ಮೊದಲ ದಿನಗಳು

 ತಮ್ಮ ಪೂರ್ವಾಶ್ರಮದ ದಿನಗಳಲ್ಲಿ ನರೇನ್ ಎಂದು ಕರೆಯಲ್ಪಡುತ್ತಿದ್ದ ಸ್ವಾಮಿ ವಿವೇಕಾನಂದರು ಅಥವಾ ನರೇಂದ್ರನಾಥದತ್ತ 1863ನೆಯ ಇಸವಿಯ ಜನವರಿ 12ರ ಸೋಮವಾರದಂದು ವಿಶ್ವನಾಥದತ್ತ ಮತ್ತು ಭುವನೇಶ್ವರಿದೇವಿ ದಂಪತಿಗಳಿಗೆ ಕಲ್ಕತ್ತಾದಲ್ಲಿ ಜನಿಸಿದರು. ದತ್ತ ಕುಟುಂಬವು ಶ್ರೀಮಂತಿಕೆ ಮತ್ತು ಗೌರವ, ಪ್ರತಿಷ್ಠೆಗಳನ್ನು ಗಳಿಸಿದ್ದು ಔದಾರ್ಯ, ಪಾಂಡಿತ್ಯ ಮತ್ತು ತೀವ್ರ ಸ್ವಾತಂತ್ರ್ಯ ಪ್ರಿಯತೆಗೆ ಹೆಸರುವಾಸಿಯಾಗಿದ್ದಿತು. ನರೇಂದ್ರನ ತಾತನವರಾದ ದುರ್ಗಾಚರಣದತ್ತರು ಪರ್ಶಿಯನ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಹಾಗೂ ಕಾನೂನಿನಲ್ಲೂ (Law) ಪರಿಣತರಾಗಿದ್ದರು. ಆದರೆ ತಮ್ಮ ಮಗ ವಿಶ್ವನಾಥದತ್ತರು ಜನಿಸಿದ ನಂತರ ಲೌಕಿಕ ಜಗತ್ತನ್ನು ಪರಿತ್ಯಜಿಸಿ ಸಂನ್ಯಾಸಿಯಾದರು. ಆಗ ಅವರಿಗೆ ಕೇವಲ ಇಪ್ಪತ್ತೈದು ವರ್ಷವಾಗಿತ್ತು.


ವಿಶ್ವನಾಥದತ್ತರು ಕಲ್ಕತ್ತಾ ಹೈಕೋರ್ಟಿನಲ್ಲಿ ಸರ್ಕಾರಿ ವಕೀಲರಾಗಿದ್ದರು. ಇಂಗ್ಲೀಷ್ ಮತ್ತು ಪರ್ಶಿಯನ್ ಭಾಷೆಗಳಲ್ಲಿ ಪ್ರವೀಣರಾಗಿದ್ದ ಅವರು ಪರ್ಶಿಯಾದ ಪ್ರಸಿದ್ಧ ಕವಿಯಾದ ಹಫೀಜನ ಕವನಗಳನ್ನು ತಮ್ಮ ಮನೆಯವರ ಮುಂದೆ ಪಠಿಸಿ ಸಂತೋಷಪಡುತ್ತಿದ್ದರು. ಬೈಬಲ್ ಮತ್ತು ಸಂಸ್ಕೃತದಲ್ಲಿರುವ ಹಿಂದೂ ಧರ್ಮಗ್ರಂಥಗಳ ಅಧ್ಯಯನದಿಂದ ಆನಂದವನ್ನು ಅನುಭವಿಸುತ್ತಿದ್ದರು. ಅವರು ಬಹಳ ಉದಾರಿಗಳಾಗಿದ್ದು, ಅವರಿಗೆ ಬಡಜನರಲ್ಲಿ ಅಪಾರ ಸಹಾನುಭೂತಿ ಇತ್ತು. ಆದರೂ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಲೋ ಏನೋ ಧಾರ್ಮಿಕ ಹಾಗೂ ಸಾಮಾಜಿಕ ವಿಷಯಗಳಲ್ಲಿ ವಿಚಾರವಾದಿಯೂ ಪ್ರಗತಿಪರ ಮನೋಭಾವನೆಯುಳ್ಳವರೂ ಆಗಿದ್ದರು. ಭುವನೇಶ್ವರಿದೇವಿಯವರು ರಾಜಕುಟುಂಬದ ಸುಸಂಸ್ಕೃತ ಹೆಣ್ಣಾಗಿದ್ದರು. ಪರಮ ಧಾರ್ಮಿಕರಾಗಿದ್ದರು. ಅವರಿಗೆ ನರೇಂದ್ರ ಹುಟ್ಟುವ ಮುನ್ನ ಹೆಣ್ಣು ಮಕ್ಕಳಾಗಿದ್ದರೂ, ಅವರು ಗಂಡುಮಗುವಿಗಾಗಿ ಹಾತೊರೆಯುತ್ತಿದ್ದರು. ಅದಕ್ಕಾಗಿ ವಾರಣಾಸಿಯಲ್ಲಿದ್ದ ತಮ್ಮ ಬಂಧುವೊಬ್ಬರಿಗೆ ವೀರೇಶ್ವರ ಶಿವನಿಗೆ ಪೂಜೆಯನ್ನು ಸಲ್ಲಿಸುವಂತೆ ಕೇಳಿಕೊಂಡರು. ಕೆಲದಿನಗಳ ತರುವಾಯ ಶಿವ ಅವರ ಕನಸಿನಲ್ಲಿ ಕಾಣಿಸಿಕೊಂಡು ತಾನು ಅವರ ಮಗನಾಗಿ ಜನಿಸುವೆನೆಂದು ವಚನವಿತ್ತ. ಆ ನಂತರವೇ ನರೇಂದ್ರನಾಥನ ಜನನವಾಯಿತು.


ಬಾಲ್ಯದಲ್ಲಿ ನರೇಂದ್ರ ಬಹಳ ತುಂಟನಾಗಿದ್ದು ವಿನೋದ ಉಲ್ಲಾಸಗಳಲ್ಲಿ ಕಾಲ ಕಳೆಯುತ್ತಿದ್ದನು. ಜೊತೆಗೆ ಆಧ್ಯಾತ್ಮಿಕ ವಿಷಯಗಳ ಬಗ್ಗೆ ತೀವ್ರವಾದ ಆಸಕ್ತಿಯೂ ಇತ್ತು. ರಾಮ-ಸೀತೆ ಮತ್ತು ಶಿವನ ಪ್ರತಿಮೆಗಳನ್ನು ಪೂಜಿಸುವುದಾಗಲೀ, ಧ್ಯಾನಿಸುವುದಾಗಲೀ ಇವನಿಗೊಂದು ಆಟವಾಗಿತ್ತು. ಇವನ ತಾಯಿ ಹೇಳುತ್ತಿದ್ದ ರಾಮಾಯಣ, ಮಹಾಭಾರತಗಳ ಕಥೆಗಳು ಇವನ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿದವು. ಧೈರ್ಯ, ಬಡವರ ಬಗ್ಗೆ ಕನಿಕರ, ಪರಿವ್ರಾಜಕ ಸಂನ್ಯಾಸಿಗಳನ್ನು ಕಂಡರೆ ಅಪಾರ ಆಕರ್ಷಣೆ ಈ ವಿಶೇಷ ಲಕ್ಷಣಗಳು ಅವನಲ್ಲಿ ಸಹಜವಾಗಿ ಕಾಣಿಸಿಕೊಂಡವು. ಬಾಲಕನಾಗಿದ್ದಾಗ ಸಹ ಅವನು ಪ್ರತಿಯೊಂದು ಹೇಳಿಕೆಯನ್ನು ಕುರಿತು ಯುಕ್ತಿ ಪ್ರಮಾಣಗಳ ಬಗ್ಗೆ ಒತ್ತಾಯಿಸುತ್ತಿದ್ದನು. ಈ ಎಲ್ಲಾ ಲಕ್ಷಣಗಳನ್ನು ಮೈಗೂಡಿಕೊಂಡು ಅವನು ಸತ್ವಶಾಲಿಯಾದ ತರುಣನಾದನು.


ಶ್ರೀರಾಮಕೃಷ್ಣರ ಪದತಲದಲ್ಲಿ

ತಾರುಣ್ಯದಲ್ಲಿ ನರೇಂದ್ರನು ಗಂಭೀರ ಚೆಲುವಿನ ಕೆಚ್ಚಿನ ಯುವಕನಾಗಿದ್ದನು. ಒಳ್ಳೆಯ ಕ್ರೀಡಾಪಟುವಿನ ಮೈಕಟ್ಟು, ಅನುರಣಿಸುವ ಧ್ವನಿ, ತೀಕ್ಷ್ಣ ಬುದ್ಧಿಯವನಾಗಿದ್ದನು. ಕ್ರೀಡೆ, ತತ್ತ್ವಶಾಸ್ತ್ರ, ಸಂಗೀತ ವಿದ್ಯೆಗಳಲ್ಲಿ ಪ್ರವೀಣನಾಗಿದ್ದು ತನ್ನ ಸಹಪಾಠಿಗಳಲ್ಲಿ ಪ್ರತಿ ವಿರೋಧಿಯೇ  ಇಲ್ಲದ ಮುಂದಾಳಾಗಿದ್ದನು. ಕಾಲೇಜಿನಲ್ಲಿ ಪಾಶ್ಚಾತ್ಯ ಚಿಂತನೆಯನ್ನು ಅಭ್ಯಸಿಸಿ ಅದರ ಹಿರಿಮೆಯನ್ನು ಅರಿತುಕೊಂಡನು. ಇದು ಅವನಲ್ಲಿ ವಿಮರ್ಶಾತ್ಮಕ ಸ್ವಭಾವವು ನೆಲೆಗೊಳ್ಳಲು ಕಾರಣವಾಯಿತು. ಆಧ್ಯಾತ್ಮದ ಬಗ್ಗೆ ಸಹಜಸಿದ್ಧವಾದ ಒಲವು ; ಮತ್ತು ಪ್ರಾಚೀನ ಧಾರ್ಮಿಕ ಸಂಪ್ರದಾಯಗಳಲ್ಲಿ  ಗೌರವ ಒಂದು ಕಡೆ, ಇನ್ನೊಂದೆಡೆ ಮೊನಚಾದ ಬುದ್ಧಿಶಕ್ತಿಯೊಂದಿಗೆ ವಿಮರ್ಶೆ ಮಾಡುವಂತಹ ಶಕ್ತಿ, ಅವನ ಇವೆರಡು ಮನಸ್ಥಿತಿಗಳ ನಡುವೆ ಪರಸ್ಪರ ಸಂಘರ್ಷ ನಡೆಯುತ್ತಲೇ ಇತ್ತು. ಈ ಸಂದಿಗ್ಧ ಸ್ಥಿತಿಯಲ್ಲಿ ಆಗಿನ ಸಾಮಾಜಿಕ-ಧಾರ್ಮಿಕ ಕ್ರಾಂತಿಗೆ ಪ್ರಖ್ಯಾತವಾಗಿದ್ದ ಬ್ರಹ್ಮ ಸಮಾಜದಿಂದ ಸಮಾಧಾನ ಪಡೆಯಲು ಪ್ರಯತ್ನಿಸಿದನು. ಬ್ರಹ್ಮ ಸಮಾಜ ನಿರಾಕಾರ ಬ್ರಹ್ಮದಲ್ಲಿ ನಂಬಿಕೆಯನ್ನಿಟ್ಟುಕೊಂಡಿತ್ತು. ಮೂರ್ತಿಪೂಜೆಯನ್ನು ಬಹಿಷ್ಕರಿಸಿತ್ತಲ್ಲದೆ ವಿವಿಧ ರೀತಿಯ ಸಾಮಾಜಿಕ ಸುಧಾರಣೆಗಳಿಗೆ ಹೆಸರಾಂತವಾಗಿತ್ತು. ನರೇಂದ್ರನಾಥನು  ಪ್ರಖ್ಯಾತರಾದ ಧರ್ಮ ಪ್ರಚಾರಕರನ್ನು ಭೇಟಿಯಾದರೂ ಸಹ ದೇವರ ಅಸ್ತಿತ್ವದ ಬಗೆಗಿನ ಇವನ ಪ್ರಶ್ನೆಗಳಿಗೆ ಸಮರ್ಪಕವಾದ ಯಾವ ಉತ್ತರವೂ ಸಿಗಲಿಲ್ಲ. ಇದು ಅವನಲ್ಲಿ ಆಧ್ಯಾತ್ಮಿಕ ಘರ್ಷಣೆಯನ್ನು ಮತ್ತಷ್ಟು ವೃದ್ಧಿಗೊಳಿಸಿತು.


ಈ ಕುತ್ತಿನ ಪರಿಸ್ಥಿತಿಯಲ್ಲಿ ;’ದಿ ಎಕ್ಸ್ ಕರ್ಷನ್’ ಪದ್ಯದಲ್ಲಿ ವರ್ಡ್ಸ್‌ವರ್ತ್ ಕವಿಯು ವರ್ಣಿಸಿರುವ ಅನಿರ್ವಚನೀಯತೆಯ ಪರವಶತೆಯನ್ನು ಅನುಭವಿಸಿರುವ, ಕಲ್ಕತ್ತಾದ ಹೊರವಲಯದ ದಕ್ಷಿಣೇಶ್ವರದಲ್ಲಿರುವ ಸಾಧು ಒಬ್ಬರ ಬಗ್ಗೆ, ತಮ್ಮ ಪ್ರಾಧ್ಯಾಪಕ ಹೇಸ್ಟಿಯವರು ಹೇಳಿದ್ದ ಮಾತುಗಳನ್ನು ನೆನಪಿಸಿಕೊಂಡನು. ಆ ಸಾಧುವನ್ನು ಒಮ್ಮೆ ಸಂದರ್ಶಿಸಬೇಕೆಂದು ಅವನ ಸಂಬಂಧಿಕನಾದ ರಾಮಚಂದ್ರದತ್ತನು ಸಹ ಪ್ರೋತ್ಸಾಹಿಸಿದನು. ಹೀಗೆ 1881ರಲ್ಲಿ  ಆಧುನಿಕ ಭಾರತದ ಪ್ರವಾದಿ ಮತ್ತು ಅವರ ಸಂದೇಶವಾಹಕ ಅನುಚರ ಈ ಎರಡು ಮಹಾಚೇತನಗಳ ಐತಿಹಾಸಿಕ ಮಿಲನ ಜರುಗಿತು. ಶ್ರೀ ರಾಮಕೃಷ್ಣರನ್ನು ಕುರಿತು ನರೇಂದ್ರನಾಥನು, “ಮಹಾಶಯ ನೀವು ದೇವರನ್ನು ನೋಡಿದ್ದೀರಾ ?” ಎಂದು ಪ್ರಶ್ನೆ ಹಾಕಿದನು. ರಾಮಕೃಷ್ಣರು “ಹೌದು ನಿನ್ನನ್ನು ಈಗ ಇಲ್ಲಿ ನೋಡುತ್ತಿರುವುದಕ್ಕಿಂತಲೂ ಗಾಢವಾಗಿ ಅವನನ್ನು ನೋಡಿದ್ದೇನೆ” ಎಂದು ಉತ್ತರವಿತ್ತರು. ಅಲ್ಲಿಗೆ ದೇವರ ಅಸ್ತಿತ್ವದ ಬಗ್ಗೆ ಅನುಭವದಿಂದ ನುಡಿಯುವ ಒಬ್ಬ ವ್ಯಕ್ತಿ ದೊರೆತು, ಅವನ ಸಂದೇಹ ಪರಿಹಾರವಾಗಿ ಅವನ ಶಿಷ್ಯವೃತ್ತಿ ಪ್ರಾರಂಭವಾಯಿತು.


