ಸ್ವಾಮಿ ವಿವೇಕಾನಂದರ ಜೀವನವನ್ನು ಕುರಿತು ಆಲೋಚಿಸುತ್ತಿರುವಾಗ ಮಹಾಭಾರತದ ಈ ಹೇಳಿಕೆ ನೆನಪಿಗೆ ಬರುತ್ತದೆ: ಮುಹೂರ್ತಂ ಜ್ವಲಿತಂ ಶ್ರೇಯಃ ನ ತು ಧೂಮಾಯಿತಂ ಚಿರಂ – “ಚಿರಕಾಲ ಹೊಗೆಯಾಡುತ್ತಿರುವುದಕ್ಕಿಂತ ಕ್ಷಣಕಾಲ ಜ್ವಲಿಸಿ ಮರೆಯಾಗುವುದು ಲೇಸು.” ಕೆಲವೊಮ್ಮೆ ಪ್ರಜ್ವಲಿಸುವ ಆಕಾಶ ಕಾಯಗಳು ಕೆಲಕಾಲ ಬೆಳಗಿ ಕಣ್ಮರೆಯಾಗುತ್ತವೆ. ಅವು ವಿಶ್ವದ ಎಲ್ಲೆಡೆಯೂ ಸುತ್ತುತ್ತಿದ್ದು ಒಮ್ಮೊಮ್ಮೆ ಭೂಮಿಯ ಸಮೀಪ ಬಂದು ಎಲ್ಲರ ದೃಗ್ಗೋಚರವಾಗುತ್ತವೆ. ಹಾಗೆಯೇ ವಿವೇಕಾನಂದರು ಯಾವುದೋ ಲೋಕದಿಂದ ಬಂದು ಭೂಮಿಗೆ ಒಮ್ಮೆ ಭೇಟಿಯಿತ್ತು ಕಣ್ಮರೆಯಾದಂತೆ ಕಂಡುಬರುತ್ತದೆ. ಆದರೆ ಅವರು ಕಣ್ಮರೆಯಾದರೂ ನಮ್ಮ ಹೃದಯದಿಂದ ಮರೆಯಾಗಲಿಲ್ಲ. “ಮೃತರ ನಿಜವಾದ ಗೋರಿ ಜೀವಿಸಿರುವವರ ಹೃದಯ” (The real tomb of the dead is the heart of the living) ಎನ್ನುವಂತೆ ವಿವೇಕಾನಂದರು ನಮ್ಮ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿರುವರು.

ವಿವೇಕಾನಂದರು ಕೇವಲ ನಮ್ಮ ಹೃದಯದಲ್ಲಿ ಮಾತ್ರ ನೆಲೆಸಿರುವುದಲ್ಲ, ಅವರು ಎಲ್ಲೆಲ್ಲಿಯೂ ನೆಲೆಸಿರುವರು. ಧಾರ್ಮಿಕ ಕ್ಷೇತ್ರದಲ್ಲಿ, ಸಾಮಾಜಿಕ ವ್ಯವಸ್ಥೆಯಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ರಾಜಕೀಯ ವಲಯದಲ್ಲಿ ವಿಶ್ವಚಿಂತನೆಯಲ್ಲಿ, ಎಲ್ಲೆಲ್ಲಿಯೂ ಅವರು ತಮ್ಮ ಮುದ್ರೆಯನ್ನು ಒತ್ತಿಹೋಗಿರುವರು. ಸರ್ವತಃ ಪಾಣಿಪಾದಂ… ಸರ್ವತೋಕ್ಷಿಶಿರೋಮುಖಂ ಆಗಿ ಅವರು ಎಲ್ಲೆಲ್ಲಿಯೂ ವಾಸಿಸುತ್ತಿರುವರು. ಎಲ್ಲ ಜ್ಞಾನಚಕ್ಷುಗಳ ಮೂಲಕ ಅವರು ಇಣಿಕಿ ನೋಡುತ್ತಿರುವರು, ಅವರ ಘನ ಗರ್ಜನೆಯ ಪ್ರತಿಧ್ವನಿ ಎಲ್ಲೆಲ್ಲಿಯೂ ಮೊಳಗುತ್ತಿರುವುದು.

