ಪೂರ್ಣ ವ್ಯಕ್ತಿ

ಸ್ವಾಮಿ ವಿವೇಕಾನಂದರು ಒಬ್ಬ ಪೂರ್ಣ ವ್ಯಕ್ತಿ. ಅವರಲ್ಲಿ ಬಾಲಕನ ಸರಳತೆಯಿತ್ತು, ಯೌವನದ ಉತ್ಸಾಹವಿತ್ತು, ವಾರ್ಧಕ್ಯದ ತುಂಬು ಅನುಭವವಿತ್ತು. ತಾಯಿಯ ಮೃದುಹೃದಯ, ಯೋಧನ ಯೋದ್ಧತ್ವ ಅವರಲ್ಲಿ ಒಂದುಗೂಡಿದ್ದವು. ಅವರಲ್ಲಿ  ಅಪಾರ ಪಾಂಡಿತ್ಯದ ಜೊತೆಗೆ ವಿಶಾಲ ಮನೋಭಾವವಿತ್ತು. ಅವರ ಪ್ರಚಂಡ ವಾಗ್ಮಿತ್ವದ ಹಿಂದೆ ಅಖಂಡ ದಿವ್ಯಶಕ್ತಿಯಿತ್ತು. ಪ್ರಪಂಚದ ಎಲ್ಲ ಜ್ಞಾನಗಳ ಸುರಸಂಗಮವಾಗಿದ್ದರವರು. ಸಾಹಿತಿಯ ಸಾಹಿತ್ಯಕ ಪ್ರತಿಭೆ, ಕಲೆಗಾರನ ಕಲಾನೈಪುಣ್ಯ, ಸಂಗೀತದಲ್ಲಿ ಆಳ ಪ್ರಾವೀಣ್ಯ, ತತ್ತ್ವಜ್ಞಾನಿಯ ತೀಕ್ಷ್ಣ ವಿಚಾರಬುದ್ಧಿ, ಸಂತನ ದಿವ್ಯದೃಷ್ಟಿ ಇವೆಲ್ಲವೂ ಏಕತ್ರ ಕಲೆತ ವ್ಯಕ್ತಿಯಾಗಿದ್ದರು ಅವರು. ದೇಶಪ್ರೇಮ, ಮಾನವ ಪ್ರೇಮ ಮತ್ತು ಭಗವತ್ ಪ್ರೇಮಗಳು ಅವರಲ್ಲಿ ಸಾಮರಸ್ಯದಿಂದ ಕೂಡಿದ್ದವು. ಪುರಾತನ ಮತ್ತು ಆಧುನಿಕ, ಪ್ರಾಚ್ಯ ಮತ್ತು ಪಾಶ್ಚಾತ್ಯ ಭಾವಪ್ರವಾಹಗಳ ಸಂಗಮಸ್ಥಾನವಾಗಿದ್ದರವರು. ಅವರಲ್ಲಿ ಧರ್ಮ ಮತ್ತು ವಿಜ್ಞಾನಗಳು ಪರಸ್ಪರ ಕೈಕುಲಕುತ್ತವೆ. ಅವರು ಆಧ್ಯಾತ್ಮಿಕ ವ್ಯಾಕುಲತೆ ಮತ್ತು ಸಾಮಾಜಿಕ ಕಳಕಳಿ ಇವೆರಡರ ಸುಂದರ ಮಿಲನವಾಗಿದ್ದರು. ಅವರು ಇಹಲೋಕದವರೂ ಆಗಿದ್ದರು, ಲೋಕಾತೀತರೂ ಆಗಿದ್ದರು. ಅವರ ದಿವ್ಯಪ್ರಭಾಮಂಡಿತ ವದನ, ಜ್ಞಾನ  ಪ್ರಕಾಶದಿಂದ ಪ್ರಜ್ವಲಿಸುವ ಕಣ್ಣುಗಳು, ರಾಜಗಾಂಭೀರ್ಯದ ನಡೆನುಡಿ, ಮಾನವಾನುಕಂಪದಿಂದ ಮಿಡಿಯುವ ಹೃದಯ, ಹೊಸ ಹೊಸ ಭಾವನೆಗಳ ಮಿಂಚಿನೊಂದಿಗೆ ಭೋರ್ಗರೆದು ಸುರಿಯುವ ವಿಚಾರ ವರ್ಷ ಮತ್ತು ಯಾವ ಪ್ರತಿರೋಧಕ್ಕೂ ಜಗ್ಗದ ಅಪ್ರತಿಮ ಇಚ್ಚಾ ಶಕ್ತಿ ಯಾವ ವ್ಯಕ್ತಿಯನ್ನು ತಾನೇ ಆಕರ್ಷಿಸದಿರದು!

ಯುವಕರ ಆದರ್ಶ

ಅವರ ಪ್ರಭಾವ ಅಪ್ರತಿಭವಾದುದು-ಶತ್ರು ಮಿತ್ರರಾರನ್ನೂ ಅದು ಬಿಡುವುದಿಲ್ಲ, ಹಿರಿಯ ಕಿರಿಯರೆಂಬ, ನರನಾರಿಯರೆಂಬ ಭೇದ ಅದಕ್ಕಿಲ್ಲ, ಸ್ವದೇಶೀ ವಿದೇಶೀಯರೆಂಬ ಅಂತರ ಅದಕ್ಕಿಲ್ಲ. ಅಸ್ಥಿಪಂಜರದಲ್ಲಿಯೂ ಜೀವಶಕ್ತಿಯನ್ನು ಅದು ತುಂಬುತ್ತದೆ, ಮಲಗಿ ನಿದ್ರಿಸುವವರನ್ನು ಬಡಿದೆಬ್ಬಿಸುತ್ತದೆ, ಖಿನ್ನ ಮನಸ್ಕರನ್ನು ಮುನ್ನುಗ್ಗುವಂತೆ ಮಾಡುತ್ತದೆ, ಜನರಲ್ಲಿ ರಾಷ್ಟ್ರಪ್ರಜ್ಞೆಯನ್ನೂ ಯುವಕರಲ್ಲಿ ವೀರ್ಯೊತ್ಸಾಹವನ್ನೂ ಕೆರಳಿಸುತ್ತದೆ, ಸಾಧಕರಲ್ಲಿ ಅಧ್ಯಾತ್ಮ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ, ಎಲ್ಲರಲ್ಲಿ ಅಂತರ್ನಿಹಿತವಾಗಿರುವ ಸತ್ವ, ಶಕ್ತಿ ಸಾಮರ್ಥ್ಯ, ಪ್ರತಿಭೆಗಳು ಹೊರ ಹೊಮ್ಮುವಂತೆ ಮಾಡುತ್ತದೆ. ಇಂಥ ಬಹುಮುಖ ವ್ಯಕ್ತಿತ್ವದ ಸ್ವಾಮಿ ವಿವೇಕಾನಂದರನ್ನು ಯಾರೇ ಆಗಲಿ ಮೆಚ್ಚದಿರುವುದು ಅಸಾಧ್ಯ- ವಿಶೇಷವಾಗಿ ಯುವಕರಿಗೆ ಅವರು ಪ್ರಧಾನ ಆಕರ್ಷಣ ಕೇಂದ್ರವಾಗಿದ್ದಾರೆ.

