ಹಲವಾರು ಹೆಸರಾಂತ ಸಮಾಜಸೇವಾ ಸಂಸ್ಥೆಗಳಲ್ಲಿ ತಮ್ಮ ಬದುಕನ್ನು ಸವೆಸಿರುವ ಶ್ರೀಯುತ ಸೋಮಸುಂದರಂ ಅವರು ಸ್ವಾಮಿ ವಿವೇಕಾನಂದರ ಸ್ಫೂರ್ತಿದಾಯಕ ಸಾಮಾಜಿಕ ಚಿಂತನೆಗಳನ್ನು ಕುರಿತು ಚರ್ಚಿಸಿರುವುದನ್ನು ಈ ವಿಶೇಷ ಲೇಖನದಲ್ಲಿ ಕಾಣಬಹುದು.

ನಮ್ಮ ಭಾರತ ಇತಿಹಾಸ ಆಗಸದಲ್ಲಿ ಸ್ವಾಮಿ ವಿವೇಕಾನಂದರು ತೇಜೋರಾಶಿಯಿಂದ ಪ್ರಜ್ವಲಿಸುತ್ತಿರುವ ತಾರೆ. ಒಮ್ಮೊಮ್ಮೆ ಒಂದೊಂದು ವರ್ಣದಲ್ಲಿ, ಒಂದೊಂದು ಕಾಂತಿಯಲ್ಲಿ, ತಾರೆ ಬೆಳಗುವಂತೆ ಸ್ವಾಮಿ ವಿವೇಕಾನಂದರ ದಿವ್ಯವ್ಯಕ್ತಿತ್ವವು ಬಗೆ ಬಗೆಯಾಗಿ ನಮಗೆ ಗೋಚರಿಸುವುದು. ಎಲ್ಲಿಯೋ ನಿಶ್ಯಬ್ದದ ಗುಹೆಗಳಲ್ಲಿ, ಝುಳು ಝುಳು ನೀರು ಹರಿಯುತ್ತಿರುವ ನದೀ ತೀರಗಳಲ್ಲಿ, ಎಲೆಗಳ ಮರ್ಮರದ ಕಾನನಗಳಲ್ಲಿ, ಹಕ್ಕಿಗಳ ಇಂಚರದ ಗಿರಿಕಂದರಗಳಲ್ಲಿ ಮೂಡಿದ ಅಮೂಲ್ಯ ಜ್ಞಾನವನ್ನು ಬೊಗಸೆ ಬೊಗಸೆಯಾಗಿ ಸಾಮಾನ್ಯ ಜನಕ್ಕೆ, ಭಾರತವಷ್ಟೇ ಅಲ್ಲದೆ ವಿಶ್ವದ ಮೂಲೆ ಮೂಲೆಗೆ ಹಂಚಲು ಹವಣಿಸಿದ ದಿವ್ಯಪ್ರತಿಭೆ ಸ್ವಾಮಿ ವಿವೇಕಾನಂದರು.

ನೊಂದ ಜೀವಿಗಳಿಗೆ ಸಾಂತ್ವನ

ಶ್ರೀರಾಮಕೃಷ್ಣರು ಒಂದು ಸುಂದರ ಕಥೆಯನ್ನು ನಮಗೆ ಹೇಳುತ್ತಾರೆ. ಮೂರು ಮಂದಿ ಅನ್ವೇಷಕರು ಆನಂದವನ್ನು ಅರಸುತ್ತಾ ನಡೆಯುತ್ತಾರೆ. ಅವರ ಹಿಂದೆ ನೂರಾರು ಜನ ಉತ್ಕಟಾಕಾಂಕ್ಷೆಯಿಂದ ಕಾಯುತ್ತಿದ್ದಾರೆ. ಅನ್ವೇಷಕರಲ್ಲಿ ಮೊದಲನೇಯವನು ಒಂದು ದೊಡ್ಡ ಗೋಡೆಯ ಬಳಿ ಬರುತ್ತಾನೆ. ಕಷ್ಟಪಟ್ಟು ಗೋಡೆ ಹತ್ತಿ, ಗೋಡೆಯ ಇನ್ನೊಂದು ಬದಿಯನ್ನು ನೋಡುತ್ತಾನೆ. ಅಲ್ಲಿ ಅವನು ಅತ್ಯಂತ ಆನಂದದ ಪ್ರಪಂಚವನ್ನೇ ಕಾಣುತ್ತಾನೆ. ಅವನಿಗೆ ಇನ್ನು ತಡೆಯಲಾಗುವುದಿಲ್ಲ. “ಹೋ” ಎಂದು ಹಾಗೆಯೇ ಅತ್ತ ಕಡೆ ಧುಮುಕಿಬಿಡುತ್ತಾನೆ. ತಹತಹಿಸುತ್ತಿರುವ ಜನಸ್ತೋಮ ಸ್ತಬ್ಧವಾಗಿ  ಅವನ ಕಡೆ ನೋಡಿ ನಿರಾಶವಾಗುತ್ತದೆ. ಇನ್ನು ಎರಡನೆಯವನು, ಅವನೂ ಸಹ ಹಾಗೆಯೇ “ಹೋ” ಎಂದು ಧುಮುಕಿ ಬಿಟ್ಟ. ಇನ್ನು ಮೂರನೆಯವನು ಏನು ಮಾಡುತ್ತಾನೋ? ಮೂರನೆಯವನೂ ಗೋಡೆ ಹತ್ತಿದ. ಅವನೂ ಆ ಆನಂದದ ಲೋಕ ಕಂಡ. ಎಷ್ಟೇ ಮನಸ್ಸು ಎಳೆದರೂ ಹಾಗೆ ಅತ್ತಕಡೆ ಧುಮುಕಿಬಿಡಲಿಲ್ಲ. ಎಲ್ಲ ಜನರ ಕಡೆ ಅತ್ಯಂತ ಪ್ರೇಮ ವಿಶ್ವಾಸಗಳಿಂದ ನೋಡಿದ. “ಬನ್ನಿರೋ, ಬನ್ನಿ, ಇಲ್ಲಿ ಅತ್ಯಂತ ಆಕರ್ಷಕ ಅಮೂಲ್ಯ ಸಂಪತ್ತಿನ ಲೋಕವಿದೆ. ನಾವೆಲ್ಲರೂ ಇಷ್ಟುಕಾಲ ಹುಡುಕಿದುದು ಇದೇ. ನಾನು ಒಂದು ಕೈ ಕೊಡುತ್ತೇನ. ಮೇಲೆ ಹತ್ತಿ ಬನ್ನಿ” ಎಂದು ಎಲ್ಲರನ್ನೂ ಹತ್ತಿಸಿಕೊಂಡ.

ಎಷ್ಟು ಸುಂದರವಾದ ಕಥೆ! ಆಧ್ಯಾತ್ಮಿಕತೆಯನ್ನು ಸಾರಲು ಶ್ರೀರಾಮಕೃಷ್ಣರು ಈ ಕಥೆಯನ್ನು ಹೇಳಿರುವರಾದರೂ ಒಂದು ರೀತಿಯಲ್ಲಿ ಸದ್ದಿಲ್ಲದವರ ದನಿಯಾಗಿ ಸಾಮಾಜಿಕ ನ್ಯಾಯ ದೊರಕಿಸಲು ಸ್ವಾಮಿ ವಿವೇಕಾನಂದರು ಈ ಮೂರನೆಯವನ ರೀತಿ ನಡೆದುಕೊಂಡಂತೆ ಕಾಣುತ್ತದೆ. ನಿರ್ವಿಕಲ್ಪ ಸಮಾಧಿಯನ್ನು ಪಡೆದ ಅವರು ಹಿಮಾಲಯಕ್ಕೆ ಹೋಗಿಬಿಡಲಿಲ್ಲ. ಬದಲಿಗೆ ಜನರ ಮಧ್ಯೆಯೇ ಉಳಿದು ಮಾನವ ಕಲ್ಯಾಣಕ್ಕಾಗಿ ಈ ಮಹತ್ಕಾರ್ಯ ಕೈಗೊಂಡರು. ವಿವೇಕಾನಂದರು ತಮ್ಮ ಜೀವಿತೋದ್ದೇಶದ ಬಗ್ಗೆ ಹೀಗೆ ಹೇಳುತ್ತಾರೆ:

ನುಡಿಗಳೆರಡರಲ್ಲಿ ಅರುಹೆ ಇದುವೆ ಎನ್ನ ಆದರ್ಶ-ಮನುಜ ಕುಲಕೆ ತಮ್ಮೊಳಿರ್ಪ ದಿವ್ಯಭಾವ ಬೋಧೆಗೈದು ಅದನು ಬಾಳಯಾತ್ರೆಯಲ್ಲಿ, ಅಡಿಗು ಅಡಿಗು ಬೆಳಗಿಸಲ್ಕೆ ತದನುರೂಪ ಪಥಗಳನ್ನು ತೋರಿಕೊಡುವ ಯತ್ನ – ಕೃತಿಯು (ಸ್ವಾಮಿ ಶಾಸ್ತ್ರಾನಂದರ “ಕೂಗಿ ಕರೆಯುವಾ” ಕವನದಿಂದ).

