ಶ್ರೀ ಅಣ್ಣಾ ಹಜಾರೇ

ಅಣ್ಣಾ ಹಜಾರೇ ೧೯೪೦ರಲ್ಲಿ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದರು. ಬಡತನದಿಂದಾಗಿ ಅವರು ಶಿಕ್ಷಣ ಮುಂದುವರಿಸದೆ ಹೂವು ಮಾರಾಟದಲ್ಲಿ ತೊಡಗಿದರು. ಬಡವರ ಮೇಲೆ ಆಗುತ್ತಿದ್ದ ದೌರ್ಜನ್ಯ ಶೋಷಣೆಗಳು ಅವರಿಗೆ ಸಹಿಸದಾದುವು. ಅವುಗಳ ವಿರುದ್ಧವಾಗಿ ಚಿಕ್ಕಂದಿನಿಂದಲೂ ಅನೇಕ ಹೋರಾಟಗಳನ್ನು ನಡೆಸಿದರು. ಇದೇ ಸಂದರ್ಭದಲ್ಲಿ ಅವರು ಒಮ್ಮೆ ಜೈಲಿಗೂ ಹೋಗಬೇಕಾಯಿತು. ಅನೇಕ ಕಷ್ಟನಷ್ಟಗಳನ್ನು ಅನುಭವಿಸಿ ಜೀವನದಲ್ಲಿ ಒಂದು ರೀತಿಯ ಜಿಗುಪ್ಸೆ ಉಂಟಾಗಿತ್ತು.

ಭಾರತ-ಚೀನಾ ಯುದ್ಧದ ಸಮಯದಲ್ಲಿ ಅವರು ಸೈನ್ಯವನ್ನು ಸೇರಿದರು. ಹಿಮಾಲಯದ ಪವಿತ್ರ ವಾತಾವರಣದಲ್ಲಿ ಜೀವನದ ಅರ್ಥವನ್ನು ಕುರಿತು ಗಹನವಾಗಿ ಚಿಂತಿಸತೊಡಗಿದರು. ಜೀವನಕ್ಕೆ ಯಾವ ಅರ್ಥವೂ ಇಲ್ಲ ಎನಿಸಿತು ಅವರಿಗೆ. ಆಗ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡಿದರು.

ಈ ಸಂದರ್ಭದಲ್ಲಿ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಅಡ್ಡಾಡುತ್ತಿದ್ದಾಗ ಅಲ್ಲಿದ್ದ ಪುಸ್ತಕದಂಗಡಿಯಲ್ಲಿ ಸ್ವಾಮಿ ವಿವೇಕಾನಂದರ ಪುಸ್ತಕವೊಂದರ ಮುಖಪುಟ ಅವರ ಗಮನ ಸೆಳೆಯಿತು. ಸ್ವಾಮೀಜಿಯವರ ಶಾಂತ ಮುಖಮುದ್ರೆ ಅವರನ್ನು ಆಕರ್ಷಿಸಿತು ಮತ್ತು ಆ ಪುಸ್ತಕವನ್ನು ಕೊಂಡುಕೊಂಡರು. ಸ್ವಾಮೀಜಿಯವರ ಪುಸ್ತಕವನ್ನು ಓದುತ್ತಿರುವಾಗ ಅವರಿಗೆ ಜೀವನದ ಅರ್ಥ ಗೋಚರಿಸಿತು. ಇತರರ ಸೇವೆ ಮಾಡುವುದೇ ಜೀವನದ ನಿಜವಾದ ಅರ್ಥ ಎಂದು ಅವರು ಮನಗಂಡರು.

ಅವರು ಈಗ ಆತ್ಮಹತ್ಯೆಯ ವಿಚಾರ ಕೈಬಿಟ್ಟಿರು. ಬಂಗ್ಲಾದೇಶ ಯುದ್ಧದ ಸಮಯದಲ್ಲಿ ಅನೇಕ ಶೇಲ್ ಧಾಳಿಗಳ ನಡುವೆಯೂ ಅವರ ಪ್ರಾಣಹಾನಿಯಾಗಲಿಲ್ಲ. ಅವರು ಸ್ವಾಮೀಜಿಯವರ ಇನ್ನೂ ಅನೇಕ ಗ್ರಂಥಗಳನ್ನು ಓದಿದರು. ಈಗ ಅವರಿಗೆ ಜೀವನದ ಗುರಿ ಸ್ಪಷ್ಟವಾಯಿತು. ಸಮಾಜಸೇವೆಗಾಗಿ ತಮ್ಮನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದರು.

