ಧರ್ಮದ ಬಗೆಗಿನ ಪ್ರಮುಖ ಸಮಸ್ಯೆಗಳಲ್ಲಿ ಒಂದೆಂದರೆ, ಧರ್ಮಗಳ ಅನೇಕತೆ ಅಥವಾ ವೈವಿಧ್ಯತೆ. ಅನೇಕ ಧರ್ಮಗಳಿರುವುದಷ್ಟೆ ಅಲ್ಲ; ಅವುಗಳು ಒಂದರಿಂದ ಮತ್ತೊಂದು ಅನೇಕ ವಿಧಗಳಲ್ಲಿ ಭಿನ್ನವಾಗಿವೆ. ಅಷ್ಟೇ ಅಲ್ಲ, ಪ್ರತಿಯೊಂದೂ ಜೀವನಕ್ಕೆ ಸರಿಯಾದ ಮಾರ್ಗವನ್ನು ತೋರಿಸುವುದಾಗಿ ಹೇಳಿಕೊಳ್ಳುತ್ತದೆ; ಪ್ರತಿಯೊಂದೂ ತಾನೇ ಅಸದೃಶವಾದ ಶಾಂತಿ ಮತ್ತು ತೃಪ್ತಿಯನ್ನು ನೀಡುವುದಾಗಿ ಕೂಡ ಹೇಳಿಕೊಳ್ಳುತ್ತದೆ.

ಧರ್ಮಗಳ ಅನೇಕತೆ ಎಂಬ ಪ್ರಕ್ರಿಯೆ ಅನೇಕ ತಾತ್ತ್ವಿಕ ಪ್ರಶ್ನೆಗಳನ್ನು ಎತ್ತುತ್ತದೆ; ಈ ಪ್ರಶ್ನೆಗಳು “ಧರ್ಮಗಳ ತೌಲನಿಕ ಅಧ್ಯಯನ” ಎಂಬ ಮತ್ತೊಂದು ಕ್ಷೇತ್ರಕ್ಕೆ ನಮ್ಮನ್ನು ಕೊಂಡೊಯ್ಯುತ್ತವೆ. ಆದ್ದರಿಂದ ಆ ಪ್ರಶ್ನೆಗಳ ಬಗ್ಗೆ ಇಲ್ಲಿ ಚರ್ಚಿಸಿಲ್ಲ.

ಏನೇ ಆಗಲಿ, ಧರ್ಮಗಳ ವೈವಿಧ್ಯತೆಯೆಂಬುದು ಬರೀ ಒಂದು ತಾತ್ತ್ವಿಕ ಸಮಸ್ಯೆಯಷ್ಟೇ ಅಲ್ಲ, ಅದು ವಿಪುಲ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಪರಿಣಾಮಗಳನ್ನು ಹೊಂದಿದೆ. ಧರ್ಮಗಳಲ್ಲಿನ ಭೇದವು, ಮಾನವ ಚರಿತ್ರೆಯ ಉದ್ದಕ್ಕೂ ಯುದ್ಧಗಳು ಮತ್ತು ಕೋಮುಗಲಭೆಗಳು ಉಂಟಾಗುವಲ್ಲಿ ಒಂದು ಮುಖ್ಯ ಕಾರಣವಾಗಿದೆ. ಯಥಾಸ್ಥಿತಿಯ ಶಾಂತಿಯುತ ಸಮಾಜದಲ್ಲಿಯೇ, ಇತರ ಧರ್ಮಗಳ ಅನುಯಾಯಿಗಳನ್ನು ಕುರಿತು ಬಹಳಷ್ಟು ಜನರು ದುರಭಿಪ್ರಾಯ ಮತ್ತು ದ್ವೇಷವನ್ನು ಹೊಂದಿರುತ್ತಾರೆ. ಒಂದು ನೂರು ವರ್ಷಗಳಿಗೂ ಹಿಂದೆಯೇ ಸ್ವಾಮಿ ವಿವೇಕಾನಂದರು ಹೀಗೆ ಹೇಳಿದ್ದರು: “ಆದಕಾರಣವೆ, ಧರ್ಮದಷ್ಟು ಒಳಿತನ್ನು ಮತ್ತಾವುದೂ ನೀಡಿಲ್ಲ; ಹಾಗೆಯೇ ಧರ್ಮದಷ್ಟು ಭಯಾನಕವಾದುದೂ ಮತ್ತೊಂದಿಲ್ಲ. ಅದರಂತೆಯೆ ಪ್ರೇಮ ಮತ್ತು ಶಾಂತಿಗಾಗಿ ಧರ್ಮ ದುಡಿದಿರುವಷ್ಟು ಮತ್ತಾವುದೂ ದುಡಿದಿಲ್ಲ. ಹಾಗೆಯೇ ಧರ್ಮದ ಹೆಸರಿನಲ್ಲಿ ಬಿತ್ತಿದ ಘೋರ ವೈಮನಸ್ಯವನ್ನು ಮೀರಿದುದೂ ಯಾವುದೂ ಇಲ್ಲ. ಮಾನವ-ಸಹೋದರತ್ವದ ಭಾವನೆ ನೆಲೆಸುವುದಕ್ಕೆ ಧರ್ಮ ಮಾಡಿದಷ್ಟು ಸಹಾಯವನ್ನು ಮತ್ತಾವುದೂ ಮಾಡಿಲ್ಲ; ಧರ್ಮ ಬಿತ್ತಿದಷ್ಟು ಅಸಹನೀಯ ದ್ವೇಷವನ್ನೂ ಮತ್ತಾವುದೂ ಬಿತ್ತಿಲ್ಲ. ಧರ್ಮಾರ್ಥದ ಸಂಸ್ಥೆಗಳು, ಔಷಧಾಲಯಗಳು, ಪ್ರಾಣಿಗಳಿಗೂ ಕೂಡ ಚಿಕಿತ್ಸಾಲಯಗಳು ಇವನ್ನು ಧರ್ಮ ಮಾಡಿದಷ್ಟು ಮತ್ತೊಂದು ಮಾಡಿಲ್ಲ, ಧರ್ಮದಷ್ಟು ಮತ್ತಾವುದೂ ಪ್ರಪಂಚವನ್ನು ರಕ್ತದಲ್ಲಿ ತೋಯಿಸಿಯೂ ಇಲ್ಲ” (ಕೃತಿಶ್ರೇಣಿ, ೨: ೨೦೩).

ಏನೇ ಇರಲಿ, ವೈವಿಧ್ಯತೆಯೊಂದೇ ಧಾರ್ಮಿಕ ಸಂಘರ್ಷಣೆಗಳಿಗೆ ಸಾಕಷ್ಟು ಕಾರಣವಾಗಲಾರದೆಂಬುದು ಸುಸ್ಪಷ್ಟ. ಏಕೆಂದರೆ ಬಹುತೇಕ ಎಲ್ಲ ಸಮಾಜಗಳಲ್ಲಿಯೂ ವಿವಿಧ ಸ್ವಭಾವಗಳ ಜನರು ಇತರರೊಂದಿಗೆ ಶಾಂತಿಯುತ ಸಹಬಾಳ್ವೆಯನ್ನು ನಡೆಸುತ್ತಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಎರಡು ಅಂಶಗಳನ್ನು ಗಮನಿಸಬೇಕು. ಮೊದಲನೆಯದಾಗಿ ಧಾರ್ಮಿಕ ಸಂಘರ್ಷಣೆಗಳು ಆಂತರಿಕ ಹಾಗೂ ಬಾಹ್ಯ ಕಾರಣಗಳನ್ನು ಹೊಂದಿವೆ. ಮತ್ತೊಂದು ಧರ್ಮಕ್ಕೆ ವಿರುದ್ಧವಾಗಿರುವ, ಒಂದು ಧರ್ಮದ ಗೊತ್ತಾದ ಸಿದ್ಧಾಂತಗಳು ಅಥವಾ ಪದ್ಧತಿಗಳ ಆಚರಣೆಯೇ ಆಂತರಿಕ ಕಾರಣ, ಪಟ್ಟಭದ್ರ ಹಿತಾಸಕ್ತಿಗಳು, ಸಂಸ್ಥೆಗಳು, ರಾಜಕೀಯ ಪಕ್ಷಗಳು ಮುಂತಾದವು ಧರ್ಮವನ್ನು ಬಳಸುವುದು ಬಾಹ್ಯಕಾರಣ. ರಾಜ್ಯದ ಪೋಷಣೆಯಲ್ಲಿರುವ ಸಂಸ್ಥೆಗಳು ಧರ್ಮವನ್ನು ಬಳಸುವುದರಿಂದ ಉಂಟಾಗುವ ಅಪಾಯದ ಬಗ್ಗೆ ಸ್ವಾಮಿ ವಿವೇಕಾನಂದರು ಹೀಗೆ ಹೇಳಿದ್ದಾರೆ: “ನನ್ನ ಸೀಮಿತ ಅನುಭವದಲ್ಲಿ ನಾನು ಈ ಜ್ಞಾನವನ್ನು ಶೇಖರಿಸಿರುವೆನು, ಯಾವ ಭೀಕರ ಕೃತ್ಯಕ್ಕೆ ನಾವು ಧರ್ಮವನ್ನು ದೂರುತ್ತೇವೆಯೋ ಅದಕ್ಕೆ ಧರ್ಮ ಕಾರಣವೇ ಅಲ್ಲ. ಯಾವ ಧರ್ಮವೂ ಜನರನ್ನು ಹಿಂಸಿಸಲಿಲ್ಲ, ಯಾವ ಧರ್ಮವೂ ಮಂತ್ರವಾದಿಗಳನ್ನು ಸುಡಲಿಲ್ಲ. ಇಂತಹ ಭೀಕರ ಕೃತ್ಯಗಳನ್ನು ಮಾಡುವಂತೆ ಜನರನ್ನು ಯಾರು ಉದ್ರೇಕಿಸಿದ್ದು? ರಾಜಕೀಯ, ಎಂದೂ ಧರ್ಮವಲ್ಲ. ಇಂತಹ ರಾಜಕೀಯವನ್ನು ಧರ್ಮವೆಂದು ಕರೆದರೆ ಇದಕ್ಕೆ ಯಾರು ಹೊಣೆ?” (ಕೃತಿಶ್ರೇಣಿ, ೭.೨೮)

ಎರಡನೆಯದಾಗಿ, ಧಾರ್ಮಿಕ ಸಂಘರ್ಷಗಳ ಚರಿತ್ರೆಯನ್ನು ನಾವು ಅಧ್ಯಯನ ಮಾಡಿದಾಗ, ಕಳೆದ ಕೆಲವು ಶತಮಾನಗಳಲ್ಲಿ ಈ ಸಂಘರ್ಷಗಳು ತಮ್ಮ ಸ್ವರೂಪದಲ್ಲಿ ಬಹಳಷ್ಟು ಬದಲಾವಣೆ ಹೊಂದಿರುವುದನ್ನು ನಾವು ಕಾಣಬಹುದು. ಮಾನವ ಜೀವನದಲ್ಲಿ ಧರ್ಮಗಳು ವಹಿಸಿರುವ ಪಾತ್ರಗಳಲ್ಲಿನ ವ್ಯತ್ಯಾಸದಿಂದ ಈ ಪರಿವರ್ತನೆಗಳು ಉಂಟಾಗಿವೆ. ಹದಿನೆಂಟನೆಯ ಶತಮಾನಕ್ಕೆ ಮೊದಲು, ಧರ್ಮಗಳು ಬಹುತೇಕ ಮೋಕ್ಷದ ಕಡೆಗೇ ಸಂಪೂರ್ಣ ಕಾಳಜಿ ಹೊಂದಿದ್ದವು. ಮಧ್ಯಕಾಲೀನ ಯುಗದಲ್ಲಿ ಉಂಟಾದ ಬಹಳಷ್ಟು ಧಾರ್ಮಿಕ ಯುದ್ಧಗಳು ಹಾಗೂ ಕಿರುಕುಳಗಳು. ಯಾರು ಸ್ವರ್ಗಕ್ಕೆ ಹೋಗುತ್ತಾರೆ, ಯಾರು ನರಕಕ್ಕೆ ಹೋಗುತ್ತಾರೆ ಎಂಬುದನ್ನು ಕುರಿತದ್ದಾಗಿತ್ತು. ಫ್ರೆಂಚ್ ಕ್ರಾಂತಿ, ಕೈಗಾರಿಕಾ ಕ್ರಾಂತಿ ಮುಂತಾದ ಐತಿಹಾಸಿಕ ಘಟನೆಗಳಿಂದ, ಧರ್ಮಕ್ಕೆ ಲೌಕಿಕ ಧೋರಣೆಗಳ ಸಂಪರ್ಕವುಂಟಾಯಿತು. ಇದರಿಂದ ಅದಕ್ಕೆ ಮಾನವೀಯ ವಿಷಯಗಳ ಜೊತೆಗೆ ಸಮೀಕರಣವುಂಟಾಯಿತು. ತತ್ಪರಿಣಾಮವಾಗಿ ಆಧುನಿಕ ಕಾಲದಲ್ಲಿ, ಧಾರ್ಮಿಕ ಸಂಘರ್ಷಗಳು ಸೈದ್ಧಾಂತಿಕ ಭೇದಗಳನ್ನು ಕುರಿತವುಗಳಾಗಿಲ್ಲ; ಆದರೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಿಷಯಗಳಿಗೆ ಸಂಬಂಧಿಸಿದವುಗಳಾಗಿವೆ ಎನ್ನುವುದನ್ನು ಗಮನಿಸಬೇಕು.

ಬಹಳ ಪ್ರಾಚೀನ ಕಾಲದಿಂದಲೂ ನಮಗೆ ಸ್ವಾತಂತ್ರ್ಯ ದೊರೆಯುವವರೆಗೂ, ಭಾರತವು ಧಾರ್ಮಿಕ ಸಮನ್ವಯದ ಭೂಮಿಯಾಗಿತ್ತು. ಧಾರ್ಮಿಕ ಸ್ವಾತಂತ್ರ್ಯ ಸಹನೆ ಮತ್ತು ಸಮನ್ವಯಗಳು ಭಾರತೀಯ ಗುಣವೈಶಿಷ್ಟ್ಯದ (ethos) ಲಕ್ಷಣಗಳಾಗಿದ್ದವು. ಆದರೆ ಸ್ವಾತಂತ್ರ್ಯ ಬಂದ ಮೇಲೆ, ವಿಶೇಷತಃ ಇತ್ತೀಚಿನ ದಿನಗಳಲ್ಲಿ, ಕೋಮು ಗಲಭೆ, ಪೂಜಾಸ್ಥಳಗಳನ್ನು ಅಪವಿತ್ರಗೊಳಿಸುವುದು, ಧಾರ್ಮಿಕ ಮುಂದಾಳುಗಳ ಕೊಲೆ ಮುಂತಾದವು ಬಹಳ ಸಾಮಾನ್ಯವಾಗಿವೆ. ಮತ್ತೊಂದು ವಿವಾದಾಸ್ಪದ ಬದಲಾವಣೆ ಎಂದರೆ, ಮೂಲ ಭೂತ ವಾದ (fundamentalism) ತಲೆ ಎತ್ತಿರುವುದು. ಏನೇ ಆದರೂ, ಈ ಘಟನೆಗಳು ಭಾರತೀಯ ಗುಣವೈಶಿಷ್ಟ್ಯದ ಮಾರ್ಗವನ್ನು ಬಿಟ್ಟು ನಡೆದಿರುವಂತಹವು ಎಂದೇ ನಾವು ತಿಳಿಯಬೇಕು. ಈ ಮಾರ್ಗಚ್ಯುತಿಯ ಘಟನೆಗಳು, ವಸ್ತುತಃ ಭಾರತೀಯ ಗುಣವೈಶಿಷ್ಟ್ಯದ ವಿರುದ್ದ ಕೆಲಸ ಮಾಡುತ್ತಿರುವ ಶಕ್ತಿಗಳ ವಿರುದ್ಧ, ಭಾರತೀಯ ಮನಸ್ಸು ತೋರ್ಪಡಿಸಿದ ಪ್ರತಿಕ್ರಿಯೆಗಳಾಗಿವೆ.

ಧಾರ್ಮಿಕ ಸಂಘರ್ಷಗಳು ಹಾಗೂ ಕೋಮು ಸಂಘರ್ಷಗಳು ಇಂದು ಭಾರತದಲ್ಲಿ ಗಂಭೀರ ಪ್ರಮಾಣಗಳನ್ನು ತಳೆದಿವೆ. ಹೀಗಾಗಿ ಧಾರ್ಮಿಕ ಸಮನ್ವಯ ಎನ್ನುವುದು ಎಲ್ಲ ಜನರ ಬಹುಮುಖ್ಯ ಮತ್ತು ಆದ್ಯತೆಯ ಕಾಳಜಿಯಾಗಿದೆ.

ವಿವಿಧ ಧರ್ಮಗಳ ವೈವಿಧ್ಯಗಳ ಮಾನ್ಯತೆ

ಮೊಟ್ಟಮೊದಲು, ಧಾರ್ಮಿಕ ಸಮನ್ವಯವನ್ನು ‘ಉದಾಸೀನತಾವಾದ’ (Indifferentism) ದಿಂದ ಬೇರ್ಪಡಿಸಿ ನೋಡಬೇಕು. ‘ಉದಾಸೀನತಾ ವಾದ’ ವೆಂದರೆ, ವಿವಿಧ ಧರ್ಮಗಳ ನಡುವೆ ಯಾವುದೇ ಭೇದಗಳಿಲ್ಲ ಮತ್ತು ಬಹುತೇಕ ಅವೆಲ್ಲವೂ ಸಮಾನವಾದವು ಎಂದು ತಿಳಿಯುವುದು. ಇದೊಂದು ತಾತ್ತ್ವಿಕ ಕಲ್ಪನೆ. ಅದೇ ರೀತಿ, ಜನಸಾಮಾನ್ಯರಲ್ಲಿ, ಅದರಲ್ಲೂ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ‘ಎಲ್ಲ ಧರ್ಮಗಳೂ ಒಂದೇ’ ಎಂಬ ಜನಪ್ರಿಯ ನಂಬಿಕೆ ಪ್ರಚಲಿತವಾಗಿದೆ. ಇತರ ಧರ್ಮಗಳ ಬಗೆಗಿನ ಅಜ್ಞಾನವೇ ಈ ಸರಳ ಭಾವನೆಗೆ ಆಧಾರ. ಈ ಬಗೆಯ ಅಜ್ಞಾನವನ್ನು ಧರ್ಮಸಾಮರಸ್ಯದ ಭದ್ರ ಬುನಾದಿಯನ್ನಾಗಿ ಪರಿಗಣಿಸಲಾಗದು.

ಧರ್ಮಗಳ ನಡುವಣ ವ್ಯತ್ಯಾಸಗಳನ್ನು ಮಾನ್ಯಮಾಡುವುದು (recognition) ಧರ್ಮಸಾಮರಸ್ಯದ ಸರಿಯಾದ ಪರಿಜ್ಞಾನಕ್ಕೆ ಮೊದಲನೆಯ ಹೆಜ್ಜೆ. ಪ್ರತಿಯೊಂದು ಧರ್ಮವೂ, ಶತಶತಮಾನಗಳ ಬೆಳವಣಿಗೆಯ ಫಲವಾಗಿ, ತನ್ನದೇ ಒಂದು ನಿರ್ದಿಷ್ಟ ಸ್ವಂತಿಕೆಯನ್ನು ಪಡೆದುಕೊಂಡಿದೆ. ಅದರಲ್ಲಿ ಅದಕ್ಕೆ ಮೀಸಲಾದ ಅನೇಕ ವಿಶಿಷ್ಟ ಅಂಶಗಳಿವೆ. ಅವೆಂದರೆ, ಒಂದು ಸಂಕೀರ್ಣ ತಾತ್ತ್ವಿಕ ಚೌಕಟ್ಟು, ವಿಪುಲ ಸಾಹಿತ್ಯ ರಾಶಿ, ಹಲವಾರು ಸಾಮಾಜಿಕ ಕಟ್ಟು ಪಾಡುಗಳು ಮತ್ತು ಸಮೃದ್ಧ ಆನುಭಾವಿಕ(mystical) ಪರಂಪರೆಗಳು. ಇದೇ ಸಮಯದಲ್ಲಿ, ಇಂಥ ವ್ಯತ್ಯಾಸಗಳು ಧರ್ಮಗಳ ನಡುವೆ ಮೀರಲಾಗದ ಪ್ರತಿಬಂಧಗಳನ್ನು ನಿರ್ಮಿಸಿವೆ; ಮತ್ತು, ಧರ್ಮ ಸಾಮರಸ್ಯದ ಬಗೆಗಿನ ಯಾವುದೇ ಚರ್ಚೆಯಲ್ಲಿ ಈ ಪ್ರತಿಬಂಧಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಸಮನ್ವಯ ಎಂಬುದು ಸಹಿಷ್ಣುತೆಗಿಂತ ಭಿನ್ನ

ಧರ್ಮಸಮನ್ವಯವನ್ನು ಧಾರ್ಮಿಕ ಸಹಿಷ್ಣುತೆಯಿಂದ ಬೇರ್ಪಡಿಸಿ ನೋಡಬೇಕು. ಸಹಿಷ್ಣುತೆ ಎಂದರೆ ‘ಒಂದು ಮಟ್ಟದ ತಾಳಿಕೊಳ್ಳುವಿಕೆ’ ಮತ್ತು ‘ಕೆಡುಕಾದುದನ್ನು ಮಾಡುವುದರಿಂದ ಹಿಂಜರಿಕೆ’ ಎಂದು ಅರ್ಥವಾಗುತ್ತದೆ. ಈ ವಿಷಯದಲ್ಲಿ ಸ್ವಾಮಿ ವಿವೇಕಾನಂದರ ಮಾತನ್ನು ಉದ್ಧರಿಸುವುದು ಯುಕ್ತವಾಗಿದೆ: ” ಕೇವಲ ಸಹಿಷ್ಣುತೆ ಮಾತ್ರವಲ್ಲ, ಅನೇಕ ವೇಳೆ ಸಹಿಷ್ಣುತೆ ಎಂಬುದು ಈಶ್ವರನಿಂದೆ. ನಾನು ಅದನ್ನು ನಂಬುವುದಿಲ್ಲ. ನಾನು ಸ್ವೀಕಾರವನ್ನು ನಂಬುವೆನು. ನಾನೇಕೆ ಸಹಿಸಬೇಕು? ಸಹಿಸವುದು ಎಂದರೆ, ನೀವು ತಪ್ಪು ಎಂಬುದು ನನಗೆ ಗೊತ್ತು; ಆದರೆ ಬದುಕುವುದಕ್ಕೆ ನಿಮಗೆ ಅವಕಾಶ ಕೊಡುತ್ತಿರುವೆನು ಎಂದು. ನಾನು ಮತ್ತು ನೀವು, ಇತರರು ಜೀವಿಸಲು ಅವಕಾಶ ಕೊಡುವುದು ಈಶ್ವರ ನಿಂದೆಯಲ್ಲವೇ?” (ಕೃತಿಶ್ರೇಣಿ ೨: ೨೧೬)

ಅಂತರಧರ್ಮೀಯ ಸಮನ್ವಯತೆ ಮತ್ತು ಅಂತಃಧರ್ಮೀಯ ಸಮನ್ವಯತೆ

ಧರ್ಮಸಮನ್ವಯದ ಬಗ್ಗೆ ಮಾತನಾಡುವಾಗ, ಒಂದೊಂದು ಧರ್ಮವನ್ನೂ ಅಖಂಡವೆಂಬಂತೆ ನಾವು ಪರಿಗಣಿಸುತ್ತೇವೆ. ಆದರೆ ನಿಜವಾದ ವಿಷಯ ಏನೆಂದರೆ, ಪ್ರತಿಯೊಂದು ಧರ್ಮವೂ ಹಲವು ಪ್ರಮುಖ ಒಳಪಂಗಡಗಳಾಗಿ ಮತ್ತು ಬಹುಸಂಖ್ಯೆಯ ಗೌಣ ಒಳಪಂಗಡಗಳಾಗಿ ಶ್ರೇಣೀಕೃತವಾಗಿ(vertically) ವಿಭಜನೆ ಹೊಂದಿದೆ. ಉದಾಹರಣೆಗೆ, ಹಿಂದೂ ಧರ್ಮದಲ್ಲಿರುವ ವೈಷ್ಣವ ಮತ್ತು ಶೈವ ಪಂಗಡಗಳು: ಕ್ರೈಸ್ತ ಧರ್ಮದಲ್ಲಿರುವ ಕ್ಯಾಥೊಲಿಕ್, ಪ್ರೊಟೆಸ್ಟಾಂಟ್ ಮತ್ತು ಈಸ್ಟರ್ನ್ ಚರ್ಚ್‌ಗಳು; ಇಸ್ಲಾಂ ಧರ್ಮದಲ್ಲಿರುವ ಶಿಯಾ, ಸುನ್ನಿ, ಇಸ್ಮೈಲಿ ಪಂಗಡಗಳು; ಬೌದ್ಧ ಧರ್ಮದ ಮಹಾಯಾನ, ವಜ್ರಯಾನ ಮತ್ತು ಥೇರಾವಾದ ಪಂಗಡಗಳು. ಅನೇಕ ಸಮಯಗಳಲ್ಲಿ, ಬೇರೆ ಧರ್ಮಗಳ ಬಗೆಗೆ ತೋರುವುದಕ್ಕಿಂತ ಹೆಚ್ಚಿನ ದ್ವೇಷಭಾವನೆಯನ್ನು ತಮ್ಮತಮ್ಮಲ್ಲೇ ಈ ಒಳಪಂಗಡಗಳು ತೋರುತ್ತವೆ. ಧರ್ಮಸಾಮರಸ್ಯದ ಬಗ್ಗೆ ಮಾತನಾಡುವಾಗ, ಪ್ರತಿಯೊಂದು ಧರ್ಮದ ಆಂತರಂಗಿಕ ಸಾಮರಸ್ಯ ಅಂದರೆ, ಅಂತಃಧರ್ಮೀಯ ಸಾಮರಸ್ಯ ಮತ್ತು ಧರ್ಮಗಳ ನಡುವಿನ ಸಾಮರಸ್ಯ ಅಂದರೆ ಅಂತರಧರ್ಮೀಯ ಸಾಮರಸ್ಯ — ಇವೆರಡನ್ನೂ ಒಟ್ಟಿಗೆ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಧರ್ಮಸಮನ್ವಯತೆಯ ಸಮಸ್ಯೆಗಳ ಕುರಿತು ದೃಷ್ಟಿಕೋನಗಳು

ಧರ್ಮಸಮನ್ವಯದ ಸಮಸ್ಯೆಯನ್ನು ಕುರಿತು ನಾಲ್ಕು ಪ್ರಮುಖ ದೃಷ್ಟಿಕೋನಗಳಿವೆ: ರಾಜಕೀಯ, ಸಾಮಾಜಿಕ, ದೈವ ಶಾಸ್ತ್ರೀಯ(theological) ಮತ್ತು ಆನುಭಾವಿಕ(mystical). ರಾಜಕೀಯ ದೃಷ್ಟಿಕೋನವೆಂದರೆ, ಸರ್ಕಾರವು ಧರ್ಮದ ಬಗ್ಗೆ ತಳೆದಿರುವ ನೀತಿ. ಆಧುನಿಕ ಕಾಲದಲ್ಲಿ ಇದು ಅತ್ಯಂತ ಮಹತ್ವದ ದೃಷ್ಟಿಕೋನವಾಗಿದೆ, ಏಕೆಂದರೆ, ಅದನ್ನು ಹೊರತುಪಡಿಸಿದರೆ, ಮಿಕ್ಕ ದೃಷ್ಟಿಕೋನಗಳು ಪ್ರಭಾವಶಾಲಿಗಳಾಗಿ ಉಳಿಯುವುದಿಲ್ಲ. ಪುರೋಹಿತಶಾಹಿ ಪ್ರಬಲವಾಗಿರುವ ದೇಶಗಳಲ್ಲಿಯೂ ಸರ್ಕಾರಗಳು ಧಾರ್ಮಿಕ ಸಹಿಷ್ಣುತೆಯ ನೀತಿಯನ್ನು ಅನುಸರಿಸುತ್ತವೆ: ಕೋಮುಗಲ್ಲಭೆಗಳನ್ನು ತಡೆಯಲು  ತಕ್ಕ ಕ್ರಮ ಕೈಗೊಳ್ಳುತ್ತವೆ. ಪ್ರಜಾಪ್ರಭುತ್ವ ರಾಷ್ಟ್ರಗಳಾದ ಅಮೆರಿಕ ಮತ್ತು ಭಾರತಗಳಲ್ಲಿ ಗಣರಾಜ್ಯವನ್ನು ‘ಧರ್ಮನಿರಪೇಕ್ಷ (Secular) ಎಂದು ಘೋಷಿಸುವ ಮೂಲಕ ರಾಜಕೀಯ ದೃಷ್ಟಿಕೋನದ ಪಾಲನೆಯಾಗುತ್ತಿದೆ. ಈ ಬಗೆಯ ಧರ್ಮನಿರಪೇಕ್ಷ ನೀತಿ ಬಹಳಷ್ಟು ಟೀಕೆಯನ್ನು ಎದುರಿಸುತ್ತಿದೆ. ಆದರೂ ಇದು ಧರ್ಮದ ಹೆಸರಿನಲ್ಲಿ ತಲೆಯೆತ್ತುವ ಮೂಲಭೂತ ವಾದ ಮತ್ತು ಸಾಮಾಜಿಕ ಅನ್ಯಾಯಗಳಿಗೆ ಮಾನ್ಯತೆಯನ್ನು ನಿರಾಕರಿಸುವ ಒಂದು ಸಾಧನವಾಗಿದೆ ಎನ್ನುವುದು ಒಪ್ಪತಕ್ಕ ವಿಷಯ.

ಸಾಮಾನ್ಯ ಜನ ಅನುಕರಿಸುವುದು ಸಾಮಾಜಿಕ ದೃಷ್ಟಿಕೋನ. ಅವರ ಪಾಡಿಗೆ ಅವರನ್ನು ಬಿಟ್ಟರೆ ಅವರು ಯಾವ ಧಾರ್ಮಿಕ ಪಂಗಡ ಅಥವಾ ಶ್ರದ್ಧೆಗೆ ಸೇರಿದವರಾದರೂ, ತಮ್ಮ ನೆರೆಹೊರೆಯವರೊಂದಿಗೆ ಶಾಂತಿಯಿಂದ ಬಾಳುತ್ತಾರೆ. ಪಟ್ಟಭದ್ರ ಹಿತಾಸಕ್ತಿಗಳು ಪ್ರಚೋದಿಸಿದಾಗ ಮಾತ್ರ ಕೋಮು ಘರ್ಷಣೆಗಳು ಆರಂಭವಾಗುತ್ತವೆ. ಧಾರ್ಮಿಕ ಮುಖಂಡರು ಮತ್ತು ಸ್ವಯಂಸೇವಾ ಸಂಸ್ಥೆಗಳು ಬಹು ಮಹತ್ವದ ಪಾತ್ರವನ್ನು ವಹಿಸಬೇಕಾದ ಕ್ಷೇತ್ರವಿದು.

ದೈವಶಾಸ್ತ್ರೀಯ ದೃಷ್ಟಿಕೋನವೆಂದರೆ ಧಾರ್ಮಿಕ ಸಿದ್ಧಾಂತಗಳನ್ನು ಧರ್ಮಸಮನ್ವಯತೆಗೆ ಹೊಂದುವಂತೆ ಅವುಗಳನ್ನು ಹೊಸದಾಗಿ ವಿವರಿಸುವುದು. ಎಲ್ಲ ವಿಶ್ವಧರ್ಮಗಳಲ್ಲಿನ ಸಿದ್ಧಾಂತಗಳು ಹಲವು ಶತಮಾನಗಳ ಹಿಂದೆ ರೂಪುಗೊಂಡಂಥವುಗಳಾಗಿವೆ. ಅವುಗಳಲ್ಲಿ ಕೆಲವು ಧರ್ಮಸಮನ್ವಯತೆಗೆ ವಿರುದ್ಧವಾಗುವಂತಿವೆ. ಅವುಗಳನ್ನು ಬದಲಿಸಲಾಗದಿದ್ದರೆ, ಇಂದಿನ ಜಗತ್ತಿನ ಆವಶ್ಯಕತೆಗಳಿಗೆ ಹೊಂದುವಂತೆ, ಅವುಗಳಿಗೆ ನೂತನ ವ್ಯಾಖ್ಯಾನ ಮಾಡಬಹುದು. ಹಿಂದೂ ಧರ್ಮದ ಧಾರ್ಮಿಕ ಗ್ರಂಥಗಳಲ್ಲಿ ಎರಡು ಬಗೆ ‘ಶ್ರುತಿ’ ಮತ್ತು ‘ಸ್ಮೃತಿ’. ಪ್ರಾಚೀನ ಯಷಿಮುನಿಗಳಿಗೆ ಅನಾವರಣಗೊಂಡ ಆಧ್ಯಾತ್ಮಿಕ ಪ್ರಪಂಚದ ಚಿರಂತನ ಸತ್ಯಗಳು ಮತ್ತು ನಿಯಮಗಳು ‘ಶ್ರುತಿ’ ಎನಿಸಿಕೊಳ್ಳುತ್ತವೆ. ಅವುಗಳನ್ನು ಮಾರ್ಪಡಿಸಲಾಗದು. ಆದರೆ, ಆಚಾರ್ಯರು ಅವುಗಳನ್ನು ವಿವಿಧ ರೀತಿಯಲ್ಲಿ ಅರ್ಥೈಸಿದ್ದಾರೆ. ಧರ್ಮದ ಇತರ ವಿಷಯಗಳು. ಅದರಲ್ಲೂ ವ್ಯಕ್ತಿಯೊಬ್ಬನ ಕರ್ತವ್ಯಗಳು ಮತ್ತು ಜೀವನ ಮಾರ್ಗಗಳನ್ನು ‘ಸ್ಮೃತಿ’ ಎಂದು ಕರೆಯಲಾಗಿದೆ. ಸ್ಮೃತಿಯನ್ನು ಮಾರ್ಪಡಿಸಬಹುದಷ್ಟೆ ಅಲ್ಲ, ಅದಕ್ಕೆ ಹೊಸ ಅರ್ಥವಿವರಣೆಗಳನ್ನೂ ಕೊಡಬಹುದು. ಆಧುನಿಕ ಕಾಲದಲ್ಲಿ ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣರ ದಿವ್ಯ ಅನುಭವಗಳ ಬೆಳಕಿನಲ್ಲಿ ಪ್ರಾಚೀನ ಶಾಸ್ತ್ರಗಳನ್ನು ಹೊಸತಾಗಿ ವಿವರಿಸಿದರು. ಅವರ ಭಾವನೆಗಳು ಹಿಂದೂಧರ್ಮದ ಒಳಗೆ ಆಂತರಿಕಸಾಮರಸ್ಯವು ನೆಲೆಗೊಳ್ಳಲು ಸಹಾಯ ಮಾಡಿದವು ಮತ್ತು ಆಧುನಿಕ ಹಿಂದೂಧರ್ಮಕ್ಕೆ ಒಂದು ಸರ್ವಾಂಗೀಣ ರೂಪವನ್ನು ಕೊಟ್ಟವು. ಇದರ ಮೂಲ ತತ್ತ್ವವೆಂದರೆ ಅಂತರಧಾರ್ಮಿಕ ಸಾಮರಸ್ಯಕ್ಕೆ ಒತ್ತು ಕೊಡುವುದು. ಈ ಸಂದರ್ಭದಲ್ಲಿ ಉಲ್ಲೇಖಿಸಬಹುದಾದ ಇನ್ನೊಂದು ವಿಷಯವೇನೆಂದರೆ ಇತ್ತೀಚಿನ ವರ್ಷಗಳಲ್ಲಿ ಕ್ರೈಸ್ತ ಚರ್ಚುಗಳು ಆರಂಭಿಸಿರುವ ‘ಸಂವಾದ’ (dialogue) ಕಾರ್ಯಕ್ರಮದ ಅಡಿಪಾಯವಾಗಿ ಇರುವುದು ದೈವಶಾಸ್ತ್ರೀಯ ದೃಷ್ಟಿಕೋನವೇ ಎಂಬುದು.

ಕಡೆಯದಾಗಿ ನಾವು ಆನುಭಾವಿಕ ದೃಷ್ಟಿಕೋನಕ್ಕೆ ಬರೋಣ. ಈ ದೃಷ್ಟಿಕೋನವು ಒಂದು ಸಿದ್ಧಾಂತದ ಆಧಾರದ ಮೇಲೆ ನಿಂತಿದೆ. ಶಾಸ್ತ್ರಗಳಿಂದ ದೊರಕುವ ಜ್ಞಾನವಲ್ಲದೆ, ಪರಮಸತ್ಯದ ನೇರ ಅನುಭವ (ಅಪರೋಕ್ಷಾನುಭೂತಿ) ಕೂಡ ಸಾಧ್ಯ ಎನ್ನುವುದೇ ಆ ಸಿದ್ಧಾಂತ. ಇದನ್ನು ಎಲ್ಲ ವಿಶ್ವಧರ್ಮಗಳು ಒಪ್ಪುತ್ತವೆ ಮಾತ್ರವಲ್ಲ, ಪ್ರತಿಯೊಂದು ಧರ್ಮವೂ ಹಲವು ಶತಮಾನಗಳಿಂದ ಬೆಳೆದು ಬಂದ ಸಮೃದ್ಧ ಆನುಭಾವಿಕ ಪರಂಪರೆಯನ್ನು ಹೊಂದಿದೆ. ಆದರೆ ಈ ದೃಷ್ಟಿಕೋನದಲ್ಲಿ ಒಂದು ಸಮಸ್ಯೆ ಇದೆ. ಅದು ದರ್ಶನಾನುಭವದ ವಾಸ್ತವಾಂಶದ (content) ಕುರಿತಾದದ್ದು. ಪ್ರಮುಖ ಧರ್ಮಗಳಲ್ಲಿ ಅನುಭಾವದ ವಾಸ್ತವಾಂಶದಲ್ಲಿ ಬಹಳಷ್ಟು ವೈವಿಧ್ಯತೆ ಇದೆ. ರಾಬಿಯಾ, ಮೀರಾ ಮತ್ತು ಸೈಂಟ್ ತೆರೆಸಾ ಮುಂತಾದ ಸ್ತ್ರೀ ಅನುಭಾವಿಗಳು ಪಡೆದ ದರ್ಶನಾನುಭವಗಳಲ್ಲಿ ಸಮಾನತೆಯಿಲ್ಲ. ಹಾಗೆಯೇ ಆಲ್ ಫಜ್ಜಲಿ, ಸೈಂಟ್ ಜಾನ್ ಆಫ್ ದಿ ಕ್ರಾಸ್ ಮತ್ತು ಜ್ಞಾನೇಶ್ವರರ ದರ್ಶನಾನುಭವಗಳಲ್ಲೂ ಕೂಡ ಭಿನ್ನತೆಗಳಿವೆ. ಆದರೆ ದಿವ್ಯ ದರ್ಶನಗಳ ವಾಸ್ತವಾಂಶಗಳಲ್ಲಿ ವ್ಯತ್ಯಾಸಗಳು ಕಂಡುಬಂದರೂ, ಅನುಭಾವಿಗಳೆಲ್ಲರೂ ಪರಮಸತ್ಯದ ಅನುಭಾವ ಸಾಧ್ಯ ಎನ್ನುವುದನ್ನು ಒಪ್ಪುತ್ತಾರೆ. ಈ ಒಮ್ಮತವು ಧರ್ಮಸಮನ್ವಯದ ನಿರ್ಮಾಣಕ್ಕೆ ಆಧಾರಸ್ತಂಭವಾಗಲು ಸಾಧ್ಯ. ಈ ಬಗೆಯ ಆನುಭಾವಿಕ ದೃಷ್ಟಿಕೋನವನ್ನು ಶ್ರೀರಾಮಕೃಷ್ಣರು ತಮ್ಮ ಜೀವನದಲ್ಲಿ ಅನುಸರಿಸಿದರು ಮತ್ತು ಸ್ವಾಮಿ ವಿವೇಕಾನಂದರು ಇದನ್ನು ಪ್ರತಿಪಾದಿಸಿದರು.