ಸ್ವಾಮಿ ವಿವೇಕಾನಂದರನ್ನು ಯುವಜನರ ಆದರ್ಶವೆಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣವೇನು? ಅವರು ತಮ್ಮ ಯೌವನದ ಪರಮಾವಸ್ಥೆಯಲ್ಲಿಯೆ ತಮ್ಮ ಅದ್ಭುತ ಕಾರ್ಯಗಳನ್ನು ಮುಗಿಸಿ ದೇಹತ್ಯಾಗ ಮಾಡಿದರೆಂದೇ? ಆ ರೀತಿ ದೇಹತ್ಯಾಗ ಮಾಡಿದ ಅನೇಕ ಮಹಾಪುರುಷರಿರುವರು. ಶಂಕರಾಚಾರ್ಯ, ಏಸುಕ್ರಿಸ್ತ, ಜ್ಞಾನದೇವ ಇನ್ನೂ ಮುಂತಾದ ಅನೇಕರು ತಮ್ಮ ಯೌವನಾವಸ್ಥೆಯಲ್ಲಿಯೇ ಅಭೂತಪೂರ್ವವಾದ ಕಾರ್ಯಗಳನ್ನೆಸಗಿ ಜಗತ್ತಿನಿಂದ ಕಣ್ಮರೆಯಾದರು. ಆದರೆ ಅವರಾರನ್ನೂ ಯುವಕರ ಆದರ್ಶವೆಂದು ನಾವು ಪರಿಗಣಿಸುವುದಿಲ್ಲ. ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶದಲ್ಲಿ ವಿಶೇಷವಾಗಿ ಯುವಕರಿಗೆ ಅನ್ವಯವಾಗುವ ಕೆಲವು ಅಂಶಗಳಿವೆ.

ಆಧುನಿಕ ಯುಗದಲ್ಲಿ ಯುವಕರು

ಆಧುನಿಕ ಯುಗವನ್ನು ಯುವಕರ ಯುಗವೆಂದು ಪರಿಗಣಿಸಬಹುದು. ಹಿಂದೆಂದಿಗಿಂತಲೂ ಯುವಕರು ಈಗ ಸಾಮಾಜಿಕ ಆಗುಹೋಗುಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಹಿಂದೆ ಯುವಕರು ಹೆಚ್ಚಾಗಿ ಹಿರಿಯರ ಅಧೀನಕ್ಕೆ ಒಳಪಟ್ಟಿದ್ದರು. ಸಮಾಜವನ್ನು ರೂಪಿಸುವುದರಲ್ಲಿ ಅವರ ಪಾತ್ರ ಕಿರಿದಾಗಿಯೇ ಇತ್ತು. ಆದರೆ ಈಗ  ಯುವಶಕ್ತಿ ಎಲ್ಲೆಲ್ಲಿಯೂ ಜಾಗೃತವಾಗುತ್ತಿದ್ದು ದೇಶದ ಪ್ರಗತಿಯಲ್ಲಿ ಯುವಕರು ವಿಶೇಷ ಪಾತ್ರವನ್ನು ವಹಿಸುತ್ತಿರುವುದು ಕಂಡುಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಚೀನಾ ದೇಶದಲ್ಲಿ ಯುವಕರು ಅತ್ಯುತ್ಸಾಹದಿಂದ ಕಾರ್ಯೋನ್ಮುಖರಾಗಿ ಆ ದೇಶದ ಆರ್ಥಿಕ ಪ್ರಗತಿಗೆ ಕಾರಣರಾಗುತ್ತಿರುವುದು ಕಂಡುಬರುತ್ತಿದೆ. ಅಕ್ಟೋಬರ್, ೨೦೦೦ದ ರೀಡರ್ಸ್ ಡೈಜಸ್ಟ್‌ನಲ್ಲಿ ಪ್ರಕಟವಾದ (ಪು.೫೦) ಒಂದು ಲೇಖನದ ಪ್ರಕಾರ ಇತ್ತೀಚೆಗೆ  ರಷ್ಯಾದ ವಸಾಹತುವಿನಿಂದ ಬಿಡುಗಡೆಯಾದ ಬಾಲ್ಕನ್ ದೇಶ ಇಸ್ಟೋನಿಯಾ ತ್ವರಿತಗತಿಯಲ್ಲಿ ಪ್ರಗತಿಯನ್ನು ಸಾಧಿಸುತ್ತಿರುವುದಕ್ಕೆ ಅಲ್ಲಿನ ಯುವಕರೇ ಕಾರಣರಂತೆ. ಉಳಿದ ಬಾಲ್ಕನ್ ದೇಶಗಳೂ ಇದೇ ಮಾದರಿಯನ್ನು ಅನುಸರಿಸಲು ಪ್ರಯತ್ನಿಸುತ್ತಿವೆಯಂತೆ.

