ಗ್ರಾಮಾಂತರ ಪ್ರದೇಶಗಳಲ್ಲಿ ಯುವಜನತೆಯ ಜೀವನವನ್ನು ರೂಪಿಸುವ ಕಾರ್ಯದಲ್ಲಿ ತೊಡಗಿರುವ ಲೇಖಕಿಯು ತಾವು ಪಡೆದುಕೊಂಡಿರುವ ಸ್ಫೂರ್ತಿ, ವಿಶ್ವಾಸಗಳನ್ನು ಇತರರಿಗೂ ದೊರಕಿಸಿ ಕೊಟ್ಟಿದ್ದಾರೆ. ರಾಷ್ಟ್ರದ ಹಿತಚಿಂತನೆ ಯುವಜನತೆಯಿಂದಲೇ ಪ್ರಾರಂಭವಾಗಬೇಕು ಎಂಬುದನ್ನು ಒತ್ತಿ ಹೇಳಿದ್ದಾರೆ

ರಾಷ್ಟಸೇವೆ, ರಾಷ್ಟ್ರನಿರ್ಮಾಣ,ರಾಷ್ಟ್ರಜಾಗೃತಿಯಂತಹ ಮೈನವಿರೇಳಿಸುವ ಪದಗಳು ದೇಶದ ಪ್ರಗತಿ ಹಾಗೂ ಪ್ರಜೆಗಳ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ವಿವೇಕಾನಂದರಿಗಿದ್ದ ಕನಸುಗಳನ್ನು ನೆನಪಿಗೆ ತರುತ್ತವೆ. ದೇಶದ ಅಭಿವೃದ್ಧಿಯಲ್ಲಿ – ಅತ್ಯದ್ಭುತವಾದ ಆಸಕ್ತಿ, ಕಳಕಳಿ ಹೊಂದಿದ ಕನಸುಗಾರ ಸ್ವಾಮಿ ವಿವೇಕಾನಂದರಂತಹವರು ವಿರಳ.

ಇಂದು ದೇಶಸೇವೆ ಎಂದಾಕ್ಷಣ, “ಸೇನೆಗೆ ಸೇರಿ ಹಗಲೂ ಇರುಳೂ ಗಡಿಯನ್ನು ಕಾಯ್ದು ದೇಶದ ಸುಭದ್ರತೆಯನ್ನು ಕಾಪಾಡುವುದು” ಎಂಬುದು ಬಹು ಜನರ ಅಭಿಪ್ರಾಯ. ಇದು ಸತ್ಯವಾದರೂ, ಇದು ಸೇವೆಯ ಒಂದು ಮಜಲನ್ನಷ್ಟೇ ಹೇಳಿದಂತಾಗುತ್ತದೆ. ಕೇವಲ ಸೈನಿಕರು ಮಾತ್ರ ದೇಶದ ರಕ್ಷಣೆಯ ಹೊಣೆಯನ್ನು ಹೊರಬೇಕು, ಉಳಿದವರೆಲ್ಲರ ಮೇಲೆ ಯಾವುದೇ ಜವಾಬ್ದಾರಿ ಇಲ್ಲ ಎನ್ನುವುದು ಸರಿಯಲ್ಲ. ಸ್ವಾಮಿ ವಿವೇಕಾನಂದರೆಂದಂತೆ “ಪ್ರತಿಯೊಂದು ನಿಟ್ಟಿನಲ್ಲೂ ನಿಃಸ್ವಾರ್ಥರಾಗಿ, ಪರರ ಒಳಿತಿಗಾಗಿ ಚಿಂತಿಸಿ ಆ ಮಾರ್ಗದಲ್ಲಿ ಕಾರ್ಯಪ್ರವೃತ್ತರಾಗುವುದು” ದೇಶಸೇವೆಯ ಮೊದಲ ಮೆಟ್ಟಿಲು.

ಸ್ವಾಮಿ ವಿವೇಕಾನಂದರು ಈ ಪವಿತ್ರ ಕಾರ್ಯಕ್ಕೆ ಯುವಕರೇ ಸಾಧನಗಳು ಎಂಬುದನ್ನು ಬಹಳ ಹಿಂದೆಯೇ ನಮಗೆಲ್ಲರಿಗೂ ಮನವರಿಕೆ ಮಾಡಿದ್ದಾರೆ, “ಆತ್ಮವಿಶ್ವಾಸವಿರುವ – ಕೆಲವು ಯುವಕರನ್ನು ಕೊಡಿ, ಪ್ರಪಂಚವನ್ನೇ ಗೆಲ್ಲುತ್ತೇನೆ” ಎಂಬ ದೃಢ ವಾಣಿ ಅವರದು. ಯುವಶಕ್ತಿಯ ಮೇಲಿನ ಅವರ ವಿಶ್ವಾಸ ಅಚಲವಾದುದು. ಅವರ ಕಾಲಮಾನದಲ್ಲಿ ಭಾರತವನ್ನು ಕಿತ್ತು ತಿನ್ನುತ್ತಿದ್ದ ಬಡತನ, ಅನಕ್ಷರತೆ, ಶೋಷಣೆ, ಮೂಢನಂಬಿಕೆಗಳಂತಹ ಸಮಸ್ಯೆಗಳ ಮೂಲೋತ್ಪಾಟನೆಗೆ ಯುವಕರೇ ಕಾರ್ಯಪ್ರವೃತ್ತರಾಗಬೇಕೆಂಬುದು ಅವರ ಆಶಯವಾಗಿತ್ತು. ಯುವಕರ ಇಂಥ ಯಶಸ್ಸಿನ ಮೇಲೆ ನಂಬಿಕೆಯಿಟ್ಟ ಅವರು ಈ ರೀತಿ ಕರೆಯಿತ್ತಿದ್ದಾರೆ: “ಬಡವರ, ಅಮಾಯಕರ, ದೀನದಲಿತರ ಪರವಾದ ಈ ಸಹಾನುಭೂತಿಯನ್ನು, ಈ ಹೋರಾಟವನ್ನು ನಿಮಗೆ ಬಿಟ್ಟುಕೊಡುತ್ತಿದ್ದೇನೆ. ಪ್ರತಿದಿನ ಕೆಳಗೆ ಕುಸಿಯುತ್ತಲೇ ಇರುವ ಜನರ ಉದ್ಧಾರಕ್ಕೆ ನಿಮ್ಮ ಇಡೀ ಜೀವನವನ್ನು ಮುಡಿಪಾಗಿಡುವ ಪ್ರತಿಜ್ಞೆಯನ್ನು ಕೈಗೊಳ್ಳಿ. ನಾವು ಭಾರತವನ್ನು ಹಾಗೂ ಇಡೀ ಜಗತ್ತನ್ನು ಎಚ್ಚರಿಸಬೇಕು. ಹಳ್ಳಿಯಿಂದ ಹಳ್ಳಿಗೆ ಹೋಗಿ, ಮಾನವತೆಗೆ ಹಾಗೂ ಇಡೀ ವಿಶ್ವಕ್ಕೆ ಒಳ್ಳೆಯದನ್ನು ಮಾಡಿ. ಇತರರಿಗೆ ಮೋಕ್ಷವನ್ನು ಸಂಪಾದಿಸಲು ನೀವೇ ನರಕಕ್ಕೆ ಹೋಗಿ.” ಇದೊಂದು ಅಸಾಮಾನ್ಯವಾದ, ಅದ್ಭುತವಾದ ಕಲ್ಪನೆ. ವಿವೇಕಾನಂದರು ಯುವಕರಿಗೆ ಕೊಟ್ಟ ಜವಾಬ್ದಾರಿ ಬಹು ದೊಡ್ಡದು. ಅವರ ಈ ಕನಸನ್ನು ನಾವಿಂದು ನನಸು ಮಾಡಬೇಕಿದೆ. ಆ ಹೊಣೆ ಹಾಗೂ ಕರ್ತವ್ಯ ನಮ್ಮ ಮೇಲಿದೆ.

