ನುಡಿಮುತ್ತುಗಳು ೧

ಒಂದು ಭಾವನೆಯನ್ನು ತೆಗೆದುಕೊಳ್ಳಿ. ಅದನ್ನು ನಿಮ್ಮ ಜೀವನದಲ್ಲಿ ಅಭ್ಯಾಸ ಮಾಡಿ, ಅದನ್ನೇ ಆಲೋಚನೆ ಮಾಡಿ. ಅದನ್ನೇ ಕನಸು ಕನಸುಕಾಣಿ. ಆ ಒಂದು ಭಾವನೆಗಾಗಿ ನಿಮ್ಮ ಬಾಳನ್ನೆಲ್ಲ ಸವೆಸಿ. ಮೆದುಳು , ಮಾಂಸಖಂಡಗಳು, ನರಗಳು ಮತ್ತು ನಿಮ್ಮ ದೇಹದ ಪ್ರತಿಯೊಂದು ಭಾಗವೂ ಕೂಡ ಆ ಭಾವದಿಂದ ತುಂಬಿ ತುಳುಕಾಡಲಿ. ಉಳಿದ ಆಲೋಚನೆಗಳನ್ನೆಲ್ಲ ಅವುಗಳ ಪಾಡಿಗೆ ಬಿಡಿ. ಜಯ ಪಡೆಯುವುದಕ್ಕೆ ಇದೊಂದೇ ದಾರಿ... ನಾವು ನಿಜವಾಗಿಯೂ ಮುಕ್ತರಾಗಬೇಕಾದರೆ ಮತ್ತು ಇತರರನ್ನು ಬಂಧಮುಕ್ತರನ್ನಾಗಿ ಮಾಡಬೇಕಾದರೆ ನಾವು ಇನ್ನೂ ಆಳಕ್ಕೆ ಹೋಗಬೇಕು. (ಕೃ. ಶ್ರೇ.೨.೩೬೧)

ನುಡಿಮುತ್ತುಗಳು ೨

ದೇವದೂತರು, ಮಹರ್ಷಿಗಳು, ಮತ್ತು ತಪಸ್ವಿಗಳು ಏನು ಮಾಡಿದರು? ಒಂದು ಜೀವನದಲ್ಲಿ ಇಡೀ ಮಾನವ ಜನಾಂಗದ ಬಾಳನ್ನೇ ಬಾಳಿದರು. ಸಾಧಾರಣ ಮಾನವನು ಮುಕ್ತಿಯನ್ನು ಪಡೆಯುವುದಕ್ಕೆ ಹಲವು ಜನ್ಮಗಳು ನಡೆಯಬೇಕಾದ ದಾರಿಯನ್ನು ಒಂದೇ ಜನ್ಮದಲ್ಲಿ ಮುಗಿಸಿದರು. ಒಂದೇ ಜನ್ಮದಲ್ಲಿಯೇ ಅವರು ಪೂರ್ಣತೆಯನ್ನು ಪಡೆದರು. ಮತ್ತಾವುದನ್ನೂ ಅವರು ಆಲೋಚಿಸುವುದೇ ಇಲ್ಲ. ಬೇರಾವ ವಿಷಯಗಳನ್ನೂ ಅವರು ಒಂದುಗಳಿಗೆಯೂ ಯೋಚಿಸುವುದೇ ಇಲ್ಲ. ಹೀಗೆ ಅವರ ದೂರ ಕಡಿಮೆಯಾಗುವುದು. ಏಕಾಗ್ರತೆಯೆಂದರೆ ಇದೇ. ಕಾಲವನ್ನು ಕಡಿಮೆ ಮಾಡುವುದಕ್ಕಾಗಿ, ಗಹನ ವಿಷಯಗಳನ್ನು ರಕ್ತಗತಮಾಡಿಕೊಳ್ಳುವ ಶಕ್ತಿಯನ್ನು ತೀವ್ರಗೊಳಿಸುವುದು. (ಕೃ. ಶ್ರೇ.೨.೩೪೨-೪೩)

