ಆಧುನಿಕ ಭಾರತದ ರಾಷ್ಟ್ರೀಯ ಬದುಕಿನಲ್ಲಿ ಸಕ್ರಿಯವಾಗಿ ಭಾಗವಹಿಸುವ ಪ್ರತಿಯೊಬ್ಬರೂ ಅವಶ್ಯವಾಗಿ ರೂಢಿಸಿಕೊಳ್ಳಬೇಕಾದ ಮನೋಭಾವಕ್ಕೆ ಸ್ಫೂರ್ತಿಯನ್ನು ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಪಡೆಯಬೇಕಾಗಿದೆ ಎಂಬುದನ್ನು ನಿರೂಪಿಸಿರುವ ಯು. ಎನ್. ಸಂಗನಾಳಮಠ ಅವರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿದ್ದಾರೆ.

“ಏಳಿ! ಎದ್ದೇಳಿ! ನಿಮ್ಮ ಭವಿಷ್ಯವನ್ನು ರೂಪಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳಿ. ನಿಮ್ಮ ಉತ್ತರೋತ್ತರ ಶ್ರೇಯಸ್ಸಿಗೆ ಬೇಕಾದ ಎಲ್ಲ ಶಕ್ತಿ ಸಾಮರ್ಥ್ಯಗಳೂ ನಿಮ್ಮೊಳಗೇ ಇವೆ. ಮನಸ್ಸು ಮಾಡಿ, ಏಳಿ ಎದ್ದೇಳಿ, ಭವ್ಯ ಭವಿಷ್ಯತ್ತಿನ ನಿರ್ಮಾಣಕ್ಕೆ ಇಂದೇ ಅಡಿ ಇಡಿ” ಎಂದು ತಮ್ಮ ಶಕ್ತಿಯುತ ವ್ಯಕ್ತಿತ್ವ, ಪ್ರಭಾವಪೂರ್ಣ ವಾಗ್ಮಿತ್ವ ಮತ್ತು ಪ್ರಚೋದಕ ಬರಹಗಳ ಮೂಲಕ ನಮ್ಮ ರಾಷ್ಟ್ರಚೇತನವನ್ನು ಜಾಗೃತಗೊಳಿಸಿ, – ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಕುದುರಿಸಿ ಸ್ವತಂತ್ರ ಭಾರತ ನಿರ್ಮಾಣಕ್ಕೆ ಬುನಾದಿಯನ್ನು ಹಾಕಿದ ಮಹಾವ್ಯಕ್ತಿ ಸ್ವಾಮಿ ವಿವೇಕಾನಂದರು. ತಮ್ಮ ವಿಚಾರಗಳಿಗೆ ಅನುಸಾರವಾಗಿ ಭಾರತೀಯ ಸಮಾಜವನ್ನು ಬದಲಾವಣೆ ಮಾಡಲು ಬಯಸಿದರು. ವೈಜ್ಞಾನಿಕ ಪ್ರಜಾಪ್ರಭುತ್ವದ ಕಲ್ಪನೆಯಲ್ಲಿ ಜಾತಿಪದ್ಧತಿಯಿಂದ ಮುಕ್ತವಾದ ನವಭಾರತದ ನಿರ್ಮಾಣದ ಕನಸನ್ನು ಕಂಡಿದ್ದರು.

ಸ್ವಾಮಿ ವಿವೇಕಾನಂದರು ಓರ್ವ ಅದ್ವಿತೀಯ ದೇಶಭಕ್ತ, – ಸುಧಾರಕ ಹಾಗೂ ಸಂಘಟಕರು ಮಾತ್ರವಲ್ಲ ರಾಷ್ಟ್ರೀಯ ಪುನರುತ್ಥಾನದ ಶಕ್ತಿಗಳನ್ನು ಹೊಡೆದೆಬ್ಬಿಸಿ ಆಂಗ್ಲ” ಆಡಳಿತದ – ಹೊಡೆತಕ್ಕೆ ತತ್ತರಿಸಿ ದಾಸ್ಯದಲ್ಲಿ ಮುಳುಗಿದ್ದ ನಮ್ಮ ನಾಡಿನ ರಾಷ್ಟ್ರೀಯ ಪುನರುತ್ಥಾನಕ್ಕೆ ಹಾದಿ ಸುಗಮಗೊಳಿಸಿದ ಅಗ್ರಗಣ್ಯರೂ ಅಹುದು. ಭಾರತದಲ್ಲಿಯ ಚದುರಿಹೋದ ಆಧ್ಯಾತ್ಮಿಕ ಶಕ್ತಿಗಳನ್ನು ಒಗ್ಗೂಡಿಸಿದಾಗಲೇ ನಮ್ಮ ರಾಷ್ಟ್ರೀಯ ಏಕತೆಯು ಸಾಧ್ಯವಾದೀತು – ಎನ್ನುತ್ತಿದ್ದರು ಸ್ವಾಮೀಜಿ, “ಸಮಾನ ಅಧ್ಯಾತ್ಮಿಕ ಶ್ರುತಿಗೆ ಮಿಡಿಯುವ ಹೃದಯಗಳ ಸಮ್ಮಿಲನವೇ ಭಾರತದಲ್ಲಿನ ರಾಷ್ಟ್ರ ಎನಿಸಿತು” ಎಂದು ಅವರು ದೃಢವಾಗಿ ನಂಬಿದ್ದರು. ಅವರ ಈ ಸಂದೇಶವನ್ನು, ಅದರಲ್ಲೂ ರಾಷ್ಟ್ರದ ಒಗ್ಗಟ್ಟು ಹಾಗೂ ಸರ್ವಶಕ್ತಿಗಳ ಸಂಚಯವು ತುರ್ತಾಗಿ ಆಗಬೇಕಾಗಿರುವ ಇಂದಿನ ಸಂದರ್ಭದಲ್ಲಿ ನಾವು ಆಳವಾಗಿ ಮನಗಾಣಬೇಕಾಗಿದೆ.

