ಆಗಾಗ ಅನೇಕಾನೇಕ ವರ್ಷಗಳಿಗೊಮ್ಮೆ ಯಾವುದೋ ಹೊರಲೋಕದ ಜೀವಿ ಈ ಗ್ರಹದ ಮೇಲೆ ಬಂದಿಳಿಯುವನು. ಈ ದುಃಖಾವೃತ ಪ್ರಪಂಚಕ್ಕೆ ಆ ಲೋಕದ ವೈಭವಶಕ್ತಿಯನ್ನೂ ಪ್ರಭೆಯನ್ನೂ ತನ್ನೊಂದಿಗೆ ತರುವನು. ಮನುಷ್ಯನೊಡನಿದ್ದೂ ಇಲ್ಲದಂತಿರುತ್ತಾನೆ. ಅವನೊಬ್ಬ ಯಾತ್ರಿಕ, ಪರ ಊರಿನವನು. ಎಲ್ಲೋ ಒಂದು ರಾತ್ರಿ ಉಳಿಯುತ್ತಾನಷ್ಟೆ.

ಅವನು ಬೇರೆಯವರಂತೆ ಬಾಳುತ್ತಾನೆ, ಇತರರ ಕಷ್ಟ-ಸುಖಗಳಲ್ಲಿ ಪಾಲ್ಗೊಳ್ಳುತ್ತಾನೆ, ಅವರೊಂದಿಗೆ ನಲಿಯುತ್ತಾನೆ, ಆಳುತ್ತಾನೆ. ಆದರೂ ಇದೆಲ್ಲದರ ನಡುವೆಯೂ ತಾನಾರು, ಎಲ್ಲಿಂದ ಬಂದೆ, ಬಂದ ಉದ್ದೇಶವೇನು ಎಂಬುದನ್ನು ಮರೆಯುವುದಿಲ್ಲ. ತನ್ನ ದಿವ್ಯತೆಯನ್ನು ಅವನು ಮರೆಯುವುದೇ ಇಲ್ಲ. ತಾನು ಶ್ರೇಷ್ಠ, ವೈಭವೋಪೇತ ಮಹಾನ್ ಆತ್ಮ ಎಂಬುದನ್ನು ನೆನಪಿಟ್ಟುಕೊಳ್ಳುತ್ತಾನೆ. ಯಾವುದನ್ನು ಸೂರ್ಯ-ಚಂದ್ರರು ಬೆಳಗರೊ, ಜ್ಯೋತಿಗಳೆಲ್ಲದರ ಜ್ಯೋತಿಯಿಂದ ಯಾವುದು ಬೆಳಗಲ್ಪಡುತ್ತಿರುವುದೊ, ಆ ಅತೀಂದ್ರಿಯ ಅವರ್ಣನೀಯ ಲೋಕದಿಂದ ತಾನು ಬಂದಿರುವೆನೆಂದು ಆತನಿಗೆ ಗೊತ್ತು. ತಾನು ಕಾಲಕ್ಕಿಂತ ಹಿಂದೆ ಇದ್ದವನೆಂದು ಅವನಿಗೆ ಗೊತ್ತು.

ಅಂಥ ಒಬ್ಬನನ್ನು ನಾನು ನೋಡಿದೆ, ಕೇಳಿದೆ, ಗೌರವಿಸಿದೆ, ಮತ್ತು ನನ್ನ ಹೃನ್ಮನಗಳನ್ನು ಅವನ ಚರಣಕ್ಕರ್ಪಿಸಿದೆ.

ಅಂಥ ವ್ಯಕ್ತಿ ಎಲ್ಲ ಉಪಮೆಗೂ ಮೀರಿದವರು. ಏಕೆಂದರೆ ಅವರು ಎಲ್ಲ ಸಾಮಾನ್ಯ ಪ್ರಮಾಣಗಳನ್ನೂ ಆದರ್ಶಗಳನ್ನೂ ಮೀರಿರುವರು. ಇತರರು ಪ್ರತಿಭಾವಂತರಿರಬಹುದು, ಆದರೆ ಅವರ ಮನಸ್ಸೇ ಜ್ಯೋತಿರ್ಮಯ. ಏಕೆಂದರೆ ಸರ್ವಜ್ಞಾನಗಳ ಮೂಲವನ್ನು ನೇರವಾಗಿ ಸಂಪರ್ಕಿಸುವ ಸಾಮರ್ಥ್ಯ ಅವರಿಗಿತ್ತು. ಅವರು ಸಾಮಾನ್ಯ ವ್ಯಕ್ತಿಗಳಂತೆ ಮಂದಗತಿಯ ವಿಧಾನಗಳಿಂದ ಸೀಮಿತಗೊಂಡಿರಲಿಲ್ಲ. ಇತರರು ಶ್ರೇಷ್ಠರಿರಬಹುದು, ಅವರ ವರ್ಗದ ಬೇರೆಯವರೊಡನೆ ಹೋಲಿಸಿದಾಗ. ಇತರರ ಒಳ್ಳೆಯತನ, ಶಕ್ತಿ, ಪ್ರತಿಭೆ ಎಲ್ಲ ಹೋಲಿಕೆಯನ್ನವಲಂಬಿಸಿದೆ. ಒಬ್ಬ ಸಂತನು ಸಾಮಾನ್ಯರಿಗೆ ಹೋಲಿಸಿದರೆ ಹೆಚ್ಚು ಪರಿಶುದ್ಧನೂ, ಹೆಚ್ಚು ಸಾಧು ಸ್ವಭಾವದವನೂ ನಿಷ್ಠಾವಂತನೂ ಆಗಿ ಕಾಣುವನು. ಆದರೆ ಸ್ವಾಮಿ ವಿವೇಕಾನಂದರಿಗೆ ಉಪಮಾನವೇ ಇಲ್ಲ, ಅವರು ತಮ್ಮದೇ ಆದ ವರ್ಗಕ್ಕೆ ಸೇರಿದವರು. ಅವರ ಸ್ಥಾನವೇ ಬೇರೆ, ಅವರು ಈ ಪ್ರವಚದವರಾಗಿರಲಿಲ್ಲ. ಒಂದು ನಿರ್ದಿಷ್ಟ ಕಾರ್ಯೋದ್ದೇಶಕ್ಕಾಗಿ ಮೇಲಿನ ಲೋಕದಿಂದ ಇಳಿದುಬಂದ ದಿವ್ಯಪುರುಷ.

