ಸ್ವಾಮಿ ವಿವೇಕಾನಂದರ ವೇದಾಂತದ ಬಗೆಗಿನ ವಿಚಾರಗಳನ್ನು ಸಂಗ್ರಹರೂಪದಲ್ಲಿ ಪರಿಚಯಿಸಿರುವ ಲೇಖಕಿ ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಭವತಾರಿಣಿ ಆಶ್ರಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಸ್ವಾಮಿ ವಿವೇಕಾನಂದರ ಸಂದೇಶವು ವೇದಾಂತದ ಸಂದೇಶವೇ ಆಗಿದೆ. ಇಂದು ನಾವು ರಾಮಕೃಷ್ಣ-ವಿವೇಕಾನಂದ ಸಾಹಿತ್ಯವನ್ನು ರಾಮಕೃಷ್ಣ-ವಿವೇಕಾನಂದ ವೇದಾಂತ ಸಾಹಿತ್ಯ ಎಂದು ಕರೆಯುತ್ತೇವೆ. ವಿದೇಶಗಳಲ್ಲಿ ಸ್ವಾಮಿಜಿ ಯಾವ ಯಾವ ಸಂಸ್ಥೆಗಳನ್ನು ಆರಂಭಿಸಿದರೊ ಅವನ್ನು “ರಾಮಕೃಷ್ಣ ಸೆಂಟರ್” ಎಂದು ಕರೆಯಲಿಲ್ಲ. ಅವುಗಳನ್ನೆಲ್ಲ ‘ರಾಮಕೃಷ್ಣ ವೇದಾಂತ ಸೆಂಟರ್’ ಎಂದು ಕರೆಯಲಾಯಿತು. ಶ್ರೀರಾಮಕೃಷ್ಣರ, ಶ್ರೀಮಾತೆ ಶಾರದಾದೇವಿಯವರ  ಮತ್ತು ಸ್ವಾಮಿ ವಿವೇಕಾನಂದರ  ಸಂದೇಶವು ವೇದಾಂತದ ಸಂದೇಶವೇ ಆಗಿದೆ.

ಸ್ವಾಮಿಜಿ ನೀಡಿದ ವೇದಾಂತದ ಸಂದೇಶವೇನು ಎಂಬುದರ ಒಂದು ಚಿಂತನೆ ಈ ಲೇಖನ. ಸ್ವಾಮಿಜಿ ಕೊಲಂಬೊ ಇಂದ ಆಲ್ಮೋರಕೆ ಉಪನ್ಯಾಸಗಳಲ್ಲಿ ೨೯ ಭಾಷಣಗಳನ್ನು ನೀಡಿದ್ದು, ಪ್ರತಿಯೊಂದು ಭಾಷಣದಲ್ಲೂ ವೇದಾಂತದ ಸಂದೇಶವನ್ನೆ ಪ್ರತಿಧ್ವನಿಸಿದ್ದಾರೆ. ಅದರಲ್ಲೂ ವೇದಾಂತದ ಕುರಿತಾಗಿಯೇ ಆರು ಭಾಷಣಗಳನ್ನು ನೀಡಿದ್ದಾರೆ-ವೇದಾಂತ, ವೇದಾಂತದ ಧ್ಯೇಯ, ವೇದಾಂತ ದರ್ಶನದ ವಿವಿಧ ಮುಖಗಳು, ವೇದಾಂತ ತತ್ತ್ವ ಮತ್ತು ಭಾರತೀಯ ಜೀವನದಲ್ಲಿ ವೇದಾಂಶದ ಅನುಷ್ಠಾನ,

ಸ್ವಾಮಿಜಿ ಹೇಳುವ ಪ್ರಕಾರ ನಮ್ಮ ಧರ್ಮ ಅನೇಕ ತತ್ತ್ವ, ವಿಚಾರ, ಭಾವಲಹರಿಗಳ ಸಮುಚ್ಚಯ, ವೇದಾಂತಧರ್ಮ ಎಂದು ಹೇಳಿದಾಗ ಅದು ಕೇವಲ ಅದ್ವೈತ ಎಂದು ಭಾವಿಸಿದರೆ ತಪ್ಪಾಗುತ್ತದೆ. ದ್ವೈತ-ವಿಶಿಷ್ಟಾದ್ವೈತ-ಅದ್ವೈತಗಳು ವೇದಾಂತದ ವಿಭಿನ್ನ ವ್ಯಾಖ್ಯಾನಗಳು. ಶೈವ, ಶಾಕ್ತ, ಗಾಣಪತ್ಯರು ಮಾತ್ರವಲ್ಲ, ಸಾಂಖ್ಯರೂ ವೇದಪ್ರಮಾಣವನ್ನು ಒಪ್ಪುತ್ತಾರೆ. ಕೇವಲ ಜ್ಞಾನ ಮಾರ್ಗ ಮಾತ್ರವಲ್ಲ, ಯೋಗ, ಭಕ್ತಿ, ಕರ್ಮ ಮಾರ್ಗಗಳೂ ವೇದಾಂತದ ಮಡಿಲಲ್ಲೆ ಬರುತ್ತವೆ. ಯಾರು ವೇದ ಪ್ರಾಮಾಣ್ಯವನ್ನು ಒಪ್ಪುತ್ತಾರೆಯೋ ಅವರು ಆಸ್ತಿಕರು, ವೇದಾಂತಕ್ಕೆ ಮಾನ್ಯತೆ ನೀಡದಿದ್ದುದರಿಂದಲೇ ಬೌದ್ಧಧರ್ಮವು ಉದಾತ್ತ ತತ್ತ್ವಗಳನ್ನು ಹೊಂದಿದ್ದರೂ ಭಾರತದಲ್ಲಿ ನೆಲೆನಿಲ್ಲಲಿಲ್ಲ.