ಸ್ವಾಮಿ ವಿವೇಕಾನಂದರು ರಾಜಕಾರಣಿಯಲ್ಲ, ರಾಜಕೀಯ ಚಿಂತಕರು ಎಂದು ಸಾಮಾನ್ಯವಾಗಿ ಯಾರನ್ನು ತಿಳಿಯುತ್ತಾರೊ ಅಂತಹ ರಾಜಕೀಯ ಚಿಂತಕರೂ ಅಲ್ಲ, ಅವರು ಅಧ್ಯಾತ್ಮವಾದಿ ಆದರೂ ರಾಷ್ಟ್ರೀಯತಾವಾದಕ್ಕೂ, ರಾಷ್ಟ್ರೀಯ ಪ್ರಜ್ಞೆಯ ಬೆಳವಣಿಗೆಗೂ, ಸಾಮಾಜಿಕ ಪ್ರಜ್ಞೆಯ ಜಾಗೃತಿಗೂ ಸ್ಫೂರ್ತಿಯನ್ನೂ ಚಾಲನೆಯನ್ನೂ ಕೊಟ್ಟವರಲ್ಲಿ ನಿವೇಕಾನಂದರಿಗೆ ಮೊದಲ ಸ್ಥಾನವಿದೆ. ಅವರ ಸಮಕಾಲೀನ ರಾಷ್ಟ್ರಚಿಂತಕರಲ್ಲಿ ರಾಜಕೀಯದಿಂದ ನಿರ್ಲಿಪ್ತರಾಗಿದ್ದವರೆಂದರೆ ಸ್ವಾಮಿ ವಿವೇಕಾನಂದರು ಒಬ್ಬರೇ.

ರಾಜಕೀಯ ಸ್ವಾತಂತ್ರ್ಯ

ಪಾಶ್ಚಾತ್ಯ ದೇಶಗಳಲ್ಲಿ ದಿಗ್ವಿಜಯವನ್ನು ಮಾಡಿ, ಭಾರತಕ್ಕೆ ಮರಳಿ ಬಂದಾಗ ಮದ್ರಾಸಿನಲ್ಲಿ ಕೆಲವು ಕಾಲೇಜು ವಿದ್ಯಾರ್ಥಿಗಳು ಅವರನ್ನು ಕಾಣಲು ಬಂದರು. ಆಗ ಗುಲಾಮಗಿರಿಯ ದಿನಗಳಾದ್ದರಿಂದ ಸ್ವರಾಜ್ಯಪ್ರಾಪ್ತಿಯ ಹೋರಾಟದ ಬಗ್ಗೆ ಮಾತು ನಡೆದಿತ್ತು. ಆಗ ಓರ್ವ ವಿದ್ಯಾರ್ಥಿ ನೇರವಾಗಿ ಈ ರೀತಿ ಸ್ವಾಮೀಜಿಯವರನ್ನು ಪ್ರಶ್ನಿಸಿದ : “ಸ್ವಾಮೀಜಿ ನೀವಂತೂ ಕಷಾಯ ವಸ್ತ್ರಧಾರಿಗಳು. ಪ್ರಾಯಶಃ ಯಾವುದೇ ವಿಧದ ಹೋರಾಟದಲ್ಲಿ ನೇರವಾಗಿ ಪಾಲುಗೊಳ್ಳಲು ನಿಮಗೆ ಸಾಧ್ಯವಾಗಲಾರದು. ಆದರೂ ಸ್ವರಾಜ್ಯದ ಹೋರಾಟವನ್ನು ಬೆಂಬಲಿಸಿ – ನೀವೊಂದು ಹೇಳಿಕೆಯನ್ನೇಕೆ ನೀಡಬಾರದು?” ಈ ಪ್ರಶ್ನೆ ಕೇಳಿ ಸ್ವಾಮೀಜಿ ಈ ರೀತಿ ಗುಡುಗಿದರು: “ಸ್ಟರಾಜ್ಯ… ನಿಮಗೆ ಯೋಗ್ಯತೆ ಇದ್ದದ್ದೇ ಆದರೆ ಸ್ವರಾಜ್ಯವನ್ನು ನಾಳೆಯೇ ನಿಮಗೆ ತಂದುಕೊಡಬಲ್ಲೆ. ಆದರೆ ಅದನ್ನು ಜೀರ್ಣಿಸಬಲ್ಲಂತಹ ಜನರೆಲ್ಲಿದ್ದಾರೆ?… ಸ್ವರಾಜ್ಯ ಎಂದರೆ ಹೊಣೆಗಾರಿಕೆ ಎಂಬುದು ನಿಮಗರಿವಿದೆಯೇ?” ಸ್ವರಾಜ್ಯವನ್ನು ಗಳಿಸಲು ಹಾಗೂ ಗಳಿಸಿದುದನ್ನು ಅನುಭವಿಸಲು ಸಹ ಪೂರ್ವಭಾವಿಯಾಗಿ ಅನಿವಾರ್ಯವಾಗಿ ಇರಲೇಬೇಕಾದ ಯೋಗ್ಯತೆ ನಮ್ಮ ಸಮಾಜದಲ್ಲಿ ಇಲ್ಲವಲ್ಲ ಎನ್ನುವುದೇ ಸ್ವಾಮೀಜಿಯವರಿಗಿದ್ದ ಚಿಂತೆ.

“ಒಬ್ಬ ಸಾಮಾನ್ಯ ವ್ಯಕ್ತಿಗೆ ರಾಜಕೀಯ ದಾಸ್ಯವು ಅಸಾಧಾರಣ ಎಂದು ತೋರದಿರಬಹುದು-ಅವನ ನಿತ್ಯಜೀವನದ ಕಿರುದಿಗಂತದ ಪರಿಮಿತಿಯಲ್ಲಿ ಅವನ ನಿತ್ಯದ ಕಾರ್ಯಕ್ರಮದ ಚೌಕಟ್ಟಿಗೇನೂ ಭಂಗ ಬಾರದಿದ್ದರೆ. ಆದರೆ ಅದೇ ವ್ಯಕ್ತಿಗೆ ರಾಜಕೀಯ ಪ್ರಜ್ಞೆ ಉಂಟಾಗಿ ಅವನ ಸ್ವಾತಂತ್ರ್ಯ ಮತ್ತು ಆತ್ಮಗೌರವಗಳ ಮೌಲ್ಯದ ಪರಿಜ್ಞಾನಕ್ಕೆ ಆ ದಾಸ್ಯದಿಂದ ಆಘಾತವೊದಗಿದಾಗ ಅವನಿಗದು ವಿಷಪ್ರಾಯವಾಗುತ್ತದೆ. ಈ ಮೌಲ್ಯಗಳ ಪ್ರಜ್ಞೆ ಉದಯವಾದೊಡನೆಯೇ ಅವನಿಗೆ ರಾಜಕೀಯ ವ್ಯಕ್ತಿತ್ವ ದೊರಕುತ್ತದೆ. ಕೇವಲ ಲೌಕಿಕವು ಭೌತಿಕವೂ ಆದ ಭದ್ರತೆಗಿಂತ ಸ್ವಾತಂತ್ರ್ಯಕ್ಕೆ ಹೆಚ್ಚು ಬೆಲೆಕಟ್ಟುವಂತಹ ಒಬ್ಬ ವ್ಯಕ್ತಿ ಅವನಾಗುತ್ತಾನೆ” ಎಂದು ಸ್ವಾಮಿ ರಂಗನಾಥಾನಂದರು ಹೇಳುತ್ತಾರೆ. ಅಂದರೆ ರಾಜಕೀಯ ಸ್ವಾತಂತ್ರ್ಯವನ್ನು ಅನುಭವಿಸುವ ಮಟ್ಟಕ್ಕೆ ವ್ಯಕ್ತಿಯು ಬೆಳೆಯಬೇಕು. ಆಗ ಸ್ವಾತಂತ್ರ್ಯಕ್ಕೆ ಬೆಲೆ ಬರುತ್ತದೆ. ಇಲ್ಲದಿದ್ದರೆ ಸ್ವಾತಂತ್ರ್ಯವು ಅರಾಜಕತೆಗೆ ಕಾರಣವಾಗುತ್ತದೆ.

