ನುಡಿಮುತ್ತುಗಳು ೧

ಆತಂಕರಹಿತರಾಗಿ. ಚಂಡಮಾರುತ ದೊಡ್ಡ ಮರಕ್ಕೆ ಹೊಡೆಯುತ್ತದೆ. 'ಬೆಂಕಿಯನ್ನು ಕೆದುಕುವುದರಿಂದ ಅದು ಚೆನ್ನಾಗಿ ಉರಿಯುತ್ತದೆ.' 'ತಲೆಯ ಮೇಲೆ ಏಟು ತಿಂದ ಹಾವು ತನ್ನ ಹೆಡೆ ಎತ್ತುವುದು' ಇತ್ಯಾದಿ. ಎಂದು ಹೃದಯದಲ್ಲಿ ಮಹಾ ವೇದನೆ ಉಂಟಾಗುವುದೋ, ಎಂದು ನಾಲ್ಕು ದಿಕ್ಕುಗಳಲ್ಲಿಯೂ ದುಃಖವೆಂಬ ಬಿರುಗಾಳಿ ಎದ್ದು ಬೀಸುವುದೋ, ಇನ್ನು ಬೆಳಕು ಕಾಣದಂತೆ ತೋರುವುದೋ, ಎಂದು ಭರವಸೆ ಮತ್ತು ಧೈರ್ಯ ಬತ್ತಿಹೋದಂತಿರುವುದೋ, ಆಗಷ್ಟೇ ಈ ಮಹಾ ಆಧ್ಯಾತ್ಮಿಕ ಅಲ್ಲಕಲ್ಲೋಲದಲ್ಲಿ, ಆಂತರಿಕ ಬ್ರಹ್ಮಜ್ಯೋತಿಯ ಸ್ಫೂರ್ತಿ ಮಿನುಗುವುದು. ಸುಖದಲ್ಲಿ ಹುಟ್ಟಿ, ಹಂಸತೂಲಿಕಾತಲ್ಪದ ಮೇಲೆ ಮಲಗಿ, ಒಂದು ತೊಟ್ಟು ಕಣ್ಣೀರನ್ನೂ ಸುರಿಸದೆ ಯಾರೇ ಆಗಲಿ ಎಂದಾದರೂ ಮಹತಿಯನ್ನು ಪಡೆದಿರುವರೆ, ಅಂದರೆ ತಮ್ಮಲ್ಲಿ ಅಂತರ್ಗತವಾಗಿರುವ ಬ್ರಹ್ಮನನ್ನು ಎಂದಾದರೂ ಪ್ರಕಾಶಗೊಳಿಸಿರುವರೆ?

ನುಡಿಮುತ್ತುಗಳು ೨

ಹೃದಯಕ್ಕೆ ಮತ್ತು ಮಿದುಳಿಗೆ ಘರ್ಷಣೆಯಾದಾಗ ಹೃದಯವನ್ನು ಅನುಸರಿಸಿ. ಏಕೆಂದರೆ ಬುದ್ಧಿಗೆ ಇರುವುದು ಒಂದೇ ಅವಸ್ಥೆ ಅಂದರೆ ಯುಕ್ತಿ ಅಥವಾ ವಿಚಾರ. ಆ ಎಲ್ಲೆಯಲ್ಲಿ ಮಾತ್ರ ಬುದ್ಧಿ ಕೆಲಸ ಮಾಡಬಲ್ಲದು. ಅದನ್ನು ಅದು ಅತಿಕ್ರಮಿಸಲಾರದು. ಹೃದಯವಾದರೋ ಬುದ್ಧಿ ಎಂದಿಗೂ ತಲುಪಲಾರದ ಅತ್ಯುನ್ನತ ಮಟ್ಟಕ್ಕೆ ಒಬ್ಬನನ್ನು ಕರೆದೊಯ್ಯಬಲ್ಲದು. ಹೃದಯ ಬುದ್ಧಿಗೆ ಅತೀತವಾದ ಸ್ಫೂರ್ತಿಯನ್ನು ಮುಟ್ಟಬಲ್ಲದು... ಹೃದಯವಂತರಿಗೆ 'ಬೆಣ್ಣೆ' ಸಿಕ್ಕುವುದು, ಭೌದ್ಧಿಕರಿಗೆ ಉಳಿಯುವುದು ಏನಿದ್ದರೂ 'ಮಜ್ಜಿಗೆ'.

