ಸ್ವಾಮಿ ವಿವೇಕಾನಂದರ ಜೀವನದ ಕೆಲವು ರಸಮಯ ಸನ್ನಿವೇಶಗಳನ್ನು ಸ್ವಾರಸ್ಯಕರವಾಗಿ ನಿರೂಪಿಸಿರುವ ಪ್ರೊ. ಎನ್. ಕೃಷ್ಣಸ್ವಾಮಿಯವರು ಬೆಂಗಳೂರಿನಲ್ಲಿರುವ ಸ್ವಾಮಿ ವಿವೇಕಾನಂದ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿಗಳಾಗಿರುವರು ಮತ್ತು ಬೆಂಗಳೂರು ರಾಮಕೃಷ್ಣ ಮಠದ ನಿಕಟ ಭಕ್ತರಾಗಿರುವರು.

ವೀರಸಂನ್ಯಾಸಿ, ದೇಶಭಕ್ತ, ದೀನದಲಿತೋದ್ಧಾರಕ ಎಂದೆಲ್ಲ ಸ್ವಾಮಿ ವಿವೇಕಾನಂದರು ಪ್ರಸಿದ್ದರಾಗಿದ್ದಾರೆ. ಆದರೆ ಅವರ ವ್ಯಕ್ತಿತ್ವದಲ್ಲಿ ಹಾಸ್ಯಪ್ರವೃತ್ತಿ ಒಂದು ಮುಖ್ಯವಾದ ಅಂಶವಾಗಿದ್ದಿತು. ಅವರಲ್ಲಿ ಹಾಸ್ಯ ಸ್ವಭಾವ ಜನ್ಯವಾದದ್ದು, ಅವರ ಮುಖಕಮಲದಲ್ಲಿ ಒಂದು ಹೂ ನಗು ಸದಾ ಲಾಸ್ಯವಾಡುತ್ತಿದ್ದಿತು. ಅವರು ಹೇಳುತ್ತಾರೆ, ಆಧ್ಯಾತ್ಮಿಕ ಜೀವನ ಎಂದರೆ ಜೋಲುಮೋರೆ ಹಾಕಿಕೊಂಡು ಗೋಳಾಡುವುದಲ್ಲ, ಆನಂದದ ಅನುಭವ ಇರಬೇಕು, ಎಂದು.

ಬಾಲ್ಯದ  ಚೇಷ್ಟೆಗಳು

ವಿವೇಕಾನಂದರಿಗೆ ಮೊದಲು ಅವರ ತಾಯಿ ವೀರೇಶ್ವರ ಎಂದು ಹೆಸರಿಟ್ಟರು, ಬಂಗಾಳಿಯಲ್ಲಿ “ಬೀರೇಶ್ವರ”. ಪ್ರೀತಿಯಿಂದ ಅವನನ್ನು “ಬಿಲೇ” ಎಂದು ಕರೆಯುತ್ತಿದ್ದರು, ಶಾಲೆಗೆ ಸೇರಿಸುವಾಗ ಅವನ ಹೆಸರನ್ನು ಔಪಚಾರಿಕವಾಗಿ “ನರೇಂದ್ರನಾಥ ದತ್ತ” ಎಂದು ಕೊಡಲಾಯಿತು. ಶಾಲೆಯಲ್ಲಿ ಎಲ್ಲರೂ ಅವನನ್ನು “ನರೇನ್” ಎಂದು ಕರೆದರು. ಬಿಲೇ ಚೂಟಿಯಾದ ಬುದ್ದಿಶಾಲಿ ಮಗು, ತುಂಟ. ಶ್ರೀಕೃಷ್ಣ ಮಗುವಾಗಿದ್ದಾಗ ಯಶೋದೆಗೆ ಅವನ ಮೇಲೆ ಹೇಗೆ ದೂರುಗಳು ಬರುತ್ತಿದ್ದವೋ ಹಾಗೆಯೇ ಬಿಲೆಯ ತುಂಟ ತನದ ಮೇಲೆಯೂ ತಾಯಿ ಭುವನೇಶ್ವರಿಯ ಹತ್ತಿರ ದೂರುಗಳು ಬರುತ್ತಿದ್ದವು. ಅದಕ್ಕೇ ಅವನ ಮಿತ್ರರು ಅವನಿಗೆ “ಪಾಗಲಾ ಬಿಲೇ” (ಹುಚ್ಚು ಬಿಲೆ) ಎಂದು ಹೆಸರಿಟ್ಟರು. ಅವನು ಯಾವಾಗ ಏನು ಮಾಡುವನು ಏನು ಹೇಳುವನು ಎಂದು ಯಾರಿಗೂ ಹೇಳಲು ಬರುತ್ತಿರಲಿಲ್ಲ. ಆದರೆ ಸದಾ ನಗುತ್ತಿರುವನು, ಹಾಸ್ಯದ ಹೊಳೆ ಹರಿಸುವನು. ಒಳ್ಳೆ ಹುಡುಗ ಆದರೆ ವಿಚಿತ್ರ ಸ್ವಭಾವದವನು.

ನರೇಂದ್ರನಿಗೆ ಸಂತೋಷಕೂಟಗಳೂ ಪ್ರಿಯವಾಗಿದ್ದವು. ಮಿತ್ರರ ಕೂಟಗಳಲ್ಲಿ ನರೇಂದ್ರನೇ ಕೇಂದ್ರವ್ಯಕ್ತಿಯಾಗಿ ಸಂತೋಷ, ನಗುಗಳನ್ನು ಹರಡುತ್ತಲಿದ್ದ. ಒಂದೊಂದು ಸಲ ಅವರೆಲ್ಲ ಕುದುರೆಗಾಡಿಯನ್ನು ಬಾಡಿಗೆಗೆ ತೆಗೆದುಕೊಂಡು ಅದರಲ್ಲಿ ಕುಳಿತು ಸಂತೋಷದಿಂದ ಹಾಡುತ್ತ ಊರು ಸುತ್ತುವರು. ಹಬ್ಬ ಹರಿದಿನಗಳಲ್ಲಿ ಆನಂದದಿಂದ ಭಾಗವಹಿಸುವರು. ನರೇಂದ್ರನೇ ಇದರಲ್ಲೆಲ್ಲ ಮುಖಂಡ. ಆದರೆ ಅವನಿಗೆ ಬೇಕಾದದ್ದು ಪೌರುಷಪ್ರಧಾನವಾದ ಚಟುವಟಿಕೆ, ಅಲಂಕಾರಪ್ರಿಯರನ್ನು ಅವನು ಹತ್ತಿರ ಸೇರಿಸುತ್ತಿರಲಿಲ್ಲ. ಠೀಕಾಗಿ ಬಟ್ಟೆ ಧರಿಸಿ ಮೆರೆಯುವ ಯುವಕರನ್ನು ಅವನು ಹಾಸ್ಯ ಮಾಡುತ್ತಿದ್ದ.

