[ಸ್ವಾಮಿ ವಿವೇಕಾನಂದರು ೧೯೦೨ರ ಜುಲೈ ೪ ರಂದು ಮಹಾಸಮಾಧಿ ಹೊಂದಿದರು. ಆ ದಿನದ ಮತ್ತು ಹಿಂದಿನ ದಿನಗಳ ವಿವರಗಳನ್ನು ಮೂರು ವರ್ಷಗಳ ಹಿಂದೆ ಇದೇ ಪತ್ರಿಕೆಯಲ್ಲಿ “ದಿವ್ಯ ಚೇತನದ ಮಹಾಸಮಾಧಿ” ಎಂಬ ಲೇಖನದಲ್ಲಿ ನೀಡಲಾಗಿತ್ತು (ವಿವೇಕಪ್ರಭ, ಜುಲೈ ೨೦೦೧, ಪು. ೧೯-೨೦). ಸ್ವಾಮಿ ವಿವೇಕಾನಂದರ ಮಹಾಸಮಾಧಿಯ ನಂತರದ ವಿವರಗಳನ್ನು ಬಹಳ ಸ್ಪಷ್ಟವಾಗಿ ನೀಡುವ ಈ ಲೇಖನವು ಪ್ರತ್ಯಕ್ಷದರ್ಶಿಯದು. ಬಂಗಾಳಿಯಲ್ಲಿದ್ದ ಮೂಲ ಲೇಖನವನ್ನು ಇಂಗ್ಲಿಷಿಗೆ ಅನುವಾದ ಮಾಡಿದವರು ಅಮೆರಿಕದಲ್ಲಿರುವ ಸ್ವಾಮಿ ಚೇತನಾನಂದರು. ಇದನ್ನು ೨೦೦೩ರ ಜುಲೈ ತಿಂಗಳ ಇಂಗ್ಲಿಷ್ ಮಾಸಪತ್ರಿಕೆ ‘ಪ್ರಬುದ್ಧ ಭಾರತ’ ಪ್ರಕಟಿಸಿತ್ತು. ಅದರ ಕನ್ನಡ ಅನುವಾದವನ್ನು ಬೆಳಗಾವಿಯ ರಾಮಕೃಷ್ಣ ಮಿಷನ್ನಿನ ಅಧ್ಯಕ್ಷರಾದ ಸ್ವಾಮಿ ರಾಘವೇಶಾನಂದರು ಹಾಗೂ ಶಿವಮೊಗ್ಗದ ಶ್ರೀ ಎನ್. ಗೋಪೀನಾಥ್ ಇಬ್ಬರೂ ಮಾಡಿಕೊಟ್ಟಿರುತ್ತಾರೆ.]

೧೯೦೨ ಜುಲೈ ೪, ಒಂದು ಚಿರಸ್ಮರಣೀಯ ದಿನ. ಭಾರತ ದೇಶದ ಮಹಾನ್ ಸಂತ ಸ್ವಾಮಿ ವಿವೇಕಾನಂದರು ರಾತ್ರಿ ೯.೦೦ ಘಂಟೆಗೆ ಧ್ಯಾನಾವಸ್ಥೆಯಲ್ಲಿ ತಮ್ಮ ದೇಹವನ್ನು ತ್ಯಾಗ ಮಾಡಿದ ದಿನ. ಆಧ್ಯಾತ್ಮಿಕ ಜಗತ್ತನ್ನು ಬೆಳಗಿದ ಅವರ ಜೀವನ ಜ್ಯೋತಿ ಹಠಾತ್ತನೆ ನಿಶೆಯ ಘೋರ ಅಂಧಕಾರದಲ್ಲಿ ನಂದಿ ಹೋಯಿತು. ಮಾರನೆಯ ದಿನ ಬೆಳಿಗ್ಗೆ ಈ ದುಃಖವಾರ್ತೆ ಕೊಲ್ಕತಾ ನಗರ ಹಾಗೂ ಭಾರತದಾದ್ಯಂತ ಹಬ್ಬಿತು. ಸ್ವಾಮಿ ವಿವೇಕಾನಂದರ ನೇರ ಶಿಷ್ಯ ಕನಾಯ್ ಮಹಾರಾಜ್ (ಸ್ವಾಮಿ ನಿರ್ಭಯಾನಂದರು) ಅಹಿರಿತೋಲಾದಲ್ಲಿರುವ ನನ್ನ ಮನೆಗೆ ಬಂದು ಸುದ್ದಿ ತಿಳಿಸಿದರು. ನಾನು ಆಗ ಬಳಿಯಲ್ಲಿರುವ ದೇವಸ್ಥಾನದಲ್ಲಿ ಪೂಜೆಯಲ್ಲಿ ನಿರತನಾಗಿದ್ದೆ. ಸುಮಾರು ೯ ಘಂಟೆಗೆ ಹಿಂದಿರುಗಿದಾಗ ನನ್ನ ತಾಯಿ ಜೋರಾಗಿ ಅಳುತ್ತಿದ್ದರು. ಅಳುವಿಗೆ ಕಾರಣವನ್ನು ಕೇಳಿದಾಗ ಹೇಳಿದಳು, “ಮಗೂ, ಒಂದು ದೊಡ್ಡ ದುರ್ಘಟನೆ ನಡೆದಿದೆ. ಸ್ವಾಮಿಜಿ ಇನ್ನಿಲ್ಲ. ಅವರು ದೇಹ ಬಿಟ್ಟಿದ್ದಾರೆ. ಅವರ ದರ್ಶನಕ್ಕಾಗಿ ನನ್ನನ್ನು ನೀನು ಎಂದೂ ಕರೆದೊಯ್ಯಲಿಲ್ಲ”. ನಾನು ಹೇಳಿದೆ, “ಅಮ್ಮಾ, ಮಠದ ಎಲ್ಲಾ ಸನ್ಯಾಸಿಗಳನ್ನೂ ಸ್ವಾಮಿಜಿ ಎಂದೇ ಸಂಬೋಧಿಸುತ್ತಾರೆ. ಯಾವ ಸ್ವಾಮಿಜಿಯವರನ್ನು ಕುರಿತು ನೀನು ಹೇಳುತ್ತಿರುವೆ? ಬಹುಶಃ ನೀನು ತಪ್ಪು ತಿಳಿದುಕೊಂಡಿರುವೆ.” ಅದಕ್ಕೆ ತಾಯಿ ಹೇಳಿದಳು, “ಇಲ್ಲ, ಇಲ್ಲ, ಕನಾಯ್ ಇಂದು ಬೆಳಿಗ್ಗೆಯೇ ಬಂದು ಹಿರಿಯ ಸ್ವಾಮಿಜಿ ನೆನ್ನೆ ರಾತ್ರಿ ೯.೦೦ ಘಂಟೆಗೆ ತೀರಿಹೋದರೆಂದು ಹೇಳಿದ. ನೀವೆಲ್ಲ ಬೇಲೂರು ಮಠಕ್ಕೆ ಹೋಗಬೇಕೆಂದ”, ನಾನು ನನ್ನ ತಾಯಿಯನ್ನು ಸಮಾಧಾನಪಡಿಸುತ್ತ ಹೇಳಿದೆ, “ಒಬ್ಬ ಸನ್ಯಾಸಿಯ ಸಾವಿಗೆ ದುಃಖ ವ್ಯಕ್ತಪಡಿಸುವುದು ಒಳ್ಳೆಯದಲ್ಲ”.

