ನುಡಿಮುತ್ತುಗಳು ೧

ಮೊಹಮ್ಮದ್ ಆಗಲಿ ಬುದ್ಧನಾಗಲಿ ಒಳ್ಳೆಯ ಮನುಷ್ಯನಾಗಿದ್ದ ಎಂಬುದರಿಂದ ನನಗಾಗಬೇಕಾದುದೇನು? ಅದು ನನ್ನ ಒಳ್ಳೆಯ ಅಥವಾ ಕೆಟ್ಟತನವನ್ನು ಬದಲಾಯಿಸುತ್ತದೆಯೇ? ನಾವು ನಮಗೋಸ್ಕರವಾಗಿಯೇ ಒಳ್ಳೆಯವರಾಗುವ ಜವಾಬ್ದಾರಿಯನ್ನು ತೆಗೆದುಕೊಳ್ಳೋಣ. ಯಾರೋ ಯಾವಾಗಲೋ ಹಿಂದೆ ಒಳ್ಳೆಯವರಾಗಿದ್ದರು ಎಂಬ ಕಾರಣಕ್ಕಲ್ಲ. (ಸ್ವಾಮಿ ವಿವೇಕಾನಂದರ ದಿವ್ಯಸ್ಮೃತಿ)

ನುಡಿಮುತ್ತುಗಳು ೨

ನಾವು ಏನಾಗಿರುವೆವೋ ಅದಕ್ಕೆ ನಾವೇ ಹೊಣೆ. ನಾವು ಏನಾಗಬೇಕೆಂದು ನಮ್ಮ ಇಚ್ಛೆಯಿರುವುದೊ ಹಾಗಾಗಲು ಶಕ್ತಿಯು ನಮ್ಮಲ್ಲಿಯೇ ಇರುವುದು. ಈಗ ನಾವೇನಾಗಿರುವೆವೋ ಅದು ನಮ್ಮ ಪೂರ್ವಕರ್ಮಗಳ ಫಲವಾಗಿದ್ದಲ್ಲಿ, ಮುಂದೆ ನಾವು ಹೇಗಾಗಬೇಕೆಂದು ನಮ್ಮ ಇಚ್ಚೆಯಿರುವುದೋ ಅದು ನಮ್ಮ ವರ್ತಮಾನ ಕರ್ಮದಿಂದಾಗಲು ಸಾಧ್ಯ. ಆದುದರಿಂದ ಕಾರ್ಯಮಾಡುವ ರೀತಿಯನ್ನು ತಿಳಿದುಕೊಳ್ಳಬೇಕು. (ಕೃ. ಶ್ರೇ. ೧.೩೩)

ನುಡಿಮುತ್ತುಗಳು ೩

ಪ್ರಪಂಚದಲ್ಲಿರುವ ಎಲ್ಲಾ ದೇಹಗಳಿಗಿಂತಲೂ ಅತ್ಯುತ್ತಮವಾದುದು ಈ ಮಾನವ ದೇಹ. ಮಾನವನೇ ಅತ್ಯುತ್ತಮವಾದ ಜೀವಿ. ಎಲ್ಲಾ ಪ್ರಾಣಿಗಳಿಗಿಂತಲೂ ಎಲ್ಲಾ ದೇವತೆಗಳಿಗಿಂತಲೂ, ಅತ್ಯುತ್ತಮನಾದವನೆ ಮಾನವನು. ಮಾನವನಿಗಿಂತ ಅತ್ಯುತ್ತಮನಾರೂ ಇಲ್ಲ. (ಕೃ. ಶ್ರೇ. ೨.೩೨೮)

ನುಡಿಮುತ್ತುಗಳು ೪

ಮಾನವನು ಎಲ್ಲಿಯವರೆಗೆ ಬಾಹ್ಯ ಮತ್ತು ಆಂತರಿಕ ಪ್ರಕೃತಿಯನ್ನು ಮೀರಿ ಹೋಗಲು ಹೋರಾಡುತ್ತಿರುವನೋ ಅಲ್ಲಿಯವರೆಗೆ ಅವನು ಮಾನವ... ಜನಾಂಗದ ಇತಿಹಾಸದ ಅಂತರಾಳದಲ್ಲಿರುವ ಅರ್ಥವನ್ನು ನಾವು ಗ್ರಹಿಸಿದ್ದೇ ಆದರೆ ಒಂದು ದೇಶದ ಅಭ್ಯುದಯವು ಇಂತಹ ಅನುಭವವನ್ನು ಪಡೆಯಬಲ್ಲ ವ್ಯಕ್ತಿಗಳ ಸಂಖ್ಯೆ ಹೆಚ್ಚುವುದರ ಮೇಲೆ ನಿಂತಿದೆ ಎಂಬುದು ವ್ಯಕ್ತವಾಗುತ್ತದೆ. ಪ್ರಯೋಜನ ದೃಷ್ಟಿಯವರು ಅನಂತತೆಯ ಅನ್ವೇಷಣೆಯನ್ನು ಎಷ್ಟೇ ವ್ಯರ್ಥವೆಂದರೂ, ಎಂದು ಈ ಅನ್ವೇಷಣೆ ನಿಲ್ಲುವುದೋ ಆಗ ಆ ದೇಶದ ಪ್ರಗತಿಯೂ ಕೊನೆಗೊಂಡಂತೆ. ಎಂದರೆ ಪ್ರತಿಯೊಂದು ಜನಾಂಗದ ಶಕ್ತಿಯ ಮೂಲವು ಅಧ್ಯಾತ್ಮದಲ್ಲಿದೆ. ಅಧ್ಯಾತಿಕತೆಯು ಇಳಿಮುಖವಾಗಿ ಲೌಕಿಕತೆಯದೇ ಮೇಲುಗೈಯಾದರೆ ಆ ಜನಾಂಗದ ಅವನತಿ ಅಂದೇ ಪ್ರಾರಂಭವಾದಂತೆಯೇ. (ಕೃ. ಶ್ರೇ. ೨.೯-೧೦)

ನುಡಿಮುತ್ತುಗಳು ೫

ಈ ಪ್ರಪಂಚ ಒಂದು ದೊಡ್ಡ ಗರಡಿಯ ಮನೆ. ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿರುವೆವು. (ಕೃ. ಶ್ರೇ. ೮.೪೦೫)

