ನುಡಿಮುತ್ತುಗಳು ೧

ನನ್ನ ಜೀವನದಲ್ಲಿ ಕಲಿತ ಒಂದು ಅತ್ತ್ಯುತ್ತಮ ಪಾಠವೆಂದರೆ ಕರ್ಮದ ಫಲಕ್ಕೆ ಕೊಡುವ ಪ್ರಾಮುಖ್ಯತೆಯನ್ನೇ ಕರ್ಮದ ಸಾಧನಕ್ಕೂ ಕೊಡಬೇಕು, ಲಕ್ಷ್ಯಕ್ಕೆ ಕೊಡುವಷ್ಟೇ ಗಮನ ಉಪಾಯಕ್ಕೂ ಕೊಡಬೇಕೆಂಬುದು..ಈ ಒಂದು ಮಹಾ ಸಿದ್ಧಾಂತದಿಂದ ನಾನು ಹಲವು ಒಳ್ಳೆ ನೀತಿಗಳನ್ನು ಕಲಿಯುತ್ತಿರುವೆನು. ಗುರಿಗೆ ಕೊಡುವಷ್ಟು ಗಮನವನ್ನೇ ಮಾರ್ಗಕ್ಕೂ ಕೊಡುವುದರಲ್ಲಿ ಜಯದ ರಹಸ್ಯವೆಲ್ಲ ಇರುವಂತೆ ನನಗೆ ತೋರುವುದು.

ನುಡಿಮುತ್ತುಗಳು ೨

ಇತರರ ವಿಷಯದಲ್ಲಿ ನಮ್ಮ ಕರ್ತವ್ಯ ಎಂಬುದರ ಅರ್ಥವೇನೆಂದರೆ, ನಾವು ಇತರರಿಗೆ ಸಹಾಯಮಾಡುವುದು, ಪ್ರಪಂಚಕ್ಕೆ ಒಳ್ಳೆಯದನ್ನು ಮಾಡುವುದು. ಪ್ರಪಂಚಕ್ಕೆ ನಾವು ಒಳ್ಳೆಯದನ್ನು ಏಕೆ ಮಾಡಬೇಕು? ಮೇಲುನೋಟಕ್ಕೆ ಪ್ರಪಂಚಕ್ಕೆ ಸಹಾಯ ಮಾಡುವುದಕ್ಕೆ, ಆದರೆ ನಿಜವಾಗಿಯೂ ನಮಗೆ ನಾವೇ ಸಹಾಯ ಮಾಡಿಕೊಳ್ಳುವುದಕ್ಕೆ....

ನುಡಿಮುತ್ತುಗಳು ೩

ಉಚ್ಚ ಸ್ಥಾನದಲ್ಲಿ ನಿಂತು ಕೈಯಲ್ಲಿ ಮುರುಕಾಸನ್ನು ಹಿಡಿದುಕೊಂಡು 'ಎಲ್ಲಾ ಬಡವ, ಹಿಡಿ' ಎಂದು ಹೇಳದಿರಿ. ನೀವು ಆತನಿಗೆ ಸಹಾಯ ಮಾಡುವುದರಿಂದ ನಿಮಗೆ ನೀವೇ ಸಹಾಯ ಮಾಡಿಕೊಳ್ಳಲು ಶಕ್ತರಾದುದಕ್ಕೆ ಆ ಬಡವನಿಗೆ ಕೃತಜ್ಞರಾಗಿರಿ. ಧನ್ಯನಾಗುವವನು ದಾನ ಸ್ವೀಕಾರ ಮಾಡುವವನಲ್ಲ, ದಾನ ಕೊಡುವಾತ. ಈ ಪ್ರಪಂಚದಲ್ಲಿ ನಿಮ್ಮ ಕೃಪೆ ದಯೆಗಳನ್ನು ನೀವು ತೋರಿಸಲು, ತನ್ಮೂಲಕ ನೀವು ಶುದ್ಧರೂ ಸಿದ್ಧರೂ ಆಗಲು, ಅವಕಾಶ ದೊರೆತುದಕ್ಕಾಗಿ ನಿಮಗೆ ಉಪಕಾರ ಸ್ಮರಣೆಯಿರಲಿ. ಸತ್ಕಾರ್ಯಗಳಿಗೆಲ್ಲ ನಮ್ಮನ್ನು ಪವಿತ್ರರನ್ನಾಗಿಯೂ, ಪರಿಪೂರ್ಣರನ್ನಾಗಿಯೂ ಮಾಡುವ ಶಕ್ತಿ ಇರುತ್ತದೆ.

ನುಡಿಮುತ್ತುಗಳು ೪

ಸತ್ಕಾರ್ಯವನ್ನು ಮಾಡಿ ಅದರಿಂದ ತಾನು ಒಳ್ಳೆಯದನ್ನು ಪಡೆಯುವವನು ಯಾರೆಂದರೆ, ಸಮಬುದ್ಧಿಯುಳ್ಳವನು, ಶಾಂತನು, ವಿವೇಕಿಯು, ಗಾಬರಿಪಡದವನು, ಅಧಿಕವಾದ ಸಹಾನುಭೂತಿ ಪ್ರೇಮಗಳುಳ್ಳವನು.