ಮಹಾಸಮಾಧಿಯಲ್ಲಿ ಸ್ವಾಮಿ ವಿವೇಕಾನಂದರು

ಆ ಸಮಯಕ್ಕೆ ಸರಿಯಾಗಿ ಶ್ರೀಮಾತೆ ಶಾರದಾದೇವಿಯವರ ಶಿಷ್ಯನಾದ ನನ್ನ ಸ್ನೇಹಿತ ನಿವಾರಣ್ ಬಂದ. ಅಂದು ನಾನು ಕೆಲಸಕ್ಕೆ ಹೋಗುವುದಿಲ್ಲವೆಂದು ತೀರ್ಮಾನಿಸಿದೆ. ನನ್ನ ತಮ್ಮ ದುಲಾಲ್‌ಶಶಿ ಹಾಗೂ ನಿವಾರಣ್ ರೊಡನೆ ಅಹಿರಿ ತೋಲಾ ಘಟ್ಟದಿಂದ ಒಂದು ದೋಣಿ ಹಿಡಿದು ಗಂಗೆಯನ್ನು ದಾಟಿ ೧೦.೦೦ ಘಂಟೆ ಸುಮಾರಿಗೆ ಸಾಲ್ಕಿಯ ಹಾಗೂ ಘುಸುಡಿಯ ಮೂಲಕ ಬೇಲೂರು ಮಠ ತಲುಪಿದೆವು. ಸಣ್ಣದಾಗಿ ಮಳೆ ಹನಿಯುತ್ತಿತ್ತು. ಮಠದ ಪಶ್ಚಿಮ ವರಾಂಡದಲ್ಲಿ ರಾಖಾಲ್ ಮಹಾರಾಜ್ (ಸ್ವಾಮಿ ಬ್ರಹ್ಮಾನಂದರು) ಹಾಗೂ ಇನ್ನೂ ಕೆಲವು ಸನ್ಯಾಸಿಗಳು ಒಂದು ಮಂಚವನ್ನು ಹೂವಿನಿಂದ ಅಲಂಕರಿಸುತ್ತಿದ್ದುದನ್ನು ನೋಡಿದೆ. ನನ್ನನ್ನು ನೋಡಿದಾಕ್ಷಣ ರಾಖಾಲ್ ಮಹಾರಾಜರಿಗೆ ದುಃಖ ಉಮ್ಮಳಿಸಿ ಬಂದು ಅಳಲಾರಂಭಿಸಿದರು. ಕಂಠ ಬಿಗಿದುಬಂದು ಮಾತನಾಡಲಾಗದೆ, ಮೆಟ್ಟಿಲುಗಳತ್ತ ಕೈತೋರಿಸಿ ಮೇಲೆ ಹೋಗಲು ಸಂಜ್ಞೆ ಮಾಡಿದರು.

ಸ್ವಾಮಿ ವಿವೇಕಾನಂದರ ಕೊಠಡಿಯನ್ನು ಪ್ರವೇಶಿಸಿದಾಗ ಅವರ ದಿವ್ಯ ಶರೀರವನ್ನು ಒಂದು ಜಮಖಾನದ ಮೇಲೆ ಮಲಗಿಸಿದ್ದರು. ಹಣೆಗೆ ವಿಭೂತಿ ಲೇಪಿಸಿ ತಲೆಯ ಬಳಿ ಒಂದು ಪುಷ್ಪಗುಚ್ಛ ಇಡಲಾಗಿತ್ತು. ಅವರ ದೇಹಕ್ಕೆ ಒಂದು ಹೊಸ ಕಾವಿ ಬಟ್ಟೆಯನ್ನು ಹೊದಿಸಿದ್ದರು. ಅವರ ಬಲಗೈ ನೆಲದ ಮೇಲಿತ್ತು. ಬಲ ಹೆಬ್ಬೆರಳು ರುದ್ರಾಕ್ಷಿ ಮಾಲೆಯನ್ನು ಹಿಡಿದಿತ್ತು. ಧ್ಯಾನದಲ್ಲಿರುವ ಶಿವನಂತೆ ಅವರ ಕಣ್ಣುಗಳು ಅರ್ಧನಿಮೀಲಿತವಾಗಿದ್ದವು. ದೇಹದ ಎರಡೂ ಪಕ್ಕಗಳಲ್ಲಿ ಗಂಧದಕಡ್ಡಿಗಳು ಉರಿಯುತ್ತಿದ್ದುದರಿಂದ ಇಡೀ ಕೊಠಡಿಯು ಕಂಪಿನಿಂದ ತುಂಬಿತ್ತು. ಅವರ ದೇಹದ ಎಡಪಕ್ಕದಲ್ಲಿ ಕುಳಿತಿದ್ದ ಸೋದರಿ ನಿವೇದಿತಾ ತಾಳೆ ಎಲೆಯ ಬೀಸಣಿಗೆಯಿಂದ ಅವರ ತಲೆಯತ್ತ ನಿರಂತರವಾಗಿ ಗಾಳಿ ಬೀಸುತ್ತಿದಳು. ಅವಳ ಕಣ್ಣುಗಳಿಂದ ಕಣ್ಣೀರು ಸುರಿಯುತ್ತಿತ್ತು. ಸ್ವಾಮಿಜಿಯ ಶಿರವನ್ನು ಪಶ್ಚಿಮ ದಿಕ್ಕಿಗೆ, ಪಾದಗಳನ್ನು ಗಂಗಾನದಿಯ ಕಡೆಗೆ, ಅಂದರೆ ಪೂರ್ವಾಭಿಮುಖವಾಗಿ ಇಟ್ಟಿದ್ದರು. ಶೋಕಗ್ರಸ್ತನಾದ ಬ್ರಹ್ಮಚಾರಿ ನಂದಲಾಲ್ ಅವರ ಪಾದಗಳ ಬಳಿ ಮೌನವಾಗಿ ಕುಳಿತಿದ್ದ. ನಾವು ಮೂವರೂ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿ ಅಲ್ಲೇ ಕುಳಿತೆವು. ನಾನು ಅವರ ಪಾದಗಳನ್ನು ಮುಟ್ಟಿದಾಗ ಅವು ಮಂಜುಗಡ್ಡೆಯಂತೆ ತಣ್ಣಗಿದ್ದವು.

