ಧೀಮಂತ ವ್ಯಕ್ತಿತ್ವ

ಒಮ್ಮೆ ಸ್ವಾಮಿ ವಿವೇಕಾನಂದರು ಹೈದರಾಬಾದಿನ ಆಸ್ಥಾನಕ್ಕೆ ಭೇಟಿಯಿತ್ತರು. ಅಲ್ಲಿನ ದೊರೆಯಾದ ನಿಜಾಮನು ಯಾರೇ ಬಂದರೂ ತನ್ನ ಆಸನವನ್ನು ಬಿಟ್ಟು ಎದ್ದು ನಿಂತು ಗೌರವ ಸೂಚಿಸುತ್ತಿರಲಿಲ್ಲ. ಆದರೆ ಸ್ವಾಮೀಜಿಯವರನ್ನು ಕಂಡ ತಕ್ಷಣ ದೊರೆಯು ಎದ್ದು ನಿಂತು ಗೌರವ ಸೂಚಿಸಿದ್ದನ್ನು ಕಂಡ ಆಸ್ಥಾನಿಕಲೊಬ್ಬರು ಆಶ್ಚರ್ಯಚಕಿತರಾಗಿ ಪ್ರಶ್ನಿಸಿದಾಗ ದೊರೆಯು. ‘ನಾಯಿಯು ಮಾಂಸದ ತುಂಡನ್ನು ಕಚ್ಚಿಕೊಂಡ ಹಾಗೆ ಯಾವ ಪ್ರಪಂಚಕ್ಕೆ ನಾನು ಅಂಟಿಕೊಂಡಿರುವೆನೋ ಅಂತಹ ಪ್ರಪಂಚವನ್ನು ಇವರು ಎಂಜಲಿನಂತೆ ಉಗಿದುಬಿಟ್ಟಿರುವರು. ಆದ್ದರಿಂದ ನಾನು ವಿಧಿಯಿಲ್ಲದೆ ನಿಲ್ಲಲೇಬೇಕಾಯಿತು’ ಎಂದರು. ಸ್ವಾಮೀಜಿಯವರು ಮುಂದೆ ಈ ಘಟನೆಯನ್ನು ಹೇಳುತ್ತಾ, ‘ ನಾನು ಆರ್ಥಿಕ ಸಹಾಯವನ್ನು ಯಾಚಿಸಲು ಹೋಗಿದ್ದೆ. ಆದರೆ ದೊರೆಯ ಮಾತು ಕೇಳಿ ಹಣ ಕೇಳಲು ಎದೆಗಾರಿಕೆಯಿಲ್ಲದೆ ಬರಿಗೈಯಲ್ಲಿ ಹಿಂತಿರುಗಬೇಕಾಯಿತು’ ಎಂದರು.

ಯತಿರಾಜ

ಸ್ವಾಮಿ ವಿವೇಕಾನಂದರ ಮೋಹಕ ರೂಪವು ಒಮ್ಮೆ ನೋಡಿದರೂ ಮನಸೆಳೆಯುವಂತಿತ್ತು. ಒಮ್ಮೆ ಅವರು ಅಮೆರಿಕದ ಭಕ್ತರಾದ ಮಿಸ್ಟರ್ ಲೆಗೆಟ್ ರೊಡನೆ’ ಪ್ಯಾರಿಸ್ಸಿನ ಒಂದು ಹೋಟೆಲ್ ನಲ್ಲಿ ತಂಗಿದ್ದರು. ಆಗ ಲೆಗೆಟ್ ನ ಚಾರನು ಸ್ವಾಮೀಜಿಯವರನ್ನು ಸದಾ ‘Mon prince’ ಎಂದೇ ಕರೆಯುತ್ತಿದ್ದನು. ವಿವೇಕಾನಂದರು ಒಮ್ಮೆ “ಆದರೆ ನಾನು ರಾಜನಲ್ಲ, ಹಿಂದೂ ಸಂನ್ಯಾಸಿ” ಎಂದರು. ಅದಕ್ಕೆ ಆ ಚಾರನು, “ನೀವು ಹಾಗೆಂದೇ ನಿಮ್ಮನ್ನು ಕರೆದುಕೊಳ್ಳಬಹುದು, ಆದರೆ ನನಗೆ ರಾಜರ ಜೊತೆ ವ್ಯವಹರಿಸಿ ಅಂತಹವರನ್ನು ತಕ್ಷಣ ಕಂಡುಹಿಡಿಯಬಲ್ಲ ಸಾಮರ್ಥ್ಯವಿದೆ’ ಎಂದನು. ಇನ್ನೊಮ್ಮೆ ಯಾರೊ ಸ್ವಾಮೀಜಿಯವರ ಘನತೆ, ಗಾಂಭೀರ್ಯವನ್ನು ಹೊಗಳಿದಾಗ ಅವರು “ಅದು ನಾನಲ್ಲ ನನ್ನ ನಡಿಗೆ” ಎಂದುಬಿಟ್ಟರು. ಅಹಂಕಾರವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಿದ ಬಾಲಕನಂತೆ ಇದ್ದರು ಸ್ವಾಮಿ ವಿವೇಕಾನಂದರು.

