ಬುದ್ಧನ ವಿಶ್ವವ್ಯಾಪಕ ಪ್ರೇಮಕ್ಕೆ ಮಾರುಹೋಗಿದ್ದ ಸ್ವಾಮಿ ವಿವೇಕಾನಂದರು ಬುದ್ಧನ ಉತ್ತರೋತ್ತರ ಕಾಲದಲ್ಲಿ ಬೆಳೆದ ಬೌದ್ಧಮತದ ಐತಿಹಾಸಿಕ ಪರಿಣಾಮಗಳ ಬಗ್ಗೆ ತಮ್ಮದೇ ಆದ ಸ್ವಂತ ಅಭಿಪ್ರಾಯಗಳನ್ನು ಹೊಂದಿದ್ದರು. ಸ್ವಾಮೀಜಿಯವರ ವಿಮರ್ಶಾತ್ಮಕ ವಿಚಾರಗಳ ಅಧ್ಯಯನ ನಡೆಸಿರುವ ಡಾ.ಎಚ್.ರಾಮಚಂದ್ರಸ್ವಾಮಿಯವರು ಮೈಸೂರು ವಿಶ್ವವಿದ್ಯಾನಿಲಯದ ವಿವೇಕಾನಂದ ಪೀಠದ ಪ್ರಾಧ್ಯಾಪಕರಾಗಿರುವರು.

ಗೌತಮಬುದ್ಧ, ಶಂಕರ, ವಿವೇಕಾನಂದ-ಈ ಮೂವರೂ ಭಾರತೀಯ ಧಾರ್ಮಿಕ ಇತಿಹಾಸದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದವರು, ದ್ರಷ್ಟಾರರೆನಿಸಿಕೊಂಡವರು, ಲೋಕಸಂಸ್ಕೃತಿಗೆ ತಮ್ಮದೇ ಆದ ಕೊಡುಗೆಯನ್ನು ಸಲ್ಲಿಸಿದವರು, ವಿಶ್ವಪ್ರಾಮುಖ್ಯತೆಯ ಸಂದೇಶವನ್ನಿತ್ತು ಮಹಾಚಾರ್ಯರೆನಿಸಿಕೊಂಡವರು. ಮೂವರಿಗೂ ನಿರ್ವಿಕಲ್ಪ ಸಮಾಧಿಯಲ್ಲಿ ಬ್ರಹ್ಮ ಸಾಕ್ಷಾತ್ಕಾರವಾಗಿತ್ತು (ಬೌದ್ಧಧರ್ಮದಲ್ಲಿ ಇದಕ್ಕೆ ‘ಬೋಧಿ’ ಅಥವಾ ‘ನಿರ್ವಾಣ’ ಎನ್ನುತ್ತಾರೆ.) ಬುದ್ಧನು ಬಹಿರಂಗದಲ್ಲಿ ದೇವರು, ವೇದಾಂತ ಇತ್ಯಾದಿಗಳನ್ನು ಒಪ್ಪದಿದ್ದರೂ, ಅಂತರಂಗದಲ್ಲಿ ಅದ್ವೈತಿಯಾಗಿದ್ದನು; ಆದರೆ ಇತರ ಆಚಾರ್ಯರಂತೆ ಅನಿರ್ವಚನೀಯವಾದ ಬ್ರಹ್ಮವನ್ನು ಅಭಿವ್ಯಕ್ತಗೊಳಿಸುವ ಪ್ರಯತ್ನವನ್ನೇ ಮಾಡಲಿಲ್ಲ. ಬುದ್ಧನ ಬೋಧನೆಗಳಿಗೂ ಉಪನಿಷತ್ತುಗಳೇ ಮೂಲವಾದರೂ, ಅವನು ಉಪನಿಷತ್ತುಗಳನ್ನು ಮಾನ್ಯ ಮಾಡಲಿಲ್ಲವಾಗಿ ಬೌದ್ಧಧರ್ಮವು ಹಿಂದೂಧರ್ಮದಿಂದ ಬೇರೆಯಾಗಿ ನಿಲ್ಲುವಂತಾಯಿತು. ಸಂನ್ಯಾಸಿಗಳ ಸಂಘವನ್ನು ಸ್ಥಾಪಿಸಿದ್ದು ಬುದ್ಧನ ಹಿರಿಮೆ, ಸನ್ಯಾಸಿನಿಯರನ್ನೂ ಅವನು ಸಂಘ ಬದ್ಧರನ್ನಾಗಿಸಿದನು.

ಬುದ್ಧನ ಬೋಧನೆಗಳ ಮುಖ್ಯವಾದ ಅಂಶವೇ ಸ್ವಾರ್ಥವನ್ನು ಬಿಡುವುದು ಮತ್ತು ಜೀವಕಾರುಣ್ಯವನ್ನು ಬೆಳೆಸಿಕೊಳ್ಳುವುದು. ಬುದ್ಧನು ಸ್ವಯಂ ತಾನೇ ಇವೆರಡೂ ಮೈವೆತ್ತುಬಂದಂತೆ ಇದ್ದನು. ಲೋಕದಲ್ಲಿ ಇರುವ ಕೇಡನ್ನು ಪ್ರತಿರೋಧಿಸುವುದಕ್ಕೆ ಹೋಗಬಾರದು ಮಾತ್ರವಲ್ಲ, ಮನಸ್ಸಿಗೆ ತಂದುಕೊಳ್ಳಬಾರದು ಎಂಬುದು ಅವನ ಬೋಧನೆ. ಯಾವುದೇ ಶ್ರುತಿ, ದೇವರು, ವಿಧಿ, ಆತ್ಮ, ಸ್ವರ್ಗನರಕಾದಿಗಳು ಮುಂತಾದುವುಗಳ ಸೊಲ್ಲೇ ಇಲ್ಲದಿರುವುದೊಂದೇ ಬೌದ್ಧಮತದ ವಿಶೇಷ. ಉಳಿದಂತೆ ಹಿಂದೂಧರ್ಮದ ತತ್ತ್ವಗಳೆಲ್ಲವೂ ಇಲ್ಲಿ ಅಡಕವಾಗಿರುವುದನ್ನು ನಾವು ಕಾಣಬಹುದು.

ಹಿಂದೂಧರ್ಮವು ಬುದ್ಧನನ್ನು ವಿಷ್ಣುವಿನ ಅವತಾರವೆಂದು ಒಪ್ಪಿಕೊಂಡಿದೆ. ಇಡೀ ಭಾರತೀಯ ದರ್ಶನಗಳನ್ನು ಸರ್ವೇಕ್ಷಣ ಮಾಡುವ ಮಾಧವಾಚಾರ್ಯರ (ಕ್ರಿ.ಶ.೧೪೦೦) “ಸರ್ವದರ್ಶನ ಸಂಗ್ರಹ”ದಲ್ಲಿ ಇರುವ ಹದಿನಾರು ದರ್ಶನಗಳಲ್ಲಿ ಬೌದ್ಧಧರ್ಮಕ್ಕೆ ಎರಡನೆಯ ಸ್ಥಾನವನ್ನು ಕೊಟ್ಟಿರುವರು. ಸಾಮಾನ್ಯವಾಗಿ ಬೌದ್ಧಧರ್ಮವನ್ನು ಭಾರತೀಯ ತತ್ತ್ವಶಾಸ್ತ್ರದ ಪರಿಧಿಯೊಳಗೇ ಪರಿಗಣಿಸುತ್ತಾರೆ. ಬಂಗಾಳದ ವೈಷ್ಣವ ಪಂಥದವರ ಅಹಿಂಸಾ ತತ್ತ್ವವು ಬೌದ್ಧಧರ್ಮದಿಂದಲೇ ಬಂದುದಾಗಿದೆ. ಗಿರೀಶಚಂದ್ರ ಘೋಷ್ (೧೮೮೭) ತನ್ನ “ಬುದ್ಧಚರಿತೆ” ಎಂಬ ನಾಟಕದಲ್ಲಿ ಬುದ್ಧನು ಅವತಾರಪುರುಷ ಎಂದು ಚಿತ್ರಿಸಿದ್ದಾನೆ. ಭಾರತದಲ್ಲಿ ಬೌದ್ಧ ಧರ್ಮವು ನಾಶವಾಗಲಿಲ್ಲ, ಉಪನಿಷತ್ತುಗಳಲ್ಲಿ ಹುಟ್ಟಿದ ಅದು ನವಯುಗದ ಹಿಂದೂಧರ್ಮವಾಯಿತು ಎಂದು ಧಾರಾಳವಾಗಿ ಹೇಳಬಹುದು.