ಕೆಲವೇ ಯುವಕರಿಂದ ಈ ಪ್ರಪಂಚವನ್ನು ಬದಲಿಸಲು ಸಾಧ್ಯವಾಗುವುದಾದರೆ ಭಾರತದ ಜನಸಂಖ್ಯೆಯ ಶೇಕಡಾ ೩೦ರಷ್ಟಿರುವ ಯುವಶಕ್ತಿ ಸರಿಯಾದ ನಿಟ್ಟಿನಲ್ಲಿ ಬಳಕೆಯಾದರೆ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುವುದು ನಿಶ್ಚಯ. ಯುವಜನತೆ ತನ್ನಲ್ಲಿರುವ ಅಗಾಧ ಸಾಮರ್ಥ್ಯ, ಸಾಧ್ಯತೆಗಳನ್ನು ತಿಳಿದು ದುಡಿಯಬೇಕು.

ಯಾವುದೇ ಒಂದು ದೇಶದ ಅಭಿವೃದ್ಧಿಯಲ್ಲಿ ಅಲ್ಲಿಯ ಯುವಶಕ್ತಿಯ ಕೊಡುಗೆ ನಿರ್ಣಾಯಕ, ಅಲ್ಲಿಯ ಯುವಶಕ್ತಿಯನ್ನು ಸರಿಯಾದ ರೀತಿಯಲ್ಲಿ ಬಳಸಿದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಇಂದು ಅಭಿವೃದ್ಧಿಶೀಲ ರಾಷ್ಟಗಳಷ್ಟೇ ಅಲ್ಲದೆ, ಮುಂದುವರಿದ ದೇಶಗಳೂ ಕೂಡ ಈ ಯುವಶಕ್ತಿಯನ್ನು ಒಂದು ಸಂಪತ್ತೆಂದು ಪರಿಗಣಿಸಿವೆ. ದೇಶದ ಯುವಶಕ್ತಿಯನ್ನು ಗಮನದಲ್ಲಿರಿಸಿಕೊಂಡು ಎಲ್ಲೆಡೆಯೂ ದೃಷ್ಟಿ ಹಾಯಿಸಿದರೆ ಪ್ರತಿಯೊಂದು ಕ್ಷೇತ್ರದ ಅದ್ಭುತ ಪ್ರಗತಿಯ ಹಿಂದೆಯೂ ಯುವಜನರ ಸಾಧನೆ ಎದ್ದು ಕಾಣುತ್ತದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಸೆಟೆದು ನಿಂತು, ದೇಶವನ್ನು ದಾಸ್ಯದಿಂದ ಮುಕ್ತಗೊಳಿಸಿದ ನಮ್ಮ ಸಹೋದರರನ್ನು ಮರೆಯಲಾದೀತೆ? ಆದರೆ ದೇಶದ ಭವಿಷ್ಯವನ್ನು ನಿರ್ಧಾರ ಮಾಡುವ ರಾಜಕೀಯ ಕ್ಷೇತ್ರದಲ್ಲಿ ಸಮರ್ಥ ಯುವಶಕ್ತಿಯ ಬಳಕೆ ಇನ್ನೂ ಆಗಬೇಕಾದ ಅಗತ್ಯ ತುಂಬ ಇದೆ. ಹಳೆ ಬೇರು ಹೊಸ ಚಿಗುರು ಸೇರಿಕೊಂಡು ಅಭಿವೃದ್ಧಿಯ ಅಭಿಯಾನ ಆರಂಭವಾಗಬೇಕು. ವರ್ತಮಾನದಲ್ಲಿ ನಿಂತು ಇತಿಹಾಸದ ಪುಟಗಳನ್ನು ಅವಲೋಕಿಸಿದರೆ ಅಲ್ಲಿಯೂ ಯುವಜನಾಂಗದ ಸಾಧನೆಯೇನೂ ಕಡಿಮೆ ಇಲ್ಲ. ಪ್ರಪಂಚದಲ್ಲಿ ಆಗಿರುವ ಕ್ರಾಂತಿಗಳು, ಸಂಶೋಧನೆಗಳು, ಹೊಸತನದ ಹುಡುಕಾಟಗಳು, ಅನ್ವೇಷಣೆ, ಆವಿಷ್ಕಾರಗಳು-ಹೀಗೆ ಎಲ್ಲ ರಂಗಗಳಲ್ಲೂ ಇವರ ಉತ್ಸಾಹ, ಪ್ರಾಮಾಣಿಕತೆ ಹಾಗೂ ಸಾಹಸ ಗಳೇ ದೇಶಗಳ ನಿಜವಾದ ಬಂಡವಾಳವಾಗಿವೆ. ಯುವಕರೇ ದೇಶದ ಶಕ್ತಿ. ಇವರು ತಮ್ಮ ಇಚ್ಛಾಶಕ್ತಿ, ಸಂಕಲ್ಪಶಕ್ತಿ, ಕ್ರಿಯಾಶಕ್ತಿಗಳನ್ನು ಉಪಯೋಗಿಸಿಕೊಂಡು, ಸೃಜನಶೀಲತೆಯಿಂದ ಮುಂದುವರಿದರೆ ದೇಶದ ಸಂಪತ್ತಾಗುತ್ತಾರೆ. ಇವರು ಇಡುವ ಪ್ರತಿಯೊಂದು ಹೆಜ್ಜೆಯಲ್ಲೂ ದೇಶದ ಭವಿಷ್ಯ ಅಡಗಿದೆ ಎಂಬ ಮಾತು ಚಿರಸತ್ಯ. ಶಕ್ತಿಶಾಲಿ, ಉತ್ಸಾಹಿ, ಚೈತನ್ಯಯುಕ್ತ ಯುವಜನರಿಂದಲೇ ನಾಡುಕಟ್ಟುವ ಕಾರ್ಯವಾಗಬೇಕು.