ಸ್ವಾಮಿ ವಿವೇಕಾನಂದರ ಕೋಪ

ಒಮ್ಮೆ ಸ್ವಾಮಿ ವಿವೇಕಾನಂದರು ಶರತ್ ಮಹಾರಾಜ್‌ರನ್ನು (ಸ್ವಾಮಿ ಶಾರದಾನಂದರು) ಬಹುವಾಗಿ ಬೈಯುತ್ತಿದ್ದರು. ಅವರ ಧ್ವನಿ ಬಹಳ ಮೊನಚಾಗಿಯೂ, ಗಡುಸಾಗಿಯೂ ಇತ್ತು. ಅನಿರೀಕ್ಷಿತವಾಗಿ ಅಲ್ಲಿಯೇ ಹೋಗುತ್ತಿದ್ದ ಭಕ್ತರೊಬ್ಬರು ಪ್ರಣಾಮ ಸಲ್ಲಿಸಲು ಒಳಬಂದರು, ಸ್ವಾಮೀಜಿಯವರ ಧ್ವನಿ ತಕ್ಷಣವೇ ಬದಲಾಗಿಹೋಯಿತು. ಬಹಳ ಮೃದುಮಧುರ ಧ್ವನಿಯಲ್ಲಿ ಅವರೊಡನೆ ಅದೂ ಇದೂ ಮಾತನಾಡುತ್ತಾ ಕರುಣಾಮೂರ್ತಿಯೇ ಆಗಿಬಿಟ್ಟರು. ಭಕ್ತನು ಹೊರಟುಹೋದ ತಕ್ಷಣ ಶರತ್ ಮಹಾರಾಜರ ಕಡೆ ತಿರುಗಿ, “ಎಲ್ಲಿಗೆ ನಿಲ್ಲಿಸಿದ್ದೆ? ಮತ್ತೊಮ್ಮೆ ಪ್ರಾರಂಭಿಸೋಣ” ಎಂದರು!!