ಅಂಥ ಮಹಾಪುರುಷನ ಜನನವಾದಾಗ ಪ್ರಕೃತಿಯೇ ನಲಿಯುವುದರಲ್ಲಿ, ದೇವಗಂಧರ್ವರು ಸ್ತುತಿ ಗೈಯ್ಯುವುದರಲ್ಲಿ ಆಶ್ಚರ್ಯವೇನಿದೆ? ಅಂಥ ಮಹಾಪುರುಷನಿಗೆ ಜನ್ಮವಿತ್ತ ದೇಶ ಧನ್ಯ. ಅದೇ ಕಾಲದಲ್ಲಿ ಈ ಭೂಮಿಯ ಮೇಲೆ ವಾಸಿಸಿದವರೂ ಧನ್ಯರು. ಅತ್ಯಂತ ಧನ್ಯರು, ಅವರ ಪಾದದಡಿಯಲ್ಲಿ ಕುಳಿತವರು.

೧೮೯೪ ಫೆಬ್ರುವರಿ ರಾತ್ರಿ ಡೆಟ್ರಾಯ್ಟ್ ನ ಯೂನಿಟರಿ ಚರ್ಚ್ ನಲ್ಲಿ ಒಲ್ಲದ ಮನಸ್ಸಿನಿಂದ ಉಪನ್ಯಾಸ ಕೇಳಲು ಹೊರಟಾಗ ಅದು ನನ್ನ ಜೀವನದ ಗತಿಯನ್ನೇ ಬದಲಾಯಿಸುವುದು ಮತ್ತು ಹಿಂದಿನ ಯಾವ ಪ್ರಮಾಣದಿಂದಲೂ ಅಳೆಯಲಾಗದ ನನ್ನ ಜೀವನದ ಅತ್ಯಂತ ಮಹತ್ವಪೂರ್ಣ ಘಟನೆಯಾಗುವುದು ಎಂದು ನಾನು ನೆನಸಿಯೇ ಇರಲಿಲ್ಲ. ಉಪನ್ಯಾಸಗಳನ್ನು ಕೇಳುವುದೆಂದರೆ ಅತ್ಯಂತ ಬೇಸರಿಕೆಯದಾಗಿತ್ತು. ನವ್ಯ ಭಾವನೆಗಳನ್ನೋ ಸ್ಫೂರ್ತಿದಾಯಕ ಭಾವನೆಗಳನ್ನೂ ಕೇಳುವುದೆಂದರೆ ಅತಿ ವಿರಳ. ಆ ಚಳಿಗಾಲದಲ್ಲಿ ಡೆಟ್ರಾಯ್ಟಿಗೆ ಬಂದ ಉಪನ್ಯಾಸಕರೆಲ್ಲ ಬೇಸರ ಹುಟ್ಟಿಸುವವರೆ. ಅವರ ಉಪನ್ಯಾಸಗಳನ್ನು ಕೇಳಿ ಬೇಸತ್ತು ಸಾಕಪ್ಪ ಎನಿಸಿತ್ತು. ಆದ್ದರಿಂದ ಭಾರತದಿಂದ ಬಂದ ವಿವೇಕಾನಂದರ ಈ ಭಾಷಣವನ್ನು ಕೇಳಲು ನನ್ನ ಸ್ನೇಹಿತೆ ಮಿಸೆಸ್ ಮೇರಿ ಸಿ. ಫಂಕಿಯ ಒತ್ತಾಯಕ್ಕೆ ಮಣಿದು ಮನಸ್ಸಿಲ್ಲದ ಮನಸ್ಸಿನಿಂದ ಹೋದೆ. ಆಕೆ ಆಶಾವಾದದ ಸ್ವಭಾವದವಳು, ಎಷ್ಟೇ ನಿರಾಸೆಯಾದರೂ ಬಿಡದ ಒಂದಲ್ಲ ಒಂದು ದಿನ ತಾನು ಬಯಸಿದ್ದು ಸಿಗುವುದೆಂದು ನಂಬಿದ್ದಳು. ನಾವು ಈ ಭಾರತೀಯನ ಮಾತು ಕೇಳಲು ಹೋದೆವು. ಖಂಡಿತವಾಗಿಯೂ ಅಸಂಖ್ಯ ಜನ್ಮಗಳಿಂದಲೂ ಇಂಥ ಒಂದು ಅಭೂತಪೂರ್ವ ಹೆಜ್ಜೆಯಿಟ್ಟಿರಲಿಲ್ಲ! ನಾವು ಐದು ನಿಮಿಷ ಕೇಳುವುದೇ ತಡ, ಇಷ್ಟು ಕಾಲವೂ ನಾವರಸುತ್ತಿದ್ದ ಸ್ಪರ್ಶಮಣಿ ನಮಗೆ ಸಿಕ್ಕಿತೆಂದು ದೃಢವಾಯಿತು. ಇದನ್ನು ನಾವು ತಪ್ಪಿಸಿಕೊಂಡಿದ್ದರೆ ಎಂಥ ಅನ್ಯಾಯವಾಗುತ್ತಿತ್ತು ಎಂದು ಉದ್ಗಾರವೆಳೆದೆವು.

ವಿವೇಕಾನಂದರ ಭಾವನೆಗಳು ಎಷ್ಟೊಂದು ಸುಸ್ಪಷ್ಟವೂ ಶಕ್ತಿಯುತವೂ ಅಪ್ರಾಕೃತವೂ ಆಗಿದ್ದವೆಂದರೆ ಅವು ಸಾಮಾನ್ಯ ವ್ಯಕ್ತಿಯ ಬುದ್ಧಿಯಿಂದ ಹೊರಹೊಮ್ಮಿದವೆಂದು ನಂಬುವುದು ಅಸಾಧ್ಯವಾಗಿತ್ತು.