ವೇದಾಂತವು ವೇದಗಳ ಅಂತ್ಯಭಾಗ ಅಥವಾ ಉಪನಿಷತ್ತು, ಇದು ಜಗತ್ತು ಕಂಡ ಅತಿ ಪುರಾತನ ವಿಚಾರಧಾರೆ. ಅವು ಅಪೌರುಷೇಯ-ಎಂದರೆ ಅವು ಬುದ್ಧಿಚಮತ್ಕಾರದಿಂದ ಹುಟ್ಟಿದ ಸಾಹಿತ್ಯ ರಾಶಿಯಲ್ಲ, ಆದರೆ ಋಷಿಗಳ ಉನ್ನತ – ಪ್ರಜ್ಞೆಗೆ ಗೋಚರವಾದ ಶಾಶ್ವತ ಸತ್ಯಗಳು, ವೇದಗಳು ಬಹಳ ವಿಸ್ತಾರವಾದ ಜ್ಞಾನ ರಾಶಿಯಾಗಿದ್ದು ಅದರ ಶೇ. ೯೯ ಭಾಗ ಇಂದು ಲುಪ್ತವಾಗಿದೆ.

ಸ್ವಾಮಿಜಿ ಹೇಳುತ್ತಾರೆ, ಭಾರತೀಯ ಜೀವನದ ಎಲ್ಲ ಮುಖಗಳನ್ನು ಪ್ರತಿನಿಧಿಸುವ, ನಿರ್ದೇಶಿಸುವ ವಿಚಾರಧಾರೆ ವೇದಾಂತ. ಅಷ್ಟೇ ಅಲ್ಲ, ಮುಂದೆ ಕಾಲಕ್ರಮದಲ್ಲಿ ಭಾರತದಲ್ಲಿ ಕಂಡುಬಂದಂತಹ ಧಾರ್ಮಿಕ ವಿಕಾಸಗಳೆಲ್ಲ ಅದಾಗಲೇ ಬೀಜ ರೂಪದಲ್ಲಿ ಉಪನಿಷತ್ತಿನಲ್ಲಿ ಇವೆ. ಮಾನವತೆ ಕಂಡಂತಹ – ಅತ್ಯುನ್ನತ ತತ್ತ್ವರಾಶಿ ಉಪನಿಷತ್ತು, ಆಧ್ಯಾತ್ಮಿಕ ಸತ್ಯಗಳ ಒಂದು ಬೃಹತ್ ಸಂಗ್ರಹವೇ ಉಪನಿಷತ್ತುಗಳಲ್ಲಿವೆ. ಈ ಉಪನಿಷತ್ – ಮಹಾಸಾಗರದಿಂದ ಆಗಾಗ ಬೆಳಕಿನ ಅಲೆಗಳು ಭೋರ್ಗರೆದು – ಹರಿದು, ಇಡೀ ವಿಶ್ವವನ್ನು ತೋಯಿಸಿವೆ, ತೋಯಿಸಿ ಪಾವನಗೊಳಿಸಿವೆ. ಸ್ವಾಮೀಜಿ ಹೇಳುತ್ತಾರೆ, ನಾವು ಅರಿತೋ, ಅರಿಯದೆಯೋ ವೇದಾಂತವನ್ನೇ ಚಿಂತಿಸುವುದು, ವೇದಾಂತವನ್ನೇ – ಉಸಿರಾಡುವುದು, ವೇದಾಂತದಲ್ಲೇ ಬದುಕಿ, ವೇದಾಂತದಲ್ಲೇ ಕೊನೆಯುಸಿರೆಳೆಯುವುದು. ಇಂತಹ ನಮಗೆ, ಭಾರತೀಯ ಪ್ರಜೆಗಳಿಗೆ ಮತೀಯ ಧರ್ಮವನ್ನು ಬೋಧಿಸಬೇಕಾಗಿಲ್ಲ. ಈ ನೆಲದಲ್ಲಿ ಬೋಧಿಸಬೇಕಾಗಿರುವುದು ಅನುಷ್ಠಾನ ವೇದಾಂತವೊಂದನ್ನೇ.

ಉಪನಿಷತ್ತು ಘೋಷಿಸಿದ ಸತ್ಯಗಳು ವ್ಯಕ್ತಿ ಸಾಧನೆಗೈದು ಸಾಕ್ಷಾತ್ಕರಿಸಿಕೊಳ್ಳಬಹುದಾದಂಥ ಸತ್ಯಗಳು, ಪರಮ ನಿರ್ಭೀತಿಯ ಪರಮ ಜ್ಞಾನದ, ಪರಮಶ್ರೇಯದ ಸತ್ಯಗಳು ಇವು. ಮನುಷ್ಯನ ಒಳಗಡೆ, ನಾಶವಿಲ್ಲದ ಒಂದು ವಸ್ತು ಇದೆ ಮತ್ತು ಅದನ್ನು ಅರಿಯುವುದರಿಂದ ಮಾತ್ರ ಜೀವನ ಸಾರ್ಥಕತೆಯನ್ನು ಹೊಂದುವುದು ಎಂಬುದನ್ನು ಉಪನಿಷತ್ತು ಆತ್ಮಾನಂ ವಿದ್ಧಿಆತ್ಮವನ್ನು ಅರಿತುಕೋ ಎಂದು ಹೇಳುತ್ತದೆ. ಅದರಂತೆಯೇ ಎಲ್ಲ ವಸ್ತುಗಳಲ್ಲೂ ಇರುವ ಚೈತನ್ಯತತ್ವವನ್ನು ಉಪನಿಷತ್ತು ಸರ್ವಂ ಖಲ್ವಿದಂ ಬ್ರಹ್ಮ-ಇದೆಲ್ಲವೂ ನಿಶ್ಚಿತವಾಗಿ ಬ್ರಹ್ಮವೇ ಆಗಿದೆ. ತತ್ ವಿಜಿಜ್ಞಾಸಸ್ವ- ಅದನ್ನು ತಿಳಿದುಕೋ ಎಂದು ಹೇಳಿತು, ಇಂದು ಭೌತವಿಜ್ಞಾನ ತನ್ನ ಅಸಂಖ್ಯ ವಿಜ್ಞಾನಿಗಳ ೩೦೦ ವರ್ಷಗಳ ನಿರಂತರ ಪ್ರಯೋಗ-ಪರೀಕ್ಷಣೆ, ಆಲೋಚನೆ – ಅನ್ವೇಷಣೆ, ಸಂಶೋಧನೆಯ ಪರಿಣಾಮವಾಗಿ ಸರ್ವವ್ಯಾಪಕವಾದ ಚೈತನ್ಯತತ್ತ್ವದ ಬಗ್ಗೆ ಹೇಳುತ್ತಿದೆ. ಫ್ರುಡ್ ಹ್ಯೊಲ್ (Frud Hyol) ಎಂಬ ವಿಜ್ಞಾನಿ ತನ್ನ The Intelligent Universe ಎಂಬ ಗ್ರಂಥದಲ್ಲಿ ಅದನ್ನೇ ಇಡೀ ವಿಶ್ವವು ಚೈತನ್ಯಮಯವಾಗಿದೆ ಎಂದು ಹೇಳುತ್ತಾನೆ.

