ನುಡಿಮುತ್ತುಗಳು ೧

ಭರತಖಂಡ ನಾಶವಾಗುವುದೆ? ಆಗ ಪ್ರಪಂಚದಿಂದ ಅಧ್ಯಾತ್ಮಿಕತೆಯೆಲ್ಲ ಮಾಯವಾಗುವುದು ; ನೈತಿಕೋನ್ನತಿಯೆಲ್ಲ ನಿರ್ನಾಮವಾಗುವುದು. ಧಾರ್ಮಿಕ ಭಾವನೆಗಳಿಗೆ ತೋರುವ ಹೃತ್ಪೂರ್ವಕ ಸಹಾನುಭೂತಿ ಮಾಯವಾಗುವುದು. ಎಲ್ಲಾ ಭವ್ಯ ಉದ್ದೇಶಗಳೂ ಮಾಯವಾಗುವುದು. ಅದರ ಸ್ಥಳದಲ್ಲಿ ಕಾಮ ಮತ್ತು ಭೋಗವೆಂಬ ಸ್ತ್ರೀಪುರುಷ ದೇವರು ಆಳುವರು. ಹಣವೇ ಪುರೋಹಿತನ ಸ್ಥಾನದಲ್ಲಿ, ಮೋಸ ಬಲಾತ್ಕಾರಗಳ ಸ್ಪರ್ಧೆಯೇ ಆಚಾರಗಳ ಸ್ಥಾನದಲ್ಲಿ, ಜೀವಾತ್ಮನೇ ಯಜ್ಞಪಶುವಿನ ಸ್ಥಾನದಲ್ಲಿ ನಿಲ್ಲುವುವು. ಇಂತಹ ಪ್ರಸಂಗ ಎಂದಿಗೂ ಬರಲಾರದು.... ಭರತಖಂಡ ನಾಶವಾಗುವುದೆ? ಭವ್ಯವಾಗಿರುವುದಕ್ಕೆಲ್ಲ, ನೀತಿಗೆಲ್ಲ, ಅಧ್ಯಾತ್ಮಕ್ಕೆಲ್ಲ ತೌರೂರಾದ ಭರತಖಂಡ ನಾಶವಾಗುವುದೆ? ಪುರಾತನ ಮಾತೆಯಾದ ಈ ಭರತಖಂಡ, ಸಾಧು ಸಂತರ ಪಾದಧೂಳಿಯಿಂದ ಪವಿತ್ರವಾದ ಭರತಖಂಡ, ಈಗಲೂ ಕೂಡ ಭಗವತ್ ಸ್ವರೂಪರಾದ ಮಹಾಮಹಿಮರು ಜೀವಿಸುತ್ತಿರುವ ಭರತಖಂಡ ನಾಶವಾಗುವುದೇ? ಸಹೋದರರೆ, ನಾನು ಅಥೆನ್ಸ್ ನಗರದ ಜ್ಞಾನಿಯ ಜ್ಯೋತಿಯನ್ನು ಎರವಲಾಗಿ ತೆಗೆದುಕೊಂಡು ಈ ವಿಶಾಲ ಪ್ರಪಂಚದ ಗ್ರಾಮ ನಗರಗಳನ್ನು, ಬಯಲು ಕಾನನಗಳನ್ನು ಹುಡುಕಾಡಲು ನಿಮ್ಮೊಡನೆ ಬರುವೆನು. ಸಾಧ್ಯವಿದ್ದರೆ ಇತರ ದೇಶಗಳಲ್ಲಿ ಇಂತಹ ವ್ಯಕ್ತಿಗಳನ್ನು ತೋರಿಸಿ.

ನುಡಿಮುತ್ತುಗಳು ೨

ನಮ್ಮ ತಾಯ್ನಾಡಿಗೆ ಅನ್ಯರಾಷ್ಟ್ರಗಳು ಸಲ್ಲಿಸಬೇಕಾಗಿರುವ ಋಣ ಮಹತ್ತರವಾದುದು. ಒಂದಾದ ಮೇಲೊಂದು ದೇಶವನ್ನು ನೋಡಿದರೆ 'ಸಹಿಷ್ಣು ಹಿಂದೂ' 'ದೀನ ಹಿಂದೂ'ಗಳಿಗೆ ಋಣವನ್ನು ಸಲ್ಲಿಸದೆ ಇರಬೇಕಾದ ಜನಾಂಗವು ಯಾವುದೊಂದು ಇಲ್ಲ ಎಂಬುದು ತಿಳಿಯುತ್ತದೆ..... ಗ್ರೀಸ್ ಇನ್ನೂ ಹುಟ್ಟದೆ ಇರುವಾಗ, ರೋಮ್ ದೇಶದ ಕಲ್ಪನೆಯೇ ಇರದಿದ್ದಾಗ, ಆಧುನಿಕ ಪಾಶ್ಚಾತ್ಯ ಜನಾಂಗದ ಪೂರ್ವಿಕರು ಕಾನನಾಂತರಗಳಲ್ಲಿ ನೆಲಸಿ, ಕಾಡುಮನುಷ್ಯರಂತೆ ಮೈಗೆ ಬಣ್ಣ ಬಳಿದುಕೊಳ್ಳುತ್ತಿದ್ದ ಕಾಲದಲ್ಲೇ ನಮ್ಮ ನಾಡು ಲವಲವಿಕೆಯಿಂದ ಪ್ರಬುದ್ಧವಾಗಿತ್ತು. ಇತಿಹಾಸದ ದಾಖಲೆಗೆ ಕೂಡ ನಿಲುಕದ ಪುರಾತನ ಕಾಲದಿಂದಲೂ, ನಮ್ಮ ಆಚಾರ ವ್ಯವಹಾರಗಳ ಬಗೆಗೂ ನಿಲುಕದ ಗತಕಾಲದಿಂದಲೂ,ಅನಾದಿಕಾಲದಿಂದ ಇಂದಿನವರೆಗೂ ಮಹೋನ್ನತ ಭಾವನಾ ಪರಂಪರೆ ಇಲ್ಲಿಂದ ಹೊರಹೊಮ್ಮಿದೆ. ಈ ದೇಶದ ಜನರು ಆಡಿದ ಪ್ರತಿಯೊಂದು ಮಾತಿನ ಹಿಂದೆಯೂ ಆಶೀರ್ವಾದದ ಬಲವಿದೆ, ಮುಂದೆ ಶಾಂತಿ ಇದೆ.

ನುಡಿಮುತ್ತುಗಳು ೩

ಆರ್ಯ ಜನಾಂಗದಲ್ಲಿ ಭರತಖಂಡ ಅವನತಿಯಲ್ಲಿರುವುದಕ್ಕೆ ಏನನ್ನಾದರೂ ಕಾರಣವನ್ನು ನೀವು ಕೊಡಬಲ್ಲಿರಾ? ಇಲ್ಲಿ ಬುದ್ಧಿಗೆ ಬರಗಾಲವೆ, ಕೌಶಲ್ಯಕ್ಕೆ ಬರಗಾಲವೆ? ಇಲ್ಲಿನ ಕಲೆ, ಗಣಿತಶಾಸ್ತ್ರ, ತತ್ತ್ವ ಇವನ್ನೂ ನೋಡಿ 'ಹೌದು ಎನ್ನಬಲ್ಲಿರಾ? ಈಗ ಪ್ರಗತಿಪರ ರಾಷ್ಟ್ರಗಳೊಡನೆ ಅಗ್ರಭಾಗದಲ್ಲಿ ನಿಲ್ಲಬೇಕಾದರೆ ಬೇಕಾಗಿರುವುದು ಶತಮಾನಗಳಿಂದ ಇದ್ದ ತಾಮಸಿಕ ಸ್ಥಿತಿಯಿಂದ ಪಾರಾಗಿ ಜಾಗ್ರತರಾಗುವುದು. .... ಭರತಖಂಡದ ಜನಾಂಗದ ಆದರ್ಶವೇ ತ್ಯಾಗ ಮತ್ತು ಸೇವೆ. ಇವೆರಡನ್ನು ಚೆನ್ನಾಗಿ ರೂಢಿಸಿ, ಉಳಿದುವೆಲ್ಲ ತಮಗೆ ತಾವೇ ಹೊಂದಿಕೊಳ್ಳುವುವು.

ನುಡಿಮುತ್ತುಗಳು ೪

ನಮ್ಮ ದೇಶಬಾಂಧವರೇ, ಅಮೃತಪುತ್ರರೇ! ಈ ಜನಾಂಗದ ಹಡಗು ಹಲವು ಶತಮಾನಗಳಿಂದ ಸಂಚರಿಸುತ್ತಿದೆ. ಅನರ್ಘ್ಯ ರತ್ನದಂತಿರುವ ಸಂಸ್ಕೃತಿಯನ್ನು ಇತರ ದೇಶಗಳಿಗೆ ಹೊತ್ತು ಜಗತ್ತನ್ನೇ ಉತ್ತಮಸ್ಥಾನಕ್ಕೆತರುತ್ತಿದೆ. ಈ ಜನಾಂಗವೆಂಬ ನಮ್ಮ ನೌಕೆ ಹಲವು ಶತಮಾನಗಳಿಂದ ಕೋಟ್ಯಂತರ ಜೀವಿಗಳನ್ನು ಭಾವಸಾಗರದ ಆಚೆ ದುಃಖಾತೀತ ಸ್ಥಿತಿಗೆ ಕೊಂಡೊಯ್ದಿದೆ. ಆದರೆ ಇಂದು ನಮ್ಮ ತಪ್ಪಿನಿಂದಲೋ, ಅಥವಾ ಮತ್ತಾವ ಕಾರಣದಿಂದಲೋ, ಈ ಹಡಗು ಸೋರಲು ಮೊದಲಾಗಿ ಅದಕ್ಕೆ ಅಪಾಯವೊದಗಿರಬಹುದು. ಅದರಲ್ಲಿರುವ ನೀವು ಈಗ ಏನು ಮಾಡಬಲ್ಲಿರಿ? ಅದನ್ನು ದೂರುತ್ತ ನಿಮ್ಮ ನಿಮ್ಮಲ್ಲೇ ಜಗಳ ಕಾಯುವೀರೇನು? ನೀವೆಲ್ಲ ಕಲೆತು ಆ ರಂಧ್ರವನ್ನು ಮುಚ್ಚಲು ಸಾಧ್ಯವಾದಷ್ಟು ಪ್ರಯತ್ನಪಡುವುದಿಲ್ಲವೆ? ನಮ್ಮ ಹೃದಯದ ರಕ್ತವನ್ನು ಸಂತೋಷದಿಂದ ಇದಕ್ಕೆ ಅರ್ಪಿಸೋಣ. ನಮ್ಮ ಪ್ರಯತ್ನದಲ್ಲಿ ವಿಫಲರಾದರೆ ನಾವೆಲ್ಲ ಕಲೆತು ಯಾರನ್ನೂ ಶಪಿಸದೆ ಆಶೀರ್ವಾದವನ್ನು ಉಚ್ಚರಿಸುತ್ತ ಒಟ್ಟಿಗೆ ಮುಳುಗೋಣ.

