ಸೆಪ್ಟೆಂಬರ್ ೧೧, ೧೮೯೩ ಪ್ರಪಂಚದ ಧಾರ್ಮಿಕ ಮತ್ತು ಸಾಂಸ್ಕೃತಿಕ ಚರಿತ್ರೆಯಲ್ಲಿ ಒಂದು ಚಿರಸ್ಮರಣೀಯ ದಿನ! ಅವ್ಯಕ್ತ ಐಶ್ವರೀ ಶಕ್ತಿಯೊಂದು ಹಿಂದುಸ್ತಾನದ ಅಜ್ಞಾತ ಸಂಖ್ಯಾಸಿಯೊಬ್ಬನನ್ನು ‘ನವಭಾರತ ನಿರ್ಮಾಪಕ ಪ್ರವಾದಿ’ ಎಂದು ಜಗತ್ತಿನ ಜನ ಅಂಗೀಕರಿಸುವಂತೆ ಮಾಡಿದ ದಿನ! ಪೌರಸ್ತ್ಯ ಪಾಶ್ಚಾತ್ಯ ಸಂಸ್ಕೃತಿಗಳು, ಧರ್ಮ ಮತ್ತು ವಿಜ್ಞಾನ-ಇವುಗಳಲ್ಲಿನ ಅತ್ಯುತ್ತಮ ಅಂಶಗಳ ಮಧುರ ಸಮ್ಮಿಳನವನ್ನೊಳಗೊಂಡ, ಹಾಗೂ, ದೇಹಶಕ್ತಿ ಬುದ್ಧಿಶಕ್ತಿ ಹೃದಯಸಂಸ್ಕಾರ ಶಕ್ತಿಗಳ ಸಮತೋಲನದಿಂದ ಕೂಡಿದ, ಮಾನವಕೋಟಿಗೆ ಮತ್ತೂ ಅಧಿಕವಾದ ಅಭ್ಯುದಯ ನಿಶ್ಶ್ರೇಯಸ್ಸುಗಳನ್ನು ತಂದುಕೊಡುವ ಇಚ್ಛೆಯಿಂದ ಪ್ರಾರಂಭವಾದ ಮಹಾ ಚಳವಳಿಯೊಂದಕ್ಕೆ ನಾಂದಿಯಾದ ದಿನ! ಅಂದು ವಿಶ್ವದ ಪ್ರಪ್ರಥಮ ಸರ್ವಧರ್ಮ ಸಮ್ಮೇಳನವು ಅಮೇರಿಕದ ಚಿಕಾಗೊ ನಗರದಲ್ಲಿ ಪ್ರಾರಂಭವಾಯಿತು.

ಸರ್ವಧರ್ಮಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಗಳಿಸಿದ ಪ್ರಚಂಡ ವಿಜಯದ ಪರಿಮಾಣವನ್ನು ನಾವು ಗ್ರಹಿಸಬೇಕಾದರೆ ಆ ಸಮ್ಮೇಳನದ ವ್ಯವಸ್ಥಾಪಕರ ಉದ್ದೇಶವೇನಿತ್ತೆಂಬುದನ್ನು ಮೊದಲು ಅರಿಯಬೇಕು. ಸ್ವಾಮೀಜಿಯವರು ಜನವರಿ ೧೧, ೧೮೯೫ರಲ್ಲಿ ಚಿಕಾಗೋ ನಗರದಿಂದ ಜಿ.ಜಿ. ನರಸಿಂಹಾಚಾರಿಯರ್ ಅವರಿಗೆ ಬರೆದ ಪತ್ರದಲ್ಲಿ ಹೀಗೆಂದಿರುತ್ತಾರೆ: ‘ಕ್ರೈಸ್ತಧರ್ಮವು ಪ್ರಪಂಚದ ಇತರ ಧರ್ಮಗಳಿಗಿಂತ ಉತ್ಕೃಷ್ಟವಾದುದು ಎಂಬುದನ್ನು ಸಾಧಿಸುವ ಸಲುವಾಗಿಯೇ
ಸರ್ವಧರ್ಮ ಸಮ್ಮೇಳನವನ್ನು ನಡೆಸಲಾಗಿತ್ತು’ (The Complete Works of Swami Vivekananda, 1979, Vol.5, p.644) ಮೇರಿ ಲೂಯಿ ಬರ್ಕ್ ರವರು ಸಹ ತಮ್ಮ ಅದ್ಭುತ ಅಪೂರ್ವ ಗ್ರಂಥವಾದ Swami Vivekananda in the West-New Discoveries (Vol.1, p.68) ಎಂಬುದರಲ್ಲಿ ಇದೇ ಅಭಿಪ್ರಾಯವನ್ನೇ ಮಂಡಿಸಿದ್ದಾರೆ : ‘ಸರ್ವಧರ್ಮ ಸಮ್ಮೇಳನವು ಕ್ರಿಶ್ಚಿಯನ್ ದುರಭಿಪ್ರಾಯದಿಂದ ವ್ಯಾಪ್ತವಾಗಿತ್ತು. ಕ್ರೈಸ್ತಧರ್ಮವು ಅದ್ಭುತವಾಗಿ ಮತ್ತು ನಿಸ್ಸಂದಿಗ್ಧವಾಗಿ ತನ್ನ ಉತ್ಕೃಷ್ಟತೆಯನ್ನು ಸಾಧಿಸಿಬಿಡುತ್ತದೆಯೆಂಬುದು ಸಮ್ಮೇಳನದ ವ್ಯವಸ್ಥಾಪಕರನೇಕರ ಮನದಲ್ಲಿ ಮುನ್ನಿಶ್ಚಿತ ತೀರ್ಮಾನವಾಗಿತ್ತು.’ ಇಂತಹ ಪ್ರತಿಕೂಲ ಪರಿಸರದಲ್ಲಿಯೂ ಸ್ವಾಮಿ ವಿವೇಕಾನಂದರು ಉಜ್ಜ್ವಲ ಜಯವನ್ನು ಗಳಿಸಿದ್ದು ಅವರ ಅಧ್ಯಾತ್ಮ ಶಕ್ತಿಯ ಅಗಾಧತೆಯನ್ನು ತೋರಿಸುತ್ತದೆ.

