ಸ್ವಾಮಿ ವಿವೇಕಾನಂದರ ಅಸಾಧಾರಣ ವ್ಯಕ್ತಿತ್ವದಿಂದ ಪ್ರಭಾವಿತರಾದ ಸಾವಿರಾರು ವ್ಯಕ್ತಿಗಳಲ್ಲಿ ಕೆಲವರು ಉಜ್ವಲವಾಗಿ ಶೋಭಿಸುತ್ತಾರೆ. ಸ್ವಾಮಿಜಿಯ ಭಾವನೆಗಳಿಗೆ ಸ್ಪಂದಿಸುತ್ತ ತಮ್ಮ ಜೀವನವನ್ನೇ ಅರ್ಪಿಸಿಕೊಂಡ ಸ್ವಾಮಿ ನಿಶ್ಚಯಾನಂದರ ಅದ್ಭುತ ಜೀವನವನ್ನು ಪರಿಚಯಿಸುವ ಲೇಖನವನ್ನು ಬರೆದಿರುವವರು ಮೈಸೂರಿನ ನಿವಾಸಿ. – ಸ್ವರ್ಣಗೌರಿ

ಸೈನಿಕ ದಳದ ಒಂದು ಪಡೆಯಲ್ಲಿ ಆತಂಕವುಂಟಾಗಿತ್ತು. ಸೈನ್ಯದಲ್ಲಿನ ಮಾನಸಿಕ ವೈದ್ಯರೂ ಚಿಂತಾಕ್ರಾಂತರಾಗಿದ್ದರು. ಸೂರಜ್ ರಾವ್ ಎಂಬ ಸೈನಿಕನ ವಿಚಿತ್ರ ವರ್ತನೆಗೆ ಕಾರಣವರಿಯದೆ ಆತನ ತಲೆಯ ಮೇಲೆ ದಿನವೂ ಒಂದು ಮಂಜು ಗಡ್ಡೆಯನ್ನಿಡಲು ಉಪದೇಶವಿತ್ತಿದ್ದರು. ರೋಗಕ್ಕಿಂತ ಮದ್ದೇ ಭಾರವಾಗಿತ್ತು! ಈ ಪರಿಹಾರದಿಂದ ಗುಣಮುಖವಾಗದೇ ಆತನನ್ನು ಸೇವೆಯಿಂದ ವಜಾ ಮಾಡಲಾಯಿತು.

ರೋಗಿ ಬಯಸಿದ್ದೂ ಹಾಲೇ ವೈದ್ಯ ಹೇಳಿದ್ದೂ ಹಾಲೇ. ಆನಂದದಿಂದ ಹೊರಗೆ ಬಂದ ಸೂರಜ್‌ರಾವ್, ತತ್‌ಕ್ಷಣವೇ ಗಂಟು ಮೂಟೆ ಕಟ್ಟಿ ಸ್ವಾಮಿ ವಿವೇಕಾನಂದರನ್ನು ನೋಡಲು ಕಲ್ಕತ್ತೆಗೆ ಹೋರಟ. ಸಂಸಾರವನ್ನು ತ್ಯಜಿಸಿ ಸನ್ಯಾಸವನ್ನು ಸ್ವೀಕರಿಸುವ ಅವನ ಹವಣಿಕೆಗೆ ಸೇನೆಯ ಉದ್ಯೋಗವು ಅಡ್ಡಿಯಾಗಿತ್ತು. ಸೈನಿಕನು ಉದ್ಯೋಗದ ಪೂರ್ಣಾವಧಿಯನ್ನು ಮುಗಿಸದೆ ಬಿಟ್ಟು ಬಿಡುವುದು ಮಹಾಪರಾಧ! ಆದ್ದರಿಂದ ಆ ರೀತಿಯಲ್ಲಿ ಈತ ನಟಿಸಲೇಬೇಕಿತ್ತು!! ಸ್ವಾಮಿಜಿಯನ್ನು ನೋಡುವವರೆಗೆ ಸ್ನಾನ, ಊಟಗಳೇನನ್ನೂ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದ ಈತ. ಹಾಗೆ ದಣಿದು ಬಂದು ಕುಳಿತಿದ್ದ ರಾವ್‌ನನ್ನು ವಿಶ್ರಮಿಸುತ್ತಿದ್ದ ಸ್ವಾಮಿಜಿ ಬರ ಮಾಡಿಕೊಂಡು ವಿಚಾರಿಸಿದರು; “ನಿನಗೇನು ಬೇಕು?” “ನನಗೆ ಏನೂ ಬೇಕಿಲ್ಲ. ಕೇವಲ ನಿಮ್ಮ ದಾಸನಾಗಲು ಬಂದಿರುವೆ” ಎಂದು ವಿನೀತನಾಗಿ ಕರಜೋಡಿಸಿ ಹೇಳಿದ ರಾವ್‌ನ ಉತ್ತರವನ್ನು ಕೇಳಿ ಸಂತುಷ್ಟರಾಗಿ, ಬೇಲೂರು ಮಠದಲ್ಲಿರಲು ಒಪ್ಪಿಗೆ ನೀಡಿದರು.

