ಸ್ವಾಮಿ ವಿವೇಕಾನಂದರು ಜೀವನ ಎಂದರೇನು ಎಂಬುದಕ್ಕೆ ತಮ್ಮ ವಿಶಿಷ್ಟವಾದ ವಿವರಣೆಯನ್ನು ನೀಡಿದ್ದಾರೆ: “ಜೀವನವೆಂದರೆ ಒಂದು ಜೀವಿಯು ವಿರುದ್ಧ ಸನ್ನಿವೇಶಗಳನ್ನು ಎದುರಿಸುತ್ತ ತನ್ನನ್ನು ಅಭಿವ್ಯಕ್ತಗೊಳಿಸುವುದು ಮತ್ತು ಬೆಳವಣಿಗೆ ಹೊಂದುವುದು,” (Life is the unfoldment and development of a being under circumstances tending to press it down). ಅಂದರೆ ಜೀವನವೆಂದರೆ ಒಂದು ಹೋರಾಟ. ‘ಹೋರಾಟವೇ ಜೀವನದ ಗುರುತು” ಎನ್ನುತ್ತಾರೆ ಸ್ವಾಮೀಜಿ, ಈ ಹೋರಾಟವಿಲ್ಲದಿದ್ದರೆ ಜೀವನ ಸ್ವಾರಸ್ಯವನ್ನು ಕಳೆದುಕೊಳ್ಳುತ್ತದೆ.

ವಿಕಾಸದ ಲಕ್ಷಣ

ಸ್ವಾಮೀಜಿ unfoldment ಎಂಬ ಪದವನ್ನು ಬಳಸಿದ್ದಾರೆ. ಇದರ ಅರ್ಥ ಅವ್ಯಕ್ತವಾಗಿ ಆಗಲೇ ಇರುವುದರ ಅಭಿವ್ಯಕ್ತಿ ಅಥವಾ ಹೊರಪಡುವುದು ಅಥವಾ ಪ್ರಕಾಶಗೊಳ್ಳುವುದು. ಉದಾಹರಣೆಗೆ ಬೀಜದಲ್ಲಿ ಮರವು ಅವ್ಯಕ್ತ ಸ್ಥಿತಿಯಲ್ಲಿ ಇರುತ್ತದೆ. ಅದನ್ನು ಬಿತ್ತಿ ನೀರು ಗೊಬ್ಬರ ಹಾಕಿದಾಗ ಅದು ತನ್ನೊಳಗಿನ ಸತ್ತ್ವವನ್ನು ಹೊರಗೆ ವ್ಯಕ್ತಪಡಿಸಿ ಒಂದು ಮರವಾಗಿ ಬೆಳೆಯುತ್ತದೆ. ಕಾರಣದಲ್ಲಿ ಕಾರ್ಯವು ಆಗಲೇ ಇದೆ ಎಂಬ ವೇದಾಂತದ ಸತ್ಕಾರ್ಯವಾದವನ್ನು ಇದು ಸೂಚಿಸುತ್ತದೆ. ಕಾರ್ಯ(effect)ವೆಂದರೆ ಕಾರಣದ ಇನ್ನೊಂದು ರೂಪ-ಇದೊಂದು ಪರಿಣಾಮ. ಮೊದಲೇ ಇಲ್ಲದಿರುವುದಾವುದನ್ನೂ ಸೃಷ್ಟಿಸಲಾಗುವುದಿಲ್ಲ ಎಂಬುದನ್ನು ಈ ವಾದ ಪ್ರತಿಪಾದಿಸುತ್ತದೆ.

