ಮಾನವನ ಎಲ್ಲಾ ಕ್ರಿಯೆಗಳನ್ನೂ ಆಶೋತ್ತರಗಳನ್ನೂ ಒಳಗೊಳ್ಳುವ ಒಂದು ವಿಶಾಲವಾದ ಧಾರ್ಮಿಕ ಕಲ್ಪನೆಯನ್ನು ನೀಡಿದವರು ಸ್ವಾಮೀಜಿ, ಕನ್ನಡದ ಸುಪ್ರಸಿದ್ಧ ಲೇಖಕರಾದಶ್ರೀಪ್ರಭುಶಂಕರ ಅವರು ವಿವೇಕಾನಂದರ ಧರ್ಮವೈಶಾಲ್ಯವನ್ನು ತಮ್ಮ ಲೇಖನದಲ್ಲಿ ಪ್ರತಿಬಿಂಬಿಸಿದ್ದಾರೆ.

ಪ್ರಖ್ಯಾತ ಫ್ರೆಂಚ್ ಲೇಖಕರಾದ ರೊಮ್ಮೆ ರೋಲಾ ಸ್ವಾಮಿ ವಿವೇಕಾನಂದರ ಸಮನ್ವಯ  ಪ್ರತಿಭೆಗೆ ಮಾತುಗಳಲ್ಲಿ ನಮನ ಸಲ್ಲಿಸಿದ್ದಾರೆ

‘ಸಮತೋಲನ (equilibrium) ಮತ್ತು ಸಂಯೋಜನೆ (synthesis) ಎಂಬ ಎರಡು ಪದಗಳಲ್ಲಿ ವಿವೇಕಾನಂದರ ಸೃಜನಶೀಲ ಪ್ರತಿಭೆಯನ್ನು ಸಂಕ್ಷೇಪಗೊಳಿಸಬಹುದು, ಆತ್ಮದತ್ತ ಕರೆ ದೊಯ್ಯುವ ಎಲ್ಲ ಪಥಗಳನ್ನೂ ಅವರು ಸ್ವೀಕರಿಸಿದರು : ಸಮಗ್ರ ಸ್ವರೂಪದಲ್ಲಿ ನಾಲ್ಕು ಯೋಗಗಳು, ತ್ಯಾಗ ಮತ್ತು ಸೇವೆ ಕಲೆ ಮತ್ತು ವಿಜ್ಞಾನ, ಧರ್ಮ ಮತ್ತು ಕರ್ಮ-ಹೀಗೆ ಅತ್ಯಂತ ಆಧ್ಯಾತ್ಮಿಕವಾದುದರಿಂದ ಹಿಡಿದು ಅತ್ಯಂತ ಲೌಕಿಕವಾದುದರವರೆಗೆ ಎಲ್ಲವನ್ನೂ ಅವರು ಒಪ್ಪಿಕೊಂಡರು. ಸಮಸ್ತ ಮಾನವ ಚೇತನದ ಎಲ್ಲ ಶಕ್ತಿಗಳ ಸಮನ್ವಯದ ಸಾಕಾರ ಸ್ವರೂಪಿಯಾಗಿದ್ದರು ಅವರು.’