ವೇದಾಂತದ ಅಥವಾ ಉಪನಿಷತ್ತುಗಳ ವೈಶಿಷ್ಟ್ಯವೇನು? ಸ್ವಾಮಿಜಿ ಹೇಳುತ್ತಾರೆ. ಮೊದಲನೆಯದಾಗಿ, ಜಗತ್ತಿನ ಅತ್ಯಂತ ಅದ್ಭುತವಾದ ಭಾವನೆಗಳಿರುವುದು ಉಪನಿಷತ್ತಿನಲ್ಲಿ, ಆದರ ಭಾಷೆ ಹೃದಯವನ್ನು ತಟ್ಟುವ ಭಾಷೆ, ಭಾವದ ಹಕ್ಕಿ ಗರಿಗೆದರಿ ಹಾರುವಂತೆ ಮಾಡಬಲ್ಲ ಶಕ್ತಿಪೂರ್ಣ ಭಾಷೆ. ಅತೀತದ, ಅನಂತದ, ಅಗಾಧದ ಪರಮಸೂಕ್ಷ್ಮವನ್ನು, ಪರಮಸತ್ಯವನ್ನು ಅವು ಪ್ರತಿನಿಧಿಸಿದಂತೆ ಮತ್ತಾವುದರಿಂದಲೂ ಆಗಿಲ್ಲ, ಅನಂತವನ್ನು ರಕ್ತಮಾಂಸಗಳ ಜಡಭಾಷೆಯಲ್ಲಲ್ಲ, ಚೇತನದ ಭಾಷೆಯಲ್ಲಿ, ಎಂದರೆ ಆತ್ಮನನ್ನು ಆತ್ಮನ ಭಾಷೆಯಲ್ಲಿ ಸೆರೆಹಿಡಿದ ಸಾಹಸ ಉಪನಿಷತ್ತಿನದು. ಆ ಬಗೆಯ ಪ್ರಯತ್ನ ಮತ್ತೆಲ್ಲೂ ನಡೆಯಲೇ ಇಲ್ಲ.

ಎರಡನೆಯದಾಗಿ ಉಪನಿಷತ್ತಿನಲ್ಲಿ ಯಾವ ಗ್ರಂಥಕರ್ತೃವಿನ ಹೆಸರೂ ಬರುವುದಿಲ್ಲ. ವೇದಾಂತವನ್ನು ಬರೆದವರಾರೆಂಬ ಮಾಹಿತಿ ನಮಗೆಲ್ಲೂ ಸಿಗುವುದಿಲ್ಲ. ನಿಜ, ಕೆಲವು ಕಡೆ ಕೆಲವು ಹೆಸರುಗಳು ಬರುತ್ತವೆ. ಸತ್ಯಕಾಮ, ನಚಿಕೇತ, ಶ್ವೇತಕೇತು ಇತ್ಯಾದಿ. ಆದರೆ ಆ ಹೆಸರುಗಳೆಲ್ಲೂ ಪ್ರಧಾನವಾಗದೆ ತತ್ತ್ವದಲ್ಲಿ ಲಯವಾಗಿ ಹೋಗುವ ಅದ್ಭುತವನ್ನು ನಾವಿಲ್ಲಿ ಕಾಣುತ್ತೇವೆ. ಇಲ್ಲಿ ವ್ಯಕ್ತಿಪೂಜೆಯ ಭಾವನೆಯಿದೆ: ಇಲ್ಲಿ ಅವತಾರ ಪೂಜೆಯ ಕಲ್ಪನೆ ಇದೆ; ಹಾಗೆಂದು ಅವಕ್ಕೆ ಪ್ರಾಧಾನ್ಯತೆ ಇಲ್ಲ. ಜೊತೆ ಜೊತೆಗೆ ಅಸಂಖ್ಯ ಸುಶೀಲ ಆಂತರ್ದೃಷ್ಟಿಯುಳ್ಳ ಶ್ರೇಷ್ಠ ಋಷಿಗಳನ್ನು ನಿರ್ಮಾಣ ಮಾಡಿದ ಶ್ರೇಯಸ್ಸು ವೇದಾಂತದ್ದು, ಉಪನಿಷತ್ ಕಾಲದಲ್ಲಿ ಭಾರತೀಯ ಸಂಸ್ಕೃತಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಕಾರಣ ಅದು ವ್ಯಕ್ತಿಪ್ರಧಾನವಾಗಿರಲಿಲ್ಲ; ತತ್ತ್ವಪ್ರಧಾನವಾಗಿತ್ತು.