“ನಾನೊಂದು ರೂಪರಹಿತ ಧ್ವನಿ”(I am a voice without a form) ಎಂದು ವಿವೇಕಾನಂದರು ತಮ್ಮ ಬಗ್ಗೆ ಹೇಳಿರುವರು. ಅದೊಂದು ಸನಾತನ ಧ್ವನಿ, ಪುರಾತನ ವೇದ ಋಷಿಗಳ ಅನುಭವ ಗಹ್ವರದಿಂದ ಹೊರಹೊಮ್ಮಿದ, ವಿವಿಧ ಜ್ಞಾನ ಶ್ರುತಿಗಳಿಂದ ಕೂಡಿದ, ಆಧುನಿಕ ಸ್ವರಮೇಳದೊಂದಿಗೆ ಧ್ವನಿಗೂಡಿಸುವ ದಶದಿಕ್ಕುಗಳಿಂದಲೂ ಅನುರಣಿತಗೊಳ್ಳುತ್ತಿರುವ ಅಪೂರ್ವ ಧ್ವನಿ ಅದು. ಅದು ಸ್ವಲ್ಪಕಾಲ ಮಾತ್ರ (೩೯ ವರ್ಷ) ಮೂರ್ತೀ ಭವಿಸಿತು. ಈಗ ಅದು ಮತ್ತೆ ಅಮೂರ್ತರೂಪದಲ್ಲಿ ಎಲ್ಲೆಲ್ಲಿಯೂ ಕೇಳಿಬರುತ್ತಿದೆ. ರವಿಕಿರಣವು ಪ್ರಿಸಂ ಮೂಲಕ ಹಾದು ಬಂದಾಗ ವರ್ಣರಂಜಿತವಾಗಿ ಕಾಣುವಂತೆ ಆ ಧ್ವನಿಯೂ ವಿವೇಕಾನಂದರ ಶರಿರದ ಮೂಲಕ ವಿವಿಧ ರಾಗರಾಗಿಣಿಗಳಿಂದ ಹೊರಹೊಮ್ಮಿತು.

ಜುಲೈ ೪ ವಿವೇಕಾನಂದರು ತಮ್ಮ ದೇಹವನ್ನು, ಹಳೆಯ ಬಟ್ಟೆಯನ್ನು ಬಿಸಾಡುವಂತೆ, ಎಂಜಲನ್ನು ಉಗುಳುವಂತೆ ತ್ಯಜಿಸಿದ ದಿನ. ಅದೇ ದಿನವೇ ಅಮೆರಿಕದ ಸ್ವಾತಂತ್ರ್ಯದಿನ. ಸ್ವಾತಂತ್ರ್ಯ ಪ್ರಿಯ ಸ್ವಾಮೀಜಿಗೆ ದೇಹಪಂಜರದಿಂದ ಬಿಡುಗಡೆ ಹೊಂದಲು ಇದಕ್ಕಿಂತಲೂ ಪುಣ್ಯದಿನ ಇನ್ಯಾವುದಿದೆ? “ಮುಕ್ತಿಯೇ ನನ್ನ ಧರ್ಮ” ಎಂದು ಸಾರಿದ ಅವರು ತಮ್ಮ ಭೌತಿಕ ಬಂಧನದಿಂದ ಮುಕ್ತರಾಗಲು ಅಮೆರಿಕವು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾದ ದಿನವನ್ನೇ ಆರಿಸಿಕೊಂಡುದು ಔಚಿತ್ಯಪೂರ್ಣವಾಗಿದೆ. ಅವರು ಅಮೆರಿಕದಲ್ಲಿರುವಾಗ ಜುಲೈ ೪ರ ಮೇಲೆ ಒಂದು ಕವನವನ್ನು ರಚಿಸಿ ತಮ್ಮ ಸ್ವಾತಂತ್ರ್ಯಪ್ರೇಮವನ್ನು ವ್ಯಕ್ತಪಡಿಸಿದ್ದರು. ಅವರು ಕಾಶ್ಮೀರದಲ್ಲಿ ತಮ್ಮ ಅಮೆರಿಕನ್ ಮತ್ತು ಐರೋಪ್ಯ ಶಿಷ್ಯರಿಂದೊಡಗೂಡಿದ್ದಾಗ ಜುಲೈ ನಾಲ್ಕರಂದು ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದರು. ಒಬ್ಬ ಬ್ರಾಹ್ಮಣ ದರ್ಜಿಯ ಸಹಾಯದಿಂದ ಒಂದು ಅಮೆರಿಕದ ಧ್ವಜವನ್ನೂ ತಯಾರಿಸಿದರು. ಆ ಸಂದರ್ಭದಲ್ಲಿ ಅವರು ಭಾರತದ ಸ್ವಾತಂತ್ರ್ಯದ ಬಗ್ಗೆ ಎಷ್ಟೊಂದು ಚಿಂತಿಸಿರಬಹುದು! ಸ್ವತಂತ್ರ ಭಾರತದ ಪರಿಕಲ್ಪನೆ ಅವರ ಹೃದಯದಲ್ಲಿ ಎಂತಹ ತುಡಿತವನ್ನು ಉಂಟುಮಾಡಿದ್ದಿರಬಹುದು! ಆ ಪರಿಶುದ್ಧ ಹೃದಯದ ತೀವ್ರ ತುಡಿತವೇ ಸ್ವತಂತ್ರ್ಯ ಹೊರಾಟದ ಪ್ರೇರಕಶಕ್ತಿಯಾಗಿ ಕೆಲಸ ಮಾಡಿತ್ತು ಎಂಬುದರಲ್ಲಿ ಸಂದೇಹವಿದೆಯೇ?

