ತತ್ವಶಾಸ್ತ್ರವನ್ನು ಮುಖ್ಯವಾಗಿ ಎರಡು ಶಾಖೆಗಳಾಗಿ ವಿಭಾಗಿಸಬಹುದು: ಅತೀತವಾದ ಮತ್ತು ಪ್ರಸ್ತುತವಾದ, ಪ್ರಸ್ತುತ ಸನ್ನಿವೇಶಗಳಿಗೆ ಮೀರಿದ ಬ್ರಹ್ಮ ಮತ್ತು ಆತ್ಮದ ಸ್ವರೂಪಕ್ಕೆ ಸಂಬಂಧಿಸಿದ ಸಿದ್ಧಾಂತಗಳು, ಸೃಷ್ಟಿಸಿದ್ದಾಂತಗಳು, ದ್ರವ್ಯ ಮತ್ತು ಗುಣಗಳಿಗೆ ಸಂಬಂಧಿಸಿದ ಸಿದ್ದಾಂತಗಳು, ನೋಡುವ ಮನಸ್ಸಿಗಿಂತ ಪ್ರತ್ಯೇಕವಾದ ಬಾಹ್ಯವಸ್ತುವಿದೆಯೆ ಇಲ್ಲವೇ ಎಂಬ ವಿಷಯಕ್ಕೆ ಸಂಬಂಧಿಸಿದ ಭಾವಸತ್ತಾವಾದ, ವಸ್ತುಸತ್ತಾವಾದ ಇವೇ ಮುಂತಾದ ಸಿದ್ಧಾಂತಗಳು-ಇವೆಲ್ಲವೂ ಅತೀತವಾದದ ಪರಿಧಿಯೊಳಗೆ ಬರುತ್ತವೆ. ಈ ಅತೀತವಾದವನ್ನು ವಿರೋಧಿಸಿ ಪ್ರಸ್ತುತ ಮಾನವ ಸನ್ನಿವೇಶವನ್ನು ಕುರಿತಾದ ಸಾಮುದಾಯಿಕವಾದ (Communism) ಪ್ರತ್ಯಕ್ಷೆಕಪ್ರಮಾಣವಾದ (positivism), ಅಸ್ತಿತ್ವವಾದ (existentialism)-ಇವೇ ಮುಂತಾದ ತಾತ್ತ್ವಿಕ ಮತಗಳು ಇವೆ. ಅತೀತವಾದಗಳು ಕೇವಲ ಬೌದ್ಧಿಕ ಕಸರತ್ತುಗಳು, ಶಬ ಚಮತ್ಕಾರವನ್ನು ಅವಲಂಬಿಸಿದವು ಮತ್ತು ಅವು ಮಾನವನ ಪ್ರಸ್ತುತ ಸಮಸ್ಯೆಗಳಿಗೆ  ಬಹು ದೂರವಾದವುಗಳು-ಎಂದು ಪ್ರಸ್ತುತವಾದಿಗಳು ದೂರುತ್ತಾರೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿಯುವಂತೆ, ಅತೀತವಾದಿಗಳು ಮಾನವನ ವಾಸ್ತವ ಸ್ಥಿತಿಯ ಕಡೆ ಗಮನ ಹರಿಸದೆ ಯಾವುದೋ ಕನಸಿನ ಲೋಕದಲ್ಲಿ ವಿಹರಿಸುತ್ತಾರೆ ಎಂಬುದು ಪ್ರಸ್ತುತವಾದಿಗಳ ದೂಷಣೆ.

ಪ್ರಸ್ತುತವಾದಗಳಲ್ಲಿ ಅತ್ಯಂತ ಪ್ರಮುಖವಾದುದು ಅಸ್ತಿತ್ವವಾದ. ಅಸ್ತಿತ್ವವಾದಿಗಳು ಮಾನವನ ಅತ್ಯಂತ ದಾರುಣವಾದ, ನಿರಾಶಾದಾಯಕವಾದ, ಹೃದಯ-ಮನಸ್ಸುಗಳನ್ನು ಕಲಕುವ, ಖಿನ್ನತೆಯ ಕಾರ್ಮೊಡ ಮುಸುಕುವಂತೆ ಮಾಡುವ, ಜೀವನೋತ್ಸಾಹವನ್ನೇ ಕುಗ್ಗಿಸುವ ಮತ್ತು ಅಸಹಾಯಕತೆಯ, ಸಂದಿಗ್ಧತೆಯ ದಟ್ಟಿರುಳಿನಲ್ಲಿ ತೊಳಲುವಂತೆ ಮಾಡುವ ವಾಸ್ತವತೆಯ ನಗ್ನ ಚಿತ್ರವನ್ನು ನೀಡುತ್ತಾರೆ. ಅಸ್ತಿತ್ವವಾದಿಗಳು ಕಾತರತೆ, ದಿಗಿಲು ಮತ್ತು ಸಾವಿನ ಅನುಭವಗಳನ್ನು ಒತ್ತಿಹೇಳುತ್ತಾರೆ. ಕಾತರತೆ ದಿಗಿಲುಗಳಿಗೆ ಯಾವುದೇ ವಿಚಾರಪೂರ್ಣ ವಿವರಣೆ ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.