ಪ್ರಪಂಚದ ಧಾರ್ಮಿಕ ಇತಿಹಾಸದಲ್ಲಿ ಚಿಕಾಗೊದಲ್ಲಿ ಜರುಗಿದ ವಿಶ್ವಧರ್ಮ ಸಮ್ಮೇಳನ ಒಂದು ಮೈಲುಗಲ್ಲು ಎನ್ನಬಹುದು. ಅದೊಂದು ಚಾರಿತ್ರಿಕ ಘಟನೆಯಾಗಿ ಪರಿವರ್ತಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಸಮ್ಮೇಳನದಲ್ಲಿ ಸ್ವಾಮೀಜಿ ಮಾಡಿದ ಭಾಷಣಗಳ ಸಾರಾಂಶವನ್ನು ಈ ಲೇಖನದಲ್ಲಿ ನೀಡಲಾಗಿದೆ. ಬೆಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾಗಿರುವ ಪೂಜ್ಯ ಹರ್ಷಾನಂದಜಿಯವರು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಹಲವು ಕೃತಿಗಳನ್ನು ರಚಿಸಿದ್ದಾರೆ.

ಸರ್ವಧರ್ಮಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಕೇವಲ ಆರು ಪ್ರವಚನಗಳನ್ನು ನೀಡಿದರು. ಅವುಗಳಲ್ಲಿ Paper on Hinduism ಎಂಬ ದೀರ್ಘ ಲೇಖನವನ್ನು ಬಿಟ್ಟರೆ ಉಳಿದೆಲ್ಲವೂ ಚಿಕ್ಕ ಉಪನ್ಯಾಸಗಳು.

ಅವರು ಜಗತ್ಪ್ರಸಿದ್ಧರಾದದ್ದು ಮೊದಲನೆಯ ಉಪನ್ಯಾಸದ ಮೂಲಕ ; ಅದರಲ್ಲೂ ಸಭಾಸದರನ್ನು ಕುರಿತು ‘ಅಮೆರಿಕಾ ದೇಶದ ಭಗಿನಿಯರೇ ಮತ್ತು ಭ್ರಾತೃಗಳೇ’ (Sisters and Brothers of America) ಎಂಬ ಕೇವಲ ಐದು ಶಬ್ದಗಳ ಮೂಲಕ. ಪರಿಣಾಮ! ಎರಡು ನಿಮಿಷಗಳಷ್ಟು ದೀರ್ಘ ಕಾಲದ ಚಪ್ಪಾಳೆಯ ಆರ್ಭಟ! ಆದರೆ ಸಭಾಸದರ ಹೃದಯವನ್ನು ಸ್ಪರ್ಶಿಸಿದ್ದು ಕೇವಲ ಈ ಮಾತುಗಳು ಎಂದು ಭಾವಿಸಬಾರದು. ವೇದಾಂತಸಾಧನೆಯ ಮೂಲಕ ವಿವೇಕಾನಂದರು ಸಾಕ್ಷಾತ್ಕರಿಸಿಕೊಂಡ ಸರ್ವಾತ್ಮ ಭಾವನೆ, ಅದರ ಫಲವಾಗಿ ಅವರ ಹೃದಯದಲ್ಲಿ ಪ್ರವಹಿಸಿದ ತೀವ್ರ ವಿಶ್ವಪ್ರೇಮ-ಇವೇ ನಿಜವಾಗಿ ಸಭಾಸದರ ಹೃದಯವನ್ನು ಗೆದ್ದದ್ದು. ಅದರಿಂದ ಜನರ ಮೇಲೆ ಉಂಟಾದ ವಿದ್ಯುತ್ಪರಿಣಾಮ, ತನ್ಮೂಲಕ ಜನಸಿದ ಶಕ್ತಿಪ್ರವಾಹ, ಬಹು ಬೇಗ ವರ್ಧಿಸಿ ಅಮೇರಿಕಾ ಮತ್ತು ಭಾರತ ದೇಶಗಳಲ್ಲಲ್ಲದೆ ಇಂಗ್ಲೆಂಡ್ ಮತ್ತು ಯೂರೋಪಿನ ಇತರ ಪ್ರದೇಶಗಳಿಗೂ ಹರಿಯಿತು.

ಸ್ವಾಮೀಜಿಯವರು ತಮ್ಮ ಭಾಷಣವನ್ನು ಸಮ್ಮೇಳನದ ವ್ಯವನ್ನಾಪಕರಿಗೆ ಮತ್ತು ಸಭಿಕರಿಗೆ ವಂದನೆಯನ್ನು ಸಲ್ಲಿಸುವುದರ ಮೂಲಕ ಪ್ರಾರಂಭಿಸುತ್ತಾರೆ. ಈ ಕಡೆ ಪ್ರಪಂಚದ ಅತಿ ಪ್ರಾಚೀನ ದೇಶದ ಪ್ರತಿನಿಧಿಯಾಗಿ ಮುವ್ವತ್ತರ ಹರೆಯದ ತರುಣ, ಆ ಕಡೆ ಅತ್ಯಂತ ಅರ್ವಾಚೀನ ದೇಶದ ಜನರ ಬೃಹತ್ ಸಮೂಹ ; ಈತ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದಾನೆ! ಇದೊಂದು ಸೋಜಿಗದ ನೋಟವಲ್ಲವೆ?

ಭಾರತದೇಶದಿಂದ ಇನ್ನೂ ಹತ್ತು ಹಲವು ಮಂದಿ ಬಂದಿದ್ದರು. ಆದರೆ ಅವರೆಲ್ಲ ಕೇವಲ ಕೆಲವು ಮತ, ಸಂಪ್ರದಾಯ ಅಥವಾ ಗುಂಪುಗಳ ಪ್ರತಿನಿಧಿಯಾಗಿ ಬಂದಿದ್ದರು. ಸಮಗ್ರ ಹಿಂದೂ ಧರ್ಮವನ್ನು, ಹಿಂದೂ ಸಮಾಜವನ್ನು, ಪ್ರತಿನಿಧೀಕರಿಸಿದ್ದವರು ವಿವೇಕಾನಂದರೊಬ್ಬರೇ!

ಮುಂದುವರಿಯುತ್ತ ಸ್ವಾಮೀಜಿ ಎನ್ನುತ್ತಾರೆ-ಹಿಂದೂ ಧರ್ಮವು ಕೇವಲ ಪರಮತಸಹಿಷ್ಟತೆಯನ್ನು ಮಾತ್ರ ಬೋಧಿಸುತ್ತದೆ ಎಂದು ಭಾವಿಸಬಾರದು. ಅದು ಪ್ರಪಂಚದ ಎಲ್ಲ ಮತ ಧರ್ಮಗಳನ್ನೂ ಸಮಾನವಾಗಿ ಸತ್ಯವೆಂದು ಒಪ್ಪಿಕೊಳ್ಳುತ್ತದೆ; ಮಾತ್ರವಲ್ಲ, ಇದನ್ನು ಆಚರಣೆಯಲ್ಲೂ ತೋರಿಸಿಕೊಟ್ಟಿರುತ್ತದೆ. ಪರದೇಶಗಳಲ್ಲಿ ಪರಧರ್ಮಿಯರಿಂದ ಕಿರುಕುಳಕ್ಕೆ ಹಿಂಸೆಗೆ ತುತ್ತಾಗಿ ತನ್ನಲ್ಲಿಗೆ ಓಡಿಬಂದ ಯೆಹೂದ್ಯರು ಪಾರಸಿಕರು ಮೊದಲಾದವರಿಗೆ ರಕ್ಷಣೆ ಅಭಯಗಳನ್ನು ಭಾರತದ ಹಿಂದೂಜನ ನೀಡಿರುವುದೇ ಇದಕ್ಕೆ ಸಾಕ್ಷಿ.