ನಂತರ ನಾನು ಸ್ವಾಮಿಜಿಯ ಕೈಯಲ್ಲಿದ್ದ ಜಪಮಾಲೆಯನ್ನು ಮುಟ್ಟಿ, ನನ್ನ ಗುರು ಕೊಟ್ಟಿದ್ದ ಮಂತ್ರವನ್ನು ಜಪಿಸಲಾರಂಭಿಸಿದೆ. ಆ ವೇಳೆಗೆ ಕೋಲ್ಕತಾ ನಗರದ ಪ್ರತಿಷ್ಠಿತ ವ್ಯಕ್ತಿಗಳು, ಭಕ್ತರು, ಸ್ವಾಮಿಜಿಯ ಅಂತಿಮ ದರ್ಶನಕ್ಕಾಗಿ ಬರಲಾರಂಭಿಸಿದರು. ಪ್ರತಿಯೊಬ್ಬರೂ ನಮಸ್ಕಾರ ಮಾಡಿ ಕೊಠಡಿಯಿಂದ ಹೊರಹೋಗುತ್ತಿದ್ದರು. ಆದರೆ ನಾವು ಮೂರು ಜನ, ಬ್ರಹ್ಮಚಾರಿ ನಂದಲಾಲ್ ಮತ್ತು ಸೋದರಿ ನಿವೇದಿತಾ ಅಲ್ಲೇ ಕುಳಿತಿದ್ದೆವು. ನಾನು ಜಪವನ್ನು ಮಾಡಿದ ಮೇಲೆ ಸೋದರಿ ನಿವೇದಿತಾ ನನ್ನ ಬಳಿ ಬಂದು ಮೆಲುದನಿಯಲ್ಲಿ ಕೇಳಿದಳು. ”ನೀನು ಹಾಡಬಲ್ಲೆಯಾ? ನಮ್ಮ ಶ್ರೀರಾಮಕೃಷ್ಣರು ಹಾಡುತ್ತಿದ್ದ ಹಾಡುಗಳನ್ನು ಹಾಡಬಲ್ಲೆಯಾ?” ನನಗೆ ಹಾಡಲು ಬರುವುದಿಲ್ಲವೆಂದು ತಿಳಿಸಿದೆ. “ನನ್ನ ಪರವಾಗಿ ನಿನ್ನ ಸ್ನೇಹಿತನನ್ನು ಹಾಡಲು ಕೇಳಿಕೊಳ್ಳುವೆಯಾ?” ಎಂದಳು.

ನಿವಾರಣ್ ಕೆಲವು ಹಾಡುಗಳನ್ನು ತನ್ನ ಮಧುರ ಕಂಠದಿಂದ ಹಾಡಿದ. (ಅವನು ಹಾಡಿದ ಬಂಗಾಳಿ ಹಾಡುಗಳ ಕನ್ನಡ ರೂಪಾಂತರಗಳನ್ನು ನೀಡಿದ್ದೇವೆ): “ಅಂತರಂಗದಲಿ – ಶ್ರೀಘನಶ್ಯಾಮೆಯ ಆದರಿಸೆಲೆ ಮನವೆ….” “ಏತಕೆ, ಇನ್ನೇತಕೆ? ಕಾಶೀ ಕಾಂಚಿಯೊ, ಗಯೆಯೊ ಗಂಗೆಯೊ..” “ಕಾಲರೂಪೆ ದಿಗಂಬರೀ, ಹೃದಯಪದ್ಮ ಭಾಸ್ಕರೀ, ನಿಜವಾಗಿಯೂ ಕಪಾಗಿಹಳೆ ನನ್ನ ತಾಯಿ ಕಾಳಿ?” “ಸಾಗುತಿಹುದು ಚಿತ್ತಭೃಂಗ, ಕಾಳೀಪಾದ, ನೀಲಕಮಲ ಮಧುಪಾನದ ಆಸೆಗೆ!” “ಕಾಳೀ ನಾಮವ ಜಪಿಸು, ಓ ನನ್ನ ಮನವೇ! ಕಾಳೀ ಕಾಳೀ ಎಂದು ನೀ ಜಪಿಸಿದೊಡೆ ಕಾಲನ ಭಯವು ನೀಗುವುದು ಕೂಡಲೆ…”

ನಿವೇದಿತಾಳ ಪ್ರತಿಕ್ರಿಯೆ

ನಿವೇದಿತಾ ಪೂರ್ಣ ಗಮನ ಕೊಟ್ಟು ಹಾಡುಗಳನ್ನೆಲ್ಲ ಕೇಳಿದಳು. ಅವಳ ಅಂತರಾಳದಲ್ಲಿ ಒತ್ತಿ ಹಿಡಿದಿದ್ದ ಭಾವನೆಗಳು ಉಕ್ಕಿ ಕಣ್ಣೀರಾಗಿ ಹರಿಯಲಾರಂಭಿಸಿದವು. ಇದು ಎಂದಿಗೂ ಮರೆಯಲಾರದ ದುಃಖದ ದೃಶ್ಯವಾಗಿತ್ತು. ನಲವತ್ತೈದು ವರ್ಷಗಳು ಕಳೆದಿದ್ದರೂ ಇನ್ನೂ ನನ್ನ ಮನದಲ್ಲಿ ಆ ಘಟನೆ ಚಿನ್ನದ ಅಕ್ಷರಗಳಲ್ಲಿ ಬರೆದಂತಿದೆ. ಅಂದು ನಿವೇದಿತಾ ಎಷ್ಟು ನೊಂದಿದ್ದಳು, ತನ್ನ ಸರ್ವಸ್ವವನ್ನೂ ಕಳೆದುಕೊಂಡು ಘಾಸಿಗೊಂಡ ಹೃದಯದ ಭಾವನೆ ಅವಳ ಮುಖದಲ್ಲಿ ಎದ್ದು ಕಾಣುತ್ತಿತ್ತು. ನನ್ನ ಅಂತರಂಗವನ್ನೇ ಅದು ಕಲಕಿತು. ಅವಳ ಪ್ರತಿಕ್ರಿಯೆ ಬರಿಯ ಉದ್ವೇಗದ್ದಾಗಿರಲಿಲ್ಲ. ತ್ಯಾಗವತಳೂ, ಸಹನ ಶೀಲೆಯೂ, ಸುಶಿಕ್ಷಿತಳೂ ಆದ ಆ ವಿದೇಶಿ ಮಹಿಳೆಯೆಲ್ಲಿ, ಅಲ್ಪವಿದ್ಯೆಯಿಂದಲೇ ವೈರಾಗ್ಯದ ಲೇಶವೂ ಇಲ್ಲದ ಒಣಹೆಮ್ಮೆಯಿಂದ ಬೀಗುತ್ತಿರುವ ನಾವುಗಳೆಲ್ಲಿ?

