ಸುರತ್ಕಲ್ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಭೌತಶಾಸ್ತ್ರದ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಕೆಲಸಮಾಡುತ್ತಿರುವ ಲೇಖಕರು ಸ್ವಾಮಿ ವಿವೇಕಾನಂದರ ವ್ಯಕ್ತಿತ್ವದ ಪ್ರಮುಖವೂ ಆಪ್ಯಾಯಮಾನವೂ ಆದ ಪರಿಚಯವನ್ನು ನೀಡಿದ್ದಾರೆ.

ಭಗವಾನ್ ಶ್ರೀರಾಮಕೃಷ್ಣರು ಯುಗಧರ್ಮ ಸ್ಥಾಪನೆಗಾಗಿ ಈ ಪುಣ್ಯಭೂಮಿಯವಾದ ಭಾರತದೇಶದಲ್ಲಿ ಜನಿಸಿ ತಮ್ಮ ಮಹತ್ಕಾರ್ಯಗಳಿಂದ ‘ಅವತಾರವರಿಷ್ಟ’ರೆನಿಸಿಕೊಂಡರು. ತಮ್ಮ ಜೀವಿತದ ಉದ್ದೇಶಸಾಧನೆಗಾಗಿ, ಲೋಕಕಲ್ಯಾಣವನ್ನು ಉಂಟುಮಾಡುವ ಸಲುವಾಗಿ, ಅವರು ತಮ್ಮಲ್ಲಿಗೆ ಬಂದ – ಭಕ್ತರನ್ನೂ ಜಿಜ್ಞಾಸುಗಳನ್ನೂ ಆವರವರ ಮನೋಭಾವಕ್ಕೆ ತಕ್ಕಂತೆ ಅಧ್ಯಾತ್ಮಿಕ ವಿಚಾರಗಳ ಮೂಲಕ ಆತ್ಮಸಾಧನೆಗಾಗಿ ಅಥವಾ ದೈವಸಾಕ್ಷಾತ್ಕಾರಕ್ಕಾಗಿ ಪ್ರೇರೇಪಿಸಿದರು. ಅವರಲ್ಲಿಗೆ ಬಂದ ಅನೇಕ ಭಕ್ತರಲ್ಲಿ ಕೆಲವೇ ಶ್ರೇಷ್ಠ ಮಂದಿಯನ್ನು ಮಾತ್ರ ಗುರುತಿಸಿ ಅವರಿಗೆ ತಮ್ಮ ಆಧ್ಯಾತ್ಮಿಕ ಸಂಪತ್ತೆಲ್ಲವನ್ನೂ ಧಾರೆಯೆರೆದು ಅವರನ್ನು ಅತ್ಯಂತ ಪ್ರಭಾವಶಾಲಿ ಮತ್ತು ಪರಿಪೂರ್ಣ ಆಧ್ಯಾತ್ಮಿಕ ಮಾರ್ಗದರ್ಶಕರನ್ನಾಗಿ ಪರಿವರ್ತಿಸಿದರು. ಇವರಲ್ಲಿ ಪ್ರಮುಖನಾದವನೇ ನರೇಂದ್ರನಾಥ ದತ್ತ. ಈತನೇ ಮುಂದೆ ಶ್ರೀರಾಮಕೃಷ್ಣರ ವಿಶೇಷ ಪ್ರೀತಿ-ವಾತ್ಸಲ್ಯ ಮತ್ತು ಅನುಗ್ರಹಗಳಿಗೆ ಪಾತ್ರನಾದನು. ಅವರ ಅಂತರಂಗದ ಶಿಷ್ಯವರ್ಗದಲ್ಲೇ ಅಗ್ರಗಣ್ಯರೆನಿಸಿಕೊಂಡು ಸ್ವಾಮಿ ವಿವೇಕಾನಂದರಾಗಿ ಜಗದ್ವಿಖ್ಯಾತರಾದರು. ನರೇಂದ್ರನಾಥನನ್ನು ಮೊಟ್ಟ ಮೊದಲ ಬಾರಿಗೆ ನೋಡುತ್ತಲೇ ಶ್ರೀರಾಮಕೃಷ್ಣರ ಮನಸ್ಸನ್ನು ಅಪಹರಿಸಿದ ಅಂಶವೆಂದರೆ ಅವನ ಸ್ನೇಹಶೀಲ ವ್ಯಕ್ತಿತ್ವ ಮತ್ತು ಅವನ ಹೃದಯವಂತಿಕೆ. ಇವು ಬೆಳೆಸಿಕೊಂಡ ಗುಣಗಳಲ್ಲ, ಹಟ್ಟಿನಿಂದಲೇ ನರೇಂದ್ರನ ಸ್ವಭಾವದಲ್ಲಿ ಬೇರುಬಿಟ್ಟ ಗುಣಗಳು.