ನುಡಿಮುತ್ತುಗಳು ೫

ಮಹತ್ ಕಾರ್ಯ ಸಾಧನೆಗೆ ದೀರ್ಘ ಮತ್ತು ಸತತ ಪ್ರಯತ್ನ ಆವಶ್ಯಕ. ಕೆಲವರು ಸೋತರೆ ಅದರಿಂದ ನಾವು ನಿರಾಶರಾಗಬೇಕಿಲ್ಲ. ಅನೇಕರು ಸೋಲುವರು, ತೊಂದರೆಗಳು ಬರುವುವು. ಮಹಾದ್ಭುತವಾದ ಕಷ್ಟಗಳು ಬರುವುವು. ನಮ್ಮೆದೆಯಲ್ಲಿ ನೆಲೆಸಿರುವ ಸ್ವಾರ್ಥ ಮತ್ತು ಇನ್ನೂ ಇತರ ಹೀನ ಆಸೆಗಳು ಆತ್ಮ ಜ್ಯೋತಿಯಿಂದ ಹೊರದೂಡಲ್ಪಡುವುದಕ್ಕೆ ಮುಂಚೆ ಬಹಳ ಹೋರಾಡುವುವು. ಇದೆಲ್ಲ ಸಹಜವಾಗಿಯೇ ಇರುವುದು.

ನುಡಿಮುತ್ತುಗಳು ೬

ಕೆಟ್ಟುದನ್ನು ಮಾಡುವುದರಿಂದ ನಮಗೆ ನಾವು ಹಾನಿಯನ್ನುಂಟು ಮಾಡಿಕೊಳ್ಳುವುದಲ್ಲದೇ, ಇತರರಿಗೂ ಕೆಡುಕನ್ನು ಉಂಟುಮಾಡುತ್ತೇವೆ. ಒಳ್ಳೆಯದನ್ನು ಮಾಡುವುದರಿಂದ ನಮಗೆ ಒಳ್ಳೆಯದಾಗುತ್ತದೆ ಮತ್ತು ಇತರರಿಗೂ ಒಳ್ಳೆಯದಾಗುತ್ತದೆ..... ಕರ್ಮಯೋಗದ ಪ್ರಕಾರ ಯಾವ ಮನುಷ್ಯನೇ ಆಗಲಿ, ಆತನು ಮಾಡಿದ ಕರ್ಮ ಅದರ ಫಲವನ್ನು ಕೊಟ್ಟಲ್ಲದೆ ನಾಶವಾಗದು. ಕರ್ಮವು ತನ್ನ ಫಲವನ್ನು ಕೊಡದಂತೆ ಮಾಡಲು ಪ್ರಕೃತಿಯಲ್ಲಿರುವ ಯಾವ ಶಕ್ತಿಯಿಂದಲೂ ಆಗಲಾರದು. ನಾನೊಂದು ಪಾಪ ಕಾರ್ಯವನ್ನು ಮಾಡಿದರೆ ಅದರ ಫಲವನ್ನು ನಾನು ಅನುಭವಿಸಲೇಬೇಕು. ಅದನ್ನು ಜಗತ್ತಿನಲ್ಲಿರುವ ಯಾವ ಶಕ್ತಿಯೂ ನಿಲ್ಲಿಸಲಾರದು ಅಥವಾ ತಡೆಯಲಾರದು. ಈ ತೆರನಾಗಿ, ನಾನೊಂದು ಸತ್ಕಾರ್ಯವನ್ನು ಮಾಡಿದರೆ ಅದರಿಂದ ಸತ್ಫಲಗಳು ಉಂಟಾಗುವುದನ್ನು ತಡೆಯಬಲ್ಲ ಶಕ್ತಿ ಯಾವುದೂ ಈ ಜಗತ್ತಿನಲ್ಲಿಲ್ಲ. ಕಾರಣವಿದ್ದೆಡೆಯಲ್ಲಿ ಕಾರ್ಯ, ಎಂದರೆ ಫಲ ಇದ್ದೇ ತೀರಬೇಕು. ಅದನ್ನು ಯಾವುದೂ ತಡೆಯಲಾರದು.

ನುಡಿಮುತ್ತುಗಳು ೭

ಎಲ್ಲಾ ಹಿತಚಿಂತನೆಯ ಮತ್ತು ಧಾರ್ಮಿಕ ಭಾವನೆಯ ಸಂಕೇತ ಪದವೇ 'ನಾನಲ್ಲ' 'ನೀನು' ಎಂಬುದು ಸ್ವರ್ಗವಿದೆಯೋ ನರಕ ವಿದೆಯೋ ಯಾರಿಗೆ ಬೇಕು? ಆತ್ಮನಿರುವನೊ ಇಲ್ಲವೋ ಅದರಿಂದ ಏನು? ಶಾಶ್ವತವಾದೊಂದು ವಸ್ತುವಿದೆಯೋ ಇಲ್ಲವೊ ಯಾರಿಗೆ ಬೇಕು? ನಮ್ಮ ಕಣ್ಣೆದುರಿಗೆ ಪ್ರಪಂಚವಿದೆ. ಅದು ದುಃಖದಿಂದ ತುಂಬಿ ತುಳುಕಾಡುತ್ತಿದೆ. ಬುದ್ಧನಂತೆ ಅದರಲ್ಲಿ ಪ್ರವೇಶಿಸಿ ದುಃಖವನ್ನು ಕಡಿಮೆಮಾಡಲು ಹೋರಾಡಿ ಅಥವಾ ಆ ಮಹಾ ಪ್ರಯತ್ನದಲ್ಲಿ ನಿಮ್ಮ ಪ್ರಾಣವನ್ನು ಸಮರ್ಪಿಸಿ. ನಿಮ್ಮನ್ನು ನೀವು ಮರೆಯಿರಿ; ನೀವು ಆಸ್ತಿಕರೊ ನಾಸ್ತಿಕರೊ, ಆಜ್ಞೇಯತಾವಾದಿಗಳೊ, ವೇದಾಂತಿಗಳೊ, ಕ್ರೈಸ್ತರೊ, ಮಹಮ್ಮದೀಯರೊ, ಯಾರಾದರಾಗಲಿ-ಕಲಿಯಬೇಕಾದ ಮೊದಲ ಪಾಠವಿದು.