ಜೀವನಮೌಲ್ಯಗಳ ಪರಮೋಚ್ಚ ಶಿಖರವನ್ನು ತಲುಪಿದ ಮಹಾಮಾನವ ಗೌತಮಬುದ್ಧ. ನಲವತ್ತೈದು ವರ್ಷಗಳಷ್ಟು ದೀರ್ಘಕಾಲ ಎಡೆಬಿಡದೆ ಉಪದೇಶ ಮಾಡುತ್ತ ಜನರನ್ನು ಉದ್ಧರಿಸಲು ಪ್ರಯತ್ನಿಸಿದ ಆತನಂತಹ ಇನ್ನೊಂದು ಉದಾಹರಣೆ ಧರ್ಮದ ಚರಿತ್ರೆಯಲ್ಲಿ ಇಲ್ಲ. ಹತ್ತಾರು ಶತಮಾನಗಳಿಂದ ಬುದ್ಧನ ಧ್ಯಾನಮುದ್ರೆಯ ಪ್ರತಿಮೆಗಳು ನಮ್ಮ ಬದುಕಿಗೆ ದಾರಿದೀಪಗಳಾಗಿವೆ. ಆರ್ಷೇಯವಾಗಿ ಮರೆತೇ ಹೋದಂತಿದ್ದ ಬುದ್ಧನ ಬೋಧನೆಗಳನ್ನೂ ಆದರ್ಶವನ್ನೂ ಸಂಶೋಧನಾತ್ಮಕ ಬರಹಗಳ ಮೂಲಕ ಬೆಳಕಿಗೆ ತಂದ ಪಾಶ್ಚಾತ್ಯ ವಿದ್ವಾಂಸರುಗಳಿಗೆ ಭಾರತವು ಕೃತಜ್ಞವಾಗಿರಬೇಕು.

ವಿವೇಕಾನಂದರು ಬೌದ್ಧಧರ್ಮವನ್ನು ಹಿಂದೂಧರ್ಮದ ಭಾಗವಾಗಿ ಪರಿಗಣಿಸಿದ್ದರು. ಬುದ್ಧನ ಜ್ವಲಂತ ಸಂದೇಶದ ಹಿರಿಮೆಯನ್ನು ಪ್ರಚುರಪಡಿಸಿದವರಲ್ಲಿ ಸ್ವಾಮಿ ವಿವೇಕಾನಂದರೂ ಒಬ್ಬರು. ಅವರು ಬುದ್ಧನಿಗೆ ಭಾವಪೂರ್ಣವಾಗಿ ತಮ್ಮ ಹೃದಯಾಳದ ಪ್ರಶಂಸೆಯನ್ನು ಸಲ್ಲಿಸುತ್ತಾರೆ. ೧೮೯೮ರ ಮೇನಲ್ಲಿ ಆಲ್ಮೋರದಲ್ಲಿ ವಿಶ್ರಾಂತಿಗಾಗಿ ತಂಗಿದ್ದಾಗ ಒಮ್ಮೆ ಅವರು ಹೇಳುತ್ತಾರೆ: “ನಾನು ಬುದ್ಧನ ಸೇವಕರ ಸೇವಕರ ಸೇವಕ. ಅಂತಹ ವ್ಯಕ್ತಿ ಇನ್ನಾರಿದ್ದಾರೆ? ಅವನು ತನಗಾಗಿ ಒಂದೇ ಒಂದು ಕಾರ್ಯವನ್ನೂ ಮಾಡಲಿಲ್ಲ. ಅವನ ಹೃದಯ ಇಡೀ ಜಗತ್ತನ್ನು ಆಲಿಂಗಿಸಿತ್ತು. ಎಂಥ ಅನುಕಂಪೆ! ಒಂದು ಚಿಕ್ಕ ಆಡನ್ನು ರಕ್ಷಿಸುವುದಕ್ಕಾಗಿ ತನ್ನ ಜೀವವನ್ನೇ ಕೊಡಲು ಸಿದ್ದನಿದ್ದ! ಅವನ ಪ್ರೀತಿ ಎಂತಹುದೆಂದರೆ ಒಂದು ಹಸಿದ ವ್ಯಾಘ್ರಿಗಾಗಿ ತನ್ನನ್ನೇ ಅರ್ಪಿಸುತ್ತಾನೆ! ಚಂಡಾಲನ ಅತಿಥ್ಯ ಸ್ವೀಕರಿಸಿ ಅವನನ್ನು ಹರಸುತ್ತಾನೆ. ನಾನು ಬಾಲಕನಾಗಿದ್ದಾಗ ಬುದ್ಧನು ನನ್ನ ಕೊಠಡಿಗೆ ಬಂದಿದ್ದನು, ನಾನು ಅವನ ಪಾದಕ್ಕೆರಗಿದೆ. ಏಕೆಂದರೆ ಅವನು ದೇವರೇ ಎಂದು
ನನಗೆ ತಿಳಿದಿತ್ತು”( Life of Swami Vivekananda by His Eastern and Western Disciples, Vol.2. p.340).

ಎಲ್ಲಿಯವರೆಗೆ ಬುದ್ಧನ ಹೃದಯವು ಮತ್ತೆ ಭರತಖಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲವೋ, ಶ್ರೀಕೃಷ್ಣನ ಬೋಧನೆಯು ಅನುಷ್ಠಾನಕ್ಕೆ ಬರುವುದಿಲ್ಲವೋ ಅಲ್ಲಿಯವರೆಗೆ ನಮಗೆ ಭರವಸೆ ಇಲ್ಲ. – ಸ್ವಾಮಿ ವಿವೇಕಾನಂದ.

೧೯೦೦ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೀಡಿದ ಜಗತ್ತಿಗೆ ಬುದ್ಧನ ಸಂದೇಶ ” ಎಂಬ ಉಪನ್ಯಾಸದಲ್ಲಿ ಅವರೆನ್ನುತ್ತಾರೆ :

‘ಬುದ್ಧನ ಜೀವನವೆ ಒಂದು ದೊಡ್ಡ ಆಕರ್ಷಣೆಯಾಗಿದೆ. ನನಗೆ ಬುದ್ಧನ ಜೀವನದ ಮೇಲೆ ಪ್ರೀತಿ, ಆದರೆ ಅವನ ಸಿದ್ಧಾಂತದ ಮೇಲೆ ಇಲ್ಲ. ನಾನು ಆ ಪವಿತ್ರಾತ್ಮನ ಶೀಲವನ್ನು ಎಲ್ಲರಿಗಿಂತ ಹೆಚ್ಚಾಗಿ ಗೌರವಿಸುತ್ತೇನೆ. ಅವನಲ್ಲಿದ್ದ ಧೈರ್ಯ, ನಿರ್ಭಯತೆ, ಪ್ರೇಮ ಅದ್ಭುತ! ಮಾನವಹಿತಕ್ಕಾಗಿ ಅವನು ಜನ್ಮವೆತ್ತಿದ. ಇತರರು ತಮಗಾಗಿ ದೇವರನ್ನು ಹುಡುಕಿರಬಹುದು, ಸತ್ಯವನ್ನು ಹುಡುಕಿರಬಹುದು. ಆದರೆ ಈತ ಕೇವಲ ತನಗಾಗಿ ಮಾತ್ರ ಸತ್ಯವನ್ನು ಹುಡುಕಲು ಯತ್ನಿಸಿದವನಲ್ಲ. ಜನರು ದುಃಖದಲ್ಲಿದ್ದುದರಿಂದ ಅವನು ಸತ್ಯವನ್ನು ಅರಸಿದ. ಅವರಿಗೆ ಹೇಗೆ ಸಹಾಯ ಮಾಡಬೇಕು ಎಂಬುದೊಂದೆ ಅವನ ಜೀವನದ ಏಕಮಾತ್ರ ಧ್ಯೇಯವಾಗಿತ್ತು. ಬದುಕಿರುವ ಪರ್ಯಂತ ಒಮ್ಮೆಯಾದರೂ ತನಗಾಗಿ ಯೋಚಿಸಿದವನಲ್ಲ ಅವನು. ಈ ಮಹಿಮನ ಮಹಾತ್ಮೆಯನ್ನು ನಮ್ಮಂತಹ ಅಜ್ಞರು, ಸ್ವಾರ್ಥಿಗಳು, ಸಂಕುಚಿತ ದೃಷ್ಟಿಯವರು ಹೇಗೆ ಅರ್ಥಮಾಡಿಕೊಳ್ಳಬಲ್ಲರು? (ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ , ಸಂ. ೭, ಪು.೪೯).