ನುಡಿಮುತ್ತುಗಳು ೩

ನಾವೆಲ್ಲ ಪ್ರಮಾಣಿಕರಾಗಿರೋಣ. ಒಂದು ಆದರ್ಶವನ್ನು ಅನುಸರಿಸಲು ನಮಗೆ ಸಾಧ್ಯವಿಲ್ಲದೆ ಇದ್ದರೆ ನಮ್ಮ ದುರ್ಬಲತೆಯನ್ನು ಒಪ್ಪಿಕೊಳ್ಳೋಣ. ಯಾರೂ ಆದರ್ಶವನ್ನು ಕೆಳೆಗೆಳೆಯುವುದಕ್ಕೆ ಪ್ರಯತ್ನಿಸದಿರಲಿ.

ನುಡಿಮುತ್ತುಗಳು ೪

ನೀವು ನೆನಪಿನಲ್ಲಿಡಬೇಕಾದುದೇನೆಂದರೆ, ಮಾನವಕೋಟಿ ದೋಷದಿಂದ ಸತ್ಯದೆಡೆಗೆ ಹೋಗುತ್ತಿಲ್ಲ, ಅದು ಸತ್ಯದಿಂದ ಸತ್ಯದೆಡೆಗೆ ಹೋಗುತ್ತಿದೆ, ಅಥವಾ ನೀವದನ್ನು ಬೇಕಾದರೆ ನಿಮ್ನಸ್ತರದ ಸತ್ಯದಿಂದ ಉನ್ನತ ಸತ್ಯದೆಡೆಗೆ ಹೋಗುತ್ತಿರುವುದು ಎಂದು ಸ್ಪಷ್ಟತೆಗಾಗಿ ಹೇಳಬಹುದು. ಆದರೆ ಎಂದಿಗೂ ದೋಷದಿಂದ ಸತ್ಯಕ್ಕಲ್ಲ.

ನುಡಿಮುತ್ತುಗಳು ೫

ಜೀವಿ ಕಳೆದರ್ಜೆಯದಾದಷ್ಟೂ ಇಂದ್ರಿಯಗಳಲ್ಲೇ ಅದಕ್ಕೆ ಹೆಚ್ಚು ಹೆಚ್ಚು ಸಂತೋಷ. ತೋಳದಂತೆ ಅಥವಾ ನಾಯಿಯಂತೆ ಉತ್ಸಾಹದಿಂದ ಊಟ ಮಾಡುವ ಮಂದಿ ಬಹಳ ವಿರಳ. ನಾಯಿಯ ಅಥವಾ ತೋಳದ ಸುಖವೆಲ್ಲಾ ಇಂದ್ರಿಯಗಳಲ್ಲಿ ಕೇಂದ್ರೀಕೃತವಾದಂತೆ ಕಾಣಿಸುತ್ತದೆ. ಎಲ್ಲಾ ದೇಶಗಳಲ್ಲಿಯೂ ಕೆಳಮಟ್ಟದ ಮಾನವರಿಗೆ ಇಂದ್ರಿಯಸುಖಗಳಲ್ಲೇ ಸಂತೋಷ. ಸುಸಂಸ್ಕೃತರು, ವಿದ್ಯಾವಂತರು ಮಾತ್ರ ಉನ್ನತ ಚಿಂತನೆ, ತತ್ತ್ವ, ಕಲೆ, ವಿಜ್ಞಾನ ಇವುಗಳಲ್ಲಿ ಸಂತೋಷವನ್ನು ಪಡೆಯುವರು. ಆಧ್ಯಾತ್ಮಿಕತೆ ಇದಕ್ಕೂ ಮೇಲಿನ ಮಟ್ಟದಲ್ಲಿದೆ.

ನುಡಿಮುತ್ತುಗಳು ೬

ಪ್ರಪಂಚದ ಇತಿಹಾಸವೆಂದರೆ ಏಸು, ಬುದ್ಧ ಮುಂತಾದ ಕೆಲವು ಮಹಾತ್ಮರ ಜೀವನವಷ್ಟೆ. ಅನಾಸಕ್ತರು, ಕಾಮಶೂನ್ಯರು ಪ್ರಪಂಚಕ್ಕೆ ಹೆಚ್ಚು ಒಳ್ಳೆಯದನ್ನು ಮಾಡುವರು.

