ರಾಮಕೃಷ್ಣ ಮಹಾಸಂಘದ ಅಧ್ಯಕ್ಷರಾಗಿರುವ ಪರಮ ಪೂಜ್ಯ ಸ್ವಾಮಿ ರಂಗನಾಥಾನಂದಜಿಯವರು ಸ್ವತಂತ್ರ ಭಾರತವನ್ನು ಉದ್ದೇಶಿಸಿ ಹೇಳಿದ ಕೆಲವು ಮಾತುಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ. Eternal Values for a Changing Society ಎಂಬ ಗ್ರಂಥದ ಕನ್ನಡಾನುವಾದ ‘ಪರಿವರ್ತನಶೀಲ ಸಮಾಜಕ್ಕೆ ಶಾಶ್ವತ ಮೌಲ್ಯಗಳು’ ಗ್ರಂಥದಿಂದ ಆಯ್ದ ಭಾಗಗಳಿವು.

೧೯೪೭ ಆಗಸ್ಟ್ ೧೫ ಭಾರತದ ಪಾಲಿಗೆ, ಒಂದು ಯುಗದ ಮುಕ್ತಾಯವನ್ನೂ, ಮತ್ತೊಂದರ ಉದಯವನ್ನೂ ಸೂಚಿಸುತ್ತದೆ ಎನ್ನಬಹುದು. ಭಾರತದ ದೀರ್ಘ ಇತಿಹಾಸದ ಹಿನ್ನೆಲೆಯಲ್ಲಿ ನೋಡಿದರೆ ಈ ರಾಜಕೀಯ ದಾಸ್ಯದ ಯುಗವು ಮಧ್ಯಂತರ ಆಡಳಿತದ ಒಂದು ಅಲ್ಪಾವಧಿ ಎನ್ನಬಹುದು. ಭರತಖಂಡವು ತನ್ನನ್ನು ತಾನು ಕಂಡುಕೊಳ್ಳುವ ಪ್ರಕ್ರಿಯೆಯು ರಾಜಕೀಯ ಸ್ವಾತಂತ್ರ್ಯ ಸಾಧನೆಯಿಂದ ಒಂದು ಹೊಸ ಆಯಾಮವನ್ನು ಪಡೆಯಿತು. ರಾಷ್ಟ್ರದ ಜನಮಾನಸದಲ್ಲಿ ಶಕ್ತ್ಯುತ್ಸಾಹಗಳ ಪೂರವೇ ಎದ್ದಿತು. ಹೀಗೆ ಬಿಡುಗಡೆಗೊಂಡ ಶಕ್ತಿಗಳು ಇನ್ನು ಮುಂದೆ ಸೃಜನಶೀಲವಾದ ಆತ್ಮಾಭಿವ್ಯಕ್ತಿಯ ತೀವ್ರತರ ಪ್ರಕ್ರಿಯೆಯಾಗಿ ಹೊರಹೊಮ್ಮುವುದಕ್ಕೆ ನಾಂದಿಯಾಯಿತು.

ರಾಜಕೀಯ ಸ್ವಾತಂತ್ರ್ಯ-ರಾಜಕೀಯ ದಾಸ್ಯ

ಒಬ್ಬ ಸಾಮಾನ್ಯ ವ್ಯಕ್ತಿಗೆ ರಾಜಕೀಯ ದಾಸ್ಯವು ಅಸಾಧಾರಣವಾದದ್ದೆಂದು ತೋರದಿರಬಹುದು – ಅವನ ನಿತ್ಯಜೀವನದ ಕಿರು ದಿಗಂತದ ಪರಿಮಿತಿಯಲ್ಲಿ ಅವನ ನಿತ್ಯದ ಕಾರ್ಯಕ್ರಮದ ಚೌಕಟ್ಟಿಗೇನೂ ಭಂಗ ಬಾರದಿದ್ದರೆ. ಆದರೆ ಅದೇ ವ್ಯಕ್ತಿಗೆ ರಾಜಕೀಯ ಪ್ರಜ್ಞೆ ಉಂಟಾಗಿ ಅವನ ಸ್ವಾತಂತ್ರ್ಯ ಮತ್ತು ಆತ್ಮಗೌರವಗಳ ಮೌಲ್ಯದ ಪರಿಜ್ಞಾನಕ್ಕೆ ಆ ದಾಸ್ಯದಿಂದ ಆಘಾತವೊದಗಿದಾಗ ಅವನಿಗದು ವಿಷಪ್ರಾಯವಾಗುತ್ತದೆ. ಈ ಮೌಲ್ಯಗಳ ಪ್ರಜ್ಞೆ ಉದಯವಾದೊಡನೆಯೆ ಅವನಿಗೆ ರಾಜಕೀಯ ವ್ಯಕ್ತಿತ್ವ ದೊರಕುತ್ತದೆ. ಕೇವಲ ಲೌಕಿಕವೂ ಭೌತಿಕವೂ ಆದ ಭದ್ರತೆಗಿಂತ ಸ್ವಾತಂತ್ರ್ಯಕ್ಕೆ ಹೆಚ್ಚು ಬೆಲೆ ಕಟ್ಟುವಂತಹ ಒಬ್ಬ ವ್ಯಕ್ತಿ ಅವನಾಗುತ್ತಾನೆ.