ವಿವೇಕಾನಂದರು ಬುದ್ಧನನ್ನು ಅತ್ಯುನ್ನತ ಮಟ್ಟದಲ್ಲಿ ಪರಿಭಾವಿಸುತ್ತಾರೆಯಾದರೂ ಪ್ರಚಲಿತ ಬೌದ್ಧಧರ್ಮದ ಮೇಲೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಚಿಕಾಗೋ ಸರ್ವಧರ್ಮಸಮ್ಮೇಳನದಲ್ಲಿ ಮಾಡಿದ ‘ಬೌದ್ಧಧರ್ಮ: ಹಿಂದೂಧರ್ಮದ ಸಾಫಲ್ಯ’ ಎಂಬ ಉಪನ್ಯಾಸದಲ್ಲಿ “ಬುದ್ಧಗುರುವಿನ ಶಿಷ್ಯರು ವೇದಗಳೆಂಬ ಸನಾತನವಾದ ದೊಡ್ಡ ಬಂಡೆಗೆ ಡಿಕ್ಕಿ ಹೊಡೆದರು. ಅವುಗಳನ್ನು ಪುಡಿಮಾಡುವುದು ಅವರಿಂದಾಗಲಿಲ್ಲ. ಪ್ರತಿಯೊಬ್ಬ ಸ್ತ್ರೀಪುರುಷರೂ ಯಾವ ಸನಾತನ ಭಗವಂತನನ್ನು ಪ್ರೀತಿಯಿಂದ ಆಶ್ರಯಿಸಿದ್ದರೋ ಅವನನ್ನು ಈ ರಾಷ್ಟ್ರದಿಂದಲೇ ಹೊರದೂಡಿದರು” ಎಂದಿದ್ದಾರೆ.

ಗೌತಮ ಬುದ್ಧನನ್ನು ಪ್ರಪಂಚದ ಮೊಟ್ಟಮೊದಲನೆಯ ಅಸ್ತಿತ್ವವಾದಿ ಎನ್ನಬಹುದು. ಮಾನವ ಜನಾಂಗವನ್ನು ಬಂಧನದಿಂದ ಬಿಡಿಸಿ ಸ್ವಾತಂತ್ರ್ಯದೆಡೆಗೆ ಕರೆದೊಯ್ಯಲು ಅವನು ತನ್ನಿಂದ ಸಾಧ್ಯವಾದುದನ್ನೆಲ್ಲ ಮಾಡಿದ. ಮನುಷ್ಯನ ದುಃಖದ ಮೂಲವಿರುವುದೇ ಅವನ ಮನಸ್ಸಿನಲ್ಲಿ. ಕೊನೆಯಿಲ್ಲದ ಅವನ ಆಸೆಗಳೆ ಅವನನ್ನು ಬಂಧನಕ್ಕೀಡುಮಾಡುವುದು. ಅವನ ದುಃಖಕ್ಕೆ ಬೇರೆ ಯಾರೂ ಕಾರಣರಲ್ಲ. ಆದ್ದರಿಂದಲೇ ಬುದ್ಧ ತನ್ನ ಶಿಷ್ಯರಿಗೆ “ನಿಮಗೆ ನೀವೇ ಬೆಳಕಾಗಿರಿ, ನಿಮಗೆ ನೀವೇ ಆಶ್ರಯವಾಗಿರಿ” ಎಂದು ಬೋಧಿಸಿದ.

ತಾನೊಬ್ಬ ಉದ್ಧಾರಕನೆಂದಾಗಲಿ, ಗುರುವೆಂದಾಗಲಿ ಬುದ್ಧನು ಎಂದೂ ಹೇಳಿಕೊಳ್ಳಲಿಲ್ಲ. ೧೯೦೦ರಲ್ಲಿ ಪಸಡೇನ ಷೇಕ್ಸ್‌ಪಿಯರ್ ಕ್ಲಬ್ಬಿನಲ್ಲಿ ಕೊಟ್ಟ ಉಪನ್ಯಾಸದಲ್ಲಿ ಸ್ವಾಮೀಜಿ ಹೇಳುತ್ತಾರೆ: “ಇತರೆ ಯಾವುದೇ ಮನುಷ್ಯನಿಗಿಂತಲೂ ತಾನು ಬೇರೆ ಎಂಬ ಒಂದೇ ಒಂದು ಹೇಳಿಕೆಯನ್ನಾಗಲೀ, ಸೂಚನೆಯನ್ನಾಗಲೀ ಆತನ ಬಾಯಿಯಿಂದ ಹೊರಪಡಿಸಲು, ಆತನ ಯಾರೊಬ್ಬ ಅನುಯಾಯಿಗಳಿಂದಲೂ ಸಾಧ್ಯವಾಗಲಿಲ್ಲ” (ಕೃತಿಶ್ರೇಣಿ,೮.೪೫೫). ಸಾಯುವ ಕ್ಷಣದಲ್ಲಿ ಸಹ ಬುದ್ಧನು ಹತ್ತಿರ ಬಂದ ಶಿಷ್ಯರಿಗೆ ಹೇಳಿದ್ದನ್ನು ಸ್ವಾಮೀಜಿ ನಮಗೆ ಅದೇ ಉಪನ್ಯಾಸದಲ್ಲಿ ನೆನಪಿಸುತ್ತಾರೆ: “ಹೇ ಆನಂದ, ನಾನು ಇಲ್ಲಿಂದ ನಿರ್ಗಮಿಸುತ್ತಿದ್ದೇನೆ, ನನಗೋಸ್ಕರ ಶೋಕಿಸಬೇಡ. ನನ್ನನ್ನು ಕುರಿತು ಚಿಂತೆ ಬೇಡ. ನಾನಂತೂ ತೆರಳಿದಂತೆಯೇ. ನಿಮ್ಮ ಮುಕ್ತಿಯನ್ನು ನೀವೇ ಮುತುವರ್ಜಿಯಿಂದ ಶ್ರಮಪಟ್ಟು ಸಾಧಿಸಿ. ನಿಮ್ಮಲ್ಲಿನ ಪ್ರತಿಯೊಬ್ಬರೂ ನನ್ನಷ್ಟೇ ಸಮರ್ಥರು. ನಾನೂ ಸಹ ನಿಮ್ಮಂತಹವನೇ ಒಬ್ಬನಲ್ಲದೆ ಬೇರೇನೂ ಅಲ್ಲ. ನಾನು ಇಂದು ಏನಾಗಿದ್ದೇನೋ ಅದು ನಾನೇ ಸಾಧನೆಯಿಂದ ರೂಪಿಸಿಕೊಂಡಿದ್ದಷ್ಟೇ. ನೀವೂ ಸಹ ಹೋರಾಟ ಮಾಡಿ, ಸಾಧನೆ ಮಾಡಿ ನಿಮ್ಮನ್ನು ನೀವೇ ರೂಪಿಸಿಕೊಳ್ಳಿ…

ನಿಸ್ಸಂದೇಹವಾಗಿ ಜಗತ್ತು ಕಂಡ ಅಪ್ರತಿಮನಾದ ಶ್ರೇಷ್ಠ ದಾರ್ಶನಿಕ ಬುದ್ಧ! ಜಗತ್ತಿನ ಧರ್ಮಗುರುಗಳಲ್ಲೆಲ್ಲ ಅತ್ಯಂತ ವಿವೇಚನಾಶೀಲನಾದ, ಸರ್ವಶ್ರೇಷ್ಟನಾದ ಆಚಾರ್ಯ ಆತ ! -ಸ್ವಾಮಿ ವಿವೇಕಾನಂದ