ಜನಸಾಮಾನ್ಯರಿಗೆ ಸಂದ ವೇದಾಂತ

ಇದು ಅತ್ಯಂತ ವಿಶಿಷ್ಟ ರೀತಿಯಲ್ಲಿ ನಡೆದಿದೆ. ಹೇಗೆಂದರೆ ವೇದಾಂತವನ್ನು ಚಿನ್ನದ ಪೆಟ್ಟಿಗೆಯಲ್ಲಿ ಬೀಗ ಹಾಕಿಟ್ಟು ಅದನ್ನು ಕೆಲವೇ ಆಧ್ಯಾತ್ಮಿಕ ಸಾಧನೆಗಳಲ್ಲಿ ಬಳಸಿಕೊಳ್ಳುತ್ತಿದ್ದ, ಅದರ ಬಳಕೆ ಅಷ್ಟೇ ಎಂದು ನಂಬಿದ್ದ ಕಾಲದಲ್ಲಿ ಅದ್ವೈತ ಬಹು ಕ್ಲಿಷ್ಟ, ಜನಸಾಮಾನ್ಯರಿಂದ ಅದು ದೂರ ಎಂಬ ನಂಬಿಕೆ ಬಲವಾಗಿ ಬೇರೂರಿದ್ದ ಕಾಲದಲ್ಲಿ, ಬರಿಯ ಸಾಧಕರು ಮಾತ್ರವಲ್ಲದೆ ಬಡವಬಲ್ಲಿದ, ಬೆಸ್ತ, ಚಮ್ಮಾರರು ಮೊದಲುಗೊಂಡು ಎಲ್ಲರ ಬಾಗಿಲಿಗೂ ಈ ಅಮರ ಸಂದೇಶವನ್ನು ತಲುಪಿಸಿದ ಧೀರ ವೇದಾಂತಿ ಸ್ವಾಮಿ ವಿವೇಕಾನಂದರು, ತನ್ಮೂಲಕ ಸಮಾಜದ, ಮಾನವ ಜನಾಂಗದ ಏಕತೆಯನ್ನು, ಸರಿಸಮಾನತೆಯನ್ನು ಉಚ್ಚ ಕಂಠದಲ್ಲಿ ಸಾರಿದರು.

ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ಮಾನವ ಜನಾಂಗದ ಏಕತೆ, ಸರಿಸಮಾನತೆ ಎಂದರೆ ಅದು ಆಧ್ಯಾತ್ಮಿಕ ಪ್ರಪಂಚಕ್ಕೆ ಒಳಪಟ್ಟಿದ್ದು. ಅದನ್ನು ಸಾಮಾಜಿಕವಾಗಿ ನೋಡಲಾಗದು ಎಂದು ವಾದಿಸುವವರು ಇದ್ದಾರೆ. ಆದ್ದರಿಂದಲೇ ಜೀವನದಲ್ಲಿಯೂ ಇಬ್ಬಗೆಯ ನೀತಿ ಮೂಡುತ್ತದೆ. ಹಾಗಾದರೆ ಸಾಮಾಜಿಕ, ರಾಜಕೀಯ, ವೈಜ್ಞಾನಿಕ ಕ್ಷೇತ್ರಗಳಲ್ಲಿ ಬೇರೆ ಬೇರೆ ವರ್ತನೆಗಳಿರಬೇಕೆ? ಆಗ ಸೀಳು ವ್ಯಕ್ತಿತ್ವವೋ ಬಹುರೂಪ ವ್ಯಕ್ತಿತ್ವವೋ ಏರ್ಪಡುವ ಸಾಧ್ಯತೆ ಬರುತ್ತದೆ. ಇದು ಎಂದಿಗೂ ಸಲ್ಲದು. ಬದಲಿಗೆ ಅಧ್ಯಾತ್ಮ ತತ್ವವನ್ನು ಈ ವಿಭಾಗಗಳಲ್ಲಿಯೂ ಸೂಕ್ತವಾಗಿ ಅನುಸರಿಸಿ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು.

ಇಲ್ಲಿ ವಿವೇಕಾನಂದರ ಇನ್ನೊಂದು ಚಿಂತನೆಯನ್ನು ನಾವು ಗಮನಿಸಬೇಕು. ಪ್ರತಿಯೊಂದು ವ್ಯಕ್ತಿಗೆ ಇರುವಂತೆ ಪ್ರತಿಯೊಂದು ದೇಶಕ್ಕೂ ಒಂದು ಜೀವನೋದ್ದೇಶವಿದೆ. ಉಳಿದ ಸ್ವರಗಳು ಅದರಲ್ಲಿ ಮಿಳಿತಗೊಳ್ಳುವುವು. ಇದೇ ಅದರ ಜೀವಾಳ. ಭಾರತದಲ್ಲಿ ಸಮಾಜಚಿಂತನೆ, ಅಥವಾ ಇನ್ನಾವುದೇ ವಿಚಾರವನ್ನು, ಅದು ಅಧ್ಯಾತ್ಮವನ್ನು ಹೇಗೆ ಬಲಗೊಳಿಸುತ್ತದೆ ಎಂಬುದನ್ನು ಲಕ್ಷ್ಯದಲ್ಲಿಟ್ಟುಕೊಂಡು ಬೊಧಿಸಬೇಕು. ಆಗ ಅದಕ್ಕೆ ತಕ್ಷಣ ಸ್ವೀಕೃತಿ ಸಿಗುವುದು ಆದೃಷ್ಟವಶಾತ್ ನಮ್ಮ ದೇಶದ ಸಂದರ್ಭದಲ್ಲಿ ಎರಡು ಮುಖ್ಯ ಸಿದ್ಧಾಂತಗಳು ಮಿಳಿತವಾಗಿವೆ. ಒಂದು, ಜೀವನಕ್ಕೆ ಅಧ್ಯಾತ್ಮವೇ ಮೂಲ, ಅದರಿಂದಲೇ ಹೊರಡಬೇಕು. ಎರಡನೆಯದು, ಅದೇ ನಮ್ಮ ಭರತಖಂಡದ ಜೀವಾಳವಾದ್ದರಿಂದ ಕಾರ್ಯವು ಸಮಂಜಸ ಮತ್ತು ಸುಲಭವೇ!

ಮುಕ್ತರಾಗಿ, ಯಾರಿಂದಲೂ ಏನನ್ನೂ ಅಪಕ್ಷಿಸಬೇಡಿ. ನೀವು ನಿಮ್ಮ ಜೀವನ ಅವಲೋಕಿಸಿದರೆ ತಿಳಿಯುವುದು ಸಹಾಯ ಹೊರಗಿನಿಂದ ಬರಲಿಲ್ಲ; ಆದರೆ ಎಲ್ಲವೂ ನಿಮ್ಮಳಗೆಯೇ ಇದ್ದಿತು.