ಈ ಅಂಶವನ್ನು ದೃಢಪಡಿಸಲು ಸುಪ್ರಸಿದ್ಧವಾದ ಶಿವಮಹಿಮ್ನ: ಸ್ತೋತ್ರದ ಒಂದು ಶ್ಲೋಕವನ್ನೂ (ತ್ರಯೀ ಸಾಂಖ್ಯಂ ಯೋಗಃ … ಶ್ಲೋ.೭) ಗೀತೆಯಿಂದ ಮತ್ತೊಂದನ್ನೂ (ಯೇ ಯಥಾ ಮಾಂ ಪ್ರಪದ್ಯಂತೇ… ಅ. ೪, ಶ್ಲೋ.೧೧) ಉದ್ಧರಿಸಿ ಅವುಗಳ ಅರ್ಥವನ್ನು ವಿವರಿಸುತ್ತಾರೆ. ಇವೂ ಸಹ ಹಿಂದೂಧರ್ಮದ ವೈಶಾಲ್ಯವನ್ನು ಪ್ರಕಟಪಡಿಸುತ್ತವೆ.

ಅನಂತರ, ಈ ಜಗತ್ತಿನ ಜನ ಇಂದು ಸ್ವಮತದ ಬಗ್ಗೆ ದುರಭಿಮಾನ ಧರ್ಮಾಂಧತೆಗಳ ಗುಲಾಮರಾಗಿ, ಪರಸ್ಪರ ದ್ವೇಷದಿಂದ ಕಾದಾಡಿ, ಈ ಸುಂದರ ಭೂಮಿಯನ್ನು ನಿರ್ದೋಷಿಗಳ ರಕ್ತದಿಂದ ತೋಯಿಸಿರುತ್ತಾರೆ ಎಂದು ತಮ್ಮ ವ್ಯಥೆಯನ್ನೂ ತೋಡಿಕೊಳುತ್ತಾರೆ. ಕ್ಯಾಲೆಬ್ ಕೋಲ್ಟನ್ ಮಹಾಶಯನು ಹೇಳಿರುವುದನ್ನು ಸ್ಮರಿಸುವುದು ಬಹು ಉಪಯುಕ್ತ ಮತ್ತು ಸಮಯೋಚಿತ ಅವನೆನ್ನುತ್ತಾನೆ: “ತಮ್ಮ ತಮ್ಮ ಮತ ಧರ್ಮಕ್ಕಾಗಿ ಜನ ಕೂಗಾಡುತ್ತಾರೆ, ಬರೆಯುತ್ತಾರೆ, ಕಾದಾಡುತ್ತಾರೆ, ಅದಕ್ಕಾಗಿ ಸಾವನ್ನೂ ಅಪ್ಪುತ್ತಾರೆ. ಹೀಗೆ ಏನು ಮಾಡಲೂ ಸಿದ್ಧ! ಆದರೆ ಅದರಂತೆ ಜೀವನವನ್ನು ಮಾತ್ರ ನಡೆಸರು!’ ಇದು ಹೇಗೇ ಇರಲಿ, ಜಗದ ವಿವಿಧ ಜನರ ಹೃದಯಗಳನ್ನು ಪರಸ್ಪರ ಭ್ರಾತೃಭಾವದಿಂದ ಬೆಸೆಯುವ ಉದ್ದಿಶ್ಯದಿಂದ ಈ ಸರ್ವಧರ್ಮಸಮ್ಮೇಳನದ ಮೂಲಕ ಪ್ರಾರಂಭವಾಗಿರುವ ಚಳವಳಿಯು ಯಶಸ್ವಿಯಾಗಲಿ!

‘ಇಂದು ಬೆಳಗ್ಗೆ ಈ ಸಭೆಯ ಶುಭಾರಂಭವನ್ನು ಸೂಚಿಸಲು ಮೊಳಗಿದ ಘಂಟಾನಾದ ಎಲ್ಲ ಮತಾಂಧತೆಯ, ಖಡ್ಗ ಇಲ್ಲವೇ ಲೇಖನಿಯಿಂದ ಸಾಧಿಸಿದ ಎಲ್ಲ ಮತೀಯ ಹಿಂಸೆಗಳ, ಒಂದೇ ಗುರಿಯೆಡೆಗೆ ಸಾಗುತ್ತಿದ್ದರೂ ಪಥಿಕರಲ್ಲಿ ತಲೆದೋರುತ್ತಿರುವ ಎಲ್ಲ ಮನಸ್ತಾಪಗಳ ಅಂತ್ಯಕ್ರಿಯೆಯನ್ನು ಸೂಚಿಸುವ ಘಂಟಾನಾದವೂ ಆಗಲಿ’-ಎಂದು ಘೋಷಿಸುತ್ತ ತಮ್ಮ ಸದಾಶಯವನ್ನು ವ್ಯಕ್ತಪಡಿಸಿ ಈ ಪುಟ್ಟ ಉಪನ್ಯಾಸವನ್ನು ಮುಕ್ತಾಯಗೊಳಿಸಿರುತ್ತಾರೆ.