ಈ ಭಾಗದ ಮುಕ್ತಾಯದಲ್ಲಿ ನಾವು ಸಲಹೆ ಮಾಡುವುದೊಂದಿದೆ. ಧರ್ಮಗಳ ನಡುವಣ ಸಮನ್ವಯದ ನಿರ್ಮಾಣಕ್ಕೆ ಮೇಲಿನ ಎಲ್ಲಾ ನಾಲ್ಕು ದೃಷ್ಟಿಕೋನಗಳ ಕ್ರೋಡೀಕರಣವೇ ಆದರ್ಶ ದೃಷ್ಟಿಕೋನ ಎನ್ನುವುದೇ ಅದು.                                                                                       (ಮುಂದುವರಿಯುವುದು)

(ಮೂಲ: ವಿವೇಕಪ್ರಭ ಜನವರಿ 2008)


ಶ್ರೀರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಧರ್ಮಸಮನ್ವಯ (continued) ಫೆಬ್ರವರಿ

ಹಿಂದಿನ ಸಂಚಿಕೆಯಲ್ಲಿ

ಧಾರ್ಮಿಕ ಸಂಘರ್ಷಗಳಿಗೆ ಧರ್ಮಗಳ ವೈವಿಧ್ಯತೆ ಅಥವಾ ಸೈದ್ಧಾಂತಿಕ ಭೇದಗಳು ಕಾರಣವಲ್ಲ. ಅವು ಈಗ ಉಂಟಾಗುತ್ತಿರುವುದಕ್ಕೆ ಕಾರಣ ಭಾರತೀಯ ಪರಂಪರೆಯ ವಿಧಾನವನ್ನು ಕೆಲವು ಶಕ್ತಿಗಳು ಬಿಟ್ಟು ನಡೆದಿರುವುದೇ ಆಗಿದೆ. ಅವುಗಳ ಬೆಳವಣಿಗೆಯನ್ನು ತಡೆಗಟ್ಟಲು, ವಿವಿಧ ಧರ್ಮಗಳ ವೈವಿಧ್ಯತೆಯನ್ನು ಮಾನ್ಯ ಮಾಡಬೇಕು. ಸಹಿಷ್ಣುತೆಗಿಂತ ಸಮನ್ವಯ ಹೆಚ್ಚು ವ್ಯಾಪಕ. ಅದು ಅಂತರಧರ್ಮೀಯವಾಗಿಯೂ ಅಂತಃಧರ್ಮೀಯವಾಗಿಯೂ ಸಾಧ್ಯ. ಅದರಲ್ಲಿ ರಾಜಕೀಯ, ಸಾಮಾಜಿಕ, ದೈವಶಾಸ್ತ್ರೀಯ, ಆನುಭಾವಿಕ ಮುಂತಾದ ಹಲವು ದೃಷ್ಟಿಕೋನಗಳಿವೆ. ಈ ನಾಲ್ಕೂ ದೃಷ್ಟಿಕೋನಗಳ ಕ್ರೋಡೀಕರಣವೇ ಆದರ್ಶ ದೃಷ್ಟಿಕೋನ.                  ( ಮುಂದೆ ಓದಿ )

 

ಸರ್ವಧರ್ಮ ಸಮನ್ವಯಾಚಾರ್ಯ ಶ್ರೀರಾಮಕೃಷ್ಣ

ಇತ್ತೀಚಿಗೆ ಧರ್ಮಸಮನ್ವಯದ ಬಗ್ಗೆ ಜನರಲ್ಲಿ ಆಸಕ್ತಿ ಬೆಳೆಯುತ್ತಿದೆ. ಅದಕ್ಕೆ ಜನಸಾಂದ್ರತೆಯ ನಿರ್ಬಂಧವಿರಬಹುದು ಅಥವಾ ಇನ್ನಾವುದೇ ಕಾರಣಗಳಿರಬಹುದು. ಆದರೆ, ಈ ಆಸಕ್ತಿಗೆ ಶ್ರೀರಾಮಕೃಷ್ಣರ ಪರೋಕ್ಷ, ಅಪರೋಕ್ಷ ಅಥವಾ ಅತಿದೂರದ ಪ್ರಭಾವವಿರುವುದನ್ನು ಅಲ್ಲಗಳೆಯಲಾಗದು. ಆಧುನಿಕ ಕಾಲದಲ್ಲಿ ಸರ್ವಧರ್ಮ ಸಮನ್ವಯವನ್ನು ಮುಕ್ತವಾಗಿ ಬೋಧಿಸಿದವರಲ್ಲಿ ಶ್ರೀರಾಮಕೃಷ್ಣರೇ ಮೊದಲಿಗರು.

ಶ್ರೀರಾಮಕೃಷ್ಣರು ಜನ್ಮತಳೆದ ಮತ್ತು ಬೆಳೆದುಬಂದ ಸಮಾಜದ ಸಾಂಪ್ರದಾಯಿಕ ಪರಿಸ್ಥಿತಿ ಮತ್ತು ಕುಟುಂಬದ ಮಡಿವಂತಿಕೆ ಈ ಬಗೆಯ ಉದಾರ ದೃಷ್ಟಿಯ ಬೆಳವಣಿಗೆಗೆ ಅತ್ಯಂತ ಅನಾನುಕೂಲಕರವೇ ಆಗಿದ್ದವು. ಅಂದಿನ ದಿನಗಳಲ್ಲಿ ಮಡಿವಂತ ಬ್ರಾಹ್ಮಣರು ಕೆಳವರ್ಗದ ಹಿಂದುಗಳಿಂದ ಆಹಾರವನ್ನು ಸ್ವೀಕರಿಸುತ್ತಿರಲಿಲ್ಲ, ನೀರನ್ನೂ ಕುಡಿಯುತ್ತಿರಲಿಲ್ಲ. ಇತರ ಧರ್ಮಗಳಿಗೆ ಸೇರಿದವರನ್ನಂತೂ “ಮ್ಲೇಚ್ಛ” ಎಂಬ ಹಣೆಪಟ್ಟಿಯನ್ನಿಟ್ಟು ಕರೆಯಲಾಗುತ್ತಿತ್ತು. (ಈ ಪದವು ಕ್ರೈಸ್ತರು ಉಪಯೋಗಿಸುವ ‘ಹೀದನ್’ (Heathen) ಮತ್ತು ಮುಸ್ಲಿಮರು ಉಪಯೋಗಿಸುವ ‘ಕಾಫಿರ್’ ಪದಕ್ಕೆ ಸಮನಾಗಿದೆ. ಈ ಎರಡೂ ಪದಗಳ ಅರ್ಥ ‘ವಿಧರ್ಮೀಯ ಎಂದು). ಶ್ರೀರಾಮಕೃಷ್ಣರು ತಮ್ಮ ಬಾಲ್ಯದ ದಿನಗಳನ್ನು ಕಳೆದ ಪರಿಸ್ಥಿತಿಯನ್ನು ಅಧ್ಯಯನ ಮಾಡಿದಾಗ, ಯಾವುದೇ ಬಾಹ್ಯ ಆಕರಗಳಿಂದಲೂ ಆವರು ಧರ್ಮಸಮನ್ವಯದ ಭಾವನೆಯನ್ನು ಎರವಲು ಪಡೆದುಕೊಳ್ಳಲಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ, ಅವರು ಧರ್ಮಸಮನ್ವಯದ ಭಾವನೆಯನ್ನು ಬೋಧಿಸಿದ್ದು, ಯಾವುದೇ ಮಾನ್ಯತೆಯನ್ನಾಗಲೀ, ಹೆಸರು-ಕೀರ್ತಿಗಳನ್ನಾಗಲಿ, ಪಡೆಯುವ ಉದ್ದೇಶದಿಂದಲ್ಲ. ಹಾಗಾದರೆ, ಈ ಭಾವನೆಯನ್ನು ಅವರು ಬೋಧಿಸುವಂತೆ ಪ್ರೇರೇಪಿಸಿದ ಅಂಶ ಯಾವುದು? ಇದಕ್ಕೆ ಉತ್ತರವನ್ನು ಅವರ ಆಧ್ಯಾತ್ಮಿಕ ಸಂಗಾತಿಯಾದ ಶ್ರೀಶಾರದಾದೇವಿಯವರು ಹೀಗೆ ನೀಡುವರು: “ಧರ್ಮಸಮನ್ವಯದ ಭಾವನೆಯನ್ನು ಸಂಸ್ಥಾಪಿಸಲೆಂದೇ ಗುರುದೇವರು ವಿವಿಧ ಧರ್ಮಮಾರ್ಗಗಳನ್ನು ಅನುಸರಿಸಿದರೆಂಬ ತಥ್ಯ ನನಗೆ ಯಾವತ್ತೂ ಹೊಳೆದೇ ಇರಲಿಲ್ಲ. ಅವರೊಬ್ಬ ಭಗವತ್ಪ್ರೇಮಿ. ಭಗವದಾನಂದವನ್ನು ವಿವಿಧ ಬಗೆಗಳಲ್ಲಿ ಸವಿಯಲು ಇಚ್ಛಿಸಿದ್ದರು. ಇದೇ ಅವರು ವಿವಿಧ ಆಧ್ಯಾತ್ಮಿಕ ಮಾರ್ಗಗಳನ್ನು ಅನುಸರಿಸಲು ಉತ್ತೇಜಿಸಿತು.” ಬೇರೆ ಮಾತುಗಳಲ್ಲಿ ಹೇಳಬೇಕಾದರೆ, ಧರ್ಮಸಮನ್ವಯದ ಭಾವನೆ, ಶ್ರೀರಾಮಕೃಷ್ಣರಲ್ಲಿ ಉಗಮವಾಗಿದ್ದು ನೇರ ಅನುಭಾವಿಕ ಅನುಭವದ ರೂಪದಲ್ಲಿ; ಅವರಿಗೆ ಅದು ವೇದ್ಯವಾಗಿದ್ದು ಅಂತರಂಗದ ಅನ್ವೇಷಣೆ ಮತ್ತು ವೈಯಕ್ತಿಕ ಪ್ರಕಾಶನದ ರೂಪದಲ್ಲಿ.

ಬಡವರಾಗಿದ್ದರೂ ಧಾರ್ಮಿಕರೂ ಶ್ರದ್ಧಾಳುಗಳೂ ಆದ ಬ್ರಾಹ್ಮಣರ ಕುಟುಂಬದಲ್ಲಿ, ಪಶ್ಚಿಮ ಬಂಗಾಳದ ಕಾಡುಮೂಲೆಯಲ್ಲಿರುವ ಗ್ರಾಮದಲ್ಲಿ ಜನಿಸಿದ ಶ್ರೀರಾಮಕೃಷ್ಣರು (೧೮೩೬ – ೧೮೮೬) ಬಾಲ್ಯದಲ್ಲಿಯೇ ಆನುಭಾವಿಕ ಮನಃಸ್ವಭಾವದ – (mystical temperament) ಚಿಹ್ನೆಗಳನ್ನು ಪ್ರಕಟಪಡಿಸಿದರು. ಓದಲು ಮತ್ತು ಬರೆಯಲು ಸಮರ್ಥರಾಗುವಷ್ಟು ಮಾತ್ರ ಶಾಲಾವ್ಯಾಸಂಗವನ್ನು ಪಡೆದಿದ್ದರು. ಹತ್ತೊಂಬತ್ತನೆಯ ವಯಸ್ಸಿಗೆ, ಆಗ ತಾನೇ ನೂತನವಾಗಿ ಪ್ರತಿಷ್ಠಾಪನೆಗೊಂಡಿದ್ದ, ದಕ್ಷಿಣೇಶ್ವರದ ಕಾಳೀ ದೇಗುಲದ ಪೂಜಾರಿಯಾದರು. ಸಾಧಾರಣ ಪೂಜಾರಿಗಳ ವಿಷಯದಲ್ಲಿ ಏನು ನಡೆಯುವುದೋ ಅದಕ್ಕಿಂತ ಭಿನ್ನವಾಗಿ, ಆ ದೇವಿಯ ಸೇವೆಯು ರಾಮಕೃಷ್ಣರಲ್ಲಿ ಭಗವದ್ವ್ಯಾಕುಲತೆಯನ್ನು ಪ್ರದೀಪ್ತಗೊಳಿಸಿತು. ಅವರು ಇಡೀ ರಾತ್ರಿಗಳನ್ನು ದಕ್ಷಿಣೇಶ್ವರದ ನಿರ್ಜನ ಪ್ರದೇಶವೊಂದರಲ್ಲಿ ಭಗವತ್ತನ್ಮಯತೆಯಿಂದ ಕಳೆಯಲಾರಂಭಿಸಿದರು. ಅದರಲ್ಲಿ ಅವರು ಅನುಸರಿಸಿದ ವಿಧಾನವೆಂದರೆ, ತೀವ್ರ ವ್ಯಾಕುಲತೆ ಮತ್ತು ಪ್ರಾರ್ಥನೆ. ಒಂದು ವರ್ಷದ ಕಡೆಯಲ್ಲಿ ಆವರು ಜಗನ್ಮಾತೆಯ ಅಪೂರ್ವ ದರ್ಶನವನ್ನು ಹೊಂದಿದರು; ದೇವಿ ಅವರಿಗೆ ಬೆಳಕಿನ ಸೀಮಾತೀತ ಸಾಗರದಂತೆ ತೋರಿದಳು.

ದೈವಸಾಕ್ಷಾತ್ಕಾರ ಪಡೆದ ಮಹಾತ್ಮರು ಸಾಧಾರಣವಾಗಿ ಒಂದು ಮಾರ್ಗವನ್ನು ಅನುಸರಿಸುವುದರಲ್ಲಿಯೇ ತೃಪ್ತಿಹೊಂದುವರು. ಆದರೆ ಶ್ರೀರಾಮಕೃಷ್ಣರಿಗೆ, ಭಗವಂತನನ್ನು ಹಲವು ಮಾರ್ಗಗಳಲ್ಲಿ ಸಾಕ್ಷಾತ್ಕರಿಸಿಕೊಳ್ಳುವ ಅತೀವ ಆಕಾಂಕ್ಷೆ ಮೂಡಿತು. ಮೊದಮೊದಲು ಅವರು ಯೋಗ, ತಂತ್ರ, ವೈಷ್ಣವ ಮತ್ತಿತರ ಹಿಂದೂಧರ್ಮದ ವಿವಿಧ ಪಥಗಳನ್ನು ಅನುಸರಿಸಿದರು ಮತ್ತು ಅವುಗಳಲ್ಲಿ ಪ್ರತಿಯೊಂದರಲ್ಲೂ, ಅತಿ ಶೀಘ್ರಾವಧಿಯಲ್ಲಿಯೆ ಗುರಿಯನ್ನು ತಲುಪಿದರು. ಈ ಆಧ್ಯಾತ್ಮಿಕ ಪಯಣ ಸುಸಂಪನ್ನಗೊಂಡಿದ್ದು, ಅವರ ೨೮ ನೆಯ ವಯಸ್ಸಿನಲ್ಲಿ, ಅವರು ನಿರ್ವಿಕಲ್ಪ ಸಮಾಧಿಯ ಮೂಲಕ ಪಡೆದ ಅದ್ವೈತಾನು ಭೂತಿಯಲ್ಲಿ.

ಭಗವಂತನನ್ನು ಇತರ ಧರ್ಮಗಳ ಮೂಲಕವೂ ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಬಯಕೆ ಈಗ ಅವರಲ್ಲಿ ಪ್ರಬಲವಾಯಿತು. ಎರಡು ವರ್ಷಗಳ ನಂತರ, ಅಂದರೆ ೧೮೬೬ ರಲ್ಲಿ, ಸೂಫಿ ಮಾರ್ಗದರ್ಶಕನೊಬ್ಬನ ಅಡಿಯಲ್ಲಿ ಅವರು ಇಸ್ಲಾಂ ಧರ್ಮದ ಸೂಫಿ ಪಥವನ್ನು ಅನುಸರಿಸಲಾರಂಭಿಸಿದರು. ಆಗ ಅವರು ಒಬ್ಬ ಮುಸ್ಲಿಮನಂತೆ ಇರುತ್ತಿದ್ದರು; ‘ನಮಾಜ್’ ಮಾಡುತ್ತಿದ್ದರು ಮತ್ತು ‘ಅಲ್ಲಾಹು’ ವಿನ ನಾಮವನ್ನು ಪುನರಚ್ಚರಿಸುತ್ತಿದ್ದರು.ಈ ಸಾಧನಾ ವಿಧಾನವು ಪರತತ್ತ್ವದಲ್ಲಿ ಅಂತಿಮವಾಗಿ ವಿಲೀನನಾದ ಜ್ಯೋತಿರ್ಮಯ ಪುರುಷನೊಬ್ಬನ ದರ್ಶನದಲ್ಲಿ ಕೊನೆಗೊಂಡಿತು.

ಎಂಟು ವರ್ಷಗಳ ನಂತರ, ಕ್ರೈಸ್ತಧರ್ಮದ ಆಧ್ಯಾತ್ಮಿಕ ಪಥದಲ್ಲಿ ಭಗವತ್ಸಾಕ್ಷಾತ್ಕಾರವನ್ನು ಪಡೆಯುವ ಆಶಯ ಅವರಲ್ಲಿ ತೀವ್ರವಾಯಿತು. ಆಗ ಅವರು ಬೈಬಲ್ಲಿನ ಪಠಣವನ್ನು ಆಲಿಸಲು ಆರಂಭಿಸಿದರು. ೧೮೭೪ ರಲ್ಲಿ ಒಂದು ದಿನ ಮಡೋನಾ ಜೊತೆಯಿರುವ ಬಾಲ ಏಸುವಿನ ಚಿತ್ರವನ್ನು ದಿಟ್ಟಿಸಿ ನೋಡುತ್ತಿದ್ದಾಗ, ಶ್ರೀರಾಮಕೃಷ್ಣರು ಕ್ರೈಸ್ತಭಾವದಲ್ಲಿ ತಲ್ಲೀನರಾಗಿಹೋದರು. ಈ ಅಂತರಂಗದ ತಲ್ಲೀನತೆ ಎಷ್ಟು ಉತ್ಕಟವಾಗಿತ್ತೆಂದರೆ, ಮೂರು ದಿನಗಳ ಕಾಲ, ಹಿಂದೂ ದೇವಾಲಯಗಳ ಕಡೆ ಹೊಗಲಾಗಲಿ, ಹಿಂದೂ ದೇವತೆಗಳನ್ನು ಚಿಂತಿಸಲಾಗಲಿ ಅವರಿಗೆ ಸಾಧ್ಯವಾಗಲಿಲ್ಲ. ಈ ಅವಧಿಯ ಅಂತ್ಯದಲ್ಲಿ ಅವರು ಏಸುಕ್ರಿಸ್ತನ ಪರಮಾದ್ಭುತ ದರ್ಶನವನ್ನು ಪಡೆದರು. ಆ ದಿವ್ಯಮೂರ್ತಿಯೂ ಕಡೆಗೆ ಪರತತ್ತ್ವಾನುಭೂತಿಯಲ್ಲಿ ಲೀನವಾಯಿತು.

ಇಲ್ಲೊಂದು ಪ್ರಶ್ನೆ ಉದ್ಭವಿಸುವುದು, ಶ್ರೀರಾಮಕೃಷ್ಣರು ಇಷ್ಟೊಂದು ಅಲ್ಪಾವಧಿಯಲ್ಲಿ, ‘ಇಸ್ಲಾಂ’ ಮತ್ತು ‘ಕ್ರೈಸ್ತ’ ಮಾರ್ಗಗಳ ಮೂಲಕ ಭಗವತ್ ಸಾಕ್ಷಾತ್ಕಾರವನ್ನು ಪಡೆಯಲು ಹೇಗೆ ತಾನೆ ಸಾಧ್ಯವಾಯಿತು? ಮಹಾನ್ ಅನುಭಾವಿಗಳ ಜೀವನ ಮತ್ತು ಕಾರ್ಯಗಳ ಬಗ್ಗೆ ಅರಿತವರೆಲ್ಲರಿಗೂ ಇದು ಸ್ವಯಂವೇದ್ಯ ಶ್ರೀರಾಮಕೃಷ್ಣರು, ಹಲವು ವರ್ಷಗಳ ಉತ್ಕಟ ಆಧ್ಯಾತ್ಮಿಕ ಸಾಧನೆಗಳ ಫಲವಾಗಿ, ಈ ಬಗೆಯ ಸಂಪೂರ್ಣ ಮಾನಸಿಕ ಪರಿಶುದ್ಧತೆಯನ್ನು, ತನ್ಮಯತೆಯಲ್ಲಿ ಪರಿಪೂರ್ಣತೆಯನ್ನುಗಳಿಸಿಕೊಂಡಿದ್ದರು. ಹೀಗಾಗಿ, ಆಧ್ಯಾತ್ಮಿಕ ಪ್ರಗತಿಯ ವಿವಿಧ ಹಂತಗಳನ್ನು ಸಾಧಾರಣ ಅನುಭಾವಿಗಳಂತೆ ಮತ್ತೆ ಹಾದು ಹೋಗುವ ಪ್ರಮೇಯ ಅವರಿಗಿರಲಿಲ್ಲ. ಆ ಹಂತಗಳು ಯಾವುವೆಂದರೆ, ಶುದ್ಧೀಕರಣ ಅಥವಾ ಅಪರಾಧ ಪರಿಹಾರ (Purgation). ಜ್ಞಾನೋದಯ (illumination), ಸಂಯೋಗ (Union). ಶ್ರೀರಾಮಕೃಷ್ಣರ ಆಧ್ಯಾತ್ಮಿಕ ಅನುಭವಗಳನ್ನು ಕುರಿತು ಎರಡು – ಅಂಶಗಳನ್ನು ಗಮನಿಸಬೇಕು. ಒಂದು ಶ್ರೀರಾಮಕೃಷ್ಣರು ಪ್ರತಿಯೊಂದು ಧರ್ಮವನ್ನೂ ಅದರ ಅನುಯಾಯಿಗಳು ಕಾಣುವ ದೃಷ್ಟಿಯಲ್ಲೇ ಕಂಡರು ಎಂಬುದು. ಒಂದು ಧರ್ಮಮಾರ್ಗವನ್ನು ಅನುಸರಿಸುವಾಗ, ಅದರ ಪದ್ಧತಿಗಳಿಗೆ ತಮ್ಮನ್ನು ಸಂಪೂರ್ಣವಾಗಿ ಅವರು ಒಗ್ಗಿಸಿಕೊಳ್ಳುತ್ತಿದ್ದರು. ಎರಡನೆಯ ಅಂಶವೆಂದರೆ, ಯಾವ ಧರ್ಮಪಥವನ್ನು ಅನುಸರಿಸಿದರೂ ಅವೆಲ್ಲವೂ ನಿರ್ಗುಣ ತತ್ತ್ವದ ಅನುಭಾವದಲ್ಲಿ ಪರ್ಯವಸಾನವಾಗುತ್ತಿತ್ತು ಎನ್ನುವುದು. ಈ ಬಗೆಯ ಅಪರೋಕ್ಷಾನುಭೂತಿಯಿಂದಲೇ ಅವರು ಧರ್ಮಸಮನ್ವಯ ಸ್ವಭಾವವನ್ನು ಪಡೆದುಕೊಂಡರು; ಅದನ್ನು “ಯತೋ ಮತ್ ತತೋ ಪಥ್’ – ಮತಗಳೆಷ್ಟೋ, ಅಷ್ಟು ಪಥಗಳು ಎಂದು ವಿವರಿಸಿದರು.

ಬೇರೆಲ್ಲ ಮಹಾತ್ಮರಂತೆ, ಶ್ರೀರಾಮಕೃಷ್ಣರೂ ಪ್ರಮಾಣಬದ್ಧ ಬಾಳುವೆಯನ್ನು ಬಾಳಿದರು. ಅವರ ಆಲೋಚನೆ, ಮಾತುಕತೆ ಮತ್ತು ಕ್ರಿಯೆಗಳಲ್ಲಿ ಯಾವ ವೈಪರೀತ್ಯಗಳೂ ಇರಲಿಲ್ಲ. ‘ಧರ್ಮಸಮನ್ವಯ’ ದ ಬಗ್ಗೆ ಒಮ್ಮೆ ಖಚಿತಪಡಿಸಿಕೊಂಡ ಮೇಲೆ ಅದು ಈ ಕಾಲದ ಅವಶ್ಯಕತೆಯೆಂದರಿತು, ಮಿಕ್ಕವರೊಡನೆ ಅದರ ಬಗ್ಗೆ ಮಾತನಾಡತೊಡಗಿದರು.

ಶ್ರೀರಾಮಕೃಷ್ಣರು ಕೇವಲ ಧರ್ಮಸಮನ್ವಯವನ್ನು ಮಾತ್ರ ಉಪದೇಶಿಸಲಿಲ್ಲ. ತಾವು ಬೋಧಿಸಿದ್ದನ್ನು ಬದುಕಿಯೂ ತೋರಿಸಿದರು. ದಕ್ಷಿಣೇಶ್ವರದಲ್ಲಿ ಅವರಿದ್ದ ಸಣ್ಣ ಕೊಠಡಿ ಹಲವು ದಿಕ್ಕುಗಳಿಂದ ಬಂದು ಒಗ್ಗೂಡಿದ, ವಿವಿಧ ಧರ್ಮಗಳಿಗೆ ಸೇರಿದ ಜನರ ಮಿಲನದ ತಾಣವಾಗಿತ್ತು. ಶ್ರೀರಾಮಕೃಷ್ಣರು ವಿವಿಧ ಧರ್ಮಗಳಿಗೆ ಸೇರಿದ ಜನರನ್ನು ಕೇವಲ ಸ್ವಾಗತಿಸುತ್ತಿರಲಿಲ್ಲ, ಅವರ ಭಾವನೆಗಳೊಂದಿಗೆ ತಾದಾತ್ಮ್ಯವನ್ನು ಹೊಂದಿ, ಅವರೊಡನೆ ಒಂದಾಗಿ ಬಿಡುತ್ತಿದ್ದರು. ಶ್ರೀರಾಮಕೃಷ್ಣರ ಜೀವನದ ಈ ಅಂಶವನ್ನು ಕುರಿತು, ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ: “ ಜಗತ್ತಿನ ಇತರ ಕಡೆಗಳಲ್ಲಿ ವಿಶ್ವಧರ್ಮ, ಭಿನ್ನ ಭಿನ್ನ ಧರ್ಮಗಳಿಗೆ ಸಹಾನುಭೂತಿ ಎಂಬ ಭಾವನೆಗಳನ್ನು ಆಲೋಚಿಸುವುದಕ್ಕಿಂತ ಮುಂಚೆಯೇ ಇಲ್ಲೇ, ನಮ್ಮ ನಗರದಲ್ಲಿಯೇ (ಕೊಲ್ಕತಾ) ಅಂತಹ ಮಹಾ ಪುರುಷರೊಬ್ಬರು ವಾಸಿಸುತ್ತಿದ್ದರು.”

ನಾಲ್ಕು ಅಂತರಧರ್ಮೀಯ ಮನೋಭಾವಗಳು

ವಿವಿಧ ಧರ್ಮಗಳಿಗೆ ಸೇರಿದ ಅನುಯಾಯಿಗಳ ನಡುವಣ ಘರ್ಷಣೆಗಳು ಉಂಟಾಗುವುದು ತಮ್ಮದಲ್ಲದ ಮತಗಳ ಬಗ್ಗೆ ತಪ್ಪು ಮನೋಭಾವವನ್ನು ಅವರು ಹೊಂದಿರುವುದರಿಂದಲೇ. ಒಬ್ಬ ವ್ಯಕ್ತಿಯು ಇತರ ಧರ್ಮಗಳ ಬಗ್ಗೆ ಹೊಂದಿರುವ ಮನೋಭಾವವು ಹಲವಾರು ಸಂಗತಿಗಳ ಮೇಲೆ ಆಧಾರಿತವಾಗಿರುತ್ತದೆ. ಪಾಶ್ಚಾತ್ಯ ವಿದ್ವಾಂಸರು ಮುಖ್ಯವಾಗಿ ಈ ಮೂರು ಮನೋಭಾವಗಳನ್ನು ಗುರುತಿಸುತ್ತಾರೆ. ೧. ಪ್ರತ್ಯೇಕತಾ ಮನೋಭಾವ (Excluisvism), ೨. ಅಂತರ್ಗತ ಮನೋಭಾವ (Inclusivism) ೩. ಬಹುತ್ವ ಅಥವಾ ಅನೇಕತ್ವ ಮನೋಭಾವ (Pluralism).

೧. ಪ್ರತ್ಯೇಕತಾ ಮನೋಭಾವ (Excluisvism)

ಪ್ರತ್ಯೇಕತಾ ಮನೋಭಾವವೆಂದರೆ, “ನನ್ನ ಧರ್ಮವೊಂದೇ ಸತ್ಯ ಮತ್ತು ಮಿಕ್ಕೆಲ್ಲ ಧರ್ಮಗಳೂ ಅಸತ್ಯ” ಎಂಬ ಅಭಿಪ್ರಾಯ. ಈ ಮನೋಭಾವದ ಪ್ರಕಾರ ಸತ್ಯದ ಪ್ರಕಾಶನವು ಒಂದೇ ಆಗಿರಲು ಸಾಧ್ಯ ಮತ್ತು ಮೋಕ್ಷಕ್ಕೆ ಇರುವುದು ಒಂದೇ ದಾರಿ.

೧೮೯೩ ನೆಯ ಇಸವಿಯಲ್ಲಿ ಅಮೆರಿಕೆಯ ಷಿಕಾಗೋ ನಗರದಲ್ಲಿ ವಿಶ್ವಧರ್ಮ ಸಮ್ಮೇಳನವು ಜರುಗುವುದಕ್ಕಿಂತ ಮುಂಚೆ ಪ್ರಚಲಿತವಾಗಿದ್ದ ಅಭಿಪ್ರಾಯ ಇದೇ ಆಗಿತ್ತು. ಈಗಲೂ ಕೆಲವು ಧರ್ಮಗಳು ಮತ್ತು ಕೆಲವು ಧರ್ಮಗಳ ಒಳಪಂಗಡಗಳು ಈ ಅಭಿಪ್ರಾಯವನ್ನೇ ಹೊಂದಿವೆ. ಕ್ರೈಸ್ತಧರ್ಮದಲ್ಲಿ ಈ ಅಭಿಪ್ರಾಯವು `ಚರ್ಚಿನ ಹೊರಗಡೆ ಮುಕ್ತಿಯು ಇಲ್ಲ’ ಎಂಬ ನಂಬಿಕೆಯಲ್ಲಿ ವ್ಯಕ್ತಗೊಂಡಿತು. ಕಳೆದ ಶತಮಾನದ ಮೊದಲ ದಶಕಗಳಲ್ಲಿ ಈ ಬಗೆಯ ಪ್ರತ್ಯೇಕತಾ ಮನೋಭಾವವನ್ನು ಪ್ರಬಲವಾಗಿ ಸಮರ್ಥಿಸಿದವರೆಂದರೆ ಕಾರ್ಲ್ ಬರ್ತ್, ಎಮಿಲಿ ಬ್ರುನ್ನರ್ ಮತ್ತು ಹೆಂಡ್ರಿಕ್ ಕ್ರೈಮರ್. ಆದರೆ ಕ್ಯಾಥೊಲಿಕ್ ಚರ್ಚಿನ ಎರಡನೆಯ ವ್ಯಾಟಿಕನ್ ಸಮಾವೇಶ ಮತ್ತು ವಿಶ್ವ ಚರ್ಚುಗಳ ಸಂಘಟನೆಯ ರಚನೆಯ ನಂತರ ಈ ಅಭಿಪ್ರಾಯವು ಕ್ರೈಸ್ತಧರ್ಮದಲ್ಲಿ ಚಾಲ್ತಿಯಲ್ಲಿಲ್ಲ ಎಂದೇ ಹೇಳಬಹುದು. ಅದರಂತೆಯೇ, ಎಲ್ಲ ಧರ್ಮಗಳಿಗೆ ಸೇರಿದ, ಉದಾರ ಮನೋಭಾವದ ಜನರೆಲ್ಲರೂ ಈ ಬಗೆಯ ಸಂಕುಚಿತ ಅಭಿಪ್ರಾಯವನ್ನು ತ್ಯಜಿಸಿದ್ದಾರೆ ಎನ್ನಬಹುದು.

ಪ್ರತ್ಯೇಕತಾ ಮನೋಭಾವವು ಉಗ್ರ ಸಾಮಾಜಿಕ ಅಭಿವ್ಯಕ್ತಿಯನ್ನು ಕಂಡುಕೊಂಡಾಗ ಅದು ‘ಮೂಲಭೂತವಾದ’ ವಾಗುತ್ತದೆ. (fundamentalism). ವಿವಿಧ ಧರ್ಮಗಳಲ್ಲಿ ಈ ಮೂಲಭೂತವಾದವು ಉಲ್ಬಣಗೊಳ್ಳುತ್ತಿದ್ದು, ಕೆಲವು ಮೂಲಭೂತವಾದೀ ಗುಂಪುಗಳ ‘ತೀವ್ರವಾದ’ ದ ಮತ್ತು ‘ಉಗ್ರವಾದ’ ದ ವಿಧಾನಗಳು ವರ್ತಮಾನ ಕಾಲದ ಜಾಗತಿಕ ಶಾಂತಿ, ಸ್ನೇಹಭಾವ ಮತ್ತು ಸಮೃದ್ಧಿಗಳಿಗೆ ಪ್ರಧಾನ ಅಡ್ಡಿಯಾಗಿ ಪರಿಣಮಿಸಿವೆ.

೨. ಅಂತರ್ಗತ ಮನೋಭಾವ (Inclusivism)

ಅಂತರ್ಗತ ಮನೋಭಾವವೆಂದರೆ, “ನನ್ನ ಧರ್ಮವೊಂದೇ ಸತ್ಯ. ಆದರೆ, ಇತರ ಧರ್ಮಗಳು ಅಸತ್ಯವೇನಲ್ಲ, ಏಕೆಂದರೆ ಅವೆಲ್ಲವೂ ನನ್ನ ಧರ್ಮದಲ್ಲಿಯೇ ಅಂತರ್ಗತವಾಗಿದೆ” ಎಂಬ ಧೋರಣೆ. ತನ್ನ ಸ್ವಂತ ಧರ್ಮದ ಸತ್ಯಪ್ರಕಾಶನವು ಸಂಪೂರ್ಣ, ಪರಿಪೂರ್ಣ ಮತ್ತು ಅಂತಿಮ. ಇತರ ಧರ್ಮಗಳಲ್ಲಿ ಅದು ಅಸಂಪೂರ್ಣ , ಅಪರಿಪೂರ್ಣ ಮತ್ತು ಆನುಷಂಗಿಕ. ಇತರ ಧರ್ಮಗಳು ತನ್ನ ಧರ್ಮವನ್ನು ಅರಿತುಕೊಳ್ಳಲು ಮತ್ತು ಒಪ್ಪಿಕೊಳ್ಳಲು ಇರುವ ತಯಾರಿಗಳು ಮಾತ್ರ – ಇದು ಈ ಮನೋಭಾವವುಳ್ಳವರ ನಿಲುವು.

