ಪ್ರಸ್ತುತತೆ

ಒಂದು ಆದರ್ಶ ಅಥವಾ ವಿಚಾರ ಪ್ರಸ್ತುತವಾಗಬೇಕಾದರೆ ಅದು ಸರ್ವಕಾಲದಲ್ಲೂ ಸತ್ಯವಾಗಿಯೇ ಇರಬೇಕು, ಅನುಷ್ಠಾನ ಸಾಧ್ಯವಾಗಿರಬೇಕು ಮತ್ತು ಅನುಷ್ಠಾನದಿಂದ ಒಂದೇ ಫಲವನ್ನು ಕೊಡುವಂತಿರಬೇಕು. ಯಾವ ಯಾವ ಆದರ್ಶಗಳು ಇಂತಹ ಸ್ವರೂಪವನ್ನು ಹೊಂದಿವೆಯೋ ಅವನ್ನೇ `ಸತ್ಯ’ ಅಥವಾ ‘ತತ್ತ್ವ’ ಎನ್ನುತ್ತಾರೆ.

ಸತ್ಯ ಎನ್ನುವುದು ಋಷಿಗಳಿಗೆ ಅನುಭವಗೋಚರವಾದದ್ದು. ಅನುಭವದಿಂದ ಋಷಿಸದೃಶ ವ್ಯಕ್ತಿಗಳು ಆಡಿದ ಮಾತು ಕೂಡ ಸತ್ಯವೇ. ಅದನ್ನೇ ಋಷಿವಾಣಿ, ಆಪ್ತವಾಕ್ಯ, ಶಾಸ್ತ್ರ ಎಂದೆಲ್ಲಾ ಕರೆಯುತ್ತೇವೆ. ಋಷಿವಾಣಿ ಸತ್ಯದ ಕುರಿತಾಗಿರುವುದರಿಂದ ಅದು ಎಂದೆಂದಿಗೂ ಪ್ರಸ್ತುತ. ಅದು ಲೋಕದ ಜನರ ಶ್ರೇಯಸ್ಸಿಗಾಗಿ, ಅಪಾರ ಕರುಣೆಯಿಂದ, ಅವರಿಂದ ಹೊರಬಂದ ಮಾತುಗಳು. ಆದ್ದರಿಂದ ಅವು ಎಂದೆಂದಿಗೂ ಪ್ರಸ್ತುತ.

ಸ್ವಾಮಿ ವಿವೇಕಾನಂದರ ಪ್ರಸ್ತುತತೆ

ಸ್ವಾಮಿ ವಿವೇಕಾನಂದರು ಅಂತಹ ಒಬ್ಬ ಮಹಾನ್ ಋಷಿ. ಅವರು ಸಪ್ತರ್ಷಿಗಳಲ್ಲೊಬ್ಬರು. ಆದ್ದರಿಂದ ಅವರ ಸಂದೇಶಗಳೆಲ್ಲವೂ ಪ್ರಸ್ತುತವೇ. ಅವರದು ಋಷಿದೃಷ್ಟಿ. ಅವರು ಸಮಸ್ಯೆಯ ಮೂಲಕ್ಕೆ ಹೋಗಿ ಪರಿಹಾರವನ್ನು ಕಂಡು ಹಿಡಿದವರು. ನಮ್ಮ ಸಮಸ್ಯೆಗಳೆಲ್ಲ ಗೊತ್ತಿದ್ದು, ನಮ್ಮ ಮೇಲೆ ಅನುಕಂಪೆಯಿರುವ, ಪರಿಹಾರ ಕೊಡುವ ಸಾಮರ್ಥ್ಯವಿರುವ ವ್ಯಕ್ತಿಯಿಂದ ಮಾತ್ರ ಮಾರ್ಗದರ್ಶನ ಸಾಧ್ಯ. ಸ್ವಾಮೀಜಿಯವರು ಅಂತಹ ಒಬ್ಬ ಮಹಾನ್ ವ್ಯಕ್ತಿ ಎನ್ನುವುದು ಅವರ ಜೀವನದ ಅಧ್ಯಯನದಿಂದ ತಿಳಿಯುತ್ತದೆ. ಆದ್ದರಿಂದ ಅವರ ಉಪದೇಶಗಳು ಸಾರ್ವಕಾಲಿಕ ಸತ್ಯದಂತೆ ಇಂದಿಗೂ, ಎಂದೆಂದಿಗೂ ಪ್ರಸ್ತುತ!