ನುಡಿಮುತ್ತುಗಳು ೬

ಹಿತವಾದ ಸಾಮಾಜಿಕ ಬದಲಾವಣೆಗಳೆಲ್ಲ ನಮ್ಮ ಆಂತರ್ಯದಲ್ಲಿ ಕೆಲಸ ಮಾಡುತ್ತಿರುವ ಆಧ್ಯಾತ್ಮಿಕ ಪ್ರವೃತ್ತಿಗಳ ಅಭಿವ್ಯಕ್ತಿಯೇ ಆಗಿವೆ. ಅವು ಬಲಶಾಲಿಯಾಗಿದ್ದಾರೆ, ಹೊಂದಿಕೊಂಡಿದ್ದರೆ, ಸಮಾಜ ಅದಕ್ಕೆ ಸರಿಯಾಗಿ ಅಣಿಯಾಗುವುದು. ಪ್ರತಿಯೊಬ್ಬನೂ ತನ್ನ ಮೋಕ್ಷಕ್ಕೆ ತಾನೇ ದುಡಿಯಬೇಕಾಗಿದೆ. ಬೇರೆ ಮಾರ್ಗವೇ ಇಲ್ಲ. ಇದರಂತೆಯೇ ದೇಶಗಳೂ ಕೂಡ... ಸಂಸ್ಥೆಯ ಕುಂದುಕೊರತೆಗಳನ್ನು ಎತ್ತಿತೋರುವುದು ಸುಲಭ. ಏಕೆಂದರೆ ಸಂಸ್ಥೆಗಳಲ್ಲೆಲ್ಲಾ ಅಪೂರ್ಣತೆ ಇದ್ದೇ ತೀರುವುದು. ಆದರೆ ಎಂತಹ ಸಂಸ್ಥೆಯಲ್ಲಿದ್ದರೂ ಉತ್ತಮನಾಗಲು ಯಾರು ಸಹಾಯ ಮಾಡಬಲ್ಲರೋ ಅಂತಹವರೇ ಮಾನವಕೋಟಿಯ ಹಿತಚಿಂತಕರು. ವ್ಯಕ್ತಿಗಳನ್ನು ಮೇಲೆತ್ತಿದರೆ, ಅವರಿರುವ ದೇಶ ಮತ್ತು ಸಂಸ್ಥೆಗಳು ಮೇಲೇರುವುದರಲ್ಲಿ ಸಂದೇಹವಿಲ್ಲ. (ಕೃ. ಶ್ರೇ. ೮.೪೧೦-೪೧೧)

ನುಡಿಮುತ್ತುಗಳು ೭

ನೀವು ಒಳಗಿನಿಂದ ಹೊರಗೆ ಬೆಳೆಯಬೇಕಾಗಿದೆ. ಯಾರೂ ನಿಮಗೆ ಭೋದಿಸಲಾರರು. ಯಾರೂ ನಿಮ್ಮನ್ನು ಆಧ್ಯಾತ್ಮಿಕ ಜೀವಿಗಳನ್ನಾಗಿ ಮಾಡಲಾರರು. ನಿಮಗೆ ನಿಮ್ಮ ಆತ್ಮನಲ್ಲದೆ ಬೇರೆ ಗುರುವಿಲ್ಲ. (ಕೃ. ಶ್ರೇ. ೮.೪೦೫)

ನುಡಿಮುತ್ತುಗಳು ೮

ಇದು ಮಾನವಸಹಜ ದೋಷ. ಸಾಧಾರಣವಾಗಿ ಜನರು ತಪ್ಪನ್ನೆಲ್ಲ ಇತರರ ಮೇಲೆ ಹೊರಿಸುವರು. ತಪ್ಪಿದರೆ ದೇವರು ಇಲ್ಲವೆ ದೆವ್ವ ಅಥವಾ ಅದೃಷ್ಟ ಎನ್ನುವರು. ಅದೃಷ್ಟವೆಲ್ಲಿದೆ? ಅದೃಷ್ಟ ಯಾವುದು? ನಾವು ಬಿತ್ತಿದುದನ್ನು ಬೆಳೆಯುತ್ತೇವೆ. ನಮ್ಮ ಅದೃಷ್ಟಕ್ಕೆ ನಾವೇ ಹೊಣೆ. ಇತರರನ್ನು ನಿಂದಿಸಬೇಕಾಗಿಲ್ಲ. ಹೊಗಳಬೇಕಾಗಿಲ್ಲ. ಗಾಳಿ ಬೀಸುತ್ತಿದೆ. ಯಾವ ದೋಣಿಗಳು ತಮ್ಮ ಪಟಗಳನ್ನು ಹರಡಿವೆಯೊ ಅವು ಗಾಳಿಗೆ ಮುಂದೆ ಹೋಗುವುವು. ಯಾವುವು ಪಟವನ್ನು ಹರಡಿಲ್ಲವೊ ಅವು ಗಾಳಿಯನ್ನು ಹಿಡಿಯಲಾರವು. ಇದು ಗಾಳಿಯ ತಪ್ಪೇ? (ಕೃ. ಶ್ರೇ. ೨.೧೫೧)

ನುಡಿಮುತ್ತುಗಳು ೯

ಜವಾಬ್ದಾರಿಯನ್ನೆಲ್ಲ ನೀವು ತೆಗೆದುಕೊಳ್ಳಿ. ಹೇಳಿ, 'ನಾನು ಅನುಭವಿಸುತ್ತಿರುವ ದುಃಖಕ್ಕೆಲ್ಲ ನಾನೇ ಕಾರಣ. ಆದಕಾರಣ ಈ ದುಃಖವನ್ನು ನಾನು ನಿವಾರಿಸಬೇಕಾಗಿದೆ.' ನಾನು ಸೃಷ್ಟಿಸಿದುದನ್ನು ನಾನು ನಾಶಮಾಡಬಲ್ಲೆ. ಇತರರು ಸೃಷ್ಟಿಸಿದುದನ್ನು ನಾನೆಂದಿಗೂ ನಾಶಮಾಡಲಾರೆ. ಎದ್ದುನಿಲ್ಲಿ! ಧೀರರಾಗಿ ! ಬಲಾಢ್ಯರಾಗಿ ! ಜವಾಬ್ದಾರಿಯನ್ನೆಲ್ಲಾ ನೀವು ವಹಿಸಿ, ನಿಮ್ಮ ಅದೃಷ್ಟಕ್ಕೆ ನೀವೇ ಹೊಣೆ ಎಂದು ತಿಳಿದುಕೊಳ್ಳಿ. ನಿಮಗೆ ಬೇಕಾದ ಶಕ್ತಿ ಸಹಾಯವೆಲ್ಲ ನಿಮ್ಮಲ್ಲೇ ಇದೆ ! (ಕೃ. ಶ್ರೇ. ೨.೧೫೨)