ನುಡಿಮುತ್ತುಗಳು ೮

ಮುಂದೆ ಹೇಳುವಂತೆ ನುಡಿದವನು ಬುದ್ಧನೊಬ್ಬನೇ: 'ಈಶ್ವರ ವಿಷಯಕವಾದ ನಿಮ್ಮ ವಿವಿಧ ಸಿದ್ಧಾಂತಗಳನ್ನು ನಾನು ಗಣನೆಗೆ ತಾರೆನು. ಆತ್ಮವಿಷಯಕವಾದ ನಿಮ್ಮ ಸೂಕ್ಷ್ಮಸಿದ್ಧಾಂತಗಳನ್ನು ವಿಚಾರ ಮಾಡುವುದರಿಂದಾಗುವ ಪ್ರಯೋಜನವೇನು? ಒಳ್ಳೆಯದನ್ನು ಮಾಡಿರಿ. ಒಳ್ಳೆಯವರಾಗಿರಿ. ಇದರಿಂದ ಸತ್ಯವೆನುಂಟೋ ಅದನ್ನೂ ಮುಕ್ತಿಯನ್ನೂ ಪಡೆಯುವಿರಿ.'... ಧನ, ಕೀರ್ತಿ ಮತ್ತು ಇನ್ನಾವ ಆಶೆಯೂ ಇಲ್ಲದೆ ಅಹೇತುಕವಾಗಿ ಕರ್ಮ ಮಾಡಲು ಯಾವನು ಸಮರ್ಥನಾದವನೋ ಆತನೇ ನಿಶ್ಚಿತವಾಗಿಯೂ ಅತ್ಯಂತ ಉತ್ಕೃಷ್ಟವಾಗಿ ಕರ್ಮಮಾಡಬಲ್ಲವನು. ಹಾಗೆ ಮಾಡಬಲ್ಲವನಾದಾಗ ಅವನು ಬುದ್ಧನಾಗುವನು. ಪ್ರಪಂಚವನ್ನು ಮಾರ್ಪಡಿಸುವ ಕಾರ್ಯಶಕ್ತಿ ಆತನಲ್ಲಿ ಉದ್ಭವಿಸುವುದು.

ನುಡಿಮುತ್ತುಗಳು ೯

ನಮ್ಮ ಹಿತವನ್ನೇ ಕುರಿತು ಆಲೋಚಿಸುವ ಸ್ವಾರ್ಥವೇ ಮಹಾಪಾಪ. ಯಾರು 'ನಾನು ಮೊದಲು ಊಟ ಮಾಡುತ್ತೇನೆ ! ಇತರರಿಗಿಂತ ಹೆಚ್ಚು ಸಂಪತ್ತನ್ನು ನಾನು ಇಟ್ಟುಕೊಳ್ಳುತ್ತೇನೆ! ನಾನೇ ಎಲ್ಲವನ್ನು ತೆಗೆದುಕೊಳ್ಳುತ್ತೇನೆ! ಇತರರಿಗಿಂತ ಮುಂಚೆ ನಾನು ಸ್ವರ್ಗಕ್ಕೆ ಹೋಗುತ್ತೇನೆ! ನಾನು ಮೊದಲು ಮುಕ್ತಿ ಗಳಿಸುತ್ತೇನೆ' ಎಂದು ಯೋಚಿಸುವರೋ ಅವರೇ ಸ್ವಾರ್ಥಿಗಳು. ನಿಃಸ್ವಾರ್ಥಿಗಳು : 'ನಾನೇ ಕೊನೆಯಲ್ಲಿರುವೆನು, ನನಗೆ ಸ್ವರ್ಗದ ಇಚ್ಛೆಯಿಲ್ಲ. ನರಕಕ್ಕೆ ಹೋಗುವುದರಿಂದ ಇತರರಿಗೆ ನಾನು ಸಹಾಯಮಾಡುವಂತೆ ಇದ್ದರೆ ನಾನು ಅದಕ್ಕೆ ಸಿದ್ಧನಾಗಿರುವೆನು' ಎನ್ನುವರು. ಈ ನಿಃಸ್ವಾರ್ಥವೇ ಧರ್ಮದ ಪರೀಕ್ಷೆ ಯಾರಲ್ಲಿ ಈ ನಿಃಸ್ವಾರ್ಥ ಹೆಚ್ಚು ಇದೆಯೋ ಅವನು ಹೆಚ್ಚು ಧಾರ್ಮಿಕ, ಅವನು ಶಿವನ ಸಮೀಪದಲ್ಲಿರುವನು.