ನುಡಿಮುತ್ತುಗಳು ೭

ಜೀವನದಲ್ಲಿ ಯಶಸ್ವಿಯಾದ ಪ್ರತಿಯೊಬ್ಬ ವ್ಯಕ್ತಿಯ ಹಿಂದೆಯೂ ಅದ್ಭುತವಾದ ಪ್ರಾಮಾಣಿಕತೆ ಮತ್ತು ನಿರ್ವ್ಯಾಜತೆ ಇವೆ. ಇವೇ ಅವನ ಅನುಪಮ ಯಶಸ್ವಿಗೆ ಕಾರಣ. ಅವನು ಸಂಪೂರ್ಣ ನಿಃಸ್ವಾರ್ಥಿಯಲ್ಲದೆ ಇರಬಹುದು. ಆದರೂ ಅವನು ಅದರತ್ತ ಪ್ರವೃತ್ತಿಯುಳ್ಳವನು. ಸಂಪೂರ್ಣವಾಗಿ ನಿಃಸ್ವಾರ್ಥಿಯಾಗಿದಿದ್ದಾರೆ ಅವನು ಕ್ರಿಸ್ತ ಮತ್ತು ಬುದ್ಧ ಇವರಷ್ಟೇ ಅಪಾರ ಜಯವನ್ನು ಗಳಿಸುತ್ತಿದ್ದನು. ಎಷ್ಟರ ಮಟ್ಟಿಗೆ ನಿಃಸ್ವಾರ್ಥಪರತೆಯಿರುವುದೋ ಅಷ್ಟೇ ಯಶಸ್ಸನ್ನು ಪಡೆಯುವುದನ್ನು ಎಲ್ಲಾ ಕಡೆಗಳಲ್ಲಿಯೂ ನಾವು ನೋಡುವೆವು.

ನುಡಿಮುತ್ತುಗಳು ೮

ಸತ್ಯಸಂಧತೆ, ಪರಿಶುದ್ಧತೆ, ನಿಃಸ್ವಾರ್ಥತೆ-ಎಲ್ಲಿಯಾದರೂ ಇವು ಇದ್ದಲ್ಲಿ ಇವನ್ನು ಹೊಂದಿರುವವನನ್ನು ನಿರ್ಮೂಲ ಮಾಡುವ ಶಕ್ತಿ ಇಹಲೋಕದಲ್ಲಾಗಲಿ, ಪರಲೋಕದಲ್ಲಾಗಲಿ ಇಲ್ಲವೇ ಇಲ್ಲ. ಈ ಗುಣಗಳಿಂದ ಕೂಡಿರುವ ಒಬ್ಬನೇ ವ್ಯಕ್ತಿ ಏಕಾಕಿಯಾಗಿ ಇಡೀ ಪ್ರಪಂಚವೇ ಆತನ ವಿರುದ್ಧ ತಿರುಗಿಬಿದ್ದರು ಅದನ್ನು ಸಮರ್ಥವಾಗಿ ಎದುರಿಸಬಲ್ಲ.

ನುಡಿಮುತ್ತುಗಳು ೯

ಮುಂದುವರೆಯಿರಿ. ಯಾವುದೋ ತಪ್ಪನ್ನು ಮಾಡಿರುವಿರೆಂದು ಹಿಂದೆ ನೋಡದಿರಿ. ನೀವು ಆ ತಪ್ಪುಗಳನ್ನೆಲ್ಲಾ ಮಾಡದೇ ಇದ್ದಿದ್ದರೆ ಈಗಿನಂತೆ ಇರುತ್ತಿದ್ದೀರಿ ಎಂದು ಭಾವಿಸಿದಿರೇನು? ಆದ್ದರಿಂದ ನಿಮ್ಮ ತಪ್ಪುಗಳಿಗೆ ಕೃತಜ್ಞರಾಗಿರಿ. ಅವು ನಿಮಗೆ ಅರಿಯದ ದೇವದೂತರಂತೆ ಇವೆ. ಯಾತನೆಗೆ ಧನ್ಯವಾದ! ಸಂತೋಷಕ್ಕೂ ಧನ್ಯವಾದ! ನಿಮ್ಮ ಪಾಲಿಗೆ ಏನು ಬರುವುದೋ ಅದನ್ನು ಕುರಿತು ಚಿಂತಿಸಬೇಡಿ. ಆದರ್ಶವನ್ನು ಬಿಡಬೇಡಿ. ಮುನ್ನಡೆಯಿರಿ.