ಅನೇಕ ವರ್ಷಗಳ ಕನಸು ನನಸಾದ ರಾವ್‌ನ ಆನಂದಕ್ಕೆ ಪಾರವಿಲ್ಲವಾಯಿತು. ತನ್ನ ಪಾಲಿಗೆ ಬಂದ ಸ್ವಾಮಿಜಿಯವರ ಸೇವೆ ಹಾಗೂ ದೇವರಕೋಣೆಯ ಕೆಲಸಗಳನ್ನು ಶ್ರದ್ಧೆಯಿಂದ, ಪ್ರೀತ್ಯಾದರಗಳಿಂದ ಮಾಡತೊಡಗಿದ. ಹಿಡಿದ ಕೆಲಸವನ್ನು ಪೂರ್ಣಗೊಳಿಸದ ಹೊರತು ಮುಂದಿನ ಕಾರ್ಯಕ್ಕೆ ಕೈಹಾಕುತಿರಲಿಲ್ಲ, ಸೈನಿಕನಾದ ಕಾರಣ ಎಲ್ಲದರಲ್ಲೂ ಅತ್ಯಂತ ಶಿಸ್ತು, ನಿಷ್ಠೆ. ಗುರುವಿನ ಮೇಲೆ ಈತನಗಿದ್ದ ಭಕ್ತಿ, ಶ್ರದ್ಧೆಗಳನ್ನು ನಿರೂಪಿಸುವ ಒಂದು ಘಟನೆ ಅಮೋಘವಾದುದು.

ಮಠದಲ್ಲಿ ಹಸುವಿನ ಅಗತ್ಯವಿತ್ತು. ಅದಕ್ಕಾಗಿ ಸ್ವಾಮಿಜಿ ಒಂದು ಹಸುವನ್ನು ತರಲು ರಾವ್ ಹಾಗೂ ನಿರ್ಭಯಾನಂದರನ್ನು ದಕ್ಷಿಣೇಶ್ವರದ ಬಳಿಯ ಒಂದು ಹಳ್ಳಿ ಅರಿಯಾದಾಹಾಗೆ ಕಳುಹಿಸಿದರು. ಆ ಕಡೆಗೆ ಹೋಗಲು ಗಂಗಾನದಿಯನ್ನು ದಾಟಬೇಕಿತ್ತು. ಹೊರಡುವ ಮುನ್ನ “ಸದಾ ಹಸುವಿನ ಕುತ್ತಿಗೆಯ ಹಗ್ಗವನ್ನು ಕೈಯಲ್ಲಿ ಹಿಡಿದಿರು, ಆಗ ಆದು ಓಡಿ ಹೋಗುವುದಿಲ್ಲ” ಎಂದರು ಸ್ವಾಮಿಜಿ. ಇವರು ಹಸುವನ್ನು ಖರೀದಿಸಿ ಹಿಂತಿರುಗುತ್ತಿರುವಾಗ ಗಂಗೆಯಲ್ಲಿ ಉಬ್ಬರ ಬಂದು ನೌಕೆಯು ಅಲುಗಾಡತೊಡಗಿತು. ಹಸುವಿಗೆ ಗಾಬರಿಯಾಗಿ ಬೇರೆ ದಾರಿ ಕಾಣದೆ, ನೀರಿನಲ್ಲಿ ಧುಮುಕಿಬಿಟ್ಟಿತು. ಆದರ ಹಗ್ಗವನ್ನು ಹಿಡಿದಿದ್ದ ರಾವ್‌ಗೆ ಗುರುವಿನ ಮಾತು ನೆನಪಿಗೆ ಬಂದು, ತಕ್ಷಣವೇ ನೀರಿಗೆ ಹಾರಿ ಬಿಗಿಯಾಗಿ ಹಗ್ಗವನ್ನು ಹಿಡಿದುಕೊಂಡನು. ಹಸುವಿನೊಂದಿಗೆ ನೀರಿನಲ್ಲಿ ಕೊಚ್ಚಿ ಹೋದರೂ, ಸ್ವಲ್ಪವೂ ವಿಚಲಿತನಾಗದೆ ಅದರ ಮುಖಕ್ಕೆ ನೀರನ್ನು ಸಿಂಪಡಿಸುತ್ತಾ ಇನ್ನೊಂದು ಕೈಯಲ್ಲಿದ್ದ ಹಗ್ಗವನ್ನು ಬಿಡದೆ ಬಹಳ ಪ್ರಯಾಸಪಟ್ಟು ದಡಕ್ಕೆ ಅದನ್ನು ಎಳೆದು ತಂದನು. ಆದರೆ ದುರದೃಷ್ಟವಶಾತ್ ತುಂಬ ಹೂಳಿದ್ದ ಆ ಪ್ರವೇಶದಿಂದ ಹಸುವನ್ನು ಎಳೆಯಲಾಗಲಿಲ್ಲ, ಆಗ ಅಲ್ಲಿಯೇ ಬಿದ್ದಿದ್ದ ಮುರಿದ ಹಲಗೆಗಳಿಂದ ಒಂದು ಜಗಲಿಯನ್ನು ನಿರ್ಮಿಸಿ ಹೇಗೋ ಕಷ್ಟಪಟ್ಟು ಹಸುವನ್ನು ಎಳೆಯುತ್ತಾ ಮಠಕ್ಕೆ ಕರೆತಂದ. ಈ ಮಧ್ಯೆ ಮಠಕ್ಕೆ ಏಕಾಂಗಿಯಾಗಿ ಹಿಂದಿರುಗಿ ಬಂದ ಸ್ವಾಮಿ ನಿರ್ಭಯಾನಂದರಿಂದ ವಿಷಯ ತಿಳಿದ ಸ್ವಾಮಿಜಿ ಚಿಂತಾಕ್ರಾಂತರಾಗಿದ್ದರು. ರಾವ್‌ನನ್ನು ನೋಡಿದ ತಕ್ಷಣ ಕೋಪದಿಂದ ‘ಮೂರ್ಖನಂತೆ ಒಂದು ಹಸುವಿಗಾಗಿ ನಿನ್ನ ಪ್ರಾಣವನ್ನೇಕೆ ಕಳೆದುಕೊಳ್ಳಹೋದೆ?” ಎಂದು ಬೈಯ್ದರು. ದಣಿದಿದ್ದರೂ ಶಿಷ್ಯನು ಶಾಂತವಾಗಿ ವಿನಯದಿಂದ, “ಮಹಾರಾಜ್, ನೀವು ಹಸುವನ್ನು ತರಲು ಕಳುಹಿಸಿದಿರಿ, ಅದನ್ನು ತರದೆ ಬರಿಗೈಯಲ್ಲಿ ಹೇಗೆ ಬರಲಿ?” ಎಂದು ಉತ್ತರಿಸಿದ. ಅವನ ನಿಷ್ಠೆಯನ್ನು ಮೆಚ್ಚಿ ವಿವೇಕಾನಂದರು, ”ಹೌದು! ಹೌದು! ನಾನು ಹಸುವನ್ನು ತರಲು ಹೇಳಿದೆ, ಹೇಗೆ ತರದೆ ಇರಲು ಸಾಧ್ಯ? ನಿನ್ನಂತಹವನಿಗೆ ನನ್ನ ಆದೇಶವನ್ನು ಮೀರಲು ಖಂಡಿತ ಸಾಧ್ಯವಿಲ್ಲ!” ಎಂದು ಮನಃಪೂರ್ವಕವಾಗಿ ಆಶೀರ್ವದಿಸಿ ನಿಶ್ವಯಾನಂದ” ಎಂಬ ಅನ್ವರ್ಥನಾಮ ನೀಡಿ ಸನ್ಯಾಸ ದೀಕ್ಷೆಯನ್ನು ಕರುಣಿಸಿದರು!

