ಶ್ರೀರಾಮಕೃಷ್ಣ ವಿವೇಕಾನಂದರ ಜೀವನ ಸಾಧನೆ, ಚಿಂತನ ಸರಣಿಗಳ ಪ್ರಭಾವದ ಪರಾಕಾಷ್ಠದಶೆ ಕಂಡುಬರುವುದು ೨೦ನೆಯ ಶತಮಾನದ ಶಿಖರ ಪ್ರತಿಭೆ ಎಂದು ಕರೆಯಬಹುದಾದ ಕುವೆಂಪು ಅವರಲ್ಲಿ, ಅವರ ಬದುಕು, ಬರಹಗಳು ಆ ಪ್ರಭಾವಕ್ಕೆ ವಿಶೇಷ ಋಣಿಯಾಗಿವೆ. ಶ್ರೀರಾಮಕೃಷ್ಣ, ಸ್ವಾಮಿ ವಿವೇಕಾನಂದ, ಶ್ರೀಮಾತೆಯರನ್ನು ಕುರಿತು ಅವರು ಗದ್ಯ ಪದ್ಯಗಳಲ್ಲಿ ಬಹಳ ಬರೆದಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಆ ಮಹಾಚೇತನಗಳ ದಿವ್ಯ ಪರಿವೇಷವನ್ನು ಕಟ್ಟಿದ ಕೀರ್ತಿ ಮುಖ್ಯವಾಗಿ ಕುವೆಂಪು ಅವರದು. ಅವರ ‘ಸ್ವಾಮಿ ವಿವೇಕಾನಂದ’ (ಜೀವನ ಚರಿತ್ರೆ) ಒಂದು ಯುಗಪ್ರವರ್ತಕ ಪ್ರೋಜ್ವಲ ಕೃತಿ, ಪರಮಹಂಸರ ಜೀವನಚರಿತ್ರೆಯನ್ನು ಅವರು ಅತ್ಯಂತ ಪರಿಣಾಮಕಾರಿಯಾಗಿ ರಚಿಸಿದ್ದಾರೆ.

ತಮ್ಮನ್ನು “ಶ್ರೀರಾಮಕೃಷ್ಣ ಭಗವದ್ ಗೋತ್ರ ಸಂಜಾತ” ಎಂದು ಕರೆದುಕೊಂಡಿದ್ದಾರೆ, ಕುವೆಂಪು. ಮೊದಮೊದಲು ಅವರ ಮೇಲಾದುದು ಸ್ವಾಮಿ ವಿವೇಕಾನಂದರ ಪ್ರಭಾವ. ಮುಂದೆ ಆದು ಶ್ರೀರಾಮಕೃಷ್ಣರತ್ತ ಅವರನ್ನು ಕರೆದೊಯ್ದಿತು. ಕುವೆಂವು ಅವರೊಬ್ಬ ರಸ ಋಷಿ. ಅವರನ್ನು ಪ್ರಭಾವಿಸಿದ ಶ್ರೀರಾಮಕೃಷ್ಣ ವಿವೇಕಾನಂದರಾಗಲಿ, ಸ್ವಾಮಿ ಸಿದ್ದೇಶ್ವರಾನಂದರಾಗಲಿ ಗೊಡ್ಡು ಸಂನ್ಯಾಸಿಗಳಾಗಿರಲಿಲ್ಲ: ಕಲಾಭಿರುಚಿ, ರಸ ದೃಷ್ಟಿಗಳನ್ನುಳ್ಳವರಾಗಿದ್ದರು. ಪರಮಹಂಸರಂತೆ ಕುವೆಂಪು ಕೂಡ ಸಂಸಾರವು ಹೇಯ ಎನ್ನುವುದಿಲ್ಲ.