ಅವರ ಸಂದೇಶದ ಪ್ರಸ್ತುತತೆಯನ್ನು ಅವರ ಮಾತಿನಲ್ಲೇ ಕೇಳಿದರೆ ಇನ್ನೂ ಸ್ವಾರಸ್ಯ. ಅವರೆಂದಿದ್ದಾರೆ, “ನಾನು ಮುಂದಿನ ೧,೫೦೦ ವರ್ಷಗಳಿಗೆ ಬೇಕಾಗುವಷ್ಟು ವಿಚಾರಗಳನ್ನು ಕೊಟ್ಟಿದ್ದೇನೆ”. ಇಂಥಹ ಮಾತುಗಳನ್ನು ಆಡಬೇಕಾದರೆ ಎಂತಹ ಅದಮ್ಯ ವಿಶ್ವಾಸ ಬೇಕು! ಇವುಗಳೇ ಋಷಿವಾಣಿ!

ಭಾರತದ ಸಮಸ್ಯೆಗಳನ್ನು ವಿಶೇಷವಾಗಿ ಅಧ್ಯಯನ ಮಾಡಿ ಅರಿತುಕೊಂಡ ಸ್ವಾಮೀಜಿಯವರು,  ತಮ್ಮ ಹಲವಾರು ಉಪನ್ಯಾಸಗಳಲ್ಲಿ ಭಾರತೀಯರಿಗಾಗಿಯೇ ವಿಶೇಷವಾಗಿ, ಸಂದೇಶವನ್ನು, ಮಾರ್ಗದರ್ಶನವನ್ನು ನೀಡಿದ್ದಾರೆ. ಅಪಾರ ಅನುಭವದಿಂದ ಕೂಡಿದ ಸ್ವಾಮೀಜಿ, ವಿನಯದಿಂದ ಆದರೆ ಅಷ್ಟೇ ದಿಟ್ಟತನದಿಂದ, ಹೇಳುತ್ತಾರೆ: “ಪಾದರಕ್ಷೆ ಎಲ್ಲಿ ಕಚ್ಚುತ್ತದೆ ಎಂಬುದು ನನಗೆ ಗೊತ್ತು. ನನಗೂ ಸ್ವಲ್ಪ ಅನುಭವವಾಗಿದೆ.” – ಆದ್ದರಿಂದ ಸ್ವಾಮೀಜಿಯವರೇ ಇಂದು ನಮಗೆ ಋಷಿ, ನಾಯಕ, ಸ್ನೇಹಿತ, ಗುರು-ಎಲ್ಲವೂ!

ಹೀಗಾಗಿ, ಸ್ವಾಮೀಜಿಯವರ ವ್ಯಕ್ತಿತ್ವ ಹಾಗೂ ಬೋಧನೆಯ ಹಿನ್ನೆಲೆಯಲ್ಲಿ ಆಧುನಿಕ ಸಮಸ್ಯೆಗಳನ್ನು ಅವಲೋಕಿಸಿ, ಅವರು ಕೊಟ್ಟ ಉಪದೇಶ ಹೇಗೆ ಪ್ರಸ್ತುತ ಎನ್ನುವುದನ್ನು ಆಲೋಚಿಸಬೇಕಾಗಿದೆ.