 

ರೈಲು ಪ್ರಯಾಣದ ಅನುಭವಗಳು

ಪರಿವ್ರಾಜಕ ಜೀವನದ ಸಮಯದಲ್ಲಿ ವಿವೇಕಾನಂದರಿಗೆ ಕೆಲವು ರೋಚಕ ಅನುಭವಗಳಾದವು. ಒಂದು ಸಲ ರಾಜಪುಟಾಣದಲ್ಲಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅವರ ಜೊತೆ ಇಬ್ಬರು ಇಂಗ್ಲಿಷ್ ಜನ ಪ್ರಯಾಣಿಸುತ್ತಿದ್ದರು. ವಿವೇಕಾನಂದರನ್ನು ಒಬ್ಬ ನಿಷ್ಟ್ರಯೋಜಕ ಮೂಢ ಎಂದು ತಿಳಿದು ಇವರಿಬ್ಬರೂ ತಮ್ಮ ಭಾಷೆಯಲ್ಲಿ ಅವರ ವಿಷಯವಾಗಿ ಗೇಲಿ ಮಾಡುತ್ತ ಮಾತನಾಡಿಕೊಳುತ್ತ ಇದ್ದರು. ಇದನ್ನು ಕೇಳಿಯೂ ಅರ್ಥಮಾಡಿಕೊಳ್ಳದಿದ್ದ ಹಾಗೆ ವಿವೇಕಾನಂದರು ಸುಮ್ಮನೆ ಇದ್ದರು. ಮುಂದಿನ ರೈಲು ಸ್ಟೇಷನ್ನಿನಲ್ಲಿ ವಿವೇಕಾನಂದರು ಸೃಷ್ಟವಾದ ಇಂಗ್ಲಿಷಿನಲ್ಲಿ “ತಮಗೆ ಕುಡಿಯಲು ನೀರುಬೇಕೆಂದು ಸ್ಟೇಷನ್ ಮಾಸ್ಟರನ್ನು ಕೇಳಿದರು. ಆಗ ತಮ್ಮ ನಡವಳಿಕೆಗೆ ತಾವೇ ನಾಚಿಕೊಂಡು ಆ ಇ೦ಗ್ಲಿಷ್ ಜನರು ಸ್ವಾಮೀಜಿಯವರನ್ನು ನಾವು ಹೇಳಿದುದನ್ನೆಲ್ಲಾ ಕೇಳಿ ನೀವೇಕೆ ಸುಮ್ಮನಿದ್ದಿರಿ ಎಂದು ಕೇಳಿದರು, ಸ್ವಾಮೀಜಿಯ ಉತ್ತರ: “ನಾನು ಮೂಢರನ್ನು (fools) ನೋಡುತ್ತಿರುವುದು ಇದೇ ಮೊದಲಲ್ಲ, ಮಿತ್ರರೆ!” ಈ ಉತ್ತರವನ್ನು ಕೇಳಿ ಆ ಇಂಗ್ಲಿಷರು ಕೆರಳಿದರಾದರೂ ದಷ್ಟಪುಷ್ಟವಾದ ಸ್ವಾಮಿಗಳ ಮೈಕಟ್ಟನ್ನು ಕಂಡು ಹೆದರಿ ಕ್ಷಮಾಯಾಚನೆ ಮಾಡಿ ಸುಮ್ಮನಾದರು.

ಇನ್ನೊಂದು ಸಲ ರೈಲಿನಲ್ಲಿ ಭೋಳೆ ಸ್ವಭಾವದ, ಸಿದ್ಧಿಗಳನ್ನು ತೋರುವ ಮಹಾತ್ಮರ ಗೀಳಿನ ಒಬ್ಬ ಮನುಷ್ಯನನ್ನು ಸ್ವಾಮೀಜಿ ಸಂಧಿಸಿದರು. ಸ್ವಾಮಿಗಳನ್ನು ಕಂಡೊಡನೆಯೇ ಆ ಮನುಷ್ಯ ಅವರನ್ನು ಅನೇಕ ಪ್ರಶ್ನೆಗಳನ್ನು ಹಾಕಿ ಎದುರಿಸಿದನು. ನೀವು ಹಿಮಾಲಯಕ್ಕೆ ಹೋಗಿದ್ದೀರಾ? ಅಲ್ಲಿ ಸಿದ್ಧಿಗಳನ್ನು ಪಡೆದ ಮಹಾತ್ಮರನ್ನು ಕಂಡಿದ್ದೀರಾ? ಇತ್ಯಾದಿ. ಈತನ ಭ್ರಮನಿರಸನ ಮಾಡಬೇಕೆಂದು ನಿಶ್ಚಯಿಸಿದ ಸ್ವಾಮೀಜಿ ಅವನ ಪ್ರಶ್ನೆಗಳನ್ನು ಉತ್ತೇಜನೆ ಕೊಟ್ಟು ಕೇಳಿದರು. ಆಮೇಲೆ ಸ್ವಾಮೀಜಿ ಮಹಾತ್ಮರ  ಪವಾಡಗಳನ್ನು ಕುರಿತು ಎಷ್ಟು ಅದ್ಭುತ, ರಂಜನೀಯ ಭಾಷೆಯಲ್ಲಿ ಹೇಳಿದರೆಂದರೆ ಆ ಪ್ರಶ್ನೆಕಾರ ಆಶ್ಚರ್ಯ ಚಕಿತನಾದ. ಅವನು ಮತ್ತೆ ಈ ಯುಗದ ಕಾಲಾವಧಿಯ ವಿಷಯವಾಗಿ ಅವರು ಏನು ಹೇಳಿದರು ಎಂದು ಕೇಳಿದೆ. ಸ್ವಾಮೀಜಿ ಹೇಳಿದರು, “ಹೌದು ಈ ಯುಗದ ಪ್ರಲಯದ ವಿಷಯವನ್ನೂ ಆ ಮಹಾತ್ಮರು ಜನರ ಕಲ್ಯಾಣಕ್ಕಾಗಿ ಏನೇನು ಮಾಡುವರೆಂಬುದನ್ನೂ ಸತ್ಯಯುಗದ ಪುನಃ ಸ್ಥಾಪನೆಯ ವಿಷಯವನ್ನೂ ಹೇಳಿದರು” ಎಂದು. ಆ ಮನುಷ್ಯ “ಇವರ ಒಂದೊಂದು ಮಾತನ್ನೂ ಬಿಟ್ಟ ಬಾಯಿನಿಂದ ಕೇಳಿ ನಂಬಿದ, ಸ್ವಾಮೀಜಿ ತನ್ನೊಂದಿಗೆ ಊಟ ಮಾಡಬೇಕೆಂದು ಪ್ರಾರ್ಥಿಸಿದ.