ನರೇಂದ್ರನಾಥನನ್ನು  ಶ್ರೀರಾಮಕೃಷ್ಣರು ಅನೇಕ ರೀತಿಯಲ್ಲಿ ಪರೀಕ್ಷಿಸುತ್ತಿದ್ದಂತೆಯೇ ನರೇಂದ್ರನಾಥನೂ ಸಹ ಶ್ರೀರಾಮಕೃಷ್ಣರ ಆಧ್ಯಾತ್ಮಿಕ ಅಧಿಕಾರವಾಣಿಯ ಸತ್ಯವನ್ನು ಅರಿಯಲು ಅವರನ್ನು ಪರೀಕ್ಷಿಸಿದನು. 1884ರಲ್ಲಿ, ತನ್ನ ತಂದೆಯ ಮರಣದ ನಂತರ ನರೇಂದ್ರನ ಕುಟುಂಬವು ಬಹಳ ಕಷ್ಟ-ಕೋಟಲೆಗಳು, ಕುಂದು-ಕೊರತೆಗಳಿಗೊಳಗಾದಾಗ ಗುರುಗಳ ಸೂಚನೆಯ ಪ್ರಕಾರ ತನ್ನ ಸಂಸಾರದ ಕಷ್ಟಗಳ ನಿವಾರಣೆಗಾಗಿ, ದಕ್ಷಿಣೇಶ್ವರದ ಮಹಾಮಾತೆ ಯಾದ ಕಾಳಿಯನ್ನು ಪ್ರಾರ್ಥಿಸಲು ಪ್ರಯತ್ನಿಸಿದನು. ಆದರೆ, ಅವನಿಗೆ ಹಣದ ಅಗತ್ಯವಿದ್ದರೂ ಜ್ಞಾನ ಮತ್ತು ಭಕ್ತಿಗಾಗಿ ಮಾತ್ರ ಪ್ರಾರ್ಥಿಸಲು ಸಾಧ್ಯವಾಯಿತು.


ಕ್ರಮೇಣ ನರೇಂದ್ರನಾಥನು ಶ್ರೀರಾಮಕೃಷ್ಣರಿಗೆ ಶರಣಾಗತನಾದನು. ಶ್ರೀರಾಮಕೃಷ್ಣರು ಅಪಾರವಾದ ತಾಳ್ಮೆಯಿಂದ, ತಮ್ಮ ತರುಣ ಶಿಷ್ಯನ ಹೋರಾಟ ಮನೋಭಾವವನ್ನು  ಶಾಂತಗೊಳಿಸಿ, ಸಂದೇಹದಿಂದ ನಿರ್ಧಾರದ ಕಡೆಗೆ, ಬೇಗುದಿಯಿಂದ ಆಧ್ಯಾತ್ಮಿಕ ಅನಂದದೆಡೆಗೆ ಕರೆದೊಯ್ದುರು. ಆದರೆ ಶ್ರೀರಾಮಕೃಷ್ಣರ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಬೆಂಬಲಕ್ಕಿಂತ ಹೆಚ್ಚಾಗಿ ಅವರ ಪ್ರೀತಿಯು ನರೇಂದ್ರನಾಥನನ್ನು ಗೆದ್ದಿತು. ನರೇಂದ್ರ ಸಹ ಪ್ರತಿಯಾಗಿ ಅವರ ಪ್ರೀತಿಗೆ ಸಂಪೂರ್ಣವಾಗಿ ಸ್ಪಂದಿಸಿದನು.


ಶ್ರೀ ರಾಮಕೃಷ್ಣರು ಅನಾರೋಗ್ಯದಿಂದಾಗಿ ಕಲ್ಕತ್ತಾನಗರದ ಹೊರವಲಯದಲ್ಲಿರುವ ಕಾಶೀಪುರಕ್ಕೆ ತೆರಳುವುದರೊಂದಿಗೆ ನರೇಂದ್ರನಿಗೆ ಗುರುವಿನಿಂದ ಪಡೆಯುವ ಶಿಕ್ಷಣ ಕೊನೆಯ ಘಟ್ಟ ತಲುಪಿತು. ಅವನಲ್ಲಿ ತುಂಬಿದ್ದ ಅಸಾಧಾರಣವಾದ ಆಧ್ಯಾತ್ಮಿಕ ಕಿಚ್ಚು, ವಿವಿಧ ರೀತಿಯ ತೀವ್ರ ಅನುಷ್ಠಾನಗಳಿಂದ ಹೊರಹೊಮ್ಮಲು ಅದು ಸಂಧಿಕಾಲವಾಗಿತ್ತು. ಶ್ರೀರಾಮಕೃಷ್ಣರು ನರೇಂದ್ರನ ನೇತೃತ್ವದಲ್ಲಿನ ತಮ್ಮ ತರುಣ ಶಿಷ್ಯರನ್ನು ಬೆಳಸಲು ಈ ಸದವಕಾಶವನ್ನು ಉಪಯೋಗಿಸಿಕೊಂಡರು. ಆಧ್ಯಾತ್ಮಿಕ ಅನುಭವದ ಪರಾಕಾಷ್ಠೆಯಾದ ನಿರ್ವಿಕಲ್ಪ ಸಮಾಧಿಯನ್ನು ಅನುಗ್ರಹಿಸಬೇಕೆಂದು ನರೇಂದ್ರನು ಗುರುವನ್ನು ಕೇಳಿದಾಗ “ಆಲದ ಮರದಂತೆ ಮಹಾವೃಕ್ಷವಾಗಿ ಬೆಳೆದು, ಸಂಸಾರದ ಕಷ್ಟಕೋಟಲೆಯಿಂದ ನರಳುತ್ತಿರುವ ಸಾವಿರಾರು ಜನರಿಗೆ ಶಾಂತಿಯನ್ನು ನೀಡುವೆಯೆಂದು ತಾನು ತಿಳಿದಿದ್ದೆ. ಆದರೆ ನೀನು ಅದನ್ನು ಬಿಟ್ಟು ಸ್ವಂತ ಮುಕ್ತಿಗಾಗಿ ಹಾತೊರೆಯುತ್ತಿರುವೆಯಲ್ಲಾ ನಾಚಿಕೆಯಾಗುವುದಿಲ್ಲವೇ?” ಎಂದು ಛೀಮಾರಿ ಹಾಕಿದರು. ನರೇಂದ್ರನ ಈ ಉತ್ಕಟ ಬಯಕೆ ಕಡೆಗೆ ನೆರವೇರಿತಾದರೂ ನಿರ್ವಿಕಲ್ಪ ಸಮಾಧಿಯ ಕೀಲಿಯು ತಮ್ಮ ಕೈಯಲ್ಲಿರುವುದೆಂದು, ಅದರ ಬಾಗಿಲು ತಮಗೆ ಸೂಕ್ತವೆನಿಸಿದಾಗ (ಬೇಕೆನಿಸಿದಾಗ) ಮಾತ್ರ ತೆಗೆಯುವುದೆಂದೂ ತಿಳಿಸಿದರು. ಅಲ್ಲದೆ ಯಾವ ಕಾರ್ಯಕ್ಕಾಗಿ ನರೇಂದ್ರನು ಜನ್ಮ ತಾಳಿದನೊ ಆ ಕಾರ್ಯವನ್ನು ಪೂರ್ಣಗೊಳಿಸುವವರೆಗೆ, ನಿರ್ವಿಕಲ್ಪ ಸಮಾಧಿಯ ಮಾರ್ಗವನ್ನು ತೋರಿಸುವುದಿಲ್ಲವೆಂದು ನುಡಿದಾಗ ನರೇಂದ್ರನಿಗೆ ವಾಸ್ತವತೆಯ ಅರಿವಾಯಿತು. ಶ್ರೀರಾಮಕೃಷ್ಣರು ಮಹಾಸಮಾಧಿಸ್ಥರಾಗುವ ಮೂರು-ನಾಲ್ಕು ದಿನಗಳ ಮುಂಚೆ ತಮ್ಮ ಶಕ್ತಿಯನ್ನೆಲ್ಲಾ ನರೇಂದ್ರನಿಗೆ ಧಾರೆ ಎರೆದು”ನಾನು ನಿನಗೆ ಧಾರೆ ಎರೆದ ಶಕ್ತಿಯ ಫಲದಿಂದ ಅನೇಕ ಮಹತ್ತಾದ ಕಾರ್ಯವನ್ನೆಸಗುವೆ. ಅನಂತರವೇ ನೀನು ಎಲ್ಲಿಂದ ಬಂದಿರುವೆಯೋ ಅಲ್ಲಿಗೆ ಮರಳುವೆ” ಎಂದು ತಿಳಿಸಿದರು.


ಆಗಸ್ಟ್ 1882ರಲ್ಲಿ ತಮ್ಮ ಗುರುವಿನ ಮಹಾಸಮಾಧಿಯ ನಂತರ ನರೇಂದ್ರನ ನೇತೃತ್ವದಲ್ಲಿ ಬಾರಾನಾಗೋರ್‌ನ ಶಿಥಿಲಮನೆಯೊಂದರಲ್ಲಿ ತರುಣ ಶಿಷ್ಯರು ಒಟ್ಟಾಗಿ ಸೇರಿದರು. ಇಲ್ಲಿ ಕಠಿಣ ತಪಶ್ಚರ್ಯೆ, ಆಧ್ಯಾತ್ಮಿಕ ಅನುಷ್ಠಾನಗಳೊಂದಿಗೆ ಶ್ರೀರಾಮಕೃಷ್ಣರ ಸೋದರ ಶಿಷ್ಯರ ಮಹಾಸಂಘವು ಆರಂಭವಾಯಿತು. ಆ ದಿನಗಳಲ್ಲಿಯೇ ನರೇಂದ್ರನು ಒಮ್ಮೆ ಸೋದರ ಶಿಷ್ಯರೊಂದಿಗೆ ಆಂಟ್ಪುರಕ್ಕೆ ಭೇಟಿ ಇತ್ತನು. ಅಲ್ಲಿ 1882ರ ಕ್ರಿಸ್‍ಮಸ್ ಶುಭದಿನದಂದು ದೊಡ್ಡದಾಗಿ ಅಗ್ನಿಯನ್ನು ಹೊತ್ತಿಸಿ, ಎಲ್ಲರೂ ಅದರ ಸುತ್ತುವರೆದೂ ದೀಕ್ಷೆಯನ್ನು ಪಡೆದರು. ಅಧ್ಯಯನ ಮತ್ತು ಆಧ್ಯಾತ್ಮಿಕ ಸಾಧನೆಯಿಂದ ಬಾರನೋಗೊರ್ ನ  ದಿನಗಳು ಅತ್ಯಂತ ಆನಂದದ ದಿನಗಳಾಗಿದ್ದವು. ಆ ಸಮಯದಲ್ಲಿ ಸಂನ್ಯಾಸಿಗಳಲ್ಲಿ ಅನೇಕರಿಗೆ ಸಂಚಾರ ಕೈಗೊಳ್ಳಬೇಕಂಬ ಅಭಿಲಾಷೆ ಉಂಟಾಯಿತು. ನರೇಂದ್ರ ಸಹ ಮಠದಿಂದ ಸಂಚಾರಯಾತ್ರೆ ಕೈಗೊಂಡನು.


ಪರಿವ್ರಾಜಕ ಸಂನ್ಯಾಸಿ

 1888ರ ಕೊನೆ ಮತ್ತು 1890ರ ನಡುವಿನ ಅವಧಿಯಲ್ಲಿ ನರೇಂದ್ರನಾಥರಲ್ಲಿ ಅಸಾಧಾರಣವಾದ ಬದಲಾವಣೆ ಕಂಡುಬಂದಿತು. 1888ರ ಕೊನೆಯ ಭಾಗದಲ್ಲಿ ಸಣ್ಣ -ಪುಟ್ಟ ಸಂಚಾರಗಳನ್ನು ಕೈಗೊಳ್ಳಲು ಆರಂಭಿಸಿದ್ದರು. ಕೊನೆಗೆ 1890ರಲ್ಲಿ ತಮ್ಮ ಸಂನ್ಯಾಸಿ ಸೋದರರಿಂದ ಬೇರೆಯಾಗಿ ಏಕಾಕಿಯಾಗಿ ಅಜ್ಞಾತ ಭಿಕ್ಷುವಾಗಿ ತೀರ್ಥಯಾತ್ರೆ ಕೈಗೊಂಡರು. ತಮ್ಮ ಪರಿಚಯವನ್ನು ಮರೆಮಾಚುವಂತೆ ವಿಶಾಲಭಾರತದಲ್ಲಿ ಒಂದಾಗುವಂತೆ ಅನೇಕ ನಾಮಗಳನ್ನು ಧರಿಸಿ ಅವರು ಸಂಚರಿಸಿದರು.