ರಾಷ್ಟ್ರೀಯತೆ

“ಭಾರತದ ದುಃಸ್ಥಿತಿಗೆ ಕಾರಣ ಬಡಜನರ ಪರಿಸ್ಥಿತಿಯೇ, ವಿದೇಶಿ ಆಕ್ರಮಣಕಾರರು, ಧರ್ಮದ ಗುತ್ತಿಗೆ ಹಿಡಿದವರು ಶತಮಾನಗಳ ಕಾಲ ಈ ಜನಸಮೂಹವನ್ನು ತುಳಿಯುತ್ತ ಹೋದರು. ಕಟ್ಟಕಡೆಗೆ ಈ ಭಾರತದ ಬಡಜನರು ತಾವು ಮನುಷ್ಯರೆಂಬುದನ್ನೇ ಮರೆತರು” ಇವು ಸ್ವಾಮಿ ವಿವೇಕಾನಂದರ ನುಡಿ.

ಸ್ವಾಮಿ ವಿವೇಕಾನಂದರನ್ನು ಬಿಟ್ಟು ಭಾರತದ ಬಡಜನರ ಪರವಾಗಿ ಅಷ್ಟೊಂದು ತೀವ್ರ ಮರುಕದಿಂದ ತಡೆಯಲಾರದ ನೋವಿನಿಂದ ಮಾತಾಡಿ, ಅವರ ಪರವಾಗಿ ವಾದಿಸಿದ ಮತ್ತೊಬ್ಬ ಆಧ್ಯಾತ್ಮಿಕ ವೀರರನ್ನು ದೇಶ ಕಂಡರಿಯದು, ಇಡೀ ರಾಷ್ಟ್ರ ಒಂದು ಮತ್ತು ಪ್ರತಿಯೊಬ್ಬ ಭಾರತೀಯನೂ ಅಭ್ಯುದಯವನ್ನು ಕಾಣುವಂತಾಗಬೇಕೆಂಬ ಹಂಬಲವೇ ರಾಷ್ಟ್ರೀಯ ಪ್ರಜ್ಞೆಯ ಮೂಲ, ಈ ಭಾವದ ಬೀಜಾರೋಪಣೆಯನ್ನು ತಮ್ಮ ಬದುಕು ಹಾಗೂ ಕಾರ್ಯದ ಮೂಲಕ ಮಾಡಿದ ಸ್ವಾಮೀಜಿ ರಾಷ್ಟ್ರೀಯತೆಯ ಜ್ವಲಂತ ಪ್ರತೀಕವಾದರು. “ತುಳಿತಕ್ಕೆ ಒಳಗಾದ ಲಕ್ಷಗಟ್ಟಲೆ ಬಡಜನರ ಹೃದಯದ ರಕ್ತದಿಂದ ಅವರ ಶ್ರಮದ ಫಲದಿಂದ ವಿದ್ಯಾಭ್ಯಾಸ ಪಡೆದು ಸುಖಸೌಕರ್ಯಗಳಲ್ಲಿ ತೇಲಾಡುವವರು ಈ ಜನರ ಒಳಿತನ್ನು ಕುರಿತು ಸ್ವಲ್ಪವಾದರೂ ಯೋಚಿಸದಿದ್ದರೆ.  “ಅಂಥವರನ್ನು ದೇಶದ್ರೋಹಿ ಅಥವಾ ವಂಚಕರನ್ನುತ್ತೇನೆ’ ಎಂದರು ಸ್ವಾಮೀಜಿಯವರು”

ಮತ್ತೂಬ್ಬನಿಗೆ ಯಾವುದು ಒಳ್ಳೆಯದೊ ಅದನ್ನು – ನಾನು ಮಾಡುವುದರಿಂದ ಮಾತ್ರ ನನ್ನ ಒಳ್ಳೆಯದನ್ನು ಸಾಧಿಸಬಹುದು. ಬೇರೆ ಮಾರ್ಗವೇ ಇಲ್ಲ.

– ಸ್ವಾಮಿ ವಿವೇಕಾನಂದ

 

ಸ್ವಾಮೀಜಿಯವರ ಹೃದಯಾಂತರಾಳದಿಂದ ಹೊರಟ ಆ ದಿವ್ಯಾನುಕಂಪದ ಸ್ಪಂದನ ಅಜ್ಞಾತವಾಗಿ ಅಸಂಖ್ಯ ಸಹೃದಯರ, ಮುಖಂಡರ ಹೃದಯದಲ್ಲಿ ಪ್ರತಿಧ್ವನಿಸಿ ಈ ನೂರು ವರ್ಷಗಳಲ್ಲಿ ಸರಕಾರ ಮತ್ತು ಖಾಸಗಿ ಸಂಸ್ಥೆಗಳ ಮೂಲಕ ದೀನದಲಿತರ ಅಭ್ಯುದಯಕ್ಕಾಗಿ ಅಸಂಖ್ಯ ಕಾರ್ಯಕ್ರಮಗಳನ್ನು ಕೈಗೊಂಡಿರುವುದನ್ನು ಕಾಣುತ್ತೇವೆ. ಮಾತ್ರವಲ್ಲ, ದೀನದಲಿತರು ಆತ್ಮವಿಶ್ವಾಸ ಹಾಗೂ ಗೆಲುವಿನಿಂದ ಮೆಲ್ಲನೆ ಉನ್ನತಿಯ ಪಥದಲ್ಲಿ ಮುನ್ನಡೆಯುತ್ತಿದ್ದಾರೆ ಎಂಬುದೂ ಈಗ ಗಮನಿಸಬೇಕಾದ ಸಂಗತಿ.