ಒಂದು ದಿನವೆಲ್ಲ ಉಪವಾಸದಿಂದ ಇದ್ದ ಸ್ವಾಮೀಜಿ ಸಂತೋಷದಿಂದ ಸಮ್ಮತಿಸಿದರು. ಸ್ವಾಮೀಜಿ ಆ ಮನುಷ್ಯ ಅರೆಬೆಂದ ರಹಸ್ಯಯೋಗದ ಅಭಿರುಚಿಯಿದ್ದರೂ ಸಾಧು ಸ್ವಭಾವದವನು ಎಂದು ಕಂಡುಕೊಂಡರು. ಊಟ ಆದ ಮೇಲೆ ಅವನಿಗೆ ನೇರವಾಗಿ, ಕಟುವಾಗಿ ಬೋಧಿಸಿದರು : “ ನೀವು ಇಷ್ಟೊಂದು ಓದಿದವರೆಂದು, ಜ್ಞಾನಿ ಎಂದು ಹೆಮ್ಮೆ ಪಡುತ್ತೀರಿ, ಆದರೆ ನಾನು ಹೇಳಿದ ಉತ್ಪ್ರೇಕ್ಷೆ, ಅದ್ಭುತಮಯವಾದ ಕಥೆಗಳನ್ನು ಹೇಗೆ ನಂಬಿದಿರಿ?” ಆತ ತಲೆ ತಗ್ಗಿಸಿದ. ಸ್ವಾಮೀಜಿ ಹೇಳಿದರು, “ಮಿತ್ರಾ, ನೀವು ಬುದ್ದಿವಂತರ ಹಾಗೆ ಕಾಣುತ್ತೀರಿ. ಆದರೆ ಬುದ್ದಿ ಉಪಯೋಗಿಸಿ ಅಧ್ಯಾತ್ಮ ಪ್ರಗತಿಗೂ, ಸಿದ್ಧಿಗಳ ಪ್ರದರ್ಶನಕ್ಕೂ ಯಾವ ಸಂಬಂಧವೂ ಇಲ್ಲ. ದೃಢಸಂಕಲ್ಪದ ಮಾನವರು ಈಗ ನಮಗೆ ಅಗತ್ಯ,” ಎಂದು.

 

ನನ್ನನ್ನೂ ನೀರಿಗೆ ಹಾಕಿದ್ದರು.

ಸ್ಮಾಮೀಜಿ ಅಮೆರಿಕದಲ್ಲಿ ಪ್ರಸಿದ್ಧರಾದಮೇಲೆ ಅವರಿಗೆ ಭಾಷಣಮಾಡಿ ಎಂಬ ಆಹ್ವಾನಗಳು ಎಲ್ಲ ಮೂಲೆ ಮೂಲೆಗಳಿಂದಲೂ ಬಂದವು. ಯೂನಿಟೇರಿಯನ್ ಚರ್ಚುಗಳು ಸರ್ವಧರ್ಮ ಸಮಾನತೆಯನ್ನು ಬೋಧಿಸುತ್ತವೆ. ಇಂತಹ ಚರ್ಚುಗಳಿಂದ ಅವರಿಗೆ ಆಹ್ವಾನಗಳು ಬಂದವು. ಎಲ್ಲೆಲ್ಲಿಯೂ ಉತ್ಸಾಹದ ಸ್ವಾಗತ, ಅಭಿಮಾನದ ಉತ್ತೇಜನ.

ಆದರೆ ಅಮೆರಿಕದಲ್ಲಿ ಭಾರತದ ವಿಷಯದಲ್ಲಿ ಅಗಾಧ ಅಜ್ಞಾನ ತುಂಬಿದ್ದಿತು. ಕ್ರೈಸ್ತಪಾದ್ರಿಗಳು ಹಣ ಸೇರಿಸುವುದಕ್ಕಾಗಿ ಭಾರತದ ವಿಷಯದಲ್ಲಿ ಕಟ್ಟುಕತೆಗಳ ಪ್ರಚಾರ ಮಾಡಿದ್ದರು, ಮಾಡುತ್ತಿದ್ದರು. ಅದನ್ನೆಲ್ಲ ನಂಬಿದ ಜನರು ತಾವೇ ಭಾರತವನ್ನು ನೋಡಿರುವವರಂತೆ ಸ್ವಾಮಿಗಳ ಭಾಷಣಗಳಲ್ಲಿ ಅವರನ್ನು ಕುಹಕದ ಪ್ರಶ್ನೆಗಳನ್ನು ಕೇಳಿ ರೇಗಿಸುತ್ತಿದ್ದರು. ಪದೇ ಪದೇ ಈ ಪ್ರಶ್ನೆಗಳನ್ನು ಎದುರಿಸಿ ಬೇಸರಗೊಂಡ ಸ್ವಾಮೀಜಿ ಹಲವು ಬಾರಿ ಇಂತಹ ಕುಚೋದ್ಯದ ಪ್ರಶ್ನೆಗಳಿಗೆ ಕುಹಕದ ಮೊನಚಾದ ಉತ್ತರಗಳನ್ನೇ ಕೊಟ್ಟು ಅವರ ಬಾಯಿ ಮುಚ್ಚಿಸುತ್ತಿದ್ದರು.