ಅಂತ್ಯಕ್ರಿಯೆ

ಮಧ್ಯಾಹ್ನ ಸುಮಾರು ೧ ಘಂಟೆಗೆ ಸ್ವಾಮಿ ಶಾರದಾನಂದರು ಮೇಲೆ ಬಂದು ಬ್ರಹ್ಮಚಾರಿ ನಂದಲಾಲ್ ಹಾಗೂ ನಮಗೆ ಹೇಳಿದರು, “ನೋಡಿ, ಸ್ವಾಮಿಜಿಯವರ ಅಗಲುವಿಕೆಯಿಂದ ನಮ್ಮ ಹೃದಯ ಛಿದ್ರ ಛಿದ್ರವಾಗಿ ಬಿಟ್ಟಿದೆ. ನಾವು ನಮ್ಮೆಲ್ಲಾ ಶಕ್ತಿಯನ್ನೂ ಕಳೆದುಕೊಂಡಿದ್ದೇವೆ. ನೀವು ಸ್ವಾಮಿಜಿಯ ದೇಹವನ್ನು ಕೆಳಗೆ ಹೊತ್ತು ತರಬಲ್ಲಿರಾ?” ತಕ್ಷಣ ಬ್ರಹ್ಮಚಾರಿ ನಂದಲಾಲ್ ಮತ್ತು ನಾವು ಮೂವರು ಭಕ್ತರು ನಿಧಾನವಾಗಿ ಜಾಗರೂಕತೆಯಿಂದ ಸ್ವಾಮಿಜಿಯ ದೇಹವನ್ನು ಕೆಳಗಿನ ವರಾಂಡದಲ್ಲಿ ಹೂವುಗಳಿಂದ ಅಲಂಕರಿಸಿದ್ದ

ಮಂಚದ ಮೇಲಿಟ್ಟು ಸಂಪ್ರದಾಯದಂತೆ ಕೆಲವು ದಾಳಿಂಬೆ, ಸೇಬು, ಮರಸೇಬು ಹಾಗೂ ದ್ರಾಕ್ಷಿ ಹಣ್ಣುಗಳನ್ನು ಅರ್ಪಿಸಿದೆವು. ಸ್ವಾಮಿ ಅದ್ವೈತಾನಂದರು ಬ್ರಹ್ಮಚಾರಿಗೆ ಹೇಳಿದರು, `ನಂದಲಾಲ್, ಸ್ವಾಮೀಜಿ ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಅವರ ಅಂತಿಮ ಪೂಜೆಯನ್ನು ನೀನೇ ನೆರವೇರಿಸು!” ಸ್ವಾಮಿ ಬ್ರಹ್ಮಾನಂದರು ಮತ್ತು ಇತರ ಸನ್ಯಾಸಿಗಳೂ ಇದನ್ನು ಅನುಮೋದಿಸಿದಾಗ ನಂದಲಾಲ್ ಹೂವು, ಹಣ್ಣು, ಸಿಹಿ ತಿಂಡಿಗಳನ್ನು ಅರ್ಪಿಸಿ ನಂತರ ಸ್ತೋತ್ರ ಹೇಳುತ್ತ ಸ್ವಾಮಿಜಿಗೆ ಆರತಿ ಎತ್ತಿದರು.

ಸ್ವಾಮಿಜಿಯ ಅಂತಿಮ ಚಿತ್ರವನ್ನು ತೆಗೆದುಕೊಳ್ಳೋಣವೆಂದು ಕೆಲವರು ಸೂಚಿಸಿದರು. ಆದರೆ ಬ್ರಹ್ಮಾನಂದರು ಅದಕ್ಕೆ ಒಪ್ಪಿಗೆ ಕೊಡಲಿಲ್ಲ. ಅವರು ಹೇಳಿದರು, “ಸ್ವಾಮಿಜಿಯ ಹಲವಾರು ಒಳ್ಳೊಳ್ಳೆಯ ಭಾವಚಿತ್ರಗಳಿವೆ. ಈ ದುಃಖಪೂರಿತ ದೃಶ್ಯ ಎಲ್ಲರ ಹೃದಯವನ್ನು ಹಿಂಡುತ್ತದೆ. ನಂತರ ಸ್ವಾಮಿ ಬ್ರಹಾನಂದರು ಹಾಗೂ ಉಳಿದ ಸಾಧುಗಳು ಸ್ವಾಮಿಜಿಯ ಪಾದಕ್ಕೆ ಪುಷ್ಪಸಮರ್ಪಣೆಯ ಮೂಲಕ ತಮ್ಮ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಕೊನೆಯದಾಗಿ ಹರಮೋಹನ ಮಿತ್ರ (ಸ್ವಾಮಿಜಿಯ ಸಹಪಾಠಿ) ಮತ್ತು ಇತರ ಭಕ್ತರು ಸ್ವಾಮಿಜಿಯ ಪಾದಕ್ಕೆ ಹೂಗಳನ್ನು ಅರ್ಪಿಸಿದರು. ನಂತರ, ಸ್ವಾಮಿಜಿಯ ಪಾದಕ್ಕೆ ಅಲ್ತಾವನ್ನು (ಉತ್ತರ ಭಾರತದ ಸ್ತ್ರೀಯರು ಕಾಲಿಗೆ ಹಚ್ಚುವ ಕೆಂಪು ಬಣ್ಣ) ಹಚ್ಚಿ, ಅವರ ಶ್ರೀಪಾದದ ಗುರುತುಗಳನ್ನು ಚಿಕ್ಕ ಬಿಳಿಯ ಬಟ್ಟೆಗಳಲ್ಲಿ ತೆಗೆದುಕೊಳ್ಳಲಾಯಿತು. ನಿವೇದಿತಾ ಕೂಡ ಒಂದು ಹೊಸ ಕರವಸ್ತ್ರದಲ್ಲಿ ಶ್ರೀಪಾದಚಿಹ್ನೆಯನ್ನು ತೆಗೆದುಕೊಂಡಳು. ನಾನು ಅರ್ಧ ಅರಳಿದ್ದ ಒಂದು ಒಳ್ಳೆಯ ಗುಲಾಬಿ ಹೂವಿಗೆ ಗಂಧವನ್ನು ಹಚ್ಚಿ ಸ್ವಾಮಿಜಿಯ ಪಾದಕ್ಕೆ ಮುಟ್ಟಿಸಿ ನೆನಪಿನ ಸೂಚಕವಾಗಿ ಜೇಜಿನಲ್ಲಿಟ್ಟುಕೊಂಡೆ.