ಮರಾಠನಾದ ಕಾರಣ ರಾವ್‌ಗೆ ಶಿವಾಜಿಯ ಬಗ್ಗೆ ಬಾಲ್ಯದಿಂದಲೇ ಆತ್ಯಂತ ಪ್ರೀತಿ, ಗೌರವಾದರಗಳು ಇದ್ದವು. ಶಿವಾಜಿಯ ಹೆಸರು ಕಿವಿಗೆ ಬಿದ್ದೊಡನೆ ಆತನ ಶೌರ್ಯ, ಧೈರ್ಯ, ಧೃತಿ, ದೇಶಪ್ರೇಮ, ದೈವಭಕ್ತಿಗಳನ್ನು ಹೊಗಳುತ್ತ ಮೈಮರೆಯುತ್ತಿದ್ದ ಮಹಾರಾಷ್ಟ್ರದ ಜನ್‌ಜೀರಾ ಎಂಬ ಹಳ್ಳಿಯಲ್ಲಿ ಕ್ಷತ್ರಿಯ ವಂಶದಲ್ಲಿ ೧೮೬೫ರಲ್ಲಿ ಜನಿಸಿದ ರಾವ್ ಬಾಲ್ಯದಿಂದಲೇ ಒಳ್ಳೆಯ ಸ್ವಭಾವದವನಾಗಿದ್ದ. ಕೆಲಸಕ್ಕಾಗಿ ಅಲೆಯುವಾಗ ಎಲ್ಲೂ ಉದ್ಯೋಗ ದೊರೆಯದ, ಸೈನಿಕ ದಳಕ್ಕೆ ಸೇರಿದ. ಈ ಉದ್ಯೋಗದಿಂದ ಆತನ ನೆಚ್ಚಿನ ಹವ್ಯಾಸಗಳಾದ ತೀರ್ಥಯಾತ್ರೆ ಹಾಗೂ ದೇಶವಿದೇಶಗಳ ಪರ್ಯಟನೆಗೆ ಅವಕಾಶವಾಯಿತು. ಈತನಿಗೆ ಬರ್ಮಾ ಯುದ್ಧದಲ್ಲಿ ಭಾಗವಹಿಸಿದ ನಂತರ ಅಂಡಮಾನ್ ನಿಕೋಬಾರ್ ದ್ವೀಪ, ಸಯಾಮ್, ಜಿಬ್ರಾಲ್ಟರ್, ಮಾಲ್ಟಾ, ರಾಯಪುರ ಮುಂತಾದ ಸ್ಥಳಗಳಿಗೆ ವರ್ಗವಾಯಿತು. ರಾಯಪುರದಲ್ಲಿ ಒಮ್ಮೆ ರಾಮ ಕೃಷ್ಣರ ನೇರ ಶಿಷ್ಯರಾದ ಸ್ವಾಮಿ ನಿರಂಜನಾನಂದರ ದರ್ಶನ ಸೌಭಾಗ್ಯವು ಇವನಿಗೆ ಲಭಿಸಿತು. ಅವನ ಜೀವನದ ದಿಕ್ಕನ್ನೇ ಈ ಘಟನೆ ಬದಲಾಯಿಸಿತು. ನಿರಂಜನಾನಂದರಿಂದ ಶ್ರೀರಾಮಕೃಷ್ಣ ಹಾಗೂ ವಿವೇಕಾನಂದರ ಬಗ್ಗೆ ಕೇಳಿದಂದಿನಿಂದ – ಸ್ವಾಮಿಜಿಯವರನ್ನು ನೋಡಲು ಅವನ ಮನ ಕಾತರಿಸತೊಡಗಿತು.

೧೮೯೭ರಲ್ಲಿ ವಿವೇಕಾನಂದರು ಪಶ್ಚಿಮ ದೇಶಗಳಿಂದ ಹಿಂತಿರುಗುತ್ತಿರುವ ವಿಷಯವನ್ನು ವೃತ್ತಪತ್ರಿಕೆಗಳು ಪ್ರಕಟಿಸಿದಾಗ ತಾನೂ ಅವರನ್ನು ಇದಿರುಗೊಳ್ಳಲು ಹೊರಟ, ಸ್ವಾಮಿಜಿ ಕುಳಿತಿದ್ದ ಕುಂಭಕೋಣಂನಿಂದ ಮದರಾಸಿಗೆ ಹೋಗುವ ರೈಲು ಬಂಡಿಯು ಮಾಯಾವರಂನಲ್ಲಿ ನಿಲ್ಲುವ ಪ್ರಮೇಯವಿರಲಿಲ್ಲ. ಆದರೆ ಸೂರಜ್ ರಾವ್‌ನ ನೇತೃತ್ವದಲ್ಲಿ ಅನೇಕ ಜನ ಸೇರಿ, ಬಂಡಿಯನ್ನು ಮಾಯಾವರಂನಲ್ಲಿ ನಿಲ್ಲಿಸಬೇಕಾಗಿ ಸ್ಟೇಷನ್ ಮಾಸ್ಟರಲ್ಲಿ ಬಹಳವಾಗಿ ವಿನಂತಿಸಿಕೊಂಡರು. ಆದರೆ ಆತ ಇವರ ಮಾತಿಗೆ ಬೆಲೆ ಕೊಡದ ಕಾರಣ, ದೂರದಿಂದ ಗಾಡಿ – ಬರುತ್ತಿರುವುದನ್ನು ಕಂಡು ಇವರೆಲ್ಲರೂ ಹಳಿಗಳ ಮೇಲೆ ಮಲಗಿಬಿಟ್ಟರು! ವಿಧಿಯಿಲ್ಲದೆ ಗಾಡಿಯನ್ನು ಕೂಡಲೇ ನಿಲ್ಲಿಸಬೇಕಾಯಿತು. ವಿವೇಕಾನಂದರು ಕುಳಿತಿದ್ದ ಬಂಡಿಯನ್ನು ಸುತ್ತುವರಿದು ಎಲ್ಲರೂ ಜಯಘೋಷ ಮಾಡತೊಡಗಿದರು. ಇವರೆಲ್ಲರ ಪ್ರೀತಿಯನ್ನು ಕಂಡು ಮನತುಂಬಿ ಬಂದ ಸ್ವಾಮಿಗಳು ಎಲ್ಲರನ್ನು ತುಂಬು ಹೃದಯದಿಂದ ಹರಸಿದರು!