ಮೂರನೆಯದಾಗಿ ವೇದಾಂತದ ಎಲ್ಲ ಗಮನವೂ ಅಂತರಂಗದೆಡೆಗೆ, ವೇದಗಳ ಮೊದಲ ಭಾಗದಲ್ಲಿ ಬದುಕಿನ ಸಮಸ್ಯೆಗಳಿಗೆ ಬಾಹ್ಯಜಗತ್ತಿನಲ್ಲಿ, ಅಂದರೆ ಹೊರಗಡೆಯಲ್ಲಿ ಉತ್ತರವನ್ನು ಹುಡುಕಲು ಪ್ರಯತ್ನಿಸಲಾಯಿತು. ಋಷಿಗಳು ಧನ-ಕನಕ, ಅಧಿಕಾರ, ಭೋಗಭಾಗ್ಯ ಮುಂತಾದವುಗಳನ್ನು ಸಮೃದ್ಧವಾಗಿ ಆರ್ಜಿಸಿ, ಪರೀಕ್ಷಿಸಿದರು. ಜೀವನದ ಸಮಸ್ಯೆಗಳಿಗೆ ಇವುಗಳಲ್ಲಿ ಉತ್ತರವನ್ನು ಪಡೆಯಲಾಗಲಿಲ್ಲ, ಶಾಶ್ವತ ಸುಖಶಾಂತಿಗೆ ಇವು ಮಾರ್ಗವಲ್ಲ ಎಂದು ತಮ್ಮ ಸೋಲನ್ನು ಒಪ್ಪಿಕೊಂಡರು. ಹಾಗೆಂದು ಅಲ್ಲಿಯೇ ನಿಲ್ಲದೆ ಅಂತರ್ಮುಖವಾಗಿ ತಮ್ಮ ಶೋಧನೆಯನ್ನು ಮುಂದುವರಿಸಿ ತೀವ್ರ ಅಂತಃಶೋಧನೆಯಿಂದ ಉತ್ತರವನ್ನು ಕಂಡುಕೊಂಡ ದಿಟ್ಟತನ ಅವರದು, ಅವರು ಕಂಡುಕೊಂಡ ಉತ್ತರವೇನು? ಅದನ್ನು ಅವರು ಜಗತ್ತಿಗೆ ಸಾರಿದ ಬಗೆ ಹೇಗೆ? ಒಂದೇ ವಾಕ್ಯದಲ್ಲಿ ಅದು ವ್ಯಕ್ತವಾಗಿದೆ: ವೇದಾಹಮೇತಂ ಪುರುಷಂ ಮಹಾಂತಂ ಆದಿತ್ಯವರ್ಣಂ ತಮಸಃ ಪರಸ್ತಾತ್ -“ಎಲೈ ಅಮೃತಪುತ್ರರೇ ಆಲಿಸಿ, ಮೇಲ್ಗಡೆ ದಿವ್ಯಲೋಕದಲ್ಲಿರುವವರೂ ಆಲಿಸಿ, ಆ ಮಹಾಂತನಾದ ಪುರುಷನನ್ನು ಯಾರು ಆದಿತ್ಯವರ್ಣದವನೊ. ಎಲ್ಲ ತಮಸ್ಸಿನ ಆಚೆ ಇರುವವನೊ- ಅವನನ್ನು ನಾನು ಕಂಡಿದ್ದೇನೆ.” ಅವನನ್ನು ಅರಿಯುವುದರಿಂದ ಮಾತ್ರ ಮೃತ್ಯುವಿನಿಂದ ಪಾರಾಗಲು ಸಾಧ್ಯ.

ಆತ್ಮನಲ್ಲಿಯೇ ಎಲ್ಲ ಭರವಸೆಯನ್ನು ಸಮಾಧಾನವನ್ನು ಹಾಗೂ ಪರಮ ಸಾರ್ಥಕ್ಯವನ್ನು ಕಂಡುಕೊಂಡಿತು ವೇದಾಂತ. ಆದ್ದರಿಂದ ನಮ್ಮ ಗಮನ ಯಾವಾಗಲೂ ಒಳಗೆ – ಆವೃತ್ತಚಕ್ಷುಃ, ಪ್ರಾಚೀನ ಗ್ರೀಕ್ ಸಂಸ್ಕೃತಿ ಎಷ್ಟು ಹೆಚ್ಚು ವಸ್ತುಗಳೊಡನೆ ಜೀವನ ನಡೆಸಬಹುದೆಂದು ತೋರಿಸಿಕೊಟ್ಟರೆ, ವೇದಾಂತ ನಮಗೆ ತೋರಿಸಿಕೊಡುವುದು ಎಷ್ಟು ಕಡಿಮೆ ವಸ್ತುಗಳನ್ನಿಟ್ಟುಕೊಂಡು ನೆಮ್ಮದಿಯಾಗಿ ಜೀವಿಸಬಹುದು ಎಂಬುದನ್ನು ಎಂಬ ಸ್ವಾಮಿಜಿಯವರ ಮಾತು ಗಮನಾರ್ಹ.

ವೇದಾಂತದ ಸಂದೇಶವೇನು? ಆಥವಾ ಉಪನಿಷತ್ತುಗಳ ಸಂದೇಶವೇನು? ಸ್ವಾಮಿಜಿ ಭಾರತೀಯರಿಗೆ ನೀಡುವ ಕರೆ Go back to the Upanishads-“ಉಪನಿಷತ್ತುಗಳಿಗೆ ಹಿಂದಿರುಗಿ” ಎಂದು. ಅಲ್ಲಿದೆ ಅನಂತ ಶಕ್ತಿ. ಅಲ್ಲಿದೆ ಅಪಾರ ನಿರ್ಭಯತೆ, ಭಗವಂತನನ್ನು ಶಕ್ತಿ ಎಂದು ಕರೆದ, ಅಭೀಃನಿರ್ಭಯ ಎಂದು ಕರೆದ ಏಕಮಾತ್ರ ಸಾಹಿತ್ಯ ವೇದಾಂತ. ಆ ಶಕ್ತಿ- ನಿರ್ಭಯತೆಯ ಮೂಲಸ್ರೋತ ಯಾವುದು? ನಾನು ಆತ್ಮ- ನಿತ್ಯಶುದ್ಧಬುದ್ಧಮುಕ್ತ ಸ್ವರೂಪ, ಸತ್-ಚಿತ್-ಆನಂದ ಸ್ವರೂಪನಾದ ಆತ್ಮ ನಾನು. ನೀನು ಈಗಾಗಲೇ ಅದೇ ಆಗಿದ್ದೀಯ-ತತ್ ತ್ವಂ ಅಸಿ-ಇದೇ ವೇದಾಂತದ ಪಲ್ಲವಿ ಇದೇ ವೇದಾಂತದ ಪ್ರಧಾನ ಸ್ವರ, ಆತ್ಮನನ್ನು ಅರಿಯುವುದೇ ಜೀವನದ ಗುರಿ, ಆತ್ಮನನ್ನು ಅರಿಯುವುದೆಂದರೆ ಆತ್ಮದ ಪರಿಪೂರ್ಣ ಸ್ವಾತಂತ್ರ್ಯ ಮತ್ತು ಶಾಶ್ವತ ಆನಂದವನ್ನು ಅನುಭವಕ್ಕೆ ತಂದುಕೊಳ್ಳುವುದು. ಆಗ ಮಾತ್ರ ಜೀವಿ ದೇಹೇಂದ್ರಿಯ ಮನೋಬುದ್ಧಿಗಳ ವ್ಯಾಪಾರದ ಬಂಧನದಿಂದ ಮುಕ್ತನಾಗುತ್ತಾನೆ.