ನುಡಿಮುತ್ತುಗಳು ೧೦

ನೀವು ಯಾರಿಗೂ ಸಹಾಯ ಮಾಡಲಾರಿರಿ. ಬೇಕಾದರೆ ನೀವು ಸೇವೆ ಮಾಡಬಹುದು ಅಷ್ಟೇ. ನೀವು ಭಗವಂತನ ಮಕ್ಕಳನ್ನು ಪೂಜಿಸಬಹುದು ; ನಿಮಗೆ ಆ ಸುಯೋಗ ದೊರಕಿದರೆ ಆತನನ್ನೇ ಪೂಜಿಸಬಹುದು. ಭಗವಂತನು ತನ್ನ ಮಕ್ಕಳ ಸೇವೆಗೆ ನಿಮಗೆ ಅವಕಾಶ ಒದಗಿಸಿಕೊಟ್ಟರೆ ನೀವೇ ಧನ್ಯರು ಎಂದು ಭಾವಿಸಿ. ನಿಮ್ಮ ಸಮಾನವಿಲ್ಲವೆಂದು ಭಾವಿಸಬೇಡಿ. ಆ ಸದವಕಾಶ ಇತರರಿಗೆ ದೊರೆಯದೆ ಇರುವಾಗ ನಿಮಗೆ ದೊರೆತುದಕ್ಕೆ ನೀವೇ ಧನ್ಯರು. ಅದನ್ನು ಒಂದು ಪೂಜೆಯಂತೆ ಮಾಡಿ.

ನುಡಿಮುತ್ತುಗಳು ೧೧

ಅವನಿಗೆ ಸೇವೆ ಮಾಡುವ ಒಂದು ಅವಕಾಶ ದೊರಕಿದುದರಿಂದ ಧನ್ಯರು ನಾವು. ಅವನಿಗೆ ನಾವು ಸಹಾಯ ಮಾಡಲಾರೆವು. ಸಹಾಯ ಎಂಬ ಪದವನ್ನು ನಿಮ್ಮ ಮನಸ್ಸಿನಿಂದ ನಿರ್ಮೂಲ ಮಾಡಿ. ನೀವು ಸಹಾಯ ಮಾಡಲಾರಿರಿ. ಇದು ಈಶ್ವರನಿಂದೆ. ಅವನ ಇಚ್ಛೆಯಂತೆ ನೀವು ಇಲ್ಲಿರುವಿರಿ. ಅವನಿಗೆ ನೀವು ಸಹಾಯ ಮಾಡುವಿರಿ ಎಂದು ಭಾವಿಸಿರುವಿರೇನು? ಅವನನ್ನು ನೀವು ಪೂಜಿಸಬಲ್ಲಿರಿ ಅಷ್ಟೆ. ನೀವು ನಾಯಿಗೊಂದು ತುತ್ತು ಅನ್ನವನ್ನು ಕೊಟ್ಟರೆ ನೀವು ನಾಯಿಯನ್ನು ದೇವರೆಂದು ಪೂಜಿಸುತ್ತಿದ್ದೀರಿ ಎಂದೇ ಅರ್ಥ. ಕಾರಣ ಆ ನಾಯಿಯಲ್ಲಿರುವನು ದೇವರೇ. ಅವನೇ ಸರ್ವಸ್ವವೂ ಆಗಿದ್ದಾನೆ.

ನುಡಿಮುತ್ತುಗಳು ೧೨

ಇಷ್ಟೊಂದು ಕಠಿಣ ಸಾಧನೆ ಮಾಡಿದಮೇಲೆ, ದೇವರು ಎಲ್ಲಾ ಜೀವಿಗಳಲ್ಲೂ ಇದ್ದಾನೆ ಮತ್ತು ಅವನಿಗಿಂತ ಬೇರೆ ದೇವರಿಲ್ಲ ಎಂಬ ದಿಟ್ಟವಾದ ಸತ್ಯ ನನಗೆ ಅರಿವಾಗಿದೆ. 'ಯಾರು ಜೀವರಿಗೆ ಸೇವೆ ಸಲ್ಲಿಸುತ್ತಾನೋ ಅವನು ದೇವರಿಗೇ ಸೇವೆ ಸಲ್ಲಿಸಿದಂತೆ'

ನುಡಿಮುತ್ತುಗಳು ೧೩

ಈ ನರಕಸದೃಶ ಪ್ರಪಂಚದಲ್ಲಿ ಒಬ್ಬ ವ್ಯಕ್ತಿಯ ಹೃದಯದಲ್ಲಿ ಒಂದು ದಿನದ ಮಟ್ಟಿಗಾದರೂ ಸಂತೋಷ ಮತ್ತು ನೆಮ್ಮದಿಯನ್ನು ತರಲು ಸಾಧ್ಯವಾದರೆ ಅದೊಂದೇ ಸತ್ಯ. ಇಡೀ ಜೀವನದಲ್ಲಿ ಕಷ್ಟಗಳನ್ನು ಅನುಭವಿಸಿ ಈ ಪಾಠವನ್ನು ನಾನು ಕಲಿತಿರುವೆನು. ಮಿಕ್ಕಿರುವುದೆಲ್ಲ ಬರೀ ಥಳುಕಿನ ಭ್ರಾಂತಿ.

ನುಡಿಮುತ್ತುಗಳು ೧೪

ಹಗಲಿನಷ್ಟು ಸ್ಫುಟವಾಗಿ ನನಗೆ ತಿಳಿಯುವ ಒಂದು ವಿಷಯ ದುಃಖವೆಲ್ಲ ಅಜ್ಞಾನದಿಂದ ಜನಿಸುವುದು ಎಂಬುದು. ಅಲ್ಲದೆ ಬೇರೆ ಏನೂ ಇಲ್ಲ. ಜಗತ್ತಿಗೆ ಜ್ಞಾನವನ್ನು ಯಾರು ಕೊಡುವರು? ಹಿಂದೆ ತ್ಯಾಗವು ಒಂದು ನಿಯಮವಾಗಿತ್ತು. ಅಯ್ಯೋ! ಮುಂದೆ ಬರುವ ಅನೇಕ ಯುಗಗಳಲ್ಲಿಯೂ ಇದೇ ನಿಯಮವಾಗುವುದು. ಜಗತ್ತಿನ ಅತಿ ಧೀರರು ಮತ್ತು ಪುಣ್ಯಾತ್ಮರು ಹಲವರ ಹಿತಕ್ಕೋಸ್ಕರವಾಗಿ, ಎಲ್ಲರ ಮೇಲ್ಮೆಗೋಸುಗವಾಗಿ ತಮ್ಮ ಆತ್ಮವನ್ನು ಅರ್ಪಣೆ ಮಾಡಬೇಕು. ಅನಂತ ಪ್ರೇಮ ಮತ್ತು ಭೂತದಯೆಯಿಂದ ಕೂಡಿದ ನೂರಾರು ಬುದ್ಧರುಬೇಕಾಗಿದ್ದಾರೆ.