ಭಾರತದಲ್ಲಿಯೂ ಯುವಶಕ್ತಿಯ ಜಾಗರಣವಾಗುತ್ತಿದೆ. ಬೇರೆ  ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಯುವಕರ ಸಂಖ್ಯೆ ಅಧಿಕವೆಂದು ಹೇಳುತ್ತಾರೆ. ಯಾವುದೇ ಕ್ಷೇತ್ರದಲ್ಲಾದರೂ ಹೊಸ ಕ್ರಾಂತಿ ಪ್ರಾರಂಭವಾಗುವುದು ಯುವಕರಿಂದಲೇ, ಅಸ್ತಿತ್ವದಲ್ಲಿರುವ ಹಳೆಯ ಪದ್ಧತಿಗಳನ್ನೂ ಜೀವನ ವಿಧಾನಗಳನ್ನೂ ವಿರೋಧಿಸಿ ಹೋರಾಡುವ ಮನೋಭಾವವೇ ಯುವಕರ ಪ್ರಧಾನ ಲಕ್ಷಣ ಎಂದು ಹೇಳಬಹುದು. ಪಟ್ಟಭದ್ರ ಹಿತಾಸಕ್ತಿಗಳಿಂದ ಪ್ರೇರಿತವಾದ ಎಲ್ಲ ಸಾಮಾಜಿಕ ಸಂಸ್ಥೆಗಳ ಆದರ್ಶಗಳನ್ನು ಪ್ರಶ್ನಿಸುವ ಪ್ರವೃತ್ತಿ-ಅದು ಹಿರಿಯರಲ್ಲಿರಲಿ, ಕಿರಿಯರಲ್ಲಿರಲಿ-ಯೌವನದ ಲಕ್ಷಣ ಎಲ್ಲರ ಗಮನವನ್ನೂ ಸೆಳೆದ ಅಸಾಮಾನ್ಯ ಸಾಮರ್ಥ್ಯದ ಚಿರಜಾಗ್ರತವಾದ ಈ ಯುವಶಕ್ತಿಯನ್ನು ರಚನಾತ್ಮಕವಾಗಿ ಹರಿಸಲು ಯುವಕರು ಮೆಚ್ಚಬಹುದಾದ ಆದರ್ಶವನ್ನು ಅವರ ಮುಂದಿಡಬೇಕಾಗುತ್ತದೆ. ಅಂತಹ ಆದರ್ಶ ಸ್ವಾಮಿ ವಿವೇಕಾನಂದರಲ್ಲಿ ನಮಗೆ ದೊರೆಯುತ್ತದೆ.

ಹೊಸತನದ ಬಯಕೆ

ಹಳೆಯದನ್ನು ಪ್ರಶ್ನಿಸುವ ಒಂದು ಮುಖ್ಯ ಗುಣವನ್ನು ನಾವು ವಿವೇಕಾನಂದರಲ್ಲಿ ಕಾಣುತ್ತೇವೆ. ಅವರು ತಮ್ಮ ತೀಕ್ಷ್ಣ ಬುದ್ಧಿಶಕ್ತಿಯ ಸಹಾಯದಿಂದ ಹಳೆಯ ಸಂಪ್ರದಾಯಗಳನ್ನೆಲ್ಲ ಪರೀಕ್ಷಿಸಿದರು, ಅವುಗಳಲ್ಲಿರುವ ದುರ್ಬಲ ಅಂಶಗಳನ್ನೆಲ್ಲ ಎತ್ತಿ ತೋರಿಸಿದರು, ಎಲ್ಲ ಬಗೆಯ ಮೂಢನಂಬಿಕೆಗಳನ್ನೂ ನಿರ್ದಾಕ್ಷಿಣ್ಯವಾಗಿ ಖಂಡಿಸಿದರು. ಆಧುನಿಕ ಕಾಲಕ್ಕೆ ಅನ್ವಯವಾಗುವ ಹೊಸ ಸಮಾಜ ನಿರ್ಮಾಣಕ್ಕಾಗಿ ಅವರು ಕರೆಕೊಟ್ಟರು. ಅಪ್ರಸ್ತುತವಾದ ಅನಾರೋಗ್ಯಕರವಾದ ಎಲ್ಲ ಅಂಶಗಳಿಂದ ಮುಕ್ತವಾದ ಹಳೆಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಪ್ರದಾಯದ ಮೇಲೆ ವಿಚಾರ ಪೂರ್ಣವಾದ, ವೈಜ್ಞಾನಿಕವಾದ ಹೊಸ ಸಾಮಾಜಿಕ ಪದ್ಧತಿ ನಿರ್ಮಾಣವಾಗಬೇಕು. ಅವರು ಹೇಳುತ್ತಾರೆ : ‘ಹಳೆಯ ಸಂಪ್ರದಾಯದಲ್ಲಿ ಸಾವಿರಾರು ಹೊಸ ನಿರ್ಮಾಣಕ್ಕೆ ಸಾಕಾಗುವಷ್ಟು ಜೀವ ಶಕ್ತಿ ಇದೆ… ಹೊಸ ಪದ್ಧತಿಯು ಹಳೆಯದರ ವಿಕಾಸವಾಗಿರಬೇಕು.’ ಆಧುನಿಕ ಕಾಲಕ್ಕೆ ಅನ್ವಯವಾಗುವ ಒಂದು ಹೊಸ ಸ್ಮೃತಿಯನ್ನು ಬರೆಯಬೇಕೆಂದು ಅವರು ಕರೆಕೊಟ್ಟರು. ಹೊಸತನದಿಂದ ಪ್ರಸ್ಫುರಿಸುವ ಉಷಃಕಾಲದ ಸುಂದರ ಕುಸುಮದಂತೆ ನವ ಭಾರತವು ಅರಳಬೇಕೆಂದು ಅವರು ಬಯಸಿದರು.