ಹಾಗೆಯೇ ಜೀವಿಯು ತನ್ನೊಳಗೆ ಆಗಲೇ ಇರುವುದನ್ನು ಹೊರಗೆ ವ್ಯಕ್ತಪಡಿಸಲು ಪ್ರಯತ್ನಿಸುತ್ತದೆ. ಈ ಪ್ರಯತ್ನ ಅಥವಾ ಹೋರಾಟವೇ ಜೀವನ. ಈ ಅಭಿವ್ಯಕ್ತಿಗೆ ಇನ್ನೊಂದು ಅಂಶ ಪೂರಕವಾಗಿ ಇರಬೇಕಾಗುತ್ತದೆ. ಅದೇ ಬೆಳವಣಿಗೆ. ಒಂದು ಮಗುವಿನ ದೇಹ ಬೆಳೆದು ಪ್ರೌಢ ವ್ಯಕ್ತಿಯ ದೇಹವಾಗಿ ಬೆಳೆಯುತ್ತದೆ. ಒಂದು ಸಸಿಯು ಮರವಾಗಿ ಬೆಳೆಯುತ್ತದೆ. ಈ ಬೆಳವಣಿಗೆ ಸುಪ್ತವಾಗಿರುವುದರ ಅಭಿವ್ಯಕ್ತಿಗೆ ಸಹಾಯಕವಾಗುತ್ತದೆ. ಮರವು ಚೆನ್ನಾಗಿ ಬೆಳೆದರೆ ತನ್ನದೇ ವಿಶಿಷ್ಟವಾದ ಫಲಪುಷ್ಟಗಳನ್ನು ನೀಡುತ್ತದೆ. ಹಣ್ಣನ್ನು ಸಾಕಷ್ಟು ಬೆಳೆಯಲು ಬಿಟ್ಟರೆ ಅದು ತನ್ನ ವಿಶಿಷ್ಟ ರುಚಿಯನ್ನೂ ಪರಿಮಳವನ್ನೂ ವ್ಯಕ್ತಪಡಿಸುತ್ತದೆ. ಒಂದು ಮಗುವು ಮುಗ್ಧವಾಗಿರುತ್ತದೆ, ಕಾಮ ಕ್ರೋಧಾದಿಗಳು ಇರುವುದಿಲ್ಲ. ಆದರೆ ರಾಗದ್ವೇಷಾದಿ ಸಂಸ್ಕಾರಗಳೆಲ್ಲ ಆ ಮಗುವಿನಲ್ಲಿ ಸುಪ್ತವಾಗಿರುತ್ತವೆ. ಅವನ್ನು ವ್ಯಕ್ತಪಡಿಸು ವುದಕ್ಕೆ ದೇಹ ಮನಸ್ಸುಗಳ ಬೆಳವಣಿಗೆ ಸಾಕಷ್ಟು ಆಗಿರುವುದಿಲ್ಲ, ಅದೇ ಮಗು ಪ್ರೌಢ ವ್ಯಕ್ತಿಯಾಗಿ ಬೆಳೆದಮೇಲೆ ಅವು ಮುಕ್ತ ರೀತಿಯಲ್ಲಿ ವ್ಯಕ್ತವಾಗುತ್ತವೆ. ಹಾಗೆಯೇ ಎಷ್ಟೋ ಸದ್ಗುಣಗಳೂ ಕೂಡ.

ಬೆಳವಣಿಗೆ ಬದಲಾವಣೆಯನ್ನು ಸೂಚಿಸುತ್ತದೆ. ಇದು ಕೇವಲ ಬದಲಾವಣೆಯಲ್ಲ, ಅಭಿವೃದ್ಧಿಪರ ಬದಲಾವಣೆ. ಆದರೆ ಅಭಿವ್ಯಕ್ತಿಯಲ್ಲಿ ಬದಲಾವಣೆ ಇಲ್ಲ-ಮೊದಲೇ ಇರುವುದು ಹೊರಗೆ ಕಾಣಿಸಿಕೊಳ್ಳುತ್ತದೆ ಅಷ್ಟೇ. ಈ ರೀತಿ ಹೊರಗೆ ಕಾಣಿಸಿಕೊಳ್ಳುವುದಕ್ಕೆ ಬೆಳವಣಿಗೆ ಸಹಾಯಕವಾಗುತ್ತದೆ. ಒಂದು ದೀಪವಿದೆ. ಅದಕ್ಕೆ ಗಾಜಿನ ಬುರುಡೆಯ ಆವರಣವಿದೆ. ಗಾಜು ಹೊರಗಿನ ಧೂಳಿನಿಂದಲೂ ಒಳಗಿನ ಕಾಡಿಗೆಯಿಂದಲೂ ಅಶುದ್ಧವಾಗಿದೆ. ಆದ್ದರಿಂದ ದೀಪದ ಬೆಳಕು ಹೊರಗೆ ವ್ಯಕ್ತ ವಾಗುತ್ತಿಲ್ಲ. ಈಗ ಗಾಜಿನ ಬುರುಡೆಯನ್ನು ಶುದ್ಧಗೊಳಿಸಿದರೆ ದೀಪದ ಬೆಳಕು ಹೊರಗೆ ಕಾಣಿಸಿಕೊಳ್ಳುತ್ತದೆ. ದೀಪ ಮೊದಲಿನಂತೆಯೇ ಇದೆ, ಅದರಲ್ಲೇನೂ ಬದಲಾವಣೆಯಾಗಲಿಲ್ಲ. ಬದಲಾವಣೆಯಾದದ್ದು ಗಾಜಿನ ಬರುಡೆಯಲ್ಲಿ.

ಈ ಬೆಳವಣಿಗೆ ಮತ್ತು ಅಭಿವ್ಯಕ್ತಿಗಳ ಪ್ರಕ್ರಿಯೆಯನ್ನೇ ವಿಕಾಸವೆಂದು ಕರೆಯುವುದು.