ನುಡಿಮುತ್ತುಗಳು ೧೦

ಇತರರಿಗೆ ಒಳ್ಳೆಯದನ್ನು ಮಾಡುವುದು ಧರ್ಮ, ಅವರನ್ನು ಹಿಂಸಿಸುವುದು ಅಧರ್ಮ. ಪೌರುಷ ಮತ್ತು ಶಕ್ತಿ ಇವೇ ಧರ್ಮ; ಹೇಡಿತನ ಮತ್ತು ದೌರ್ಬಲ್ಯವೇ ಅಧರ್ಮ. ಸ್ವಾತಂತ್ರ್ಯವೇ ಪುಣ್ಯ, ಬಂಧನವೇ ಪಾಪ. ಇತರರನ್ನು ಪ್ರೀತಿಸುವುದೇ ಪುಣ್ಯ, ದ್ವೇಷಿಸುವುದೇ ಪಾಪ. ಆತ್ಮನಲ್ಲಿ ಮತ್ತು ದೇವರಲ್ಲಿ ಶ್ರದ್ಧೆಯೇ ಪುಣ್ಯ, ಅಶ್ರದ್ಧೆಯೆ ಪಾಪ. ಏಕತೆಯನ್ನು ನೋಡುವುದೇ ಪುಣ್ಯ, ವೈವಿಧ್ಯವನ್ನು ನೋಡುವುದೇ ಪಾಪ.

ನುಡಿಮುತ್ತುಗಳು ೧೧

ಆಧುನಿಕ ಕಾಲದಲ್ಲಿ ಒಬ್ಬ ಮೋಸಸ್ ನನ್ನು, ಕ್ರಿಸ್ತನನ್ನು ಅಥವಾ ಬುದ್ಧನನ್ನು ಉದಾಹರಿಸಿದರೆ ಜನರು ನಗುವರು. ಆದರೆ ಹಾಕ್ಸ್ ಲೆ ಹೀಗೆ ಹೇಳಿರುವನು ಎಂದರೆ ಅನೇಕರಿಗೆ ಅದೇ ಸಾಕಾಗಿದೆ. ನಾವೆಲ್ಲಾ ಮೂಢನಂಬಿಕೆಯಿಂದ ಪಾರಾಗಿರುವೆವು ಅಲ್ಲವೇ! ಅದು ಧಾರ್ಮಿಕ ಮೂಢನಂಬಿಕೆ, ಇದು ವೈಜ್ಞಾನಿಕ ಮೂಢನಂಬಿಕೆ. ಹಿಂದಿನ ಕಾಲದ ಮೂಢನಂಬಿಕೆಗಳಿಂದ ಜೀವದಾನ ಮಾಡುವ ಮಹಾ ಆಧ್ಯಾತ್ಮಿಕ ಭಾವನೆಗಳು ಉದಯಿಸಿದವು. ಆಧುನಿಕ ಮೂಢನಂಬಿಕೆಗಳ ಮೂಲಕ ಕಾಮಲೋಭಗಳು ಜನಿಸುತ್ತಿವೆ. ಆ ಮೂಢನಂಬಿಕೆ ಭಗವದಾರಾಧನೆಯಾದರೆ, ಈ ಮೂಢನಂಬಿಕೆ ನಶ್ವರವಾದ ಐಶ್ವರ್ಯ, ಕೀರ್ತಿ, ಅಧಿಕಾರ-ಇವುಗಳ ಆರಾಧನೆಯಾಗಿದೆ. ಇಷ್ಟೇ ವ್ಯತ್ಯಾಸ.