ಯುವಜನತೆ ಇಂದು ವರ್ಷಾಕಾಲದಲ್ಲಿ ಹರಿಯುವ ಹೊಳೆಯಂತಿದ್ದಾರೆ. ಧೈರ್ಯ, ಸಾಹಸ, ಅಭ್ಯಾಸ, ಆತ್ಮವಿಶ್ವಾಸ, ಸ್ವಾತಂತ್ರ್ಯಗಳ ಒಟ್ಟು ಮೊತ್ತವನ್ನೇ ಯುವಶಕ್ತಿ ಎಂದು ಹೇಳಬಹುದು. ಎಳೆತನದ ಮುಗ್ಧತೆಯನ್ನು ದಾಟಿ, ಹಿರಿತನದ ಹೊಸ್ತಿಲಿನತ್ತ ನಡೆಯುವ ಅಮೂಲ್ಯ ಕಾಲ ಇದು. ಕಂಡು, ಕೇಳಿದ್ದನ್ನೆಲ್ಲಾ ಪ್ರಶ್ನಿಸುವ ಮತ್ತು ಪರೀಕ್ಷೆಗೊಡ್ಡುವ ಕಾಲ. ಇದು ಅತ್ಯಂತ ಸೂಕ್ಷ್ಮ ಅವಧಿಯೂ ಹೌದು. ಅನ್ಯಾಯ, ಅಸಮತೆಗಳ ವಿರುದ್ಧ ಹೋರಾಡಬಯಸುವ ವಯಸ್ಸು, ಒಮ್ಮೊಮ್ಮೆ ಭಾವೋದ್ವೇಗದ ಭರದಲ್ಲಿ ತನಗೇ ತಿಳಿಯದಂತೆ ಅಂತಹ ಆನ್ಯಾಯ, ಅನಾಹುತಗಳಿಗೆ ಕಾರಣವಾಗಲೂಬಹುದು. ಇದಕ್ಕೊಂದು ಉತ್ತಮ ಉದಾಹರಣೆ ನಕ್ಸಲ್ ಚಳುವಳಿ. ಹಾಗಾಗಲು ಬಿಡದಿರುವುದೇ ನಮ್ಮ ಮುಂದಿರುವ ಸವಾಲು ಕೂಡಾ.

ಯೌವನದ ಶಕ್ತಿ ಸಾಹಸಗಳು, ಆಸೆ ಆಕಾಂಕ್ಷೆಗಳು ಒಂದು ಪ್ರವಾಹವಿದ್ದಂತೆ, ಯೋಗ್ಯ ಅಣೆಕಟ್ಟು ನಿರ್ಮಿಸಿ ಅವುಗಳನ್ನು ಸೂಕ್ತ ನಾಲೆಗಳಲ್ಲಿ ಹರಿಸದಿದ್ದರೆ ಈ ಪ್ರವಾಹ ಹುಚ್ಚೆದ್ದು ಹರಿಯುತ್ತದೆ. ತನ್ನ ಹಾದಿಯಲ್ಲಿ ಸಿಕ್ಕಿದ್ದನ್ನೆಲ್ಲಾ ಕೊಚ್ಚಿಕೊಂಡು ಹೋಗುತ್ತದೆ. ಯುವಜನತೆಯ ಇಚ್ಛೆ, ಬಯಕೆಗಳಿಗೆ ಸರಿ ಹೊಂದುವ ಆದರ್ಶಗಳು, ಭಾವನಾತ್ಮಕ ಕ್ರಿಯೆಗಳು ದೊರೆಯದಿದ್ದರೆ ಉದ್ವೇಗ, ಹಿಂಸೆ, ಅಸಹಾಯಕತೆ, ನಿರುತ್ಸಾಹಗಳಂತಹ ಮಾರಕ ಭಾವನೆಗಳಿಗೆ ತುತ್ತಾಗುತ್ತಾರೆ. ಅಪಾರವಾದ ಬಂಡವಾಳವನ್ನು ಮೈಗೂಡಿಸಿಕೊಂಡಂತೆ ಕಂಡರೂ ಸಹ ಯುವಜನತೆ ಎಲ್ಲೋ ಒಂದೆಡೆ ಸೊರಗಿದಂತೆನಿಸುತ್ತದೆ. ಪ್ರಸಕ್ತ ಪ್ರಪಂಚದ ವ್ಯವಸ್ಥೆಗಳ ಕುರಿತ ಅತೃಪ್ತಿ ಅವರ ನಡವಳಿಕೆಗಳಲ್ಲಿ ಎದ್ದು ಕಾಣುತ್ತಿದೆ. ಅವರಲ್ಲಿ ಕೆಲವರಿಗೆ ಸಮಾಜದ ಹಿತಕ್ಕಿಂತಲೂ ಸ್ವಸುಖವೇ ಪ್ರಮುಖವಾಗಿದೆ. ಆಧ್ಯಾತ್ಮಿಕ ಆಸ್ಥೆಯ ಕೊರತೆಯಿದೆ. ಎಲ್ಲ ಆದರ್ಶಗಳೂ ಹೊಗೆಯ ಮೋಡಗಳಾಗಿವೆ. ಅವರ ಆದರ್ಶಗಳು ಯಾವುದೋ ಬಾವಿಯಲ್ಲಿ ಹೂತಿಟ್ಟ ನಿಧಿಗಳಾಗಿವೆ. ಗುರಿಯ ನಿರ್ಧಾರ ಹಾಗೂ ಸವಾಲುಗಳನ್ನು ಎದುರಿಸುವ ಛಲ ಇವೆರಡರಲ್ಲೂ ಏಕೋ ಏನೋ ಯುವಜನಾಂಗ ಸೋಲುತ್ತಿದೆ. ಇವೆಲ್ಲದರ ಮೂಲ ಕಾರಣವನ್ನು ಹುಡುಕಿದರೆ ಥಟ್ಟನೆ ಗೋಚರಿಸುವುದು ಸೂಕ್ತ ಮಾರ್ಗದರ್ಶನದ ಕೊರತೆ.