ನುಡಿಮುತ್ತುಗಳು ೫

ಭರತಖಂಡದ ಪ್ರಾಣಪಕ್ಷಿ ಎಲ್ಲಿದೆ ಎನ್ನುವುದು ನಿಮಗೆ ಸ್ಪಷ್ಟವಾಗಿರಬಹುದು. ಅದು ಧರ್ಮದಲ್ಲಿದೆ. ಏಕೆಂದರೆ ಅದನ್ನು ಯಾರೂ ನಾಶಮಾಡದೆ ಇದ್ದುದರಿಂದ, ಈ ದೇಶಕ್ಕೆ ಎಷ್ಟೇ ಆಪತ್ತು ವಿಪತ್ತುಗಳು ಒದಗಿದ್ದರೂ ಅದು ಇನ್ನೂ ಉಳಿದಿರುವುದು. ಒಬ್ಬ ಭಾರತೀಯ ವಿದ್ವಾಂಸನು, 'ರಾಷ್ಟ್ರಪ್ರಾಣವನ್ನು ಧರ್ಮದಲ್ಲಿ ಇಡುವ ಅವಶ್ಯಕತೆಯೇನು? ಉಳಿದ ದೇಶಗಳಂತೆ ಅದನ್ನು ಸಾಮಾಜಿಕ ಮತ್ತು ರಾಜಕೀಯದ ಸ್ವಾತಂತ್ರ್ಯದಲ್ಲಿ ಏತಕ್ಕೆ ಇಡಬಾರದು?' ಎಂದು ಪ್ರಶ್ನಿಸುವನು. ಹೀಗೆ ಮಾತನಾಡುವುದು ಸುಲಭ... ಆದರೆ ವಾಸ್ತವಿಕ ಅಂಶ ಹೀಗಿದೆ. ಈ ನದಿಯು ತನ್ನ ಉಗಮಸ್ಥಾನವಾದ ಬೆಟ್ಟದಿಂದ ಸಾವಿರಾರು ಮೈಲಿ ಹರಿದು ಬಂದಿದೆ. ಅದನ್ನು ಪುನಃ ಬೆಟ್ಟದಮೇಲೆ ಕಳುಹಿಸುವುದಕ್ಕೆ ಆಗುವುದೇ? ಹಾಗೆ ಪ್ರಯತ್ನಿಸಿದರೆ ಪರಿಣಾಮವಾಗಿ ನೀರು ಅಲ್ಲಿ ಇಲ್ಲಿ ಹರಿದು, ವ್ಯರ್ಥವಾಗಿ, ಕೊನೆಗೆ ನದಿ ಬತ್ತಿಹೋಗುವುದು. ನದಿ ಹೇಗಾದರೂ ಸಮುದ್ರವನ್ನು ಸೇರುವುದು. ಒಂದೆರಡು ದಿನ ಮುಂಚೆಯೋ ತಡವಾಗಿಯೋ ಆಗಬಹುದು. ಶುಭ್ರ ಸುಂದರ ಸ್ಥಳದಲ್ಲಿ ಹರಿದೋ ಇಲ್ಲವೇ, ಮಲಿನವಾದ ಸ್ಥಳದಲ್ಲಿ ಹರಿದೋ ಕೊನೆಗೆ ಕಡಲನ್ನು ಸೇರುವುದು. ಹತ್ತುಸಾವಿರ ವರುಷಗಳ ಕಾಲದ ನಮ್ಮ ರಾಷ್ಟ್ರೀಯ ಜೀವನವು ತಪ್ಪುಹಾದಿಯಲ್ಲಿ ನಡೆದಿದ್ದರೂ ಈಗ ಬೇರಾವ ಉಪಾಯವೂ ಇಲ್ಲ. ನಾವು ಈ ಸಮಯದಲ್ಲಿ ಹೊಸ ಶೀಲವನ್ನು ಸೃಷ್ಟಿಸಲು ಪ್ರಯತ್ನಿಸಿದರೆ ಅದು ಮೃತ್ಯುವಿನಲ್ಲಿ ಪರ್ಯವಸಾನವಾಗುವುದು.

ನುಡಿಮುತ್ತುಗಳು ೬

ಮೇಲುನೋಟಕ್ಕೆ ಮೃತ್ಯುವಿನ ಬೂದಿಯು ಮುಚ್ಚಿಕೊಂಡಂತೆ ಕಂಡರೂ, ಅದರ ಅಡಿಯಲ್ಲಿ ರಾಷ್ಟ್ರೀಯ ಜೀವನದ ಚಿತೆಯು ಉರಿಯುತ್ತಿರುವುದನ್ನು ನೋಡಬಹುದು. ಈ ದೇಶದ ಪ್ರಾಣ ಧರ್ಮ, ಭಾಷೆ ಧರ್ಮ, ಭಾವ ಧರ್ಮ, ನಿಮ್ಮ ರಾಜನೀತಿ, ಸಮಾಜನೀತಿ, ನಗರ ನಿರ್ಮಲೀಕರಣ, ಪ್ಲೇಗ್ ನಿವಾರಣೆ, ದುರ್ಭಿಕ್ಷಪೀಡಿತರಿಗೆ ಅನ್ನದಾನ ಹಿಂದಿನಿಂದಲೂ ಹೇಗೆ ಜರಗುತ್ತಿತ್ತೋ ಹಾಗೆಯೇ ಜರುಗುವುದು, ಅಂದರೆ ಧರ್ಮದ ಮೂಲಕವೇ, ಅನ್ಯಥಾ ಅಲ್ಲ. ನೀವು ಸುಮ್ಮನೇ ಕೂಗಾಡಿದರೆ ಪ್ರಯೋಜನವಿಲ್ಲ.

ನುಡಿಮುತ್ತುಗಳು ೭

ಎಲ್ಲಾ ದೇಶಗಳಲ್ಲಿಯೂ ನಿಯಮ ಒಂದೇ. ಯಾವುದನ್ನು ಕೆಲವು ಗಟ್ಟಿಗರು ಆಜ್ಞಾಪಿಸುತ್ತಾರೋ ಅದರಂತೆ ಆಗುತ್ತದೆ. ಉಳಿದವರು ಕುರಿ ಮಂದೆಯಂತೆ ಅವರ ಆದೇಶವನ್ನು ಪಾಲಿಸುವರು. ನನ್ನ ಮಿತ್ರರೇ! ನಾನು ನಿಮ್ಮ ಪಾರ್ಲಿಮೆಂಟ್, ಸೆನೇಟ್, ಮತಚಲಾವಣೆ, ಬಹುಮತ, ಮತಪೆಟ್ಟಿಗೆ, ಎಲ್ಲಾ ನೋಡಿರುವೆನು. ಎಲ್ಲೆಲ್ಲಿಯೂ ಒಂದೇ ರೀತಿ... ಈಗ ಪ್ರಶ್ನೆಯೆಂದರೆ ಭಾರತವರ್ಷದಲ್ಲಿ ಶಕ್ತಿವಂತರಾರು? ಯಾರು ಧರ್ಮವೀರರೋ ಅವರೇ ನಮ್ಮ ಸಮಾಜದ ನಾಯಕರು. ಹೊಸ ರೀತಿ ನೀತಿಗಳು ಸಮಾಜಕ್ಕೆ ಅವಶ್ಯವಾಗಿ ಬೇಕಾದಾದರೆ ಅವರೇ ಅದನ್ನು ಕೊಡುವರು. ನಾವು ಅವರು ಹೇಳಿದಂತೆ ಕೇಳಿ ಅವರ ಆದೇಶದಂತೆ ನಡೆಯುವೆವು.

ನುಡಿಮುತ್ತುಗಳು ೮

ಈ ಒಂದು ವಿಚಾರವನ್ನು ಆಲೋಚಿಸಿ ನೋಡಿ. ವ್ಯಕ್ತಿಯು ನಿಯಮವನ್ನು ಮಾಡುವನೋ ಅಥವಾ ನಿಯಮವು ವ್ಯಕ್ತಿಯನ್ನು ಮಾಡುವುದೋ? ವ್ಯಕ್ತಿಯು ಹಣವನ್ನು ಮಾಡುವನೋ ಅಥವಾ ಹಣವು ವ್ಯಕ್ತಿಯನ್ನು ಮಾಡುವುದೋ? ವ್ಯಕ್ತಿಯು ಕೀರ್ತಿ ಗೌರವಗಳನ್ನು ಗಳಿಸುತ್ತಾನೆಯೋ ಅಥವಾ ಕೀರ್ತಿಗೌರವಗಳು ವ್ಯಕ್ತಿಯನ್ನು ಮಾಡುವುವೋ?ಮಿತ್ರರೇ! ಮೊದಲು ಮನುಷ್ಯರಾಗಿ, ಆಗ ಉಳಿದುದೆಲ್ಲ ತಮಗೆ ತಾವೇ ನಿಮ್ಮನ್ನು ಅನುಸರಿಸುವುದನ್ನು ನೋಡುವಿರಿ. ಪರಸ್ಪರ ದ್ವೇಷಾಸೂಯೆಗಳನ್ನು ತೊರೆಯಿರಿ, ಪರಸ್ಪರರ ವಿರುದ್ಧ ಬೊಗಳುವುದನ್ನು ನಿಲ್ಲಿಸಿ. ಸದುದ್ದೇಶ, ಸದುಪಾಯ ಮತ್ತು ಸತ್ಸಾಹಸಗಳನ್ನು ಅವಲಂಬಿಸಿ ಮತ್ತು ಕೆಚ್ಚೆದೆಯುಳ್ಳವರಾಗಿ. ಮನುಷ್ಯರಾಗಿ ಹುಟ್ಟಿದ ಮೇಲೆ ಸ್ವಲ್ಪವಾದರೂ ಕೀರ್ತಿಯನ್ನು ಇಲ್ಲಿ ಬಿಟ್ಟುಹೋಗಿ.