-ಸ್ವಾಮಿ ವಿವೇಕಾನಂದ

ಸಮಾಜ ಜೀವನಕ್ಕೆ ವೇದಾಂತದ ಸಿದ್ಧಾಂತ

ವೇದಾಂತವು ನಿರ್ಭಯತೆಯನ್ನೂ ಸ್ವಾತಂತ್ರ್ಯವನ್ನೂ ಸಾರುತ್ತದೆ. ನಮ್ಮ ನೈಜ ಸ್ವಭಾವವು ಅನಂತವೆಂದೂ ಅವಿನಾಶಿಯೆಂದೂ ಸಾರುತ್ತದೆ. ಆದರೂ ನಾವು ಏಕೆ ದುಃಖಿಗಳಾಗಿದ್ದೇವೆ? ಸ್ವಾಮಿ ವಿವೇಕಾನಂದರು ಒಂದು ಸ್ವಾರಸ್ಯಕರ ಉದಾಹರಣೆ ಮೂಲಕ ಇದಕ್ಕೆ ಕಾರಣವನ್ನು ತೋರಿಸಿಕೊಡುತ್ತಾರೆ:

“ಭಿಕ್ಷುಕನ ಪಾತ್ರಧಾರಿಯನ್ನು ತೆಗೆದುಕೊಳ್ಳಿ. ತಾನು ಭಿಕ್ಷುಕನಲ್ಲವೆಂದು ಅವನಿಗೆ ಗೊತ್ತಿದೆ ಅವನು ಸಂತೋಷವಾಗಿ ತನ್ನ ಪಾತ್ರ ನಿರ್ವಹಿಸುತ್ತಿದ್ದಾನೆ. ಅವನನ್ನು ನಿಜವಾದ ಭಿಕ್ಷುಕನೊಂದಿಗೆ ಹೋಲಿಸಿ ನೋಡಿ. ಆತ ದುಃಖದಲ್ಲಿ ಬೇಯುತ್ತಿದ್ದಾನೆ. ಇಲ್ಲಿ ವ್ಯತ್ಯಾಸವೇನು? ಒಬ್ಬನು ಮುಕ್ತ, ಮತ್ತೊಬ್ಬನು ಬಂದಿಯಾಗಿದ್ದಾನೆ. ಪಾತ್ರಧಾರಿ ತನ್ನ ಭಿಕ್ಷುಕತನ ನಿಜವಲ್ಲವೆಂದು ತಿಳಿದಿದ್ದಾನೆ. ಇದು ನಿಯಮ. ನಮ್ಮ ನೈಜ ಸ್ವಭಾವದ ಅರಿವು ನಮಗಿಲ್ಲದಿರುವವರೆಗೆ ನಾವು ಪ್ರಕೃತಿಯ ಎಲ್ಲ ಶಕ್ತಿಗಳಿಂದ ಜಗ್ಗಿಸಲ್ಪಟ್ಟು, ಭಿಕ್ಷುಕರಾಗಿ, ದಾಸ್ಯದಲ್ಲಿ ನೊಂದು ಗೋಳಿಡುತ್ತೇವೆ. ಯಾವ ಸಹಾಯವೂ ಬರದು. ನಾವು ಪ್ರಪಂಚಕ್ಕೆಲ್ಲ ಮೊರೆಯಿಡುತ್ತೇವೆ. ಯಾವ ಸಹಾಯವೂ ಬರದು.”

“ಒಬ್ಬ ರಾಜನು ಹುಚ್ಚನಾದರೆ, ಅವನೇ ತನ್ನ ದೇಶದ ರಾಜನನ್ನು ಹುಡುಕುತ್ತಿದ್ದರೆ ಎಲ್ಲಿ ತಾನೇ ಕಂಡಾನು? ಏಕೆಂದರೆ ಅವನೇ ರಾಜ! ಹಾಗೆಯೇ ನಾವು ನಮ್ಮ ವ್ಯರ್ಥ ಅನ್ವೇಷಣೆ ಬಿಟ್ಟು ನಮ್ಮ ದೈವತ್ವವನ್ನು ತಿಳಿಯೋಣ. ಎಲ್ಲ ಹುಡುಕಾಟ ಬಿಟ್ಟುಬಿಡಿ ನಿಮ್ಮ ದೈವತ್ವದ ಅರಿವನ್ನು ಹೊಂದಿ ರಂಗದ ಮೆಲಿನ ನಟನಂತೆ ನಿಮ್ಮ ಪಾತ್ರ ನಿರ್ವಹಿಸಿ.”

“ಈಗ ಸಂಪೂರ್ಣ ದೃಶ್ಯ ಬದಲಾಗಿದೆ. ವಿಶ್ವವು ಸೆರೆಮನೆಗೆ ಬದಲಾಗಿ ಆಟದ ಬಯಲು ಆಗಿದೆ. ಸ್ಪರ್ಧಾತ್ಮಕ ಕ್ಷೇತ್ರಕ್ಕೆ ಬದಲಾಗಿ ಧನ್ಯತೆಯ ಭೂಮಿಯಾಗಿದೆ. ನರಕವಾಗಿದ್ದುದು ಸ್ವರ್ಗವಾಗಿದೆ. ಬಂದಿಗಳಿಗೆ ಚಿತ್ರಹಿಂಸೆಯ ಸ್ಥಳವಾಗಿ ಕಾಣುವುದು ಮುಕ್ತರಿಗೆ ಬೇರೆಯ ರೀತಿಯಾಗಿಯೇ ಕಾಣಿಸುತ್ತದೆ.”

“ಸ್ವಂತ ವಿಮುಕ್ತಿಗಾಗಿ ಲೋಕ ಹಿತಕ್ಕಾಗಿ”

ಆದ್ದರಿಂದಲೇ ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣ ಮಹಾ ಸಂಘದ ಧೈಯವಾಕ್ಯವನ್ನು ಈ ರೀತಿ ಬರೆದರು: ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ (ಸ್ವಂತ ವಿಮುಕ್ತಿಗಾಗಿ ಮತ್ತು ಜಗತ್ತಿನ ಹಿತಕ್ಕಾಗಿ). ಅಂದರೆ, “ಸ್ವಂತ ವಿಮುಕ್ತಿ ಮೊದಲು, ನಂತರ ಜಗತ್ತಿನ ಹಿತ” ಎಂದಲ್ಲ. ಜಗತ್ತಿನ ಹಿತಕ್ಕಾಗಿ ಶ್ರಮಿಸುತ್ತಾ ಎಂದರೆ ಸೇವೆಯನ್ನು ಸಲ್ಲಿಸುತ್ತಲೇ ಸ್ವಂತ ವಿಮುಕ್ತಿ ಗಳಿಸಿಕೊಳ್ಳುವುದು. ಇದು ಯಾವುದೇ ರೀತಿ ಜಗತ್ತಿನ ಹಿತ ಸಾಧಿಸುವವರನ್ನು ಸಾಧಕರ ದಾರಿಯಲ್ಲಿ ಗುರುತಿಸಿ ಕರ್ಮಯೋಗಿಗಳನ್ನಾಗಿ ಮಾಡುವುದು.

ಈ ಜಗತ್ತೇ ಒಂದು ದೊಡ್ಡ ಮಾನವ ಸಮಾಜ. ಅದರ ಹಿತವೆಂದರೆ ಸರ್ವೋದಯವೇ. ಅಂದರೆ ಸರ್ವೋದಯದ ಮೂಲ ಮಂತ್ರವೇ ಇದರಲ್ಲಿದೆ. ಜನರ ಆಧ್ಯಾತ್ಮಿಕ ಉನ್ನತಿಯ ಚಿಂತನವು ಒಬ್ಬ ಸಮಾಜ ಸೇವಕನು ಸಮಾಜಕ್ಕೆ ಕೊಡಬಹುದಾದ ಅತ್ಯುತ್ತಮ ಕೊಡುಗೆ. ಅದುವೇ ನಿಜವಾದ ಸಮಾಜಕಾರ್ಯ.