ದುಷ್ಟನಿಗೆ ವೀರ ಸಂನ್ಯಾಸಿ ಕಲಿಸಿದ ಪಾಠ

ವಿವೇಕಾನಂದರು ತಮ್ಮ ಕೆಲವು ಸಹ- ಶಿಷ್ಯರೊಡನೆ ಕಲ ಕತ್ತೆಯ ಹೊರವಲಯದಲ್ಲಿ ತಮ್ಮ ಅಧ್ಯಯನ ಮತ್ತು ಸಾಧನೆಯಲ್ಲಿ ಮಗ್ನರಾಗಿದ್ದರು. ಒಂದು ದಿನ ಒಬ್ಬ ಹೆಸರಾಂತ ಪೋಲೀಸ್ ಅಧಿಕಾರಿ ಬಂದ. ಅವನು ವಿವೇಕಾನಂದರ ಹಿಂದಿನ ಕೌಟುಂಬಿಕ ಮಿತ್ರ, ಅವನು ಬಹಳ ಸಭ್ಯತೆಯಿಂದ ವಿವೇಕಾನಂದರನ್ನು ರಾತ್ರಿ ಊಟಕ್ಕೆ ತನ್ನ ಮನೆಗೆ ಆಹ್ವಾನಿಸಿದ. ವಿವೇಕಾನಂದರು ಅಲ್ಲಿಗೆ ಹೋದಾಗ ಮನೆಯಲ್ಲಿ ಬೇರೆ ಕೆಲವರಿದ್ದರು. ಕೊನೆಗೆ ಅವರೆಲ್ಲ ಹೊರಟುಹೋದರು. ಆದರೆ ಊಟದ ಸುಳಿವೇ ಇಲ್ಲ. ಪೊಲೀಸ್ ಅಧಿಕಾರಿ ಲೋಕಾಭಿರಾಮವಾಗಿ ಮಾತನಾಡುತ್ತಿದ್ದವನು ಕೂಡಲೆ ತನ್ನ ಧ್ವನಿಯನ್ನು ಬದಲಾಯಿಸಿ, ಕ್ರೂರ ಮುಖಮುದ್ರೆಯಿಂದ ಆರ್ಭಟಿಸತೊಡಗಿದ : “ಈಗ ಹೇಳು, ಏನೂ ಮುಚ್ಚುಮರೆಯಿಲ್ಲದೆ ಸತ್ಯವನ್ನು ಹೊರಗೆಡಹು, ನಿನ್ನ ಬೂಟಾಟಿಕೆ ನನ್ನ ಮುಂದೆ ನಡೆಯುವುದಿಲ್ಲ. ನಿನ್ನ ಎಲ್ಲ ಆಟ ನನಗೆ ಗೊತ್ತು. ನೀನು ಮತ್ತು ನಿನ್ನೆ ಬಳಗದವರೆಲ್ಲ ಸಾಧುಗಳ ವೇಷ ಹಾಕಿಕೊಂಡು ಸರ್ಕಾರದ ವಿರುದ್ಧ ಪಿತೂರಿ ನಡೆಸುತ್ತಿದ್ದೀರಿ. ‘ವಿವೇಕಾನಂದರು ಸ್ವಲ್ಪವೂ ಎದೆಗುಂದದೆ ಆಶ್ಚರ್ಯದಿಂದ ಕೇಳಿದರು : ‘ಏನು ನೀನು ಹೇಳುತ್ತಿರುವದು? ಯಾವ ಪಿತೂರಿಯ ಬಗ್ಗೆ ನೀನು ಹೇಳುತ್ತಿರುವುದು? ನಮಗೂ ಅದಕ್ಕೂ ಏನು ಸಂಬಂಧ?’ “ಅದನ್ನೇ ನಾನು ಕೇಳುತ್ತಿರುವುದು ನನಗೆ ಗೊತ್ತು ನೀವು ಯಾವುದೊ ಕುತಂತ್ರ ಹೂಡಿದ್ದೀರಿ. ನೀನೇ ಇದರ ಹಿಂದಿರುವ ಮುಖ್ಯ ವ್ಯಕ್ತಿ ಸತ್ಯವನ್ನೆಲ್ಲ ಹೊರಗೆಡಹು, ನಂತರ ನಿನ್ನನ್ನು ಸಾಕ್ಷಿಯನ್ನಾಗಿ ಮಾಡುತ್ತೇನೆ’ ಎಂದು ಅವನೆಂದ. ವಿವೇಕಾನಂದರು ನುಡಿದರು, “ನಿನಗೆ ಎಲ್ಲ ಗೊತ್ತಿರುವಾಗ ಯಾಕೆ ಬಂದು ನಮ್ಮನ್ನು ಸೆರೆ ಹಿಡಿಯಬಾರದು? ನಮ್ಮ ಮನೆಯನ್ನೆಲ್ಲ ಜಪ್ತಿ ಮಾಡಬಾರದು?” ಹೀಗೆ ಹೇಳುತ್ತ ಮೆಲ್ಲಗೆ ಎದ್ದು ಹೋಗಿ ಬಾಗಿಲನ್ನು ಮುಚ್ಚಿದರು. ಈಗ ಅವರು ಬಲಶಾಲಿಯಾದ ಪೈಲ್ವಾನ್, ಅವರ ಮುಂದೆ ಪೋಲೀಸ್ ಅಧಿಕಾರಿ ನರಪೇತಲ ನಾರಾಯಣ. ಅವನ ಕಡೆಗೆ ತಮ್ಮ ತೀಕ್ಷ್ಣ ದೃಷ್ಟಿಯನ್ನು ಬೀರಿ ಶಕ್ತಿಯುತ ಧ್ವನಿಯಲ್ಲಿ ನುಡಿದರು, ‘ಸುಳ್ಳು ನೆವ ಹೇಳಿ ನನ್ನನ್ನು ಮನೆಗೆ ಕರೆದುಕೊಂಡು ಬಂದೆ, ಮತ್ತೆ ನನ್ನ ಮತ್ತು ನನ್ನ ಸಂಗಡಿಗರ ಮೇಲೆ ಸುಳ್ಳು ಆಪಾದನೆಯನ್ನು ಹೊರಿಸುತ್ತಿರುವೆ.