ಹಿಂದೂಧರ್ಮದ ಪುನರುತ್ಥಾನದಲ್ಲಿಯೂ ಅವರ ಧೀಮಂತ ವ್ಯಕ್ತಿತ್ವದ ಪ್ರಭಾವವನ್ನು ಕಾಣಬಹುದು. ಅವರ ತೀಕ್ಷ್ಣ ವಿಶ್ಲೇಷಣಾ ಎರಕದಲ್ಲಿ ಹಿಂದೂಧರ್ಮವು ಹೊಸರೂಪವನ್ನು ಪಡೆಯಿತು. ಅಸಂಖ್ಯ ದೇವದೇವತೆಗಳ ಪೂಜೆ, ಹಲವಾರು ಮತಗಳು, ದಿಗ್ಭ್ರಮೆಗೊಳಿಸುವ ಆಚಾರವಿಚಾರಗಳು ಮುಂತಾದವುಗಳಿಂದ. ಗೊಂದಲಮಯವಾಗಿದ್ದ ಹಿಂದೂಧರ್ಮಕ್ಕೆ ಒಂದು ನಿರ್ದಿಷ್ಟ ರೂಪವನ್ನು ಕೊಟ್ಟು, ಒಂದು ಸಮಗ್ರ ಹಿಂದೂಧರ್ಮದ ಚಿತ್ರವನ್ನು ನಮ್ಮ ಮುಂದಿಟ್ಟರು ಸ್ವಾಮೀಜಿ. ಸೋದರಿ ನಿವೇದಿತಾ ಹೀಗೆ ಹೇಳುತ್ತಾರೆ: “ಸ್ವಾಮೀಜಿಯವರು ಚಿಕಾಗೊದ ವಿಶ್ವಧರ್ಮಸಮ್ಮೇಳನದಲ್ಲಿ ಮಾಡಿದ ಉಪನ್ಯಾಸದ ಬಗ್ಗೆ ಹೀಗೆ ಹೇಳಬಹುದು : ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕುರಿತು ಮಾತನಾಡಲು ಅವರು ಪ್ರಾರಂಭಿಸಿದರು; ಆದರೆ ಅವರು ಸಮಾಪ್ತಿಗೊಳಿಸಿದಾಗ ಹಿಂದೂಧರ್ಮವೇ ಸೃಷ್ಟಿಯಾಗಿತ್ತು.” (ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ, ಸಂ. ೧, ಪು. xiv)

ಹಿಂದೂಶಾಸ್ತ್ರಗಳನ್ನು ಹೊಸ ಬೆಳಕಿನಲ್ಲಿ ವ್ಯಾಖ್ಯಾನಿಸಿದುದು ವಿವೇಕಾನಂದರು ಸಾಧಿಸಿದ ಒಂದು ಮಹಾ ಸಾಹಸವಾಗಿದೆ. ಕ್ಲಿಷ್ಟ ಶಾಸ್ತ್ರವಾಕ್ಯಗಳಲ್ಲಿ ಯಾರಿಗೂ ಕಾಣಿಸದ ಉದಾತ್ತ ಸತ್ಯಗಳು ಅವರ ದಿವ್ಯದೃಷ್ಟಿಗೆ ಗೋಚರವಾಗುತ್ತಿದ್ದವು. ತಮ್ಮ ಕುಶಾಗ್ರಮತಿಯ ವಿಚಾರದೃಷ್ಟಿಯ ಮೂಲಕ ಶಾಸ್ತ್ರದಾಳಕ್ಕೆ ಮುಳುಗಿ ಹಲವು ವೈಜ್ಞಾನಿಕ ಭಾವನೆಗಳನ್ನು ಹೊರತಂದರು, ಅನುಷ್ಠಾನಯೋಗ್ಯ ಸಾಧನತತ್ತ್ವಗಳನ್ನು ಪ್ರಚುರಪಡಿಸಿದರು. ಪುರಾತನ ದರ್ಶನಗಳ ಸಮುದ್ರದಾಳಕ್ಕೆ ಮುಳುಗಿ ಸಮನ್ವಯಾತ್ಮಕ, ವಿಶ್ವವ್ಯಾಪಕ ವೇದಾಂತರತ್ನವನ್ನು ಹೊರತೆಗೆದರು. ತಮ್ಮ ಈ ಸಾಹಸವನ್ನು ಕುರಿತಾಗಿ ಅವರೇ ಹೀಗೆ ಹೇಳಿದ್ದಾರೆ : “ಹಿಂದೂಗಳ ಭಾವನೆಗಳನ್ನು ಆಂಗ್ಲಭಾಷೆಯಲ್ಲಿ ಇಡುವುದು, ನಂತರ ಒಣತತ್ತ್ವ, ತೊಡಕಾದ ಪುರಾಣ, ವಿಚಿತ್ರವಾದ ದಿಗ್ಭ್ರಮೆಗೊಳಿಸುವ ಮನಶ್ಶಾಸ್ತ್ರ ಇವುಗಳಿಂದ ಸುಲಭವೂ ಸರಳವೂ ಮತ್ತು ಮೇಧಾವಿಗಳೂ ತಲೆದೂಗುವಂತಹ ಒಂದು ಧರ್ಮಶಾಸ್ತ್ರವನ್ನು ರೂಪಿಸುವುದೆಂದರೆ ಬಹಳ ಕಷ್ಟದ ಕೆಲಸ! ಯಾರು ಇದಕ್ಕೆ ಪ್ರಯತ್ನ ಪಟ್ಟಿರುವರೊ ಅವರಿಗೆ ಮಾತ್ರ ಇದು ಅನುಭವವೇದ್ಯ. ಶುಷ್ಕ, ಸೂಕ್ಷ್ಮ, ಅದ್ವೈತತತ್ತ್ವ ಜೀವಂತವಾಗಿ, ಕಾವ್ಯಮಯವಾಗಿ ಅನುಷ್ಠಾನ ಯೋಗ್ಯವಾಗಬೇಕು. ಬಿಡಿಸುವುದಕ್ಕೆ ಆಗದಷ್ಟು ಸಿಕ್ಕಾಗಿ ಹೋಗಿರುವ ಪುರಾಣಗಳಿಂದ ಸ್ಪಷ್ಟವಾಗಿ ಕಾಣುವ ನೀತಿ ನಿಯಮಗಳು ಬರಬೇಕು. ತಬ್ಬಿಬ್ಬಾಗಿಸುವ ಯೋಗಶಾಸ್ತ್ರದಿಂದ ಅತ್ಯಂತ ವೈಜ್ಞಾನಿಕವೂ ಅನುಷ್ಠಾನಯೋಗ್ಯವೂ ಆದ ಮನಶ್ಶಾಸ್ತ್ರ ಬರಬೇಕು.”( ಕೃತಿಶ್ರೇಣಿ, ೪.೩೯೪-೯೫).