ಕಣ್ಣ ಮುಂದಿರುವ ಪರಿಸ್ಥಿತಿ

ಮೂರು ಬಗೆಯ ಮನುಷ್ಯರಿದ್ದಾರೆ. ಒಂದೆಡೆ ಮನುಷ್ಯ ಹಣ ಸಂಪಾದಿಸಿ ಲೌಕಿಕ ಸುಖ-ಭೋಗಗಳನ್ನು ಅನುಭವಿಸಬೇಕೆಂಬ ಗುರಿ ಹೊಂದಿದ್ದಾನೆ. ಆದರೆ ಮಾರ್ಗ ತಿಳಿಯದೆ ಅಶಾಂತಿ, ಭಯಗಳಿಂದ ಕೂಡಿದ್ದಾನೆ. ಅವನು ಮೊದಲ ಬಗೆ. ಇನ್ನೊಂದೆಡೆ ಶಾರೀರಿಕ ಹಾಗೂ ಮಾನಸಿಕ ದೌರ್ಬಲ್ಯಗಳಿಂದಾಗಿ ಶತಾಯಗತಾಯ ಅಭಯವನ್ನು ರಕ್ಷಣೆಯನ್ನು ಪಡೆಯುವ ಹಂಬಲ. ಅವನಿಗೆ ಈಗ ಸುಖ ಸಿಕ್ಕಿದರೆ ಸಾಕು. ಭವಿಷ್ಯವನ್ನು ಆದರ್ಶವನ್ನು, ಮೌಲ್ಯಗಳನ್ನು ಯೋಚಿಸುವಷ್ಟು ಧೈರ್ಯವಿಲ್ಲ. ಅಷ್ಟೇ ಅಲ್ಲ. ಅವುಗಳನ್ನು ಕೇಳುವುದಕ್ಕೂ ಧೈರ್ಯವಿಲ್ಲ, ಆ ಆದರ್ಶಗಳ ಮೇಲೆ ವಿಶ್ವಾಸವೂ ಇಲ್ಲ. ಬಹು ಜನ ಹೋಗುತ್ತಿರುವುದೇ ಸರಿಯಾದ ದಾರಿ ಎಂದು ಕೊಂಡಿದ್ದಾನೆ. ವಿವೇಕಿಗಳು ಹೋಗುವ ದಾರಿಯೇ ಸರಿಯಾದದ್ದು ಮತ್ತು ಅದೇ ನಾವು ಹೋಗಬೇಕಾದ ದಾರಿ  ಎಂದು ಆಲೋಚಿಸುವಷ್ಟೂ ಶಕ್ತಿ-ಸಾಮರ್ಥ್ಯಗಳಿಲ್ಲದಂತೆ ಆಗಿಬಿಟ್ಟಿದ್ದಾನೆ. ಅಂತಹವನು ಎರಡನೆಯ ಬಗೆ. ಇಲ್ಲಿ ಸ್ವಾಮೀಜಿಯವರ ಕರ್ಮಯೋಗದ ಒಂದು ಸೂತ್ರರೂಪದ ಮಾತನ್ನು ಆಲೋಚಿಸಬೇಕು. ಸ್ವಾಮೀಜಿ ಎನ್ನುತ್ತಾರೆ, “Work like a master, not like a slave”, – “ಗುಲಾಮನಂತೆ ಕೆಲಸ ಮಾಡಬೇಡ; ಯಜಮಾನನಂತೆ ಮಾಡು”. ಗುಲಾಮನಿಗೆ ಕರ್ಮದ ಉದ್ದೇಶ, ರೀತಿ, ವ್ಯಾಪ್ತಿ – ಇವು ಯಾವುದನ್ನೂ ತಿಳಿಯುವ ಶಕ್ತಿಯಿಲ್ಲ. ಹೀಗೆ ಗುಲಾಮನಂತೆ ಕೆಲಸ ಮಾಡುವವನು ಮೂರನೆಯ ಬಗೆ. ನಾವು ಆಲೋಚಿಸಿದ ಮೂರು ರೀತಿಯ ವ್ಯಕ್ತಿಗಳಲ್ಲಿ ಒಬ್ಬ ಕರ್ಮ ಮಾಡಲು ದುರ್ಬಲ, ಇನ್ನೊಬ್ಬ ರೀತಿ-ನೀತಿ ಅರಿಯದವನು, ಮತ್ತೊಬ್ಬ ಉದ್ದೇಶ-ವ್ಯಾಪ್ತಿ ಗೊತ್ತಿಲ್ಲದವನು. ಈ ಎಲ್ಲಾ ದೌರ್ಬಲ್ಯಗಳನ್ನೂ ಈಗ ಸರಿಪಡಿಸಿಕೊಳ್ಳಬೇಕಾಗಿದೆ. ಅದಕ್ಕೆ ಸ್ವಾಮೀಜಿಯವರ ಸಂದೇಶವನ್ನು ಆಧರಿಸಿದ ಕೆಲವು ಸೂಚನೆಗಳನ್ನು ನೋಡೋಣ.