ಪ್ರಾಚೀನ ಗ್ರಂಥವೊಂದನ್ನು ಪ್ರಮಾಣವಾಗಿ ಉದ್ಧೃತಗೊಳಿಸಲಾಗಿದೆಯೆಂದು ಯಾವುದನ್ನೂ ನಂಬಬೇಡಿ. ನಿಮ್ಮ ಪೂರ್ವಜರು ಹೇಳಿದ್ದಾರೆಂದ ಮಾತ್ರಕ್ಕೆ ಯಾವುದನ್ನೂ ನಂಬಬೇಡಿ. ಇತರರು ನಿಮ್ಮನ್ನು ಮೆಚ್ಚುತ್ತಾರೆಂಬ ಕಾರಣಕ್ಕಾಗಿ ಯಾವುದನ್ನೂ ನಂಬಬೇಡಿ. ಪ್ರತಿಯೊಂದನ್ನೂ ಪರೀಕ್ಷಿಸಿ. ಹೌದು, ಪ್ರತಿಯೊಂದನ್ನೂ ಪರೀಕ್ಷಿಸಿದ ನಂತರವೇ ಅದು ನಾಲ್ಕು ಜನಕ್ಕೆ ಒಳ್ಳೆಯದೆಂದು ಕಂಡು ಬಂದರೆ ಅದನ್ನು ನಂಬಿ, ಅದನ್ನು ಎಲ್ಲರಿಗೂ ಬಿತ್ತರಿಸಿ … ನಿಸ್ಸಂದೇಹವಾಗಿ ಜಗತ್ತು ಕಂಡ ಅಪ್ರತಿಮನಾದ ಶ್ರೇಷ್ಠ ದಾರ್ಶನಿಕ ಆತ! ಜಗತ್ತಿನ ಧರ್ಮಗುರುಗಳಲ್ಲೆಲ್ಲ ಅತ್ಯಂತ ವಿವೇಚನಾಶೀಲನಾದ, ಸರ್ವ ಶ್ರೇಷ್ಠನಾದ ಆಚಾರ್ಯ ಆತ. ಪುರೋಹಿತಶಾಹಿ ಬ್ರಾಹ್ಮಣರ ದಬ್ಬಾಳಿಕೆಗೆ ಆತ ಎಂದೂ ಮಣಿಯಲಿಲ್ಲ. ಇಲ್ಲ, ಆ ವ್ಯಕ್ತಿ ಒಮ್ಮೆಯೂ ಅದಕ್ಕೆ ತಲೆಬಾಗಿದವನಲ್ಲ. ಎಲ್ಲೆಲ್ಲೂ ಒಂದೇ ಸಮನಾಗಿದ್ದ ವ್ಯಕ್ತಿ ಆತ. ದುಃಖಿಗಳೊಡನೆ ಅವರಿಗಾಗಿ ಮರುಗುತ್ತಾ, ಅವರನ್ನು ಸಂತೈಸಿ, ಅವರಿಗೆ ಸಹಾಯಹಸ್ತ ನೀಡುತ್ತಾ, ಹಾಡಿ ನಲಿಯುತ್ತಿರುವವರೊಡನೆ ಹಿಗ್ಗಿ ಹಾಡುತ್ತಾ, ಬಲಶಾಲಿಗಳೊಡನೆ ಅಧ್ಬುತ ಶಕ್ತಿ ತೇಜಸ್ಸನ್ನು ಹೊರಸೂಸುತ್ತಾ, ಎಲ್ಲೆಲ್ಲಿಯೂ ತನ್ನ ಬುದ್ಧಿಯನ್ನು ತನ್ನ ಸ್ವಾಧೀನದಲ್ಲಿರಿಸಿಕೊಂಡಿದ್ದ ದಕ್ಷವ್ಯಕ್ತಿಯಾಗಿದ್ದನು” ( ಕೃತಿಶ್ರೇಣಿ, ೮:೪೫೬-೫೭).

ಹಿಂದೂಶಾಸ್ತ್ರಗಳು ಹೇಳುವ ಮುಖ್ಯವಾದ ಸಂಗತಿಯೇ ಒಳ್ಳೆಯವನಾಗಿರಬೇಕು, ಒಳ್ಳೆಯದನ್ನು ಮಾಡಬೇಕು ಎಂಬುದು. ಇದು ಹಿಂದೂಧರ್ಮಕ್ಕಿಂತ ಬೌದ್ಧ ಧರ್ಮದಲ್ಲಿಯೇ ಹೆಚ್ಚು ಸಫಲತೆಯನ್ನು ಕಂಡುಕೊಂಡಿದೆ. ಇದೇ ಅನುಷ್ಠಾನ ವೇದಾಂತ. ಬುದ್ಧನ ಕಾಲದಲ್ಲಿ ಪುರೋಹಿತಶಾಹಿಯಿಂದಾಗಿ ವೇದಗಳಲ್ಲಿ ಹೇಳಲ್ಪಟ್ಟ ಸತ್ಯಗಳು ಜನಸಾಮಾನ್ಯರನ್ನು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಸ್ವಾಮೀಜಿ ಬುದ್ಧನನ್ನು ಪ್ರಶಂಸಿಸುವುದೇಕೆಂದರೆ, “ವೇದಗಳಲ್ಲಿ ಅಡಗಿದ್ದ ಸತ್ಯಗಳನ್ನು ಹೊರತೆಗೆದು ಜಗತ್ತಿಗೆಲ್ಲ ಘಂಟಾಘೋಷವಾಗಿ ಸಾರುವಷ್ಟು ವಿಶಾಲವಾಗಿತ್ತು ಅವನ ಹೃದಯ” (ಕೃತಿಶ್ರೇಣಿ, ೧.೨೩).

ತನ್ನ ಜೀವಾನುಕಂಪದ ಸಂದೇಶವನ್ನು ಹರಡುವ ಕೆಲಸದಲ್ಲಿ ಗೌತಮ ಬುದ್ಧನು ಉತ್ತಮೋತ್ತಮ ಕರ್ಮಯೋಗಿಯಾಗಿದ್ದನು ತಥಾಗತನ ಈ ಮಹಾಗುಣವನ್ನು ವಿವೇಕಾನಂದರು ತಮ್ಮ ‘ಕರ್ಮಯೋಗ’ದಲ್ಲಿ ಕೊಂಡಾಡುತ್ತ ಹೇಳುತ್ತಾರೆ: “ಕರ್ಮಯೋಗದ ಈ ಉಪದೇಶವನ್ನು ಜೀವನದಲ್ಲಿ ಆಚರಿಸಿದ ವ್ಯಕ್ತಿಯೊಬ್ಬನನ್ನು ಕುರಿತು, ಉಪಸಂಹಾರವಾಗಿ, ಒಂದೆರಡು ಮಾತುಗಳನ್ನು ಹೇಳುತ್ತೇನೆ. ಆತನಾರೆಂದರೆ, ಬುದ್ಧದೇವ. ನಿಶ್ಚಿತವಾಗಿಯೂ ಅದನ್ನು ಪೂರ್ಣರೀತಿಯಲ್ಲಿ ಸರ್ವದಾ ಆಚರಿಸಿದವನು ಆತನೊಬ್ಬನೇ….ಆತನ ಸ್ವಂತ ಜೀವನದಲ್ಲಿ ವೈಯಕ್ತಿಕ ಬಯಕೆಗಳು ಒಂದೂ ಇರಲಿಲ್ಲ. ಆತನಿಗಿಂತ ಹೆಚ್ಚಾಗಿ ಕರ್ಮವನ್ನು ಆಚರಿಸಿದ ವ್ಯಕ್ತಿ ಯಾರು? ಎಲ್ಲರಿಗಿಂತಲೂ ಅಷ್ಟು ಉನ್ನತ ಸ್ಥಾನವನ್ನು ಮುಟ್ಟಿದ ಇನ್ನೊಬ್ಬ ವ್ಯಕ್ತಿಯನ್ನು ಇತಿಹಾಸದಲ್ಲಿ ತೋರಿಸಿ ನೋಡೋಣ! ಒಟ್ಟು ಈ ಮಾನವಕುಲದಲ್ಲಿ ಅಂತಹ ಉಚ್ಚತತ್ತ್ವವನ್ನೂ, ಅಂತಹ ವಿಶಾಲವಾದ ಸಹಾನುಭೂತಿಯನ್ನೂ ತನ್ನಲ್ಲಿ ಕೂಡಿಸಲು ಸಮರ್ಥನಾದ ಪುರುಷನು ಆತನೊಬ್ಬನು ಮಾತ್ರವೇ. ಏಕೆಂದರೆ ಅತ್ಯಂತ ಉಚ್ಚ ತತ್ತ್ವೋ ಪದೇಶವನ್ನು ಮಾಡುವ ಕಾಲದಲ್ಲಿಯೆ ಪರಮ ಕ್ಷುದ್ರಜಂತುಗಳ ವಿಷಯದಲ್ಲಿ ಕೂಡ ಆಗಾಧವಾದ ಸಹಾನುಭೂತಿಯನ್ನು ಅವನು ತೋರಿಸಿದ. ಆದರೆ ಅವನು ತನಗಾಗಿ ಏನನ್ನೂ ಅಪೇಕ್ಷಿಸಲಿಲ್ಲ. ಪುರ್ಣ ರೀತಿಯಲ್ಲಿ ಅಹೇತುಕವಾಗಿ ಕರ್ಮ ಮಾಡಿದ ಆದರ್ಶಪ್ರಾಯನಾದ ಕರ್ಮಯೋಗಿ ಅವನೇ….. ಧನ, ಕೀರ್ತಿ ಮತ್ತು ಇನ್ನಾವ ಆಸೆಯೂ ಇಲ್ಲದೆ ಅಹೇತುಕವಾಗಿ ಕರ್ಮಮಾಡಲು ಸಮರ್ಥ ನಾವನೋ ಆತನೇ ನಿಶ್ಚಿತವಾಗಿಯೂ ಅತ್ಯಂತ ಉತ್ಕೃಷ್ಟವಾಗಿ ಕರ್ಮ ಮಾಡಬಲ್ಲವನು. ಹಾಗೆ ಮಾಡಬಲ್ಲವನಾದಾಗ ಅವನು ಬುದ್ಧನಾಗುವನು. ಪ್ರಪಂಚವನ್ನು ಮಾರ್ಪಡಿಸುವ ಕಾರ್ಯಶಕ್ತಿ ಆತನಲ್ಲಿ ಉದ್ಭವಿಸುವುದು. ಆದುದರಿಂದ ಆತನೇ ನಿಶ್ಚಿತವಾಗಿಯೂ ಆದರ್ಶಪ್ರಾಯನಾದ ಕರ್ಮಯೋಗಿ.” (ಕೃತಿಶ್ರೇಣಿ, ೧.೧೨೨-೨೩)