ಸಾಧಾರಣವಾಗಿ ಭಾರತೀಯ ಸಂನ್ಯಾಸಿಯಾಗಿ ಇರುವ ಸಹಜವಾದ ಏಕಾಂತತೆಯ ಅಭಿಲಾಷೆಯು ಅವರಲ್ಲಿ ಉದ್ದೇಶವನ್ನು ಸಾಧಿಸಬೇಕೆಂಬ ಮಹತ್ತರವಾದ ಭಾವನೆಗೆ ಎಡೆಮಾಡಿಕೊಟ್ಟಿತು. ವೈಯಕ್ತಿಕ ಮುಕ್ತಿಗಾಗಿ ಹೆಣಗಾಡುವ ಸಾಮಾನ್ಯ ಸಾಧುವಿನಂತೆ ತಮ್ಮ ಬದುಕಲ್ಲ. ಪರಕೀಯರ ದಬ್ಬಾಳಿಕೆಯಿಂದ ಕಂಗಾಲಾದ ಭಾರತದ ಮೌನದ ಮೊರೆಗೆ ಓಗೊಟ್ಟು ಮತ್ತು ಭಾರತದ ವೈವಿಧ್ಯವನ್ನು ನೋಡಬೇಕೆಂಬ ಉತ್ಕಟ ಬಯಕೆಯ ಪ್ರಭಾವದಿಂದ ವಿವೇಕಾನಂದರು ಪರಿವ್ರಾಜಕರಾಗಿ ಹೊರಟರು. ಮೊಟ್ಟಮೊದಲಿಗೆ ಹಿಂದೂಗಳ ಅತ್ಯಂತ ಪವಿತ್ರ ಕ್ಷೇತ್ರವಾದ ವಾರಾಣಸಿಗೆ ಭೇಟಿ ಇತ್ತರು. ನಂತರ ಲಕ್ನೋ,ಆಗ್ರಾ, ವೃಂದಾವನ, ಹತ್ರಾಸ್, ಹೃಷಿಕೇಶ್ ಮೊದಲಾದ ಪ್ರದೇಶಗಳಿಗೆ ಭೇಟಿ ಇತ್ತು ಬಾರಾನಾಗೋರಿಗೆ ಹಿಂದಿರುಗಿದರು. ವಿವೇಕಾನಂದರ ಮೊದಲ ಶಿಷ್ಯರಾದ ಶರತ್ ಚಂದ್ರಗುಪ್ತ (ಸ್ವಾಮಿ ಸದಾನಂದ) ಅವರನ್ನು ಹತ್ರಾಸಿನಲ್ಲಿ ಭೇಟಿಯಾದರು. ಹತ್ರಾಸಿನ ರೈಲ್ವೇ ಶಾಖೆಯಲ್ಲಿ  ನೌಕರರಾಗಿದ್ದ ಶರತ್ ರು ತಮ್ಮ ಹುದ್ದೆಗೆ ರಾಜಿನಾಮೆಯಿತ್ತು, ವಿವೇಕಾನಂದರ ಕಾರ್ಯದಲ್ಲಿ ನೆರವು ನೀಡಲು ಗುರುವನ್ನು ಹಿಂಬಾಲಿಸಿದರು. 1890ರಲ್ಲಿ ವಿವೇಕಾನಂದರ ಜೀವನದಲ್ಲಿ ಮಹತ್ತರವಾದ ಘಟನೆಯೊಂದು ಜರುಗಿತು. ಘಾಜಿಪುರದ ಪವಹಾರಿಬಾಬಾ ಅವರ ಸಾಧನೆ, ಸಂತಗುಣದ ಬಗ್ಗೆ ವಿವೇಕಾನಂದರಿಗೆ ಜೀವಮಾನವಿಡೀ ಮೆಚ್ಚುಗೆಯಿತ್ತು. ಪವಹಾರಿ ಬಾಬಾ ಅವರನ್ನು ಸ್ವಾಮೀಜಿ ಮೊದಲಿಗೆ 1890ರಲ್ಲಿ ಭೇಟಿಯಾದರೆ, ಈ ವೇಳೆಯಲ್ಲಿ ಶಾಶ್ವತವಾದ ಮೌನ (eternal silence of the absolute)ದಲ್ಲಿ ಮಗ್ನವಾಗುವ ಆಕಾಂಕ್ಷೆ ಒಂದೆಡೆ, ಮತ್ತೊಂದೆಡೆ ಗುರುವಿನ ಮಹೋದ್ದೇಶ ಪೂರೈಕೆ-ಈ ಎರಡರ ಹೊಯ್ದಾಟದಲ್ಲಿ ಸ್ವಾಮೀಜಿ ಸಿಲುಕಿಕೊಂಡರು.


ಗುರುವಹಿಸಿದ ಕಾರ್ಯದಿಂದ ವಿಮುಖವಾಗಿಸುವ, ದೈವದಲ್ಲಿಯೇ ತಲ್ಲೀನವಾಗುವ ಕನಲು ಇವರ ಹೃದಯವನ್ನು ಭಾಧಿಸುತ್ತಿತ್ತು. ಈ ಅನುತಾಪವನ್ನು ಪವಹರಿಬಾಬಾ ಅವರು ಸಾಂತ್ವನಗೊಳಿಸಬಹುದೆಂದು ಸ್ವಾಮೀಜಿ ನಂಬಿದ್ದರು. 21 ದಿವಸಗಳು ಈ ಪ್ರಲೋಭನೆಗೆ ಒಳಪಡುವಾಗ ಶ್ರೀರಾಮಕೃಷ್ಣರ ಜ್ಯೋತಿರ್ಮಯರೂಪದ ದರ್ಶನವು ಇವರನ್ನು ಪ್ರತಿಬಾರಿಯೂ ಆ ಪ್ರಯತ್ನದಿಂದ ಹಿಂತೆಗೆಯುವಂತೆ ಮಾಡುತ್ತಿತ್ತು.


1890ರ ಜುಲೈನಲ್ಲಿ ಗುರುವಿನ ನಂತರ ತರುಣ ಸಂನ್ಯಾಸಿಗಳಿಗೆ ಆಧ್ಯಾತ್ಮಿಕ ಮಾರ್ಗದರ್ಶಕರಾಗಿದ್ದ ಶ್ರೀರಾಮಕೃಷ್ಣರ ದಿವ್ಯ ಪತ್ನಿಯಾದ ಶಾರದಾದೇವಿಯವರಿಂದ ಆಶೀರ್ವಾದವನ್ನು ಸ್ವಾಮಿ ವಿವೇಕಾನಂದರು ಪಡೆದು, ಎಲ್ಲ ಸಂಬಂಧವನ್ನು ತೊರೆಯುವ ಅಚಲ ಮನದೊಂದಿಗೆ ಸಹೋದರ ಸಂನ್ಯಾಸಿಗಳನ್ನು ಬೀಳ್ಕೊಟ್ಟು ಹಿಮಾಲಯದ ಏಕಾಂತ ಪ್ರದೇಶಕ್ಕೆ ಹೋದರು. ರೋಮೆರೋಲಾ ಅವರ ಮಾತಿನಲ್ಲಿ ಹೇಳುವುದಾದರೆ ಅದೊಂದು ಮಹಾ ಪಯಣ. ಮುಳುಗು ಹಕ್ಕಿಯ ರೀತಿಯಲ್ಲಿ ಸ್ವಾಮೀಜಿ ಭಾರತ – ಸಾಗರದಲ್ಲಿ ಮುಳುಗಿಹೋದರು. ಮತ್ತು ಭಾರತ-ಸಾಗರವು ಅವರ ಹಾದಿಯನ್ನು ಆವರಿಸಿತು. ನಾಶವಾದ ಹಡಗಿನಿಂದ ತೇಲಿ ಬಂದ ಮತ್ತು ಅಪಾಯದ ವೇಳೆ ಹಡಗಿನಿಂದೆಸೆದ ಸಾಮಾನುಗಳಂತೆ ಸಾವಿರಾರು ಮಂದಿ ಅನಾಮಧೇಯ ಸಂನ್ಯಾಸಿಗಳಲ್ಲೊಬ್ಬರಾಗಿ ಇವರು ಜನಸಾಗರದಲ್ಲಿ ಒಂದಾದರು. ಆದರೆ ಅಸಾಧಾರಣ ಪ್ರತಿಭೆಯ ತೇಜಸ್ಸು ಅವರ ಕಣ್ಣುಗಳಲ್ಲಿ ಪ್ರಜ್ವಲಿಸುತ್ತಿತ್ತು, ಈ ಎಲ್ಲ ಸೋಗಿನ ಮರೆಯಲ್ಲೂ ದೊರೆಯಂತೆ ಕಂಗೊಳಿಸುತ್ತಿದ್ದರು!


ಅವರ ಪರ್ಯಟನವು ಅವರನ್ನು ಉತ್ತರ ಪ್ರದೇಶ, ರಾಜಸ್ಥಾನ,ಗುಜರಾತ್, ಮಹಾರಾಷ್ಟ್ರ, ಮೈಸೂರು, ಕೇರಳ, ಮದ್ರಾಸ್, ಹೈದರಾಬಾದ್ ಪ್ರದೇಶಗಳಲ್ಲಿನ ಚಾರಿತ್ರಿಕ ಮತ್ತು ಯಾತ್ರಾಸ್ಥಳಗಳಿಗೆ ಕರೆದೊಯ್ದಿತು. ಪ್ರಾಚೀನ ಭಾರತದ ಸಾಂಸ್ಕೃತಿಕ, ರಾಜಕೀಯ ಮತ್ತು ಆಧ್ಯಾತ್ಮಿಕ ವೈಭವದ ಚಿತ್ರವು ಜೀವಂತವಾಗಿ ಅವರ ಕಣ್ಮುಂದೆ ಗೋಚರಿಸಿತು. ಇಂತಹ ಭವ್ಯ ಶಿಕ್ಷಣದೊಂದಿಗೆ ಭಾರತೀಯ ಜನ ಸಮುದಾಯದ ದಟ್ಟ ದಾರಿದ್ರ್ಯವು ಅವರ ಮನಸ್ಸಿನಲ್ಲಿ ಸ್ಪಷ್ಟವಾಗಿ ಮೂಡಿತು. ಅವರ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಂಚರಿಸಿ, ಶ್ರೀಸಾಮಾನ್ಯನ ದುರವಸ್ಥೆಯನ್ನು ಸುಧಾರಿಸುವ ಹಾದಿಯನ್ನು ಅನ್ವೇಷಿಸಲು ಪ್ರಯತ್ನಿಸಿದರು. ಆ ಪ್ರದೇಶಗಳನ್ನಾಳುತ್ತಿರುವ ಆಡಳಿತಗಾರರ ಮತ್ತು ಪ್ರಭಾವಶಾಲಿಗಳ ಪರಿಚಯ ಇವರಿಗಾಯಿತು. ಅವರಲ್ಲಿ ಖೇತ್ರಿಯ ಮಹಾರಾಜ ಅಜಿತ್ ಸಿಂಗ್ ಮೊದಲಿಗೆ ನಿಕಟವಾದ ಸ್ನೇಹಿತರಾದರಷ್ಟೆ ಅಲ್ಲದೆ ಉತ್ಸಾಹಿ ಶಿಷ್ಯರೂ ಆದರು. ಸ್ವಾಮಿಜಿಯವರು ಪತಂಜಲಿಯ ಮಹಾಭಾಷ್ಯವನ್ನು ಆಳ್ ವಾರ್ ನಲ್ಲಿ ಅಭ್ಯಸಿಸಿದರು. ಇವರು ಪುಣೆಯಲ್ಲಿ ರಾಷ್ಟ್ರದ ಮಹಾನೇತಾರರಾದ ಬಾಲಗಂಗಾಧರ ತಿಲಕರೊಂದಿಗಿದ್ದರು. ಪ್ರಾರಂಭದಲ್ಲಿ ಸ್ವಾಮಿಗಳೊಂದಿಗೆ ತಿಲಕರು ಬಿಗುಮಾನದಿಂದ ವರ್ತಿಸಿದರೂ ನಂತರದಲ್ಲಿ ಅವರ ಅಗಾಧವಾದ ಚಿಂತನಶಕ್ತಿ ಹಾಗೂ ಗಾಢ ಅಧ್ಯಯನದಿಂದ ಪ್ರಭಾವಿತರಾಗಿ, ತಮ್ಮೊಡನೆ ಇರಲು ಅವರನ್ನು ಆಹ್ವಾನಿಸಿದರು. ಅಲ್ಲಿಂದ ಬೆಳಗಾವಿಯಲ್ಲಿ ತಂಗಿದ್ದು ಬೆಂಗಳೂರು ಮತ್ತು ಮೈಸೂರಿಗೆ ಭೇಟಿ ಇತ್ತರು. ಸ್ವಾಮಿ ವಿವೇಕಾನಂದರು ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಗಿ ಸನಾತನ ಧರ್ಮವನ್ನು ಬೋಧಿಸಿ ಅವರಿಂದ ಭಾರತಕ್ಕೆ ಸಹಾಯವನ್ನು ಕೋರಬೇಕೆಂಬ ಉದ್ದೇಶ ಹೊಂದಿದ್ದನ್ನು ತಿಳಿದ ಮೈಸೂರಿನ ಮಹಾರಾಜರು ಇವರ ವಿದೇಶ ಪ್ರಯಾಣಕ್ಕೆ ಆರ್ಥಿಕ ಸಹಾಯ ನೀಡುವುದಾಗಿ ಭರವಸೆಯನ್ನಿತ್ತರು. ನಂತರ ಮೈಸೂರಿಂದ ತ್ರಿವೆಂಡ್ರಮ್ ಮತ್ತು ಕನ್ಯಾಕುಮಾರಿಗೆ ಭೇಟಿ ನೀಡಿದರು.


ಇವರು ಭೇಟಿ ನೀಡಿದ ಪ್ರಮುಖ ಪ್ರದೇಶ ಅಥವಾ ಪ್ರತಿಷ್ಠಿತ ಜನರು ಇವರ ಮನಸ್ಸಿನ ಮೇಲೆ ಹೆಚ್ಚಿನ ಪ್ರಭಾವ ಬೀರಲಿಲ್ಲ. ಭೀಕರತೆ ಹುಟ್ಟಿಸುವಂತಹ ಸಾಮಾನ್ಯ ಜನಸಮುದಾಯದ ದಾರಿದ್ರ್ಯ ಮತ್ತು ದೈನ್ಯವು ಇವರ ಹೃದಯವನ್ನು ಮಮ್ಮಲ ಮರುಗಿಸಿತು. ಸುಮಾರು ಮೂರು ವರುಷಗಳ ಕಾಲ ಪಾದಚಾರಿಯಾಗಿ ಇಡೀ ಭಾರತವನ್ನು ಪರ್ಯಟನ ಮಾಡಿ ಖುದ್ದಾಗಿ ಭಾರತವೇನೆಂಬುದನ್ನು ಅರಿತರು. ಪ್ರವಾಸದ ಕೊನೆಯ ಕುರುಹಾಗಿ ಕನ್ಯಾಕುಮಾರಿಯ ಮಾತೆ ಕುಮಾರಿಯ ವಿಗ್ರಹದ ಮುಂದೆ ಭಾವಾನ್ವಿತರಾಗಿ ಸಾಷ್ಟಾಂಗ ಪ್ರಣಾಮ ಮಾಡಿದರು. ಬಳಿಕ ಈಜುತ್ತಾ ಸಮುದ್ರದ ದಕ್ಷಿಣ ಬಂಡೆಯೊಂದರ ಮೇಲೆ ಕುಳಿತು ಇಡೀ ರಾತ್ರಿ ಧ್ಯಾನದಲ್ಲಿ ಮಗ್ನರಾದರು. ಪ್ರವಾಸದಿಂದುಂಟಾಗಿದ್ದ ವಿವಿಧ ಅನುಭವದ ದೃಶ್ಯಗಳು ಸುರುಳಿ ಸುರುಳಿಯಾಗಿ ಮನಃಚಕ್ಷುವಿನ ಮುಂದೆ ಸುಳಿಯಿತು. ಭಾರತ ದೇಶದ ಆಗಿನ ಅವನತಿಗೆ ಕಾರಣಗಳನ್ನು ಗುರುತಿಸಿ ಪುನರುಜ್ಜೀವನದ ಉಪಾಯಗಳನ್ನು ಅವರು ಇಲ್ಲಿ ಕಂಡುಕೊಂಡರು. ಭಾರತ ದೇಶದ ಭೂತ, ವರ್ತಮಾನ ಹಾಗೂ ಭವಿಷ್ಯವನ್ನು ಕುರಿತು ಚಿಂತಿಸಿದರು. ತಮ್ಮ ಜೀವನದ ಧ್ಯೇಯಕ್ಕೆ ಸರಿಯಾದ ರೂಪ ಕೊಡಲು ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಗಿ ಭಾರತೀಯ ದಾರಿದ್ರ್ಯ ನಿರ್ಮೂಲನಕ್ಕೆ ಸಹಾಯವನ್ನು ಕೋರಬೇಕೆಂಬ ದೃಢನಿರ್ಧಾರವನ್ನು ಕೈಗೊಂಡರು.