ವಿವೇಕಾನಂದರ ಕೃತಿಗಳನ್ನು ಓದುವಾಗ ಈ ಮೇಲಿನ ಸಾಹಸ ಕಾರ್ಯವನ್ನು ಅವರು ಎಷ್ಟು ಯಶಸ್ವಿಯಾಗಿ ನೆರವೇರಿಸಿರುವರು ಎಂಬುದು ಎಲ್ಲರಿಗೂ ವೇದ್ಯವಾಗುತ್ತದೆ.

ವೇದಾಂತವು ವಿವೇಕಾನಂದರ ಪ್ರಧಾನ ಸ್ವರ, ಅವರ ಸಂಗೀತದ ಚರಮಗೀತೆ, ಕೆಲವೇ ದಾರ್ಶನಿಕರ ವೈಚಾರಿಕ ಚೌಕಟ್ಟಿನಲ್ಲಿ ಸೀಮಿತಗೊಂಡಿದ್ದ, ವಿದ್ವನ್ಮಣಿಗಳ ವಾದವಿವಾದದ ಸುಳಿಯಲ್ಲಿ ಸಿಕ್ಕಿ ನಲಗುತ್ತಿದ್ದ, ಜಟಿಲ ತರ್ಕದ ಕಪಿಮುಷ್ಟಿಯಲ್ಲಿ ತಹತಹಿಸುತ್ತಿದ್ದ, ಶಬ್ದಜಾಲವೆಂಬ ಮಹಾರಣ್ಯದಲ್ಲಿ ತಲೆ ಮರೆಸಿಕೊಂಡಿದ್ದ ವೇದಾಂತವನ್ನು ವಿವೇಕಾನಂದರು ಹೊರತಂದು ತಮ್ಮ ಜ್ಞಾನ ಸೂರ್ಯನ ಬೆಳಕಿನಿಂದ ಅದು ಪ್ರಜ್ವಲಿಸುವಂತೆ ಮಾಡಿದರು, ಅದಕ್ಕೆ ನವಚೇತನವಿತ್ತರು. ಅದು ಜೀವನದ ಎಲ್ಲ ಕ್ಷೇತ್ರಗಳನ್ನೂ ಹಂತಗಳನ್ನೂ ಜ್ಞಾನದ ಎಲ್ಲ ಪ್ರಭೇದಗಳನ್ನೂ ಮಾನವನ ಎಲ್ಲ ಆಶೋತ್ತರಗಳನ್ನೂ ಆಸ್ತಿಕ ನಾಸ್ತಿಕ ಎಂಬ ಭೇದವಿಲ್ಲದೆ