ಶತಶತಮಾನಗಳಿಂದ ಪಂಥಾಭಿಮಾನ ಮತಾಂಧತೆಗಳು ಈ ಜಗತ್ತಿನಲ್ಲಿ ತಾಂಡವವಾಡಿವೆ. ವಿನಾಶ ರಕ್ತಪಾತಗಳ ಮೂಲಕ ರಾಷ್ಟ್ರರಾಷ್ಟ್ರಗಳನ್ನೇ ತಲ್ಲಣಿಸಿಬಿಟ್ಟಿವೆ. ಅವುಗಳನ್ನು ನಿರ್ಮೂಲ ಮಾಡಬೇಕಾದರೆ ಮೊದಲು ಅವುಗಳ ಮೂಲಕಾರಣಗಳನ್ನು ಕಂಡುಹಿಡಿಯಬೇಕು. ಇದನ್ನೇ ವಿವೇಕಾನಂದರು ‘ನಮ್ಮಲ್ಲಿ ಏಕೆ ಒಮ್ಮತವಿಲ್ಲ” (Why We Disagree) ಎಂಬ ಎರಡನೆಯ, ಪುಟ್ಟ, ಪ್ರವಚನದಲ್ಲಿ ಮಾಡಿರುವುದು. ಸುಪ್ರಸಿದ್ಧವಾದ “ಕೂಪಮಂಡೂಕ’ (ಸಣ್ಣ ಬಾವಿಯಲ್ಲಿ ವಾಸಿಸುವ ಕಪ್ಪೆ) ಎಂಬ ಸಂಸ್ಕೃತದ ಸಾಮತಿಯನ್ನು ಸ್ವಾರಸ್ಯಕರ ಕಥೆಯೊಂದರ ಮೂಲಕ ವಿಸ್ತರಿಸುತ್ತ ಅವರು ವಿವಿಧ ಮತಧರ್ಮಗಳ ಅನುಯಾಯಿಗಳೆಲ್ಲ ತಮ್ಮ ತಮ್ಮ ‘ಚಿಕ್ಕ ಬಾವಿ’ಗಳಿಂದ ಆಚೆಗೆ, ವಿಶಾಲ ಪ್ರಪಂಚಕ್ಕೆ ಬರುವಂತೆ ಕರೆ ನೀಡಿರುತ್ತಾರೆ. ಮುಕ್ತ ಮನಸ್ಸಿನಿಂದ ಇತರ ಧರ್ಮಗಳ ಜನರೊಂದಿಗೆ ಸಂಪರ್ಕವನ್ನು ಬೆಳಸಿದಾಗ ಕಣ್ಪರೆಗಳು ಕಳಚಿಬೀಳುತ್ತವೆ, ವಿವಿಧ ಗುಂಪುಗಳ ಜನರ ನಡುವಣ ಬೇಲಿಗಳು ಕುಸಿಯುತ್ತವೆ; ತನ್ಮೂಲಕ, ಪರಸ್ಪರ ಸೌಹಾರ್ದವೂ ಗೌರವವೂ ವರ್ಧಿಸುತ್ತವೆ. ಆಗ, ಆಗ ಮಾತ್ರವೇ, ಈ ನಮ್ಮ ಜಗತ್ತು ನಮ್ಮ ಸುಖವನ್ನು ಹೆಚ್ಚಿಸುವಂಥ ವಾಸಸ್ಥಾನವಾಗುತ್ತದೆ. ಅಮೆರಿಕಾ ದೇಶವು ಈ ದಿಕ್ಕಿನಲ್ಲಿ ಮಾಡುತ್ತಿರುವ ಪ್ರಯತ್ನಕ್ಕೆ ಅಭಿನಂದನೆಗಳನ್ನೂ ಕೃತಜ್ಞತೆಯನ್ನೂ ಸಲ್ಲಿಸಿ, ಭಗವಂತನು ಇದಕ್ಕೆ ಯಶಸ್ಸನ್ನು ಅನುಗ್ರಹಿಸಲೆಂದು ಪ್ರಾರ್ಥನೆ ಮಾಡುತ್ತಾರೆ.

ಹಿಂದೂಧರ್ಮ‘ (Paper on Hinduism) ಎಂಬುದು ಮೂರನೆಯ ಪ್ರವಚನ; ಸ್ವಾಮೀಜಿಯವರು ಬರೆದು ಸಿದ್ಧಪಡಿಸಿ ಸಮ್ಮೇಳನದಲ್ಲಿ ಓದಿದ ಏಕೈಕ ಭಾಷಣ ಮತ್ತು ಇದು ಅವರಿತ್ತ ಭಾಷಣಗಳಲ್ಲಿ ಅತ್ಯಂತ ದೀರ್ಘವೂ ಆಗಿತ್ತು. ಸೋದರಿ ನಿವೇದಿತ, ಪ್ರಥಮ ಬಾರಿ ನಾಲ್ಕು ಸಂಪುಟಗಳಲ್ಲಿ ಪ್ರಕಟಿತವಾದ The Complete Works of Swami Vivekananda (ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ) ಎಂಬ ಗ್ರಂಥಕ್ಕೆ ಅತ್ಯಮೋಘವಾದ ಮುನ್ನುಡಿಯನ್ನು Our Master and His Message (ನನ್ನ ಗುರುದೇವ ಮತ್ತು ಆತನ ಸಂದೇಶ) ಎಂಬ ಶೀರ್ಷಿಕೆಯಡಿಯಲ್ಲಿ ಬರೆಯುತ್ತ ಹೀಗೆಂದಿರುತ್ತಾರೆ: ‘ಸ್ವಾಮೀಜಿಯವರು ಮಾತನಾಡಲು ಪ್ರಾರಂಭಿಸಿದಾಗ ಅದು “ಹಿಂದೂಗಳ ಧಾರ್ಮಿಕ ಭಾವನೆ”ಗಳನ್ನು ಕುರಿತದ್ದಾಗಿತ್ತು. ಆದರೆ ಅವರು ಅದನ್ನು ಮುಕ್ತಾಯಗೊಳಿಸಿದಾಗ “ಹಿಂದೂ ಧರ್ಮ”ದ ಸೃಷ್ಟಿಯಾಗಿತ್ತು!’ ವಿವೇಕಾನಂದರ ಪಾಶ್ಚಾತ್ಯ ಶಿಷ್ಯೆಯೊಬ್ಬಳಿಂದ ಬಂದಿರುವ ಈ ಹೇಳಿಕೆ ಅತಿ ಮಹತ್ತ್ವದ್ದು. ಪಾಶ್ಚಾತ್ಯ ಸಂಸ್ಕೃತಿಯ ಫಲವಾಗಿ ಆಕೆಯಲ್ಲಿ ಸಹಜವಾಗಿಯೇ ಹಿಂದೂಧರ್ಮ ವಿರೋಧಿ ಪೂರ್ವಗ್ರಹಗಳು ಸಾಕಷ್ಟಿದ್ದುವು. ಅವಳ ದೃಷ್ಟಿಯಲ್ಲಿ ಅದೊಂದು ಕ್ಷುದ್ರ ಅಸಂಸ್ಕೃತ ಮತಧರ್ಮವಾಗಿದ್ದಿತು. ಆದರೆ ಗುರುವಿನಿಂದ ಪಡೆದ ಶಿಕ್ಷೆಯ ಮತ್ತು ಶಿಕ್ಷಣದ ಫಲವಾಗಿ ಮುಂದೆ ಆಕೆ ಹಿಂದೂಧರ್ಮದ ಸೊಗಸನ್ನೂ ಉತ್ಕರ್ಷಣವನ್ನೂ ಅಭಿ ಮಾನಪೂರ್ವಕವಾಗಿ ಶಕ್ತಿಯುತವಾಗಿಯೇ ಪ್ರತಿಪಾದಿಸುವವಳಾದಳು.