ಈ ಹೊಸತನದ ಬಯಕೆ ಯುವಕರಲ್ಲಿ ಕಂಡುಬರುವ ಬಹು ಮುಖ್ಯ ಲಕ್ಷಣ. ಆದರೆ ಈ ಹೊಸತನದ ಬಯಕೆ ಹಳೆಯದನ್ನೆಲ್ಲ ತಿರಸ್ಕರಿಸುವ, ಲೇವಡಿ ಮಾಡುವ ಪ್ರವೃತ್ತಿಯಾಗಿ ಉಳಿಯಬಾರದು. ಹಳೆಯದನ್ನು ಹೊಸದಾಗಿ ಮಾರ್ಪಡಿಸುವ ರಚನಾತ್ಮಕ ಶಕ್ತಿಯಾಗಿ ಅಭಿವ್ಯಕ್ತವಾಗಬೇಕು. ಪಾಶ್ಚಾತ್ಯ  ಸಂಸ್ಕೃತಿಯು ಹಿಂದಿನ ಗ್ರೀಕ್ ಸಂಸ್ಕೃತಿಯ ಆಧಾರದ ಮೇಲೆಯೇ ನಿರ್ಮಿತವಾಗಿರುವುದು. ಹಳೆಯ ಕನ್‌ಫ್ಯೂಸಿಯಸ್‌ ಧರ್ಮಸಂಹಿತೆಯು ಚೀನಾ ಮತ್ತು ಜಪಾನ್ ದೇಶಗಳ ಅಭೂತಪೂರ್ವ ಆರ್ಥಿಕ ಪ್ರಗತಿಯ ಹಿಂದೆ ಕೆಲಸ ಮಾಡುತ್ತಿದೆ ಎಂದು ಪರಿಣತರು ಅಭಿಪ್ರಾಯ ಪಡುತ್ತಾರೆ. ಹಾಗೆಯೇ ನಮ್ಮ ದೇಶದ ಪ್ರಗತಿಯೂ ಹಳೆಯದನ್ನು  ಆಧರಿಸಿರಬೇಕು. ಹಳೆಯದರ ಆಧಾರದ ಮೇಲೆ ಹೊಸದನ್ನು ನಿರ್ಮಿಸಬೇಕೆನ್ನುವ ಸ್ವಾಮಿ ವಿವೇಕಾನಂದರ ಆದರ್ಶ ಯುವಕರ ಹೊಸತನ್ನು ಬಯಸುವ ಪ್ರವೃತ್ತಿಗೆ ಒಂದು ಸೃಜನಾತ್ಮಕ ತಳಹದಿಯನ್ನು ನೀಡುತ್ತದೆ.

ಆಶಾವಾದ

ಯುವಕರ ಇನ್ನೊಂದು ಮುಖ್ಯ ಲಕ್ಷಣ ಆಶಾವಾದ. ಅವರು ಭವ್ಯ ಭವಿಷ್ಯದ ಕಲ್ಪನೆಯನ್ನಿಟ್ಟುಕೊಂಡು ಅದನ್ನು ಸಾಧಿಸಲು ಹೋರಾಡುತ್ತಾರೆ. ಆದರೆ ಈ ಆಶಾವಾದವು ವಾಸ್ತವತೆಯಿಂದ ದೂರವಾಗಿರಕೂಡದು.ಅಸಂಭವದ ಬೆನ್ನುಹತ್ತಿ ಹೋಗುವ ಹುಚ್ಚು ಸಾಹಸವಾಗಿರಬಾರದು. ಆದ್ದರಿಂದ ಆಶಾವಾದವು ವಿವೇಕಪೂರ್ಣವಾಗಿರಬೇಕು. ಇಲ್ಲಿ ಯೌವನದ ಉತ್ಸಾಹದ ಹೊಳೆಯು ವಿವೇಕವೆಂಬ ಕಾಲುವೆಯ ಮೂಲಕ ಹರಿಯಬೇಕು. ಸ್ವಾಮಿ ವಿವೇಕಾನಂದರಿಂದ ಯುವಕರು ಈ ವಿವೇಕವನ್ನು ಕಲಿಯಬೇಕು. ಅವರು ಅದ್ಭುತ ಆಶಾವಾದಿಗಳಾಗಿದ್ದರು. ಉಜ್ಜ್ವಲ ಭವಿಷ್ಯ ಭಾರತದ ಸ್ಪಷ್ಟ ಕಲ್ಪನೆ ಅವರಿಗಿತ್ತು. ಮುಂದೆ ಸತ್ಯಯುಗವು ಬರುವುದೆಂಬ ಆಶಾವಾದವನ್ನೂ ಅವರು ಇಟ್ಟುಕೊಂಡಿದ್ದರು. ಆದರೆ ಈ ಭೂಮಿ ಸ್ವರ್ಗವಾಗುವುದಿಲ್ಲವೆಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು. ಅವರು ಹೇಳುತ್ತಾರೆ : ‘ವೇದಾಂತ ತತ್ತ್ವವು ಆಶಾವಾದವೂ ಅಲ್ಲ, ನಿರಾಶಾವಾದವೂ ಅಲ್ಲ, ಉಭಯ ದೃಷ್ಟಿಗಳನ್ನೂ ಅದು ವ್ಯಕ್ತಗೊಳಿಸುವುದು. ಇರುವುದನ್ನು ಇರುವಂತೆ ಸ್ವೀಕರಿಸುವುದು, ಈ ಪ್ರಪಂಚ ಒಳಿತು ಕೆಡುಕುಗಳ, ಸುಖದುಃಖಗಳ ಮಿಶ್ರಣ, ಬರಿಯ ಒಳ್ಳೆಯ ಅಥವಾ ಕೆಟ್ಟ ಪ್ರಪಂಚ ಎಂದಿಗೂ ಇರಲಾರದು’ (ಕೃತಿಶ್ರೇಣಿ ೨೩೮). ಇದು ವಿವೇಕಾನಂದರ ತುಂಬು ಅನುಭವದ ನುಡಿ. ಆದ್ದರಿಂದ ಆಶಾವಾದದ ಜೊತೆ ಅನುಭವಾತ್ಮಕ ವಿವೇಕವೂ ಬೆರೆತಿದ್ದರೆ ಅದು ವಾಸ್ತವತೆಯಿಂದ ದೂರವಾಗುವುದಿಲ್ಲ.