ವೇದಾಂತದ ಇನ್ನೊಂದು ಪ್ರಧಾನ ಸಂದೇಶ, ನೀನು ಆತ್ಮನೇ ಆಗಿದ್ದೀಯೆ, ಮಾತ್ರವಲ್ಲ, ಪ್ರತಿಯೊಬ್ಬರಲ್ಲೂ ಅದೇ ಆತ್ಮನನ್ನು ಕಾಣು, ಯಸ್ತು ಸರ್ವಾಣಿ ಭೂತಾನಿ ಆತ್ಮನ್ಯೇವ ಅನುಪಶ್ಯತಿ-ನನ್ನಂತೆ ಪ್ರತಿಯೊಬ್ಬರೂ ಅಲ್ಲ. ನಾನೇ ಎಲ್ಲವೂ ಆಗಿದ್ದೇನೆ. ಆದ್ದರಿಂದ ನಾವು ಉಪಯೋಗಿಸಿದ ಶಬ್ದ ವಿಶ್ವಭಾತೃತ್ವ ಅಲ್ಲ, ವಿಶ್ವಾತ್ಮಭಾವ. Individual is one with the Universe– ವ್ಯಷ್ಟಿ ಸಮಷ್ಟಿಯೊಂದಿಗೆ ಒಂದು. ಇದನ್ನು ನಾವು ಅರ್ಥ ಮಾಡಿಕೊಂಡಾಗ ಜಗತ್ತು ಸ್ವರ್ಗವಾಗುತ್ತದೆ, ನಾನೇ ಎಲ್ಲವೂ ಆಗಿರುವಾಗ ನಾನು ಯಾರನ್ನು ತಾನೆ ದ್ವೇಷಿಸಬಲ್ಲೆ? ಯಾರ ಮೇಲೆ ತಾನೆ ಕೋಪಿಸಬಹುದು?

ಯಾರಲ್ಲಿ ಯಾವ ದೋಷವನ್ನು ಕಾಣಲಿಕ್ಕಾಗುತ್ತದೆ? ಈ ಭಾವನೆಯಿದ್ದಾಗ ನಾವು ಮಾಡುವ ಸೇವೆಯ ಗುಣಮಟ್ಟ ಬಹಳ ಉತ್ತಮವಾಗಿರುತ್ತದೆ. ಏಕೆಂದರೆ ಪ್ರತಿಯೊಂದು ಜೀವಿಯಲ್ಲಿಯೂ ಇದೇ ಶಿವನನ್ನು ಕಂಡು ಗೈಯುವ ಸೇವೆ ಅದು, ಆ ಸೇವೆಯ ಅವಕಾಶ ಪಡೆದ ನಾವೇ ಧನ್ಯರು ಅಲ್ಲವೆ?

ಈ ಹಿನ್ನೆಲೆಯಲ್ಲಿ ಉಪನಿಷತ್ತು ಇನ್ನೊಂದು ಮಹತ್ವ ಪೂರ್ಣ ಸಂದೇಶವನ್ನು ನೀಡಿತು. ಅದನ್ನು ನಾವಿಂದು ಮರೆತಿದ್ದೇವೆ. ನಮ್ಮೆಲ್ಲ ಕಷ್ಟ-ನಷ್ಟ-ವಿಫಲತೆಗೆ ಈ ಮರೆವು ಕಾರಣ. ಏನದು? ಸಂಗಚ್ಛಧ್ವಂ ಸಂವದಧ್ವಂ ಸಂ ವೋ ಮನಾಂಸಿ ಜಾನತಾಂ-ನಾವು ಯಾವಾಗಲೂ ಜೊತೆಯಲ್ಲಿ ಇರಬೇಕು, ಪರಸ್ಪರ ವಿರೋಧಭಾವವನ್ನು ಬಿಟ್ಟು ಒಮ್ಮತದಿಂದ ಇರಬೇಕು. ನಮ್ಮ ಮನಸ್ಸುಗಳು ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಂದೇ ಆದರ್ಶದತ್ತ ಹರಿಯಬೇಕು.