ಹಿಂದೂಗಳ ಉದಾತ್ತ ಧಾರ್ಮಿಕ ಭಾವನೆಗಳನ್ನು ಅಮೆರಿಕದ ಜನ ಅಪಾರ್ಥ ಮಾಡಿಕೊಂಡಿದ್ದರು. ಭಾರತದಲ್ಲಿ ದುಡಿದಿದ್ದ ಪಾಶ್ಚಾತ್ಯ ಕ್ರಿಶ್ಚಿಯನ್ ಮಿಷನರಿಗಳ ದುರುದ್ದೇಶಪೂರಿತ ಅಪಪ್ರಚಾರದ ಫಲವಾಗಿ ಅವುಗಳ ವಿಕೃತರೂಪವನ್ನು ಮಾತ್ರ ಕಂಡು ಅಸಹ್ಯಪಟ್ಟಿದ್ದರು. ಈ ಮಿಷನರಿಗಳಿಗಾದರೋ ಸಾಧಿಸಿಕೊಳ್ಳಬೇಕಾದ ಸ್ವಾರ್ಥವು ಸಾಕಷ್ಟಿತ್ತು. ಹಿಂದೂ ಧರ್ಮದ ಬಗೆಗೆ ತಿಳಿವಳಿಕೆ ಪಾಶ್ಚಾತ್ಯರಿಗೆ ದೊರೆಯುತ್ತಿದ್ದದ್ದು ಕೇವಲ ಈ ಮಿಷನರಿಗಳ ಭಾಷಣ ಬರಹಗಳ ಮೂಲಕ ಮಾತ್ರ! ಸಹಜವಾಗಿಯೇ ಅವರು ಹಿಂದೂಧರ್ಮವನ್ನು ಹೀನಾಯ ಕಾಣುತ್ತಿದ್ದರು. ಆದುದರಿಂದಲೇ ಅವರ ಮನದಲ್ಲಿ ಮುಸುಕಿದ್ದ ಅಜ್ಞಾನ ಗ್ರಂಥಿಗಳನ್ನು ಬಿಡಿಸಿ ಭಾರತದ ಹಿಂದೂಧರ್ಮವನ್ನು ಸಮರ್ಥಿಸಲು, ಅದನ್ನು ತರ್ಕಬದ್ಧವೂ ವ್ಯವಸ್ಥಿತವೂ ಆದ ರೀತಿಯಲ್ಲಿ ಪ್ರತಿಪಾದಿಸುವುದು ತುಂಬ ಅವಶ್ಯವಾಗಿದ್ದಿತು. ಅತ್ಯಂತ ತೀಕ್ಷ್ಣಮತಿಯಾದ, ವಿಷಯದ ಬಗ್ಗೆ ಅತಿ ವಿಶಾಲ ಪಾಂಡಿತ್ಯವುಳ್ಳ ಮತ್ತು ಪಶ್ಚಿಮ ದೇಶಗಳ ಜನರಿಗೆ ಅವರ ಭಾಷೆಯಲ್ಲಿಯೇ ಅದನ್ನು ಮುಂದಿಡಬಲ್ಲ ಸಮರ್ಥ ವ್ಯಕ್ತಿಯೊಬ್ಬನ ಆವಶ್ಯಕತೆ ತುಂಬ ಇತ್ತು. ಇಂತಹ ಕೆಲಸವನ್ನು ಮಾಡುವ ಸಾಮರ್ಥ್ಯ ವಿವೇಕಾನಂದರಲ್ಲಿ ಪರಿಪೂರ್ಣವಾಗಿತ್ತು ಮತ್ತು ಅವರು ಅದನ್ನು ನಿರ್ವಹಿಸಿದಾಗ, “ಹಿಂದೂಧರ್ಮದ ಸೃಷ್ಟಿಯಾಯಿತು!”

‘ಹಿಂದೂ ಧಾರ್ಮಿಕ ಭಾವನೆಗಳು’ ವೈವಿಧ್ಯಮಯವಾದವು. ಪ್ರತಿಯೊಂದು ಮತದಲ್ಲಿಯೂ ಪಂಥದಲ್ಲಿಯೂ ಸೇರಿಕೊಂಡಿರುವಂಥವು. ಅವುಗಳಲ್ಲಿ ಭಿನ್ನಾಭಿಪ್ರಾಯಗಳೂ ಪರಸ್ಪರ ವಿರುದ್ಧಾಂಶಗಳೂ ಇರುವಂತೆ ತೋರುತ್ತವೆ. ಆದರೂ, ಇಂತಹ ಉಪದೇಶಗಳನ್ನೆಲ್ಲ ಸರ್ವಗ್ರಾಹಿಯೂ ಸೂಕ್ಷ್ಮಗ್ರಾಹಿಯೂ ಆದ ವಿಶೇಷ ಪರಿಜ್ಞಾನದ ರಕ್ಷಾಕವಚದಡಿಯಲ್ಲಿ ತರಬೇಕು; ಪರಸ್ಪರ ವಿರುದ್ಧಾಂಶಗಳನ್ನು ತರ್ಕ ಸಂಮತವಾಗಿ ಪರಿಹರಿಸಿ, ವೈವಿಧ್ಯವಿದ್ದರೂ ವೈರುದ್ಧ್ಯವಿಲ್ಲದಂತೆ ಸಮನ್ವಯ ಮಾಡಿ-ವಿವಿಧ ವರ್ಣರಂಜಿತ, ಆದರೆ ದರ್ಶನೀಯ, ಸುಂದರ ವಸ್ತ್ರದಂತೆ-ಅವನ್ನು ಒಂದು ಸಮಗ್ರ ದರ್ಶನವಾಗಿ ಬೆಸೆಯಬೇಕು. ಇಂತಹ ‘ಹಿಂದೂಧರ್ಮ’ವನ್ನು ಅಥವಾ ‘ಹಿಂದೂದರ್ಶನ’ವನ್ನು ಹಿಂದೂ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಸಂತೋಷದಿಂದ ಸ್ವೀಕರಿಸುವಂತಾಗಬೇಕು. ಅಸಾಧ್ಯವೆಸುವಷ್ಟರಮಟ್ಟಿಗೆ ಕಷ್ಟಕರವಾದ ಈ ಮಹತ್ಕಾರ್ಯವನ್ನು ಭಾರತದೇಶದ ಚರಿತ್ರೆಯಲ್ಲಿಯೇ ಮೊಟ್ಟಮೊದಲ ಬಾರಿಗೆ ಸಾಧಿಸಿದ ಕೀರ್ತಿ ಸ್ವಾಮಿ ವಿವೇಕಾನಂದರದು ಎಂದರೆ ಅದು ಅತಿಶಯೋಕ್ತಿಯಾಗಲಾರದು.