ವಿವೇಕಾನಂದರು ಮತ್ತು ಆಧುನಿಕ ಭಾರತದ ಪುನರುಜ್ಜೀವನ

ನಮ್ಮ ಬದುಕಿನ ಎಲ್ಲ ವಲಯಗಳನ್ನು ಪ್ರಭಾವಿಸುವ ರಾಷ್ಟ್ರೀಯ ಅಭಿವೃದ್ಧಿಯ ಹೊಸ ಮಜಲನ್ನು ನಮ್ಮ ದೇಶವು ಪ್ರವೇಶಿಸುತ್ತಿರುವ ಸಮಯ ಇದು.
ಇಂದಿನ ಸ್ವತಂತ್ರ ಭಾರತದ ಜನತೆಗೆ ವಿವೇಕಾನಂದರ ಕಣ್ಣುಗಳ ಮೂಲಕ ಭಾರತವನ್ನು ನೋಡುವುದು ತುಂಬ ಒಳ್ಳೆಯದು. ಅವರ ಜೀವನ ಮತ್ತು ವ್ಯಕ್ತಿತ್ವಗಳು ಸಂಕ್ಷಿಪ್ತ ಭಾರತವಾಗುತ್ತವೆ. ನಮ್ಮ ರಾಷ್ಟ್ರಪ್ರಜ್ಞೆಯು ಬೆಳೆಯುವುದಕ್ಕೆ ಆರು ದಶಕಗಳ ಹಿಂದೆಯೆ ಸ್ವಾಮಿ ವಿವೇಕಾನಂದರು ಈ ರಾಷ್ಟ್ರದ ಪ್ರೇರಣೆಗಳನ್ನು ಮೈಗೂಡಿಸಿಕೊಂಡು ಅದರ ಅಭೀಪ್ಸೆಗಳ ಅಭಿವ್ಯಕ್ತಿಯಾಗಿದ್ದರು.

ಭಾರತದ ಬಗೆಗೆ ಸ್ವಾಮಿ ವಿವೇಕಾನಂದರ ಪ್ರೇಮವು ಹರಿದದ್ದು ಈ ದೇಶದ ಇತಿಹಾಸ ಹಾಗೂ ಅದರ ಸಂಸ್ಕೃತಿಗಳ ಬಗೆಗೆ ಅವರಿಗಿದ್ದ ಆಳವಾದ ಅರಿವಿನಿಂದ, ಅಲ್ಲದೆ ತಮ್ಮ ಕಾಲದ ಭಾರತದ ಮನಸ್ಸು, ಪ್ರವೃತ್ತಿಗಳ ನಿಕಟ ಪರಿಚಯದಿಂದ. ಮೊದಲನೆಯದು, ಈ ಜಗತ್ತಿನಲ್ಲಿ ಭಾರತವು ವಹಿಸಬೇಕಾಗಿರುವ ಪಾತ್ರದ ಬಗೆಗೆ ಶಕ್ತಿ ಭರವಸೆಗಳನ್ನು ಅವರಿಗೆ ನೀಡಿದ್ದರೆ, ಎರಡನೆಯದು ಅವರ ವಿಶಾಲವಾದ ಆಧ್ಯಾತ್ಮಿಕ ಮತ್ತು ಮಾನಸಿಕ ಶಕ್ತಿಗಳು-ಮಾನವ ಪ್ರೇಮ, ಮೈತ್ರಿ, ಸೇವೆಗಳ ಮೂಲಕ –  ರಾಷ್ಟ್ರೀಯ ಸಾಧನೆಯ ಹೊಸ ಹೆದ್ದಾರಿಯನ್ನು ತೆರೆಯುವಂತೆ ಮಾಡಿತು.

ವಿವೇಕಾನಂದರ ಭಾವನೆಯಲ್ಲಿ ಭಾರತವು ರಾಷ್ಟ್ರಗಳ ನೈತಿಕ ನಾಯಕನಾಗಲು ಅಗತ್ಯವಾದ ಶಕ್ತಿಯನ್ನು ಚಾರಿತ್ರಿಕವಾಗಿ ಸಂಪಾದಿಸಿಕೊಂಡಿದೆ ಮತ್ತು ಇತರೆ ಪ್ರಬಲ ರಾಷ್ಟ್ರಗಳಿಗೆ ನೈತಿಕ ಮಾರ್ಗದರ್ಶನವನ್ನು ನೀಡುವ ಸಾಮರ್ಥ್ಯವನ್ನೂ ಪಡೆದಿದೆ. ಆದರೆ ಜಗತ್ತಿನ ವ್ಯವಹಾರಗಳಲ್ಲಿ ಭಾರತವು ಪರಿಣಾಮಕಾರಿಯಾದ ರೀತಿಯಲ್ಲಿ ಭಾಗವಹಿಸಬೇಕಾದರೆ ಅದು ಪರಿಪಾಲಿಸಬೇಕಾದ ಮೂರು ಪೂರ್ವಭಾವೀ ಷರತ್ತುಗಳಿವೆ. ಅವೆಂದರೆ ರಾಜಕೀಯ ಸ್ವಾತಂತ್ರ್ಯ, ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಐಕಮತ್ಯ. ಮೊದಲನೆಯದನ್ನು ಆಗಲೆ ನಾವು ಸಾಧಿಸಿದ್ದಾಗಿದೆ, ಎರಡು ಮತ್ತು ಮೂರನೆಯದನ್ನು ಸಾಧಿಸಬೇಕಾಗಿದೆ. ಆರ್ಥಿಕವಾಗಿ ಹಿಂದುಳಿದಿರುವಿಕೆ, ಸಾಮಾಜಿಕ ಅಸಮಾನತೆ ಈ ರಾಷ್ಟ್ರದೇಹಕ್ಕೆ ತಗುಲಿದ ರೋಗಗಳಾಗಿವೆ.

