ಮಾನವಜನಾಂಗದ ಭವಿಷ್ಯವನ್ನು ರೂಪಿಸಲು ಇದುವರೆಗೆ ತಮ್ಮ ಪ್ರಭಾವವನ್ನು ಬೀರಿದ ಮತ್ತು ಈಗಲೂ ಬೀರುತ್ತಿರುವ ಶಕ್ತಿಗಳಲ್ಲಿ ಧರ್ಮದಷ್ಟು ಪ್ರಬಲವಾದುದು ಮತ್ತಾವುದೂ ಇಲ್ಲ. ಎಲ್ಲಾ ಸಾಮಾಜಿಕ ಸಂಸ್ಥೆಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಈ ವಿಶಿಷ್ಟ ಶಕ್ತಿಯ ಪ್ರಭಾವವು ಹಿನ್ನೆಲೆಯಾಗಿದೆ. ವಿಭಿನ್ನ ಮಾನವರನ್ನು ಒಂದುಗೂಡಿಸಿದ ಒಂದು ಮಹಾಪ್ರೇರಣೆಯು ಧರ್ಮಮೂಲದಿಂದ ಬಂದಿದೆ. ಒಂದು ವಂಶ, ವಾತಾವರಣ,ಅಥವಾ ಜನಾಂಗ ಬಾಂಧವ್ಯಕ್ಕಿಂತಲೂ ಅನೇಕ ಸಂದರ್ಭಗಳಲ್ಲಿ ಧಾರ್ಮಿಕ ಬಾಂಧವ್ಯವು ಪ್ರಬಲವಾದುದು ಎಂಬುದು ನಮಗೆಲ್ಲ ವೇದ್ಯವಾಗಿದೆ. ಒಡಹುಟ್ಟಿದವರಿಗಿಂತ, ಒಂದೇ ಕುಲದವರಿಗಿಂತ, ಒಂದು ದೇವರನ್ನು ಆರಾಧಿಸುವವರು, ಒಂದು ಧರ್ಮದ ಅನುಯಾಯಿಗಳಾಗಿರುವವರು ಹೆಚ್ಚು ಒಗ್ಗಟ್ಟಿನಿಂದ ಬಾಳಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ.

ಧರ್ಮ ಮಾನವ ಮನಸ್ಸನ್ನು ಪ್ರಚೋದಿಸುವ ಅತಿ ಶ್ರೇಷ್ಠ ಚಾಲಕಶಕ್ತಿ. ಆಧ್ಯಾತ್ಮಿಕ ಆದರ್ಶದಷ್ಟು ಮತ್ತಾವುದೂ ನಮಗೆ ಅಷ್ಟೊಂದು ಶಕ್ತಿಯನ್ನು ಧಾರೆಯೆರೆಯಲಾರದು. ಇತಿಹಾಸವು ಈ ಮೇಲಿನ ಹೇಳಿಕೆಯ ಸತ್ಯವನ್ನು ನಮಗೆ ಮನವರಿಕೆ ಮಾಡಿಕೊಡುತ್ತದೆ. ಆ ಶಕ್ತಿ ನಾಶವಾಗಿಲ್ಲ. ಮಾನವನು ಕೇವಲ ಪ್ರಯೋಜನದೃಷ್ಟಿಯ ಆಧಾರದ ಮೇಲೆಯೇ ನೀತಿವಂತನಾಗಿರಬಹುದು, ಒಳ್ಳೆಯವನಾಗಿರಬಹುದು ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ. ಕೇವಲ ಪ್ರಯೋಜನದೃಷ್ಟಿಯ ಆಸರೆಯ ಮೇಲೆ ನಿಂತ ಎಷ್ಟೋ ಪ್ರಖ್ಯಾತ ವ್ಯಕ್ತಿಗಳು ಸಭ್ಯರಾಗಿ, ನೀತಿವಂತರಾಗಿ, ಒಳ್ಳೆಯವರಾಗಿರುವರು. ಆದರೆ ವಿಶ್ವ ಚಾಲಕರು, ಜನರನ್ನು ಆಕರ್ಷಿಸುವ ಮಹಾಶಕ್ತಿ ಪ್ರವಾಹವನ್ನು ಪ್ರಪಂಚಕ್ಕೆ ತರುವವರು,ಅಸಂಖ್ಯಾತ ಮಂದಿಯ ಮೂಲಕ ಕೆಲಸ ಮಾಡಬಲ್ಲವರು, ಇತರರ ಆಧ್ಯಾತ್ಮಿಕ ಜ್ಞಾನಜ್ಯೋತಿಯನ್ನು ಹತ್ತಿಸಬಲ್ಲವರು,  ಇಂಥವರಿಗೆ ಯಾವಾಗಲೂ ಆಧ್ಯಾತ್ಮಿಕತೆಯ ಹಿನ್ನೆಲೆಯಾಗಿರುವುದನ್ನು ನಾವು ನೋಡುವೆವು. ಧರ್ಮದಿಂದ ಅವರಿಗೆ ಚಾಲಕಶಕ್ತಿ ದೊರಕಿತು. ಪ್ರತಿಯೊಬ್ಬ ಮನುಷ್ಯನ ಸ್ವಭಾವ ಮತ್ತು ಆಜನ್ಮಸಿದ್ಧ ಹಕ್ಕಾದ ಅನಂತಶಕ್ತಿಯನ್ನು ಪಡೆಯುವುದಕ್ಕೆ ಧರ್ಮವು ಮಹಾ ಕ್ರಿಯೋತ್ತೇಜಕ ಶಕ್ತಿ. ಶೀಲವನ್ನು ರೂಢಿಸುವುದಕ್ಕೆ, ಒಳ್ಳೆಯದಾಗಿರುವ ಮತ್ತು ಭವ್ಯವಾಗಿರುವ ಎಲ್ಲವನ್ನೂ ಪಡೆಯುವುದಕ್ಕೆ, ಇತರರಿಗೆ ಶಾಂತಿಯನ್ನು ನೀಡುವುದಕ್ಕೆ, ತಾನು ಶಾಂತಿಯನ್ನು ಪಡೆಯುವುದಕ್ಕೆ ಧರ್ಮವೇ ಶ್ರೇಷ್ಠ ಕ್ರಿಯೋತ್ತೇಜಕಶಕ್ತಿ.

ಧರ್ಮವೆಂದರೆ ಸಾಕ್ಷಾತ್ಕಾರ

ಹಿಂದುವಿನ ಧರ್ಮವೆಲ್ಲ ಸಾಕ್ಷಾತ್ಕಾರದಲ್ಲಿ ನೆಲಸಿದೆ. ದಿವ್ಯವಾದುದನ್ನು ಸಾಕ್ಷಾತ್ಕರಿಸಿಕೊಂಡು ಮಾನವ ದಿವ್ಯತೆಗೆ ಏರಬೇಕಾಗಿದೆ. ವಿಗ್ರಹ, ದೇವಸ್ಥಾನ, ಚರ್ಚು ಅಥವಾ ಧರ್ಮಗ್ರಂಥ ಇವು ಆಧ್ಯಾತ್ಮಿಕ ಶೈಶವಾವಸ್ಥೆಯ ಸಹಾಯಕ್ಕೆ ಮಾತ್ರ, ಆದರೆ ಅವನು ಇದನ್ನು ಮೀರಿ ಮುಂದುವರಿಯಬೇಕು. ಅವನು ಎಲ್ಲಿಯೂ ನಿಲ್ಲಕೂಡದು. ‘ಬಾಹ್ಯ ಪೂಜೆ ಮತ್ತು ವಿಗ್ರಹಾರಾಧನೆ ಬಹಳ ಕೆಳದರ್ಜೆಯದು. ಇನ್ನೂ ಮೇಲಕ್ಕೆ ಏರುವ ಪ್ರಯತ್ನದಲಿ ನಡೆಸುವ ಮಾನಸಿಕ ಪೂಜೆ ಇದಕ್ಕಿಂತ ಮೇಲಿನ ತರಗತಿಯದು. ಆದರೆ ದೇವರನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದು ಮಾತ್ರವೇ ಅತ್ಯುತ್ತಮಾವಸ್ಥೆ’ ಎನ್ನುತ್ತವೆ ಹಿಂದೂ ಶಾಸ್ತ್ರಗಳು.
ನಿಮ್ಮ ಮನಸ್ಸಿನಲ್ಲಿ ಯಾವಾಗಲೂ ಈ ಒಂದು ವಿಷಯವನ್ನು ನೆನಪಿನಲ್ಲಿಡಿ, ಧರ್ಮವು ಶಾಸ್ತ್ರಗಳಲ್ಲಿ ಇಲ್ಲ; ಅದು ಬೌದ್ಧಿಕವಾದ ಒಪ್ಪಿಗೆಯಲ್ಲೂ ಇಲ್ಲ, ತರ್ಕದಲ್ಲೂ ಇಲ್ಲ. ಯುಕ್ತಿ, ಸಿದ್ಧಾಂತ,ಶಾಸ್ತ್ರ, ಮತ, ಪುಸ್ತಕ ಮತ್ತು ಬಾಹ್ಯ ಆಚಾರ ವ್ಯವಹಾರಗಳೆಲ್ಲ ಧಾರ್ಮಿಕ ಜೀವನಕ್ಕೆ ಸಹಕಾರಿ. ಧರ್ಮವಿರುವುದು ಸಾಕ್ಷಾತ್ಕಾರದಲ್ಲಿ ಮಾತ್ರ “ದೇವನೊಬ್ಬನು ಇರುವನು” ಎಂದು ನಾವೆಲ್ಲ ಹೇಳುವೆವು. ನೀನು ದೇವರನ್ನು ನೋಡಿರುವೆಯ? ಅದೇ ಪ್ರಶ್ನೆ.