ಅತೀತವಾದಿಗಳಿಗೆ ಮಾನವನ ವಾಸ್ತವಸ್ಥಿತಿಯ ಕಡೆ ಗಮನವಿರಲಿಲ್ಲವೆನ್ನುವಂತಿಲ್ಲ. ಸಾಂಖ್ಯತತ್ತ್ವದ ಜಿಜ್ಞಾಸೆ ಪ್ರಾರಂಭವಾಗುವುದೇ ಮಾನವನ ದುಃಖನಿವಾರಣೆಗಾಗಿ ದುಃಖತ್ರಯಾಭಿಘಾತಾತ್ ಜಿಜ್ಞಾಸಾ-“ಮಾನವನು ದುಃಖತ್ರಯಗಳಿಂದ ಬಾಧಿತನಾಗಿರುವುದರಿಂದ ಈ ಜಿಜ್ಞಾಸೆ(ಯು ಆವಶ್ಯಕ)” ಎಂದು ಸಾಂಖ್ಯಸೂತ್ರವು ಹೇಳುತ್ತದೆ. ಪತಂಜಲಿಯು ತನ್ನ ಯೋಗಸೂತ್ರಗಳಲ್ಲಿ ಮಾನಸಿಕ ಕ್ಲೇಶಗಳು, ಅದರ ಸಂಸ್ಕಾರಗಳು ಮತ್ತು ಅವುಗಳಿಂದುಂಟಾಗುವ ಸುಖದುಃಖಾನುಭವಗಳು ಇತ್ಯಾದಿಗಳ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಸಿದ್ದಾನೆ. “ದುಃಖಂ ದುಃಖಂ ಸರ್ವಂ ದುಃಖಂ” ಎಂದು ಹೇಳುವ ಬುದ್ಧನನ್ನು ಭಾರತದ ಮೊದಲ ಅಸ್ತಿತ್ವವಾದಿ ಎಂದು ಕರೆಯಬಹುದೇನೋ. ಅವನು ಮಾನವನ ಪ್ರಸ್ತುತ ಸ್ಥಿತಿಗೆ ಮಹತ್ವವನ್ನು ನೀಡಿ ವ್ಯರ್ಥ ತತ್ತ್ವವಿಚಾರವನ್ನು ಅಲ್ಲಗೆಳೆಯುತ್ತಾನೆ. ಸ್ವಾಮಿ ವಿವೇಕಾನಂದರು ಪ್ರಸ್ತುತ ಮತ್ತು ಅತೀತ ಎರಡಕ್ಕೂ ಸಮಾನ ಪ್ರಾಧಾನ್ಯವನ್ನು ನೀಡಿದರು. ಮಾನವನ ಪ್ರಸ್ತುತ ಸಮಸ್ಯೆಗೆ ಪರಿಹಾರವನ್ನು ನೀಡದ, ಈ ಪ್ರಪಂಚದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ನೀಡದ ಮತ್ತು ಮರಣದಾಚೆಯ ಸ್ವರ್ಗ ಅಥವಾ ಮುಕ್ತಿಯ ಭರವಸೆಯನ್ನು ನೀಡುವ ಧರ್ಮ ನಮಗೆ ಬೇಡವೇ ಬೇಡ ಎಂದರು ಅವರು.

ಅಸ್ತಿತ್ವವಾದಿಗಳು ನೀಡುವ ಮಾನವನ ಸ್ಥಿತಿಯ ವಾಸ್ತವಚಿತ್ರ ವಿವೇಕಾನಂದರು ನೀಡುವ ಮಾಯಾ ವಿವರಣೆಯನ್ನು ನೆನಪಿಗೆ ತರುತ್ತದೆ: “ವೇದಾಂತದಲ್ಲಿ ಬರುವ ಪೂರ್ಣರೂಪವನ್ನು ಪಡೆದ ಮಾಯಾಭಾವನೆಯು ಭಾವಸತ್ತಾವಾದವೂ ಅಲ್ಲ, ವಸ್ತುಸತ್ತಾವಾದವೂ ಅಲ್ಲ, ಅದೊಂದು ಸಿದ್ದಾಂತವೇ ಅಲ್ಲ. ಅದೊಂದು ವಾಸ್ತವತಿಯ ನಿರೂಪಣೆ ಅಷ್ಟೆ. ನಾವೇನಾಗಿರುವೆವೋ, ಸುತ್ತಲೂ ಏನನ್ನು ನೋಡುತ್ತೇವೆಯೋ ಅದರ ನಿರೂಪಣೆ.” (ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ, ಸಂ.೨, ಪು. ೩೧).

ಅವರು ಕೊಡುವ ಮಾನವನ ವಾಸ್ತವ ಸ್ಥಿತಿಯ ಚಿತ್ರದ ಕಡೆ ಸ್ವಲ್ಪ ಗಮನ ಕೊಡೋಣ: “ನಮ್ಮಲ್ಲಿ ಪ್ರತಿಯೊಬ್ಬರ ರಣರಂಗದಲ್ಲಿ ಹೋರಾಡುವುದಕ್ಕೆ ಎಂಬಂತೆ ಬರುತ್ತೇವೆ. ಅಳುತ್ತ ಬಂದು ನಮ್ಮ ದಾರಿಯನ್ನು ಹುಡುಕಿಕೊಳ್ಳಲು, ಹೋರಾಡಲು ಸಾಧ್ಯವಾದಷ್ಟೂ ಪ್ರಯತ್ನಿಸುತ್ತೇವೆ. ಮುಂದೆ ಮುಂದೆ ಸಾಗುತ್ತೇವೆ … ಮೃತ್ಯು ಬರುವವರೆಗೆ ಹೀಗೆ ಸಾಗುತ್ತಿರುತ್ತೇವೆ. ಸೋತೆವೊ, ಗದ್ದೆವೊ ಯಾವುದೂ ಗೊತ್ತಿಲ್ಲ. ಅಂತೂ ಸಾವು ನಮ್ಮನ್ನು ಕಾರ್ಯಕ್ಷೇತ್ರದಿಂದ ಒಯ್ಯುವುದು. ಇದೇ ಮಾಯೆ.

“ಇಂದ್ರಿಯಗಳು ಮನುಷ್ಯನನ್ನು ಬಹಿರ್ಮುಖನಾಗಿ ಮಾಡುವುವು ಮನುಷ್ಯ ಆನಂದವನ್ನು, ಅದು ಎಲ್ಲಿ ದೊರಕದೊ, ಅಲ್ಲಿ ಹುಡುಕುತ್ತಿರುವನು. ಇದೆಲ್ಲ ವ್ಯರ್ಥ , ಪ್ರಯೋಜನವಿಲ್ಲ, ಇಲ್ಲಿ ಸುಖವೆಂಬುದುದಿಲ್ಲ ಎಂದು ಅನಾದಿಕಾಲದಿಂದಲೂ ನಮಗೆ ಬೋಧಿಸಿರುವರು. ಆದರೂ ನಾವು ಕಲಿತುಕೊಳ್ಳುವುದಿಲ್ಲ…. ನಾವು ಪ್ರಯತ್ನಿಸುವೆವು, ಪೆಟ್ಟೊಂದು ಬೀಳುವುದು. ಆಗಲಾದರೂ ಕಲಿಯುವೆವೊ? ಆಗಲೂ ಇಲ್ಲ, ಪತಂಗವು ದೀಪದ ಕಡೆ ಧಾವಿಸುವಂತೆ, ತೃಪ್ತಿ ಸಿಕ್ಕುವುದೆಂದು ನಾವು ಪುನಃ ಪುನಃ ಧಾವಿಸುತ್ತಿರುವೆವು. ಮೋಸಗೊಂಡು ಶಕ್ತಿಗುಂದುವವರೆಗೂ ಹೀಗೆ ಹೋಗಿ ಒಂದು ದಿನ ಸಾಯುವೆವು ಇದೇ ಮಾಯೆ” ಹೀಗೆ ವಿವೇಕಾನಂದರ  ಮಾಯೆಯ ರುದ್ರಭಯಂಕರ ಚಿತ್ರಣ ಮುಂದುವರೆಯುತ್ತದೆ.