ಓ ಪುಣ್ಯಭೂಮಿ ಭಾರತವೆ, ನಿನಗೆ ವಂದನೆಗಳು. ನೀನು ಎಲ್ಲ ಸಂಗೀತದ ತವರೂರು, ನೀನು ಹೃದಯದ ಧ್ವನಿ… ಪೂರ್ವದ ಕಡೆ ನೋಡಿ, ಅದೇ ಮಾನವ ಜನಾಂಗದ, ಮಾನವ ಭಾವನೆಯ, ಎಲ್ಲ ಧರ್ಮಗಳ ತೊಟ್ಟಿಲು.

-ಜೆ. ಹರ್ಡರ್

ಸ್ವಾಮಿ ವಿವೇಕಾನಂದರ ಭಾವೀ ಭಾರತದ ದರ್ಶನವೆಂದರೆ, ಸಾಮಾಜಿಕ ಅಸಮಾನತೆ, ಪ್ರತ್ಯೇಕತೆ, ಪಂಗಡಗಳ ಸಂಕುಚಿತತೆ ಮತ್ತು ಅಸಹನೆಗಳಿಂದ ಮುಕ್ತವಾಗಿ ವ್ಯಾಪಕ ಶಿಕ್ಷಣ ಮತ್ತು ಆರ್ಥಿಕ, ಸಾಮಾಜಿಕ ಸೌಲಭ್ಯಗಳ ಮೂಲಕ ಮಾನವ ಘನತೆ, ಸ್ವಾತಂತ್ರ್ಯ, ನಿರ್ಭಯತೆ, ಸಮಾನತೆಗಳ ಭದ್ರಪೀಠದ ಮೇಲೆ ನಮ್ಮ ಸ್ತ್ರೀಪರುಷರು ಸ್ಥಾಪಿತರಾಗುವುದು-ಇದೇ ಅವರ ಭವ್ಯ ಭಾವೀ ಭಾರತದ ದರ್ಶನ.

ನವ ಭಾರತ ಎದ್ದೇಳಲಿ

ನವ ಭಾರತ ಅಸ್ತಿತ್ವಕ್ಕೆ ಬರಬೇಕೆಂಬ ಕರೆಯನ್ನು ನೀಡಿದವರು ಅವರು; ಭಾರತ ನಮ್ಮ ಸಮಾಜದ ಮುಂದುವರಿದ ವರ್ಗಗಳ ಹೆಮ್ಮೆಯ ತವರಾಗಿರುವುದು ಮಾತ್ರವಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹಿಂದುಳಿದ ವರ್ಗಗಳ ನೆಲೆಯೂ ಆಗಿದೆ ಎಂದು ಉದ್ಘೋಷಿಸಿದವರು ಅವರು! ನಮ್ಮ ನಾಡು ತೀವ್ರವಾದ ದಾಸ್ಯಕ್ಕೆ ಒಳಗಾಗಿದ್ದ ಅವಧಿಯಲ್ಲಿ ಸುಮಾರು ೧೦೦ ವರ್ಷಗಳ ಹಿಂದೆ ಮೊಳಗಿದ ಅವರ ಈ ಕಹಳೆಯ ಧ್ವನಿ ಮನುಷ್ಯನ ಉತ್ಥಾನಕ್ಕಾಗಿ, ಯಾವುದೇ ಜಾತಿ, ಪಂಥ ಅಥವಾ ಲಿಂಗ ಭೇದವಿಲ್ಲದೆ, ಸಾಮಾಜಿಕ ಆರ್ಥಿಕ ವಿಕಾಸದ ಪರಿಗಣನೆ ಇಲ್ಲದೆ ನೀಡಿದ ಕರೆಯಾಗಿತ್ತು. ಮನುಷ್ಯರಲ್ಲಿ ಸುಪ್ತವಾಗಿರುವ ದೈವತ್ವದ ಉತ್ಥಾನಕ್ಕಾಗಿ ನೀಡಿದ ಕರೆಯಾಗಿತ್ತು. ಆ ಕಾಲದಲ್ಲಿ ರಾಜಕೀಯ ಸ್ವಾತಂತ್ರ್ಯ ಲಭಿಸುವ ಆಶೆ ಅಷ್ಟಾಗಿ ಇರಲೇ ಇಲ್ಲ. ಆದರೂ, ಆಗಲೇ ಈ ಮಹಾ ಪ್ರವಾದಿ ಹಾಗೂ ಮಹಾದೇಶಭಕ್ತ ನವ ಭಾರತದ ಉದಯವನ್ನು-ಸ್ವತಂತ್ರವಾದ ಸಮಾನಾಧಿಕಾರದ ಹಾಗೂ ಪ್ರಗತಿಮುಖಿಯಾದ ನವಭಾರತದ ಉದಯವನ್ನು- ಈ ಮಾತುಗಳಲ್ಲಿ ಉದ್ಘೋಷಿಸಿದರು:

ಕೈಯಲ್ಲಿ ನೇಗಿಲನ್ನು ಹಿಡಿದುಕೊಂಡು ರೈತರ ಗುಡಿಸಿಲಿನಿಂದ, ಮೀನುಗಾರರ ಚಮ್ಮಾರರ ಮತ್ತು ಜಲಗಾರರ ಹಟ್ಟಿಗಳಿಂದ… ನವ ಭಾರತ ಮೂಡಿಬರಲಿ. ಕಿರಾಣಿ ಅಂಗಡಿಯಿಂದ , ಕರಿದ ಭಕ್ಷ್ಯಗಳನ್ನು ಮಾರುವ ವ್ಯಕ್ತಿಯ ಗೂಡು – ಒಲೆಯ ಬದಿಯಿಂದ ಅದು ಮೂಡಿ ಬರಲಿ. ಕಾರ್ಖಾನೆಗಳಿಂದ, ವ್ಯಾಪಾರ ಕೇಂದ್ರಗಳಿಂದ ಮತ್ತು ಮಾರುಕಟ್ಟೆಗಳಿಂದ ಅದು ಮೂಡಿಬರಲಿ. ತೋಪುಗಳಿಂದ ಮತ್ತು ಅರಣ್ಯಗಳಿಂದ, ಗುಡ್ಡಗಳಿಂದ ಮತ್ತು ಪರ್ವತಗಳಿಂದ ಅದು ಮೂಡಿಬರಲಿ.

ನಮ್ಮ ಗಣತಂತ್ರಾತ್ಮಕ, ಪ್ರಜಾಸತ್ತಾತ್ಮಕ ಸಂವಿಧಾನದಲ್ಲಿ ನಾವು ಮೂರ್ತರೂಪ ನೀಡಿರುವ ನವ ಭಾರತ ಇದೇ. ನಮ್ಮದು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾಗಿರುವ ಗಣತಂತ್ರವಾಗಿದೆ. ಆದರೆ ನಮ್ಮ ಗಣತಂತ್ರದ ಮುಂದೆ ಅನೇಕ ಸವಾಲುಗಳು ತಲೆಯೆತ್ತಿ ನಿಂತಿವೆ. ನಾಗರಿಕರಾಗಿ ನಾವೆಲ್ಲ ಅವನ್ನು ಎದುರಿಸಬೇಕಾಗಿದೆ.

ನಮ್ಮ ರಾಜಕೀಯ ವ್ಯವಸ್ಥೆ ೫೦ ವರ್ಷಗಳ ಪರೀಕ್ಷೆಯನ್ನು ಎದುರಿಸಿ ನಿಂತಿದೆ. ಈ ವಿಷಯದಲ್ಲಿ ನಾವು ನಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೇವೆ; ಸವಾಲುಗಳನ್ನು ಮೀರಿ ನಿಂತಿದ್ದೇವೆ. ಆದರೆ, ನಾವು ಇನ್ನೂ ಗಂಭೀರವಾದ ಸವಾಲುಗಳನ್ನು ಎದುರಿಸಬೇಕಾಗಿದೆ, ಬಗೆ ಹರಿಸಬೇಕಾಗಿದೆ. ಬಡತನ, ಅನಕ್ಷರತೆ, ಶೋಷಣೆ ಮತ್ತು ಶಿಕ್ಷಿತ ಜನಾಂಗದ ನಿರಾಸಕ್ತಿಯ ಒಂದು ಸಾಮಾನ್ಯ ಮನೋಭಾವ ಇವೇ ಆ ಬಗೆಯ ಸವಾಲುಗಳು.

ನಮ್ಮ ಶಿಕ್ಷಿತ ಜನಾಂಗಕ್ಕೆ ಮೂರು ಮಂತ್ರಗಳು

ನಮ್ಮ ಮಾತೃಭೂಮಿಯ ಈ ದುರ್ಬಲ, ಶೋಷಿತ, ತಿರಸ್ಕೃತ ಜನವರ್ಗವನ್ನು ಮೇಲಕ್ಕೆ ಎತ್ತುವುದನ್ನು ನಮ್ಮ ಶಿಕ್ಷಿತ ಜನಾಂಗ ತಮ್ಮ ಧ್ಯೇಯವನ್ನಾಗಿಟ್ಟುಕೊಳ್ಳುತ್ತಾರೆಂದು ಸ್ವಾಮಿ ವಿವೇಕಾನಂದರು ನಿರೀಕ್ಷಿಸಿದ್ದರು. ಅದನ್ನು ಸಾಧಿಸಲು ನೆರವಾಗುವಂತೆ ಅವರಿಗೆ ಮೂರು ಮಂತ್ರಗಳನ್ನು ಕೊಟ್ಟು ಅವುಗಳನ್ನು ಕೇಳಲು ಅಥವಾ ಓದಲು, ಅದನ್ನು ಕುರಿತು ಧ್ಯಾನಿಸಲು ಮತ್ತು ಕಾರ್ಯಗತಗೊಳಿಸಲು ಹೇಳಿದರು. ಅವುಗಳಲ್ಲಿ ಮೊದಲನೆಯದು:

ಭರತಖಂಡದ ಜನಾಂಗದ ಆದರ್ಶವೇ ತ್ಯಾಗ ಮತ್ತು ಸೇವೆ. ಇವೆರಡನ್ನು ಚೆನ್ನಾಗಿ ರೂಢಿಸಿ, ಉಳಿದುವೆಲ್ಲ ತಮಗೆ ತಾವೇ ಹೊಂದಿಕೊಳ್ಳುವುವು.