ದಲಿತರಿಗೂ ದುರ್ಬಲರಿಗೂ ಬುದ್ಧನು ಪ್ರೇಮವನ್ನು ಧಾರೆ ಎರೆದನು. ಜೀವನದ ಉದ್ದಕ್ಕೂ ಅವನು ಶುದ್ದತೆಯ, ತ್ಯಾಗದ ಹಾಗೂ ಎಲ್ಲರನ್ನೂ ಪ್ರೀತಿಸುವ ತನ್ನ ಅನುಪಮ ಸಂದೇಶವನ್ನು ನೀಡುತ್ತಲೇ ಬಂದನು. ಅವನ ಧರ್ಮವು ಪ್ರಚುರಗೊಂಡದ್ದು, ವಿವೇಕಾನಂದರು ತಮ್ಮ ‘ಜಗತ್ತಿಗೆ ಬುದ್ಧನ ಸಂದೇಶ’ ಎಂಬ
ಉಪನ್ಯಾಸದಲ್ಲಿ ಹೇಳಿದಂತೆ, “ತನ್ನಲ್ಲಿದ್ದ ಅದ್ಭುತ ಪ್ರೇಮದ ದೆಸೆಯಿಂದ. ಮಾನವ-ಇತಿಹಾಸದಲ್ಲಿ ಮೊದಲನೆಯ ಬಾರಿ ಮಾನವ ಹೃದಯದಿಂದ ಅದ್ಭುತ ಪ್ರೇಮವು ಉಕ್ಕಿ ಹರಿದು ಕೇವಲ ಮಾನವನ ಸೇವೆಯಲ್ಲಿ ಮಾತ್ರವಲ್ಲ, ಎಲ್ಲ ಪ್ರಾಣಿಗಳ ಸೇವೆಯಲ್ಲಿಯೂ ತಲ್ಲೀನವಾಯಿತು. ಎಲ್ಲರೂ ದುಃಖದಿಂದ ಪಾರಾಗಬೇಕೆಂಬುದಲ್ಲದೆ ಮತ್ತಾವುದನ್ನೂ ಅದು ಲೆಕ್ಕಿಸಲಿಲ್ಲ” (ಕೃತಿಶ್ರೇಣಿ, ೭.೪೬).

ಸಮಸ್ತ ಜೀವಿಗಳನ್ನೂ ಒಳಗೊಳ್ಳುವ ಬುದ್ಧನ ವಿಶ್ವವ್ಯಾಪಕ ಪ್ರೇಮದ ಮೇಲ್ಪಂಕ್ತಿಯನ್ನು ಆನಂತರ ಭಾರತದ ಎಲ್ಲ ಧಾರ್ಮಿಕ ಪಂಥಗಳು ಅನುಷ್ಠಾನಕ್ಕೆ ತಂದವು. ಸ್ವಾಮೀಜಿ ಹೇಳುವಂತೆ, “ಎಲ್ಲ ಸಿದ್ಧಾಂತಗಳಿಗಿಂತ ಮಿಗಿಲಾಗಿ ಬೌದ್ಧಧರ್ಮ ನಮಗೆ ಕೊಟ್ಟಿರುವುದು ಈ ದಯೆ, ಅನುಕಂಪೆ, ದಾನ ಎಂಬುವು” (ಕೃತಿಶ್ರೇಣಿ, ೭.೪೯).

“ಅವನು ಜೀವನದಲ್ಲಿ ಶ್ರೇಷ್ಠನಾಗಿದ್ದಂತೆಯೇ ಮರಣದಲ್ಲಿಯೂ ಶ್ರೇಷ್ಠನಾಗಿದ್ದನು.” ಬುದ್ಧನ ಸಮದರ್ಶಿತ್ವ ಹಾಗೂ ದಲಿತರ ಮೇಲಣ ಅನುಕಂಪ ಎಷ್ಟಿತ್ತು ಎಂದರೆ, ಚಂಡ ಎಂಬ ಕೀಳು ಜಾತಿಯ ದಲಿತ ಕೊಟ್ಟ ಕೊಳಕು ಆಹಾರವನ್ನು ಅವನು ಸ್ವಲ್ಪವೂ ಹಿಂದೆ ಮುಂದೆ ನೋಡದೆ ಸೇವಿಸಿದ. ಇದೇ ಬುದ್ಧನ ಸಾವಿಗೆ ಕಾರಣವಾಯಿತು. “ಅವನು ತನ್ನ ಶಿಷ್ಯರಿಗೆ ‘ನೀವು ಈ ಆಹಾರವನ್ನು ತೆಗೆದುಕೊಳ್ಳಬೇಡಿ. ಆದರೆ ನನಗೆ ಇದನ್ನು ತೆಗೆದುಕೊಳ್ಳದೆ ವಿಧಿಯಿಲ್ಲ. ಆತನಿಗೆ ಹೋಗಿ ಹೇಳಿ-ನನ್ನನ್ನು ದೇಹ ಬಂಧನದಿಂದ ಪಾರುಮಾಡಿ ಆತ ನನಗೆ ಒಂದು ದೊಡ್ಡ ಉಪಕಾರವನ್ನು ಮಾಡಿರುವನು ಎಂದು.'” ಹಿಂದೆ ಒಂದು ಸಲ ತನ್ನ ಜೀವವನ್ನುಳಿಸಿದ ಸುಜಾತ ಎಂಬ ವ್ಯಕ್ತಿ ಕೊಟ್ಟ ಆಹಾರವನ್ನೂ ಈ ಚಂಡ ಕೊಟ್ಟದ್ದನ್ನೂ ಬುದ್ಧ ಒಂದೇ ಎಂದು ಪರಿಗಣಿಸಿದ.

ಒಂದು ಅರ್ಥದಲ್ಲಿ ಬುದ್ಧನು ನೈಜ ವೇದಾಂತದ ಜೀವಂತ ಮೂರ್ತಿಯಾಗಿದ್ದನು.
– ಸ್ವಾಮಿ ವಿವೇಕಾನಂದ

ಯುಗಯುಗಾಂತರಗಳಿಂದ ಜನರು ದೇವರನ್ನು ಪೂಜಿಸಿಕೊಂಡು ಬಂದಿದ್ದಾರೆ. “ಮಾನವನೆಂಬ ಇನ್ನೊಬ್ಬ ದೇವರ ಕಡೆ ತಿರುಗಿದ್ದು, ಇದೇ ಮೊದಲನೆಯ ಬಾರಿ, ಪ್ರೀತಿಸಬೇಕಾಗಿರುವುದು ಮಾನವರನ್ನು, ಜೀವಿಗಳನ್ನೆಲ್ಲಾ ಪ್ರೇಮದಿಂದ ಅಪ್ಪುವ ಪ್ರಪ್ರಥಮ ಪ್ರವಾಹ ಇದು. ಸ್ವಲ್ಪವೂ ಬೆರಕೆಯಾಗದ ಈ ಶುದ್ಧ ಧರ್ಮ ಭರತಖಂಡದಿಂದ ಪ್ರಾರಂಭವಾಗಿ ಕ್ರಮೇಣ ಚತುರ್ದಿಕ್ಕುಗಳನ್ನೂ ವ್ಯಾಪಿಸಿತು” (ಕೃತಿಶ್ರೇಣಿ, ೭.೪೬). ಬುದ್ಧನ ಹಿರಿಮೆ ಇರುವುದೇ ಅವನ ಸಾಟಿಯಿಲ್ಲದ ಅನುಕಂಪದಲ್ಲಿ; ನಿರ್ವಾಣದಲ್ಲಿ ಅಲ್ಲ.

ಇತಿಹಾಸದ ಮೊದಲ ಪ್ರವಾದಿ ಮಾತ್ರವಲ್ಲ, ಬುದ್ಧನು ಇತಿಹಾಸ ಕಂಡ ಮೊದಲ ಪರಿಪೂರ್ಣ ವ್ಯಕ್ತಿ. ಎಡ್ವಿನ್ ಆರ್ನಾಲ್ಡ್ ಹೇಳಿದಂತೆ ಅವನು ಕೇವಲ Light of Asia ಮಾತ್ರವಲ್ಲ, ಇಡೀ ಜಗತ್ತಿಗೇ ಬೆಳಕು. ಮಾನವ ತಾನೇ ತನ್ನ ಬದುಕನ್ನು ರೂಪಿಸಿಕೊಳ್ಳಬೇಕು. ಮನಸ್ಸು ಮಾತು ಕೃತಿಗಳನ್ನು ನಿಯಂತ್ರಿಸಿಕೊಳ್ಳುವ ಮೂಲಕ ಬುದ್ಧನಾಗಬೇಕು ಎಂದು ಬೋಧಿಸಿದ. ಆಸೆಗಳನ್ನು ಬಿಟ್ಟು ದುಃಖವನ್ನು ನೀಗಿಕೊಳ್ಳಬೇಕು ಎಂದ.