ನುಡಿಮುತ್ತುಗಳು ೯

ಸತ್ಯ, ಪ್ರೇಮ ಮತ್ತು ನಿಷ್ಕಾಪಟ್ಯದ ಎದುರಿಗೆ ಯಾವುದೂ ನಿಲ್ಲಲಾರದು. ನೀವು ನಿಷ್ಕಪಟಿಗಳೇ? ಸಾಯುವವರೆಗೂ ಸ್ವಾರ್ಥರಹಿತರಾಗಿದ್ದು ಪ್ರೀತಿಸುವಿರಾ? ಹಾಗಿದ್ದರೆ ಭಯಪಡಬೇಡಿ. ಮೃತ್ಯುವಿಗೂ ಅಂಜಬೇಡಿ. ಮುನ್ನುಗ್ಗಿ ನನ್ನ ಹುಡುಗರೆ ! ಇಡೀ ಜಗತ್ತಿಗೆ ಇಂದು ಜ್ಞಾನಜ್ಯೋತಿ ಬೇಕಾಗಿದೆ. ಕಾತರತೆಯಿಂದ ಅದನ್ನು ನಿರೀಕ್ಷಿಸುತ್ತಿದೆ ! ಕೇವಲ ಭರತಖಂಡ ಮಾತ್ರ ಅದನ್ನು ಕೊಡಬಲ್ಲದು. ಇಂದ್ರಜಾಲ, ಮಂತ್ರ, ತಂತ್ರ ಬೂಟಾಟಿಕೆಗಳನ್ನಲ್ಲ. ನಿಜವಾದ ಧಾರ್ಮಿಕ ಚೈತನ್ಯದ ಮಹಾತ್ಮೆಯನ್ನು ಅತ್ಯುನ್ನತವಾದ ಆಧ್ಯಾತ್ಮಿಕ ಸತ್ಯಗಳನ್ನು ಭಾರತ ಕೊಡಬಲ್ಲದು. ಅದಕ್ಕೇ ದೇವರು ಎಲ್ಲಾ ಸಂದಿಗ್ಧ ಪರಿಸ್ಥಿತಿಗಳಲ್ಲೂ ಈ ಜನಾಂಗವನ್ನು ಇಂದಿನವರೆಗೂ ಕಾಪಾಡಿಕೊಂಡು ಬಂದಿದ್ದಾನೆ. ಈಗ ಕಾಲ ಒದಗಿ ಬಂದಿದೆ. ನನ್ನ ಕೆಚ್ಚೆದೆಯ ಹುಡುಗರೇ, ನೀವೆಲ್ಲಾ ಮಹತ್ಕಾರ್ಯಗಳನ್ನು ಸಾಧಿಸಲು ಜನ್ಮವೆತ್ತಿದ್ದೀರಿ ಎಂಬುದರಲ್ಲಿ ವಿಶ್ವಾಸವಿಡಿ. ನಾಯಿಕುನ್ನಿಗಳ ಬೊಗಳುವಿಕೆ ನಿಮ್ಮನ್ನು ಹೆದರಿಸದಿರಲಿ. ಅಷ್ಟೇ ಏಕೆ, ಸ್ವರ್ಗದ ಗುಡುಗು ಸಿಡಿಲುಗಳೂ ನಿಮ್ಮನ್ನು ಕಂಗೆಡಿಸದಿರಲಿ. ಎದ್ದು ನಿಂತು ಕಾರ್ಯೋನ್ಮುಖರಾಗಿ!

ನುಡಿಮುತ್ತುಗಳು ೧೦

ಭರತಖಂಡ ಉತ್ಕರ್ಷವಾಗುವುದು-ದಂಷ್ಟ್ರನಖಗಳ ಶಕ್ತಿಯಿಂದಲ್ಲ, ಅತ್ಮಶಕ್ತಿಯಿಂದ. ಅದರ ಧ್ವಜ ವಿನಾಶಹೇತುವಲ್ಲ, ಶಾಂತಿಯನ್ನು ಪ್ರೀತಿಯನ್ನು ಸೂಚಿಸುವ ಸಂನ್ಯಾಸಿಯ ಗೈರಿಕವಸನವೆ ಅದರ ಲಾಂಛನ... ಒಂದು ದೃಶ್ಯ ಮಾತ್ರ ಹಗಲಿನಂತೆ ಸ್ಪಷ್ಟವಾಗಿ ನನ್ನ ಕಣ್ಣಮುಂದೆ ಕಾಣುತ್ತಿದೆ-ಈ ಪುರಾತನಮಾತೆ ಪುನಃ ಜಾಗ್ರತಳಾಗಿರುವಳು, ತನ್ನ ಸಿಂಹಾಸನದ ಮೇಲೆ ಮಂಡಿಸಿರುವಳು. ಎಂದಿಗಿಂತ ಹೆಚ್ಚು ಶೋಭಾಯಮಾನಳಾಗಿರುವಳು. ಆ ಮಹಾತಾಯಿಯನ್ನು ಜಗತ್ತಿಗೆಲ್ಲ ಶಾಂತಿಯ ಧ್ವನಿಯಿಂದ ಆಶೀರ್ವಾದವಾಣಿಯಲ್ಲಿ ಸಾರಿ.

ನುಡಿಮುತ್ತುಗಳು ೧೧

ಕೃಷಿಕನ ದರಿದ್ರ ನಿವಾಸದಿಂದ ನೇಗಿಲನ್ನು ಹಿಡಿದು ನವೀನ ಭಾರತವು ಮೈದೋರಲಿ. ಬೆಸ್ತನ ಜೋಪಡಿಯಿಂದ, ಚಮ್ಮಾರ, ಜಾಡಮಾಲಿಗಳ ಬಡ ಗುಡಿಸಿಲಿನಿಂದ, ಅದು ಹೊರಹೊಮ್ಮುಲಿ. ಮಳಿಗೆಯಿಂದ, ಕಾರ್ಖಾನೆಯಿಂದ, ಅಂಗಡಿಯಿಂದ, ಸಂತೆಯಿಂದ ಆಕೆ ಪ್ರತ್ಯಕ್ಷವಾಗಲಿ. ಪರ್ವತಕಾನನಗಳಿಂದ, ಕಂದರವನಗಳಿಂದ ನವ ಭಾರತದ ಮೂರ್ತಿ ರೂಪುಗೊಳ್ಳಲಿ.

ನುಡಿಮುತ್ತುಗಳು ೧೨

ಭಾರತೀಯರಲ್ಲಿ ದೊಡ್ಡದೊಂದು ದೋಷವಿದೆ. ನಾವು ಒಂದು ಸ್ಥಿರವಾದ ಸಂಸ್ಥೆಯನ್ನು ಕಟ್ಟಲಾರೆವು. ಕಾರಣವೇನೆಂದರೆ ಅಧಿಕಾರವನ್ನು ಇತರರೊಂದಿಗೆ ಹಂಚಿಕೊಳ್ಳುವುದು ನಮಗೆ ಇಷ್ಟವಿಲ್ಲ. ನಾವು ಕಾಲವಾದ ಮೇಲೆ ಇದರ ಗತಿ ಏನೆಂಬುದನ್ನು ಕುರಿತು ಚಿಂತಿಸುವುದೇ ಇಲ್ಲ.

ನುಡಿಮುತ್ತುಗಳು ೧೩

ಸಿಪಾಯಿದಂಗೆ ಸಮಯದಲ್ಲಿ ನನ್ನ ಒಬ್ಬ ಆಂಗ್ಲೇಯ ಸ್ನೇಹಿತ, ಜನರಲ್ ಸ್ಟ್ರಾಂಗ್ ಎನ್ನುವವನು ಭಾರತದಲ್ಲಿ ಇದ್ದನು. ಒಂದು ದಿನ ಅವನೊಂದಿಗೆ ಮಾತನಾಡುತ್ತಿದ್ದಾಗ ಭಾರತೀಯ ಸಿಪಾಯಿಗಳ ಬಳಿ ಸಾಕಾದಷ್ಟು ಮದ್ದುಗುಂಡು ಇದ್ದರೂ, ಇವರು ಒಳ್ಳೆಯ ತರಬೇತಾದ ಯೋಧರಾಗಿದ್ದರೂ ಏತಕ್ಕೆ ಸೋತರು ಎಂದು ಪ್ರಶ್ನಿಸಿದೆನು. ಅದಕ್ಕೆ ಅವನು, ಅವರ ನಾಯಕರು ತಾವು ಮುಂದೆ ನುಗ್ಗುವ ಬದಲು ಹಿಂದೆ, ಸುರಕ್ಷಿತವಾದ ಸ್ಥಳದಲ್ಲಿ ನಿಂತು 'ಯುದ್ಧ ಮಾಡಿ ವೀರರೇ' ಎಂದು ಪ್ರೋತ್ಸಾಹಿಸುತ್ತಿದ್ದರು. ಆದರೆ ಸೇನಾನಿ ಮುಂದೆ ನುಗ್ಗಿ ಮೃತ್ಯುವನ್ನು ಎದುರಿಸದೇ ಇದ್ದರೆ ಅನುಯಾಯಿಗಳು ಎಂದಿಗೂ ಮನಸ್ಸಿಟ್ಟು ಕಾದಾಡಲಾರರು. ಎಲ್ಲಾ ಕಾರ್ಯಕ್ಷೇತ್ರದಲ್ಲೂ ಇದೇ : 'ಸಿರ್ ದಾರ್ ತೊ ಸರ್ ದಾರ್'- ತಲೆ ಕೊಡುವವನೆ ಸರ್ ದಾರ್, ಯಾವುದಾದರೂ ಧ್ಯೇಯಕ್ಕಾಗಿ ನಿಮ್ಮ ಜೀವವನ್ನೇ ಬಳಿ ಕೊಡಲು ಶಕ್ತರಾದರೆ ಆಗ ಮಾತ್ರವೇ ನೀವು ನಾಯಕರಾಗಬಲ್ಲಿರಿ. ನಾವೆಲ್ಲ ಅಗತ್ಯವಾದ ಬಲಿದಾನ ಮಾಡದೆ ಸರದಾರರಾಗಬೇಕೆಂದು ಬಯಸುವೆವು. ಇದರ ಪರಿಣಾಮ ಶೂನ್ಯ. ಯಾರೂ ನಮ್ಮ ಮಾತನ್ನು ಕೇಳುವುದಿಲ್ಲ.