ಆಶಾವಾದವು ಯುವಕರನ್ನು ಎಲ್ಲ ಅವಕಾಶಗಳನ್ನು ಉಪಯೋಗಿಸಿಕೊಂಡು, ಸೋಲನ್ನು ಲೆಕ್ಕಿಸದೆ ಪ್ರಗತಿಸಾಧನೆಗೆ ಹೋರಾಡಲು ಪ್ರಚೋದನೆಯನ್ನು ನೀಡಬೇಕು ಎಂದಿಗೂ ನಿರಾಸೆಯಿಂದ ಕುಗ್ಗಬಾರದು. ಸ್ವಾಮಿ ವಿವೇಕಾನಂದರ ಶಕ್ತಿಯ ಸಂದೇಶ ಯುವಕರಲ್ಲಿ ಈ ಕೆಚ್ಚನ್ನು ಮೂಡಿಸಲು ಸಹಾಯಕವಾಗುತ್ತದೆ. ಆಂಗ್ಲ ಭಾಷೆಯಲ್ಲಿ ಒಂದು ಹೇಳಿಕೆಯಿದೆ : ‘ಆಶಾವಾದಿಯು ಎಲ್ಲ ಅನಾಹುತದಲ್ಲಿಯೂ ಒಂದು ಸದವಕಾಶವನ್ನು ನೋಡುತ್ತಾನೆ, ನಿರಾಶಾವಾದಿಯು  ಎಲ್ಲ ಅವಕಾಶದಲ್ಲಿಯೂ ಒಂದು ಅನಾಹುತವನ್ನು ನೋಡುತ್ತಾನೆ.’ (An optimist sees an opportunity in every calamity: a pessimist sees a Calamity in every opportunity.)

ಸ್ವಾತಂತ್ರ ಪ್ರವೃತ್ತಿ

ಯುವಕರು ಸ್ವಾಮಿ ವಿವೇಕಾನಂದರಿಂದ ಸ್ವೀಕರಿಸಬೇಕಾದ ಇನ್ನೊಂದು ಮುಖ್ಯ ಆದರ್ಶವೆಂದರೆ ಸ್ವಾವಲಂಬನೆ ಮತ್ತು ಸ್ವತಂತ್ರ ಮನೋಭಾವ ಸ್ವಾತಂತ್ರ್ಯವೇ ಬೆಳವಣಿಗೆಯ ಮೂಲಭೂತ ಅವಶ್ಯಕತೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಬೆಳವಣಿಗೆ ಯಾವಾಗಲೂ ಅಂತರಂಗದಿಂದ ಬಹಿರ್ಮುಖ ಪ್ರಗತಿ-ಬೀಜವು ಮೊಳೆತು ಗಿಡವಾಗಿ ಮರವಾಗಿ ಬೆಳೆಯುವಂತೆ, ಬಾಹ್ಯ ಪರಿಕರಗಳನ್ನು ಉಪಯೋಗಿಸಿಕೊಂಡು ವ್ಯಕ್ತಿಯು ತನ್ನದೇ ಬೆಳವಣಿಗೆಯ ನಿಯಮಕ್ಕೆ ಅನುಗುಣವಾಗಿ ಬೆಳೆಯುತ್ತಾನೆ. ಬಾಹ್ಯ ಒತ್ತಡಗಳಿಗೆ ಅವನು ಬಲಿಯಾದರೆ ತನ್ನತನಕ್ಕೆ ಅನುಗುಣವಾಗಿ ಅವನು ಬೆಳೆಯಲಾರ-ಇತರರು ಬಯಸಿದಂತೆ ಅವನು ಆಗುತ್ತಾನೆ ಇತರರು ರಾಜಕಾರಿಣಿಯಾಗಬೇಕೆಂದರೆ ರಾಜಕಾರಿಣಿಯಾಗುತ್ತಾನೆ, ವ್ಯಾಪಾರಿಯಾಗಬೇಕೆಂದರೆ ವ್ಯಾಪಾರಿಯಾಗುತ್ತಾನೆ. ತಾನೇನಾಗಬೇಕು ಎಂದು ಸ್ವತಂತ್ರವಾಗಿ ಆಲೋಚಿಸಿ ನಿರ್ಣಯಕ್ಕೆ ಬರಲಾರದಷ್ಟು ಅವನು ಬಾಹ್ಯ ಪರಿಸರಕ್ಕೆ ದಾಸನಾಗಿಬಿಡುತ್ತಾನೆ. ಇದರ ಪರಿಣಾಮವಾಗಿ ಭಾರತವು ನೂರಾರು ವರ್ಷಗಳ ದಾಸ್ಯವನ್ನು ಅನುಭವಿಸಬೇಕಾಯಿತು. ಸ್ವಾಮೀಜಿ ಹೇಳುತ್ತಾರೆ : “ನೀವು ಮಕ್ಕಳಿಗೆ ಶಿಕ್ಷಣವನ್ನುನೀಡುವಾಗ ಈ ಅಂಶವನ್ನು ಗಮನದಲ್ಲಿಡಬೇಕು – ಅವರು ಸ್ವತಂತ್ರವಾಗಿ ಆಲೋಚಿಸಲು ಪ್ರೋತ್ಸಾಹ ನೀಡಬೇಕು. ಸ್ವತಂತ್ರ ಆಲೋಚನೆಯ ಅಭಾವವೇ ಇಂದಿನ ಭಾರತದ ಅವನತಿಯ ಮೂಲ ಕಾರಣ’