ಸಾವಿಲ್ಲದ ಮನೆ ಇಲ್ಲದಿರುವಂತೆ ಸಮಸ್ಯೆಗಳಿಲ್ಲದ ವ್ಯಕ್ತಿಯೂ ಸಿಗಲಾರ. ಸಮಸ್ಯೆಗಳನ್ನು ಸವಾಲೆಂಬಂತೆ ಸ್ವೀಕರಿಸಿ ಮುಂದೆ ನಡೆದರೆ ಉತ್ತರ ಸುಲಭವಾಗುತ್ತ ಹೋಗುತ್ತದೆ. ಸಾಧಾರಣವಾಗಿ ನಾವೆಲ್ಲರೂ ಮಾರ್ಗದರ್ಶನದ ಕೊರತೆ ಎಂಬ ಹಣೆಪಟ್ಟಿಯನ್ನು ಎಲ್ಲೆಡೆಯೂ ಅಂಟಿಸಿಬಿಡುತ್ತೇವೆ. ಕಣ್ತೆರೆದು ನೋಡಿದರೆ ನಮ್ಮ ಸುತ್ತಮುತ್ತಲ ಪರಿಸರವೇ ನಮಗೆ ಮಾರ್ಗದರ್ಶಿಯಾಗಬಹುದು, ನೆರೆಮನೆಯ ಒಬ್ಬ ಸಾಮಾನ್ಯ ಮನುಷ್ಯನೂ ನಮಗೆ ಮಾರ್ಗದರ್ಶಕನಾಗಬಹುದು. ಸಂಬಂಧಗಳ ನೆಪವೊಡ್ಡಿ ಯುದ್ಧದಿಂದ ಹಿಂತೆಗೆದ ಅರ್ಜುನನನ್ನು, ಶ್ರೀಕೃಷ್ಣ ಧರ್ಮದ ದಾರಿಯಲ್ಲಿ ನಡೆಸಿದಂತೆ, ಜಡವಾಗಿ ಮಲಗಿರುವ ನಮ್ಮ ದೇಶದ ಜನತೆಯನ್ನು ಎಚ್ಚರಿಸಲು ಸ್ವಾಮಿ ವಿವೇಕಾನಂದರ ಮಾರ್ಗದರ್ಶನ ನಮಗಿದ್ದೇ ಇದೆ.

ಯುವಜನತೆಯು ಮೊತ್ತಮೊದಲಿಗೆ ತಮ್ಮನ್ನು ಕಾಡುತ್ತಿರುವ ನಿಷೇಧಾತ್ಮಕ ಯೋಚನೆಗಳಿಂದ ಹೊರಬರಬೇಕು. ಸ್ವಾವಲಂಬನೆಯ ಕನಸುಗಳನ್ನು ಕಾಣಬೇಕು. ಎಲ್ಲ ಕಳೆದು ಹೋದರೂ ಇನ್ನೂ ‘ನಾನು’ ಇದ್ದೇನೆ ಎನ್ನುವ ಅದಮ್ಯ ಉತ್ಸಾಹ, ನಂಬಿಕೆಯೇ ಬದುಕಿನ ಮೂಲ ದ್ರವ್ಯ. ಯಾವುದೇ ಕೆಲಸ ಅಥವಾ ಆಲೋಚನೆ ಮಾಡುವಾಗ ಇದನ್ನು ಸಾಧಿಸಿಯೇತೀರುತ್ತೇನೆಂಬ ದೃಢ ವಿಶ್ವಾಸದಿಂದ ಮುನ್ನುಗ್ಗಿದರೆ ಖಂಡಿತವಾಗಿಯೂ ಯಶಸ್ಸು ಕಾಣಲು ಸಾಧ್ಯ.