ಸೈನ್ಯದಿಂದ ಹೊರಬಂದಮೇಲೆ ಅವರು ತಮ್ಮ ಹಳ್ಳಿಯಾದ ರೆಲೆಗಾಂ ಸಿದ್ದಿಗೆ ಹಿಂದಿರುಗಿ ಗ್ರಾಮೋದ್ಧಾರ ಕಾರ್ಯದಲ್ಲಿ ತೊಡಗಿದರು. ಜನರನ್ನು ಉತ್ತಮ ಜೀವನಕ್ಕೆ ಪ್ರೇರೇಪಿಸಿ ಆ ಗ್ರಾಮವನ್ನು ಒಂದು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಿದರು. ಜನರು ಜೂಜು, ಕುಡಿತ ಮುಂತಾದುವುಗಳಿಂದ ದೂರವಾದರು; ಪರಿಸರಪ್ರಜ್ಞೆ ಅವರಲ್ಲಿ ಜಾಗೃತವಾಯಿತು; ಹಳ್ಳಿಯಲ್ಲಿ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆಯಾಯಿತು; ಮಕ್ಕಳಿಗೆ ಸರಿಯಾದ ಶಿಕ್ಷಣ ದೊರೆಯತೊಡಗಿತು. ಆ ಗ್ರಾಮದಲ್ಲಿ ಒಂದು ಅಭೂತಪೂರ್ವ ಬದಲಾವಣೆ ಉಂಟಾಯಿತು.

ಉನ್ನತ ಶಿಕ್ಷಣದಿಂದ ವಂಚಿತರಾದ ಈ ಸಾಮಾನ್ಯ ಗ್ರಾಮವಾಸಿಯೊಬ್ಬರು ಸಾಧಿಸಿದ ಈ ಸಾಮಾಜಿಕ ಬದಲಾವಣೆ ಎಲ್ಲರ ಗಮನವನ್ನು ಸೆಳೆಯಿತು. ಅವರಿಗೆ ಅನೇಕ ರಾಷ್ಟ್ರೀಯ, ಅಂತರಾಷ್ಟ್ರೀಯ ಪುರಸ್ಕಾರಗಳು ದೊರಕಿದವು. ಸುತ್ತಲಿನ ಬೇರೆ ಬೇರೆ ಹಳ್ಳಿಗಳನ್ನೂ ಸರ್ಕಾರ ಅವರ ವಶಕ್ಕೆ ನೀಡಿತು.

ಸ್ವಾಮಿ ವಿವೇಕಾನಂದರ ಸ್ಫೂರ್ತಿ ಜೀವನದಲ್ಲಿ ನಿರಾಸೆಹೊಂದಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಒಬ್ಬ ಮಹಾ ಸಮಾಜಸೇವಾಧುರೀಣನನ್ನಾಗಿ ಪರಿವರ್ತಿಸಿತು.

ಶ್ರೀ ಆನಂದ ಶಂಕರ ಮಾಧವನ್

ಇವರು ದಕ್ಷಿಣ ಭಾರತದ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದರು-ಸಂಪತ್ತಿನಲ್ಲಿ ಮಾತ್ರವಲ್ಲ ಬುದ್ಧಿಯಲ್ಲಿಯೂ-ಅನಾಥ ಶಿಶುವಾಗಿ ಬೆಳೆದರು. ಹುಡುಗನಾಗಿದ್ದಾಗ ಯಾರೊಡನೆ ಮಾತನಾಡುವುದಕ್ಕೂ ಅವರಿಗೆ ಅಂಜಿಕೆ. ಶಾಲೆಯಲ್ಲಿ ಉಪಾಧ್ಯಾಯರಿಗೂ ಅವರನ್ನು ಕಂಡರೆ ತಿರಸ್ಕಾರ. ಅವರ ಕಷ್ಟವನ್ನು ಕೇಳುವವರು ಯಾರೂ ಇರಲಿಲ್ಲ. ಹಗಲು ರಾತ್ರಿ ಅಳುತ್ತಿದ್ದರಂತೆ. ಅನೇಕ ದೇವರಿಗೆ ಪ್ರಾರ್ಥಿಸಿಯಾಯಿತು. ಏನೂ ಪ್ರಯೋಜನವಾಗಲಿಲ್ಲ. ಭಗವಂತನೇ ತಿರಸ್ಕರಿಸಿದಮೇಲೆ ತಾನು ಬದುಕಿದ್ದು ಫಲವೇನು ಎಂದು ಭಾವಿಸಿದರು.