ಜೀವಿಯ ಮೂರು ಸ್ತರಗಳು

ಈಗ ಜೀವಿ (being) ಎಂದರೆ ಏನೆಂಬುದನ್ನು ನೋಡೋಣ. ಜೀವಿಯಲ್ಲಿ ಮೂರು ಸ್ತರಗಳನ್ನು ನಾವು ಗುರುತಿಸಬಹುದು: ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ, ಮೂರೂ ಅಂಶಗಳು ಸೇರಿ ಒಂದು ವ್ಯಕ್ತಿತ್ವವಾಗುತ್ತದೆ. ಆದ್ದರಿಂದ ವಿಕಾಸವೆಂದರೆ ಈ ಮೂರೂ ಸ್ತರಗಳಿಗೆ ಅನ್ವಯಿಸುತ್ತದೆ. ಇವುಗಳಲ್ಲಿ ಯಾವುದನ್ನೂ ನಾವು ಕಡೆಗಣಿಸುವಂತಿಲ್ಲ. ಮೇಲೆ ಪ್ರಸ್ತಾಪಿಸಿದ ಬೆಳವಣಿಗೆಯು ಭೌತಿಕ ಮತ್ತು ಮಾನಸಿಕ ಸ್ತರಕ್ಕೆ ಅನ್ವಯಿಸುತ್ತದೆ ಹಾಗೂ ಅಭಿವ್ಯಕ್ತಿಯು ಆಧ್ಯಾತ್ಮಿಕ ಅಂಶಕ್ಕೆ, ಅನ್ವಯಿಸುತ್ತದೆ. ಏಕೆಂದರೆ ಬದಲಾವಣೆ ಭೌತಿಕ ಮತ್ತು ಮಾನಸಿಕ ಹಂತದಲ್ಲಿ ಮಾತ್ರ ಸಾಧ್ಯ. ಆಧ್ಯಾತ್ಮಿಕ ಅಂಶ ಅಥವಾ ಆಂತರಿಕ ದಿವ್ಯತೆಗೆ ಬದಲಾವಣೆ ಇಲ್ಲ, ಅದು ಯಾವಾಗಲೂ, ಮೇಲೆ ಉದಾಹರಿಸಿದ ದೀಪದಂತೆ, ಒಂದೇ ಸಮನಾಗಿ ಇರುವಂತಹುದು. ಭೌತಿಕ ಮತ್ತು ಮಾನಸಿಕ ಬೆಳವಣಿಗೆ, ಅಂದರೆ ಅಭಿವೃದ್ಧಿ ಪರ ಬದಲಾವಣೆ, ದಿವ್ಯತೆಯ ಅಭಿವ್ಯಕ್ತಿಗೆ ಸಹಾಯಕವಾಗುತ್ತದೆ. ಸ್ವಾಮೀಜಿಯ ವಿವರಣೆಯಲ್ಲಿ ಬರುವ “ಜೀವಿಯು ತನ್ನನ್ನು ಅಭಿವ್ಯಕ್ತಿಗೊಳಿಸುವುದು (unfoldment)” ಎಂದರೆ ಆಂತರಿಕ ದಿವ್ಯತೆಯನ್ನು ಅಭಿವ್ಯಕ್ತಿಗೊಳಿಸುವುದು, ಮತ್ತು “ಬೆಳವಣಿಗೆ ಹೊಂದುವುದು” (development) ಎಂದರೆ ಭೌತಿಕ ಮತ್ತು ಮಾನಸಿಕವಾಗಿ ಬೆಳೆಯುವುದು, ಭೌತಿಕ ಮತ್ತು ಮಾನಸಿಕ ಬೆಳವಣಿಗೆ ದಿವ್ಯತೆಯ ಅಭಿವ್ಯಕ್ತಿಗೆ ಪೂರಕವಾಗಿರಬೇಕು. ಆದ್ದರಿಂದ ಸ್ವಾಮಿಜಿ ವ್ಯಕ್ತಿತ್ವದ ಯಾವ ಅಂಶವನ್ನೂ ಕಡೆಗಣಿಸುತ್ತಿಲ್ಲ.

ದಿವ್ಯತೆಯ ಪ್ರಕಾಶ

ಭೌತಿಕ ಮತ್ತು ಮಾನಸಿಕ ಅಂಶಗಳು ಪ್ರಕೃತಿಗೆ ಸೇರಿದವು ಹಾಗೂ ದಿವ್ಯತೆ ಪ್ರಜ್ಞಾಸ್ತರಕ್ಕೆ ಸೇರಿದುದು. ಇವೆರಡಕ್ಕೂ ನಾವು ವಿಕಾಸವನ್ನು ಆರೋಪಿಸುವಂತಿಲ್ಲ. ಪ್ರಕೃತಿ ಜಡ. ಅದರಲ್ಲಿ ಕೇವಲ ಬದಲಾವಣೆ ಇದೆ ಮತ್ತು ಆ ಬದಲಾವಣೆ ಅಂಧವಾದುದು-ಅದು ಸುಮ್ಮನೆ ಬದಲಾಗುತ್ತಿದೆ ಅಷ್ಟೇ. ಆ ಬದಲಾವಣಿಯನ್ನು ನಾವು ವಿಕಾಸವೆಂದು ಕರೆಯುವಂತಿಲ್ಲ. ಹಾಗೆಯೇ ದಿವ್ಯತೆಯಲ್ಲಿ ಬದಲಾವಣೆಯೇ ಇಲ್ಲ. ಆದ್ದರಿಂದ ಅದಕ್ಕೂ ನಾವು ವಿಕಾಸವನ್ನು ಆರೋಪಿಸುವಂತಿಲ್ಲ. ಹಾಗಾದರೆ ವಿಕಾಸ ಎನ್ನುವುದು ಯಾವುದಕ್ಕೆ ಸಂಬಂಧಿಸಿದುದು? ಪ್ರಕೃತಿಯ ಬದಲಾವಣೆ ದಿವ್ಯತೆಯ ಅಭಿವ್ಯಕ್ತಿಗೆ ಪೂರಕವಾದಾಗ ಅದನ್ನು ನಾವು ವಿಕಾಸ ಎನ್ನುವುದು. ಎಣ್ಣೆಯು ದೀಪ ಉರಿಯುವುದಕ್ಕೆ ಸಹಾಯಕವಾಗುವಂತೆ ಬದಲಾಗುವ ಪ್ರಕೃತಿಯು ದಿವ್ಯತೆಯ ಪ್ರಕಾಶಕ್ಕೆ ಪೂರಕವಾಗಬೇಕು.