ಎಲ್ಲಾ ವಿಶ್ವಧರ್ಮಗಳಲ್ಲಿ ಈ ಬಗೆಯ ಅಂತರ್ಗತ ಮನೋಭಾವವನ್ನು ಒಂದಲ್ಲ ಒಂದು ರೂಪದಲ್ಲಿ ಕಾಣಬಹುದು. ಹಿಂದೂಧರ್ಮದಲ್ಲಿ, ಭಗವದ್ಗೀತೆಯಲ್ಲಿ ಬರುವ ಶ್ರೀಕೃಷ್ಣನ ನುಡಿಯನ್ನು ಈ ಬಗೆಯ ಅಂತರ್ಗತ ಮನೋಭಾವಕ್ಕೆ ಉದಾಹರಣೆಯಾಗಿ ಉಲ್ಲೇಖಿಸಬಹುದು. ‘ಒಬ್ಬ ವ್ಯಕ್ತಿಯು ಯಾವ ಮಾರ್ಗದಲ್ಲಿ ನನ್ನನ್ನು ಪಡೆಯಲು ಇಚ್ಛಿಸುತ್ತಾನೋ ನಾನು ಆ ಮಾರ್ಗದಲ್ಲಿಯೇ ಅವನಿಗೆ ಅನುಗ್ರಹಿಸುತ್ತೇನೆ. ಎಲ್ಲಾ ಕಡೆಯೂ ಜನ ಅನುಸರಿಸುವುದು ನನ್ನನ್ನು ಸೇರುವ ಮಾರ್ಗ ವನ್ನೇ” ಕ್ರಿ.ಶ. ನಾಲ್ಕನೆಯ ಶತಮಾನದಷ್ಟು ಪೂರ್ವದಲ್ಲಿಯೆ, ಸೈಂಟ್ ಅಗಸ್ಟೈನ್ ನುಡಿದ ಈ ಮಾತುಗಳಲ್ಲಿ, ಮುಂದಿನ ದಿನಗಳಲ್ಲಿ ಕ್ರೈಸ್ತಧರ್ಮದಲ್ಲಿ ಅಂತರ್ಗತ ಮನೋಭಾವವು ಕಾಣಬರುವುದು ಎಂಬ ನಿರೀಕ್ಷೆಯನ್ನು ಕಾಣುತ್ತೇವೆ: “ವಾಸ್ತವ ಸ್ಥಿತಿಯೇನೆಂದರೆ, ನಾವೀಗ ಕ್ರೈಸ್ತಧರ್ಮವೆಂದು ಹೇಳುವ (ಶ್ರದ್ಧೆಯು) ಪುರಾತನ ಜನರಲ್ಲಿಯೇ ರೂಢಿಯಿತ್ತು. ಅದು ಮಾನವ ಜನಾಂಗದ ಆದಿಯಿಂದಲೂ, ಏಸುಕ್ರಿಸ್ತನು ಭೌತಿಕ ದೇಹದಲ್ಲಿ ಕಾಣಿಸಿಕೊಳ್ಳುವವರೆಗೆ, ಎಂದೂ ಇಲ್ಲದೇ ಇರಲಿಲ್ಲ. ಹೀಗಾಗಿ, ಅದಾಗಲೇ ಅಸ್ತಿತ್ವದಲ್ಲಿದ್ದ ನೈಜ ಧರ್ಮವನ್ನೇ ಈಗ ಕ್ರೈಸ್ತಧರ್ಮವೆಂದು ಕರೆಯಲಾಗುತ್ತಿದೆ.”

ಆಧುನಿಕ ಯುಗದಲ್ಲಿ, ಅಂತರ್ಗತ ಮನೋಭಾವವು ಒಂದು ನಿರ್ದಿಷ್ಟ ಅಂತರಧರ್ಮೀಯ ಮನೋಭಾವವಾಗಿ ಪರಿಣಮಿಸಿತು. ಇದಕ್ಕೆ ಜರ್ಮನಿಯ ಕ್ಯಾಥೊಲಿಕ್ ದೈವಶಾಸ್ತ್ರಜ್ಞನಾದ ಕಾರ್ಲ್ ರಹನೆರ್ ಎನ್ನುವವರು ೧೯೬೧ ರಲ್ಲಿ ಒಂದು ರೂಪು ರೇಖೆಯನ್ನು ಕೊಟ್ಟರು. ಅವರ ಪ್ರಕಾರ ಎಲ್ಲ ಧರ್ಮಗಳ ಮೂಲಕ ಧರ್ಮಕಾರ್ಯವೆಸಗುತ್ತಿರುವವನು ಏಸುಕ್ರಿಸ್ತನೇ; ಇತರೆಲ್ಲ ಧರ್ಮದವರು ಅವರ ಆಚರಣೆಗಳ ಮೂಲಕ ಆರಾಧಿಸುತ್ತಿರುವುದು ಏಸುಕ್ರಿಸ್ತನನ್ನೇ. ಆದರೆ ಅವರಿಗೆ ಅದರ ಅರಿವಿಲ್ಲ ಅಷ್ಟೆ. ಹೀಗಾಗಿ ರಹನೆ‌ರ್ ಇತರ ಧರ್ಮಗಳ ಅನುಯಾಯಿಗಳನ್ನು ಹೆಸರಿಸುವುದು, ‘ಅಜ್ಞಾತ ಕ್ರೈಸ್ತರು’ ಎಂದೇ. ಹ್ಯಾನ್ಸ್ ಕುಂಗ್, ಹೆನ್ರಿ ಲೆ ಸೌಕ್ಸ್ (ಅಭಿಷಿಕ್ತಾನಂದ), ಡಾಮ್ ಬೆಡೆ ಗ್ರಿಫಿತ್ಸ್, ಕ್ಲೌಸ್ ಕ್ಲೊಸ್ಟರ್ ಮೈರ್ ಮತ್ತಿತರ ದೈವಶಾಸ್ತ್ರಜ್ಞರು ಮತ್ತು ಚಿಂತಕರು ಈ ಚಿಂತನಾ ವಿಧಾನವನ್ನು ಬೆಂಬಲಿಸಿದ್ದಾರೆ.

ಸ್ವಾಮಿ ವಿವೇಕಾನಂದರ ಕೆಲವು ಹೇಳಿಕೆಗಳೂ ಕೂಡ ಅವರು ಮೇಲಿನ ಮನೋಭಾವನೆಯ ಪ್ರತಿಪಾದಕರೇನೋ ಎಂಬ ಭಾವನೆಯನ್ನು ನಮ್ಮಲ್ಲಿ ಮೂಡಿಸುತ್ತದೆ. ಅಂತಹ ಒಂದು ಹೇಳಿಕೆ ಹೀಗಿದೆ: “ ನಾನು ಹೊಸದಾಗಿ ಕಂಡುಹಿಡಿದಿರುವುದನ್ನು ನಿನಗೆ ಹೇಳುತ್ತೇನೆ. ವೇದಾಂತದಲ್ಲಿ ಧರ್ಮದ ತಿರುಳೆಲ್ಲ ಅಡಕವಾಗಿವೆ. ಅಂದರೆ, ಅವೆಲ್ಲಾ ದ್ವೈತ. ವಿಶಿಷ್ಟಾದ್ವೈತ, ಅದ್ವೈತ ಈ ಮೂರು ಸ್ಥಿತಿಗಳಲ್ಲಿರುವುದು. ಇವು ಒಂದರ ಮೇಲೊಂದು ಬರುವುವು. ಮಾನವನ ಆತ್ಮವಿಕಾಸದ ಬೆಳವಣಿಗೆಯ ಮೂರು ಸ್ಥಿತಿಗಳು”

ಆದರೆ ನಾವು ಈ ಲೇಖನದ ಮುಂದಿನ ಭಾಗದಲ್ಲಿ ಕಾಣುವಂತೆ, ಸ್ವಾಮೀಜಿ ವೇದಾಂತ ಎಂಬ ಪದವನ್ನು ಇನ್ನೂ ವ್ಯಾಪಕ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಆದ್ದರಿಂದ ಅವರು ಅಂತರ್ಗತ ಮನೋಭಾವವನ್ನು ಹೊಂದಿದ್ದರು ಎಂದು ಪರಿಗಣಿಸಲಾಗದು.                                              (ಮುಂದುವರಿಯುವುದು)

ಆಕರಗಳು:

೧. ಸ್ವಾಮಿ ಗಂಭೀರಾನಂದ, Sri Sarada Devi, the Holy Mother (Chennai, Sri Ramakrishna Math) p.463

೨. ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ, ೩:೧೮೬

೩. ಈ ಎಲ್ಲ ಮನೋಭಾವಗಳ ವಿವರಣಾತ್ಮಕ ಚರ್ಚೆಗೆ ನೋಡಿ. Alan Race. Christians and Religious Pluralism (London: SCM Press, 1993 )

೪. ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ | ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ||     (ಭಗವದ್ಗೀತೆ, ೪:೧೧ )

೫. ಅಂತರ್ಗತ ಮನೋಭಾವದ ಬಗೆಗಿನ ಈ ಚರ್ಚೆಗೆ ಆಧಾರ Alan Race ಅವರ ಹಿಂದೆಯೆ ಉದ್ಧರಿಸಿದ ಗ್ರಂಥ.

೬. ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ, ೪:೨೮೬.

(ಮೂಲ: ವಿವೇಕಪ್ರಭ ಫೆಬ್ರವರಿ 2008)


ಶ್ರೀರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಧರ್ಮಸಮನ್ವಯ (continued) ಮಾರ್ಚ್

ಹಿಂದಿನ ಸಂಚಿಕೆಯಲ್ಲಿ

ಶ್ರೀರಾಮಕೃಷ್ಣರು ಸರ್ವಧರ್ಮಸಮನ್ವಯಾಚಾರ್ಯರು. ಅವರಲ್ಲಿ ಧರ್ಮಸಮನ್ವಯದ ಭಾವನೆಯು ಉಗಮವಾಗಿದ್ದು ನೇರ ಆನುಭಾವಿಕ ರೂಪದಲ್ಲಿ. ಅವರಲ್ಲಿ ಅದು ವೇದ್ಯವಾಗಿದ್ದು. ಅಂತರಂಗದ ಅನ್ವೇಷಣೆ ಮತ್ತು ವೈಯಕ್ತಿಕ ಪ್ರಕಾಶನದ ರೂಪದಲ್ಲಿ. ಪಾಶ್ಚಾತ್ಯ ವಿದ್ವಾಂಸರು ಮುಖ್ಯವಾಗಿ ಮೂರು ಮನೋಭಾವಗಳನ್ನು ಗುರುತಿಸುತ್ತಾರೆ. ೧. ಪ್ರತ್ಯೇಕತಾ ಮನೋಭಾವ – ಇದು ಜಾಗತಿಕ ಶಾಂತಿಗೆ ಪ್ರಧಾನ ಅಡ್ಡಿಯಾಗಿದೆ. ೨. ಅಂತರ್ಗತ ಮನೋಭಾವ- ಇದನ್ನು ಕ್ರೈಸ್ತ ಮತ್ತು ಹಿಂದೂಧರ್ಮಗಳಲ್ಲಿ ಕಾಣಬಹುದು. ೩. ಬಹುತ್ವ ಅಥವಾ ಅನೇಕತ್ವ ಮನೋಭಾವ – (ಇದರ ಬಗ್ಗೆ ಈ ತಿಂಗಳು ಓದಿ)

೧. ಬಹುತ್ವ ಅಥವಾ ಅನೇಕತ್ವ ಮನೋಭಾವ (Pluralism)

ಬಹುತ್ವ ವಾದವು ಎಲ್ಲ ಧರ್ಮಗಳೂ ಸತ್ಯ, ಸತ್ಯಪ್ರಕಾಶನಗಳು ಬಹುವಾಗಿವೆ ಮತ್ತು ಸ್ವರ್ಗಕ್ಕೆ ಅಥವಾ ಮೋಕ್ಷಕ್ಕೆ ಹಲವು ದಾರಿಗಳಿವೆ ಎಂಬುದನ್ನು ಎತ್ತಿ ಹಿಡಿಯುತ್ತದೆ. ಬಹುತ್ವ ವಾದ ಎನ್ನುವುದು ಒಂದು ತಾತ್ವಿಕ ಪರಿಕಲ್ಪನೆಯಾಗಿದ್ದು. ಸತ್ಯವು ಅತ್ಯುನ್ನತ ಮಟ್ಟದಲ್ಲಿ ಒಂದಕ್ಕಿಂತ ಹೆಚ್ಚು ರಚನೆ ಉಳ್ಳದ್ದು ಮತ್ತು ಮಾನವ ಚಿಂತನೆಯು ಈ ರಚನೆಗಳನ್ನು ಬಹು ವೈವಿಧ್ಯಮಯ ಮಾರ್ಗಗಳಲ್ಲಿ ಸಮೀಪಿಸಬಹುದು ಎಂಬ ಅರ್ಥವುಳ್ಳದ್ದಾಗಿದೆ. ವಿಶ್ವಧರ್ಮಗಳಿಗೆ ಸಂಬಂಧಪಟ್ಟ ಹಾಗೆ ಬಹುತ್ವ ಮನೋಭಾವವನ್ನು, ಪ್ರೊ. ಜಾನ್ ಹಿಕ್ ಅವರು ಈ ಮಾತುಗಳಲ್ಲಿ ವಿವರಿಸಿರುವರು: ‘ಅವುಗಳ ಮಧ್ಯೆ ಇದ್ದುಕೊಂಡು ಅಥವಾ ಅವುಗಳ ದಾರಿಯಲ್ಲಿ ನಡೆದು, ಸ್ತ್ರೀಯರು ಮತ್ತು ಪುರುಷರು ಸ್ವರ್ಗಗತಿ/ಮೋಕ್ಷ/ಸಾರ್ಥಕತೆಯನ್ನು ಹೊಂದಲು ಸಾಧ್ಯವಾಗುವ ಮೋಕ್ಷಮಾರ್ಗದ ಪರ್ಯಾಯ ಅವಕಾಶ ಅಥವಾ ಆಯಾಮಗಳೆಂದು (space), ಮಹಾನ್ ಧಾರ್ಮಿಕ ಸಂಪ್ರದಾಯಗಳನ್ನು ಪರಿಗಣಿಸಬೇಕು.’

ಬಹುತ್ವವಾದವು ಪ್ರತಿಯೊಂದು ಧರ್ಮದ ವಿಶೇಷತೆಯನ್ನು ಕಡೆಗಣಿಸದೆ. ಅವುಗಳ ನಡುವೆ ಪರಸ್ಪರ ಅರಿವು ಮತ್ತು ಸಾಮರಸ್ಯಗಳನ್ನು
ನಿರ್ಮಾಣ ಮಾಡುವ ವಿಧಾನವಾಗಿದೆ. ಇದನ್ನು ಅರ್ಥಮಾಡಿಕೊಳ್ಳಲು. ನಾವು ಉದಾಸೀನತಾ ವಾದ (Indifferentism) (ಇದರ ಬಗ್ಗೆ ಈ ಲೇಖನದ ಆರಂಭದಲ್ಲಿಯೇ ಪ್ರಸ್ತಾಪ ಮಾಡಲಾಗಿದೆ — ಜನವರಿ ೨೦೦೮ ರ ಸಂಚಿಕೆ ಪುಟ ೪೦ ನೋಡಿ) ಮತ್ತು ಸಾಪೇಕ್ಷವಾದದಿಂದ (Relativism) ಬೇರ್ಪಡಿಸಿ ನೋಡಬೇಕು. ಇವೆರಡೂ ತೀವ್ರ ವಾದಗಳು. ಬಹುತ್ವ ವಾದವು ಧರ್ಮಗಳ ಮಧ್ಯೆ ಇರುವ ವೈವಿಧ್ಯತೆಗಳು ಸತ್ಯವಾದವು ಮತ್ತು ನಿತ್ಯವಾದವು ಎಂದು ಮಾನ್ಯ ಮಾಡುತ್ತದೆ. ಅಂದರೆ, ಪ್ರತಿಯೊಂದು ಧರ್ಮದ ಸ್ವಾಯತ್ತತೆ, ಘನತೆ ಮತ್ತು ಸಮಂಜಸತೆಗಳನ್ನು ಮಾನ್ಯ ಮಾಡಿದ ಹಾಗಾಯಿತು. ಪ್ರೊ. ಜೇಮ್ಸ್ ಎಂ. ಲೀ ಹೇಳುವ ಹಾಗೆ, “ಬಹುತ್ವ ವಾದವು ವೈವಿಧ್ಯಮಯ ಧರ್ಮಗಳು ಒಂದೆಡೆ ಸೇರಿ, ಒಂದು ಸಮಾನಭಾವದಲ್ಲಿ ಲೀನವಾಗುವ ಕೇಂದ್ರವಲ್ಲ. ಅದಕ್ಕೆ ಬದಲಾಗಿ, ಇದೊಂದು ಚಿತ್ತಾರದ ಹಾಗಿದೆ. ಅದರಲ್ಲಿ ಎಲ್ಲ ಧರ್ಮಗಳೂ ತಮ್ಮ ಹಕ್ಕುಬಾಧ್ಯ, ಸ್ವತಂತ್ರ ಮತ್ತು ಪರಸ್ಪರ ಪ್ರಭಾವ ಬೀರಬಲ್ಲ ಸ್ಥಾನಗಳನ್ನು ಆಕ್ರಮಿಸಿಕೊಂಡಿರುತ್ತವೆ. ಇದು ಭಗವತ್ತತ್ತ್ವದ ಪರಿಪೂರ್ಣ ಚಿತ್ರವನ್ನು ಪ್ರದರ್ಶಿಸುತ್ತದೆ. ಒಂದು ಧರ್ಮವು, ಅದೆಷ್ಟೇ ವಸ್ತುನಿಷ್ಠ ಶ್ರೇಷ್ಠತೆಯನ್ನು ಗಳಿಸಿದ್ದರೂ, ತಾನಾಗಿಯೇ ಸಾಧಿಸಬಹುದಾಗಿರುವುದಕ್ಕಿಂತಲೂ ಹೆಚ್ಚಿನ ಸಮರ್ಪಕತೆಯನ್ನು ಈ ಪೂರ್ಣದರ್ಶನವು ಹೊಂದಿರುತ್ತದೆ.”

ಹೀಗೆಂದ ಮಾತ್ರಕ್ಕೆ ವಿವಿಧ ಧರ್ಮಗಳು ಸರ್ವಥಾ ಬೇರೆಬೇರೆ ಯಾದವುಗಳು. ಸಾಪೇಕ್ಷವಾದುವುಗಳು ಹಾಗೂ ಆತ್ಯಂತಿಕ ಸತ್ಯವೆಂಬುದು ಇಲ್ಲವೇ ಇಲ್ಲ – ಎಂದು ಅರ್ಥವಲ್ಲ. ಆತ್ಯಂತಿಕ ಸತ್ಯ ಅಥವಾ ಪರತತ್ತ್ವವೆಂಬುದು ಇಲ್ಲದಿದ್ದರೆ, ಪ್ರತಿಯೊಂದು ಧರ್ಮವೂ ಒಂದು ದ್ವೀಪದಂತೆ ಏಕಾಂಗಿಯಾಗಿರುತ್ತಿತ್ತು. ಹಾಗಾದಾಗ, ಉನ್ನತ ಸ್ತರದಲ್ಲಿ ಅವುಗಳ ನಡುವೆ ಪರಸ್ಪರ ಸಂವಹನ ಸಾಧ್ಯವಾಗುತ್ತಿರಲಿಲ್ಲ. ಪ್ರೊ. ಗ್ರಾಂಟ್ ಎಸ್. ಶಾಕ್ಲಿ ಹೇಳುವಂತೆ, “ಬಹುತ್ವ ವಾದವೆಂದರೆ. ವಿಶ್ಲೇಷಣಾ ವಿಧಾನ. ಇದು (ಇಂದ್ರಿಯಾತೀತ ದರ್ಶನಗಳ) ವಿಮರ್ಶನಾತ್ಮಕ ಮೌಲ್ಯಮಾಪನ (Critical evaluation). ಕೇಂದ್ರೀಕರಿಸುವಿಕೆ (focussing) ಮತ್ತು ವಿಷಯೀಕರಣಗಳಿಗೆ (objectifying) ಸಹಾಯ ಮಾಡುತ್ತದೆ. ನಿರಪೇಕ್ಷ ತತ್ತ್ವಗಳು (absolutes), ಸರ್ವಾನ್ವಯಿಗಳು (universals) ಮತ್ತು ವಿಶೇಷ ದರ್ಶನಗಳು (revelations) – ಇವೆಲ್ಲ ತಮಗೆ ತಾವೇ ಪ್ರಮಾಣೀಭೂತವಾಗಬಲ್ಲುವು. ( ದೇವರು, ಸ್ವರ್ಗ, ನೀತಿ, ದರ್ಶನ. ಅನುಭಾವ ಮುಂತಾದವು ಈ ವರ್ಗಕ್ಕೆ ಸೇರುತ್ತವೆ. -ಸಂ.) ಅವುಗಳಲ್ಲಿ ನಂಬಿಕೆ ಇಟ್ಟವರಿಗೆ ಅವು ಪ್ರಮಾಣೀಭೂತ ಸಂಗತಿಗಳೇ ಆಗಿವೆ. ಅವುಗಳೆಲ್ಲವೂ ಒಬ್ಬನೇ ವ್ಯಕ್ತಿಯಿಂದ ಅರಿಯಲಾಗದ ಒಂದು ವ್ಯಾಪಕ ಸತ್ಯದ ಅಥವಾ ಪರಿಪೂರ್ಣ ಸತ್ಯದ ತುಣುಕುಗಳು.”

ಬಹುತ್ವ ಮನೋಭಾವವು ಬರಿಯ ದೈವಶಾಸ್ತ್ರೀಯ ವಿಷಯ ಮಾತ್ರವಲ್ಲ. ಹಾಗೆ ನೋಡಿದರೆ, ಬಹುತ್ವ ವಾದದಲ್ಲಿ ಪ್ರಾಯೋಗಿಕ ಆವಶ್ಯಕತೆಗಳೇ ಸಿದ್ಧಾಂತಗಳಿಗಿಂತ ಬಹು ಮುಖ್ಯವಾಗುತ್ತವೆ. ಪ್ರೊ. ಶಾಕ್ಲಿ ಹೇಳುತ್ತಾರೆ, ” ಬಹುತ್ವ ವಿಧಾನದ ಸ್ವರೂಪ ಮತ್ತು ಬಗೆಗಳಾದರೂ – ಏನು? ಮೂಲಭೂತವಾಗಿ ಅದು ಧರ್ಮ ಅಥವಾ ದೈವಶಾಸ್ತ್ರದ ಸ್ವಭಾವ ಮತ್ತು ಅರ್ಥವನ್ನು ತಾನಿರುವ ಸಾಂಸ್ಕೃತಿಕ, ನೈತಿಕ, ಜನಾಂಗೀಯ ಮತ್ತು ಭಾಷಾವಾರು ವೈವಿಧ್ಯತೆಯ ಪರಿಸ್ಥಿತಿಯ ನಡುವೆಯೇ ಹೆಚ್ಚು ವ್ಯಾಪಕವಾಗಿಯೂ ಕಾರ್ಯಶೀಲವಾಗಿಯೂ ಅರಿಯಲು ಯತ್ನಿಸುತ್ತದೆ. ಅದಲ್ಲದೆ ವ್ಯಕ್ತಿಗಳು ಇನ್ನೂ ಹೆಚ್ಚಿನ ಸೃಜನಾತ್ಮಕತೆಯಿಂದಲೂ ವೈವಿಧ್ಯಮಯವಾಗಿಯೂ ಒಟ್ಟಾಗಿ ಬಾಳುವ ವಿಧಾನಗಳನ್ನು ಹುಡುಕುತ್ತದೆ; ಆರಿಸಿದ ಕೆಲವು ಸಾಮಾನ್ಯ ಧ್ಯೇಯಗಳನ್ನು ಸಾಂಘಿಕವಾಗಿ ಸಾಕಾರಗೊಳಿಸಿಕೊಳ್ಳುವ ಮಾರ್ಗಗಳನ್ನು ರೂಪಿಸುತ್ತದೆ.”

ಧಾರ್ಮಿಕ ಕ್ಷೇತ್ರದಲ್ಲಿ ಬಹುತ್ವ ಮನೋಭಾವವನ್ನು ಪಾಶ್ಚಾತ್ಯ ಚಿಂತನೆಯಲ್ಲಿ ಪರಿಚಯಿಸಿದವರೆಂದರೆ ಮುಖ್ಯವಾಗಿ ಅರ್ನಾಲ್ಡ್ ಟಾಯ್ನಬಿ, ಡಬ್ಲ್ಯು ಇ ಹಾಕಿಂಗ್ ಮತ್ತು ಎರ್ ನಸ್ಟ್ ಟ್ರೊಯಲ್ ಟಸ್ಚ್. ಈ ಭಾವನೆಗೆ ಗಟ್ಟಿಯಾದ ಅಡಿಪಾಯವನ್ನು ಕೊಟ್ಟವರೆಂದರೆ, ಪೌಲ್ ತಿಲಿಚ್, ಎಲ್ಫ್ರೆಡ್ ಕಾಂಟ್ವೆಲ್ ಸ್ಮಿತ್ ಮತ್ತು ಜಾನ್ ಹಿಕ್, ಧಾರ್ಮಿಕ ಬಹುತ್ವ ವಾದವನ್ನು ಪ್ರತಿಪಾದಿಸಿದ ಪ್ರೊ. ಜಾನ್ ಹಿಕ್ ಅವರು ಇತ್ತೀಚಿಗೆ ಪಾಶ್ಚಾತ್ಯ ದೇಶಗಳಲ್ಲಿ ಕಂಡು ಬರುವ ಬಹುತ್ವ ಆಂದೋಲನಕ್ಕೆ ಮುಖ್ಯ ಕಾರಣಕರ್ತರು. ತಾವು ನಿರ್ಮಿಸಿದ ಬಹುತ್ವ ಯೋಜನಾ ಪ್ರಕಾರವನ್ನು ಅವರು ‘ಕೊಪರ್ನಿಕಸ್ ನ ಕ್ರಾಂತಿ’ ಎಂದು ಬಣ್ಣಿಸುತ್ತಾರೆ. ಅವರು ಹೇಳುತ್ತಾರೆ: “ಧರ್ಮಜಗತ್ತೆಂಬುವುದು ಒಬ್ಬನೇ ಭಗವಂತನನ್ನೇ ಕೇಂದ್ರವಾಗಿ ಉಳ್ಳದ್ದು ಎಂದು ಅರಿಯಬೇಕು. ಭಗವಂತನು ಸೂರ್ಯನಿದ್ದಂತೆ. ಅವನೇ ಜೀವ ಮತ್ತು ಬೆಳಕುಗಳ ಮೂಲ ಆಕರ. ಅವನನ್ನೇ (ಸೂರ್ಯನನ್ನು ಗ್ರಹಗಳು ಹೇಗೋ ಹಾಗೆ) ಎಲ್ಲ ಧರ್ಮಗಳೂ ತಮ್ಮದೇ ಆದ ರೀತಿಯಲ್ಲಿ ಪ್ರತಿಫಲಿಸುತ್ತವೆ”.

ಅಮೆರಿಕೆಯ ಅಲಬಾಮಾ ವಿಶ್ವವಿದ್ಯಾನಿಲಯದ ಪ್ರೊ. ಜೇಮ್ಸ್ ಮೈಕೆಲ್ ಲೀ ಅವರು ಧಾರ್ಮಿಕ ಬಹುತ್ವ ವಾದದ ಎಂಟು ಮೂಲ ಭೂತ ತತ್ತ್ವಗಳನ್ನು ನಿರೂಪಿಸಿದ್ದಾರೆ. – ಅವುಗಳ ಭಾವವನ್ನು ಸಂಕ್ಷಿಪ್ತವಾಗಿ ಇಲ್ಲಿ ನೀಡಲಾಗಿದೆ:

೧. ಪರಮ ಸತ್ಯವು ಒಂದು ಅವ್ಯಯವಾದ ರಹಸ್ಯವಾಗಿದೆ; ಅದು ವಿವಿಧ ಧರ್ಮಗಳಲ್ಲಿ ವಿವಿಧ ದರ್ಶನಾನುಭವಗಳ ಮೂಲಕ ಅಭಿವ್ಯಕ್ತಗೊಳ್ಳುತ್ತದೆ.

೨. ಪ್ರತಿಯೊಂದು ಧರ್ಮವೂ ಭಗವದ್ದರ್ಶನದ ಒಂದು ಪ್ರತ್ಯೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರತಿಕ್ರಿಯೆಯಾಗಿದೆ.

೩. ಯಾವುದೇ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದು ಬಂದಿದ್ದರೂ ಪ್ರತಿಯೊಬ್ಬನೂ ಭಗವಂತನನ್ನು ತನ್ನದೇ ಆದ ವೈಯಕ್ತಿಕ ಬಗೆಯಲ್ಲಿ ಸಂಧಿಸುತ್ತಾನೆ.

೪. ಎಲ್ಲ ಧರ್ಮಗಳ ಅನುಯಾಯಿಗಳನ್ನೂ, ಅವರ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ಹಾಗೆ, ಸಮಾನವಾಗಿ ಕಾಣಬೇಕು. ಹಾಗೆಂದು, ಎಲ್ಲ ಧರ್ಮಗಳೂ ಸಾಮಾನವಾದುವು ಎಂದು ಇದರ ಅರ್ಥವಲ್ಲ.)

೫. ಇತರ ಧರ್ಮಗಳ ಸಿದ್ಧಾಂತಗಳನ್ನು ಮತ್ತು ಆಚರಣೆಗಳನ್ನು ಅರ್ಥಮಾಡಿಕೊಳ್ಳುವುದು ಆವಶ್ಯಕ.

೬. ಪ್ರತಿಯೊಂದು ಧರ್ಮವನ್ನೂ ಅದರ ಅನುಯಾಯಿಗಳು ಹೇಗೆ ಕಾಣುತ್ತಾರೋ ಹಾಗೆಯೇ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು; ಅಹಿತಕಾರವಾದ ಹೋಲಿಕೆ ಇರಬಾರದು.

೭. ಪ್ರತಿಯೊಂದು ಧರ್ಮದ ಅನುಯಾಯಿಗಳೂ ಇತರ ಧರ್ಮದ ಅನುಯಾಯಿಗಳೊಡನೆ ಸಂವಾದದ ಮೂಲಕ ಮುಕ್ತವಾಗಿ ಪರಸ್ಪರ
ಬೆರೆಯಬೇಕು.

೮. ಪ್ರತಿಯೊಂದು ಧರ್ಮದ ಅನುಯಾಯಿಗಳೂ ಇತರ ಧರ್ಮಗಳ ಉದಾತ್ತ ಅಂಶಗಳನ್ನು ಹೀರಿಕೊಂಡು ತಮ್ಮ ಧಾರ್ಮಿಕ ಪ್ರಜ್ಞೆಯನ್ನು ವಿಕಾಸಗೊಳಿಸಿಕೊಳ್ಳಬೇಕು.

ಮೇಲಿನ ಚರ್ಚೆಯಲ್ಲಿ ಪಾಶ್ಚಾತ್ಯ ಜಗತ್ತಿನ ದೈವಶಾಸ್ತ್ರಜ್ಞರಲ್ಲಿ ಸದ್ಯ ಪ್ರಚಲಿತವಿರುವ ಪ್ರಮುಖ ಚಿಂತನಾಸರಣಿಗಳನ್ನು ಪಟ್ಟಿ ಮಾಡಿದ್ದೇವೆ ಈ ಸಂದರ್ಭದಲ್ಲಿ ಮೂರು ಮುಖ್ಯ ವಿಷಯಗಳು ಗಮನಾರ್ಹ:

೧. ಮೊದಲನೆಯದಾಗಿ, ಧಾರ್ಮಿಕ ಬಹುತ್ವ ಮನೋಭಾವವು ದೈವಶಾಸ್ತ್ರಜ್ಞರಿಂದಾಗಲೀ ಚರ್ಚ್‌ಗಳ ಅಧಿಕಾರಿಗಳಿಂದಾಗಲೀ
ನಿರ್ಧರಿಸಬೇಕಾದ ವಿಷಯವಾಗಿ ಈಗ ಉಳಿದಿಲ್ಲ. ಇದೀಗ ಅದು ಸಾಮಾನ್ಯ ವ್ಯಕ್ತಿಯ ಕಳಕಳಿಯಾಗಿದೆ. ೧೯೬೦ ರಲ್ಲಿ ಅಮೆರಿಕ ಮತ್ತು ಯುರೋಪುಗಳನ್ನು  ವ್ಯಾಪಿಸಿದ ಸಾಮಾಜಿಕ ಕ್ರಾಂತಿ. ಪೌರಸ್ತ್ಯ ಆಧ್ಯಾತ್ಮಿಕ ನೇತಾರರು ಮತ್ತು ಆಧ್ಯಾತ್ಮಿಕ ಭಾವನೆಗಳು ಪಾಶ್ಚಾತ್ಯ ಜಗತ್ತನ್ನು ಪ್ರವೇಶ ಮಾಡುತ್ತಿರುವುದು, ನೈತಿಕ ಅಧಿಕಾರದ ಲೌಕಿಕೀಕರಣ ಹಾಗೂ ಇತರ ಅಂಶಗಳು- ಸಾಂಘಿಕ ಧರ್ಮಗಳು ಪಾಶ್ಚಾತ್ಯ ಜನರ ಮನಸ್ಸುಗಳ ಮೇಲೆ ಚಲಾಯಿಸುತ್ತಿದ್ದ ಅಧಿಕಾರವನ್ನು ಮೊಟಕುಗೊಳಿಸಿದೆ. ಇನ್ನೊಂದು ಕಡೆ, ಪಾಶ್ಚಾತ್ಯ ಜಗತ್ತಿನಲ್ಲಿಯೇ ವಿವಿಧ ಧರ್ಮಗಳನ್ನು ಅನುಸರಿಸುವ ವಲಸೆಗಾರರು ಅತ್ಯಧಿಕ ಸಂಖ್ಯೆಯಲ್ಲಿ ವಾಸಿಸುತ್ತಿರುವುದರಿಂದ, ಅಲ್ಲಿನ ಜನರು ಬಹುಧಾರ್ಮಿಕ ಪ್ರಜ್ಞೆಯನ್ನು ಒಪ್ಪಿಕೊಳ್ಳಲೇಬೇಕಾದ ವಾಸ್ತವ ಸನ್ನಿವೇಶ ನಿರ್ಮಾಣವಾಗಿದೆ. ಇದರ ಪರಿಣಾಮವಾಗಿ ಸಾವಿರಾರು ಜನರು ಧಾರ್ಮಿಕ ಬಹುತ್ವ ವಾದವನ್ನು ನಂಬುತ್ತಿದ್ದಾರೆ ಮಾತ್ರವಲ್ಲದೆ, ಅದನ್ನು ತಮ್ಮ ಜೀವನದಲ್ಲಿ ಅನುಷ್ಠಾನಕ್ಕೂ ತರುತ್ತಿದ್ದಾರೆ.

೨. ಇದರಿಂದ ಬಹುತ್ವ ವಾದದ ಬಗೆಗಿನ ಚರ್ಚೆಯ ಮಹತ್ವವೇನೂ ಕುಂದಿಲ್ಲ. ಜನರ ಮನೋಭಾವವು ಅವರು ಸ್ವೀಕರಿಸುವ ಶಿಕ್ಷಣ ವಿಧಾನದ ಮೇಲೆ ಬಹುತೇಕ ಅವಲಂಬಿಸಿರುತ್ತದೆ. ಆದ್ದರಿಂದ ಧಾರ್ಮಿಕ ಬಹುತ್ವ ವಾದವು ಹಲವಾರು ದೇಶಗಳಲ್ಲಿ, ಶಿಕ್ಷಣತಜ್ಞರ ಮತ್ತು ಸರ್ಕಾರಗಳ ಗಮನವನ್ನು ಸೆಳೆದಿದೆ.
ಅದಲ್ಲದೆ, ಧಾರ್ಮಿಕ ಮುಖಂಡರು ಪ್ರತ್ಯೇಕತೆಯ ಅಭಿಪ್ರಾಯಗಳಿಗೇ ಗಂಟು ಬಿದ್ದಿದ್ದರೆ, ಅವರು ಅಲ್ಪಸ್ವಲ್ಪ ಒಳಿತನ್ನು ಮಾಡುವುದಿರಲಿ, ಬಹುತೇಕ ಕೇಡನ್ನೇ ಎಸಗುತ್ತಾರೆ. ವಾಸ್ತವ ಪರಿಸ್ಥಿತಿ ಏನೆಂದರೆ, ಮೂಲಭೂತ ವಾದ ಅನೇಕ ದೇಶಗಳಲ್ಲಿ ವೃದ್ಧಿಯಾಗುತ್ತಲೇ ಇದೆ. ಸಾಮಾಜಿಕ ಸೌಹಾರ್ದತೆಗೆ ಭಂಗ ತರುವ ಈ ಸಮಸ್ಯೆಗೆ ತಕ್ಕ ಪರಿಹಾರವೆಂದರೆ ಧಾರ್ಮಿಕ ಬಹುತ್ವದ ಮೂಲಾಧಾರ ತತ್ತ್ವಗಳನ್ನು ಧಾರ್ಮಿಕ ಮುಖಂಡರ ಮನಸ್ಸುಗಳಲ್ಲಿ ಸುಭದ್ರಗೊಳಿಸುವುದೇ ಆಗಿದೆ.

೩. ಮೇಲೆ ವಿವರಿಸಿದಂತಹ ಬಹುತ್ವ ವಾದದ ಬಗೆಗಳು ಪಾಶ್ಚಾತ್ಯ ಕಲ್ಪನೆಗಳಾಗಿದ್ದು, ಪಾಶ್ಚಾತ್ಯ ಧಾರ್ಮಿಕ ಮತ್ತು ತಾರ್ಕಿಕ ಪ್ರಮೇಯಗಳ ಮೇಲೆ ಆಧಾರಿತವಾಗಿವೆ. ಆದ್ದರಿಂದ ಇವು ಭಾರತದ ಸಾಮಾಜಿಕ ಮತ್ತು ಧಾರ್ಮಿಕ ಪರಿಸ್ಥಿತಿಗೆ ಅಷ್ಟೇನೂ ಸಮಂಜಸವೆನಿಸುವುದಿಲ್ಲ.

ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ದೃಷ್ಟಿ

ಭಾರತೀಯರ ಸಾಮಾಜಿಕ ಮತ್ತು ಧಾರ್ಮಿಕ ದೃಷ್ಟಿಯು ಎರಡು ಮೂಲಭೂತ ಸಂಗತಿಗಳಿಂದ ಮೂಡಿಬಂದುದಾಗಿದೆ: ೧. ಭಾರತೀಯ ಗುಣವೈಶಿಷ್ಟ್ಯ.  ೨. ಭಾರತೀಯ ಧಾರ್ಮಿಕ ಪ್ರಜ್ಞೆ.