ನುಡಿಮುತ್ತುಗಳು ೧೫

ನಿಷ್ಪ್ರಯೋಜಕವಾದ ಕೋಪದಲ್ಲಿ ನಮ್ಮ ಶಕ್ತಿಯನ್ನು ವ್ಯಯ ಮಾಡದೆ ಶಾಂತ ಮನಸ್ಸಿನಿಂದ ಧೈರ್ಯವಾಗಿ ಕೆಲಸಕ್ಕೆ ಕೈಹಾಕಬೇಕು. ಯಾರು ಯಾವುದನ್ನು ಹೊಂದಲು ಯೋಗ್ಯರೋ, ಅವರಿಗೆ ಅದು ದಕ್ಕದಿರುವಂತೆ ಮಾಡುವ ಯಾವ ಶಕ್ತಿಯೂ ಜಗತ್ತಿನಲ್ಲಿಲ್ಲ ಎಂದು ನನಗೆ ದೃಢವಾಗಿ ಮನದಟ್ಟಾಗಿದೆ.. ನಮ್ಮ ಗತಕಾಲ ವೈಭವ ಶಿಖರದಲ್ಲಿತ್ತು ಎಂಬುದೇನೋ ನಿಜ. ಆದರೆ ಭವಿಷ್ಯ ಅದಕ್ಕಿಂತಲೂ ಹೆಚ್ಚು ವೈಭವಯುತವಾಗಿರುವುದು ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ.

ನುಡಿಮುತ್ತುಗಳು ೧೬

ಅಗೋ ನೋಡು! ಜನರು ಆಗಲೇ ಹೇಗೆ ಮೋಹ ಪರವಶತೆಯ ಮೊಸಳೆಯ ದವಡೆಯಲ್ಲಿ ಸಿಕ್ಕಿರುವರು!ಓ! ಅವರ ಹೃದಯವಿದ್ರಾವಕಕ್ರಂದನವನ್ನು ಆಲಿಸು! ಓ ನನ್ನ ಕೆಚ್ಚೆದೆಯ ಮಕ್ಕಳೆ, ಶೃಂಖಲೆಯಲ್ಲಿರುವವರನ್ನು ಮುಕ್ತಗೊಳಿಸಿರಿ! ದುಃಖಾರ್ತರ ವ್ಯಥೆಯ ಭಾರವನ್ನು ಕಡಿಮೆಮಾಡಲು, ಅಜ್ಞಾನಿಗಳ ಹೃದಯದ ಅಗಾಧವಾದ ಕಾರ್ಗತ್ತಲೆಯಲ್ಲಿ ಜ್ಞಾನೋದಯವನ್ನು ಬೀರಲು ಮುಂದೆ ನಡೆಯಿರಿ! ಅಲ್ಲಿ ನೋಡಿ! ಹೇಗೆ ವೇದಾಂತ ''ನಿರ್ಭಯಾರಾಗಿರಿ' ಎಂದು ನಗಾರಿಯನ್ನು ಬಾರಿಸುತ್ತಾ ಘೋಷಿಸುತ್ತಿದೆ!

ನುಡಿಮುತ್ತುಗಳು ೧೭

ನಮ್ಮಲ್ಲಿರುವ ದೈವತ್ವದ ಪ್ರಕಾಶಕ್ಕೆ ಇರುವ ಏಕೈಕ ಮಾರ್ಗವೆಂದರೆ ಇತರರಿಗೆ ಅವರ ದೈವತ್ವದ ಪ್ರಕಾಶದಲ್ಲಿ ನೆರವಾಗುವುದು.

ನುಡಿಮುತ್ತುಗಳು ೧೮

ಪ್ರಕೃತಿಯಲ್ಲಿ ಅಸಮಾನತೆ ಇದ್ದರೂ ಪ್ರತಿಯೊಂದು ವ್ಯಕ್ತಿಯ ವಿಕಾಸಕ್ಕೂ ಸಮಾನವಾದ ಅವಕಾಶಗಳು ಇರಬೇಕು. ಕೆಲವರಿಗೆ ಹೆಚ್ಚು ಅವಕಾಶ ಕೆಲವರಿಗೆ ಕಡಮೆ ಅವಕಾಶ ಇರುವುದಾದರೆ ಬಲಾಢ್ಯರಿಗಿಂತ ಬಲಹೀನರಿಗೆ ಹೆಚ್ಚು ಅವಕಾಶವನ್ನು ಕಲ್ಪಿಸಿಕೊಡಬೇಕು.