ಈಗ ಈ ಲೇಖನದ ಸಾರಾಂಶವನ್ನು ಕೊಡಲು ಪ್ರಯತ್ನಿಸುತ್ತೇವೆ:
ಹಿಂದೂಧರ್ಮ, ಜಾರತೂಷ್ಟ್ರಧರ್ಮ (ಅಥವಾ ಪಾರಸೀ ಧರ್ಮ) ಮತ್ತು ಯೆಹೂದ್ಯ ಧರ್ಮ ಎಂಬೀ ಮೂರು ಚರಿತ್ರ ಪೂರ್ವ ಧರ್ಮಗಳಲ್ಲಿ ಹಿಂದೂಧರ್ಮವು ಇಂದಿಗೂ ಶಕ್ತಿಯುತವಾಗಿ ಚಲಾವಣೆಯಲ್ಲಿದೆ. ಇತರ ಮತಗಳಿಗೂ ತನ್ನೆದೆಯಲ್ಲಿ ಗೌರವಯುತ ಸ್ಥಾನವನ್ನು ಕೊಟ್ಟು ಅವನ್ನು ತನ್ನದನ್ನಾಗಿ ಮಾಡಿಕೊಳ್ಳಬಲ್ಲ ಅದರ ವಿಶ್ವವ್ಯಾಪೀ ಮನೋಭಾವವೇ ಇದಕ್ಕೆ ಮುಖ್ಯ ಕಾರಣ. ವೇದಾಂತದ ಗೌರೀಶಂಕರ ಶಿಖರದಿಂದ ಹಿಡಿದು ಕೀಳ್ಮಟ್ಟದ  ಮೂರ್ತಿಪೂಜೆಯವರೆಗಿನ ಎಲ್ಲ ರೀತಿಯ ಕಲ್ಪನೆಗಳಿಗೂ ಇಲ್ಲಿ ಅವಕಾಶವಿದೆ. ಇವುಗಳೆಲ್ಲಕ್ಕೂ ಸಮಾನವಾದ ಆಧಾರ ಅಥವಾ ಕೇಂದ್ರಬಿಂದು ಎಂದರೇ ವೇದಗಳು. ಈ ‘ವೇದಗಳು’ ಕೇವಲ ಪುಸ್ತಕಗಳಲ್ಲ; ತಲೆತಲಾಂತರಗಳಿಂದ ಶೇಖರಿತವಾಗಿರುವ ಅಧ್ಯಾತ್ಮವಿದ್ಯೆಯ ಆಕರಗಳು. ಅವುಗಳ ಆವಿಷ್ಕಾರಕರೇ ‘ಋಷಿ’ಗಳು ಈ ಋಷಿಗಳಲ್ಲಿ ಕೆಲವರು ಮಹಿಳೆಯರು.

ಈ ಸೃಷ್ಟಿಯು ಆದ್ಯಂತರಹಿತವಾದದ್ದು. ನಮ್ಮೆಲ್ಲರ ಶರೀರಗಳಲ್ಲಿ ವಾಸಿಸುತ್ತಿರುವ ಆತ್ಮ ಚೈತನ್ಯವು ಜನನ-ಮರಣ-ರಹಿತವಾದದ್ದು, ಶಾಶ್ವತವಾದದ್ದು, ಪರಿಪೂರ್ಣಸ್ವರೂಪವುಳ್ಳದ್ದು. ತನ್ನ ಪೂರ್ವ ಕರ್ಮಗಳಿಗೆ ತಕ್ಕ ಫಲವನ್ನು ಕೊಡಬಲ್ಲಂಥ ಶರೀರವನ್ನು ಅದು ಸ್ವಯಂ ಆರಿಸಿಕೊಂಡು ಅದರಲ್ಲಿ ಹುಟ್ಟುತ್ತದೆ. ಅದಕ್ಕೆ ಮರಣವೆಂಬುದು ಕೇವಲ ಒಂದು ಶರೀರವೆಂಬ ಕ್ಷೇತ್ರದಿಂದ ಮತ್ತೊಂದು ಶರೀರವೆಂಬ ಕ್ಷೇತ್ರಕ್ಕೆ ಮಾಡುವ ಯಾತ್ರೆಯಷ್ಟೆ.

ವೇದಗಳು ದೇವರನ್ನು ಒಪ್ಪುತ್ತವೆ. ಅವನು ಆದಿಪುರುಷನು. ಅವನನ್ನು ಅರಿಯುವುದರಿಂದ ನಾವು ಜನನ-ಮರಣ-ರೂಪದ ಸಂಸಾರಚಕ್ರದಿಂದ ಪಾರಾಗುತ್ತೇವೆ. ಅವನು ನಿತ್ಯಶುದ್ಧನು, ನಿರಾಕಾರನು, ಸರ್ವಶಕ್ತನು ಮತ್ತು ಪರಮದಯಾಳುವು. ಅಷ್ಟೇ ಅಲ್ಲ, ಅವನು ಈ ಜಗತ್ತಿನಲ್ಲಿ ಅವತರಿಸಬಲ್ಲ. ‘ಅಮೃತಸ್ಯ ಪುತ್ರಾ’ (ಅಮೃತತ್ವದ ಮಕ್ಕಳೇ) ಎಂದು ಮಾನವರನ್ನು ಸಂಬೋಧಿಸುವುದರ ಮೂಲಕ ವೇದಗಳು ಅವರು ಪಾಪಿಗಳೆಂದು ಭಾವಿಸುವ ಕಲಂಕವನ್ನು ತೊಡೆದುಹಾಕಿವೆ.

ಜಡಪ್ರಕೃತಿಗೆ ಸೆರೆಸಿಕ್ಕುವುದೇ ಆತ್ಮಚೈತನ್ಯದ ಬಂಧನ. ಈ ಬಂಧನವನ್ನು ದೇವರ ಅನುಗ್ರಹದಿಂದ ಹೋಗಲಾಡಿಸಿಕೊಳ್ಳಬಹುದು. ಮನಶ್ಶುದ್ಧಿಯೇ ದೇವರ ಅನುಗ್ರಹವನ್ನು ಪಡೆಯಲು ಇರುವ ಉಪಾಯ. ವೈರಾಗ್ಯಯುತ ಜೀವನ ಮತ್ತು ಭಗವದ್ಭಕ್ತಿ- ಇವು ಮನಶ್ಶುದ್ಧಿಯನ್ನು ಸಾಧಿಸಿಕೊಡುತ್ತವೆ. ದೈವಸಾಕ್ಷಾತ್ಕಾರದ ಮೂಲಕ ಕೈವಲ್ಯವನ್ನು ಪಡೆಯುವವರು ಶಾಶ್ವತ ಪರಮ ಆನಂದದಲ್ಲಿ ವಾಸಿಸುತ್ತಾರೆ; ಸರ್ವಾತ್ಮಭಾವವನ್ನು ಪಡೆದುಕೊಳ್ಳುತ್ತಾರೆ.