ಇದು ನಿನ್ನ ವೃತ್ತಿ ನನ್ನ ಸ್ಥಾನಕ್ಕೆ ಉಚಿತವಾಗಿ ನಾನು ಅವಮಾನಕ್ಕೆ ಪ್ರತೀಕಾರ ತೋರಿಸಕೂಡದು. ನಾನೊಬ್ಬ ತಪ್ಪಿತಸ್ಥನೇ ಆಗಿರುವುದಾದರೆ, ಈಗಲೇ ನಿನ್ನ ಕುತ್ತಿಗೆ ತಿರುಚಿಹಾಕಬಲ್ಲೆ. ಈಗ ನಿನಾಗಾರೂ ಸಹಾಯಕ್ಕಿಲ್ಲ. ಆದರೆ ನಿನ್ನ ಪಾಡಿಗೆ ನಿನ್ನನ್ನು ಬಿಟ್ಟಿದ್ದೇನೆ’ ಎಂದು ಹೇಳಿ ವಿವೇಕಾನಂದರು ಬಾಗಿಲು ತೆರೆದು ಹೊರಟುಹೋದರು. ಪೋಲೀಸ್ ಅಧಿಕಾರಿ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದ. ಮುಂದೆ ಎಂದೂ ಅವನು ಅವರ ತಂಟೆಗೆ ಹೋಗಲಿಲ್ಲ.

ವಿಶ್ವಮಾನವ ವಿವೇಕಾನಂದ

ಸ್ವಾಮಿ ವಿವೇಕಾನಂದರು ಸಂಪೂರ್ಣ ದೈವತ್ವಕ್ಕೆ ಏರಿದ ಮಾನವರಾಗಿದ್ದರು. ಹಾಸ್ಯ ಮಾಡಿದರೂ ಸಹ ಅವರು ಸದಾ ಅತೀಂದ್ರಿಯ ಪ್ರಜ್ಞಾಸ್ತರದಲ್ಲೇ ಇರುತ್ತಿದ್ದರು. ಸ್ವಾಮಿ ಶಿವಾನಂದರು, ‘ಸ್ವಾಮೀಜಿಯ ತಲೆದಿಂಬು ರಾತ್ರಿಯ ವೇಳೆ ಎಷ್ಟೋ ಬಾರಿ ಒದ್ದೆಯಾಗಿರುತ್ತಿತ್ತು. ಬೆಳಗ್ಗೆ ಅದನ್ನು ಬಿಸಿಲಿಗೆ ಹಾಕುತ್ತಿದೆ’ ಎನ್ನುತ್ತಿದ್ದರು. ಅದು ಇತರರಿಗಾಗಿ ಕಣ್ಣೀರು ಸುರಿಸುತ್ತಿದ್ದುದರ ಪರಿಣಾಮ.