 ಈ ನಿರ್ಧಾರದಿಂದಲೇ ರಾಮೇಶ್ವರ ಮತ್ತು ಮದುರೈಗಳಿಗೆ ಪ್ರಯಾಣ ಮಾಡಿದರು. ನಂತರ ಮದ್ರಾಸಿಗೆ ಭೇಟಿ ಇತ್ತರು. ಅಲ್ಲಿ ಅಳಸಿಂಗ ಪೆರುಮಾಳ್ ಅವರ ನೇತೃತ್ವದಲ್ಲಿ ಅನೇಕ ಯುವಕರು ಇವರ ಆಗಮನದ ನಿರೀಕ್ಷಣೆಯಲ್ಲೇ ಇದ್ದರು. ವಿವೇಕಾನಂದರು ಚಿಕಾಗೋದಲ್ಲಿ ನಡೆಯಲಿರುವ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಬೇಕೆಂಬ ತಮ್ಮ ಆಕಾಂಕ್ಷೆಯನ್ನು, ಅದಕ್ಕಾಗಿ ಅಮೆರಿಕವನ್ನು ಭೇಟಿ ಮಾಡಬೇಕೆಂದಿರುವುದನ್ನು ಅವರಿಗೆ ಬಹಿರಂಗಪಡಿಸಿದರು. ಅವರ ಪ್ರಯಾಣಕ್ಕಾಗಿ ತರುಣ ಶಿಷ್ಯವೃಂದವು ಚಂದಾ ಎತ್ತಲು ಮುಂದಾಯಿತು. ಆದರೆ ಅವರು ದಿವ್ಯಮಾತೆಯ ಸಂಕಲ್ಪವೇನೆಂದು ಸರಿಯಾಗಿ ತಿಳಿಯದೆ ಇರುವ ಕಾರಣವನ್ನುಮುಂದೊಡ್ಡಿ ಸಂಗ್ರಹಿಸಿದ ಹಣವನ್ನು ಬಡವರಿಗೆ ದಾನಮಾಡಲು ಸೂಚಿಸಿದರು. ಈ ಮಧ್ಯೆ ಶ್ರೀರಾಮಕೃಷ್ಣರು ಸಮುದ್ರದಲ್ಲಿ ನಡೆದು, ತನ್ನನ್ನು ಅನುಸರಿಸುವಂತೆ ಸೂಚಿಸಿದ ರೀತಿಯಲ್ಲಿ ಸಾಂಕೇತಿಕವಾದ ಕನಸನ್ನು ವಿವೇಕಾನಂದರು ಕಂಡರು. ಇದೇ ಹೊತ್ತಿನಲ್ಲಿ ಶಾರದಾದೇವಿಯವರೂ ಸಹ ಕನಸಿನಲ್ಲಿ ನರೇಂದ್ರರ ಈ ಯೋಜನೆಗೆ ಶ್ರೀರಾಮಕೃಷ್ಣರು ಸಮ್ಮತಿಸಿದ್ದನ್ನು ಕಂಡರು. ಶ್ರೀಮಾತೆಯವರ ಆಶೀರ್ವಾದ ಮತ್ತು ಅನುಮತಿಗಳ ಮೂಲಕ  ಇವರ ಯೋಜನೆಗೆ ಒಪ್ಪಿಗೆ ದೊರಕಿದಂತಾಯಿತು. ಇವರ ತರುಣ ಶಿಷ್ಯರು ಮತ್ತೆ ಅವಶ್ಯವಿದ್ದ ಹಣವನ್ನು ಸಂಗ್ರಹಿಸಲು ಪ್ರಾರಂಭಿಸಿದರು.


ಇರುವ ಅಲ್ಪ ಕಾಲಾವಕಾಶದಲ್ಲಿಯೇ ಸ್ವಾಮೀಜಿ ಹೈದರಾಬಾದಿಗೆ ಭೇಟಿ ಇತ್ತರು. ಅಮೆರಿಕಾಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಾಗ, ಖೇತ್ರಿ ಮಹಾರಾಜರಿಗೆ ಮಗ ಹುಟ್ಟಿದ ಪ್ರಯುಕ್ತ ಆ ಸಮಾರಂಭದಲ್ಲಿ ಭಾಗವಹಿಸಬೇಕೆಂದು ಆಕಸ್ಮಿಕ ಆಹ್ವಾನ ಬಂದಿತು. ತಮ್ಮ ಶಿಷ್ಯನ ಆಹ್ವಾನವನ್ನು ತಿರಸ್ಕರಿಸುವಂತಿಲ್ಲ. ಸ್ವಾಮೀಜಿಯವರನ್ನು ಮಹಾರಾಜರು ಬಹಳ ಆದರದಿಂದ ಸ್ವಾಗತಿಸಿದರಲ್ಲದೆ ಅವರ ಪ್ರವಾಸಕ್ಕೆ ಬೇಕಾದ ಯಾವುದೇ ಸಹಾಯವನ್ನು ಮಾಡುವುದಾಗಿ ಅಶ್ವಾಸನೆಯಿತ್ತರು. ಈ ಸಂದರ್ಭದಲ್ಲಿ ಮಹಾರಾಜರ ಸೂಚನೆಯ ಮೇರೆಗೆ ಸ್ವಾಮೀಜಿ ‘ವಿವೇಕಾನಂದ’ ಎಂಬ ನಾಮಾಂಕಿತವನ್ನು ಉಳಿಸಿಕೊಂಡರು. ಮಹಾರಾಜರು ತಮ್ಮ ಆಪ್ತಕಾರ್ಯದರ್ಶಿಯನ್ನು ಸ್ವಾಮೀಜಿಯವರ ಪ್ರವಾಸದ ಸಿದ್ಧತೆಗಾಗಿ ಮತ್ತು ಅವರನ್ನು ಮುಂಬಯಿಯಲ್ಲಿ ಬೀಳ್ಕೊಳ್ಳಲು ಕಳುಹಿಸಿದರು. ಮೇ 31,1893ರಂದು ಇವರ ಅಮೆರಿಕದ ಪ್ರಯಾಣ ಆರಂಭವಾಯಿತು.


 ಜಗತ್ತಿನ ವೇದಿಕೆಯ ಮೇಲೆ

ಚೈನಾ, ಜಪಾನ್, ಕೆನಡಾ ಮೂಲಕ ಸ್ವಾಮಿ ವಿವೇಕಾನಂದರು ಅಮೆರಿಕಾಗೆ ಪ್ರಯಾಣ ಬೆಳಸಿ. ಜುಲೈ ಮಧ್ಯದಲ್ಲಿ ಚಿಕಾಗೊವನ್ನು ಸೇರಿದರು. ಬೌದ್ಧ ಸಂನ್ಯಾಸಿಗಳ ಹಲವು ಮಠಗಳನ್ನು ಕಾನ್ ಟನ್ ನಲ್ಲಿ ನೋಡಿದರು. ಕೈಗಾರಿಕೆಯಲ್ಲಿ ಜಪಾನೀಯರು ಅಭಿವೃದ್ಧಿ ಹೊಂದಿದ ರೀತಿ ಮತ್ತು ಅವರ ಸ್ವಚ್ಛತೆಯನ್ನು ಮೆಚ್ಚುಗೆಯಿಂದ ಗಮನಿಸಿದರು. ಚಿಕಾಗೊವನ್ನು ತಲುಪಿದಾಗ ಅವರು ಪಾಶ್ಚಾತ್ಯ ರಾಷ್ಟ್ರಗಳ ಕಣ್ಣು ಕೋರೈಸುವಂತಹ ಶ್ರೀಮಂತಿಕೆ ಮತ್ತು ಕಲ್ಪನಾಶಕ್ತಿಯನ್ನು  ಕಂಡು ಮಗುವಿನಂತೆ ತಬ್ಬಿಬ್ಬಾದರು. ಸೆಪ್ಟಂಬರ್ ತಿಂಗಳವರೆಗೂ ಸರ್ವಧರ್ಮ ಸಮ್ಮೇಳನ ಸೇರುವುದಿಲ್ಲವೆಂದೂ, ಪರಿಚಯ ಪತ್ರವಿಲ್ಲದೆ ಯಾರೂ ಪ್ರತಿನಿಧಿಸಲಾಗುವಂತಿಲ್ಲವೆಂಬ ಸಂಗತಿ ತಿಳಿದು ನಿರಾಶರಾದರು. ಸ್ವಾಮೀಜಿ ಹತಾಶರಾದರೂ, ದೈವಸಂಕಲ್ಪಕ್ಕೆ ಅಧೀನರಾಗಿ  ಮನಸ್ಸನ್ನು ಗಟ್ಟಿಮಾಡಿಕೊಂಡು ಚಿಕಾಗೊಗಿಂತ ಅಲ್ಪವೆಚ್ಚದ ನಿರ್ವಹಣೆಗಾಗಿ ಬಾಸ್ ಟನ್ನಿಗೆ ಹೊರಟರು. ರೈಲಿನಲ್ಲಿ ಕು. ಕ್ಯಾಥರಿನ್ ಸ್ಯಾನ್ ಬಾರ್ನ್ ಅವರ ಪರಿಚಯ ಆಕಸ್ಮಿಕವಾಗಿ ಆಯಿತು. ಅವಳು ಸ್ವಾಮೀಜಿಯವರನ್ನು ಬಾಸ್ ಟನ್ ನಲ್ಲಿ ತನ್ನ ಅತಿಥಿಯಾಗಿರಬೇಕೆಂದು ಆಹ್ವಾನಿಸಿದಳು. ಅವಳ ಮೂಲಕ ಹಾರ್ ವರ್ಡ್ ವಿಶ್ವವಿದ್ಯಾನಿಲಯದ ಪ್ರೊ|| ಜಾನ್ ಹೆನ್ರಿ ರೈಟ್ ಅವರ ಪರಿಚಯವಾಯಿತು. ನಂತರ ಅವರೇ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಅಧ್ಯಕ್ಷರಿಗೆ “ನಮ್ಮಲ್ಲಿ ಪಾಂಡಿತ್ಯ ಪಡೆದಿರುವ ಎಲ್ಲ ಪ್ರೊಫೆಸರ್ಗಳನ್ನು ಮೀರಿಸುವಂತಹ ವ್ಯಕ್ತಿ” ಎಂದು ಪರಿಚಯ ಪತ್ರದಲ್ಲಿ ಬರೆದುಕೊಟ್ಟರು.


ಸರ್ವಧರ್ಮ ಸಮ್ಮೇಳನ ಪ್ರಾರಂಭವಾಗುವುದಕ್ಕೆ  ಎರಡು ದಿನಗಳ ಮುಂಚೆಯೇ ಸ್ವಾಮೀಜಿ ಚಿಕಾಗೊಗೆ ಹಿಂತಿರುಗಿದರು. ಪೌರಸ್ತ್ಯ ರಾಷ್ಟ್ರಗಳಿಂದ ಬಂದಂತಹ ಪ್ರತಿನಿಧಿಗಳನ್ನು  ಸ್ವಾಗತಿಸಿ ಉಪಚರಿಸುವಂತಹ ಸಮಿತಿಯ ವಿಳಾಸವನ್ನು ಇವರು ಕಳೆದುಕೊಂಡು ಭಯಭ್ರಾಂತರಾದರು. ಆ ರಾತ್ರಿ ಸರಕು ರವಾನೆಯ ಸ್ಥಳದಲ್ಲಿ ಖಾಲಿಯಾದ ದೊಡ್ಡ ಪೆಟ್ಟಿಗೆಯೊಂದರಲ್ಲೇ ತಂಗಿದ್ದರು. ಮಾರನೆಯ ಬೆಳಿಗ್ಗೆ ಈ ಕಷ್ಟದಿಂದ ಪಾರಾಗಲು ಯಾರಾದರೂ ಸಹಾಯವನ್ನು ನೀಡಬಹುದೆಂದು ಹುಡುಕಲು ಹೊರಟರು. ಆದರೆ ಅಲ್ಲಿ ವರ್ಣೀಯರಿಗೆ ಅಷ್ಟು ಸುಲಭವಾಗಿ ಸಹಾಯ ಲಭ್ಯವಾಗುವಂತಿರಲಿಲ್ಲ. ನಿಷ್ಪ್ರಯೋಜಕ ಅಲೆತದಿಂದ ಬಳಲಿ ಬೀದಿಯ ಪಕ್ಕದಲ್ಲಿ ತಮ್ಮನ್ನು ದೈವ ಇಚ್ಛೆಗೆ ಒಪ್ಪಿಸಿಕೊಂಡು ಕುಳಿತುಬಿಟ್ಟರು. ಇವರು ಕುಳಿತಿದ್ದ   ಸ್ಥಳಕ್ಕೆ ಎದುರಾಗಿ ನವೀನ ಮಾದರಿಯ ಮನೆಯಿಂದ ಓರ್ವ ಸಿರಿವಂತ ಮಹಿಳೆ ಇವರಿದ್ದಲ್ಲಿಗೆ ಬಂದು ಸಹಾಯ ನೀಡಲು ಮುಂದಾದಳು. ಇವಳೇ ಶ್ರೀಮತಿ ಜಾರ್ಜ್ ಡಬ್ಲ್ಯು. ಹೇಲ್. ಮುಂದೆ ಜಾರ್ಜ್ ಡಬ್ಲ್ಯು. ಹೇಲ್ ಅವರ ಮನೆಯೇ ಸ್ವಾಮೀಜಿಯವರು ಅಮೆರಿಕಾದಲ್ಲಿರುವಾಗಲೆಲ್ಲಾ ತಂಗುವ ಸ್ಥಳವಾಯಿತು. ಹೇಲ್ ಕುಟುಂಬದವರು ಇವರಿಗೆ ನಿಷ್ಠಾವಂತ ಶಿಷ್ಯರಾದರು.