ಅಂತೂ ಕೊನೆಗೆ ಧರ್ಮ ಎಂದರೆ ಸಾಕ್ಷಾತ್ಕಾರ; ಮಾತಿಗೂ ಅನುಭವಕ್ಕೂ ಬಹಳ ಅಂತರವಿದೆ ಎಂಬುದನ್ನು ನಾವು ಅರಿಯಬೇಕು. ನಮ್ಮ ಹೃದಯಾಂತರಾಳದಲ್ಲಿ ನಾವು ಏನನ್ನು ಅನುಭವಿಸುವೆವೋ ಅದೇ ಸಾಕ್ಷಾತ್ಕಾರ, ಜನರಿಗೆ ಈ ವಿಷಯದಲ್ಲಿ ಇರುವಷ್ಟು ವ್ಯವಹಾರ ಜ್ಞಾನದ ಅಭಾವ ಮತ್ತೆಲ್ಲಿಯೂ ಇಲ್ಲ ಎನ್ನಬಹುದು. ಕರೆಯುವ ಹಸುವಿನಂತೆ ಇರುವ ಧರ್ಮ ನಮ್ಮನ್ನು ಬೇಕಾದಷ್ಟು ಸಲ ಒದ್ದಿರಬಹುದು. ಆದರೂ ಚಿಂತೆಯಿಲ್ಲ, ಅದು ಬೇಕಾದಷ್ಟು ಹಾಲನ್ನು ಕೊಡುತ್ತಿದೆ. ಯಾವ ಹಸು ಹೆಚ್ಚು ಹಾಲನ್ನು ಕೊಡಬಲ್ಲುದೊ ಅದರ ಒದೆತವನ್ನು ಹಾಲಿನವನು ಗಮನಿಸುವುದ್ದಿಲ್ಲ. ಧರ್ಮವೇ ಶ್ರೇಷ್ಠತಮ ಮಗು. ಅದೇ ಸಾಕ್ಷಾತ್ಕಾರನೆಂಬ ಪೂರ್ಣ ಚಂದ್ರ ಅದಕ್ಕೆ ಆಹಾರವನ್ನು ಕೊಟ್ಟು ಬೆಳೆಸೋಣ. ಅದು ದೊಡ್ಡದಾಗುವುದು. ಕಾಮವೆಂಬ ರಾಜನು ಜ್ಞಾನವೆಂಬ ರಾಜನೊಡನೆ ಒಮ್ಮೆ ಯುದ್ಧ ಮಾಡಿದವನು. ಅದರಲ್ಲಿ ಜ್ಞಾನವು ಇನ್ನೇನು ಸೋಲುವುದರಲ್ಲಿದ್ದಾಗ ಅವನು ಉಪನಿಷತ್ತೆಂಬ ರಾಣಿಯೊಡನೆ ಮದುವೆಯಾದನು. ಅವರಿಗೆ ಸಾಕ್ಷಾತ್ಕಾರವೆಂಬ ಒಂದು ಮಗು ಆಯಿತು. ಆ ಮಗುವೇ ಅವನಿಗೆ ಜಯವನ್ನು ಕೊಡಿಸಿತು.