ಸ್ವಾವಲಂಬನೆ ಮತ್ತು ಸ್ವಾತಂತ್ರ್ಯ ಪ್ರವೃತ್ತಿ ಆತ್ಮಶ್ರದ್ದೆಯ ಪ್ರತಿಫಲಗಳು, ತನ್ನ ಒಳ್ಳೆಯತನದಲ್ಲಿ ತನ್ನ ಶಕ್ತಿ ಸಾಮರ್ಥ್ಯಗಳಲ್ಲಿ ಇರುವ ದೃಢ ವಿಶ್ವಾಸವನ್ನೇ ಆತ್ಮಶ್ರದ್ದೆ ಎಂದು ಕರೆಯುವುದು. ಇಂತಹ ಆತ್ಮಶ್ರದ್ದೆ ಇಲ್ಲದವನು ಸ್ವಾಭಾವಿಕವಾಗಿಯೇ ಪರಾವಲಂಬಿಯಾಗಿರುತ್ತಾನೆ. ತನ್ನ ಶಕ್ತಿ ಸಾಮರ್ಥ್ಯಗಳಲ್ಲಿ ಶ್ರದ್ದೆಯುಳ್ಳವನು ಜಗತ್ತಿನಲ್ಲಿ ಮಹತ್ತರವಾದುದನ್ನು ಸಾಧಿಸುತ್ತಾನೆ. ತನ್ನ ಒಳ್ಳೆಯತನ ಮತ್ತು ಪರಿಪೂರ್ಣತೆಯಲ್ಲಿ ಶ್ರದ್ಧೆಯುಳ್ಳವನು ನೈತಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಬೆಳೆಯುತ್ತಾನೆ. ಇಂತಹ ಆತ್ಮ ವಿಶ್ವಾಸವುಳ್ಳವನು ಸ್ವಾಭಾವಿಕವಾಗಿಯೇ ಕೆಟ್ಟ ಹಾದಿಯನ್ನು ಹಿಡಿಯಲಾರ. ಆದ್ದರಿಂದಲೇ ಸ್ವಾಮೀಜಿ ಹೇಳುತಾರೆ : ‘ಆತ್ಮಶ್ರದ್ದೆಯ ಆದರ್ಶ ನಮಗೆ ಬಹಳ ಸಹಕಾರಿ. ನಮ್ಮಲ್ಲಿ ನಮಗೆ ನಂಬಿಕೆಯನ್ನು ಹೆಚ್ಚು ಬೋಧಿಸಿದ್ದಿದ್ದರೆ, ಅದನ್ನು ಅನುಷ್ಠಾನಕ್ಕೆ ತಂದಿದ್ದರೆ, ನಮ್ಮಲ್ಲಿರುವ ಅನೇಕ ದೋಷಗಳು ಮತ್ತು ದುಃಖದ ಬಹುಭಾಗ ಮಾಯವಾಗುತ್ತಿದ್ದವು ಎಂಬುದರಲ್ಲಿ ಸಂದೇಹವೇ ಇಲ್ಲ.’ (ವ್ಯಕ್ತಿತ್ವ ನಿರ್ಮಾಣ, ಪು.೬೮)

ಯುವಶಕ್ತಿಯ ನಿಯಂತ್ರಣ

ಯುವಕರಲ್ಲಿ ಅಸಾಧ್ಯ ಶಕ್ತಿಯಿರುತ್ತದೆ. ಆದರೆ ಈ ಶಕ್ತಿಯನ್ನು ಪಳಗಿಸುವುದು ಅಗತ್ಯ. ಪರಮಾಣುವಿನಲ್ಲಿ ಇರುವ ಶಕ್ತಿ ಅಪಾರವಾದುದು. ಅದನ್ನು ನಿಯಂತ್ರಣದಲ್ಲಿರಿಸಿ ಉತ್ತಮ ರೀತಿಯಲ್ಲಿ ಅದನ್ನು ಬಳಸಿಕೊಳ್ಳಬಹುದು. ಹಾಗೆಯೇ ಅದನ್ನು ವಿನಾಶಕರ ಶಕ್ತಿಯಾಗಿಯೂ ಬಳಸಬಹುದು. ಇದೇ ರೀತಿ ಸ್ಫೋಟಕ ಯುವಶಕ್ತಿಯನ್ನೂ ರಚನಾತ್ಮಕ ರೀತಿಯಲ್ಲಿ ಬಳಸಿಕೊಳ್ಳಬಹುದು. ಇಲ್ಲದಿದ್ದರೆ ಅದು ಸಮಾಜ ಮತ್ತು ವ್ಯಕ್ತಿಗೆ ಹಾನಿಕಾರಕವಾಗುತ್ತದೆ. ವಿದ್ಯುಚ್ಛಕ್ತಿ ಮನೆಯನ್ನು ಬೆಳಗಲೂ ಬಲ್ಲದು, ಸುಟ್ಟುಹಾಕಲೂ ಬಲ್ಲದು. ಹಾಗೆಯೇ ಯುವಶಕ್ತಿ ವ್ಯಕ್ತಿತ್ವವನ್ನು ಬೆಳಗಲೂ ಬಲ್ಲದು ವಿನಾಶಮಾಡಲೂ ಬಲದು, ಅದು ಬೆಳಗಬೇಕಾದರೆ ಅದನ್ನು ನಮ್ಮ ನಿಯಂತ್ರಣದಲ್ಲಿರಿಸಬೇಕು. ಇದಕ್ಕೆ ತರಬೇತಿ ಆವಶ್ಯಕ.

ಇಂತಹ ತರಬೇತಿ ಶಿಕ್ಷಣದಿಂದ ದೊರೆಯಬೇಕು. ಆದರೆ ಶಿಕ್ಷಣವು ಕೇವಲ ಜ್ಞಾನಾರ್ಜನೆ ಮಾತ್ರವಾದರೆ, ಬುದ್ಧಿಶಕ್ತಿಯನ್ನು ವೃದ್ಧಿಸುವುದು ಮಾತ್ರವಾಗಿದ್ದರೆ, ಆಗಲೇ ಇರುವ ಅಪಕ್ವ ಯುವಶಕ್ತಿಗೆ ಒಂದು ಮಾರಕ ಆಯುಧವನು ನೀಡಿದಂತಾಗುತ್ತದೆ. ಆದ್ದರಿಂದ ಜ್ಞಾನವನ್ನು ನೀಡುವುದರ ಜೊತಗೆ, ಬುದ್ಧಿಯನ್ನು ಬೆಳಸುವುದರ ಜೊತೆಗೆ ಭಾವೋದ್ವೇಗಗಳ ನಿಯಂತ್ರಣವನ್ನೂ ನೈತಿಕ ಪರಿಪೂರ್ಣತೆಯನ್ನೂ ಕಲಿಸಬೇಕು. ಯಶಸ್ವೀ ಜೀವನದಲ್ಲಿ ಬುದ್ಧಿಶಕ್ತಿಯ ಪಾತ್ರ  ಕೇವಲ ಶೇಕಡ ೨೦ ಎಂದು ಮನಶ್ಯಾಸ್ತ್ರಜ್ಞರು ಹೇಳುತ್ತಾರೆ. ಉಳಿದ ೮0 ಅಂಶಗಳಲ್ಲಿ ಭಾವಶಕ್ತಿ (emotion) ಮತ್ತು ಇಚ್ಚಾಶಕ್ತಿಗಳು ಸೇರುತ್ತವೆ. ಸುಸಂಸ್ಕೃತ ಸೌಂದರ್ಯೋಪಾಸನೆಯ ಮೂಲಕ ಭಾವಶಕ್ತಿಯನ್ನೂ ನೈತಿಕ ತರಬೇತಿಯ ಮೂಲಕ ಇಚ್ಚಾಶಕ್ತಿಯನ್ನೂ ಪಳಗಿಸುವುದು ಅತ್ಯಂತ ಆವಶ್ಯಕ. ದೇಹದ ಯಾವುದೊ ಒಂದು ಭಾಗವನ್ನು ಬೆಳಸಿ ಉಳಿದ ಭಾಗವನ್ನು ಕಡೆಗಣಿಸಿದರೆ ಅದೊಂದು ವಿಕೃತರೂಪವಾಗುತ್ತದೆ. ಹಾಗೆಯೇ ಮಾನಸಿಕ ದೇಹದ ಯಾವುದೋ ಒಂದು ಅಂಶವನ್ನು ಮಾತ್ರ ಬೆಳಸಿದರೆ ವ್ಯಕ್ತಿ ವಿಕೃತನಾಗುತ್ತಾನೆ. ಆದ್ದರಿಂದ ಎಲ್ಲ ಮಾನಸಿಕ ಶಕ್ತಿಗಳನ್ನೂ ಸರಿಯಾದ ರೀತಿಯಲ್ಲಿ ಬೆಳೆಸುವ ಸಮಗ್ರರೂಪದ ಶಿಕ್ಷಣವನ್ನು ಇಂದು ಯುವಕರಿಗೆ ನೀಡುವುದು ಅತ್ಯಂತ ಆವಶ್ಯಕ. ಇದಕ್ಕೆ ಸ್ವಾಮಿ ವಿವೇಕಾನಂದರ ಶಿಕ್ಷಣ ನೀತಿಯನ್ನು ಅನುಸರಿಸುವುದು ಅಗತ್ಯ.