1893ರ  ಸೆಪ್ಟಂಬರ್ 11 ರಿಂದ ಸರ್ವಧರ್ಮ ಸಮ್ಮೇಳನ ಪ್ರಾರಂಭವಾಯಿತು. ಕಾಲಾಸಂಸ್ಥೆಯ ವಿಶಾಲ ಸಭಾಂಗಣದಲ್ಲಿ ಸುಮಾರು ಏಳುಸಹಸ್ರ ಜನರು ಉಪಸ್ಥಿತರಾಗಿದ್ದರು. ಇವರುಗಳು ಬೇರೆ ಬೇರೆ ರಾಷ್ಟ್ರಗಳ ಉತ್ತಮ ಸಂಸ್ಕೃತಿಯ ಪ್ರತಿನಿಧಿಗಳಾಗಿದ್ದರು. ಜಗತ್ತಿನ ಪ್ರತಿಯೊಂದು ಕಡೆಯಿಂದಲೂ ಧರ್ಮದ ಪ್ರತಿನಿಧಿಗಳು ವೇದಿಕೆಯ ಮೇಲೆ ಮಂಡಿಸಿದ್ದರು. ಉತ್ತಮ ಚಿಂತಕರು ತುಂಬಿರುವ ಅಷ್ಟು ದೊಡ್ಡ ಸಭಾಭವನದಲ್ಲಿ, ಸ್ವಾಮಿಗಳು ಎಂದೂ ಉಪನ್ಯಾಸವನ್ನು ನೀಡಿರಲಿಲ್ಲ. ತಮ್ಮ ಸರದಿ ಬಂದಾಗ ಅವರಿಗೆ ಅಂಜಿಕೆಯ ಅನುಭವವಾಯಿತು. ಜ್ಞಾನದ ಅಧಿದೇವತೆ ಸರಸ್ವತಿಯನ್ನು ಮನದಲ್ಲೇ ಧ್ಯಾನಿಸಿ, ನಂತರ “ಅಮೆರಿಕದ ಸೋದರ ಸೋದರಿಯರೇ !” ಎಂದು ಸಭೆಯನ್ನು ಕುರಿತು ಸಂಭೋಧಿಸಿದ ಕ್ಷಣವೇ ಅಸಂಖ್ಯಂತ ಜನರಿಂದ ಎರಡು ನಿಮಿಷಗಳ ಕಾಲದವರೆಗೂ ಅಭಿನಂದನೆಯ ಕರತಾಡನದ ಮೊಳಗು ಕೇಳಿ ಬಂತು. ‘ಆ ಏಳು ಸಹಸ್ರ ಮಂದಿಯೂ ಅರಿಯದೇ ಎದ್ದುನಿಂತು ಗೌರವವನ್ನು ಅರ್ಪಿಸಿದರು.’ ಕಿತ್ತಳೆ ಬಣ್ಣದ ನೀಳ ಉಡುಪಿನ, ತೇಜೋಮಯ ಮುಖವುಳ್ಳ ಮಹಿಮಾತಿಶಯನ ಕಡುಸತ್ಯವಾದ ಸರಳ ನುಡಿಗಳ ರುಚಿ ಎಷ್ಟು ಮಹತ್ವದ್ದಾಗಿತ್ತೆಂದರೆ ಸರ್ವಧರ್ಮದ ಸಭೆಯ ಮಹಾನ್ ವ್ಯಕ್ತಿ ಎಂದು ಎಲ್ಲಾ ಪತ್ರಿಕೆಗಳೂ  ಅಂದು ವಿವೇಕಾನಂದರನ್ನು ವರ್ಣಿಸಿದ್ದವು. ಭಿಕ್ಷೆಯ ಪಾತ್ರೆ ಹಿಡಿದಿದ್ದ ಓರ್ವ  ಸಾಮಾನ್ಯ ಸಂನ್ಯಾಸಿ ಕ್ಷಣಾರ್ಧದಲ್ಲಿಯೇ ಶ್ರೇಷ್ಠ ವ್ಯಕ್ತಿ ಆದನು.


ಸ್ವಾಮೀಜಿಯ ಉಳಿದ ಭಾಷಣವನ್ನೆಲ್ಲಾ ಅತ್ಯಂತ ಆದರದಿಂದ ಮತ್ತು ಮೆಚ್ಚುಗೆಯಿಂದ ಜನರು ಆಲಿಸಿದರು. ವಿಶ್ವವ್ಯಾಪಕತ್ವ ಎನ್ನುವುದೇ ಎಲ್ಲರ ಪ್ರಧಾನ ವಿಷಯವಾಗಿತ್ತು. ಪ್ರತಿಯೊಬ್ಬ ಪ್ರತಿನಿಧಿಯೂ ತಮ್ಮ ತಮ್ಮ ಧರ್ಮವನ್ನು ಕುರಿತು ಮಾತನಾಡಿದರೆ , ಸ್ವಾಮಿ ವಿವೇಕಾನಂದರು ಮಾತ್ರ “ಬಾನಿನಷ್ಟು ವಿಸ್ತಾರ, ಸಮುದ್ರದಷ್ಟು ಆಳವಾದುದು” ಎಂದು ಧರ್ಮದ ಬಗ್ಗೆ ಮಾತನಾಡಿದರು. ಮಹಾ ಸಭೆಯ ಮುಕ್ತಾಯದೊಂದಿಗೆ, ಸ್ವಾಮಿಗಳ ವಿಶ್ರಾಂತಿ ದಿನಗಳು ಮುಗಿದವು. ಇನ್ನುಮುಂದೆ ಅಮೆರಿಕಾದ ಪ್ರತಿಯೊಂದು ಭಾಗದಲ್ಲೂ ಸ್ವಾಮಿಗಳು ಎಡಬಿಡದಂತಹ ಉಪನ್ಯಾಸಗಳನ್ನು ನೀಡಿದರು. ಉಪನ್ಯಾಸ ನೀಡುತ್ತೇನೆಂದು ಕಾರ್ಯಶಾಲೆಯೊಂದಿಗೆ ಕರಾರಿಗೆ ಸಹಿ ಮಾಡಿದ ಮೇಲೆ ಭಿನ್ನ ಭಿನ್ನ ಜನರಿಗೆ ಭಾಷಣ ನೀಡುತ್ತಾ ಚಲಿಸಬೇಕಾಯಿತು. ಈ ಪ್ರವಾಸವು ಪಾಶ್ಚಿಮಾತ್ಯರ ಅನೇಕ ರೀತಿಯ ಜೀವನದ ಪರಿಚಯವನ್ನು ಮಾಡಿಕೊಳ್ಳಲು ಅವಕಾಶ ಕಲ್ಪಿಸಿತು. ಆದರೂ ಈ ಕಾರ್ಯಶಾಲೆ ಸ್ವಪ್ರಯೋಜನಕ್ಕಾಗಿ ತಮ್ಮನ್ನು ಹೀಗೆ ಬಳಸಿಕೊಂಡು ನಾಚುವಂತೆ ಮಾಡಿದರೆಂಬ ತಿಳಿವು ಬಂದು ಅದರೊಂದಿಗಿದ್ದ ಸಂಬಂಧವನ್ನು ಕಡಿದು ಹಾಕಿದರು. ‘ಶ್ರದ್ಧೆಯುಳ್ಳ ಪ್ರಾಮಾಣಿಕ ಅಮೆರಿಕ ಶಿಷ್ಯರ’ ಗುಂಪನ್ನು ಕಟ್ಟಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗಾಗಿ ನಿಶ್ಶುಲ್ಕವಾಗಿ ತರಗತಿಗಳನ್ನು ಆರಂಭಿಸಿದರು. 1896ರ ಡಿಸೆಂಬರ್‌ನಲ್ಲಿ ಇವರ ಪೂರ್ವರಾಷ್ಟ್ರಗಳ ಭೇಟಿ ಕೊನೆಗೊಳ್ಳುವವರೆಗೂ ತೀವ್ರ ಕಾರ್ಯ ಚಟುವಟಿಕೆಗಳಿಂದ ಕೂಡಿದ್ದರು. ನ್ಯೂಯಾರ್ಕಿನಲ್ಲಿ ಅನೇಕ ತರಗತಿ ಮತ್ತು ಉಪನ್ಯಾಸಗಳನ್ನು ನೀಡಿದರಲ್ಲದೆ ವೇದಾಂತ ಸೊಸೈಟಿಯನ್ನು ಸ್ಥಾಪಿಸಿದರು. ಥೌಸೆಂಡ್ ಐಲ್ಯಾಂಡ್ ಪಾರ್ಕಿನಲ್ಲಿ ತಮಗೆ ಆತ್ಮೀಯರೆನಿಸಿದ ಶಿಷ್ಯವೃಂದಕ್ಕೆ ತರಬೇತಿಯನ್ನು ನೀಡಿದರು. ‘ರಾಜಯೋಗ’ವನ್ನು ಕುರಿತು ಬರೆದರಲ್ಲದೆ, ಇಂಗ್ಲೆಂಡಿಗೆ ಎರಡು ಬಾರಿ ಭೇಟಿ ಇತ್ತರು. ಇಂಗ್ಲೆಂಡಿನಲ್ಲಿ ಇವರ ಉದ್ದೇಶ ಸಾಧನೆ ಕೈಗೊಂಡಿತು. ಇಲ್ಲಿ ನೀಡಿದ ಉಪನ್ಯಾಸ ಮಾಲೆಯೇ ಇದೀಗ ‘ಜ್ಞಾನಯೋಗ’ ಎಂದು ಅಂಕಿತವಾಗಿದೆ. ಕ್ಯಾಪ್ಟನ್ ಮತ್ತು ಶ್ರೀಮತಿ ಸೇವಿಯರ್, ಸಿಸ್ಟರ್ ನಿವೇದಿತ, ಇ. ಟಿ. ಸ್ಟರ್ಡಿ ಮೊದಲಾದ ಮಹನೀಯರು ಇವರ ಶಿಷ್ಯರಾದರು. ಇದಕ್ಕೆ ಮೊದಲು ನ್ಯೂಯಾರ್ಕ್ ನಲ್ಲಿ ಜೆಜೆ. ಗುಡ್ ವಿನ್ ಎಂಬ ಇಂಗ್ಲೀಷ್ ತರುಣ ಶೀಘ್ರಲಿಪಿಕಾರನ ಶಿಷ್ಯತ್ವವನ್ನು ಒಪ್ಪಿಕೊಂಡರು. ಈ ಭೇಟಿಯ ಅವಧಿಯಲ್ಲಿ ವಿದ್ವಾಂಸರೆಂದು ಪ್ರಖ್ಯಾತರಾಗಿದ್ದ ಮ್ಯಾಕ್ಸ್ ಮುಲ್ಲರ್ ಅವರನ್ನು ಭೇಟಿಯಾಗುವ ಸಂತೋಷ ಇವರದ್ದಾಯಿತು. 1895ರಲ್ಲಿ ಬೇಸಿಗೆಯಲ್ಲಿ ಯುರೋಪಿನ ಪ್ರವಾಸದಲ್ಲಿದ್ದ ಪ್ರಸಿದ್ಧ ಪೌರಸ್ತ್ಯ ಭಾಷಾ ಸಾಹಿತ್ಯಗಳ ಜರ್ಮನ್ ಪಂಡಿತನಾದ ಪಾಲ್ ಡಾಯ್ ಸನ್ ಎಂಬಾತನನ್ನು ಭೇಟಿಯಾದರು.


ಪಾಶ್ಚಾತ್ಯ ರಾಷ್ಟ್ರಗಳಿಗೆ, ಎಲ್ಲಾ ಧರ್ಮಗಳಿಗೂ ಮೂಲಭೂತವಾಗಿರುವುದು ವಿಶ್ವವ್ಯಾಪೀ ತತ್ತ್ವವನ್ನೊಳಗೊಂಡ ವೇದಾಂತ ಸಂದೇಶ ಎಂದು ಬೋಧಿಸಲು ಬಹಳ ಪ್ರಯಾಸವಾಯಿತು. ಅವರ ಶ್ರಮದ ಫಲವಾಗಿ ಆಗಲೇ ವೇದಾಂತ ಕಾರ್ಯವು ಅಮೆರಿಕೆಯಲ್ಲಿ ನಿಯತವಾಗಿ ಪ್ರತಿಷ್ಠಿತವಾಯಿತು. ಲಂಡನ್ನಿನಲ್ಲಿಯೂ ಇದರ ಪ್ರಗತಿ ಹೆಚ್ಚಾಯಿತು. ಈಗ ಅವರ ಸಂದೇಶವನ್ನು ಸ್ವೀಕರಿಸಲು ಅವರ ತಾಯಿನಾಡು ಹಾತೊರೆಯುತ್ತಿತ್ತು. 1896ರ ಕೊನೆಯಲ್ಲಿ ಲಂಡನ್ನನ್ನು ಬಿಟ್ಟು, ಭಾರತಕ್ಕೆ ಪ್ರಯಾಣ ಬೆಳೆಸಿದರು. ಅಮೆರಿಕ ಮತ್ತು ಇಂಗ್ಲೆಂಡಿನ  ಶಿಷ್ಯರಲ್ಲದೆ, ತಮ್ಮ ಸಹೋದರ ಸಂನ್ಯಾಸಿಗಳಾದ ಶಾರದಾನಂದ ಮತ್ತು ಅಭೇದಾನಂದರನ್ನು ಕಾರ್ಯವನ್ನು ಮುಂದುವರಿಸಲು ಅಲ್ಲಿಯೇ ಬಿಟ್ಟುಬಂದರು.