ನುಡಿಮುತ್ತುಗಳು ೧೪

ಮೊದಲು ವಿಧೇಯತೆಯನ್ನು ಕಲಿಯಿರಿ. ಪಾಶ್ಚಾತ್ಯರಲ್ಲಿ ಅಷ್ಟೊಂದು ಸ್ವಾತಂತ್ರ್ಯ ಮನೋಭಾವವಿದ್ದರೂ, ಅವರಲ್ಲಿ ವಿಧೇಯತೆ ಅಷ್ಟೇ ಪ್ರಾಮುಖ್ಯವಾಗಿದೆ. ನಾವೆಲ್ಲ ಸ್ವಪ್ರತಿಷ್ಠತೆಯ ಜನ. ಇದರಿಂದ ಯಾವ ಕೆಲಸವೂ ಆಗುವುದಿಲ್ಲ. ವ್ಯಕ್ತಿ ಮತ್ತು ರಾಷ್ಟ್ರದ ಪುರೋಭಿ ವೃದ್ಧಿಗೆ ಸಾಹಸ, ಶಾಂತಿ, ಅನಂತ ಧೈರ್ಯ, ಅನಂತ ಶಕ್ತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಂಪೂರ್ಣ ವಿಧೇಯತೆ-ಇವು ಆವಶ್ಯಕ. ಇವು ನಮ್ಮಲ್ಲಿ ಲವಲೇಶವೂ ಇಲ್ಲ.

ನುಡಿಮುತ್ತುಗಳು ೧೫

ಗುಲಾಮರಿಗೆ ಸಹಜವಾದ ಅಸೂಯೆ ಮತ್ತು ಮಾತ್ಸರ್ಯ ನಮ್ಮ ಜಾಯಮಾನಕ್ಕಂಟಿಕೊಂಡಿರುವ ಪೀಡೆ. ಈ ಅಸೂಯೆ ದ್ವೇಷ ಇಲ್ಲಿ ಇಷ್ಟೊಂದು ತುಂಬಿರುವುದರಿಂದಲೇ ದೇವರೂ ಸಹ ತನ್ನೆಲ್ಲ ಶಕ್ತಿಯಿಂದಲೂ, ಏನು ಮಾಡಲಾರದಂತಾಯಿತು. ನನ್ನ ಕರ್ತವ್ಯವೆಲ್ಲವನ್ನೂ ಮಾಡಿ ನಾನು ಈಗ ಕಾಲವಾಗಿ ಹೋಗಿರುವೆನು ಎಂದು ಭಾವಿಸಿ. ಕೆಲಸವೆಲ್ಲ ನಿಮ್ಮ ಹೆಗಲ ಮೇಲೆ ಬಿದ್ದಿದೆ ಎಂದು ತಿಳಿಯಿರಿ. ನಮ್ಮ ತಾಯಿನಾಡಿನ ಯುವಕರೇ! ಈ ಮಹಾಕಾರ್ಯವನ್ನು ಮಾಡಲು ದೇವರು ನಿಮ್ಮನ್ನು ನಿಯಮಿಸಿರುವನು ಎಂದು ತಿಳಿಯಿರಿ. ಈ ಮಹತ್ಕಾರ್ಯಕ್ಕೆ ನಿಮ್ಮನ್ನು ನೀವು ಅರ್ಪಿಸಿಕೊಳ್ಳಿ.

ನುಡಿಮುತ್ತುಗಳು ೧೬

ಯಾವ ವ್ಯಕ್ತಿಯಾಗಲಿ, ಜನಾಂಗವಾಗಲಿ, ಅನ್ಯರ ಸಂಪರ್ಕವಿಲ್ಲದೇ ಬೇರೆಯಾಗಿ ಜೀವಿಸುವುದಕ್ಕೆ ಆಗುವುದಿಲ್ಲವೆಂಬುದು ನನ್ನ ದೃಢ ಮತ... ಕೊಟ್ಟು ತೆಗೆದುಕೊಳ್ಳುವುದೇ ಜೀವನದ ನಿಯಮ. ಭಾರತವರ್ಷ ಮತ್ತೊಮ್ಮೆ ಉನ್ನತಿಯನ್ನು ಪಡೆಯಬೇಕೆಂಬ ಆಸೆಯಿದ್ದ ಪಕ್ಷದಲ್ಲಿ ಭಾರತಮಾತೆಯು ತನ್ನ ಭಂಡಾರವನ್ನು ತೆಗೆದು ಅನರ್ಘ್ಯರತ್ನಗಳನ್ನು ಜಗತ್ತಿನ ಇತರ ಜನಾಂಗಗಳಿಗೆ ದಾನ ಮಾಡಬೇಕು. ಇದಕ್ಕೆ ಪ್ರತಿಯಾಗಿ ಇತರರು ತನಗೆ ಕೊಡುವುದನ್ನು ಸ್ವೀಕರಿಸುವುದು ಅತ್ಯಾವಶ್ಯಕ. ವಿಕಾಸವೇ ಬಾಳು, ಸಂಕೋಚವೇ ಸಾವು. ಪ್ರೇಮವೇ ಜೀವನ, ದ್ವೇಷವೇ ಮರಣ. ಇತರ ಜನಾಂಗಗಳನ್ನು ಎಂದು ನಾವು ದ್ವೇಷಿಸುವುದಕ್ಕೆ ಮೊದಲು ಮಾಡಿದೆವೋ, ಅಂದಿನಿಂದಲೇ ನಮ್ಮ ಸಾವು ಮೊದಲಾಯಿತು. ನಮ್ಮ ಹೃದಯ ವಿಕಾಸವಾಗಬೇಕು. ಇದು ಚೇತನದ ಚಿಹ್ನೆ. ವಿಕಾಸವಾಗದಿದ್ದಲ್ಲಿ ನಮ್ಮ ನಾಶವನ್ನು ಯಾರೂ ತಡೆಯಲಾಗುವುದಿಲ್ಲ.

ನುಡಿಮುತ್ತುಗಳು ೧೭

ನಮ್ಮ ಜನಾಂಗದ ಮಹಾಪಾತಕವೇ ಜನಸಾಮಾನ್ಯರನ್ನು ನಿರ್ಲಕ್ಷಿಸಿದ್ದು. ಇದೇ ನಮ್ಮ ಅವನತಿಗೆ ಮುಖ್ಯ ಕಾರಣ. ಇಲ್ಲಿನ ಜನಸಾಮಾನ್ಯರು ವಿದ್ಯಾವಂತರಾಗಿ, ಅವರಿಗೆ ಸಾಕಷ್ಟು ಊಟ ಬಟ್ಟೆ ದೊರಕುವಂತೆ ಮಾಡಿ ಅವರ ಬಗ್ಗೆ ಕಾಳಜಿ ವಹಿಸದಿದ್ದಲ್ಲಿ ಯಾವ ರಾಜಕೀಯದಿಂದಲೂ ಏನೂ ಪ್ರಯೋಜನವಿಲ್ಲ. ಅವರು ನಮ್ಮ ವಿದ್ಯಾಭ್ಯಾಸಕ್ಕೆ ಕಂದಾಯ ಕೊಡುವರು, ನಮ್ಮ ದೇವಸ್ಥಾನ ಕಟ್ಟುವರು. ಅದಕ್ಕೆ ಬದಲು ನಮ್ಮಿಂದ ಅವರಿಗೆ ದೊರಕುವುದು ಒದೆತಗಳು ; ಅವರು ನಿಜವಾಗಿ ನಮ್ಮ ಗುಲಾಮರಾಗಿರುವರು. ನಾವು ಭರತಖಂಡವನ್ನು ಉದ್ಧಾರ ಮಾಡಬೇಕಾದರೆ ಅವರಿಗಾಗಿ ಕೆಲಸ ಮಾಡಬೇಕು.

ನುಡಿಮುತ್ತುಗಳು ೧೮

ಹಿಂದೂಗಳು ತಮ್ಮ ಹಿಂದಿನದನ್ನು ಎಷ್ಟು ಹೆಚ್ಚು ತಿಳಿದುಕೊಂಡರೆ ಅಷ್ಟೂ ಭವ್ಯವಾಗುವುದು ಅವರ ಭವಿಷ್ಯ. ಪ್ರತಿಯೊಬ್ಬರೂ ತಮ್ಮ ಗತಕಾಲದ ವೈಭವವನ್ನು ಅರಿಯುವಂತೆ ಮಾಡಬಲ್ಲವನು ಈಗ ನಮ್ಮ ಜನಾಂಗಕ್ಕೆ ಅತಿ ಹೆಚ್ಚಿನ ಒಳ್ಳೆಯದನ್ನು ಮಾಡಬಲ್ಲವನಾಗುತ್ತಾನೆ. ಪುರಾತನಕಾಲದ ರೀತಿ ನೀತಿಗಳು ಕೆಟ್ಟದಾಗಿದ್ದುದರಿಂದ ನಾವು ಅಧೋಗತಿಗೆ ಬರಲಿಲ್ಲ.ಆದರೆ ಅವನ್ನು ಸರಿಯಾಗಿ ವ್ಯವಹಾರ ಜೀವನದಲ್ಲಿ ತರಲು ಸಾಧ್ಯವಾಗದೇ ಇದ್ದುದೇ ಅಧೋಗತಿಗೆ ಕಾರಣ.