ಆದರೆ ಮಾನವನ ವಿಷಾದ ಚಿತ್ರವನ್ನು ನೀಡುವುದರಲ್ಲಿಯೇ – ಅವರು ತೃಪ್ತರಾಗದೆ, ಅದಕ್ಕೆ ಪರಿಹಾರವನ್ನೂ ನೀಡುತ್ತಾರೆ. ಚಿಕಾಗೊ ಧರ್ಮಸಮ್ಮೇಳನದಲ್ಲಿ ಹಿಂದೂಧರ್ಮದ ಮೇಲೆ ನೀಡಿದ ತಮ್ಮ ಉವನ್ಯಾಸದಲ್ಲಿ ಅಸ್ತಿತ್ವವಾದಿಗಳು ನಾಚಿ ತಲೆತಗ್ಗಿಸುವಂತಹ ಮಾನವನ ದಾರುಣಸ್ಥಿತಿಯ ಚಿತ್ರವನ್ನು ನೀಡಿ ಅದಕ್ಕೆ ಪರಿಹಾರವನ್ನೂ ಸೂಚಿಸುತ್ತಾರೆ : ‘ಮಾನವನು ಬಿರುಗಾಳಿಯಲ್ಲಿ ಸಿಕ್ಕಿರುವ ಒಂದು ಸಣ್ಣ ದೋಣಿಯೆ? ಒಂದು ಸಾರಿ ನೊರೆಯಿಂದ ಕೂಡಿದ ದೊಡ್ಡ ಅಲೆಯ ನೆತ್ತಿಯ ಮೇಲೇರಿ ಮರುಕ್ಷಣವೇ ಪಾತಾಳಕ್ಕೆ ಎಸೆಯಲ್ಪಡುವವನೆ? ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ತಾಡನಕ್ಕೆ ಅತ್ತ ಇತ್ತ ಅಲೆಯುತ್ತಿರುವವನೆ? ಅನವರತವೂ ಗರ್ಜಿಸುತ್ತ ಪ್ರವಹಿಸುತ್ತಿರುವ ಎಂದಿಗೂ ಯಾವ ಹೊಂದಾಣಿಕೆಗೂ ಜಗ್ಗದ ಕಾರ್ಯಕಾರಣಗಳೆಂಬ ಪ್ರಚಂಡ ತರಂಗ ಭಂಗದಲ್ಲಿ ಸಿಕ್ಕಿದ, ಶಕ್ತಿಹೀನವಾದ, ದಿಕ್ಕಿಲ್ಲದ ಒಂದು ಹಾಳಾದ ದೋಣಿಯೇ? ವಿಧವೆಯರ ಕಂಬನಿಗೆ ಕರಗದೆ, ತಬ್ಬಲಿಗಳ – ಗೋಳಿಗೆ ಮರುಗದೆ, ತನ್ನ ದಾರಿಯಲ್ಲಿ ಸಿಕ್ಕಿದುದನ್ನೆಲ್ಲ ಉರುಳಿಸುತ್ತಿರುವ ಕಾರ್ಯ ಕಾರಣಗಳೆಂಬ ಮಹಾಚಕ್ರದ ಕೆಳಗೆ ಇರುವ ಒಂದು ಕೀಟವೆ ಮಾನವ? ಇದನ್ನು ಯೋಚಿಸಿದರೆ ನಮ್ಮ ಹೃದಯ – ತಲ್ಲಣಿಸುತ್ತದೆ. ಹೃದಯಾಂತರಾಳದಿಂದ ಹೊಮ್ಮಿದ ನಿರಾಶೆಯ ಈ ಆರ್ತನಾದ ಕರುಣಾಮಯನನ್ನು ಮುಟ್ಟಿತು. ಧೈರ್ಯ ಮತ್ತು ಸಮಾಧಾನವನ್ನು ಕೊಡುವ ನುಡಿಗಳು ಉಪನಿಷತ್ತಿನ ಋಷಿಯೊಬ್ಬನಿಗೆ ಸ್ಫೂರ್ತಿ ನೀಡಿದವು. ಅವನು ಜಗತ್ತಿನ ಎದುರಿಗೆ ನಿಂತು ಜಯಘೋಷದಿಂದ ಈ ಆನಂದದ ಸುದ್ದಿಯನ್ನು ಸಾರಿದನು. – ‘ಅಮೃತಪುತ್ರರೇ, ಕೇಳಿ, ಸ್ವರ್ಗಧಾಮದಲ್ಲಿರುವವರೂ ಕೂಡ ಕೇಳಿ, ಮೋಹದಾಚೆ, ಕತ್ತಲಿನಾಚೆ ಇರುವ ಸನಾತನ ಪುರುಷನನ್ನು ನಾನು ಕಂಡಿರುವೆನು. ಅವನನ್ನು ಸಾಕ್ಷಾತ್ಕಾರ ಮಾಡಿಕೊಂಡರೆ ಮಾತ್ರ ನೀವು ಸಾವಿನಿಂದ ಪಾರಾಗಬಹುದು.” (ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ, ಸಂ, ೧, ಪು. ೧೨),