ಈ ಕ್ಷಣಿಕ ದರ್ಶನದಿಂದ ಸಮಾಧಾನವನ್ನು ಕಾಣದ ರಾವ್‌ನ ಮನಸ್ಸು ಮತ್ತೊಮ್ಮೆ ಅವರ ದರ್ಶನಕ್ಕಾಗಿ ಕಾತರಿಸಿ ಮದರಾಸಿಗೆ ಧಾವಿಸಿತು. ಹಣವಿಲ್ಲದ ಕಾರಣ ನಡೆದೇ ಹೋಗಲು ನಿರ್ಧರಿಸಿದ. ನಡೆದು ಬರುತ್ತಿರುವಾಗ ಸಮುದ್ರದ ದಡದಲ್ಲಿದ್ದ ಬೆಸ್ತರ ಮನೆಗಳೆಲ್ಲವೂ ದೀಪಾಲಂಕಾರದಿಂದ ಕಂಗೊಳಿಸುತ್ತಿರುವುದನ್ನು ಕಂಡು ಕಾರಣ ಕೇಳಿದ, “ಏಕೆ, ನಿಮಗೆ ತಿಳಿದಿಲ್ಲವೇ? ಜಗದ್ಗುರುಗಳು ಬಂದಿದ್ದಾರೆ” ಎಂಬ ಅವರ ಉತ್ತರ ಕೇಳಿ ಈತ ಆಶ್ಚರ್ಯಚಕಿತನಾದ, ನಿರಕ್ಷರಕುಕ್ಷಿಗಳಾದ ಈ ಬೆಸ್ತರಿಗೂ ಸ್ವಾಮಿ ವಿವೇಕಾನಂದರ ದಿಗ್ವಿಜಯದ ಪರಿಚಯವಿದೆಯಲ್ಲ ಎಂದು ಆಶ್ಚರ್ಯಪಡುತ್ತ – ಗುರುಗಳನ್ನು ಕಾಣಬೇಕೆಂದು ಬೇಗಬೇಗನೆ ಹೆಜ್ಜೆ ಹಾಕತೊಡಗಿದ, ಉತ್ಸಾಹ, ಕಾತರತೆಗಳಿಂದ ದಾರಿ ತಿಳಿಯದ ಕಾರಣ ಮದರಾಸನ್ನು ದಾಟಿ ಏಳು ಮೈಲಿ ದೂರ ನಡೆದು ಬಿಟ್ಟಿದ್ದ! ಹೊಟ್ಟೆಗಿಲ್ಲದೆ ಬಳಲಿ ಬಸವಳಿದು ಆ ರಾತ್ರಿ ಅಲ್ಲಿಯೇ ತಂಗಿದ್ದು, ಮಾರನೇ ದಿನ ಮತ್ತೆ ಮದರಾಸಿಗೆ ಹಿಂದಿರುಗಿ, ಹೊರಟ, ಬೆಳಿಗ್ಗೆ ಏಳು ಗಂಟೆಗೆ ಸ್ವಾಮಿಜಿ ಇಳಿದುಕೊಂಡಿದ್ದ ಬಿಳಿಗಿರಿ ಅಯ್ಯಂಗಾರ್‌ರ ಮನೆ “ಕ್ಯಾಸಲ್ ಕರ್ನ್ ನ್ ” ತಲುಪಿದ. ಅವರ ದರ್ಶನಕ್ಕಾಗಿ ಕಾಯುತ್ತಿದ್ದ ಜನಸ್ತೋಮದಲ್ಲಿ ಒಂದಾಗಿ, ಐದು ಗಂಟೆಗಳ ತರುವಾಯ ತನ್ನ ಸರದಿ ಬಂದಾಗ, ಇವನ ಹೃದಯ ಆನಂದದಿಂದ ತುಂಬಿಹೋಗಿ ಕಂಠ ಗದ್ಗದಗೊಂಡು ಕಣ್ಣೀರು ಧಾರಾಕಾರವಾಗಿ ಹರಿಯತೊಡಗಿತು.