ನುಡಿಮುತ್ತುಗಳು ೧೯

ಮಾಡಬೇಕಾದದ್ದು ಬಹಳವಿರುವುದು. ಆದರೆ ಈ ದೇಶದಲ್ಲಿ ಮಾಡುವುದಕ್ಕೆ ತಕ್ಕೆ ಅನುಕೂಲಗಳು ಇಲ್ಲ. ವೇದಾಂತದ ಸಿದ್ಧಾಂತಗಳೇನೋ ನಮ್ಮಲ್ಲಿವೆ. ಆದರೆ ಅವುಗಳನ್ನು ಕೃತಿಗಿಳಿಸುವ ಶಕ್ತಿ ಇಲ್ಲ. ನಮ್ಮ ಶಾಸ್ತ್ರಗಳಲ್ಲಿ ಜಗತ್ತಿನಲ್ಲಿರುವವರೆಲ್ಲರೂ ಸಮನೆಂದು ಸಾರುವ ಸಿದ್ಧಾಂತಗಳಿವೆ. ಆದರೆ ಆಚರಣೆಯಲ್ಲಿ ಅಗಾಧವಾದ ಭೇದಭಾವನೆಯನ್ನು ಮಾಡುತ್ತೇವೆ ! ಅತ್ಯಂತ ಉತ್ತಮ ರೀತಿಯ ನಿಃಸ್ವಾರ್ಥ ಮತ್ತು ನಿಷ್ಕಾಮಕರ್ಮ ಇವುಗಳನ್ನು ಬೋಧಿಸಿದುದು ಇಂಡಿಯಾ ದೇಶದಲ್ಲಿ, ಆದರೆ ನಮ್ಮ ನಡವಳಿಕೆಯಲ್ಲಿ ನಾವು ಬಹಳ ಕ್ರೂರಿಗಳೂ ನಿರ್ದಯರೂ ಆಗಿರುವೆವು. ಮಾಂಸರಾಶಿಯ ಈ ದೇಹ ಒಂದನ್ನು ಅಲ್ಲದೆ ಬೇರೆ ಯಾವುದನ್ನೂ ಆಲೋಚಿಸಲಾರೆವು... ಐಶ್ವರ್ಯಹೀನರಾದ, ನಿರ್ಭಾಗ್ಯರಾದ, ವಿವೇಚನಾಶಕ್ತಿಯನ್ನು ಕಳೆದುಕೊಂಡು ಪದ ದಳಿತರಾದ, ಉಪವಾಸದಿಂದ ನರಳುವ, ಕಾದಾಡಿ ಅಸೂಯೆಪಡುವ ನಮ್ಮ ದೇಶದವರನ್ನು ಪ್ರೀತಿಸಿದರೆ, ಅವರು ಮತ್ತೊಮ್ಮೆ ಮೇಲೆ ಏಳುವರೆಂದು ನಾನು ನಂಬುತ್ತೇನೆ. ನೂರಾರು ಜನ ಉದಾರ ಹೃದಯರಾದ ಸ್ತ್ರೀಪುರುಷರು ಜೀವನದ ಸುಖವನ್ನು ಅನುಭವಿಸಬೇಕೆಂಬ ಆಸೆಯೆಲ್ಲವನ್ನು ತೊರೆದು, ಬಡತನ ಅಜ್ಞಾನ ಕೂಪದಲ್ಲಿ ದಿನೇದಿನೇ ಆಳ ಆಳಕ್ಕೆ ಮುಳುಗುತ್ತಿರುವ ನಮ್ಮ ನಾಡಿನ ಲಕ್ಷಾಂತರ ಜನರ ಹಿತಕ್ಕೋಸುಗವಾಗಿ ತವಕಿಸಿ ಕೈಲಾದಮಟ್ಟಿಗೆ ಕಷ್ಟಪಡುವರೋ, ಆಗ ಮಾತ್ರ ಭರತಖಂಡ ಮೇಲೆ ಏಳುವುದು.

ನುಡಿಮುತ್ತುಗಳು ೨೦

ಭಾರತವರ್ಷದಲ್ಲಿರುವ ದೌರ್ಭಾಗ್ಯಕ್ಕೆಲ್ಲ ಮೂಲ ಅಲ್ಲಿರುವ ಬಡಜನರ ಸ್ಥಿತಿ. ಪಾಶ್ಚಾತ್ಯ ದೇಶಗಳಲ್ಲಿ ಬಡವರು ಪಿಶಾಚಿಗಳಂತೆ. ಅವರೊಂದಿಗೆ ಹೋಲಿಸಿದರೆ ನಮ್ಮ ಬಡವರು ದೇವತೆಗಳು. ಆದುದರಿಂದಲೇ ಅವರನ್ನು ಉದ್ಧಾರಮಾಡುವುದು ಸುಲಭ. ಹೀನಸ್ಥಿತಿಯಲ್ಲಿರುವ ನಮ್ಮ ಬಡವರಿಗೆ ನಾವು ಮಾಡಬೇಕಾದ ಮುಖ್ಯ ಕರ್ತವ್ಯವೇ, ಅವರಿಗೆ ವಿದ್ಯೆಯನ್ನು ಕೊಟ್ಟು ಅವರು ಕಳೆದುಕೊಂಡಿರುವ ತಮ್ಮ ತನವನ್ನು ಅವರಿಗೆ ಮರಳಿಸಬೇಕು.

ನುಡಿಮುತ್ತುಗಳು ೨೧

ಕಳೆದ ಮುಕ್ಕಾಲು ಶತಮಾನದಿಂದ ಭರತಖಂಡವು ಸಮಾಜ ಸುಧಾರಕರಿಂದ ಮತ್ತು ಸುಧಾರಣಾ ಸಂಸ್ಥೆಗಳಿಂದ ತುಂಬಿ ತುಳುಕಾಡುತ್ತಿದೆ. ಆದರೆ ಅವೆಲ್ಲ ನಿರರ್ಥಕವಾಗಿವೆ. ಅವರಿಗೆ ಇದರ ರಹಸ್ಯ ಗೊತ್ತಿರಲಿಲ್ಲ. ಕಲಿಯಬೇಕಾದ ದೊಡ್ಡ ನೀತಿಯನ್ನು ಅವರು ಕಲಿಯಲಿಲ್ಲ. ಸುಧಾರಣೆಯ ಆತುರದಲ್ಲಿ ಸಮಾಜದ ನ್ಯೂನಾತಿರೇಕಗಳಿಗೆಲ್ಲ ಧರ್ಮವನ್ನು ದೂರಿದರು. ಒಂದು ಕಥೆಯಲ್ಲಿ ಸೊಳ್ಳೆಯೊಂದು ಮನುಷ್ಯನನ್ನು ಕಚ್ಚುತ್ತಿತ್ತು. ಆ ಸೊಳ್ಳೆಯನ್ನು ಕೊಲ್ಲಲು ಕೊಟ್ಟ ಪೆಟ್ಟು ಮನುಷ್ಯನನ್ನೂ ಕೊಂದಿತು. ಆದರೆ ಅದೃಷ್ಟವಶಾತ್ ಸಮಾಜಸುಧಾರಕರು ಇಲ್ಲಿ ಅಭೇದ್ಯವಾದ, ವಜ್ರಸಮವಾದ ಕೋಟೆಗೆ ಡಿಕ್ಕಿ ಹೊಡೆದರು. ಇದರ ಪರಿಣಾಮವಾಗಿ ಅವರು ನುಚ್ಚುನೂರಾಗಿ ಹೋದರು. ತಮ್ಮ ತಪ್ಪು ತಿಳುವಳಿಕೆಯಿಂದ ಹೋರಾಡಿ ಸೋತ ಆ ನಿಃಸ್ವಾರ್ಥ ಬುದ್ಧಿಯ ಉದಾರಹೃದಯರು ಸುವಿಖ್ಯಾತರು; ಸುಧಾರಣೆ ಎಂಬ ಪ್ರಚಂಡ ಚಾವಟಿಯ ಪೆಟ್ಟುಗಳು ನಿದ್ರಿಸುತ್ತಿರುವ ಭರತಖಂಡವನ್ನು ಎಚ್ಚರಿಸುವುದಕ್ಕೆ ಆವಶ್ಯಕವಾಗಿತ್ತು. ಆದರೆ ಅವೆಲ್ಲ ಧ್ವಂಸಕಾರಕ, ಸೃಷ್ಟಿಕಾರಕವಾಗಿರಲಿಲ್ಲ. ಆದಕಾರಣವೆ ಅವೆಲ್ಲ ನಶ್ವರವಾಗಿದ್ದು ನಿರ್ನಾಮವಾಗಿ ಹೋದವು. ಅವರ ಕೀರ್ತಿ ನಿಲ್ಲಲಿ! ಅವರ ಅನುಭವದಿಂದ ನಾವು ಬುದ್ಧಿಯನ್ನು ಕಲಿಯೋಣ... ಹಿಂದೂ ಜನಾಂಗವೆಲ್ಲ ನಿರ್ನಾಮವಾಗಿ ಬೇರೊಂದು ಜನಾಂಗ ಈ ದೇಶವನ್ನು ಆಕ್ರಮಿಸಿದಾಗ ಮಾತ್ರ ಇದು ಸಾಧ್ಯ. ಪ್ರಾಚ್ಯವಾಗಲಿ, ಪಾಶ್ಚಾತ್ಯವಾಗಲಿ, ಇದನ್ನು ಬೇಕಾದರೆ ಪ್ರಯತ್ನಿಸಲಿ. ಆದರೆ ಭರತಖಂಡ ಸಾವನ್ನಪ್ಪುವವರೆಗೂ ಅದು ಎಂದಿಗೂ ಯುರೋಪ್ ಆಗಲಾರದು.

ನುಡಿಮುತ್ತುಗಳು ೨೨

ಆದರೆ ಇದನ್ನು ಲಕ್ಷ್ಯದಲ್ಲಿಡಿ. ನೀವು ಅಧ್ಯಾತ್ಮವನ್ನು ತ್ಯಜಿಸಿ, ಪಾಶ್ಚಾತ್ಯ ಭೌತಿಕ ನಾಗರಿಕತೆಯ ಆಕರ್ಷಣೆಗೆ ಒಳಗಾದರೆ ಮೂರು ತಲೆಮಾರಿನ ಹೊತ್ತಿಗೆ ನಿಮ್ಮ ಜನಾಂಗ ನಾಶವಾಗುವುದು. ಏಕೆಂದರೆ ಇದರಿಂದ ರಾಷ್ಟ್ರದ ಬೆನ್ನೆಲುಬು ಮುರಿಯುತ್ತದೆ. ಯಾವ ತಳಹದಿಯ ಮೇಲೆ ರಾಷ್ಟ್ರಸೌಧವು ನಿರ್ಮಿತವಾಗಿರುವುದೊ ಅದು ಕುಸಿದು ಬೀಳುತ್ತದೆ. ಇದರ ಪರಿಣಾಮವೇ ಸರ್ವನಾಶ.