ನುಡಿಮುತ್ತುಗಳು ೩

ಹೆಚ್ಚು ಏಕಾಗ್ರತೆ ಇದ್ದಷ್ಟೂ ಹೆಚ್ಚು ಜ್ಞಾನಾರ್ಜನೆಯಾಗುವುದು. ಇದೊಂದೇ ಜ್ಞಾನಾರ್ಜನೆಗೆ ಇರುವ ಏಕಮಾತ್ರ ಮಾರ್ಗ. ಬೂಟ್ಸಿಗೆ ಬಣ್ಣ ಹಾಕುವ ಅತಿ ಹೀನ ವ್ಯಕ್ತಿ ಕೂಡ ಹೆಚ್ಚು ಏಕಾಗ್ರತೆಯಿಂದ ಕೆಲಸ ಮಾಡಿದರೆ ಚೆನ್ನಾಗಿ ಬೂಟ್ಸಿಗೆ ಬಣ್ಣ ಹಾಕಬಲ್ಲ. ಅಡಿಗೆ ಮಾಡುವವನಿಗೆ ಏಕಾಗ್ರತೆ ಹೆಚ್ಚು ಇದ್ದಷ್ಟೂ ಚೆನ್ನಾಗಿ ಅಡಿಗೆ ಮಾಡಬಲ್ಲ. ದ್ರವ್ಯಾರ್ಜನೆಯಾಗಲಿ, ದೇವರ ಪೂಜೆಯಾಗಲಿ ಅಥವಾ ಮತ್ತಾವ ಕೆಲಸವಾದರೂ ಆಗಲಿ, ಹೆಚ್ಚು ಏಕಾಗ್ರತೆ ಇದ್ದಷ್ಟೂ ಚೆನ್ನಾಗಿ ಅದನ್ನು ಮಾಡಬಹುದು. ಈ ಕರೆಯೊಂದೆ, ಈ ಶಬ್ದ ಒಂದೇ, ಪ್ರಕೃತಿಯ ದ್ವಾರಗಳನ್ನು ತೆರೆದು ಜ್ಞಾನಪ್ರವಾಹವನ್ನು ನೀಡುವುದು. (ಕೃ. ಶ್ರೇ.೨.೩೩೧)

ನುಡಿಮುತ್ತುಗಳು ೪

ಮಾನಸಿಕ ಶಕ್ತಿಯ ಏಕಾಗ್ರತೆಯ ಮೂಲಕವಲ್ಲದೆ ಪ್ರಪಂಚದಲ್ಲಿರುವ ಸಕಲ ವಿದ್ಯೆಗಳನ್ನು ಹೇಗೆ ಪಡೆದರು? ಪ್ರಪಂಚವನ್ನು ಯಾವ ರೀತಿ ತಟ್ಟಬೇಕು, ಅದಕ್ಕೆ ಯಾವ ರೀತಿ ಆವಶ್ಯಕವಾದ ಪೆಟ್ಟನ್ನು ಕೊಡಬೇಕು ಎಂಬುದು ಗೊತ್ತಿದ್ದರೆ ಅದು ತನ್ನ ರಹಸ್ಯವನ್ನೆಲ್ಲ ನಮಗೆ ಕೊಡಲು ಸಿದ್ಧವಾಗಿರುವುದು. ಪೆಟ್ಟಿನ ಶಕ್ತಿ ಮತ್ತು ವೇಗ ಏಕಾಗ್ರತೆಯಿಂದ ಬರುವುದು, ಮಾನಸಿಕ ಶಕ್ತಿಗೆ ಮಿತಿಯೆಂಬುದಿಲ್ಲ. ಅದು ಯಾವುದೇ ವಿಷಯದ ಮೇಲೆ ಏಕಾಗ್ರವಾದಷ್ಟೂ ಹೆಚ್ಚು ಶಕ್ತಿ ಕೇಂದ್ರೀಕೃತವಾಗುವುದು, ಇದೇ ರಹಸ್ಯ. (ಕೃ. ಶ್ರೇ.೨.೩೧೬)