ಸ್ವಾಮಿ ವಿವೇಕಾನಂದರು ಭಾರತದಲ್ಲಿ ಯಾವ ಪಕ್ಷವು ಸಾಧಿಸದೇ ಇದ್ದಷ್ಟು ರಾಷ್ಟ್ರಭಕ್ತಿಯ ಜಾಗೃತಿಯನ್ನು ಸಾಧಿಸಿದ್ದಾರೆ. ಅವರ ಬದುಕು, ಬರಹ ಮತ್ತು ಭಾಷಣಗಳು ಅಂದಿನಿಂದ ಇಂದಿನವರೆಗೂ ಯುವಜನರ ಮೆಲೆ ವರ್ಚಸ್ಸನ್ನು ಬೀರುತ್ತಲೇ ಬಂದಿವೆ. ರಾಷ್ಟ್ರೀಯತಾವಾದವು ರಾಜಕೀಯ ಶಕ್ತಿ ಮಾತ್ರವಾಗಿರದೆ ಆಧ್ಯಾತ್ಮಿಕ ಶಕ್ತಿಯೂ ಆಗಿದೆ ಎಂಬುದನ್ನು ತೋರಿಸಿದವರಲ್ಲಿ ವಿವೇಕಾನಂದರು ಪ್ರಮುಖರು. ಅವರು ಸಾಂಸ್ಕೃತಿಕ ಆಂದೋಲನದ – ಚಳುವಳಿಯ ಪ್ರವರ್ತಕರು. ಜನತೆಯ ಸಂಸ್ಕೃತಿ ಅವರ ರಾಜಕೀಯವನ್ನು ರೂಪಿಸುತ್ತವೆ ಎಂದು ಅವರು ನಂಬಿದ್ದರು. ಸಾಂಸ್ಕೃತಿಕ ಮತ್ತು ರಾಜಕೀಯ ಪುನರುಜ್ಜೀವನಗಳ ಸಮ್ಮಿಳನದಿಂದ ಸಂಪೂರ್ಣ ಪುನರುಜ್ಜೀವನ ಸಾಧ್ಯ.

ಪ್ರಜಾತಂತ್ರ

“ದೇಶವಿದೇಶಗಳಲ್ಲಿನ ನನ್ನ ಸಂಚಾರದ ನಂತರ ಸಂಘಟನೆ ಇಲ್ಲದೆ ಯಾವುದೇ ಹಿರಿದಾದ ಶಾಶ್ವತ ಕಾರ್ಯವನ್ನೂ ಮಾಡಲಾಗುವುದಿಲ್ಲ ಎಂಬ ನಿಷ್ಕರ್ಷೆಗೆ ನಾನು ಬಂದಿದ್ದೇನೆ. ಆದರೆ ಭಾರತದಂಥ ದೇಶದಲ್ಲಿ ಇಂದಿನ ನಮ್ಮ ಪರಿಸ್ಥಿತಿಯಲ್ಲಿ ಲೋಕ ತಂತ್ರದ ಆಧಾರದ ಮೇಲೆ ಸಂಘಟನೆಯನ್ನು ಕಟ್ಟುವುದು ಯೋಗ್ಯ ವಾಗಲಾರದು, ಪ್ರಜಾತಂತ್ರ ಎಂದೊಡನೆ ಪ್ರತಿಯೊಬ್ಬ ಸದಸ್ಯನಿಗೂ ಸಮಾನ ಹಕ್ಕು ಬರುತ್ತದೆ ಮತ್ತು ಸಮೂಹದ ಬಹುಮತದಂತೆ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಪಶ್ಚಿಮದಲ್ಲಾದರೆ “ಇದು ನಡೆದೀತು. ಅಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ನಮ್ಮಲ್ಲೂ ಸಹ ವಿದ್ಯಾ ಪ್ರಸಾರ ನಡೆದು ಸಮಾಜದ ಒಟ್ಟು ಹಿತಕ್ಕಾಗಿ ನಮ್ಮ ವ್ಯಕ್ತಿಗತ ಹಿತಾಸಕ್ತಿಗಳನ್ನು ಬಿಟ್ಟು ಮೇಲೇಳುವ ಸ್ವಾರ್ಥತ್ಯಾಗದ ಪಾಠವನ್ನು ನಾವು ಕಲಿತನಂತರವೇ ಪ್ರಜಾತಂತ್ರದ ತಳಹದಿಯ ಮೇಲೆ ಕೆಲಸ ಮಾಡಲು ಬಂದೀತು… ಮುಂದೆ ಕಾಲಕ್ರಮದಲ್ಲಿ ಸರ್ವಸದಸ್ಯರ ಮತ ಹಾಗೂ ಸಮ್ಮತಿಯಂತೆ ಕಾರ್ಯ ನಡೆಸಲು ಅಡ್ಡಿ ಇಲ್ಲ.” ಸ್ವಾಮಿ ವಿವೇಕಾನಂದರ ಈ ವಿಚಾರಗಳನ್ನು ಗಮನಿಸಿದಾಗ  ವಿದ್ಯಾವಂತ ಸುಶಿಕ್ಷಿತ ಮತದಾರರಿಂದ ಮತ್ತು ನಿಸ್ವಾರ್ಥಿ ಪ್ರಜಾ ನಾಯಕರಿಂದ ‘ಪ್ರಜಾತಂತ್ರ’ ಯಶಸ್ವಿಯಾಗುತ್ತದೆ ಎಂಬ ಸಿದ್ಧಾಂತ ವ್ಯಕ್ತವಾಗುತ್ತವೆ. ಪ್ರಜಾತಂತ್ರಕ್ಕೆ ಉತ್ತಮ ಸಂಘಟನೆ ಅವಶ್ಯ.”

ನಾಯಕರ ಬಗ್ಗೆ

ಉತ್ತಮ ನಾಯಕನ ಗುಣಗಳನ್ನು ಸ್ವಾಮಿ ವಿವೇಕಾನಂದರು ಈ ರೀತಿ ಗುರುತಿಸುತ್ತಾರೆ. “ನಾಯಕನ ಶೀಲವು ಪೂರ್ಣ ಶುದ್ಧವಿದ್ದಾಗಲೇ ಅವನ ಬಗ್ಗೆ ಶ್ರದ್ಧೆ, ವಿಶ್ವಾಸ ಸದಾಕಾಲಕ್ಕೂ ಉಳಿಯುತ್ತದೆ. ನಾಯಕನು ಒಂದು ಆಯುಷ್ಯದಲ್ಲಿ ತಯಾರಾಗುವವನಲ್ಲ. ಅದಕ್ಕಾಗಿ ಅವನು ಹುಟ್ಟಿ ಬರಬೇಕು, ತೀರ ಭಿನ್ನ ಭಿನ್ನ ಪ್ರವೃತ್ತಿಯ ಜನರನ್ನು ಅವರ ಹೃದಯದಲ್ಲಿನ ಸಮಾನ ಭಾವ ಭಾವನೆಗಳ ಸೂತ್ರದಲ್ಲಿ ಪೋಣಿಸಿ ಅವರನ್ನು ಕಾರ್ಯಗತಗೊಳಿಸುವುದರಲ್ಲಿದ ನಾಯಕನ ನಿಜವಾದ ಸತ್ವಪರೀಕ್ಷೆ. ಇದು ಸ್ವಾಭಾವಿಕವಾಗಿಯೇ ಆಗಬೇಕಾದಂತಹುದು.