ನುಡಿಮುತ್ತುಗಳು ೧೦

ಆದಕಾರಣ ನಿಮ್ಮ ಭವಿಷ್ಯವನ್ನು ನೀವೇ ನಿರ್ಮಿಸಿಕೊಳ್ಳಿ. ಕಳೆದುದನ್ನು ಕುರಿತು ವ್ಯಥೆಪಡಬೇಡಿ. ಅನಂತ ಭವಿಷ್ಯ ನಿಮ್ಮೆದುರಿಗೆ ಇದೆ. ಪ್ರತಿಯೊಂದು ಮಾತು, ಆಲೋಚನೆ, ಕೆಲಸ ನಿಮಗಾಗಿ ಕಾದುಕೊಂಡಿದೆ. ಕೆಟ್ಟ ಆಲೋಚನೆ, ಕೆಟ್ಟ ಕೆಲಸ ಇವು ರಕ್ಕಸರಂತೆ ನಿಮ್ಮ ಮೇಲೆ ಬೀಳಲು ಕಾಯ್ದುಕೊಂಡಿರುವಂತೆ, ಒಳ್ಳೆಯ ಆಲೋಚನೆ, ಒಳ್ಳೆಯ ಕಾರ್ಯ ಇವು ಸಾವಿರಾರು ದೇವದೂತರ ಶಕ್ತಿಯೊಂದಿಗೆ ನಿಮ್ಮನ್ನು ಎಂದೆಂದಿಗೂ ರಕ್ಷಿಸಲು ಕಾಯ್ದುಕೊಂಡಿವೆ ಎನ್ನುವುದೇ ಉತ್ತೇಜನಕಾರಿಯಾದ ಭರವಸೆ. (ಕೃ. ಶ್ರೇ. ೨.೧೫೨)

ನುಡಿಮುತ್ತುಗಳು ೧೧

'ಏಕೆಂದು ಪ್ರಶ್ನೆ ಮಾಡುವುದು ನಮ್ಮ ಕೆಲಸವಲ್ಲ. ಮಾಡಿ ಮಡಿಯುವುದು ನಮ್ಮ ಕೆಲಸ.' ಸಂತೋಷದಿಂದಿರಿ. ಮಹಾಕಾರ್ಯಗಳನ್ನು ಮಾಡುವುದಕ್ಕೆ ದೇವರು ನಮ್ಮನ್ನು ಆರಿಸಿರುವನು. ನಾವು ಅದನ್ನು ಸಾಧಿಸಿಯೇ ಸಾಧಿಸುವೆವು. (ಕೃ. ಶ್ರೇ.೪.೯೭)

ನುಡಿಮುತ್ತುಗಳು ೧೨

ದುರದೃಷ್ಟವಶಾತ್ ಜೀವನದಲ್ಲಿ ಬಹುಮಂದಿ ಜನರು ಯಾವ ಆದರ್ಶವೂ ಇಲ್ಲದೆ ಅಜ್ಞಾನಾಂಧಕಾರದಲ್ಲಿ ತೊಳಲುತ್ತಿರುವರು. ಆದರ್ಶವಿರುವ ಮನುಷ್ಯ ಸಾವಿರ ತಪ್ಪುಗಳನ್ನು ಮಾಡಿದರೆ, ಆದರ್ಶ ಇಲ್ಲದವನು ಐವತ್ತು ಸಾವಿರ ತಪ್ಪುಗಳನ್ನು ಮಾಡುವನು. ಆದಕಾರಣ ಒಂದು ಆದರ್ಶವಿರುವುದು ಮೇಲು. (ಕೃ. ಶ್ರೇ.೨.೮೮)

ನುಡಿಮುತ್ತುಗಳು ೧೩

ಮಾನವ ಹೋರಾಡುವನು, ಪ್ರಕೃತಿಗೆ ವಿರೋಧವಾಗಿ ಹೋರಾಡುವನು. ಅವನು ಎಷ್ಟೋ ತಪ್ಪುಗಳನ್ನು ಮಾಡಿ ವ್ಯಥೆ ಪಡುವನು, ಆದರೆ ಕೊನೆಗೆ ಪ್ರಕೃತಿಯನ್ನು ಗೆದ್ದು ತನ್ನ ಸ್ವತಂತ್ರ ಸ್ವಭಾವವನ್ನು ಅರಿಯುವನು. ಅವನು ಮುಕ್ತನಾದ ಮೇಲೆ ಪ್ರಕೃತಿ ಅವನ ಗುಲಾಮನಾಗುವುದು. (ಕೃ. ಶ್ರೇ.೭.೩೯೨)

ನುಡಿಮುತ್ತುಗಳು ೧೪

ಮುಕ್ತಿ ಎಂದರೆ ಪ್ರಕೃತಿಯ ನಿಯಮಗಳಿಗೆ ತಲೆಬಾಗುವುದು ಎಂದು ನಾನು ಒಪ್ಪಿಕೊಳುವುದಿಲ್ಲ. ನನಗೆ ಇದರ ಅರ್ಥವೇ ಗೊತ್ತಾಗುವುದಿಲ್ಲ. ಮಾನವಪ್ರಗತಿಯ ಇತಿಹಾಸವನ್ನು ನೋಡಿದರೆ ಪ್ರಕೃತಿಯನ್ನು ಅವನು ವಿರೋಧಿಸಿದಾಗ ಮಾತ್ರ ಮಾನವನು ಪ್ರಗತಿಪರನಾದ ಎಂಬುದು ಗೊತ್ತಾಗುತ್ತದೆ. (ಕೃ. ಶ್ರೇ.೭.೩೧೮).

ನುಡಿಮುತ್ತುಗಳು ೧೫

ನಮ್ಮ ಜೀವನ ಒಳ್ಳೆಯದಾಗಿದ್ದರೆ, ಶುದ್ಧವಾಗಿದ್ದರೆ, ಆಗ ಮಾತ್ರ ಜಗತ್ತು ಒಳ್ಳೆಯದಾಗುವುದು;ಶುದ್ಧವಾಗುವುದು. ಇದೊಂದು ಪರಿಣಾಮ ; ನಾವು ಅದಕ್ಕೆ ಕಾರಣ. ಆದ್ದರಿಂದ ಮೊದಲು ನಾವು ಶುದ್ಧರಾಗೋಣ! ಪೂರ್ಣರಾಗೋಣ! (ಕೃ. ಶ್ರೇ.೬.೨೪೯)