ಇಂದು ನಾವು ಮನೆಯಲ್ಲಿ ನಾಲ್ಕು ಜನ ಪರಸ್ಪರ ಪ್ರೇಮದೊಂದಿಗೆ, ಪರಸ್ಪರ ಅರ್ಥಮಾಡಿಕೊಂಡು ಬದುಕಲಾರೆವು. ಒಂದು ಕಛೇರಿಯಲ್ಲಿ ನಾಲ್ಕು ಜನರೊಡನೆ ಪ್ರೇಮದಿಂದ ವ್ಯವಹರಿಸಲಾರೆವು. ನಮ್ಮಲ್ಲೆಷ್ಟು ಐಕ್ಯತೆ ಇದೆ? ಸ್ವಾಮಿ ರಂಗನಾಥಾನಂದಜಿ ಹೇಳುತ್ತಾರೆ, “ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರ ಸರ್ವತೋಮುಖವಾಗಿ ಯಶಸ್ವಿಯಾಗಬೇಕಾದರೆ ಅಲ್ಲಿ ಬಹು ಮುಖ್ಯವಾಗಿ ಇರಬೇಕಾದುದು team work, efficient Wort, and hard work-ಏಕತೆಯ ದುಡಿಮೆ, ದಕ್ಷತೆಯಿಂದ ಕೂಡಿದೆ ದುಡಿಮೆ, ಪರಿಶ್ರಮದ ದುಡಿಮೆ. ಇವುಗಳಿದ್ದರೆ ಮಾತ್ರ ಸಾಮಾಜಿಕ ಉನ್ನತಿ ಸಾಧ್ಯ, ವೇದಾಂತ ಇಹಜೀವನವನ್ನು ಲೌಕಿಕ ಜೀವನವನ್ನು ಎಲ್ಲೂ ಕಡೆಗಣಿಸಲಿಲ್ಲ ಎಂಬುದು ನಮಗಿಲ್ಲಿ ಗೊತ್ತಾಗುತ್ತದೆ, ನಾವು ಗೃಹಸ್ಥಾಶ್ರಮವನ್ನು ಗೃಹಸ್ಥಧರ್ಮ ಎಂದು ಕರೆದಿದ್ದೇವೆ, ಪುರುಷಾರ್ಥಗಳಲ್ಲಿ ಅರ್ಥ ಮತ್ತು ಕಾಮಕ್ಕೆ ಸ್ಥಾನವನ್ನು ಕೊಡಬೇಕಾದರೆ ನಮ್ಮ ಋಷಿಗಳು ದಿನದಿನದ ಬಾಳುವೆಗೆ ಉನ್ನತ ತಿರುವನ್ನು ನೀಡಲು ಅದೆಷ್ಟು ಉದಾರ ಭಾವದವರಾಗಿದ್ದರು ಎಂಬುದು ಗೊತ್ತಾಗುತ್ತದೆ. ಅಷ್ಟೇ ಏಕೆ, ನಾವು ಸಾಮಾಜಿಕ ಉನ್ನತಿ ಎನ್ನುವುದಕ್ಕೆ ಕೊಟ್ಟಿರುವ ಶಬ್ದವೇನು? ಅಭ್ಯುದಯ- ಎಂದರೆ ಅಭಿ, ಉದಯ, ಉದಯ ಎಂದರೆ ಉನ್ನತಿ, ಶ್ರೇಯಸ್ಸು ಅದು ಸಾಧ್ಯವಾಗುವುದು ಅಭಿ- ಶ್ರಮದಿಂದ, ಒಮ್ಮುಖ ಮನಸ್ಸು, ಒಮ್ಮುಖ ದುಡಿಮೆಯಿಂದೆ.”

ಶಕ್ತಿಶಾಲಿಗಳಾಗುವುದು ಹೇಗೆ? ವೇದಾಂತ ಹೇಳುತ್ತದೆ. ನೀನು ಈಗಾಗಲೇ ಪರಿಪೂರ್ಣನಾಗಿದ್ದೀಯ; ಸರ್ವಶಕ್ತ ನಾಗಿದ್ದೀಯ, ಯಾವುದೆಲ್ಲ ದೋಷ, ಕೊರತೆ,ದೌರ್ಬಲ್ಯ, ಅಪೂರ್ಣತೆ ನಿನ್ನಲ್ಲಿ ಕಾಣುತ್ತಲಿದೆಯೋ ಅದು ನಿಜವಾಗಿ ನಿನ್ನದಲ್ಲ. ನೀನು ಪರಿಶುದ್ಧ, ಪರಿಪೂರ್ಣ ಆತ್ಮ. ಆದ್ದರಿಂದ ಆತ್ಮಸೂರ್ಯನನ್ನು ಮುಚ್ಚಿರುವ ಲೋಪ-ದೋಷ ಮಾಲಿನ್ಯಗಳ ಮೋಡಗಳನ್ನು ಚದುರಿಸು. ಹೇಗೆ? ಸತ್ಕರ್ಮ, ಸದ್ಭಾವನೆ, ಸದ್ವಿಚಾರ ಮತ್ತು ಸತ್ಸಂಕಲ್ಪಗಳಿಂದ, ಯಾವುದು ಆತ್ಮವಿಕಾಸಕ್ಕೆ, ಆತ್ಮ ಪ್ರಕಾಶಕ್ಕೆ ನೆರವಾಗುತ್ತದೆಯೋ ಅದೆಲ್ಲ ಒಳಿತು, ಅದನ್ನು ಮಾಡಬೇಕಾದ್ದು, ಅದಕ್ಕಾಗಿ ಸ್ವಾಮಿಜಿ ಉದ್ಘೋಷಿಸುತ್ತಾರೆ: “ನಮ್ಮದು ಅಡಿಗೆ ಮನೆ ಧರ್ಮವಾಗಿದೆ, ಮುಟ್ಟಬೇಡಪ್ಪಗಳ ಧರ್ಮವಾಗಿದೆ. ಜಗತ್ತಿಗೆ ಇಂದು ಬೇಕಾಗಿರುವುದು ಚಾರಿತ್ರ್ಯ ಸಂವರ್ಧನಕಾರಿಯಾದ ಧರ್ಮ.”