ನಾವು ನಮ್ಮ ಭೂತಕಾಲವನ್ನು ಬದಲಿಸಲು ಸಾಧ್ಯವಿಲ್ಲ. ಭೂತಕಾಲದ ಕತೆ ಹೇಳುತ್ತಾ ವರ್ತಮಾನವನ್ನು ಕಡೆಗಣಿಸಿದರೆ ನಾವು ನಿಂತ ನೀರಾಗುತ್ತೇವೆ. ದೇಶ ಕಟ್ಟುವಲ್ಲಿ ನಮ್ಮ ಪಾತ್ರವನ್ನರಿತು ಮುನ್ನಡೆಯಬೇಕು, ಹೌದು, ಹಳ್ಳಿಹಳ್ಳಿಗಳೂ ಇಂದು ಸೇವಾಸಕ್ತರಿಗಾಗಿ ಕಾಯುತ್ತಿವೆ. ಬದಲಾವಣೆ ಕಾಣಬಯಸುತ್ತಿವೆ. ಈ ಬದಲಾವಣೆಯ ನೇತಾರರು ಇನ್ನಾರೋ ಆಗಿರಲು ಸಾಧ್ಯವಿಲ್ಲ. ನಮ್ಮ ಹಳ್ಳಿಗಳ ಏಳ್ಗೆಗೆ ನಾವೇ ಶ್ರಮಿಸಬೇಕು. ಆ ಮೂಲಕ ದೇಶಕಟ್ಟುವ ಕೆಲಸದಲ್ಲಿ ತೊಡಗಬೇಕು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ದಿವ್ಯತೆ ಇದೆ. ಅದನ್ನು ಪ್ರಕಟಪಡಿಸಲು ಒಂದು ವೇದಿಕೆ ಈ ಸೇವಾಕ್ಷೇತ್ರ, ನಮ್ಮ ಹಳ್ಳಿಗಳ ಶಾಲೆ ಹಾಗೂ ಶೈಕ್ಷಣಿಕ ಸುಧಾರಣೆ, ಊರಿನ ನೈರ್ಮಲ್ಯ, ಊರಿನ ನೆಮ್ಮದಿಗೆ ಭಂಗ ತರುವಂಥ ಮದ್ಯಪಾನ, ಬಾಲ್ಯ ವಿವಾಹ, ಸ್ತ್ರೀಶಿಕ್ಷಣದ ಹಿನ್ನಡೆ, ಬಾಲಕಾರ್ಮಿಕ ಪದ್ಧತಿ ಮೂಢನಂಬಿಕೆಗಳು ಮುಂತಾದ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ. ಬಿಂದುವಿನಿಂದಲೇ ಸಿಂಧು. ಎಷ್ಟೇ ದೊಡ್ಡ ಕಟ್ಟಡವಾದರೂ ಅದರ ನಿರ್ಮಾಣ ಪ್ರಾರಂಭವಾಗುವುದು ಮೊದಲ ಇಟ್ಟಿಗೆಯಿಂದಲೇ. ಇಂತಹ ಚಟುವಟಿಕೆಗಳಲ್ಲಿ ಯುವಕರು ಸಕ್ರಿಯವಾಗಿ ತೊಡಗಿಸಿಕೊಂಡರೆ ಮುಂದಿನ ದಾರಿ ಸುಗಮ.

ತ್ಯಾಗ ಮತ್ತು ಸೇವೆ ಸ್ವಾಮಿ ವಿವೇಕಾನಂದರು ನಮಗೆ ನೀಡಿದ ಎರಡು ವರಗಳು. ಸಾರ್ವಜನಿಕರ ಬೆವರಿನಿಂದ ಶಿಕ್ಷಣ ಪಡೆದ ನಾವು ಅವನ್ನು ಸಾರ್ವಜನಿಕ ಹಿತಾಸಕ್ತಿಗೆ ಬಳಸಿದಾಗ ಮಾತ್ರ ಅವುಗಳ ಮೌಲ್ಯವರ್ಧನೆಯಾಗುತ್ತದೆ. ‘ನಾವು ಇರುವುದೇ ನಮ್ಮ ಹಳ್ಳಿಯ ಏಳ್ಗೆಗಾಗಿ, ನಮ್ಮವರ ಬದುಕಿನ ಉನ್ನತಿಗಾಗಿ’ ಎಂಬ ಉದಾತ್ತ ಭಾವನೆಯ ಮೂಲಕ ಸಮಾಜದ ಒಳಿತಿನಲ್ಲೇ ತನ್ನ ಶ್ರೇಯಸ್ಸೂ ಅಡಗಿದೆ ಎಂಬುದನ್ನು ಮನಗಾಣಬೇಕು. ಒಬ್ಬ ಬರಿಗೈ ಫಕೀರ ಅಣ್ಣಾ ಹಜಾರೆಯಂತಹ ವ್ಯಕ್ತಿಯ ಸೇವಾಮನೋಭಾವದಿಂದ, ನಿರಂತರ ಪರಿಶ್ರಮದಿಂದ ರಾಲೆಗಾಂವ್ ಸಿದ್ಧಿಯಂತಹ ಹಳ್ಳಿ ಇಂದು ಭಾರತದ ಭೂಪಟದಲ್ಲಿ ತನ್ನ ಸ್ಥಾನ ಸ್ಥಾಪಿಸಿಕೊಳ್ಳಲು, ಜನರನ್ನು ತನ್ನತ್ತ ಆಕರ್ಷಿಸಲು ಸಾಧ್ಯವಾಗಿದೆಯೆಂದರೆ, ಇಂಥ ಲಕ್ಷೋಪಲಕ್ಷ ಜನರ ಪರಿಶ್ರಮ ಒಟ್ಟುಗೂಡಿದರೆ ನಮ್ಮ ಹಳ್ಳಿಗಳ ಚಿತ್ರಣ ಹೇಗಿದ್ದೀತು? ಎಲ್ಲಿಯೋ ಯಾರದೋ ಸಾಧನೆಗಳನ್ನು ಓದಿ, ಪ್ರಶಂಸಿಸುವುದರ ಜೊತೆಗೆ ‘ನನಗೆ ಸಿಕ್ಕಿರುವ ಅವಕಾಶದಲ್ಲಿ ನಾನೇನು ಒಳಿತನ್ನು ಮಾಡ ಬಲ್ಲೆ’ನೆಂಬ ನಿರಂತರ ಚಿಂತನೆ ಇಂದಿನ ಯುವಪೀಳಿಗೆಯಲ್ಲಿ ಅಂಕುರಿಸಬೇಕಾಗಿದೆ. ದೀನ ದರಿದ್ರರಲ್ಲಿ ದೇವರನ್ನು ಕಂಡು, ಆ ದೇವರ ಸಾಕ್ಷಾತ್ಕಾರಕ್ಕಾಗಿ ಕಾರ್ಯರಂಗಕ್ಕೆ ಇಳಿಯುವುದು ಉತ್ತಮ. ಈ ರೀತಿಯ ಸೇವಾಕಾರ್ಯದಲ್ಲಿ ತೊಡಗುವಾಗ ‘ನಾನು’ ಎಂಬುದನ್ನು ದೂರವಿಟ್ಟು ‘ನನ್ನ ಸೇವೆಯನ್ನು ಸ್ವೀಕರಿಸುವ ದೇವರು ದೊರೆತಿದ್ದಾನೆ’, ಎಂಬ ಉದಾತ್ತವೂ, ವಿನೀತವೂ ಆದ ಭಾವದಿಂದ ಕರ್ತವ್ಯದಲ್ಲಿ ತೊಡಗಬೇಕು. ಎಲ್ಲಾ ಕೆಲಸಗಳಲ್ಲೂ ದಿವ್ಯತೆಯ ಸಹಭಾಗಿತ್ವವಿರಬೇಕು. ‘ನಾನು’ ರಹಿತ ಸೇವೆ ಎಲ್ಲರ ಆದರ್ಶವಾಗಬೇಕು.