ಆಮೂಲಾಗ್ರ ಸುಧಾರಣೆ

ಸಮಾಜ ಸುಧಾರಣೆಯು ಕಳೆದೆರಡು ಶತಮಾನಗಳಲ್ಲಿ ವಿಶೇಷವಾಗಿ ಜನರನ್ನಾಕರ್ಷಿಸಿದಂತೆ ಕಂಡುಬರುತ್ತದೆ. ಸ್ವಾಮಿ ವಿವೇಕಾನಂದರು “ನನ್ನ ಸಮರ ನೀತಿ” ಎಂಬ ಉಪನ್ಯಾಸದಲ್ಲಿ ಈ ವಿಚಾರವನ್ನು ಚರ್ಚಿಸುತ್ತಾರೆ. ಸುಧಾರಕರಿಗೆ ತಾವು ಅವರಿಗಿಂತ ದೊಡ್ಡ ಸುಧಾರಕ ಎಂದು ವಿಶದಪಡಿಸುತ್ತಾರೆ. ಅದಕ್ಕೆ ಕಾರಣವಿಲ್ಲದಿಲ್ಲ. ಅಂದಿನ ದಿನಗಳಲ್ಲಿ ಅಷ್ಟೇಕೆ, ಇಂದಿಗೂ ಸಹ ಚೂರುಪಾರು ಸುಧಾರಣೆಯ ಸುಧಾರಕರೇ ಕಾಣಿಸಿಕೊಳ್ಳುತ್ತಾರೆ. ಆದರೆ ವಿವೇಕಾನಂದರದು ಸಮಗ್ರ ದೃಷ್ಟಿ. ಅವರು “ನನಗೆ ಆಮೂಲಾಗ್ರ ಸುಧಾರಣೆ ಬೇಕು” ಎಂದು ಹೇಳುವುದರಲ್ಲಿ ಬಹಳ ಅರ್ಥವಿದೆ. ಉದಾಹರಣೆಗೆ ಮತೀಯ ಕಲಹಗಳಲ್ಲಿ ಕಾನೂನು ಶಿಕ್ಷೆ ದೂಷಣೆಗಳಿಗಿಂತಲೂ ನಿಜವಾದ ಅರಿವನ್ನುಂಟುಮಾಡುವುದರಲ್ಲಿ ಹೆಚ್ಚು ಅರ್ಥವಿದೆ. ಸ್ವಾಮಿ ವಿವೇಕಾನಂದರೇ ಎಲ್ಲ ಧರ್ಮಗಳೂ ಭಗವಂತ ನೆಡೆಗೆ ಕೊಂಡೊಯ್ಯುವ ದಾರಿಗಳು ಎಂದು ವಿಶ್ವಧರ್ಮ ಸಮ್ಮೇಳನದಲ್ಲಿಯೇ ಸಾರಿ ಹೇಳಲಿಲ್ಲವೆ? ಸಮಸ್ಯೆಗಳನ್ನು ಏಕಾಂತತೆಯನ್ನು ನೋಡಿ ಅರ್ಧಂಬರ್ಧ ಪರಿಹಾರಗಳನ್ನು ಮಾಡುವುದು ವಿವೇಕಾನಂದರ ಮಾರ್ಗವಲ್ಲ. ಅವರ ಮಾರ್ಗದಲ್ಲಿ ನಿಂದೆಯೂ ಇಲ್ಲ. ಬೆಳವಣಿಗೆಯಲ್ಲಿ ನಂಬುವವರು ಅವರು. ಇದು ನಿಜವಾಗಿ ವೈಜ್ಞಾನಿಕ ದೃಷ್ಟಿಯೇ. ಆದರೂ ಎಷ್ಟು ನಮ್ರತೆಯಿಂದ ಅವರು ಹೇಳುತ್ತಾರೆ; ತಮ್ಮದು ಅಳಿಲಿನ ಸೇವೆಯಂತೆ ಎಂದು! ದೋಷಗಳನ್ನು ಎಲ್ಲರೂ ತೋರಬಹುದು. ಆದರೆ ಅದರಿಂದ ಪಾರಾಗಲು ಯಾರು ಮಾರ್ಗ ತೋರಿಸುತ್ತಾರೋ ಅವರೇ ಮಾನವ ಬಂಧುಗಳು ಎಂಬುದು ವಿವೇಕಾನಂದರ ಅಭಿಪ್ರಾಯ. ದೇಶದ ಗೌರವಕ್ಕೆ ಚ್ಯುತಿ ತರುವ ಸಾಹಿತ್ಯರಾಶಿ ಬೆಳೆಸುವುದು ಸಮಾಜ ಸುಧಾರಣೆಯೇ ಎಂದು ಅವರು ಪ್ರಶ್ನಿಸುತ್ತಾರೆ.

ನಾವು ತಿಳಿದುಕೊಳ್ಳಬೇಕಾದ ಏಕಮಾತ್ರ ವಿಷಯವೆಂದರೆ, ದೋಷದ ವಿರುದ್ಧವಾಗಿ ಮಾಡುವ ಕೆಲಸವೆಲ್ಲ ವ್ಯಕ್ತಿದೃಷ್ಟಿಯಿಂದ ಮಾತ್ರ, ವಸ್ತುದೃಷ್ಟಿಯಿಂದಲ್ಲ.   -ಸ್ವಾಮಿ ವಿವೇಕಾನಂದ

ಜನಶಕ್ತಿ ಸಂಚಾರ

ಜನರಿಗೆ ನಿಜವಾದ ಅರಿವನ್ನುಂಟುಮಾಡುವ, ವಿದ್ಯೆ ಕೊಡುವ, ಶಾಸನ ಸಭೆ ರಚಿಸುವ ಬಗ್ಗೆ ವಿವೇಕಾನಂದರು ಒಲವು ತೋರುತ್ತಾರೆ. “ಹಿಂದೆ ರಾಜರಿದ್ದರು. ಶಾಸನಗಳನ್ನು ಮಾಡುತ್ತಿದ್ದರು. ಈಗ ರಾಜರಿಲ್ಲ. ಸರ್ಕಾರ ಜನಾಭಿಪ್ರಾಯಕ್ಕೆ ತಕ್ಕಂತೆ ಹೊಂದಿಕೊಂಡು ಹೋಗಬೇಕಾಗಿದೆ. ಆರೋಗ್ಯಕರವಾದ ಬಲವಾದ ಪ್ರಜಾಭಿಪ್ರಾಯವನ್ನು ಸೃಷ್ಟಿಸುವುದಕ್ಕೆ ಬಹಳ ಕಾಲ ಹಿಡಿಯುವುದು. ಅಲ್ಲಿಯವರೆಗೂ ನಾವು ಕಾಯಬೇಕು. ಯಾರಿಗೆ ಸುಧಾರಣೆ ಬೇಕಾಗಿದೆಯೋ ಮೊದಲು ಅವರನ್ನು ಅಣಿ ಮಾಡಿ….. ಮೊದಲು ಜನರಿಗೆ ವಿದ್ಯೆಯನ್ನು ಕೊಡಿ…. ಮೊದಲು ಅಧಿಕಾರವನ್ನು ಸೃಷ್ಟಿಸಿ…ಜನಶಕ್ತಿ ಎಲ್ಲಿ ? ಅದನ್ನು ತನ್ನಿ.”

ಎಂತಹ ಸತ್ಯವಾಕ್ಯಗಳು! ಇಂದು ಸಾಕಷ್ಟು ಸಂಶೋಧನೆ ಪ್ರಯೋಗಗಳು ನಡೆದು ಸಮಾಜಕಾರ್ಯಕ್ಕೆ ವೈಜ್ಞಾನಿಕ ಆಯಾಮ ದೊರೆತಿರುವಾಗ ಈ ಚಿಂತನೆಗಳು ಎಷ್ಟು ಅಮೂಲ್ಯವಾದುದೆಂದೂ ಇದನ್ನು ಅಂದೇ ಚಿಂತಿಸಿದ ಮತಿಯು ಪ್ರಖರವೆಂದೂ ನಾವು ತಿಳಿಯಬಹುದು. ಸುಧಾರಣೆಗಳನ್ನು ಬರಿಯ ಮೇಲಿನ ವರ್ಗಗಳಿಗಾಗಿಯೇ ಮಾಡಿದರೆ ವಿವೇಕಾನಂದರು ಅದನ್ನು ಒಪ್ಪುವುದಿಲ್ಲ. ಅದು ಎಲ್ಲರಿಗೂ ಅನ್ವಯವಾಗಬೇಕು. ಹೆಚ್ಚಾಗಿ ಶೋಷಿತ ಸಮಾಜವನ್ನು ತಲುಪಬೇಕು.

“ಅಟ್ಟಹಾಸದಿಂದ, ಶಾಪದ ಸುರಿಮಳೆಯಿಂದ, ನಿಂದೆಯಿಂದ ಸಮಾಜ ಕಾರ್ಯ ಮಾಡಲಾಗದು. ಕಬೀರನಂತಹ ಸಂತರು ಪ್ರೇಮದಿಂದ ಆಶೀರ್ವಾದದಿಂದಲೇ ಕೆಲಸ ಮಾಡಲಿಲ್ಲವೇ?” ಎಂದು ವಿವೇಕಾನಂದರು ಪ್ರಶ್ನಿಸುತ್ತಾರೆ. ಅವರು ಯಾರೂ ಸಮಾಜಕಾರ್ಯದ ಹಣೆಪಟ್ಟಿ ಹಚ್ಚಿಕೊಳ್ಳಲಿಲ್ಲ; ಎಷ್ಟು ಕಾರ್ಯ
ಸಾಧಿಸಿದರು!