ಮುಂಚೆ ನಾವು ಅನುಭವಿಸುವೆವು, ಅನಂತರ ಅದರ ವಿಷಯವಾಗಿ  ಆಲೋಚನೆ ಮಾಡುವೆವು. ಮುಂಚೆ ಈ ಅನುಭವ ಸತ್ಯವಾಗಿರಬೇಕು . ಧರ್ಮ ಸಾಕ್ಷಾತ್ಕಾರ ಎಂಬುದು ಇದೇ. ಒಬ್ಬನು ಯಾವುದೇ ಪಂಥದ ವಿಷಯವನ್ನಾಗಲಿ, ಪ್ರವಾದಿ ಅಥವಾ ಧರ್ಮಗ್ರಂಥದ ವಿಷಯವನ್ನಾಗಲಿ ಕೇಳದೆಯೇ ಇರಬಹುದು. ಆದರೆ ಅವನಿಗೆ ಈ ಅನುಭವ ಬಂದರೆ ಸಾಕು, ಇನ್ನೇನೂ ಬೇಕಾಗಿಲ್ಲ. ಮನಸ್ಸನ್ನು ಶುದ್ಧ ಮಾಡಿ, ಚುಕ್ಕೆಗಳನ್ನೆಲ್ಲ ನಾವೇ ತೊಳೆದು ಹಾಕದಿದ್ದರೆ ಸತ್ಯವನ್ನು, ಅದು ಹೇಗಿದೆಯೋ ಹಾಗೆ, ನಾವು ಕಾಣಲಾರೆವು. ಮಗು ಯಾವ ಪಾಪವನ್ನೂ ನೋಡುವುದಿಲ್ಲ. ಏಕೆಂದರೆ ಅದರಲ್ಲಿ ಪಾಪವೆಂಬುದೇ ಇಲ್ಲ.
ಯಾರು ದಯಾ ದಾಕ್ಷಿಣ್ಯವಿಲ್ಲದೆ ಅನಾಥರು, ವಿಧವೆಯರನ್ನು ಮೋಸಗೊಳಿಸಿ, ಹಣಕ್ಕೋಸ್ಕರ ಮಾಡಬಾರದುದನ್ನೆಲ್ಲ ಮಾಡುವರೊ ಅವರು ಬರೀ ಹುಲ್ಲನ್ನೇ ತಿಂದು ಜೀವಿಸಿದರೂ ಅತಿಹೀನ ನರಾಧಮನಿಗಿಂತಲೂ ಮೇಲಲ್ಲ. ಮತ್ತೊಬ್ಬರನ್ನು ನೋಯಿಸುವಂತ ಆಲೋಚನೆಯನ್ನು ಕೂಡ ಯಾರು ಮಾಡುವುದಿಲ್ಲವೋ, ಯಾರು ತನ್ನ ಪರಮಶತ್ರು ಅಭಿವೃದ್ಧಿಯಾಗುತ್ತಿದ್ದರೂ ಅದನ್ನು ಸಂತೋಷದಿಂದ ನೋಡುವನೊ ಅವನೇ ಭಕ್ತ. ಅವನು ಪ್ರತಿದಿನ ಹಂದಿ ಮಾಂಸವನ್ನು  ತಿಂದರೂ ಅವನೇ ಯೋಗಿ, ಗುರುಗಳ ಗುರು. ಆದಕಾರಣ ಅಂತರಂಗ ಶುದ್ಧಿಯನ್ನು ಪಡೆಯುವುದಕ್ಕೆ ಬಹಿರಂಗ ಶುದ್ಧಿಯು ಸಹಾಯಕವಾಗುವಂತಿದ್ದಾರೆ ಮಾತ್ರ ಅದಕ್ಕೆ ಬೆಲೆ ಎಂಬುದನ್ನು  ನಾವು ನೆನಪಿನಲ್ಲಿಡಬೇಕು. ಬಹಿರಂಗ ಶುದ್ಧಿಯನ್ನು ವಿವರವಾಗಿ  ಗಮನಿಸುವುದಕ್ಕೆ ಆಗದೆ ಇರುವಾಗ ಕೇವಲ ಅಂತರಂಗ ಪರಿಶುದ್ಧಿಯನ್ನು ಪಡೆಯುವುದು ಮೇಲು. ನಿಜವಾದ ಧರ್ಮದ ತಿರುಳನ್ನು ಮರೆತು ಅರ್ಥವಿಲ್ಲದೆ ಬಾಹ್ಯ ಆಚಾರಗಳನ್ನೆಲ್ಲ ಕಪಿಮುಷ್ಟಿಯಲ್ಲಿ ಹಿಡಿದು ಅದನ್ನು ಬಿಡದ ವ್ಯಕ್ತಿಗೆ ಧಿಕ್ಕಾರ. ಆಂತರ್ಯದಲ್ಲಿರುವ ಚೇತನವನ್ನು ವ್ಯಕ್ತಗೊಳಿಸದೆ ಇದ್ದರೆ ನಿರ್ದಾಕ್ಷಿಣ್ಯವಾಗಿ ಅದನ್ನು ಕಿತ್ತೊಗೆಯಿರಿ.