ಬಾಲ್ಯದಿಂದಲೇ ನರೇಂದ್ರನ ಸ್ನೇಹಪರತೆಯು ಎದ್ದು ತೋರುತ್ತಿತ್ತು. ಒಂದು ಸಾರಿ ಆತನು ತನ್ನ ಕೆಲವು ಸ್ನೇಹಿತರನ್ನು ಕರೆದುಕೊಂಡು ಕೊಲ್ಕತಾದ ದಕ್ಷಿಣಕ್ಕಿರುವ ಮೇಟಿಯಾ ಬ್ರುಜ್ ಎಂಬಲ್ಲಿಗೆ ನವಾಬನ ಮೃಗಾಲಯವನ್ನು ನೋಡುವುದಕ್ಕೆ ಹೋಗಿದ್ದನು. ಅವರು ದಾರಿಯಲ್ಲಿ ನದಿಯೊಂದನ್ನು ದೋಣಿಯ ಮೂಲಕ ಧಾಟುವ ಸಂದರ್ಭದಲ್ಲಿ ಸ್ನೇಹಿತನೊಬ್ಬನು ಅನಾರೋಗ್ಯದಿಂದಾಗಿ ದೋಣಿಯಲ್ಲಿ ವಾಂತಿ ಮಾಡಿದಾಗ ಅಹಿತಕರ ಘಟನೆಯೊಂದು ನಡೆಯಿತು. ದೋಣಿ  ಚಾಲಕನು ಹುಡುಗರನ್ನು ಬೆದರಿಸಿ ಅದನ್ನೆಲ್ಲ ಶುದ್ಧಗೊಳಿಸಬೇಕು ಎಂದು ಗಲಾಟೆಯಲ್ಲಿ ತೊಡಗಿದ್ದನು. ಆ ಗುಂಪಿನಲ್ಲಿ ನರೇಂದ್ರನೇ ಚಿಕ್ಕವನು. ನರೇಂದ್ರ ಅಲ್ಲಿಂದ ಮೆಲ್ಲನೆ ನುಸುಳಿ ಹೊರಬಂದು ಅಲ್ಲೇ ಸಮೀಪದಲ್ಲೇ ಓಡಾಡಿಕೊಂಡಿದ್ದ ಇಬ್ಬರು ಆಂಗ್ಲ ಸೈನಿಕರ  ಬಳಿಗೆ ಹೋಗಿ ತನ್ನ ಸ್ನೇಹಿತರಿಗೆ ಬಂದ ಕಷ್ಟವನ್ನು, ಹೇಗೋ ಕಷ್ಟಪಟ್ಟು, ಆಗ ತನಗೆ ತಿಳಿದಿದ್ದ ಹರುಕು ಮುರುಕು ಇಂಗ್ಲಿಷಿನಲ್ಲೇ ನಿವೇದಿಸಿದನು. ಆತನ ಮಾತುಗಳನ್ನು ಕೇಳಿ ಮುಗ್ಧರಾದ ಆ ಸೈನಿಕರಿಬ್ಬರು ಅವನ ಜೊತೆಯಲ್ಲಿ ದೊಣಿಯಿದ್ದಲ್ಲಿಗೆ ಬಂದು, ವಿಷಯವನ್ನೆಲ್ಲ ತಿಳಿದುಕೊಂಡರು. ಅವರಿಬ್ಬರೂ ತಮ್ಮ ಲಾಠಿಯನ್ನೆತ್ತಿ  ಚಾಲಕನನ್ನು – ಗದರಿಸಿದರು. ನರೇಂದ್ರನ ಮಿತ್ರರಿಗೆ ದೊಡ್ಡ ವಿಪತ್ತಿನಿಂದ ಪಾರಾದಂತಾಯಿತು. ತಮ್ಮ ಸ್ನೇಹಿತನಿಂದ ಆದ ಉಪಕಾರಕ್ಕೆ – ಕೃತಜ್ಞತೆ ಸೂಚಿಸಿ ತಮ್ಮೊಂದಿಗೆ ಥಿಯೇಟರಿಗೆ ಬರುವಂತೆ ನರೇಂದ್ರನನ್ನು ಕೇಳಿಕೊಂಡರು. ಆದರೆ ನರೇಂದ್ರನು ಅದಕ್ಕೊಪ್ಪದೆ ತಾನು ಥಿಯೇಟರಿಗೆ ಬರುವುದಿಲ್ಲವೆಂದು ಹೇಳಿ ಹೊರಟುಹೋದನು. ಹೀಗೆ ನರೇಂದ್ರನು ತನ್ನ ಬಾಲ್ಯ ಮತ್ತು ತಾರುಣ್ಯಪೂರ್ವ ದಿನಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಇತರರಿಗೆ ಉಪಕಾರಿ ಆಗಿರುವುದನ್ನು ನಾವು ಕಾಣಬಹುದು.

ಮುಂದೆ ಶ್ರೀರಾಮಕೃಷ್ಣರಲ್ಲಿಗೆ ಬಂದಾಗ ನರೇಂದ್ರನಾಥ ೧೮ ವರ್ಷಗಳ ತರುಣ, ಲೌಕಿಕ ಜಗತ್ತಿನಲ್ಲಿ ಯಶಸ್ವಿಯಾಗಲು  ಬೇಕಾದ ಎಲ್ಲ ವಿದ್ಯೆ, ಗುಣಗಳಿದ್ದರೂ ತೀವ್ರವಾದ ಆಧ್ಯಾತ್ಮಿಕ ಹಂಬಲ ಅವನ ಮನಸ್ಸನ್ನು ಕಾಡುತ್ತಿತ್ತು. ತಾರ್ಕಿಕವಾಗಿ ತಿಳಿಯಬಹುದಾದ ವಿಚಾರಗಳನ್ನೆಲ್ಲ ಅವನು ಈಗಾಗಲೇ ತಿಳಿದಿದ್ದ, ಅನುಭವದಿಂದ ಹೊರಹೊಮ್ಮುವ ಸತ್ಯದ ಪರಿಚಯಕ್ಕಾಗಿ ಹಾತೊರೆಯುತ್ತಿದ್ದ. ಶ್ರೀರಾಮಕೃಷ್ಣರು ಅದ್ಭುತ ಸಾಧನೆಗಳಿಂದ ಕಂಡುಕೊಂಡಿದ್ದ ಸತ್ಯಗಳಿಗೆ ತಲೆಬಾಗಿ ಅವರ ಪ್ರೀತಿಯ ಮಾರ್ಗದರ್ಶನದಲ್ಲಿ ಅಧ್ಯಾತ್ಮಿಕ ಪರಿಪೂರ್ಣತೆಯನ್ನು ಪಡೆದ ನರೇಂದ್ರನಾಥ ಶ್ರೀರಾಮಕೃಷ್ಣರೆಂದಂತೆ ದುಃಖಸಂತಪ್ತರಿಗೆ ಆಶ್ರಯ ನೀಡುವ ವಿಶಾಲ ವಟವೃಕ್ಷದಂತಾದ.