ಅಸ್ತಿತ್ವದ ಸಮಸ್ಯೆಗಳಿಗೆ ಪರಿಹಾರ ಅಸ್ತಿತ್ವದ ಪರಿಧಿಯೊಳಗೇ ದೊರೆಯುವುದಿಲ್ಲ, ಅದನ್ನು ಮೀರಿಹೋಗಬೇಕು. ಕತ್ತಲೆಯಲ್ಲಿಯೇ ಇದ್ದರೆ ಕತ್ತಲೆಯನ್ನು ಹೋಗಲಾಡಿಸಲು ಆಗುವುದಿಲ್ಲ, ನಾವು ಕತ್ತಲೆಯಿಂದ ಹೊರಗೆ ಬರಬೇಕು. ಅಸ್ತಿತ್ವವಾದಿಗಳಿಗೆ ವಿವೇಕಾನಂದರು ಬಹುಶಃ ಹೀಗೆ ಹೇಳಬಹುದು: “ನಾವೇ ಕಣ್ಣನ್ನು ನಮ್ಮ ಕೈಗಳಿಂದ ಮುಚ್ಚಿಕೊಂಡು “ಅಯ್ಯೋ, ಕತ್ತಲೆ’ ಎಂದು ಕೂಗುತ್ತಿರುವೆವು. ಕೈ ತೆಗೆದು, ಕಣ್ಣು ಬಿಟ್ಟು ನೋಡಿದರೆ ಬೆಳಕು ಕಾಣಿಸುವುದು.” ಕತ್ತಲೆಯಲ್ಲಿರುವುದೆಂದರೆ ಮನೋದೈಹಿಕ ವ್ಯಕ್ತಿತ್ವದ ಪರಿಧಿಯೊಳಗೇ ನಮ್ಮನ್ನು ಸೀಮಿತಗೊಳಿಸಿಕೊಳ್ಳುವುದು. ಇದನ್ನು ಮೀರಿದ ವ್ಯಕ್ತಿತ್ವ ನಮಗಿದೆ, ನಾವೆಲ್ಲರೂ ದಿವ್ಯಾತ್ಮರು ಮತ್ತು ಈ ದಿವ್ಯತೆಯ ನೆಲೆಯಲ್ಲಿಯೇ ನಮಗೆ ನಿಜವಾದ ಸುಖ.

ತಾನು ದೇಹ ಮನಸ್ಸುಗಳನ್ನು ಮೀರಿದ ಆತ್ಮ – ಎಂದು ನಿರಂತರ ಆತ್ಮಚಿಂತನೆಯಲ್ಲಿ ತೊಡಗಿರಬೇಕು ಎನ್ನುತ್ತಾರೆ ಸ್ವಾಮೀಜಿ ಈ ಆತ್ಮಚಿಂತನೆ ನಮ್ಮನ್ನು ಕೀಳರಿಮೆಯಿಂದ ಪಾರುಮಾಡುತ್ತದೆ, ಅದಮ್ಯ ಆತ್ಮವಿಶ್ವಾಸವನ್ನು ಮೂಡಿಸುತ್ತದೆ, ಹತಾಶೆಯ ಕೂಪದಿಂದ ನಮ್ಮನ್ನು ಮೇಲೆತ್ತುತ್ತದೆ. ಕಾತರತೆಯ ಕಾರ್ಮೋಡ ಮುಸುಕಿದಾಗ ನಾನು ದೇಹ ಮನಸ್ಸುಗಳನ್ನು ಮೀರಿದ ಆತ್ಮ ಎಂಬ ವಿಶ್ವಾಸವೇ ನಮಗೆ ಎಷ್ಟೋ ಮನಸ್ಸಮಾಧಾನವನ್ನು ನೀಡುತ್ತದೆ. ಇದು ಅಸ್ತಿತ್ವದ ಸಮಸ್ಯೆಗೆ ಸ್ವಾಮಿ ವಿವೇಕಾನಂದರು ನೀಡುವ ಉತ್ತರ, ಈ ದೃಷ್ಟಿಯಿಂದಲೇ ಅವರು ಆಂತರಿಕ ದಿವ್ಯತೆಗೆ ಹೆಚ್ಚು ಒತ್ತನ್ನು ನೀಡಿದರು.

ಚಿಂತೆ, ಭಯ, ಆಂತರಿಕ ಶೂನ್ಯತೆ, ಅರ್ಥಹೀನತೆ, ಹತಾಶ ಮನೋಭಾವ, ಒಂಟಿತನ, ಅನಾಥಪ್ರಜ್ಞೆ ಮುಂತಾದ ಮನೋದೌರ್ಬಲ್ಯಗಳಿಗೆ ವಿವೇಕಾನಂದರು ನೀಡುವ ಔಷಧಿ ಚಾರಿತ್ರ್ಯ ಶುದ್ದಿ. ಇದರಿಂದ ಇಚ್ಛಾಶಕ್ತಿ ದೃಢವಾಗುತ್ತದೆ. ಅವರು ಹೇಳುತ್ತಾರೆ: “ನಮ್ಮ ಸುತ್ತಲೂ ನಡೆಯುವ ಕಾರ್ಯಗಳು ಆಲೋಚನೆಗಳ ಪ್ರದರ್ಶನ ಮನುಷ್ಯನ ಇಚ್ಛಾಶಕ್ತಿಯ ಅಭಿವ್ಯಕ್ತಿ, ಯಂತ್ರಗಳು ಸಾಧನಗಳು, ಪಟ್ಟಣಗಳು, ಹಡಗುಗಳು, ಯುದ್ಧನೌಕೆಗಳು ಇವೆಲ್ಲವೂ ಮನುಷ್ಕನ ಕೇವಲ ಇಚ್ಛಾಶಕ್ತಿಯ ಅಭಿವ್ಯಕ್ತಿ, ಈ ಇಚ್ಚಾಶಕ್ತಿಗೆ ಮೂಲ ಶೀಲ. ಮತ್ತೆ ಈ ಶೀಲವು ಕರ್ಮದ ಮೂಲಕ ರೂಪಗೊಳ್ಳುತ್ತದೆ. ಕರ್ಮ ಹೇಗೋ ಅದಕ್ಕನುಸಾರವಾಗಿ ಇಚ್ಛಾಶಕ್ತಿಯ ಅಭಿವ್ಯಕ್ತಿ, ಪ್ರಪಂಚದಲ್ಲಿ ಹುಟ್ಟಿದ ಪ್ರಚಂಡ ಇಚ್ಚಾಶಕ್ತಿಯುಳ್ಳವರೆಲ್ಲರೂ ಅದ್ಭುತ ಕರ್ಮಿಗಳು. ಮಹಾತ್ಮರು ಪ್ರಪಂಚವನ್ನೇ ಉರುಳಿಸುವ ಇಚ್ಚಾಶಕ್ತಿಯುಳ್ಳವರು.” (ವ್ಯಕ್ತಿತ್ವ ನಿರ್ಮಾಣ, ಪು ೨೯) ಇಂಥಾ ಇಚ್ಚಾಶಕ್ತಿಯ ಮುಂದೆ ಯಾವುದೇ ಮಾನಸಿಕ ದೌರ್ಬಲ್ಯ ಕಾಣಿಸಿಕೊಳ್ಳಲು ಹೇಗೆ ಸಾಧ್ಯ?