ನುಡಿಮುತ್ತುಗಳು ೧೬

ಸುಮ್ಮನೆ ಜಗಳವಾಡಿ, ದೂರಿ ಪ್ರಯೋಜನವೇನು? ಇದರಿಂದ ಪರಿಸ್ಥಿತಿ ಉತ್ತಮವಾಗುವುದಿಲ್ಲ. ಯಾರು ತಮ್ಮ ಭಾಗಕ್ಕೆ ಬಂದ ಸಣ್ಣ ಕೆಲಸಗಳಿಗೆ ಗೊಣಗುತ್ತಾರೆಯೊ ಅವರು ಎಲ್ಲದಕ್ಕೂ ಗೊಣಗಾಡುವರು ; ಯಾವಾಗಲೂ ಗೊಣಗಾಡುತ್ತಾ ದುಃಖದಲ್ಲೇ ಜೀವಿಸುವರು. ಅವರು ಮುಟ್ಟಿದ್ದೆಲ್ಲಾ ಹಾಳು. ಆದರೆ ಒಬ್ಬನು ತನಗೆ ಬಂದ ಕರ್ತವ್ಯವನ್ನು ಚಕ್ರಕ್ಕೆ ಹೆಗಲುಕೊಟ್ಟು ಮಾಡುತ್ತಾ ಹೋದರೆ ಅವನಿಗೆ ಜ್ಞಾನ ಹೊಳೆಯುವುದು. ಉತ್ತಮೋತ್ತಮ ಕರ್ತವ್ಯಗಳು ಅವನ ಪಾಲಿಗೆ ಬರುವುವು. (ಕೃ.ಶ್ರೇ.೭.೩೦೯-೩೧೦)

ನುಡಿಮುತ್ತುಗಳು ೧೭

ಈ ಪ್ರಪಂಚ-ಯಂತ್ರದ ಚಕ್ರಗಳಿಂದ ದೂರ ಓಡದೆ, ಅದರೊಳಗೇ ಇದ್ದು ಕರ್ಮರಹಸ್ಯವನ್ನು ಅರಿಯಿರಿ. ಏಕೆಂದರೆ ಪ್ರಪಂಚದ ಯಂತ್ರದ ಒಳಗೇ ಇದ್ದು ಕರ್ಮವನ್ನು ಸರಿಯಾಗಿ ಮಾಡಿ ಅದರ ಹೊರಗೆ ಬರುವುದು ಸಾಧ್ಯ. ಆಗ ಮಾತ್ರ ಹೊರಗೆ ಬರುವ ತಂತ್ರ ತಿಳಿಯುತ್ತದೆ. (ಕೃ.ಶ್ರೇ.೧.೧೨೦)

ನುಡಿಮುತ್ತುಗಳು ೧೮

ನಾವು ಮಾಡುವ ಪ್ರತಿಯೊಂದು ಆಲೋಚನೆ ಮತ್ತು ಕ್ರಿಯೆ ಕೆಲವು ಕಾಲದ ಮೇಲೆ ಸೂಕ್ಷ್ಮವಾಗಿ ಬೀಜರೂಪಕ್ಕೆ ಬಂದಂತೆ ತೋರುವುವು. ಸೂಕ್ಷ್ಮ ದೇಹದಲ್ಲಿ ಅವ್ಯಕ್ತವಾಗಿದ್ದು, ಅವು ಕೆಲವು ಕಾಲದ ನಂತರ ಮೇಲೆದ್ದು ಫಲವನ್ನು ಕೊಡುವುವು. ಈ ಫಲಗಳೇ ಮನುಷ್ಯನ ಜೀವನದ ಸ್ಥಿತಿಯನ್ನು ನಿರ್ಧರಿಸುವುದು. ಹೀಗೆ ಮನುಷ್ಯನು ತನ್ನ ಸ್ಥಿತಿಗೆ ತಾನೇ ಕಾರಣನಾಗುವನು. ಮಾನವನು ತಾನಾಗಿಯೇ ಮಾಡಿಕೊಳ್ಳುವ ಬಂಧನಗಳಲ್ಲದೆ ಬೇರೆ ಯಾವುದರಿಂದಲೂ ಬದ್ಧನಾಗಿಲ್ಲ. (ಕೃ.ಶ್ರೇ.೨.೨೯೩)

ನುಡಿಮುತ್ತುಗಳು ೧೯

ನನ್ನ ಆದರ್ಶವನ್ನು ನಿಜವಾಗಿ ಬಹಳ ಸ್ವಲ್ಪ ಪದಗಳಲ್ಲಿ ವ್ಯಕ್ತಪಡಿಸಬಹುದು. ಅದೇ, ಮಾನವನಿಗೆ ತನ್ನ ದೈವತ್ವವನ್ನು ಬೋಧಿಸುವುದು ಮತ್ತು ಜೀವನದ ಪ್ರತಿಯೊಂದು ಚಲನವಲನದಲ್ಲೂ ಅದನ್ನು ಹೇಗೆ ವ್ಯಕ್ತಗೊಳಿಸಬೇಕೆಂಬುದನ್ನು ತಿಳಿಸುವುದು. (ಕೃ.ಶ್ರೇ.೪.೪೨೦)

ನುಡಿಮುತ್ತುಗಳು ೨೦

ಪಾವಿತ್ರ್ಯ, ಸಹನೆ, ಸತತಪ್ರಯತ್ನ ಜಯಗಳಿಸುವುದಕ್ಕೆ ಅತ್ಯಾವಶ್ಯಕವಾಗಿ ಬೇಕಾಗುವ ಮೂರು ಗುಣಗಳು. ಇವೆಲ್ಲಕ್ಕಿಂತ ಹೆಚ್ಚಾಗಿ ಪ್ರೀತಿ ಇರಬೇಕು. (ಕೃ.ಶ್ರೇ.೪.೨೧೩)

ನುಡಿಮುತ್ತುಗಳು ೨೧

ವಿಕಾಸವೇ ಜೀವನ, ಸಂಕೋಚವೇ ಮರಣ. ತನ್ನ ಸ್ವಂತ ಸುಖವನ್ನು ನೋಡಿಕೊಳ್ಳುತ್ತ ಯಾರು ಸ್ವಾರ್ಥಪರರಾಗಿ, ಸೋಮಾರಿಗಳಾಗಿ ಕಾಲ ಕಳೆಯುತ್ತಿರುವರೊ ಅವರಿಗೆ ನರಕದಲ್ಲಿಯೂ ಸ್ಥಳವಿಲ್ಲ. (ಕೃ.ಶ್ರೇ.೪.೨೨೨-೨೩)