ಇತಿಹಾಸದುದ್ದಕ್ಕೂ, ಎಲ್ಲ ಕಾಲದಲ್ಲಿಯೂ ಭಾರತೀಯ ಗುಣ ವೈಶಿಷ್ಟ್ಯದ (ಸಾಮಾಜಿಕ ದೃಷ್ಟಿಕೋನ ಮತ್ತು ಸಂಬಂಧಗಳನ್ನು ನಿರ್ಧರಿಸುವ ಮಾರ್ಗದರ್ಶಿ ಸೂತ್ರಗಳು ಎಂದು ಇದರ ಅರ್ಥ) ಲಕ್ಷಣಗಳು ಸಮನ್ವಯ ಮತ್ತು ಅಹಿಂಸೆ. ಈಗ ಬಹು ವಿಕೃತಗೊಂಡಿರುವ ಜಾತಿಪದ್ಧತಿಯಲ್ಲಿ ಕೂಡ ಪ್ರತಿಯೊಂದು ಗುಂಪಿಗೂ ಸಾಮಾಜಿಕ ರಚನೆಯಲ್ಲಿ ಒಂದು ನಿರ್ದಿಷ್ಟ ಸ್ಥಾನವನ್ನು ಕಲ್ಪಿಸಲಾಗಿತ್ತು. ಇದರಿಂದ ಸ್ಪರ್ಧೆ ಮತ್ತು ಸಂಘರ್ಷಗಳನ್ನು ಬಹುಮಟ್ಟಿಗೆ ನಿವಾರಿಸಲಾಗಿತ್ತು. ವಿವಿಧ ಧರ್ಮಗಳು. ಭಾಷೆಗಳು ಮತ್ತು ಜನಾಂಗೀಯ ಗುಂಪುಗಳಿಗೆ ಸೇರಿದ ಜನರು ಶಾಂತಿಯಿಂದ ಸಹಬಾಳ್ವೆ ನಡೆಸುತ್ತಿದರು. ಈ  ಬಗೆಯ ಸಮನ್ವಯ ಮನೋಭಾವವಿದ್ದುದರಿಂದಲೇ ಭಾರತೀಯ ಸಮಾಜವು ಮಧ್ಯ ಏಷಿಯಾ ಖಂಡದಿಂದ ಬಂದ ಕ್ರೈಸ್ತ, ಯಹೂದಿ, ಪಾರ್ಸಿ ಮತ್ತು ಇಸ್ಲಾಂ ಧರ್ಮಗಳಿಗೆ ಸೇರಿದ ಹಲವು ವಲಸೆಗಾರರ ತಂಡಗಳಿಗೆ ಆಶ್ರಯವನ್ನು ನೀಡಲು ಸಾಧ್ಯವಾಯಿತು.

ಅದಲ್ಲದೆ ಭಾರತೀಯ ಜನರಲ್ಲಿ ಕಾಣಬರುವ ಅಹಿಂಸಾತ್ಮಕ ಮನೋಭಾವವು ಧಾರ್ಮಿಕ ಶೋಷಣೆಯು ಬೃಹತ್ ಪ್ರಮಾಣದಲ್ಲಿ ನಡೆಯುವುದನ್ನು ತಡೆಗಟ್ಟಿತ್ತು. ಆ ಕಾಲದಲ್ಲಿ ಧಾರ್ಮಿಕ ಭಿನ್ನಾಭಿಪ್ರಾಯಗಳಿದ್ದವು ಮತ್ತು ಧಾರ್ಮಿಕ ಸಂಘರ್ಷಗಳೂ ಇದ್ದವು ಎನ್ನುವುದು ನಿಸ್ಸಂದೇಹ. ಆದರೆ, ಅವು ಮುಗ್ಧ ಜನರ ಬೃಹತ್ ಪ್ರಮಾಣದ ಕಗೊಲೆ, ಹತ್ಯಾಕಾಂಡ ಅಥವಾ ದಹನದ ಮಟ್ಟಕ್ಕೆ ಸಿಡಿದೇಳಲಿಲ್ಲ ಎನ್ನುವುದೂ ಅಷ್ಟೇ ನಿಜ.

ಹಾಗಾದರೆ, ನಿರ್ದಿಷ್ಟವಾದ ಭಾರತೀಯ ಗುಣವೈಶಿಷ್ಟ್ಯವನ್ನು ರೂಪುಗೊಳಿಸಿದ ಶಕ್ತಿ ಅದಾವುದು? ಭಗವತ್ತತ್ತ್ವದ ಸರ್ವವ್ಯಾಪಕತೆಯ ಪರಿಜ್ಞಾನ ಎಂದು ಹೇಳಬಹುದು. ಅದು ಹೇಗೋ ಏನೋ, ಪ್ರಾಚೀನ ಇತಿಹಾಸದ ಯಾವುದೋ ಒಂದು ಘಟ್ಟದಲ್ಲಿ. ಭಾರತೀಯ ಮನಸ್ಸು ಈ ಮಹಾನ್ ಸತ್ಯವನ್ನು ಗ್ರಹಿಸಿತು. ಭಗವಂತನು ಈ ವಿಶ್ವದ ಚರಾಚರ ವಸ್ತುಗಳೆಲ್ಲದರಲ್ಲಿ ಅಖಂಡ ಆಧ್ಯಾತ್ಮಿಕ ಅನಂತ ವಸ್ತುವಾಗಿ ನೆಲೆಸಿದ್ದಾನೆ; ಪರಮಾತ್ಮನು ಮೇಲೆಲ್ಲೋ, ಆಗಸದಲ್ಲಿ ನೆಲೆಸಿರುವ ಜೀವಿಯಲ್ಲ; ಆದಕ್ಕೆ ಬದಲಾಗಿ, ಈ ಸೃಷ್ಟಿಯಲ್ಲಿ ಅನುಸ್ಯೂತವಾಗಿರುವ ಚೈತನ್ಯಸ್ವರೂಪನು; ಇಡೀ ಜಗತ್ತೇ ದಿವ್ಯತೆಯಿಂದ
ತುಂಬಿಕೊಂಡಿದೆ – ಈ ತಾತ್ತ್ವಿಕ ಜಿಜ್ಞಾಸೆಯೇ ಭಾರತೀಯ – ಗುಣವೈಶಿಷ್ಟ್ಯವನ್ನು ರೂಪುಗೊಳಿಸಿದ ಶಕ್ತಿ ಎನ್ನಬಹುದು.

ದಿವ್ಯತೆಯ ಸರ್ವವ್ಯಾಪಕತ್ವದ ಐಕ್ಯತೆಯ ಭಾವನೆಯು ೧. ಎಲ್ಲರಲ್ಲಿ ಸಮನ್ವಯದ ಭಾವವನ್ನುಂಟುಮಾಡಿತು. ೨ ಎಲ್ಲವನ್ನೂ ಗೌರವಿಸುವ
ಭಾವವನ್ನು ಮೂಡಿಸಿತು, ಪ್ರತಿಯೊಬ್ಬ ವ್ಯಕ್ತಿ ಮಾತ್ರವಲ್ಲ, ಈ ವಿಶ್ವದಲ್ಲಿರುವ ಎಲ್ಲವೂ – ಮರಗಳು, ನದಿಗಳು, ಬೆಟ್ಟಗಳು – ಇವೆಲ್ಲವುಗಳ ಅಂತರಂಗದಲ್ಲಿ ದಿವ್ಯತೆ ಅಡಗಿದೆ ಮತ್ತು ಇವುಗಳೆಲ್ಲವನ್ನೂ ಗೌರವದಿಂದ ಕಾಣಬೇಕು ಎಂಬ ಪರಿಕಲ್ಪನೆಯನ್ನು ಸರ್ವವ್ಯಾಪಕತ್ವದ ಐಕ್ಯತೆಯ ಭಾವನೆಯು ಹುಟ್ಟುಹಾಕಿತು.

ನಾವೀಗ ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ದೃಷ್ಟಿಯ ಎರಡನೆಯ ಅಂಶವನ್ನು ಗಮನಿಸೋಣ. ಅದೆಂದರೆ, ಭಾರತೀಯರ ಧಾರ್ಮಿಕಪ್ರಜ್ಞೆ. ಭಾರತೀಯ ಸಂಸ್ಕೃತಿಯಲ್ಲಿ, ಎಂದೆಂದಿಗೂ, ಧರ್ಮವನ್ನು ಪರತತ್ತ್ವ ಅಥವಾ ಪರಮಸತ್ಯದ ಅನ್ವೇಷಣೆಯೆಂದೇ ಪರಿಗಣಿಸಲಾಗುತ್ತಿತ್ತು. ಅದನ್ನು ಈ ಜಗತ್ತಿನಲ್ಲಿ ನೈತಿಕತೆಯನ್ನು ನೆಲೆನಿಲ್ಲಿಸುವ ಉದ್ದೇಶದಿಂದ, ಭಗವಂತನಿತ್ತ ಆದೇಶಗಳಿಗೆ ಸಮಾಜವು ಸ್ಪಂದಿಸಿದ ಬಗೆಯೆಂದು ಮಾತ್ರ ತಿಳಿದಿರಲಿಲ್ಲ. ಪ್ರಾಚೀನ ಭಾರತೀಯ ಋಷಿಮುನಿಗಳು ಎಂದೆಂದೂ ಪರಿವರ್ತನೆಯಾಗುತ್ತಿರುವ ಮತ್ತು ಕ್ಷಣಿಕವಾದ ಈ ಜಗತ್ತಿನಾಚೆಗೆ ಅಪರಿವರ್ತನಶೀಲವೂ ಅವಿನಾಶಿಯೂ ಆದ, ಶುದ್ಧಚೈತನ್ಯಸ್ವರೂಪವಾದ ಪರತತ್ತ್ವವಿರುವುದೆಂದು ಕಂಡುಕೊಂಡಿದ್ದರು. ಅದನ್ನವರು ‘ಬ್ರಹ್ಮನ್'(ದೊಡ್ಡದು) ಎಂದು ಕರೆದರು. ಬ್ರಹ್ಮವಸ್ತುವಿನ ಕ್ರಿಯಾತ್ಮಕ ಅಂಶಕ್ಕೆ ‘ಈಶ್ವರ’ ಅಥವಾ ‘ದೇವರು’ ಎಂದು ಕರೆದರು.

ಪ್ರಚಲಿತ ಪಶ್ಚಾತ್ಯ ವಿಶ್ವವಿಜ್ಞಾನವು ವಿಶ್ವದ ಉಗಮವನ್ನು ಭೌತವಸ್ತುವೆಂದು ಭಾವಿಸಿದರೆ, ಭಾರತವು ವಿಶ್ವದ ಹುಟ್ಟಿನ ಪವಿತ್ರ ಮೂಲವನ್ನು ಆಧ್ಯಾತ್ಮಿಕವೆಂದು ಭಾವಿಸುತ್ತದೆ. ವೇದಾಂತವು ಅದನ್ನು ನಿರ್ದೇಶಿಸುವ ಹಾಗೆ ಅದು ಅನಂತ, ಅದ್ವಯ ಮತ್ತು ಚಿನ್ಮಯ. ಪ್ರಕೃತಿಯು ವಿಭಕ್ತ ಮತ್ತು ಅವಿಭಕ್ತ ಎಂಬ ಎರಡು ಆಯಾಮಗಳಲ್ಲಿದೆ ಎಂದು ವೇದಾಂತ ಹೇಳುತ್ತದೆ. ವಿಭಕ್ತ ಎಂದರೆ ನಾವು ನೋಡುತ್ತಿರುವ ಈ ಪ್ರತ್ಯಕ್ಷ ವಿಶ್ವ; ಇದರ ಹಿಂದಿರುವುದು ಅವ್ಯಕ್ತ – ಪ್ರಕೃತಿಯ ಅವಿಭಕ್ತ ಸ್ಥಿತಿ – ಪಾಶ್ಚಾತ್ಯ ಜ್ಯೋತಿರ್ವಿಜ್ಞಾನದ ಮಹಾಸ್ಫೋಟಕ್ಕಿಂತ ಮುಂಚೆ ಯಾವ ಸ್ಥಿತಿ ಇತ್ತೋ ಅದು. ಅವ್ಯಕ್ತದಿಂದ ಹೊರಹೊಮ್ಮಿದ್ದು ವ್ಯಕ್ತ: ಈ ಬ್ರಹ್ಮಾಂಡದಲ್ಲಿ ಇಂದು ನಮಗೆ ತಿಳಿದಿರುವ, ಇನ್ನೂ ತಿಳಿಯಬೇಕಾಗಿರುವ ಮಿಲಿಯಗಟ್ಟಲೆ ವಿಶ್ವಗಳಿವೆ; ಬ್ರಹ್ಮನಿಂದ ಬಂದಿರುವ ಈ ಬ್ರಹ್ಮಾಂಡವು ಒಂದು ಸುವ್ಯವಸ್ಥಿತ ಕ್ರಮದಲ್ಲಿ, ಅಂದರೆ ಅವಿಭಕ್ತ ಸ್ಥಿತಿಯಿಂದ ವಿಭಕ್ತ ಸ್ಥಿತಿಗೆ ವಿಕಾಸಹೊಂದಿದೆ. ವಿಶ್ವದ ವಿಕಾಸ, ಜೀವಿಗಳ ವಿಕಾಸ, ಅನಂತರ ಮಾನವನ (ಬೌದ್ಧಿಕ, ನೈತಿಕ, ಆಧ್ಯಾತ್ಮಿಕ) ವಿಕಾಸ – ಹೀಗೆ ಇದು ಒಂದು ವಿಕಾಸದ ಸರಣಿಯನ್ನು ಅನುಸರಿಸುತ್ತದೆ. ಇದು ವೇದಾಂತದ ವಿಶ್ವವಿಜ್ಞಾನದಲ್ಲಿ ಬಳಸಿರುವ ಭಾಷೆ.
-ಸ್ವಾಮಿ ರಂಗನಾಥಾನಂದ (ಭಗವದ್ಗೀತೆಯ ವಿಶ್ವಸಂದೇಶ, ಪುಟ ೧೭-೧೮)

ವಿಶ್ವಾತೀತತೆ, ಸರ್ವವ್ಯಾಪಕತೆ – ಇವೆರಡೂ ಅಂಶಗಳು ಒಗ್ಗೂಡಿ, ಪರಿಪೂರ್ಣ ತತ್ತ್ವವೆನಿಸುವುದು. ಇದು ಜಡವಾದ ವಸ್ತುವಲ್ಲ, ಚೈತನ್ಯ ಸ್ವರೂಪ.  ವೇದದಲ್ಲಿ ಅದನ್ನು ‘ವಿಶ್ವಪುರುಷ’ ನೆಂದು ಚಿತ್ರಿಸಲಾಗಿದೆ. ಅವನು ಸಹಸ್ರಾರು ಶಿರಗಳುಳ್ಳವನು, ಸಹಸ್ರಾರು ಕಣ್ಣುಗಳು, ಸಹಸ್ರಾರು ಹಸ್ತಗಳು ಮತ್ತು ಕಾಲುಗಳುಳ್ಳವನು. ವಿಶ್ವದ ತುಂಬೆಲ್ಲ ಓತಪ್ರೋತವಾಗಿರುವ ಪುರುಷನ ಈ ಅಂಶವು ಅವನ ಕಾಲುಭಾಗದಷ್ಟೇ ಆಗಿದೆ. ಪುರುಷನ ವಿಶ್ವಾತೀತ ಅಂಶವು ಉಳಿದ ಮುಕ್ಕಾಲು ಭಾಗದಷ್ಟಿದೆ. ಹೀಗೆ ಪುರುಷಸೂಕ್ತವು ಅದನ್ನು ವರ್ಣಿಸುತ್ತದೆ. ಹೀಗೆ ವೇದಗಳಲ್ಲಿ ವರ್ಣಿಸಲಾಗಿರುವ ಪುರುಷಾಕೃತಿಯು ಸಮಸ್ತ ವಿಶ್ವವು ಒಂದೇ ಸ್ವರೂಪದ್ದೆಂಬುದನ್ನು ಸೂಚಿಸುತ್ತದೆ.

ದೇಹದಲ್ಲಿರುವ ಜೀವಕೋಶಗಳು, ಅಂಗಾಂಗಗಳು ಮತ್ತು ಅಂಗಗಳು – ಇವೆಲ್ಲವೂ ಸೇರಿಕೊಂಡೇ ಹೇಗೆ ಒಂದು ದೇಹವಾಗುವುದೋ ಹಾಗೆಯೇ ಪ್ರಪಂಚದಲ್ಲಿರುವ ಎಲ್ಲವೂ ಸೇರಿಕೊಂಡು ಒಂದು ವಿಶ್ವಸ್ವರೂಪವಾಗುವುದು. ಹೀಗಾಗಿ ಈ ಜಗತ್ತಿನಲ್ಲಿರುವುದೆಲ್ಲವೂ ಒಂದಕ್ಕೊಂದು ಬೆಸೆದುಕೊಂಡಿರುತ್ತದೆ.

ಪ್ರಾಚೀನ ಭಾರತದೇಶದಲ್ಲಿ ಸಾಧಿಸಲಾದ ಮೇಲಿನದಷ್ಟೇ ಮಹತ್ವಪೂರ್ಣವಾದ ಮತ್ತೊಂದು ಅನ್ವೇಷಣೆಯೆಂದರೆ, ಪರಮಾತತ್ತ್ವವು ಒಂದೇ ಆಗಿದ್ದರೂ, ಮಾನವನ ಮನಸ್ಸು, ಅದರ ಹಲವು ವಿಧದ ಸ್ವಭಾವಕ್ಕನುಸಾರವಾಗಿ, ಆ ಪರತತ್ತ್ವವನ್ನು ಹಲವು ವಿಧಗಳಿಂದ ಅರಿಯುವುದು ಎನ್ನುವ ತಥ್ಯ. ಇದರ ಫಲವಾಗಿ, ಒಂದೇ ಪರಮಸತ್ಯವು ಹಲವಾರು ದೇವತಾವಿಶೇಷಗಳ ರೂಪದಲ್ಲಿ ಕಾಣಬರುತ್ತದೆ. ವೈದಿಕ ಋಷಿಗಳು ಈ ಭಾವನೆಯನ್ನು ‘ಏಕಂ ಸತ್ ವಿಪ್ರಾ ಬಹುಧಾ ವದಂತಿ’ – ಸತ್ಯ ಒಂದೇ;  ತಿಳಿದವರು ಅದನ್ನು ಹಲವಾರು ಹೆಸರುಗಳಿಂದ ಕರೆಯುವರು – ಎಂಬ ವಾಕ್ಯದಲ್ಲಿ ವ್ಯಕ್ತಪಡಿಸಿದ್ದಾರೆ.

ಬೇರೆ ಮಾತುಗಳಲ್ಲಿ ಹೇಳುವುದಾದರೆ, ವಿವಿಧತೆಯಲ್ಲಿ ಏಕತೆಯ ಸಿದ್ಧಾಂತವು ಭಾರತೀಯ ಬಹುತ್ವ ವಾದದ ಮೂಲಾಧಾರವಾಗಿದೆ. ಬಹುತ್ವ ವಾದದ ಪಾಶ್ಚಾತ್ಯ ಕಲ್ಪನೆಯು ವಿಶ್ಲೇಷಣಾತ್ಮಕ ವೈಚಾರಿಕತೆಯನ್ನೆ ಅಡಿಪಾಯವಾಗಿ ಹೊಂದಿದೆ. ಅದಕ್ಕೆ ವಿರುದ್ಧವಾಗಿ, ಬಹುತ್ವ ವಾದದ ಭಾರತೀಯ ಮಾದರಿಯು ಸಮಗ್ರ ಸುಸಂಯೋಜಿತ ಅನುಭಾವದ (Organic Intuition) ಮೇಲೆ ಆಧಾರಿತವಾಗಿದೆ.
(ಮುಂದುವರಿಯುವುದು)

(ಮೂಲ: ವಿವೇಕಪ್ರಭ ಮಾರ್ಚ್ 2008)

ಆಕರಗಳು:

೧. Grant S. Shokley ಅವರು ಮಾಡಿದ. John Hick ಅವರ ಹೇಳಿಕೆಯ ಉಲ್ಲೇಖ. ‘Religious Pluralism and Religious Education’ in Norma H. Thompson, Religious Pluralism and Religious Education (Burmingham Alabama: Religious Education Press, 1988). p.141

೨. James M. Lee, “The Blessings of Religous Pluralism”, in Norma H. Thompson, Religious Pluralism and Religious Education (Burmingham, Alabama: Religious Education Press, 1988), p.60

೩. Grant S Shokley, ‘Religious Pluralism and Religious Education’ in Norma H Thompson, Religious Pluralism and Religious Education (Burmingham. Alabama: Religious Education Press, 1988). p.141

೪. ಅದೇ, ಪುಟ ೧೪೬

೫. ಕೊಪರ್ನಿಕಸ್ ಎಂಬ ವಿಜ್ಞಾನಿ ಮೊದಲ ಬಾರಿಗೆ ಸೂರ್ಯನ ಸುತ್ತಲೂ ಭೂಮಿ ಸುತ್ತುತ್ತದೆ ಎಂಬ ವೈಜ್ಞಾನಿಕ ಸತ್ಯವನ್ನು ಸಾಧಿಸಿ ತೋರಿಸಿದನು. ಇದು ವೈಜ್ಞಾನಿಕ ಯುಗದಲ್ಲಿ ಕ್ರಾಂತಿಯನ್ನೇ ಉಂಟುಮಾಡಿತು.

೬. John Hick, God has many Names, (London: Paul and MacMillan), p.141

೭. James M Lee, “The Blessings of Religious Pluralism”, in Norma H. Thompson, Religious Pluralism and Religious Education (Burmingham. Alabama: Religious Education Press, 1988), pp.59-71

೮.’ಪಾದೋsಸ್ಯ ವಿಶ್ವಾ ಭೂತಾನಿ, ತ್ರಿಪಾದಸ್ಯಾಮೃತಂ ದಿವಿ’ – ಪುರುಷಸೂಕ್ತ.


ಶ್ರೀರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಧರ್ಮಸಮನ್ವಯ (continued) ಏಪ್ರಿಲ್

ಹಿಂದಿನ ಸಂಚಿಕೆಯಲ್ಲಿ : ಬಹುತ್ವ ವಾದವು, ಎಲ್ಲ ಧರ್ಮಗಳೂ ಸತ್ಯ, ಸತ್ಯಪ್ರಕಾಶನಗಳು ಬಹುವಾಗಿವೆ ಮತ್ತು ವಿವಿಧ ಧರ್ಮಗಳ ಪ್ರತಿಪಾದನೆಗಳು ವ್ಯಾಪಕ ಸತ್ಯದ ತುಣುಕುಗಳು ಎಂದು ಹೇಳುತ್ತದೆ. ಅದು ಬರಿಯ ಚಿಂತನೆಯಲ್ಲ. ಅದೊಂದು ಜೀವನ ವಿಧಾನ, ಭಗವಂತನನ್ನು ಕೇಂದ್ರವಾಗಿರಿಸಿಕೊಂಡು ವಿವಿಧ ಧರ್ಮಗಳು ಇರುತ್ತವೆ. ಬಹುತ್ವ ಮನೋಭಾವವು ಈಗ ಜನಸಮಾನ್ಯನ ಕಳಕಳಿಯಾಗಿದೆ. ಭಾರತೀಯರ ಗುಣವೈಶಿಷ್ಟ್ಯ ಮತ್ತು ಧಾರ್ಮಿಕ ಪ್ರಜ್ಞೆ – ಇವುಗಳಿಂದ ಅವರ ಸಾಮಾಜಿಕ ಮತ್ತು ಧಾರ್ಮಿಕ ದೃಷ್ಟಿಗಳು ಮೂಡಿಬಂದಿವೆ. ವಿಶ್ವಾತೀತತೆ ಮತ್ತು ಸರ್ವವ್ಯಾಪಕತೆ – ಇವೆರಡೂ ಅಂಶಗಳು ಸೇರಿ ಪರತತ್ತ್ವವಾಗುವುದು. ವಿವಿಧತೆಯಲ್ಲಿ ಏಕತೆಯ ಮನೋಭಾವವೇ ಭಾರತೀಯ ಬಹುತ್ವ ವಾದದ ಮೂಲಾಧಾರ. (ಮುಂದೆ ಓದಿ)

ಭಾರತೀಯ ಸಂಪ್ರದಾಯದಲ್ಲಿ ಸಂವಾದ

ವೈದಿಕ ಯುಗವು ಕ್ರಿಸ್ತಶಕ ಎರಡನೆಯ ಶತಮಾನದ ಹೊತ್ತಿಗೆ ಅಸ್ತಂಗತವಾಯಿತು. ಅದರೊಂದಿಗೆ, ವಿವಿಧತೆಯಲ್ಲಿ ಏಕತೆ, ಸುಸಂಯೋಜಿತ ಐಕ್ಯತೆ ಮತ್ತು ಭಾವಸಮನ್ವಯ ಇವುಗಳಿಂದ ಕೂಡಿದ ವೈದಿಕ ಚಿಂತನೆಯೂ ನಷ್ಟವಾಯಿತು. ಎರಡನೆಯ ಶತಮಾನ ಅಥವಾ ಮೂರನೆಯ ಶತಮಾನದ ಹೊತ್ತಿಗೆ, ಹಲವಾರು ಸ್ವತಂತ್ರ ಚಿಂತಕರು ಭಾರತೀಯ ಚಿಂತನಾಧಾರೆಯನ್ನು ಸುವ್ಯವಸ್ಥಿತಗೊಳಿಸಲು ಯತ್ನಿಸಿದರು. ಇದರ ಫಲವಾಗಿ ಹಿಂದೂ ಚಿಂತನೆಯ ಆರು ಅಂಗಗಳು ಮೈದಳೆದವು. ಅವುಗಳನ್ನು ದರ್ಶನಗಳು ಎಂದು ಕರೆಯುತ್ತಾರೆ. ಪ್ರತಿ ದರ್ಶನವೂ ಪರಮಸತ್ಯದ ಒಂದು ನಿರ್ದಿಷ್ಟ ಭಾವನೆಯನ್ನು ಪ್ರತಿನಿಧಿಸುತ್ತದೆ.

ಆ ಆರು ದರ್ಶನಗಳು ಹೀಗಿವೆ: ಜೈಮಿನಿ ಮಹರ್ಷಿಯ ಮೀಮಾಂಸಾ ದರ್ಶನ, ಕಣಾದ ಮಹರ್ಷಿಯ ವೈಶೇಷಿಕ ದರ್ಶನ, ಗೌತಮ ಮಹರ್ಷಿಯ ನ್ಯಾಯ ದರ್ಶನ, ಕಪಿಲ ಮಹರ್ಷಿಯ ಸಾಂಖ್ಯ ದರ್ಶನ, ಪತಂಜಲಿ ಮಹರ್ಷಿಯ ಯೋಗ ದರ್ಶನ ಮತ್ತು ಬಾದರಾಯಣ ಮಹರ್ಷಿಯ ವೇದಾಂತ ದರ್ಶನ, ಮೊದ ಮೊದಲು ಈ ದರ್ಶನಗಳ ಅನುಯಾಯಿಗಳು ಪ್ರತ್ಯೇಕ ಗುಂಪುಗಳನ್ನು ಮಾಡಿಕೊಂಡಿದ್ದರು. ಆ ಗುಂಪುಗಳು ಆಸಕ್ತರನ್ನು ಆಕರ್ಷಿಸುತ್ತಿದ್ದವು. ಆದರೆ ಮುಂದೆ, ತಾತ್ತ್ವಿಕ ಚಿಂತನೆಯಲ್ಲಿ ಹೊಸ ಶಕೆಯೊಂದು ಆರಂಭವಾಯಿತು. ಮೀಮಾಂಸಾ ದರ್ಶನದ ಕುಮಾರಿಲ ಭಟ್ಟ, ಪ್ರಭಾಕರ ಮತ್ತು ವೇದಾಂತ ದರ್ಶನದ ಶ್ರೀಶಂಕರಾಚಾರ್ಯರು – ಇವರು ವಾಗ್ವಿವಾದಗಳ ವಿಧಾನವನ್ನು ಅನುಸರಿಸಿದರು. ಪರಮಸತ್ಯ ಮತ್ತು ಮಾನವ ವಿಧಿಗಳ ಬಗ್ಗೆ ತಮ್ಮ ಅಭಿಪ್ರಾಯವೊಂದೇ ಸತ್ಯ ಎಂದು ಸಾಧಿಸಲು ಮತ್ತು ವಿರೋಧೀ ಭಾವನೆಗಳನ್ನು ಖಂಡಿಸಲು ಅವರು ಈ ವಿಧಾನವನ್ನು ಅನುಸರಿಸಿದರು. ಶ್ರೀಶಂಕರಾಚಾರ್ಯರು ಹೀಗೆ ಅದ್ವೈತಸಂಪ್ರದಾಯದ ಪ್ರವರ್ತಕರಾಗಿದ್ದು, ವೇದಾಂತ ದರ್ಶನದೊಳಗೆ ಮತ್ತೆ ಹಲವಾರು ಸಂಪ್ರದಾಯಗಳು ಉಗಮವಾಗಲು ಪ್ರಚೋದನೆಯನ್ನು ನೀಡಿತು. ಅವುಗಳೆಂದರೆ ದ್ವೈತ, ವಿಶಿಷ್ಟಾದ್ವೈತ. ಮುಂತಾದವು. ಈ ಸಂಪ್ರದಾಯಗಳು ತತ್ತ್ವಚಿಂತನೆಯ ವಿವಿಧ ಭಾಗಗಳಷ್ಟೇ ಆಗಿ ಉಳಿಯಲಿಲ್ಲ. ಅವು ಪಂಗಡಗಳಾಗಿ ವಿಕಾಸಗೊಂಡವು. ಪ್ರತಿಯೊಂದು ಪಂಗಡವೂ ಕಾಲಾಂತರದಲ್ಲಿ, ತನ್ನದೇ ಆದ ವೈಚಾರಿಕ ಚೌಕಟ್ಟು, ದೇವಪೂಜಾಪದ್ಧತಿ, ಸಮುದಾಯ, ಆಚರಣೆಗಳು ಮತ್ತು ಪರಂಪರೆಯನ್ನು ಹೊಂದಿತು. ಹನ್ನೊಂದನೆಯ ಶತಮಾನದ ಹೊತ್ತಿಗೆ, ವೇದಾಂತವನ್ನು ಬಿಟ್ಟು ಉಳಿದೆಲ್ಲ ದಾರ್ಶನಿಕ ಪಂಗಡಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. ವೇದಾಂತವು ತನ್ನೆಲ್ಲ ವಿಭಾಗಗಳೊಂದಿಗೆ ಭಾರತದ ಬಹುಪ್ರಭಾವಶಾಲಿ ದಾರ್ಶನಿಕ ಸಂಪ್ರದಾಯವಾಗಿ ಉಳಿದುಕೊಂಡಿತು.

ಭಾರತದ ಎಲ್ಲ ದಾರ್ಶನಿಕ ಸಂಪ್ರದಾಯಗಳು ಮತ್ತು ಪಂಗಡಗಳೂ ತಮ್ಮತಮ್ಮಲ್ಲಿ ತೀವ್ರವಾದ ವಾಗ್ವಿವಾದದಲ್ಲಿ ತೊಡಗಿದ್ದವು. ಅವು ಇಡೀ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಚಿಂತಕರ ಶ್ರೇಣಿಗೆ ಸೇರಿದವರೆಂದು ಪರಿಗಣಿಸಬಹುದಾದ ವಿದ್ವಾಂಸರನ್ನು ಸೃಷ್ಟಿಸಿದವು. ಅವರು, ಪರಮಸತ್ಯ ಮತ್ತು ಮುಕ್ತಿಮಾರ್ಗಗಳ ವಿಚಾರದಲ್ಲಿ ತಮ್ಮ ಮತದ ಅಭಿಪ್ರಾಯವೇ ಸತ್ಯವಾದುದು ಎಂದು ಮಂಡಿಸಲು ಪ್ರಯತ್ನಪಟ್ಟರು. ಅದೇ ರೀತಿ ಉಳಿದ ಸಂಪ್ರದಾಯಗಳ ಮತ್ತು ಪಂಗಡಗಳ ಅಭಿಪ್ರಾಯಗಳಲ್ಲಿನ ಅಸಮಂಜತೆ ಮತ್ತು ಅಸತ್ಯತೆಗಳನ್ನು ಸಾಧಿಸಿ ತೋರಿಸಲೂ ಪ್ರಯಾಸಪಟ್ಟರು. ಈ ಬಗೆಯ ಬೌದ್ಧಿಕ ಸಮುದಾಯವು ಭಾರತದಲ್ಲೆಲ್ಲ ಹರಡಿಕೊಂಡಿತ್ತು ಹಾಗೂ ಅದಕ್ಕೆ ಸಂಸ್ಕೃತವನ್ನು ಸಂವಹನಾ ಭಾಷೆಯಾಗಿ ಉಪಯೋಗಿಸಲಾಗುತ್ತಿತ್ತು. ಈ ಕಾರಣದಿಂದಾಗಿ, ತಾತ್ತ್ವಿಕ ವಿವಾದಗಳು ರಾಷ್ಟ್ರೀಯ ಸಂವಾದದ ರೂಪವನ್ನು ತಾಳುತ್ತಿದ್ದವು. ಇದರಲ್ಲಿ ಸಂವಾದದ ರೀತಿನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿತ್ತು. ಪ್ರತಿ ದಾರ್ಶನಿಕ ಸಂಪ್ರದಾಯದ ವಿದ್ವಾಂಸರು ಇತರ ದರ್ಶನಗಳ ಅಭಿಪ್ರಾಯಗಳನ್ನು ಗೌರವಿಸುತ್ತಿದ್ದರು. ಅವುಗಳನ್ನು ಖಂಡಿಸುವ ಪ್ರಯತ್ನವನ್ನು ಕೈಗೊಳ್ಳುವ ಮೊದಲು,
ಆಮೂಲಾಗ್ರವಾಗಿ ಅಧ್ಯಯನ ಮಾಡುತ್ತಿದ್ದರು.

ಆದರೂ, ಹಿಂದೆ ಇದ್ದ ಬಹುತ್ವ ಭಾವನೆಯು ನಷ್ಟವಾಯಿತೆಂಬುದು ಸುಸ್ಪಷ್ಟ. ಮೇಲೆ ಉದಾಹರಿಸಿದ ಕೆಲವು ದಾರ್ಶನಿಕ ಪಂಗಡಗಳು ನಿಸ್ಸಂದಿಗ್ಧವಾಗಿ ಪ್ರತ್ಯೇಕ ಭಾವನೆಯನ್ನು ವ್ಯಕ್ತಪಡಿಸುತ್ತವೆ. ಶಂಕರರ ಅದ್ವೈತ ಸಂಪ್ರದಾಯದಂತಹ ಮತ್ತೆ ಕೆಲವನ್ನು, ಹೆಚ್ಚೂಕಡಿಮೆ ಅಂತರ್ಗತ ಮನೋಭಾವವುಳ್ಳವುಗಳೆಂದು ಹೇಳಬಹುದು. ಈ ಬಗೆಯ ತಾತ್ತ್ವಿಕ ಪಂಗಡಗಳ ಹೊರತಾಗಿ, ಹಿಂದೆ ಅನೇಕ ಮತಗಳೂ ಇದ್ದವು, ಹೀಗಿದ್ದರೂ ಸಹಿಷ್ಣುತೆ, ಸಮನ್ವಯ ಮತ್ತು ಅಹಿಂಸೆಯ ಭಾವನೆ ಭಾರತೀಯ ಗುಣವೈಶಿಷ್ಟ್ಯದಲ್ಲಿ ಮನೆಮಾಡಿಕೊಂಡಿತ್ತು. ಆದ್ದರಿಂದ ಆ ಎಲ್ಲ ಮತಗಳು ಹಿಂಸಾತ್ಮಕ ಘರ್ಷಣೆ ಮತ್ತು ಮತೀಯ ಗಲಭೆಗಳಿಂದ ಮುಕ್ತವಾಗಿ, ಒಟ್ಟಿಗೆ ಇದ್ದವು. ದಾರ್ಶನಿಕ ಪಂಗಡಗಳು ಮತ್ತು ಧಾರ್ಮಿಕ ಮತಗಳ ಈ ಸಮಗ್ರ ಸಾಮಾಜಿಕ ಸ್ವರೂಪಕ್ಕೆ ೧೧ ನೆಯ ಶತಮಾನದಿಂದ ಹಿಡಿದು ೧೮ ನೆಯ ಶತಮಾನದವರೆಗೆ ನಡೆದ ವಿದೇಶೀ ಧಾಳಿಗಳಿಂದ ಧಕ್ಕೆ ಬಂತು. ಆದರ ಅಂತಿಮ ಪರಿಣಾಮವಾಗಿ ಭಾರತವು ಪಾಶ್ಚಾತ್ಯ ಶಕ್ತಿಗಳ ಅಧೀನಕ್ಕೊಳಗಾಯಿತು.

೧೯ ನೆಯ ಶತಮಾನದ ಹೊತ್ತಿಗೆ ಪರಿಸ್ಥಿತಿ ಮತ್ತೂ ಹದಗೆಟ್ಟಿತು. ಆಗ ಭಾರತೀಯ ಸಂಸ್ಕೃತಿಯು ಪಾಶ್ಚಾತ್ಯ ಸಂಸ್ಕೃತಿಯ ಸವಾಲನ್ನು ಎದುರಿಸಬೇಕಾಯಿತು. ಭಾರತೀಯ ಸಮಾಜವು ಮೊದಮೊದಲು ಈ ಸವಾಲನ್ನು ಎದುರಿಸಿದ್ದು, ಸಮಾಜ ಸುಧಾರಣಾ ಆಂದೋಲನಗಳನ್ನು ಹುಟ್ಟುಹಾಕುವ ಮೂಲಕ, ಅವುಗಳಲ್ಲಿ ಕೆಲವು ಭಾರತದ ಅಮೂಲ್ಯ ಆಧ್ಯಾತ್ಮಿಕ ಪರಂಪರೆಗೇ ಘಾತಕಗಳಾಗಿದ್ದವು.

ಈ ಸಂದಿಗ್ಧ ಘಟ್ಟದಲ್ಲಿ ಶ್ರೀರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ಅವತೀರ್ಣವಾಯಿತು. “ಮೂವತ್ತು ಕೋಟಿ ಜನರ ಎರಡು ಸಾವಿರ ವರ್ಷಗಳ ಆಧ್ಯಾತ್ಮಿಕ ಜೀವನದ ಪರಿಪೂರ್ಣತೆಯೇ ಮೂರ್ತಿವೆತ್ತವರು” ಎಂದು ಫ್ರೆಂಚ್ ವಿದ್ವಾಂಸ ರೊಮ ರೋಲಾ ಶ್ರೀರಾಮಕೃಷ್ಣರನ್ನು ಬಣ್ಣಿಸುತ್ತಾರೆ. ವಿವೇಕಾನಂದರನ್ನು ಕುರಿತ ಅವರ ಇನ್ನೊಂದು ಹೇಳಿಕೆ ಕೂಡ ಇಷ್ಟೇ ಸೂಕ್ಷ್ಮಗ್ರಾಹಿಯಾದದ್ದು; “ಸ್ವಾಮಿ ವಿವೇಕಾನಂದರ ರಚನಾತ್ಮಕ ಪ್ರತಿಭೆಯನ್ನು ಎರಡು ಪದಗಳಲ್ಲಿ ಹಿಡಿದಿಡಬಹುದು. ಅದೆಂದರೆ, ಸಮತೋಲನ ಮತ್ತು ಸುಸಂಯೋಜನೆ (equilibriurm and synthesis).” ಪರಮೋಚ್ಚ ಸತ್ಯದ ಬಗೆಗೆ ಸಮಗ್ರ ದೃಷ್ಟಿಕೋನ, ಜೀವನದ ಬಗ್ಗೆ ಸರ್ವಾಂಗೀಣ ಮನೋಭಾವ, ಸಾಮಾಜಿಕ ವಾಸ್ತವಿಕತೆಗಳನ್ನು ಬಹುತ್ವ ದೃಷ್ಟಿಯಿಂದ ಮಾನ್ಯ ಮಾಡುವುದು – ಇವುಗಳನ್ನು ಆಗಿನ ಭಾರತವು ಕಳೆದುಕೊಂಡಿತ್ತು. ಅವನ್ನು ಮತ್ತೆ ಪುನರುಜ್ಜೀವನಗೊಳಿಸಿದ್ದೇ ಶ್ರೀರಾಮಕೃಷ್ಣ ಮತ್ತು ವಿವೇಕಾನಂದರು ಮಾಡಿದ ಮಹಾನ್ ಕಾರ್ಯವಾಗಿದೆ.