ಧಾರ್ಮಿಕ ಸಮನ್ವಯವನ್ನು ಸಾಧಿಸಲು ಅವರು ಬೀಜ ಸ್ವರೂಪವಾದ ಅನೇಕ ಭಾವನೆಗಳ ಪ್ರವಾಹಗಳನ್ನು ಹರಿಸಿದರು. ಜೊತೆಗೆ ಪರಸ್ಪರ ವಿರುದ್ಧವಾದ, ನಿಜವಾಗಿ ಹೋರಾಟಕ್ಕೆ ಇಳಿದಿವೆಯೋ ಎಂಬಂತೆ ತೋರುತ್ತಿದ್ದ ಅನೇಕ ಅಂಶಗಳನ್ನು ಸಮನ್ವಯಗೊಳಿಸುವ ದಿಟ್ಟ, ಸಾಹಸಕ್ಕೆ ಅವರು ಕೈಹಾಕಿದರು. ಅವರಿಗೆ ಪೂರ್ವಪಶ್ಚಿಮ ದೇಶಗಳ ತತ್ವಶಾಸ್ತ್ರದಲ್ಲಿ ಅಪಾರ ಪಾಂಡಿತ್ಯವಿತ್ತು. ಅಂದಿಗೆ ವಿಜ್ಞಾನ ಸಾಧಿಸಿದ ಎಲ್ಲ ಸಿದ್ಧಾಂತಗಳ ಪರಿಚಯ ಅವರಿಗಿತ್ತು. ಅವರದ್ದು ಪ್ರಖರವಾದ ಮತಿ ಇವುಗಳ ಜೊತೆಗೆ ಮಾನವ ಸ್ವಭಾವದ ನಿಕಟವಾದ ಪರಿಚಯವನ್ನು ಅವರು ಪಡೆದುಕೊಂಡಿದ್ದರು. ಹೀಗಾಗಿ. ಲೌಕಿಕ-ಅಲೌಕಿಕಗಳ, ಕರ್ಮ-ಧರ್ಮಗಳ, ಸಂಪ್ರದಾಯವಾದಆಧುನಿಕತೆಗಳ ಧರ್ಮವಿಜ್ಞಾನಗಳ ಸಮನ್ವಯದ ಸೌಧವನ್ನು ವಿಚಾರದ ಭದ್ರವಾದ ಬುನಾದಿಯ ಮೇಲೆ ಕಟ್ಟುವುದು ಅವರಿಗೆ ಸಾಧ್ಯವಾಯಿತು. ನಿಜವಾಗಿ ಈ ದ್ವಂದ್ವಗಳ ನಡುವೆ ಮೇಲು ನೋಟಕ್ಕೇ ವೈರುಧ್ಯ ಕಾಣುತ್ತದೆ. ಅವುಗಳ ಸಮನ್ವಯ ಕಷ್ಟ ಸಾಧ್ಯವಾದ್ದು, ಏಕೆ ಅಸಾಧ್ಯವಾದದ್ದು ಎಂದೇ ತೋರುತ್ತದೆ. ಆದರೆ ಸ್ವಾಮೀಜಿಯದು ಧೀರ ಚೇತನ ಅದು ಒಂದೇ ಬೀಸಿನಲ್ಲಿ ಪ್ರಾಚೀನ-ಆಧುನಿಕತೆಗಳನ್ನು ಸಮನ್ವಯಗೊಳಿಸಲು ಶಕ್ತವಾಯಿತು. ಅಷ್ಟೇ ಅಲ್ಲ ಮುಂದಿನ ಶತಮಾನಗಳನ್ನು, ಅವುಗಳ ನಡುವೆ ಇದ್ದ ಅಸ್ಪಷ್ಟತೆಯ ತೆರೆಯನ್ನು ಸರಿಸಿ ನೋಡಲು ಸಮರ್ಥವಾಯಿತು. ಇದು ಅವರಿಗೆ ಸಮನ್ವಯದ ಹಾದಿಯಲ್ಲಿದ್ದ ಅನೇಕ ಜಟಿಲವಾದ ಸಮಸ್ಯೆಗಳ ಕಗ್ಗಂಟುಗಳನ್ನು ಬಿಡಿಸಲು ನೆರವು ನೀಡಿತು.