ಶ್ರೀರಾಮಕೃಷ್ಣಾಶ್ರಮದ ಸಂಸರ್ಗ ಕುವೆಂಪು ಅವರಿಗಾಗುವ ಮುನ್ನವೆ ಅವರು ಪರಮಹಂಸ-ವಿವೇಕಾನಂದರ ಸಂಬಂಧವಾದ ಸಾಹಿತ್ಯವನ್ನು ಗಾಢವಾಗಿ ಓದಿಕೊಂಡಿದ್ದರು. ಅದಕ್ಕೆ ಮನಸೋತಿದ್ದರು. ಆದರೂ ಅವರ ಆಧ್ಯಾತ್ಮಿಕ ನೌಕಾಯಾನಕ್ಕೆ ಧ್ರುವತಾರೆ ಲಭಿಸಿದ್ದು, ಅವರು ಶ್ರೀರಾಮಕೃಷ್ಣ ಆಶ್ರಮಕ್ಕೆ ಸೇರಿದ ಮೇಲೆಯೇ. ತಮ್ಮ ಆತ್ಮಕಥೆಯ ಉದ್ದಕ್ಕೂ ತಮ್ಮ ದಿನಚರಿಯನ್ನು ಉದ್ಧರಿಸಿದ್ದಾರೆ ಕುವೆಂಪು. ಅಲ್ಲಿ ನಿಚ್ಚಳವಾಗಿ ನೋಡುತ್ತೇವೆ, ಅವರ ಆಧ್ಯಾತ್ಮಿಕ ಪ್ರಗತಿಯ ಸೋಪಾನ ಪಂಕ್ತಿಯನ್ನು ಗುರುಕೃಪೆ ತಮ್ಮನ್ನು ನಿರಂತರವಾಗಿ ಕೈಹಿಡಿದು ಕಾಪಾಡಿದ ಪರಿಯನ್ನು ಕುವೆಂಪು ಉದ್ದಕ್ಕೂ ತಿಳಿಸುತ್ತಾರೆ. “ತನ್ನಲ್ಲಿ ಏನಾದರೂ ಇತರರಲ್ಲಿ ಇಲ್ಲದ ಒಂದು ವಿಶೇಷ ವಿಭೂತಿ ಪ್ರಕಾಶಿತವಾಗಿದ್ದರೆ, ಅದಕ್ಕೆ ಶ್ರೀಗುರುವಿನ ಅನುಗ್ರಹವೇ ಕಾರಣ ಎಂಬುದು ಅವರ ನಂಬಿಕೆ.

ವಿವೇಕಾನಂದರ ಬಗೆಗೆ ಕುವೆಂಪು ಉದ್ಗರಿಸುತ್ತಾರೆ ” ಅವರ ಹೆಸರೇ ನಮಗೊಂದು ವಿದ್ಯುತ್ ಸಂಚಾರ ವಾಗಿತ್ತು.” ಅವರ ದಿನಚರಿ ಮೊದಮೊದಲು “ಜಯ್ ಸ್ವಾಮಿ ವಿವೇಕಾನಂದ! ಜಯ್ ಶ್ರೀಕೃಷ್ಣ! ” ಎ೦ದು ಕೊನೆಗೊಳ್ಳುತ್ತದೆ

ಆರಂಭದಲ್ಲಿ ಕುವೆಂಪು ಚೇತನ “ಪುಸ್ತಕಗಳಿಲ್ಲದೆ ಬೇರೆ ಮಾರ್ಗದರ್ಶಕರಿಲ್ಲದೆ ಮುಂದುವರಿಯುತ್ತಿತ್ತು. ಸ್ವಾಮಿ ವಿವೇಕಾನಂದರ ಕೃತಿಗಳ ಅಧ್ಯಯನದಿಂದ, ಅದ್ವೈತದ “ಅಭಿಃ” ತತ್ವದ ಅನುಸಂಧಾನ ಅವರಿಗೆ ಸಾಧ್ಯವಾಯಿತು. ವಿವೇಕಾನಂದರ ಬಗೆಗೆ ಅವರು ಉದ್ಗರಿಸುತ್ತಾರೆ . “ಅವರ ಹೆಸರೇ ನಮಗೊಂದು ವಿದ್ಯುತ್ ಸಂಚಾರವಾಗಿತ್ತು.” ಅವರ ದಿನಚರಿ ಮೊದಮೊದಲು ಜಯ್ ಸ್ವಾಮಿ ವಿವೇಕಾನಂದ! ಜಯ್ ಶ್ರೀಕೃಷ್ಣ! ” ಎಂದು ಕೊನೆಗೊಳ್ಳುತ್ತದೆ. ಮುಂದೆ ಈ ಹೆಸರುಗಳ ಜೊತೆಗೆ ಪರಮಹಂಸರದೂ ಸೇರುತ್ತದೆ. ಒಮ್ಮೆ ಹೀಗಾಯಿತು: “ಶ್ರೀರಾಮಕೃಷ್ಣ ಪರಮಹಂಸದೇವರ ಜೀವನ ಚರಿತ್ರೆ ಓದಲು ತೆಗೆದುಕೊಂಡೆ ಆ ಪುಸ್ತಕ ತೆಗೆದುಕೊಂಡವನು, ಹಾಗೆಯೇ ಸುಮ್ಮನೆ ತೆರೆದರೆ……. ನನ್ನ ಗುರುದೇವನ ಭಾವಚಿತ್ರ ನನ್ನತ್ತ ನಗೆ ಬೀರಿತು!…..”