ಎಲ್ಲರನ್ನೂ ಒಳಗೊಳ್ಳುವಂತೆ ಅದನ್ನು ವಿಸ್ತಾರಗೊಳಿಸಿ ಅದಕ್ಕೊಂದು ವಿರಾಡ್ರೂಪವನ್ನು ನೀಡಿದರು. ವಿವೇಕಾನಂದರ ವ್ಯಕ್ತಿತ್ವ ಮತ್ತು ಸಂದೇಶಗಳ ತಳಸ್ಪರ್ಶಿ ಅಧ್ಯಯನ ಮಾಡಿರುವ Vivekananda in the West ಎಂಬ ಆರು ಸಂಪುಟಗಳ ಬ್ರಹತ್ ಗ್ರಂಥವನ್ನು ಬರೆದಿರುವ ಅಮೆರಿಕದ ಮಹಿಳೆ ಮೇರಿ ಲೂಯಿಸ್ ಬರ್ಕ್ ವಿವೇಕಾನಂದರ ವೇದಾಂತ ಚಿಂತನೆಯ ಬಗ್ಗೆ ಹೀಗೆ ಹೇಳುತ್ತಾರೆ: ‘ಪ್ರಪಂಚದ ಎಲ್ಲ ನಂಬಿಕೆಗಳನ್ನೂ ಒಳಗೊಳ್ಳುವ, ಮಾನವನ ಉದಾತ್ತ ಪ್ರಯತ್ನಗಳೆಲ್ಲವನ್ನೂ ತನ್ನ ಪರಿಧಿಯಲ್ಲಿ ಸೇರಿಸಿಕೊಳ್ಳುವ, ಆಧ್ಯಾತ್ಮಿಕತೆ ಮತ್ತು ಲೌಕಿಕ ಪ್ರಗತಿಯನ್ನೂ ಶ್ರದ್ಧೆ ಮತ್ತು ವೈಚಾರಿಕತೆಯನ್ನೂ, ಭೌತವಿಜ್ಞಾನ ಮತ್ತು ಆತ್ಮವಿಜ್ಞಾನವನ್ನೂ, ಕರ್ಮ ಮತ್ತು ಧ್ಯಾನವನ್ನೂ, ಮಾನವಸೇವೆ ಮತ್ತು ಭಗವತ್ತಲ್ಲೀನತೆಯನ್ನೂ ಸಾಮರಸ್ಯಗೊಳಿಸುವ ತತ್ತ್ವಶಾಸ್ತ್ರ ಮತ್ತು ಧರ್ಮವಾಗಿ ವೇದಾಂತವನ್ನು ಹಿಂದೆ ಯಾರೂ ಇಷ್ಟೊಂದು ವಿಸ್ತಾರಗೊಳಿಸಿರಲಿಲ್ಲ.”

ವಿವೇಕಾನಂದರು ತೀರಿಹೋಗಿಲ್ಲ, ಅವರು ಈಗಲೂ ಎಂದೆಂದಿಗೂ ನಮ್ಮೊಡನಿರುವರು. ಆವರು ಇಡೀ ಜಗತ್ತಿಗೆ ಹಿರಿಯಣ್ಣ.
-ಸ್ವಾಮಿ ಅಭೇದಾನಂದ

ಸ್ವಾಮಿ ವಿವೇಕಾನಂದರು ಅಪಾರ ಮಾನವಪ್ರೇಮಿ. ಅವರೇ ಹೇಳುತ್ತಿದ್ದರು: “ನಾನು ಇನ್ನೊಮ್ಮೆ ಹುಟ್ಟಿಬರಬೇಕಾಗಬಹುದು, ಏಕೆಂದರೆ ನಾನು ಮಾನವಪ್ರೇಮಕ್ಕೆ ಬಲಿಯಾಗಿಬಿಟ್ಟಿದ್ದೇನೆ (I have fallen in love with man)”. ಸೃಷ್ಟಿಯಲ್ಲೆಲ್ಲ ಮಾನವನೇ ಅತ್ಯಂತ ಶ್ರೇಷ್ಠ ಎಂಬುದು ಅವರ ನಿಲುವಾಗಿತ್ತು. ಇದು ಭೌತಿಕ ದೃಷ್ಟಿಯಿಂದಲ್ಲ, ಮಾನವನು ಸೃಷ್ಟಿಗೆಲ್ಲ ತಾನೇ ಒಡೆಯ ಎಂದು ಮೆರೆಯಬೇಕಾಗಿಲ್ಲ. “ಬೀದಿಯಲ್ಲಿ ಓಡಾಡುವ ಒಂದು ನಾಯಿಗಿಂತ ನಾನು ಶ್ರೇಷ್ಠ ಎಂದು ಭಾವಿಸಿದರೆ ನಾನು ಅಜ್ಞಾನಿ” ಎಂದು ವಿವೇಕಾನಂದರೇ ಒಂದು ಕಡೆ ಹೇಳಿದ್ದಾರೆ. ಅವರದು ಆಧ್ಯಾತ್ಮಿಕ ದೃಷ್ಟಿ. ಮನುಷ್ಯ ಮಾತ್ರ ತನ್ನನ್ನು ತಾನು ಅರಿಯಬಲ್ಲ: ನೈತಿಕವಾಗಿ, ಆಧ್ಯಾತ್ಮಿಕವಾಗಿ ಮುಂದುವರಿಯಬಲ್ಲ. ಈ ಆಧ್ಯಾತ್ಮಿಕ ಸಾಧ್ಯತೆಯ ದೃಷ್ಟಿಯಿಂದ ಮಾನವನು ಸೃಷ್ಟಿ ಯಲ್ಲೆಲ್ಲ ಶ್ರೇಷ್ಠ. ಮಾನವನ ಆಂತರಿಕ ದಿವ್ಯತೆಯನ್ನು ವಿವೇಕಾನಂದರು ಒತ್ತಿ ಸಾರಿದಷ್ಟು ಹಿಂದೆ ಮತ್ತಾರೂ ಮಾಡಿರಲಿಲ್ಲ, “ಧರ್ಮವೆಂದರೆ ಈ ಆಂತರಿಕ ದಿವ್ಯತೆಯ ಅಭಿವ್ಯಕ್ತಿ” ಎಂದರು ಸ್ವಾಮೀಜಿ. ಹೀಗೆ ಅವರು ಧರ್ಮವನ್ನು ಮಾನವಕೇಂದ್ರಿತವನ್ನಾಗಿ ಮಾಡಿದರು. ಬಾಹ್ಯಾಚಾರಗಳಲ್ಲಿ, ಗುಡಿಮಸೀದಿಗಳಲ್ಲಿ, ಧರ್ಮಗ್ರಂಥಗಳಲ್ಲಿ, ಪುರೋಹಿತರ ಸರ್ವಾಧಿಕಾರದಲ್ಲಿ ಅಡಗಿದ್ದ ಧರ್ಮವನ್ನು ಅವರು ಮಾನವನ ಹೃದಯದಲ್ಲಿ ಪ್ರತಿಷ್ಠಾಪಿಸಿದರು.