ತನ್ನನ್ನು ಗುರುತಿಸುವುದು

ಯೌವನದ ಒಂದು ಮುಖ್ಯ ಲಕ್ಷಣ ಸ್ವಪ್ರಜ್ಞೆ (self-identity) ಯುವಕನು ತನ್ನ ಸುತ್ತಲ ಪರಿಸರದಿಂದ ಬೇರೆಯಾದ ತನ್ನ ಇರುವಿಕೆಯನ್ನು ತೀವ್ರವಾಗಿ ಭಾವಿಸುತ್ತಾನೆ. ಈ ರೀತಿ ಭಾವಿಸುವ ಸಾಮರ್ಥ್ಯ ಯೌವನದ ಒಂದು ಮುಖ್ಯ ಲಕ್ಷಣ. ಈ ರೀತಿ ತನ್ನತನವನ್ನು ಭಾವಿಸಲಾಗದವನಿಗೆ ಇನ್ನೂ ಯೌವನ ಪ್ರಾಪ್ತವಾಗಿಲ್ಲ ಎಂದು ಹೇಳಬೇಕಾಗುತ್ತದೆ. ಅನೇಕ ಹಿರಿಯರೂ ಕೂಡ ಸ್ವಪ್ರಜ್ಞೆಯಿಲ್ಲದ “ಮೀಸೆ ಬಂದ ಶಿಶು’ಗಳಾಗಿಯೇ ಇರುತ್ತಾರೆ. ಯೌವನಾವಸ್ಥೆಯಲ್ಲಿ ಅನೇಕರಲ್ಲಿ ಈ ಭಾವಜಾಗೃತವಾದರೂ ಪರಿಸರದ ಒತ್ತಡದಿಂದಾಗಿ ಅದು ಪುನಃ ಸುಪ್ತವಾಗುತ್ತದೆ.

ಈ ತನ್ನತನದ ಪ್ರಭಾವದಿಂದಲೇ ಯುವಕರು ತಮ್ಮ ಜೀವನದ ಅರ್ಥವೇನು, ಜಗತ್ತಿನ ಅರ್ಥವೇನು, ನಾವು ಯಾವ ಆದರ್ಶವನ್ನು ಅನುಸರಿಸಬೇಕು, ಆತ್ಯಂತಿಕ ಸತ್ಯವೆಂಬುದೇನಾದರೂ ಇರುವುದೇ, ದೇವರಿದ್ದಾನೆಯೆ-ಎಂದು ಮುಂತಾಗಿ ಪ್ರಶ್ನಿಸತೊಡಗುತ್ತಾರೆ. ಇದು ಆಧ್ಯಾತ್ಮಿಕ ಅನ್ವೇಷಣೆಯ ಪ್ರಥಮಾಂಕುರ. ಈ ಸಂದರ್ಭದಲ್ಲಿ ಅವರ ಸಮಸ್ಯೆಗಳಿಗೆ ಸರಿಯಾದ ಉತ್ತರವನ್ನು ನೀಡಿ, ಸ್ಫೂರ್ತಿಯನ್ನು ನೀಡಿ, ಉನ್ನತ ಆದರ್ಶವನ್ನು ಅವರ ಮುಂದಿಟ್ಟು ಅವರಿಗೆ ಮಾರ್ಗದರ್ಶನ ನೀಡುವುದು ಅತ್ಯಂತ ಆವಶ್ಯಕ. ಅನೇಕ ಯುವಕರು ಈ ಸಂದರ್ಭದಲ್ಲಿ ಸರಿಯಾದ ಮಾರ್ಗದರ್ಶನ ಸಿಗದೆ ದಾರಿ ತಪ್ಪುತ್ತಾರೆ. ಅವರಿಗೆ ಈಗ ಹಳೆಯ ಗೊಡ್ಡು ವೇದಾಂತವನ್ನು ಬೋಧಿಸಿದರೆ ಆಗುವುದಿಲ್ಲ. ಅಷ್ಟೇ ಅಲ್ಲದೆ ಕೇವಲ ಬೋಧನೆಯೂ ಸಾಕಾಗುವುದಿಲ್ಲ. ಸ್ಫೂರ್ತಿದಾಯಕ ಜೀವನಾದರ್ಶ ಅವರ ಮುಂದಿರಬೇಕು.