ಸಮಾಜಕಾರ್ಯಕ್ಕೆ ಮೂಲ ಅವಶ್ಯಕತೆಗಳು

ಇದೇ ಉಪನ್ಯಾಸದಲ್ಲಿ ಸ್ವಾಮಿ ವಿವೇಕಾನಂದರು ಸಮಾಜ ಕಾರ್ಯಕ್ಕೆ ಮೂರು ಅತ್ಯಾವಶ್ಯಕ ಅಂಶಗಳನ್ನು ತಿಳಿಯಪಡಿಸುತ್ತಾರೆ. ಪ್ರತಿಯೊಬ್ಬ ಸಮಾಜ ಕಾರ್ಯಕರ್ತನೂ ತನ್ನ ಹೃದಯದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಟ್ಟುಕೊಳ್ಳಬೇಕಾದ ನುಡಿಗಳಿವು. “ಮೊದಲನೆಯದೇ ಹೃದಯವಂತಿಕೆ, ಬುದ್ಧಿಯಲ್ಲಿ ಮತ್ತು ವಿಚಾರಶಕ್ತಿಯಲ್ಲಿ ಏನಿದೆ?.. ಪ್ರೇಮವು ಅಸಾಧ್ಯವಾದ ಬಾಗಿಲನ್ನು ತೆಗೆಯುವುದು.

ನನ್ನ ಭಾವಿ ಸಮಾಜಸುಧಾರಕರೇ! ಜನರ ನೋವನ್ನು ನೀವು ಅಂತರಾಳದಲ್ಲಿ ಅನುಭವಿಸಿ! ಕೋಟ್ಯಂತರ ಜನರು ಈಗ ಉಪವಾಸದಿಂದ ನರಳುತ್ತಿರುವರು ಎಂಬುದು ನಿಮಗೆ ಗೊತ್ತೇ? ಆಜ್ಞಾನವು ಕಾರ್ಮೋಡದಂತೆ ವ್ಯಾಪಿಸಿರುವುದನ್ನು ನೀವು ಕಾಣುತ್ತಿದ್ದೀರಾ? ಇದು ನಿಮ್ಮ ನಾಡಿನಾಡಿಯಲ್ಲಿ ಸಂಚರಿಸಿ ನಿಮ್ಮ ಹೃದಯ ಚಲನೆಯೊಂದಿಗೆ ಸ್ಪಂದಿಸುತ್ತಿದೆಯೇ? ನಿಮ್ಮ ಕೀರ್ತಿ, ಯಶಸ್ಸು, ಹೆಂಡಿರು ಮಕ್ಕಳು, ಆಸ್ತಿ ಮತ್ತು ದೇಹವನ್ನು ನೀವು ಮರೆತಿರುವಿರಾ? ಕೆಲಸ ಮಾಡಲು ಇದೇ ಮೊದಲನೆಯ ಹೆಜ್ಜೆ” ಎಂದು ವಿವೇಕಾನಂದರು ಹೃದಯಾಂತರಾಳದಿಂದ ನುಡಿಯುತ್ತಾರೆ. ಬರಿಯ ಆಕ್ರಂದನ ಸಾಲದು. ಸೂಕ್ತ ಪರಿಹಾರೋಪಾಯ ಕಂಡು ಹಿಡಿಯುವುದು, ಜನರನ್ನು ಪರಿಸ್ಥಿತಿಯನ್ನು ದೂರದೆ, ವರ್ತಮಾನ ಮೃತ್ಯುಸ್ಥಿತಿಯಿಂದ ಅವರನ್ನು ಮೇಲೆತ್ತಿ ದುಃಖಶಮನ, ಸಹಾನುಭೂತಿ ನುಡಿಗಳನ್ನಾಡುವುದು ಎರಡನೆ ಹೆಜ್ಜೆ. ಇನ್ನೂ ಮುಖ್ಯವಾದ ಮೂರನೆಯ ಹೆಜ್ಜೆಯೊಂದಿದೆ. ಅದು ಪರ್ವತೋಪಮ ಅಡ್ಡಿ ಆತಂಕಗಳನ್ನೆದುರಿಸಿ ಗುರಿಯನ್ನು ಸಾಧಿಸುವ ಕಾರ್ಯಶಕ್ತಿ! ಪತಂಜಲ ಯೋಗಸೂತ್ರಗಳಂತೆ, ಸಮಾಜಕಾರ್ಯಕ್ಕೂ ವಿವೇಕಾನಂದರು ನೀಡಿದ ಸೂತ್ರಗಳಾಗಿ ಈ ವಾಣಿ ನಮಗೆ ಕೇಳಿಬರುತ್ತದೆ.

ಸಮಾಜದ ಜಾಡ್ಯಗಳು

ಮನುಷ್ಯರಿಗೆ ಖಾಯಿಲೆಗಳು ಬರುವಂತೆ ಸಮಾಜಕ್ಕೂ ಜಾಡ್ಯಗಳು ಬಡಿಯುವುದನ್ನು ಸ್ವಾಮಿ ವಿವೇಕಾನಂದರು ಗುರುತಿಸುತ್ತಾರೆ. “ಮೂಢನಂಬಿಕೆಗಳು, ಮೈ  ಮೇಲಿನ ಹುಣ್ಣುಗಳಂತೆ ಇವೆ. ಇವನ್ನು ಕತ್ತರಿಸಿ ಒಗೆಯಬೇಕು. ಈ ಕಪ್ಪು ಚುಕ್ಕೆಗಳು ಹೋದಷ್ಟೂ ತತ್ತ್ವಗಳು ಇನ್ನೂ ಚೆನ್ನಾಗಿ ಪ್ರಜ್ವಲಿಸುತ್ತವೆ”

ಹಾಗೆಯೇ ಸಮಾಜದಲ್ಲಿ ಧರ್ಮದ ವಿರೂಪವನ್ನು ಕಂಡು ಆವರು ಹೌಹಾರಿದರು. “ಯಾವ ದೇಶದಲ್ಲಿ ವಿದ್ಯಾವಂತರು ನೀರನ್ನು ಬಲಗೈಯಲ್ಲಿ ತೆಗೆದುಕೊಳ್ಳಬೇಕೋ ಇಲ್ಲ ಎಡಗೈ ನಲ್ಲಿಯೋ, ಕೈಯನ್ನು ಮೂರು ಸಲ ತೊಳೆಯುವುದೋ ಇಲ್ಲ, ನಾಲ್ಕು ಸಲವೋ – ಈ ರೀತಿ ಸಾವಿರಾರು ವರ್ಷಗಳಿಂದ ಚರ್ಚಿಸುತ್ತಿದ್ದಾರೆಯೋ ಅಂತಹ ದೇಶ ವಿನಾಶವಾಗದೆ ಇನ್ನೇನು” ಎಂದು ನೊಂದು ನುಡಿಯುತ್ತಾರೆ. ವಿಪರ್ಯಾಸವೆಂದರೆ, ತದನಂತರ ಇಂದಿಗೂ ದೇವಸ್ಥಾನದ ಆನೆಗೆ ಎಂತಹ ನಾಮ ಹಾಕಬೇಕು ಎಂದು ಮುಂತಾದ ಕ್ಷುಲ್ಲಕ ವಿಷಯಗಳ ಬಗ್ಗೆ ಚರ್ಚೆ ನಡೆದೇ ಇದೆ! ಉನ್ನತ ತತ್ತ್ವಗಳನ್ನು ತಿಳಿಯದಿರುವವರು ಚರ್ಚಿಸಲು ಆಶಕ್ತರು ಇಂತಹ ಕ್ಷುಲಕ ವಿಚಾರಗಳಲ್ಲಿ ತೊಡಗುತ್ತಾರೆ ಎಂಬ ವಿಚಾರವನ್ನು ವಿವೇಕಾನಂದರು ಗಮನಿಸುತ್ತಾರೆ. ಆದ್ದರಿಂದ “ಧರ್ಮವು ಅಡುಗೆ ಮನೆಗೆ ಹೋಗಿ, ದೇವರು ಅಡುಗೆ ಪಾತ್ರೆಯಲ್ಲಿ ಬಂಧಿತನಾಗುವುದು ಬೇಡ. ‘ನಾನು ಪವಿತ್ರ, ನೀ ನನ್ನ ಮುಟ್ಟಬೇಡ’ ಎಂಬ ಅಸ್ಪೃಶ್ಯತೆಯು ಬೇಡ. ಇದು ಇನ್ನು ಒಂದು ಶತಮಾನ ಮುಂದುವರಿದರೆ ನಾವೆಲ್ಲರೂ ಹುಚ್ಚಾಸ್ಪತ್ರೆಯಲ್ಲಿರುತ್ತೇವೆ” ಎಂದು ಅವರು ಎಚ್ಚರಿಸಿದರು, ಇಂದು ಆ ಒಂದು ಶತಮಾನ ಕಳೆದಿದೆ. ಸಮಾಜವು ವಿವೇಕಾನಂದರ ನಿರೀಕ್ಷೆಯ ಮಟ್ಟಕ್ಕೆ ತುಂಬಾ ಹಿಂದುಳಿದರೂ, ಸ್ವಲ್ಪ ಮಟ್ಟಿಗೆ ಮುಂದುವರಿದು ಈ ಅಪಾಯದಿಂದ ಪಾರಾಗಿದೆಯೆನ್ನಬಹುದು.