ಒಮ್ಮೆ ಬಲರಾಮಬೋಸನ ಮನೆಗೆ ಹೋಗಿದ್ದಾಗ ಅಲ್ಲಿ ಮನುಷ್ಯರ ಕಷ್ಟ, ದುಃಖ ದುಮ್ಮಾನಗಳ ಬಗ್ಗೆ ಕೇಳಿ ಎಷ್ಟೊಂದು ಕಣ್ಣೀರು ಸುರಿಸಿದರೆಂದರೆ ಆ ನೋವೆಲ್ಲಾ ಒಂದು ಹಾಡಿನ ರೂಪದಲ್ಲಿ ಅವರ ಹೃದಯದಿಂದ ಚಿಮ್ಮುವವರೆಗೂ ನಿಲ್ಲಲೇ ಇಲ್ಲ!

ನಿಜವಾದ ವೇದಾಂತಿ

ಸ್ವಾಮಿ ವಿವೇಕಾನಂದರು ೧೮೯೬ರಲ್ಲಿ ವಿದೇಶ ಪ್ರವಾಸದಲ್ಲಿದ್ದರು. ಆಗ ಪ್ಯಾರಿಸ್ ನಲ್ಲಿ, ಡಚ್ ಮಹಿಳೆ ಡಿ ಫೋಮಾ ಎಂಬವರ ಪರಿಚಯವಾಯಿತು. ಇವರ ಜೊತೆಯಲ್ಲಿ ಸ್ವಾಮೀಜಿ ಹಳ್ಳಿಯೊಂದಕ್ಕೆ ಹೊರಟರು. ಅವರು ಪ್ರಯಾಣ ಮಾಡಿದ್ದು ನಾಲ್ಕು ಚಕ್ರದ ತೆರೆದ ರಿಕ್ಷಾವೊಂದರಲ್ಲಿ. ಆ ವೇಳೆಗಾಗಲೇ ವಿವೇಕಾನಂದರು ಫ್ರೆಂಚ್ ಭಾಷೆಯನ್ನು ಕಲಿತು ಪ್ರಾವೀಣ್ಯತೆ ಪಡೆದಿದ್ದರು. ಪ್ರಯಾಣದುದ್ದಕ್ಕೂ. ಮಹಿಳೆಯೊಂದಿಗೆ ಮಾತನಾಡುತ್ತಿದ್ದರು. ರಿಕ್ಷಾಚಾಲಕನು ಇವರ ಮಾತುಗಳನ್ನು ಆಲಿಸುತ್ತಿದ್ದುದನ್ನು ಮಹಿಳೆ ಗಮನಿಸಿದಳು. ಅವರು ಅವನ ಜೊತೆ ಮಾತನಾಡಿದಾಗ ಅವನು ಶುದ್ಧ ಫ್ರೆಂಚ್ ಭಾಷೆಯಲ್ಲಿಯೇ ಮಾತನಾಡಿದ್ದು ಮಹಿಳೆಗೆ ಆಶ್ಚರ್ಯವೆನಿಸಿತು. ತಮ್ಮ ಅನಿಸಿಕೆಯನ್ನು ಅವರು ಸ್ವಾಮೀಜಿಗೆ ತಿಳಿಸಿದರು.