ವೇದಾಂತದ ಇನ್ನೊಂದು ಬಹುಮುಖ್ಯ ಸಂದೇಶ ನಮಗೆ ಪ್ರಿಯವಾಗಲಿ ಬಿಡಲಿ, ಇರುವ ಸತ್ಯವನ್ನಂತೂ ಖುಷಿ ಯಾವ ಮುಚ್ಚುಮರೆಯಿಲ್ಲದೆ ಹೇಳುತ್ತಾನೆ, ಅದೇನು? ಒಂದು ಕಡೆಯಿಂದ ನೀನು ಆತ್ಮ, ಎಲ್ಲವೂ ಬ್ರಹ್ಮಮಯ. ಇನ್ನೊಂದು ಕಡೆಯಿಂದ ಈ ಜೀವನ ಕ್ಷಣಿಕ, ಈ ಜೀವನ ನಶ್ವರ, ಎರಡು ದಿನದ್ದು. ಇದರಾಚೆ ಇದೆ ಅನಂತ ಜೀವನ, ಆನಂತ ಅಸ್ತಿತ್ವ ಇದನ್ನು ಸುಸ್ಪಷ್ಟವಾಗಿ ಅರ್ಥಮಾಡಿಕೊಂಡಷ್ಟೂ ನಮಗೆ ನೆಮ್ಮದಿ. ನಾವು ಬಂಗಾರದ ತಟ್ಟೆಯಲ್ಲಿ ಊಟಮಾಡಲಿ, ಕಾಗದದ ತಟ್ಟೆಯಲ್ಲಿ ಊಟಮಾಡಲಿ, ಜೀವನ ಕ್ಷಣಿಕವಾದುದು. ನಾವು ಮಧುರ ಭಾವನಾಶೀಲ ವ್ಯಕ್ತಿಗಳಾಗಿರಲಿ, ಕ್ರೂರ ವ್ಯಕ್ತಿಗಳಾಗಿರಲಿ ಜೀವನ ಕ್ಷಣಿಕವಾದುದು. ಮೃತ್ಯು ಬಂದು ಎಲ್ಲವನ್ನೂ ನುಂಗಿಹಾಕುತ್ತದೆ. ಈ ಮಾಯೆಯನ್ನು, ಎಂದರೆ ನಿರಂತರ ಪರಿವರ್ತನಶೀಲ ಜಗತ್ತನ್ನು ನೆಚ್ಚಿಕೊಂಡು ನೆಮ್ಮದಿ ಇಲ್ಲ. ಕೊನೆಗೂ ಎಲ್ಲರ ಹೃದಯದಿಂದ ಹೊರಹೊಮ್ಮುವ ಆರ್ತನಾದ, ಸಂಸಾರದುಃಖಗಹನಾತ್ ಜಗದೀಶ ರಕ್ಷ. ಹಾಗಾದರೆ ಪರಿಹಾರವೇನು? ಶಾಂತಿಗೆ ದಾರಿ ಏನು?

ತ್ಯಾಗ, ತ್ಯಾಗವೊಂದೇ ಬಿಡುಗಡೆಯ ಮಾರ್ಗ, ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ವಮಾನಶುಃ – ಸಂಪತ್ತಿನಿಂದಲ್ಲ, ವ್ರತನೇಮಗಳಿಂದಲ್ಲ, ವಂಶೋದ್ಧಾರದಿಂದಲೂ ಅಲ್ಲ, ತ್ಯಾಗದಿಂದ ಮಾತ್ರ ಶಾಶ್ವತ ಸುಖ, ಶಾಂತಿ ಸಾಧ್ಯ. ರಾಜಸಿಂಹಾಸನದ ಮೇಲೆ ಕುಳಿತುಕೊಂಡಿದ್ದರೂ ಪರಮತ್ಯಾಗಿಗಳಾದ ಶ್ರೇಷ್ಠ ರಾಜರನ್ನು ನಾವು ಕಂಡಿದ್ದೇವೆ. ಭೋಗವನ್ನು ಆದರ್ಶವಾಗುಳ್ಳ, ಈ ಜಗತ್ತೇ ಸತ್ಯ ಎಂದು ಅದನ್ನು ಬಾಚಿ ಹಿಡಿದುಕೊಂಡ ಗ್ರೀಕ್, ರೋಮನ್ ಸಂಸ್ಕೃತಿ ಇವತ್ತು ಎಲ್ಲಿದೆ? ಆದರೆ ಈ ಜಗತ್ತು ಅನಿತ್ಯ, ಅಸುಖ, ಇದು ಎರಡು ದಿನದ ಕನಸು, ಇದರಾಚೆ ಇದೆ ಅನಂತ ಜೀವನ, ಆನಂತ ಅಸ್ತಿತ್ವ ಎಂದು ಸಾರಿದ ಭಾರತವರ್ಷ ಅಮರ ಆತ್ಮನ ಅಮೃತ ಮಹಿಮೆಯಂತೆಯೇ ಅಜರಾಮರವಾಗಿದೆ. ತ್ಯಾಗ ನಮ್ಮ ಧ್ವಜ, ತ್ಯಾಗ ನಮ್ಮ ಸಂದೇಶ, ವಿಶ್ವಕ್ಕೆ ನಮ್ಮ ಕೊಡುಗೆ ತ್ಯಾಗಮೂರ್ತಿ ಬುದ್ಧ, ಮಹಾವೀರ; ವಿಶ್ವಕ್ಕೆ ನಮ್ಮ ಕೊಡುಗೆ ತ್ಯಾಗಮೂರ್ತಿ ವಿವೇಕಾನಂದ, ಸತ್ಯ-ಶಾಂತಿ-ತ್ಯಾಗ ಮೂರ್ತಿ ಗಾಂಧೀ ತಾತ, ಸ್ವಾಮಿಜಿ ಹೇಳುತ್ತಾರೆ, ಬುದ್ಧ ಜನಸಾಮಾನ್ಯರನ್ನು ನಮ್ಮ ರಾಷ್ಟ್ರೀಯ ಆದರ್ಶಗಳಾದ ತ್ಯಾಗ -ಸೇವೆಗಳ ಮಾರ್ಗದಲ್ಲಿ ನಡೆಯುವಂತೆ ಮಾಡಿದ್ದರಿಂದ ಆಗ ಜನಜೀವನ ಉನ್ನತ ಮಟ್ಟದಲ್ಲಿತ್ತು. ಸ್ವಯಂ ಸ್ವಾಮಿಜಿ ಶ್ರೀರಾಮಕೃಷ್ಣ ಮಹಾಸಂಘದ ಮೂಲಕ ಗೃಹಸ್ಥರಿಗೆ ಮತ್ತು ಸಂನ್ಯಾಸಿಗಳಿಗೆ ನೀಡಿದ ಆದರ್ಶ ”ತ್ಯಾಗ ಮತ್ತು ಸೇವೆಯೇ ನಮ್ಮ ದೇಶದ ಅದರ್ಶಗಳು”,