ನುಡಿಮುತ್ತುಗಳು ೧೯

ಬೇರೆಯ ಮಾತಿನಲ್ಲಿ ಇದನ್ನು ಹೇಳುವುದೇನೆಂದರೆ, ಚಂಡಾಲನಿಗೆ ವಿದ್ಯಾಭ್ಯಾಸ ಆವಶ್ಯಕವಾಗಿರುವಷ್ಟು ಬ್ರಾಹ್ಮಣನಿಗೆ ಇಲ್ಲ. ಬ್ರಾಹ್ಮಣನ ಮಗನಿಗೆ ಒಬ್ಬ ಉಪಾಧ್ಯಾಯನು ಬೇಕಾದರೆ ಚಂಡಾಲನ ಮಗನಿಗೆ ಹತ್ತು ಉಪಾಧ್ಯಾಯರುಗಳು ಬೇಕು. ಜನನಾರಭ್ಯ ಪ್ರಕೃತಿಯು ಯಾರಿಗೆ ಸೂಕ್ಷ್ಮ ಬುದ್ಧಿಯನ್ನು ಕೊಟ್ಟಿಲ್ಲವೋ, ಅಂತಹವರಿಗೆ ಹೆಚ್ಚು ಸಹಾಯವನ್ನು ಒದಗಿಸಿಕೊಡಬೇಕು. ನ್ಯೂಕ್ಯಾಸಲ್ಲಿಗೆ (ಕಲ್ಲಿದ್ದಲು ಸಿಕ್ಕುವ ಸ್ಥಳಕ್ಕೆ) ಕಲ್ಲಿದ್ದಲನ್ನು ಹೊತ್ತುಕೊಂಡು ಹೋಗುವವನು ಹುಚ್ಚುಮನುಷ್ಯ. ಬಡವರು, ಅಂತ್ಯಜರು, ಮೂಢರು ಇವರು ನಿಮ್ಮ ದೇವರಾಗಲಿ.

ನುಡಿಮುತ್ತುಗಳು ೨೦

ನಾವು ಸ್ವತಃ ಪರಿಶುದ್ಧರಾಗಿರುವುದು, ಇತರರಿಗೆ ಒಳ್ಳೆಯದನ್ನು ಮಾಡುವುದು-ಇದೇ ಎಲ್ಲ ಪೂಜೆಯ ಸಾರ. ಯಾರು ದೀನರಲ್ಲಿ, ದುರ್ಬಲರಲ್ಲಿ, ರೋಗಿಗಳಲ್ಲಿ ಶಿವನನ್ನು ನೋಡುವರೋ ಅವರೇ ನಿಜವಾಗಿ ಶಿವನನ್ನು ಪೂಜಿಸುವವರು. ಒಬ್ಬನು ಕೇವಲ ವಿಗ್ರಹದಲ್ಲಿ ಮಾತ್ರ ಶಿವನನ್ನು ನೋಡಿದರೆ ಅವನ ಪೂಜೆ ಬರಿಯ ಗೌಣ.

ನುಡಿಮುತ್ತುಗಳು ೨೧

ದೇವರನ್ನು ನಂಬದಿದ್ದರೂ, ಯಾವ ಸಿದ್ಧಾಂತವು ಇಲ್ಲದೆ ಇದ್ದರೂ, ಯಾವ ಪಂಗಡಕ್ಕೆ ಸೇರದೆ ಇದ್ದರೂ, ಯಾವ ದೇವಸ್ಥಾನ ಅಥವಾ ಮಠಕ್ಕೆ ಹೋಗದೆ ಇದ್ದರೂ, ನಾಸ್ತಿಕನಾಗಿದ್ದರೂ, ಅವನು ಕೂಡ ಪರಮಪದವನ್ನು ಮುಟ್ಟಬಹುದೆಂಬುದನ್ನು ಬುದ್ಧನ ಜೀವನ ತೋರಿಸಿಕೊಡುವುದು.... ಒಂದು ಪ್ರಾಣಿಬಲಿಯನ್ನು ತಪ್ಪಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಬಲಿಕೊಡಲು ಸಿದ್ಧನಾಗಿದ್ದವನು ಅವನೊಬ್ಬನೆ. ಅವನು ಒಮ್ಮೆ ದೊರೆಗೆ 'ಒಂದು ಕುರಿಮರಿಯನ್ನು ಬಲಿಕೊಡುವುದರಿಂದ ನೀವು ಸ್ವರ್ಗಕ್ಕೆ ಹೋಗುವಂತಾದರೆ ಮನುಷ್ಯನನ್ನೇ ಬಲಿಕೊಡುವುದರಿಂದ ಇನ್ನೂ ಹೆಚ್ಚು ಪ್ರಯೋಜನವಾದೀತು. ಆದ್ದರಿಂದ ನನ್ನನ್ನೇ ಬಲಿ ಕೊಡಿ' ಎಂದನು. ಇದನ್ನು ಕೇಳಿ ದೊರೆಗೆ ಆಶ್ಚರ್ಯವಾಯಿತು.

ನುಡಿಮುತ್ತುಗಳು ೨೨

'ಪರೋಪಕಾರಕ್ಕಾಗಿಯೇ ಸತ್ಪುರುಷರು ಬಾಳುವರು.' ಮಹಾತ್ಮರು ಇತರರಿಗಾಗಿ ತ್ಯಾಗ ಮಾಡಬೇಕು. ಇದಲ್ಲದೆ ಜಗತ್ತಿನಲ್ಲಿ ಬೇರೆ ಮಾರ್ಗವಿಲ್ಲ. ಮತ್ತೊಬ್ಬನಿಗೆ ಯಾವುದು ಒಳ್ಳೆಯದೊ ಅದನ್ನು ನಾನು ಮಾಡುವುದರಿಂದ ಮಾತ್ರ ನನ್ನ ಒಳ್ಳೆಯದನ್ನು ಸಾಧಿಸಬಹುದು, ಬೇರೆ ಮಾರ್ಗವೇ ಇಲ್ಲ.