ಒಬ್ಬೊಬ್ಬರಾಗಿ ಎಲ್ಲರೂ ಹೊರಟುಹೋದರೂ ಸೂರಜ್‌ ರಾವ್ ಅಲ್ಲೇ ಕುಳಿತಿರುವುದನ್ನು ಕಂಡು ಸ್ವಾಮಿಜಿ ಆತನನ್ನು ಕರೆದು ಆತನ ಪೂರ್ವಾಪರಗಳನ್ನೆಲ್ಲ ವಿಚಾರಿಸಿದರು, ಹತ್ತಿರದಲ್ಲಿದ್ದ ಗುರುಭಾಯಿಗಳಿಗೆ ಹೇಳಿ ಆತನ ಊಟ, ಸ್ನಾನ, ವಿಶ್ರಾಂತಿಗಳ ವ್ಯವಸ್ಥೆಯನ್ನು ಮಾಡಿದರು. ನಂತರ ರಾವ್ ತನ್ನ ಮನಸ್ಸನ್ನು ತೆರೆದಿಟ್ಟು ಸಂಸಾರವನ್ನು ತ್ಯಜಿಸಲು ಅನುಮತಿ ಕೇಳಿದ. ವಿವೇಕಾನಂದರು, “ಈಗಲ್ಲ, ಕೊಲ್ಕತ್ತಾಗೆ ಬಂದು ನನ್ನನ್ನು ಕಾಣು” ಎಂದು ಹೇಳಿಬಿಟ್ಟರು. ಭಾರವಾದ ಹೃದಯದಿಂದ ಹಿಂತಿರುಗಿದ ರಾವ್‌ಗೆ ಸೈನಿಕ ದಳದಲ್ಲಿ ಎಂದಿನಂತೆ ಕೆಲಸ ಮಾಡಲು ಮನಸ್ಸೇ ಇಲ್ಲವಾಯಿತು, ಮೊದಲಿನ ಉತ್ಸಾಹ ಮಾಯವಾಯಿತು. ಆತನ ವಿಚಿತ್ರ ವರ್ತನೆಗೆ ಕಾರಣವರಿಯದ ವೈದ್ಯರು ಅದೊಂದು ಗುಣಪಡಿಸಲಾಗದ ಮನೋರೋಗವೆಂದು ಭಾವಿಸಿ ಅವನನ್ನು ಕೆಲಸದಿಂದ ವಜಾ ಮಾಡಿದ್ದರು.

ಜುಲೈ ೪, ೧೯೦೨ರಂದು ಸ್ವಾಮಿ ವಿವೇಕಾನಂದರು ಸಮಾಧಿಸ್ಥರಾದರು. ತಮ್ಮ ಗುರುಗಳೊಡನೆ ಆನಂದದಿಂದ ದಿನ ಕಳೆಯುತ್ತಿದ್ದ ನಿಶ್ವಯಾನಂದರ ಆನಂದವು ಇದ್ದಕ್ಕಿದ್ದಂತೆ ಕೊನೆಗೊಂಡಿತು. ಜೀವನವೇ ಶೂನ್ಯವಾಯಿತು. ಯಾರ ಸಮಜಾಯಿಷಿಗೂ ಬಗ್ಗದೆ ಮಠವನ್ನು ಬಿಟ್ಟು ಪರಿವ್ರಾಜಕರಾಗಿ ಹೊರಟೇಬಿಟ್ಟರು, ತೀವ್ರವಾದ ಆಧ್ಯಾತ್ಮಿಕ ಸಾಧನೆಯಲ್ಲಿ ಮನಸ್ಸನ್ನು ತೊಡಗಿಸಿಕೊಂಡು ಹರಿದ್ವಾರಕ್ಕೆ ಬಂದರು. ಅಲ್ಲಿ ವಿವೇಕಾನಂದರ ಮತ್ತೊಬ್ಬ ಶಿಷ್ಯರಾದ ಕಲ್ಯಾಣಾನಂದರನ್ನು ಭೇಟಿಯಾದರು. ಸ್ವಾಮಿ ಕಲ್ಯಾಣಾನಂದರು ಜೂನ್ ೧೯೦೧ರಲ್ಲಿ ತಮ್ಮ ಗುರುಗಳ ಆಣತಿಯಂತೆ ಹರಿದ್ವಾರದಲ್ಲಿ ಸಾಧುಗಳ ಔಷಧೋಪಚಾರಕ್ಕಾಗಿ ಒಂದು ಚಿಕ್ಕ ಬಾಡಿಗೆ ಮನೆಯಲ್ಲಿ ಈಗ ಪ್ರಸಿದ್ಧವಾಗಿರುವ “ಹೋವನ್ ಆಫ್ ಸರ್ವಿಸ್ ಪ್ರಾರಂಭಿಸಿದ್ದರು. ಸ್ವಾಮಿ ನಿಶ್ಚಯಾನಂದರಿಗೆ ತಮ್ಮ ಗುರುಗಳ ಮಾತು ನೆನಪಿಗೆ ಬಂತು: “ನಿನಗೆ ಯಾವ ಘನಕಾರ್ಯವನ್ನು ಮಾಡಲಾಗದಿದ್ದರೂ….. ಬಾಯಾರಿದವನಿಗೆ ಕುಡಿಯುವ ನೀರನ್ನಾದರೂ ನೀಡು. ಆದೂ ಒಂದು ಸತ್ಕಾರ್ಯವೇ.” ಇದನ್ನೇ ಧ್ಯೇಯವಾಗಿರಿಸಿಕೊಂಡು ಗುರು ಭಾಯಿಗಳಿಬ್ಬರೂ ಒಡಗೂಡಿ ಸೇವಾಕಾರ್ಯದಲ್ಲಿ ತಮ್ಮನ್ನು ತಾವೇ ಮರೆತರು.