ಸ್ವಲ್ಪದೂರ ಹೋದನಂತರ, ಯಾವುದೋ ರಸ್ತೆಯಲ್ಲಿ ಚಾಲಕನು ಗಾಡಿಯನ್ನು ನಿಲ್ಲಿಸಿದನು. ಮಹಿಳೆಗೆ ಕುತೂಹಲವುಂಟಾಯಿತು. ಅವನು ಇಳಿದು ರಸ್ತೆಯ ಪಕ್ಕದಲ್ಲಿ ಫುಟ್ ಪಾತ್ ಬಳಿ ಹೋದನು. ಅಲ್ಲಿ ನಿಂತಿದ್ದ ಒಬ್ಬ ಪುಟ್ಟ ಹುಡುಗ ಮತ್ತು ಹುಡುಗಿಯನ್ನು ಪ್ರೀತಿಯಿಂದ ಮಾತನಾಡಿಸಿ, ಆಲಂಗಿಸಿಕೊಂಡು ಜೊತೆಯಲ್ಲಿದ್ದ ಮಹಿಳೆಯನ್ನು ವಿಚಾರಿಸಿದನು. ನಂತರ ಅವನು ಮತ್ತೆ ಗಾಡಿಯನ್ನು ಹತ್ತಿ ಮುಂದೆ ಹೊರಟನು. ಆ ಇಬ್ಬರು ಮಕ್ಕಳೂ, ನೋಡಲು ಉಚ್ಚವರ್ಗಕ್ಕೆ ಸೇರಿದವರಂತೆ ತೋರುತ್ತಿತ್ತು. ಈ ಸಾಮಾನ್ಯ ರಿಕ್ಷಾ ಚಾಲಕನಿಗೆ ಅಂತಹ ಮಕ್ಕಳು ಅಷ್ಟು ಆತ್ಮೀಯರಾದುದು ಹೇಗೆ ಎಂಬ ಕುತೂಹಲ ಆ ಮಹಿಳೆಗೆ ಅವರು ಈ ಸಂಶಯವನ್ನು ನಿವಾರಿಸಿಕೊಳ್ಳಲು ಚಾಲಕನನ್ನು ಕುರಿತು “ಅ ಮಕ್ಕಳು ಯಾರೆಂದು ತಿಳಿಯಬಹುದೇ? ಎಂದು ಪ್ರಶ್ನಿಸಿದರು. ಅವನು ಉತ್ಸಾಹದಿಂದ ‘ ಅವರಿಬ್ಬರೂ ನನ್ನ ಮಕ್ಕಳೇ’ ಎಂದನು. ಮಹಿಳೆ ಆಶ್ಚರ್ಯದಿಂದ ‘ಹಾಗಾದರೆ ನೀನು ಈ ವೃತ್ತಿಗೆ ಬಂದುದು?’ ಎಂದು ಪ್ರಶ್ನಿಸಿದರು. ಸ್ವಾಮೀಜಿ ಇವರಿಬ್ಬರ ಸಂಭಾಷಣೆಯನ್ನು ಕುತೂಹಲದಿಂದ ಆಲಿಸುತ್ತಿದ್ದರು.

ಚಾಲಕನು ನಿಟ್ಟುಸಿರುಬಿಟ್ಟು, ಆ ನಗರದ ಬ್ಯಾಂಕೊಂದರ ಹೆಸರು ಹೇಳಿ, “ಮೇಡಮ್, ಈ ಬ್ಯಾಂಕಿನ ಹೆಸರನ್ನು ತಾವು ಕೇಳಿದ್ದೀರಾ?” ಎಂದನು. ಮಹಿಳೆಯು “ಓ! ಆ ಬ್ಯಾಂಕಿನ ಹೆಸರನ್ನು ಎಲ್ಲರೂ ಬಲ್ಲರು. ಅದು ಒಂದು ಕಾಲಕ್ಕೆ ಪ್ರಸಿದ್ಧ ಬ್ಯಾಂಕ್, ಆದರೆ ಅದು ದಿವಾಳಿಯಾದುದು ತುಂಬ ದುಃಖದ ವಿಚಾರ”ಎಂದರು. ಆಗ ಚಾಲಕನು ‘ಒಂದು ಕಾಲದಲ್ಲಿ ನಾನೇ ಆ ಬ್ಯಾಂಕಿನ ಒಡೆಯನಾಗಿದ್ದೆ. ಆದರೆ ನನ್ನ ದುರ್ವಿಧಿ ಅದು ದಿವಾಳಿಯಾಯಿತು. ಆದರೆ ಅದರ ಗ್ರಾಹಕರಿಗೆ ಅವರ ಹಣವನ್ನು ಹಿಂತಿರುಗಿಸಬೇಕಲ್ಲವೇ? ಅದಕ್ಕೆ ನಾನು ಕಾಲಾವಕಾಶ ಪಡೆದುಕೊಂಡಿದ್ದೇನೆ. ಅದನ್ನು ತೀರಿಸಲು ಯಾರಿಗೂ ಭಾರವಾಗಲು ನನಗೆ ಇಷ್ಟವಿಲ್ಲ. ಅದಕ್ಕಾಗಿ ಈ ರಿಕ್ಷಾ ಕೊಂಡುಕೊಂಡೆ. ಇದರಿಂದ ಬರುವ ಹಣವನ್ನು ಕೂಡಿಡುತ್ತಿದ್ದೇನೆ. ಹೆಂಡತಿ ಮಕ್ಕಳನ್ನು ಒಂದು ಬಾಡಿಗೆ ಮನೆಯಲ್ಲಿ ಇಟ್ಟಿದ್ದೇನೆ. ಅವರ ಸಹಾಯಕ್ಕಾಗಿ ಒಬ್ಬ ಮಹಿಳೆ ಇದ್ದಾಳೆ. ಸಾಕಷ್ಟು ಮೊತ್ತ ಸಂಗ್ರಹವಾದ ಮೇಲೆ ಮತ್ತೆ ಬ್ಯಾಂಕ್ ಆರಂಭಿಸುತ್ತೇನೆ” ಎಂದು ಹೇಳಿ ಸುಮ್ಮನಾದನು, ಮಹಿಳೆ, “ಓ ನೀವೊಬ್ಬ ಆದರ್ಶವ್ಯಕ್ತಿ, ಮಹಾನುಭಾವರು’ ಎಂದು ಉದ್ಗರಿಸಿದರು.