ಮೇಲೆ ಹೇಳಿದ ಜೋಡಿಗಳಲ್ಲಿ ಒಂದನ್ನು ಮಾತ್ರ ತೆಗೆದುಕೊಳೋಣ : ಕರ್ಮ ಮತ್ತು ಧರ್ಮದಲ್ಲಿ ಧರ್ಮ ಎಂಬುದನ್ನು ಪೂಜೆ, ಪುನಸ್ಕಾರ, ಆಧ್ಯಾತ್ಮಿಕ ಸಾಧನೆಗಳಾದ ಜಪ, ತಪ ಎಂಬ ಅರ್ಥಗಳನ್ನು ಬಳಸಲಾಗಿದೆ). ಕರ್ಮ ಎಂದರೆ ಕೆಲಸ ನೈಷ್ಕರ್ಮ್ಯ ಎಂದರೆ ಯಾವ ಕೆಲಸವನ್ನೂ ಮಾಡದಿರುವುದು ಅಧ್ಯಾತ್ಮ ಸಾಧಕರು ಕೆಲಸ ಮಾಡಬೇಕೇ ಬೇಡವೇ ಎನ್ನುವುದರ ವಿಷಯದಲ್ಲಿ ಅದರ ಪರವಾಗಿಯೂ ವಿರೋಧವಾಗಿಯೂ ವಾದ ವಿವಾದಗಳು ಶತಮಾನಗಳ ಕಾಲ ನಡೆದಿವೆ. ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇತ್ತ್ ಶತಂ ಸಮಾಃ – ಕೆಲಸ ಮಾಡುತ್ತಲೇ ನೂರು ವರ್ಷ ಬದುಕು ಬಯಸಬೇಕು ಮತ್ತು ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ವಮಾನಶುಃ –  ಅಮೃತತ್ವವು ದೊರೆಯುವುದು – ಕರ್ಮದಿಂದಲೂ ಅಲ್ಲ, ಸಂತಾನದಿಂದಲ್ಲ, ಹಣದಿಂದಲ್ಲ, ಆದರೆ ತ್ಯಾಗದಿಂದ ಮಾತ್ರ ಎನ್ನುವಂತಹ ಪರಸ್ಪರ ವಿರುದ್ದಾದ ಹೇಳಿಕೆಗಳು ಉಪನಿಷತ್ತುಗಳಲ್ಲೇ ಇವೆ. ಪ್ರತಿಯೊಬ್ಬ ಆಚಾರ್ಯರೂ ತಾನು ಸತ್ಯ ಎಂದು ನಂಬಿದ ನಿಲುವಿನಿಂದ ಈ ಹೇಳಿಕೆಗಳಿಗೆ ವ್ಯಾಖ್ಯಾನ ಮಾಡಿದ್ದಾರೆ. ಆದರೆ ಸ್ವಾಮಿ ವಿವೇಕಾನಂದರು ಈ ವಿರೋಧಾಭಾಸಗಳಲ್ಲಿರುವ ವೈರುಧ್ಯವನ್ನು ಹೇಗೆ ನಿವಾರಿಸಿದ್ದಾರೆ ಎಂಬುದರ ಅಧ್ಯಯನ ಕುತೂಹಲಕಾರಿಯೂ ಹೌದು, ಫಲಪ್ರದವಾದುದೂ ಹೌದು. ಏಕೆಂದರೆ ಅವರಿಗಿರುವ ಪೂಜಾಮೂರ್ತಿ ಒಬ್ಬನೇ – ತಪ್ಪಾಗಿ ಮಾನವ ಎಂದು ಕರೆಯಲ್ಪಡುತ್ತಿರುವ ದೇವರು-ಮಾನವ ಅವರ ವ್ಯಾಖ್ಯಾನ ಹೀಗಿದೆ: –