ಆಗಮನದ ವಿಜಯೋತ್ಸವ

1890ರ ಡಿಸೆಂಬರ್ 12 ಸ್ವಾಮಿ ವಿವೇಕಾನಂದರು ಲಂಡನನ್ನು ಬಿಟ್ಟು ಸೇವಿಯರ್ಸ್ ರೊಂದಿಗೆ ರೋಮ್ ಮತ್ತು ಇಟೆಲಿಯ ಕೆಲವು ಪ್ರದೇಶಗಳಿಗೆ ಭೇಟಿಯಿತ್ತು. ಡಿಸೆಂಬರ್ 30 ರಂದು ನೇಪಲ್ಸ್‌ನಲ್ಲಿ ಹಡಗನ್ನು ಹತ್ತಿ ಭಾರತಕ್ಕೆ ಹೊರಟರು. ಮಿ|| ಗುಡ್ ವಿನ್ ಅವರು ನೇಪಲ್ಸಿನಲ್ಲಿ ಇವರ ತಂಡವನ್ನು ಸೇರಿದರು. ಅವರುಗಳು 19ನೇ ಜನವರಿ 1897ರಂದು ಕೊಲಂಬೋ ಸೇರಿದರು. ಸ್ವಾಮಿ ವಿವೇಕಾನಂದರ ಆಗಮನದ ಸುದ್ದಿ ಆಗಲೇ ಭಾರತವನ್ನು ತಲುಪಿತ್ತು. ಭಾರತದ ಪ್ರತಿಯೊಂದು ವಲಯದಿಂದಲೂ ವಿವೇಕಾನಂದರನ್ನು ಸ್ವಾಗತಿಸಲು ಜನರು ಸಂಭ್ರಮಭರಿತರಾಗಿದ್ದರು. ಈಗ ಅವರು ಕೇಳರಿಯದ ಸಂನ್ಯಾಸಿಯಾಗಿರಲಿಲ್ಲ ಅವರಿಗೆ ಯೋಗ್ಯವಾದ ರೀತಿಯಲ್ಲಿ ಸ್ವಾಗತ ಸಮಾರಂಭವನ್ನೇರ್ಪಡಿಸಲು ಪ್ರತಿಯೊಂದು ಚಿಕ್ಕ ಹಾಗೂ ದೊಡ್ಡ ನಗರಗಳಲ್ಲಿ ಸಮಿತಿಗಳು ರಚಿತವಾದವು. “ಸ್ವಾಮೀಜಿ ಅವರು ಪ್ರತೀಕ್ಷಾವಿಷ್ಟರಾದ ಜನರಿಗೆ ತಮ್ಮ ಸಂದೇಶದ ಮೂಲಕ  – ರಾಮ, ಶಿವ ಮತ್ತು ಕೃಷ್ಣರ ನಾಡನ್ನು ಪುನಃ ಪ್ರತಿಷ್ಠಾಪಿಸುವ ಶಂಖಧ್ವನಿಯನ್ನು ಮೊಳಗಿಸಿದರು. ಅಲ್ಲದೆ ವೀರ ಚೈತನ್ಯ – ಅಮೃತ ಆತ್ಮಕ್ಕೆ ಸಮರಕ್ಕಾಗಿ ಮುನ್ನುಗ್ಗಲು ಕರೆಯಿತ್ತರು. ಅವರು ದಂಡ ಯಾತ್ರೆ ಹಂಚಿಕೆಯನ್ನು ವಿವರಿಸುವ ಓರ್ವ ಸೇನಾಧಿಪತಿಯಾಗಿದ್ದರು. “ಜೀವನಾಧಾರಕ್ಕೆ ಇರಬೇಕಾದ ಶಕ್ತಿ ನಿಮ್ಮಲ್ಲಿ ಎಲ್ಲಿದೆ ! ನಿಮ್ಮ ಅಮರವಾದ ಅತ್ಮದಲ್ಲಿಯೇ !! ಎದ್ದೇಳಿ ! ಎಂದೇ ಜನಸಮೂಹಕ್ಕೆ ಎಚ್ಚರಿಸುತ್ತಿದ್ದರು” ಎಂದು ರೋಮಾರೋಲ ಹೇಳಿದ್ದಾರೆ. ಸ್ವಾಮೀಜಿ ಮದ್ರಾಸಿನಲ್ಲಿ 5 ಸಾರ್ವಜನಿಕ ಉಪನ್ಯಾಸಗಳನ್ನು ನೀಡಿದರು. ಅವು ಪ್ರತಿಯೊಂದೂ ಮೂಢನಂಬಿಕೆ ಮತ್ತು ದುರ್ಬಲತೆಯನ್ನು ಹೊರ ದೂಡಿ ನವಭಾರತದ ನಿರ್ಮಾಣಮಾಡಬೇಕೆಂದು ಹುರಿದುಂಬಿಸುವ ಕಹಳೆಯ ಕರೆಯಾಗಿತ್ತು. “ಸಮಗ್ರ ವಿಶ್ವದ ಆಧ್ಯಾತ್ಮಿಕ ಏಕತೆಯನ್ನು ಬೋಧಿಸುವುದು ನಮ್ಮ ಧರ್ಮ. ಈ ಧರ್ಮವೇ ನಮ್ಮ ರಾಷ್ಟ್ರಜೀವನ ಸಂಗೀತದ ಮುಖ್ಯ ಭಾವವಾಗಿದೆ. ಅದು ಬಲಿಷ್ಠವಾಗಿದ್ದರೆ ಉಳಿದಿದ್ದೆಲ್ಲವೂ ತನಗೆ ತಾನೇ ಸರಿಹೋಗುತ್ತದೆ” ಎಂದು ಒತ್ತಿ ಹೇಳಿದರು. ಅವರು ತಮ್ಮ ರಾಷ್ಟ್ರದ ಜನರ ಪಾಶ್ಚಾತ್ಯ ಅನುಸರಣೆ, ಜಾತಿ ಮತ್ಸರ ಮತ್ತು ಹಳೆಯ ಮೂಢನಂಬಿಕೆ ಮೊದಲಾದವುಗಳನ್ನು ಕಂಡು ಛೀಮಾರಿ ಹಾಕುವುದನ್ನು ಬಿಡಲಿಲ್ಲ.


 ಸ್ವಾಮೀಜಿಯವರು ಮದ್ರಾಸಿನಿಂದ ಕಲ್ಕತ್ತಾಗೆ ಹಡಗಿನ ಮೂಲಕ ಫೆಬ್ರವರಿ 20 ರಂದು ಬಂದು ಮುಟ್ಟಿದರು. ಅವರಿಗೆ, ಅವರ ಹುಟ್ಟೂರು ಅದ್ಭುತ ಸ್ವಾಗತವನ್ನು ನೀಡಿತು. “ನಾನಾ ವಿಚಾರದಿಂದ ಅಥವಾ ನುಡಿಯಿಂದ ಅಥವಾ ನಡೆಯಿಂದ ಏನನ್ನಾದರೂ ಸಾಧಿಸಿದ್ದೇ ಆದರೆ, ನಾನು ನುಡಿದ ಮಾತಿನಿಂದ ಜಗತ್ತಿನಲ್ಲಿ ಯಾರಿಗಾದರೂ ಸಹಾಯವಾಗಿದ್ದರೆ ಅದೆಲ್ಲವೂ ನನ್ನ ಗುರುಗಳ ಕೃಪೆಯಿಂದಲೇ ಆಗಿದ್ದು. ಈ ರಾಷ್ಟ್ರ ಉದ್ಧಾರವಾಗಬೇಕಾದರೆ, ಅದೂ ಸಹ ನನ್ನ ಗುರುಗಳ ನಾಮಬಲದಿಂದಲೇ, ನನ್ನಿಂದ ಆಗುವುದಿಲ್ಲ” ಎಂದು ಗುರುಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದರು.


ಸ್ವಾಮೀಜಿಯವರು ತಾವು ಮಾಡಬೇಕಾದ ಕಾರ್ಯವು ದೃಢ ನೆಲೆಗಟ್ಟಿನ ಮೇಲೆ ನಿಲ್ಲಬೇಕೆಂದು ಶಿಷ್ಯವೃಂದಕ್ಕೆ ಮತ್ತು ಸಂನ್ಯಾಸಿಗಳಿಗೆ ಬಲರಾಮಬೋಸ್ ಅವರ ನಿವಾಸದಲ್ಲಿ ಸೇರಲು ಕರೆ ಇತ್ತರು. 1897ರ ಮೇ ತಿಂಗಳಲ್ಲಿ ರಾಮಕೃಷ್ಣ ಸಂಸ್ಥೆಯ ಪ್ರಾರಂಭವಾಯಿತು. ಸ್ವಾಮಿ ವಿವೇಕಾನಂದರು ಹುಟ್ಟುಹಾಕಿದ ಸಂಘವು ಮಾನವ ಹಿತ ಸಾಧನೆ ಮತ್ತು ಆಧ್ಯಾತ್ಮಿಕತೆಯನ್ನು ತನ್ನ ಧ್ಯೇಯ ಮತ್ತು ಆದರ್ಶವನ್ನಾಗಿಟ್ಟು ಕೊಂಡಿತ್ತು. ತಮ್ಮ ಉದ್ದೇಶವನ್ನು ಕಾರ್ಯಗತಗೊಳಿಸಲು ಈ ಸಂಸ್ಥೆಯನ್ನು ಅವರು ಉದ್ಘಾಟಿಸಿದರು.


ಮೇ 1898ರಲ್ಲಿ ಕಲ್ಕತ್ತಾದಲ್ಲಿ ಪ್ಲೇಗ್ ಕಾಯಿಲೆ ಹರಡಿದಾಗ ಸ್ವಾಮಿ ವಿವೇಕಾನಂದರ ತಮ್ಮ ಶಿಷ್ಯ ಸಂನ್ಯಾಸಿಗಳಿಗೆ ಪರಿಹಾರ ಕೆಲಸವನ್ನು ವ್ಯವಸ್ಥಿತಗೊಳಿಸಿದರು. ಪ್ಲೇಗ್ ಕಾಯಿಲೆ ಶಮನವಾದ ಮೇಲೆ ಪಾಶ್ಚಾತ್ಯ ಶಿಷ್ಯರೊಂದಿಗೆ ಸ್ವಾಮೀಜಿಯವರು ನೈನಿತಾಲ್ ಮತ್ತು ಅಲ್ ಮೊರಾಗೆ ಹೊರಟರು. ಈ ಪ್ರವಾಸದಿಂದ ಪಾಶ್ಚಾತ್ಯ ಶಿಷ್ಯರಿಗೆ; ವಿಶೇಷವಾಗಿ ಸಿಸ್ಟರ್ ನಿವೇದಿತಾ ಅವರಿಗೆ ಒಳ್ಳೆಯ ಸಿದ್ಧತೆ ಮತ್ತು ತರಬೇತಿಗೆ ಅವಕಾಶ ದೊರಕಿದಂತಾಯಿತು. ಈ ಕೆಲವು ಶಿಷ್ಯರೊಂದಿಗೆ ಜೂನ್ 16 ರಂದು ಸ್ವಾಮೀಜಿಯವರು ಕಾಶ್ಮೀರಕ್ಕೆ ಹೊರಟರು. ಕಾಶ್ಮೀರದ ಸಂಚಾರ ಸ್ವಾಮೀಜಿಯವರಿಗೆ ಮತ್ತು ಅವರ ಶಿಷ್ಯರಿಗೆ ಅಚ್ಚಳಿಯದಂತಹ ಅನುಭವವನ್ನು ತಂದುಕೊಟ್ಟಿತು. ಜುಲೈ ತಿಂಗಳ ಕೊನೆಯಲ್ಲಿ ಸ್ವಾಮಿ ವಿವೇಕಾನಂದರು ಸಿಸ್ಟರ್ ನಿವೇದಿತಾ ಅವರೊಂದಿಗೆ ಪವಿತ್ರ ಸ್ಥಳವಾದ ಅಮರ್ ನಾಥ್ ಗೆ ಹೋಗಿಬಂದರು. ನಡೆದುಕೊಂಡುಬಂದಿರುವ ಸಂಪ್ರದಾಯವನ್ನು ಚಾಚೂತಪ್ಪದಂತೆ ಅನುಸರಿಸುತ್ತಾ ತುಂಡುದಟ್ಟಿಯನ್ನು ಧರಿಸಿ, ವಿಭೂತಿಯನ್ನು ಲೇಪಿಸಿಕೊಂಡು, ಸ್ವಾಮೀಜಿ ಆಗಸ್ಟ್ 2 ರಂದು ಅಮರನಾಥ ಗುಹೆಯನ್ನು ಹೊಕ್ಕರು. ಇಡೀ ದೇಹವೇ ಭಾವನೆಯಿಂದ ಕಂಪಿಸುತ್ತಿತ್ತು….. ಅತೀಂದ್ರಿಯ ಅನುಭವವಾಯಿತು. ಶಿವನೇ ಮುಂದೆ ಆವಿರ್ಭವಿಸಿದನೆಂದಷ್ಟೆ ನುಡಿದರು. ಶ್ರೀನಗರದಿಂದ ಕೆಲವು ಮೈಲುಗಳಾಚೆ ಮಾತೃ ದೇವತೆಯಾದ ಕ್ಷೀರ್ ಭವಾನಿಯ ದೇವಸ್ಥಾನಕ್ಕೆ ಒಬ್ಬರೇ ಹೋದರು. ಇದೂ ಸಹ ಸ್ವಾಮೀಜಿ ಅವರಿಗೆ ಮರೆಯಲಾಗದಂತಹ ಅನುಭವವನ್ನು ತಂದುಕೊಟ್ಟಿತು. ಮಾತೆಯವರನ್ನು ಮನದಲ್ಲಿ ತುಂಬಿಕೊಂಡು ಉದ್ಗಾರ ಮಾಡಿದರು. ಅವರ ಕವನದಿಂದಲೇ ಉದಾಹರಿಸುವುದಾದರೆ “ಪ್ರತಿಯೊಂದು ನಿಜವಾಯಿತು, ಪ್ರತಿಯೊಂದು ಪದವೂ ಸಹ ಮತ್ತು ಅದನ್ನು ನಾನು ಸಾಧಿಸಿ ತೋರಿಸಿದ್ದೇನೆ. ಮೃತ್ಯುವಿನ ಆಕಾರವನ್ನು ನಾನು ಆಲಂಗಿಸಿದ್ದೇನೆ.”