ನುಡಿಮುತ್ತುಗಳು ೫

ಯಾವ ಶಕ್ತಿಯನ್ನೂ ಉತ್ಪನ್ನ ಮಾಡುವುದಕ್ಕೆ ಆಗುವುದಿಲ್ಲ. ಇರುವ ಶಕ್ತಿಯನ್ನು ಬೇರೆ ದಾರಿಗೆ ತಿರುಗಿಸಬಹುದು. ಆದಕಾರಣ ಆಗಲೇ ನಮ್ಮಲ್ಲಿರುವ ಅದ್ಭುತ ಶಕ್ತಿಯನ್ನು ನಿಗ್ರಹಿಸುವುದನ್ನು ಕಲಿತುಕೊಂಡು ನಮ್ಮ ಇಚ್ಛಾಶಕ್ತಿಯ ಮೂಲಕ ಅದು ಕೇವಲ ಮೃಗೀಯ ಆನಂದದಲ್ಲಿ ವ್ಯರ್ಥವಾಗದಂತೆ ಅದನ್ನು ಆಧ್ಯಾತ್ಮಿಕ ಶಕ್ತಿಯನ್ನಾಗಿ ಪರಿವರ್ತನೆಗೊಳಿಸಬೇಕು. ಎಲ್ಲಾ ನೀತಿ ಮತ್ತು ಧರ್ಮದ ತಳಹದಿಯೇ ಬ್ರಹ್ಮಚರ್ಯ ಎಂಬುದು ಸ್ಪಷ್ಟವಾಗಿದೆ. (ಕೃ. ಶ್ರೇ.೨.೩೬೧)

ನುಡಿಮುತ್ತುಗಳು ೬

ನಾವೆಷ್ಟು ಸ್ವತಂತ್ರರು! ನಮ್ಮ ಮನಸ್ಸನ್ನು ಕ್ಷಣಕಾಲ ನಿಗ್ರಹಿಸಲಾರೆವು, ಉಳಿದ ವಸ್ತುಗಳನ್ನು ತೊರೆದು ಒಂದು ವಿಷಯದ ಮೇಲೆ ನಿಲ್ಲಿಸಲಾರೆವು! ಆದರೂ ನಾವು ಸ್ವತಂತ್ರರು ಎಂದು ಕರೆದುಕೊಳ್ಳುತ್ತೇವೆ. ಇದನ್ನು ಆಲೋಚಿಸಿ ನೋಡಿ!... ನಿಗ್ರಹಕ್ಕೆ ಒಳಗಾಗದ ಮನಸ್ಸು ಎಂದೆಂದಿಗೂ ನಮ್ಮನ್ನು ಅಧಃಪತನಕ್ಕೆ ಎಳೆಯುವುದು, ನಮ್ಮನ್ನು ಹಿಂಸಿಸುವುದು, ನಮ್ಮನ್ನೇ ನಾಶ ಮಾಡುವುದು. ನಿಗ್ರಹಿಸಿದ, ಒಳ್ಳೆಯ ದಾರಿಗೆ ತಿರುಗಿಸಿದ ಮನಸ್ಸು ನಮ್ಮನ್ನು ಉದ್ಧಾರ ಮಾಡುವುದು, ಮುಕ್ತರನ್ನಾಗಿ ಮಾಡುವುದು. (ಕೃ. ಶ್ರೇ.೬.೨೩೯- ೨೪೦)

ನುಡಿಮುತ್ತುಗಳು ೭

ಮನುಷ್ಯರಿಗೂ ಪ್ರಾಣಿಗಳಿಗೂ ಇರುವ ಮುಖ್ಯವಾದ ವ್ಯತ್ಯಾಸವೇ, ಅವರಲ್ಲಿ ಇರುವ ಏಕಾಗ್ರತೆಯ ಶಕ್ತಿಯ ವ್ಯತ್ಯಾಸದಲ್ಲಿದೆ. ಜೀವನದ ಯಾವ ಕಾರ್ಯಕ್ಷೇತ್ರದಲ್ಲಾಗಲಿ, ಯಶಸ್ಸೆಲ್ಲ ಈ ಏಕಾಗ್ರತೆಯ ಪರಿಣಾಮ... ಮನುಷ್ಯರಲ್ಲೆ ಪರಸ್ಪರ ವ್ಯತ್ಯಾಸಕ್ಕೆ ಕಾರಣ ಅವರ ಏಕಾಗ್ರತಾಶಕ್ತಿ. ಅತಿಕೀಳು ಮತ್ತು ಅತಿಶ್ರೇಷ್ಠ ಮಾನವನನ್ನು ಹೋಲಿಸಿನೋಡಿ. ವ್ಯತ್ಯಾಸಕ್ಕೆ ಕಾರಣ ಅವರಲ್ಲಿರುವ ಏಕಾಗ್ರತೆಯ ಹೆಚ್ಚು ಕಡಿಮೆಯಲ್ಲಿದೆ. (ಕೃ. ಶ್ರೇ.೬.೧೮೫)