ಆತ್ಮಸಾಕ್ಷಾತ್ಕಾರವೆಂಬ ಮಹಾ ಆದರ್ಶವನ್ನು ನಾವು ತಿಳಿಯಬೇಕು. ಅದನ್ನು ಎಂದಿಗೂ ತ್ಯಜಿಸಕೂಡದು. ಧರ್ಮದ ವಿಷಯವಾಗಿ ಇರುವ ಗೊಂದಲ, ಹೋರಾಟ, ಭಿನ್ನಾಭಿಪ್ರಾಯಗಳು, ಧರ್ಮವು ಶಾಸ್ತ್ರದಲ್ಲಿಲ್ಲ, ದೇವಸ್ಥಾನದಲ್ಲಿಲ್ಲ ಎಂದು ತಿಳಿದಾಗ ಮಾತ್ರ ನಿಲ್ಲುವುವು. ಯಾರು ನಿಜವಾಗಿ ದೇವರನ್ನು  ಮತ್ತು  ಆತ್ಮನನ್ನು ನೋಡಿರುವರೋ ಅವರೇ ಧಾರ್ಮಿಕರು. ಹಲವು ಗ್ರಂಥರಾಶಿಗಳನ್ನು ಉದ್ಧರಿಸಬಲ್ಲ ಪ್ರಚಂಡ ಧಾರ್ಮಿಕ ವಿದ್ವಾಂಸನಿಗೂ ಅತಿ ಕೆಳಗಿರುವ ದಡ್ಡ ಜಡವಾದಿಗೂ ನಿಜವಾಗಿ ಏನು ವ್ಯತ್ಯಾಸವಿಲ್ಲ. ನಾವೆಲ್ಲರೂ ನಾಸ್ತಿಕರು. ಇದನ್ನು ಒಪ್ಪಿಕೊಳ್ಳೋಣ. ಕೇವಲ ಯುಕ್ತಿಯನ್ನು ಅವಲಂಬಿಸಿ ಒಪ್ಪಿಕೊಳ್ಳುವುದರಿಂದ ನಾವು ಧಾರ್ಮಿಕರಾಗಲಾರೆವು. ಪ್ರಪಂಚದಲ್ಲಿ ಕ್ರೈಸ್ತ, ಮಹಮ್ಮದೀಯ ಅಥವಾ ಇನ್ನು ಯಾವುದಾದರೂ ಮತದ ಅನುಯಾಯಿಗಳನ್ನು ತೆಗೆದುಕೊಳ್ಳಿ. ಕ್ರಿಸ್ತನ ‘ಗುಡ್ಡದ ಮೇಲಿನ ಉಪದೇಶ’ವನ್ನು ಯಾವನು ನಿಜವಾಗಿ ಸಾಕ್ಷಾತ್ಕಾರ ಮಾಡಿ ಕೊಂಡಿರುವನೊ, ಅವನು ಪೂರ್ಣನಾಗುವನು, ತಕ್ಷಣವೇ ದೇವನಾಗುವನು. ಆದರೂ ಪ್ರಪಂಚದಲ್ಲಿ ಕೋಟ್ಯಂತರ ಕ್ರೈಸ್ತರು ಇರುವರು ಎನ್ನುವರು. ಅಂದರೆ ಮಾನವರು ಯಾವುದಾದರೊಂದು ಕಾಲದಲ್ಲಿ ಆ ಉಪದೇಶವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವರು ಎಂದು ಅರ್ಥ. ಎರಡುಕೋಟಿಗೆ ಒಬ್ಬ ಕೂಡ ನಿಜವಾದ ಕ್ರೈಸ್ತನಿಲ್ಲ.