ವಿವೇಕಾನಂದರ ಪ್ರಕಾರ ಇಂಥ ಚಾರಿತ್ರ್ಯಬಲವೂ ಆಂತರಿಕ ದಿವ್ಯತೆಯ ಅಭಿವ್ಯಕ್ತಿ, ಒಟ್ಟಿನಲ್ಲಿ ನೈತಿಕ ಮತ್ತು ಆಧ್ಯಾತ್ಮಿಕ ಸಾಧನೆಗಳ ಮೂಲಕ ನಮ್ಮ ಚಾರಿತ್ರ್ಯಬಲವನ್ನು ವೃದ್ಧಿಸಿಕೊಳ್ಳುವುದರ ಮೂಲಕ ಅಸ್ತಿತ್ವದ ಸಮಸ್ಯೆಗಳನ್ನು ಎದುರಿಸಬಹುದು. ಆದರೆ ಈ ಚಾರಿತ್ರ್ಯಶುದ್ಧಿ ಕೇವಲ ವ್ಯಕ್ತಿನಿಷ್ಠವಾಗಿರದೆ ಪರ ಹಿತಾಸಕ್ತಿಯಿಂದಲೂ ಕೂಡಿರಬೇಕು. ಕೇವಲ ತನ್ನ ಸುಖದುಃಖಗಳನ್ನು ಕುರಿತು ಮಾತ್ರವೇ ಚಿಂತಿಸುವವನು, ಅವನು ಎಷ್ಟೇ ಒಳ್ಳೆಯವನಾಗಿದ್ದರೂ, ಎಷ್ಟೇ ಧ್ಯಾನಜಪಾದಿಗಳನ್ನು ಮಾಡುತ್ತಿದ್ದರೂ, ತಾನೂ ದುಃಖಪಡುತ್ತಾ ಇತರರಿಗೂ ದುಃಖ ನೀಡುತ್ತಾ ಇರುತ್ತಾನೆ. ಆದರೆ ಇತರರ ಸುಖದುಃಖಗಳನ್ನು ಕುರಿತು ಚಿಂತಿಸುವವನು ತಾನೂ ಸುಖವಾಗಿದ್ದು ಇತರರಿಗೂ ಸುಖವನ್ನೀಯುತ್ತಾನೆ. ಆದ್ದರಿಂದಲೇ ಸ್ವಾಮಿ ವಿವೇಕಾನಂದರು ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ (ಸ್ವಂತ ಮುಕ್ತಿಗಾಗಿ ಸಾಧನೆ ಮಾಡುವಂತೆಯೇ ಜಗತ್ತಿನ ಹಿತಕ್ಕಾಗಿಯೂ ಶ್ರಮಿಸಬೇಕು) ಎಂಬ ಮಂತ್ರವನ್ನು ನಮ್ಮ ಎಲ್ಲ ಸಮಸ್ಯೆಗಳ ಪರಿಹಾರವಾಗಿ ನೀಡಿದರು.

ಅಸ್ತಿತ್ವವಾದಿಗಳು ಮಾನವನ ಅಂತಸ್ಸತ್ವಕ್ಕಿಂತ (essence) ಅವನ ಅಸ್ತಿತ್ವಕ್ಕೆ ಹೆಚ್ಚು ಪ್ರಾಧಾನ್ಯವನ್ನು ನೀಡುತ್ತಾರೆ, ಅವರ ಪ್ರಕಾರ ವ್ಯಕ್ತಿಯು ಮೊದಲು ‘ಇದ್ದಾನೆ’ ಎಂಬುದು ಮುಖ್ಯ, ಅನಂತರ ಅವನು ‘ಏನಾಗಿದ್ದಾನೆ’ ಎಂಬುದು. “ನಾನು ಒಬ್ಬ ಮಾನವನಾಗಿದ್ದೇನೆ” ಎಂದಾಗ, ಇಲ್ಲಿ ನಾನು ಇದ್ದೇನೆ ಎಂಬುದು ಆಸ್ತಿತ್ವವನ್ನೂ ‘ಮಾನವ’ ಎಂಬುದು ನಾನೇನಾಗಿದ್ದೇನೆ ಎಂಬುದು ಸೂಚಿಸುತ್ತದೆ. ನಾನೇನಾಗಿದ್ದೇನೆ ಎಂಬುದು ನನ್ನ ಸಾಧನೆಯನ್ನು ಅವಲಂಬಿಸಿರುತ್ತದೆ. ಮೊದಲು ಮಾನವನಿಗೆ ಕೇವಲ ಅಸ್ತಿತ್ವ ಮಾತ್ರ ಇರುತ್ತದೆ-ಸುಮ್ಮನೇ ಜೀವಿಸುತ್ತಾನೆ ಅಷ್ಟೇ. ತನ್ನನ್ನೂ ಪರಿಸರವನ್ನೂ ಎದುರಿಸಿ ಹೋರಾಡುವ ಮೂಲಕ ಅವನು ತನ್ನ ಅಂತಃಸತ್ವವನ್ನು ಪಡೆಯುತ್ತಾನೆ-ಅವನೇನಾಗಬೇಕೊ ಅದಾಗುತ್ತಾನೆ, ಪಾಶ್ಚಾತ್ಯ ತತ್ತ್ವಜ್ಞಾನಿ ಡೇಕಾರ್ಟ್, ‘ನಾನು ಚಿಂತಿಸುತ್ತೇನಾದ್ದರಿಂದ ನಾನಿದ್ದೇನೆ”( I think, therefore I am) ಎಂದು ಹೇಳಿದರೆ, ಅಸ್ತಿತ್ವವಾದಿ ಹೇಳುತ್ತಾನೆ “ನಾನು ಇದ್ದೇನೆ ಆದ್ದರಿಂದ ಚಿಂತಿಸುತ್ತೇನೆ” ಎಂದು.

ಸ್ವಾಮಿ ವಿವೇಕಾನಂದರ ಪ್ರಕಾರ ಒಬ್ಬನ ಅಂತಃಸತ್ವವೇ ಅವನು ಏನಾಗಬೇಕೆಂಬುದನ್ನು ನಿರ್ಧರಿಸುತ್ತದೆ. ಬೀಜದಲ್ಲಿ ಮೊದಲೆ ಮರವಾಗಿ ಬೆಳೆಯುವ ಅಂತಃ ಸತ್ವ ಇರುತ್ತದೆ. ನೀರು, ಗೊಬ್ಬರ, ಗಾಳಿ ಮುಂತಾದವುಗಳು ಆ ಅಂತಃಸತ್ವದ ಆಭಿವ್ಯಕ್ತಿಗೆ ಸಹಾಯ ಮಾಡುತ್ತವೆ. ಮರವಾಗಿ ಬೆಳೆಯುವ ಅಂತಃಸತ್ವ ಬೀಜದಲ್ಲಿ ಇರುವುದರಿಂದಲೇ ಅದನ್ನು ನಾವು ಬೀಜ ಎಂದು ಕರೆಯುವುದು. ಅಂದರೆ ಬೀಜದ ಅಸ್ತಿತ್ವ ಅದರ ಅಂತಃಸತ್ವವನ್ನು ಅವಲಂಬಿಸಿದೆ. ಆದ್ದರಿಂದ ಬೀಜದ ನೈಜ ಅಸ್ತಿತ್ವವನ್ನು ಅದರ ಅಂತಃಸತ್ವದಿಂದ ಬೇರ್ಪಡಿಸಲಾಗುವುದಿಲ್ಲ,

ಇದೇ ವಿಚಾರ ಮಾನವನಿಗೂ ಅನ್ವಯಿಸುತ್ತದೆ. ಮಾನವನಲ್ಲೂ ಒಂದು ಅಂತಃಸತ್ವವಿದೆ, ಅದೇ ಅವನ ನಿಜವಾದ ಅಸ್ತಿತ್ವ, ವಿವೇಕಾನಂದರು ಅದನ್ನು ಆಂತರಿಕ ದಿವ್ಯತೆ ಎಂದು ಕರೆಯುತ್ತಾರೆ. ಅವನು ತನ್ನ ಎಲ್ಲ ಸಾಧನೆ ಹೋರಾಟಗಳ ಮೂಲಕ ತನ್ನ ದಿವ್ಯ ಅಂತಸ್ಸತ್ವವನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಾನೆ. ಇದನ್ನೇ ಮಾನವವಿಕಾಸದ ಪ್ರಕ್ರಿಯೆ ಎನ್ನುವುದು. ಈ ಪ್ರಕ್ರಿಯೆಯ ಮೂಲಕ “ಪಶುಸಮಾನ ಮಾನವನು  ನೈಜ  ಮಾನವನಾಗಿಯೂ ಅನಂತರ ದೇವನಾಗಿಯೂ ವಿಕಾಸಹೊಂದುತ್ತಾನೆ.” “ಸುಪ್ತಾತ್ಮವು ಪ್ರಜ್ಞಾಪೂರ್ವಕವಾಗಿ ಕ್ರಿಯಾಶೀಲವಾದಾಗ ಶಕ್ತಿ ಬರುತ್ತದೆ, ವೈಭವ ಬರುತ್ತದೆ, ಒಳ್ಳೆಯತನ ಬರುತ್ತದೆ, ಪಾವಿತ್ರ್ಯ ಬರುತ್ತದೆ ಮತ್ತು ಉತ್ಕೃಷ್ಟವಾದುದೆಲ್ಲವೂ ಬರುತ್ತದೆ” (ವ್ಯಕ್ತಿತ್ವ ನಿರ್ಮಾಣ, ಪು. ೧೪)-ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಮಾನವನ ಕೇವಲ ಜೈವಿಕ ಅಸ್ತಿತ್ವಕ್ಕಿಂತ ಅವನ ಅಂತಸ್ಸತ್ವವೇ ಪ್ರಧಾನ. ಕೇವಲ ಅಸ್ತಿತ್ವದ ದೃಷ್ಟಿಯಿಂದ ಅವನು ಪ್ರಾಣಿಗಿಂತ ಏನೂ ಬೇರೆಯಲ್ಲ; ಅವನ ಅಂತಸ್ಸತ್ವದಿಂದಲೇ ಅವನು ನೈಜಮಾನವನಾಗುವುದು.

ನಾವೇ ಎಲ್ಲಕ್ಕೂ ಹೊಣೆಗಾರರಾದಾಗ ಮಾತ್ರ ನಮಗೆ ಅತಿ ಶ್ರೇಷ್ಠವಾದ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ.”

-ಸ್ವಾಮಿ ವಿವೇಕಾನಂದ

ಅಸ್ತಿತ್ವವಾದಿಗಳು ಮಾನವನ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಜವಾಬ್ದಾರಿಗಳಿಗೆ ಹೆಚ್ಚು ಒತ್ತು ನೀಡುತ್ತಾರೆ. ಅದೃಷ್ಟಕ್ಕೆ ಅವರು ಒತ್ತನ್ನು ನೀಡುವುದಿಲ್ಲ. ಆನುವಂಶಿಕತೆ, ಹಣೆಬರಹ, ಪ್ರಾರಬ್ಧ ಮುಂತಾದ ಭಾವನೆಗಳಿಗೆ ಅಸ್ತಿತ್ವವಾದದಲ್ಲಿ ಎಡೆಯಿಲ್ಲ, ಮಾನವನು ವಿಶ್ವದ ಒಂದು ಅಂಶ, ಸಮಾಜದ ಅಂಗ ಮುಂತಾದ ಚಿಂತನೆಗಳೂ ಅಲ್ಲಿ ಗೌಣ. ಮಾನವನು ಈ ವಿಶಾಲ ವಿಶ್ವದಲ್ಲಿ ಏಕಾಕಿ, ಅವನ ವ್ಯಕ್ತಿಪ್ರಜ್ಞೆಗೆ ಅಲ್ಲಿ ಪ್ರಾಮುಖ್ಯ ನೀಡಲಾಗಿದೆ. ವ್ಯಕ್ತಿಪ್ರಜ್ಞೆಯೇ ಪ್ರಧಾನವಾಗಿರುವುದರಿಂದ ವ್ಯಕ್ತಿಯು ತನ್ನ ಬಗ್ಗೆ ತಾನೇ ನಿರ್ಧರಿಸಬೇಕು, ತನಗೆ ಬೇಕಾದುದನ್ನೂ ತಾನೇ ಆರಿಸಿಕೊಳ್ಳಬೇಕು, ಮತ್ತು ತನಗೆ ತಾನೇ ಜವಾಬ್ದಾರನಾಗಿರಬೇಕು. ಈ ಏಕಾಕಿಯಾದ, ಸ್ವತಂತ್ರನಾದ ವ್ಯಕ್ತಿಯು ಸುತ್ತಲಿನ ಸನ್ನಿವೇಶದ ನಡುವೆ ತನ್ನ ಸ್ವಾತಂತ್ರ್ಯವನ್ನು ಪೂರ್ಣ ವ್ಯಕ್ತಪಡಿಸಲಾಗದೆ, ಪರಿಸ್ಥಿತಿಯ ಬಲಿಪಶುವಾಗಿ ದಾರುಣ ದುಃಖವನ್ನು ಅನುಭವಿಸುತ್ತಾನೆ.