ಶೀಲವೇ ಜೀವನ

ಈಗ ನಾವು ಕಾಣುತ್ತಿರುವ ಹುಚ್ಚು ಸ್ಪರ್ಧೆಯಲ್ಲಿ ಹೇಗಾದರೂ ಗಿಟ್ಟಿಸಿಕೊಂಡವನೇ ‘ಜಾಣ’ ಎನ್ನುವಂತಿದೆ ಬಹು ಜನರ ಭಾವನೆ. ಆದರೆ ಅಂತಹವರು (ನಮ್ಮಲ್ಲಿ ಬಹು ಮಂದಿ ಅಂಥಹವರೇ ಅಲ್ಲವೇ?!) ಈ ಕೆಲವು ವಿಚಾರಗಳನ್ನು ನೆನಪಿಟ್ಟಿದ್ದರೆ ಒಳ್ಳೆಯದು:

 • ಆದರ್ಶವೆಂದರೆ ಶೀಲವಂತನಾಗಿದ್ದು ಸಾಧಿಸಬೇಕಾದ ಕಾರ್ಯ.
 • ಇದು ಸುಲಭದ ಮಾತಲ್ಲ!
 • ಅಂದ ಮಾತ್ರಕ್ಕೆ ಇದು ಕೈಗೆಟುಕದ್ದು ಅಂತಲೂ ಅಲ್ಲ.
 • ಸಾಮಾನ್ಯ ವ್ಯಕ್ತಿ ತನ್ನ ಕಾರ್ಯಸಿದ್ಧಿಗೆ ಅಡಚಣೆಗಳು ಬಂದಾಗ, ಮೊದಲು ಬಿಟ್ಟುಬಿಡುವುದು ಶೀಲವನ್ನು, ಆದರ್ಶ-ಮೌಲ್ಯಗಳನ್ನು, ಏಕೆಂದರೆ ಶೀಲವಂತನಾಗಿದ್ದು ಕಾರ್ಯ ಸಾಧಿಸುವುದು ಕಷ್ಟ.
 • ಆದರೆ ಹೀಗೆ ಪ್ರತಿ ಬಾರಿಯೂ ಶೀಲವನ್ನೇ ತ್ಯಾಗ ಮಾಡುತ್ತಿದ್ದರೆ, ಅಂತಹ ಮನುಷ್ಯ ನೈತಿಕವಾಗಿ ದುರ್ಬಲನಾಗುತ್ತಾನೆ, ಅವನನ್ನು ಸಮಸ್ಯೆಗಳ ಸರಮಾಲೆಯೇ ಕಾಡುತ್ತದೆ. ಇದರಿಂದ ಇನ್ನೂ ಹೆಚ್ಚಿನ ಅಶಾಂತಿಯನ್ನು ಅನುಭವಿಸಬೇಕಾಗುತ್ತದೆ. ಅದರಿಂದ ಮೃತ್ಯುಪ್ರಾಯವಾಗಿರುವ ದುರ್ಭರ ಸ್ಥಿತಿ ನಿರ್ಮಾಣವಾಗುತ್ತದೆ.
 • ಶೀಲವನ್ನು ಉಳಿಸಿಕೊಂಡು, ಅದೇ ಸಮಯದಲ್ಲಿ, ಛಲದಿಂದ ಹೋರಾಡುವವನು ವಿಶ್ವವಿಜೇತನೇ ಆಗಿಬಿಡುತ್ತಾನೆ.

“ನಾನು ಏನು ಗಳಿಸಿದೆ?”

ಇಲ್ಲಿ ಸ್ವಾಮೀಜಿಯವರ ಈ ಕೆಳಗಿನ ಮಾತುಗಳನ್ನು ನೆನಪಿಸಿಕೊಳ್ಳಬೇಕು. “ಲೌಕಿಕ ಭೋಗಕ್ಕೂ, ಆಧ್ಯಾತ್ಮಿಕ ಸಿದ್ಧಿಗೂ ಮೊದಲು ನಮ್ಮಲ್ಲಿ ನಮಗೆ ಶ್ರದ್ಧೆ ಬೇಕು.” “ಮೊದಲು ಶರೀರವನ್ನು ದೃಢವಾಗಿಸಿಕೊಳ್ಳಿ, ಅದರಿಂದ ಎಷ್ಟೋ ಸಮಸ್ಯೆಗಳು ದೂರವಾಗುತ್ತವೆ. ಅದರ ಜೊತೆಜೊತೆಗೆ ಮಾನಸಿಕ ಶಕ್ತಿಯನ್ನೂ ಬೆಳೆಸಿಕೊಳ್ಳಬೇಕು.”