ಇದೊಂದು ವಿವೇಕಾನಂದರು ಸಾಧಿಸಿದ ಮಹತ್ಸಾಧನೆ. ಮಾನವನು ಈಗ ಬಾಹ್ಯ ಸಾಧನೆಯ ತುಟ್ಟತುದಿಯನ್ನು ಏರುತ್ತಿದ್ದಾನೆ. ಅದರ ಪರಿಣಾಮವಾಗಿ ಅಶಾಂತಿ, ಕಾತರತೆಗಳನ್ನು ಅನುಭವಿಸುತ್ತಿದ್ದಾನೆ. ಸುಖಶಾಂತಿಗಳನ್ನು ತನ್ನ ಆಂತರ್ಯದಲ್ಲಿಯೇ ಅನುಭವಿಸಬೇಕೆಂಬುದನ್ನು ಅವನು ಅರಿಯುತ್ತಿದ್ದಾನೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಜೆನೆಟಿಕ್ ಇಂಜಿನೀಯರಿಂಗ್, ಮೈಕ್ರೋ-ಬಯಾಲಜಿ ಮುಂತಾದ ಜೀವ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ಹೆಚ್ಚು ಒತ್ತನ್ನು ನೀಡಲಾಗುತ್ತಿದೆ. ಹಾಗೆಯೇ ಮನಶ್ಯಾಸ್ತ್ರವೂ ಹೆಚ್ಚು ಪ್ರಾಮುಖ್ಯವನ್ನು ಪಡೆಯುತ್ತಿದೆ. ಇದು ನಾವಿಂದು ಹೆಚ್ಚು ಅಂತರ್ಮುಖಿಗಳಾಗುತ್ತಿದ್ದೇವೆ ಎಂಬುದರ ಸೂಚನೆಯೇ? ವಿವೇಕಾನಂದರು ಆಂತರಿಕ ದಿವ್ಯತೆಗೆ ಒತ್ತು ನೀಡಿದುದು ಇದರ ಮುನ್ಸೂಚನೆ ಇರಬಹುದೇ?

ಮಾನವಪ್ರೇಮಿಯಾದ ವಿವೇಕಾನಂದರು ಮಾನವನಿಗೆ ಸಂಬಂಧಿಸಿದ ಎಲ್ಲ ಜ್ಞಾನಕ್ಷೇತ್ರಗಳಲ್ಲಿಯೂ ಆಸಕ್ತಿಯನ್ನು ತೋರಿಸಿದರು. ಇತಿಹಾಸ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ, ತಂತ್ರಜ್ಞಾನ, ರಾಜಕೀಯ, ಧರ್ಮಶಾಸ್ತ್ರ, ಸೇವಾತತ್ತ್ವ, ಲೌಕಿಕ, ಪಾರಮಾರ್ಥಿಕ, ಸಾಹಿತ್ಯ, ಕಲೆ-ಹೀಗೆ ಎಲ್ಲ ಜ್ಞಾನಪ್ರಭೇದಗಳೂ ಅವರ ವಿಚಾರದ ಪರಿಧಿಯೊಳಗೆ ಸೇರಿಕೊಂಡವು, ಎಲ್ಲವನ್ನೂ ವೇದಾಂತದ ಬೆಳಕಿನಲ್ಲಿ ಸಮನ್ವಯಗೊಳಿಸಿದರು. ಈ ತಿಂಗಳ ಮುಖಪುಟವು ವಿವೇಕಾನಂದರ ಸಮನ್ವಯ ದೃಷ್ಟಿಯನ್ನೇ ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ.