ನುಡಿಮುತ್ತುಗಳು ೨೩

ಸಹೋದರರೇ, ಎಲ್ಲರೂ ಕಷ್ಟಪಟ್ಟು ದುಡಿಯೋಣ. ನಿದ್ರೆಗೆ ಸಮಯವಲ್ಲ ಇದು. ನಮ್ಮ ಇಂದಿನ ಕಾರ್ಯದ ಮೇಲೆ ಭವಿಷ್ಯ ಭಾರತ ನಿಂತಿದೆ. ನಮಗಾಗಿ ಆಕೆ ಕಾಯುತ್ತಿರುವಳು. ಆಕೆ ಕೇವಲ ನಿದ್ರಿಸುತ್ತಿರುವಳು, ಅಷ್ಟೇ. ಜಾಗೃತರಾಗಿ, ಏಳಿ, ಎದ್ದು ನೋಡಿ. ಹಿಂದಿಗಿಂತ ಹೆಚ್ಚು ವೈಭವಪೂರ್ಣಳಾಗಿ, ಬಲಿಷ್ಠಳಾಗಿ ನಮ್ಮ ಭಾರತ ಮಾತೆಯು ಶೋಭಾಯಮಾನವಾಗಿರುವ ಸನಾತನ ಸಿಂಹಾಸನದ ಮೇಲೆ ಮಂಡಿಸಿರುವುದುದನ್ನು ನೋಡಿ.

ನುಡಿಮುತ್ತುಗಳು ೨೪

ಯಾರನ್ನೂ ದೂರಬೇಡಿ, ನಿಮ್ಮ ಬಾಯಿ ಸುಮ್ಮನಿರಲಿ, ಹೃದಯ ತೆರದಿರಲಿ. ನಿಮ್ಮ ದೇಶದ ಮತ್ತು ಇಡಿಯ ಜಗತ್ತಿನ ಕಲ್ಯಾಣ ನಿಮ್ಮ ಮೇಲೆ ನಿಂತಿದೆ ಎಂದು ಭಾವಿಸಿ ಕಾರ್ಯೋನ್ಮುಖರಾಗಿ. ವೇದಾಂತದ ಸಂದೇಶವನ್ನು ಪ್ರತಿ ಮನೆಗೂ ಸಾರಿ. ಪ್ರತಿಯೊಂದು ಅತ್ಮದಲ್ಲಿರುವ ಸುಪ್ತ ಪಾವಿತ್ರ್ಯವನ್ನು ಜಾಗೃತಗೊಳಿಸಿ.

ನುಡಿಮುತ್ತುಗಳು ೨೫

ನಿಮ್ಮ ನರಗಳನ್ನು ದೃಢಪಡಿಸಿ. ನಮಗೆ ಇಂದು ಬೇಕಾಗಿರುವುದು ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಗಳು. ನಾವು ಬೇಕಾದಷ್ಟು ಅತ್ತಿರುವೆವು. ಇನ್ನೂ ಸಾಕು. ನಿಮ್ಮ ಕಾಲಿನ ಮೇಲೆ ನಿಂತು ಪುರುಷಸಿಂಹರಾಗಿ.

ನುಡಿಮುತ್ತುಗಳು ೨೬

ಸ್ಥಿರತೆಯನ್ನು ಪಡೆಯಿರಿ, ಎಲ್ಲಕ್ಕಿಂತ ಹೆಚ್ಚಾಗಿ ಪರಿಶುದ್ಧರಾಗಿ, ನಿಷ್ಠಾವಂತರಾಗಿ. ನಿಮ್ಮ ಭವಿಷ್ಯದಲ್ಲಿ ನಂಬಿಕೆಯಿಡಿ... ದುಡ್ಡಿಲ್ಲದ ನಿಮ್ಮ ಮೇಲೆ ಅದು ನಿಂತಿದೆ; ನೀವು ದೀನರು, ಅದಕ್ಕೆ ನೀವು ಕಾರ್ಯಪ್ರವೃತ್ತರಾಗುವಿರಿ. ನಿಮ್ಮಲ್ಲಿ ಏನೂ ಇಲ್ಲ, ಅದಕ್ಕೇ ನೀವು ನಿಷ್ಠಾವಂತರಾಗುವಿರಿ. ನೀವು ನಿಷ್ಠಾವಂತರಾಗಿರುವುದರಿಂದಲೇ ಸರ್ವವನ್ನೂ ತ್ಯಾಗಮಾಡಬಲ್ಲಿರಿ. ಈಗ ನಾನು ಇದನ್ನೇ ನಿಮಗೆ ಹೇಳುತ್ತಿರುವುದು.

ನುಡಿಮುತ್ತುಗಳು ೨೭

ನನ್ನ ದೇಶಬಾಂಧವರೇ! ಬಡವರಿಗೆ, ಪದದಳಿತರಿಗೆ, ಮೂರ್ಖರಿಗೆ ಮನಮರುಗಿ. ನಿಮ್ಮ ಎದೆಯ ಚಲನೆ ನಿಲ್ಲುವವರೆಗೂ, ತಲೆತಿರುಗಿ ಎಲ್ಲಿ ಹುಚ್ಚರಾಗುತ್ತೇವೋ ಎನ್ನುವವರೆವಿಗೂ, ಇವರಿಗೆ ಅನುಕಂಪವನ್ನು ತೋರಿ. ತರುವಾಯ ನಿಮ್ಮ ಎದೆಯ ಭಾರವನ್ನೆಲ್ಲಾ ಜಗದೀಶನ ಅಡಿದಾವರೆಯಲ್ಲಿ ಹಗುರಮಾಡಿ. ಬಲ, ಸಹಾಯ, ಎಂದಿಗೂ ಕುಗ್ಗದ ಶಕ್ತಿ ಆಗ ಬರುವುದು. 'ಹೋರಾಟ, ಹೋರಾಟ' ಎಂಬುದೇ ಕಳೆದ ಹತ್ತು ವರ್ಷಗಳಿಂದಲೂ ನನ್ನ ಆದರ್ಶವಾಗಿತ್ತು. ನಾನು ಈಗಲೂ ಹೋರಾಡಿ ಎಂದೇ ಹೇಳುವುದು. ಸುತ್ತಲೂ ಗಾಡಾಂಧಕಾರ ಕವಿದಿರುವಾಗ ಹೋರಾಡಿ ಎನ್ನುತ್ತಿದ್ದೆ. ಇನ್ನೇನು ಬೆಳಕು ಬರುತ್ತಿದೆ ಎನ್ನುವಾಗಲೂ ಹೋರಾಡಿ ಎನ್ನುವೆನು. ನನ್ನ ಪ್ರೀತಿಯ ಮಕ್ಕಳೇ! ಎಂದಿಗೂ ಅಂಜದಿರಿ.

ನುಡಿಮುತ್ತುಗಳು ೨೮

ಉತ್ಸಾಹಪೂರಿತರಾಗಿ, ಉತ್ಸಾಹದ ಕಿಡಿಗಳನ್ನು ಎಲ್ಲೆಲ್ಲಿಯೂ ಹರಡಿ. ದುಡಿಮೆ ದುಡಿಮೆ. ಮುಂದಾಳಾಗಿ ನಿಂತರೂ ಸೇವಕನಂತೀರ ಬೇಕು. ನಿಃಸ್ವಾರ್ಥಪರರಾಗಿ. ಒಬ್ಬ ಸ್ನೇಹಿತನು ರಹಸ್ಯವಾಗಿ ಇನ್ನೊಬ್ಬನ ಮೇಲೆ ಮಾಡುವ ದೂರಿಗೆ ಕಿವಿಕೊಡದಿರಿ. ಅನಂತ ತಾಳ್ಮೆಇರಲಿ. ಕಾರ್ಯ ಸಿದ್ಧಿಸುವುದು...ಎಚ್ಚರಿಕೆ! ಸುಳ್ಳು ಯಾವ ವೇಷದಲ್ಲೇ ಬರಲಿ ಜೋಕೆ! ಸತ್ಯವನ್ನೇ ನಂಬಿ. ನಿಧಾನವಾದರೇನು, ನಿಜವಾಗಿಯೂ ನಾವು ಜಯಶೀಲರಾಗುವೆವು. ನಾನು ಇಲ್ಲವೆಂದು ತಿಳಿದು ಕಾರ್ಯವನ್ನು ಮುಂದುವರಿಸಿ. ಈ ಕೆಲಸವೆಲ್ಲ ನಿಮ್ಮ ತಲೆಯ ಮೇಲೆ ಬಿದ್ದಿರುವುದೆಂದು ತಿಳಿದು ಕೆಲಸಕ್ಕೆ ಕೈಹಾಕಿ. ಐವತ್ತು ಶತಮಾನಗಳು ನಿಮ್ಮನ್ನು ನೋಡುತ್ತಿವೆ. ಭಾರತದ ಭವಿಷ್ಯ ನಿಮ್ಮ ಮೇಲಿದೆ ಕಾರ್ಯತತ್ಪರರಾಗಿ.

ನುಡಿಮುತ್ತುಗಳು ೨೯

ನನ್ನ ಭರವಸೆಯೆಲ್ಲ ಇಂದಿನ ಯುವಪೀಳಿಗೆಯ ಅಂದರೆ ಆಧುನಿಕ ಯುವಜನಾಂಗದ ಮೇಲೆ ನಿಂತಿದೆ. ಇವರಿಂದಲೇ ನನ್ನ ಕರ್ಮಠರು ಬರುವರು. ಅವರು ಕೆಚ್ಚೆದೆಯ ಸಿಂಹಗಳಂತೆ ಇಡೀ ಯೋಜನೆಯನ್ನು ಕಾರ್ಯಗತಗೊಳಿಸುವರು. ನಾನು ಅದರ ರೂಪುರೇಷೆಗಳನ್ನೆಲ್ಲಾ ನಿರೂಪಿಸಿ ಅದಕ್ಕಾಗಿ ನನ್ನ ಜೀವನವನ್ನೇ ಕೊಟ್ಟಿರುವೆನು..... ಅದನ್ನು ಸಾಕಾರಗೊಳಿಸಲು ಅವರು ಒಂದು ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಇಡೀ ಭರತಖಂಡವನ್ನೆಲ್ಲ ವ್ಯಾಪಿಸುವರು.