ಕೊನೆಯದಾಗಿ ಸ್ವಾಮಿ ವಿವೇಕಾನಂದರು ಹೇಳುವಂತೆ, ವೇದಾಂತ ನಮಗೆ ನೀಡುವ ಕರೆ-ಪ್ರತಿಯೊಬ್ಬ ಭಾರತೀಯನೂ ಆದರ್ಶ ಋಷಿಯಾಗಬೇಕು. ಯಾರು ಋಷಿ? ಯಾರಲ್ಲಿ ವಿಷಯಾಸಕ್ತಿ ಇನಿತೂ ಇಲ್ಲವೋ, ಯಾರಲ್ಲಿ ಸ್ವಾರ್ಥತೆ ಇಲ್ಲವೋ, ಯಾರ ಜೀವನ ಆಧ್ಯಾತ್ಮಿಕ ಸಂಸ್ಕೃತಿ ಮತ್ತು ತ್ಯಾಗವನ್ನು ಪ್ರತಿನಿಧಿಸುತ್ತದೆಯೋ ಅವನು ಋಷಿ. ನಮ್ಮ ದೇಶದ ಅತ್ಯಂತ ದೊಡ್ಡ ರಾಜನೂ ತನ್ನ ಮೂಲವನ್ನು ಒಬ್ಬ ಋಷಿಯ ಹೆಸರಿನೊಂದಿಗೆ ಗುರುತಿಸಿಕೊಂಡು ಹೆಮ್ಮೆ ಪಡುತ್ತಾನೆ, ಅರೆಬಟ್ಟೆಯನ್ನು ಧರಿಸಿ, ಕಂದಮೂಲಗಳನ್ನು ಸೇವಿಸಿ, ಜನಜಂಗುಳಿಯಿಂದ ಬಹಳ ದೂರದಲ್ಲಿ ಅರಣ್ಯದ ಮೂಲೆಯಲ್ಲಿ ಅಥವಾ ಗಿರಿಗುಹೆಯೊಳಗೆ ಋಷಿಗಳು ಇದ್ದರೂ, ಅವರ ಆಲೋಚನಾ ತರಂಗಗಳು ಇಂದು ನಮ್ಮಗಳ ಮನೋಬುದ್ಧಿಗಳನ್ನು ತಿದ್ದಿ ತೀಡುತ್ತಲಿವೆ. ಭೋಗವೇ ಗುರಿಯೆನ್ನುವ ಗ್ರಾಹಕಸಂಸ್ಕೃತಿಗಿಂತ ಉತ್ತಮ ಚಿಂತನೆಯನ್ನು ಹೊಂದಿರುವ ಪವಿತ್ರತೆಯ ನಮ್ಮ ಸಂಸ್ಕೃತಿ ಬಹಳ ಹಿರಿದಾದುದು.

ಇಂದು ನಮಗೆ ವೇದಾಂತದ ಸಂದೇಶವನ್ನು ಅರ್ಥ ಮಾಡಿಕೊಳ್ಳಲು ಸ್ವಾಮಿ ವಿವೇಕಾನಂದರ ಕೃತಿಸಂಗ್ರಹವಿದೆ. ಅಲ್ಲಿ ಬರುವ ಮಾತುಗಳ ಬೆಳಕಿನಲ್ಲಿ ವೇದಾಂತದ ಮಹಿಮೆ, ಮಹತ್ವ, ಸೌಂದರ್ಯವನ್ನು ಮನಗಾಣುತ್ತೇವೆ, ವೇದಾಂತದ ಮಂತ್ರಗಳ ಹಿನ್ನೆಲೆಯಲ್ಲಿ ಸ್ವಾಮಿಜಿಯವರ ವೀರಗರ್ಜನೆ ಅದೆಷ್ಟು ಸಾಮಯಿಕ ಹಾಗೂ ಹೃದಯಸ್ಪರ್ಶಿ ಎಂಬುದನ್ನು ಅರಿಯುತ್ತೇವೆ. ವೇದಾಂತದ ತತ್ತ್ವಗಳ ಹಾಗೂ ಸ್ವಾಮಿಜಿಯ ಕೃತಿ ಸಂಗ್ರಹಗಳ ಆಮೂಲಾಗ್ರ ಅಧ್ಯಯನ ಮತ್ತು ಆಲೋಚನೆ ಜನಮನದಲ್ಲಿ ನಡೆಯುವಂತಾಗಲಿ, ನಮ್ಮ ದಿನದಿನದ ಭಾಳುವೆಯನ್ನು ಬೆಳಗುವಂತಾಗಲಿ.

ಈ ವೇದಾಂತದ ಬೋಧನೆಯು ಎಲ್ಲರಲ್ಲಿಯೂ ದೇವರನ್ನು ಕಾಣುವುದು; ವಸ್ತುಗಳನ್ನು ಅವುಗಳ ನೈಜ ಸ್ಥಿತಿಯಲ್ಲಿ ನೋಡುವುದು ನಮಗೆ ತೋರಿದಂತೆ ಅಲ್ಲ. ಧರ್ಮ ಎಂದರೆ ಈಗ ಇಲ್ಲಿ ಬಾಳುವುದು ಎಂದು ವೇದಾಂತ ಸಾರುವುದು ಧರ್ಮವನ್ನು ನಾವು ಈಗ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು ಎನ್ನುವುದು ವೇದಾಂತ. ನೀವು ಪರಿಶುದ್ಧಾತ್ಮರು, ಪೂರ್ಣಾತ್ಮರು ಎಂದು ವೇದಾಂತ ಬೋಧಿಸುವುದು, ಪಾಪಪುಣ್ಯಗಳಿಗೆ ಅತೀತವಾದ ಒಂದು ಸ್ಥಿತಿ ಇದೆ. ಅದೇ ನಿಮ್ಮ ನೈಜ ಸ್ಥಿತಿ. ಅದು ಒಳ್ಳೆಯದಕ್ಕಿಂತಲೂ ಮೇಲಾದುದು. ನಮ್ಮಲ್ಲಿ ಯಾವ ಪಾಪ ಸಿದ್ಧಾಂತವೂ ಇಲ್ಲ. ನಾವು ಪಾಪವನ್ನು ಅಜ್ಞಾನ ಎಂದು ಕರೆಯುವೆವು.

– ಸ್ವಾಮಿ ವಿವೇಕಾನಂದ

 

(ಮೂಲ: ವಿವೇಕಪ್ರಭ ಜನವರಿ 2006)