ಬೌದ್ಧಮತದ ಬೇರುಗಳು ವೇದಾಂತದಲ್ಲಿಯೇ ಇವೆ ಎಂದು ಅನೇಕ ವಿದ್ವಾಂಸರುಗಳು ತೋರಿಸಿಕೊಟ್ಟಿದ್ದಾರೆ. ಆದರೆ ವಿವೇಕಾನಂದರು ಬೌದ್ಧಮತವನ್ನು ತಮ್ಮದೇ ಆದ ಅಂತರ್ದೃಷ್ಟಿಯಿಂದ ಪರಿಶೀಲಿಸಿ ಅದಕ್ಕೆ ವಿಶಿಷ್ಟವಾದ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದಾರೆ. ಬೌದ್ಧಮತವು ಹಿಂದೂಧರ್ಮದ ಮಗು, ಆದರೆ ಹೆತ್ತವರೆದುರೇ ಸೆಣೆಸಿ ನಿಂತ ಮಗು ಎನ್ನುವ ವಿವೇಕಾನಂದರು, ಭಾರತೀಯರ ನೈತಿಕ-ಆಧ್ಯಾತ್ಮಿಕ ವಿಕಾಸದಲ್ಲಿ ಈ ಪ್ರತಿರೋಧ ಅನಿವಾರ್ಯವಾಗಿತ್ತು ಎಂದೂ ಅಭಿಪ್ರಾಯಪಡುತ್ತಾರೆ.

‘ಬೌದ್ಧಧರ್ಮ: ಹಿಂದೂಧರ್ಮದ ಸಾಫಲ್ಯ’ ಎಂಬ ತಮ್ಮ ಉಪನ್ಯಾಸದಲ್ಲಿ ಸ್ವಾಮೀಜಿ “ಹಿಂದೂಧರ್ಮಕ್ಕೂ (ಅಂದರೆ ವೈದಿಕ ಧರ್ಮಕ್ಕೂ) ಈಗ ಬೌದ್ಧಧರ್ಮ ಎಂದು ಯಾವುದನ್ನು ಕರೆಯುತ್ತಾರೋ ಅದಕ್ಕೂ ಇರುವ ಸಂಬಂಧ ಹೆಚ್ಚು ಕಡಿಮೆ ಯಹೂದ್ಯ ಧರ್ಮಕ್ಕೂ ಕ್ರೈಸ್ತಧರ್ಮಕ್ಕೂ ಇರುವ ಸಂಬಂಧದಂತೆಯೇ. ಏಸುಕ್ರಿಸ್ತ ಯಹೂದ್ಯನಾಗಿದ್ದ; ಶಾಕ್ಯಮುನಿ ಹಿಂದೂ. ಯಹೂದ್ಯರು ಏಸುವನ್ನು ನಿರಾಕರಿಸಿದ್ದು ಮಾತ್ರವಲ್ಲ, ಅವನನ್ನು ಶಿಲುಬೆಗೂ ಏರಿಸಿದರು. ಹಿಂದುಗಳಾದರೋ ಶಾಕ್ಯಮುನಿಯನ್ನು ದೇವರು ಎಂದು ಭಾವಿಸಿ ಅವನನ್ನು ಪೂಜಿಸಿದರು” ಎಂದಿದ್ದಾರೆ.

ಹಿಂದೂಗಳು ಬುದ್ಧನನ್ನು ಒಪ್ಪಿಕೊಳ್ಳಲು ಕಾರಣವೇನು? ವಿವೇಕಾನಂದರು ಸ್ಪಷ್ಟಪಡಿಸುತ್ತಾರೆ: ಮೊದಲನೆಯದಾಗಿ ಬುದ್ಧನು ಜನರ ಮುಂದೆ ಕರ್ಮಯೋಗದ ಆದರ್ಶವನ್ನು ಇರಿಸಿದ ಸಮಾಜ ಸುಧಾರಕ. ಅದನ್ನು ಪರಿಪೂರ್ಣವಾಗಿ ಆಚರಣೆಗೆ ತಂದ ಅಪರೂಪದ ಏಕಮಾತ್ರ ವ್ಯಕ್ತಿ ಅವನು. ಅವನಂತಹ ಕರುಣಾಮಯ ತತ್ತ್ವಜ್ಞಾನಿ ಇನ್ನೊಬ್ಬನಿಲ್ಲ. ಲೋಕ ಕಂಡ ಆತ್ಮಶಕ್ತಿಯ ಮೊದಲ ಮಹಾ ಆವಿರ್ಭಾವ ಅವನು. ಎರಡನೆಯದಾಗಿ, ಬುದ್ಧನ ಎಲ್ಲ ಬೋಧನೆಗಳೂ ವೇದಾಂತದಲ್ಲಿ ಇವೆ. ಮೂಲ ಬೌದ್ಧಧರ್ಮ ನಿರೀಶ್ವರವಾದವೇನೂ ಅಲ್ಲ; ಪರೋಹಿತಶಾಹಿ ಮತ್ತು ಜಾತಿ ಪದ್ದತಿಯನ್ನು ವಿರೋಧಿಸಿ, ಮೂಕಪ್ರಾಣಿಗಳ ಮೇಲೆ ಸಹ ಕರುಣೆಯನ್ನು ತೋರಿಸಿದ ಲೋಕದ ಮೊದಲ ಪ್ರಯತ್ನ ಅದು. ಬುದ್ಧನ ನಿರ್ವಾಣದ ಕಲ್ಪನೆ ಅದ್ವೈತತತ್ತ್ವಕ್ಕೆ ಬಹು ಸಮೀಪವಾಗಿದೆ. ಸ್ವಾಮಿ ಅಖಂಡಾನಂದರಿಗೆ ಬರೆದ ಪತ್ರವೊಂದರಲ್ಲಿ ವಿವೇಕಾನಂದರು ಹೇಳುತ್ತಾರೆ: ಉಪನಿಷತ್ತಿನಿಂದಲೆ ಬೌದ್ಧಧರ್ಮ ಬೆಳೆದಿರುವುದು . ಆದೇ ಶಂಕರರ ತತ್ತ್ವಶಾಸ್ತ್ರಕ್ಕೂ ಮೂಲ. ಆದರೆ ಶಂಕರರಿಗೆ ಬುದ್ಧನಷ್ಟು ವಿಶಾಲವಾದ, ಅನುಕಂಪದಿಂದ ಕೂಡಿದ ಹೃದಯವಿರಲಿಲ್ಲ. ಬರಿಯ ಬುದ್ಧಿಯ ಒಣಪಾಂಡಿತ್ಯವಿತ್ತು!….. ಭಗವಾನ್ ಬುದ್ಧನು ನನ್ನ ಇಷ್ಟ! ಅವನೇ ನನ್ನ ದೇವರು. ಅವನು ದೇವರ ವಿಚಾರವಾಗಿ ಯಾವ ಸಿದ್ಧಾಂತವನ್ನೂ ಬೋಧಿಸಲಿಲ್ಲ. ಅವನೇ ದೇವರಾಗಿದ್ದನು. ಇದನ್ನು ನಾನು ಸಂಪೂರ್ಣವಾಗಿ ನಂಬುವೆನು.”

ವಿವೇಕಾನಂದರು ಬುದ್ಧನನ್ನು ಅಷ್ಟೊಂದು ಆರಾಧಿಸಲು ಕಾರಣವೇನು? ಭಾರತದ ಆಧ್ಯಾತ್ಮಿಕ, ಸಾಂಸ್ಕೃತಿಕ ವಿಕಾಸದ ಹಾದಿಯಲ್ಲಿ ಬುದ್ಧನದು ಚರಿತ್ರಾರ್ಹವಾದ ಸ್ಥಾನ. ಧರ್ಮ ಎಂದರೆ ಆಗಿನ ಕಾಲದಲ್ಲಿ-ಇಲ್ಲವೇ ಅತಿರೇಕದ ಕರ್ಮಾಚರಣೆಗಳು, ಇಲ್ಲವೇ ಶುಷ್ಕ ತಾರ್ಕಿಕ ತತ್ತ್ವಾನುಸಂಧಾನ-ಎರಡೂ ಇದ್ದದ್ದು ಮೇಲ್ವರ್ಗದವರ ಕೈಯಲ್ಲೇ. ಇದನ್ನು ತಪ್ಪಿಸಿ ಉಪನಿಷತ್ತುಗಳ ಧರ್ಮವು ಎಲ್ಲರಿಗೂ ಸಿಕ್ಕುವಂತೆ ಮಾಡಲು ಭಗವಂತನು ಬುದ್ಧನಾಗಿ ಅವತರಿಸಿ ಬರಬೇಕಾಯಿತು ಎನ್ನುತ್ತಾರೆ ವಿವೇಕಾನಂದರು. ಇವೆರಡನ್ನೂ ತಪ್ಪಿಸಿದ ಬುದ್ಧನು ಜನರಿಗೆ ಅರ್ಥವಾಗುವಂಥ ಸರಳ ನೀತಿಸಂಹಿತೆಯನ್ನು ಬೋಧಿಸಿದನು. ನಿಜವಾದ ಆಧ್ಯಾತ್ಮಿಕ ಜೀವನಕ್ಕೆ ಕೊನೆಮೊದಲಿಲ್ಲದ ಕರ್ಮಾನುಷ್ಠಾನವಾಗಲಿ, ಬಗೆಹರಿಯದ ಪರತತ್ತ್ವ ಚಿಂತನೆಯಾಗಲಿ ಅಗತ್ಯವಿಲ್ಲ; ಒಳ್ಳೆಯವನಾಗಿ ಬದುಕಿ ಸಾಧ್ಯವಾದಷ್ಟು ಒಳ್ಳೆಯದನ್ನು ಮಾಡಿದರೆ ಸಾಕು ಎಂಬುದು ಅವನ ನಿಲುವು.