“ನಾಯಕನು ‘ದಾಸಸ್ಯ ದಾಸ’ ಅಂದರೆ ದಾಸರಲ್ಲಿ ದಾಸ ನಾಗಬೇಕಾಗುತ್ತದೆ. ಎಲ್ಲರಿಗೂ ಸೇವಕನಾಗಬಲ್ಲವನೇ ಎಲ್ಲರಿಗೂ ಸ್ವಾಮಿ ಆಗುವನು. ಅವನಲ್ಲಿ ಅಸೂಯೆಯ, ಸ್ವಾರ್ಥತೆಯ ಲ್ಲವಲೇಶವೂ ಇರಬಾರದು. ಆಗಲೇ ನಿಜವಾದ ನಾಯಕನಾಗಬಲ್ಲ. ಇನ್ನೊಂದು ಗುಣವೆಂದರೆ ನಿಪ್ಪಕ್ಷಪಾತ ಯಾರ ಪ್ರೀತಿಯಲ್ಲಿ ಉಚ್ಚ ನೀಚ ಎಂಬ ಭೇದಭಾವ ಇರುತ್ತದೆಯೋ ಅವನೆಂದಿಗೂ ನಾಯಕನಾಗಲಾರ.”

ಸ್ವಾಮೀಜಿಯವರ ಅಭಿಪ್ರಾಯದ ಪ್ರಕಾರ ನಾಯಕನಾಗಲು ಮೊದಲನೆಯದಾಗಿ ಜನ್ಮಜಾತ ಲೋಕಸಂಗ್ರಹ ಕೌಶಲ್ಯ, ಎರಡನೆಯದಾಗಿ ನಿಸ್ವಾರ್ಥತೆ, ಮೂರನೆಯದಾಗಿ ನಿಷ್ಪಕ್ಷಪಾತ ಇವು ಅವಶ್ಯವಾಗಿ ಬೇಕು. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿನಿಧಿಗಳು ಜನ ಸೇವಕರಾಗಬೇಕಾದರೆ ಈ ಗುಣಗಳು ಅವಶ್ಯ, ಆಗ ಅವರು ನಿಜವಾದ ನಾಯಕರು ಎಂದು ಕರೆಯಲು ಯೋಗ್ಯರಾಗುವರು.

ಆಸ್ಪೃಶ್ಯತೆ ಬಗ್ಗೆ

೧೯ನೇ ಶತಮಾನದಲ್ಲಿ ಭಾರತದಾದ್ಯಂತ ಬೀಸಿದ ರಾಷ್ಟ್ರೀಯ ಪುನರುತ್ಥಾನದ ಗಾಳಿ ಆಗಿನ ಅವಿಭಜಿತ ಬಂಗಾಳದಿಂದ ಆರಂಭವಾಯಿತು ಎನ್ನುವುದು ಇತಿಹಾಸದ ವಿದ್ಯಾರ್ಥಿಗಳಿಗೆ ಗೊತ್ತಿದ್ದ ವಿಷಯ. ಸ್ವಾಮಿ ವಿವೇಕಾನಂದರು ಹೇಳಿದಂತೆ ಈ ಆಧ್ಯಾತ್ಮಿಕ ಜಾಗೃತಿಯ ಕ್ರಾಂತಿಯನ್ನು ಶ್ರೀರಾಮಕೃಷ್ಣ ಪರಮಹಂಸ ಮತ್ತು ಅವರ ಶಿಷ್ಯವರ್ಗ ಆರಂಭಿಸಿದರು. ಅಲ್ಲಿಂದ ಈ ಗಾಳಿ ಆರ್ಥಿಕ ಮತ್ತು ರಾಜಕೀಯ ಸಹಿತ ಜೀವನದ ಎಲ್ಲ ರಂಗಗಳಲ್ಲಿ ವ್ಯಾಪಿಸಿತು. ಈ ಜಾಗೃತಿಯ ಪ್ರಭಾವಕ್ಕೆ ಒಳಗಾದ ಕೇರಳ ರಾಜ್ಯದ ಸುದೂರಪ್ರದೇಶದಲ್ಲಿ ವಿವೇಕಾನಂದರು ತಮ್ಮ ಪರಿವ್ರಾಜಕ ದಿನಗಳ ಸ್ವಲ್ಪ ದಿನಗಳನ್ನು ಅಂದರೆ ಹದಿನೈದು ದಿನಗಳನ್ನು ಕಳೆದಿರುವುದು ಒಂದು ವಿಶೇಷ. ಮಲಬಾರ್ ಪ್ರದೇಶದಲ್ಲಿ ಆ ಕಾಲದಲ್ಲಿ ಅಸ್ಪೃಶ್ಯತೆ, ಕೆಳವರ್ಗದ ಹಿಂದುಗಳನ್ನು ಮುಟ್ಟುವುದಿರಲಿ, ನೋಡುವುದು ಕೂಡ ಪಾಪಕರ ಎನ್ನುವ ಬಲವಾದ ಆಚರಣೆಯನ್ನು ಖಂಡಿಸಿದ ಸ್ವಾಮೀಜಿಯವರು ಮಲಬಾರ್ ಪ್ರದೇಶವನ್ನು “ಹುಚ್ಚರ ಪ್ರದೇಶ” ಎಂದಿದ್ದರು. ಅಸ್ಪೃಶ್ಯರ ಗಾಳಿ ತಗುಲಿದರೂ ಕೆಡಕಾಗುತ್ತದೆ ಎನ್ನುವ ಭಾವನೆ ನಂಬೂದರಿಗಳಲ್ಲಿತ್ತು, ಇದನ್ನು ಸ್ವಾಮೀಜಿ “ಮತಿಭ್ರಮಣೆ”ಎಂದು ಕರೆದರು. ಈ ಹೇಳಿಕೆಯನ್ನು ಯಾರೂ ವಿರೋಧಿಸಲಿಲ್ಲ. ಆದರ ಬದಲಾಗಿ ಆ ಹೇಳಿಕೆಯ ಹಿಂದಿರುವ ಪ್ರಾಮಾಣಿಕತೆಯನ್ನು ಗುರುತಿಸಿದರು, ಅಸ್ಪೃಶ್ಯತೆಯ ನಿವಾರಣೆಗೆ ಪ್ರಯತ್ನಶೀಲರಾದರು. ಹರಿಜನರನ್ನು ದೇವಸ್ಥಾನಗಳಲ್ಲಿ ಪ್ರವೇಶಿಸಲು ಎರಡು ಚಳವಳಿಗಳು: ಕೇರಳದಲ್ಲಿ ನಡೆದವು ಅಸ್ಪೃಶ್ಯತೆಯನ್ನು ಕಾನೂನುಬದ್ಧವಾಗಿ ವಜಾಗೊಳಿಸಿದ ಮೊದಲ ರಾಜ್ಯ ಕೇರಳದ ತಿರುವಾಂಕೂರ ಅಯಿತು. ಈ ಪರಿವರ್ತನೆಯ ಮೊದಲ ಹರಿಕಾರರು ಸ್ವಾಮಿ ವಿವೇಕಾನಂದರು.