ಶ್ರೀರಾಮಕೃಷ್ಣಾಶ್ರಮಕ್ಕೆ ಒಂದೊಂದು ಸಲ ಹೋದಾಗಲೂ. ಅದೊಂದು ‘ಆಧ್ಯಾತ್ಮಿಕ ತೀರ್ಥಯಾತ್ರೆ’ ಯಾಗುತ್ತಿತ್ತು ಕುವೆಂಪು ಅವರ ಪಾಲಿಗೆ ಕ್ರಮೇಣ ಅದು ಅವರ ಒಳ ಬಾಳಿನ ಕೇಂದ್ರ’ವಾಗತೊಡಗಿತು. ಒಬ್ಬರು ತಂದುಕೊಟ್ಟ, ಶ್ರೀಗುರುಮಹಾರಾಜ್, ಶ್ರೀಮಹಾಮಾತೆ ಮತ್ತು ಶ್ರೀ ವಿವೇಕಾನಂದರ ಸಂಘದ ‘ಚಿತ್ರಮಾಲಿಕೆ’ಯಿಂದಾಗಿ, ಕುವೆಂಪು ಅವರಲ್ಲಿ ಒಂದು ಆಧ್ಯಾತ್ಮಿಕ ‘ವಿದ್ಯುತ್ ಕೇಂದ್ರ’ವೆ ಸ್ಥಾಪಿತವಾಯಿತು! ಅಂತೂ. ಆಶ್ರಮಪ್ರವೇಶದಿಂದ ಒಂದು ‘ದಿವ್ಯ ಅಧ್ಯಾಯ’ ಅವರ ಜೀವನದಲ್ಲಿ ಮೊದಲಾಯಿತು. ‘ವಿಶ್ವವಿದ್ಯಾನಿಲಯೆ ಭಗವತಿ ಶ್ರೀಸರಸ್ವತಿಗೆ’ ಎಂಬ ಕುವೆಂಪು ಕವನವೊಂದರ ಈ ಸಾಲುಗಳೂ ಈ ಸಂಬಂಧದಲ್ಲಿ ಸ್ಮರಣಯೋಗ್ಯ:

ಚಿದ್ರೂಷಿಣಿ ಭವತಾರಿಣಿ ಉತ್ತರೋತ್ತರೆ ಕವಿಯನೆತ್ತಿ ರಕ್ಷಿಸಲ್ಕೆ ಬಂದಳಿತ್ತ ದಕ್ಷಿಣಕ್ಕೆ ಶ್ರೀವಿವೇಕ ಪರಮಹಂಸ ದಕ್ಷಿಣೇಶ್ವರೆ ಕಣ್ದೆರಿಯಿತು ಬೋಧನಾ ಗರಿಗೆದರಿತು ಸಾಧನಾ ಅಲೋಕ ಲೋಕಯಾತ್ರಿಯಾಯ್ತು ದಿವ್ಯದರ್ಶನ!

ಸ್ವಾಮಿ ವಿವೇಕಾನಂದರು ‘ಉತ್ಸವ ವಿಗ್ರಹ’ ವಾದರೆ, ಶ್ರೀರಾಮಕೃಷ್ಣರು ‘ಮೂಲಮೂರ್ತಿ.’ ಆ ಮಹಾಗುರು, ಶಿಷ್ಯರಲ್ಲಿ ಯಾರೊಬ್ಬರೂ ಜನ – ಸಾಮಾನ್ಯರ ಲೌಕಿಕ ಕ್ಷೇಮ, ಅಭ್ಯುದಯಗಳನ್ನು ತಿರಸ್ಕರಿಸಿದವರಲ್ಲ. ಶ್ರೇಯಸ್ಸಿನಂತೆ ಪ್ರೇಯಸ್ಸನ್ನೂ ಅವರು ಪುರಸ್ಕರಿಸಿದರು: ಸಾಮಾಜಿಕ ಪ್ರಜ್ಞೆ ಅವರಲ್ಲಿ ದಟ್ಟವಾಗಿತ್ತು. ಅವರ ಆಲೋಚನಾಧಾರೆಯಿಂದ ಸ್ಫೂರ್ತಿಗೊಂಡವರು ಕುವೆಂಪು.

ಸಮನ್ವಯ, ಸರ್ವೋದಯ, ಪೂರ್ಣದೃಷ್ಟಿ ತಮ್ಮ ಸಾಹಿತ್ಯದ ಮೂರು ಕಣ್ಣುಗಳೆಂದು ಹೇಳಿಕೊಂಡಿದ್ದಾರೆ, ಕುವೆಂಪು ಮೊದಲನೆಯದಾಗಿ, ಸಮನ್ವಯ. ಪರಮಹಂಸರು ‘ಸರ್ವಧರ್ಮಸಮನ್ವಯಾಚಾರ್ಯ” ಎಂದು ಪ್ರಸಿದ್ಧರಾಗಿದ್ದಾರಷ್ಟೆ, ತಮ್ಮ ‘ಸ್ವಾಮಿ ವಿವೇಕಾನಂದ’ ಜೀವನ ಚರಿತ್ರೆಯ `ಕರೆಯುತಿದೆ ಯುಗವಾಣಿ’ ಎಂಬ ಅಂತಿಮ ಅಧ್ಯಾಯದಲ್ಲಿ ಕುವೆಂಪು ಅವರೇ ಹೇಳುತ್ತಾರೆ : “ಅದರಲ್ಲಿ ಪ್ರಾಚ್ಯ, ಪಾಶ್ಚಾತ್ಯ, ಹಿಂದೂ, ಕ್ರೈಸ್ತ, ಇಸ್ಲಾಂ, ಬೌದ್ಧ, ಮತ, ತತ್ತ್ವ, ವಿಜ್ಞಾನ, ಕಲೆ, ಇಹ, ಪರ, ದೇಹ, ಆತ್ಮನ ನೂತನ, ಪುರಾತನ ಎಲ್ಲವೂ ಸಮನ್ವಯಗೊಂಡಿವೆ.” ಈ ಸಮನ್ವಯಲಕ್ಷ್ಮಿ ಕುವೆಂಪು ಅವರನ್ನು ಪ್ರಭಾವಿಸಿದೆ, ನಿಸ್ಸಂದೇಹವಾಗಿ.