ಈ ಸೇವೆ ಅರ್ಪಣ ಮನೋಭಾವಗಳನ್ನು ನಮ್ಮ ಜನರಲ್ಲಿ ಶಿಕ್ಷಣದ ಮೂಲಕ ಬೆಳೆಸಲು ಸಾಧ್ಯವಾಗಿಲ್ಲ. ಕಳೆದ ಶತಮಾನದಲ್ಲಿ ಮೆಕಾಲೆ ಸ್ಥಾಪಿಸಿದ ವಸಾಹತುಶಾಹಿ ಪದ್ದತಿಯೆ ಅಕ್ಷರಶಃ ಮತ್ತು ಅದೇ ಶ್ರದ್ದೆಯಿಂದ ಮುಂದುವರಿದಿದೆ. ಇಂದಿನ ವಿದ್ಯಾಭ್ಯಾಸ ಪದ್ಧತಿಯನ್ನು ರಾಷ್ಟ್ರೀಯ ನೆಲೆಯಲ್ಲಿ, ಆದರ್ಶಗಳಲ್ಲಿ ಬೇರೂರಿರುವ ಶಿಕ್ಷಣವಾಗಿ ಮಾಡಿ ಜಾತಿ, ಮತ, ವರ್ಣ, ಲಿಂಗ ಅಥವಾ ಸಾಮಾಜಿಕ ಅಂತಸ್ತುಗಳನ್ನು ಲೆಕ್ಕಿಸದೆ ಮನುಷ್ಯನ ಸೇವೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು ಅದನ್ನು ಬದಲಾಯಿಸಲು ಸ್ವಾಮಿ ವಿವೇಕಾನಂದರು ನಮಗೆ ಸಹಾಯ ಮಾಡಬಲ್ಲರು. ಅಂಥ ಶಿಕ್ಷಣಕ್ಕೆ ಆವರ ಉತ್ತೇಜನವು ಎರಡನೆಯ ಮತ್ತು ಮೂರನೆ ಮಂತ್ರಗಳಲ್ಲಿವೆ. ಅವು ಹೇಳುತ್ತವೆ:

ಈ ಬಾಳುವೆ ಅಲ್ಪಕಾಲಿಕವಾದುದು, ಲೋಕದ ಕೀರ್ತಿ ಪ್ರತಿಷ್ಠೆಗಳೆಲ್ಲ ಕ್ಷಣಿಕವಾದುವು. ಇತರರಿಗಾಗಿ ಬಾಳುವವರು ಮಾತ್ರವೇ ಬದುಕಿರುವಂಥವರು; ಉಳಿದವರು ಬದುಕಿರುವುದಕ್ಕಿಂತ ಹೆಚ್ಚಾಗಿ ಸತ್ತಿರುವುದೇ ನಿಜ.

ಬಡವರ ಗೋಳಿಗೆ ಯಾರ ಹೃದಯ ರಕ್ತ ಸುರಿಸುವುದೊ ಅವನನ್ನು ಮಹಾತ್ಮನೆಂದು ಕರೆಯುತ್ತೇನೆ. ಇಲ್ಲದೆ ಇದ್ದರೆ ಅವನು ದುರಾತ್ಮ… ಎಲ್ಲಿಯವರೆಗೂ ಉಪವಾಸದಲ್ಲಿ ಅಜ್ಞಾನದಲ್ಲಿ ಕೋಟ್ಯಾನುಕೋಟಿ ಭಾರತೀಯರು ನರಳುತ್ತಿರುವರೊ, ಅಲ್ಲಿಯವರೆವಿಗೂ ದೀನರ ದುಡಿತದಿಂದ ಕೃತವಿದ್ಯನಾದ, ಅವರ ಹಿತದ ಬಗೆ ಸ್ವಲ್ಪವೂ ಚಿಂತಿಸದೆ ಇರುವ ಪ್ರತಿಯೊಬ್ಬ ಭಾರತೀಯನೂ ಕುಲಘಾತಕನೆಂದು ಹೇಳುತ್ತೇನೆ.