ಆ ಅದ್ಭುತ ಮನಃಶಕ್ತಿಯನ್ನು ವರ್ಣಿಸುವ ಶಬ್ದವಿದ್ದಿತೆ! ಆ ಮನಸ್ಸಿನ ಪ್ರಕೃತಿಯೇ ಬೇರೆ, ಎಂಥ ಪ್ರತಿಭಾನ್ವಿತರ ಮನಸ್ಸನ್ನೂ ಮೀರಿದುದು ಅದು. ಅವರ ಭಾವನೆಗಳು ಎಷ್ಟೊಂದು ಸುಸ್ಪಷ್ಟವೂ ಶಕ್ತಿಯುತವೂ ಅಪ್ರಾಕೃತವೂ ಆಗಿದ್ದವೆಂದರೆ ಅವು ಸಾಮಾನ್ಯ ವ್ಯಕ್ತಿಯ ಬುದ್ಧಿಯಿಂದ ಹೊರಹೊಮ್ಮಿದವೆಂದು ನಂಬುವುದು ಅಸಾಧ್ಯವಾಗಿತ್ತು. ಆ ಭಾವನೆಗಳು ಎಷ್ಟೇ ಅಮೋಘವಾಗಿರಲಿ ಮತ್ತು ಆ ಬುದ್ಧಿಗೆಟುಕದ ಶಕ್ತಿ ಅದೆಷ್ಟೇ ಅದ್ಭುತವಾಗಿರಲಿ
ವಿಚಿತ್ರವೆಂದರೆ ಅದೆಲ್ಲ ತುಂಬ ಪರಿಚಿತವೆನಿಸಿತು. ಈ ಮನಸ್ಸನ್ನು ನಾನು ಮೊದಲೇ ತಿಳಿದಿರುವೆ ಎಂದೆನಿಸಿತು ನನಗೆ. ರವಿಕಿರಣವನ್ನೆ ತನ್ನಲ್ಲಿ ಹಿಡಿದಿರಿಸಿಕೊಂಡ ಅತ್ಯುಜ್ವಲ ಅಗ್ನಿಗೋಲಕದಂತೆ ಅವರು ನಮ್ಮ ಮೇಲೆ ಎರಗಿದರು. ಬಹುದೂರದ ಭಾರತದಿಂದ ಆಗಮಿಸಿದ ಈ ಧರ್ಮಬೋಧಕನಿಗೆ ಇನ್ನೂ ಮೂವತ್ತು ತುಂಬಿರಲಿಲ್ಲ. ವಯೋರಹಿತ ಯೌವನದಿಂದ ತುಂಬಿ ತುಳುಕುತ್ತಿದ್ದರೂ ಸನಾತನ ಜ್ಞಾನವೃದ್ಧರಾಗಿದ್ದರವರು. ಪ್ರಥಮ ಬಾರಿಗೆ ಭಾರತದ ಪುರಾತನ ಸಂದೇಶವನ್ನು ಆತ್ಮವಿಚಾರವನ್ನು ಕೇಳಿದೆವು.

ಅವರು ತಮ್ಮ ಭಾವನೆಗಳ ಪುಷ್ಪಮಾಲೆಯನ್ನು ರಚಿಸುತ್ತಾ ಹೋದಂತೆಲ್ಲ ಶೋತೃಗಳು ಅವಾಕ್ಕಾಗಿ ಕೇಳಿದರು. ಒಮ್ಮೆ ಹಾಸ್ಯ, ಒಮ್ಮೆ ದುರಂತ, ಒಮ್ಮೆ ಗಂಭೀರ ವಿಚಾರ, ಒಮ್ಮೆ ಉದಾತ್ತ ಆದರ್ಶವಾದ-ಹೀಗೆ ವಿವಿಧ ಬಗೆಯ ಪುಷ್ಪಗಳಿಂದ ಭೂಷಿತವಾಗಿತ್ತು, ಆ ಮಾಲೆ. ಆದರೆ ಇದೆಲ್ಲದರ ಹಿಂದಿದ್ದ ಸೂತ್ರ ಒಂದೇ- ಅದೇ ಮಾನವನ ದೈವತ್ವ. ಹಿಂದೆಂದೂ ಕೇಳದ ಶ್ರೀಮಂತ ಧ್ವನಿಯದು. ಭಾವನೆಗನುಗುಣವಾಗಿ ಧ್ವನಿಯನ್ನು ಬದಲಾಯಿಸುತ್ತಿದ್ದರು. ಈಗ ಮಹಾ ದುರಂತವನ್ನು ಪ್ರಚೋದಿಸುವ ದುಃಖದ ಧ್ವನಿ, ಆ ದುಃಖ ಅಸಹನೀಯವಾಗುತ್ತಿದ್ದಂತೆಯೇ ಅದನ್ನು ಶಮನಗೊಳಿಸುವ ಹಾಸ್ಯದ ಹೊನಲು. ಆ ಆನಂದಾತಿರೇಕದಲ್ಲಿರುವಾಗಲೇ ನಮ್ಮನ್ನು ಬಡಿದೆಬ್ಬಿಸುವ ಮೇಘಧ್ವನಿ- ಏಳಿ! ಎದ್ದೇಳಿರೆಂಬ ಕಹಳೆಯ ಕರೆ. ಆ ಅಪೂರ್ವ ಧ್ವನಿಯನ್ನು ಕೇಳುವವರೆಗೂ ಸಂಗೀತವೆಂದರೇನೆಂಬುದೇ ತಿಳಿದಿರಲಿಲ್ಲವೆನಿಸಿತು.

ನಾನು ಅವರ ಉಪನ್ಯಾಸವನ್ನು ಕೇಳುವ ಯಾವುದೇ ಅವಕಾಶವನ್ನೂ ಕಳೆದುಕೊಳ್ಳಲಿಲ್ಲ. ಮತ್ತೆ ಮತ್ತೆ ಅದೇ ಆತ್ಮದ ಬಗ್ಗೆ ಕೇಳಿದೆವು, ಮತ್ತೆ ಮತ್ತೆ ಭಾರತದ ಕಥೆಯನ್ನು ಕೇಳಿದೆವು, ಪ್ರತಿ ಬಾರಿ ಕೇಳಿದಾಗಲೂ ಹೊಸ ರೀತಿಯಲ್ಲಿ ಹೇಳುತ್ತಿದ್ದರು. ನಮ್ಮ ಗುರು ಸಿಕ್ಕಿದರೆಂದು ನಮಗನಿಸಿತು. ಆಗ ಗುರು ಶಬ್ದದ ಪರಿಚಯ ನಮಗಿರಲಿಲ್ಲ, ವೈಯಕ್ತಿಕವಾಗಿಯೂ ನಾನವರನ್ನು ಸಂಧಿಸಲಿಲ್ಲ. ಆದರೇನಂತೆ? ನಾವಾಗಲೇ ಕಲಿತಿರುವುದನ್ನು ಅರಗಿಸಿಕೊಳ್ಳಲು ಕೆಲವು ವರ್ಷಗಳು ಬೇಕಾಗುವುದು, ಅನಂತರ ಗುರು ಹೇಗೊ ಎಲ್ಲಿಂದಲೋ ಬಂದು ಮತ್ತೆ ಬೋಧಿಸುತ್ತಾರೆ!