ನುಡಿಮುತ್ತುಗಳು ೮

ಸಾಧಾರಣ ವ್ಯಕ್ತಿಯು ತನ್ನ ಮನಸ್ಸಿನ ಶೇಕಡ ತೊಂಬತ್ತರಷ್ಟು ಶಕ್ತಿಯನ್ನು ವ್ಯರ್ಥ ಮಾಡುತ್ತಿರುವನು. ಆದಕಾರಣವೇ ಅವನು ಪದೇ ಪದೇ ತಪ್ಪು ಮಾಡುತ್ತಿರುವುದು. ಏಕಾಗ್ರತೆಯಲ್ಲಿ ಪಳಗಿದ ವ್ಯಕ್ತಿ ಅಥವಾ ಮನಸ್ಸು ತಪ್ಪು ಮಾಡುವುದಿಲ್ಲ. (ಕೃ. ಶ್ರೇ.೭.೩೪೮)

ನುಡಿಮುತ್ತುಗಳು ೯

ಕ್ಷುದ್ರ ಹೃದಯದವರಿಂದ ನೀನಾವ ಕೆಲಸವನ್ನು ನಿರೀಕ್ಷಿಸುವೆ? ಜಗತ್ತಿನಲ್ಲಿ ಅವರಿಂದಾವ ಕೆಲಸವೂ ಆಗುವುದಿಲ್ಲ! ಕಡಲನ್ನು ದಾಟಲು ಉಕ್ಕಿನಂತಹ ಸ್ಥೈರ್ಯ ಇರಬೇಕು. ಪರ್ವತಗಳನ್ನೇ ಛೇದಿಸುವಷ್ಟು ಶಕ್ತಿಯುಳ್ಳವನಾಗಬೇಕು. (ಕೃ. ಶ್ರೇ.೪.೨೫೭ - ೫೮)

ನುಡಿಮುತ್ತುಗಳು ೧೦

ಒಳ್ಳೆಯ ಮತ್ತು ಕೆಟ್ಟ ಆಲೋಚನೆಗಳೆರಡರಲ್ಲಿಯೂ ಶಕ್ತಿ ಸುಪ್ತವಾಗಿದೆ, ಇವು ಪ್ರಪಂಚವನ್ನೆಲ್ಲ ತುಂಬುವುವು. ಚಿಂತನೆಗಳು ಕ್ರಿಯರೂಪಕ್ಕೆ ಬರುವವರೆಗೂ ಚಿಂತನೆಗಳಾಗಿಯೇ ಉಳಿದಿರುತ್ತವೆ. ಉದಾಹರಣೆಗೆ ಒಬ್ಬನು ಏಟನ್ನು ಕೊಡುವವರೆಗೆ ಎಂದರೆ, ಶಕ್ತಿಯನ್ನು ಕ್ರಿಯೆಯಾಗಿ ಮಾರ್ಪಡಿಸುವವರೆಗೆ ಅವನ ಬಾಹುಗಳಲ್ಲಿ ಶಕ್ತಿಯು ಸುಪ್ತವಾಗಿರುತ್ತದೆ. ನಾವು ಒಳ್ಳೆಯ ಮತ್ತು ಕೆಟ್ಟ ಆಲೋಚನೆಗಳಿಗೆ ಹಕ್ಕುದಾರರು. ನಾವು ಪರಿಶುದ್ಧರಾಗಿ ಒಳ್ಳೆಯ ಆಲೋಚನೆಗಳನ್ನು ಸ್ವೀಕರಿಸುವ ಉಪಕರಣಗಳಾದರೆ ಆಗ ಒಳ್ಳೆಯ ಆಲೋಚನೆಗಳು ನಮ್ಮೊಳಗೆ ಪ್ರವೇಶಿಸುವುವು. ಒಳ್ಳೆಯ ವ್ಯಕ್ತಿಯು ಕೆಟ್ಟ ಆಲೋಚನೆಯನ್ನು ಸ್ವೀಕರಿಸುವುದಿಲ್ಲ.(ಕೃ. ಶ್ರೇ.೭.೨೩೮)