ಇದರಂತೆಯೆ ಭಾರತದಲ್ಲಿ ಕೂಡ ಮೂವತ್ತು ಕೋಟಿ ವೇದಾಂತಿಗಳಿರುವರು ಎನ್ನುವರು. ಆದರೆ ಅವರಲ್ಲಿ ಸಾವಿರಕ್ಕೆ ಒಬ್ಬನಾದರೂ ಧರ್ಮವನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದಾರೆ ಈ ಪ್ರಪಂಚ ಎಷ್ಟೋ ಮೇಲಾಗುತ್ತಿತ್ತು. ನಾವೆಲ್ಲ ನಾಸ್ತಿಕರೇ, ಆದರೂ ಯಾರು ತಾವು ನಾಸ್ತಿಕರೆಂದು ಒಪ್ಪಿಕೊಳ್ಳುವರೋ ಅವರೊಂದಿಗೆ ನಾವೆಲ್ಲ ಹೋರಾಡುವೆವು. ನಾವೆಲ್ಲ ಅಜ್ಞಾನದಲ್ಲಿರುವೆವು. ಧರ್ಮವು ನಮಗೆ ಕೇವಲ ಯುಕ್ತಿಯ ಒಪ್ಪಿಗೆ, ಮಾತು, ಮತ್ತೇನೂ ಅಲ್ಲ. ಯಾರು ಚೆನ್ನಾಗಿ ಮಾತನಾಡಬಲ್ಲರೋ ಅವರನ್ನು ಧಾರ್ಮಿಕರೆಂದು ನಾವು ಅನೇಕ ವೇಳೆ ಭಾವಿಸುವೆವು. ಆದರೆ ಧರ್ಮ ಇದಲ್ಲ. “ವಾಗ್ವೈಖರೀ ಶಬ್ದಝರೀ ಶಾಸ್ತ್ರಾವ್ಯಾಖ್ಯಾನ ಕೌಶಲಂ….ಭುಕ್ತಯೇ ನ ತು ಮುಕ್ತಯೇ”. ಶಬ್ದಗಳನ್ನು ಅದ್ಭುತವಾಗಿ ಜೋಡಿಸುವ ಶಕ್ತಿ, ವಾಕ್ಝರೀ, ಶಾಸ್ತ್ರವ್ಯಾಖ್ಯಾನ ಕೌಶಲ, ಇವು ಪಂಡಿತ ರಂಜನೆಯೇ ಹೊರೆತು ಧರ್ಮವಲ್ಲ. ನಮ್ಮ ಹೃದಯಾಂತರಾಳದಲ್ಲಿ ಸಾಕ್ಷಾತ್ಕಾರದ  ಅರುಣೋದಯವಾದಾಗ ಧರ್ಮವು ಪ್ರಾರಂಭವಾಗುವುದು. ಅದೇ ಧರ್ಮೋದಯ; ಆಗ ಮಾತ್ರ ನಾವು ನೀತಿವಂತರಾಗಬಲ್ಲೆವು. ನಾವೀಗ ಮೃಗಗಳಿಗಿಂತ ಹೆಚ್ಚು ನೀತಿವಂತರಲ್ಲ. ನಾವೀಗ ಸಮಾಜದ ಚಾವಟಿಯ ಏಟಿಗೆ ಮಾತ್ರ ಅಂಜುತ್ತಿರುವೆವು. ಸಮಾಜವು ಇಂದು “ನೀನು ಕದ್ದರೆ ಶಿಕ್ಷಿಸುವುದಿಲ್ಲ” ಎಂದರೆ ಮತ್ತೊಬ್ಬರ ಆಸ್ತಿಯನ್ನು ದೋಚಲು ಧಾವಿಸುವೆವು. ನಮ್ಮನ್ನು ನೀತಿವಂತರನ್ನಾಗಿ ಮಾಡಿರುವವನು ಪೋಲೀಸಿನವನು. ಸಮಾಜದ ಅಭಿಪ್ರಾಯ ನಮ್ಮ ನೀತಿಗೆ ಕಾರಣ. ಪ್ರಾಣಿಗಳಿಗಿಂತ ನಾವೇನು  ಬಹಳ ಮೇಲಲ್ಲ. ನಮ್ಮ ಹೃದಯಾಂತರಾಳದಲ್ಲೇ ಇದು ಎಷ್ಟು ಸತ್ಯವೆನ್ನುವುದು ನಮಗೆ ಗೊತ್ತಾಗುವುದು. ನಾವು ಕಪಟಿಗಳಾಗದಿರೋಣ. ನಾವು ಧಾರ್ಮಿಕರಲ್ಲವೆಂದು ಒಪ್ಪಿಕೊಳ್ಳೋಣ. ಇತರರನ್ನು ಕೀಳಾಗಿ ಕಾಣಲು ನಮಗೆ ಅಧಿಕಾರವಿಲ್ಲ. ನಾವೆಲ್ಲಾ ಸಹೋದರರು. ನಾವು ಧರ್ಮವನ್ನು ಸಾಕ್ಷಾತ್ಕಾರ ಮಾಡಿಕೊಂಡಾಗ ಮಾತ್ರ ನಿಜವಾದ ನೀತಿವಂತರಾಗುವೆವು.