ನಮ್ಮ ನಿರೀಕ್ಷೆಗೆ ಮುಂಚೆಯೇ ಇದು ಸಂಭವಿಸಿತು. ಒಂದು ವರ್ಷದ ನಂತರ ಸಹಸ್ರ ದ್ವೀಪೋದ್ಯಾನದಲ್ಲಿ ಒಂದೇ ಮನೆಯಲ್ಲಿ ಅವರೊಂದಿಗಿರುವ ಸದವಕಾಶ ಲಭಿಸಿತು…. ಮುಂದೆ ನಾವಲ್ಲಿ ಕಳೆದ ಅವಿಸ್ಮರಣೀಯ ಸಮಯ ವರ್ಣನೆಗೆ ನಿಲುಕದ್ದು. ನಾವಲ್ಲಿದ್ದಾಗ ಯಾವ ಉಚ್ಚ ಪ್ರಜ್ಞಾಸ್ತರದಲ್ಲಿದ್ದೆವೊ ಅದೇ ಸ್ಥಿತಿಯನ್ನು ಒಬ್ಬನು ತಲುಪಿದಾಗ ಮಾತ್ರ ಆ ಅನುಭವವನ್ನು ಗ್ರಹಿಸಬಲ್ಲ. ನಾವು ಆನಂದದಿಂದ ತುಂಬಿಹೋದೆವು. ಅವರ ದಿವ್ಯತೆಯ ಪ್ರಭಾಮಂಡಲದಲ್ಲಿ ನಾವಿದ್ದೆವೆಂಬುದು ಆಗ ನಮಗರಿವಾಗಲಿಲ್ಲ. ಸ್ಫೂರ್ತಿಯ ಗರಿಗೆದರಿ ತಮ್ಮ ಸಹಜಧಾಮಕ್ಕೆ ನಮ್ಮನ್ನು ಕೊಂಡೊಯ್ದರು. ತಾವು ಸಹಸ್ರ ದ್ವೀಪೋದ್ಯಾನದಲ್ಲಿ ಅತ್ಯುತ್ತಮ ಸ್ಥಿತಿಯಲ್ಲಿದ್ದರೆಂದು ಅವರೇ ಅನಂತರ ಹೇಳಿದರು…

ಶಿಷ್ಯತ್ವದ ಸ್ಪಷ್ಟ ಆಕಾಂಕ್ಷೆ ಕಾಣದಿದ್ದರೆ, ಮತ್ತು ಸಾಧಕನಲ್ಲಿ ಅರ್ಹತೆಯಿದೆಯೆಂದು ಅವರಿಗೆ ದೃಢವಾಗದಿದ್ದರೆ ಯಾರ ವೈಯಕ್ತಿಕ ಜೀವನವನ್ನೂ ವಿವೇಕಾನಂದರು ಮುಟ್ಟಲು ಹೋಗುತ್ತಿರಲಿಲ್ಲ.

ಸ್ವಾಮಿ ವಿವೇಕಾನಂದರು ನಮ್ಮಲ್ಲನೇಕರಿಗೆ ಒಂದು ಸೋಮವಾರ ದೀಕ್ಷೆ ಕೊಡಬೇಕೆಂದು ನಿರ್ಧರಿಸಿದ್ದರು, ಭಾನುವಾರ ಮಧ್ಯಾಹ್ನ “ನೀವು ದೀಕ್ಷೆಗೆ ಅರ್ಹರೊ ಎಂದು ನಿರ್ಧರಿಸುವಷ್ಟು ನಿಮ್ಮ ಪರಿಚಯ ನನಗಿಲ್ಲ” ಎಂದು ಅವರು ಹೇಳಿದರು. ಅನಂತರ ಸ್ವಲ್ಪ ಸಂಕೋಚದಿಂದ ಹೇಳಿದರು: “ನನಗೊಂದು ಶಕ್ತಿಯಿದೆ, ಅದನ್ನು ಉಪಯೋಗಿಸುವುದು ಅಪರೂಪ-ಇತರರ ಮನಸ್ಸನ್ನು ಅರಿಯುವ ಶಕ್ತಿ. ನೀವೆಲ್ಲ ಸಮ್ಮತಿಸಿದರೆ, ನಿಮಗೆ ನಾಳೆ ದೀಕ್ಷೆ ಕೊಡಬೇಕಾಗಿರುವುದರಿಂದ ನಿಮ್ಮ ಮನಸ್ಸನ್ನು ಓದ ಬಯಸುತ್ತೇನೆ.” ನಾವು ಸಂತೋಷದಿಂದ ಒಪ್ಪಿದೆವು. ಮನಸ್ಸನ್ನು ಓದಿದ್ದರಿಂದ ಅವರಿಗೆ ತೃಪ್ತಿಯಾಗಿರಬೇಕು, ಏಕೆಂದರೆ ಮರುದಿನ ನಮ್ಮೆಲ್ಲರಿಗೂ, ಉಳಿದ ಅನೇಕರಿಗೂ ಸೇರಿ, ಮಂತ್ರದೀಕ್ಷೆಯಿತ್ತು ನಮ್ಮನ್ನು ಶಿಷ್ಯರನ್ನಾಗಿ ಸ್ವೀಕರಿಸಿದರು.

