿಲ್ಲ. ಆದ್ದರಿಂದಲೇ ಅಷ್ಟೊಂದು ಸುದೀರ್ಘ ಉಪದೇಶವನ್ನು ಶ್ರೀಕೃಷ್ಣ ನೀಡಬೇಕಾಯಿತು.