ಸ್ವಾಮಿ ವಿವೇಕಾನಂದರು ಈ ಕೊರತೆಯನ್ನು ತುಂಬಬಲ್ಲರು. ಅವರ ಆಧ್ಯಾತ್ಮಿಕ ಬೋಧನೆ ಆಧುನಿಕವೂ ವೈಜ್ಞಾನಿಕವೂ ಆಗಿದೆ. ಹಾಗೆಯೇ ಅವರ ಜೀವನವೂ ಆ ಬೋಧನೆಗೆ ಅನುಗುಣವಾಗಿಯೇ ಇದೆ. ಅವರು ಯುವಕರಾಗಿದ್ದರು, ಯುವಶಕ್ತಿಯ ಮೂರ್ತಸ್ವರೂಪವಾಗಿದ್ದರು ಮತ್ತು ಅವರ ಬೋಧನೆಯೂ ನವಯೌವನ ಸ್ಫೂರ್ತಿಯಿಂದ ತುಂಬಿ ತುಳುಕುತ್ತಿದೆ. ಯುವಕರು ತಮ್ಮನ್ನು ತಾವು ಪಡೆಯುವ ಪ್ರಕ್ರಿಯೆಯಲ್ಲಿ ವಿವೇಕಾನಂದರ ಜೀವನ ಬೋಧನೆ ಬಹಳಷ್ಟು ಸಹಾಯಕವಾಗತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಅವರನ್ನು ಯುವಕರ ಆದರ್ಶ ಎಂದು ಕರೆಯುವುದು ಅರ್ಥಪೂರ್ಣವಾಗಿದೆ.

ಸಾಮಾಜಿಕ ಸಂಬಂಧ

ಯುವಕರು ತಮ್ಮನ್ನು ತಾವು ಕಂಡುಕೊಳ್ಳುವ, ತಮ್ಮನ್ನು ತಾವು ಪಡೆಯುವುದರ ಜೊತೆಗೆ ಸಮಾಜದಲ್ಲಿ ತಮ್ಮ ಸ್ಥಾನವನ್ನೂ ಕಂಡುಕೊಳ್ಳಬೇಕು, ಸಮಾಜದೊಡನೆ ಒಂದು ಅರ್ಥಪೂರ್ಣ ಸಂಬಂಧವನ್ನು ಹೊಂದಿರಬೇಕು. ಇಂತಹ ಸಂಬಂಧ ಸಾಧ್ಯವಾಗುವುದು ಯುವಕರು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವಂತಾದಾಗ. ಇಲ್ಲದಿದ್ದರೆ ಯುವಕರು ಕೇವಲ ಇಂದ್ರಿಯ ಸುಖಾನ್ವೇಷಣೆಯಲ್ಲಿ ತಮ್ಮನ್ನೂ ತಾವು ಕಳೆದುಕೊಂಡು ಸಮಾಜಕ್ಕೂ ಕಂಟಕರಾಗುತ್ತಾರೆ. ಈ ದೃಷ್ಟಿಯಿಂದಲೇ ಸ್ವಾಮಿ ವಿವೇಕಾನಂದರು ಸೇವೆಯ ಆದರ್ಶವನ್ನು ಎತ್ತಿ ಹಿಡಿದರು. ಯುವಕರು ಇತರರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ತಮ್ಮ ಜೀವನಕ್ಕೆ ಒಂದು ಅರ್ಥವನ್ನು ಕಾಣುತ್ತಾರೆ. ಈ ಮೂಲಕ ಯುವಕರ ಎಷ್ಟೋ ಸಮಸ್ಯೆಗಳೂ ಪರಿಹಾರವಾಗುತ್ತವೆ.

ಸಮಾಜಸೇವೆ ಎಂದರೆ ಆಸ್ಪತ್ರೆಗಳು, ವಿದ್ಯಾಸಂಸ್ಥೆಗಳು ಮುಂತಾದುವನ್ನು ಪ್ರಾರಂಭಿಸಿ ನಡೆಸುವುದು ಮಾತ್ರ ಎಂದಲ್ಲ. ಅದು ಎಲ್ಲರಿಗೂ ಸಾಧ್ಯವಾಗದೇ ಇರಬಹುದು. ನಮ್ಮ ಸುತ್ತಮುತ್ತಲ ಸ್ನೇಹಿತರು, ಬಂಧು ಬಾಂಧವರು, ನೆರೆಹೊರೆಯವರು ಮುಂತಾದವರಿಗೆ ಸೇವೆ ಸಲ್ಲಿಸಬಹುದಾದ ಎಷ್ಟೋ ಅವಕಾಶಗಳಿರುತ್ತವೆ. ಸಾಂತ್ವನದ ನುಡಿಗಳಿಂದಲೇ, ಪ್ರಾಮಾಣಿಕವಾಗಿ ನಮ್ಮ ಕರ್ತವ್ಯ ಪರಿಪಾಲನೆಯ ಮೂಲಕವೇ, ಶುದ್ಧ ನೈತಿಕ ಜೀವನದ ಮೂಲಕವೇ, ನಿಷ್ಠೆಯಿಂದ ಮಾಡಿದ ಆಧ್ಯಾತ್ಮಿಕ ಸಾಧನೆಯ ಮೂಲಕವೇ ಇತರರಿಗೆ ಮತ್ತು ಸಮಾಜಕ್ಕೆ ನಾವು ಅಪಾರ ಸೇವೆ ಸಲ್ಲಿಸುವುದು ಸಾಧ್ಯವಾಗುತ್ತದೆ.

ಹೀಗೆ ತನ್ನನ್ನು ಕಡೆಗಣಿಸದೆ ಸಮಾಜದ ಹಿತವನ್ನು ಮನಸ್ಸಿನಲ್ಲಿಟ್ಟುಕೊಂಡು ಆದರ್ಶ ಜೀವನವನ್ನು ನಡೆಸಲು ಯುವಕರು ಸ್ವಾಮಿ ವಿವೇಕಾನಂದರಿಂದ ಬಹಳಷ್ಟು ಕಲಿಯುವುದಿದೆ. ಸ್ವಾಮೀಜಿಯವರ ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ (ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿ ಮತ್ತು ಜಗತ್ತಿನ ಹಿತ) ಎಂಬ ಆಧುನಿಕ ಮಹಾಮಂತ್ರವು ಯುವಕರಿಗೆ ತಾರಕ ಮಂತ್ರವಾಗಬಲ್ಲದು.

(ಮೂಲ: ವಿವೇಕಪ್ರಭ ಜನವರಿ 2001 – ಯುವಶಕ್ತಿ ವಿಶೇಷಾಂಕ)