ಅಭಿವೃದ್ಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ವ್ಯಕ್ತಿ ತನ್ನ ಸಾಮರ್ಥ್ಯದಲ್ಲಿ ಶ್ರದ್ಧೆಯಿಟ್ಟು ಕಾರ್ಯ ನಿರ್ವಹಿಸದೆ ಇದ್ದರೆ ಅದರಿಂದ ಏನೂ ಪ್ರಯೋಜನ ಆಗಲಾರದು. ನಮ್ಮ ದೇಶದ ಪ್ರಗತಿಗೆ ನಾವೇ ಕಾರಣವಾಗಬೇಕೆ ಹೊರತು ಇತರರಲ್ಲ. “ಪ್ರಪಂಚದ ಎಲ್ಲಾ ಸಂಪನ್ಮೂಲಗಳನ್ನೂ ಕ್ರೋಡೀಕರಿಸಿದರೂ ಭಾರತದ ಒಂದು ಸಣ್ಣ ಗ್ರಾಮವನ್ನೂ ಸರಿಪಡಿಸಲಾಗದು. ಆ ಸಮುದಾಯ ಸ್ವಾವಲಂಬಿಯಾಗಿ ತನ್ನ ಹಳ್ಳಿಯ ಏಳ್ಗೆಯಲ್ಲಿ ಪಾಲ್ಗೊಳ್ಳುವಂತಾದಾಗ ಮಾತ್ರ ಆ ಹಳ್ಳಿಯ ಅಭಿವೃದ್ಧಿ ಸಾಧ್ಯ” ಎಂಬ ಅಂಶವನ್ನು ಸ್ವಾಮಿಜಿ ಹಿಂದೆಯೇ ಸಾರಿ ಹೇಳಿದ್ದಾರೆ. ಹೀಗೆ ಆಗಬೇಕಾದರೆ ಜನಸಮುದಾಯದಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಪ್ರಾರಂಭವಾಗಬೇಕು. ಬದಲಾವಣೆಗೆ ತಮ್ಮನ್ನು ತೆರೆದುಕೊಳ್ಳುವಂಥ ಆಸಕ್ತರನ್ನು ಒಗ್ಗೂಡಿಸಿ, ಧೂಳು ತುಂಬಿದ ಕನ್ನಡಿಯಂತಿರುವ ಈ ಸಮುದಾಯದ ಧೂಳೊರೆಸುವ ಕಾರ್ಯ ನಮ್ಮದಾಗಬೇಕು. ಆ ಮೂಲಕ ಅವರ ಪ್ರಗತಿಯಲ್ಲಿ ನೆರವಾಗಬೇಕು. ಇದಕ್ಕೆ ವಿದ್ಯಾರ್ಹತೆಗಿಂತ, ಇತರರ ನೋವಿಗೆ ಸ್ಪಂದಿಸುವ ಮನೋಭಾವವೇ ಬಹು ಮುಖ್ಯವಾಗುತ್ತದೆ.

ಪ್ರಪಂಚದಲ್ಲಿ ಯಾವುದೂ ಮನುಷ್ಯನಿಗೆ ಸಂಪೂರ್ಣ ತೃಪ್ತಿಯನ್ನು ಕೊಡಲಾರದು. ಪ್ರಾಪಂಚಿಕ ಆಸೆ ಆಕಾಂಕ್ಷೆಗಳನ್ನೂ ಮೀರಿ, ನೊಂದವರಿಗೆ, ಅಶಕ್ತರಿಗೆ ನೆರವಾಗುವ ಆಧ್ಯಾತ್ಮಿಕ ಹಾಗೂ ಸೇವಾದರ್ಶಗಳನ್ನು ಪಾಲಿಸುವುದು ಪ್ರತಿಯೊಬ್ಬ ಯುವಕನ ಗುರಿಯಾಗಬೇಕು. ಇದಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಇಚ್ಛೆ ಇರಬೇಕು. ಜೀವನದ ಪರಮಾದರ್ಶವನ್ನು ಸಾಧಿಸುವುದಕ್ಕಾಗಿ ಏನನ್ನೇ ಮಾಡಲು, ಎಂಥ ಕಷ್ಟವನ್ನಾದರೂ ಎದುರಿಸಲು ಸಿದ್ಧರಿರಬೇಕು. ಉನ್ನತ ಆದರ್ಶದೆಡೆಗೆ ಮನಸ್ಸನ್ನು ಸದಾ ತೆರೆದಿಡಬೇಕು, ಹಂತ ಹಂತವಾಗಿ ನಿಷ್ಠೆಯಿಂದ ಅದರೆಡೆಗೆ ನಡೆಯಬೇಕು; ಗುರಿ ಮುಟ್ಟುವವರೆಗೂ ನಮ್ಮ ಆಸಕ್ತಿ ಕುಂದಬಾರದು. ನಮ್ಮ ಉತ್ಸಾಹವನ್ನು ಕಾಪಾಡಿಕೊಂಡು ಒಳಿತಿನ ಪರವಾದ ಹೋರಾಟವನ್ನು ನಿಲ್ಲಿಸದೆ, ಮನಸ್ಸನ್ನು ಚಂಚಲಗೊಳಿಸದೆ ದೃಢಚಿತ್ತದಿಂದ ಹೋರಾಡಬೇಕು. ಸ್ವಾಮಿ ವಿವೇಕಾನಂದರ ಜೀವನಚರಿತ್ರೆಯನ್ನೊಮ್ಮೆ ನೋಡಿದಾಗ ಅವರು ಸರ್ವರ ಒಳಿತಿಗಾಗಿ ಅವಿಶ್ರಾಂತವಾಗಿ ಹೋರಾಡಿರುವ ಆದರ್ಶ ನಮ್ಮ ಕಣ್ಣು ತೆರೆಸಬಹುದು. ಅವರಲ್ಲಿ ಅಸಮಾನ್ಯ ಪಾವಿತ್ರ್ಯ ಮತ್ತು ಶಕ್ತಿಗಳಿದ್ದವು; ಅಪಾರ ಬುದ್ಧಿಶಕ್ತಿ, ಉನ್ನತವಾದ ಪ್ರತಿಭೆಗಳಿದ್ದವು, ಅವರು ಇಷ್ಟಪಟ್ಟಿದ್ದರೆ ಪ್ರಾಪಂಚಿಕ ಜೀವನದಲ್ಲಿ ಎಂತಹ ಉನ್ನತ ಸ್ಥಾನವನ್ನು ಬೇಕಾದರೂ ಪಡೆಯಬಹುದಿತ್ತು. ಆದರೆ ಅವರು ಸೇವೆ ಮತ್ತು ತ್ಯಾಗದ ಮಾರ್ಗವನ್ನೇ ಆಯ್ದು ಕೊಂಡರು. ಆ ಮೂಲಕ ಭಾರತದ ಅಭಿವೃದ್ಧಿಯಲ್ಲಿ ಒಂದು ಸಂಚಲನವನ್ನೇ ಉಂಟುಮಾಡಿದರು. ಸ್ವಾಮಿಜಿಯವರ ತ್ಯಾಗ ಮತ್ತು ಸೇವೆ ಪ್ರತಿಯೊಬ್ಬರ ಬಾಳಿನ ಆದರ್ಶವಾಗಬೇಕು. ಇದನ್ನು ಅಳವಡಿಸಿಕೊಂಡಲ್ಲಿ ಮಾತ್ರ ನಾವು ಇತರರ ಜೀವನದಲ್ಲಿ ಬೆಳಕನ್ನು ತರಲು ಸಾಧ್ಯ.