ಬಂಡವಾಳಶಾಹಿ-ಸಾಮ್ಯವಾದ

ಇಂದು ಬಂಡವಾಳಶಾಹಿವಾದ -ಸಾಮ್ಯವಾದಗಳಂಥ ವಿಚಾರಧಾರೆಗಳು ೨೦ನೇ ಶತಮಾನದ ಕಾಲಗರ್ಭದಲ್ಲಿ ಹರಿದು ಬಂದು ಸತ್ವಹೀನವಾಗಿವೆ. ಪಾಶ್ಚಾತ್ಯ ಭೌತವಾದಿಗಳ ಪ್ರಕಾರಗಳಿಸುವವನು ಮಾತ್ರ ಉಣ್ಣಲಿಕ್ಕೆ ಅರ್ಹನ್ನು “ಸ್ವತಃ ಗಳಿಸಿ, ಸ್ವಯಂ ಉಣ್ಣುವುದು ‘ಪ್ರಕೃತಿ’, ಇನ್ನೊಬ್ಬರಿಗೆ ಸೇರಿದ್ದನ್ನು ಕಸಿದು ಉಣ್ಣುವುದು ‘ ವಿಕೃತಿ’ ಮತ್ತು ಸ್ವತಃ ಗಳಿಸಿ ಇನ್ನೊಬ್ಬರಿಗೆ ಉಣ್ಣಿಸುವುದು ‘ಸಂಸ್ಕೃತಿ’”. ಮಾರ್ಕ್ಸ್‌ನ ಸಿದ್ದಾಂತ “ಪ್ರತಿಯೊಬ್ಬನ ಶಕ್ತ್ಯನುಸಾರ ದುಡಿಮೆ, ಪ್ರತಿಯೊಬ್ಬನಿಗೂ ಅಗತ್ಯಾನುಸಾರ ಕೊಡುಗೆ” ಎಂಬುದು ಸಾಕಾರಗೊಂಡಿರುವುದು ಹಿಂದುವಿನ ಮನೆಯಲ್ಲಿಯೇ. ಸ್ವಾಮಿ ವಿವೇಕಾನಂದರು ಈ ರೀತಿ ಹೇಳುತ್ತಾರೆ: “ಯೂರೋಪಿನ ಎಲ್ಲೆಡೆ ಬಲವಂತನ ಉಳಿವು ಮತ್ತು ದುರ್ಬಲನ ಅಳಿವಿನ ಸಿದ್ಧಾಂತ ಪ್ರಚಾರದಲ್ಲಿದೆ. ಆದರೆ ಭಾರತದಲ್ಲಿ ದುರ್ಬಲರ ರಕ್ಷಣೆಗಾಗಿಯೇ ಪ್ರತಿಯೊಂದು ಸಾಮಾಜಿಕ ನಿಯಮವೂ ರಚಿತವಾಗಿದೆ.”

ಸ್ವಾಮೀಜಿ ಅಮೇರಿಕಾದ ತಮ್ಮ ಎರಡನೆಯ ಪ್ರವಾಸದಲ್ಲಿ ಸೋದರಿ ನಿವೇದಿತಾರೊಡನೆ ಸಂಭಾಷಿಸುತ್ತ ಪಾಶ್ಚಾತ್ಯ ಸಭ್ಯತೆಯನ್ನು ಕುರಿತು ಹೇಳಿದ ಈ ಮಾತುಗಳು ಇಂದಿಗೂ ಪ್ರಸ್ತುತವಾಗಿವೆ. “ಪಶ್ಚಿಮದ ಜೀವನಯಾತ್ರೆಯೊಂದು ಪರಿಹಾಸ, ಆದರೆ ಅದರ ಹಿಂದೆ ರೋದನವಿದೆ. ರೋದನದಲ್ಲೇ ಅದು ಪರಿ ಸಮಾಪ್ತಗೊಳ್ಳಲಿದೆ.” ಅಭಿವೃದ್ಧಿಶೀಲ ದೇಶಗಳ ಇಂದಿನ ಸಮೃದ್ಧಿಯು ದುರ್ಬಲ ರಾಷ್ಟ್ರಗಳ ಶೋಷಣೆಯ ಫಲ.

ಸ್ವಾಮೀಜಿ ಅಮೆರಿಕದಲ್ಲಿದ್ದಾಗ ಅಮೆರಿಕ ತೀವ್ರ ಆರ್ಥಿಕ ಸಂಕಟದಲ್ಲಿ ಸಿಲುಕಿಕೊಂಡಿತ್ತು. ಷೇರುಬೆಲೆ ಕುಸಿದಿತ್ತು. ಮಾರುಕಟ್ಟೆಯಲ್ಲಿ ತೀವ್ರ ಕುಸಿತವಾಯಿತು. ೬೦೦ ಬ್ಯಾಂಕುಗಳು ಮುಚ್ಚಿದವು. ೧೫ ಸಾವಿರಕ್ಕೂ ಹೆಚ್ಚು ವ್ಯಾಪಾರೀ ಸಂಸ್ಥೆಗಳು ನಿಂತು ಹೋದವು ಹಲವು ಕಂಪನಿಗಳು ‘ದಿವಾಳಿ’ ಘೋಷಿಸಿಕೊಂಡವು. ಇದನ್ನು ನೋಡಿ ಸ್ವಾಮೀಜಿ ಈ ರೀತಿ ಬರೆದಿದ್ದಾರೆ: “ಈ ಕೋಲಾಹಲದಿಂದ ಔದ್ಯೋಗಿಕ ಅರಾಜಕತೆ ನಿರ್ಮಾಣವಾಗಿದೆ. ಈ ಸ್ಥಿತಿಯಲ್ಲಿ ವ್ಯಾಪಕವಾಗಿ ವ್ಯಾಪಾರೀ ಪ್ರತಿಷ್ಠಾನಗಳು ಹುಟ್ಟಿಕೊಳ್ಳಲಿವೆ. ಇದರ ಪರಿಣಾಮವೇನೆಂದರೆ ಶ್ರೀಮಂತರು ಹೆಚ್ಚು ಶ್ರೀಮಂತರಾಗುತ್ತಾರೆ ಮತ್ತು ಬಡವರು ಕಡು ಬಡವರಾಗುತ್ತಾರೆ. ಸಮಾಜದಲ್ಲಿ ಅಸಮಾನತೆ ತಲೆದೋರುತ್ತದೆ.” ಈ ಎರಡೂ ವಿಚಾರ ಸತ್ಯವಾಗಿವೆ.