ನುಡಿಮುತ್ತುಗಳು ೧೧

ಮಾನವ ಇತಿಹಾಸವನ್ನು ಪರಿಗಣಿಸಿದರೆ, ಈ ದೇವದೂತರು ಬರುವುದನ್ನು ಮತ್ತು ತಾವು ಬರುವಾಗಲೇ ಅವರು ಏನು ಮಾಡಬೇಕು, ಹೇಗೆ ಮಾಡಬೇಕೆಂಬುದನ್ನು ನಿಶ್ಚಯಿಸಿಕೊಂಡು ಬಂದಿರುವುದನ್ನು ನೋಡುವೆವು ; ಯೋಜನೆಯೆಲ್ಲ ಅವರ ಮುಂದೆ ಇರುವುದು. ಅದರಿಂದ ಅವರು ಒಂದು ಕೂದಲೆಳೆಯಷ್ಟೂ ಕದಲುವುದಿಲ್ಲ. ಅವರು ಒಂದು ಉದ್ದೇಶದಿಂದ ಬರುವುದರಿಂದ ಅವರೊಂದು ಸಂದೇಶವನ್ನು ತರುವರು... ಈ ಮಹಾವ್ಯಕ್ತಿಗಳು ಮಾತನಾಡಿದರೆ ಜಗತ್ತು ಕೇಳಲೇಬೇಕಾಗುವುದು. ಅವರು ಆಡುವ ಪ್ರತಿಯೊಂದು ಶಬ್ದವೂ ನೇರ. ಅದೊಂದು ಫಿರಂಗಿಯ ಗುಂಡಿನಂತೆ ಸ್ಫೋಟಿಸುವುದು. ಮಾತಿನ ಹಿಂದೆ ಶಕ್ತಿ ಇಲ್ಲದೆ ಇದ್ದರೆ ಬರೀ ಮಾತಿನಲ್ಲಿ ಏನಿದೆ? ನೀವು ಯಾವ ಭಾಷೆಯಲ್ಲಿ ಮಾತನಾಡುವಿರೊ, ಹೇಗೆ ವಿಷಯಗಳನ್ನು ಅಣಿಮಾಡಿಕೊಂಡಿರುವಿರೊ, ಅದರಿಂದೇನು ಪ್ರಯೋಜನ? ನೀವು ವ್ಯಾಕರಣಶುದ್ಧವಾಗಿ ಮಾತನಾಡುವಿರೋ, ಸುಂದರ ಪದಗಳನ್ನು ಜೋಡಿಸಿರುವಿರೋ ಇದನ್ನು ಕಟ್ಟಿಕೊಂಡು ಪ್ರಯೋಜನವೇನು? ಇತರರಿಗೆ ಕೊಡುವುದಕ್ಕೆ ನಿಮ್ಮಲ್ಲಿ ಏನಾದರೂ ಇದೆಯೆ, ಇಲ್ಲವೆ, ಎಂಬುದೇ ಪ್ರಶ್ನೆ. ಇದೊಂದು ಕೊಡುವ, ತೆಗೆದುಕೊಳ್ಳುವ ಪ್ರಸಂಗ ಸುಮ್ಮನೆ ಕೇಳುವುದಿಲ್ಲ. ಕೊಡುವುದಕ್ಕೆ ಏನಾದರೂ ನಿಮ್ಮಲ್ಲಿ ಇದೆಯೇ? ಅದೇ ಮೊದಲನೆ ಪ್ರಶ್ನೆ. ಇದ್ದರೆ ಕೊಡಿ. (ಕೃ. ಶ್ರೇ.೭.೨೫-೨೬)