ವಿವೇಕಾನಂದರ ಪ್ರಕಾರ ಮಾನವನು ಸ್ವರೂಪತಃ ಸ್ವತಂತ್ರ, ಆದರೆ ಪ್ರಕೃತಿಯ ಕಾರ್ಯ-ಕಾರಣಗಳ ಶೃಂಖಲೆಯಲ್ಲಿ ಬದ್ಧನಾಗಿದ್ದಾನೆ. ಆದ್ದರಿಂದ ಅವನಿಗೆ ನಿಜವಾದ ಸ್ವಾತಂತ್ರ್ಯ ಪ್ರಕೃತಿಯನ್ನು ಮೀರಿಹೋದಾಗಲೇ, ಈ ವ್ಯಾವಹಾರಿಕ ಜೀವನದಲ್ಲಿ ಮಾನವನ್ನು ಒಬ್ಬ ವ್ಯಕ್ತಿಯೂ ಹೌದು ಮತ್ತು ಇಡೀ ವಿಶ್ವದ ಹಾಗೂ ಸಮಾಜದ ಅಂಗವೂ ಹೌದು. ಅವನದೇ ಆದ ವ್ಯಕ್ತಿ ವೈಶಿಷ್ಟ್ಯಗಳಿಂದಾಗಿ, ಸಂಸ್ಕಾರಗಳಿಂದಾಗಿ ಪ್ರತಿಯೊಬ್ಬ ಮಾನವನೂ ತನ್ನತನವನ್ನು ಹೊಂದಿರುತ್ತಾನೆ. ಅಷ್ಟರಮಟ್ಟಿಗೆ ಅವನು ಸ್ವತಂತ್ರನೂ, ತನಗೆ ತಾನೇ ಜವಾಬ್ದಾರನೂ, ತಾನೇ ತನ್ನ ಭವಿಷ್ಯದ ನಿರ್ಮಾಪಕನೂ ಆಗಿರುತ್ತಾನೆ. ಆದರೆ, ದೇಹದ ಬೇರೆ ಬೇರೆ ಅಂಗಗಳಿಗೆ ತಮ್ಮದೇ ವಿಶಿಷ್ಟ ಗುಣ ಕಾರ್ಯಗಳು ಇದ್ದರೂ ಅವು ಇಡೀ ದೇಹದ ಅವಿಭಾಜ್ಯ ಅಂಗಗಳಾಗಿರುವಂತೆ ಮಾನವನೂ ಒಟ್ಟು ಸಮಾಜದ ಅವಿಭಾಜ್ಯ ಅಂಗ. ಆದ್ದರಿಂದ ಒಟ್ಟು ಸಮಾಜದ ಒಳಿತಿನಲ್ಲಿಯೇ ಅವನ ಒಳಿತಿರುವುದು. ಆದ್ದರಿಂದ ಮಾನವನು ವ್ಯಕ್ತಿಪ್ರಜ್ಞೆ ಮತ್ತು ಸಾಮಾಜಿಕ ಪ್ರಜ್ಞೆ ಎರಡನ್ನೂ ಹೊಂದಿರಬೇಕಾಗುತ್ತದೆ. ಆದ್ದರಿಂದಲೇ ಸ್ವಾಮಿ ವಿವೇಕಾನಂದರು ಆತ್ಮನೊ ಮೋಕ್ಷಾರ್ಥಂ ಜಗದ್ಧಿತಾಯ ಚ ಎಂಬ ಆದರ್ಶವನ್ನು ನಮ್ಮ ಮುಂದೆ ಇತ್ತಿರುವುದು.