ಭಿಕ್ಷೆ ಬೇಡಿ ತಂದ ಹಣದಿಂದ ರೋಗಿಗಳ ಶುಶ್ರೂಷೆಯನ್ನು ನಿಷ್ಠೆಯಿಂದ ಪ್ರಾರಂಭಿಸಿದರು. ರೋಗಿಗಳ ಊಟೋಪಚಾರ. ಬಟ್ಟೆಗಳನ್ನು ಒಗೆದು ಶುಚಿಗೊಳಿಸುವುದು, ಮಲಮೂತ್ರಗಳನ್ನು ಸ್ವಚ್ಛಗೊಳಿಸುವುದು, ಹಾಸಿಗೆ ಹಿಡಿದಿದ್ದವರ ಮಲಪಾತ್ರೆಯನ್ನು ಸ್ವಚ್ಛಗೊಳಿಸುವುದು, ರೋಗ ವಾಸಿಯಾಗದೆ ಸತ್ತವರ ಶವ ಸಂಸ್ಕಾರ ಇತ್ಯಾದಿ ಎಲ್ಲ ಕೆಲಸಗಳನ್ನು ಇಬ್ಬರೂ ಎಡಬಿಡದೆ ಒಡಗೂಡಿ ಮಾಡತೊಡಗಿದರು! ಇಷ್ಟೇ ಅಲ್ಲದೆ ಸ್ವಾಮಿ ನಿಶ್ಚಯಾನಂದರು ಪ್ರಾತಃಕಾಲವೇ ಎದ್ದು ಔಷಧದ ಪೆಟ್ಟಿಗೆಯನ್ನು ಹಿಡಿದು ಕಾಲ್ನಡಿಗೆಯಲ್ಲಿ ೨೮ ಕಿ.ಮೀ.ದೂರದ ಬೆಟ್ಟ ಹತ್ತಿ ತಪಸ್ಸಿನಲ್ಲಿ ನಿರತರಾಗಿದ್ದ ಸಾಧುಗಳ ಶುಶ್ರೂಷೆಯನ್ನು ಮಾಡುತ್ತಿದ್ದರು. ಸನ್ಯಾಸಿಗಳೆಂದರೆ ಕೆಲಸಗಳಿಂದ ವಿಮುಕ್ತರಾದವರೆಂಬ ತಪ್ಪು ಭಾವನೆಯನ್ನು ಇವರಿಬ್ಬರೂ ತಲೆಕೆಳಗು ಮಾಡಿದರು. ಇವರ ಸೇವಾಕಾರ್ಯವನ್ನು ನೋಡಿ ಬೆರಗಾದ ಜನರು ದೇವತೆಗಳ ವೈದ್ಯರಾದ ಅಶ್ವಿನಿ ಕುಮಾರರಿಗೆ ಇವರನ್ನೂ ಹೋಲಿಸುತ್ತಿದ್ದರು. ತಮ್ಮ ದೈನಂದಿನ ಕಾರ್ಯಗಳೆಲ್ಲ ಮುಗಿದ ನಂತರ ನಿಶ್ಚಯಾನಂದರು ಗಾಢವಾದ ಜಪ, ಧ್ಯಾನಾದಿಗಳಲ್ಲಿ ಮುಳುಗಿಹೋಗುತ್ತಿದ್ದರು. ಹಾಸಿಗೆಯಿಂದ ಎದ್ದಾಗ ಅವರು ಯಾರ ಮುಖವನ್ನೂ ನೋಡುತ್ತಿರಲಿಲ್ಲ, ಚೌಕದಿಂದ ಮುಖವನ್ನು ಮುಚ್ಚಿಕೊಂಡು ನೇರವಾಗಿ ಸ್ವಾಮಿಜಿಯ ಭಾವಚಿತ್ರದ ಬಳಿ ಹೋಗಿ ತಮ್ಮ ಚೌಕವನ್ನು ತೆಗೆಯುತ್ತಿದ್ದರು?