ನುಡಿಮುತ್ತುಗಳು ೨೨

ತನ್ನ ಯುಕ್ತಿಯನ್ನು ಉಪಯೋಗಿಸಿ ಯಾವ ನಿರ್ಧಾರಕ್ಕೂ ಬರಲಾರದೆ ನಂಬಲಾರದ ಮಾನವನನ್ನು ಬೇಕಾದರೆ ದೇವರು ಮೆಚ್ಚಿಯಾನು. ಆದರೆ ಯುಕ್ತಿ ಎಂಬ ಅವನ ವರವನ್ನು ನಿರಾಕರಿಸಿ ಸುಮ್ಮನೆ ನಂಬುವವನನ್ನು ಅವನು ಮೆಚ್ಚಲಾರನೆಂದು ಭಾವಿಸುತ್ತೇನೆ.... ನಾವು ವಿಚಾರ ಮಾಡಬೇಕು. ಪ್ರತಿಯೊಂದು ದೇಶದಲ್ಲಿಯೂ ಹಿಂದಿನ ಶಾಸ್ತ್ರಗಳಲ್ಲಿ ಬರುವ ಮಹಾತ್ಮರು ಸಾಧುಸಂತರು ಹೇಳುವುದು ಸತ್ಯ ಎಂದು ಯುಕ್ತಿ ಒಪ್ಪಿಕೊಂಡರೆ ಆಗ ನಾವು ಅವರನ್ನು ನಂಬುತ್ತೇವೆ. ನಮ್ಮಲ್ಲಿಯೇ ಅಂತಹ ಮಹಾತ್ಮರನ್ನು ನೋಡಿದಾಗ ನಾವು ನಂಬುತ್ತೇವೆ. ಆಗ ಅವರು ವಿಶಿಷ್ಟ ವ್ಯಕ್ತಿಗಳಲ್ಲ, ಕೆಲವು ತತ್ತ್ವಗಳ ಪ್ರತಿನಿಧಿಗಳು ಎಂಬುದು ಗೊತ್ತಾಗುತ್ತದೆ. (ಕೃ.ಶ್ರೇ.೬.೩೬೯)

ನುಡಿಮುತ್ತುಗಳು ೨೩

ಗುರಿಯನ್ನು ಮುಟ್ಟಲು ಏಕೆ ಯತ್ನಿಸಬಾರದು? ಸೋಲಿನಿಂದ ನಾವು ಹೆಚ್ಚು ಬುದ್ಧಿವಂತರಾಗುವೆವು. ಕಾಲ ಅನಂತವಾಗಿದೆ. ಗೋಡೆಯನ್ನು ನೋಡು. ಗೋಡೆ ಎಂದಾದರೂ ಸುಳ್ಳು ಹೇಳೀತೆ? ಅದು ಯಾವಾಗಲೂ ಒಂದು ಗೋಡೆಯೇ ಆಗಿರುತ್ತದೆ. ಮನುಷ್ಯ ಸುಳ್ಳನ್ನು ಹೇಳುತ್ತಾನೆ. ಆದರೆ ಅವನು ಒಬ್ಬ ದೇವನೂ ಆಗಬಲ್ಲ. ಏನನ್ನಾದರೂ ಮಾಡುವುದು ಮೇಲು. ಅದು ತಪ್ಪಾದರೂ ಚಿಂತೆಯಿಲ್ಲ. ಇದು ಏನೂ ಮಾಡದೆ ಇರುವುದಕ್ಕಿಂತ ಮೇಲು. ಹಸು ಎಂದಿಗೂ ಸುಳ್ಳು ಹೇಳುವುದಿಲ್ಲ. ಆದರೆ ಅದು ಯಾವಾಗಲೂ ಹಸುವಾಗಿಯೇ ಉಳಿಯುವುದು. ಏನಾದರೂ ಮಾಡಿ.(ಕೃ.ಶ್ರೇ.೭.೨೯)

ನುಡಿಮುತ್ತುಗಳು ೨೪

ಎಡೆಬಿಡದೆ ಒಳ್ಳೆಯದನ್ನೇ ಮಾಡುತ್ತಾ ಹೋಗಿ ; ಒಳ್ಳೆಯದನ್ನೇ ಆಲೋಚಿಸುತ್ತಾ ಇರಿ. ನಮ್ಮ ಕೀಳು ಸ್ವಭಾವವನ್ನು ಅಡಗಿಸುವುದಕ್ಕೆ ಇದೊಂದೇ ದಾರಿ. ಯಾರನ್ನೂ ಕೆಟ್ಟವರೆಂದು ಹೇಳಬೇಡಿ, ಏಕೆಂದರೆ ಅವರು ಕೆಲವು ಅಭ್ಯಾಸಗಳ ಬಲದಿಂದ ಒಂದು ಶೀಲವನ್ನು ಪಡೆದಿದ್ದಾರೆ. ಈ ಶೀಲವನ್ನು ನಾವು ಬೇರೆ ಉತ್ತಮ ಅಭ್ಯಾಸಬಲದಿಂದ ತಿದ್ದಬಹುದು. ಶೀಲವೆಂದರೆ ಪುನರಾವರ್ತಿಸಿದ ಅಭ್ಯಾಸ. ಮತ್ತೆ ಮತ್ತೆ ರೂಢಿಸಿಕೊಂಡ ಒಳ್ಳೆಯ ಅಭ್ಯಾಸಗಳು ಮಾತ್ರ ನಮ್ಮ ಶೀಲವನ್ನು ತಿದ್ದಬಹುದು... ಬ್ರಹ್ಮಚರ್ಯದ ಅಭ್ಯಾಸದಿಂದ ಮೆದುಳಿನಲ್ಲಿ ವಿಶೇಷ ಶಕ್ತಿ ಉಂಟಾಗುವುದು. ಅಂತಹವರಲ್ಲಿ ಅದ್ಭುತವಾದ ಸಂಕಲ್ಪಶಕ್ತಿ ಇರುವುದು. (ಕೃ.ಶ್ರೇ.೨.೩೮೯, ೪೩೬)

ನುಡಿಮುತ್ತುಗಳು ೨೫

ಇದು ಕಡು ಕಷ್ಟ. ಆದರೆ ನಿರಂತರ ಸಾಧನೆಯ ಬಲದಿಂದ ಅಂತಹ ಸ್ಥಿತಿಯಿಂದ ಪಾರಾಗಬಹುದು. ನಾವೇ ವಶರಾಗುವವರೆಗೆ ನಮಗೆ ಏನೂ ಆಗಲಾರದು ಎಂಬುದನ್ನು ತಿಳಿಯಬೇಕು. (ಕೃ.ಶ್ರೇ.೬.೨೪೮)