ಮಿನಿಯಾಪೋಲಿಸ್‌ನಲ್ಲಿ ಒಬ್ಬ ಹೆಂಗಸು ಅವರನ್ನು ಕೇಳಿದರು, ” ಹಿಂದೂ ಹೆಂಗಸರು ತಮ್ಮ ಮಕ್ಕಳನ್ನು ಮೊಸಳೆಗಳಿಗೆ ಎಸೆಯುತ್ತಾರಂತೆ, ನಿಜವೆ?” ವಿವೇಕಾನಂದರು ಉತ್ತರಿಸಿದರು, “ಹೌದು, ಮೇಡಂ, ನನ್ನನ್ನೂ ನೀರಿಗೆ ಎಸೆದರು, ಆದರೆ ನಿಮ್ಮ ಪುರಾಣಕಥೆಯ ಜೊನಾ ಮಾಡಿದಂತೆ ನಾನು ತಪ್ಪಿಸಿಕೊಂಡು ಬಂದೆ.” ಇನ್ನೊಂದು ಸಲ ಇದೇ ಪ್ರಶ್ನೆಗೆ ಉತ್ತರವಾಗಿ ನಗುತ್ತ ಸ್ವಾಮೀಜಿ ಹೇಳಿದರು, “ನನ್ನನ್ನು ನೋಡಿ, ನಾನೊಬ್ಬ ದಷ್ಟಪುಷ್ಟ ಸಂನ್ಯಾಸಿ, ಚಿಕ್ಕಂದಿನಿಂದಲೂ ನಾನು ಮೈಕೈ ತುಂಬಿಕೊಂಡ ಮಗುವಾಗಿದ್ದೆ, ನನ್ನನ್ನೂ ಮೊಸಳೆಗಳಿಗೆ ಹಾಕಿದರು. ಆದರೆ ಮೊಸಳೆಗಳಿಗೆ ಗುಂಡುಗುಂಡಾದ ದಪ್ಪ ಮಗು ಇಷ್ಟವಾಗುವುದಿಲ್ಲ, ಆದುದರಿಂದ ನಾನು ತಪ್ಪಿಸಿಕೊಂಡು ಬಂದೆ.” ಇಂತಹ ಸಂದರ್ಭಗಳಲ್ಲಿ ಸ್ವಾಮಿಗಳಿಗೆ ಅವರ ಹಾಸ್ಯಪ್ರಜ್ಞೆ ನೆರವಿಗೆ ಬರುತ್ತಿದ್ದಿತು.

ವ್ಯವಸ್ಥೆಯ ಆಕರ್ಷಣೆ

೧೮೯೩ರಲ್ಲಿ ಸ್ವಾಮೀಜಿ ಶಿಕಾಗೋದಲ್ಲಿ ಅನೇಕ ಪ್ರತಿಷ್ಠಿತ ಸಜ್ಜನರ ಮನೆಗಳಲ್ಲಿ ಅತಿಥಿಯಾಗಿರುತ್ತಿದ್ದರು. ಇವರಲ್ಲಿ ಪ್ರಮುಖರು ಶ್ರೀಮತಿ ಮತ್ತು ಶ್ರೀ ಲಿಯನ್ (Lyon). ಇವರ ಮೊಮ್ಮಗಳು ಸ್ವಾಮೀಜಿ ವಿಚಾರದಲ್ಲಿ ತನ್ನ ನೆನಪುಗಳನ್ನು ಬರೆದಿದ್ದಾಳೆ, ಕಾರ್ನೆಲಿಯ ಕಾಂಗರ್ ತಾನು ಆಗ ಆರು ವರ್ಷದ ಮಗುವಾಗಿ ಸ್ವಾಮೀಜಿಯವರೊಡನೆ ಆಟವಾಡುತ್ತಿದ್ದುದನ್ನೂ ಅವರ ತೊಡೆಯ ಮೇಲೆ ಕುಳಿತು ಕಥೆಗಳನ್ನು ಕೇಳುತ್ತಿದ್ದುದನ್ನೂ ನೆನಪು ಮಾಡಿಕೊಂಡಿದ್ದಾಳೆ. ತನ್ನ ಅಜ್ಜಿ ಮಿಸೆಸ್ ಲಿಯನ್ ಸ್ವಾಮೀಜಿಯೊಂದಿಗೆ ಸದರದಿಂದ ಇದ್ದರು. ಒಂದು ದಿನ ನಗುತ್ತ ಸ್ವಾಮೀಜಿ ಆಕೆಗೆ ಹೇಳಿದರು, “ಅಮೆರಿಕದಲ್ಲಿ ನಾನೊಂದು ಮೋಹಪಾಶಕ್ಕೆ ಒಳಗಾಗಿದ್ದೇನೆ. ಅವರನ್ನು ಸ್ವಲ್ಪ ಕೆಣಕೋಣವೆಂದು “ಯಾರವಳು?” ಎಂದು ಮಿಸೆಸ್  ಲಿಯನ್ ಕೇಳಿದಳು. ಸ್ವಾಮೀಜಿ ಜೋರಾಗಿ ನಗುತ್ತ ಹೇಳಿದರು, “ಅದು ಒಬ್ಬ ಹೆಣ್ಣಲ್ಲ, ಈ ದೇಶದ ವ್ಯವಸ್ಥಾಕ್ರಮ, ಆರ್ಗನೈಸೇಷನ್.”

ಸ್ವಾಮೀಜಿ ವಿವರಿಸಿದರು: “ಶ್ರೀರಾಮಕೃಷ್ಣರ ಸಂನ್ಯಾಸಿ ಶಿಷ್ಯರು ಒಬ್ಬೊಬ್ಬರೇ ಅಲೆದಾಡುತ್ತಿದ್ದಾರೆ. ಯಾವುದೋ ಊರಿಗೆ ಹೋಗಿ ಒಂದು ಮರದ ಕೆಳಗೆ ಕುಳಿತು ದುಃಖದಲ್ಲಿರುವವರು ಬಂದು ತಮ್ಮ ತೊಂದರೆಗಳನ್ನು ತಮ್ಮೊಡನೆ ಹಂಚಿಕೊಳ್ಳಲಿ ಎಂದು ಕಾಯುತ್ತ ಇರುತ್ತಾರೆ. ಆದರೆ ಒಂದು ವ್ಯವಸ್ಥಿತ ಸಂಸ್ಥೆಯನ್ನು ಸ್ಥಾಪಿಸುವುದರಿಂದ ಎಷ್ಟೊಂದು ಕಾರ್ಯ ಸಾಧಿಸಬಹುದು ಎಂದು ಅಮೆರಿಕದಲ್ಲಿ ಕಂಡುಕೊಂಡಿದ್ದೇನೆ. ಆದರೆ ಯಾವ ರೀತಿಯ ವ್ಯವಸ್ಥೆಯ ಕ್ರಮ ಭಾರತದ ಗುಣಕ್ಕೆ ಹೊಂದಿಕೊಳ್ಳಬಹುದು ಎಂದು ನಾನು ಯೋಚಿಸುತ್ತಿದ್ದೇನೆ, ಅಧ್ಯಯನ ಮಾಡುತ್ತಿದ್ದೇನೆ.”