ಇನ್ನು ಸರ್ವೋದಯ ವಿಚಾರ. ಇಂದಿನ ಯುಗಧರ್ಮ ಸರ್ವೋದಯ, ಅದು ಕುವೆಂಪು ಅವರ ಸಾಹಿತ್ಯ ಸಮಸ್ತದಲೂ ಓತಪ್ರೋತವಾಗಿರುವ ತತ್ತ್ವ. ಅವರ `ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಸರ್ವೋದಯ ಸಂದೇಶವೆ ಮೊಳಗುತ್ತಿದೆ. “ಪಾಪಿಗುದ್ದಾರಮಿಹುಕದೌ ಸೃಷ್ಟಿಯ ಮಹತ್ ವ್ಯೂಹ ರಚನೆಯೊಳ್ ಈ ಸೂಕ್ತಿ ಸ್ವಾಮಿ ವಿವೇಕಾನಂದರ “ಪಾಪಿದೇವೋಭವ” (ಪಾಪಿಗಳು ನಿಮ್ಮ ದೇವರಾಗಲಿ) ಎಂಬ ಕರೆಯ ಮಾರ್ದನಿ ಮಾತ್ರವಲ್ಲದೆ, ಇಡೀ ಕಾವ್ಯ ಅದಕ್ಕೆ ಬರೆದ ಭಾಷ್ಯವಾಗಿದೆ. ಪಾಪಿಗಳಿಗಷ್ಟೇ ಅಲ್ಲ, ದೀನದಲಿತರಿಗೂ ಉದ್ಧಾರವಿದೆ. ಸರ್ವೋದಯತತ್ತ್ವ ವ್ಯಾಪಕವಾದುದು.

ತಮ್ಮ ‘ಶ್ರೀಸಾಮಾನ್ಯರ ದೀಕ್ಷಾಗೀತೆ’ ಯಲ್ಲಿ ಕುವೆಂಪು ಉದ್ಗರಿಸುತ್ತಾರೆ:

ಸರ್ವೋದಯ, ಸರ್ವೋದಯ ಸರ್ವೋದಯ ಯುಗಮಂತ್ರ!

“ಇನ್ನಾಯಿತು ಓರೊರ್ವರ ಗರ್ವದ ಕಾಲ, ಇದು ಸರ್ವರ ಕಾಲ!

ಸ್ವಾತಂತ್ರ್ಯ ಸಮಾನತೆಗಳ ಮೇಲೆ, ಸಾಮಾನ್ಯರ ಉದ್ಧಾರದ ಮೇಲೆ ಕುವೆಂಪು ಆವರ ಅವಧಾರಣೆ, ಅವರು ಹೇಳುತ್ತಾರೆ:

ಸರ್ವರಿಗೆ ಸಮಬಾಳು ! ಸರ್ವರಿಗೆ ಸಮಪಾಲು! ಎಂಬ ನವಯುಗವಾಣಿ ಘೋಷಿಸಿದೆ ಕೇಳಿ!

ವಸ್ತುತಃ ಸರ್ವೋದಯ ಮಂತ್ರದ ಉಚ್ಚಾರಣೆ, ಸರ್ವೋದಯ ತತ್ತ್ವದ ಉದ್ಘಾಟನೆ ಆದುದು ಶ್ರೀರಾಮಕೃಷ್ಣ – ವಿವೇಕಾನಂದರಿಂದ (ಆದರೆ ಈ ಮಾತನ್ನು ಕೊಟ್ಟವರು ಗಾಂಧೀಜಿ), ಆತ್ಮನೋ ಮೋಕ್ಷಾರ್ಥಂ ಜಗದ್ಧಿ ತಾಯ ಚ ಎಂಬ ಶ್ರೀರಾಮಕೃಷ್ಣ ಮಹಾಸಂಘದ ಧ್ಯೇಯವಾಕ್ಯವನ್ನಿಲ್ಲಿ ನೆನೆಯಬಹುದು, ಪರಮಹಂಸರನ್ನು ‘ನವಯುಗದ ಪ್ರವರ್ತಕ’ ಎಂದು ಕರೆಯುತ್ತಾರೆ ವಿವೇಕಾನಂದರು. ಅದಕ್ಕೆ ವಿವರಣೆ ಕೊಡುತ್ತಾರೆ; “ಶ್ರೀರಾಮಕೃಷ್ಣರು ಹುಟ್ಟಿದ ದಿನದಿಂದಲೆ ನವೀನ ಭಾರತದ ಮತ್ತು ಸ್ವರ್ಣಯುಗದ ದಿನ ಮೊದಲಾಯಿತು.”