ಪ್ರಜಾವಿಧಿಗಳು ಮುಗಿದಮೇಲೆ ದಹನಕ್ರಿಯೆ ನಡೆಯಬೇಕಾದ ಸ್ಥಳಕ್ಕೆ, ಮಂಚವನ್ನು ಕೊಂಡೊಯ್ಯುವಂತೆ ನಾವು ನಾಲ್ವರಿಗೆ ಸ್ವಾಮಿ ಶಾರದಾನಂದರು ತಿಳಿಸಿದರು. ಎಲ್ಲಾ ಸನ್ಯಾಸಿಗಳು ಹಾಗೂ ಭಕ್ತರು ನಮ್ಮ ಹಿಂದೆ ಮೆರವಣಿಗೆಯಲ್ಲಿ ನಡೆದರು. ಮಧ್ಯಾಹ್ನಕ್ಕೆ ಮುಂಚೆ ಮಳೆ ಬಂದಿದ್ದರಿಂದ ನೆಲವೆಲ್ಲಾ ಒದ್ದೆಯಾಗಿ ಜಾರುತ್ತಿತ್ತು, ಅಲ್ಲದೆ ಆ ಜಾಗದಲ್ಲೆಲ್ಲಾ ಮುಳ್ಳಿನ ಹುಲ್ಲು ಬೆಳೆದಿತ್ತು. ನಾವು ನಿಧಾನವಾಗಿ ಹೆಜ್ಜೆ ಇಡುತ್ತಾ, ವಿಶಾಲವಾದ ಆ ಪ್ರದೇಶವನ್ನು ಎಚ್ಚರಿಕೆಯಿಂದ ದಾಟಿ ಗಂಧದ ಕಟ್ಟಿಗೆಗಳನ್ನು ಜೋಡಿಸಿದ್ದ ಚಿತೆಯ ಮೇಲೆ ಸ್ವಾಮಿಜಿಯ ಕಳೇಬರವನ್ನು ಇಟ್ಟೆವು. ಆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಸ್ವಾಮಿಜಿಯ ಚಿಕ್ಕಮ್ಮ ಹಾಗೂ ಚಿಕ್ಕಮ್ಮನ ಮಗ, ಹಬೂ ದತ್ತ ಕೊಲ್ಕತಾದ ಸಿಮ್ಲಾದಿಂದ ಕಾರಿನಲ್ಲಿ ಬಂದರು. ಅವರು ಒಂದೇ ಸಮನೆ ಜೋರಾಗಿ ಅಳಲಾರಂಭಿಸಿದರು.

ಸ್ವಾಮಿ ಶಾರದಾನಂದರು ಎಲ್ಲರಿಗೂ ಹೇಳಿದರು,“ಪ್ರತಿಯೊಬ್ಬರೂ ಒಂದು ಹಿಡಿ ಉರಿಯುತ್ತಿರುವ ಸೆಣಬಿನ ಕಡ್ಡಿಯನ್ನು ಕೈಯಲ್ಲಿ ಹಿಡಿದು ಏಳು ಬಾರಿ ಸ್ವಾಮಿಜಿಯ ದೇಹವನ್ನು ಪ್ರದಕ್ಷಿಣೆ ಮಾಡಿ, ಅವರ ಪಾದದ ಬಳಿ ಇಟ್ಟು ನಮಸ್ಕರಿಸಿ.” ನಂತರ ಅವರ ಆದೇಶದಂತೆ ಸ್ವಾಮಿಜಿಯ ದೇಹಕ್ಕೆ ಗಂಧದ ಕಟ್ಟಿಗೆಯ ಮೂಲಕ ಅಗ್ನಿಸ್ಪರ್ಶ ಮಾಡಲಾಯಿತು. ಉರಿಯುತ್ತಿದ್ದ ಆ ಅಗ್ನಿಯ ಮುಂದೆ ಶೋಕಗ್ರಸ್ತರಾದ ಸನ್ಯಾಸಿಗಳು ಹಾಗೂ ಭಕ್ತರು ಪ್ರತಿಮೆಗಳಂತೆ ಕುಳಿತಿದ್ದರು. ಗಿರೀಶ್ ಚಂದ್ರ ಘೋಷ್, ಬಸುಮತಿಯ ಉಪೇಂದ್ರನಾಥ್ ಮುಖ್ಯೋಪಾಧ್ಯಾಯ, ಜಲಧರ ಸೇನ್, ಮಹೇಂದ್ರ ನಾಥ ಗುಪ್ತ (ಮ), ಅಕ್ಷಯ ಕುಮಾರ ಸೇನ್ ಮುಂತಾದವರು ಹತ್ತಿರದಲ್ಲಿದ್ದ ಬಿಲ್ವವೃಕ್ಷದ ಕೆಳಗಿನ ಸಿಮೆಂಟಿನ ಕಟ್ಟೆಯ ಮೇಲೆ ಕುಳಿತು ಈ ಹೃದಯವಿದ್ರಾವಕ ದೃಶ್ಯವನ್ನು ನೋಡುತ್ತಿದ್ದರು.

ಭಗ್ನಹೃದಯದ ಗಿರೀಶ್‌ ಅಳುತ್ತಾ ಹೇಳಿದ, “ನರೇನ್, ನೀನು ಬದುಕುಳಿದು ಜನರಿಗೆ ನನ್ನ ಪರಿವರ್ತನೆಯ ವಿಚಾರದ ಮೂಲಕ ಶ್ರೀರಾಮಕೃಷ್ಣರ ಮಹಿಮೆಯ ಬಗ್ಗೆ ಹೇಳಬೇಕಿತ್ತು. ಆದರೆ ದುರ್ದೈವದಿಂದ ನನ್ನ ಈ ಹೆಬ್ಬಯಕೆ ನುಚ್ಚುನೂರಾಗಿದೆ. ನಾನೋ ಮುದುಕ (ಸ್ವಾಮಿಜಿಗಿಂತ ಗಿರೀಶ್ ಘೋಷ್ ೧೯ ವರ್ಷ ಹಿರಿಯರು). ಆದರೆ, ಈ ಘೋರ ದೃಶ್ಯವನ್ನು ನೋಡಲು ನಾನು ಬದುಕುಳಿದಿದ್ದೇನೆ. ನೀನು ನಮ್ಮ ಗುರುದೇವರ ಪುತ್ರ. ಈಗ ಅವರ ಬಳಿಗೆ ಹೊರಟುಹೋಗಿರುವೆ. ನೋಡು, ನೀನು ಇಷ್ಟು ಬೇಗನೆ ನಮ್ಮನ್ನು ಈ ದುರ್ದೆಶೆಯಲ್ಲಿ ಬಿಟ್ಟು ಹೊರಟುಹೋಗಿದ್ದೀಯೆ! ನಾವು ಎಂತಹ ನತದೃಷ್ಟರು!”

ಈಗ, ನಿವೇದಿತಾಳಿಗೆ ಇನ್ನು ತನ್ನ ದುಃಖವನ್ನು ತಡೆಯಲಾಗಲಿಲ್ಲ. ಅವಳು ಎದ್ದು ಉರಿಯುತ್ತಿದ್ದ ಚಿತೆಯ ಸುತ್ತ ಪ್ರದಕ್ಷಿಣೆ ಮಾಡಲಾರಂಭಿಸಿದಳು. ಅವಳು ಬಹಳ ಹತ್ತಿರ ಹೋಗುತ್ತಿರುವುದನ್ನು ನೋಡಿದ ಬ್ರಹ್ಮಾನಂದರಿಗೆ ಅವಳ ಬಟ್ಟೆಗೆ ಏನಾದರೂ ಬೆಂಕಿ ತಗುಲೀತು ಎಂದು ಗಾಬರಿಯಾಯಿತು. ಇದನ್ನು ಸ್ವಾಮಿ ನಿರ್ಭಯಾನಂದರ ಗಮನಕ್ಕೆ ತಂದರು. ಅವರು ತಕ್ಷಣ ನಿವೇದಿತಾಳ ಕೈ ಹಿಡಿದು ಚಿತೆಯಿಂದ ದೂರ ಕರೆದುಕೊಂಡು ಹೋದರು. ಗಂಗೆಯ ದಡದ ಮೇಲೆ ಕುಳ್ಳಿರಿಸಿ ಅವಳಿಗೆ ಸಮಾಧಾನ ಮಾಡಲು ಯತ್ನಿಸಿದರು.