‘ಸಾಮಾನ್ಯ ಸಂನ್ಯಾಸಿ ಜಗತ್ತನ್ನು ತ್ಯಜಿಸುತ್ತಾನೆ ಹೊರಗೆ ನಡೆಯುತ್ತಾನೆ, ದೇವರನ್ನು ಕುರಿತು ಚಿಂತಿಸುತ್ತಾನೆ. ನಿಜವಾದ ಸಂನ್ಯಾಸಿ ಈ ಜಗತ್ತಿನಲ್ಲೇ ಇರುತ್ತಾನೆ, ಆದರೆ ಜಗತ್ತಿನ ಭಾಗವಾಗಿ ಅಲ್ಲ. ಯಾರು ಆತ್ಮನಿರಾಕರಣೆ ಮಾಡಿಕೊಳ್ಳುತ್ತಾರೋ, ಅವರು ಕಾಡಿನಲ್ಲಿ ವಾಸಿಸುತ್ತಾರೆ, ಆದರೆ ತೀರದ ಬಯಕೆಗಳನ್ನು ಮೆಲುಕು ಹಾಕುತ್ತಾ, ಅಂತಹವರು ನಿಜವಾದ ಸಂನ್ಯಾಸಿಗಳಲ್ಲ. ಜೀವನದ ಯುದ್ಧರಂಗದಲ್ಲಿರಿ. ಗುಹೆಯಲ್ಲಿ ವಾಸಿಸುತ್ತಾ, ಇಲ್ಲ ನಿದ್ದೆ ಮಾಡುತ್ತಾ ಯಾರೂ ಶಾಂತವಾಗಿರುವುದು ಸಾಧ್ಯ. ಕರ್ಮದ ಸುಳಿಯಲ್ಲಿ, ಹುಚ್ಚಿನಲ್ಲಿ ಇದ್ದು ಕೇಂದ್ರವನ್ನು ಸೇರಿ ನೀವು ಕೇಂದ್ರವನ್ನು ಸೇರಿದ್ದೇ ಆದರೆ ಯಾವುದೂ, ಯಾರೂ ನಿಮ್ಮನ್ನು ಅಳ್ಳಾಡಿಸಲು ಸಾಧ್ಯವಿಲ್ಲ’

ತಮ್ಮ ಅನನ್ಯ ಮಹಾನ್ ಗುರು ಶ್ರೀರಾಮಕೃಷ್ಣ ಪರಮಹಂಸರಿಂದ ಅವರು ದೀಕ್ಷೆ ಪಡೆದದ್ದು ಮಾನವನಲ್ಲಿರುವ ದೇವರ ಅಥವಾ ದೇವರೇ ಆದ ಮಾನವನ ಆರಾಧನೆಗೆ ಅದು ಹೊಸ ಪೂಜಾ ವಿಧಾನ ವ್ಯಕ್ತಿಯ ನೆಲೆಯಲ್ಲಿ ಅದು ಮಾನವನು ಇಂದ್ರಿಯಗಳ ಬಂಧನದಿಂದ ಬಿಡುಗಡೆ ಹೊಂದಲು ನೆರವಾಗುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಈ ಆರಾಧನೆಯು ಇಡೀ ರಾಷ್ಟ್ರವು ಒಂದು ಹೊಸ ನೈತಿಕ ಮತ್ತು ಆಧ್ಯಾತ್ಮಿಕ ವೈಭವವನ್ನು ಪಡೆಯಲು ಸಹಾಯ ಮಾಡುತ್ತದೆ. ಸ್ವಾಮೀಜಿ ತಮ್ಮ ಗುಡುಗಿನ ವಾಣಿಯಲ್ಲಿ ಮೊಳಗಿದರು:

‘ಸದ್ಯಕ್ಕೆ ಎಲ್ಲ ಪೊಳ್ಳು ದೇವರುಗಳೂ ನಮ್ಮ ಮನಸ್ಸಿನಿಂದ ಮರೆಯಾಗಲಿ ಈಗ ಜಾಗೃತವಾಗಿರುವ ದೇವತೆ ಒಂದೇ, ನಮ್ಮ ರಾಷ್ಟ್ರ, ಎತ್ತೆತ್ತಲೂ ಕೈ, ಎತ್ತೆತ್ತಲೂ ಕಾಲು, ಎತ್ತೆತ್ತಲೂ ಕಿವಿ (ಉಳ್ಳ) ಸರ್ವವ್ಯಾಪಿ ಆತ. ಉಳಿದ ಎಲ್ಲ ದೇವರುಗಳೂ ನಿದ್ರಿಸುತ್ತಿದ್ದಾರೆ. ಯಾವ ಪೊಳ್ಳು ದೇವರುಗಳ ಹಿಂದೆ ನಾವು ಹೋಗೋಣ? ನಮ್ಮ ಸುತ್ತ ಇರುವ ವಿರಾಟ್  ಪುರುಷನನ್ನು ಕಂಡು ಪೂಜಿಸಲಾರೆವೆ? ಅವನನ್ನು ಪೂಜಿಸಿದರೆ ಇತರ ಎಲ್ಲ ದೇವರುಗಳನ್ನು ಪೂಜಿಸಿದಂತೆಯೇ.’

ಹೀಗೆ ಕರ್ಮವನ್ನು ಕುರಿತ ಉಪನಿಷದ್ವಾಕ್ಯಗಳಿಗೆ ಸ್ವಾಮಿ ವಿವೇಕಾನಂದರು ಹೊಸ ಭಾಷ್ಯವನ್ನು ಬರೆದರು. ಕರ್ಮ-ಧರ್ಮಗಳ ಸಮನ್ವಯವನ್ನು ಸಾಧಿಸಿದ ಅವರ ಉಪದೇಶಗಳ ಅನನ್ಯತೆಯನ್ನು ಕುರಿತು ಸೋದರಿ ನಿವೇದಿತಾ ಹೀಗೆ ಬರೆದರು:

“ಸಂನ್ಯಾಸಿಯ ಕಿರುಕೋಣೆ ಅಥವಾ ದೇವಾಲಯದ ದ್ವಾರದಂತೆಯೇ ಅವರಿಗೆ ವ್ಯಾಸಂಗದ ಕೊಠಡಿ, ಉಳುವ ಹೊಲ, ಇವೂ ಕೂಡ ಭಗವಂತನ ಆರಾಧನೆಗೆ ಸತ್ಯವಾದ, ಭಕ್ತ ಭಗವಂತರ ಸಮಾಗಮಕ್ಕೆ ಅರ್ಹವಾದ ಸ್ಥಳಗಳಾಗಿ ಕಂಡುವು.”

ಸ್ವಾಮಿ ವಿವೇಕಾನಂದರು ಪ್ರಾಚೀನ ಋಷಿಗಳ ಸೂಕ್ತಗಳಲ್ಲಿ ಅಡಗಿರುವ ಅರ್ಥವನ್ನು ಹಿರಿದೆಳೆಯುವ ಶುಷ್ಕ ಭಾಷ್ಯಕಾರರಾಗಿರಲಿಲ್ಲ. ಅವರು ಅದಕ್ಕಿಂತ ಹೆಚ್ಚಿನದಾಗಿದ್ದರು. ಅವರೇ ಸ್ವಯಂ ಋಷಿಗಳಾಗಿದ್ದರು. ತಮ್ಮ ಮತ್ತು ತಮ್ಮ ಗುರುಗಳಾದ ದಕ್ಷಿಣೇಶ್ವರದ ದೇವಮಾನವ ಶ್ರೀರಾಮಕೃಷ್ಣರ ತಪಸ್ಸಿನಿಂದ ಉಜ್ಜ್ವಲಗೊಂಡ ಹೊಸ ಮಂತ್ರಗಳನ್ನು ಅವರು ನಮಗೆ ನೀಡಿದ್ದಾರೆ, ಆ ಮಂತ್ರಗಳು ಅರ್ಥವನ್ನು ತಮ್ಮಲ್ಲಿ ಅಡಗಿಸಿಕೊಂಡು ಹ್ರಸ್ವವಾಗಿ ಉಳಿಯಲಿಲ್ಲ; ಹೀಗಾಗಿ ಪರಸ್ಪರ ವಿರೋಧಿಗಳಾದ ವ್ಯಾಖ್ಯಾನಕ್ಕೆ ಅವಕಾಶ ಮಾಡಿಕೊಡುವಂಥವೂ ಆಗಿರಲಿಲ್ಲ. ಅವು ಸರಳವಾದ ಆದರೆ ಶಕ್ತಿಪೂರ್ಣವಾದ ಪದಗಳಿಂದ ಕೂಡಿವೆ. ಪ್ರತಿಯೊಂದು ಜೀವವೂ ಶಿವ’ ಎಂದು ಅವರ ಗುರುದೇವರು ಒತ್ತಿ ಹೇಳಿದ್ದರು.