ವಿವೇಕಾನಂದರು, “ಜನಸಾಮಾನ್ಯರು ಮತ್ತು ಬಡವರು ಮೇಲೆ ಏಳಬೇಕು!” ಎಂಬ ಸಂಕಲ್ಪವನ್ನು ವ್ಯಕ್ತಪಡಿಸಿ, “ಸೇವೆಯ ಪೂಜೆ!” ಎಂಬ ಸೂತ್ರವನ್ನೂ ಟಂಕಿಸುತ್ತಾರೆ. ಮೂಲತ: ಶ್ರೀರಾಮಕೃಷ್ಣರದೆ ಈ ಮಹಾವಾಕ್ಯ: “ದೇವರನ್ನು ಅರಸುವುದಾದರೆ ಮನುಷ್ಯನಲ್ಲಿ ಅರಸು!”

ಕುವೆಂಪು ಸಾಮಾನ್ಯನನ್ನು ‘ಶ್ರೀಸಾಮಾನ್ಯ’ನೆಂದು ಕರೆದು -ಶ್ರೀಸಾಮಾನ್ಯನೆ ಭಗವದ್ಧನ್ಯ!” ಎಂದರು. ಅವನ ಅನ್ನ ಬಟ್ಟೆಗಳ ಪೂರೈಕೆಗೆ ಆದ್ಯತೆ ನೀಡಿದರು. ಸ್ವಾಮಿ ವಿವೇಕಾನಂದರಾದರೊ ‘ದರಿದ್ರ ನಾರಾಯಣ’ ಎಂಬ ಹೊಸ ದೇವತೆಯನ್ನೆ ಕಂಡುಹಿಡಿದು “ದರಿದ್ರ ದೇವೋ ಭವ!” (ಬಡವರು ನಿಮ್ಮ ದೇವರಾಗಲಿ) ಎಂಬ ಮಂತ್ರವನ್ನಿತ್ತರು. ಮೊದಲು ಅನ್ನ, ಆಮೇಲೆ ಅಧ್ಯಾತ್ಮ ಎಂದು ಹೇಳಲು ಅವರು ಮರೆಯಲಿಲ್ಲ. “ನಾನೊಬ್ಬ ಸಮಾಜವಾದಿ!” ಎಂದು ಹೇಳಿಕೊಳ್ಳುವ ವಿವೇಕಾನಂದರು, “ಜನಸಾಮಾನ್ಯರು ಮತ್ತು ಬಡವರು ಮೇಲೆ ಏಳಬೇಕು!” ಎಂಬ ಸಂಕಲ್ಪವನ್ನು ವ್ಯಕ್ತಪಡಿಸಿ, ಸೇವೆಯೆ ಪೂಜೆ!” ಎಂಬ ಸೂತ್ರವನ್ನೂ ಟಂಕಿಸುತ್ತಾರೆ. ಮೂಲತಃ ಶ್ರೀರಾಮಕೃಷ್ಣರದೆ ಈ ಮಹಾವಾಕ್ಯ: “ದೇವರನ್ನು ಅರಸುವುದಾದರೆ ಮನುಷ್ಯನಲ್ಲಿ ಅರಸು!”

ಕುವೆಂಪು ಮೌಢ್ಯವಿರೋಧಿ : ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ!” ಎಂಬುದು ಅವರ ಆಹ್ವಾನ. ವಿವೇಕಾನಂದರು ಘೋಷಿಸುತ್ತಾರೆ : “ಮೌಢ್ಯವು ಮಾನವನ ಮಹಾಶತ್ರು!”