ಬರಿಯ ಮಾತಿಗೂ ಸಾಕ್ಷಾತ್ಕಾರಕ್ಕೂ ಧ್ರುವದಷ್ಟು ಅಂತರವಿದೆ. ಎಂತಹ ಮೂರ್ಖ ಬೇಕಾದರೂ ಮಾತನಾಡಬಹುದು. ಅರೆಗಿಳಿಗಳು ಮಾತನಾಡುತ್ತವೆ. ಮಾತು ಬೇರೆ, ಸಾಕ್ಷಾತ್ಕಾರ ಬೇರೆ. ತತ್ತ್ವ, ಸಿದ್ಧಾಂತ, ವಾದ,ಗ್ರಂಥ, ಚರ್ಚು, ಪಂಗಡ ಇವುಗಳೆಲ್ಲ ಒಂದು ದೃಷ್ಟಿಯಿಂದ ಒಳ್ಳೆಯವೆ. ಆದರೆ ಸಾಕ್ಷಾತ್ಕಾರವಾದಾಗ ಇವುಗಳೆಲ್ಲ ಬಿದ್ದು ಹೋಗುವುವು. ಉದಾಹರಣೆಗೆ ಭೂಪಟವೇನೋ ಒಳ್ಳೆಯದೇ ಆದರೆ ನೀವೇ ದೇಶವನ್ನು ಪ್ರತ್ಯಕ್ಷ ನೋಡಿ ಅನಂತರ ಭೂಪಟವನ್ನು ನೋಡಿದರೆ ಎಷ್ಟು ವ್ಯತ್ಯಾಸ ಕಾಣುವುದು! ಯಾರು ಸತ್ಯ ಸಾಕ್ಷಾತ್ಕಾರವನ್ನು ಪಡೆದಿರುವರೋ ಅವರಿಗೆ ಅದನ್ನು ತಿಳಿದುಕೊಳ್ಳಲು ತರ್ಕದ ಅಥವಾ ಬುದ್ಧಿಯ ಯಾವ ಕಸರತ್ತೂ ಬೇಕಿಲ್ಲ. ಅದು ಅವರ ಜೀವನದ ಜೀವ, ಜೀವಂತ ಸತ್ಯ, ಅದು ಅವರಿಗೆ ಹಸ್ತಾಮಲಕದಂತೆ. ಯಾರು ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡಿರುವರೋ ಅವರು ಎದ್ದುನಿಂತು “ಆತ್ಮ ಇಲ್ಲಿದೆ” ಎನ್ನುವರು. ನೀವು ವರುಷಗಟ್ಟಲೆ ಅವರೊಂದಿಗೆ ವಾದ ಮಾಡಬಹುದು. ಆದರೆ ಅವರು ನಿಮ್ಮನ್ನು ನೋಡಿ ನಗುವರು, ಇದನ್ನು ಬಾಲಭಾಷೆಯಂತೆ ಪರಿಗಣಿಸುವರು, ಮಗು  ಹರಟಲಿ ಎಂದು ಸುಮ್ಮನೆ ಇರುವರು.ಅವರು ಸತ್ಯವನ್ನರಿತು ಪೂರ್ಣರಾಗುವರು. ನೀವು ಒಂದು ದೇಶವನ್ನು ನೋಡಿರುವಿರಿ ಎಂದು ಭಾವಿಸೋಣ. ಮತ್ತೊಬ್ಬ ಬಂದು ಆ ದೇಶವನ್ನು ನೀವು ನೋಡಿಲ್ಲ ಎಂದು ನಿಮ್ಮ ಹತ್ತಿರ ವಾದಮಾಡುತ್ತ ಹೋಗಬಹುದು. ಆದರೆ ನೀವು ಅವನನ್ನು ನೋಡುವ ಏಕಮಾತ್ರ ದೃಷ್ಟಿಯೆ, ಅವನು ಹುಚ್ಚರ ಆಸ್ಪತ್ರೆಗೆ ಸೇರಲು ಯೋಗ್ಯ ಎಂಬುದು. ಆದಕಾರಣ ಸಿದ್ಧ “ತಮ್ಮ ತಮ್ಮ ಮತವನ್ನು ಕುರಿತು ಜನರು ಆಡುವ ಮಾತೆಲ್ಲ ಶುದ್ಧ ಹರಟೆ. ಸಾಕ್ಷಾತ್ಕಾರವೇ ಗುರಿ. ಅದೇ ಧರ್ಮದ ತಿರುಳು” ಎನ್ನುವನು. ಧರ್ಮವನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬಹುದು. ನೀವು ಸಿದ್ಧರಾಗಿರುವಿರಾ? ಅದು ನಿಮಗೆ ಬೇಕೆ? ನಿಮಗೆ ಅದು ಬೇಕಾಗಿದ್ದಾರೆ ಅದು ದೊರಕುವುದು. ಆಗ ನೀವು ನಿಜವಾಗಿಯೂ ಧಾರ್ಮಿಕರಾಗುವಿರಿ. ಸಾಕ್ಷಾತ್ಕಾರ ಪಡೆಯುವವರೆಗೂ ನಿಮಗೂ ನಾಸ್ತಿಕರಿಗೂ ಏನು ಭೇದವಿಲ್ಲ. ನಾಸ್ತಿಕನು ನಿಷ್ಕಪಟಿ. ಆದರೆ, ಯಾರು ತಾವು ಧರ್ಮದಲ್ಲಿ ನಂಬುವೆವು ಎನ್ನುವರೊ ಮತ್ತು ಸಾಕ್ಷಾತ್ಕಾರಕ್ಕೆ ಸ್ವಲ್ಪವೂ ಪ್ರಯತ್ನಪಡುವುದಿಲ್ಲವೊ ಅವರು ಪ್ರಾಮಾಣಿಕರಲ್ಲ.