ಅಮೆರಿಕದ ಕಥೆಗಳು

೧೮೯೪ರ ಆಗಸ್ಟ್ ನಲ್ಲಿ ಸ್ವಾಮೀಜಿ ಅನ್ನಿಸ್ ಕ್ವಾಂ ಎಂಬ ಊರಿನಲ್ಲಿ ಮಿಸೆಸ್ ಬೇಗ್ಲಿ, ಅವರ ಅತಿಥಿಯಾಗಿದ್ದಾಗ ಸಂಧಿಸಿದ ಒಬ್ಬ ಹೆಂಗಸು ಅವರಿಗೆ ಕೆಲವು ಅಮೆರಿಕನ್ ಕಥೆಗಳನ್ನು ಹೇಳುತ್ತಾಳೆ. ಇವನ್ನು ಕೇಳಿ ಸ್ವಾಮೀಜಿ ಬಹು ಖುಷಿ ಪಟ್ಟರು.

ಒಂದು ಕಥೆಯಲ್ಲಿ ಒಬ್ಬ ಚೀನೀ ಮನುಷ್ಯ ಹಂದಿ ಮಾಂಸ ಕದ್ದು ಸಿಕ್ಕಿಹಾಕಿಕೊಳ್ಳುತ್ತಾನೆ. ನ್ಯಾಯಾಧೀಶ ಅವನನ್ನು ಪ್ರಶ್ನಿಸುತ್ತಾನೆ, “ನೀನು ಹಂದಿ ಮಾಂಸ ಏಕೆ ಕದ್ದೆ? ಚೀನೀ ಜನ ಹಂದಿ ಮಾಂಸ ತಿನ್ನುವುದಿಲ್ಲವಲ್ಲ?” ಚೀನೀ ಮನುಷ್ಯ ತನ್ನದೇ ಆದ ಇಂಗ್ಲಿಷ್ ಭಾಷೆಯಲ್ಲಿ ಹೇಳಿದ , “ಓ ಮಿ ಮೆಲಿಕನ್ ಮ್ಯಾನ್ ನೌ, ಮಿ ಸರ್, ಮಿ ಸ್ಟೀಲ್, ಮಿ ಈಟ್ ಫೋರ್ಕ್, ಮಿ ಎವೆರಿಥಿಂಗ್.” (ನಾನೀಗ ಆಮೆರಿಕನ್ನಾದೆ. ಸ್ವಾಮಿ, ಈಗ ನಾನು ಕದಿಯುತ್ತೇನೆ, ಹಂದಿ ಮಾಂಸ ತಿನ್ನುತ್ತೇವೆ, ಎಲ್ಲ ಮಾಡುತ್ತೇನೆ.) ಸ್ವಾಮೀಜಿ ಅನೇಕ ಸಲ ತಮಗೆ ತಾವೇ ಹೇಳಿಕೊಳ್ಳುತ್ತಿದ್ದರು, “ಈ ಮೆಲಿಕನ್ ಮ್ಯಾನ್ ನೌ.” ಈ ಕಥೆ ಅವರಿಗೆ ಬಹು ಇಷ್ಟ ವಾಯಿತು,

ಸ್ವಾಮೀಜಿಗೆ ಇಷ್ಟವಾದ ಇನ್ನೊಂದು ಕಥೆ ಕೆನಡಾದಲ್ಲಿ ಅಮೆರಿಕದ ಆದಿವಾಸಿಗಳ ಶಿಬಿರದಲ್ಲಿ ನಡೆದದ್ದು, ಆಗ ಕಥೆ ಹೇಳಿದ ಈ ಹೆಂಗಸು ಅಲ್ಲಿದ್ದಳು, ಒಬ್ಬ ರೆಡ್ ಇಂಡಿಯನ್ನ ಹೆಂಡತಿ ಸತ್ತಳು. ಅವಳ ಹೆಣದ ಪಟ್ಟಿಗೆ ಭದ್ರಮಾಡಲು ಮೊಳೆಗಳು ಬೇಕೆಂದು ಕೇಳಲು ಈ ಮನುಷ್ಯ ವಾದ್ರಿಗಳ ಮನೆಗೆ ಬಂದ. ಅವರ ಮನೆಯ ಅಡುಗೆಯ ಹೆಂಗಸನ್ನು ಕಂಡು “ನೀನು ನನ್ನನ್ನು ಮದುವೆ ಯಾಗುತ್ತೀಯಾ?” ಎಂದು ಕೇಳಿದ. ಆಗ ಇನ್ನೂ ಇವನ ಮೊದಲ ಹೆಂಡತಿಯನ್ನು ಮಣ್ಣು ಮಾಡಿರಲಿಲ್ಲ. ಅಡುಗೆಯವಳಿಗೆ ಮಹಾ ಕೋಪ ಬಂದಿತು. ಅವಳ ನಕಾರಾತ್ಮಕ ಉತ್ತರ ಕೇಳಿ ಆ ಮನುಷ್ಯ ಹೇಳಿದ, ” ಸ್ವಲ್ಪ ಕಾಯ್ದು ನೋಡೋಣ” ಎಂದು. ಮುಂದಿನ ಭಾನುವಾರ ಆ ಮನುಷ್ಯ ಪುನಃ ಬಂದು ಕಾಂಪೌಂಡ್ ಗೋಡೆಯ ಬಾಗಿಲ ಹತ್ತಿರದ ಕಂಭದ ಮೇಲೆ ಕುಳಿತುಕೊಂಡ. ತನ್ನ ತಲೆಯಲ್ಲಿ ಒಂದು ಹಕ್ಕಿಯ ಗರಿ ಸಿಕ್ಕಿಸಿಕೊಂಡು ಸಿಂಗರಿಸಿಕೊಂಡಿದ್ದ.