ಈ ಮೂರು ಭಾಗಗಳನ್ನು ಪ್ರಾಥಮಿಕ ಘಟ್ಟದಿಂದ ವಿದ್ಯಾಲಯದ ಘಟ್ಟದವರೆಗಿನ ವಿದ್ಯಾರ್ಥಿಗಳು ಅಧ್ಯಾಪಕರು ಎಲ್ಲ ದೃಷ್ಟಿಕೋನದಿಂದಲೂ ಓದಿ ಚರ್ಚಿಸಿದರೆ ತುಂಬ ಒಳ್ಳೆಯದಾದೀತು. ಸ್ವಾಮಿ ವಿವೇಕಾನಂದರ ಮೇಲಿನ ಸೂತ್ರಗಳನ್ನು ಅನ್ವಯಿಸಿ ನೋಡಿದರೆ ಇಂದು ನಮ್ಮ ಶಿಕ್ಷಿತ ಜನವರ್ಗದಲ್ಲಿ ಲಕ್ಷಾಂತರ ದ್ರೋಹಿಗಳೂ ಲಕ್ಷಾಂತರ ಸತ್ತಜನರೂ ಇದ್ದಾರೆ. ಈ ವಿಷಯವನ್ನು ಓದಿ ಚರ್ಚೆ ಮಾಡಿದ ಪಕ್ಷದಲ್ಲಿ ನಮ್ಮ ವಿದ್ಯಾರ್ಥಿಗಳು ದೇಶದ್ರೋಹಿಗಳಾಗುವುದರ ಬದಲಿಗೆ ದೇಶಾಭಿಮಾನಿಗಳಾಗಿ, ಸತ್ತ ಜನವಾಗುವ ಬದಲಿಗೆ ಜೀವಂತ ಜನವಾಗುವ ಅಭಿಲಾಷೆಯಲ್ಲಿ ನಂಬಿಕೆಯಿಡುತ್ತಾರೆ. ನಮ್ಮ ರಾಷ್ಟ್ರ ರಾಜ್ಯ ಸಚಿವಾಲಯಗಳಲ್ಲಿ, ಬ್ಯಾಂಕುಗಳಲ್ಲಿ, ಜೀವವಿಮಾ ಸಂಸ್ಥೆಗಳು ಮೊದಲಾದುವುಗಳಲ್ಲಿ ಎಲ್ಲ ಕಡೆ ಅಂಥ ಸತ್ತ ಜನರನ್ನು ನಾವು ಕಾಣುತ್ತೇವೆ. ನಮ್ಮ ಬಹುತೇಕ ಸಿಬ್ಬಂದಿಗೆ ರಾಷ್ಟ್ರ ಅಥವಾ ಅದರ ಸಮಸ್ಯೆಗಳ ಬಗೆಗೆ ಕಾಳಜಿಯಿಲ್ಲ. ತಮ್ಮ ಸಂಬಳ ಮತ್ತು ಭತ್ಯೆಗಳ ಕಡೆಗೇ ಅವರ ಗಮನ. ಏನೂ ಕೆಲಸ ಮಾಡದೆ ತಿಂಗಳ ಸಂಬಳ ದೊರೆಯುವುದಾದರೆ ಇನ್ನೂ ಉತ್ತಮ ಎಂದು ಅವರು ಭಾವಿಸುತ್ತಾರೆ. ಶಾಲೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಂದ ಬರುತ್ತಿರುವ ‘ಶಿಕ್ಷಿತ ‘ ಜನರು ಇವರು! ಆ ಶಿಕ್ಷಣ ನಿಜವಾಗಿ ಅವರನ್ನು ಮಾನವ ಕೇಂದ್ರದವರನ್ನಾಗಿ ಮಾಡಿಲ್ಲ, ಅವರು ಅಲ್ಪ ವ್ಯಕ್ತಿತ್ವದಿಂದ ವಿಕಸಿತ ವ್ಯಕ್ತಿತ್ವಕ್ಕೆ ಬೆಳೆಯುವಂತೆ ಮಾಡಿಲ್ಲ. ಆವರು ಅಂತರಂಗದಲ್ಲಿ ಅಮುಕ್ತರು, ಆದರೆ ಹೊರಗೆ ಮುಕ್ತರಂತೆ ಕಾಣುತ್ತಾರೆ. ಏಕೆಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲವೆ? ಇದರ ಪರಿಣಾಮವಾಗಿ ನಮ್ಮ ತರುಣರಲ್ಲಿ ಬಹುಪಾಲಿನವರಿಗೆ ವೈಯಕ್ತಿಕ ಆಕಾಂಕ್ಷೆಯೊಂದೇ ಪ್ರಚೋದನೆಯಾಗಿದೆ ಮತ್ತು ಬೌದ್ಧಿಕ ಶಿಕ್ಷಣವನ್ನು ತಮ್ಮ ಆಕಾಂಕ್ಷೆಯ ಪೂರೈಕೆಯ ದಿಕ್ಕಿನಲ್ಲಿ ಹೇಗೆ ಬಳಸಬೇಕು ಎಂಬುದೇ ಅವರ ಕಾಳಜಿಯಾಗಿದೆಯೇ ಹೊರತು ರಾಷ್ಟ್ರಕ್ಕೆ ಸಂಬಂಧಿಸಿದಂತೆ ಅಥವಾ ಮಾತೃಭೂಮಿಯ ಲಕ್ಷಾಂತರ ದುರ್ಬಲ ಜನರಿಗೆ ಸಂಬಂಧಿಸಿದಂತೆ ಅವರಿಗೆ ಅಂಥ ಯಾವ ಆಕಾಂಕ್ಷೆಯೂ ಇಲ್ಲ.