ಶ್ರೀರಾಮಕೃಷ್ಣರು ಗಂಟಲುಬೇನೆಯಿಂದ ಕಾಶೀಪುರದ ಮನೆಯಲ್ಲಿ ವಾಸಿಸುತ್ತಿದ್ದಾಗ ಅಲ್ಲಿಗೆ ಬರುತ್ತಿದ್ದ ಭಕ್ತರನ್ನೆಲ್ಲ ಒಟ್ಟುಗೂಡಿಸಿ. ನಾಯಕತ್ವವನ್ನು ವಹಿಸಿ ಅವರನ್ನೆಲ್ಲ ಧ್ಯಾನ, ಅಧ್ಯಯನ, ವೇದಾಂತ ಚರ್ಚೆ ಮತ್ತು ಸೇವಾವ್ರತಗಳಲ್ಲಿ ತೊಡಗಿಸಿದವನು ನರೇಂದ್ರನೇ. ಶ್ರೀರಾಮಕೃಷ್ಣರ ಶುದ್ಧ ಮತ್ತು ನಿಃಸ್ವಾರ್ಥ ಪ್ರೀತಿ ಒಂದು ಕಡೆ: ನರೇಂದ್ರನ ಅದ್ಭುತ ಸ್ನೇಹಪರತೆ ಮತ್ತು ಉದಾತ್ತ ಸಹವಾಸ ಇನ್ನೊಂದು ಕಡೆ. ಇವುಗಳಿಂದ ಅಲ್ಲಿ ಸೇರಿದ ಗುರುಭಾಯಿಗಳೂ ಇತರ ಭಕ್ತರೂ, ಮಧುರವೂ ಕೋಮಲವೂ ಆದರೆ ಅಷ್ಟೇ ಶಕ್ತಿಯುತವೂ ಆದ ಆತ್ಮೀಯ ಬಂಧನಕ್ಕೆ ತಮ್ಮನ್ನು ಶಾಶ್ವತವಾಗಿ ಒಪ್ಪಿಸಿಕೊಂಡರು. ತಮ್ಮ ಕೌಟುಂಬಿಕ ಸಂಬಂಧಿಗಳಿಗಿಂತಲೂ ಅಧಿಕವಾಗಿ ತಾವು ಪರಸ್ಪರ ಬಂಧುಗಳೆಂದು ಅವರೆಲ್ಲ ಭಾವಿಸಿ ಅಧ್ಯಾತ್ಮ ಸಾಧನೆಯಲ್ಲಿ ಮುಂದುವರಿದರು. ಅವರಲ್ಲಿ ಒಬ್ಬನು ಯಾವುದೋ ತುರ್ತು ಜವಾಬ್ದಾರಿಯಿಂದ ತನ್ನ ಮನೆಗೆ ಹೋಗಬೇಕಾದಾಗ ಅಲ್ಲಿ ಬಹಳ ಕಾಲ ಇರಲಾಗದೆ ಆದಷ್ಟು ಬೇಗನೆ ವಿವೇಕಾನಂದರ ಸ್ನೇಹಪಾಶದಿಂದ ಸೆಳೆಯಲ್ಪಟ್ಟು – ಹಿಂದಿರುಗಿ ಬಂದುಬಿಡುತ್ತಿದ್ದನು. ಗುರುಭಾಯಿಗಳಲ್ಲಿ ಪ್ರಮುಖರಾದ ರಾಖಾಲ, ನಿರಂಜನ, ಯೋಗೀಂದ್ರ, ಲಾಟು, ತಾರಕ್ , ಗೋಪಾಲ್ ದಾದ, ಕಾಲೀ, ಶಶಿ, ಶರತ್, ಚಿಕ್ಕ ಗೋಪಾಲ ಮತ್ತು ಶಾರದಾಪ್ರಸನ್ನ ಇವರ ಜೊತೆಯಲ್ಲಿ ಸ್ವಾಮಿ ವಿವೇಕಾನಂದರಿಗಿದ್ದ ಪರಸ್ಪರ ಗಾಢವಾದ ಸ್ನೇಹವು ಆನ್ಯದುರ್ಲಭವೇ ಸರಿ, ಸ್ವಾಮಿ ವಿವೇಕಾನಂದರೇ ಹೀಗೆ ಹೇಳಿದ್ದಾರೆ “ನಮ್ಮೆಡನೆ ಸ್ವರ್ಗಕ್ಕಾಗಲೀ, ನರಕಕ್ಕಾಗಲೀ ಹೋಗಲು ಸಿದ್ಧರಾಗಿರುವಂತಹ ಪ್ರೀತಿಯ ಪುತ್ಥಳಿಗಳು ಜೀವನದಲ್ಲಿ ಪಡೆಯುವುದೊಂದು ಅಪೂರ್ವ ಸುಯೋಗವಾಗಿದೆ. ಈ ಮಹಾಭಾಗ್ಯವು ಮಹಾವಿಭೂತಿಪ್ಪರುಷರಾದ ನನ್ನ ಪ್ರಿಯಗುರುವಾದ ಶ್ರೀರಾಮಕೃಷ್ಣ ಪರಮಹಂಸರ ಕೃಪಾಕಟಾಕ್ಷದಿಂದ ನನಗೆ ಲಭ್ಯವಾಗಿದೆ.” ಶ್ರೀರಾಮಕೃಷ್ಣರ ನಿರ್ಯಾಣಾನಂತರ ಗುರು ದೇವರ ಅಂತರಂಗ ಸಂನ್ಯಾಸಿ ಶಿಷ್ಯರೆಲ್ಲ ಒಟ್ಟಿಗೆ ಸೇರಿ ಸಹೋದರಭಾವದಿಂದ ಕಠೋರ ತಪಸ್ಸಿನಲ್ಲಿ ತೊಡಗಿದ್ದೂ ಸಹ ನರೆಂದ್ರನ ಸ್ನೇಹಶೀಲ, ಪ್ರೀತಿಯ ವ್ಯಕ್ತಿತ್ವದಿಂದಲೇ ನರೇಂದ್ರನು ಮುಂದೆ ಸ್ವಾಮಿ ವಿವೇಕಾನಂದರೆಂದು ವಿಶ್ವ ವಿಖ್ಯಾತರಾದರೂ ಅವರು ಹೆಸರು, ಕೀರ್ತಿಗಳ ಅಭಿಮಾನವಿಲ್ಲದೆ ಅತ್ಯಂತ ಪ್ರೀತಿಯ ಸಲಿಗೆ ಹಾಗೂ ಸರಳತೆಯ ಮೂರ್ತಿಯಾಗಿದ್ದರು. ಅಧ್ಯಾತ್ಮಿಕವಾಗಿ ಎಲ್ಲವನ್ನೂ ಪಡೆದುಕೊಂಡಿದ್ದ  ಸ್ವಾಮೀಜಿಗೆ ಭಾಹ್ಯದ ಗೌರವ ಸಮ್ಮಾನಗಳು ಗೌಣವಾಗಿತ್ತು. ಗುರುಭಾಯಿಗಳನ್ನು ಬಲವಾಗಿ ಬೆಸೆದಿದ್ದ ಪ್ರೀತಿಯ ಆನುಬಂಧ ವ್ಯಕ್ತವಾಗುತ್ತಿದ್ದ ಅನೇಕ ಘಟನೆಗಳಿವೆ.

ಸ್ವಾಮಿ ವಿವೇಕಾನಂದರ ಗುರುಭಾಯಿಗಳಲ್ಲಿ ರಕ್ತುರಾಮ ಅಥವಾ ಲಾಟು ನಿರಕ್ಷರಕುಕ್ಷಿ, ಅವರು ಬಡ ಸಂಸಾರದಲ್ಲಿ ಜನಿಸಿದರೂ ಭಗವದನ್ವೇಷಣೆಯ ಹಂಬಲದಿಂದ ಶ್ರೀರಾಮ ಕೃಷ್ಣರ ಪದತಲವನ್ನು ಆಶ್ರಯಿಸಿ, ಅವ್ಯಾಹತವಾಗಿ ಅವರ ಸೇವೆಯನ್ನು ಮಾಡಿ ಸಾಧನೆಯ ಪರಾಕಾಷ್ಠೆಯನ್ನು ಏರಿದರು ಇವರ ಮೇಲೆ ಸ್ವಾಮಿ ವಿವೇಕಾನಂದರಿಗೆ ಅತ್ಯಂತ ಪ್ರೀತಿ. ಪ್ರೀತಿ ಕರುಣೆಗಳ ಗಣಿಯಾಗಿದ್ದ ನರೇಂದ್ರನಲ್ಲಿ ಲಾಟುವಿಗೆ ಗಾಢವಾದ ಮೈತ್ರಿ ಇತ್ತು. ವಿವೇಕಾನಂದರನ್ನು ಲಾಟು ಸಲುಗೆಯಿಂದ ” ಲೊರೇನ್ ಭಾಯಿ” ಎಂದೇ ಕರೆಯುತ್ತಿದ್ದನು. “ಗುರುಭಾಯಿಗಳಲ್ಲಿ ಲೊರೇನ್  ಭಾಯಿಯ ಸಮ ಬೇರೆ ಯಾರೂ ಇಲ್ಲ…. ಲೊರೇನ್  ಭಾಯಿಯಂತಹ ಗುರುಭಾಯಿಯನ್ನು ಪಡೆಯಲು ನಾನು ನೂರು ಜನ್ಮಗಳನ್ನಾದರೂ ಎತ್ತಿ ಬಂದೇನು” ಎಂದು ಲಾಟು ಹೇಳುತ್ತಿದ್ದರು. ಸ್ವಾಮಿ ವಿವೇಕಾನಂದರೇ  ಲಾಟುವಿಗೆ ಸ್ವಾಮಿ  ಅದ್ಭುತಾನಂದರೆಂಬ ಸಂನ್ಯಾಸದ  ಹೆಸರನ್ನು ನೀಡಿದರು.