ಸಮಗ್ರ ವಿಶ್ವವು ಒಂದು ಸುಖೀ ಪರಿವಾರದಂತಿರಬೇಕಾದರೆ ಜನರು ತಮ್ಮ ಆವಶ್ಯಕತೆಗಳನ್ನು ಕುಗ್ಗಿಸಿಕೊಳ್ಳಬೇಕಷ್ಟೇ ಅಲ್ಲದೇ ತಮ್ಮ ಉನ್ನತ ಜೀವನಶೈಲಿಯನ್ನು ಕೆಳಗಿಳಿಸಿಕೊಳ್ಳಲೇಬೇಕು; ಅಲ್ಲದೆ ಬಡದೇಶಗಳಲ್ಲಿ ತುಂಬ ದರಿದ್ರಾವಸ್ಥೆಯಲ್ಲಿ ಬದುಕುತ್ತಿರುವ ಜನರ ಬಗ್ಗೆ ವಾಸ್ತವಿಕ ಪ್ರೀತಿ ಕರುಣೆಗಳನ್ನು ತಳೆಯಲೇಬೇಕು, ಇಷ್ಟಕ್ಕೂ ಆಧ್ಯಾತ್ಮಿಕತೆಯ ಆಸರೆ ಸಿಕ್ಕಾಗಲೇ ಇದು ಸಾಧ್ಯವಾಗುತ್ತದೆ ಎಂದು ನೆನಪಿಡಬೇಕು ಎಂಬುದು ವಿವೇಕಾನಂದರ ಅಭಿಮತ. ಇದರಿಂದ ಅಂಥ ಸಾಮಾಜಿಕ ನೈತಿಕ ಪುನರುತ್ಥಾನದ ಸಮಾಜ ನಿರ್ಮಾಣವಾಗುವುದು.

ಜಾಗತೀಕರಣ

ಪ್ರಪಂಚದ ಜನಾಂಗಗಳನ್ನು ಬಾಹ್ಯ ಮತ್ತು ಆಂತರಿಕ ಪ್ರವೃತ್ತಿಯುಳ್ಳವರೆಂದು ವಿಂಗಡಿಸಬಹುದು. ಪಾಶ್ಚಾತ್ಯರು ಬಾಹ್ಯ ಪ್ರಕೃತಿಯನ್ನು ನಿಗ್ರಹಿಸಿದರೆ, ಪೌರಸ್ತ್ಯರು ಆಂತರಿಕ ಪ್ರಕೃತಿಯನ್ನು ನಿಗ್ರಹಿಸಿರುವರು. ಈ ನಿಗ್ರಹದಲ್ಲಿ ಹೋರಾಟವಿದೆ, ಸಾಧನೆ ಇದೆ, ತ್ಯಾಗವಿದೆ, ಪ್ರಪಂಚಕ್ಕೆ ಈಗ ಬೇಕಾಗಿರುವುದು ವಿನಿಮಯ, ಸಂಪರ್ಕ ಮತ್ತು ಸಂಬಂಧ ಈ ಚಿಂತನೆಯನ್ನು ಕುರಿತು ವಿವೇಕಾನಂದರು- “ಭಾರತೀಯರು ಯುರೋಪಿಯನ್‌ರಿಂದ ಬಾಹ್ಯಪ್ರಕೃತಿಯನ್ನು ಹೇಗೆ ನಿಗ್ರಹಿಸಬೇಕು ಎಂಬುದನ್ನೂ ಯುರೋಪಿಯನ್ನರು ಭಾರತೀಯರಿಂದ ಆಂತರಿಕ ಪ್ರಕೃತಿಯನ್ನು ಹೇಗೆ ನಿಗ್ರಹಿಸಬೇಕು ಎಂಬುದನ್ನೂ ಅರಿತುಕೊಳ್ಳಬೇಕು, ಆಗ ಹಿಂದುವಾಗಲಿ ಯುರೋಪಿಯನ್‌ರಾಗಲಿ ಇರುವುದಿಲ್ಲ. ಆಗ ಬಾಹ್ಯ ಆಂತರಿಕ ಪ್ರಕೃತಿಯನ್ನು ಗೆದ್ದ ಒಂದು ಆದರ್ಶ ಸಂಯುಕ್ತ ಜನಾಂಗ ಒಂದೇ ಇರುವುದು” ಎಂದಿದ್ದಾರೆ. ಈ ಒಂದು ಆದರ್ಶ ಸ್ಥಿತಿಯ ಸ್ಥಾಪನೆಯನ್ನು ಅರಿತರೆ ಜಾಗತೀಕರಣದ ಸ್ಥಾಪನೆಯಾದಂತೆ, ಆದರೆ ವ್ಯಾಪಾರೀಕರಣವೇ ಜಾಗತೀಕರಣದ ಅಂತರಂಗವಾಗಿರುವುದು ಮನುಕುಲದ ದುರದೃಷ್ಟವಲ್ಲದೆ ಮತ್ತೇನು? ವಿವೇಕಾನಂದರು ಹೇಳಿದ ಈ ಹಾದಿಯಲ್ಲಿ ಇನ್ನು ಮುಂದಾದರೂ ಸಾಗುವ ಕನಿಷ್ಠ  ಪ್ರಯತ್ನವನ್ನು ಸರ್ಕಾರಗಳಾಗಲಿ ಸುಧಾರಕರಾಗಲ್ಲಿ ಪ್ರಾಮಾಣಿಕವಾಗಿ ಮಾಡುವರೇ? ನಾಶದ ದವಡೆಗೆ ಸಿಕ್ಕಿರುವ ಭಾರತ ತನ್ನೆಲ್ಲ ಬಂಧನಗಳಿಂದ ಬಿಡುಗಡೆ ಹೊಂದಿ ಆದು ವಿಶ್ವದ ಮಾರ್ಗದರ್ಶಿಯಾಗಲು ಯತ್ನಿಸುವುದೇ?