ನಮಗೆ ನಾವೇ ಹಾನಿ ಮಾಡಿಕೊಳ್ಳುವವರೆಗೆ ಜಗತ್ತಿನ ಯಾವುದೂ ನಮ್ಮನ್ನು ಹಾನಿಗೆ ಗುರಿ ಮಾಡಲಾರದು

-ಸ್ವಾಮಿ ವಿವೇಕಾನಂದ

ಅನ್ಯ ಸಂಸ್ಕೃತಿ ಮತ್ತು ಧರ್ಮಗಳು ನಮ್ಮ ಸಮಾಜದ ಮೇಲೆ ಧಾಳಿಯಿಟ್ಟು ನಮ್ಮ ಸಂಸ್ಕೃತಿಯನ್ನು ನಾಶಮಾಡುತ್ತಿವೆ ಎಂದು ನಾವು ಕೂಗಾಡುತ್ತೇವೆ ಆದರೆ ಇದಕ್ಕೆ ನಮ್ಮ ದೋಷಗಳೇ ಕಾರಣ ಎಂಬುದನ್ನು ನಾವು ಮರೆಯಬಾರದು. ನಾವು ದುರ್ಬಲರಾದಾಗ ಎಲ್ಲ ಬಾಹ್ಯಶಕ್ತಿಗಳು ನಮ್ಮ ಮೇಲೆ ಧಾಳಿಯಿಡುತ್ತವೆ. ಆದ್ದರಿಂದ ನಾವು ಬೇರೆಯವರನ್ನು ದೂಷಿಸುವುದನ್ನು ಬಿಟ್ಟು ನಮ್ಮನ್ನು ನಾವು ಸರಿಪಡಿಸಿಕೊಳ್ಳೋಣ ಎನ್ನುತ್ತಾರೆ ಸ್ವಾಮೀಜಿ.

ಮಾನವ ಸಂಪನ್ಮೂಲ

ಮಾನವ ಸಂಪನ್ಮೂಲ ಎಲ್ಲಕ್ಕಿಂತಲೂ ಅಮೂಲ್ಯವೆಂಬುದು ಸ್ವಾಮಿ ವಿವೇಕಾನಂದರಿಗೆ ಆಗಲೇ ಮನವರಿಕೆಯಾಗಿತ್ತು. ಇಂದು ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಇಲಾಖೆಗಳೇ ಇದ್ದು, ಅಂತಹ ತರಬೇತಿಗಳು ಮತ್ತು ವಿಚಾರಧಾರೆಯು ಇದ್ದರೂ ಸ್ವಾಮೀಜಿಯವರ ಕಾಲಕ್ಕೆ ಈ ಭಾವನೆ ನವ್ಯ ಎಂದೇ ಹೇಳಬೇಕಾಗುತ್ತದೆ. “ಭರತಖಂಡದಲ್ಲಿ ಮತ್ತು ವಿದೇಶಗಳಲ್ಲಿ ಎಲ್ಲ ಜನಾಂಗಗಳ – ಜೀವನದ ಅಂತರಾಳಕ್ಕೆ ನಾವು ಹೋಗಬೇಕು. ಇದನ್ನು ಸಾಧಿಸುವುದಕ್ಕೆ ಕೆಲಸ ಮಾಡಬೇಕು. ಈ ಕಾರ್ಯಕ್ಕೆ ನನಗೆ ಯುವಕರು ಬೇಕು.” (‘ಭಾರತದ ಭವಿಷ್ಯ’ ಮದ್ರಾಸಿನ ಉಪನ್ಯಾಸ)

ಭವಿಷ್ಯ ಭಾರತಕ್ಕೆ ಧರ್ಮದ ಏಕತೆ

ಸ್ವಾಮಿ ವಿವೇಕಾನಂದರ ಮತ್ತೊಂದು ಮುಖ್ಯ ಚಿಂತನೆಯೆಂದರೆ ಇನ್ನಾವುದೇ ವಿಚಾರ ಕೊಡುವ ಮುನ್ನ ಸಮಾಜವನ್ನು ಆಧ್ಯಾತ್ಮಿಕ ಆದರ್ಶಗಳಿಂದ ಪ್ರವಹಿಸುವುದು. ಈ ರೀತಿ ತಯಾರಾದ ನಿಃಸ್ವಾರ್ಥ ಜನರು ಖಂಡಿತವಾಗಿ ಯಾವುದೇ ಕಾರ್ಯವನ್ನು ಯಶಸ್ವಿಯಾಗಿ ನಡೆಸುವರೆಂಬುದು ಅವರ ವಿಶ್ವಾಸ ಯೂರೋಪ್ ದೇಶವು ತನ್ನ “ಜಡವಾದ” ನಿಲುವನ್ನು ಬದಲಾಯಿಸಿ ಅಧ್ಯಾತ್ಮದೆಡೆಗೆ ಹೊರಳದಿದ್ದರೆ, ಇನ್ನು ಐವತ್ತು ವರ್ಷಗಳಲ್ಲಿ ನುಚ್ಚು ನೂರಾಗುವುದೆಂದು ಅವರು ಭವಿಷ್ಯ ನುಡಿದರು. ಅದೇ ರೀತಿ ಎರಡು ಮಹಾಯುದ್ಧಗಳು ಸಂಭವಿಸಿ ಜಗತ್ತನ್ನೆಲ್ಲ ವ್ಯಾಪಿಸಲಿಲ್ಲವೇ? ಇದನ್ನು ಅಂದೇ ಕಂಡ ವಿವೇಕಾನಂದರು ಸಮಾಜವಾದವೋ ಅಥವಾ ಇನ್ನಾವುದೇ ಜನಶಕ್ತಿಯ ಆಡಳಿತ ಬರುವುದನ್ನು ನಿರೀಕ್ಷಿಸಿ, ಅಂತಹ ಸಂದರ್ಭದಲ್ಲಿ ಮಾನವನ ಒಳ್ಳೆಯತನದ ಮೇಲೆ ಧರ್ಮದ ಅಚ್ಚಿನ ಮೇಲೆ ನೆಲೆಯಿಲ್ಲದ ನಾಗರಿಕತೆಯು ಹೇಗೆ ತಾನೆ ನಿಲ್ಲಬಲ್ಲುದು?

ಎಂದು ಪ್ರಶ್ನಿಸುತ್ತಾರೆ. ಆದ್ದರಿಂದ ಸಮಾಜವನ್ನು ಉತ್ತಮಗೊಳಿಸಬೇಕಾದರೆ ಅನೇಕರು ತಿಳಿದಿರುವಂತೆ ಧರ್ಮನಾಶ ಮಾಡಬೇಕಾಗಿಲ್ಲ, ಇಂದಿನ ಬದಲಾದ ಪರಿಸ್ಥಿತಿಯಲ್ಲಿ ಧರ್ಮವನ್ನು ಎಲ್ಲ ಮತಧರ್ಮಗಳ ಸಾರವಾದ ಮಾನವ ಧರ್ಮವನ್ನಾಗಿ ಪರಿಗಣಿಸಿ ಅದನ್ನು ಆಧಾರವಾಗಿಟ್ಟುಕೊಂಡು ಮುಂದುವರೆಯಬೇಕಾಗಿದೆ. ಧರ್ಮದ ಏಕತೆಯನ್ನೇ ಭವಿಷ್ಯ ಭಾರತ ನಿರ್ಮಾಣ ಮಾಡಲು ಮೊದಲನೆಯ ಮೆಟ್ಟಿಲಾಗಿ ವಿವೇಕಾನಂದರು ಪರಿಗಣಿಸುತ್ತಾರೆ.