ಕುವೆಂಪು ಅವರ ವಿಚಾರಧಾರೆಯ ಮೇಲೆ ಸ್ವಾಮಿ ವಿವೇಕಾನಂದರ ಪ್ರಭಾವ ಎಷ್ಟು ಸಾಂದ್ರವಾಗಿದೆಯೆಂದರೆ, ಎಷ್ಟೋ ಕಡೆ ಅವರನ್ನು ಕುವೆಂಪು ಅನುವಾದಿಸುತ್ತಿದ್ದಾರೆ ಎನಿಸುತ್ತದೆ. ಉದಾಹರಣೆಗೆ ಕುವೆಂಪು ಅವರ,

ನೂರು ದೇವರನೆಲ್ಲ ನೂಕಾಚೆ ದೂರ; ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ

ಎಂಬ ಕರೆಯೊಡನೆ ವಿವೇಕಾನಂದರ ಈ ಹೇಳಿಕೆಯನ್ನು ಹೋಲಿಸಬಹುದು : “ಇನ್ನೊಂದು ನೂರು ವರ್ಷಗಳವರೆಗೆ ನಿಮ್ಮ ದೇವದೇವತೆಗಳನ್ನೆಲ್ಲ ಮನಸ್ಸಿನಿಂದ ತಳ್ಳಿಬಿಡಿ. ನಮ್ಮ ಭಾರತಾಂಬೆಯೆ ನಮ್ಮ ದೇವರಾಗಲಿ!” ಹೀಗೆಯೇ, ಕುವೆಂಪು ಅವರ ಮುಂದಿನ ಕೋರಿಕೆಯೂ ವಿವೇಕಾನಂದ ಪ್ರೇರಿತವೇ:

ಕ್ಲೈಬ್ಯವನು ಸಂಹರಿಸೊ ದೌರ್ಬಲ್ಯವನು ದಹಿಸೊ

ಹೃದಯಕ್ಕೆ ಪೌರುಷವ ದಯಪಾಲಿಸೋ!

ಸ್ವಾಮಿ ವಿವೇಕಾನಂದರ ಅಸೀಮ ದೇಶಪ್ರೇಮ ಕುವೆಂಪು ಅವರ ದೇಶಭಕ್ತಿಗೀತೆಗಳನ್ನು ಸಹಜವಾಗಿಯೇ ಪ್ರಭಾವಿಸಿದೆ.

ಕುವೆಂಪು ವೈಜ್ಞಾನಿಕ, ವೈಚಾರಿಕ ದೃಷ್ಟಿಯ ಅಪ್ರತಿಮ ಪ್ರತಿಪಾದಕರಾಗಿ, “ವಿಜ್ಞಾನ ದೀವಿಗೆಯ ಹಿಡಿಯಬನ್ನಿ” ಎಂದು ಕರೆ ನೀಡುತ್ತಾರೆ. ಅಧ್ಯಾತ್ಮ, ವಿಜ್ಞಾನಗಳ ಸಮನ್ವಯವನ್ನು ಪುರಸ್ಕರಿಸುವ ವಿವೇಕಾನಂದರು ಮೂಲತಃ “ವಿಚಾರ ಸ್ವಾತಂತ್ರ್ಯ”ವನ್ನು ಎತ್ತಿಹಿಡಿದವರು ಹಾಗೆ ನೋಡಿದರೆ, ಶ್ರೀರಾಮಕೃಷ್ಣ ಪರಮಹಂಸರಲ್ಲೆ ವೈಜ್ಞಾನಿಕ ಮನೋಧರ್ಮವನ್ನು ಎದುರುಗೊಳ್ಳುತ್ತೇವೆ.

ವಿವೇಕಾನಂದರದು ವೇದಾಂತದ ಅದ್ವೈತದ ನಿಲುವು : ಅದು ವೈಜ್ಞಾನಿಕವಾದುದೂ ಹೌದು. ಕುವೆಂಪು ಅವರಲ್ಲೂ ಅದ್ವೈತದ ಅನುಭವಗಳು ಪ್ರಣೀತವಾಗಿವೆ.

ವೇದಾಂತ ಕೇಸರಿಯಾಗೋ ಮಾನವ ಲೋಕಾರಣ್ಯದೊಳಲೆದಾಡೆ

ಮುಂತಾದ ಮಾತುಗಳಲ್ಲಿ ವಿವೇಕವಾಣಿಯ ಛಾಯೆಯನ್ನು ಗುರುತಿಸಬಹುದು.

ಕುವೆಂವು ಅವರ ಪ್ರಸಿದ್ದವಾದ ವಿಶ್ವಮಾನವ ಸಂದೇಶದ ಮೂಲ ಶ್ರೀರಾಮಕೃಷ್ಣ, ವಿವೇಕಾನಂದರ ದರ್ಶನದಲ್ಲಿದೆ. ಶ್ರೀರಾಮಕೃಷ್ಣರು ಸರ್ವಧರ್ಮಗಳ ಏಕತೆಯನ್ನು ಒತ್ತಿ ಹೇಳಿದರು. ಸಂಕುಚಿತ ಪಂಥಾಭಿಮಾನ ವಿರೋಧಿಯಾಗಿ, ಧಾರ್ಮಿಕ ಶ್ರದ್ಧೆಯ ಸಾರತತ್ತ್ವಗಳಿಗೆ ಪ್ರಾಧಾನ್ಯವಿತ್ತ ಪರಮಹಂಸರನ್ನು ‘ವಿಶ್ವಧರ್ಮದ್ರಷ್ಟಾರ’ ಎಂದು ಕರೆಯಬಹುದು. ಈ ಹಿನ್ನೆಲೆಯಲ್ಲಿ ಕುವೆಂಪು ಅವರ ವಿಶ್ವಮಾನವ ಸಿದ್ಧಾಂತವನ್ನು- ‘ಪಂಚಮಂತ್ರ’, ‘ಸಪ್ತಸೂತ್ರ’. ಗಳನ್ನು-ಪರಿಭಾವಿಸಬೇಕು. ಅವರ ‘ಅನಿಕೇತನ’ ಕವನವೂ ಸ್ಮರಣೀಯ.