ನಮ್ಮ ರಾಷ್ಟ್ರಕ್ಕೆ ಸೆಡ್ಡು ಹೊಡೆದು ನಿಂತಿರುವ ಸವಾಲುಗಳನ್ನು ಎದುರಿಸಲು ನಮ್ಮ ಈಗಿನ ಶಿಕ್ಷಣವು ತೀರ ಅಸಂಬದ್ಧವಾಗಿದೆ ಎಂಬುದು ಇದರಿಂದ ತಿಳಿಯುತ್ತದೆ. ಪ್ರತಿ ವರ್ಷವೂ ತಂಡೋಪ ತಂಡವಾಗಿ ಇಂತಹ ‘ಶಿಕ್ಷಿತ’ಜನಾಂಗ ನಮ್ಮ ವಿಶ್ವವಿದ್ಯಾಲಯಗಳಿಂದ ಹೊರಬೀಳುತ್ತಿರುವುದರಿಂದ ರಾಷ್ಟ್ರೀಯ ಪುನಶ್ಚೇತನ ಸಾಧ್ಯವಾಗಿಲ್ಲ. ಹೀಗಾಗಿ ನಮ್ಮ ಶಿಕ್ಷಿತ ಜನಾಂಗ ಹಾಗೂ ಶಿಕ್ಷಣ ಎರಡೂ ನಮ್ಮ ದೇಶದ ಗಂಭೀರ ಹೊರೆಯೂ ಸಮಸ್ಯೆಯೂ ಆಗಿವೆ. ಎಲ್ಲ ಬಗೆಯ ದುಷ್ಟತನ, ಕೆಡುಕು, ಭ್ರಷ್ಟಾಚಾರ, ಲಂಚಗುಳಿತನ, ಕಳ್ಳ ಸಾಗಾಣಿಕೆ ಮುಂತಾದ ದುಷ್ಟ ಸಾಮಾಜಿಕ ಕೇಡುಗಳು ಮತ್ತು ದುರಾಚಾರಗಳು ನಮ್ಮ ಶಿಕ್ಷಿತ ಜನರಿಂದಲೇ ಹೊಮ್ಮಿವೆ. ನಮ್ಮ ಶಿಕ್ಷಣ ಓದು ಬರಹ ಮತ್ತು ವಿಚಾರ ಸಂಗ್ರಹಗಳಲ್ಲಿ ಕೆಲವೊಂದು ತಾಂತ್ರಿಕ ಪರಿಣತಿಯಲ್ಲಿ ತರಬೇತು ನೀಡಿದರೂ ಒಂದು ಜನಾಂಗವಾಗಿ ಬಾಳಲು ಬೇಕಾದ, ಮಾನವೀಯ ಸಂಸ್ಕಾರಗಳನ್ನು ಯುವಕರಿಗೆ ಕೊಡಲು ಏಕೆ ಸಮರ್ಥವಾಗಿಲ್ಲ? ತನ್ನ ಮಾನವ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಸಮಾಜದ ಪ್ರಗತಿಗೆ ಒಂದು ಸ್ವತಂತ್ರ ರಾಷ್ಟ್ರವು ಶಿಕ್ಷಣವನ್ನು ನೆಮ್ಮಿ ನಿಲ್ಲುತ್ತದೆ. ಆದರೆ ನಮ್ಮ ಶಿಕ್ಷಣಕ್ಕೆ ಅಂಥ ಸಮಾಜದ ಸಮಸ್ಯೆಗಳನ್ನು ಪರಿಹರಿಸುವ ಯೋಗ್ಯತೆಯಿಲ್ಲ, ಅಷ್ಟೇ ಅಲ್ಲ ಆ ಶಿಕ್ಷಣವೇ ಒಂದು ಅಪರಿಹಾರ್ಯ ಸಮಸ್ಯೆಯಾಗಿ ಕುಳಿತಿದೆ!

ಜಗತ್ತಿನಲ್ಲಿ ಜ್ಞಾನವು ಮೊಟ್ಟಮೊದಲು ಉದಿಸಿದ್ದು ಈ ಪುರಾತನ ಭೂಮಿಯಲ್ಲಿಯೇ. ಋಷಿಗಳ, ಮಹಾಮುನಿಗಳ ಪಾದಧೂಳಿ ಸೋಂಕಿದ ಪವಿತ್ರಭೂಮಿ ಇದು. ಮಾನವನ ಸ್ವರೂಪ ಮತ್ತು ಅಂತರ್ಜಗತ್ತನ್ನು ಕುರಿತು ಜಿಜ್ಞಾಸೆ ಮೊದಲಾದುದು ಇಲ್ಲಿ. ಆ ಗತವೈಭವದ ಅರಿವಿನಿಂದ ಮತ್ತು ಅದರ ಮೇಲಿನ ಶ್ರದ್ದೆಯಿಂದ ಹಿಂದಿಗಿಂತಲೂ ಹೆಚ್ಚು ವೈಭವಯುತವಾದ ಭರತಖಂಡವನ್ನು ನಿರ್ಮಿಸಬೇಕು.
– ಸ್ವಾಮಿ ವಿವೇಕಾನಂದ