ಆಧುನಿಕ ಜಗತ್ತಿನಲ್ಲಿ ಧಾರ್ಮಿಕ ಬಹುತ್ವ ಭಾವನೆಯನ್ನು ಪ್ರತಿಪಾದಿಸಿದ ಮೊಟ್ಟಮೊದಲ ಮಹಾನ್ ಪ್ರವಾದಿಯೆಂದರೆ, ಶ್ರೀರಾಮಕೃಷ್ಣ ಪರಮಹಂಸರು. ಆದರೆ, ಅವರು ಪ್ರತಿಪಾದಿಸಿದ ಬಹುತ್ವ ಭಾವನೆ, ಸಮಗ್ರ ದೃಷ್ಟಿಯ ಭಾರತೀಯ ಮಾದರಿಯದಾಗಿತ್ತೇ (model) ಹೊರತು, ವಿಶ್ಲೇಷಣಾತ್ಮಕವಾದ ಪಾಶ್ಚಾತ್ಯ ಮಾದರಿಯದಾಗಿರಲಿಲ್ಲ. ಧರ್ಮಸಮನ್ವಯದ ಭಾರತೀಯ ಭಾವನೆಯನ್ನು ಆಧುನಿಕ ಸಮಾಜದ ಆವಶ್ಯಕತೆಗಳಿಗೆ ಅನುಸಾರವಾಗಿ, ಪುನಃಸಂಸ್ಥಾಪಿಸಿದ್ದು ಶ್ರೀರಾಮಕೃಷ್ಣರು ತಮ್ಮ ಜೀವಿತದಲ್ಲಿ ಸಾಧಿಸಿದ ಪ್ರಮುಖ ಕಾರ್ಯ.

ವಿಶ್ವಾತ್ಮಕತೆ

ನಾವು ಇದುವರೆಗೂ ಮೂರು ಅಂತರಧರ್ಮೀಯ ಮನೋಭಾವನೆಗಳ ಬಗ್ಗೆ ಚರ್ಚಿಸಿದೆವು. ಅವೆಂದರೆ, ಪ್ರತ್ಯೇಕತಾ ವಾದ, ಅಂತರ್ಗತ ವಾದ ಮತ್ತು ಬಹುತ್ವ ವಾದ. ಈಗ ನಾವು ನಾಲ್ಕನೆಯದನ್ನು ನೋಡಲಿದ್ದೇವೆ. ಅದೇ ವಿಶ್ವಾತ್ಮಕತೆ(universalism). ವಿಶ್ವಾತ್ಮಕತೆಯೆಂದರೆ, ಎಲ್ಲ ಧರ್ಮಗಳಿಗೂ ಸಮಾನವಾದ ಅಥವಾ ಎಲ್ಲ ಧರ್ಮಗಳನ್ನೂ ಒಂದುಗೂಡಿಸುವ, ವಿಶ್ವವ್ಯಾಪಕವಾಗಿ ಸಮಂಜಸವಾಗಬಲ್ಲ ಧಾರ್ಮಿಕ ತತ್ತ್ವಗಳಿವೆ ಎಂಬ ಧೋರಣೆ. ಬಹುತ್ವ ವಾದವು ಧರ್ಮಗಳ ನಡುವಣ ಭೇದಗಳಿಗೆ ಒತ್ತುಕೊಡುತ್ತದೆ. ಆದರೆ ವಿಶ್ವಾತ್ಮಕತೆಯು ಧರ್ಮಗಳ ನಡುವಣ ಸಮಾನಭೂಮಿಕೆಗೆ ಒತ್ತುಕೊಡುತ್ತದೆ.

ಬಹುತ್ವ ವಾದಕ್ಕೆ ಅಡಿಪಾಯವನ್ನಿಟ್ಟವರು ಶ್ರೀರಾಮಕೃಷ್ಣರು. ಇದು ಆಧುನಿಕ ಜಗತ್ತಿಗೆ ಅವರ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಒಂದು. ಸ್ವಾಮಿ ವಿವೇಕಾನಂದರು ಬಹುತ್ವ ಮನೋಭಾವನೆಯನ್ನು ಮತ್ತೂ ಒಂದು ಹೆಜ್ಜೆ ಮುಂದಕ್ಕೆ ಕರೆದೊಯ್ದರು. ಬಹುತ್ವ ವಾದವು ವಿಶ್ವಾತ್ಮಕತೆಯಲ್ಲಿ ಪರ್ಯವಸಾನಗೊಳ್ಳುವುದೆಂದು ಅವರು ತೋರಿಸಿಕೊಟ್ಟರು. ಆಧುನಿಕ ಜಗತ್ತಿಗೆ ಸ್ವಾಮಿ ವೇಕಾನಂದರ ಕೊಡುಗೆ ವಿಶ್ವಾತ್ಮಕತೆ. ಆದರೆ ಇದು ಬಹಳ ಅಪಾರ್ಥಕ್ಕೆ ಎಡೆಮಾಡಿಕೊಟ್ಟಿರುವ ಶಬ್ದವಾಗಿಬಿಟ್ಟಿದೆ. ಈ ವಿಷಯವನ್ನು ಪ್ರತ್ಯೇಕವಾಗಿ ನೋಡುತ್ತೇವೆ.

ಶ್ರೀರಾಮಕೃಷ್ಣರ ಧರ್ಮಸಮನ್ವಯ ಸಿದ್ಧಾಂತ

ಮೊದಲೇ ಹೇಳಿದಂತೆ, ಶ್ರೀರಾಮಕೃಷ್ಣರ ಧರ್ಮಸಮನ್ವಯ ಸಿದ್ಧಾಂತವು ಧಾರ್ಮಿಕಬಹುತ್ವ ಮನೋಭಾವನೆಯ ಭಾರತೀಯ ಅವತರಣಿಕೆಯಾಗಿದೆ. ಪ್ರಾಚೀನ ಭಾರತದ ಜನರಲ್ಲಿ, ಈ ಬಗೆಯ ಬಹುತ್ವ ಮನೋಭಾವವು ಸರ್ವೇಸಾಮಾನ್ಯವಾಗಿತ್ತು ಮತ್ತು ಅದು ಒಂದು ನಿರ್ದಿಷ್ಟ ಧಾರ್ಮಿಕ ದೃಷ್ಟಿಯೂ ಆಗಿತ್ತು. ಮಧ್ಯಕಾಲೀನ ಯುಗದಲ್ಲಿ ಮತ್ತು ನಂತರದ ಶತಮಾನಗಳಲ್ಲಿ ಈ ಬಹುತ್ವ ದೃಷ್ಟಿಗೆ ಗ್ರಹಣ ಹಿಡಿಯಿತು. ಅದಕ್ಕೆ ಕಾರಣ, ದಾರ್ಶನಿಕ ಸಂಪ್ರದಾಯಗಳು ಮತ್ತು ಧಾರ್ಮಿಕ ಪಂಗಡಗಳ ಉಗಮ. ಸುಪ್ತವಾಗಿದ್ದ ಈ ಪ್ರಾಚೀನ. ಭಾವನೆಗೆ ಜೀವ ತುಂಬಿ ಮತ್ತೆ ಆಧುನಿಕ ಕಾಲದ ಜನರಲ್ಲಿ ಅದನ್ನು ಸ್ಥಾಪಿಸಿದವರು ಶ್ರೀರಾಮಕೃಷ್ಣರು.

ಶ್ರೀರಾಮಕೃಷ್ಣರ ಧರ್ಮಸಮನ್ವಯ ಸಿದ್ಧಾಂತವು ಅವರು ತಮ್ಮ ಜೀವನದಲ್ಲಿ ಅನುಸರಿಸಿದ ಕೆಲವು ನಿರ್ದಿಷ್ಟ ಸಾಮಾನ್ಯ ನಿಯಮಗಳ ಮೇಲೆ ಆಧಾರಿತವಾಗಿದೆ. ಶ್ರೀರಾಮಕೃಷ್ಣರ ಧರ್ಮಸಮನ್ವಯ ಸಿದ್ಧಾಂತವು ಪುಸ್ತಕಗಳ ಅಥವಾ ಬೌದ್ಧಿಕ ವಿಚಾರದ ಫಲವಲ್ಲ, ಅವರೇ ಸ್ವಂತವಾಗಿ ಅನುಭವಿಸಿದ ಅಪರೋಕ್ಷಾನುಭೂತಿಯಿಂದ  ಒಡಮೂಡಿದ್ದು ಅದು. ಇದು ಮೊದಲನೆಯ ಸಾಮಾನ್ಯ ನಿಯಮ. ಅವರ ಪಾಲಿಗೆ, ಧರ್ಮ ಎಂದರೆ, ನೇರ ಅನುಭಾವವಾಗಿತ್ತೇ ಹೊರತು, ಆಚರಣೆಗಳಾಗಲಿ ಗೊಡ್ದುನಂಬಿಕೆಗಳಾಗಲಿ ಆಗಿರಲಿಲ್ಲ.ಪ್ರತಿಯೊಬ್ಬನೂ ಅವನವನ ಧರ್ಮವನ್ನು ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಅನುಸರಿಸಿದರೆ, ನೇರವಾದ ಆಧ್ಯಾತ್ಮಿಕ ಅನುಭಾವವನ್ನು ಪಡೆದುಕೊಳ್ಳುತ್ತಾನೆ ಎಂದು ಅವರು ನಂಬಿದ್ದರು. ಅದಲ್ಲದೆ, ಪ್ರತಿಯೊಬ್ಬರೂ ತಮ್ಮ ಸ್ವಂತ ಧರ್ಮವನ್ನು ಪರಿಪಾಲಿಸಿ, ಅದು ಆಶ್ವಾಸನೆ ಕೊಡುವ ಪರಮಾರ್ಥವನ್ನು ಪಡೆದುಕೊಳ್ಳಬೇಕು ಎಂದು ಅವರು ಇಚ್ಛಿಸಿದ್ದರು. ಶ್ರೀರಾಮಕೃಷ್ಣರ ಪ್ರಕಾರ ಧರ್ಮ ಸಮನ್ವಯವೆಂದರೆ ಇದೇ.

ಶ್ರೀರಾಮಕೃಷ್ಣರು ಅನುಸರಿಸಿದ ಎರಡನೆಯ ಸಾಮಾನ್ಯ ನಿಯಮ ಇದು: ಪ್ರತಿಯೊಂದು ಧರ್ಮವನ್ನೂ ಅದರ ಅನುಯಾಯಿಗಳ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವುದು. ತಾವು ಹುಟ್ಟಿದ ಧಾರ್ಮಿಕ ಕಟ್ಟಳೆಯ ಮಾನದಂಡದಿಂದ ಇತರ ಧರ್ಮಗಳನ್ನು ಅವರೆಂದೂ ಅಳೆಯಲಿಲ್ಲ. ತಮ್ಮ ನಿರ್ಣಯವನ್ನು ಬದಿಗೊತ್ತಿ, ಎಲ್ಲ ಧರ್ಮಗಳನ್ನೂ ಆಯಾ ಧರ್ಮಗಳ ಅನುಯಾಯಿಗಳು ಕಂಡಂತೆ ಕಾಣುವ ಮನೋಭಾವವನ್ನು ದೃಶ್ಯತ್ವಸಿದ್ಧಾಂತ ವಿಧಾನ (phenomenological method) ಎಂದು ಆಧುನಿಕ ಕಾಲದಲ್ಲಿ ಕರೆಯುತ್ತಾರೆ. ಹಾಗೆಂದು ಶ್ರೀರಾಮಕೃಷ್ಣರು ಈ ವಿಧಾನವನ್ನು ಅನುಸರಿಸಿದರೆಂದು ಇದರ ಅರ್ಥವಲ್ಲ. ಅದಕ್ಕೆ ಬದಲಾಗಿ, ಈ ವಿಧಾನವು ಶ್ರೀರಾಮಕೃಷ್ಣರು ಸಾಧಿಸಿದ್ದರ ಅಣಕದಂತೆ ತೋರುವುದು. (ಶ್ರೀರಾಮಕೃಷ್ಣರು ಈ ವಿಧಾನಕ್ಕಿಂತಲೂ ಅತಿ ಉನ್ನತ ಧೈಯೋದ್ದೇಶವುಳ್ಳ ಅಪರಿಮಿತ ಮಹಿಮಾನ್ವಿತ ಬಾಳುವೆಯನ್ನು ಬಾಳಿದರು ಎಂದರ್ಥ -ಸಂ ) ಶ್ರೀರಾಮಕೃಷ್ಣರು ದೃಶ್ಯತ್ವಸಿದ್ಧಾಂತಕ್ಕೆ ಅಧಿಕೃತ ಮೊಹರನ್ನು ಒತ್ತಿದರಷ್ಟೆ, ವಿಪರ್ಯಾಸವೋ ಎಂಬಂತೆ, ಪಾಶ್ಚಾತ್ಯ ವಿದ್ವಾಂಸರು ತಮ್ಮ ವೈಯಕ್ತಿಕ ಜೀವನದಲ್ಲಿ ಇದನ್ನು ಅನುಸರಿಸಿದ ನಿದರ್ಶನಗಳು ವಿರಳ.

ಶ್ರೀರಾಮಕೃಷ್ಣರು ತಮ್ಮ ಬಾಳಿನ ಉದ್ದಕ್ಕೂ ಪಾಲಿಸಿದ ಮೂರನೆಯ ಸಾಮಾನ್ಯ ನಿಯಮವೆಂದರೆ, ಯಾವ ಧರ್ಮ ಅಥವಾ ಪಂಗಡವನ್ನೂ ಟೀಕಿಸದೆ ಇದ್ದುದು (ಹಾಗೆ ನೋಡಿದರೆ, ಅವರು ಯಾರನ್ನೂ ದೂಷಿಸಲಿಲ್ಲ, ಅದಕ್ಕೆ ಕಾರಣ, ಪಾಪಿಷ್ಠನಿಗೂ ಒಂದು ಭರವಸೆಯಿದೆ ಎಂದು ಅವರು ನಂಬಿದ್ದರು). ಶ್ರೀರಾಮಕೃಷ್ಣರು ಭಗವಚ್ಛಕ್ತಿಯು ಎತ್ತೆತ್ತಲೂ ಕಾರ್ಯವೆಸುಗುವುದನ್ನು ಕಾಣುತ್ತಿದ್ದರು. ಭಗವಂತನ ಲೀಲೆಯಲ್ಲಿ ಪ್ರತಿಯೊಂದು ಧರ್ಮಕ್ಕೂ, ಪ್ರತಿಯೊಂದು ಪಂಗಡಕ್ಕೂ ಒಂದು ನಿರ್ದಿಷ್ಟ ಸ್ಥಾನವಿರುವುದೆಂದು ನಂಬಿದ್ದರು. ಬೇರೆ ರೀತಿಯಲ್ಲಿ ಹೇಳುವುದಾದರೆ, ಧರ್ಮಸಮನ್ವಯವೆಂಬುದು ಅವರಲ್ಲಿ ಅತ್ಯಂತ ಸಹಜ ಪ್ರಕ್ರಿಯೆಯಾಗಿದ್ದಿತು, ಮತವಾದದ ಘೋಷಣೆಗಳಿಂದಾಗುವ ಕೃತಕ ಸೃಷ್ಟಿಯಾಗಿರಲಿಲ್ಲ. ಸಾಂಪ್ರದಾಯಿಕ ಹಿಂದೂ ಕುಟುಂಬದಲ್ಲಿ ಹುಟ್ಟಿ ಬೆಳೆದವರಾಗಿದ್ದರೂ, ಬ್ರಹ್ಮಸಮಾಜದವರು, ವೈಷ್ಣವರು, ಕ್ರೈಸ್ತರು, ಮುಸಲ್ಮಾನರು ಮತ್ತು ಸಿಖ್ಖರು – ಇವರೆಲ್ಲರ ನಡುವೆ ಅವರು ಒಂದಾಗಿ ಬೆರೆತು ಇರುತ್ತಿದ್ದರು.

ಶ್ರೀರಾಮಕೃಷ್ಣರ ಧರ್ಮಸಮನ್ವಯ ಸಿದ್ದಾಂತದ ಪ್ರಮುಖ ಅಂಶಗಳನ್ನು ಇಲ್ಲಿ ಕೊಡಲಾಗಿದೆ:

೧. ಪರಮಸತ್ಯವು ಒಂದೇ ಆಗಿದೆ. ಆದರೆ, ಅದು ವಿವಿಧ ಧರ್ಮಗಳಲ್ಲಿ ವಿವಿಧ ಹೆಸರುಗಳನ್ನು ಪಡೆದಿದೆ. ಅದು ಸಗುಣವೂ ಹೌದು, ನಿರ್ಗುಣವೂ ಹೌದು.

೨. ಪರಮಸತ್ಯದ ಸಾಕ್ಷಾತ್ಕಾರವೇ ಮಾನವ ಜೀವನದ ನೈಜ ಧೈಯ ಮತ್ತು ಉದ್ದೇಶ. ಇದೆ ಎಲ್ಲ ಧರ್ಮಗಳ ಸರ್ವೋಚ್ಚ ಉದೇಶವೂ ಆಗಿದೆ. ಈ ಬಗೆಯ ಅಪರೋಕ್ಷ ಇಂದ್ರಿಯಾತೀತ ಅನುಭಾವ ಮಾತ್ರವೇ ಧರ್ಮಗಳಿಗೆ ಅಧಿಕೃತತೆಯನ್ನು ನೀಡಬಲ್ಲದೇ ಹೊರತು, ಧರ್ಮಗ್ರಂಥಗಳಲ್ಲ.

೩. ಪರಮಸತ್ಯದ ಸಾಕ್ಷಾತ್ಕಾರಕ್ಕೆ ಹಲವು ಪಥಗಳಿವೆ. ಪ್ರತಿಯೊಂದು ಧರ್ಮವೂ ಅಂತಹ ಒಂದು ಪಥವಾಗಿದೆ. ಯತೋ ಮತ್ ತತೋ ಪಥ್ – ಮತಗಳೆಷ್ಟೋ, ಅಷ್ಟು ಪಥಗಳು. ಸಮಾನವಾದ ಪರಮ ಗುರಿಯತ್ತ ಸಾಗುವ ಮಾರ್ಗಗಳಾಗಿರುವುದರಿಂದ, ಎಲ್ಲ ವಿಶ್ವ ಧರ್ಮಗಳೂ ಸಮಂಜಸವಷ್ಟೇ ಅಲ್ಲ, ನೈಜವಾದವುಗಳು ಕೂಡ.

೪. ಆದರೆ ಪ್ರತಿಯೊಬ್ಬ ವ್ಯಕ್ತಿಯೂ ತಾನು ಆರಿಸಿಕೊಂಡ ಮಾರ್ಗದಲ್ಲಿ ನಿಷ್ಠಾವಂತನಾಗಿರಬೇಕು. ಅವನಲ್ಲಿ ಇಷ್ಟನಿಷ್ಠೆಯ ಭಾವನೆ ಇರಬೇಕು. ಆದರೆ, ತನ್ನ ಮಾರ್ಗವೊಂದೇ ನಿಜ ಮತ್ತು ಪರಿಪೂರ್ಣ ಎಂದು ಅವನು ಎಂದೂ ಭಾವಿಸಬಾರದು.

೫. ಇನ್ನೂ ಮುಂದೆ ಹೋಗಿ, ಒಬ್ಬನು ಎಲ್ಲ ಧರ್ಮಗಳ ಪ್ರವರ್ತಕರಲ್ಲಿ, ಅವರೆಲ್ಲರೂ ಭಗವಂತನ ಅಭಿವ್ಯಕ್ತರೂಪರೆಂದು ತಿಳಿದು ಗೌರವವನ್ನು ತೋರಬೇಕು. ಭಗವಂತನು ಎಲ್ಲ ಜನರಲ್ಲಿ ನೆಲೆಸಿದ್ದಾನೆ; ಜಾತಿ ಮತ ಜನಾಂಗಗಳ ಭೇದವಿಲ್ಲದೆ ಅವನ ಸೇವೆ ಮಾಡಬೇಕು ಎಂಬ ಪರಿಜ್ಞಾನ ಇರಬೇಕು.

ಮೇಲಿನ ಐದು ಅಂಶಗಳು ಶ್ರೀರಾಮಕೃಷ್ಣರ ಧರ್ಮಸಮನ್ವಯ ಸಿದ್ದಾಂತದ ಸಾರಭೂತ ತತ್ತ್ವಗಳಾಗಿವೆ. ಅವುಗಳ ಮಹತ್ವವನ್ನು ಮನಸ್ಸಿನಲ್ಲಿಟ್ಟುಕೊಂಡು ಅವುಗಳನ್ನು ನಾವು ಕೆಳಗೆ ಚರ್ಚಿಸಿದ್ದೇವೆ:

೧. ಪರಮಸತ್ಯದ ಬಗೆಗಿನ ಮೊದಲನೆಯ ಅಂಶವನ್ನು ಈಗ ನೋಡೋಣ. ಶ್ರೀರಾಮಕೃಷ್ಣರು ಒತ್ತಿಹೇಳುತ್ತಿದ್ದ ಒಂದು ವಿಷಯವೆಂದರೆ, ಭಗವಂತನಿಗೆ ಯಾವ ಸೀಮಿತತೆಗಳನ್ನೂ ಒಡ್ಡಬಾರದು ಎಂಬುದು. ಭಗವಂತನನ್ನು ಸಂಪೂರ್ಣವಾಗಿ ತಿಳಿಯಲಾಗದು;

ಅವನನ್ನು ಸಾಕ್ಷಾತ್ಕರಿಸಿಕೊಳ್ಳಬಹುದು; ಆದರೆ ಮಾನವ ಮನಸ್ಸು ಅಚಿಂತ್ಯವೂ ಅವ್ಯಯವೂ ಆದ ಭಗವದ್ರಹಸ್ಯವನ್ನು ಪೂರ್ಣಪ್ರಮಾಣದಲ್ಲಿ ಗ್ರಹಿಸಲಾಗದು. ಶ್ರೀರಾಮಕೃಷ್ಣರು ಹೇಳುತ್ತಾರೆ: “ಬ್ರಹ್ಮನನ್ನು ಸಂಪೂರ್ಣವಾಗಿ ತಿಳಿದುಬಿಟ್ಟಿದ್ದೇವೆಂದು ಜನರು ಬಗೆಯುತ್ತಾರೆ. ಒಮ್ಮೆ ಇರುವೆಯೊಂದು ಸಕ್ಕರೆಯ ಬೆಟ್ಟಕ್ಕೆ ಹೋಯಿತು, ಸಕ್ಕರೆಯ ಒಂದು ಕಣ ಅದರ ಹೊಟ್ಟೆಯನ್ನು ತುಂಬಿತು. ಅದು ಬಾಯಲ್ಲಿ ಇನ್ನೊಂದು ಕಣವನ್ನು ಕಚ್ಚಿಕೊಂಡು, ಮನೆಯತ್ತ ನಡೆಯಲಾರಂಭಿಸಿತು. ದಾರಿಯಲ್ಲಿ ಅದು ಆಲೋಚಿಸಿತು ‘ಇನ್ನೊಮ್ಮೆ ನಾನು ಬರುವೆ. ಆಗ ಇಡೀ ಬೆಟ್ಟವನ್ನೇ ಕೊಂಡೊಯ್ಯುವೆ..” ಶುಕದೇವ ಮತ್ತು ಅವನ ರೀತಿಯ ಇತರ ಋಷಿಗಳು, ದೊಡ್ಡ ಇರುವೆಗಳಿದ್ದಂತೆ ಅಷ್ಟೆ.”

ಬ್ರಹ್ಮದ ನಿಜಸ್ವರೂಪವನ್ನು ಮಾತುಗಳಲ್ಲಿ ಬಣ್ಣಿಸಲಾಗದು ಅನ್ನುವುದು ಶ್ರೀರಾಮಕೃಷ್ಣರ ಅಭಿಪ್ರಾಯ. ಅವರು ಹೇಳುತ್ತಿದರು; “ಬ್ರಹ್ಮವೆಂಬುದೇನು ಎನ್ನುವುದನ್ನು ವರ್ಣಿಸಲಾಗದು. ಈ ಜಗತ್ತಿನಲ್ಲಿರುವ ಎಲ್ಲ ಸಂಗತಿಗಳು – ವೇದಗಳು, ಪುರಾಣಗಳು, ತಂತ್ರಗಳು, ಆರು ದರ್ಶನಗಳು – ಇವೆಲ್ಲ ಎಂಜಲಾಗಿವೆ, ನಾವು ತಿನ್ನುವ ಆಹಾರ ನಾಲಗೆಯ ಸ್ಪರ್ಶದಿಂದ ಎಂಜಲಾಗುತ್ತದೆ. ಅದೇ ರೀತಿ ಇವುಗಳೆಲ್ಲ, ನಾಲಗೆಯಿಂದ ಓದಿಯೋ, ಮಾತನಾಡಿಯೋ ಎಂಜಲಾಗಿಬಿಟ್ಟಿವೆ. ಈ ರೀತಿ ಎಂಜಲಾಗದ ಒಂದೇ ಒಂದು ವಸ್ತು ಇದೆ. ಅದೇ ಬ್ರಹ್ಮ.”

ಶ್ರೀರಾಮಕೃಷ್ಣರು ಪರಮಸತ್ಯವು ಸಾಕಾರವೂ ಹೌದು, ನಿರಾಕಾರವೂ ಹೌದು; ವಿವಿಧ ಧರ್ಮಗಳಲ್ಲಿ ಅದನ್ನು ವಿವಿಧ ಹೆಸರುಗಳಲ್ಲಿ ಕರೆಯುತ್ತಾರೆ ಎಂದು ಕೂಡ ನಂಬಿದ್ದರು. ನೀರು, ಹಿಮವಾಗಿ ಘನೀಭೂತವಾಗುವುದು. ಅದೇ ರೀತಿ ಭಕ್ತನ ಭಕ್ತಿಯ ಶೈತ್ಯದಿಂದ, ನಿರ್ಗುಣ ತತ್ತ್ವ ಸಗುಣವಾದಂತೆ ತೋರುವುದು. “ಸತ್ಯ ಒಂದು ಮತ್ತು ಎಲ್ಲರಿಗೂ ಸಮಾನ. ವೈವಿಧ್ಯವಿರುವುದು ನಾಮ ಮತ್ತು ರೂಪಗಳಲ್ಲಿ ಮಾತ್ರ ಒಂದು ಕೊಳದಲ್ಲಿ ಮೂರುನಾಲ್ಕು ಘಟ್ಟಗಳಿರುತ್ತವೆ. ಒಂದೆಡೆಯಲ್ಲಿ, ಹಿಂದುಗಳು ನೀರು ಕುಡಿದು, ಅದನ್ನು ‘ಜಲ’ ಎನ್ನುತ್ತಾರೆ. ಮುಸಲ್ಮಾನರು ಇನ್ನೊಂದೆಡೆ ನೀರು ಕುಡಿದು, ಅದನ್ನು ‘ಪಾನಿ’ ಎನ್ನುತ್ತಾರೆ. ಇಂಗ್ಲೀಷಿನವರು ಮೂರನೆಯ ಘಟ್ಟದಲ್ಲಿ ನೀರು ಕುಡಿದು, ಅದನ್ನು ‘ವಾಟರ್’ ಎನ್ನುತ್ತಾರೆ. ಈ ಮೂರೂ ಪದಗಳು ಒಂದೇ ನೀರನ್ನು, ಎಲ್ಲರೂ ಸಮಾನವಾಗಿ ಕುಡಿದ ನೀರನ್ನು ಸೂಚಿಸುತ್ತದೆ. ಅದೇ ರೀತಿ, ಸತ್ಯವನ್ನು ಕೆಲವರು ‘ಅಲ್ಲಾಹು’ ಎಂದು ಕರೆಯುತ್ತಾರೆ. ಕೆಲವರು ‘ಗಾಡ್’ ಎಂದು ಕರೆಯುತ್ತಾರೆ. ಮತ್ತೆ ಕೆಲವರು ಬ್ರಹ್ಮ, ಇನ್ನು ಕೆಲವರು ಕಾಳಿ, ಮತ್ತಿತರರು ರಾಮ, ಏಸು, ದುರ್ಗಾ, ಹರಿ – ಮುಂತಾದ ಹಲವು ಹೆಸರುಗಳಿಂದ ಕರೆಯುತ್ತಾರೆ. ಭಗವಂತನೊಬ್ಬನೇ ಆದರೆ, ಅವನ ನಾಮಧೇಯಗಳು ಮಾತ್ರ ಅನೇಕ.”

೨. ಈಗ ಶ್ರೀರಾಮಕೃಷ್ಣರ ಧರ್ಮಸಮನ್ವಯ ಸಿದ್ದಾಂತದ ಎರಡನೆಯ ಅಂಶವನ್ನು ನೋಡೋಣ. ಭಗವತ್ಸಾಕ್ಷಾತ್ಕಾರವೇ ಧರ್ಮದ ಸಾರಭೂತ ತಿರುಳು ಎನ್ನುವುದೇ ಅದು. ಜೀವನದ ಪರಮ ಗುರಿ ಭಗವಂತನ ಕಡೆ ಮತ್ತೆ ಹೋಗುವುದೆಂದೇ ಎಲ್ಲ ಧರ್ಮಗಳಲ್ಲೂ ನಂಬಲಾಗಿದೆ. ಭಾರತದಲ್ಲಿ ಉಗಮಗೊಂಡ ಆನುಭಾವಿಕ ಧರ್ಮಗಳಲ್ಲಿ, ಆನುಭಾವಿಕ ಅನುಭವದ ಮೂಲಕ ಭಗವತ್ಸಾಕ್ಷಾತ್ಕಾರವು ವರ್ತಮಾನ ಜೀವನಾವಧಿಯಲ್ಲಿಯೇ ಸಾಧ್ಯವೆಂದು ಪರಿಗಣಿಸಲಾಗಿದೆ. ಇನ್ನಿತರ ಧರ್ಮಗಳಲ್ಲಿಯೂ, ಅದು ಮರಣಾನಂತರ ಸಂಭವಿಸುವುದೆಂಬ ನಿರೀಕ್ಷೆಯನ್ನು ಕಾಣುತ್ತೇವೆ.ಈ ಬಗೆಯ ಭಗವದನುಭವವು ಧರ್ಮ ಸಾಮರಸ್ಯವನ್ನು ಸಂಸ್ಥಾಪಿಸಲು ಬೇಕಾದ ಕೇಂದ್ರ ತತ್ತ್ವವಾಗಬಲ್ಲುದು. ಆಚರಣೆಗಳು, ಪುರಾಣಗಳು, ಕಟ್ಟಳೆಗಳು ಇವೆಲ್ಲ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಬೇರೆಬೇರೆಯಾಗುತ್ತವೆ. ಅವುಗಳು ಧರ್ಮದ ಅಮುಖ್ಯ ಅಂಶಗಳು ಎಂದು ಶ್ರೀರಾಮಕೃಷ್ಣರು ಪರಿಗಣಿಸುತ್ತಾರೆ. ಈ ವಿಷಯದಲ್ಲಿ ಅವರು ಹೀಗೆ ಹೇಳುತ್ತಿದ್ದರು: “ನೀವು ಮಾವಿನ ತೋಪಿಗೆ ಹೋದಾಗ, ನಿಮ್ಮ ಪ್ರಥಮ ಆದ್ಯತೆ ಮಾವಿನ ಹಣ್ಣುಗಳನ್ನು ತಿನ್ನುವುದರಲ್ಲಿ ಇರಬೇಕೇ ಹೊರತು, ಮರದ ಎಲೆಗಳನ್ನು ಎಣಿಸುವುದರಲ್ಲಲ್ಲ. ಹಾಗೆಯೇ, ಧರ್ಮದ ಪ್ರಾಥಮಿಕ ಉದ್ದೇಶ ಭಗವದನುಭವವನ್ನು ಪಡೆದುಕೊಂಡು, ಭಗವದಾನಂದವನ್ನು ಸವಿಯುವುದ್ದೇ ಆಗಿದೆ.”

೩. ಶ್ರೀರಾಮಕೃಷ್ಣರ ಮೂರನೆಯ ಬೋಧನೆ ಇದು: ಪರಮಸತ್ಯವು ಒಂದೇ ಆದರೂ ಅದನ್ನು ಹಲವು ಮಾರ್ಗಗಳ ಮೂಲಕ ಸೇರಬಹುದು. ಶ್ರೀರಾಮಕೃಷ್ಣರು ಹೀಗೆ ಹೇಳುತ್ತಿದ್ದರು “ಭಗವಂತನನ್ನು ಎಲ್ಲ ಮಾರ್ಗಗಳ ಮೂಲಕವೂ ಸಾಕ್ಷಾತ್ಕರಿಸಿಕೊಳ್ಳಬಹುದು. ಎಲ್ಲ ಧರ್ಮಗಳೂ ಸತ್ಯವಾದುವುಗಳೇ. ಮುಖ್ಯವಾದ ಸಂಗತಿ ಎಂದರೆ ಮಹಡಿಯನ್ನು ತಲುಪುವುದು. ಅದನ್ನು ಕಲ್ಲಿನ ಮೆಟ್ಟಿಲುಗಳ ಮೂಲಕವೋ, ಮರದ ಮೆಟ್ಟಿಲುಗಳ ಮೂಲಕವೋ, ಬೊಂಬಿನ ಮೆಟ್ಟಿಲುಗಳ ಮೂಲಕವೋ ಅಥವಾ ಹಗ್ಗದ ಮೂಲಕವೋ ನೀವು ತಲುಪಬಹುದಲ್ಲವೆ.” ಯತೋ ಮತ್ ತತೋ ಪಥ್ – ಮತಗಳೆಷ್ಟೋ ಪಥಗಳಷ್ಟು – ಶ್ರೀರಾಮಕೃಷ್ಣರ ಈ ಪ್ರಸಿದ್ಧ ಉಕ್ತಿಯ ತಾತ್ಪರ್ಯ ಇದೇ.

ಈ ವಿಷಯದಲ್ಲಿ, ಇನ್ನೊಂದು ಸಂಗತಿಯನ್ನು ಗಮನಿಸಬೇಕು. ಪರಮಸತ್ಯದೆಡೆಗೆ ಇರುವ ಸಮಂಜಸ ಮಾರ್ಗಗಳು ಎಂದು ಶ್ರೀರಾಮಕೃಷ್ಣರು ಹೇಳುವಾಗ, ಅವರು ಬೊಟ್ಟು ಮಾಡಿ ತೋರಿಸುತ್ತಿರುವುದು, ಪ್ರಮುಖವಾದ ಜಾಗತಿಕ ಧರ್ಮಗಳತ್ತ, ಕೀಳು ಆಚರಣೆಗಳಲ್ಲಿ ತೊಡಗಿಕೊಂಡಿರುವ ಕೆಲವು ಪಂಗಡಗಳು, ಮತಗಳು ಮತ್ತು ಗುಂಪುಗಳ ಅಸ್ತಿತ್ವದ ಬಗ್ಗೆ ಅವರಿಗೆ ಅರಿವಿತ್ತು. ಅದನ್ನವರು ಖಂಡಿಸಲಿಲ್ಲ; ಆದರೆ ಭಾರತದಲ್ಲಿ, ಹಿಂದಿನ ಕಾಲದ ಮನೆಗಳಲ್ಲಿದ್ದ ಚಿಕ್ಕದಾದೊಂದು ಬಾಗಿಲಿಗೆ ಅವುಗಳನ್ನು ಹೋಲಿಸುತ್ತಿದ್ದರು. ಆ ಬಾಗಿಲ ಮೂಲಕ ಜಾಡಮಾಲಿಯವನು ಮನೆಯೊಳಗೆ ಬಂದು, ಶೌಚಾಲಯವನ್ನು ಶುಚಿಗೊಳಿಸುತ್ತಿದ್ದನು. ಪ್ರಮುಖ ವಿಶ್ವಧರ್ಮಗಳೆಂದರೆ ಹೆಬ್ಬಾಗಿಲಿದ್ದಂತೆ. ಅದರ ಮೂಲಕ ಮನೆಯನ್ನು ಯಾರಾದರೂ ಪ್ರವೇಶಿಸಬಹುದು.

೪. ಶ್ರೀರಾಮಕೃಷ್ಣರ ಧರ್ಮಸಮಾನ್ವಯ ತತ್ತ್ವದ ಇನ್ನೊಂದು ಸಾಮಾನ್ಯ ನಿಯಮವೆಂದರೆ, ಇಷ್ಟನಿಷ್ಠೆ- ತಾನಾರಿಸಿಕೊಂಡಿರುವ ಇಷ್ಟದೇವತೆ ಆಥವಾ ಮಾರ್ಗದಲ್ಲಿ ನಿಷ್ಠೆ. ಅವರು ವಿವಿಧ ಆಧ್ಯಾತ್ಮಿಕ ಪಥಗಳನ್ನು ಕ್ರಮಿಸಿದರು, ನಿಜ. ಆದರೆ, ಪ್ರತಿಯೊಬ್ಬನೂ ವಿವಿಧ ಧಾರ್ಮಿಕ ಮಾರ್ಗಗಳನ್ನು ಅನುಸರಿಸಬೇಕೆಂದೇನು ಅವರ ಇಚ್ಛೆ ಇರಲಿಲ್ಲ. ಆದಕ್ಕೆ ಬದಲಾಗಿ, ಪ್ರತಿಯೊಬ್ಬನೂ ತನ್ನ ಸ್ವಂತ ಧರ್ಮ ಅಥವಾ ಧಾರ್ಮಿಕ ಪಥದಲ್ಲಿ ನಿಷ್ಠನಾಗಿದ್ದುಕೊಂಡು, ಜೀವನದ ಪರಮಾರ್ಥವನ್ನು ಸಾಧಿಸಲು ತನ್ನ ಶಕ್ತಿಗೆ ಮೀರಿ ಪ್ರಯತ್ನಿಸಬೇಕು ಎನ್ನುವುದೇ ಅವರ ಬಯಕೆಯಾಗಿತ್ತು. ವಿವಿಧ ಮಾರ್ಗಗಳನ್ನು ಅನುಸರಿಸಿದರೆ, ಗುರಿಯನ್ನು ತಲುಪಲು ಅತ್ಯಾವಶ್ಯಕವಾದ ಏಕನಿಷ್ಠೆ ಮತ್ತು ಭಾವ ತೀವ್ರತೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಇದು ಹೇಗೆಂದರೆ, ಒಂದು ಸ್ಥಳದಲ್ಲಿ ಬಾವಿಗಾಗಿ ಅಗೆಯುವ ಬದಲು, ಹಲವಾರು ಸ್ಥಳಗಳಲ್ಲಿ ಗುಂಡಿಗಳನ್ನು ತೋಡಿದಂತೆ.