ಅವರು ಪ್ರಾಣತ್ಯಾಗ ಮಾಡುವುದರಲ್ಲಿದ್ದರು. ಆಗ ಒಂದು ವಿಶೇಷ ಘಟನೆ ನಡೆಯಿತು. ಆಕಸ್ಮಿಕವಾಗಿ ಅವರಿಗೆ ಒಬ್ಬರು ಸಾಧುಗಳ ಭೇಟಿಯಾಯಿತು. ಸಾಧುಗಳು ಒಂದು ಚಿಕ್ಕ ಪುಸ್ತಕವನ್ನು ಅವರಿಗೆ ಕೊಟ್ಟು, ‘ಇದನ್ನು ನೀನು ಓದು, ಮಗು. ನಿನ್ನ ಇಡೀ ಜೀವನವೇ ಬದಲಾಗಿಬಿಡುತ್ತದೆ’ ಎಂದರು. ಆ ಪುಸ್ತಕ ಸ್ವಾಮಿ ವಿವೇಕಾನಂದರದು ಮತ್ತು ಆ ಸಾಧು ರಾಮಕೃಷ್ಣ ಮಿಷನ್ನಿನ ಒಬ್ಬ ಪರಿವ್ರಾಜಕರು.

ಆನಂದ ಶಂಕರ್ ಆ ಪುಸ್ತಕವನ್ನು ಓದತೊಡಗಿದರು. ಏನು ಅದ್ಭುತ! ಕೂಡಲೇ ಅವರ ಆಂತರ್ಯದಲ್ಲಿ ಪರಿವರ್ತನೆಯಾಗ ತೊಡಗಿತು. ಒಂದು ಉಜ್ಜ್ವಲ ಜ್ಯೋತಿ ಅವರ ಹೃದಯವನ್ನು ಬೆಳಗಿದಂತಾಯಿತು. ಅವರು ಸಿಡಿದು ಮೇಲೆದ್ದರು. ಜೋರಾಗಿ ತಮಗೆ ತಾವೇ ಹೇಳಿಕೊಂಡರು : ‘ನನ್ನನ್ನು ಪರಿಹಾಸ ಮಾಡುವವರನ್ನೆಲ್ಲ ಎದುರಿಸುತ್ತೇನೆ. ನನಗೆ ಯಾರ ಸಹಾಯದ ಆವಶ್ಯಕತೆಯೂ ಇಲ್ಲ. ನನ್ನ ಭವಿಷ್ಯವನ್ನು ನಾನೇ ರೂಪಿಸಿಕೊಳ್ಳಬೇಕು. ನನ್ನ ಶ್ರೇಷ್ಠತೆಯನ್ನು ಮೆರೆಯುತ್ತೇನೆ, ಚಾರಿತ್ರ್ಯದಲ್ಲಿ, ನಡೆ ನುಡಿಗಳಲ್ಲಿ ಸರ್ವ ಶ್ರೇಷ್ಠನೆನೆಸಿಕೊಳ್ಳುತ್ತೇನೆ. ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗುತ್ತೇನೆ. ಎಲ್ಲ ಹುಡುಗರು ಮತ್ತು ಉಪಾಧ್ಯಾಯರು ಆಶ್ಚರ್ಯದಿಂದ ನನ್ನ ಕಡೆ ತಿರುಗಿ ನೋಡುವಂತಾಗಬೇಕು.’

ಮುಂದೆ ಅವರು ಉತ್ತರ ಭಾರತಕ್ಕೆ ಹೋಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದರು. ಜೈಲುವಾಸವೂ ಆಯಿತು. ಜೈಲಿನಿಂದ ಹೊರ ಬಂದಮೇಲೆ ಸ್ವಾಮಿ ವಿವೇಕಾನಂದರ ಸಂದೇಶಾನು ಸಾರವಾಗಿ ಯುವ ಜನರ ಜೀವನವನ್ನು ರೂಪಿಸುವ ಉದ್ದೇಶವನ್ನು ಇಟ್ಟುಕೊಂಡು ಭಾಗಲ್‌ಪುರ ಜಿಲ್ಲೆಯ ಮಂದಾರ ಎಂಬ ಊರಿನಲ್ಲಿ ಮಂದಾರ ವಿದ್ಯಾಪೀಠವೆಂಬ ಸಂಸ್ಥೆಯನ್ನು ಸ್ಥಾಪಿಸಿದರು.

(ಮೂಲ: ವಿವೇಕಪ್ರಭ ಜನವರಿ 2001 ಯುವಶಕ್ತಿ ವಿಶೇಷಾಂಕ)