ನುಡಿಮುತ್ತುಗಳು ೨೬

ನಾನು ಒಂದು ಸಲ ಹಿಮಾಲಯದಲ್ಲಿ ಹೋಗುತ್ತಿದ್ದೆ. ಮುಂದೆ ನಾವು ನಡೆದು ಹೋಗಬೇಕಾದ ದಾರಿ ಇತ್ತು. ನಾವು ಬಡ ಸಂನ್ಯಾಸಿಗಳಾದುದರಿಂದ ನಮ್ಮನ್ನು ಡೋಲಿಯಲ್ಲಿ ಹೊತ್ತುಕೊಂಡು ಹೋಗುವುದಕ್ಕೆ ಯಾರು ಸಿಕ್ಕಲಿಲ್ಲ. ನಾವು ಕಾಲುನಡಿಗೆಯಲ್ಲೇ ಹೋಗಬೇಕಾಯಿತು. ನಮ್ಮ ಜೊತೆಯಲ್ಲಿ ಮುದುಕನೊಬ್ಬನಿದ್ದ.... ಆ ವೃದ್ಧಸಾಧು 'ಅಬ್ಬಾ ಇದನ್ನು ಏರುವುದು ಹೇಗೆ? ನಾನಿನ್ನು ನಡೆಯಲಾರೆ, ಎದೆ ಒಡೆದು ಹೋಗುವುದು' ಎಂದ ನಾನು ಆತನಿಗೆ ನಿನ್ನ ಹಿಂದೆ ನೋಡು ಎಂದೆ. ಆತ ಹಿಂತಿರುಗಿ ನೋಡಿದ. ಆಗ ನಾನು, 'ಯಾವ ದಾರಿಯನ್ನು ನೀನು ನೋಡುತ್ತಿರುವೆಯೋ ಅದು ಈಗಾಗಲೇ ನೀನು ಸವೆಸಿದ್ದು, ಅದೇ ಕಾಲ್ದಾರಿ ಈಗ ನಿನ್ನ ಮುಂದೆ ಇರುವುದು. ಇನ್ನೂ ಸ್ವಲ್ಪ ಹೊತ್ತಿನಲ್ಲಿ ಅದು ನಿನ್ನ ಹಿಂದೆ ಬೀಳುವುದು' ಎಂದೇ. ಶ್ರೇಷ್ಠತಮ ವಸ್ತುಗಳು ನಿಮ್ಮ ಕಾಲುಕೆಳಗೆ ಇವೆ. ಏಕೆಂದರೆ ನೀವೇ ದಿವ್ಯ ತಾರೆಗಳು. (ಕೃ.ಶ್ರೇ.೭.೩೭೫)

ನುಡಿಮುತ್ತುಗಳು ೨೭

'ಇದು ನನ್ನ ದುರದೃಷ್ಟ ಎನ್ನುವವನು ಹೇಡಿ, ಮೂರ್ಖ' ಎನ್ನುವುದು ನಮ್ಮ ಸಂಸ್ಕೃತ ನಾಣ್ಣುಡಿಯೊಂದು. ಆದರೆ ಧೀರ 'ನನ್ನ ಅದೃಷ್ಟದ ಮಾತನ್ನು ಆಡುವರು. ಯುವಕರು ಸಾಧಾರಣವಾಗಿ ಜ್ಯೋತಿಷ್ಕರ ಹತ್ತಿರ ಬರುವುದಿಲ್ಲ. (ಕೃ.ಶ್ರೇ.೭.೩೭೨)

ನುಡಿಮುತ್ತುಗಳು ೨೮

ಯಾವನಾದರೂ ಮನುಷ್ಯನ ಶೀಲವನ್ನು ನೀವು ನಿಜವಾಗಿಯೂ ಪರೀಕ್ಷೆ ಮಾಡಲು ಬಯಸಿದರೆ, ಆತನು ಮಾಡುವ ದೊಡ್ಡ ಕಾರ್ಯಗಳಿಗೆ ಗಮನ ಕೊಡಬೇಡಿ. ಒಬ್ಬ ಹೆಡ್ಡನು ಕೂಡ ಎಂದಾದರೂ ಒಂದು ಸಮಯದಲ್ಲಿ ಶೂರನಾಗಬಹುದು. ಮನುಷ್ಯನು ಮಾಡುವ ಸಣ್ಣ ಕಾರ್ಯಗಳನ್ನು ನೋಡಿರಿ. ಅವೇ ದೊಡ್ಡ ಮನುಷ್ಯನ ನಿಜವಾದ ಶೀಲವನ್ನು ತಿಳಿಸತಕ್ಕಂತಹವು. ಅತ್ಯಂತ ಕೀಳುಮನುಷ್ಯನು ಕೂಡ ದೊಡ್ಡ ಅವಕಾಶ ಒದಗಿದಾಗ ಯಾವುದೋ ಒಂದು ಬಗೆಯ ದೊಡ್ಡದಾದ ಒಂದು ಕಾರ್ಯವನ್ನು ಮಾಡುವನು. ಆದರೆ ಯಾರ ಶೀಲ, ಆತನೆಲ್ಲೇ ಇರಲಿ, ಸರ್ವದಾ ಭವ್ಯವಾಗಿರುವುದೋ ಆತನೇ ನಿಜವಾಗಿಯೂ ಶ್ರೇಷ್ಠ ವ್ಯಕ್ತಿ. (ಕೃ.ಶ್ರೇ.೧.೩೧)

ನುಡಿಮುತ್ತುಗಳು ೨೯

ಜಗತ್ತಿಗೆ ನಾವು ನೀಡುವ ಪ್ರತಿಯೊಂದು ಸದ್ಭಾವನೆಯೂ ಮುಂದೆ ಶಾಶ್ವತವಾಗಿ ಅಲ್ಲಿ ನೆಲೆಸುವುದಲ್ಲದೆ, ಆ ಸಂಕೋಲೆಯಲ್ಲಿ ಒಂದು ಕೊಂಡಿಯನ್ನು ಮುರಿದು ನಾವು ಅತ್ಯಂತ ಪವಿತ್ರ ವ್ಯಕ್ತಿಗಳಾಗುವವರೆಗೆ ನಮ್ಮನ್ನು ಹೆಚ್ಚು ಹೆಚ್ಚು ಪವಿತ್ರರನ್ನಾಗಿ ಮಾಡುತ್ತಾ ಹೋಗುತ್ತದೆ. (ಕೃ.ಶ್ರೇ.೧.೧೨೨)

ನುಡಿಮುತ್ತುಗಳು ೩೦

ದ್ವೇಷ ಅಸೂಯೆಗಳನ್ನು ನೀವು ತೋರಿದರೆ ಅದು ಚಕ್ರಬಡ್ಡಿ ಸಹಿತ ನಿಮಗೆ ಹಿಂತಿರುಗಿ ಬರುವುದು. ಯಾವ ಶಕ್ತಿಯೂ ಅದನ್ನು ತಪ್ಪಿಸಲಾರದು. ಒಂದು ಸಲ ಅದನ್ನು ಚಲಿಸುವಂತೆ ಮಾಡಿದರೆ ಅದರ ಫಲವನ್ನು ಅನುಭವಿಸಬೇಕು. ಇದನ್ನು ನೆನಪಿನಲ್ಲಿಟ್ಟರೆ ನೀವು ಕೆಟ್ಟುದನ್ನು ಮಾಡುವುದನ್ನು ತಪ್ಪಿಸುತ್ತದೆ. (ಕೃ.ಶ್ರೇ.೨.೪೩೫)