೫. ಆದರೂ, ಒಬ್ಬನು ತನ್ನ ಧರ್ಮದಲ್ಲಿ ನಿಷ್ಠನಾಗುವುದರ ಜೊತಜೊತೆಗೆ ಇತರ ಧರ್ಮಗಳ ಬಗ್ಗೆ ಗೌರವವನ್ನು, ಅದರ ಅನುಯಾಯಿಗಳ ಮೇಲೆ ಪ್ರೀತಿ ಮತ್ತು ಉದಾರತೆಯನ್ನು ಬೆಳೆಸಿಕೊಳ್ಳಬೇಕು. ಶ್ರೀರಾಮಕೃಷ್ಣರು ನಿಜಕ್ಕೂ ಒಪ್ಪದ ಸಂಗತಿಯೇನೆಂದರೆ, ಮೂಢನಂಬಿಕೆಗಳಿಗೆ ದಾಸನಾಗಿರುವವನ ಅಥವಾ ಧರ್ಮಾಂಧ ವ್ಯಕ್ತಿಯೊಬ್ಬನ ಅಮುಕ್ತ ಮಾನಸಿಕ ಸ್ಥಿತಿ. ಗುರುದೇವರ ಕೆಳಗಿನ ಹೇಳಿಕೆಯು ಈ ವಿಷಯದ ಮೇಲೆ ಅವರ ಅಭಿಪ್ರಾಯವನ್ನು ಸ್ಫುಟಗೊಳಿಸುತ್ತದೆ: “ಪ್ರಾಮಾಣಿಕತೆ ಮತ್ತು ವ್ಯಾಕುಲತೆಯಿಂದ ಎಲ್ಲ ಧರ್ಮಗಳಲ್ಲಿಯೂ ಸಾಕ್ಷಾತ್ಕಾರವನ್ನು ಪಡೆಯಬಹುದು. ವೈಷ್ಣವರು ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳುವರು. ಹಾಗೆಯೇ, ಶಾಕ್ತರು, ವೇದಾಂತಿಗಳು ಮತ್ತು ಬ್ರಹ್ಮಸಮಾಜದವರು ಎಲ್ಲರೂ ಭಗವಂತನನ್ನು ಪಡೆಯುವರು. ಮುಸಲ್ಮಾನರು, ಕ್ರೈಸ್ತರು ಕೂಡ ಅವನ ದರ್ಶನ ಗಳಿಸಿಕೊಳ್ಳುವರು. ವ್ಯಾಕುಲರೂ ಪ್ರಾಮಾಣಿಕರೂ ಆಗಿದ್ದರೆ, ಎಲ್ಲರೂ ಸಂದೇಹವಿಲ್ಲದೆ ಭಗವಂತನನ್ನು ನೋಡುವರು. “ಕೃಷ್ಣನನ್ನು ಆರಾಧಿಸದಿದ್ದರೆ ಏನು ಪಡೆಯಲಾಗದು’ ಅಥವಾ ‘ನಮ್ಮ ದಿವ್ಯಮಾತೆಯಾದ ಕಾಳಿಯನ್ನು ಪೂಜಿಸದಿದ್ದರೆ ಏನೂ ಗಳಿಸಲಾಗದು’ ಅಥವಾ ‘ಕ್ರೈಸ್ತ ಧರ್ಮವನ್ನು ಅಪ್ಪಿಕೊಳ್ಳದಿದ್ದರೆ ರಕ್ಷಣೆ ದೊರಕದು’ – ಹೀಗೆ ಕೆಲವರು ಕಲಹಗಳಲ್ಲಿ ತೊಡಗಬಹುದು ಇದು ಶುದ್ಧ ಮತಾಂಧತೆಯಷ್ಟೆ.” ಶ್ರೀ ರಾಮಕೃಷ್ಣರು ಯಾರೊಬ್ಬರ ಶ್ರದ್ಧೆ ಅಥವಾ ಭಕ್ತಿಭಾವವನ್ನು ಪ್ರಕ್ಷುಬ್ಧಗೊಳಿಸಲು ಇಷ್ಟಪಡುತ್ತಿರಲಿಲ್ಲ. ಪ್ರತಿ ವ್ಯಕ್ತಿಯ ಶ್ರದ್ಧೆಯನ್ನು ಅವನ ಮಾರ್ಗದಲ್ಲಿಯೇ ಸಶಕ್ತಗೊಳಿಸಲು ಮತ್ತು ಅದನ್ನು ಅನುಸರಿಸಲು ಅವನನ್ನು ಉತ್ತೇಜಿಸಲು ಅವರು ಪ್ರಯತ್ನಪಟ್ಟರು . (ಮುಂದುವರಿಯುವುದು)

(ಮೂಲ: ವಿವೇಕಪ್ರಭ ಏಪ್ರಿಲ್ 2008)

ಆಕರಗಳು

೧. Romain Rolland, The Life of Vivekananda and the Universal Gospel (Kolkata: Advaita Asrama). ಪು ೧೪೧.

೨. ಈ ಅವಧಿಯಲ್ಲಿ, ವೇದಾಂತ ತತ್ತ್ವದ ಬೋಧಕರಾದ ಹಲವಾರು ಮಹಾಪುರುಷರ ಜನ್ಮವಾಯಿತು. ಅವರನ್ನು ಆಚಾರ್ಯರು ಎಂದು ಕರೆಯುತ್ತಾರೆ. ಆಚಾರ್ಯರುಗಳು ಶಾಸ್ತ್ರಗಳನ್ನು ವಿವಿಧ ಬಗೆಗಳಲ್ಲಿ ಅರ್ಥೈಸಿದರು. ಆದರೂ ಅವರೆಲ್ಲರೂ, ಐಕ್ಯಾರ್ಥ ವಾದ ವೆಂಬ ವ್ಯಾಖ್ಯಾನ ನಿಯಮವನ್ನು ಪಾಲಿಸಿದರು. ಅದು ‘ಶಾಸ್ತ್ರಗಳು ಒಂದೇ ತತ್ತ್ವವನ್ನು ಪ್ರತಿ ಪಾದಿಸುತ್ತವೆ’ ಎಂದು ಹೇಳುತ್ತದೆ. ಪ್ರತಿಯೊಬ್ಬ ಆಚಾರ್ಯರೂ ತಮ್ಮ ಸಿದ್ಧಾಂತವೇ ಸರಿ ಎಂದು ಪ್ರತಿಪಾದನೆ ಮಾಡುತ್ತಿದ್ದರು. ಆದ್ದರಿಂದ, ತಮ್ಮ ಸಿದ್ದಾಂತವನ್ನು ಮಂಡಿಸುವ ಉದ್ದೇಶದಿಂದಲೇ ಶಾಸ್ತ್ರಗಳಿಗೆ ವ್ಯಾಖ್ಯಾನಗಳನ್ನು ಬರೆದರು. ಐಕ್ಯಾರ್ಥ ವಾದದ ವಿಸ್ತೃತ ಚರ್ಚೆಗೆ ನೋಡಿ: JAB Van Buitenen. Ramanuja on the Bhagavad Gita (Delhi, Motilal Banarasidass, 1968) pp 29, 32.

೩. ದೃಶ್ಯತ್ವಸಿದ್ಧಾಂತ (Phenomenology) ಎನ್ನುವುದು ಪಾಶ್ಚಾತ್ಯ ತತ್ತ್ವಶಾಸ್ತ್ರದ ಒಂದು ಸಿದ್ಧಾಂತ. ಇದರ ಸ್ಥಾಪಕ ಎಡ್ ಮಂಡ್ ಹುಸ್ಸೇರಿ (೧೮೫೯ – ೧೯೩೮). ಇದರ ಎರಡು ವಿಧಾನಗಳಾದ ನ್ಯಾಯ ನಿರ್ಧಾರಣವನ್ನು ಕೈಬಿಡುವುದು ಮತ್ತು ಉದಾರ ದೃಷ್ಟಿ – ಇವುಗಳನ್ನು ಧರ್ಮಗಳ ಅಧ್ಯಯನದಲ್ಲಿ ಅಳವಡಿಸಿದವರು. ಡಬ್ಲ್ಯೂಬಿ. ಕ್ರಿಸ್ಟೆನ್ ಸೆನ್ ಮತ್ತು ಸಿ ವಾನ್ ಡೆರ್ ಲೀವ್ (WB Kristensen, G Van Der Leeuw).


ಶ್ರೀರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಧರ್ಮಸಮನ್ವಯ (continued) ಮೇ

ಹಿಂದಿನ ಸಂಚಿಕೆಯಲ್ಲಿ : ವೈದಿಕ ಯುಗದ ನಂತರ ಬಹುತ್ವ ಭಾವನೆಯು ನಷ್ಟವಾಯಿತೆಂಬುದು ಸುಸ್ಪಷ್ಟ. ಆಧುನಿಕ ಕಾಲದಲ್ಲಿ ಪಾಶ್ಚಾತ್ಯರ ಸಂಪರ್ಕದಿಂದ ಸಂದಿಗ್ಧ ಸ್ಥಿತಿ ನಿರ್ಮಾಣವಾಯಿತು. ಆಗ ಮತ್ತೆ ಭಾರತವನ್ನು ಪುನರುಜ್ಜೀವನಗೊಳಿಸಿದ್ದೇ ಶ್ರೀರಾಮಕೃಷ್ಣ ಮತ್ತು ವಿವೇಕಾನಂದರು ಮಾಡಿದ ಮಹಾನ್ ಕಾರ್ಯವಾಗಿದೆ. ಆಧುನಿಕ ಜಗತ್ತಿನಲ್ಲಿ ಧಾರ್ಮಿಕ ಬಹುತ್ವ ಭಾವನೆಯನ್ನು ಪ್ರತಿಪಾದಿಸಿದ ಮೊಟ್ಟಮೊದಲ ಮಹಾನ್ ಪ್ರವಾದಿಯೆಂದರೆ, ಶ್ರೀರಾಮಕೃಷ್ಣ ಪರಮಹಂಸರು. ವಿಶ್ವಾತ್ಮಕತೆಯು ಧರ್ಮಗಳ ನಡುವಣ ಸಮಾನ ಭೂಮಿಕೆಗೆ ಒತ್ತುಕೊಡುತ್ತದೆ. ಶ್ರೀರಾಮಕೃಷ್ಣರ ಧರ್ಮಸಮನ್ವಯ ಸಿದ್ಧಾಂತವು ಅವರು ತಮ್ಮ ಜೀವನದಲ್ಲಿ ಅನುಸರಿಸಿದ ಕೆಲವು ನಿರ್ದಿಷ್ಟ ಸಾಮಾನ್ಯ ನಿಯಮಗಳ ಮೇಲೆ ಆಧಾರಿತವಾಗಿದೆ.

ಸ್ವಾಮಿ ವಿವೇಕಾನಂದರ ಮೂರು ಪೂರಕ ತತ್ತ್ವಗಳು

ಸ್ವಾಮಿ ವಿವೇಕಾನಂದರು ತಮ್ಮ ಗುರುದೇವರ ಧರ್ಮಸಮನ್ವಯ ಸಂದೇಶವನ್ನು ಪಾಶ್ಚಿಮಾತ್ಯ ಜಗತ್ತಿನಲ್ಲಿ ಹರಡಿದರು. ಇದನ್ನು ಅವರು ಮೊದಲಿಗೆ, ಸುಪ್ರಸಿದ್ಧವಾದ ಷಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ, ತದನಂತರ, ಅಮೆರಿಕ ಮತ್ತು ಇಂಗ್ಲೆಂಡಿನ ವಿವಿಧ ಭಾಗಗಳಲ್ಲಿ ಪ್ರತಿಪಾದಿಸಿದರು. ಹಿಂದೆ ಚರ್ಚಿಸಿದ, ಶ್ರೀರಾಮಕೃಷ್ಣರ ಧರ್ಮಸಮನ್ವಯ ಸಿದ್ಧಾಂತಕ್ಕೆ ಅವರು ಮೂರು ಪೂರಕ ತತ್ತ್ವಗಳನ್ನು ಸೇರಿಸಿದರು, ಅವು ಹೀಗಿವೆ:

೧. ಜಗತ್ತಿನ ಧರ್ಮಗಳು ಪರಸ್ಪರ ಪೂರಕವೇ ಹೊರತು ವಿರುದ್ಧವಲ್ಲ.

೨. ಯಾರೊಬ್ಬರೂ ಮತಾಂತರಗೊಳ್ಳುವ ಅಗತ್ಯವಿಲ್ಲ.

೩. ತನ್ನ ಸ್ವಂತ ಧರ್ಮದಲ್ಲಿ ನಿಷ್ಠಾವಂತನಾಗಿದ್ದುಕೊಂಡು, ಇತರ ಧರ್ಮಗಳ ಉತ್ತಮ ಅಂಶಗಳನ್ನು ಒಪ್ಪಿಕೊಂಡು, ಅವುಗಳನ್ನು ತನ್ನಲ್ಲಿ ಅಂತರ್ಗತಗೊಳಿಸಿಕೊಳ್ಳುವುದೇ ಆದರ್ಶ ಮಾರ್ಗವಾಗಿದೆ.

ಸ್ವಾಮೀಜಿ ಷಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ತಾವು ಮಾಡಿದ ಭಾಷಣದಲ್ಲಿ ಮೇಲಿನ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅವರು ಹೀಗೆ ಹೇಳುತ್ತಾರೆ: “ಕ್ರೈಸ್ತರು ಹಿಂದುಗಳಾಗಲಿ ಎಂಬುದು ನನ್ನ ಬಯಕೆಯೇ? ಖಂಡಿತ ಅಲ್ಲ. ಹಿಂದುಗಳು, ಬೌದ್ಧರು ಕ್ರಿಸ್ತರಾಗಲಿ ಎಂಬುದು ನನ್ನ ಬಯಕೆಯೇ? ಖಂಡಿತ ಅಲ್ಲ… ಕ್ರೈಸ್ತ ಹಿಂದು ಅಥವಾ ಬೌದ್ಧನಾಗಬೇಕಾಗಿಲ್ಲ. ಹಿಂದುವಾಗಲಿ ಬೌದ್ಧನಾಗಲಿ ಕ್ರೈಸ್ತನಾಗಬೇಕಾಗಿಲ್ಲ. ಪ್ರತಿಯೊಬ್ಬನೂ ಇತರರ ಮನೋಭಾವವನ್ನು ಗ್ರಹಿಸಬೇಕು. ಆದರೆ ತನ್ನ ವೈಯಕ್ತಿಕತೆಯನ್ನು ಉಳಿಸಿಕೊಂಡು ತನ್ನದೇ ಆದ ಬೆಳವಣಿಗೆಯ ನಿಯಮಗಳಿಗೆ ಅನುಗುಣವಾಗಿ ಬೆಳೆಯಬೇಕು.”

ಸ್ವಾಮಿ ವಿವೇಕಾನಂದರ ವಿಶ್ವಧರ್ಮ ಪ್ರತಿಪಾದನೆ

ಮೊದಲೇ ಹೇಳಿದಂತೆ, ಸ್ವಾಮಿ ವಿವೇಕಾನಂದರು ಬಹುತ್ವ ಭಾವನೆಯನ್ನು ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಿ, ವಿಶ್ವಾತ್ಮಕತೆಯೆಂಬ ನೂತನ ಕಲ್ಪನೆಯನ್ನು ಹುಟ್ಟುಹಾಕಿದರು. ವಿಶ್ವಧರ್ಮದ ಪರಿಕಲ್ಪನೆಯನ್ನು ಸ್ವಾಮೀಜಿ ಮೊಟ್ಟಮೊದಲು ಪ್ರಸ್ತುತ ಪಡಿಸಿದ್ದು, ಷಿಕಾಗೋದಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಮತ್ತು ನಂತರ, ಅವರು ಅಮೆರಿಕ ಮತ್ತು ಇಂಗ್ಲೆಂಡ್ ಗಳಲ್ಲಿ ನೀಡಿದ ಪ್ರವಚನಗಳಲ್ಲಿ. ಸ್ವಾಮೀಜಿಯವರು ‘ವಿಶ್ವಧರ್ಮ’ ವೆಂಬ ಪರಿಭಾಷೆಗೆ ಒಂದು ಹೊಸ ಅರ್ಥವನ್ನೇ ಕಲ್ಪಿಸಿದರೆಂಬುದನ್ನು ಗಮನದಲ್ಲಿಡಬೇಕು.

ಸ್ವಾಮಿ ವಿವೇಕಾನಂದರಿಗಿಂತ ಮೊದಲು, ಒಂದು ನಿರ್ದಿಷ್ಟ ದೇಶ, ಜನಾಂಗ ಮತ್ತು ಜಾತಿಗೆ ಸೀಮಿತವಾಗದೆ. ವಿಶ್ವದ ಎಲ್ಲ ಜನರಿಗೆ ಮುಕ್ತ ಪ್ರವೇಶವಿರುವ ಧರ್ಮವನ್ನು ‘ವಿಶ್ವಧರ್ಮ’ವೆಂದು ಪರಿಗಣಿಸಲಾಗುತ್ತಿತ್ತು. ಜಾರ್ಜ್ ಗ್ಯಾಲ್ಲೋವೇ ಎಂಬುವವರು ತಮ್ಮ Philosophy of Religion ಎಂಬ ಸುಪ್ರಸಿದ್ಧ ಗ್ರಂಥದಲ್ಲಿ ಬರೆದಿರುವ ಪ್ರಕಾರ ಜಗತ್ತಿನ ಧರ್ಮಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು: ೧.ಜನಾಂಗೀಯ ಧರ್ಮಗಳು ಮತ್ತು ೨. ವಿಶ್ವ ಧರ್ಮಗಳು. ಜನಾಂಗೀಯ ಧರ್ಮಗಳಲ್ಲಿ ಧರ್ಮದ ಸದಸ್ಯತ್ವವು ಜನ್ಮದ ಮೇಲೆ ಆಧಾರಿತವಾಗಿರುತ್ತದೆ. ಒಂದು ನಿರ್ದಿಷ್ಟ ಜನಾಂಗಕ್ಕೆ (ಯಹೂದಿ ಧರ್ಮ, ಪಾರ್ಸಿ ಧರ್ಮ ಮತ್ತು ಶಿಂಟೋ ಧರ್ಮಗಳಲ್ಲಿದ್ದಂತೆ) ಅಥವಾ ಜಾತೀಯ ಶ್ರೇಣಿವ್ಯವಸ್ಥೆಗೆ (ಹಿಂದೂ ಧರ್ಮದಲ್ಲಿದ್ದಂತೆ) ಸೇರಿದವರು ಮಾತ್ರ ಆಯಾ ಧರ್ಮದ ಸದಸ್ಯರಾಗಲು ಸಾಧ್ಯ. ಇದಕ್ಕೆ ವಿರುದ್ಧವಾಗಿ, ಒಂದು ಸರಳ ಆಚರಣೆಯ ಮೂಲಕ ವಿಶ್ವಧರ್ಮಗಳಿಗೆ ಯಾರಾದರೂ ಸೇರಬಹುದು. ಗ್ಯಾಲ್ಲೋವೇ ಪ್ರಕಾರ ವಿಶ್ವಧರ್ಮಗಳಾಗಲು ಅರ್ಹತೆ ಇರುವವು ಮೂರೇ ಧರ್ಮಗಳ. ಅವೆಂದರೆ, ಕ್ರೈಸ್ತ ಧರ್ಮ, ಇಸ್ಲಾಂ ಧರ್ಮ ಮತ್ತು ಬೌದ್ಧ ಧರ್ಮ.

ಆದರೆ ಮೇಲಿನ ಧರ್ಮಗಳಲ್ಲಿ ಪ್ರತಿಯೊಂದು ಧರ್ಮವೂ, ಜಗತ್ತಿನಲ್ಲೆಲ್ಲ ತಾನೆ ನಿಜವಾದ ಧರ್ಮವೆಂದೂ, ಇತರ ಧರ್ಮಗಳು ಅಸತ್ಯವೆಂದೂ ಪರಿಗಣಿಸುತ್ತದೆ. ಈ ಬಗೆಯ ವಾದವು ಧರ್ಮಗಳ ವಿಶ್ವಾತ್ಮಕತೆಗೆ ವಿರುದ್ಧವಾಗಿದೆ. ಒಂದು ಧರ್ಮವು ಇತರ ಧರ್ಮಗಳ ಮೇಲೆ ವಿಜಯ ಸಾಧಿಸುವ ಕಲ್ಪನೆಯೇ ಅಸಂಸ್ಕೃತವಾದದ್ದು ಮತ್ತು ಹಳತಾದದ್ದು. ಇದನ್ನು ವಿಜೇಯತಾ ಭಾವನೆ (Triumphalism) ಎಂದೂ ಕರೆಯುವರು.

ಈ ವಿಷಯದಲ್ಲಿ ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ: “ವಿಶ್ವಧರ್ಮವೆಂದರೆ, ಒಂದು ಬಗೆಯ ಸಿದ್ಧಾಂತವನ್ನು ಇಡೀ ಮಾನವಕೋಟಿ ನಂಬುವುದು ಎಂದು ಭಾವಿಸಿದ್ದರೆ ಅದು ಎಂದಿಗೂ ಸಾಧ್ಯವಿಲ್ಲ. ಎಲ್ಲ ಮಾತುಗಳೂ ಒಂದೇ ಸಮನಾಗಿರುವ ಕಾಲ ಬರುವುದಿಲ್ಲ. ಒಂದು ಸಾರ್ವತ್ರಿಕ ಪುರಾಣವನ್ನು ನಿರೀಕ್ಷಿಸಿದರೂ ಅದು ಅಸಾಧ್ಯ. ಅದರಂತೆಯೆ ಒಂದು ಸಾರ್ವತ್ರಿಕ ಆಚಾರವೂ ಇರಲಾರದು. ಇಂತಹ ಸ್ಥಿತಿ ಎಂದಿಗೂ ಇರುವುದಿಲ್ಲ ಇದೇನಾದರೂ ಸಾಧ್ಯವಾದರೆ, ಪ್ರಪಂಚವೇ ನಾಶವಾಗುವುದು. ಏಕೆಂದರೆ ವೈವಿಧ್ಯವೇ ಜೀವನದ ಪ್ರಥಮ ನಿಯಮ.”

ಹಿಂದೆ ಉಲ್ಲೇಖಿಸಿದ ವಿಶ್ವಧರ್ಮದ ಸಂಕುಚಿತ ಕಲ್ಪನೆಗೆ ಹೋಲಿಸಿದಲ್ಲಿ, ಸ್ವಾಮೀಜಿಯವರ ಕಲ್ಪನೆಯು ವಿಶಾಲವಾದ, ನೈಜ ವಿಶ್ವಾತ್ಮಕ ಕಲ್ಪನೆಯಾಗಿದೆ. ಇದು ವಿಶ್ವಾತ್ಮಕ ಕಲ್ಪನೆಗಳನ್ನು ಆಧರಿಸಿದ್ದು, ಧರ್ಮಗಳ ನಡುವಿನ ವ್ಯತ್ಯಾಸಗಳನ್ನು ಸಮನ್ವಯಗೊಳಿಸುತ್ತದೆ, ಆದರೆ, ವಿಶ್ವಧರ್ಮದ ಈ ಮೂರೂ ಕಲ್ಪನೆಗಳನ್ನು ನಮಗೆ ನೀಡಿದವರೆಂದರೆ ಸ್ವಾಮಿ ವಿವೇಕಾನಂದರು ಎನ್ನುವುದು ಅಷ್ಟೊಂದು ಪ್ರಚುರವಾಗಿಲ್ಲ.

ಸ್ವಾಮಿ ವಿವೇಕಾನಂದರ ವಿಶ್ವಧರ್ಮದ ಮೊದಲ ತತ್ತ್ವ

ತಮ್ಮ ಹಲವು ಭಾಷಣಗಳಲ್ಲಿ ಮತ್ತು ಬರಹಗಳಲ್ಲಿ, ಸ್ವಾಮಿ ವಿವೇಕಾನಂದರು ವಿಶ್ವಧರ್ಮವನ್ನು ಮಾನವತೆಯ ಧಾರ್ಮಿಕ ಪ್ರಜ್ಞೆಯನ್ನು ಪ್ರತಿನಿಧಿಸುವ ಒಂದು ಚಿರಂತನ ತತ್ತ್ವವೆಂಬಂತೆ ಪ್ರತಿಪಾದಿಸಿದ್ದಾರೆ. ಈ ಧಾರ್ಮಿಕ ಪ್ರಜ್ಞೆಯೇ ವಿವಿಧ ಧರ್ಮಗಳಾಗಿ ಅಭಿವ್ಯಕ್ತಿ ಹೊಂದಿದೆ. ವಿಜ್ಞಾನ ಒಂದೇ. ಅದೇ ರೀತಿ ಧರ್ಮವೂ ಕೂಡ ಒಂದೇ ಆಗಿದೆ. “ನನ್ನ ಗುರುದೇವ” ಎನ್ನುವ ತಮ್ಮ ಸುವಿಖ್ಯಾತ ಪ್ರವಚನದಲ್ಲಿ, ಸ್ವಾಮೀಜಿಯವರು ಹೀಗೆ ಹೇಳುತ್ತಾರೆ:

“ನಾನು ಗುರುದೇವನಿಂದ ಕಲಿತ ಬಹುಶಃ ಅತ್ಯಂತ ಮುಖ್ಯವಾದ ಎರಡನೆಯ ಭಾವನೆಯೆ ಇದು; ಧರ್ಮಗಳು ಪರಸ್ಪರ ವಿರೋಧವಲ್ಲ. ಅವೆಲ್ಲ ಒಂದು ಸನಾತನ ಧರ್ಮದ ಹಲವಾರು ಪ್ರತಿಬಿಂಬಗಳು. ಆ ಒಂದು ಸತ್ಯವನ್ನೇ ಕಾರ್ಯಕ್ಷೇತ್ರದ ಹಲವು ಭೂಮಿಕೆಗಳಲ್ಲಿ ಬೇರೆ ಬೇರೆ ಜನಾಂಗದವರಿಗೆ ಅವರವರ ಮನಸ್ಸಿಗೆ ರುಚಿಸುವಂತೆ ಉಪಯೋಗಿಸಿದೆ. ಎಂದಿಗೂ ನನ್ನ ಧರ್ಮ ಅಥವಾ ನಿಮ್ಮ ಧರ್ಮ ಎಂಬುದು ಇರಲಿಲ್ಲ, ನನ್ನ ರಾಷ್ಟ್ರೀಯ ಧರ್ಮ ಅಥವಾ ನಿಮ್ಮ ಧರ್ಮ ಎಂಬುದು ಇರಲಿಲ್ಲ. ‘ಹಲವು’ ಧರ್ಮಗಳು ಎಂದಿಗೂ ಇರಲಿಲ್ಲ. ಯಾವಾಗಲೂ ಇದ್ದುದು ಒಂದೇ ಧರ್ಮ ಒಂದು ಸನಾತನ ಧರ್ಮ ಅನಾದಿಕಾಲದಿಂದಲೂ ಬಂದಿದೆ. ಅದೇ ಎಂದೆಂದಿಗೂ ಇರುವುದು. ಈ ಧರ್ಮವೇ ಹಲವು ದೇಶಗಳಲ್ಲಿ ಹಲವು ರೀತಿಗಳಲ್ಲಿ ವ್ಯಕ್ತವಾಗುತ್ತ ಹೋಗುವುದು.”

ಸಮಾಜವಿಜ್ಞಾನಿಗಳು ಧರ್ಮವನ್ನು ಪ್ರಪಂಚದೆಲ್ಲೆಡೆ ಇರುವ ಸಂಸ್ಕೃತಿಭೇದಗಳ ಸಾಮಾನ್ಯ ಸಂಗತಿ ಎಂದು ಪರಿಗಣಿಸುತ್ತಾರೆ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು. Primitive Cultures ಎನ್ನುವ ತಮ್ಮ ಪುಸ್ತಕದಲ್ಲಿ, ಇ. ಬಿ. ಟೈಲರ್ ಅವರು ‘ ಅನಾಗರಿಕ ಮನಸ್ಸು’, ಪ್ರಾಕೃತಿಕ ಘಟನೆಗಳಾದ ಸಾವು, ವ್ಯಾಧಿಗಳು, ಕನಸುಗಳು ಮುಂತಾದವುಗಳನ್ನು ಅರ್ಥಮಾಡಿಕೊಳ್ಳಲು ನಡೆಸಿದ ಪ್ರಯತ್ನವೇ ಧರ್ಮ ಎಂದು ಅಭಿಪ್ರಾಯಪಡುತ್ತಾರೆ. ಬ್ರೊನಿಸ್ಲಾ ಮಲಿನೋವ್ಸ್ ಕಿ, ಕ್ಲೌಡ್ ಲೆವಿ ಸ್ಟ್ರಾಸ್ ಮತ್ತಿತರರು, ಜೀವನದಲ್ಲಿ ಅರ್ಥವನ್ನು ಕಂಡುಕೊಳ್ಳಲು ಮಾನವನು ನಡೆಸುವ ಯತ್ನವೇ ಧರ್ಮ ಎಂದು ಎತ್ತಿ ತೋರಿಸಿದ್ದಾರೆ. ಜಾರ್ಜ್ ಸಿಮೆಲ್ ಮತ್ತು ಎಮಿಲಿ ಡರ್ಕೆಯಿಮ್ ಒಂದು ಸಿದ್ಧಾಂತವನ್ನು ಅಭಿವೃದ್ಧಿ ಪಡಿಸಿದ್ದಾರೆ. ಅದರಂತೆ, ಧರ್ಮ ವೆಂದರೆ, ಮಾನವ ಸಂಬಂಧಗಳನ್ನು ಪವಿತ್ರಗೊಳಿಸುವ ಪ್ರಯತ್ನ.

ಸಮಾಜವಿಜ್ಞಾನಿಗಳು ಧರ್ಮವನ್ನು ಒಂದು ವಿಶ್ವಾತ್ಮಕ ಸಂಗತಿಯೆಂದು ಪರಿಗಣಿಸಿದ್ದಾರೇನೋ ನಿಜ. ಆದರೆ ಧರ್ಮದ ಬಗೆಗಿನ ಆವರ ಕಲ್ಪನೆ ಬಹಳ ಕೆಳಮಟ್ಟದ್ದು. ಅದು ಪೌರಾಣಿಕತೆ, ಆಚರಣೆಗಳು, ಧಾರ್ಮಿಕ ಸಂಸ್ಥೆಗಳು – ಇವುಗಳ ಮೇಲೆಯೇ ಆಧಾರಿತವಾಗಿದೆ. ಸ್ವಾಮಿ ವಿವೇಕಾನಂದರು ಧರ್ಮವೆಂದರೆ ವಿಶ್ವಾತ್ಮಕ ಪ್ರಕ್ರಿಯೆ ಎನ್ನುವ ಉನ್ನತ ಕಲ್ಪನೆಯನ್ನು ನಮಗೆ ಕೊಟ್ಟಿದ್ದಾರೆ. ಅವರು ಧರ್ಮವನ್ನು ಅತೀಂದ್ರಿಯ ಆಧ್ಯಾತ್ಮಿಕ ಪ್ರಜ್ಞೆಯೆಂದೂ, ಮಾನವನು
ಆ ಪ್ರಜ್ಞೆಯನ್ನು ಗಳಿಸುವ ಹಾದಿಯಲ್ಲಿನ ಸಂಘರ್ಷ ಮತ್ತು ಅದರಲ್ಲಿನ ಅವನ ಅನುಭಾವವೆಂದೂ ಗುರುತಿಸುತ್ತಾರೆ. ಸ್ವಾಮೀಜಿ ವಿಶ್ವಧರ್ಮವನ್ನು ಹಿಂದೂಧರ್ಮ ಮೊದಲ್ಗೊಂಡು ಯಾವುದೇ ಒಂದು ನಿರ್ದಿಷ್ಟ ಧರ್ಮವೆಂದು ಗುರುತಿಸಲಿಲ್ಲವೆಂದು ನಾವು ನೆನಪಿಡಬೇಕು (ಆದರೆ ಅವರು ವಿಶ್ವದ ಎಲ್ಲ ಜನರಿಗೂ ಹಿಂದೂಧರ್ಮದ ಬಾಗಿಲುಗಳನ್ನು ಮುಕ್ತವಾಗಿರಿಸಿ, ಅದನ್ನು ಒಂದು ವಿಶ್ವಧರ್ಮವಾಗಿಸಿದರು). ಅವರು ವಿಶ್ವಧರ್ಮವೆಂದು ಕರೆದಿದ್ದು ಮಾನವತೆಯಲ್ಲಕ್ಕೂ ಸಾಮಾನ್ಯವಾದ – ಆಧ್ಯಾತ್ಮಿಕ ಪರಂಪರೆಯನ್ನು.

ಸ್ವಾಮಿ ವಿವೇಕಾನಂದರು ವಿಶ್ವಧರ್ಮದ ಬಗ್ಗೆ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಇದೇ ಸಮಯದಲ್ಲಿ, ತುಲನಾತ್ಮಕ ಧಾರ್ಮಿಕ ಅಧ್ಯಯನದ ಮೊಟ್ಟಮೊದಲ ಪ್ರವರ್ತಕರಾದ ಪ್ರೊ, ಮ್ಯಾಕ್ಸ್ ಮುಲ್ಲರ್ ಅವರು ಹೀಗೆ ಬರೆದರು: “ಧರ್ಮದ ಜೀವಂತ ಸತ್ವವನ್ನು ಎಲ್ಲ ಮತಗಳಲ್ಲಿಯೂ ಕಾಣಬಹುದು ಎಂದು ನಾನು ನಂಬುತ್ತೇನೆ. ಅವುಗಳಲ್ಲಿರುವ ಜೊಳ್ಳಿನಲ್ಲಿ ವೈವಿಧ್ಯತೆ ಇರಬಹುದು ಮತ್ತು ಅದು ಏನು ಎನ್ನುವುದನ್ನು ಚಿಂತಿಸಿ ನೋಡಿ! ಎಲ್ಲ ಧರ್ಮಗಳ ಮೇಲೆ, ಕೆಳಗೆ ಮತ್ತು ಹಿಂದೆ ಒಂದು ನಿತ್ಯ ಮತ್ತು ವಿಶ್ವಾತ್ಮಕವಾದ ಧರ್ಮವಿದೆ.”

ಈ ಬಗೆಯ ಭಾವನೆಯನ್ನೇ ಕೆಲವು ವರ್ಷಗಳ ಬಳಿಕ ಎ.ಎನ್. ವೈಟ್ ಹೆಡ್ ಅವರು ವ್ಯಕ್ತಪಡಿಸಿದರು. ಅವರು ಆಧುನಿಕ ಜಗತ್ತಿನ ಉತ್ಕೃಷ್ಟ ಚಿಂತಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ತಮ್ಮ Religion in the Making ಎನ್ನುವ ಪುಸ್ತಕದಲ್ಲಿ ಅವರು ಹೀಗೆ ಬರೆಯುತ್ತಾರೆ:

“ಮಹಾನ್ ವೈಚಾರಿಕ ಧರ್ಮಗಳೆಲ್ಲವೂ ಧಾರ್ಮಿಕ ಪಜ್ಞೆಯ ಉಗಮದಿಂದಾಗಿಯೇ ಹುಟ್ಟಿದವುಗಳು. ಆ ಪ್ರಜ್ಞೆ ಬುಡಕಟ್ಟು ಅಥವಾ ಸಾಮಾಜಿಕ ಪ್ರಜ್ಞೆಗಳಿಗಿಂತ ಭಿನ್ನವಾಗಿ, ವಿಶ್ವವ್ಯಾಪಕವಾದುದು, ವಿಶ್ವಾತ್ಮಕವಾದುದರಿಂದ, ಅದು ಏಕಾಂತತೆಯನ್ನು ಪರಿಚಯಿಸುತ್ತದೆ. ಒಬ್ಬ ವ್ಯಕ್ತಿಯು ತನ್ನ ಏಕಾಂತತೆಯಲ್ಲಿ ಇರುವುದೇ ತನ್ಮಯತಯೇ) ಧರ್ಮವೆನಿಸಿಕೊಳ್ಳುತ್ತದೆ.”