ನಮಗೆ ಸ್ವಾತಂತ್ರ್ಯ ಬಂದು ಐವತ್ತು ವರ್ಷಗಳು ಕಳೆದುವು! ಸ್ವಾತಂತ್ರ್ಯ ಬರುವುದಕ್ಕಿಂತ ಮೊದಲು ನಾವು ಕಟ್ಟಿಕೊಂಡಿದ್ದ ಕನಸುಗಳು ನುಚ್ಚುನೂರಾಗಿ ಹೋದವು. ನಾವು ಬಯಸಿದ್ದ ಸ್ವಾತಂತ್ರ್ಯ ಕಾಮಧೇನುವಾಗಲಿಲ್ಲ. ರಾಷ್ಟ್ರ ನಿರ್ಮಿತಿಗೆ ಅತಿ ಅಗತ್ಯವಾದ ದುಡಿಮೆ, ಪ್ರಾಮಾಣಿಕತೆ, ಸತ್ಯವಂತಿಕೆಗಳಿಂದ
ದೂರಾದೆವು. ಇತರೆ ಚಿಕ್ಕ ದೇಶಗಳು ಇನ್ನೂ ಅಲ್ಪಕಾಲದಲ್ಲಿ ಸಾಧಿಸಿರುವ ಪ್ರಗತಿ, ಅಭಿವೃದ್ದಿಗಳು ನಮ್ಮನ್ನು ನಾಚಿಸುವಂತಿವೆ. ಒಂದು ಜನಾಂಗವಾಗಿ ಬಾಳಲು ಬೇಕಾದ ಸಂಸ್ಕಾರಗಳನ್ನು ಕೊಡುವುದರಲ್ಲಿ ನಮ್ಮ ಶಿಕ್ಷಣ ಪದ್ಧತಿ ಸಂಪೂರ್ಣವಾಗಿ ಸೋತಿರುವುದೇ ಇದಕ್ಕೆಲ್ಲ ಮೂಲ ಕಾರಣ. ಯಾವ ದೇಶ ದುಡಿಯುವ ದೇಶವಾಗಿರುತ್ತದೊ, ಯಾವ ಜನಾಂಗ ಪ್ರಾಮಾಣಿಕ ಜನಾಂಗವಾಗಿರುತ್ತದೋ, ಆ ದೇಶ, ಜನಾಂಗ, ಯಾವಾಗಲೂ ಸಂಪದ್ಯುಕ್ತವಾಗಿರುತ್ತದೆ, ಸ್ವಾತಂತ್ರ್ಯದ ನೆನಪುಮಾಡಿಕೊಳ್ಳಲು ಅರ್ಹವಾಗಿರುತ್ತದೆ.

ನಮ್ಮ ಶಿಕ್ಷಣಕ್ಕೆ ನಮ್ಮ ರಾಷ್ಟ್ರೀಯ ವಿವೇಕದ ಪರಂಪರೆಯಿಂದ ಸ್ಫೂರ್ತಿ ತುಂಬಿ ರಾಷ್ಟ್ರೀಯ ಸಂಕಲ್ಪ ಮತ್ತು ಆಶಯಗಳ ನೆಲೆಯಲ್ಲಿ ಅದನ್ನು ರಾಷ್ಟ್ರೀಯ ಶಿಕ್ಷಣವಾಗಿ ಪರಿವರ್ತಿಸಬೇಕಾಗಿದೆ. ಅದನ್ನು ರಾಷ್ಟ್ರೀಯ ಆಶಯಗಳಿಗೆ ಹೊಂದಿಸುವ ಮಾರ್ಗಗಳ ವಿಷಯವಾಗಿ ಅನೇಕ ತಂಡಗಳಿಂದ ಮತ್ತು ಸಮಿತಿಗಳಿಂದ ವ್ಯಾಪಕವಾದ ಶೋಧನೆಯನ್ನು ಪರಿಣಾಮಕಾರಿಯಾಗಿ ನಡೆಸಬೇಕಾಗಿದೆ.

ಈ ಮಹಾ ಭಾವನೆಗೆ ಇಡೀ ಭಾರತವೇ ಇಂದು ಸ್ಪಂದಿಸಬೇಕಾಗಿದೆ. ನಮ್ಮ ಲಕ್ಷೋಪಲಕ್ಷ ಜನರಿಗೆ ಬಾಳುವೆಯ ಮತ್ತು ಸ್ವಾತಂತ್ರ್ಯದ ದಿವ್ಯಜ್ಯೋತಿಯನ್ನು ತಂದು ಕೊಡುವಂಥ ಆಂದೋಳನಗಳು ನಮ್ಮ ನಾಡಿಗೆ ಇಂದು ತುಂಬ ಬೇಕಾಗಿವೆ. ಬಡವರಿಗೆ ಮತ್ತು ದಮನಕ್ಕೊಳಗಾಗಿರುವಂಥವರಿಗೆ ಸುಖ ಸಂತೋಷಗಳನ್ನು, ಹರ್ಷೋಲ್ಲಾಸಗಳನ್ನು, ಆಶೆ-ಭರವಸೆಗಳನ್ನು ತಂದುಕೊಡುವ ಸಲುವಾಗಿ ಬಾಳುವಂಥ ಹಾಗೂ ದುಡಿಯುವಂಥ ಗಂಡಸರು ಮತ್ತು ಹೆಂಗಸರು ನಮಗಿಂದು ಬೇಕಾಗಿದ್ದಾರೆ. ಬುದ್ಧಿವಂತರೂ, ಸುಶಿಕ್ಷಿತರೂ, ಚೈತನ್ಯಶೀಲರೂ, ಮಾನವೀಯ ಉತ್ಥಾನದ ಮಹಾಕಾರ್ಯದ ಅತ್ಯಂತ ಉದಾತ್ತ ಪ್ರೇರಣೆಗಳಿಂದ ಪ್ರಚೋದಿತರಾಗಿರುವಂಥವರೂ ಆದ ತರುಣ-ತರುಣಿಯರನ್ನು ನಮ್ಮ ನಾಡು ಸೃಷ್ಟಿಸಲಾರದೆ ?