ನುಡಿಮುತ್ತುಗಳು ೨೩

ಹಳ್ಳಿಯಿಂದ ಹಳ್ಳಿಗೆ ಹೋಗಿ ಇಡೀ ಮಾನವಕುಲಕ್ಕೆ ಒಳ್ಳೆಯದನ್ನು ಮಾಡಿ. ಉಳಿದವರಿಗಾಗಿ ಮೋಕ್ಷವನ್ನು ಸಂಪಾದಿಸಲು ನೀವೇ ನರಕಕ್ಕಾದರೂ ಹೋಗಿ.... 'ಸಾವು ಎಂದಿದ್ದರೂ ನಿಶ್ಚಯವಾಗಿರುವಾಗ, ಒಂದು ಒಳ್ಳೆಯ ಕಾರ್ಯಕ್ಕೆ ಮಡಿಯುವುದು ಮೇಲು.

ನುಡಿಮುತ್ತುಗಳು ೨೪

ಜಗದ ಇತಿಹಾಸದಲ್ಲೆಲ್ಲಾ ಮಹಾಪುರುಷರು ಮಹಾತ್ಯಾಗ ಮಾಡುತ್ತಾರೆ. ಅದರ ಫಲವನ್ನು ಜನಸಾಮಾನ್ಯರು ಅನುಭವಿಸುವುದನ್ನು ನಾವು ನೋಡಬಹುದು. ನಿನ್ನ ಸ್ವಂತ ಮುಕ್ತಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವುದರಲ್ಲಿ ಏನೂ ಇಲ್ಲ. ಜಗದ ಹಿತಕ್ಕಾಗಿ ನಿನ್ನ ಸ್ವಂತ ಮುಕ್ತಿಯನ್ನು ಕೂಡ ಮರೆಯಬಲ್ಲೆಯಾ? ಆಗ ನೀನೇ ದೇವರು. ಇದನ್ನು ಆಲೋಚಿಸಿ ನೋಡು.

ನುಡಿಮುತ್ತುಗಳು ೨೫

ಪ್ರಪಂಚ ಹೇಡಿಗಳಿಗೆ ಅಲ್ಲ, ಓಡಿಹೋಗಲೆತ್ನಿಸಬೇಡಿ. ಸೋಲು ಗೆಲುವುಗಳನ್ನು ಗಣನೆಗೆ ತರಬೇಡಿ. ನಿಃಸ್ವಾರ್ಥರಾಗಿ ಕೆಲಸ ಮಾಡಿ. ಸತ್ಯಸಂಕಲ್ಪ ಮಾಡಿಕೊಂಡು ಎಂದಿಗೂ ಅದರಿಂದ ವಿಚಲಿತವಾಗದ ಮನಸ್ಸು ಗೆಲ್ಲುವುದಕ್ಕಾಗಿಯೇ ಜನ್ಮ ತಾಳಿದೆಯೆಂದು ತಿಳಿಯಿರಿ..... ಜೀವನದ ಹೋರಾಟದ ಮಧ್ಯದಲ್ಲಿರಿ. ನಿದ್ರಿಸುವಾಗ ಅಥವಾ ಒಂದು ಗುಹೆಯಲ್ಲಿರುವಾಗ ಯಾರು ಬೇಕಾದರೂ ಶಾಂತಚಿತ್ತರಾಗಿರಬಹುದು. ಉನ್ಮತ್ತ ಕರ್ಮದ ಪ್ರಚಂಡ ಸುಂಟರಗಾಳಿಯಲ್ಲಿದ್ದೂ ಕೇಂದ್ರವನ್ನು ಸೇರಬೇಕು. ನೀವು ಕೇಂದ್ರವನ್ನು ಕಂಡಿದ್ದರೆ ವಿಚಲಿತರಾಗುವುದಿಲ್ಲ.

ನುಡಿಮುತ್ತುಗಳು ೨೬

ಚಿತ್ತಶುದ್ಧಿಯಿಂದ ಹುಟ್ಟುವ ಉತ್ಸಾಹದಿಂದ ಕೂಡಿ, ಅನುಕಂಪ ಹೃದಯರಾಗಿ, ಭಗವಂತನಲ್ಲಿ ಅಚಲ ಭಕ್ತಿಯುತರಾಗಿ, ದರಿದ್ರರ ಪತಿತರ ಜಗತ್ತಿನಲ್ಲಿ ಕೆಳಗೆ ತುಳಿಯಲ್ಪಟ್ಟ ಜನರ ಮೇಲೆ ಅನುಕಂಪ ತಾಳಿ, ಸಿಂಹಪ್ರತಾಪವನ್ನು ಹೊಂದಿದ, ಲಕ್ಷಾಂತರ ಸ್ತ್ರೀಯರು, ಪುರುಷರು ಭಾರತದ ಎಲ್ಲಾ ಕಡೆಯಲ್ಲಿಯೂ 'ಸಕಲರಿಗೂ ವಿಮೋಚನೆ ಉಂಟು, ಸರ್ವರಿಗೂ ಸಹಾಯ ಉಂಟು, ಸಾಮಾಜಿಕ ಏಳಿಗೆಯುಂಟು' ಎಂಬ ಸರ್ವಸಮತ್ವ ಸಿದ್ಧಾಂತವನ್ನು ಉಪದೇಶಿಸಬೇಕು.