ಜೋರಾಗಿ ಉರಿಯುತ್ತಿದ್ದ ಪವಿತ್ರವಾದ ಬೆಂಕಿ ಹಾಗೂ ಅನುಕೂಲಕರವಾಗಿ ಬೀಸುತ್ತಿದ್ಧ ಗಾಳಿಯು ಸ್ವಾಮಿಜಿಯ ದೇಹದ ಕೆಳಭಾಗವನ್ನು ಬಹುಬೇಗ ಭಸ್ಮ ಮಾಡಿದವು. ಆಶ್ಚರ್ಯವೆಂದರೆ ಆ ಬೆಂಕಿ ಅವರ ಎದೆ, ಮುಖ ಹಾಗೂ ತಲೆಯ ಕೂದಲಿನ ಭಾಗದತ್ತ ಸುಳಿಯಲಿಲ್ಲ. ಅವರ ಮುಖದ ಭಾವ ಹಾಗೂ ಅವರ ವಿಶಾಲ ಕಣ್ಣುಗಳ ನೋಟ ಅದ್ಭುತವಾಗಿದ್ದವು. ಅಲ್ಲಿದ್ದವರೊಬ್ಬರು ಸ್ವಾಮೀಜಿಯ ದೇಹ ಬೇಗ ದಹಿಸಲಿ ಎಂಬ ಉದ್ದೇಶದಿಂದ ಚಿತೆಯನ್ನು ಕಟ್ಟಿಗೆಯಿಂದ ಅಲ್ಲಾಡಿಸಲು ಸೂಚಿಸಿದರು. ಆದರೆ ಈ ಸಲಹೆ ಸ್ವಾಮಿಜಿಯ ಶಿಷ್ಯರಾದ ಸ್ವಾಮಿ ನಿಶ್ಚಯಾನಂದರನ್ನು ತಳಮಳಗೊಳಿಸಿತು. ಅವರಿಗೆ ತನ್ನ ಗುರುವಿನ ದೇಹವನ್ನು ದೊಡ್ಡಕೋಲಿನಿಂದ ತಿವಿಯುವುದು ಹಿಡಿಸಲಿಲ್ಲ. ತಕ್ಷಣ ಅವರು ಪಕ್ಕದಲ್ಲಿದ್ದ ಒಂದು ಮರ ಏರಿ ಅಲ್ಲಿಯ ಕೆಲವು ಕೊಂಬೆಗಳನ್ನು ಕಡಿದು ಆ ಉರಿಯುತ್ತಿದ್ದ ಚಿತೆಯ ಮೇಲೆ ಹಾಕಿದರು.

ನಂತರ

ಈ ಮಧ್ಯೆ ಸ್ವಾಮಿ ಬ್ರಹ್ಮಾನಂದರು ನನ್ನನ್ನು ಪಕ್ಕಕ್ಕೆ ಕರೆದು, ಹತ್ತು ರೂಪಾಯಿಯನ್ನು ಕೈಯಲ್ಲಿಟ್ಟು ಹೇಳಿದರು, “ನೀನು ಮತ್ತು ನಿವಾರಣ್, ಗಿರೀಶ್‌ ಬಾಬು ಬಂದಿರುವ – ದೋಣಿಯಲ್ಲಿ ಗಂಗೆಯನ್ನು ದಾಟಿ ಹೋಗಿ ಕೋಲ್ಕತಾದ ಬಾರಾನಗರ್ ಬಜಾರಿನಿಂದ ಸಂದೇಶ್ (ಸಿಹಿ ತಿಂಡಿ) ಹಾಗೂ ಇತರ ತಿಂಡಿ ತಿನಿಸು ತೆಗೆದುಕೊಂಡು ಬನ್ನಿ. ನಿನ್ನೆ ರಾತ್ರಿಯಿಂದ ಯಾವ ಸಾಧುವೂ ಬಾಯಿಗೆ ಏನನ್ನೂ ಹಾಕಿಲ್ಲ, ಒಂದು ತೊಟ್ಟು ನೀರನ್ನು ಕುಡಿದಿಲ್ಲ. ಅಲ್ಲದೆ ಕೆಲವು ಭಕ್ತರೂ ಕೂಡ ಉಪವಾಸವಿದ್ದಾರೆ.” ನಾವು ಬ್ರಹ್ಮಾನಂದರ ಆಣತಿಯಂತೆ ಹೋಗುತ್ತಿರುವುದನ್ನು ನೋಡಿ ಬಿಪಿನ್ ಸಾಹಾ ಕೂಡ ನಮ್ಮೊಡನೆ ಬಂದ. ಅವನೂ ಐದು ರೂಪಾಯಿ ಸೇರಿಸಿ ಬಾರಾನಗರದ ಒಬ್ಬ ಅಡಿಗೆಯವರಿಗೆ ಬಿಸಿ ಬಿಸಿ ಲುಚಿ (ಮೈದಾದಿಂದ ಮಾಡಿದ ಪೂರಿ), ಕಚೋರಿ (ಖಾರದ ಹೂರಣ ತುಂಬಿದ ಪೂರಿ) ಹಾಗೂ ಸಂದೇಶ್ ತಯಾರಿಸಲು ಹೇಳಿದ. ಎಲ್ಲವನ್ನೂ ಒಂದು ಬುಟ್ಟಿಯಲ್ಲಿಟ್ಟು ತನ್ನ ತಲೆಯ ಮೇಲೆ ಹೊತ್ತುಕೊಂಡು ಬೇಲೂರು ಮಠಕ್ಕೆ ನಮ್ಮೊಡನೆ ಹಿಂದಿರುಗಿ ಬಂದ. ನಾವು ಹಿಂದಿರುಗಿದಾಗ ಸಾಯಂಕಾಲವಾಗಿತ್ತು. ಅಷ್ಟು ಹೊತ್ತಿಗೆ ಚಿತೆಯ ಬೆಂಕಿಯು ಆರಿತ್ತು. ಪವಿತ್ರ ಅಸ್ಥಿಯನ್ನು ಸಂಗ್ರಹಿಸಿ ಎಲ್ಲ ಸನ್ಯಾಸಿಗಳೂ, ಬ್ರಹ್ಮಚಾರಿಗಳೂ ವಿಧಿವತ್ತಾಗಿ ಸ್ನಾನ ಮಾಡಿ ನೀರಿನ ತರ್ಪಣ ಅರ್ಪಿಸಿದ್ದರು.