ನುಡಿಮುತ್ತುಗಳು ೩೦

ನಮಗೆ ಬೇಕಾಗಿರುವುದು ಎಲ್ಲವನ್ನೂ ತ್ಯಾಗಮಾಡಿ ದೇಶಕ್ಕಾಗಿ ತಮ್ಮ ಜೀವವನ್ನೇ ಅರ್ಪಿಸುವಂತಹ ಕೆಲವು ಮಂದಿ ಯುವಕರು. ಮೊದಲು ನಾವು ಅವರ ಜೀವನವನ್ನು ಮಾದರಿಯ ಜೀವನವನ್ನಾಗಿ ಮಾಡಬೇಕು. ನಂತರ ಅವರಿಂದ ಕೊಂಚ ನಿಧಾನವಾಗಿ ಕೆಲಸವನ್ನು ನಿರೀಕ್ಷಿಸಬಹುದು.

ನುಡಿಮುತ್ತುಗಳು ೩೧

ಇನ್ನೊಬ್ಬರಿಗಾಗಿ ಮಾಡುವ ಕೆಲಸ ಅದೆಷ್ಟೇ ಅಲ್ಪವಾಗಿರಲಿ, ಅದು ನಿಮ್ಮ ಸುಪ್ತಶಕ್ತಿಯನ್ನು ಜಾಗ್ರತಗೊಳಿಸುವುದು. ಇತರರ ಕಲ್ಯಾಣಕ್ಕಾಗಿ ನೀವು ಕಿಂಚಿತ್ತು ಯೋಚಿಸಿದರೂ ಕೂಡ ಕ್ರಮೇಣ ಅದು ನಿಮ್ಮ ಹೃದಯದಲ್ಲಿ ಸಿಂಹಸದೃಶ ಶಕ್ತಿಯನ್ನುಂಟುಮಾಡುವುದು. ನಾನು ನಿಮ್ಮೆಲ್ಲರನ್ನೂ ಎಂದೆಂದಿಗೂ ಪ್ರೀತಿಸುವೆ. ಆದರೂ ನೀವೆಲ್ಲರೂ ಮತ್ತೊಬ್ಬರ ಹಿತಕ್ಕಾಗಿ ಸಾಯುವುದನ್ನು ಇಷ್ಟಪಡುವೆ. ನೀವು ಹಾಗೆ ನಿಮ್ಮನ್ನೇ ಬಲಿಕೊಟ್ಟರೆ ನನಗೆ ಹೆಚ್ಚು ಸಂತೋಷವಾಗುತ್ತದೆ... ಎದ್ದೇಳಿ, ಚಕ್ರಕ್ಕೆ ನಿಮ್ಮ ಹೆಗಲನ್ನು ಕೊಡಿ-ಈ ಜೀವನ ಎಷ್ಟು ದಿನ ಇರಬಲ್ಲದು? ನೀವು ಈ ಜಗತ್ತಿಗೆ ಬಂದುದಕ್ಕೆ ಒಂದಾದರೂ ಗುರುತನ್ನು ಬಿಟ್ಟುಹೋಗಿ. ಇಲ್ಲದಿದ್ದಲ್ಲಿ ನಿಮಗೂ ಮರ ಕಲ್ಲುಗಳಿಗೂ ಏನು ವ್ಯತ್ಯಾಸ?

ನುಡಿಮುತ್ತುಗಳು ೩೨

ಯಾರ ನಾಡಿನಾಡಿಗಳಲ್ಲಿ ಅದ್ಭುತ ರಾಜಸ ಸ್ವಭಾವ ತುಂಬಿ ತುಳುಕಾಡುತ್ತಿದೆಯೊ, ಯಾರು ಸತ್ಯಸಾಕ್ಷಾತ್ಕಾರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಲು ಸಿದ್ಧರಾಗಿರುವರೊ, ಯಾರಿಗೆ ತ್ಯಾಗವೇ ಆಯುಧವಾಗಿದೆಯೊ, ಧರ್ಮವೆ ಖಡ್ಗವಾಗಿದೆಯೊ ಅಂತಹವರು ದೇಶಕ್ಕೆ ಬೇಕಾಗಿದೆ. ನಮಗಿಂದು ಬೇಕಾಗಿರುವುದು ಜೀವನಸಂಗ್ರಾಮದಲ್ಲಿ ಹೋರಾಡುತ್ತಿರುವ ಯೋಧನ ಕೆಚ್ಚೆದೆಯ ಭಾವ; ಜೀವನವನ್ನು ಭೋಗೋದ್ಯಾನದಂತೆ ನೋಡುವ ವಿಲಾಸಿಯ ಭಾವವಲ್ಲ.

ನುಡಿಮುತ್ತುಗಳು ೩೩

ನಿಮ್ಮಲ್ಲಿ ಆತ್ಮ ವಿಶ್ವಾಸವಿರಲಿ. ಒಮ್ಮೆ ನೀವೆಲ್ಲ ವೇದಗಳ ಋಷಿಗಳಾಗಿದ್ದಿರಿ. ಈಗ ಬೇರೆ ರೂಪಗಳಲ್ಲಿ ಬಂದಿರುವಿರಿ ಅಷ್ಟೆ. ನನಗದು ಸೂರ್ಯನ ಬೆಳಕಿನಂತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ನಿಮ್ಮಲ್ಲಿ ಅನಂತ ಶಕ್ತಿ ಇದೆ. ಅದನ್ನು ಜಾಗೃತಗೊಳಿಸಿ. ಏಳಿ, ಹೃನ್ಮನಳನ್ನು ಅರ್ಪಿಸಿ ಈ ಮಹತ್ಕಾರ್ಯದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಸೊಂಟಕಟ್ಟಿ ಸಿದ್ಧರಾಗಿ. ಕ್ಷಣಿಕವಾದ ಸಿರಿ ಕೀರ್ತಿಯಿಂದೇನು ಮಾಡುವಿರಿ? ನನಗನ್ನಿಸುವುದೇನು ಗೊತ್ತೆ? ಮುಕ್ತಿ ಮುಂತಾದ ಯಾವುದಕ್ಕೂ ನಾನು ಗಮನ ಕೊಡುವುದಿಲ್ಲ. ನಿಮ್ಮಲ್ಲೆಲ್ಲಾ ಮಹದಾಲೋಚನೆಗಳನ್ನು ಬಿತ್ತಿ ಇಂತಹ ಭಾವನೆಯನ್ನು ಜಾಗೃತಗೊಳಿಸುವುದೇ ನನ್ನ ಧ್ಯೇಯ. ಕೇವಲ ಒಂದೇ ಒಂದು ವ್ಯಕ್ತಿಯನ್ನು ತರಬೇತು ಮಾಡಲು ನಾನು ಸಾವಿರಾರು ಜನ್ಮಗಳನ್ನು ಎತ್ತಿಬರಲು ಸಿದ್ಧನಿದ್ದೇನೆ.

ನುಡಿಮುತ್ತುಗಳು ೩೪

ವತ್ಸ! ಸಾವು ಅನಿವಾರ್ಯವಾದರೆ ಸಸ್ಯ, ಪ್ರಾಣಿಗಳಂತೆ ಸಾಯುವುದಕ್ಕಿಂತ ವೀರನಂತೆ ಮಡಿಯುವುದು ಲೇಸಲ್ಲವೆ? ಈ ಕ್ಷಣಭಂಗುರವಾದ ಪ್ರಪಂಚದಲ್ಲಿ ಒಂದೆರಡು ದಿನ ಜಾಸ್ತಿ ಬದುಕಿದರೆ ತಾನೆ ಏನು? ಸಾಯುವವರೆಗೆ ಈ ಬಾಳನ್ನು ತುಕ್ಕುಹಿಡಿಯುವಂತೆ ಮಾಡುವುದಕ್ಕಿಂತ ಇತರರಿಗೆ ಸ್ವಲ್ಪವಾದರೂ ಒಳ್ಳೆಯದನ್ನು ಮಾಡುವುದರಲ್ಲಿ ಸವೆಸುವುದು ಮೇಲು.

ನುಡಿಮುತ್ತುಗಳು ೩೫

ದೇಹದಲ್ಲಿ ಶಕ್ತಿ ಇಲ್ಲದೆ, ಎದೆಯಲ್ಲಿ ಉತ್ಸಾಹವಿಲ್ಲದೆ, ಮಿದುಳಿನಲ್ಲಿ ಸ್ವತಂತ್ರಾಲೋಚನೆಯಿಲ್ಲದೆ ಅವರೇನು ಮಾಡಬಲ್ಲರು ಕೇವಲ ಜಡತ್ವದ ಮುದ್ದೆಗಳು!! ಅವರನ್ನು ಜಾಗ್ರತಗೊಳಿಸುವುದರ ಮೂಲಕ ಅವರಲ್ಲಿ ಜೀವಕಳೆಯನ್ನು ತುಂಬಲೀಚ್ಛಿಸುವೆನು. ಇದಕ್ಕಾಗಿ ನನ್ನ ಜೀವವನ್ನೇ ಮುಡುಪಾಗಿಟ್ಟಿರುವೆನು. ಅವರನ್ನು ವೇದ ಮಂತ್ರಗಳ ಅಮೋಘ ಶಕ್ತಿಯಿಂದ ಎಚ್ಚರಿಸುವೆನು. 'ಉತ್ತಿಷ್ಠತ ಜಾಗ್ರತ ಪ್ರಾಪ್ಯವರಾನ್ನಿಬೋಧತ...' ಎಂಬ ಅಭಯವಾಣಿಯನ್ನು ಅವರಿಗೆ ಉಸುರುವದಕ್ಕಾಗಿಯೇ ನಾನು ಜನ್ಮವೆತ್ತಿದ್ದೇನೆ. ನೀವೆಲ್ಲಾ ನನ್ನ ಕಾರ್ಯಕ್ಕೆ ಸಹಾಯಕರಾಗಿ.