ನಾವು ದೀಪಗಳು, ನಾವು ಉರಿಯುವುದನ್ನೇ ಜೀವನವೆನ್ನುವುದು.

-ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದರು ಇದನ್ನು ಒಂದು ಉದಾಹರಣೆಯ ಮೂಲಕ ವಿವರಿಸುತ್ತಾರೆ: ಒಂದು ಪರದೆ ಇರುತ್ತದೆ. ಅದರ ಹಿಂದೆ ದೊಡ್ಡ ಬಯಲು. ಪರದೆಯಿಂದಾಗಿ ಆ ಬಯಲು ಕಾಣುತ್ತಿಲ್ಲ, ಈಗ ಆ ಪರದೆಯಲ್ಲಿ ಒಂದು ಸಣ್ಣ ರಂಧ್ರವನ್ನು ಮಾಡಿದರೆ ಸ್ವಲ್ಪಮಟ್ಟಿಗೆ ಬಯಲು ಕಾಣುತ್ತದೆ. ಆ ರಂಧ್ರವನ್ನು ದೊಡ್ಡದು ಮಾಡುತ್ತ ಹೋದರೆ ಬಯಲು ಹೆಚ್ಚು ಹೆಚ್ಚು ಕಾಣುತ್ತ ಹೋಗುತ್ತದೆ. ಇಲ್ಲಿ ಬದಲಾವಣೆ ಆದುದು ಕೇವಲ ಪರದೆಯಲ್ಲಿ ಮಾತ್ರ. ಬಯಲು ಯಾವಾಗಲೂ ವಿಶಾಲವಾಗಿಯೇ ಇತ್ತು-ಅದರಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಪರದೆಯ ಬದಲಾವಣೆ ಬಯಲಿನ ಅಭಿವ್ಯಕ್ತಿಗೆ ಪೂರಕವಾಯಿತು ಅಷ್ಟೇ. ಪರದೆ ತುಂಬ ತೆಳ್ಳಗಿದ್ದು ಬಯಲು ಅಸ್ಪಷ್ಟವಾಗಿ ಕಾಣುತ್ತಿದೆ ಎಂದು ಇಟ್ಟುಕೊಳ್ಳೋಣ. ಈಗ ಆ ಪರದೆಗೆ ಬಣ್ಣ ಬಳಿದರೆ ಬಯಲು ಏನೂ ಕಾಣಿಸುವುದೇ ಇಲ್ಲ. ಅಂದರೆ ಪರದೆಯಲ್ಲಾದ ಬದಲಾವಣೆ ಬಯಲಿನ ಅಭಿವ್ಯಕ್ತಿಗೆ ಮಾರಕವಾದಂತಾಯಿತು.