ನುಡಿಮುತ್ತುಗಳು ೨೭

(ಯುವಕನೊಬ್ಬನು ತನ್ನ ಕೊಠಡಿಯ ಬಾಗಿಲುಗಳನ್ನೆಲ್ಲಾ ಮುಚ್ಚಿ ದೇವರಿಗಾಗಿ ಧ್ಯಾನ ಮಾಡಿಯೂ ಏನು ಪ್ರಯೋಜನವಾಗಲಿಲ್ಲವೆಂದಾಗ ಸ್ವಾಮೀಜಿಯವರು ಹೀಗೆನ್ನುತ್ತಾರೆ:)

ವತ್ಸ, ನನ್ನ ಮಾತಿಗೆ ನೀನೇನಾದರೂ ಬೆಲೆ ಕೊಡುವುದಾದರೆ ನಾನು ನಿನಗೆ ಹೇಳುವುದಿಷ್ಟೆ. ಮೊದಲು ನಿನ್ನ ಕೊಠಡಿಯ ಬಾಗಿಲುಗಳನ್ನೆಲ್ಲಾ ತೆರೆದು ಕಣ್ಣುಬಿಟ್ಟು ಹೊರಗೆ ನೋಡು. ನಿನ್ನ ನೆರೆ ಹೊರೆಯಲ್ಲಿ ಬಹಳಷ್ಟು ಜನರು ದುಃಖದಾರಿದ್ರ್ಯದಲ್ಲಿ ಮುಳುಗಿದ್ದಾರೆ. ಅವರಲ್ಲಿಗೆ ನೀನು ಹೋಗಿ ಶಕ್ತ್ಯುತ್ಸಾಹಗಳಿಂದ ಅವರ ಸೇವೆಯನ್ನು ಮಾಡಬೇಕು. ರೋಗಿಗಳಿಗೆ ಔಷಧಿವಿತರಣೆಯ ವ್ಯವಸ್ಥೆಯನ್ನು ಮಾಡಿ ಅವರಿಗೆ ಆದಷ್ಟೂ ಉಪಚಾರ ಮಾಡು. ಹೊಟ್ಟೆಗಿಲ್ಲದವರಿಗೆ ಅನ್ನದಾನ ಮಾಡು ; ನಿರಕ್ಷರಕುಕ್ಷಿಗಳಿಗೆ ನಿನಗೆ ಗೊತ್ತಿರುವಷ್ಟು ವಿದ್ಯಾದಾನ ಮಾಡು. ನಿನ್ನ ಸಹೋದರರನ್ನು ಈ ರೀತಿ ಸೇವೆ ಮಾಡಲು ಪ್ರಾರಂಭಿಸಿದರೆ, ನಿನಗೆ ಖಂಡಿತ ಶಾಂತಿಸಮಾಧಾನಗಳು ದೊರಕುತ್ತವೆ ಎಂದು ಹೇಳಬಲ್ಲೆ.

ನುಡಿಮುತ್ತುಗಳು ೨೮

ಹೇಗೆ ಸೇವೆಗೈಯಬೇಕು ಮತ್ತು ವಿಧೇಯರಾಗಿರಬೇಕು ಎಂಬುದನ್ನು ಹಾಗೂ ಹೇಗೆ ಆತ್ಮಸಂಯಮವನ್ನು ಅಭ್ಯಸಿಸಬೇಕು ಎಂಬುದನ್ನು ತಿಳಿಯಲು ಅತ್ಯವಶ್ಯವಾದ ಕೆಚ್ಚೆದೆಯ ಭಾವ ಎಲ್ಲಿದೆ? ಕೆಚ್ಚೆದೆಯ ಭಾವವೆಂದರೆ ಅಹಮಹಮಿಕೆ ಅಥವಾ ಸ್ವಪ್ರತಿಷ್ಠೆಯಲ್ಲ. ಅದಕ್ಕೆ ಬದಲಾಗಿ ತನ್ನನ್ನೇ ಬಲಿ ಕೊಡುವ ಆತ್ಮಾರ್ಪಣೆಯ ಮನೋಭಾವ. ಆಜ್ಞೆಯ ಮಾತನ್ನು ಕೇಳಿದಕೂಡಲೇ ತನ್ನ ಜೀವನವನ್ನೇ ಒತ್ತೆಯಿಡಲು ಮುಂದೆ ಬರುವ ಸಿದ್ಧತೆ ಇರಬೇಕು. ಆಗ ಮಾತ್ರ ಇತರರ ಹೃದಯದ ಮತ್ತು ಜೀವದ ಮೇಲೆ ಅಧಿಕಾರ ಬರುತ್ತದೆ. ಮೊದಲು ತನ್ನನ್ನು ತಾನೇ ಬಲಿದಾನ ಕೊಡಬೇಕು.

ನುಡಿಮುತ್ತುಗಳು ೨೯

ಭಯವೇ ಮೃತ್ಯು. ಭಯದ ಆಚೆಯ ದಡಕ್ಕೆ ಹೋಗಬೇಕು. ಇಂದಿನಿಂದ ಭಯರಹಿತನಾಗು. ನಡೆ, ಹೊರಡು-ನಿನ್ನ ಮೋಕ್ಷಕ್ಕಾಗಿ ಹಾಗೂ ಇತರರ ಹಿತಕ್ಕಾಗಿಯೂ ನಿನ್ನ ಜೀವವನ್ನೇ ಅರ್ಪಿಸಲು ಸಿದ್ಧನಾಗು. ಮೂಳೆ ಮಾಂಸಗಳ ಭಾರವನ್ನು ಹೊತ್ತುಕೊಂಡು ಆಗುವ ಪ್ರಯೋಜನವಾದರೂ ಏನು?