ವಿವೇಕಾನಂದರಲ್ಲಿ ಬೇರೆಲ್ಲೂ ಕಾಣದ ಅತ್ಯಂತ ವಿಶಾಲವಾದ ಧರ್ಮದ ಚಿತ್ರವನ್ನು ನೋಡುತ್ತೇವೆ. ಆಂತರಿಕ ದಿವ್ಯತೆಯ ಆಭಿವ್ಯಕ್ತಿಯೇ ಧರ್ಮವೆಂದಾದರೆ, ಎಲ್ಲರಲ್ಲೂ ದಿವ್ಯತೆ ಅಂತರ್ನಿಹಿತವಾಗಿರುವುದರಿಂದ ಎಲ್ಲರೂ ಧರ್ಮದ ಹಾದಿಯಲ್ಲಿರುವರು. ಇಡೀ ಮಾನವಕೋಟಿ ಈ ಧಾರ್ಮಿಕ ವಿಕಾಸದ ಮುನ್ನಡೆಯಲ್ಲಿರುವುದು. ಅವರ ದೃಷ್ಟಿಯಲ್ಲಿ ಎಲ್ಲ ಬಗೆಯ ವಿಕಾಸವೂ, ಧರ್ಮವಿಕಾಸದ ವಿವಿಧ ಮುಖಗಳು. ಅವರು ಹೇಳುತ್ತಾರೆ; “ಈ ಆತ್ಮದ ಅನಂತ ಶಕ್ತಿಯನ್ನು ಭೌತಿಕ ಪ್ರಪಂಚದ ಮೇಲೆ ಬೀರಿದರೆ ಹಲವು ಭೌತಿಕ ಬೆಳವಣಿಗೆಗಳಾಗುವುವು. ಆಲೋಚನಾ ಪ್ರಪಂಚದ ಮೇಲೆ ಬೀರಿದರೆ ಬುದ್ದಿ ತನ್ನ ಪರಾಕಾಷ್ಟೆಯನ್ನು ಮುಟ್ಟುವುದು. ತನ್ನ ಮೇಲೆಯೇ ಅದನ್ನು ಬೀರಿಕೊಂಡರೆ ಮಾನವನನ್ನು ದೇವನನ್ನಾಗಿಸುವುದು (ಕೃತಿಶ್ರೇಣಿ, ೫:೩೦೦)

ಎಲ್ಲರೂ ಕೊನೆಯಲ್ಲಿ ಆ ಪರಿಪೂರ್ಣತೆಯ ಹಂತವನ್ನು ತಲುಪಲೇಬೇಕು. ಈ ಪರಿಪೂರ್ಣತೆ ಯಾವ ಮತೀಯ ಧರ್ಮಕ್ಕೂ ಸೀಮಿತವಾದುದಲ್ಲ, ಕೇವಲ ಸಂನ್ಯಾಸಿಗಳ ಸ್ವಾಧೀನವಲ್ಲ, ಸಾಮಾನ್ಯ ದೃಷ್ಟಿಯಲ್ಲಿ ನಾವು ಯಾರನ್ನು ಆಧ್ಯಾತ್ಮಿಕ ಸಾಧಕರು ಎಂದು ಕರೆಯುತ್ತೇವೆಯೊ ಅವರಿಗೆ ಮಾತ್ರ ದಕ್ಕುವಂತಹುದಲ್ಲ. ಸ್ವಾಮೀಜಿ ತಮ್ಮ ಕಬಂಧ ಬಾಹುವಿನಲ್ಲಿ ಇಡೀ ಮಾನವಕೋಟಿಯನ್ನು ತಬ್ಬಿಕೊಳ್ಳುತ್ತಾರೆ. ಅವರು ಹೇಳುತ್ತಾರೆ : ‘ನಾವು ಯಾರನ್ನೂ ನಿರಾಕರಿಸುವುದಿಲ್ಲ. ಆಸ್ತಿಕನಾಗಲಿ, ವಿಶ್ವದೇವೈಕ್ಯವಾದಿಯಾಗಲಿ, ಅದ್ವೈತಿಯಾಗಲಿ, ಬಹುದೇವತಾವಾದಿಯಾಗಲಿ, ಅಜ್ಞೇಯತಾವಾದಿಯಾಗಲಿ ಅಥವಾ ನಾಸ್ತಿಕನೇ ಆಗಲಿ ಎಲ್ಲರಿಗೂ ಇಲ್ಲಿ ಅವಕಾಶವುಂಟು. ಇರಬೇಕಾದ ಒಂದೇ ಒಂದು ಅರ್ಹತೆಯೆಂದರೆ ವ್ಯಕ್ತಿಯ ಮನೋಭಾವ ಅತ್ಯಂತ ವಿಶಾಲವೂ ಆಳವೂ ಆಗಿರಬೇಕು.”