ಸ್ವಾಮಿ ವಿವೇಕಾನಂದರ ವಿಶ್ವಧರ್ಮದ ಎರಡನೆಯ ತತ್ತ್ವ

ಸ್ವಾಮಿ ವಿವೇಕಾನಂದರ ಎರಡನೆಯ ಕಲ್ಪನೆ ಎಂದರೆ, ವಿಶ್ವಧರ್ಮವು ಈಗ ಅಸ್ತಿತ್ವದಲಿರುವ ಜಾಗತಿಕ ಧರ್ಮಗಳೆಲ್ಲದರ ಸಮಗ್ರತೆ ಎಂಬುದು. ವಿಶ್ವಧರ್ಮದ ಬಗೆಗಿನ ಅವರ ಮೊದಲ ಕಲ್ಪನೆಯು ಅದು ಒಂದು ಪ್ರತ್ಯೇಕವಾದ, ಅಮೂರ್ತ ಆಧ್ಯಾತ್ಮಿಕ ಸಂಗತಿ ಎಂಬುದಾಗಿದ್ದರೆ, ಈ ಎರಡನೆಯ ಕಲ್ಪನೆಯು ಎಲ್ಲ ಧರ್ಮಗಳೂ ಅಸ್ತಿತ್ವದಲ್ಲಿದ್ದುಕೊಂಡು, ಪರಸ್ಪರ ಹೊಂದಾಣಿಕೆಯಿಂದ ಒಂದು ರೀತಿಯ ಒಕ್ಕೂಟ ರಚನೆಯಾಗುವುದೇ ವಿಶ್ವಧರ್ಮ ಎಂದು ಸೂಚಿಸುತ್ತದೆ. ಈ ಕಲ್ಪನೆ ವಿಶ್ವಸಂಸ್ಥೆಯಿದ್ದಂತೆ. ಅದು ಈಗಾಗಲೇ ಇರುವುದೇ ಆಗಿದೆ. ಅಮೆರಿಕದ ಪ್ಯಾಸಡೆನಾದಲ್ಲಿ ಮಾಡಿದ ‘ವಿಶ್ವಧರ್ಮ ಸಾಕ್ಷಾತ್ಕಾರಕ್ಕೆ ಮಾರ್ಗ” ಎಂಬ ಪ್ರವಚನದಲ್ಲಿ ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ:

“ಪ್ರತಿಯೊಂದು ದೇಶದಲ್ಲಿಯೂ ತಾತ್ತ್ವಿಕರು ಮತ್ತು ಇತರರು ಕಲ್ಪಿಸಿಕೊಂಡ ವಿಶ್ವಧರ್ಮ ಆಗಲೆ ಇದೆ… ಪಾದ್ರಿಗಳೇ ಮೊದಲಾದವರು ಕೆಲವು ಕ್ಷಣಗಳ ಕಾಲ ಮೌನವಾಗಿದ್ದರೆ, ಆಗ ವಿಶ್ವಧರ್ಮವಿರುವುದು ನಮಗೆ ಗೋಚರವಾಗುವುದು. ಅವರು ಯಾವಾಗಲೂ ಅದನ್ನು ಕೆಡಿಸುತ್ತಿರುವರು. ಏಕೆಂದರೆ, ಇದರಿಂದ ಅವರಿಗೆ ಪ್ರಯೋಜನವುಂಟು.”

ಸ್ವಾಮಿ ವಿವೇಕಾನಂದರ ವಿಶ್ವಧರ್ಮದ ಕಲ್ಪನೆಗೆ ಆಧಾರಭೂತವಾದ ಮೂಲಭೂತ ನಿಯಮಗಳು ಯಾವುವು?

೧. ಮೊದಲ ನಿಯಮವೆಂದರೆ, ಪ್ರತಿಯೊಂದು ಧರ್ಮದ ವಿಶಿಷ್ಟ ಲಕ್ಷಣಗಳನ್ನು ಮತ್ತು ಅವುಗಳು ತಮ್ಮ ವೈಯಕ್ತಿಕತೆಯನ್ನು ಉಳಿಸಿಕೊಳ್ಳುವ ಹಕ್ಕನ್ನು ಗುರುತಿಸಿ ಗೌರವಿಸುವುದು, ಸ್ವಾಮಿ ವಿವೇಕಾನಂದರ ಪ್ರಕಾರ, ವಿಶ್ವಧರ್ಮವನ್ನು ಸಾಕಾರಗೊಳಿಸುವ ಹಿಂದಿನ ಪ್ರಯತ್ನಗಳು ಸಫಲವಾಗದಿರುವುದಕ್ಕೆ ಕಾರಣ, ಅಂತಹ ಒಕ್ಕೂಟದಲ್ಲಿ ತಮ್ಮ ವೈಯಕ್ತಿಕತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವಂತೆ. ಅವುಗಳನ್ನು ಒಟ್ಟುಗೂಡಿಸಬಹುದಾದ ಪ್ರಾಯೋಗಿಕ ಮಾರ್ಗವನ್ನು ಆ ಪ್ರಯತ್ನಗಳು ವ್ಯಕ್ತಪಡಿಸದಿರುವುದೇ ಆಗಿದೆ. ವಿಶ್ವಧರ್ಮವೆಂದರೆ ಪ್ರಪಂಚದ ಎಲ್ಲ ಧರ್ಮಗಳೂ ಬೆಸುಗೆಗೊಂಡು ಮಿಶ್ರವಾಗುವುದಲ್ಲ, ಅದು ಬಗೆಬಗೆಯ ಪುಷ್ಪಗಳಿರುವ ಉದ್ಯಾನವನದಂತೆ; ಪ್ರತಿಯೊಂದು ಧರ್ಮವೂ ತನ್ನದೇ ಆದ ವಿಶಿಷ್ಟ ಗುಣಗಳನ್ನು ಉಳಿಸಿಕೊಳ್ಳುತ್ತದೆ. ಅದೇ ಸಮಯದಲ್ಲಿ ಅವೆಲ್ಲವೂ ಒಟ್ಟುಗೂಡಿ, ಒಂದು ಬಗೆಯ ಒಕ್ಕೂಟವಾಗಿ ಮಾರ್ಪಡುತ್ತದೆ.

೨. ಎರಡನೆಯ ನಿಯಮವೆಂದರೆ, ಧರ್ಮಗಳು ಪರಸ್ಪರ ವಿರೋಧಿಗಳಲ್ಲ. ಅದಕ್ಕೆ ಬದಲಾಗಿ ಪೂರಕವಾದವುಗಳು ಎಂಬ ತಥ್ಯವನ್ನು ಮಾನ್ಯ ಮಾಡುವುದು. ಪ್ರತಿಯೊಂದು ಧರ್ಮವೂ ಕೆಲವು ಒಳ್ಳೆಯ ಅಂಶಗಳನ್ನೂ ಮತ್ತೆ ಕೆಲವು ಲೋಪದೋಷಗಳನ್ನೂ ಹೊಂದಿದೆ. ಆದರೆ, ಅವುಗಳನ್ನು ವಿಶ್ವಧರ್ಮದ ಅಡಿಯಲ್ಲಿ ಒಟ್ಟುಗೂಡಿಸಿದಾಗ, ಆ ಲೋಪದೋಷಗಳು ಮರೆಯಾಗುತ್ತವೆ. ಪ್ರತಿಯೊಂದು ಧರ್ಮವೂ ಈ ಜಗತ್ತಿನಲ್ಲಿ ಒಂದು ಪಾತ್ರವನ್ನು ವಹಿಸಬೇಕಾಗಿದೆ. ಹಾಗೆಂದೇ ಎಲ್ಲ ಧರ್ಮಗಳೂ ನಮಗೆ ಅವಶ್ಯಕವೇ ಆಗಿವೆ, ಇದರ ಸಂಬಂಧವಾಗಿ ಸ್ವಾಮೀಜಿ ಹೀಗೆ ಹೇಳುತ್ತಾರೆ:

“… ಈ ಧರ್ಮಗಳು ಪರಸ್ಪರ ವಿರೋಧಿಗಳಲ್ಲ. ಪೂರಕಗಳು ಎಂದು ನಾನು ನಂಬುತ್ತೇನೆ. ಪ್ರತಿಯೊಂದು ಧರ್ಮವೂ ವಿಶ್ವಸತ್ಯದ ಒಂದು ಅಂಶವನ್ನು ತೆಗೆದುಕೊಂಡು ಅದನ್ನು ವಿವರಿಸಿ ಅನುಷ್ಠಾನಕ್ಕೆ ತರಲು ತನ್ನ ಶಕ್ತಿಯನ್ನೆಲ್ಲ ವಿನಿಯೋಗಿಸುವುದು. ಆದಕಾರಣ ಇದರಿಂದ ಲಾಭವೆ ಹೊರತು ನಷ್ಟವಲ್ಲ, ಇದೇ ನನ್ನ ಭಾವನೆ.. ವಿಭಿನ್ನ ಧರ್ಮಗಳೆಲ್ಲ ಭಗವಂತನ ಶಕ್ತಿಯೇ ಆಗಿದ್ದು, ಅವು ಮಾನವ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತವೆ ಎಂಬುದು ನನ್ನ ಭಾವನೆ.”

೩. ಮೂರನೆಯ ನಿಯಮವು ಸಕ್ರಿಯಾತ್ಮಕವಾದುದು. ಒಟ್ಟು ಜಗತ್ತಿನ ಕಲ್ಯಾಣಕ್ಕಾಗಿ, ಎಲ್ಲ ಧರ್ಮಗಳೂ ಮುಕ್ತವಾಗಿ ಪರಸ್ಪರ ಬೆರೆಯಬೇಕು ಎಂಬ ಕಲ್ಪನೆಯನ್ನು ಅದು ನಮ್ಮ ಮುಂದೆ ಇಡುತ್ತದೆ, ಆಧುನಿಕ ಯುಗದ ಪರಿಭಾಷೆಯಲ್ಲಿ ಹೇಳುವುದಾದರೆ, ಈ ಬಗೆಯ ಬೆರೆಯುವಿಕೆಯನ್ನು ನಾವು ‘ಸಂವಾದ’ ಎಂದು ಕರೆಯುತ್ತೇವೆ. ಇದರ ತಾತ್ಪರ್ಯ, ವಿಶ್ವಧರ್ಮವೆಂದರೆ, ಒಂದು ರೀತಿಯ ಶಾಶ್ವತ ದುಂಡು ಮೇಜಿನ ಸಮಾವೇಶ; ನಿರಂತರವಾಗಿ ನಡೆಯುವ ಅಂತರ್ಧಾರ್ಮಿಕ ಸಂವಾದ ಅಥವಾ ವಿವಿಧ ಧರ್ಮಗಳ ಅನುಯಾಯಿಗಳ ನಡುವೆ ನಡೆಯಬೇಕಾದ ಮುಕ್ತಭಾವನೆಗಳ ಹಂಚಿಕೆ. ಈ ವಿಷಯದಲ್ಲಿ ಸ್ವಾಮಿ ವಿವೇಕಾನಂದರು ಹೀಗೆ ಹೇಳುತ್ತಾರೆ:

“ಹಿಂದೆ ಇದ್ದ ಧರ್ಮಗಳನ್ನೆಲ್ಲಾ ಸ್ವೀಕರಿಸುತ್ತೇನೆ. ಅವರೊಂದಿಗೆ ನಾನೂ ಪೂಜಿಸುತ್ತೇನೆ. ಅವರು ಯಾವ ರೀತಿ ದೇವರನ್ನು ಆರಾಧಿಸಿದರೆ ನಾನೂ ಅದೇ ರೀತಿಯಲ್ಲಿ ಅವನನ್ನು ಆರಾಧಿಸುತ್ತೇನೆ. ನಾನು ಮಹಮ್ಮದೀಯರ ಮಸೀದಿಗೆ ಹೋಗುತ್ತೇನೆ, ಕೈಸ್ತರ ಚರ್ಚಿನಲ್ಲಿ ಶಿಲುಬೆಯ ಎದುರಿಗೆ, ಶಿಲುಬೆಯ ಎದುರಿಗೆ ಬಾಗುತ್ತೇನೆ. ಬೌದ್ಧರ ವಿಹಾರಕ್ಕೆ ಹೋಗಿ ಬುದ್ಧನಲ್ಲಿ ಮತ್ತು ಅವನ ಧರ್ಮಕ್ಕೆ ಶರಣಾಗುತ್ತೇನೆ, ಹಿಂದೂ ಗಳೊಂದಿಗೆ ಕಾಡಿಗೆ ಹೋಗಿ ಎಲ್ಲರಲ್ಲೂ ಬೆಳಗುತ್ತಿರುವ ಆ ಪರಂಜ್ಯೋತಿಯ ದರ್ಶನಕ್ಕಾಗಿ ಧ್ಯಾನ ಮಾಡುವವರೊಂದಿಗೆ ನಾನು ಧ್ಯಾನಮಗ್ನನಾಗುತ್ತೇನೆ. ನಾನು ಇವನ್ನೆಲ್ಲ ಮಾಡುವುದು ಮಾತ್ರವಲ್ಲ. ಭವಿಷ್ಯದಲ್ಲಿ ಏನೇನು ಬರುವುದೋ ಅದನ್ನೆಲ್ಲ ಸ್ವೀಕರಿಸುವುದಕ್ಕೆ ನನ್ನ ಹೃದಯವನ್ನು ತೆರೆದಿರುವೆನು.”

ಈ ಆಧುನಿಕ ಯುಗದ ಮಹಾನ್ ದಾರ್ಶನಿಕರೂ, ಚಿಂತಕರೂ ಮತ್ತು ಆಧ್ಯಾತ್ಮ ವಿದ್ಯೆಯ ಆಚಾರ್ಯಪುರುಷರೂ ಆದಂಥವರು ಆಡಿದ ಈ ಮಾತುಗಳು ಮುಂಬರುವ ಶತಮಾನಗಳಲ್ಲಿ, ಕಾಲದ ಆವರಣಗಳನ್ನು ಪ್ರತಿಧ್ವನಿಸುವುದರಲ್ಲಿ ಸಂದೇಹವಿಲ್ಲ. ಸ್ವಾಮಿ ವಿವೇಕಾನಂದರ ವಿಶ್ವಧರ್ಮದ ಬಗೆಗಿನ ಈ ದರ್ಶನ ಅದರಲ್ಲೂ ಈಗ ತಾನೆ ಪ್ರಸ್ತಾಪ ಮಾಡಿದ ಅವರ ಎರಡನೆಯ ನಿಯಮವನ್ನು ವ್ಯಾಪಕವಾಗಿ ಹೆಚ್ಚು ಹೆಚ್ಚು ಜನರು ಅರ್ಥಮಾಡಿಕೊಳ್ಳಲಿ ಮತ್ತು ಅನುಷ್ಠಾನಕ್ಕೆ ತರಲಿ ಎಂದು ಆಶಿಸುತ್ತೇವೆ. (ಮುಂದುವರಿಯುವುದು)

ಇಂದಿನ ಮನೋವಿಜ್ಞಾನದ ಪ್ರಕಾರ, ವೈವಿಧ್ಯತೆ ವಿಭಿನ್ನತೆ ಗಳಿಂದಾಗಿಯೇ ಬದುಕು ಸಹ್ಯವೆನಿಸುವುದು ಹಾಗೂ ಅನುಭವ ಅರಿವುಗಳ ಸಿರಿಸಂಪಾದನೆಗೆ ಕಾರಣವಾಗುವುದೇ ಹೊರತು, ಸಾದೃಶ್ಯಗಳ ಏಕತಾನತೆಯಿಂದಲ್ಲ. ಸ್ವಾಮಿ ವಿವೇಕಾನಂದರು ಹೇಳಿದಂತೆ, ವೈವಿಧ್ಯತೆಯಲ್ಲಿ ಏಕತೆಯನ್ನು ಆವಿಷ್ಕರಿಸುವುದು ನಮ್ಮ ಗುರಿಯಾಗಬೇಕು. ಇಂದಿನ ಪ್ರಪಂಚ ಮುನ್ನಡೆಯುತ್ತಿರುವ ರೀತಿಯಲ್ಲಿ ಮಾನವ ಸಂಪೂರ್ಣ ಸ್ವತಂತ್ರವಾಗಿ ಬದುಕುವುದು ಸಾಧ್ಯವಿಲ್ಲ; ವಿಭಿನ್ನ ನಂಬಿಕೆ ಶ್ರದ್ಧೆಗಳ ಜನರು ನಿತ್ಯವೂ ಪರಸ್ಪರರಿಗೆ ಬೇಕಾಗುತ್ತಾರೆ. ಆದ್ದರಿಂದ, ಇಡಿಯ ಮಾನವ ಜನಾಂಗವೇ ಒಂದಾಗಬೇಕು…… ಮುಂಬರುವ ಇಡೀ ಪ್ರಪಂಚವೇ ಒಂದು ಸಮಾಜ, ಅದಕ್ಕೆ ಸಲ್ಲುವುದು ಒಂದೇ ವಿಶ್ವಧರ್ಮ, ಇರುವ ಧರ್ಮಗಳೆಲ್ಲ ಅದರ ಬೇರಿನ ಶಾಖೋಪಶಾಖೆಗಳು ಎಂಬ ಭವ್ಯವಾದ ಕನಸನ್ನು ಹಂಚಿಕೊಳ್ಳುವಂತೆ ಆಗಬೇಕು,

-ಹಸ್ಟನ್ ಸ್ಮಿತ್

(ಮೂಲ: ವಿವೇಕಪ್ರಭ ಮೇ 2008)

ಆಕರಗಳು

೧. ವಿವೇಕಾನಂದರ ಕೃತಿಶ್ರೇಣಿ, ೧: ೨೫

೨. ಕೃ. ಶ್ರೇ. ೭: ೨೨೩.

೩. ಕೃ. ಶ್ರೇ. ೭: ೧೪೨

೪. AN Whitehead, Religion in the making (Cambridge University Press, 1926) p.30

೫. ಕೃ. ಶ್ರೇ. ೨:೨೧೦

೬. ಕೃ. ಶ್ರೇ. ೨:೨೦೮-೨೦೯

೭. ಕೃ. ಶ್ರೇ. ೨:೨೧೬


ಶ್ರೀರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಧರ್ಮಸಮನ್ವಯ (continued) ಜೂನ್

ಹಿಂದಿನ ಸಂಚಿಕೆಯಲ್ಲಿ : ವಿವೇಕಾನಂದರು ತಮ್ಮ ಗುರುದೇವರ ಧರ್ಮಸಮನ್ವಯ ಸಂದೇಶವನ್ನು ಪಾಶ್ಚಾತ್ಯ ದೇಶಗಳಲ್ಲಿ ಹರಡಿದರು; ಬಹುತ್ವ ಭಾವನೆಯನ್ನು ವ್ಯಾಪಕಗೊಳಿಸಿ, ವಿಶ್ವಾತ್ಮಕತೆಯೆಂಬ ನೂತನ ಕಲ್ಪನೆಯನ್ನು ಹುಟ್ಟು ಹಾಕಿದರು. ಅದು ಧರ್ಮಗಳ ನಡುವಣ ವ್ಯತ್ಯಾಸಗಳನ್ನು ಸಮನ್ವಯಗೊಳಿಸುತ್ತದೆ. ಶ್ರೀರಾಮಕೃಷ್ಣರ ಸಮನ್ವಯ ಸಿದ್ಧಾಂತಕ್ಕೆ ಸ್ವಾಮೀಜಿ ಮೂರು ಪೂರಕ ತತ್ತ್ವಗಳನ್ನು ಸೇರಿಸಿದರು. ಧರ್ಮವು ಮಾನವತೆಯ ಧಾರ್ಮಿಕ ಪ್ರಜ್ಞೆಯನ್ನು ಪ್ರತಿನಿಧಿಸುವ ಚಿರಂತನ ಧರ್ಮ, ವಿಶ್ವಧರ್ಮವೂ ಈಗ ಅಸ್ತಿತ್ವದಲ್ಲಿರುವ ಜಾಗತಿಕ ಧರ್ಮಗಳೆಲ್ಲದರ ಸಮಗ್ರತೆ – ಇದು ಮೊದಲೆರಡು ತತ್ತ್ವಗಳ ಸಾರ.

ಸ್ವಾಮಿ ವಿವೇಕಾನಂದರ ವಿಶ್ವಧರ್ಮದ ಮೂರನೆಯ ತತ್ತ್ವ

ಸ್ವಾಮಿ ವಿವೇಕಾನಂದರ ವಿಶ್ವಧರ್ಮದ ಮೊದಲ ಎರಡು ಪರಿಕಲ್ಪನೆಗಳು ಈಗ ಸದ್ಯ ಅಸ್ತಿತ್ವದಲ್ಲಿರುವ ವಿಶ್ವಧರ್ಮಗಳನ್ನು ಕರಿತಾಗಿದ್ದವು. ಮೊದಲನೆಯ ಪರಿಕಲ್ಪನೆಯಲ್ಲಿ ಅವರು ಜಗತ್ತಿನ ಎಲ್ಲ ಧರ್ಮಗಳೂ ಒಂದು ಚಿರಂತನ ವಿಶ್ವಧರ್ಮದ ಅಭಿವ್ಯಕ್ತಿಗಳು ಎಂದು ಪರಿಗಣಿಸುತ್ತಾರೆ. ಎರಡನೆಯ ಪರಿಕಲ್ಪನೆಯ ವಿಶ್ವಧರ್ಮವು ಸದ್ಯ ಅಸ್ತಿತ್ವದಲ್ಲಿರುವ ಎಲ್ಲ ಧರ್ಮಗಳನ್ನೂ ಒಳಗೊಂಡ ಒಂದು ಸಮಗ್ರ ಭಾವನೆಯೇ ಆಗಿದೆ. ಈ ಎರಡು ಪರಿಕಲ್ಪನೆಗಳಲ್ಲದೆ, ಸ್ವಾಮಿ
ವಿವೇಕಾನಂದರು ಈಗ ಇರುವ ಧರ್ಮಗಳ ಬಗ್ಗೆ ಯಾವ ಬಗೆಯ ಪ್ರಸ್ತಾಪವನ್ನೂ ಮಾಡದೆ, ಮೂರನೆಯ ಪರಿಕಲ್ಪನೆಯನ್ನು ಅಭಿವೃದ್ಧಿ ಪಡಿಸಿದರು. ಈ ಮೂರನೆಯ ಪರಿಕಲ್ಪನೆಯು ಧರ್ಮ, ಜನಾಂಗ, ಲಿಂಗ ಭೇದಗಳಿಲ್ಲದೆ, ಸಕಲ ಮಾನವ ಸಮುದಾಯಕ್ಕೆ ಸಂಬಂಧಿಸಿದುದಾಗಿದೆ. ಇದು ಜೀವನ ಮತ್ತು ಸತ್ಯಗಳ ಬಗೆಗಿನ ಸ್ವಾಮಿ ವಿವೇಕಾನಂದರ ಸಮಗ್ರ ದೃಷ್ಟಿಯನ್ನು ಪ್ರತಿನಿಧಿಸುತ್ತದೆ.

ಈ ಮೂರನೆಯ ಪರಿಕಲ್ಪನೆಯಲ್ಲಿ, ತನ್ನ ಸೀಮಿತತೆಗಳನ್ನು ಮೀರಿಹೋಗಲು, ಜೀವನದ ಪರಮಾರ್ಥವನ್ನು ಕಂಡುಹಿಡಿಯಲು, ಪರಿಪೂರ್ಣ ಸ್ವಾತಂತ್ರ್ಯ ಮತ್ತು ಚಿರಂತನ ಸಾರ್ಥಕತೆಯನ್ನು ಪಡೆಯಲು ಮಾನವನ್ನು ನಡೆಸುತ್ತಿರುವ ಹೋರಾಟವನ್ನೇ ಧರ್ಮವೆಂದು ಪರಿಗಣಿಸಲಾಗಿದೆ. ಇದರ ಪ್ರಕಾರ, ಧರ್ಮವೆಂದರೆ ಒಂದು ವೈಯಕ್ತಿಕ ಪ್ರಯತ್ನ. ಆದ್ದರಿಂದಲೇ ಸ್ವಾಮೀಜಿ ಪ್ರತಿಯೊಬ್ಬನೂ ತನ್ನದೇ ಆದ ಧರ್ಮವನ್ನು ಹೊಂದಿರಬೇಕೆಂದು ನಂಬಿದ್ದರು. ಅವರು ಹೇಳಿದರು: “ಯಾವ ಮನುಷ್ಯನೂ ಯಾವ ಧರ್ಮದಲ್ಲೂ ಜನ್ಮತಾಳಲಿಲ್ಲ; ಅವನ ಆತ್ಮದಲ್ಲಿಯೇ ಅವನ ಧರ್ಮವಿರುವುದು.” ಈ ಭಾವನೆಯು ನಾವು ಹಿಂದೆಯೇ ನೋಡಿದ ವೈಟ್‌ಹೆಡ್ ನ ವ್ಯಾಖ್ಯಾನಕ್ಕೆ ಹತ್ತಿರವಾಗಿದೆ. “ತನ್ನ ಏಕಾಂತತೆಯೊಡನೆ ಇರುವುದೇ (ತನ್ಮಯತೆ) ಧರ್ಮ.”

ಏನೇ ಇರಲಿ, ಧರ್ಮವು ಇಡೀ ಮಾನವತೆಗೆ ಸಂಬಂಧಿಸಿದ್ದು. ಆದ್ದರಿಂದ ಅದಕ್ಕೆ ಸಮಷ್ಟಿ ಮುಖವೂ ಇದೆ. ಸ್ವಾಮಿ ವಿವೇಕಾನಂದರ ವಿಶ್ವಧರ್ಮ ಕಲ್ಪನೆಯ ಮೂರನೆಯ ಪರಿಕಲ್ಪನೆಯು ಐದು ಬಗೆಯ ಸಮನ್ವಯಗಳನ್ನು ಒಳಗೊಂಡದ್ದಾಗಿದೆ. ಈ ಐದು ಒಗೆಯ ಸಮನ್ವಯ ಭಾವನೆಗಳನ್ನು ಕೆಳಗೆ ಚರ್ಚಿಸಲಾಗಿದೆ:

೧. ಲೌಕಿಕ ಮತ್ತು ಪಾರಮಾರ್ಥಿಕಗಳ ನಡುವಿನ ಸಮನ್ವಯ: ಸ್ವಾಮೀಜಿ ಜೀವನವನ್ನು ಅಖಂಡವಾಗಿ ನೋಡಿದರು. ಅವರು ಲೌಕಿಕ ಮತ್ತು ಪಾರಮಾರ್ಥಿಕಗಳ ನಡುವಿನ ಗೋಡೆಯನ್ನು ನಿವಾರಿಸಿದ್ದು, ಪಾರಮಾರ್ಥಿಕವನ್ನು ಲೌಕಕಿವನ್ನಾಗಿಸಿಯಲ್ಲ, ಲೌಕಕಿವನ್ನು ಪಾರಮಾರ್ಥಿಕವನ್ನಾಗಿಸಿ, ಆ ಮೂಲಕ ಅವರು ಇಡೀ ಜೀವನವನ್ನು ದಿವ್ಯಮಯವಾಗಿಸಿದರು. ಬಾಳನ್ನು ದಿವ್ಯಮಯಗೊಳಿಸುವುದು ಸ್ವಾಮೀಜಿಯವರ ಧರ್ಮದ ಒಂದು ಮುಖ್ಯ ಪರಿಕಲ್ಪನೆಯಾಗಿದೆ.

೨. ವಿಜ್ಞಾನ ಮತ್ತು ಧರ್ಮಗಳ ನಡುವಿನ ಸಮನ್ವಯ: ಆಧುನಿಕ ಯುಗದಲ್ಲಿ ವಿಜ್ಞಾನವು ಧರ್ಮಕ್ಕೆ ದೊಡ್ಡ ಸವಾಲನ್ನು ಒಡ್ಡಿದೆ. ಸ್ವಾಮಿ ವಿವೇಕಾನಂದರು ವಿಜ್ಞಾನ ಮತ್ತು ಧರ್ಮಗಳ ಸಮನ್ವಯದ ಮೂಲಕ ಈ ಸವಾಲನ್ನು ಎದುರಿಸಿದರು. ವಿಜ್ಞಾನ ಮತ್ತು ಧರ್ಮಗಳೆರಡೂ ಪರಮಸತ್ಯವನ್ನು ತಿಳಿದುಕೊಳ್ಳಲು, ಮಾನವನು ನಡೆಸಿರುವ ಒಂದೇ ಬಗೆಯ ಅನ್ವೇಷಣೆಯೆಂದು ಅವರು ಬಗೆದಿದ್ದರು; ವಿಜ್ಞಾನವು ಇಂದ್ರಿಯಗ್ರಾಹ್ಯ ಪ್ರಚಂಚದಲ್ಲಿ ತನ್ನ ಅನ್ವೇಷಣೆಯನ್ನು ನಡೆಸಿದರೆ ಧರ್ಮವು ಅದೇ ಕಾರ್ಯವನ್ನು ಇಂದ್ರಿಯಾತೀತ ಅಸ್ತಿತ್ವದ ನೆಲೆಯಲ್ಲಿ ನಡೆಸುತ್ತದೆ.

೩. ಮಾನವ ಪ್ರೇಮ ಮತ್ತು ಭಗವತ್ಪ್ರೇಮಗಳ ನಡುವಣ ಸಮನ್ವಯ: ಸಹಜೀವಿಗಳ ಮೇಲಿನ ಪ್ರೀತಿಯು ಬಂಧನವಾದ್ದರಿಂದ, ಅದು ಭಗವತ್ಪ್ರೇಮಕ್ಕೆ ಬಾಧಕವೆಂದು ಅನೇಕ ಶತಮಾನಗಳಿಂದ ಹಿಂದೂ ಧರ್ಮದಲ್ಲಿ ಪರಿಗಣಿಸಲಾಗಿತ್ತು. ಮಾನವನಲ್ಲಿ ಭಗವಂತನನ್ನು ಕಾಣಬೇಕೆಂಬ ತತ್ತ್ವವನ್ನು ಪ್ರತಿಪಾದಿಸುವ ಮೂಲಕ ಸ್ವಾಮೀಜಿ ಈ ಎರಡು ಬಗೆಯ ಪ್ರೀತಿಯ ಭಾವನೆಗಳನ್ನು ಸಮನ್ವಯಗೊಳಿಸಿದರು. ಆತ್ಮಸ್ವರೂಪಿಯಾದ ಮಾನವನು ತನ್ನ ನೈಜಸ್ವರೂಪದಲ್ಲಿ, ದೇವರು ಅಥವಾ ಪರಮಾತ್ಮನಿಗಿಂತ ಅಭಿನ್ನನಾಗಿದ್ದಾನೆ. ಆದ್ದರಿಂದ ಮಾನವನನ್ನು ಪ್ರೀತಿಸುವುದು ಎಂದರೆ, ಭಗವಂತನನ್ನು ಪ್ರೀತಿಸಿದಂತೆಯೇ ಪ್ರೀತಿಯಂದರೆ, ಎಲ್ಲ ಮಾನವ ಜನಾಂಗವು ಆಧ್ಯಾತ್ಮಿಕವಾಗಿ ಭಗವಂತನಲ್ಲಿ ಒಂದಾಗುವ ಪ್ರಕ್ರಿಯೆಯ ಅಭಿವ್ಯಕ್ತಿಯೆಂದೇ ಸ್ವಾಮೀಜಿ ಪರಿಗಣಿಸಿದ್ದರು.

೪. ಧ್ಯಾನಜೀವನ ಮತ್ತು ಕ್ರಿಯಾಶೀಲ ಜೀವನಗಳ ಸಮನ್ವಯ: ಧ್ಯಾನಾಭ್ಯಾಸದ ಮುಖ್ಯ ಉದ್ದೇಶವೆಂದರೆ, ಪ್ರತ್ಯಗಾತ್ಮ ಅಥವಾ ಪರಮಾತ್ಮನ ಪ್ರಜ್ಞೆಯು ಮೂಡುವಂತೆ, ಮನಸ್ಸನ್ನು ಸ್ಥಿರವಾಗಿರಿಸುವುದು. ಅಭ್ಯಾಸ ಮಾಡಿದರೆ, ಈ ಬಗೆಯ ಧ್ಯಾನಿಸಿದ್ಧ ಸ್ವಯಂಪ್ರಜ್ಞೆಯನ್ನು ಕಾರ್ಯತತ್ಪರನಾಗಿರುವಾಗಲೂ ಮೈಗೂಡಿಸಿಕೊಳ್ಳಬಹುದು. ಕರ್ಮಯೋಗದ ಕೇಂದ್ರ ನಿಯಮವೇ ಇದು. ಒಬ್ಬನು ಅಂತಹ ಸ್ಥಿತಿಯನ್ನು ತಲುಪಿದರೆ, ಅವನಲ್ಲಿ ಧ್ಯಾನಜೀವನ ಮತ್ತು ಕ್ರಿಯಾಶೀಲ ಜೀವನಗಳ ನಡುವಣ ಆಂತರಿಕ ವ್ಯತ್ಯಾಸವೇ ಮರೆಯಾಗುವುದು, ಗಂಭೀರರೂಪದ ಕೆಲಸಕಾರ್ಯಗಳ ನಡುವೆಯೂ ಒಬ್ಬನು ತೀವ್ರವಾದ ಆಂತರಿಕ ಪ್ರಶಾಂತಿಯನ್ನು ಮತ್ತು ಆಧ್ಯಾತ್ಮಿಕ ಪ್ರಜ್ಞೆಯನ್ನು ಕಾಪಾಡಿಕೊಂಡು ಬರಬಹುದು.

೫. ವ್ಯಕ್ತಿತ್ವದ ಸಮಗ್ರ ಬೆಳವಣಿಗೆ: ಪ್ರತಿಯೊಬ್ಬ ವ್ಯಕ್ತಿಯೂ ನಾಲ್ಕು ಅಂಶಗಳನ್ನು ಅಥವಾ ಸಾಮರ್ಥ್ಯಗಳನ್ನು ಸಹಜವಾಗಿಯೇ ಹೊಂದಿರುತ್ತಾನೆ. ಅವೆಂದರೆ ಚಿಂತನೆ, ಭಾವನೆ, ಇಚ್ಚಾಶಕ್ತಿ ಮತ್ತು ಕಾರ್ಯಕುಶಲತೆ. ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಗೆ ಮೇಲಿನ ಎಲ್ಲ ಅಂಶಗಳ ಸರಿಯಾದ ಬೆಳವಣಿಗೆ ಅತ್ಯಾವಶ್ಯಕ. ಈ ಬಗೆಯ ಸುಸಂಯೋಜಿತ, ಸಮಗ್ರ ವ್ಯಕ್ತಿಗಳಾಗಿ ಮಾನವರು ಅಭಿವೃದ್ಧಿ ಹೊಂದಬೇಕೆನ್ನುವುದು ಸ್ವಾಮಿ ವಿವೇಕಾನಂದರ ವಿಶ್ವಧರ್ಮದ ಮೂರನೆಯ ಪರಿಕಲ್ಪನೆಯ ಒಂದು ಪ್ರಮುಖ ಅಂಶ. ವಿಶ್ವಧರ್ಮದ ಬಗ್ಗೆ ಸ್ವಾಮೀಜಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೀಡಿದ ಭಾಷಣದಲ್ಲಿ ಹೀಗೆ ಹೇಳುತ್ತಾರೆ:

“ದೇವರ ದಯೆಯಿಂದ ಎಲ್ಲರಲ್ಲಿಯೂ ಜ್ಞಾನ, ಯೋಗ, ಭಕ್ತಿ, ಕರ್ಮಗಳು ಸಮನಾಗಿ ಹೊಂದಿಕೊಂಡಿದ್ದರೆ! ಇದೇ ಆದರ್ಶ: ನನ್ನ ದೃಷ್ಟಿಯಲ್ಲಿ ಇದೇ ಪರಿಪೂರ್ಣ ವ್ಯಕ್ತಿಯೊಬ್ಬನ ಆದರ್ಶ… ಈ ನಾಲ್ಕು ಪಥಗಳಿಗೂ ಸಮನಾಗಿ ಹೊಂದಿಕೊಂಡಿರುವುದು ನನ್ನ ಧರ್ಮದ ಆದರ್ಶ.”

ಸ್ವಾಮಿ ವಿವೇಕಾನಂದರ ಮಟ್ಟಿಗಂತೂ ದೇವರ ಮೇಲಿನ ನಂಬಿಕೆ, ಒಂದು ಮತದ ಮೇಲಿನ ನಿಷ್ಠೆ ಅಥವಾ ಕೆಲವು ಆಚರಣೆಗಳು ಮತ್ತು ಪದ್ಧತಿಗಳನ್ನು ಅನುಸರಿಸುವುದು ಮಾತ್ರವೇ ಧರ್ಮವಲ್ಲ. ಅವರ ಪ್ರಕಾರ ಇಡೀ ಜೀವನವೇ ಧರ್ಮದ ರೂಪವನ್ನು ಪಡೆದುಕೊಳ್ಳುತ್ತದೆ. ಧರ್ಮವೆಂದರೆ, ಮಾನವ ಜೀವನವನ್ನು ಭಗವತ್ ಚೈತನ್ಯಯುತ ಜೀವನವನ್ನಾಗಿ ಪರಿವರ್ತಿಸುವ ಬಗೆಯಲ್ಲದೆ ಬೇರಲ್ಲ. ಅದು ನಮ್ಮ ಪ್ರತಿಯೊಂದು ಚಿಂತನೆ, ಭಾವನೆ ಮತ್ತು ಕ್ರಿಯೆಗಳನ್ನು ಆಧ್ಯಾತ್ಮಿಕ ಸಾಧನೆಯ ಅಂಗವನ್ನಾಗಿ ಪರಿವರ್ತಿಸುವದೇ ಆಗಿದೆ. ಒಬ್ಬನ ಇಡೀ ಜೀವನವನ್ನು ಒಂದು ಅವಿರತ ಯೋಗಸಾಧನೆಯಾಗಿ ಪರಿವರ್ತಿಸುವುದೇ ಧರ್ಮ: ಮಾನವನನ್ನು ದಿವ್ಯವಾಗಿಸುವುದೇ ಧರ್ಮ. ಇಂತಹ ದೈವೀಕೃತ ಬಾಳನ್ನು ಎಲ್ಲಾ ಧರ್ಮಗಳ ಮಹಾನ್ ಸಂತರು ಮತ್ತು ಅನುಭಾವಿಗಳ ಜೀವಿತದಲ್ಲಿ ಕಾಣಬಹುದು.

ಇದುವರೆಗೂ ವಿಚಾರಮಾಡಿದ್ದು, ಸ್ವಾಮಿ ವಿವೇಕಾನಂದರ ವಿಶ್ವಧರ್ಮದ ಪರಿಕಲ್ಪನೆಯನ್ನು. ವಿಜ್ಞಾನ, ತಂತ್ರಜ್ಞಾನ, ವಾಣಿಜ್ಯ ಮತ್ತು ರಾಜಕೀಯ ತಂತ್ರಗಳು ಹಾಗೂ ಜಾಗತೀಕರಣಗಳ ಇತರ ಶಕ್ತಿಗಳು ಇತ್ತೀಚಿನ ದಿನಗಳಲ್ಲಿ ಪ್ರಪಂಚದ ಎಲ್ಲ ಜನಗಳನ್ನೂ ಹತ್ತಿರವಾಗಿಸುತ್ತಿರುವಾಗ, ಈ ಬಗೆಯ ಪ್ರಬುದ್ಧ ವಿಶ್ವಧರ್ಮ ಪರಿಕಲ್ಪನೆಯು ಅತ್ಯಂತ ಮಹತ್ವದ ಭೂಮಿಕೆಯನ್ನು ಪಡೆದುಕೊಳ್ಳುತ್ತದೆ.