ತಲೆಗೆ ಧಾರಾಳವಾಗಿ ಎಣ್ಣೆ ಬಳಿದುಕೊಂಡಿದ್ದ. ಅದು ಕೆನ್ನೆಯ ಮೇಲೆ ತೊಟ್ಟಿಕ್ಕುತ್ತಿದ್ದಿತು. ಆ ಸಮಯದಲ್ಲಿ ಸ್ವಾಮಿಗಳ ಚಿತ್ರವನ್ನು ಆಕೆ ಬಿಡಿಸುತ್ತಿದ್ದರು. ಚಿತ್ರ, ಹೇಗಿದೆ ಎಂದು ನೋಡಲು ಹೋದಾಗ ಸ್ವಲ್ಪ ಬಣ್ಣ ಚಿತ್ರದಲ್ಲಿನ ಸ್ವಾಮೀಜಿಯ ಕೆನ್ನೆಯ ಮೇಲೆ ಹರಿದಿತ್ತು. ಅದನ್ನು ಕಂಡ ಸ್ವಾಮೀಜಿ, “ಅಡುಗೆಯವಳನ್ನು ಮದುವೆಯಾಗಲು ತಯಾರ್! ” ಎಂದು ಹೇಳಿದರು. ಅವರ ಹಾಸ್ಯಪ್ರಜ್ಞೆ ಉತ್ಕೃಷ್ಟವಾಗಿತ್ತು.

ಈ ಕಥೆಗಳಲ್ಲೆಲ್ಲಾ ಸ್ವಾಮೀಜಿಗೆ ಅತಿ ಇಷ್ಟವಾದದ್ದು ಎರಡು. ಮೊದಲನೆಯದು ನರಭಕ್ಷಕರ ನಾಡಿಗೆ ಧರ್ಮ ಪ್ರಚಾರ ಮಾಡಲು ಹೋದ ಕ್ರಿಶ್ಚಿಯನ್ ಪಾದ್ರಿಯ ಕಥೆ. ಹೊಸದಾಗಿ ಒಬ್ಬ ಪಾದ್ರಿ ಈ ಜನದ ನಾಡಿಗೆ ಹೋದ. ಅವರ ಮುಖಂಡನನ್ನು ಭೇಟಿಮಾಡಿ, ”ನನಗಿಂತ ಮೊದಲು ಧರ್ಮಪ್ರಚಾರ ಮಾಡುತ್ತಿದ್ದವನು ನಿಮಗೆ ಇಷ್ಟವಾಗಿದ್ದನೆ?” ಎಂದು ವಿಚಾರಿಸಿದ. ಮುಖಂಡನ ಉತ್ತರ, “ಅವನು ಬಹು ರುಚಿಯಾಗಿದ್ದ. ಆ ಜನರು ಅವನನ್ನು ಬೇಯಿಸಿಕೊಂಡು ತಿಂದುಬಿಟ್ಟರು!

ಎರಡನೆಯ ಕಥೆ ದೇವರು ಸೃಷ್ಟಿ ಮಾಡಿದುದನ್ನು ಕುರಿತದ್ದು. ಅದು ಅಮೆರಿಕದ ಕರಿಯ ಜನಗಳು ತಮ್ಮದೇ ಆದ ಚರ್ಚುಗಳಲ್ಲಿ ಪ್ರಚಾರ ಭಾಷಣ ಮಾಡುವುದನ್ನು ವಿಡಂಬನೆ ಮಾಡುವ ಕಥೆ, ಅಮೆರಿಕದ ಬಿಳಿಯ ಜನರಿಗೆ ಕರಿಯ ಜನರನ್ನು ಕಂಡರೆ ತಾತ್ಸಾರ, ನಗು. ಒಬ್ಬ ಕರಿಯ ಪ್ರಚಾರಕ ತನ್ನ ಚರ್ಚಿನಲ್ಲಿ ಬೈಬಲ್ಲಿನಲ್ಲಿ ಹೇಳಿರುವ ಸೃಷ್ಟಿಯ ಕಥೆಯನ್ನು ತನ್ನದೆ ಆದ ರೀತಿಯಲ್ಲಿ ಹೇಳುತ್ತಿದ್ದ: “ದೇವರು ಆಡಮನನ್ನು ಮಣ್ಣಿನಿಂದ ತಯಾರಿಸಿದ. ಮೂರ್ತಿಯನ್ನು ತಯಾರು ಮಾಡಿ ಅದನ್ನು ಆರಲು ಅಲ್ಲಿದ್ದ ಬೇಲಿಗೆ ಒರಗಿಸಿ ಇಟ್ಟ, ಆಮೇಲೆ..” ಚರ್ಚಿನಲ್ಲಿ ಭಾಷಣವನ್ನು ಕೇಳುತ್ತಿದ್ದ ಒಬ್ಬ ಮಹನೀಯ “ಪ್ರಚಾರಕರೇ, ಸ್ವಲ್ಪ ನಿಲ್ಲಿಸಿ, ಆ ಬೇಲಿ ಇದ್ದಿತಲ್ಲ, ಅದನ್ನು ಯಾರು ತಯಾರಿಸಿದವರು?” ಎಂದು ಪ್ರಶ್ನಿಸಿದ. ಧರ್ಮ ಪ್ರಚಾರಕ ಆ ಮನುಷ್ಯನಿಗೆ ಖಾರವಾಗಿ ಉತ್ತರಿಸಿದ – “ಇಲ್ಲಿ ನೋಡು, ಸಾಮ್ ಜೋನ್ಸ್ ಇಂತಹ ಪ್ರಶ್ನೆಗಳನ್ನೆಲ್ಲ ಕೇಳಬೇಡ. ನೀನು ನಮ್ಮ ಪುರಾಣ ಗ್ರಂಥಗಳನ್ನೆಲ್ಲಾ ಪುಡಿ ಮಾಡಿ ಬಿಡುತ್ತಿದ್ದೀಯೆ.!” ಇದು ಆ ಪ್ರಚಾರಕನ ವ್ಯಾಖ್ಯಾನದ ವೈಖರಿ!