ನುಡಿಮುತ್ತುಗಳು ೧೨

ನೀವು ಯಾವುದೇ ಕೆಲಸವನ್ನು ಮಾಡುವಾಗಲೂ ನಿಮ್ಮ ಮನಸ್ಸು, ಹೃದಯ, ನಿಮ್ಮ ಸರ್ವಸ್ವವನ್ನೂ ಆ ಕೆಲಸಕ್ಕೆ ಕೊಡಿ. ನಾನೊಮ್ಮೆ ಒಬ್ಬ ಸಾಧು ಮಹಾತ್ಮನನ್ನು ನೋಡಿದ್ದೆ. ಆತ ಪೂಜೆ, ಧ್ಯಾನಗಳನ್ನು ಎಷ್ಟು ಏಕಾಗ್ರತೆ ಶ್ರದ್ಧೆಗಳಿಂದ ಮಾಡುತ್ತಿದ್ದನೋ ಅಷ್ಟೇ ಸಾವಧಾನದಿಂದ ತನ್ನ ಅಡುಗೆ ಮಾಡುವ ಹಿತ್ತಾಳೆ ಪಾತ್ರೆಗಳನ್ನು ಫಳ ಫಳನೆ ಹೊಳೆಯುವ ಚಿನ್ನದಂತೆ ತೊಳೆದಿಡುತ್ತಿದ್ದನು. (ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ)

ನುಡಿಮುತ್ತುಗಳು ೧೩

ಈ ಜನ್ಮವನ್ನು ತ್ಯಜಿಸಿ ನಾವು ಪವಿತ್ರತೆಯನ್ನು ಹೇಗೆ ಪಡೆಯಬಲ್ಲೆವು? ನಾವೆಲ್ಲ ಕಾಡಿನ ಗುಹೆಗಳಿಗೆ ಹೋಗಲು ಸಾಧ್ಯವೇ? ಇದರಿಂದ ಏನು ಪ್ರಯೋಜನ? ಮನಸ್ಸನ್ನು ನಿಗ್ರಹಿಸದೇ ಇದ್ದರೆ ಗುಹೆಯಲ್ಲಿದ್ದೂ ಪ್ರಯೋಜನವಿಲ್ಲ. ಏಕೆಂದರೆ ಇದೇ ಮನಸ್ಸು ಅಲ್ಲಿಯೂ ಎಲ್ಲಾ ತರಹದ ಹಾವಳಿಯನ್ನು ಉಂಟುಮಾಡುವುದು. ಆ ಗುಹೆಯಲ್ಲಿಯೇ ಇಪ್ಪತ್ತು ದೆವ್ವಗಳಿರುವುದನ್ನು ನಾವು ಕಾಣುತ್ತೇವೆ. ಏಕೆಂದರೆ ಅವೆಲ್ಲ ನಮ್ಮ ಮನಸ್ಸಿನಲ್ಲೇ ಇವೆ. ಮನಸ್ಸು ಸ್ವಾಧೀನದಲ್ಲಿದ್ದರೆ ಎಲ್ಲಿ ಬೇಕಾದರೂ, ನಾವಿದ್ದಲ್ಲಿಯೇ ಗುಹೆಯನ್ನು ಮಾಡಿಕೊಳ್ಳಬಹುದು.

ನುಡಿಮುತ್ತುಗಳು ೧೪

ಜಗತ್ತು ಈಗ ಇರುವ ಸ್ಥಿತಿಗೆ ನಮ್ಮ ಮನೋಭಾವವೇ ಕಾರಣ. ನಮ್ಮ ಆಲೋಚನೆಯು ಒಂದು ವಸ್ತುವನ್ನು ಸುಂದರವಾಗಿ ಮಾಡುವುದು. ನಮ್ಮ ಆಲೋಚನೆಯೇ ಅದನ್ನು ವಿಕಾರವಾಗುವಂತೆ ಮಾಡುವುದು. ಈ ಪ್ರಪಂಚವೆಲ್ಲ ನಮ್ಮ ಮನಸ್ಸಿನಲ್ಲಿದೆ. ವಸ್ತುಗಳನ್ನು ಸರಿಯಾದ ರೀತಿಯಲ್ಲಿ ನೋಡುವುದನ್ನು ಅಭ್ಯಾಸಮಾಡಿ. (ಕೃ. ಶ್ರೇ.೭.೬೮)