ಹಾಗೆಯೇ ಪ್ರಕೃತಿಯ ಎಲ್ಲ ರೀತಿಯ ಬದಲಾವಣೆಗಳೂ ದಿವ್ಯತೆಯ ಅಭಿವ್ಯಕ್ತಿಗೆ ಪೂರಕವಾಗಿರುವುದಿಲ್ಲ. ಪ್ರಾಕೃತಿಕ ಅಂಶಗಳಾದ ದೇಹ ಮನಸ್ಸುಗಳ ಸೂಕ್ತವಾದ ಬೆಳವಣಿಗೆ ಆಂತರಿಕ ದಿವ್ಯತೆಯ ಅಭಿವ್ಯಕ್ತಿಗೆ ಪೂರಕವಾಗಿರುತ್ತದೆ. ಅಂದರೆ ದೇಹ ಮನಸ್ಸುಗಳು ಸತ್ತ್ವಪ್ರಧಾನವಾದಾಗ ದಿವ್ಯತೆ ಹೆಚ್ಚು
ಅಭಿವ್ಯಕ್ತವಾಗುತ್ತದೆ. ಮೊದಲು ನಾವು ತಮಸ್ಸನ್ನು ಹೋಗಲಾಡಿಸಬೇಕು, ಅನಂತರ ರಜಸ್ಸನ್ನೂ ಮೀರಿಹೋಗಬೇಕು. ಅಂದರೆ ನಾವು ಸಾತ್ತ್ವಿಕ ವ್ಯಕ್ತಿಗಳಾಬೇಕು. ಇದೇ ದಿವ್ಯತೆಯ ಅಭಿವ್ಯಕ್ತಿಗೆ ಉತ್ತಮವಾದ ಸ್ಥಿತಿ. ಈ ದೇಹ ಮನಸ್ಸುಗಳೆಂಬ ಗಾಜಿನ ಬುರುಡೆಯಲ್ಲಿರುವ ರಜಸ್ತಮೋ ಗುಣಗಳನ್ನು ಹೋಗಲಾಡಿಸಿದಾಗ ಅದು ಪಾರದರ್ಶಕವಾಗುತ್ತದೆ. ಅದೇ ಸಾತ್ತ್ವಿಕ ಸ್ಥಿತಿ. ಆಗ ಆಂತರಿಕ ದಿವ್ಯತೆಯ ದೀಪ ಪ್ರಕಾಶಮಾನವಾಗಿ
ಬೆಳಗುತ್ತದೆ. ಈ ಸ್ಥಿತಿಯನ್ನು ಪಡೆಯುವ ಹೋರಾಟವೇ ಜೀವನವೆಂಬುದು ಸ್ವಾಮೀಜಿಯವರ ಅಭಿಪ್ರಾಯ. ಈ ಸ್ಥಿತಿಯನ್ನು ಪಡೆಯಲು ಪ್ರಕೃತಿ ಬಿಡುವುದಿಲ್ಲ. ಶ್ರೀರಾಮಕೃಷ್ಣರು “ಇದನ್ನು ತಮ್ಮದೇ ಆದ ಭಾಷೆಯಲ್ಲಿ ಹೀಗೆ ಹೇಳುತ್ತಿದ್ದರು: ಜಗನ್ಮಾತೆಗೆ ಈ ಆಟ ನಡೆಯುತ್ತಿರಬೇಕೆಂಬ ಬಯಕೆ. ಜೀವಿಯು ಈ ಆಟದಿಂದ ಮುಕ್ತಿ ಪಡೆಯುವುದನ್ನು ಅವಳು ಇಚ್ಛಿಸುವುದಿಲ್ಲ.”

ಪ್ರಕೃತಿಯನ್ನು ಗೆಲ್ಲುವುದೇ ವಿಕಾಸ

ಎಲ್ಲ ವಿಕಾಸವೂ ಪ್ರಕೃತಿಯ ವಿರುದ್ಧ ಹೋರಾಟವೆಂಬುದು ಸ್ವಾಮೀಜಿಯ ಅಭಿಪ್ರಾಯ. ಆದಿ ಮಾನವನು ಇತರ ಪ್ರಾಣಿಗಳಂತೆ ಪ್ರಕೃತಿಯೊಂದಿಗೆ ಪೂರ್ಣ ಹೊಂದಾಣಿಕೆಯಿಂದಿದ್ದ. ಪ್ರಕೃತಿ ನೀಡಿದ್ದನ್ನು ತಿನ್ನುತ್ತಿದ್ದ. ಬಿಸಿಲು, ಮಳೆ, ಚಳಿ ಮುಂತಾದುವುಗಳಿಂದ ಅವನಿಗೆ ರಕ್ಷಣೆ ಇರಲಿಲ್ಲ. ಬಹುಶಃ ಲಕ್ಷಾಂತರ ವರ್ಷಗಳು ಅವನು ಹೀಗೆಯೇ ವಾಸಿಸುತ್ತಿದ್ದ. ಕ್ರಮೇಣ ಪರಿಸ್ಥಿತಿ ಬದಲಾಯಿತು. ಈ ರೀತಿ ಪ್ರಕೃತಿಗೆ ದಾಸನಾಗಿ ಬಾಳುವುದು ಅವನಿಗೆ ಸರಿಕಾಣಲಿಲ್ಲ. ಅವನು ಬಿಸಿಲು ಮಳೆಗಳಿಂದ ರಕ್ಷಣೆ ಪಡೆಯತೊಡಗಿದ – ಅಂದರೆ ಮನೆ ಕಟ್ಟತೊಡಗಿದ, ಬಟ್ಟೆ ಉಡತೊಡಗಿದ. ಅವನು ತನ್ನ ಆಹಾರವನ್ನು ತಾನೇ ಬೆಳಸಿಕೊಳ್ಳುತ್ತೇನೆ. ಎಂದು ಸಂಕಲ್ಪಿಸಿ ಬೇಸಾಯವನ್ನು ಪ್ರಾರಂಭಿಸಿದ.