ನುಡಿಮುತ್ತುಗಳು ೩೧

ಯಾವುದು ಪ್ರಕೃತಿಗೆ ವಿರೋಧವಾಗಿ ನಿಂತು ಪ್ರತಿಭಟಿಸುತ್ತದೆಯೋ ಅದೇ ಚೇತನ ; ಅದರಲ್ಲಿಯೇ ಚೈತನ್ಯದ ವಿಕಾಸವಿರುತ್ತದೆ. ಒಂದು ಸಾಮಾನ್ಯವಾದ ಇರುವೆಯನ್ನು ಕೊಲುವುದಕ್ಕೆ ಹೋಗಿ, ಅದೂ ತನ್ನ ಜೀವನವನ್ನು ಉಳಿಸಿಕೊಳುವುದಕ್ಕೆ ಒಮ್ಮೆ ಎದುರು ಬೀಳುತ್ತದೆ. ಎಲ್ಲಿ ಕ್ರಿಯೆ ಅಥವಾ ಪುರುಷಪ್ರಯತ್ನ ಇದೆಯೋ, ಎಲ್ಲಿ ಪ್ರತಿಭಟನೆ ಇದೆಯೋ, ಅಲ್ಲಿಯೇ ಜೀವದ ಚಿಹ್ನೆ, ಅಲ್ಲಿಯೇ ಚೈತನ್ಯದ ವಿಕಾಸ. (ಕೃ.ಶ್ರೇ.೮.೧೨)

ನುಡಿಮುತ್ತುಗಳು ೩೨

ಮನುಷ್ಯನಿಂದ ತಾನೇ ಹಣವು ಸಂಪಾದಿಸಲ್ಪಡುವುದು? ಹಣದಿಂದ ಎಂದಾದರೂ ಮನುಷ್ಯನಾಗುತ್ತಾನೆಂಬ ಮಾತನ್ನು ಯಾರಿಂದಲಾದರೂ ಕೇಳಿದ್ದೀರೇನು? ನೀವು ಬಾಯಲ್ಲಿ ಆಡುವುದೂ ಮನಸ್ಸಿನಲ್ಲಿ ಯೋಚಿಸುವುದೂ ಒಂದೇ ಆಗುವುದಾದರೆ, ಆಗ ಹಣವು ತನ್ನಷ್ಟಕ್ಕೆ ತಾನೇ ನೀರಿನಂತೆ ನಿಮ್ಮ ಹತ್ತಿರ ಬಂದು ಸುರಿಯುವುದು. (ಕೃ.ಶ್ರೇ.೮.೧೪)

ನುಡಿಮುತ್ತುಗಳು ೩೩

ಪ್ರಪಂಚದಲ್ಲಿ ಶುಭದ ಮಾರ್ಗ ಬಹಳ ದುರ್ಗಮ ಮತ್ತು ಕಡಿದು. ಇಲ್ಲಿ ಕೆಲವರು ಜಯಶೀಲರಾಗುವುದೇ ಒಂದು ಆಶ್ಚರ್ಯ. ಅನೇಕರು ಸೋಲುವುದು ಒಂದು ಆಶ್ಚರ್ಯವಲ್ಲ. ಸಾವಿರಾರು ಸಲ ಎಡಹಿದ ಮೇಲೆ ನಾವು ಒಂದು ಶೀಲವನ್ನು ಕಟ್ಟಬಹುದು. (ಕೃ.ಶ್ರೇ.೪.೪೩೩)

ನುಡಿಮುತ್ತುಗಳು ೩೪

ಪ್ರತಿಯೊಂದು ಕೆಲಸವೂ ಈ ಮೂರು ಅವಸ್ಥೆಗಳ ಮೂಲಕ ಸಾಗಿ ಹೋಗಬೇಕು-ನಿಂದೆ, ಅಡಚಣೆ, ಅನಂತರ ಸ್ವೀಕಾರ. ಯಾವ ಮನುಷ್ಯನು ತನ್ನ ಕಾಲಕ್ಕಿಂತ ಬಹಳ ಮುಂದಾದ ಭಾವನೆಗಳನ್ನು ಹೊಂದಿರುವನೋ ಅವನನ್ನು ಅಪಾರ್ಥಮಾಡಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಆದ್ದರಿಂದ ವಿರೋಧ ಮತ್ತು ಕಿರುಕುಳಗಳನ್ನು ನಾನು ಸ್ವಾಗತಿಸುತ್ತೇನೆ. ಕೇವಲ ನಾನು ಅಚಲನಾಗಿ ಪರಿಶುದ್ಧನಾಗಿರಬೇಕು ಮತ್ತು ಭಗವಂತನಲ್ಲಿ ತೀವ್ರವಾದ ಶ್ರದ್ಧೆಯನ್ನು ಹೊಂದಿರಬೇಕು. ಆಗ ಇವೆಲ್ಲ ಮಾಯಾವಾಗುತ್ತವೆ. (ಕೃ.ಶ್ರೇ.೪.೩೧೦)

ನುಡಿಮುತ್ತುಗಳು ೩೫

ಪ್ರತಿಯೊಂದು ಆತ್ಮವೂ ಕೂಡ ಸ್ವಭಾವತಃ ಪವಿತ್ರವಾದುದು. ಅಂತರಾಳದಲ್ಲಿರುವ ಈ ಪವಿತ್ರತೆಯನ್ನು ಬಾಹ್ಯ ಮತ್ತು ಆಂತರಿಕ ಪ್ರಕೃತಿಗಳ ನಿಗ್ರಹದಿಂದ ವ್ಯಕ್ತ ಮಾಡುವುದೇ ಜೀವನದ ಗುರಿ. ಇದನ್ನು ಕರ್ಮ-ಭಕ್ತಿ-ಜ್ಞಾನ-ಯೋಗ ಇವುಗಳಲ್ಲಿ ಯಾವುದಾದರೂ ಒಂದರ ಮೂಲಕವಾಗಲೀ, ಅಥವಾ ಎಲ್ಲಾ ಮಾರ್ಗಗಳ ಮೂಲಕವಾಗಲೀ ಸಾಧಿಸಿ ಮುಕ್ತರಾಗಿ. ಇದೇ ಧರ್ಮದ ಸರ್ವಸ್ವ. ಸಿದ್ಧಾಂತ, ಮತ, ಪೂಜೆ, ದೇವಸ್ಥಾನ, ವಿಗ್ರಹ-ಇವು ಅಷ್ಟೇನು ಪ್ರಮುಖ್ಯವಲ್ಲದ ವಿವರಗಳು. (ಕೃ.ಶ್ರೇ.೨.೪೩೦-೩೧ )