ಕುವೆಂಪು ವೈಜ್ಞಾನಿಕ, ವೈಚಾರಿಕ ದೃಷ್ಟಿಯ ಅಪ್ರತಿಮ ಪ್ರತಿಪಾದಕರಾಗಿ, ವಿಜ್ಞಾನದೀವಿಗೆಯ ಹಿಡಿಯಬನ್ನಿ ಎಂದು ಕರೆ ನೀಡುತ್ತಾರೆ.

‘ವಿಶ್ವಮಾನವ ಸಂದೇಶ’ದ ಆರಂಭದಲ್ಲೆ ಸ್ವಾಮಿ ವಿವೇಕಾನಂದರ ಈ ಹೇಳಿಕೆ ಉದ್ಧೃತವಾಗಿರುವುದು ಗಮನಿಸ ತಕ್ಕುದು : “No man is born to any religion. Every man has religion in his soul. Let there be as many religions as there are human beings in the world!” [ ‘ಸಪ್ತ ಸೂತ್ರ’ ದಲ್ಲಿ ಇದರ ಭಾಷಾಂತರವನ್ನು ಕೊಡಲಾಗಿದೆ : ”ಯಾರೂ ಯಾವ ಒಂದು ಮತಕ್ಕೂ ಸೇರದೆ, ಪ್ರತಿಯೊಬ್ಬರು ತಾವು ಕಂಡುಕೊಳ್ಳುವ ‘ತನ್ನ’ ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿರುತ್ತಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ.”]

ವಿಶ್ವಪ್ರಜ್ಞೆ, ವಿಶ್ವಮೈತ್ರಿ, ವಿಶ್ವಶಾಂತಿಗಳನ್ನು ಕುವೆಂಪು ಪ್ರತಿಪಾದಿಸುವಲ್ಲಿ ಪರಮಹಂಸ, ವಿವೇಕಾನಂದರ ಪ್ರಭಾವ ಉಂಟೇ ಉಂಟು.

ಜಾತಿಪದ್ಧತಿಯನ್ನು ಧರ್ಮದೊಂದಿಗೆ ಕಲಸು ಮೇಲೋಗರ ಮಾಡುವುದು, ಪುರೋಹಿತಶಾಹಿ ಮುಂತಾದುವನ್ನು ವಿವೇಕಾನಂದರಂತೆ ಕುವೆಂಪು ಕೂಡ ಖಂಡಿಸುತ್ತಾರೆ.

“ಗುಡಿ, ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ!” ಎಂಬುದು ಕುವೆಂಪು ಅವರ ಪ್ರಸಿದ್ಧವಾದ ಕರೆ. ಅದಕ್ಕೆ ಪ್ರೇರಕವಾದುದು ಈ ವಿವೇಕವಾಣಿ: ”ಸಿದ್ಧಾಂತ ಪಂಥಗಳನ್ನು, ಚರ್ಚು ದೇಗುಲಗಳನ್ನು ಲಕ್ಷಿಸಬೇಡಿ: ಪ್ರತಿಯೊಬ್ಬರಲ್ಲಿರುವ ಅಸ್ತಿತ್ವವ ತಿರುಳಿನೊಡನೆ- ಆಧ್ಯಾತ್ಮದೊಡನೆ-ಹೋಲಿಸಿದರೆ, ಅವು ಲೆಕ್ಕಕ್ಕಿಲ್ಲ.”

ಶ್ರೀರಾಮಕೃಷ್ಣ ವಿವೇಕಾನಂದರನ್ನು ಕುರಿತು ಕುವೆಂಪು ಅನೇಕ ಕವನಗಳನ್ನು ರಚಿಸಿದ್ದಾರೆ. ಅವರ ‘ಆಹ್ವಾನ’ ಎಂಬ ಪದ್ಯ ಪರಮಹಂಸವನ್ನು ಮಲೆನಾಡಿಗೆ ಆಹ್ವಾನಿಸುವ ನೆಪದಲ್ಲಿ ಇಡೀ ಕರ್ನಾಟಕಕ್ಕೆ ಆಮಂತ್ರಿಸಿತು; ಬರಮಾಡಿತು;