ಪ್ರಕೃತಿಯೊಂದಿಗೆ ತಾನು ಹೊಂದಿಕೊಂಡಿರುವ ಬದಲು ಪ್ರಕೃತಿಯನ್ನೇ ತನ್ನ ಅನುಕೂಲಕ್ಕಾಗಿ ಬಳಸತೊಡಗಿದ ಮತ್ತು ಅದನ್ನು ವಿಕೃತಗೊಳಿಸತೊಡಗಿದ. ಹೀಗೆ ಸಂಸ್ಕೃತಿ ಮತ್ತು ನಾಗರಿಕತೆ ಬೆಳೆಯಿತು. ಆದ್ದರಿಂದ ಪ್ರಕೃತಿಯ ಬಂಧನದಿಂದ ಮುಕ್ತವಾಗುವ ಪ್ರಕ್ರಿಯೆಯೇ ವಿಕಾಸ. ಸ್ವಾಮೀಜಿ ಹೇಳುತ್ತಾರೆ: “ಜೀವಾತ್ಮವು ತನ್ನ ಬಂಧನವನ್ನು ಅರಿತು ಜಾಗೃತವಾಗಿ, ಈ ಬಂಧನವನ್ನು ಮೆಟ್ಟಿ ನಿಲ್ಲುವ ಪ್ರಯತ್ನವನ್ನೇ ಜೀವನವೆಂದು ಕರೆಯುವುದು. ಈ ಹೋರಾಟದಲ್ಲಿ ಪಡೆಯುವ ಯಶಸ್ಸಿಗೆ ವಿಕಾಸವೆಂದು ಹೆಸರು” (ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ, ಸಂ.೭, ಪು. ೩೯೨- ೩೯೩).

ಪ್ರಕೃತಿಯನ್ನು ನಾಶಮಾಡುವುದಲ್ಲ

ನಾವು ಎಲ್ಲಿಯವರೆಗೆ ಪರಿಸ್ಥಿತಿಯೊಂದಿಗೆ ಹೊಂದಿಕೊಂಡು ಇರುತ್ತೇವೆಯೋ ಅಲ್ಲಿಯವರೆಗೆ ನಾವು ವಿಕಾಸ ಹೊಂದುವುದಿಲ್ಲ.  ಆದ್ದರಿಂದ ಹೊಂದಾಣಿಕೆ (adaptation) ಮತ್ತು ವಿಕಾಸ (evolution) ಪರಸ್ಪರ ವಿರುದ್ಧವಾದುವುಗಳು. ಅಂದಮಾತ್ರಕ್ಕೆ ನಾವು ಪ್ರಕೃತಿಯನ್ನು ನಾಶ ಮಾಡಬೇಕೆಂದಲ್ಲ, ಅಥವಾ ಸಮಾಜದಲ್ಲಿ ಯಾರೊಡನೆಯೂ ಹೊಂದಿಕೊಳ್ಳದೆ ಎಲ್ಲರೊಡನೆಯೂ ಜಗಳವಾಡುತ್ತ ಬಾಳಬೇಕೆಂದಲ್ಲ. ಪ್ರಕೃತಿಯನ್ನು ನಾಶಮಾಡುವ, ಅದನ್ನು ದೋಚುವ ಮತ್ತು ಎಲ್ಲರೊಡನೆಯೂ ಜಗಳಕಾಯುವ ಅಥವಾ ಇತರರನ್ನು ಹಿಂಸಿಸುವ ಪ್ರವೃತ್ತಿಯೂ ಪಾಕೃತಿಕವಾದುದು. ಆದ್ದರಿಂದ ಅಂತಹ ಪ್ರವೃತ್ತಿಯಿಂದ ಮುಕ್ತವಾಗುವುದೇ ವಿಕಾಸ. ಎಲ್ಲರನ್ನೂ ಪ್ರೀತಿಸುವ ಮತ್ತು ಎಲ್ಲರೊಡನೆ ಒಂದಾಗಿ ಬಾಳುವ ಮನೋಭಾವ ನಮ್ಮ ಆಂತರಿಕ ಆಧ್ಯಾತ್ಮಿಕ ಮೂಲದಿಂದ ಉಂಟಾಗುವಂತಹುದು. ನಾವು ಪ್ರಕೃತಿಯಿಂದ ಹೆಚ್ಚು ಹೆಚ್ಚು ದೂರವಾದಷ್ಟೂ, ದಿವ್ಯತೆಯನ್ನು ಹೊರಗೆ ವ್ಯಕ್ತಪಡಿಸಿದಷ್ಟೂ ನಮ್ಮ ಅಂತರ- ಮಾನವ ಸಂಬಂಧ ಉತ್ತಮವಾಗುತ್ತದೆ. ಆದ್ದರಿಂದ ವಿಕಾಸವೆಂದರೆ ಪ್ರಕೃತಿ ಬಂಧನದಿಂದ ದೂರವಾಗುವುದು, ಪ್ರಕೃತಿಯ ವಿರುದ್ಧ ಯುದ್ಧ ಮಾಡುವುದಲ್ಲ. ಈ ಯುದ್ಧದಲ್ಲಿ ಕೊನೆಗೆ ಸೋಲುವವರು ನಾವೇ. ಪ್ರಕೃತಿಯನ್ನು ನಾವು ಆರಾಧಿಸಬೇಕು. ಆಗ ಪ್ರಕೃತಿಯೇ ತನ್ನ ಬಂಧನದಿಂದ ಮುಕ್ತವಾಗಲು ನಮಗೆ ಸಹಾಯಕವಾಗುತ್ತದೆ. ಜಗನ್ಮಾತೆಯನ್ನು ಒಲಿಸಿ ಆಕೆಯ ಬಂಧನದಿಂದ ನಾವು ಮುಕ್ತರಾಗಬೇಕೆಂದು ಶ್ರೀರಾಮಕೃಷ್ಣರು ಹೇಳುತ್ತಿದ್ದರು.