“ಧರ್ಮದಲ್ಲಿ ಜಾತಿಯಿಲ್ಲ”

ಜಾತಿ ಪದ್ಧತಿ ವಿಚಾರದಲ್ಲಿ ವಿವೇಕಾನಂದರು ಕಿತ್ತೊಗೆಯುವ ಮೊದಲ ಮುಸುಕೆಂದರೆ “ಜಾತಿ ಇರುವುದು ಸಮಾಜದಲ್ಲಿ ಧರ್ಮದಲ್ಲಿಯಲ್ಲ” ಎಂಬುದು. ಧರ್ಮದಲ್ಲಿ ಜಾತಿಯಿಲ್ಲ. ಜೀವನ ಸತ್ಯಗಳನ್ನು, ಅಧ್ಯಾತ್ಮನಿಧಿಯ ರತ್ನಗಳನ್ನು ಸುಂದರವಾಗಿ ನಿರೂಪಿಸಿ, ಅದನ್ನು ಪಡೆಯುವ ವಿಧಾನವನ್ನೂ ತಿಳಿಸಿಕೊಡುವ ಧರ್ಮವು ಯಾರೊಬ್ಬರ ಆಸ್ತಿಯೂ ಅಲ್ಲ. ಜಾತಿಪದ್ಧತಿ ಸಮಾಜದ ಒಂದು ವ್ಯವಸ್ಥೆಯಷ್ಟೆ. ಅದರಲ್ಲಿ ಮೇಲು ಕೀಳು ಅಹಂಕಾರ ಕೀಳರಿಮೆಗಳು ಉತ್ಪತ್ತಿಯಾಗಿ ಗೊಂದಲಕ್ಕೆ ಕಾರಣವಾಗಿದೆ. ಶತಮಾನಗಳ ಹಿಂದೆ ಬ್ರಾಹ್ಮಣರು ಹೆಚ್ಚು ಅಧ್ಯಯನ ಶಾಸ್ತ್ರಾರ್ಥವಿಚಾರ ಮಾಡುತ್ತಿದ್ದರು. ಆ ಬ್ರಾಹ್ಮಣರು ಜ್ಞಾನನಿಧಿಯನ್ನು ತಮ್ಮಲ್ಲಿ ಮುಚ್ಚಿಟ್ಟುಕೊಂಡು ವಂಚನೆ ಮಾಡಿದುದಕ್ಕಾಗಿ ಅವರನ್ನು ಸ್ವಾಮೀಜಿ ತರಾಟೆಗೆ ತೆಗೆದುಕೊಂಡರು. ಮಾನವಕೋಟಿಗೆ ಈ ನಿಧಿಯನ್ನು ಹಂಚಲು, ಇತರರಿಗೆ ಆತ್ಮವಿಶ್ವಾಸದಿಂದ ಅದನ್ನು ಗಳಿಸಿಕೊಳ್ಳಲು ಸ್ವಾಮೀಜಿ ಕರೆಯಿತ್ತರು. ಈಗ ಅಧ್ಯಾತ್ಮ ಸಾಹಿತ್ಯವು ಧರ್ಮಗುರುಗಳ ಮಠಗಳಲ್ಲಿ, ದೇವಾಲಯಗಳ ಆಶ್ರಯದಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ, ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬೆಳಕು ಕಾಣುತ್ತಿದೆ.

“ಮೇಲಿರುವವರನ್ನು ಕೆಳಗಿಳಿಸುವುದಲ್ಲ; ಬದಲಿಗೆ ಕೆಳಗಿರುವವರನ್ನು ಮೇಲೆತ್ತುವುದು. ಎಲ್ಲ ಜನರನ್ನು ಅಧ್ಯಾತ್ಮಕ್ಕೆ ಅಧಿಕಾರಿಗಳನ್ನಾಗಿ ಮಾಡುವುದು ನಮ್ಮ ಗುರಿಯಾಗಬೇಕು” ಎಂದು ಸ್ವಾಮಿ ವಿವೇಕಾನಂದರು ನಿರ್ಧರಿಸುತ್ತಾರೆ. ಅದನ್ನು ಇಂದು ಅನೇಕ ಆಶ್ರಮಗಳು, ಸಂಘಸಂಸ್ಥೆಗಳು ನಡೆಸುತ್ತಿರುವುದು ಸಮಾಧಾನಕರ ಸಂಗತಿ.

ಸ್ತ್ರೀ ವಿದ್ಯಾಭ್ಯಾಸ

ಸ್ತ್ರೀಯರ ಬಗ್ಗೆ ಅಪಾರ ಗೌರವಾಭಿಮಾನಗಳನ್ನು ಹೊಂದಿದ್ದ ವಿವೇಕಾನಂದರು ಭಾರತೀಯ ನಾರಿಯ ಸಹಿಷ್ಣುತೆಯಲ್ಲಿ ಹಿರಿತನವನ್ನೂ ಲಜ್ಜೆಯಲ್ಲಿ ಸೌಂದರ್ಯವನ್ನೂ ಕಾಣುತ್ತಾರೆ. ಬ್ರಹ್ಮವಾದಿನಿಯರ ಬಗ್ಗೆ ತಿಳಿಸುವಾಗ ವೇದಕಾಲದಲ್ಲಿ ಸ್ತ್ರೀಯರ ಸಮಾನತೆಯಿದ್ದುದನ್ನು ಸ್ಮರಿಸಿ ಇಂದು ಸ್ತ್ರೀವಿದ್ಯಾಭ್ಯಾಸವೇ ಮಹಿಳೋದ್ದಾರಕ್ಕೆ ಮದ್ದು ಎಂದು ನುಡಿಯುತ್ತಾರೆ. ಏಕೆಂದರೆ ಆಗ ಮಹಿಳೆಯರು ತಮ್ಮ ಒಳಿತನ್ನು ತಾವೇ ಗಳಿಸುತ್ತಾರೆ. ತಮ್ಮ ಉದ್ಧಾರವನ್ನು ತಾವೇ ಸಾಧಿಸಿಕೊಳ್ಳಲು ಅನುವು ಮಾಡುವುದೇ ಸಮಾಜಕಾರ್ಯದ ತಿರುಳು.

ಸಮುದಾಯ ಜಾಗೃತಿ

ಸ್ವಾಮಿ ವಿವೇಕಾನಂದರು ಲಕ್ಷಾಂತರ ಕೆಳವರ್ಗದ ಬಡಜನತೆಯೇ ಒಂದು ದೇಶದ ಜೀವಾಳವೆಂದು ಗುರುತಿಸುತ್ತಾರೆ, “ಅವರೇ ಉತ್ಪಾದನಾಕಾರರು, ದೇಶವನ್ನು ನಡೆಸುವವರು, ಆದರೆ ಅವರೇ ಶೋಷಿತರು, ತುಳಿಯಲ್ಪಡುತ್ತಿರುವವರು! ವೇದಾಂತದ ಜನ್ಮಭೂಮಿಯಾದ ನಮ್ಮ ದೇಶದಲ್ಲಿಯಾದರೋ ಅವರು ಯುಗಯುಗಗಳಿಂದಲೂ ಸಮ್ಮೋಹಿನಿಗೊಳಗಾಗಿದ್ದಾರೆ. ಮಾನವತ್ವವೇ ಇಲ್ಲದೆ ಪಶುಗಳಿಗಿಂತ ಹೀನವಾಗಿ ಅವರನ್ನು ನಡೆಸಿಕೊಳ್ಳಲಾಗುತ್ತಿದೆ. ‘ಇದಕ್ಕೆ ಕಾರಣ ನಾವೇ. ಇದಕ್ಕೆ ಧರ್ಮವನ್ನು ದೂಷಿಸಲಾಗದು. ನಿಜವಾಗಿಯೂ ಧರ್ಮವು ಜೀವಿಗಳ ಏಕತ್ವವನ್ನೇ ಸಾರುವುದು. ಹೃದಯಹೀನತೆಯಿಂದ ಈ ಗತಿ ಬಂದಿದೆ”.