ನುಡಿಮುತ್ತುಗಳು ೩೬

ಪ್ರತಿಯೊಬ್ಬರೂ ತಮ್ಮ ಮಾರ್ಗವೇ ಶ್ರೇಷ್ಠ ಎಂದು ಭಾವಿಸುವರು. ಒಳ್ಳೆಯದು! ಆದರೆ ಇದನ್ನು ಜ್ಞಾಪಕದಲ್ಲಿಡಿ, ಅದು ನಿಮಗೆ ಮಾತ್ರ ಒಳ್ಳೆಯದಿರಬಹುದು. ಒಂದು ಆಹಾರ ಒಬ್ಬನಿಗೆ ಅಜೀರ್ಣವಾಗುವಂತಿದ್ದರೆ ಮತ್ತೊಬ್ಬನಿಗೆ ಅದು ಚೆನ್ನಾಗಿ ಜೀರ್ಣವಾಗಬಹುದು.ನಿಮ್ಮ ಮಾರ್ಗ ನಿಮ್ಮಗೆ ಸರಿಯಾಗಿದ್ದರೆ ಪ್ರತಿಯೊಬ್ಬರೂ ಇದನ್ನೇ ಅನುಸರಿಸಬೇಕೆಂಬ ನಿರ್ಣಯಕ್ಕೆ ಬರಬೇಡಿ. ಜಾಕ್‌ನ ಕೋಟು ಜಾನ್ ಮತ್ತು ಮೇರಿಗೆ ಸರಿಹೋಗುವುದೆಂದು ಆಲೋಚಿಸಬೇಡಿ. ಎಲ್ಲಾ ಅವಿದ್ಯಾವಂತ, ಅಸಂಸ್ಕೃತ, ಅವಿವೇಕಿಗಳೆನ್ನೆಲ್ಲ ಈ ರೀತಿ ಚಿಂತಿಸುವಂತೆ ಮಾಡಿರುವೆವು. ನಿಮಗೆ ನೀವೇ ವಿಚಾರಮಾಡಿ ನಾಸ್ತಿಕರಾಗಿ, ಜಡವಾದಿಗಳಾಗಿ ; ಅದಾದರೂ ಮೇಲು. ಬುದ್ಧಿಯನ್ನು ಉಪಯೋಗಿಸಿ. ಈ ವ್ಯಕ್ತಿಯು ಅನುಸರಿಸುತ್ತಿರುವ ಮಾರ್ಗ ಸರಿಯಿಲ್ಲ ಎಂದು ಹೇಳಲು ನಿಮಗೆ ಏನು ಅಧಿಕಾರವಿದೆ? ಅದು ನಿಮಗೆ ಸರಿಯಿಲ್ಲದೇ ಇರಬಹುದು, ಎಂದರೆ ನೀವು ಆ ಮಾರ್ಗವನ್ನು ಅನುಸರಿಸಿದರೆ ನೀವೂ ಅಧೋಗತಿಗೆ ಬರಬಹುದು. ಆದರೆ ಅವನೂ ಅದ್ಧೋಗತಿಗೆ ಬರುವನು ಎಂದು ಹೇಳುವುದಕ್ಕೆ ಆಗುವುದಿಲ್ಲ. ಅದಕ್ಕೆ ಶ್ರೀ ಕೃಷ್ಣ ಹೀಗೆ ಹೇಳುವುದು: ನೀವು ಜ್ಞಾನಿಗಳಾಗಿದ್ದು ಇನ್ನೊಬ್ಬನು ದುರ್ಬಲನೆಂದು ಕಂಡಾಗ ಅವನನ್ನು ಖಂಡಿಸಬೇಡಿ. ಸಾಧ್ಯವಾದರೆ ಅವನ ಮಟ್ಟಕ್ಕೆ ಹೋಗಿ ಅವನಿಗೆ ಸಹಾಯಮಾಡಿ. ಅವನು ಕ್ರಮೇಣ ಬೆಳೆಯಬೇಕಾಗಿದೆ. ನಾನು ಐದು ಗಂಟೆಯೊಳಗೆ ಅವನ ತಲೆಯೊಳಗೆ ಐದು ಬಕೆಟ್ ಜ್ಞಾನವನ್ನು ಸುರಿಯಬಹುದು. ಇದರಿಂದ ಏನು ಪ್ರಯೋಜನವಾಯಿತು? ಅವನು ಹಿಂದಿಗಿಂತ ಮತ್ತೂ ಕೆಡುವನು (ಕೃ.ಶ್ರೇ.೭.೧೦೮ -೯).

ನುಡಿಮುತ್ತುಗಳು ೩೭

ಎಲ್ಲರಿಗೂ 'ಏಳಿ ಎಚ್ಚರಗೊಳ್ಳಿ, ಇನ್ನು ನಿದ್ದೆ ಮಾಡಬೇಡಿ ; ಎಲ್ಲಾ ಅಭಾವಗಳನ್ನು ದುಃಖಗಳನ್ನೂ ನೀಗಿಸುವ ಶಕ್ತಿ ನಿಮ್ಮ ಒಳಗೇ ಇದೆ ; ಈ ಮಾತನ್ನು ನೀವು ದೃಢವಾಗಿ ನಂಬಿದರೆ ಈ ಶಕ್ತಿ ನಿಮ್ಮಲ್ಲಿ ಉದ್ಭುದ್ದವಾಗುತ್ತದೆ.' ಎಂದು ಹೇಳಿ.... ನೀವು ಹೀಗೆ ನಿಮ್ಮೊಳಗೆ ಅನಂತ ಶಕ್ತಿಯೂ, ಅಪಾರ ಜ್ಞಾನವೂ, ಅದಮ್ಯ ಉತ್ಸಾಹವೂ ಇದೆಯೆಂದು ಭಾವಿಸಿಕೊಂಡು ಒಳಗಿರುವ ಈ ಶಕ್ತಿಯನ್ನು ಎಬ್ಬಿಸಲು ಸಮರ್ಥರಾದರೆ ಆಗ ನೀವೂ ನನ್ನ ಹಾಗೆ ಆಗಬಲ್ಲಿರಿ.(ಕೃ.ಶ್ರೇ.೮.೧೩)