ಹೋರಾಟ ಜೀವನಕ್ಕೆ ಆವಶ್ಯಕ

ಆದರೆ ಬಂಧನದಿಂದ ಮುಕ್ತರಾಗುವ ಹೋರಾಟವನ್ನು ನಾವು ನಡೆಸಬೇಕು. ಇಲ್ಲದಿದ್ದರೆ ಜಗನ್ಮಾತೆ ನಮ್ಮನ್ನು ಈ ಜಗತ್ತಿನ ಆಟದಲ್ಲಿಯೇ ನಾವು ಮುಂದುವರಿಯುವಂತೆ ಮಾಡುತ್ತಾಳೆ. ಆದ್ದರಿಂದ ಹೋರಟ ಆವಶ್ಯಕ. ಹೋರಾಟದ ಮೂಲಕವೇ ನಾವು ವಿಕಾಸವನ್ನು ಹೊಂದುವುದು. ವಿರುದ್ಧ ಪರಿಸ್ಥಿತಿಗಳು ಇರುವುದು ನಾವು ಅವುಗಳ ವಿರುದ್ಧ ಹೋರಾಡಿ ವಿಕಾಸವನ್ನು ಹೊಂದಲಿ ಎಂದು. ಈ ಹೋರಾಟವಿಲ್ಲದಿದ್ದರೆ ನಾವು ಬೆಳೆಯುವುದೇ ಇಲ್ಲ. ಒಬ್ಬ ಉಪಾಧ್ಯಾಯರು – ಶಾಲೆಯಲ್ಲಿ ಕಂಬ್ಲಿಹುಳವು ಚಿಟ್ಟೆಯಾಗಿ ವಿಕಾಸ ಹೊಂದುವ ವಿಷಯವನ್ನು ಕುರಿತು ಪಾಠ ಮಾಡುತ್ತಿದ್ದರು. ಒಂದು ಕೋಶ (coccoon)ವನ್ನು ಮುಂದಿರಿಸಿ ಅದರೊಳಗಿಂದ ಚಿಟ್ಟೆಯು ಹೊರಬರುವುದನ್ನು ತೋರಿಸುತ್ತಿದ್ದರು. “ಅದು ಹೇಗೆ ಹೊರ ಬರುತ್ತದೆ ಎಂಬುದನ್ನು ನೋಡಿ” ಎಂದು ಹೇಳಿ ಉಪಾಧ್ಯಾಯರು ಹೊರಗೆ ಹೋದರು. ಚಿಟ್ಟೆಯು ಬಹಳ ಕಷ್ಟಪಟ್ಟು ಹೊರಗೆ ಬರಲು ಹೋರಾಡುತ್ತಿತ್ತು. ಒಬ್ಬ ವಿದ್ಯಾರ್ಥಿಗೆ ಅದರ ಮೇಲೆ ಕನಿಕರ ಉಂಟಾಯಿತು. ಅವನು ಆ ಕೋಶದ ದಾರಗಳನ್ನು ಕತ್ತರಿಸಿ ಚಿಟ್ಟೆಗೆ ಹೊರಬರಲು ಸಹಾಯಮಾಡಿದನು. ಚಿಟ್ಟೆ ಹೊರಬಂದಿತು, ಆದರೆ ಅದಕ್ಕೆ ಹಾರಲಾಗದೆ ವಿಲಿ ವಿಲಿ ಒದ್ದಾಡುತ್ತಿತ್ತು. ಸ್ವಲ್ಪಹೊತ್ತಿನಲ್ಲಿಯೇ ಅದು ಸತ್ತು ಹೋಯಿತು. ಅಷ್ಟರಲ್ಲಿ ಉಪಾಧ್ಯಾಯರು ಬಂದು ಇದನ್ನು ನೋಡಿ ನಡೆದ ಸಂಗತಿಯನ್ನು ತಿಳಿದುಕೊಂಡರು. ಆ ವಿದ್ಯಾರ್ಥಿಗೆ ಅನಂತರ ಹೇಳಿದರು : “ನೀನು ಅದಕ್ಕೆ ಸಹಾಯ ಮಾಡಬಾರದಿತ್ತು. ಅದರ ಬೆಳವಣಿಗೆಗೆ ಅದು ನಡೆಸುತ್ತಿದ ಹೋರಾಟ ಆವಶ್ಯಕವಾಗಿತ್ತು, ಆ ಹೋರಾಟದ ಅವಕಾಶವನ್ನು ಕಳೆದುಕೊಂಡದ್ದರಿಂದ ಅದು ಸತ್ತುಹೋಯಿತು.” ಹಾಗೆಯೇ ಹೋರಾಟ ನಮಗೆಲ್ಲರಿಗೂ ಆವಶ್ಯಕ.