ನಾವು ಸಮಾಜದಲ್ಲಿ ನಾಟಕದ ಪಾತ್ರಧಾರಿಗಳಂತೆ ಇರಬೇಕೆಂದು ವಿವೇಕಾನಂದರು ಹೇಳುತ್ತಾರೆ ಪಾತ್ರಧಾರಿಗೆ ತಾನು ಕೇವಲ ಪಾತ್ರಧಾರಿ ಎಂಬ ಅರಿವು ಇದ್ದು, ತಾನು ಆ ಪಾತ್ರಕ್ಕೆ ಬದ್ಧನಲ್ಲ, ಸ್ವತಂತ್ರ ಎಂಬ ಅರಿವೂ ಇರುತ್ತದೆ, ಅವರೇ ಹೇಳುವಂತೆ, ಬೀದಿಯ ಮೇಲಿರುವ ಭಿಕ್ಷುಕನಿಗೂ ನಾಟಕದಲ್ಲಿಯ ಭಿಕ್ಷುಕನ ಪಾತ್ರಧಾರಿಗೂ ತುಂಬ ವ್ಯತ್ಯಾಸವಿರುತ್ತದೆ. ಇಬ್ಬರೂ ಒಂದೇ ರೀತಿ ಕಾಣುತ್ತಾರೆ, ಒಂದೇ ಕಾರ್ಯ ಮಾಡುತ್ತಾರೆ, ಆದರೆ ಬೀದಿಯ ಭಿಕ್ಷುಕನು ತನ್ನ ದುಃಸ್ಥಿತಿಗಾಗಿ ಮರುಗುತ್ತಾನೆ, ನಾಟಕದ ಭಿಕ್ಷುಕನಾದರೊ ಆ ಪಾತ್ರದಲ್ಲಿ ಆನಂದವನ್ನು ಅನುಭವಿಸುತ್ತಾನೆ ಈ ವ್ಯತ್ಯಾಸಕ್ಕೆ ಕಾರಣ, ಒಬ್ಬನು ಬದ್ಧ ಮತ್ತೊಬ್ಬನು ಸ್ವತಂತ್ರ. “ಎಲ್ಲಿಯವರೆಗೆ ನಮಗೆ ಸಹಜಸ್ಥಿತಿಯ ಜ್ಞಾನವಿರುವುದಿಲ್ಲವೋ ಅಲ್ಲಿಯವರೆಗೂ ನಾವು ಭಿಕ್ಷುಕರು. ಪ್ರಕೃತಿಯ ಪ್ರತಿಯೊಂದು ಶಕ್ತಿಯು ನಮ್ಮನ್ನು ನಡುಗಿಸುತ್ತದೆ. ಪ್ರಕೃತಿಯಲ್ಲಿರುವ ಪ್ರತಿಯೊಂದೂ ನಮ್ಮನ್ನು ಗುಲಾಮರನ್ನಾಗಿ ಮಾಡುವುದು. ಸಹಾಯಕ್ಕಾಗಿ ಪ್ರಪಂಚದಲ್ಲೆಲ್ಲ ಮೊರೆ ಇಡುವೆವು. ಆದರೆ ಸಹಾಯ ನಮಗೆ ಎಂದಿಗೂ ಬರುವುದಿಲ್ಲ. ಕಾಲ್ಪನಿಕ ದೇವರನ್ನು ನಾವು ಬೇಡುವೆವು. ಆದರೂ ಸಹಾಯ ಬರುವುದಿಲ್ಲ. ಇಷ್ಟಾದರೂ ಸಹಾಯ ಬರುತ್ತದೆ ಎಂದು ನಾವು ನೆಚ್ಚುತ್ತೇವೆ. ಹೀಗೆ ಅಳುವುದು, ಗೋಳಿಡುವುದು ಇದರಲ್ಲಿ ಒಂದು ಜೀವನ ವ್ಯರ್ಥವಾಗುವುದು. ಇದೇ ಆಟ ಮತ್ತೆ ಮತ್ತೆ ನಡೆಯುತ್ತಿರುತ್ತದೆ” (ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ, ಸಂ. ೨, ಪು. ೨೭೧) – “ಸ್ವತಂತ್ರರಾಗಿ, ಯಾರಿಂದಲೂ ಏನನ್ನೂ ನಿರೀಕ್ಷಿಸಬೇಡಿ” ಎನ್ನುತ್ತಾರೆ ಸ್ವಾಮಿಜಿ ಇದೇ ಅಸ್ತಿತ್ವವಾದಿಗಳ ಕೂಗು ಕೂಡ. ಆದರೆ ಏನನ್ನೂ ನಿರೀಕ್ಷಿಸದಿರುವುದು, ಸ್ವತಂತ್ರರಾಗಿರುವುದು, ಆಸ್ತಿತ್ವವಾದಿಗಳ ಪ್ರಕಾರ ಒಂದು ಅನಿವಾರ್ಯ ದುಃಖದ ಸ್ಥಿತಿ. ಆದರೆ ಸ್ವಾಮೀಜಿ ಪ್ರಕಾರ ಇದು ಆನಂದದ ಸ್ಥಿತಿ, ವ್ಯಕ್ತಿಯ ನೈಜ ಸ್ವರೂಪವನ್ನು ಅವಲಂಬಿಸಿರುವ ಸ್ಥಿತಿ, ಬಂಧಮುಕ್ತ ಸ್ಥಿತಿ. ಆದ್ದರಿಂದ ಅಸ್ತಿತ್ವವಾದಿಗಳಿಗೆ ಸ್ವಾಮಿ ವಿವೇಕಾನಂದರು ನೀಡಬಹುದಾದ ಸಲಹೆ ಈ ಕೆಳಗಿನಂತಿದೆ:

“ಬಿಡಿ, ಪ್ರಪಂಚವನ್ನು ತ್ಯಾಗ ಮಾಡಿ, ಅಡುಗೆ ಮನೆಗೆ ನುಗ್ಗಿ ಒಂದು ಚೂರು ಮಾಂಸವನ್ನು ತಿನ್ನುತ್ತಿರುವ ನಾಯಿಯಂತೆ ನಾವು ಇರುವೆವು. ಪ್ರತಿಕ್ಷಣವೂ ಸುತ್ತಲೂ ಅಂಜಿಕೆಯಿಂದ ನೋಡುತ್ತಿರುವೆವು. ಯಾರಾದರೂ ಬಂದು ನಮ್ಮನ್ನು ಹೊರಗೆ ಹೊಡೆದು ಆಟ್ಟುವರೊ ಎಂದು ಹೆದರುವೆವು. ಅದರ ಬದಲು ರಾಜನಾಗಿ ಈ ಪ್ರಪಂಚ ನನಗೆ ಸೇರಿದ್ದು ಎಂದು ಭಾವಿಸಿ. ನೀವು ಇದನ್ನು ಬಿಡಿ. ಇದು ನಿಮ್ಮನ್ನು ಬಂಧಿಸದೆ ಇದ್ದರೆ ಮಾತ್ರ ಇದು ಸಾಧ್ಯ. ಹೊರಗೆ ಇದನ್ನು ಬಿಡಲು ಸಾಧ್ಯವಿಲ್ಲದೆ ಇದ್ದರೂ ಮನುಸ್ಸಿನಲ್ಲಾದರೂ ಇದನ್ನು ತ್ಯಜಿಸಿ. ನಿಮ್ಮ ಹೃದಯಾಂತರಾಳದಿಂದ ಇದನ್ನು ಹೊರಗೆ ಅಟ್ಟಿ, ವೈರಾಗ್ಯವನ್ನು ಅಭ್ಯಾಸ ಮಾಡಿ, ಇದೇ ನಿಜವಾದ ತ್ಯಾಗ… ಏನನ್ನೂ ಆಶಿಸಬೇಡಿ, ಏಕೆಂದರೆ ನೀವು ಆಶಿಸುವುದು ನಿಮಗೆ ದೊರಕುವುದು, ಇದರೊಡನೆ ಬಂಧನವು ಬರುವುದು.” (ವ್ಯಕ್ತಿತ್ವ ನಿರ್ಮಾಣ, ಪು. ೩೦-೩೧).

(ಮೂಲ: ವಿವೇಕಪ್ರಭ ಜನವರಿ 2004)