ಸ್ವಾಮೀಜಿ ಕೊಡುತ್ತಿದ್ದ ತರಬೇತಿ ವೈಯಕ್ತಿಕವಾದುದು ಮತ್ತು ತುಂಬ ವಿಶಿಷ್ಟವಾದುದು. ಶಿಷ್ಯತ್ವದ ಸ್ಪಷ್ಟ ಆಕಾಂಕ್ಷೆ ಕಾಣದಿದ್ದರೆ, ಮತ್ತು ಸಾಧಕನಲ್ಲಿ ಅರ್ಹತೆಯಿದೆಯೆಂದು ಅವರಿಗೆ ದೃಢವಾಗದಿದ್ದರೆ ಯಾರ ವೈಯಕ್ತಿಕ ಜೀವನವನ್ನೂ ಅವರು ಮುಟ್ಟಲು ಹೋಗುತ್ತಿರಲಿಲ್ಲ. ಕೆಲವರಿಗೆ ಅವರು ಸಂಪೂರ್ಣ ಸ್ವಾತಂತ್ರ್ಯವನ್ನುಕೊಟ್ಟರು. ಮತ್ತು ಆ ಸ್ವಾತಂತ್ರ್ಯದಲ್ಲೇ ಅವರು ಸಿಕ್ಕಿಬಿದ್ದರು. ನಮಗೆ ತಿಳಿಯದೆ ಇರುವ ಕೆಲವರ ಬಗ್ಗೆ ಹೇಳುವಾಗ “ಅವನು ಶಿಷ್ಯನಲ್ಲ, ಅವನು ಸ್ನೇಹಿತ” ಎನ್ನುತ್ತಿದ್ದರು. ಆ ಒಂದು ಸಂಬಂಧವೇ ಬೇರೆ. ಸ್ನೇಹಿತರು ತಮ್ಮದೇ ಆದ ದೋಷ ನಂಬಿಕೆಗಳನ್ನು ಹೊಂದಿರಬಹುದು. ಸ್ನೇಹಿತರು ಸಂಕುಚಿತ ದೃಷ್ಟಿಯವರಾಗಿರಬಹುದು, ಸಂಪ್ರದಾಯಶರಣರಾಗಿರಬಹುದು. ಸ್ವಾಮೀಜಿ ಇದಾವುದರಲ್ಲಿಯೂ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಇತರರ ಜೀವನವನ್ನು ಸ್ಪರ್ಶಿಸುವ ಒಂದು ಅಭಿಪ್ರಾಯವೂ ಕೂಡ ಅಕ್ಷಮ್ಯ ಹಸ್ತಕ್ಷೇಪವಾಗುವುದು ಎಂದೆನಿಸುತ್ತಿತ್ತು. ಅವರನ್ನು ಗುರುವೆಂದು ಸ್ವೀಕರಿಸಿದ ಮೇಲೆ ಇದಾವುದೂ ನಡೆಯದು. ಶಿಷ್ಯನ ಸಂಪೂರ್ಣ ಜವಾಬ್ದಾರಿಯನ್ನು ಅವರು ಹೊರುತ್ತಿದ್ದರು. ಅವರ ಎಲ್ಲ ದೋಷ ನಂಬಿಕೆ ಮೌಲ್ಯಗಳನ್ನು ಖಂಡಿಸುತ್ತಿದ್ದರು. ನಮ್ಮ ಅಪಕ್ವ ಉತ್ಸಾಹದಿಂದ ಪ್ರಪಂಚವನ್ನು ಸುಂದರವೆಂದೆಣಿಸಿದರೆ, ಒಳಿತು ಸತ್ಯ, ಕೆಡಕು ಅಸತ್ಯ ಎಂದು ಭಾವಿಸಿದರೆ ನಮ್ಮ ಈ ಭ್ರಮೆಯನ್ನು ಬೇಗನೆ ನಾಶಪಡಿಸಲು ಉತ್ಸುಕರಾಗುತ್ತಿದ್ದರು. ಒಳಿತು ಸತ್ಯವಾದರೆ ಕೆಡುಕೂ ಸತ್ಯ, ಎರಡೂ ಒಂದರದೇ ವಿವಿಧ ಮುಖಗಳು. ಒಳಿತು-ಕೆಡುಕುಗಳೆರಡೂ ಮಾಯೆ. ಮರಳಿನಲ್ಲಿ ಮುಖ ಮುಚ್ಚಿಕೊಂಡು “ಎಲ್ಲ ಒಳಿತು ಕೆಡುಕೆಂಬುದೆ ಇಲ್ಲ” ಎಂದು ಹೇಳಬೇಡಿ. ಈಗ ಒಳಿತನ್ನು ಪೂಜಿಸುವಂತೆ ರೌದ್ರವನ್ನೂ ಪೂಜಿಸಿ, ನಂತರ ಎರಡನ್ನೂ ಮೀರಿಹೋಗಿ. “ದೇವರೊಬ್ಬನೇ ಸತ್ಯ” ಎನ್ನಿ. ನಮಗೆ ಆಪತ್ತು ಬಂದೊದಗಿದಾಗ ಪ್ರಪಂಚ ಸುಂದರವಾಗಿದೆ ಎನ್ನುವ ಧೈರ್ಯವಿದೆಯೆ? ನಾವು ಸುಖ ದಿಂದಿದ್ದರೂ ಇತರರು ಸಂಕಟಪಡುತ್ತಿಲ್ಲವೆ? ಪ್ರಪಂಚ ದುಃಖ ಮಯವಲ್ಲವೆ? ಮುಪ್ಪ, ಮೃತ್ಯು, ರೋಗ – ಇವು ಭೂಮಿಯನ್ನು ಆವರಿಸಿಲ್ಲವೆ? ಇಂಥ ಪರಿಸ್ಥಿತಿಯಲ್ಲಿಯೂ “ಪ್ರಪಂಚ ಸುಂದರ” ಎಂದು ಹಗುರವಾಗಿ ಹೇಳುವವನು ಅಜ್ಞಾನಿಯಾಗಿರಬೇಕು ಅಥವಾ ಸ್ವಾರ್ಥಿಯಾಗಿ ಇತರರ ದುಃಖವನ್ನು ಉಪೇಕ್ಷಿಸುವವನಾಗಿರಬೇಕು.

ಅವರ ತರಬೇತಿಯ ವಿಧಾನ ಪ್ರತಿ ಶಿಷ್ಯನಿಗೂ ಬೇರೆಯಾಗಿರುತ್ತಿತ್ತು. ಕೆಲವರಿಗೆ ಸರಿಯಾಗಿ ಪೆಟ್ಟು ಬೀಳುತ್ತಿತ್ತು. ಊಟ, ಬಟ್ಟೆ, ಮಾತು ಈ ವಿಚಾರಗಳಲ್ಲಿ ತುಂಬ ಕಟ್ಟುನಿಟ್ಟಾಗಿರಬೇಕೆನ್ನುತ್ತಿದ್ದರು. ಇನ್ನು ಕೆಲವರ ವಿಷಯದಲ್ಲಿ ಈ ರೀತಿಯ ತಪಸ್ಸನ್ನು ಅವರು ಸೂಚಿಸುತ್ತಿರಲಿಲ್ಲ. ಇದಕ್ಕೆ ಕಾರಣ ಅವರಲ್ಲಿ ಆಧ್ಯಾತ್ಮಿಕ ದುರಭಿಮಾನವಿದ್ದು ಒಳಿತ್ತೆ ಒಂದು ಬಂಧನವಾಗಿದ್ದುದೆ?  ಕೆಲವರನ್ನು ಬೈದು ತಿದ್ದುತ್ತಿದ್ದರು, ಕೆಲವರ ವಿಷಯದಲ್ಲಿ ಅವರು ತುಂಬ ನಿಷ್ಠುರರಾಗಿರುತ್ತಿದ್ದರು. ಈ ರೀತಿ ತರಬೇತಿ ಪಡೆದವರಲ್ಲಿ ಕ್ರಮೇಣ ಬದಲಾವಣೆಯಾಗುತ್ತಿರುವುದನ್ನು ಕಂಡೆವು. ನಮ್ಮ ಒಲುಮೆಯ ದೌರ್ಬಲ್ಯಗಳೆಲ್ಲ ದೂರವಾಗತೊಡಗಿದವು.