ಯಾವಾಗ ಮಾನವನ ಹೋರಾಟ ತನ್ನೊಳಗೆ ಪ್ರಾಥಂಭವಾಗುವುದೊ ಅಗ ಅವನ ಜೀವನ ಸಾರ್ಥಕತೆಯನ್ನು ಪಡೆಯುತ್ತದೆ.

–ರಾಬರ್ಟ್ ಬ್ರೌನಿಂಗ್‌ (Robert Browning).

ಸಾಂತದಿಂದ ಅನಂತಕ್ಕೆ

ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಹೋರಾಡುತ್ತಿರುವರು. ಕೆಲವು ಹೋರಾಟಗಳು ಬಂಧನವನ್ನು ಹೆಚ್ಚಿಸುತ್ತವೆ, ಮತ್ತೆ ಕೆಲವು ಬಂಧನದಿಂದ ಬಿಡಿಸುತ್ತವೆ. ಆದರೂ ಸ್ವಾಮೀಜಿಯವರ ದೃಷ್ಟಿಯಲ್ಲಿ ಎಲ್ಲರೂ ಬಂಧಮುಕ್ತಿಗಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವರು. ಅವರು ಹೇಳುತ್ತಾರೆ. “ಯಾರಿಗೂ ತೃಪ್ತಿಯೆಂಬುದಿಲ್ಲ. ಅದೇ ದುಃಖಕ್ಕೆ ಕಾರಣ, ಆದರೆ ಅದೊಂದು ದೊಡ್ಡ ಭಾಗ್ಯವೂ ಹೌದು. ಅದೊಂದು ಸ್ಪಷ್ಟ ಚಿಹ್ನೆ. ಈ ಪ್ರಪಂಚದಲ್ಲಿ ತೃಪ್ತಿಯಿಂದಿರಲು ಹೇಗೆ ಸಾಧ್ಯ?…. ನಾಳೆ ಈ ಪ್ರಪಂಚವೇ ಸ್ವರ್ಗವಾದರೂ, ನಾವು ಹೇಳುತ್ತೇವೆ ‘ಇದೂ ನನಗೆ ಬೇಡ, ನನಗೆ ಇನ್ನೇನಾದರೂ ಒಂದನ್ನು ಕೊಡು’ ಎಂದು (ಕೃತಿಶ್ರೇಣಿ, ಸಂ. ೬, ಪು. ೨೦೯). ನಮ್ಮ ನಿಜವಾದ ಸ್ವರೂಪ ಅನಂತವಾದುದು. ನಾವು ಸಾಂತ ಜಗತ್ತಿನಲ್ಲಿ ತೃಪ್ತಿಯಿಂದಿರಲು ಬಯಸುತ್ತೇವೆ. ಆದರೆ ಅದು ಸಾಧ್ಯವಿಲ್ಲ. ಅನಂತವೇ ನಮಗೆ ನಿಜವಾಗಿ ತೃಪ್ತಿಯನ್ನು ನೀಡುವಂತಹುದು, ಸಾಂತ ಪರಿಧಿಗಳನ್ನೆಲ್ಲ ಮೀರಿಹೋಗಿ ಅನಂತದಲ್ಲಿ ನೆಲೆನಿಲ್ಲುವ ಹೋರಾಟವೇ ಜೀವನ. ಅವರ ಮಾತಿನಲ್ಲೆ ಹೇಳಬೇಕೆಂದರೆ: ”ಯಾರ ಜೀವನವು ಇಡೀ ವಿಶ್ವದೊಂದಿಗೆ ಒಂದಾಗಿರುವುದೊ ಅವನೇ ನಿಜವಾಗಿ ಜೀವಿಸುತ್ತಾನೆ. ಸೀಮಿತ ವಸ್ತುಗಳಿಗೆ ನಮ್ಮ ಜೀವನವು ಪರಿಮಿತವಾದಷ್ಟೂ ನಾವು ಮರಣದೆಡೆಗೆ ಮುನ್ನುಗ್ಗುತ್ತೇವೆ. ಎಂದು ವಿಶ್ವದಲ್ಲಿ, ಇತರರಲ್ಲಿ ನಮ್ಮ ಬಾಳು ವಿಹರಿಸುವುದೊ ಆಗ ಮಾತ್ರ ನಾವು ಬಾಳುತ್ತಿರುವೆವು ಈ ಸಂಕುಚಿತ ಜೀವನದಲ್ಲಿರುವುದೇ ಮರಣ, ಬರಿಯ ಮರಣ” (ಕೃತಿಶ್ರೇಣಿ, ಸಂ. ೨, ಪು. ೨೩).