‘ಸೇವೆ ಮತ್ತು ತ್ಯಾಗ’ ಎಂದಾಕ್ಷಣ ಹಳೆಯದೆಲ್ಲವನ್ನೂ ತೊರೆದು ಹೊಸ ಅವಕಾಶಗಳ ಹೊಸತನದ ಹುಡುಕಾಟ ಎಂದು ಅರ್ಥೈಸಿದರೆ ಸೇವಾಧರ್ಮವನ್ನು ತಪ್ಪಾಗಿ ಅರ್ಥೈಸಿದಂತಾಗುವುದು. ನಾವು ಈಗ ಮಾಡುತ್ತಿರುವ ಕೆಲಸವನ್ನೇ ಸರಿಯಾದ ಭಾವದಲ್ಲಿ ಹಲವರಿಗೆ ಪ್ರಯೋಜನಕಾರಿಯಾಗುವಂತೆ ಮಾಡುವುದು ಈ ಮನೋಭಾವದ ಮೂಲ. ಅದು ಸರ್ಕಾರಿ ಕೆಲಸವಿರಲಿ, ಸೇವಾ ಚಟುವಟಿಕೆಗಳಿರಲಿ. ಅವನ್ನು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮಾಡಿ. ಜನರ ಒಳಿತಿಗೆ ಕಾರಣರಾಗಬೇಕು. ಯುವಜನರು ಇಂಥ ತ್ಯಾಗ, ಪರಿಶ್ರಮ, ಶ್ರದ್ಧೆ ಮತ್ತು ಶಕ್ತಿಯ ಸಂಕೇತವಾಗಬೇಕು. ‘ಸಾಮಾಜಿಕ ಮೌಲ್ಯಗಳ ಮರುಹುಟ್ಟು ನಮ್ಮಿಂದಲೇ ಸಾಧ್ಯ’, ಎಂದು ಪರಿಭಾವಿಸಿ ಮುನ್ನಡೆಯಬೇಕು. ಅವರು ಮಾಡುವ ಪ್ರತಿಯೊಂದು ಕೆಲಸದ ಬಗ್ಗೆಯೂ ಒಂದು ಹೊಸ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕು. ಯಾವುದೇ ಒಂದು ಆದರ್ಶದ ಗುರಿ ಇಟ್ಟುಕೊಂಡು ಅದನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಯಶಸ್ಸಿನ ದಾರಿಯೆಡೆಗೆ ಯುವಜನರು ನೀಡಬೇಕಾದ ಗಮನವನ್ನು ಕುರಿತು ಸ್ವಾಮಿ ವಿವೇಕಾನಂದರು ಹೀಗೆ ಹೇಳಿದ್ದಾರೆ: “ಸಹೋದರರೆ, ಒಂದು ಭಾವನೆಯನ್ನು ತೆಗೆದುಕೊಳ್ಳಿ, ಅದನ್ನು ನಿಮ್ಮ ಜೀವನದಲ್ಲಿ ಅಭ್ಯಾಸ ಮಾಡಿ. ಅದನ್ನೇ ಆಲೋಚನೆ ಮಾಡಿ, ಅದನ್ನೇ ಕನಸು ಕಾಣಿ. ಆ ಒಂದು ಭಾವನೆಗಾಗಿ ನಿಮ್ಮ ಬಾಳನ್ನೆಲ್ಲ ಸವೆಸಿ. ಮೆದುಳು, ಮಾಂಸ ಖಂಡಗಳು, ನರಗಳು ಮತ್ತು ನಿಮ್ಮ ದೇಹದ ಪ್ರತಿಯೊಂದು ಭಾಗವೂ ಕೂಡ ಈ ಭಾವನೆಯಿಂದ ತುಂಬಿ ತುಳುಕಲಿ. ಉಳಿದ ಆಲೋಚನೆಗಳನ್ನೆಲ್ಲ ಅವುಗಳ ಪಾಲಿಗೆ ಬಿಡಿ. ಜಯ ಪಡೆಯುವುದಕ್ಕೆ ಇದೊಂದೇ ದಾರಿ… ” ಈ ನುಡಿಗಳನ್ನು ಅರ್ಥಮಾಡಿಕೊಂಡು ಅಕ್ಷರಶಃ ಪಾಲಿಸುವಂತಾದರೆ ನಮ್ಮ ಯಶಸ್ಸಿಗಾಗಿ ಇತರರೆಡೆಗೆ ಎಡತಾಕುವುದರ ಆವಶ್ಯಕತೆ ನಮಗಿರುವುದಿಲ್ಲ.