ಎಲ್ಲರಂತೆ ಸ್ವಾಮಿ ನಿಶ್ಚಯಾನಂದರೂ ಶರೀರಧರ್ಮಕ್ಕೆ ಸುಂಕವನ್ನು ತೆರಲೇಬೇಕಾಯಿತು. ೧೯೩೨ರಿಂದ ೧೯೩೪ ರವರೆಗೆ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದರು. ಒಮ್ಮೆ ಸೇವಾಶ್ರಮದ ಸಾಧು, ಬ್ರಹ್ಮಚಾರಿಗಳನ್ನು ಕರೆದು “ಈ ದಿನ ನನ್ನ ಸುತ್ತಲೂ ಧೂಪದೀಪಗಳನ್ನು ಬೆಳಗಿ ಆ ಮರದಡಿ ಒಂದು ಕುರ್ಚಿ ಇಡಿ. ಸ್ವಾಮೀಜಿ ಬರುತ್ತಾರೆ. ನನ್ನನ್ನು ಅಲ್ಲಿಗೆ ಕರೆದೊಯ್ಯಿರಿ” ಎಂದರು. ನಿಧಾನವಾಗಿ ಅವರನ್ನು ಅಲ್ಲಿಗೆ ಕರೆದೊಯ್ಯಲಾಯಿತು. ಸ್ವಲ್ಪ ಹೊತ್ತಾದ ಬಳಿಕ ಕಣ್ಣು ತೆರೆದು, “ನಡೆಯಿರಿ, ಸ್ವಾಮಿಜಿ ಹೊರಟುಹೋದರು” ಎಂದರು. ಇನ್ನೊಮ್ಮೆ ರಾತ್ರಿ ೨೩೦ಕ್ಕೆ ‘ವಿವೇಕಾನಂದರು ಬಂದರು, ಕುರ್ಚಿ ತನ್ನಿ” ಎನ್ನುತ್ತ ಮರದಡಿಗೆ ಓಡಿಹೋಗಿ ತಮ್ಮ ಹೆಗಲ ಮೇಲಿನ ಚೌಕವನ್ನು ಹಾಸಿ, ಹಾಗೇ ನೆಲದ ಮೇಲೆ ಬಿದ್ದು ಬಿಟ್ಟರು. ಸ್ವಾಮಿ ವಿವೇಕಾನಂದರು ತಮ್ಮ ಪ್ರಿಯ ಶಿಷ್ಯನಿಗೆ ಕೊನೆಗಾಲದಲ್ಲಿ ಎಷ್ಟೋ ದರ್ಶನಗಳನ್ನಿತ್ತರು! ಅಕ್ಟೋಬರ್ ೨೨, ೧೯೩೪, ಲಕ್ಷ್ಮೀ ಪೂಜೆಯ ಹುಣ್ಣಿಮೆಯಂದು ವಿವೇಕಾನಂದರ ಚಿತ್ರಪಟವನ್ನು ಎದೆಗೆ ಆನಿಸಿಕೊಂಡು ದೀರ್ಘ ಧ್ಯಾನದಲ್ಲಿ ಮುಳುಗಿಹೋದ ಸ್ವಾಮಿ ನಿಶ್ವಯಾನಂದರು ಮತ್ತೆ ಏಳಲೇ ಇಲ್ಲ!! “ಜೀವರ ಸೇವೆಯೇ ಶಿವ ಸೇವೆ” ಎಂಬ ವಿವೇಕಾನಂದರ ನುಡಿಯನ್ನು ಅಕ್ಷರಶಃ ಪಾಲಿಸಿ ಜ್ಞಾನಿಗಳು ಹಾಗೂ ಭಕ್ತರು ಯಾವ ಗುರಿಯನ್ನು ಜ್ಞಾನ, ಧ್ಯಾನಾದಿಗಳಿಂದ ತಲುಪುವರೋ ಆ ಗುರಿಯನ್ನು ತಮ್ಮ ಸೇವೆಯಿಂದ ತಲುಪಿದರು.

(ಮೂಲ: ವಿವೇಕಪ್ರಭ ಜನವರಿ 2007)