ಶಿಷ್ಯನಾದರೋ ಅದನ್ನು ಅದರ ತಾರ್ಕಿಕ ಸಿದ್ಧಾಂತಕ್ಕೆ ಒಯ್ದರು. ಈ ದರ್ಶನದಿಂದ ಎಲ್ಲ ಕರ್ಮಗಳನ್ನೂ ಪೂಜೆಯಾಗಿ ಪರಿವರ್ತಿಸುವ ವಿರಾಟ್ ಆರಾಧನಾ ಪ್ರಕ್ರಿಯೆಯೊಂದು ಮೂಡಿತು, ‘ಭಗವಂತನನ್ನು ಪೂಜಿಸಲು ಒಂದು ವಿಗ್ರಹವನ್ನು ನೀನು ಕಂಡುಹಿಡಿಯಬಹುದು ಆದರೆ ಅದಕ್ಕಿಂತ ಉತ್ತಮವಾದ ವಿಗ್ರಹವೊಂದು- ಜೀವಂತ ಮಾನವ- ಈಗಾಗಲೆ ಅಸ್ತಿತ್ವದಲ್ಲಿದೆ. ದೇವರನ್ನು ಪೂಜಿಸಲು ನೀನೊಂದು ದೇವಾಲಯವನ್ನು ಕಟ್ಟಬಹುದು. ಅದು ಒಳ್ಳೆಯದೇ ಆಗಿರಬಹುದು ಆದರೆ ಅದಕ್ಕಿಂತ ಉತ್ತಮವಾದುದು, ಉನ್ನತತರವಾದದ್ದು ಮತ್ತೊಂದಿದೆ ಅದು ಮಾನವ ದೇಹ.’

ಸಂಪ್ರದಾಯವಾದಿಗಳಿಗೆ ಇದು ದೈವನಿಂದೆ ಎಂದು ತೋರಬಹುದು ಆದರೆ ಗುರುಶಿಷ್ಯರಿಬ್ಬರೂದೇವಸ್ಥಾನಗಳನ್ನು ಒಡೆಯುವವರೂ ಅಲ್ಲ, ವಿಗ್ರಹ ಭಂಜಕರೂ ಅಲ್ಲ ಎಂಬುದನ್ನು ಮರೆಯಬಾರದು. ಹಾಗೆ ನೋಡಿದರೆ ಗುರುಜೀವಮಾನ ಪರ್ಯಂತ ಜಗನ್ಮಾತೆ ಎಂದು ತಾವು ನಂಬಿದ ದೇವಿಯ ದೇವಸ್ಥಾನದಲ್ಲಿ ವಾಸಿಸಿದವರು, ಅದನ್ನೇ ತಮ್ಮಲೀಲಾಕ್ಷೇತ್ರವನ್ನಾಗಿ ಮಾಡಿಕೊಂಡವರು ಇಬ್ಬರೂ ನಿರಂತರ ಸಾಧನೆಯಿಂದ ಮಾನವನ ದಿವ್ಯತೆಯನ್ನು ಸಾಕ್ಷಾತ್ಕಾರ ಮಾಡಿಕೊಂಡವರು. ಹೀಗಾಗಿ ಅವರ ಈ ನೂತನ ತತ್ವವು ಜ್ಞಾನದ ಸಾರ ಎಂದು ನಾವು ಸ್ವೀಕರಿಸಬಹುದು. ವೈವಿಧ್ಯದಲ್ಲಿ ಏಕತೆ ಎಂಬುದನ್ನು ಸ್ವಾಮೀಜಿ ತಾವು ಪಡೆದ ದರ್ಶನದಿಂದ ಪ್ರತಿ ಪಾದಿಸಿದರು ಅವರು ಘೋಷಿಸಿದರು:

‘ಮೇಲ್ಪದರದ ಆಳಕ್ಕೆ ನೀವು ಇಳಿದರೆ ಮಾನವ ಮಾನವರ ನಡುವೆ, ಜನಾಂಗ ಜನಾಂಗಗಳ ನಡುವೆ ಮೇಲು ಕೀಳುಗಳೆಂದು ಕಾಣುವುದರ ನಡುವೆ, ಬಡವಬಲ್ಲಿದರ ನಡುವೆ ದೇವರು – ಮಾನವರ ನಡುವೆ, ಮಾನವರು ಪ್ರಾಣಿಗಳ ನಡುವೆ ಏಕತೆ ಇರುವುದನ್ನು ಕಾಣುತ್ತೀರಿ, ಇನ್ನೂ ಅಳಾತಿ ಆಳಕ್ಕೆ ಇಳಿದು ನೋಡಿದರೆ ಎಲ್ಲವೂ  ಒಂದೇ ಆತ್ಮದ ವಿವಿಧ ರೂಪಗಳಾಗಿರುವುದು ತಿಳಿಯುತ್ತದೆ ಇದನ್ನು ಅರಿತವನು ಯಾರನ್ನೂ ದ್ವೇಷಿಸುವುದಿಲ್ಲ.”

ನಮ್ಮ ಸುತ್ತ ದಟ್ಟಿಸಿರುವ ಕತ್ತಲೆ, ದುಃಖ ದುಮ್ಮಾನಗಳನ್ನು ಕಂಡು ಮಾನವತೆಯ ದುಃಖ, ದಾರಿದ್ರ್ಯಗಳನ್ನು ನಿವಾರಿಸಲು ಸ್ವಾಮಿ ವಿವೇಕಾನಂದರು ನಡೆಸಿದ ಮಹಾಪ್ರಯತ್ನವೇ ನಿಷ್ಫಲವಾಯಿತು ಎಂದು ಕೆಲವೊಮ್ಮೆ ನಮಗೆ ಅನ್ನಿಸಬಹುದು. ಆದರೆ ಮರುಭೂಮಿಯ ವೈಶಾಲ್ಯವಾಗಲಿ, ಅಲ್ಲಿ ಸುಡುತ್ತಿರುವ ಬಿಸಿಲಿನ ಝಳವಾಗಲಿ ಆ ಮರುಭೂಮಿಯಲ್ಲಿರುವ ತಂಪುದಾಣಗಳನ್ನು ಮರೆಯುವಂತೆ ಮಾಡಲು ಬಿಡಬಾರದು. ರಾಮಕೃಷ್ಣ ಮಹಾಸಂಘದ, ಶ್ರೀಮಾತೆ ಶಾರದಾದೇವಿಯವರ ಮಹಾಸಂಘದ ನೂರಾರು ಸಂನ್ಯಾಸಿ ಸಂನ್ಯಾಸಿನಿಯರು ಹಗಲಿರುಳು ದುಡಿದು ಸಹಸ್ರಾರು ಜೀವಿಗಳನ್ನು – ಶಿವ ಎಂದೇ ಪೂಜಿಸಿ ಸೇವೆಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲ ಸ್ವಾಮೀಜಿಯಿಂದ ಪ್ರೇರಣೆ ಪಡೆದ ಲಕ್ಷಾಂತರ ಜನರು ಸ್ವಾಮೀಜಿಯವರ ವಾಣಿಯಿಂದ ಸ್ಫೂರ್ತಿ ಪಡೆದು ಅಪಾರ ಸಂಖ್ಯೆಯ ಸೇವಾ ಕೇಂದ್ರಗಳನ್ನು ತೆರೆದು ಕೋಟ್ಯಂತರ ದೀನ, ದಲಿತ, ದುಃಖಿತರಿಗೆ ನೆರವಾಗುತ್ತಿದ್ದಾರೆ. ಆದರೆ ರಾಜಕೀಯ ಡೊಂಬರಾಟಗಳೂ, ಕೊಲೆ, ದರೋಡೆ, ಅಪಹರಣ ಮುಂತಾದ ನಿವಾರ್ಯ ಘಟನೆಗಳೂ ಪತ್ರಿಕಾ ಸುದ್ದಿಯಾಗುವಂತೆ ಶಾಂತ ನೀರಸ ಆದರೆ ಯಾತನಾಪೂರ್ಣವಾದ ಸೇವಾಕಾರ್ಯಗಳು ಪತ್ರಿಕೆಗಳ ದಪ್ಪಕ್ಷರದ ದೈನಂದಿನ ಸುದ್ದಿಯಾಗುವುದಿಲ್ಲ. ದೂರದ ಹಳ್ಳಿಗಳಲ್ಲಿ ಕಾಡುಗಳಲ್ಲಿ, ಪರ್ವತ ಪ್ರದೇಶಗಳಲ್ಲಿ, ಸ್ವಾರ್ಥತ್ಯಾಗ ಮಾಡಿದ ಸಹಸ್ರಾರು ಈಶ್ವರರು ಹೆಸರಿನ ಹಂಬಲವಿಲ್ಲದೆ ಊಹಿಸಲೂ ಸಾಧ್ಯವಿಲ್ಲದ ಕಷ್ಟಕಾರ್ಪಣ್ಯಗಳ ನಡುವೆ ತಮ್ಮ ಸೋದರ ಸೋದಯರಿಯರಿಗೆ ವಿದ್ಯೆ ಕಲಿಸುವುದರಲ್ಲಿ, ಊಟ ನೀಡುವುದರಲ್ಲಿ, ಬಟ್ಟೆ ವಸತಿಗಳನ್ನು ಒದಗಿಸುವುದರಲ್ಲಿ ತೊಡಗಿದ್ದಾರೆ. ಅವರನ್ನು ಕೇಳಿದಾಗ ಹೇಳುತ್ತಾರೆ-ತಮಗೆ ಶಕ್ತಿ ಸ್ಫೂರ್ತಿಗಳನ್ನು ನೀಡುತ್ತಿರುವುದು ಸ್ವಾಮಿ ವಿವೇಕಾನಂದರ ಕರ್ಮಪೂಜೆಗಳ ಸ್ಪೂರ್ತಿವಾಣಿ ಎಂದು.

ನಾವು ಸ್ವಾಮಿ ವಿವೇಕಾನಂದರ ನಿಜವಾದ ಆರಾಧಕರಾಗಿದ್ದರೆ, ನೊಂದ ಜೀವಿಗಳಿಗೆ ನೆರವಾಗುವುದನ್ನು ಪೂಜೆ, ಪುನಸ್ಕಾರ, ಜಪ, ತಪ, ಆರಾಧನೆ ಎಂದು ಭಾವಿಸಿ ದಿಕ್ಕಿನಲ್ಲಿ ಕಾರ್ಯನಿರತರಾಗಬೇಕು.

(ಮೂಲ: ವಿವೇಕಪ್ರಭ ಜನವರಿ 2001 – ಯುವಶಕ್ತಿ ವಿಶೇಷಾಂಕ)