ಇಂದು ಯುವಜನರ ಶ್ರದ್ಧಾಪೂರ್ಣ ಅಧ್ಯಯನ, ಉತ್ಸಾಹಪೂರ್ಣ ಆಲೋಚನೆಗಳು, ಅಷ್ಟೇ ಮುಖ್ಯವಾದ ಸತ್ಸಹವಾಸಗಳ ಮೂಲಕ ದೊರೆತ ಅನನ್ಯ ಶಕ್ತಿ ಸಾಮರ್ಥ್ಯಗಳು ಸುತ್ತಣ ಸಮಾಜದ ಕ್ಷೇಮಾಭ್ಯುದಯಕ್ಕೆ ವಿನಿಯೋಗವಾಗಬೇಕು. ಯುವಜನಾಂಗ ತಮಗೆ ದೊರೆತಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಯಾವ ಕೆಲಸವೂ ಕೀಳಲ್ಲ, ಎಲ್ಲ ಕೆಲಸವೂ ಒಂದು ಪೂಜೆ, ಪ್ರಾರ್ಥನೆ ಎಂಬ ಅಂಶವನ್ನು ಮೈಗೂಡಿಸಿಕೊಳ್ಳಬೇಕು. ಹಿರಿಯರ ಅನುಭವ ಹಾಗೂ ಮಾರ್ಗದರ್ಶನವನ್ನು ಪಡೆದುಕೊಂಡು ತಮ್ಮ ಗುರಿ ಹಾಗೂ ದಾರಿಯನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಯುವಶಕ್ತಿ ಎನ್ನುವುದು ಪ್ರತಿಯೊಬ್ಬನ ಬಾಳಿನಲ್ಲಿ ಒಮ್ಮೆ ದಾಟಿದರೆ ಮತ್ತೆ ಬಾರದ ಅವಧಿ. ಎಲ್ಲರ ಬದುಕನ್ನು ಕಟ್ಟಲು ಈ ಕಾಲವನ್ನು ವಿನಿಯೋಗಿಸಬೇಕು. ಈ ಅವಧಿಯನ್ನು ಗುರಿ-ಆದರ್ಶಗಳೇ ಇಲ್ಲದೆ ದುರ್ವ್ಯಯ ಮಾಡಿ ನಂತರ ಪಶ್ಚಾತ್ತಾಪ ಪಟ್ಟರೆ ಏನೂ ಪ್ರಯೋಜನವಿಲ್ಲ. ಹೀಗೆ ಮಾಡಿದರೆ ದೇಶದ ಸಂಪತ್ತಾಗಬೇಕಾದ ಯುವಜನತೆ ದೇಶಕ್ಕೆ ಹೊರೆಯಾಗಿ ಪರಿಣಮಿಸುತ್ತದೆ. ಇಂದು ರಾಜಕೀಯ ಪಗಡೆಯಾಟದ ದಾಳಗಳಾಗಿ, ಅನುತ್ಪಾದಕ ಚಟುವಟಿಕೆಗಳ ಸಾಧನಗಳಾಗಿ, ತಾತ್ತ್ವಿಕ ಸಿದ್ಧಾಂತಗಳಿಲ್ಲದ ಮುಷ್ಕರನಿರತ ಯುವಜನತೆ ನಮಗೆ ಕಾಣುತ್ತಿದ್ದಾರೆ. ಇದು ಒಳ್ಳೆಯ ಲಕ್ಷಣವಂತೂ ಅಲ್ಲ. ದೇಶದ ಹಾಗೂ ತಮ್ಮ ಬದುಕಿನ ಮಹತ್ವದ ತೀರ್ಮಾನ ತೆಗೆದುಕೊಳ್ಳಬೇಕಾದ ಘಟ್ಟ ಈ ವಯಸ್ಸು. ಮೊದಲೇ ತಿಳಿಸಿದಂತೆ ಯುವಜನತೆ ಇಡುವ ಪ್ರತಿಯೊಂದು ಹೆಜ್ಜೆಯಲ್ಲೂ ದೇಶದ ಭವಿಷ್ಯ ಅಡಗಿದೆ. ಈ ಜವಾಬ್ದಾರಿ ಹಾಗೂ ಹೊಣೆಯನ್ನರಿತು ಯುವಜನತೆ ಮುಂದಡಿ ಇಡಬೇಕು. ಎಳೆತನದ ಸೊಗಸನ್ನು ದಾಟಿ, ಹಿರಿತನದ ಹೊಸ್ತಿಲಲ್ಲಿರುವ ಈ ಅವಧಿಯ ಒಂದೊಂದು ನಿಮಿಷವೂ ಮಹತ್ವದ್ದು. ಮೇಲಾಗಿ ಈ ಅವಧಿಯೇನೂ ದೀರ್ಘವಲ್ಲ. ನಮ್ಮಲ್ಲಿ ಶಕ್ತಿ ಸಾಮರ್ಥ್ಯಗಳು ತುಂಬಿರುವಾಗಲೇ ಅದರ ಸಂಪೂರ್ಣ ವಿನಿಯೋಗವಾಗಬೇಕು. ಮಾನಸಿಕ, ದೈಹಿಕ ಹಾಗೂ ಬೌದ್ಧಿಕ ಶಕ್ತಿಗಳೆಲ್ಲವೂ ನಿಃಸ್ವಾರ್ಥ ಸೇವೆಗೆ ಮುಡಿಪಾಗಿ ಹಲವರ ಒಳಿತಿಗೆ ಕಾರಣವಾಗುವುದಾದರೆ ನಾವಿರುವ ತಾಣವನ್ನೇ ಸ್ವರ್ಗವಾಗಿಸಬಹುದು. ಯುವಜನತೆ ಈ ನಿಟ್ಟಿನಲ್ಲಿ ದೃಢನಿಶ್ಚಯ ಹಾಗೂ ಸಂಕಲ್ಪದಿಂದ ಮುಂದುವರಿದರೆ ಬಹಳ ಬೇಗನೇ ದೇಶವನ್ನು ವಿಶ್ವಮಾನ್ಯತೆಯೆಡೆಗೆ ಕೊಂಡೊಯ್ಯಬಹುದು.

(ಮೂಲ: ವಿವೇಕಪ್ರಭ ಜನವರಿ 2006)