ನುಡಿಮುತ್ತುಗಳು ೧೨

ನಿಜವಾಗಿ ಹೇಳುವುದಾದರೆ, ಸರ್ವಸಮಾನತೆ ಎಂಬುದು ಎಂದೂ ಈ ಪ್ರಪಂಚದಲ್ಲಿ ಇರಲಿಲ್ಲ, ಅದೆಂದೂ ಇರಲಾರದು. ಇಲ್ಲಿ ನಾವೆಲ್ಲರೂ ಹೇಗೆ ತಾನೇ ಸಮನಾಗಿರಲಾದೀತು! ಅಸಾಧ್ಯವಾದಂತಹ ಆ ಬಗೆಯ ಪೂರ್ಣಸಮತೆಯಿಂದ ಪೂರ್ಣಮೃತ್ಯು ಸಂಭವಿಸುವುದು.... ಒಬ್ಬನಿಗೂ ಮತ್ತೊಬ್ಬನಿಗೂ ಇರುವ ಭೇದಕ್ಕೆ ಕಾರಣವೇನು? ಅದು ಬಹುಪಾಲು ಮೆದುಳಿನವೀಕಾಸದ ಭೇದ. ಈಗಿನ ದಿನಗಳಲ್ಲಂತೂ ನಾವೆಲ್ಲರೂ ಸಮನಾದ ಮೇಧಾಶಕ್ತಿಯನ್ನು ಪಡೆದು ಜನ್ಮವೆತ್ತಿದ್ದೇವೆಂದು ಹುಚ್ಚನ ವಿನಾ ಮತ್ತಾವನೂ ಹೇಳನು.

ನುಡಿಮುತ್ತುಗಳು ೧೩

ಪ್ರತಿಯೊಬ್ಬನ ಮನೆಯ ಬಾಗಿಲಿಗೂ ಉನ್ನತವಾದ ಸದ್ವಿಚಾರಗಳನ್ನು ಕೊಂಡೊಯ್ಯುವ ಯಂತ್ರವೊಂದನ್ನು ಚಲಿಸುವಂತೆ ಮಾಡುವುದೇ ನನ್ನ ಜೀವನದ ಹೆಬ್ಬಯಕೆ. ಅನಂತರ ಪುರುಷರು, ಸ್ತ್ರೀಯರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲಿ. ಜೀವನದ ಮಹತ್ತಾದ ಪ್ರಶ್ನೆಗಳ ಬಗ್ಗೆ ನಮ್ಮ ಪೂರ್ವಜರು ಮತ್ತು ಅನ್ಯದೇಶೀಯರು ಏನು ಆಲೋಚಿಸಿರುವರು ಎಂಬುದನ್ನು ತಿಳಿಯಲಿ. ವಿಶೇಷವಾಗಿ ಇತರರು ಈಗ ಏನನ್ನು ಸಾಧಿಸುತ್ತಿದ್ದಾರೆ ಎಂಬುದನ್ನು ನೋಡಲಿ. ಅನಂತರ ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳಲಿ. ರಾಸಾಯನಿಕ ದ್ರವ್ಯಗಳನ್ನು ಸೇರಿಸುವುದಷ್ಟೇ ನಮ್ಮ ಕೆಲಸ. ಪ್ರಕೃತಿ ನಿಯಮದಂತೆ ಹರಳುಗಟ್ಟುವ ಕ್ರಿಯೆ ನಡೆಯುವುದು. ಕಷ್ಟಪಟ್ಟು ಕೆಲಸ ಮಾಡಿ. ಸ್ಥಿರತೆಯಿರಲಿ. 'ಧರ್ಮವನ್ನು ಅಲ್ಲಗಳೆಯದೆ ಜನಸಾಮಾನ್ಯರ ಉನ್ನತಿ ಆಗಬೇಕು' ಎಂಬ ಧ್ಯೇಯವನ್ನು ಸದಾ ನಿಮ್ಮ ಮುಂದಿಟ್ಟುಕೊಳ್ಳಿ.

ನುಡಿಮುತ್ತುಗಳು ೧೪

ಜನರು ನಿನ್ನನ್ನು ಸ್ತುತಿಸಲಿ ನಿಂದಿಸಲಿ, ನಿನಗೆ ಅದೃಷ್ಟಲಕ್ಷ್ಮಿಯು ಒಲಿಯಲಿ ಅಥವಾ ನಿನ್ನಿಂದ ದೂರವಾಗಲಿ, ನಿನಗೆ ಇಂದೇ ಮರಣವೊದಗಲಿ ಅಥವಾ ಮತ್ತೊಂದು ಯುಗದಲ್ಲೇ ಒದಗಲಿ, ಸತ್ಯ ಪಥದಿಂದ ನೀನು ಕದಲದಂತೆ ಎಚ್ಚರವಹಿಸು. ಎಷ್ಟೆಷ್ಟೋ ಬಿರುಗಾಳಿ ಸುಂಟರಗಾಳಿಗಳನ್ನು ತಟಾಯಿಸಿದ ಮೇಲೆ ಶಾಂತಿರಾಜ್ಯವು ದೊರಕುವುದು! ಯಾರ್‍ಯಾರು ಎಷ್ಟೆಷ್ಟು ಮಹತಿಯುಳ್ಳವರಾಗಿರುತ್ತಾರೆಯೋ ಅವರೆಲ್ಲ ಅಷ್ಟೇ ಕಠಿಣವಾದ ಅಗ್ನಿಪರೀಕ್ಷೆಗೆ ಸಿಲುಕಿರುತ್ತಾರೆ.