ಹಿಂದೂಧರ್ಮವು ಬಹುದೇವತಾ ವಾದವನ್ನು ಪ್ರತಿಪಾದಿಸುವುದಿಲ್ಲ ಎನ್ನುತ್ತಾರೆ ವಿವೇಕಾನಂದರು. ವಿವಿಧ ದೇವತೆಗಳು ಒಂದೇ ಪರಮಸತ್ಯದ ವಿವಿಧ ರೂಪಗಳು, ನಾಮಗಳು, ಅಷ್ಟೇ.

ಧಾರ್ಮಿಕ ಚಿಹ್ನೆಗಳು ಸ್ವತಃ ದೇವರಲ್ಲ; ಆದರವು ಆಧ್ಯಾತ್ಮ ಜೀವನದ ಪ್ರಗತಿಗೆ ಸಹಾಯಕ. ಈ ದೃಷ್ಟಿಯಿಂದ ಮಾತ್ರ ಅವನ್ನು ಒಪ್ಪಿಕೊಳ್ಳಲಾಗಿದೆ.

ವೈವಿಧ್ಯದಲ್ಲಿ ಏಕತೆ -ಇದು ಹಿಂದೂ ಧರ್ಮದ ಮತ್ತೊಂದು ವೈಶಿಷ್ಟ್ಯ. ಇದರಲ್ಲಿ ವಿಗ್ರಹಾರಾಧನೆಯನ್ನು ನಿಂದಿಸಿಲ್ಲ. ಆದರದು ಅಧ್ಯಾತ್ಮ ಜೀವನವಿಕಾಸದ ಪ್ರಾಥಮಿಕ ಹಂತಗಳಲ್ಲಿ ಆವಶ್ಯಕವೆಂದು ಭಾವಿಸಲಾಗಿದೆ.

ಮುಕ್ತಾಯದಲ್ಲಿ ವಿವೇಕಾನಂದರು ಆದರ್ಶಸರ್ವಸಮ್ಮತ ವಿಶ್ವಧರ್ಮವೊಂದಿರಬೇಕಾದರೆ ಅದರ ಲಕ್ಷಣಗಳು ಹೇಗಿರಬೇಕು ಎಂಬುದನ್ನು ವಿವರಿಸಿರುತ್ತಾರೆ. ಈ ಲಕ್ಷಣಗಳು ಅವರೇ ಇದುವರೆಗೆ ಈ ಲೇಖನದಲ್ಲಿ ವಿವರಿಸಿರುವ ಹಿಂದೂ ಧರ್ಮಕ್ಕೆ ಬಹು ಚೆನ್ನಾಗಿ ಅನ್ವಯವಾಗುತ್ತವೆ.

`ಭಾರತದ ತೀವ್ರವಾದ ಅಗತ್ಯ ಮತಧರ್ಮವಲ್ಲ‘ (Religion, not the Crying Need of India) ಎಂಬ ಮುಂದಿನ ಉಪನ್ಯಾಸವು ಒಂದು ಕಟುಟೀಕೆ. ಕ್ರಿಶ್ಚಿಯನ್ ದೇಶಗಳು ಹಸಿವಿನಿಂದ ಕಂಗಾಲಾದ ಭಾರತದ ಬಡ ಜನರಿಗೆ ಆಹಾರ ಸಾಮಗ್ರಿಗಳನ್ನೊದಗಿಸುವ ಬದಲು ಧರ್ಮಪ್ರಚಾರಕರನ್ನು ಕಳುಹಿಸುತ್ತಿರುವ ಮತಾಂತರ ಮನೋಭಾವದ ಮೇಲೆ ಮಾಡಿರುವ ತೀವ್ರ ಧಾಳಿ. ಆದರೆ ಸ್ವಾಮೀಜಿ ಇದನ್ನು ಯಾತನೆಯಿಂದ ಮಾಡಿರುವರೇ ಹೊರತು ಕೋಪದಿಂದಲ್ಲ.

‘ಅನ್ನವನ್ನು ಕೇಳಿದವನಿಗೆ ಕಲ್ಲನ್ನು ಕೊಡುವರೆ?’ ಎಂಬ ಬೈಬಲ್ಲಿನ (Mathew 7.9) ವ್ಯಂಗ್ಯೋಕ್ತಿಯನ್ನು ಈ ದೇಶದ ಜನ ನಿಜವಾಗಿಯೂ ‘ಕಲ್ಲನ್ನು ಕೊಟ್ಟು’ ಸಾಧಿಸಿಬಿಟ್ಟಿರುತ್ತಾರೆ! ಈ ಪ್ರವಚನದ ಕಡೆಯಲ್ಲಿ, ಸಭಾಂಗಣದಿಂದ ಹೊರಗಡೆಗೆ ಬರುತ್ತಿದ್ದ ಜನರಲ್ಲೊಬ್ಬ, ‘ಆ ವ್ಯಕ್ತಿ ಧರ್ಮಭ್ರಷ್ಟನೆ? ನಾವು ಅವನ ದೇಶದ ಜನರಿಗಾಗಿ ಧರ್ಮಪ್ರಚಾರಕರನ್ನು ಕಳಿಸುತ್ತಿದ್ದೇವೆ! ಏನಾಶ್ಚರ್ಯ!’ ಎಂದು ಉದ್ಗಾರ ಮಾಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ (The Life of Swami Vivekananda, vol.1. p.429)