ಸ್ವಾಮಿ ವಿವೇಕಾನಂದರು ವಿದೇಶಗಳಲ್ಲಿ ದಿಗ್ವಿಜಯವನ್ನು ಸಾಧಿಸಿ ಮರಳಿ ಭಾರತಕ್ಕೆ ಬಂದಾಗ ಕೋಲ್ಕತಾದಲ್ಲಿ ಅವರಿಗೆ ವಿಶೇಷ  ಸ್ವಾಗತವನ್ನು ನೀಡಲು ಹಲವಾರು ಮಂದಿ ಸೇರಿದ್ದರು, ಆಗ ಆ ಗುಂಪಿನಲ್ಲಿ ತಮ್ಮ ಪ್ರಿಯಮಿತ್ರನಾದ ಲಾಟುವನ್ನು ಕಾಣದೆ ವಿವೇಕಾನಂದರು ವಿಹ್ವಲರಾದರು. ಲಾಟುವನ್ನು ಹುಡುಕಿಕೊಂಡು ಒಂದು ನದೀತೀರ ಪ್ರದೇಶಕ್ಕೆ ಬಂದು ಆತನನ್ನು ಸಂಧಿಸಿ “ಏಕೆ ಲಾಟು, ನೀನೇಕೆ ನನ್ನನ್ನು ನೋಡಲು ಬರಲಿಲ್ಲ?” ಎಂದು ಕೇಳಿದರು. ಆಗ ಲಾಟು, “ನೀನೀಗ ದೇಶ-ವಿದೇಶಗಳನ್ನು ಸುತ್ತಾಡಿ ಅಪಾರ ಕೀರ್ತಿಯನ್ನು ಗಳಿಸಿ ಉನ್ನತಸ್ಥಾನಕ್ಕೆ ಏರಿದ್ದೀಯೆ, ಆ ದೊಡ್ಡ ಗುಂಪಿನಲ್ಲಿ ನಾನು ಬಂದರೆ ನನ್ನನ್ನು ನೀನು ಹೇಗೆ ಗುರುತಿಸಬಲ್ಲೆ ಎಂದೆನಿಸಿ ನಾನು ಬರಲಿಲ್ಲ” ಎಂದು ಹೇಳಿದರು. ಆಗ ಸ್ವಾಮಿ ವಿವೇಕಾನಂದರು ಲಾಟವನ್ನು ಪ್ರೀತಿಯಿಂದ ಆಲಿಂಗಿಸಿಕೊಂಡು ‘ ಲಾಟುಭಾಯಿ, ನಾನು ನಿನಗೆ ಯಾವಾಗಲೂ ಲೊರೇನ್  ಭಾಯಿಯೇ, ಅದನ್ನು ನೀನು ಮರೆಯಬೇಡ’ ಎಂದು ಹೇಳಿದರು. ವಿವೇಕಾನಂದರ ನಿರ್ಮಲವಾದ ಪ್ರೇಮಪ್ರವಾಹದಲ್ಲಿ ಲಾಟುವಿನ ಹೃದಯ ಕರಗಿಹೋಯಿತು, ಆತ ನಿರುತ್ತರನಾಗಿ ಅವರನ್ನು ಹಿಂಬಾಲಿಸಿಕೊಂಡು ಹೋದನು. ಇದರಿಂದ ಸ್ವಾಮಿ ವಿವೇಕಾನಂದರ ಪ್ರೇಮವು ಎಷ್ಟು ಗಾಢವಾದದ್ದು, ಅಲೌಕಿಕ ಮಟ್ಟದ್ದು ಎಂಬುದು ವೇದ್ಯವಾಗುತ್ತದೆ,

ಗುರುಭಾಯಿಗಳಲ್ಲಿ ಸ್ವಾಮಿ ವಿವೇಕಾನಂದರಿಗಿದ್ದ ಪ್ರೀತಿ ಅನನ್ಯವಾದುದು. ಶ್ರೀರಾಮಕೃಷ್ಣರ ಬಳಿ ಮೊತ್ತಮೊದಲು ಬಂದು ಸೇರಿದವನೇ ರಾಖಾಲಚಂದ್ರನೆಂಬ ಬಾಲಕ ಭಕ್ತ. ಈತನನ್ನು ಶ್ರೀರಾಮಕೃಷ್ಣರು ತಮ್ಮ ‘ಮಾನಸಪುತ್ರ’ನೆಂದು ಸ್ವೀಕರಿಸಿದರು. ನರೇಂದ್ರನೂ ರಾಖಾಲನೂ ಬಾಲ್ಯಕಾದಿಂದಲೇ ಸ್ನೇಹಿತರು, ಅವರಿಬ್ಬರ ಸ್ನೇಹ-ವಿಶ್ವಾಸಗಳು ವಿಶಿಷ್ಟವೂ ಅನನ್ಯ ಸಾಧಾರಣವಾದುದೂ ಆಗಿತ್ತು. ರಾಖಾಲನು ಶ್ರೀರಾಮ ಕೃಷ್ಣರ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಅನುಭೂತಿಗಳ ಶಿಖರಕ್ಕೇರಿ ಮುಂದೆ ಸ್ವಾಮಿ ಬ್ರಹ್ಮಾನಂದರಾಗಿ ಪ್ರಸಿದ್ಧರಾದರು. ಶ್ರೀರಾಮಕೃಷ್ಣರು ಇವರಿಬ್ಬರನ್ನೂ ‘ಈಶ್ವರಕೋಟಿ’ಗೆ ಸೇರಿದ ನಿತ್ಯಸಿದ್ದರೆಂದು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಸ್ವಾಮಿ ವಿವೇಕಾನಂದರಿಗೆ ಪ್ರಾಣಿಗಳೆಂದರೆ ಅತ್ಯಂತ ಪ್ರೀತಿ, ನವಿಲು, ಬಾತು, ಕರು, ಜಿಂಕೆ, ನಾಯಿ ಇವನ್ನೆಲ್ಲಾ ಅವರು ಸಾಕುತ್ತಿದ್ದರು. ಅವುಗಳೊಂದಿಗೆ ಆಟವಾಡುವುದೆಂದರೆ ಅವರಿಗೆ ಖುಷಿಯೋ ಖುಷಿ, ಆದರೆ ಬ್ರಹ್ಮಾನಂದರಿಗೆ ಹೂವು, ತರಕಾರಿ, ಹಣ್ಣುಹಂಪಲು, ತೋಟ ಇತ್ಯಾದಿಗಳಲ್ಲಿ ಇಷ್ಟ. ಕೆಲವು ಸಲ ವಿವೇಕಾನಂದರ ಕರುವೋ, ಜಿಂಕೆಯೋ ಬ್ರಹ್ಮಾನಂದರ ತೋಟಕ್ಕೆ ನುಗ್ಗಿ ಅವರು ಬೆಳೆಸಿದ ಗಿಡಗಳನ್ನು ತಿಂದುಹಾಕುತ್ತಿದ್ದುವು. ಆಗ ಬ್ರಹ್ಮಾನಂದರು ಕುಪಿತರಾಗಿ ವಿವೇಕಾನಂದರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅವರಿಬ್ಬರ ಪರಸ್ಪರ ವಾಗ್ವಾದ ಕೇಳುವುದಕ್ಕೆ ಸರಸವಾಗಿರುತ್ತಿತ್ತಂತೆ. “ನನ್ನನ್ನು ಯಾರು ಕೈಬಿಟ್ಟರೂ ರಾಖಾಲ್ ಕೈಬಿಡುವುದಿಲ್ಲ”, ಎಂಬ ಆಳವಾದ ವಿಶ್ವಾಸ ವಿವೇಕಾನಂದರದು.ಎಂತಹ ವಿಷಮ ಸನ್ನಿವೇಶಗಳಲ್ಲೂ ತಮ್ಮೆಲ್ಲ ಆತ್ಮೀಯ ಗುರುಭಾಯಿಗಳ ಮೇಲೆ ಸ್ವಾಮಿ ವಿವೇಕಾನಂದರಿಗಿದ್ದ ಅಪರಿಮಿತವಾದ ಪ್ರೀತಿ-ವಿಶ್ವಾಸ ಮತ್ತು ಗೌರವಗಳಿಗೆ ಯಾವತ್ತೂ ಚ್ಯುತಿ ಬರಲಿಲ್ಲ. ಇದು ಸ್ವಾಮಿ ವಿವೇಕಾನಂದರ ಸ್ನೇಹಶೀಲ ವ್ಯಕ್ತಿತ್ವದ ವೈಶಿಷ್ಟ್ಯ.

(ಮೂಲ: ವಿವೇಕಪ್ರಭ ಜನವರಿ 2006)