ನುಡಿಮುತ್ತುಗಳು ೩೬

ಸಂಖ್ಯೆಯಿಂದ ಪ್ರಯೋಜನವಿಲ್ಲ. ಸಂಪತ್ತಾಗಲೀ ಬಡತನವಾಗಲೀ ನಗಣ್ಯ. ಕೆಲವೇ ಜನರು ಕಾಯಾವಾಚಾಮನಸಾ ಒಗ್ಗೂಡಿದರೆ ಅವರು ಪ್ರಪಂಚವನ್ನೇ ಬದಲಾಯಿಸಬಲ್ಲರೆಂಬ ದೃಢನಂಬಿಕೆಯನ್ನು ಎಂದಿಗೂ ಮರೆಯದಿರಿ. ವಿರೋಧವಿದ್ದಷ್ಟೂ ಒಳ್ಳೆಯದೆ. ಒಂದು ನದಿಗೆ ಅಡೆತಡೆಗಳಿಲ್ಲದೇ ಇದ್ದರೆ ವೇಗ ಹುಟ್ಟುವುದೇ? ಯಾವುದೇ ವಿಚಾರ, ಭಾವನೆ ಹೊಸದಾಗಿದ್ದಷ್ಟೂ, ಉತ್ತಮವಾಗಿದ್ದಷ್ಟೂ ಅದಕ್ಕೆ ಪ್ರಾರಂಭದಲ್ಲಿ ಅಡ್ಡಿ ಆತಂಕಗಳು ಹೆಚ್ಚು. ವಿರೋಧವೇ ಬರಲಿರುವ ಜಯದ ಚಿಹ್ನೆ. ಎಲ್ಲಿ ವಿರೋಧವಿಲ್ಲವೋ ಅಲ್ಲಿ ಜಯವೂ ಇಲ್ಲ.

ನುಡಿಮುತ್ತುಗಳು ೩೭

ಜನರು ಮೆಚ್ಚಲಿ, ಮೆಚ್ಚದಿರಲಿ, ಈ ಯುವಜನತೆಯನ್ನು ಸಂಘಟಿಸುವುದಕ್ಕೆ ನಾನು ಜನ್ಮವೆತ್ತಿರುವುದು. ಪ್ರತಿಯೊಂದು ಪ್ರದೇಶದಿಂದಲೂ ಇಂತಹ ನೂರಾರು ಜನರು ನನ್ನೊಡನೆ ಕೆಲಸಮಾಡಲು ಸಿದ್ಧರಾಗಿರುವರು. ನಿಗ್ರಹಿಸಲಾರದ ಪ್ರಚಂಡ ತರಂಗ ಬಂದು ಕೊಚ್ಚಿಕೊಂಡು ಹೋಗುವಂತೆ ಈ ಯುವಕರೆಲ್ಲರನ್ನೂ ಭರತಖಂಡದ ಮೇಲೆ ಬಿಡುವೆನು. ಅತ್ಯಂತ ದೀನರ ಮತ್ತು ದಲಿತರ ಮನೆಯ ಬಾಗಿಲಿಗೆ, ಜೀವನದಲ್ಲಿ ಸೌಖ್ಯ, ನೀತಿ, ಧರ್ಮ, ವಿದ್ಯೆ ಬರುವಂತೆ ಮಾಡುವೆನು. ಇದನ್ನು ನಾನು ಮಾಡುವೆನು. ಇಲ್ಲವೇ ಮಡಿಯುವೆನು.

ನುಡಿಮುತ್ತುಗಳು ೩೮

...ನೀವು ನಿಜವಾಗಿಯೂ ನನ್ನ ಸುತರೇ ಆಗಿದ್ದಾರೆ ನೀವು ಯಾವುದಕ್ಕೂ ಅಂಜುವುದಿಲ್ಲ, ಏನೇ ಆದರೂ ಕೆಲಸ ನಿಲ್ಲಿಸುವುದಿಲ್ಲ. ನೀವು ಸಿಂಹಸದೃಶರಾಗುವಿರಿ. ನಾವು ಭರತಖಂಡವನ್ನು, ಇಡೀ ವಿಶ್ವವನ್ನು ಹುರಿದುಂಬಿಸಿ ಪ್ರಚೋದಿಸಬೇಕು.... ಅವಶ್ಯವಿದ್ದಲ್ಲಿ ನನ್ನ ಸುತರು ಕಾರ್ಯಸಾಧನೆಗಾಗಿ ಅಗ್ನಿಗೆ ಧುಮುಕಲೂ ಸಿದ್ಧರಾಗಿರಬೇಕು.

ನುಡಿಮುತ್ತುಗಳು ೩೯

ಆರ್ಯಮಾತೆಯ ಅಮೃತಪುತ್ರರಿರಾ, ಮರೆಯದಿರಿ, ನಿಮ್ಮ ಸ್ತ್ರೀಯರ ಆದರ್ಶ ಸೀತಾ, ಸಾವಿತ್ರಿ, ದಮಯಂತಿಯರು. ಮರೆಯದಿರಿ, ನೀವು ಪೂಜಿಸುವ ಜಗದೀಶ್ವರನು ತ್ಯಾಗಿಕುಲ ಚೂಡಾಮಣಿ, ಉಮಾವಲ್ಲಭ, ಶಂಕರ. ಮರೆಯದಿರಿ, ನಿಮ್ಮ ವಿವಾಹ, ನಿಮ್ಮ ಐಶ್ವರ್ಯ, ನಿಮ್ಮ ಜೀವನ, ಬರಿಯ ಇಂದ್ರಿಯ ಭೋಗಕ್ಕೆ ಅಲ್ಲ, ವ್ಯಕ್ತಿಗತ ಸುಖಕ್ಕೆ ಅಲ್ಲ. ಮರೆಯದಿರಿ! ಜಗನ್ಮಾತೆಯ ಅಡಿದಾವರೆಯಲ್ಲಿ ಬಲಿದಾನಕ್ಕಾಗಿ ನೀವು ಜನ್ಮವೆತ್ತಿರುವಿರಿ!... ಮರೆಯದಿರಿ, ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರೆಲ್ಲರೂ ನಿಮ್ಮ ರಕ್ತಬಂಧುಗಳಾದ ಸಹೋದರರು!

ನುಡಿಮುತ್ತುಗಳು ೪೦

ಎಲ್ಲೆಲ್ಲಿ ಪ್ಲೇಗ್ ಅಥವಾ ಕ್ಷಾಮವಿದೆಯೊ, ಎಲ್ಲೆಲ್ಲಿ ಜನರು ದುಃಖಕ್ಕೆ ಗುರಿಯಾಗಿದ್ದಾರೋ ಅಲ್ಲಿಗೆ ನೀವೆಲ್ಲಾ ಹೋಗಿ ಅವರ ನೋವನ್ನು ಕಡಿಮೆ ಮಾಡಲು ಯತ್ನಿಸಿ. ಹೆಚ್ಚೆಂದರೆ ನೀವೀ ಕೆಲಸದಲ್ಲಿ ಸಾಯಬಹುದು-ಸತ್ತರೇನಂತೆ? ಪ್ರತಿದಿನವೂ ನಿಮ್ಮಲ್ಲಿ ಎಷ್ಟು ಜನ ಹುಟ್ಟಿ ಹುಳುಗಳಂತೆ ಸಾಯುತ್ತಿಲ್ಲ! ಪ್ರಪಂಚಕ್ಕೆ ಇದರಿಂದಾಗುವ ನಷ್ಟವೇನು? ನೀವು ಒಂದಲ್ಲ ಒಂದು ದಿನ ಸಾಯಲೇಬೇಕು. ಆದರೆ ಸಾಯಲು ಒಂದು ಘನ ಉದ್ದೇಶವಿರಲಿ. ಜೀವನದಲ್ಲಿ ಒಂದು ಘನ ಉದ್ದೇಶಕ್ಕಾಗಿ ಸಾಯುವುದೊಳ್ಳೆಯದು.

ನುಡಿಮುತ್ತುಗಳು ೪೧

ನೀವು ಯಾವ ವಿದೇಶೀ ಸಹಾಯವನ್ನೂ ಅವಲಂಬಿಸಕೂಡದು. ವ್ಯಕ್ತಿಗಳಂತೆ ರಾಷ್ಟ್ರಗಳೂ ತಮಗೆ ತಾವೇ ನೆರವಾಗಬೇಕು. ಇದೇ ನಿಜವಾದ ಸ್ವದೇಶಪ್ರೇಮ. ಒಂದು ರಾಷ್ಟ್ರ ಇದನ್ನು ಮಾಡಲಾರದೆ ಹೋದರೆ ಅದರ ಸಮಯ ಇನ್ನೂ ಒದಗಿ ಬಂದಿಲ್ಲ. ಅದು ಇನ್ನೂ ಕಾಯಲೇಬೇಕು.

ನುಡಿಮುತ್ತುಗಳು ೪೨

ಸಾಯುವವರೆಗೆ ಕೆಲಸ ಮಾಡುತ್ತಾ ಹೋಗಿ- ನಾನು ನಿಮ್ಮೊಡನಿರುವೆ ನಾನು ಹೋದಮೇಲೆ ನನ್ನ ಆತ್ಮ ನಿಮ್ಮೊಡನೆ ಕೆಲಸ ಮಾಡುವುದು. ಈ ಬಾಳು ಬರುವುದು ಹೋಗುವುದು-ಐಶ್ವರ್ಯ, ಕೀರ್ತಿ, ಭೋಗಗಳೆಲ್ಲಾ ಕೇವಲ ಕೆಲವು ದಿನಗಳು ಮಾತ್ರ ಇರುವುವು. ಪ್ರಾಪಂಚಿಕ ಹುಳುಗಳಂತೆ ಸಾಯುವುದಕ್ಕಿಂತ ಸತ್ಯವನ್ನು ಸಾರುತ್ತಾ ಕರ್ತವ್ಯ ಕ್ಷೇತ್ರದಲ್ಲಿ ಮಡಿಯುವುದು ಪರಮೋತ್ಕೃಷ್ಟವಾದುದು. ಮುಂದುವರಿಯಿರಿ!