ರೂಢಿಯಿಂದ ಬಂದ ಭಾವನೆಗಳೆಲ್ಲ ತಿದ್ದುಪಡಿಗೊಂಡವು. ತೀಕ್ಷ್ಣ ವಿಚಾರ ಮನೋಭಾವವನ್ನು ಅವರು ನಮಗೆ ಕಲಿಸಿದರು. ಯಾವುದಕ್ಕೂ ಅಳುಕದೆ ಅಸತ್ಯವನ್ನು ಎಸೆದು ಸತ್ಯವನ್ನು ಮಾತ್ರ ಹಿಡಿದುಕೊಳ್ಳುವಂತೆ ಮಾಡಿದರು. ಈ ವಿಧಾನದಲ್ಲಿ ಎಷ್ಟೋ ಮೌಲ್ಯವುಳ್ಳದ್ದು ಎಂದೆನಿಸಿದವು ತಿರಸ್ಕರಿಸಲ್ಪಟ್ಟವು. ಬಹುಶಃ ನಮ್ಮ ಉದ್ದೇಶ ಗುರಿಗಳು ಸಂಕುಚಿತವಾಗಿದ್ದವು ಮತ್ತು ಏಕಮುಖವಾಗಿರಲಿಲ್ಲ. ಕ್ರಮೇಣ ಅವನ್ನು ಉನ್ನತಿಗೇರಿಸಲು ಕಲಿತೆವು, ಸಣ್ಣ ಗುರಿಗಳೆಲ್ಲ ಒಂದು ಪ್ರಧಾನ ಗುರಿಯೊಡನೆ ಒಂದಾಗುವಂತೆ ಮಾಡಿದೆವು. ಅದೇ ನಿಜವಾದ ಜೀವನದ ಗುರಿ, ಆ ಗುರಿಯನ್ನು ಮರಳು ಗಾಡಿನಲ್ಲೊ ಪರ್ವತದ ತುದಿಯಲ್ಲೊ ಹುಡುಕಬೇಕಾಗಿಲ್ಲ. ನಮ್ಮ ಹೃದಯದಲ್ಲೆ ಅರಸಬೇಕು. ಈ ಎಲ್ಲ ಸಾಧನಗಳಿಂದ ನಮ್ಮ ವಿಕಾಸವು ತ್ವರಿತಗೊಂಡಿತು. ನಮ್ಮ ಇಡೀ ಸ್ವಭಾವವೇ ಪರಿವರ್ತನೆಗೊಂಡಿತು.

ವಿವೇಕಾನಂದರು ಅಷ್ಟೊಂದು ಶ್ರೇಷ್ಠ ವ್ಯಕ್ತಿಗಳು, ಆದರೂ ಅವರ ಸಾನ್ನಿಧ್ಯದಲ್ಲಿ ಯಾರಿಗೂ ತಾನು ಕೀಳೆಂಬ ಭಾವನೆ ಬರುತ್ತಿರಲಿಲ್ಲ.

ಅವರು ಎಷ್ಟು ಜನಪ್ರಿಯ ಉಪನ್ಯಾಸಕರಾಗಿದ್ದರೆಂದರೆ ಯಾವ ಸಭಾಂಗಣದಲ್ಲಿಯೂ ಶ್ರೋತೃಗಳಿಗೆ ಸಾಕಷ್ಟು ಸ್ಥಳಾವಕಾಶವಿರುತ್ತಿರಲಿಲ್ಲ. ಎರಡನೆ ಬಾರಿ ಅವರು ಡೆಟ್ರಾಯ್ಟ್ ಗೆ ಬಂದಾಗ ಅವರ ಉಪನ್ಯಾಸಕ್ಕಾಗಿ ಒಂದು ದೊಡ್ಡ ಸಭಾಂಗಣವನ್ನು ಹುಡುಕಲು ಹೋದ ವ್ಯಕ್ತಿ “ಅವರು ಸರ್ಕಸ್, ಟೆಂಟನ್ನು ತುಂಬಿಸಬಲ್ಲರು” ಎಂದು ಉದ್ಗರಿಸಿದ. ಡೆಟ್ರಾಯ್ಟ್ ನಲ್ಲಿ ಅವರ ಉಪಸ್ಥಿತಿಯ ಕೊನೆಯ ಭಾನುವಾರ ರಾಬಿ ಗ್ರಾಸ್‌ಮನ್‌ರ ಆಹ್ವಾನದ ಮೇರೆಗೆ ಟೆಂಪಲ್ ಬೆತ್ ಎಲ್ ನಲ್ಲಿ ಅವರು ಮಾತನಾಡಿದರು. ಉಪನ್ಯಾಸಕ್ಕೆ ಒಂದು ಗಂಟೆ ಮುಂಚೆಯೇ ಟೆಂಪಲ್ ಜನರಿಂದ ಸಂಪೂರ್ಣವಾಗಿ ತುಂಬಿಹೋಗಿ ಅನಂತರ ಬಾಗಿಲನ್ನು ಮುಚ್ಚಬೇಕಾಯಿತು. ನೂರಾರು ಜನರು ಹಿಂದಿರುಗಿ ಹೋಗಬೇಕಾಯಿತು. ಮತ್ತನೇಕರು ಬಾಗಿಲನ್ನು ತಟ್ಟುತ್ತ ಹೇಗಾದರೂ ಒಳಗೆ ನುಗ್ಗಲು ಪ್ರಯತ್ನಿಸಿದರು. ಉಪನ್ಯಾಸ ಪ್ರಾರಂಭವಾಗುವ ಹೊತ್ತಿಗೆ ಆ ತುಮುಲ ಕೋಲಾಹಲ ನಿಯಂತ್ರಣವನ್ನು ಮೀರಿಹೋಯಿತು. ಆದರೆ ಅವರು ವೇದಿಕೆಯ ಮೇಲೆ ಕಾಣಿಸಿಕೊಂಡಾಗ ಎಲ್ಲ ಸದ್ದಡಗಿತು, ಯಾರೋ ಒಬ್ಬರು “ಹಾ! ಎಷ್ಟು ಸುಂದರವಾಗಿದ್ದಾರೆ ಇವರು!” ಎಂದು ಉದ್ಗಾರವೆಳೆದದ್ದನ್ನು ಕೇಳಿದೆ. ನಿಜವಾಗಿಯೂ ಸೌಂದರ್ಯ ಅಷ್ಟೊಂದು ಸ್ವರ್ಗೀಯವಾಗಿ ಎಂದೂ ಕಾಣಿಸಿರಲಿಲ್ಲ. ಆಗ ಶಕ್ತಿ ಅಷ್ಟು ವೇದ್ಯವಾಗಿರಲಿಲ್ಲ. ಅದು ದಿವ್ಯಪ್ರಭೆಯ ಮತ್ತು ಆಳ ಅನುಕಂಪೆಯ ರೂಪವನ್ನು ತಳೆದಿತ್ತು. ಅವರು ಮೇಲೆದ್ದು ಸುಶ್ರಾವ್ಯ ಕಂಠದಲ್ಲಿ ಗಂಭೀರ ಸತ್ಯಗಳ ಪ್ರವಾಹ ಹರಿಸಿದರು. ಶೋತೃಗಳ ಮನಸ್ಸನ್ನು ಅವರು ಹೇಗೆ ಏಕಾಗ್ರಗೊಳಿಸಿದರೆಂದರೆ ಅದಕ್ಕೆ ಭಂಗ ತರುವುದೇನೂ ಇರಲಿಲ್ಲ.