ಬುದ್ಧನು ಭಾರತೀಯ ಧಾರ್ಮಿಕ ಜೀವನಕ್ಕೆ ಒಂದು ರೀತಿಯಲ್ಲಿ ಪ್ರಜಾತಂತ್ರವನ್ನು ತಂದುಕೊಟ್ಟನು ಎಂಬುದು ವಿವೇಕಾನಂದರ ಅನಿಸಿಕೆ. ೧೮೯೫ರ ಜುಲೈ ೧೯ರಂದು ತಮ್ಮ ಶಿಷ್ಯರಿಗಾಗಿ ತೆಗೆದುಕೊಂಡಿದ್ದ ಒಂದು ತರಗತಿಯಲ್ಲಿ ಬುದ್ಧನ ಬಗ್ಗೆ ಹೇಳುತ್ತ, “ಬುದ್ಧ ದೊಡ್ಡ ವೇದಾಂತಿ ಆಗಿದ್ದನು. (ಏಕೆಂದರೆ ಬೌದ್ಧಧರ್ಮ ನಿಜವಾಗಿಯೂ ಹಿಂದೂಧರ್ಮದ ಒಂದು ಶಾಖೆ.) ಶಂಕರಾಚಾರ್ಯರನ್ನು ಅನೇಕ ವೇಳೆ ಪ್ರಚ್ಛನ್ನ ಬೌದ್ದ ಎಂದು ಕರೆಯುವರು. ಬುದ್ಧನು ವಿಶ್ಲೇಷಣೆ ಮಾಡಿದನು. ಶಂಕರಾಚಾರ್ಯರು ಅದನ್ನು ಒಂದು ಸಾಮರಸ್ಯಕ್ಕೆ ತಂದರು. ಬುದ್ಧ ವೇದಕ್ಕಾಗಲಿ, ಜಾತಿಗಾಗಲಿ, ಪುರೋಹಿತರಿಗಾಗಲಿ , ಆಚಾರಕ್ಕಾಗಲಿ ಬಾಗಲಿಲ್ಲ. ವಿಚಾರವು ನಮ್ಮನ್ನು ಒಯ್ಯುವವರೆಗೆ ನಿರ್ಭಯವಾಗಿ ಅದನ್ನು ಅನುಸರಿಸಿದನು. ಸತ್ಯಾನ್ವೇಷಣೆಯಲ್ಲಿ ಇಂತಹ ದಿಟ್ಟತನ ಮತ್ತು ಸರ್ವಜೀವಿಗಳ ಮೇಲೆಯೂ ಪ್ರೇಮ ಇದ್ದಂತಹ ವ್ಯಕ್ತಿಯನ್ನು ಜಗತ್ತು ಕಂಡಿಲ್ಲ. ಬುದ್ಧನು ಧಾರ್ಮಿಕ ಪ್ರಪಂಚದ ಮತ್ತೊಬ್ಬ ವಾಷಿಂಗ್ ಟನ್ ಇದ್ದಂತೆ. ಅವನು ಒಂದು ಸಿಂಹಾಸನವನ್ನು ಗೆದ್ದುದು ಅದನ್ನು ಜಗತ್ತಿಗೆ ಕೊಡುವುದಕ್ಕಾಗಿ. ವಾಷಿಂಗ್ ಟನ್ ತನ್ನನ್ನು ಮರೆತು ಅಮೆರಿಕಾ ದೇಶದ ಜನರಿಗಾಗಿ ದುಡಿದಂತೆಯೇ ಬುದ್ಧನೂ ಸಹ ತನಗಾಗಿ ಏನನ್ನೂ ಆಶಿಸಲಿಲ್ಲ” (ಕೃತಿಶ್ರೇಣಿ, ೧.೩೦೯ ) ಎಂದಿದ್ದಾರೆ. ಭಾರತೀಯ ಧಾರ್ಮಿಕ ಜೀವನದ ಐತಿಹಾಸಿಕ ಅಂತರ್ದೃಷ್ಟಿ ವಿವೇಕಾನಂದರಿಗೆ ಇದುದರಿಂದಲೆ ಈ ದರ್ಶನ ಅವರಿಗೆ ಸಾಧ್ಯವಾಯಿತು. ‘ಜಗತ್ತಿಗೆ ಬುದ್ಧನ ಸಂದೇಶ’ ಎಂಬ ಉಪನ್ಯಾಸದಲ್ಲಿ ಅವರೆನ್ನುತ್ತಾರೆ: “ಪುರೋಹಿತರಿಗೂ, ಪ್ರವಾದಿಗಳಿಗೂ ನಡೆಯುತ್ತಿದ್ದ ತಿಕ್ಕಾಟದಲ್ಲಿ ಬುದ್ಧನು ಜಯಶೀಲನಾಗಿದ್ದನು” (ಕೃತಿಶ್ರೇಣಿ, ೭.೪೪).

ಬುದ್ಧನಿಗೆ ಆರೋಪಿಸಿರುವ ಅತ್ಯಂತ ಸುಂದರವಾದ ಗುಣಗಳಲ್ಲಿ ಇದೊಂದು: “ನೀನೇ ಜಾತಿಯನ್ನು ಧ್ವಂಸ ಮಾಡಿದವನ್ನು, ಹಕ್ಕು ಬಾಧ್ಯತೆಗಳನ್ನು ನಾಶಮಾಡಿದವನು, ಎಲ್ಲರಿಗೂ ಸಮತ್ವವನ್ನು ಬೋಧಿಸಿದವನು.” ಬುದ್ಧನು ಸಮತ್ವದ ಭಾವನೆಯನ್ನು ಸಾರಿದನು.

-ಸ್ವಾಮಿ ವಿವೇಕಾನಂದ

ವಿವೇಕಾನಂದರು ಬೌದ್ದಧರ್ಮದ ಬಗ್ಗೆ ಚಿಕಾಗೋ ಸರ್ವಧರ್ಮಸಮ್ಮೇಳನದಲ್ಲಿ ಮಾತನಾಡಿದಾಗ-ಎಂದರೆ ಹತ್ತೊಂಬತ್ತನೆಯ ಶತಮಾನದ ಕೊನೆಯ ದಶಕದಲ್ಲಿ ಭಾರತದಲ್ಲಿ ಕೇವಲ ೨,೪೩,೬೭೭ ಬೌದ್ಧರಿದ್ದರು. (೧೯೮೧ರ ಸೆನ್ಸಸ್ ವರದಿ ಪ್ರಕಾರ), ಈಗ ೪೦, ೭,೦೦೦ ಇದ್ದಾರೆ (ಎಂದರೆ ಭಾರತ ಜನ ಸಂಖ್ಯೆಯ ೦.೭%). ಬೌದ್ಧಧರ್ಮವು ಭಾರತದಲ್ಲಿ ಸಹಜ ಸಾವನ್ನು ಸತ್ತಿತು ಎಂಬ ವಿವೇಕಾನಂದರ ಮಾತಿನ ಅರ್ಥವೇನು? ವಿವೇಕಾನಂದರ ಕಾಲದಲ್ಲಿ ಒಟ್ಟು ೫೦ ಕೋಟಿ ಬೌದ್ಧರಿದ್ದರು-ಎಲ್ಲ ದೇಶಗಳ ಕೈಸ್ತರ ಒಟ್ಟು ಸಂಖ್ಯೆಗಿಂತ ಹೆಚ್ಚು-ಪ್ರಪಂಚದ ಒಟ್ಟು ಜನಸಂಖ್ಯೆಯ ಸುಮಾರು ೪೦%. ಒಟ್ಟು ಬೌದ್ಧರ ಸಂಖ್ಯೆಯ ೦.೦೪% ಮಾತ್ರ ಭಾರತದಲ್ಲಿದ್ದುದು ಎಂದಮೇಲೆ, ನಮ್ಮ ದೇಶದಲ್ಲಿ ಬೌದ್ಧಧರ್ಮ ಸತ್ತಿತು ಎಂದು ಹೇಳಬಹುದಲ್ಲವೆ? ವಿವೇಕಾನಂದರ ಆದ್ಭುತ ಅಂತರ್ದೃಷ್ಟಿಗೆ ಇದೂ ಒಂದು ಉದಾಹರಣೆ.