ಹೀಗೆ ಸ್ವಾಮಿಜಿ ಒಂದು ಕಡೆ ಉದಾತ್ತ ವೇದಾಂತ ತತ್ತ್ವಗಳನ್ನು ಗಂಭೀರವಾಗಿ ಚರ್ಚಿಸುತ್ತಿದ್ದರೆ ಇನ್ನೊಂದು ಕಡೆ ಮಾನವೀಯರಾಗಿ ನಗೆಗಡಲಿನಲ್ಲಿಯೂ ವಿಹರಿಸುತ್ತಲಿದ್ದರು. ಪಂಚ್ ಹಾಸ್ಯ-ಪತ್ರಿಕೆಯನ್ನು ಅಥವಾ ಅಂತಹುದೇ ಹಾಸ್ಯಮಯ ಸಾಹಿತ್ಯ ಓದಿ ಸ್ವಾಮೀಜಿ ಜೋರಾಗಿ ಕಣ್ಣಿನಲ್ಲಿ ನಿರು ಬರುವವರೆಗೆ ನಗುತ್ತಿದ್ದರು. ಅವರ ಶಿಷ್ಯ ವರ್ಗ ಸ್ವಾಮೀಜಿ ಇಂತಹ ಭಾವದಲ್ಲಿದ್ದುದನ್ನು ಕಂಡು ಸಂತೋಷಪಡುತ್ತಿದ್ದರು.

ತಮ್ಮ ನಿಕಟವರ್ತಿಗಳೊಡನೆ ಇರುವಾಗ ಸ್ವಾಮೀಜಿ ಇಂತಹ ಭಾವದಲ್ಲಿರುತ್ತಿದ್ದರು. ಅವರಿಗೆ ಅಡ್ಡ ಹೆಸರು ಇಟ್ಟು ಕರೆಯುತ್ತಿದ್ದರು. ಶಿಕಾಗೊದಲ್ಲಿ ತಮಗೆ ಆಸರೆ ಕೊಟ್ಟ ಮಿಸ್ಟರ್ ಮತ್ತು ಮಿಸೆಸ್ ಹೇಲ್ ರನ್ನು ಸ್ವಾಮೀಜಿ “ತಂದೆ ಪೋಪ್” “ತಾಯಿ ಚರ್ಚ್” ಎಂದು ಕರೆಯು ತಿದ್ದರು, ಜೊಸೆಫಿನ್ ಮೆಕ್ ಲೋಡಳನ್ನು “ಯುಂ” ವತ್ತು “ಜೋಜೋ” ಎಂದು ಕರೆಯುತ್ತಿದ್ದರು. ಹರ ಮೋಹನ ಮಿತ್ರ ಎಂಬ ಶ್ರೀರಾಮಕೃಷ್ಣರ ಶಿಷ್ಯನನ್ನು ಹಾರ್ಮೋನಿಯಂ ಎಂದೂ ಲೇಟೋ (ಸ್ವಾಮಿ ಅದ್ಭುತಾ ನಂದ)ರನ್ನು ಪ್ಲೇಟೊ ಎಂದೂ ಕರೆಯುತ್ತಿದ್ದರು. ರುಚಿಕರವಾದ ತಿಂಡಿಯನ್ನು ಕೊಟ್ಟಾಗ ಚಾಕು, ಚಮಚ, ಪೋರ್ಕುಗಳನ್ನೆಲ್ಲಾ ತ್ಯಜಿಸಿ ತಮ್ಮ ದೇಶದ ಪದ್ಧತಿಯಂತೆ ಕೈಬೆರಳುಗಳಿಂದ ತಿಂಡಿ ತಿಂದು ಜನರನ್ನು ರೇಗಿಸುತ್ತಿದ್ದರು.

ಆದರೆ ಸ್ವಾಮಿಗಳ ಗಂಭೀರೆ ಭಾವವೂ ಆಗಾಗ ಅವರನ್ನು ಆಕ್ರಮಿಸುತ್ತಿದ್ದಿತು. ೧೮೯೬ರ ಒಂದು ಪತ್ರದಲ್ಲಿ ಅವರು ಬರೆದರು : “ಈಗ ಒಂದು ಮೂಲೆ ಕಂಡುಹಿಡಿದು ಅಲ್ಲಿ ಮಲಗಿ ಸಾಯಬೇಕು! ಆದರೆ ನನ್ನ ಕರ್ಮ ಬಿಡಬೇಕಲ್ಲ ಅದು ನನ್ನನ್ನು ಅಮೆರಿಕಕ್ಕೆ ಕರೆತಂದಿದೆ. ಇರಲಿ, ಈ ಅನುಭವಗಳನ್ನು ಕೊಟ್ಟಿದ್ದಕ್ಕೆ ದೇವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ…”

 

ಸ್ಯಾನ್ ಫ್ರಾನ್ಸಿಸ್ಕೋ ಪ್ರದೇಶದಲ್ಲಿ

ಸ್ವಾಮೀಜಿ ಎರಡನೇ ಸಲ ಅಮೆರಿಕಕ್ಕೆ ಹೋದದ್ದು ತಮ್ಮ ಆರೋಗ್ಯ ಉತ್ತಮವಾಗಲೆಂದು, ಆರೋಗ್ಯ ಸುಧಾರಿಸಿದ ಮೇಲೆ ಅವರು ಭಾಷಣಗಳು, ತರಗತಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆರಂಭಿಸಿದರು. ಈ ಸಲದ ಪ್ರಯಾಣದಲ್ಲಿ ಮೊದಲ ಬಾರಿ ಅವರು ಪಶ್ಚಿಮ ತೀರದ ಕೆಲಿಫೋರ್ನಿಯಾದಲ್ಲಿ ಹೆಚ್ಚು ಸಮಯ ಕಳೆದರು.

ಒಂದು ದಿನ ಭಾಷಣ ಆರಂಭಿಸುವ ಮೊದಲು ಸ್ವಾಮೀಜಿ ಸಭಿಕರನ್ನು ಗಮನಿಸಿ ನೋಡಿದರು. ಒಂದು ಕ್ಷಣದ ನಂತರ ಹೇಳಿದರು: “ಏಳಿ, ಎದ್ದೇಳಿ, ಗುರಿ ಸೇರುವವರೆಗೆ ನಿಲ್ಲದಿರಿ!” ಅದೊಂದು ಎಲೆಕ್ನಿಕ್ ಶಾಕ್ ತರಹ ಇದ್ದಿತು. ಆದರೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿಯೇ ಇಂತಹ ಅನೇಕ ಶಾಕ್ ಗಳನ್ನು ಕೊಟ್ಟು ಭಾಷಣ ಮಾಡಿದಮೇಲೆ ತಮ್ಮ ಜೊತೆಗಾರರೊಡನೆ ಹತ್ತಿರದ ರೆಸ್ಟುರಾಗೆ ಹೋಗಿ ರಾತ್ರಿಯೂಟ ಮಾಡುತ್ತಾ ಅಥವಾ ಐಸ್‌ಕ್ರೀಮ್ ತಿನ್ನುತ್ತಾ ಆನಂದಭರಿತರಾಗಿ ಎಂದಿನಂತೆ ಸೌಲಭ್ಯಪೂರ್ಣರಾಗಿ ಎಲ್ಲರ ಪ್ರೀತಿಯ ಮಿತ್ರರಾಗುತ್ತಿದ್ದರು.