ಭೌದ್ಧಧರ್ಮ : ಹಿಂದೂಧರ್ಮದ ಸಾಫಲ್ಯ (Buddhism: the Fulfillment of Hinduism) ಎಂಬ ತಮ್ಮ ಉಪಾಂತ ಪ್ರವಚನದಲ್ಲಿ ವಿವೇಕಾನಂದರು ಬುದ್ಧನನ್ನು ಇಳೆಗಿಳಿದು ಬಂದ ಭಗವದವತಾರ ಎಂದು ಪ್ರಶಂಸಿಸಿರುತ್ತಾರೆ. ಬುದ್ಧನು ಹಿಂದೂಧರ್ಮವೆಂಬ ತನ್ನ ಮಾತೃಧರ್ಮವನ್ನು ಮತ್ತಷ್ಟು ಪೂರ್ಣಗೊಳಿಸಲು ಬಂದನೇ ಹೊರತು ಅದನ್ನು ನಾಶಪಡಿಸುವುದಕ್ಕಾಗಿ ಅಲ್ಲ. ಅವನ ಶಿಷ್ಯರೇ ಅವನನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಮರ್ಥರಾಗಲಿಲ್ಲ. ಈ ಕಾರಣದಿಂದ ಹಿಂದೂಧರ್ಮವು ಕವಲೊಡೆಯಲು ಅವರು ದಾರಿ ಮಾಡಿಕೊಟ್ಟಂತಾಯಿತು. ಶಾಕ್ಯಮುನಿಯು (ಗೌತಮಬುದ್ಧನು) ಹಿಂದೂಧರ್ಮದ ಕ್ರಿಯಾಕಾಂಡವನ್ನು ಉಪೇಕ್ಷಿಸಿ ಆಧ್ಯಾತ್ಮ ತತ್ತ್ವಗಳನ್ನು ಮಾತ್ರ ಉಪದೇಶಿಸಿದನು. ಜನಸಾಮಾನ್ಯರ ಬಗೆಗೆ ಅತ್ಯಂತ ಅನುಕಂಪೆಯನ್ನು ಹೊಂದಿದ್ದ ಆತ ಪ್ರಪಂಚದ ಮೊಟ್ಟ ಮೊದಲನೆ ಧರ್ಮಪ್ರಚಾರಕನೆನ್ನಬಹುದು. ಕಾಲಕ್ರಮದಲ್ಲಿ ಹಿಂದೂಧರ್ಮ ಬೌದ್ಧಧರ್ಮವನ್ನು ತನ್ನಲ್ಲಿಯೇ ಅರಗಿಸಿಕೊಂಡಿತು, ನಿಜ. ಆದರೂ ವಿವೇಕಾನಂದರು ‘ಬ್ರಾಹ್ಮಣರ ಅದ್ಭುತ ಮೇಧಾಶಕ್ತಿಯ ಮತ್ತು ಬುದ್ಧನ ಹೃದಯದ, ಅದ್ಭುತ ಮಾನವೀಯ ಶಕ್ತಿಯ’ ಮಧುರ ಸಮತೋಲನದ ಮಿಶ್ರಣವನ್ನು ಪ್ರತಿಪಾದಿಸುತ್ತಾರೆ.

ಸರ್ವಧರ್ಮಸಮ್ಮೇಳನದ ಕೊನೆಯ ಅಧಿವೇಶನದಂದು (ಸೆಪ್ಟೆಂಬರ್ ೨೭, ೧೮೯೩) ಅವರಿತ್ತ ಭಾಷಣವು- ಅವರ ಪ್ರಪ್ರಥಮ ಪ್ರವಚನದಂತೆಯೇ ಪುಟ್ಟದಾಗಿದ್ದರೂ- ಅವರ ಇತರ ಭಾಷಣಗಳಂತೆಯೇ ವಿಶ್ವವ್ಯಾಪಕ ದೃಷ್ಟಿಯಿಂದ ಕೂಡಿತ್ತು. ಈ ಬೃಹತ್ ಸಮ್ಮೇಳನವನ್ನು ಆಯೋಜಿಸಿ ನಡೆಸಿಕೊಟ್ಟಿದ ಮಹನೀಯರೆಲ್ಲರನ್ನೂ ಅಭಿನಂದಿಸಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದ ಮೇಲೆ ವಿವೇಕಾನಂದರು, ‘ಯಾವ ಧರ್ಮವೇ ಆಗಲಿ ಇತರ ಧರ್ಮಗಳನ್ನೆಲ್ಲ ನಾಶವಡಿಸಿ ತಾನು ಮಾತ್ರ ಉಳಿಯುವುದು ಸಾಧ್ಯವಿಲ್ಲ’ ಎಂದು ಇದರಲ್ಲಿ ಘೋಷಿಸಿರುತ್ತಾರೆ. ಯಾರೂ ತಮ್ಮ ಧರ್ಮ ತ್ಯಜಿಸಿ ಮತಾಂತರ ಹೊಂದಬೇಕಾಗಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮದ ಆಧಾರಸ್ವರವನ್ನವಲಂಬಿಸಿ ವಿಕಾಸ ಹೊಂದಬಹುದು. ಆದರೆ ಜೊತಜೊತೆಯಲ್ಲಿಯೇ ಇತರ ಧರ್ಮಗಳ ಸಾರವನ್ನೂ ಅರಗಿಸಿಕೊಳ್ಳಲು ಪ್ರಯತ್ನಿಸಬೇಕು. ಈ ಸರ್ವಧರ್ಮ ಸಮ್ಮೇಳನವು ಜಗತ್ತಿಗೆ ಏನನ್ನಾದರೂ ಪ್ರದರ್ಶಿಸಿದ್ದರೆ ಅದು ಇದೇ: ಪವಿತ್ರತೆ, ಪರಿಶುದ್ಧತೆ ಮತ್ತು ಉದಾರತೆ ಎಂಬ ಸದ್ಗುಣಗಳು ಈ ಪ್ರಪಂಚದ ಯಾವ ಒಂದು ಮತದ ಧರ್ಮದ ಅಥವಾ ಸಂಪ್ರದಾಯದ ವಿಶೇಷ ಸೊತ್ತಲ್ಲ; ಪ್ರತಿಯೊಂದು ಧಾರ್ಮಿಕ ಸಂಪ್ರದಾಯವೂ ಅತ್ಯುನ್ನತ ಶೀಲಸಂಪನ್ನರಾದ ಸ್ತ್ರೀಪುರುಷ ವ್ಯಕ್ತಿಗಳನ್ನು ನಿರ್ಮಾಣ ಮಾಡಿದೆ. ಪರಸ್ಪರ ಸಹಾಯ, ಇತರ ಧರ್ಮಗಳಲ್ಲಿನ ಸಾರವನ್ನು ಸ್ವೀಕರಿಸಿ ತಮ್ಮದನ್ನಾಗಿ ಮಾಡಿಕೊಳ್ಳುವುದು, ಇತರ ಜನರೊಂದಿಗೆ ಶಾಂತಿ-ಸೌಹಾರ್ದಯುತ ಬಾಳ್ವೆ – ಇದು ಈ ಸಮ್ಮೇಳನದಿಂದ ಹೊರಹೊಮ್ಮಿ ಬಂದಿರುವ ಚರಮ ಸಂದೇಶ.

ಈ ವಿಶ್ವಧರ್ಮಸಮ್ಮೇಳನವು ಏನನ್ನಾದರೂ ಸಾಧಿಸಿದ್ದರೆ ಅದು ಇದೇ; ಮತ್ತು, ಅದಕ್ಕೆ ಸ್ವಾಮಿ ವಿವೇಕಾನಂದರಿತ್ತ ಕೊಡುಗೆ ಅತ್ಯಂತ ಗಣನೀಯವಾದುದು.