ಬಾ, ಶ್ರೀಗುರುದೇವನೆ ಬಾ,

ಶ್ಯಾಮಲ ಕಾನನ ಶೃಂಗತರಂಗಿತ

ಸಹ್ಯಾದ್ರಿಯ ಸುಂದರ ಮಂದಿರಕೆ…

ವಂಗಮಾತೆಯಲಿ ಜನ್ಮ ವನೆತ್ತಿ ದಿವ್ಯಸಮನ್ವಯ ಧರ್ಮವ ಬಿತ್ತಿ

ಮತಭೇದದ ವಿಷವನ್ನು ಹೋಗಾಡಿ

ಲೋಕದ ದೃಷ್ಟಿಗೆ ಸಮತೆಯ ನೀಡಿ

ಕಾಪಾಡಿದ ಪಾವನ ಮೂರುತಿಯೆ…

ತಮ್ಮ ‘ಶ್ರೀಗುರು’ ಕವನದಲ್ಲಿ ಶ್ರೀರಾಮಕೃಷ್ಣರ ಮಹಿಮೆಯನ್ನು ಕುವೆಂಪು ಹೀಗೆ ಹಾಡುತ್ತಾರೆ: ಭರತಖಂಡದ ನೀಲಗಗನವ ತಿಮಿರ ಮುಸುಗಿರಲು,

ಭಾರತೀಯರು ತಮ್ಮ ಧ್ಯೇಯವ ಮರೆತು ಮಲಗಿರಲು, ಪರಮಹಂಸನೆ, ಉದಯಸೂರ್ಯನ ತೆರದಿ ರಂಜಿಸಿದೆ; ಘೋರ ಸಂಸಾರಾಂಬುನಿಧಿಯೊಳು ಮುಳುಗಿ ತೇಲುವರ ಅಮೃತ ನಾವೆಯ ತಂದು ವೇಲೆಯನಿರದೆ ಸೇರಿಸಿದೆ.

ಕುವೆಂಪು ಅವರ “ಶತಮಾನ ಸಂಧ್ಯೆ” ಎಂಬ ನೀಳ್ಗವನ ತುಂಬ ಗಮನಾರ್ಹವಾದುದು; ಹೊಸ ಶತಮಾನ, ಹೊಸ ಸಹಸ್ರಮಾನದ ಪ್ರವೇಶದ ಈ ಸಂದರ್ಭಕ್ಕೂ ಪ್ರಸ್ತುತ ವಾದುದು. ಇದು ಕವನದ ಒಂದು ಭಾಗ:

ಯುಗಚಕ್ರವ ಮುನ್ನೂಂಕಲು

ಇದೆ ಗುರುದೇವನ ಶಕ್ತಿ. ನಮಗಿಂದಿಗೆ ಬೇಕಾದುದು

ಉದ್ಧಾರದ ಆಸಕ್ತಿ.

ಕುವೆಂಪು ಅವರ ‘ಲೌಕಿಕ ಭಾರತಕ್ಕೆ ಸ್ವಾಮಿ ವಿವೇಕಾನಂದರ ಸಂದೇಶ’ ಎಂಬ ಮೌಲಿಕ ಲೇಖನವೂ ಉಲ್ಲೇಖನೀಯ. ಇದು ಶ್ರೀಕುವೆಂಪು ಅವರ ಮೇಲಾದ ಶ್ರೀರಾಮಕೃಷ್ಣ ವಿವೇಕಾನಂದ ಭಾವಾಂದೋಲನದ ಪ್ರಭಾವದ ಸ್ಥೂಲ ಸಮೀಕ್ಷೆಯಷ್ಟೆ; ಪರಿಚಯವೆಂದರೂ ಸರಿಯೇ. ಒಟ್ಟಿನ ಮೇಲೆ ಹೇಳುವುದಾದರೆ, ಶ್ರೀರಾಮಕೃಷ್ಣ ಪರಮ ಹಂಸರ ಮತ್ತು ಸ್ವಾಮಿ ವಿವೇಕಾನಂದರ ಪ್ರಭಾವ ಅರ್ವಾಚೀನ ಕನ್ನಡ ಸಾಹಿತ್ಯದ ಒಂದು ಅವಿಭಾಜ್ಯ ಅಂಗವಾಗಿದೆ. ರಾಷ್ಟ್ರಕುಂಡಲಿನಿಯನ್ನೇ ಸೆಳೆದ ಆ ಮಹಾಚೇತನಗಳ ದಿವ್ಯ ಚುಂಬಕಶಕ್ತಿಯಿಂದ ಕನ್ನಡ ಸಾಹಿತಿಗಳು ಮತ್ತು ಸಾಹಿತ್ಯ ತಪ್ಪಿಸಿಕೊಳ್ಳುವುದು ಹೇಗೆ ಸಾಧ್ಯ?

(ಮೂಲ: ವಿವೇಕಪ್ರಭ ಜನವರಿ 2005)