ಅಂದೇ ಶೋಷಿತ ಸಮಾಜವು ಎಲ್ಲೆಡೆಯೂ ಎಚ್ಚೆತ್ತುಕೊಳ್ಳುತ್ತಿರುವುದನ್ನು ವಿವೇಕಾನಂದರು ಗಮನಿಸಿದರು. ಅವರು ಹೇಳುತ್ತಾರೆ: “ಯುರೋಪಿನಲ್ಲಿ ಅಮೇರಿಕೆಯಲ್ಲಿ ಹೋರಾಟ ಪ್ರಾರಂಭವಾಗಿ ಭಾರತದಲ್ಲಿಯೂ ಮುಷ್ಕರಗಳು ನಡೆಯುತ್ತಿವೆ ಮೇಲ್ವರ್ಗದವರು ಕ್ಷೇಮವಾಗಿರಬೇಕಾದರೆ ಜನಸಮುದಾಯಕ್ಕೆ ಅವರ ಕಾನೂನುಬದ್ಧ ಹಕ್ಕುಗಳನ್ನು ಪಡೆಯಲು ಸಹಾಯ ಕೊಡುವುದೊಂದೆ ಮಾರ್ಗ.”

ಇದಕ್ಕೆ ವಿದ್ಯಾಭ್ಯಾಸವನ್ನು ಪರಿಹಾರವಾಗಿ ಕಾಣುವ ವಿವೇಕಾನಂದರು ಒಳಗಿರುವ ದಿವ್ಯಭಾವವನ್ನು ಬೋಧೆ ಮಾಡಿದರೆ ಹೇಗೆ ವ್ಯಕ್ತಿ ಪರಿವರ್ತನೆಯಾಗುವುದೆಂದು ಒಂದು ಅನುಭವದ ಮೂಲಕ ನಿರೂಪಿಸುತ್ತಾರೆ. “ನ್ಯೂಯಾರ್ಕಿನಲ್ಲಿ ಐರ್ಲೆಂಡಿನ ವಸಾಹತುಗಳ ಜನ ಬಂದಾಗ ಕುಗ್ಗಿ ಹೋಗಿದ್ದರು, ಚಿಂದಿಯಲ್ಲಿದ್ದರು, ಭಗ್ನ ಹೃದಯಿಗಳಾಗಿದ್ದರು. ಅವರ ಕಣ್ಣಿನಲ್ಲಿ ಭಯ, ನಡಿಗೆಯಲ್ಲಿ ನಡುಕ ಕಾಣಿಸುತ್ತಿತ್ತು. ಆರೇ ತಿಂಗಳಿನಲ್ಲಿ ಬೇರಯೇ ದೃಶ್ಯ! ಆ ಮನುಷ್ಯ ಎದೆಯುಬ್ಬಿಸಿ ನೆಟ್ಟಗೆ ನಡೆಯುತ್ತಿದ್ದಾನೆ. ಕಾರಣವೇನು? ತನ್ನ ದೇಶದಲ್ಲಿ ಆತನನ್ನು ಎಲ್ಲರೂ ಒಂದೇ ರಾಗದಲ್ಲಿ ‘ನೀನು ಗುಲಾಮ, ನಿನಗೆ ಬೇರೆ ಗತಿಯಿಲ್ಲ ‘ ಎಂದು ಹೀಯಾಳಿಸಿ ಅವನನ್ನು ತಾನೇ ಅತಿ ನಿಕೃಷ್ಟ ಎಂಬ ನಂಬಿಕೆಗೆ ತಳ್ಳಿದ್ದರು. ಆತ ಈ ಸಮ್ಮೋಹಿನಿಗೊಳಗಾದ. ಆದರೆ ಅಮೆರಿಕೆಯಲ್ಲಿ ‘ಎಲಾ ನೀನು ನಮ್ಮಂತೆ  ಮನುಷ್ಯ, ಧೈರ್ಯಶಾಲಿ ಎಂದು ಎತ್ತರದ ಧ್ವನಿಯಲ್ಲಿ ಕೂಗಿದರು. ಆತ ತಲೆಯೆತ್ತಿದ; ಆತನೊಳಗಿದ್ದ ದೇವರು ಎಚ್ಚೆತ್ತುಗೊಂಡ, ಪ್ರಕೃತಿ ತಾನೇ ಮಾತನಾಡಿದಳು”

ಆದ್ದರಿಂದ ಜನಸಮುದಾಯದ ಉದ್ಧಾರಕ್ಕೆ ವಿವೇಕಾನಂದರು ಕೊಡುವ ದಿವ್ಯಮಂತ್ರವೆಂದರೆ ಅವರೊಳಗೆ ಕಳೆದುಹೋಗಿರುವ ವ್ಯಕ್ತಿತ್ವವನ್ನು ಮತ್ತೆ ಎಬ್ಬಿಸುವುದು. ಈ ದಿಸೆಯಲ್ಲಿ ಸಮಾಜ ಕಾರ್ಯಕರ್ತರು ಸಮಾನತೆ, ಸ್ವಾತಂತ್ರ್ಯ, ಕಾರ್ಯಕುಶಲತೆ ಮುಂತಾದುವುಗಳಲ್ಲಿ ಪಾಶ್ಚಾತ್ಯಾ ನಿಲುವನ್ನು ಗಳಿಸಿಕೊಂಡರೂ ಭಾರತದ ಧಾರ್ಮಿಕ ಸಂಸ್ಕೃತಿಯನ್ನೇ ಬೆನ್ನೆಲುಬಾಗಿಟ್ಟುಕೊಂಡು ಇದನ್ನು ಸಾಧಿಸಬೇಕೆಂಬುದಾಗಿ ವಿವೇಕಾನಂದರು ಪ್ರತಿಪಾದಿಸುತ್ತಾರೆ.

ಹೀಗೆ ಸ್ವಾಮಿ ವಿವೇಕಾನಂದರ ಸಾಮಾಜಿಕ ಚಿಂತನಾಲಹರಿ ಬಹು ಧಾರೆಗಳ ವಾಹಿನಿ ಅತ್ಯಂತ ಉನ್ನತ ಅಧ್ಯಾತ್ಮ ಅನುಭವಗಳ ಧಾರ್ಮಿಕ ಬೋಧೆಯಲ್ಲಿ ಸಹ ಸಮಾಜವನ್ನು ಕಡೆಗಣಿಸದೆ ಅತ್ಯಂತ ಗೌರವಾದರಗಳೊಡನೆ ನಡೆಸಿಕೊಳ್ಳುತ್ತಾರೆ. ಅದನ್ನೇ ಸಾಧನೆಯ ಭಾಗವಾಗಿ ಮಾಡಿದುದೆಂದರೆ ಅವರ ತೀಕ್ಷ್ಣಮತಿ, ಕರುಣೆಯ ಹೃದಯವೇ! ಸ್ವಾಮಿ ವಿವೇಕಾನಂದರ ಈ ಉದಾತ್ತ ಭಾವನೆ ನಮ್ಮ ಹೃದಯದಲ್ಲಿ ಸದಾ ಮಿಡಿಯುತ್ತಲಿರಲಿ.

‘ಏಳಿರೇಳಿ’ ಎಂದು ಕರೆವ, ಎಲ್ಲ ಜಗವ ಕೂಗಿ ಕರೆವ ಸುಪ್ತದೈವರೆಲ್ಲ ಕೇಳಿ ಎದ್ದು ಬರುವವರೆಗೆ ಕರೆವ ಅಂತರಾತ್ಮ ,ದಿವ್ಯ ಆತ್ಮ ಓಗೊಡುವವರೆಗೆ ಕರೆವ ಇದುವೆ ಬಾಳ ಹಿರಿಯ ಕರ್ಮ, ಪರಮ ಸೇವೆ, ಮಹಾನ್ ಧರುಮ. (ಸ್ವಾಮಿ ಶಾಸ್ತ್ರಾನಂದರ “ಕೂಗಿ ಕರೆಯುವಾ” ಕವನದಿಂದ)