ಧರ್ಮಸಮನ್ವಯ: ರಾಮಕೃಷ್ಣ ಆಂದೋಲನದ ಜೀವಂತ ಸಂಪ್ರದಾಯ

ಧರ್ಮಸಮನ್ವಯವು ರಾಮಕೃಷ್ಣ ಆಂದೋಲನದ ಜೀವಂತ ಸಂಪ್ರದಾಯವಾಗಿದೆ. ನಾವೀಗಾಗಲೇ ಚರ್ಚಿಸಿದ, ಶ್ರೀರಾಮಕೃಷ್ಣರು ಮತ್ತು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಧರ್ಮಸಮನ್ವಯ ತತ್ತ್ವಗಳನ್ನು, ಭಾರತ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಹಬ್ಬಿರುವ ತನ್ನ ೧೬೫ ಕ್ಕೂ ಹೆಚ್ಚಿನ ಶಾಖೆಗಳ ಮೂಲಕ ರಾಮಕೃಷ್ಣ ಮಠ ಮತ್ತು ಮಿಷನ್ ಅನುಷ್ಠಾನಕ್ಕೆ ತರುತ್ತಿದೆ. ಧರ್ಮಸಮನ್ವಯವು ರಾಮಕೃಷ್ಣ ಆಂದೋಲನದಲ್ಲಿ ಹಲವಾರು ವಿಧಗಳಲ್ಲಿ ಅಭಿವ್ಯಕ್ತಿಯನ್ನು ಕಂಡುಕೊಂಡಿದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಚರ್ಚಿಸಲಾಗುವುದು:

೧. ಮೊದಲನೆಯದಾಗಿ, ರಾಮಕೃಷ್ಣ ಸಂಘದ ಸಂನ್ಯಾಸೀ ಸಂಪ್ರದಾಯದಲ್ಲಿ ಎಲ್ಲ ಧರ್ಮ, ಜಾತಿ ಮತ್ತು ಜನಾಂಗಗಳಿಗೆ ಸೇರಿದವರಿಗೆ ಅವಕಾಶವಿದೆ. ಹಿಂದೂಗಳು, ಕ್ರೈಸ್ತರು, ಮುಸ್ಲಿಮರು, ಯಹೂದಿಗಳು, ಬೌದ್ಧರು, ವಿವಿಧ ದೇಶಗಳಿಂದ ಬಂದವರು ರಾಮಕೃಷ್ಣ ಮಹಾಸಂಘದ ಆಶ್ರಮಗಳಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಮಕ್ಕಳಂತೆ ಪರಸ್ಪರ ಪ್ರೀತಿ ಮತ್ತು ಸಹಕಾರ ಮನೋಭಾವಗಳಿಂದ ಒಟ್ಟಾಗಿ ಬಾಳುತ್ತಾರೆ.

೨. ರಾಮಕೃಷ್ಣ ಆಂದೋಲನದ ಗೃಹಸ್ಥ ಭಕ್ತರೂ ಕೂಡ, ಹಲವಾರು ಧಾರ್ಮಿಕ ಪಂಗಡಗಳಿಗೆ ಮತ್ತು ದೇಶಗಳಿಗೆ ಸೇರಿದವರಾಗಿದ್ದು, ತಮ್ಮ ನೆರೆಹೊರೆಯವರೊಡನೆ ಧರ್ಮ ಸಮನ್ವಯದ ನಿಯಮಗಳ ಆಧಾರದ ಮೇಲೆ ಶಾಂತಿಯಿಂದ ಸಹಬಾಳ್ವೆ ನಡೆಸುತ್ತಾರೆ. ಅವರು ತಮ್ಮ ತಮ್ಮ ಧರ್ಮಗಳಿಗೆ ತೋರುವ ಶ್ರದ್ದೆಯನ್ನು ತ್ಯಜಿಸುವ ಅಗತ್ಯವಿಲ್ಲ ಹಾಗೂ ಯಾವುದೇ ಪೂಜಸ್ಥಳಕ್ಕೆ ಭೇಟಿ ನೀಡಿ, ಆಯಾ ಧಾರ್ಮಿಕ ಪದ್ಧತಿಗಳು ಮತ್ತು ಆಚರಣೆಗಳನ್ನು ಅನುಸರಿಸಲು ಯಾವುದೇ ನಿರ್ಬಂಧವಿಲ್ಲ.

೩. ರಾಮಕೃಷ್ಣ ಮಹಾಸಂಘದ ಎಲ್ಲ ಶಾಖೆಗಳಲ್ಲಿಯೂ ವಿಶ್ವಧರ್ಮಗಳ ಸಂಸ್ಥಾಪಕರಾದ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಆಚರಿಸಲಾಗುವುದು. ರಾಮಕೃಷ್ಣ ಮಹಾಸಂಘವು ವಿವಿಧ ಧರ್ಮಗಳ, ಅದರ ಸಂಸ್ಥಾಪಕರ ಹಾಗೂ ಅವರ ಬೋಧನೆಗಳ ಬಗ್ಗೆ ಪುಸ್ತಕಗಳನ್ನು ಮತ್ತು ಲೇಖನಗಳನ್ನು ಪ್ರಕಟಿಸುತ್ತದೆ. (ಇತ್ತೀಚೆಗೆ ವಿವೇಕಪ್ರಭವು, ಹಿಂದೂ, ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ತಾತ್ವಿಕ ವಿಚಾರಗಳನ್ನು ನಿರೂಪಿಸುವ ಲೇಖನಗಳನ್ನು ಪ್ರಕಟಿಸಿದೆ. -ಸಂ.)

೪. ರಾಮಕೃಷ್ಣ ಮಹಾಸಂಘದ ಬ್ರಹ್ಮಚಾರಿಗಳಿಗೆ ತುಲನಾತ್ಮಕ ಧರ್ಮಶಾಸ್ತ್ರ (comparative Religion) ಮತ್ತು ವಿವಿಧ ಧರ್ಮಗಳ ಶಾಸ್ತ್ರಗ್ರಂಥಗಳನ್ನು ಬೋಧಿಸಲಾಗುವುದು. ರಾಮಕೃಷ್ಣ ಮಹಾಸಂಘದ ಸಂನ್ಯಾಸಿಗಳು ವಿವಿಧ ಧರ್ಮಗಳಿಗೆ ಸೇರಿದ ಸಾಧುಸಂತರ ಕೃತಿಗಳನ್ನು ಅಧ್ಯಯನ ಮಾಡಿ ಪ್ರಯೋಜನ ಪಡೆಯುವ ಸ್ವಾತಂತ್ರವನ್ನು ಹೊಂದಿರುತ್ತಾರೆ. ಅದಲ್ಲದೆ, ರಾಮಕೃಷ್ಣ ಮಠ ಮತ್ತು ಮಿಷನ್ನಿಗೆ ಸೇರಿದ ಸಂಸ್ಥೆಗಳಲ್ಲಿ ಇತರ ಧರ್ಮಗಳ ಬಗ್ಗೆ ಮತ್ತು ಅದರ ಧಾರ್ಮಿಕ ಮುಖಂಡರ ಬಗ್ಗೆ ಕಟು ನುಡಿಗಳನ್ನಾಡುವುದಕ್ಕೆ ಅವಕಾಶವಿಲ್ಲ.

೫. ಧರ್ಮಸಮನ್ವಯದ ಆದರ್ಶವನ್ನು ಪ್ರಚುರಗೊಳಿಸಲು ರಾಮಕೃಷ್ಣ ಮಠ ಮತ್ತು ಮಿಷನ್ ಕೈಗೊಂಡಿರುವ ಇನ್ನೊಂದು ವಿಧಾನವೆಂದರೆ ಅಂತರಧಾರ್ಮಿಕ ಸಮಾವೇಶಗಳ ಆಯೋಜನೆ. ಅವುಗಳಲ್ಲಿ, ವಿವಿಧ ಧರ್ಮಗಳ ಪ್ರತಿನಿಧಿಗಳು ತಮ್ಮ ತಮ್ಮ ಧರ್ಮಗಳ ಬಗ್ಗೆ ಭಾಷಣ ಮಾಡುತ್ತಾರೆ.

೬. ಕಡೆಯದಾಗಿ, ರಾಮಕೃಷ್ಣ ಮಹಾಸಂಘವು ಮೂಲಭೂತವಾದಿ ಗುಂಪುಗಳಿಂದ ದೂರ ಇರುತ್ತದೆ ಮತ್ತು ಯಾವುದೇ ರೀತಿಯ ರಾಜಕೀಯ ಚಟುವಟಿಕೆಗಳಲ್ಲಿ ಅದು ಪಾಲ್ಗೊಳ್ಳುವುದಿಲ್ಲ.

ರಾಮಕೃಷ್ಣ ಮಹಾಸಂಘವು ಧರ್ಮಸಾಮರಸ್ಯದ ಆದರ್ಶವನ್ನು ಅನುಷ್ಠಾನಗೊಳಿಸುತ್ತಿರುವ ವಿವಿಧ ವಿಧಾನಗಳ ಸಂಕ್ಷಿಪ್ತ ವಿವರಣೆಯನ್ನು ನಾವು ನೀಡಿದ್ದೇವೆ. ಇವುಗಳಲ್ಲದೆ, ಈ ಮಹಾನ್ ಆಂದೋಲನವನ್ನು ಅಧ್ಯಯನ ಮಾಡಿರುವ ಯಾರೇ ಆಗಲಿ, ಇಲ್ಲಿ ಧರ್ಮಸಾಮರಸ್ಯವು ಅನುಷ್ಠಾನಗೊಳ್ಳುವ ಕೆಲವು ವಿಶಿಷ್ಟ ಸಂಗತಿಗಳನ್ನು ಗಮನಿಸದೇ ಇರಲಾರರು, ಅವುಗಳು ಹೀಗಿವೆ:

೧. ಮೊದಲನೆಯದಾಗಿ, ಧರ್ಮಸಾಮರಸ್ಯವು ಹೊಸ ಸಂಗತಿಯೇನೂ ಅಲ್ಲ. ಸಮೂಹ ಮಾಧ್ಯಮಗಳು, ಜಾಗತೀಕರಣ, ದೊಡ್ಡ ದೊಡ್ಡ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳು- ಇವೆಲ್ಲವುಗಳ ಪ್ರಭಾವದಿಂದ, ಧರ್ಮ ಮತ್ತು ಸಂಸ್ಕೃತಿಯ ವಿಷಯಗಳಲ್ಲಿ  ಬಹುಮುಖಿ(pluralistic) ಧೋರಣೆಯನ್ನು ಅನುಸರಿಸುವುದರ ಬಗೆಗಿನ ಮಹತ್ವದ ಅರಿವು ಈಗ ಹೆಚ್ಚಾಗುತ್ತಿದೆ. ಆಧುನಿಕ ಯುವಕರು ಬಹುಧಾರ್ಮಿಕ, ಬಹು-ಸಾಂಸ್ಕೃತಿಕ ಆಲ್ಲದೆ. ಬಹುರಾಷ್ಟ್ರೀಯ ಮನೋಭಾವನೆಯನ್ನೂ ಹೊಂದಿರುತ್ತಾರೆ. ಆದರೆ ರಾಮಕೃಷ್ಣ ಮಹಾಸಂಘದ ಧರ್ಮಸಾಮರಸ್ಯದ ಆಚರಣೆಗೂ ಮೇಲೆ ಹೇಳಿದ ಇತ್ತೀಚಿನ ವಿದ್ಯಮಾನಗಳಿಗೂ ಯಾವ ಸಂಬಂಧವೂ ಇಲ್ಲ. ಈ ಆಂದೋಲನದಲ್ಲಿ ಧರ್ಮಸಾಮರಸ್ಯವನ್ನು ೧೫೦ ವರ್ಷಗಳಿಂದಲೂ ಆನುಸರಿಸಲಾಗುತ್ತಿದೆ.

೨. ರಾಮಕೃಷ್ಣ ಮಹಾಸಂಘದ ಧರ್ಮಸಮನ್ವಯ ಆಚರಣೆಯ ಇನ್ನೊಂದು ಲಕ್ಷಣವೆಂದರೆ, ಅಧಿಕೃತತೆ (authenticity). ಇಲ್ಲಿ ಧರ್ಮಸಾಮರಸ್ಯವೆಂಬುದು ಬರಿಯ ಬಾಹ್ಯ ಪ್ರದರ್ಶನವಲ್ಲ. ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುವ ತಂತ್ರವಿಧಾನವೂ ಅಲ್ಲ. ಈ ಸಂಘಕ್ಕೆ ಸೇರಿದ ಸಂನ್ಯಾಸಿಗಳು ಮತ್ತು ಇತರ ಸಾಧಾರಣ ಜನರು ಸಹಜವಾಗಿಯೇ ಪರಿಪಾಲಿಸುವ ಜೀವನವಿಧಾನವಿದು. ಈ ಮಾರ್ಗವು ಯುಕ್ತವಾದುದು ಮತ್ತು ಆಧುನಿಕ ಜನಾಂಗಕ್ಕೆ ಶ್ರೀರಾಮಕೃಷ್ಣರು ತೋರಿಸಿಕೊಟ್ಟ ಸತ್ಯಪಥವಾಗಿದೆ ಎಂತಲೇ ಇದನ್ನು ಅನುಸರಿಸಲಾಗುತ್ತಿದೆ.

೩. ಮೂರನೆಯದಾಗಿ, ಧಾರ್ಮಿಕ ಸಾಮರಸ್ಯದ ಅನುಷ್ಠಾನವು ಶ್ರೀರಾಮಕೃಷ್ಣರು ಮಾನವ ಜನಾಂಗದ ಮೇಲೆ ಇರಿಸಿದ್ದ ದಿವ್ಯಪ್ರೇಮದ
ಅಭಿವ್ಯಕ್ತ ರೂಪವಾಗಿದೆ. ಈ ಜಗತ್ತು ಕಂಡ ಮಾನವ ಜನಾಂಗವನ್ನು ಪ್ರೀತಿಸಿದ ಮಹಿಮಾನ್ವಿತರಲ್ಲಿ ಅಗ್ರಗಣ್ಯರ ಶ್ರೇಣಿಗೆ ಸೇರಿದವರು ಶ್ರೀರಾಮಕೃಷ್ಣರು. ಅವರ ಪ್ರೇಮವು ಜಾತಿ, ಮತ ಮತ್ತು ಜನಾಂಗಗಳ ಎಲ್ಲೆಗಳನ್ನು ಮೀರಿತ್ತು. ವಿಶ್ವಧರ್ಮಗಳ ಸಂಸ್ಥಾಪಕರೆಲ್ಲರನ್ನೂ – ಕೃಷ್ಣ, ಬುದ್ಧ, ಏಸುಕ್ರಿಸ್ತ, ಮುಹಮ್ಮದ್, ಚೈತನ್ಯ ಮತ್ತಿತರರನ್ನು ತಮ್ಮ ಸಮೀಪದ ಬಂಧುಗಳೋ ಎಂಬಂತೆ ಅವರು ಪ್ರೀತಿಸುತ್ತಿದ್ದರು. ಹೀಗಾಗಿ, ಸಹಜವಾಗಿಯೇ ಅವರು ಆ ಮಹಾನ್ ಪ್ರವಾದಿಗಳ ಅನುಯಾಯಿಗಳನ್ನೂ ಪ್ರೀತಿಸುತ್ತಿದ್ದರು. ಶ್ರೀರಾಮಕೃಷ್ಣರು ಎಲ್ಲ ಜನರ ಮೇಲಿರಿಸಿದ್ದ ವಿಶ್ವಾತ್ಮಕ ಮತ್ತು ಅವ್ಯಾಜ ಪ್ರೀತಿಯೇ ರಾಮಕೃಷ್ಣ ಮಹಾಸಂಘದ ಸದಸ್ಯರನ್ನೆಲ್ಲ ಒಗ್ಗೂಡಿಸುವ ಒಂದು ಮೂಲಭೂತ ಶಕ್ತಿಯಾಗಿದೆ.

೪. ಇನ್ನೊಂದು ಶಕ್ತಿಯೆಂದರೆ, ಅದರಷ್ಟೆ ವಿಶ್ವವ್ಯಾಪಿಯೂ, ಅವ್ಯಾಜ ಮತ್ತು ಸರ್ವಕ್ಷಮಾದಾಯಿಯೂ ಆದ ಶ್ರೀಮಾತೆ ಶಾರದಾದೇವಿಯವರ ಸರ್ವಸಹನಾಪ್ರೇಮ. ಅವರು ಅಂತಹ ವಿಶ್ವಮಾತೃತ್ವವನ್ನು ತಮ್ಮೊಳಗೆ ಮೂಡಿಸಿಕೊಂಡಿದ್ದರು.

ಶತಶತಮಾನಗಳಿಂದ ಮಾನವ ಜನಾಂಗವು ವಿಶ್ವಭ್ರಾತೃತ್ವದ ಬಗ್ಗೆ ಕನಸು ಕಾಣುತ್ತ ಬಂದಿದೆ. ಆದರೂ ಆ ಆದರ್ಶ ಇದುವರೆಗೂ ನನಸಾಗಿಲ್ಲ. ಇದಕ್ಕೆ ಕಾರಣವೆಂದರೆ, ಸಮಾಜವನ್ನು ಒಟ್ಟುಗೂಡಿಸುವ ಬಂಧನವು ಮಾತೃತ್ವದ್ದಾಗಿದೆ. ಆದ್ದರಿಂದ ವಿಶ್ವಭ್ರಾತೃತ್ವವು ಮೊದಲು ವಿಶ್ವಮಾತೃತ್ವವನ್ನು ಅಪೇಕ್ಷಿಸುತ್ತದೆ. ಸಾಮಾಜಿಕ ಜೀವನದಲ್ಲಿ ಮಾತೃತ್ವವು ವಹಿಸುವ ಮಹತ್ವದ ಪಾತ್ರವನ್ನು ಜೆ.ಜೆ. ಬಕೊಫೆನ್, ಎಲ್. ಎಚ್. ಮಾರ್ಗನ್ ಮುಂತಾದ ಮಾನವಶಾಸ್ತ್ರಜ್ಞರು ಎತ್ತಿ ತೋರಿಸಿದ್ದಾರೆ. ಇದು ಅವರು ಕೈಗೊಂಡ ಪುರೋಗಾಮಿ ಕಾರ್ಯದ ಫಲವಾಗಿದೆ.

ಪಿತೃಪ್ರಧಾನ ಸಮಾಜಗಳು ಪ್ರತ್ಯೇಕ ಮತ್ತು ಖಂಡವಾಗಿರುತ್ತವೆ. ಆದರೆ ಮಾತೃಪ್ರಧಾನ ಸಮಾಜಗಳು ಸರ್ವಾಂಗೀಣ ಮತ್ತು ಅಖಂಡವಾಗಿರುತ್ತವೆ. ವಿವಿಧ ಸಂಸ್ಕೃತಿಗಳು, ಧರ್ಮಗಳು, ಜನಾಂಗಗಳು ಮತ್ತು ಸಾಮಾಜಿಕ ಅಂತಸ್ತುಗಳಿಗೆ ಸೇರಿದ ಜನರನ್ನು ಒಟ್ಟುಗೂಡಿಸಲು ಅವುಗಳ ಕೇಂದ್ರದಲ್ಲಿ ಮಾತೃಪ್ರತಿಮೆಯೊಂದನ್ನು ನಿಲ್ಲಿಸುವುದು ಅವಶ್ಯಕ.

ಶ್ರೀರಾಮಕೃಷ್ಣ ಮಹಾಸಂಘದಲ್ಲಿ ಶ್ರೀಶಾರದಾದೇವಿಯವರು ವಹಿಸಿದ ಪಾತ್ರ ಇದೇ. ನಿರಕ್ಷರ ಗ್ರಾಮೀಣ ಬಾಲಕಿಯಾಗಿದ್ದ ಅವರು ತಮ್ಮ ಪರಿಶುದ್ಧ ಪಾವಿತ್ರ್ಯತೆಯಿಂದ, ನಿಸ್ಸ್ವಾರ್ಥ ಪ್ರೇಮದಿಂದ, ಅವಿರತ ಸಹನಾಶಕ್ತಿಯಿಂದ ಮತ್ತು ದಿವ್ಯ ದರ್ಶನಗಳಿಂದ, ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರ್ಸಿ….. ಜನರ, ಒಟ್ಟಾರೆ ಇಡೀ ಮಾನವ ಜನಾಂಗದ ಮಾತೆಯಾಗಿ ತಮ್ಮನ್ನು ರೂಪಿಸಿಕೊಂಡರು. ಅವರ ‘ಮಕ್ಕಳಲ್ಲಿ’ ಅಮ್ಜದ್ ಎಂಬ ಹೆಸರಿನ ದರೋಡೆಕಾರನೂ ಇದ್ದನು. ಅವನ ಬಗ್ಗೆ ಶ್ರೀಮಾತೆಯವರು ಹೀಗೆ ಹೇಳುತ್ತಿದ್ದರು: “ಶರತ್ (ಸ್ವಾಮಿ ಶಾರದಾನಂದಜಿ, ರಾಮಕೃಷ್ಣ ಮಹಾಸಂಘದ ಅಂದಿನ ಕಾರ್ಯದರ್ಶಿ) ನನ್ನ ಮಗ ಹೇಗೋ, ಹಾಗೆಯೇ ಈ ಅಮ್ಜದ್ ಕೂಡ.” ರಾಮಕೃಷ್ಣ ಮಠ ಮತ್ತು ಮಿಷನ್ ಧರ್ಮಸಾಮರಸ್ಯದ ಆದರ್ಶವನ್ನು ತನ್ನ ಸಂನ್ಯಾಸೀ ಸಂಪ್ರದಾಯದಲ್ಲಿ ಮತ್ತು ಗೃಹಸ್ಥ ಭಕ್ತರಲ್ಲಿ ಅನುಷ್ಠಾನಗೊಳಿಸಿರುವುದಕ್ಕೆ ಶ್ರೀಮಾತೆ ಶಾರದಾದೇವಿಯವರ ಕೃಪಾಪೂರಿತ, ಸಮಗ್ರ ಮತ್ತು ಸಂರಕ್ಷಕ ಪ್ರಭಾವವು ಬಹಳಷ್ಟು ಮಟ್ಟಿಗೆ ಕಾರಣ ಎಂದು ಹೇಳಬಹುದು. ಆ ಪ್ರಭಾವ ಈ ಆಂದೋಲನ ಸದಸ್ಯರ ಮೇಲೆ ಇಂದಿಗೂ ಮೂಡಿರುವುದನ್ನು ನಾವು ಕಾಣಬಹುದಾಗಿದೆ.

ಭವಿಷ್ಯ ದೃಷ್ಟಿ

ಈ ಲೇಖನದಲ್ಲಿ ಇದುವರೆಗೆ ಧರ್ಮಸಮನ್ವಯದ ಬಗ್ಗೆ ಶ್ರೀರಾಮಕೃಷ್ಣರು ಮತ್ತು ಸ್ವಾಮಿ ವಿವೇಕಾನಂದರ ಪ್ರಮುಖ ಬೋಧನೆಗಳ ಸಂಕ್ಷಿಪ್ತ ರೂಪುರೇಷೆಗಳನ್ನು ನೀಡಲು ಯತ್ನಿಸಿದ್ದೇವೆ. ಅದಲ್ಲದೆ. ಈ ಬೋಧನೆಗಳನ್ನು ಭಾರತ ಮತ್ತು ಇತರ ದೇಶಗಳಲ್ಲಿ ಹಬ್ಬಿರುವ ರಾಮಕೃಷ್ಣ ಮಹಾಸಂಘದ ಶಾಖಾಕೇಂದ್ರಗಳಲ್ಲಿ ಹೇಗೆ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂಬುದನ್ನೂ ಹೇಳಲಾಗಿದೆ.

ಮಾನವ ಜನಾಂಗದ ಭವಿಷ್ಯವೇನೆಂದು ಹೇಳುವುದು ಕಷ್ಟವೇ ಆದರೂ ಶ್ರೀರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ಸಂದೇಶಗಳ ಸಮಂಜಸತೆ ಮತ್ತು ಪ್ರಭಾವಗಳು ಮುಂಬರುವ ದಶಕಗಳಲ್ಲಿ ಮತ್ತು ಶತಮಾನಗಳಲ್ಲಿ ಹೆಚ್ಚುತ್ತ ಹೋಗುವುದೆಂದು ನಂಬಲು ಸಾಕಷ್ಟು ಸೂಚನೆಗಳಿರುವುದನ್ನು ನಾವು ಕಾಣಬಹುದು.

೨೧ ನೆಯ ಶತಮಾನದ ಅರುಣೋದಯದ ಸಮಯದಲ್ಲಿ ನಾವು ಇಡೀ ವಿಶ್ವದಾದ್ಯಂತ ನಾಲ್ಕು ಪ್ರಮುಖ ಬೆಳವಣಿಗೆಗಳನ್ನು ಕಾಣಬಹುದಾಗಿದೆ. ಮೊದಲನೆಯದು, ಮಾನವ ಜೀವಿತದಲ್ಲಿ ವಿಜ್ಞಾನ ಮತ್ತು ತಾಂತ್ರಿಕತೆಯ ಅಗಾಧ ಪ್ರಭಾವ. ಇನ್ನೊಂದು ಆರ್ಥಿಕತೆಯ ಉದಾರೀಕರಣ. ಮೂರನೆಯ ಬೆಳವಣಿಗೆಯೆಂದರೆ, ಜಾಗೃತ ಮಾನವೀಯತೆ. ಅದನ್ನು ತುಳಿದಿಟ್ಟ ಜನರ ಹಕ್ಕುಗಳ ಬಗೆಗಿನ ಪರಿಜ್ಞಾನ, ಎಲ್ಲ ಬಗೆಯ ಶೋಷಣೆ, ಅನ್ಯಾಯ, ನಿರಂಕುಶತೆ, ಕೌರ್ಯ ಮತ್ತು ದಾಸ್ಯಗಳಿಗೆ ವಿರೋಧದ ರೂಪದಲ್ಲಿ ಪ್ರಕಟವಾಗುವುದನ್ನು ನಾವು ಕಾಣಬಹುದು. ನಾಲ್ಕನೆಯ ಬೆಳವಣಿಗೆಯೆಂದರೆ, ಮಾನವ ಜನಾಂಗದ ಆಧ್ಯಾತ್ಮಿಕ ಚೈತನ್ಯವು ನಿಧಾನಗತಿಯಲ್ಲಿ ಜಾಗೃತವಾಗುತ್ತಿರುವುದು.

ಈ ಆಧ್ಯಾತ್ಮಿಕ ಜಾಗೃತಿಯ ಸಂಕೇತಗಳನ್ನು ನಾವು ವಿಶ್ವದಾದ್ಯಂತ ಕಾಣಬಹುದು. ಆಧ್ಯಾತ್ಮಿಕ ಜೀವನದಲ್ಲಿ ಆಸಕ್ತಿ, ಗುರುಗಳು, ಯೋಗಿಗಳು, ಲಾಮಾಗಳು ಮತ್ತಿತರ ಆಧ್ಯಾತ್ಮಿಕ ಬೋಧಕರ ಪ್ರಸಿದ್ಧಿ, ಸಾವಿರಾರು ಆಧ್ಯಾತ್ಮಿಕ ಕೇಂದ್ರಗಳು ಮತ್ತು ಸಂಸ್ಥೆಗಳು ತಲೆಯೆತ್ತಿರುವುದು ಈ ಜಾಗೃತಿಗೆ ದ್ಯೋತಕಗಳು. ಅಭಿವೃದ್ಧಿ ಹೊಂದಿದ ದೇಶಗಳು ಸಾಮಾಜಿಕ ಸಮಸ್ಯೆಗಳ ಆಧಿಕ್ಯದಿಂದ ವ್ಯಾಧಿಗ್ರಸ್ತವಾಗಿವೆ. ಅವೆಂದರೆ, ಅಪರಾಧಗಳು, ಹಿಂಸೆ, ಅನೈತಿಕತೆ, ಮದ್ಯಪಾನ, ಒಡೆಯುತ್ತಿರುವ ಕುಟುಂಬಗಳು ಇತ್ಯಾದಿ ಮತ್ತು ಜೀವನದ ಪ್ರಜ್ವಲ ಸಮಸ್ಯೆಗಳಾದ (existential problems) ಅರ್ಥಶೂನ್ಯತೆ, ಏಕಾಂಗಿತನ, ಜಿಗುಪ್ಸೆ, ನರದೌರ್ಬಲ್ಯಗಳು ಮುಂತಾದವು. ಆಧ್ಯಾತ್ಮಿಕ ಜೀವನವನ್ನಪ್ಪುವುದರಿಂದ ಮಾತ್ರವೇ ಈ ಸಮಸ್ಯೆಗಳನ್ನು ಪರಿಹರಿಸಬಹುದೆಂಬ ಅರಿವು ಹೆಚ್ಚಾಗುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವಾಸಿಸುವ ಲಕ್ಷಗಟ್ಟಲೆ ಜನರು ಧ್ಯಾನ, ಯೋಗ, ವಿಪಸ್ಸನ ಮುಂತಾದ ಆಧ್ಯಾತ್ಮಿಕ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.

ಈ ಆಧುನಿಕ ಆಧ್ಯಾತ್ಮಿಕ ಜಾಗೃತಿಯಲ್ಲಿ ಕಂಡುಬರುವ ಗಮನಾರ್ಹ ಸಂಗತಿಯೆಂದರೆ, ಅದು ಸಾಂಪ್ರದಾಯಿಕ ಧರ್ಮಗಳ ಎಲ್ಲೆಗಳನ್ನು ಮೀರಿ ನಿಂತಿರುವುದು. ಅದಷ್ಟೇ ಅಲ್ಲ, ಈ ಆಧ್ಯಾತ್ಮಿಕ ಆಂದೋಲನಗಳು ಬಹುಪಾಲು ಯಾವ ಧರ್ಮಕ್ಕೂ ಸೇರಿದವುಗಳಲ್ಲ. ಅವನ್ನು ಅನುಸರಿಸಲು ಭಗವಂತನ ಅಥವಾ ಯಾವುದೇ ಧರ್ಮಗ್ರಂಥದ ಮೇಲಿನ ಶ್ರದ್ಧೆಯ ಆವಶ್ಯಕತೆ ಇಲ್ಲ. ಈ ಬಗೆಯ ‘ಲೌಕಿಕ ಆಧ್ಯಾತ್ಮಿಕತೆ’ ಎಂದು ಕರೆಯಲಾಗುವ ಭಾವವು ನಾವು ಹಿಂದೆ ಚರ್ಚಿಸಿದ, ಸ್ವಾಮಿ ವಿವೇಕಾನಂದರ ವಿಶ್ವಧರ್ಮದ ಬಗೆಗಿನ ಮೂರನೆಯ ಪರಿಕಲ್ಪನೆಗೆ ನಿಕಟವಾಗಿದೆ.

೧೯ ನೆಯ ಶತಮಾನದ ಮಧ್ಯಭಾಗದಲ್ಲಿ ಶ್ರೀರಾಮಕೃಷ್ಣರ ದಿವ್ಯವಾಣಿಯು, ವಿವಿಧ ಹೆಸರುಗಳಿಂದ ಕರೆಯಲ್ಪಡುವ ಪರತತ್ತ್ವದ ಸಾಕ್ಷಾತ್ಕಾರವೇ ಮಾನವ ಜೀವಿತದ ಪರಮಾರ್ಥ ಮತ್ತು ಪರಮೋದ್ದೇಶವೆಂದೂ, ಅದರ ಮೂಲಕವೇ ವ್ಯಕ್ತಿಯು ನಿತ್ಯತೃಪ್ತಿ ಮತ್ತು ಸಾರ್ಥಕತೆಗಳನ್ನು ಗಳಿಸಬಹುದೆಂದೂ ಜನರಿಗೆ ಜ್ಞಾಪಿಸಿಕೊಟ್ಟಿತು. ಮುಂದುವರೆದು, ಆಧ್ಯಾತ್ಮಿಕ ಜೀವನವೇ ಎಲ್ಲ ಧರ್ಮಗಳ ಸಾರಸರ್ವಸ್ವವೆಂದು ಶ್ರೀರಾಮಕೃಷ್ಣರು ಬೋಧಿಸಿದರು. ಈ ಭಾವನೆಗಳು ಗುಪ್ತಗಾಮಿನಿಯಾಗಿ ಪ್ರಪಂಚದೆಲ್ಲೆಡೆ ಪಸರಿಸಿರುವುದನ್ನು ನಾವು ಕಾಣಬಹುದು.

ಶ್ರೀರಾಮಕೃಷ್ಣರು ತಮ್ಮ ತೀವ್ರ ಆಧ್ಯಾತ್ಮಿಕ ಸಾಧನೆಗಳಿಂದ ಮತ್ತು ಭಾವಪೂರ್ಣ ಪ್ರಾರ್ಥನೆಗಳಿಂದ ಮಾನವ ಜನಾಂಗದ ಆಧ್ಯಾತ್ಮಿಕ ಅರಿವನ್ನು ಜಾಗೃತಗೊಳಿಸಿದರೆಂದು ಸ್ವಾಮಿ ವಿವೇಕಾನಂದರು ನಂಬಿದ್ದರು. ಮಾನವರೆಲ್ಲರೂ ಎಂತಹ ಉನ್ನತ ಅರಿವಿನ ಹಂತವನ್ನು ತಲುಪುವರೆಂದರೆ, ಸಾಧಾರಣ ಮಾನವ ಜೀವಿತವು ಆಧ್ಯಾತ್ಮಿಕ ಜೀವನ ಅಥವಾ ದಿವ್ಯ ಜೀವನವಾಗಿ ಮಾರ್ಪಡುವುದು. ಅಂತಹ ಸಮಯವೊಂದು ಮುಂದೊಮ್ಮೆ ಸಾಕಾರಗೊಳ್ಳುವುದನ್ನು ಸ್ವಾಮೀಜಿ ತಮ್ಮ ಭವಿಷ್ಯದ್ದರ್ಶನದಲ್ಲಿ ಕಂಡಿದ್ದರು. ಸ್ವಾಮೀಜಿ ಹೇಳುತ್ತಾರೆ:

ಧಾರ್ಮಿಕ ಭಾವನೆಗಳು ವಿಶಾಲವಾಗಬೇಕು. ಅನಂತವಾಗಬೇಕು. ಆಗ ಮಾತ್ರ ಧರ್ಮದ ಪೂರ್ಣ ಪ್ರಭಾವವನ್ನು ಕಾಣಲು ಸಾಧ್ಯ. ಧಾರ್ಮಿಕಶಕ್ತಿಯು ಈಗ ತಾನೆ ಪ್ರಕಟವಾಗಲು ಆರಂಭಿಸಿದೆ. ಪ್ರಪಂಚದಲ್ಲಿ ಧರ್ಮವು ಅಳಿಯತ್ತದೆ, ಆಧ್ಯಾತ್ಮಿಕ ಭಾವನೆ ಅಳಿಯುತ್ತಿದೆ ಎನ್ನುವುದನ್ನು ಹಲವಾರು ಬಾರಿ ಕೇಳುತ್ತೇವೆ. ಆದರೆ, ಅವುಗಳ ಬೆಳವಣಿಗೆ ಈಗ ತಾನೆ ಪ್ರಾರಂಭವಾಗಿದೆ ಎಂದು ನನ್ನ ಅನಿಸಿಕೆ. ವಿಶಾಲವಾದ, ಪರಿಶುದ್ಧವಾದ ಧಾರ್ಮಿಕ ಶಕ್ತಿಯು ಮಾನವ ಜೀವನದಲ್ಲಿ ಹಾಸುಹೊಕ್ಕಾಗಿ ಪರಿಣಮಿಸುವುದು. ಎಲ್ಲಿಯವರೆಗೆ ಧರ್ಮವು ಎಲ್ಲೋ ಕೆಲವು ಆರಿಸಿದ ವ್ಯಕ್ತಿಗಳ ಕೈಯಲ್ಲಿದ್ದಿತೋ ಆಗ ಅದು ದೇವಸ್ಥಾನ, ಚರ್ಚು, ಶಾಸ್ತ್ರ, ಆಚಾರ, ವ್ಯವಹಾರ – ಇವುಗಳಲ್ಲಿತ್ತು. ಆದರೆ ಎಂದು ನಾವು ನಿಜವಾದ ಆಧ್ಯಾತ್ಮಿಕ ಸಮಷ್ಟಿ ಭಾವನೆಗೆ ಬರುವೆವೋ ಆಗ ಮಾತ್ರವೇ ಧರ್ಮ ಸತ್ಯವಾಗುವುದು, ಜೀವಂತವಾಗುವುದು. ಅದು ನಮ್ಮ ಸ್ವಭಾವದಲ್ಲಿ ವ್ಯಕ್ತವಾಗುವುದು; ನಮ್ಮ ಪ್ರತಿಯೊಂದು ಕಾರ್ಯ ಕಲಾಪದಲ್ಲಿಯೂ ಇರುವುದು; ನಮ್ಮ ಸಮಾಜದ ಅಂಗಾಂಗಗಳನ್ನು ಪ್ರವೇಶಿಸುವುದು ಮತ್ತು ಹಿಂದೆಂದೂ ಇರದಿದ್ದ ಮಹಾಕಲ್ಯಾಣ ಪ್ರದವಾದ ಶಕ್ತಿಯಾಗುವುದು.

ಮಹಾನ್ ಋಷಿಯೊಬ್ಬನ ಈ ಭವಿಷ್ಯವಾಣಿಯ ನುಡಿಗಳು ಸತ್ಯವಾಗದಿರುವುದಿಲ್ಲ. ಅವು ಮುಂದಿನ ದಶಕಗಳಲ್ಲಿ ಅಲ್ಲದಿದ್ದರೂ, ಮುಂದಿನ ಶತಮಾನಗಳಲ್ಲಿಯಾದರೂ ವಾಸ್ತವವಾಗುವವು. ಏನೇ ಇರಲಿ, ಮಾನವ ಕುಟುಂಬದ ಭವ್ಯ ಆಧ್ಯಾತ್ಮಿಕ ಪರಿವರ್ತನೆಯಲ್ಲಿ ಶ್ರೀರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ವಿಶ್ವವ್ಯಾಪಿ ಸಂದೇಶವು ಭವಿಷ್ಯದಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ ಎನ್ನುವದಂತೂ ವಾಸ್ತವ.
(ಮುಗಿಯಿತು)

(ಮೂಲ: ವಿವೇಕಪ್ರಭ ಜೂನ್ 2008)

ಆಕರಗಳು:

೧ ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ, ೭:೩೧೪

೨. ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ, ೨:೨೨೯.

೩. ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ, ೨:೧೨-೧೩.