‘ಮ’ ನನಗೆ ಹೇಳಿದರು, “ನೀನು ಶವವನ್ನು ಸ್ಪರ್ಶ ಮಾಡಿರುವುದರಿಂದ ಸ್ನಾನ ಮಾಡಿ, ಜಲತರ್ಪಣ ನೀಡು.” ಅದಕ್ಕೆ ನಾನು ಹೇಳಿದೆ, “ಒಬ್ಬ ಸಾಧು ಎಂದರೆ ಅವನು ನಾರಾಯಣನೇ ಸರಿ. ಅಂತಹ ದಿವ್ಯ ದೇಹವನ್ನು ಸ್ಪರ್ಶ ಮಾಡಿದುದರಿಂದ ನಾನು ಅಪವಿತ್ರನಾದೆನೇ?” ನಾನು ಬ್ರಹ್ಮಾನಂದರ ಆಣತಿಯ ಮೇರೆಗೆ ಉಟ್ಟ ಬಟ್ಟೆಯನ್ನು ಬದಲಾಯಿಸಿದೆ ಶ್ರೀರಾಮಕೃಷ್ಣರಿಗೆ ನೈವೇದ್ಯಕ್ಕಾಗಿ ತಂದಿದ್ದ ಪದಾರ್ಥಗಳನ್ನು ಕೊಂಡೊಯ್ದೆ. ಸ್ವಾಮಿ ಪ್ರೇಮಾನಂದರು ನನ್ನ ಭಾವನೆಯನ್ನು ಅರ್ಥಮಾಡಿಕೊಂಡು ಹೇಳಿದರು, “ನೀನು ಸ್ನಾನ ಮಾಡಬೇಕಾಗಿಲ್ಲ, ಆದರೆ ನಿನ್ನ ತಲೆಯ ಮೇಲೆ ನಾನು ಸ್ವಲ್ಪ ಗಂಗಾಜಲವನ್ನು ಸಿಂಪಡಿಸುತ್ತೇನೆ. ಈ ಆಹಾರವನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗು. ನಂತರ ಗಂಗೆಗೆ ಹೋಗಿ ಸ್ವಾಮಿಜಿಗೆ ವಿಧಿಪ್ರಕಾರ ನೀರನ್ನು ಅರ್ಪಿಸು.”

ಅಂದು ಶ್ರೀರಾಮಕೃಷ್ಣರಿಗೆ ಪೂಜೆ ಇರಲಿಲ್ಲ. ಸಾಯಂಕಾಲ ಆರತಿ ಮಾಡಿ, ಶ್ರೀರಾಮಕೃಷ್ಣರಿಗೆ ನೈವೇದ್ಯವನ್ನು ಅರ್ಪಿಸಲಾಯಿತು. ನಂತರ ಪ್ರಸಾದ, ಚಹಾವನ್ನು ಭಕ್ತರಿಗೆ ಮತ್ತು ಸನ್ಯಾಸಿಗಳಿಗೆ ಹಂಚಲಾಯಿತು. ದುಃಖಭರಿತರಾಗಿದ್ದ ಭಕ್ತರು ತಮ್ಮ ತಮ್ಮ ಮನೆಗಳಿಗೆ ನಂತರ ಹಿಂದಿರುಗಿದರು.
ಸ್ವಾಮಿಜಿಯ ಕಡೆಯ ಆಸೆಯನ್ನು ನೆರವೇರಿಸಲು, ಅವರ ಮಹಾಸಮಾಧಿಯ ಮುಂದಿನ ಅಮಾವಾಸ್ಯೆಯ ರಾತ್ರಿಯಂದು ಕಾಳೀ ಪೂಜೆಯನ್ನು ನೆರವೇರಿಸಲಾಯಿತು. ಸ್ವಾಮೀಜಿಯ ಸೋದರ ಭೂಪೇಂದ್ರನಾಥ ದತ್ತನನ್ನು ಬಿಟ್ಟು ಬೇರೆ ಯಾರನ್ನೂ ಪೂಜೆಗೆ ಆಮಂತ್ರಿಸಿರಲಿಲ್ಲ, ಮಖನ್ ಮಹಾರಾಜ್ ನನಗೆ ಮತ್ತು ನಿವಾರಣ್ ಗೆ ಮೂವತ್ತು ಪೌಂಡ್ ಬಿಲ್ವ ಮರದ ಒಣ ಕಟ್ಟಿಗೆಯನ್ನು ಹೋಮಕ್ಕಾಗಿ ತರಲು ತಿಳಿಸಿದರು. ಮುಂದಿನ ಶನಿವಾರದಂದು ಅಮಾವಾಸ್ಯೆಯಿತ್ತು. ನಾನು ಮತ್ತು ನಿವಾರಣ್ ಒಣ ಕಟ್ಟಿಗೆಯೊಡನೆ ಬೇಲೂರು ಮಠಕ್ಕೆ ಬಂದಾಗ ಅದನ್ನು ನೋಡಿ ಸ್ವಾಮಿ ಬ್ರಹ್ಮಾನಂದರಿಗೆ ತುಂಬಾ ಸಂತೋಷವಾಯಿತು. ಅವರು ಶಿವಸ್ತೋತ್ರದಿಂದ ಎರಡು ಸಾಲುಗಳನ್ನು ಪಠಿಸಲಾರಂಭಿಸಿದರು, ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ಪಾಹಿ ಮಾಂ ! ಚಂದ್ರಶೇಖರ ಚಂದ್ರಶೇಖರ ಚಂದ್ರಶೇಖರ ರಕ್ಷ ಮಾಂ! ನಂತರ ಬ್ರಹ್ಮಾನಂದರು ಹೇಳಿದರು, “ನೀನು ಈ ಮಳೆಗಾಲದಲ್ಲಿ ಒಣ ಕಟ್ಟಿಗೆ ತಂದು ನಮ್ಮನ್ನು ಬಿಕ್ಕಟ್ಟಿನಿಂದ ಪಾರುಮಾಡಿದೆ, ಜಗನ್ಮಾತೆ ನಿನ್ನನ್ನು ಹರಸಲಿ.”