ಒಂದು ದಿನ ಭಾಷಣ ಮುಗಿಸಿ “ನಾಳೆ “ಮನಸ್ಸು ಮತ್ತು ಅದರ ಶಕ್ತಿ, ಸಾಧ್ಯತೆಗಳು’ ಎಂಬ ವಿಷಯದ ಮೇಲೆ ಮಾತನಾಡುತ್ತೇನೆ, ಬಂದು ಕೇಳಿ. ನಿಮಗೆ ಹೇಳೆಬೇಕಾದ್ದು ಒಂದು ಇದೆ, ನಾಳೆ ಸ್ವಲ್ಪ ಬಾಂಬ್ ಎಸೆಯುತ್ತೇನೆ ಬನ್ನಿ, ನಿಮಗೆ ಒಳಿತಾಗುವುದು!” ಎಂದರು. ಮರುರಾತ್ರಿ ಸಭಾಭವನ ಭರ್ತಿ, ನಿಲ್ಲುವುದಕ್ಕೂ ಸ್ಥಳ ಸಾಲದಾಯಿತು, ಮನಸ್ಸನ್ನು ಸ್ಥಿರಪಡಿಸಲು ಪರಿಶುದ್ಧತೆ, ಬ್ರಹ್ಮಚರ್ಯ ಆಗತ್ಯ ಎಂದು ಸ್ವಾಮೀಜಿ ಪ್ರತಿವಾದಿಸಿದರು. “ಎಲ್ಲ ಹೆಂಗಸರನ್ನೂ ನಿಮ್ಮ ತಾಯಿಯಂತೆ ನೋಡಿ” ಎಂದರು. ಸ್ವಲ್ಪ ಹೊತ್ತು ಮೌನ, ಮುಖದಲ್ಲಿ ಅಸಹ್ಯಭಾವ ತೋರುತ್ತಾ ಸ್ವಾಮೀಜಿ ಮುಂದುವರಿಸಿದರು:“ನೀವು ಅಮೆರಿಕದ ಡಾಕ್ಟರುಗಳೆ, ಬ್ರಹ್ಮಚರ್ಯ ಅಸ್ವಾಭಾವಿಕ ಎಂದು ಹೇಳುತ್ತೀರಿ. ನೀವು ಮಾತನಾಡುತ್ತಿರುವುದೇನೆಂದು ನೀವು ಅರಿತಿಲ್ಲ, ಪರಿಶುದ್ದತೆ ಎಂಬ ಪದದ ಅರ್ಥ ನಿಮಗೆ ತಿಳಿಯದು. ನೀವು ಮೃಗಗಳು! ಮೃಗಗಳು! ಗಡವ ಬೆಕ್ಕಿನ ಶೀಲವೇ ನಿಮ್ಮ ಶೀಲ” ಅಲ್ಲಿದ್ದ ಯಾವ ಡಾಕ್ಟರೂ ಅವರಿಗೆ ಎದುರು ಮಾತನಾಡಲಿಲ್ಲ!

ಇನ್ನೊಂದು ಸಲ ಸ್ವಾಮೀಜಿ ಅದ್ವೈತವನ್ನು ವಿವರಿಸುತ್ತಿದ್ದರು. ಸಭೆಯಲ್ಲಿ ಮುಂದಿನ ಸಾಲಿನಲ್ಲಿ ಕುಳಿತಿದ್ದ ಒಬ್ಬ ಮುದುಕನಿಗೆ ಇದು ಸಹನೆಯಾಗಲಿಲ್ಲ. “ಆದಷ್ಟು ಬೇಗ ಇಲ್ಲಿಂದ ಹೊರಟುಹೋದರೆ ಒಳ್ಳೆಯದು” ಎಂಬ ಭಾವವನ್ನು ಮುಖದಲ್ಲಿ ಪ್ರಕಟಿಸುತ್ತ. ಹೆಜ್ಜೆಹೆಜ್ಜೆಗೂ ತನ್ನ ಊರುಗೋಲನ್ನು ಕುಟ್ಟುತ್ತ ಆ ಮನುಷ್ಯ ಮಧ್ಯದ ದಾರಿಯಿಂದ ಸಭಾಭವನದಿಂದ ನಿರ್ಗಮಿಸಿದ. ಇದು ಸ್ವಾಮೀಜಿಗೆ ನಗು ಬರಿಸಿತು. ಅವರು ಹಾಗೆಯೇ ನಗುತ್ತ ಆ ಮನುಷ್ಯ ನಿರ್ಗಮಿಸುವುದನ್ನು ನೋಡುತ್ತಿದ್ದರು. ಸಭಿಕರು ಒಂದು ಕಡೆ ನಗುತ್ತ ನಿಂತ ಸ್ವಾಮೀಜಿಯನ್ನೂ ಇನ್ನೊಂದು ಕಡೆ ಭಾಷಣದಿಂದ ಬೇಸತ್ತ ವೃದ್ಧನನ್ನೂ ನೋಡಿಯೇ ನೋಡಿದರು.

ಒಮ್ಮೆ ವಿವೇಕಾನಂದರ ಹುಡುಗಾಟಿಕೆಯಿಂದ ಬೇಸತ್ತ ಅವರ ನಿಕಟ ಭಕ್ತೆಯಾದ ಮಿಸ್ ಮೆಕ್ ಲೌಡ್, ಅವರಿಗೆ “ಸ್ವಾಮೀಜಿ, ನೀವು ಎಷ್ಟು ಹಾಸ್ಯಪ್ರಿಯರು, ನೀವು ಧಾರ್ಮಿಕ ವ್ಯಕ್ತಿಯೇ ಅಲ್ಲ” ಎಂದು ಹೇಳಿದರು. ಆಗ ಗಂಭೀರವಾಗಿ ಸ್ವಾಮೀಜಿ ಹೇಳಿದರು, “I am religion!” (“ನಾನೇ ಧರ್ಮ!”) ಎಂದು.

(ಮೂಲ: ವಿವೇಕಪ್ರಭ ಜನವರಿ 2003)