ನುಡಿಮುತ್ತುಗಳು ೧೫

ನನ್ನ ದೃಢವಾದ ನಂಬುಗೆ ಏನೆಂದರೆ, ಕ್ಷುದ್ರವಾದ ಕುಟಿಲ ತಂತ್ರಗಳಿಂದ ಜಗತ್ತಿನಲ್ಲಿ ಯಾವ ಮಹತ್ಕಾರ್ಯವೂ ಆಗುವುದಿಲ್ಲ.

ನುಡಿಮುತ್ತುಗಳು ೧೬

ನಾನು ಇದನ್ನು ಜೀವನದಲ್ಲಿ ನೋಡಿದ್ದೇನೆ- ಯಾರು ತನ್ನ ವಿಷಯದಲ್ಲಿ ಅನವಶ್ಯಕವಾದ ಮುಂಜಾಗರೂಕತೆ ವಹಿಸುವನೊ ಅವನು ಹೆಜ್ಜೆ ಹೆಜ್ಜೆಗೂ ಅಪಾಯದಲ್ಲಿ ಸಿಕ್ಕಿಬೀಳುವನು. ಯಾರು ತನ್ನ ಗೌರವಕ್ಕೆ ಖ್ಯಾತಿಗೆ ಹಾನಿ ತಗಲುವುದು ಎಂದು ಹೆದರುವನೋ ಅವನು ಕೇವಲ ಅವಮಾನವನ್ನೇ ಹೊಂದುವನು. ಯಾರು ಯಾವಾಗಲೂ ನಷ್ಟಕ್ಕೆ ಹೆದರುವನೋ ಅವನು ಯಾವಾಗಲೂ ನಷ್ಟವನ್ನೇ ಅನುಭವಿಸುವನು.

ನುಡಿಮುತ್ತುಗಳು ೧೭

ನನ್ನ ಜೀವನದ ಉದ್ದೇಶವೇನೆಂಬುದು ನನಗೆ ಗೊತ್ತಿದೆ. ನನ್ನ ವಿಷಯದಲ್ಲಿ ಯಾವ ನಿಷ್ಕಪಟತೆಯೂ ಇಲ್ಲ. ನಾನು ಭಾರತಕ್ಕೆ ಸೇರಿರುವಷ್ಟೆ ವಿಶ್ವಕ್ಕೂ ಸೇರಿರುವೆನು... ಕೃತವಿದ್ಯರಾದ ಹಿಂದೂಗಳಲ್ಲಿ ಮಾತ್ರ ನೀನು ನೋಡುತ್ತಿರುವಂತೆ, ಜಾತಿವೈಷಮ್ಯದಲ್ಲಿ ಸಿಲುಕಿಕೊಂಡು ಮೂಢರಾಗಿ, ನಿರ್ದಯರಾಗಿ, ಕಪಟಿಗಳಾಗಿ, ನಾಸ್ತಿಕರಾದ ಹೇಡಿಗಳಂತೆ ಜೀವಿಸಿ ಸಾಯಲು ನಾನು ಜನ್ಮತಾಳಿರುವೆನೆಂದು ತಿಳಿದಿರುವಿಯಾ? ಹೇಡಿತನವನ್ನು ನಾನು ದ್ವೇಷಿಸುವೆನು. ಹೇಡಿಗಳೊಂದಿಗೆ ಮತ್ತು ಬುದ್ಧಿಹೀನತೆಯ ಕ್ಷುದ್ರ ರಾಜಕೀಯದೊಂದಿಗೆ ನನಗೆ ಯಾವ ಸಂಬಂಧವೂ ಇಲ್ಲ. ಅಂತಹ ಯಾವ ರಾಜಕೀಯದಲ್ಲಿಯೂ ನನಗೆ ನಂಬಿಕೆ ಇಲ್ಲ. ಜಗತ್ತಿನಲ್ಲಿ ದೇವರು ಮತ್ತು ಸತ್ಯ ಇವೆರಡೇ ರಾಜತಂತ್ರಗಳು. ಉಳಿದುವೆಲ್ಲವೂ ಕೆಲಸಕ್ಕೆ ಬಾರದವು.