ಸ್ವಾಮಿ ವಿವೇಕಾನಂದರು ಯಾವುದೇ ರಾಜಕೀಯ ಸಂದೇಶವನ್ನು ನೇರವಾಗಿ ನೀಡದಿದ್ದರೂ ಅವರ ವ್ಯಕ್ತಿತ್ವದ, ಬರವಣಿಗೆಯ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ದೇಶಭಕ್ತಿಯ ಅಂಶಗಳನ್ನೂ, ರಾಜಕೀಯ ಪ್ರಜ್ಞೆಯನ್ನೂ ಬೆಳೆಸಿಕೊಂಡರು. ಕಡೆಯ ಪಕ್ಷ ಬಂಗಾಳಕ್ಕೆ ಸಂಬಂಧಿಸಿದಂತೆ ಆಧುನಿಕ ರಾಷ್ಟ್ರೀಯ ಚಳುವಳಿಯ ಆಧ್ಯಾತ್ಮಿಕ ಪಿತನೆಂದು ವಿವೇಕಾನಂದರನ್ನು ಪರಿಗಣಿಸಬಹುದು ಎಂದು ಹೇಳಿದ್ದಾರೆ ನೇತಾಜಿ ಸುಭಾಷ್‌ಚಂದ್ರಬೋಸರು, ”ಇಂದಿನ ಸ್ವಾತಂತ್ರ್ಯ ಚಳುವಳಿಯ ಮೂಲ ಸ್ವಾಮೀಜಿಯ ಸಂದೇಶಕ್ಕೆ ಋಣಿಯಾಗಿದೆ. ಭಾರತ ಸ್ವತಂತ್ರವಾಗಬೇಕಾದರೆ-ಅದು ವಿಶೇಷವಾಗಿ ಹಿಂದೂಧರ್ಮದ ಅಥವಾ ಇಸ್ಲಾಂಧರ್ಮದ ನಾಡಾಗುವುದು ಸಾಧ್ಯವಿಲ್ಲ. ಅದು ರಾಷ್ಟ್ರೀಯತೆಯ ಆದರ್ಶದಿಂದ ಸ್ಪೂರ್ತಿಗೊಂಡು ವಿಭಿನ್ನ ಧಾರ್ಮಿಕ ಸಮಾಜಗಳ ಒಂದು ಏಕೀಕೃತ ನಾಡಾಗಬೇಕು. ಅದಕ್ಕಾಗಿ ಭಾರತೀಯ ಧರ್ಮಗಳ ಸಾಮರಸ್ಯದ ಸಂದೇಶವನ್ನು ತುಂಬು ಹೃದಯದಿಂದ ಒಪ್ಪಿಕೊಳ್ಳಬೇಕು. ಆದು ರಾಮಕೃಷ್ಣ- ವಿವೇಕಾನಂದರ ಸಂದೇಶ, ‘ಸ್ವಾತಂತ್ರ್ಯವೇ ಆತ್ಮದ ಹಾಡು’- ಇದು ಸ್ವಾಮೀಜಿಯ ಹೃದಯಾಂತರಾಳದಿಂದ ಹೊಮ್ಮಿ ಇಡೀ ದೇಶವನ್ನು ಸೆರೆಹಿಡಿದು ಬಹುಮಟ್ಟಿಗೆ ಮರುಳು ಮಾಡಿದ ಸಂದೇಶ, ಸ್ವಾಮಿ ವಿವೇಕಾನಂದರು ಒಂದು ಕಡೆ ಮಾನವನಿಗೆ ಎಲ್ಲ ಸಂಕೋಲೆಗಳನ್ನೂ ಕಳಚಿಕೊಂಡು ನಿಜವಾದ ಮಾನವನಾಗಿರಲು ಕರೆಕೊಟ್ಟರು ಮತ್ತು ಇನ್ನೊಂದು ಕಡೆ ಧರ್ಮಸಾಮರಸ್ಯದ ಸಂದೇಶವನ್ನು ಬೋಧಿಸುವುದರ ಮೂಲಕ ಭಾರತದಲ್ಲಿ ನಿಜವಾದ ರಾಷ್ಟ್ರೀಯತೆಯ ತಳಹದಿಯನ್ನು ಹಾಕಿದರು. (ಡಾ. ಸಿ.ಪಿ ಕೃಷ್ಣ ಕುಮಾರ್ ಅವರ ಅನುವಾದಿತ ಲೇಖನ, ವಿವೇಕಪ್ರಭ ಮಾರ್ಚ್ ೨೦೦೩).

ವಿವೇಕಾನಂದರು, ಪದದ ಸಾಮಾನ್ಯ ಅರ್ಥದಲ್ಲಿ ರಾಜಕಾರಣಿಯಾಗಿರಲಿಲ್ಲ. ಆದರೂ ಅವರು ಭಾರತದಲ್ಲಿ ರಾಷ್ಟ್ರೀಯ ಆಂದೋಳನದ ಶ್ರೇಷ್ಠ  ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. –ಜವಹರಲಾಲ್ ನೆಹರು

ಇತ್ತೀಚೆಗೆ ಇಡೀ ದೇಶದಲ್ಲಿ ಸ್ವಾಮಿ ವಿವೇಕಾನಂದರ ಉಪದೇಶಗಳ ಮೇಲೆ ಎಲ್ಲಿಲ್ಲದ ಆಸಕ್ತಿ ಉಂಟಾಗುತ್ತಿರುವುದು ಸಂತಸದ ವಿಷಯ. ಈ ದೇಶ ಈಗ ಅಪ್ರಾಮಾಣಿಕವಾದ ಸಮಾಜವಾದ ಮತ್ತು ಜಾತ್ಯತೀತತೆಯನ್ನು ಆಚರಿಸುತ್ತಿದೆ. ಅದರ ಫಲ ಕೋಮುವಾದಿತನ, ಕೋಮುಗಲಭೆ, ಇಂದಿನ ಢೋಂಗಿ ಜಾತ್ಯತೀತವಾದಿಗಳು ಸ್ವಾಮೀಜಿಯವರ ಜೀವನದ ಮೂಲಸಂದೇಶವಾದ ಹಿಂದೂ ರಾಷ್ಟ್ರೀಯತೆಯನ್ನು ಒಪ್ಪಿಕೊಳ್ಳಬೇಕು.

(ಮೂಲ: ವಿವೇಕಪ್ರಭ ಜನವರಿ 2004)