೫೦ಕೋಟಿ ಬೌದ್ಧರ ಪ್ರತಿನಿಧಿಯ ಸಮ್ಮುಖದಲ್ಲೆ ಅವರು ಬೌದ್ಧಧರ್ಮದ ದೋಷಗಳನ್ನು ಅಂತಹ ವಿಶ್ವವೇದಿಕೆಯಲ್ಲಿ ಎತ್ತಿ ತೋರಿಸಿದರೆಂದರೆ, ಅವರ ಧೈರ್ಯವನ್ನು ಏನೆಂದು ಹೇಳೋಣ! ಬೌದ್ಧಧರ್ಮವು ಭಾರತದಲ್ಲಿ ಹುಟ್ಟಿ ಬೆಳೆದಿದ್ದೂ ಇತಿಹಾಸದಲ್ಲಿಯ ಧಾರ್ಮಿಕ ವಿಕಾಸದಿಂದಾಗಿಯೇ, ಸಹಜ ಸಾವನ್ನು ಸತ್ತಿದ್ದೂ ಅದೇ ಕಾರಣಕ್ಕಾಗಿಯೇ ಎಂಬುದು ವಿವೇಕಾನಂದರ ನಿಲುವು. ಹಿಂದೂಧರ್ಮದಿಂದ ಭಿನ್ನವಾಗಿ ನಿಲ್ಲದೇ ಇದ್ದಿದ್ದರೆ ಬೌದ್ಧಧರ್ಮಕ್ಕೆ ಈ ಗತಿ ಒದಗುತ್ತಿರಲಿಲ್ಲ ಎಂಬುದು ಅವರ ಅನಿಸಿಕೆ. ಈ ಭಿನ್ನತೆಯನ್ನು ಕಾಪಾಡಿಕೊಳ್ಳಲೆಂದೇ ಆಧಿಕಾಧಿಕ ಭಿಕ್ಷುಗಳು, ವಿಹಾರಗಳು ಎಲ್ಲವೂ ಹುಟ್ಟಿಕೊಂಡವು. ಸಂನ್ಯಾಸದ ಈ ಸಾರ್ವತ್ರಿಕತೆಯೇ ಬೌದ್ಧಧರ್ಮದ ಅವನತಿಗೆ ಕಾರಣವಾಯಿತು ಎಂಬುದು ವಿವೇಕಾನಂದರ ಅಭಿಪ್ರಾಯ.

ಇನ್ನು ವಿವೇಕಾನಂದರು ಹೇಳಿದ “ಹಿಂದೂಧರ್ಮ ಬೌದ್ಧಧರ್ಮವಿಲ್ಲದೆಯೇ – ಬೌದ್ಧಧರ್ಮ ಹಿಂದೂಧರ್ಮವಿಲ್ಲದೆಯೇ ಬಾಳಲಾರವು,” ಎಂಬ ಮಾತಿನ ಅರ್ಥವೇನು? ಇದನ್ನು ನಾವು ವಿವೇಕಾನಂದರ ವಿಶ್ವಧರ್ಮ ಕಲ್ಪನೆಯ ಹಿನ್ನೆಲೆಯಲ್ಲಿ, ಸರ್ವಧರ್ಮಸಮನ್ವಯದ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕು. ಪ್ರತಿಯೊಂದು ಧರ್ಮವೂ ಕಾಲಾನುಕಾಲಕ್ಕೆ ಪುನರುಜ್ಜೀವನವನ್ನು ಬೇಡುತ್ತದೆ, ನೈತಿಕ ಮತ್ತು ಆಧ್ಯಾತ್ಮಿಕ ಪುನರುತ್ಥಾನವನ್ನು ಬೇಡುತ್ತದೆ. ಬುದ್ಧನ ನೈತಿಕ ಮತ್ತು ಜೀವಕಾರುಣ್ಯದ ಬೋಧನೆಗಳು ಆ ಕಾಲದಲ್ಲಿ ಹಿಂದೂಧರ್ಮಕ್ಕೆ ಅಶ್ಯಗತ್ಯವಾಗಿ ಬೇಕಾಗಿದ್ದವು. ಅಂತೆಯೇ ಬೌದ್ಧಧರ್ಮಕ್ಕೂ ವೇದಾಂತದ ವಿಧಾಯಕ ತತ್ತ್ವಜ್ಞಾನದ ಆವಶ್ಯಕತೆಯಿದೆ. ವಿವೇಕಾನಂದರ ಪ್ರಕಾರ ಧರ್ಮ ಎನ್ನುವುದು ಯಾವುದೋ ಸಿದ್ಧಾಂತವಲ್ಲ; ಒಂದು ಮನಸ್ಸಿನ ಹದ; ಬದುಕಿನ ನೈತಿಕ-ಆಧ್ಯಾತ್ಮಿಕ ಮೌಲ್ಯಗಳ ಕಡೆಗೆ ನಮ್ಮ ವೈಯಕ್ತಿಕ ಪಯಣ.

ಬೌದ್ಧಧರ್ಮ ಹಾಗೂ ಹಿಂದೂಧರ್ಮಗಳ ಬಗ್ಗೆ ಇತ್ತೀಚೆಗೆ ನಡೆದ ಸಂಶೋಧನೆಗಳು ವಿವೇಕಾನಂದರ ಮುಖ್ಯ ತೀರ್ಮಾನಗಳನ್ನು ಸಾಧು ಎಂದು ಸಮರ್ಥಿಸಿವೆ:  (೧) ಬುದ್ಧನು ಹಿಂದೂಧರ್ಮದ ಕಷ್ಟಕಾಲದಲ್ಲಿ ಅವತರಿಸಿದ;

(೨) ಬೌದ್ಧ ಧರ್ಮವು ಪ್ರಾರಂಭದಲ್ಲಿ ವೇದಾಂತದ ಧೋರಣೆಯನ್ನೇ ಹೊಂದಿದ್ದಿತು;

(೩) ಕಾಲ ಸರಿದಂತೆ ಅದು ಮೂಢನಂಬಿಕೆಗಳ ಆಗರವಾಗಿ ಪರಿಣಮಿಸಿದ್ದರಿಂದ ಭಾರತಭೂಮಿಯ ಹೊರಕ್ಕೆ ನಡೆಯಬೇಕಾಯಿತು.

ಅನೇಕ ವಿದ್ವಾಂಸರ ಆಭಿಪ್ರಾಯಗಳನ್ನು ಉಲ್ಲೇಖಿಸಬಹುದು. ಉದಾಹರಣೆಗೆ, ಡಾ.ಎಸ್.ರಾಧಾಕೃಷ್ಣನ್ ತಮ್ಮ Indian Philosophy ಯಲ್ಲಿ :

(೧) ಬುದ್ಧನ ಅವತರಣ ಕಾಲದಲ್ಲಿ ಭಾರತದಲ್ಲಿದ್ದ ಪರಿಸ್ಥಿತಿಯನ್ನು ವಿವರಿಸುತ್ತ “ಚಿಂತನೆಯ ಅರಾಜಕತೆ ನೈತಿಕ ಅರಾಜಕತೆಗೆ ಎಡೆಮಾಡಿಕೊಟ್ಟಿತು” ಎನ್ನುತ್ತಾರೆ.

(೨) ಬೌದ್ಧ ಧರ್ಮದಲ್ಲಿನ ವೇದಾಂತ ಭಾಗವನ್ನು ಕುರಿತು, “ಪ್ರಾಚೀನ ಬೌದ್ಧ ಧರ್ಮವು ಉಪನಿಷದ್ ಭಾವನೆಗಳನ್ನೇ
ಹೊಸ ದೃಷ್ಟಿಕೋನದಿಂದ ಪ್ರತಿಪಾದಿಸಿರುವುದಾಗಿದೆ’ ಎನ್ನುತ್ತಾರೆ.

(೩) ಬೌದ್ಧ ಧರ್ಮದ ಅವನತಿಯನ್ನು ಕುರಿತು ಹೇಳುವಾಗ, “ಬೌದ್ಧ ಧರ್ಮದಲ್ಲಿದ್ದ ಮೂಢನಂಬಿಕೆಗಳ ವಿಸ್ತಾರ ಬೆಳವಣಿಗೆ ಜನರ ಅಸಂತೋಷಕ್ಕೆ ಕಾರಣವಾಯಿತು” ಎಂದಿದ್ದಾರೆ.