ವಿವೇಕಾನಂದರು ಭೌತಿಕವಾಗಿ ನಮ್ಮನ್ನಗಲಿದ್ದರೂ ಅವರು ಬಿಟ್ಟುಹೋಗಿರುವ ಅಪೂರ್ವ ಸಾಹಿತ್ಯರಾಶಿಯಲ್ಲಿ ಅವರಿನ್ನೂ ಜೀವಂತವಾಗಿ ನೆಲೆಸಿರುವರು. ಆ ಸಾಹಿತ್ಯದಲ್ಲಿ ಕವಿಹೃದಯದ ಮಿಡಿತವನ್ನು ಕೇಳಬಹುದು, ದಿವ್ಯಸ್ಫೂರ್ತಿಯ ರೋಮಾಂಚನವನ್ನು ಪಡೆಯಬಹುದು, ಚಿಂತನಾಗ್ನಿಯನ್ನು ಕೆದಕುವ ವಿಚಾರ ದಂಡವನ್ನು ಕಾಣಬಹುದು, ಹೃದಯವನ್ನು ಕಲಕಿ ಕಣ್ಣೀರಿಕ್ಕುವಂತೆ ಮಾಡುವ ಕರುಣರಸ ಒಂದು ಕಡೆಯಾದರೆ, ನಮ್ಮನ್ನು ನಕ್ಕು ನಗಿಸುವ ಹಾಸ್ಯದ ಹೊನಲು ಇನ್ನೊಂದು ಕಡೆ, ನಮ್ಮ ಮಹಿಮೆಯನ್ನು ಎತ್ತಿ ತೋರಿಸುವ ಮಹಾ ವಾಕ್ಯಗಳು ಒಂದು ಕಡೆಯಾದರೆ, ನಮ್ಮ ದೋಷಗಳನ್ನು ಖಂಡಿಸಿ ತಿದ್ದಿ ಸರಿಪಡಿಸುವ ಮೊನಚು ನುಡಿಗಳು ಇನ್ನೊಂದು ಕಡೆ. ಹೀಗೆ ಅವರ ಸಾಹಿತ್ಯಗಂಗೆ ಒಮ್ಮೆ ಭೋರ್ಗರೆಯುತ್ತ, ಒಮ್ಮೆ ಜುಳುಜುಳನೆ ಹರಿಯುತ್ತ, ದಾರಿಯ ಕೊಳಕನ್ನೆಲ್ಲ ಕೊಚ್ಚಿಕೊಂಡು ಹೋಗುತ್ತ, ಹೋದಲ್ಲೆಲ್ಲ ಭೂಮಿಯನ್ನು ಹಸನುಗೊಳಿಸುತ್ತ ಹರಿಯುತ್ತದೆ. ಸಾಹಿತ್ಯಕ್ಕೆ, ವಿಶೇಷವಾಗಿ ವಂಗ ಸಾಹಿತ್ಯಕ್ಕೆ ಅವರದೇ ಆದ ಒಂದು ವಿಶಿಷ್ಟ ಕೊಡುಗೆ ಇರುವುದನ್ನು ವಿದ್ವಾಂಸರು ಗುರುತಿಸಿರುವರು.

ವಿವೇಕಾನಂದ ಸಾಹಿತ್ಯವನ್ನು ಕುರಿತಾಗಿ ರಾಷ್ಟ್ರಕವಿ ಕುವೆಂಪು ಅವರು ಹೀಗೆ ಹೇಳುತ್ತಾರೆ : “ಅಲ್ಲಿ ಪತನದಲ್ಲಿ ನಮ್ಮನ್ನು ಕೈಹಿಡಿದೆತ್ತುವ ಔದಾರ್ಯವಿದೆ, ಹೃದಯದೌರ್ಬಲ್ಯದ ಸಮಯದಲ್ಲಿ ನಮ್ಮ ಕ್ಲೈಬ್ಯವನ್ನು ಕಿತ್ತೊಗೆದು ಕೆಚ್ಚನ್ನ ನೆಡುವ ಸಿಡಿಲಾಳ್ಮೆಯಿದೆ, ಬುದ್ದಿಗೆ ಪುಷ್ಟಿಯಿದೆ, ಹೃದಯಕ್ಕೆ ತೃಪ್ತಿಯಿದೆ. ನಮ್ಮ ವ್ಯಕ್ತಿತ್ವ ಸಮಸ್ತವನ್ನೂ ಸರ್ವಾವಯವ ಸಂಪೂರ್ಣವಾಗಿ ವಿಕಾಸಗೊಳಿಸಿ ಪೂರ್ಣತೆಯ ಕಡೆಗೆ ನಮ್ಮನ್ನು ಕೊಂಡೊಯ್ಯುವ ಪೂರ್ಣ ದೃಷ್ಟಿಯೂ ಇಲ್ಲಿ ಸಿದ್ಧಿಸುತ್ತದೆ. ಇದು ಅಮೃತದ ಮಡು; ಮಿಂದರೆ ಪುನೀತರಾಗುತ್ತೇವೆ. ಇದು ಜ್ಯೋತಿಯ ಖನಿ, ಹೊಕ್ಕರೆ ಪ್ರಬುದ್ಧರಾಗುತ್ತೇವೆ.” (ವಿವೇಕಾನಂದರ ಕೃತಿಶ್ರೇಣಿಯ ಮುನ್ನುಡಿಯಿಂದ).

ವಿವೇಕಾನಂದರ ವಿರಾಟ್‌ವ್ಯಕ್ತಿತ್ವದಿಂದ ಹೊರಹೊಮ್ಮಿದ ಪ್ರಚಂಡ ಭಾವನಾತರಂಗಗಳು ಅವರ ಜೀವಸತ್ವವನ್ನು ತಮ್ಮೊಳಗೆ ಉಳಿಸಿಕೊಂಡು ಇಂದಿಗೂ ಜಗತ್ತಿನಾದ್ಯಂತ ಹರಿದಾಡುತ್ತಿವೆ. ಅವರು ಚಿರಂಜೀವಿ.