ನಮ್ಮ ಜನರ ಜೀವನವನ್ನು ಇನ್ನಷ್ಟು ಪರೀಕ್ಷಿಸೋಣ. ಒಂದೆಡೆ, ಹಣಕ್ಕಾಗಿ ಜನ ಹೆಣಗಾಡುತ್ತಿದ್ದರೆ ಮತ್ತೊಂದೆಡೆ ಕಷ್ಟಪಟ್ಟು ಹಣ ಸಂಪಾದಿಸಿಯೂ ಎಲ್ಲಾ ಇದ್ದರೂ ಶಾಂತಿ, ನೆಮ್ಮದಿ ಇಲ್ಲದೆ, ಒಂದು ರೀತಿಯ ಅತೃಪ್ತಿಯ ಭಾವನೆಯಿಂದ ಕಷ್ಟಪಡುತ್ತಿದ್ದಾರೆ. ಇದೂ ಕೂಡ ಮತ್ತೊಂದು ರೀತಿಯ ದೌರ್ಬಲ್ಯವೇ. ಗುಲಾಮಗಿರಿಯೇ ಎನ್ನಬಹುದು.

ಆದ್ದರಿಂದ, ಉನ್ನತ ಜೀವನದ ಆದರ್ಶಗಳನ್ನು ತಿಳಿದು, ಅರ್ಥಮಾಡಿಕೊಂಡು, ರೂಢಿಸಿಕೊಂಡಾಗ ಮಾತ್ರ ಜೀವನದಲ್ಲಿ ನಮ್ಮ ಮುಂದಿರುವ ಕರ್ತವ್ಯಗಳಿಗೆ ಅರ್ಥ ಕಂಡುಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಕೊನೆಯವರೆಗೂ “ನಾನು ಏನು ಗಳಿಸಿದೆ?” ಎಂಬ ಪ್ರಶ್ನೆ ಹಾಗೆಯೇ ಉಳಿದಿರುತ್ತದೆ. ಸ್ವಾಮೀಜಿ ಹೇಳುವಂತೆ, “ಕರ್ಮದ ಉದ್ದೇಶ ಜ್ಞಾನ, ಆನಂದ”. ನಾವು ಮಾಡುತ್ತಿರುವ ಕರ್ಮದಿಂದ ಅಶಾಂತಿ, ಅತೃಪ್ತಿ ಉಂಟಾಗುತ್ತಿದ್ದರೆ ಕರ್ಮದಲ್ಲಿ ಮತ್ತು ಕರ್ಮದ ಹಿಂದಿರುವ ಭಾವನೆಯಲ್ಲಿ ಏನೋ ದೋಷವಿದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು! ನಾವು ಯಜಮಾನನಂತೆ ಕರ್ತವ್ಯ ಮಾಡಬೇಕಾದರೆ ಅದರ ಉದ್ದೇಶ, ರೀತಿ ನಮಗಾದರೂ ಸ್ಪಷ್ಟವಾಗಿರಬೇಕು. ಎಷ್ಟು ಮಾಡಿದರೆ ಹಿತ, ಎಲ್ಲಿಗೆ ನಿಲ್ಲಿಸಬೇಕು ಎನ್ನುವುದೂ ಗೊತ್ತಿರಬೇಕು.

ಕೆಲವು ಸೂಚನೆಗಳು

 • ಅಂಗಸಾಧನೆ-ಯೋಗಾಸನ-ಪ್ರಾಣಾಯಾಮಗಳಿಂದ ಶರೀರಮನಸ್ಸುಗಳನ್ನು ತರಬೇತಿಗೊಳಿಸಿ ಅವನ್ನು ಶಕ್ತಿಯುತವೂ ಮತ್ತು ಶಿಸ್ತುಬದ್ಧವೂ ಆಗುವಂತೆ ಮಾಡಬೇಕು. ತನ್ಮೂಲಕ ಇಚ್ಛಾಶಕ್ತಿಯನ್ನು ಬಲಗೊಳಿಸಿಕೊಳ್ಳಬೇಕು.
 • ಕ್ರಮಬದ್ಧ ಅಧ್ಯಯನ-ಚಿಂತನೆ-ಸಜ್ಜನರ ಸಂಗದಿಂದ ವಿವೇಕವನ್ನು ಜಾಗೃತಗೊಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಜೀವನಚರಿತ್ರೆ, ಅವರ ವೀರವಾಣಿಗಳುಳ್ಳ ಪುಸ್ತಕಗಳ ಅಧ್ಯಯನ ಅತ್ಯಂತ ಪ್ರಯೋಜನಕಾರಿ.
 • ಜೊತೆಯಲ್ಲಿ ಆತ್ಮಾವಲೋಕನ, ಆತ್ಮನಿರೀಕ್ಷಣೆ ಮಾಡುತ್ತಾ ಇದ್ದರೆ ಬದುಕಿನ ದಿಶೆ ತಪ್ಪುವುದಿಲ್ಲ.
 • ಮಾತು-ಮನಸ್ಸು-ಕೃತಿಗಳು ಒಂದೇ ಆಗಿದ್ದು, ಸುಸಂಸ್ಕೃತವಾಗಿದ್ದರೆ ಎಷ್ಟೇ ಕಷ್ಟಗಳು ಬಂದರೂ ಅವುಗಳನ್ನು ಎದುರಿಸಿ ಮುನ್ನಡೆಯಬಹುದು.
 • ಪ್ರಾರ್ಥನೆ, ಜಪ-ಧ್ಯಾನಗಳ ಅಭ್ಯಾಸ ನಮ್ಮ ಜೀವನಸಂಸ್ಕೃತಿಯ ಒಂದು ಮುಖ್ಯ ಅಂಗ. ಅವುಗಳ ಪಾಲನೆ ಅತ್ಯಗತ್ಯ.