ಮಹಡಿಯ ಮೇಲಿದ್ದ ಶ್ರೀರಾಮಕೃಷ್ಣರ ದೇವಸ್ಥಾನದಲ್ಲಿ ರಾತ್ರಿ ಹತ್ತು ಘಂಟೆಗೆ ಕಾಳೀಪೂಜೆ ಪ್ರಾರಂಭವಾಯಿತು. ತಾಂತ್ರಿಕ ಪೂಜೆಯಲ್ಲಿ ನುರಿತವರೂ ಹಾಗೂ ಸ್ವಾಮಿ ರಾಮಕೃಷ್ಣಾನಂದರ ತಂದೆಯವರೂ ಆದ ಈಶ್ವರಚಂದ್ರ ಚಕ್ರವರ್ತಿ ಪೂಜೆಯನ್ನು ನೆರವೇರಿಸಿದರು. ಸನ್ಯಾಸಿ, ಬ್ರಹ್ಮಚಾರಿ ವೃಂದ ಶ್ರೀರಾಮಕೃಷ್ಣರಿಗೆ ನಮಸ್ಕರಿಸಿ ಸ್ವಾಮೀಜಿಯ ಕೊಠಡಿಯಲ್ಲಿ ಕುಳಿತು ಧ್ಯಾನ ಮಾಡಿದರು. ಪೂಜೆಗೆ ಮುಂಚೆ ರಾತ್ರಿಯ ನೈವೇದ್ಯದ ವೇಳೆಯಲ್ಲಿ ಬ್ರಹ್ಮಾನಂದರು ಪ್ರೇಮಾನಂದರಿಗೆ ಹೇಳಿದರು, “ಭೂಪೇನ್ ಮತ್ತು ಇವರಿಬ್ಬರಿಗೆ ತಿನ್ನಲು ಪ್ರಸಾದ ನೀಡು, ಉಳಿದವರು ಉಪವಾಸವಿರಬೇಕು.” ನಾವು ಮೂರು ಜನ ಪ್ರಸಾದ ಸೇವಿಸಿದ ನಂತರ ಮಠದ ಪಶ್ಚಿಮ ಭಾಗದ ನೆಲಮಾಳಿಗೆಯ ಕೊಠಡಿಯಲ್ಲಿ ವಿಶ್ರಮಿಸಿದೆವು. ಸ್ವಾಮಿ ನಿತ್ಯಾನಂದರು (ಸ್ವಾಮಿಜಿಯ ವೃದ್ಧ ಶಿಷ್ಟ) ಆ ರಾತ್ರಿಯಲ್ಲಿ ಮಠವೆಲ್ಲವೂ ಪ್ರತಿಧ್ವನಿಸುವಂತೆ ಆಗಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

1) ಎಲ್ಲವೂ ಭಗವಂತನ ಮೇಲೇ ನಿರ್ಭರವಾಗಿದೆ ಎಂದು ಭಾವಿಸಿ ಪ್ರಾರ್ಥಿಸಿ, ನನ್ನಿಂದ ಮಾತ್ರ ಇದು ಸಾಧ್ಯ ಎಂದು ಭಾವಿಸಿ ಕೆಲಸದಲ್ಲಿ ತೊಡಗಿಕೊಳ್ಳಿ.

2) ನಿಮಗೆ ಸಂಬಂಧಪಟ್ಟ ವಿಚಾರದಲ್ಲಿ ನಿಮ್ಮ ಬುದ್ಧಿಯನ್ನು ಉಪಯೋಗಿಸಿ; ಅದೇ ಬೇರೆಯವರ ವಿಚಾರದಲ್ಲಿ ನಿಮ್ಮ ಹೃದಯವನ್ನು ಉಪಯೋಗಿಸಿ.

3) ಯಶಸ್ಸಿನಲ್ಲಿ ಬುದ್ದಿ ಕಳೆದುಕೊಳ್ಳಬೇಡಿ: ಸೋಲಿನಲ್ಲಿ ಹೃದಯವನ್ನು ಕಳೆದುಕೊಳ್ಳಬೇಡಿ.

4) ಯಾವುದಾದರೂ ತತ್ವಕ್ಕಾಗಿ ನೀವು ನಿಲ್ಲದೆ ಹೋದರ ಯಾವುದಾದರೂ ಆಮಿಷಕ್ಕೆ ಬಲಿಯಾಗಿಬಿಡುತ್ತೀರಿ.

5) ಸೌಂದರ್ಯ ಮತ್ತು ಮೈಕಾಂತಿ ನಿಮ್ಮ ಕಣ್ಸೆಳೆಯಬಹುದು; ಆದರೆ ಮನಸೆಳೆಯುವ ಸಾಮರ್ಥ್ಯ ಇರುವುದು ಮುಗುಳ್ನಗೆಗೆ ಮಾತ್ರ-ಸದಾ ನಗುತ್ತಿರಿ !

ಮುಂಜಾನೆ ಮೂರು ಘಂಟೆಗೆ ಸ್ವಾಮಿ ಶಾರದಾನಂದರು ಬಂದು ನಮ್ಮನ್ನೆಲ್ಲ ಎಬ್ಬಿಸಿದರು ಮತ್ತು ಮೇಲಿನ ಕೊಠಡಿಯಲ್ಲಿದ್ದ ದೇವಸ್ಥಾನಕ್ಕೆ ಹೋಗಲು ತಿಳಿಸಿದರು. ಅಲ್ಲಿ ಸ್ವಾಮಿ ಬ್ರಹಾನಂದರು ನನಗೆ ಗಂಗಾಜಲವನ್ನು ಆಚಮನ ಮಾಡಿ ಪವಿತ್ರಗೊಳಿಸಿಕೊಂಡು ಜಪ ಮಾಡಲು ತಿಳಿಸಿದರು. ಸ್ವಲ್ಪ ಹೊತ್ತಿನ ನಂತರ, ಹೋಮ ನಡೆಯುತ್ತಿದ್ದ ಪಶ್ಚಿಮ ವರಾಂಡಕ್ಕೆ ಎಲ್ಲರೂ ಹೋಗಬೇಕೆಂದು ಸ್ವಾಮಿ ಬ್ರಹ್ಮಾನಂದರು ತಿಳಿಸಿದರು. ಅಲ್ಲಿ ನಾವು ಹೋಮಕುಂಡದ ಸುತ್ತಲೂ ಇದ್ದ ಸನ್ಯಾಸಿಗಳ ಜೊತೆ ಕುಳಿತು ಜಪ ಮಾಡಿದೆವು. ಹೋಮದ ನಂತರ ನಾವೆಲ್ಲರೂ ದಹನಕ್ರಿಯೆ ನಡೆದ ಸ್ಥಳಕ್ಕೆ ಹೋಗಿ, ಏಳು ಬಾರಿ ಪ್ರದಕ್ಷಿಣೆ ಮಾಡಿ ನಮಸ್ಕರಿಸಿದೆವು. ನಂತರ ನಾವೆಲ್ಲ ಬಿಲ್ವ ಮರದ ಕೆಳಗೆ ಕುಳಿತು ಸ್ವಲ್ಪ ಹೋತ್ತು ಜಪ ಮಾಡಿದೆವು. ಕೊನೆಗೆ ಮತ್ತೆ ಶ್ರೀರಾಮಕೃಷ್ಣರ ಮಂದಿರಕ್ಕೆ ಹೋಗಿ ನಮಸ್ಕರಿಸಿ, ಬಳಿಕ ಕೆಳಗಿನ ಕೋಣೆಯಲ್ಲಿ ಪ್ರಸಾದ ಸ್ವೀಕರಿಸಿದೆವು.