ನುಡಿಮುತ್ತುಗಳು ೧೮

ನನಗೆ ಆಧ್ಯಾತ್ಮಿಕ ಜೀವನದಲ್ಲಿ ಆನಂದ ದೊರಕದಿದ್ದರೆ ಇಂದ್ರಿಯಗಳ ಸುಖವನ್ನರಸಿಕೊಂಡು ಹೋಗಲೇ? ಅಮೃತ ಸಿಕ್ಕಲಿಲ್ಲವೆಂದು ಚರಂಡಿಯ ನೀರನ್ನು ಕುಡಿಯಲೇ?

ನುಡಿಮುತ್ತುಗಳು ೧೯

ಶುದ್ಧಾತ್ಮರು ನೀವು. ಏಳಿ ಜಾಗ್ರತರಾಗಿ, ಹೇ ಸರ್ವಶಕ್ತರೇ, ನಿದ್ರೆ ನಿಮಗೆ ತರವಲ್ಲ. ದುಃಖಿಗಳೆಂದೂ, ದುರ್ಬಲರೆಂದೂ ಅಧಮರೆಂದೂ ನೀವು ಆಲೋಚಿಸದಿರಿ. ಎದ್ದೇಳಿ, ಜಾಗ್ರತರಾಗಿ. ನಿಮ್ಮ ನೈಜಸ್ವರೂಪವನ್ನು ಪ್ರಕಟಪಡಿಸಿ. ನೀವು ಪಾಪಿಗಳೆಂದು ಯೋಚಿಸುವುದು ನಿಮಗೆ ತರವಲ್ಲ. ದುರ್ಬಲರು ನೀವೆಂದು ಭಾವಿಸದಿರಿ. ಇವನ್ನು ನಿಮ್ಮ ಮನಸ್ಸಿಗೆ ಹೇಳಿಕೊಳ್ಳಿ. ಪ್ರಪಂಚಕ್ಕೆ ಸಾರಿ. ಎಂತಹ ಒಂದು ಕ್ರಿಯಾತ್ಮಕವಾದ ಪರಿಣಾಮ ಉಂಟಾಗುತ್ತದೆಂಬುದನ್ನು ನೋಡಿ. ವಿದ್ಯುತ್ ಮಿಂಚಿನಂತೆ ಹೇಗೆ ಎಲ್ಲವೂ ಪ್ರಕಾಶಗೊಳ್ಳುತ್ತದೆಂಬುದನ್ನು, ಹೇಗೆ ಎಲ್ಲವೂ ಬದಲಾಗುವುದೆಂಬುದನ್ನು ನೋಡಿ. ಇದನ್ನು ಮಾನವ ಜನಾಂಗಕ್ಕೆ ಸಾರಿ. ಅವರ ಶಕ್ತಿಯನ್ನು ಅವರಿಗೆ ತೋರಿ.

ನುಡಿಮುತ್ತುಗಳು ೨೦

ನನ್ನ ಆಸೆ ಭರವಸೆಗಳೆಲ್ಲ ನಿಮ್ಮಂತಿರುವ ಜನಸಾಮಾನ್ಯರನ್ನು ಅವಲಂಬಿಸಿವೆ. ನನ್ನ ಭಾವನೆಗಳನ್ನು ಸರಿಯಾಗಿ ತಿಳಿದುಕೊಂಡು ಅದಕ್ಕನುಗುಣವಾಗಿ ನಿಮ್ಮನ್ನು ನೀವು ಕೆಲಸದಲ್ಲಿ ತೊಡಗಿಸಿಕೊಳ್ಳಿ... ನಾನು ನಿಮಗೆ ಆಗಲೇ ಸಾಕಷ್ಟು ಸಲಹೆ ನೀಡಿರುವೆ. ಕಡೆಯಪಕ್ಷ ಒಂದನ್ನಾದರೂ ಕಾರ್ಯರೂಪಕ್ಕೆ ತನ್ನಿ. ನನ್ನ ಮಾತುಗಳನ್ನು ಆಲಿಸಿದ್ದು ಸಾರ್ಥಕವಾಯಿತೆಂಬುದನ್ನು ಜಗತ್ತಿಗೆ ತೋರಿಸಿ.