ಪ್ರಾರ್ಥನೆಯ ಆವಶ್ಯಕತೆ

ಪರಮಾತ್ಮನಲ್ಲಿ ಪ್ರಾರ್ಥನೆ? ಇವೆಲ್ಲಾ ಶಾಲಾಮಕ್ಕಳಿಗೆ ಎಂಬಂತೆ ಇದೆ ಈಗಿನ ಯುವಜನರ ಧೋರಣೆ! ಶರೀರ ಬೆಳೆದು ದೊಡ್ಡದಾದರೆ ಪ್ರಾರ್ಥನೆಯ ಆವಶ್ಯಕತೆ ಇಲ್ಲವೆಂದೇನು? ಆಗ, ಇನ್ನಷ್ಟು ಅರ್ಥಪೂರ್ಣವಾಗಿ, ಭಾವಪೂರ್ಣವಾಗಿ ಪ್ರಾರ್ಥಿಸುವುದನ್ನು ಕಲಿಯಬಹುದಲ್ಲ! ಪರಿಶುದ್ಧ ಜೀವನಕ್ಕಾಗಿ, ಉನ್ನತ ಆದರ್ಶಗಳಲ್ಲಿ ನೆಲೆನಿಲ್ಲುವ ಸಾಮರ್ಥ್ಯಕ್ಕಾಗಿ ಪ್ರಾರ್ಥಿಸಬಹುದಲ್ಲ! ಬುದ್ಧಿಪ್ರಚೋದನೆಗಾಗಿ ಪ್ರಾರ್ಥಿಸಬಹುದಲ್ಲ! ಹೀಗೆ ಸರಳವಾದ ಪ್ರಾರ್ಥನೆಯಿಂದ ಮನಸ್ಸು ಸ್ವಲ್ಪ ಹೊತ್ತು ಅಂತರ್ಮುಖಿಯಾದರೂ ಎಷ್ಟೋ ಲಾಭ ಉಂಟಾಗುತ್ತದೆ. ಆಗ ಅದು ಶಾಂತವಾಗುತ್ತದೆ, ಆಲೋಚನೆ ಸ್ಪಷ್ಟವಾಗುತ್ತದೆ, ಇದರಿಂದ ವಿಶ್ವಾಸ ಮೂಡುತ್ತದೆ. ಈ ಶ್ರದ್ಧೆವಿಶ್ವಾಸಗಳೇ ಮನುಷ್ಯನಿಗೆ ದಾರಿದೀಪವಾಗುತ್ತವೆ.

ಈಗ ನೀವೇ ಯೋಚನೆ ಮಾಡಿ. ಸ್ವಾಮಿ ವಿವೇಕಾನಂದರ ಶಕ್ತಿಶಾಲಿ ವಿಚಾರಧಾರೆ ಇಂದಿಗೂ ಪ್ರಸ್ತುತವಲ್ಲವೆ? ಇನ್ನೂ ಸ್ವಲ್ಪ ಆಲೋಚಿಸಿ ನೋಡಿ. ಅದು ಎಂದೆಂದಿಗೂ ಪ್ರಸ್ತುತ ಎನ್ನಿಸುವುದಿಲ್ಲವೆ?