ಅವರು ಅಷ್ಟೊಂದು ಶ್ರೇಷ್ಠ ವ್ಯಕ್ತಿಗಳು, ಆದರೂ ಅವರ ಸಾನ್ನಿಧ್ಯದಲ್ಲಿ ಯಾರಿಗೂ ತಾನು ಕೀಳೆಂಬ ಭಾವನೆ ಬರುತ್ತಿರಲಿಲ್ಲ. ಅವರ್ಣನೀಯವಾದ ರೀತಿಯಲ್ಲಿ ಅವರ ಸಂಪರ್ಕವನ್ನು ಪಡೆದವರಲ್ಲಿ ತಾವು ಶ್ರೇಷ್ಠರೆಂದು ಭಾವಿಸುವಂತೆ ಮಾಡಿದರು. ಇತರರಲ್ಲಿ ಹಿರಿದನ್ನೇ ನೋಡುತ್ತ ಅವರ ದೋಷ ಮತ್ತು ದೌರ್ಬಲ್ಯಗಳನ್ನು ಲಕ್ಷಿಸದಿರುವ ಅವರ ಮನೋಭಾವ ಇದಕ್ಕೆ ಕಾರಣವೆ? ಇನ್ನೂ ಗೂಢವಾದ ಕಾರಣವಿರಬಹುದು. ಆತ್ಮ ಸಾಕ್ಷಾತ್ಕಾರವನ್ನು ಪಡೆದು ಇತರರೆಲ್ಲರಲ್ಲಿಯೂ ಒಂದೇ ಆತ್ಮವನ್ನು ನೋಡುವವರಾಗಿದ್ದರು ಅವರು. ಆ ಆತ್ಮದ ಮುಂದೆ ಸಣ್ಣ ದೋಷಗಳಾವುವೂ ಉಳಿಯುವುದಿಲ್ಲ. ನಮ್ಮ ಬಗ್ಗೆ ಅವರಿಗೆ ನಮಗಿಂತ ಹೆಚ್ಚು ತಿಳಿದಿತ್ತು. ಅವರು ಯಾವಾಗಲೂ ಹೇಳುತ್ತಿದ್ದರು: “ನಿಮ್ಮನ್ನು ನೀವು ದುರ್ಬಲರೆಂದು ತಿಳಿಯುವುದೇ ಅತಿ ದೊಡ್ಡ ಪಾಪ. ಯಾವನೊಬ್ಬನೂ ಅಧಿಕ ಶ್ರೇಷ್ಠನಲ್ಲ; ನೀವು ಬ್ರಹ್ಮವೆಂದು ತಿಳಿಯಿರಿ. ಯಾವುದಕ್ಕೂ ತನ್ನದೇ ಶಕ್ತಿಯಿಲ್ಲ, ನೀವು ಕೊಟ್ಟರೆ ಉಂಟು. ನಾವು ಸೂರ್ಯ-ನಕ್ಷತ್ರಗಳನ್ನು ಮೀರಿದವರು ವಿಶ್ವಾತೀತರು.”