ಅಕ್ಟೋಬರ್ 18ರಂದು ಕಲ್ಕತ್ತಾವನ್ನು ಸೇರಿದಾಗ ಸ್ವಾಮೀಜಿಯವರು ಅನೇಕ ಕಾಯಿಲೆಗಳಿಂದ ನರಳುತ್ತಿದ್ದರಲ್ಲದೆ ಬಹಳ ನಿಶ್ಶಕ್ತರಾಗಿದ್ದರು. ಆದರೂ ಅವುಗಳನ್ನು ಕಡೆಗಾಣಿಸಿ ಅನೇಕ ಕಾರ್ಯಗಳಲ್ಲಿ ತೊಡಗಿದರು. ಬೇಲೂರಿನ ಗಂಗಾ ನದಿಯ ಪಡುವಣ ದಿಕ್ಕಿನಲ್ಲಿ ಕಲ್ಕತ್ತಾದಿಂದ 5 ಮೈಲಿ ಆಚೆ ಸ್ವಲ್ಪ ಭೂಮಿಯನ್ನು ತೆಗೆದುಕೊಂಡು ಮಠವನ್ನು ಕಟ್ಟಲು ಪ್ರಾರಂಭಿಸಿದರು. ಅದೇ ಇಂದು ಬೇಲೂರು ಮಠವೆಂದು ಪ್ರಸಿದ್ಧವಾಗಿದೆ. ಇದಕ್ಕಿಂತ ಮುಂಚೆಯೇ ನಿವೇದಿತಾ ಗರ್ಲ್ಸ್ ಸ್ಕೂಲು ಪ್ರಾರಂಭವಾಗಿತ್ತು. ‘ಉದ್ಭೋಧನ’ ಎಂಬ ಬಂಗಾಲಿ ಮಾಸಿಕವು ಈ ಅವಧಿಯಲ್ಲಿಯೇ ಪ್ರಾರಂಭವಾಯಿತು. ಮಾರ್ಚ್ 1899ರಲ್ಲಿ ಮಾಯಾವತಿಯಲ್ಲಿ  (ಅಲ್ ಮೋರಾ) ಅದ್ವೈತ ಆಶ್ರಮವನ್ನು ಆರಂಭಿಸುವುದರ ಮೂಲಕ ಹಿಮಾಲಯದಲ್ಲಿ ಮಠವನ್ನು ಸ್ಥಾಪಿಸುವ ಸ್ವಾಮೀಜಿಯವರ ಕನಸನ್ನು ಸೇವಿಯರ್ ದಂಪತಿಗಳು ನನಸು ಮಾಡಿದರು. ‘ಪ್ರಬುದ್ಧ ಭಾರತ’ ಎಂಬ ಇಂಗ್ಲೀಷ್ ಮಾಸಿಕ ಇದಕ್ಕಿಂತ ಮೊದಲು ಮದ್ರಾಸ್‌ನಿಂದ ಪ್ರಕಟವಾಗುತ್ತಿತ್ತು. ಆದರೆ 1898ರಲ್ಲಿ ಆ ಮಾಸಿಕದ ಸಂಪಾದಕರ ಅಕಾಲ ಮರಣದಿಂದ ಆ ತಿಂಗಳ ಸಂಚಿಕೆ ಮಾತ್ರ ಹೊರಬರಲಿಲ್ಲ. ಅಲ್ ಮೋರಾದಲ್ಲಿ ಸ್ವಾಮಿ ವಿವೇಕಾನಂದರ ಶಿಷ್ಯರಾದ ಸ್ವಾಮಿ ಸ್ವರೂಪಾನಂದರ ಸಂಪಾದಕತ್ವದಲ್ಲಿ ಆ ಮಾಸಿಕವು ಪುನರಾರಂಭವಾಯಿತು. ಅನಂತರ ಅದನ್ನು ಮಾಯಾವತಿಯ ಅದ್ವೈತ ಆಶ್ರಮಕ್ಕೆ ವರ್ಗಾಯಿಸಿದರು.


ಈ ಅವಧಿಯಲ್ಲಿಯೇ ಸ್ವಾಮೀಜಿಯವರು ಮಠದ ಸಂನ್ಯಾಸಿಗಳನ್ನು, ಬ್ರಹ್ಮಚಾರಿಗಳನ್ನು ತೀವ್ರ ಆಧ್ಯಾತ್ಮಿಕ ಜೀವನ ಮತ್ತು ಸೇವಾ ಪ್ರವೃತ್ತಿಯೆಡೆಗೆ ಆಕರ್ಷಿತರಾಗುವಂತೆ ಸತತವಾಗಿ ಪ್ರೇರೇಪಿಸಿದರು. ಏಕೆಂದರೆ ನಾವು ನಮ್ಮ  ವಿಮೋಚನೆಯನ್ನು ಸಾಧಿಸಬೇಕು. ಅಲ್ಲದೆ ಅವರು – “ಆತ್ಮನೋ ಮೋಕ್ಷಾರ್ಥಂ ಜಗತ್ ಹಿತಾಯ ಚ” ಎಂದಿದ್ದಾರೆ. ಆದರೆ ಈ ವೇಳೆಗಾಗಲೇ ಸ್ವಾಮೀಜಿಯವರ ಆರೋಗ್ಯ ಬಹಳ ಕೆಟ್ಟಿತ್ತು. ಪಶ್ಚಿಮಕ್ಕೆ ಮತ್ತೊಮ್ಮೆ ಭೇಟಿ ನೀಡಬೇಕೆಂಬ ಅವರ ಹವಣಿಕೆಯನ್ನು ಇದರಿಂದಲಾದರೂ ಆರೋಗ್ಯ ಉತ್ತಮವಾಗಬಹುದೆಂದು ತರುಣ ಸಂನ್ಯಾಸಿಗಳು ಸ್ವಾಗತಿಸಿದರು.


 ಮತ್ತೊಮ್ಮೆ ವಿದೇಶಕ್ಕೆ

ಸಿಸ್ಟರ್ ನಿವೇದಿತಾ ಮತ್ತು ಸ್ವಾಮಿ ತುರಿಯಾನಂದ ಅವರನ್ನು ಜೊತೆಗೂಡಿ ಸ್ವಾಮಿ ವಿವೇಕಾನಂದರು ಜೂನ್ 20, 1899ರಂದು ಭಾರತವನ್ನು ಬಿಟ್ಟು ಪ್ರವಾಸ ಹೊರಟರು. ಇವರಿಬ್ಬರಿಗೂ ಸ್ವಾಮೀಜಿಯವರೊಡನೆ ಪ್ರವಾಸವು ಒಳ್ಳೆಯ ಶಿಕ್ಷಣವನ್ನು ತಂದುಕೊಟ್ಟಿತು. ಸಿಸ್ಟರ್ ನಿವೇದಿತಾ ಈ ರೀತಿ ಬರೆದಿದ್ದಾರೆ. “ಕಣ್ಣಿಗೆ ಕಟ್ಟುವಂತಹ ಕಥೆಗಳ ಪ್ರವಾಹ ಪ್ರಾರಂಭದಿಂದ ಕೊನೆವರೆಗೂ ಹರಿಯಿತು. ಹೊಚ್ಚ ಸತ್ಯ ನುಡಿಯ ಮತ್ತು ಸ್ಫೂರ್ತಿಯ ಮಿಂಚು, ವಾಕ್ ಶಕ್ತಿಯ ಅಸಾಧಾರಣತೆ ನಿರೀಕ್ಷೆಯನ್ನು ಮೀರಿ ಯಾವ ಗಳಿಗೆಯಲ್ಲಿ ಬೇಕಾದರೂ ಮಿಂಚಿಬಿಡುತ್ತಿತ್ತು.”


ಮದ್ರಾಸ್, ಕೊಲಂಬೋ, ಏಡನ್ ಮತ್ತು ಮಾರ್ ಸೆಲ್ಲೀಸ್ ನಿಂದ ಹಡಗು ಜುಲೈ 31ರಂದು ಲಂಡನ್ ಸೇರಿತು. ಈ ಪ್ರವಾಸ ಸ್ವಾಮೀಜಿಯವರ ಆರೋಗ್ಯವನ್ನು ಉತ್ತಮಪಡಿಸಿತು.


ಲಂಡನ್ನಿನಲ್ಲೇ 2 ವಾರ ತಂಗಿದ್ದು ನ್ಯೂಯಾರ್ಕಿಗೆ ಪ್ರವಾಸ ಬೆಳಸಿದರು. ನ್ಯೂಯಾರ್ಕಿಗೆ ಹೋದ ತಕ್ಷಣ ಸ್ವಾಮೀಜಿಯವರು ಲೆಗ್ಗೆಟ್ ಮತ್ತು ಅವರ ಮನೆಯವರೊಂದಿಗೆ ಹಡ್ ಸನ್ ನದಿಯ ತೀರದಲ್ಲಿರುವ ಅವರ ಸುಂದರವಾದ ಮನೆ ರಿಡ್ ಜ್ಲಿ ಮೇನರ್ ನಲ್ಲಿ ನವೆಂಬರ್ 5ರ ವರೆಗೆ ಏಕಾಂತದಲ್ಲಿ ಕಳೆದರು. ಅಲ್ಲಿಂದ ಸ್ವಾಮೀಜಿಯವರು ಪಶ್ಚಿಮ ತೀರದ ಲಾಸ್ ಏಂಜಲೀಸ್, ಓಕಲ್ಯಾಂಡ್, ಸ್ಯಾನ್ ಫ್ರಾನ್ಸಿಸ್ಕೊಗಳಿಗೆ ಭೇಟಿ ಇತ್ತರಲ್ಲದೆ ಚಿಕಾಗೋ  ಮತ್ತು ಡೆಟ್ರಾಯ್ಟಗೂ ಅಲ್ಪಾವಧಿ ಭೇಟಿ ನೀಡಿದರು. ಪೂರ್ವ ಮತ್ತು ಪಶ್ಚಿಮ ರಾಷ್ಟ್ರಗಳ ಪರಸ್ಪರ ಒಡನಾಟ ಮತ್ತು ಒತ್ತಾಸೆಯು ಏರ್ಪಡಬೇಕೆಂಬ ಮನವರಿಕೆ ಇನ್ನೂ ದೃಢವಾಯಿತು. ಪಚ್ಚಿಮ ರಾಷ್ಟ್ರಗಳ ಕೇವಲ ಐಹಿಕ ಭೋಗದ ಮೆರಗು ಅವರನ್ನು ಬೆರಗುಗೊಳಿಸಲಾರದು.  ಹಾಗೆಯೇ ಭಾರತದ ಆಧ್ಯಾತ್ಮಿಕತೆಯ ಪ್ರಾಶಸ್ತ್ಯವು ತನ್ನ ಸಾಮಾಜಿಕ ಹಾಗೂ ಆರ್ಥಿಕ ನ್ಯೂನತೆಗಳನ್ನು ಮುಚ್ಚಿಡಲಾರದು.


ನಿವೇದಿತಾ ಅವರಿಗೆ ಸ್ವಾಮೀಜಿಯವರು ಈ ರೀತಿ ಹೇಳಿದರು : “ಪಾಶ್ಚಾತ್ಯಾತರಿಗೆ ಸಾಮಾಜಿಕ ಜೀವನವೆಂಬುದು ಮೇಲ್ನೋಟದಲ್ಲಿ ನಗುವಿನ ತರಂಗ, ಆದರೆ ಆಳದಲ್ಲಿ ಹಲುಬುವಿಕೆ ಅಷ್ಟೇ. ಬಿಕ್ಕಿ ಬಿಕ್ಕಿ ಅಳುವಿನಲ್ಲಿ…… ಅದರ ಅಂತ್ಯ….. ಆದರೆ ಭಾರತೀಯರಿಗೆ ಮೇಲುನೋಟಕ್ಕೆ ವಿಷಾದ ಮತ್ತು ಮಬ್ಬುಕವಿದಂತೆ, ಆದರೆ ಆಂತರ್ಯದಲ್ಲಿ ನಿಶ್ಚಿಂತೆ ಮತ್ತು ಉಲ್ಲಾಸಾನುಭವ ಇದೆ.” ಪಶ್ಚಿಮವು ಬಾಹ್ಯಪ್ರಕೃತಿಯನ್ನು ಗೆಲ್ಲಲು ಪ್ರಯತ್ನಿಸಿದರೆ, ಪೂರ್ವವು ಆಂತರಿಕ ಪ್ರಕೃತಿಯನ್ನು ಗೆಲ್ಲಲು ಪ್ರಯತ್ನಿಸಿತು. ಈಗ ಪೂರ್ವ ಮತ್ತು ಪಾಶ್ಚಾತ್ಯ ರಾಷ್ಟ್ರಗಳು ಇಬ್ಬರ ಒಳಿತಿಗಾಗಿಯೇ, ಜೊತೆಗೂಡಿಯೇ ಒಬ್ಬರಿಗೊಬ್ಬರ ವಿಶೇಷ ಗುಣವನ್ನು ಹಾಳುಮಾಡದೇ ಕಾರ್ಯಪ್ರವೃತ್ತ ರಾಗಬೇಕಾಗಿದೆ. ಪಶ್ಚಿಮ ರಾಷ್ಟ್ರ ಪೂರ್ವದಿಂದ ಅರಿಯುವುದಿದೆ. ಈ ಇಬ್ಬರ ಆದರ್ಶ ಧ್ಯೇಯದ ಬೆಸುಗೆಯಿಂದ ಒಳ್ಳೆಯ ಭವಿಷ್ಯವನ್ನು ರೂಪಿಸಬೇಕಾಗಿದೆ. ಆಗ ಪೂರ್ವ ಪಶ್ಚಿಮ ಎನ್ನದೆ ‘ಮಾನವತ್ವ’ ಎಂಬುದು ಉಳಿಯುತ್ತದೆ.


 ಆ ಅವಧಿಯಲ್ಲಿ ನಡೆದ ಮುಖ್ಯ ಘಟನೆಯೆಂದರೆ ಕ್ಯಾಲಿ ಫೋರ್ನಿಯಾದ ಉತ್ತರದೆಡೆಯಲ್ಲಿ ಸ್ವಾಮಿ ತುರೀಯಾನಂದರ ನೇತೃತ್ವದಲ್ಲಿ ಶಾಂತಿಧಾಮವನ್ನು ಆರಂಭಿಸಿದ್ದು. ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ವೇದಾಂತ ಕೇಂದ್ರವನ್ನು ಉದ್ಘಾಟಿಸಿದರು. ಈ ಸಮಯದಲ್ಲಿ ಆ ರಾಷ್ಟ್ರದ ಪಶ್ಚಿಮ ನಗರಗಳಲ್ಲಿ ಉಪನ್ಯಾಸಗಳನ್ನು ನೀಡಿದರು. ತಮ್ಮ ಅಂತ್ಯವು ಸಮೀಪಿಸುತ್ತಿರುವುದು ಸ್ವಾಮೀಜಿಯವರಿಗೆ ದಿನೇ ದಿನೇ ಸ್ಪಷ್ಟವಾಗುತ್ತಾ ಬಂದಿತು. “ಪ್ರಶಾಂತವಾದ ಬಂದರಿನ ಸಮೀಪ ನನ್ನ ಹಡಗು ಸಾಗುತ್ತಿದೆ. ಅಲ್ಲಿಂದ ಅದನ್ನು ಮುಂದೆ ತಳ್ಳಲು ಸಾಧ್ಯವಾಗದ ರೀತಿಯಲ್ಲಿದೆ” ಎಂದು ಸ್ವಾಮೀಜಿ ಕುಮಾರಿ ಮೆಕ್ಲಾಯ್ಡ್ ಅವರಿಗೆ ಬರೆದಿದ್ದಾರೆ.
  ಸಾರ್ವತ್ರಿಕ ಮೇಳದ (Universal Exposition) ಸಂದರ್ಭದಲ್ಲಿ 1900ರ ಆಗಸ್ಟ್ 1 ರಂದು ಜರುಗುವ ಧರ್ಮಸಮ್ಮೇಳನಕ್ಕೆ ಭಾಗವಹಿಸಲು ಸ್ವಾಮಿ ವಿವೇಕಾನಂದರು ಪ್ಯಾರಿಸ್‌ಗೆ ಬಂದರು. ಕಾನ್ ಸ್ಟಾಂಟಿನೊಪಲಿಗೆ ಹೋಗುವುದಕ್ಕೆ ಮುನ್ನ ಸ್ವಾಮೀಜಿ ಕೆಲವು ಸ್ನೇಹಿತರೊಂದಿಗೆ ಅಕ್ಟೋಬರ್ ತಿಂಗಳಲ್ಲಿ ಪ್ಯಾರಿಸ್ಸನ್ನು ಬಿಟ್ಟು ಹಂಗೇರಿ, ರುಮೇನಿಯಾ, ಸರ್ ಬಿಯಾ ಮತ್ತು ಬಲ್ ಗೇರಿಯಾಗೆ ಭೇಟಿ ಇತ್ತರು ನಂತರ ಅಥೆನ್ಸ್ ಮತ್ತು ಕೈರೋಗೆ ಹೋದರು. ಸ್ವಾಮೀಜಿ ಕೈರೋದಲ್ಲಿದ್ದಾಗ ಮರುಕ್ಷಣವೇ ಭಾರತಕ್ಕೆ ಹಿಂದಿರುಗಬೇಕೆಂದು ಚಡಪಡಿಸಿದರು. ಇವರಿಗೆ ಕ್ಯಾಪ್ಟನ್ ಸೇವಿಯರ್‌ರವರ ಮರಣದ ಪೂರ್ವಸೂಚನೆಯಾಗಿತ್ತು. ಮುನ್ಸೂಚನೆಯನ್ನೇ ನೀಡದೆ ಸ್ವಾಮೀಜಿ ಡಿಸೆಂಬರ್ 9, 1900 ರಂದು ಬೇಲೂರು ಮಠಕ್ಕೆ ಮೊದಲ ಹಡಗಿನಲ್ಲೇ ಬಂದು ಸೇರಿದರು. ಇವರ ಆಗಮನ ತರುಣ ಸಂನ್ಯಾಸಿಗಳಿಗೆ ಶಿಷ್ಯರಿಗೆ ಆಶ್ಚರ್ಯಕರವಾಗಿಯೂ, ಆಹ್ಲಾದಕರವಾಗಿಯೂ ಆಗಿತ್ತು. ಎಲ್ಲರೂ ಅತ್ಯಂತ ಸಂತೋಷಗೊಂಡರು.


ಪಯಣದ ಅಂತ್ಯ

 ಅಕ್ಟೋಬರ್ 28ರಂದು ಕ್ಯಾಪ್ಟನ್ ಸೇವಿಯರ್ ಅವರ ನಿಧನ ವಾರ್ತೆಯು ತಿಳಿದುಬಂದ ತಕ್ಷಣ ಸ್ವಾಮೀಜಿಯವರು ಮಾಯಾವತಿಗೆ ಶ್ರೀಮತಿ ಸೇವಿಯರ್ ಅವರು ಸಂತೈಸುವುದಕ್ಕಾಗಿ ಹೊರಟರು.  1901, ಜನವರಿ 3 ರಂದು ಆ ಊರನ್ನು ಸೇರಿ ಎರಡು ವಾರಗಳ ಕಾಲ ಅಲ್ಲಿಯೇ ತಂಗಿದ್ದರು. ಅದ್ವೈತಕ್ಕಾಗಿ ನಿವೇದಿಸಿರುವ ಹಿಮಾಲಯದ ಆಶ್ರಮದ ಭವ್ಯದೃಶ್ಯ ಇವರನ್ನು ಸಂತೋಷಗೊಳಿಸಿತು. ಮೊದಲೇ ಅಸ್ವಸ್ಥರಾಗಿದ್ದ ಅವರು ಶೀತಬಾಧೆಯಿಂದ ಪೀಡಿತರಾದರು. ಆದರೂ ಅದನ್ನು ಲೆಕ್ಕಿಸದೆ ನಿಶ್ಚಿಂತರಾಗಿ ಆನಂದದಿಂದ ಕಾಡಿನಲ್ಲಿ ಮತ್ತು ಅಲ್ಲಿದ್ದ ಸರೋವರದ ದಂಡೆಯಲ್ಲಿ ಸಂತೋಷದಿಂದ ಅಡ್ಡಾಡಿದರು.


ಅಲ್ಲಿಂದ ಬೇಲೂರಿಗೆ ಹಿಂದಿರುಗಿ ಏಳುವಾರಗಳ ಕಾಲ ಮಠದಲ್ಲಿ ತಂಗಿದ್ದು ನಂತರ ಅಸ್ಸಾಂ ಮತ್ತು ಪೂರ್ವ ಬಂಗಾಳಕ್ಕೆ ಹೋದರು. ಪುಣ್ಯಕ್ಷೇತ್ರಗಳಿಗೆ ಭೇಟಿನೀಡಬೇಕೆಂಬ ತಮ್ಮ ಅಭಿಲಾಷೆಯನ್ನು ಸ್ವಾಮೀಜಿಯವರ ತಾಯಿ ತಿಳಿಸಿದಾಗ ಸ್ವಾಮೀಜಿ ಅವರೊಂದಿಗೆ ಹೊರಟರು. “ಇದು ಹಿಂದೂ ದೇಶದ ವಿಧವೆಯ ಮಹತ್ತರವಾದ ಆಸೆ.” ನನ್ನ ಕುಟುಂಬದವರಿಗೆ ಸದಾ ಆತಂಕ, ದುಃಖವನ್ನೇ ನೀಡಿರುವೆ. ಈಗ ನಾನು ಅಮ್ಮನ ಒಂದು ಅಭಿಲಾಷೆಯನ್ನಾದರೂ ಈಡೇರಿಸಲು ಪ್ರಯತ್ನಿಸುತ್ತಿದ್ದೇನೆ” ಎಂದು ಶ್ರೀಮತಿ ಬುಲ್ ಅವರಿಗೆ ಸ್ವಾಮಿ ವಿವೇಕಾನಂದರು ಬರೆದಿದ್ದಾರೆ. ತಮ್ಮ ಪ್ರವಾಸದಲ್ಲಿ ನಾಗಲ್ ಬಂದ್, ಕಾಮಾಖ್ಯಾ ಮತ್ತು ಶಿಲ್ಲಾಂಗಿಗೆ ಭೇಟಿಯನ್ನಿತ್ತು ಢಾಕಾ ಮತ್ತು ಶಿಲ್ಲಾಂಗಿನಲ್ಲಿ  ಕೆಲವು ಉಪನ್ಯಾಸಗಳನ್ನು ನೀಡಿ 1901ರ ಮೇ 2ನೇ ವಾರದಲ್ಲಿ ಬೇಲೂರು ಮಠಕ್ಕೆ ಹಿಂದಿರುಗಿದರು.


ಮಠದಲ್ಲಿ ಯಾವುದನ್ನೂ ಹಚ್ಚಿಕೊಳ್ಳದ ರೀತಿಯಲ್ಲಿ ಜೀವನ ನಡೆಸಬೇಕೆಂದು ಪ್ರಯತ್ನಿಸಿದರು. ಅನೇಕ ವೇಳೆ ತುಂಡು ದಟ್ಟಿಯನ್ನೇ ಧರಿಸಿಕೊಂಡು ಮಠದ ಸುತ್ತಲೂ ಓಡಾಡುತ್ತಾ ಅಥವಾ ಅಡಿಗೆ ಮಾಡುತ್ತಿರುವುದನ್ನು ವೀಕ್ಷಿಸುತ್ತಾ, ಇಲ್ಲವೇ ಸಂನ್ಯಾಸಿಗಳೊಂದಿಗೆ ಭಕ್ತಿಗೀತೆಗಳನ್ನು ಹಾಡುತ್ತಾ ಇದ್ದರು. ಕೆಲವೊಮ್ಮೆ ಅತಿಥಿ ಅಭ್ಯಾಗತರಿಗೆ ಆಧ್ಯಾತ್ಮಿಕ ವಿಷಯಗಳನ್ನು ಕುರಿತು ಉಪದೇಶ ನೀಡುತ್ತಿದ್ದರು. ಉಳಿದ ವೇಳೆಯಲ್ಲಿ ತಮ್ಮ ಕೊಠಡಿಯಲ್ಲಿ ಕುಳಿತು ಶ್ರದ್ಧೆಯಿಂದ ಓದುತ್ತಿದ್ದರು, ಇಲ್ಲವೇ ಮುಂದೆ ಕಾರ್ಯಾಗೈಯಬೇಕಾಗಿದ್ದರ ಯೋಜನೆಯನ್ನು, ಜಟಿಲವಾದ ಶಾಸ್ತ್ರ ಪ್ರಕ್ರಿಯೆ ಅಥವಾ ಪಂಕ್ತಿಗಳನ್ನು ಕುರಿತು ಮಠದ ಸದಸ್ಯರಿಗೆಲ್ಲಾ ವಿವರಿಸುತ್ತಿದ್ದರು. ತಮ್ಮ ಹೆಸರಿನಲ್ಲಿದ್ದ ಆಸ್ತಿಯನ್ನೆಲ್ಲಾ, ಬೇಲೂರು ಮಠದ ಸಹ ಸೋದರ ಶಿಷ್ಯರ ಹೆಸರಿಗೆ ಕಾನೂನುಬದ್ಧ ಪತ್ರವನ್ನು ಬರೆದು ಎಲ್ಲ ಔಪಚಾರಿಕ ಕರ್ತವ್ಯಗಳಿಂದ ಬಿಡುಗಡೆಯನ್ನು ಹೊಂದಿದರು.


 1901ರ ಅಂತ್ಯದಲ್ಲಿ ಜಪಾನಿನಿಂದ ಇಬ್ಬರು ಬೌದ್ಧ ವಿದ್ವಾಂಸರು ಮುಂದೆ ನಡೆಯಲಿರುವ ಧರ್ಮ ಸಮ್ಮೇಳನಕ್ಕೆ ಆಹ್ವಾನಿಸಲು ಇವರಲ್ಲಿಗೆ ಬಂದರು. ಆದರೆ ಸ್ವಾಮಿ ವಿವೇಕಾನಂದರು ಆ ಆಹ್ವಾನವನ್ನು ಸ್ವೀಕರಿಸಲಾಗದೆ, ಅವರೊಂದಿಗೆ ಗಯಾಕ್ಕೆ ಮಾತ್ರ ಹೋದರು. ಅಲ್ಲಿಂದ ವಾರಾಣಸಿಗೆ ತೆರಳಿದರು. ಅವರಲ್ಲಿ ಇವರ ಸಂದೇಶದಿಂದ ಸ್ಫೂರ್ತಿ ಹೊಂದಿದ ಕೆಲವು ತರುಣರು, ಬಡವರಿಗೆ ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುತ್ತಿರುವುದನ್ನು ಕಂಡು ಸಂತೋಷಪಟ್ಟರು. ಇದು ಮುಂದೆ ರಾಮಕೃಷ್ಣ ಮಿಷನ್ನಿನ ಸೇವಾ ಗೃಹಕ್ಕೆ ಕೇಂದ್ರವಾಯಿತು.


ತಮ್ಮ ಅವಸಾನವು ಸಮೀಪಿಸುತ್ತಿದೆ ಎಂಬುದನ್ನು ಸ್ವಾಮೀಜಿ ಅರಿತರು. ಕೊನೆಯ ದಿನಗಳ ಇವರ ಕಾರ್ಯವೆಲ್ಲವೂ ವಿಚಾರ ಪೂರ್ವಕವಾಗಿತ್ತಲ್ಲದೆ ಅರ್ಥಗರ್ಭಿತಾಗಿತ್ತು. “ವಿಶಾಲವಾದ ಮರದ ನೆರಳಿನಲ್ಲಿ ಸಣ್ಣ ಗಿಡಗಳು ಬೆಳೆಯಲಾರವು” ಎಂದಿದ್ದರು ಇವರು. ಜುಲೈ 4, 1902ರಂದು ಬೆಳಗ್ಗೆ 8 ರಿಂದ 11ರವರೆಗೆ ವಾಡಿಕೆಗಿಂತಲೂ ಅಪರೂಪವಾಗಿ ಧ್ಯಾನಸ್ಥರಾಗಿದ್ದರು. ನಂತರ ಮಧ್ಯಾಹ್ನ ಸ್ವಾಮೀಜಿ ಪ್ರೇಮಾನಂದ ಅವರೊಂದಿಗೆ ವಿಹರಿಸುತ್ತಿರುವಾಗ ಅವರಿಗೆ ವೇದಾಂತದ ಶಾಲೆಯನ್ನು ಪ್ರಾರಂಭಿಸಬೇಕೆಂಬ ತಮ್ಮ ಯೋಜನೆಯನ್ನು ವಿವರಿಸಿದರು. ಸಂಜೆ ಮತ್ತೆ ಒಂದು ಗಂಟೆಕಾಲ ಧ್ಯಾನಸ್ಥರಾಗಿಯೇ ತಮ್ಮ ಕೊಠಡಿಯಲ್ಲಿ ಕಳೆದು, ಮಲಗಿ ಎರಡು ಬಾರಿ ನಿಡಿದಾದ ಉಸಿರನ್ನು ಎಳೆದು ಚಿರಶಾಂತಿಯನ್ನು ಪಡೆದರು.


ಸ್ವಾಮಿ ವಿವೇಕಾನಂದರು ತಮ್ಮ ಶರೀರವನ್ನು ತ್ಯಜಿಸಿದ್ದರೂ ಸಹ 1892ರಲ್ಲಿ ಎರಿಕ್ ಹ್ಯಾಮಂಡ್ ರಿಗೆ ಹೇಳಿದ್ದ ಮಾತುಗಳು ಶಾಶ್ವತ ಸ್ಫೂರ್ತಿಯಾಗಿ ಪ್ರತಿಯೊಬ್ಬರಿಗೂ ಭರವಸೆ ಮೂಡಿಸುತ್ತವೆ: “ಹರಿದ ಅರಿವೆಯನ್ನು ಎಸೆಯುವಂತೆ ಈ ದೇಹವನ್ನು ಒಗೆದು ಇದರಿಂದ ನಿರ್ಗಮಿಸುವುದು ನನಗೇನೂ ಒಳ್ಳೆಯದು. ಆದರೆ ನಾನು ಕೆಲಸವನ್ನು ನಿಲ್ಲಿಸುವುದಿಲ್ಲ. ನಾನು ಎಲ್ಲೆಡೆಯೂ ಜನರನ್ನು ಪ್ರೇರೇಪಿಸುತ್ತೇನೆ, ಎಲ್ಲಿಯ ತನಕ ಅವರಿಗೆ ತಾವುಗಳು ದೇವರಿಂದ ಅಭಿನ್ನರೆಂದು ಅರಿವಾಗುವುದೋ ಅಲ್ಲಿಯವರೆಗೂ”.