ಆ ಚಾಲಕನ ಮಾತುಗಳನ್ನು ಆಸಕ್ತಿಯಿಂದ ಕೇಳುತ್ತಿದ್ದ ವಿವೇಕಾನಂದರಿಗೆ ಅವನ ಸಾಹಸ ಪ್ರವೃತ್ತಿಯ ಬಗ್ಗೆ ಮೆಚ್ಚುಗೆಯಾಯಿತು. ಎಲ್ಲವನ್ನೂ ಕಳೆದುಕೊಂಡರೂ ಅವನಲ್ಲಿದ್ದ ಆತ್ಮ ವಿಶ್ವಾಸ ಮತ್ತು ಧೈರ್ಯವನ್ನು ಕಂಡು ಅಚ್ಚರ್ಯವಾಯಿತು. ಅವರು ಮಹಿಳೆಯತ್ತ ತಿರುಗಿ ಹೇಳಿದರು: ‘ನೋಡಿ, ಇವನು ನಿಜವಾದ ವೇದಾಂತಿ. ನಮ್ಮ ವೇದಾಂತದ ಅರ್ಥವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬದುಕುತ್ತಿದ್ದಾನೆ. ಅಂತಹ ಉನ್ನತ ಸ್ಥಾನದಿಂದ ಕೆಳಗಿಳಿದರೂ, ಪರಿಸ್ಥಿತಿಗೆ ಹೆದರಲಿಲ್ಲ ಹೆದರಿ ಓಡಿಹೋಗಲಿಲ್ಲ, ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಧೈರ್ಯದಿಂದಿರುವವನೇ ನಿಜವಾದ ವೇದಾಂತಿಯಲ್ಲವೇ? ಇದನ್ನೇ ನಮ್ಮ ವೇದಾಂತ ಹೇಳುವುದು.”

ಡಚ್ ಮಹಿಳೆ ಅವರ ಮಾತುಗಳಿಗೆ ಮೌನವಾಗಿಯೇ ತನ್ನ ಸಮ್ಮತಿಯನ್ನು ಸೂಚಿಸಿದರು.

(ಸಂಗ್ರಹ ಕೆ.ಜಿ. ವಿರೂಪಾಕ್ಷಪ್ಪ, ನಿವೃತ್ತ ಪ್ರಾಚಾರ್ಯರು)

(ಮೂಲ: ವಿವೇಕಪ್ರಭ ಜನವರಿ 2001 ಯುವಶಕ್ತಿ ವಿಶೇಷಾಂಕ)