ಹಿಂದೆ-ಮುಂದೆ ಮೇಲೆ-ಕೆಳಗೆ ಕೊನೆಯಲ್ಲದೆ ಓಡಾಡುವುದನ್ನು ನೋಡಿ ಸ್ವಾಮೀಜಿ ಚಂಚಲ ಸ್ವಭಾವದವರು ಎಂದು ಅನಿಸಬಹುದು. ಆದರೆ ಆ ಚಂಚಲತೆ ತಾನೇನು ಮಾಡುತ್ತಿರುವೆನೆಂಬುದರ ಅರಿವಿಲ್ಲದವನ ಚಂಚಲತೆಯಲ್ಲ. ತಮ್ಮನ್ನು ನಡೆಸುತ್ತಿರುವುದು ಏನೆಂಬುದರ ಅತಿ ಸ್ಪಷ್ಟ ಅರಿವು ಅವರಿಗಿತ್ತು. ಅವರದನ್ನು ಸರಳವಾಗಿ ಯುಕ್ತಾಯುಕ್ತವಾಗಿ ವಿವರಿಸಬಲ್ಲವರಾಗಿದ್ದರು. ತನ್ನ ನೈಜ ಅಸ್ತಿತ್ವದ, ತನ್ನ ದಿವ್ಯತ್ವದ ಪ್ರಜ್ಞೆಯುಳ್ಳ ಶ್ರೇಷ್ಠ ಸ್ವತಂತ್ರ ವ್ಯಕ್ತಿಯಾದ ಅವರು ಈ ದೇಹಪಂಜರದಲ್ಲಿ ಸೆರೆ ಸಿಕ್ಕಿರುವೆನೆಂದು ಭಾವಿಸುತ್ತಿದ್ದರು. ಈ ದೇಹದ ಬಂಧನವೇ ದೊಡ್ಡ ಹಿಂಸೆ. ಕಾಡಿನಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿದ್ದ ಸಿಂಹವನ್ನು ಊರಿಗೆ ಹಿಡಿದು ತಂದರೆ ತನ್ನ ಸ್ವಾತಂತ್ರ್ಯದ ವೈಭವವನ್ನು ಅದು ಎಂದಿಗೂ ಮರೆಯದು. ಅದು ಕೂಡಿಹಾಕಿದ ಗೂಡಿನೊಳಗೇ ಚಂಚಲತೆಯಿಂದ ಅಲೆದಾಡುವುದು. ಈ ಮಹಾ ಮುಕ್ತ ಪುರುಷರೂ ಹಾಗೆಯೇ ಮಾಂಸದ ಗೂಡಿನಲ್ಲಿ ಸಿಕ್ಕಿಕೊಂಡಿರುವರು. ಸೆರೆಸಿಕ್ಕಿದ ವೈಭವ ಹೊರಬರಲು ತವಕಿಸುತ್ತಿತ್ತು. ಹೌದು, ನಾವೆಲ್ಲರೂ ಈ ಬಂಧನದಲ್ಲಿ ಸಿಕ್ಕಿಕೊಂಡಿರುವೆವು, ಆದರೆ ಯಾರಿಗೂ ಇದರ ಅರಿವಿಲ್ಲ. ನಾವು ಈ ಬಂಧನಕ್ಕೇ ಒಗ್ಗಿಕೊಂಡಿದ್ದೇವೆ. ಅದನ್ನು ಬಿಡಲು ಇಷ್ಟವೇ ಇಲ್ಲ.

ಆದರೆ ನಮ್ಮ ಕಣ್ಮುಂದೆಯೇ ಪೂರ್ಣಪ್ರಜ್ಞೆಯುಳ್ಳ, ದಿವ್ಯಸ್ವಾತಂತ್ರ್ಯದ ಸಾಕ್ಷಾತ್ಕಾರವನ್ನು ಪಡೆದ, ಈ ಬಂಧನ ಒಂದು ಹಿಂಸೆಯಾಗಿರುವ ಮಹಾಪುರುಷರೊಬ್ಬರು ಇರುವರು. ಅದನ್ನು ಕತ್ತರಿಸುವ ಅವರ ನಿರಂತರ ಹೋರಾಟವನ್ನು ನೋಡುತ್ತಿದ್ದ ನಮಗೆ ಅದನ್ನು ಮತ್ತೆ ಹೇಳುವ ಆವಶ್ಯಕತೆಯಿರಲಿಲ್ಲ. ಯಾವ ಉಪದೇಶವೂ ಇಲ್ಲದೆ ನಮ್ಮ ಕಣ್ಣು ತೆರೆಯಿತು. ನಮಗನಿಸುತ್ತಿತ್ತು : “ನಾನು ದೇಹವಲ್ಲ, ಮನಸ್ಸಲ್ಲ, ನಾನು ದೇಹ-ಮನಸ್ಸುಗಳ ಆಚೆ ಇರುವೆ, ನಾನು ಅದೇ ಆಗಿರುವೆ”.

೧೯೦೨ರಲ್ಲಿ ನಾನು ಅವರನ್ನು ಭಾರತದಲ್ಲಿ ನೋಡಿದಾಗ ಅಮೆರಿಕದಲ್ಲಿ ನಾನು ಅವರನ್ನು ನೋಡಿದಾಗಿಗಿಂತ ತುಂಬ ಬೇರೆಯೇ ಆಗಿದ್ದರು. ಇಲ್ಲಿ ತನ್ನ ಸ್ವಾಭಾವಿಕ ಪರಿಸರದಲ್ಲಿರುವ ಸಿಂಹವನ್ನು ನೋಡಿದೆ. ಇಲ್ಲಿ ರೂಢಿಯ ಮುಸುಕನ್ನು ಹಾಕಿಕೊಳ್ಳುವ ಆವಶ್ಯಕತೆಯಿರಲಿಲ್ಲ, ಮನುಷ್ಯನಿರ್ಮಿತ ನಿಯಮಗಳಿಗೆ ಒಳಪಡಬೇಕಾಗಿರಲಿಲ್ಲ. ಅವರು ಹೊರದೇಶದಲ್ಲಿದ್ದಾಗ ಕಾಣದಿದ್ದ ಒಂದು ವಿಶೇಷ ಪ್ರಶಾಂತತೆ ಅವರಲ್ಲಿ ಕಾಣುತ್ತಿತ್ತು. ಅವರು ತಮ್ಮವರೊಡನಿದ್ದರು. ಅವರು ತಮ್ಮ ಸ್ವಾಭಾವಿಕತೆಯಲ್ಲಿದ್ದರು. ನಾವು ಹಿಂದೆ ನೋಡಿದ್ದಕ್ಕಿಂತಲೂ ಶ್ರೇಷ್ಠ ವ್ಯಕ್ತಿಯಾಗಿ ಕಂಡರು. ಅವರು ಮಾಡಬೇಕಾದುದೆಲ್ಲ ಮುಗಿದಂತಾಗಿತ್ತು. ಪಶ್ಚಿಮಕ್ಕೆ ತಮ್ಮ ಸಂದೇಶ ನೀಡಿದ್ದರು. ಭಾರತದಲ್ಲಿ ಅವರ ಸಿಂಹಗರ್ಜನೆ ಕೊಲೊಂಬೊದಿಂದ ಆಲ್ಮೋರದವರೆಗೂ ಮೊಳಗಿತ್ತು. ಅವರು ಯೋಜಿಸಿದ್ದ ಮಠದ ಸ್ಥಾಪನೆಯಾಗಿತ್ತು. ಅವರಿಗಿನ್ನೂ ಮೂವತ್ತೊಂಬತ್ತು ವರ್ಷ. ಅವರಿಗೆ ಗೊತ್ತಿತ್ತು ಮುಕ್ತಿ ಹತ್ತಿರವೇ ಇದೆ ಎಂದು. ೧೯೦೨ ಜುಲೈ ೪ರಂದು ಅದು ಬಂತು.

(ಸ್ವಾಮಿ ವಿವೇಕಾನಂದರ ದಿವ್ಯಸ್ಮೃತಿ ಎಂಬ ಗ್ರಂಥದಿಂದ )