ಮೊದಲು ನಾವು ಧಾರ್ಮಿಕ ಸತ್ಯದ ಬಗ್ಗೆ ಕೇಳಬೇಕು, ಅನಂತರ ಮನನ  ಮಾಡಬೇಕು. ನಾವು ಅವನ್ನು ಕುರಿತು ಪರ್ಯಾಲೋಚಿಸಬೇಕು, ಅವನ್ನು ಚೆನ್ನಾಗಿ ಗ್ರಹಿಸಬೇಕು, ಅವುಗಳ ಮೇಲೆ ಧ್ಯಾನಮಾಡಬೇಕು. ಅವು ನಮ್ಮ ಬಾಳಿನ ಉಸಿರಾಗುವಂತೆ ಅವನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಧರ್ಮವು ಆಗ ಕೇವಲ ಭಾವನೆಯ ಅಥವಾ ಸಿದ್ಧಾಂತದ ಹೊರೆಯಾಗಿ ಉಳಿಯುವುದಿಲ್ಲ; ಕೇವಲ ಯುಕ್ತಿಸಮ್ಮತವಾಗಿಯೂ ಇರುವುದಿಲ್ಲ. ಇದು ನಮ್ಮ ಬಾಳನ್ನು ಪ್ರವೇಶಿಸುವುದು. ನಾವು ಕೇವಲ ಯುಕ್ತಿಯ ಒಪ್ಪಿಗೆಯ ಆಧಾರದ ಮೇಲೆ ಇಂದು ಹಲವು ಕೆಲಸಕ್ಕೆ ಬಾರದ ವಿಷಯಗಳನ್ನು ಒಪ್ಪಿಕೊಳ್ಳಬಹುದು; ನಾಳೆ ಸಂಪೂರ್ಣವಾಗಿ ಇವುಗಳನ್ನೆಲ್ಲ ಬದಲಾಯಿಸಬಹುದು. ಆದರೆ ನಿಜವಾದ ಧರ್ಮ ಎಂದಿಗೂ ಬದಲಾಗುವುದಿಲ್ಲ. ಅದು ಬರಿಯ ಮಾತಲ್ಲ, ನಂಬಿಕೆಯಲ್ಲ, ಸಿದ್ಧಾಂತವಲ್ಲ. ಬೋಧಿಸಿದಂತೆ ಇರುವುದು, ಅದರಂತೆ ಆಗುವುದು  ಇದೇ ಧರ್ಮ; ಕೇವಲ ಶ್ರವಣವಲ್ಲ, ಸಮ್ಮತಿಯಲ್ಲ; ಜೀವ ತಾನು ಯಾವುದನ್ನು ನಂಬುವುದೊ ಅದರಂತೆ ಪರಿವರ್ತನಗೊಳ್ಳುವುದು, ಅದೇ ಧರ್ಮ.
ಸಾಕ್ಷಾತ್ಕಾರವೇ ನಿಜವಾದ ಧರ್ಮ, ಉಳಿದುವೆಲ್ಲ ಇದಕ್ಕೆ ಸಿದ್ಧತೆಗಳು. ಉಪನ್ಯಾಸ ಕೇಳುವುದು, ಪುಸ್ತಕ ಓದುವುದು, ಅಥವಾ ವಿಚಾರ ಮಾಡುವುದು, ಇವುಗಳೆಲ್ಲ ಕೇವಲ ಸಿದ್ಧತೆ ಮಾತ್ರ ಇವೇ ಧರ್ಮವಲ್ಲ. ಬೌದ್ಧಿಕ ಆರೋಹಣ ಅವರೋಹಣಗಳು ಧರ್ಮವಲ್ಲ. ಹೇಗೆ ನಾವು ಇಂದ್ರಿಯಕ್ಕೆ ಸಂಬಂಧಪಟ್ಟ ವಸ್ತುವಿನ ಪ್ರತ್ಯಕ್ಷ ಅನುಭವವನ್ನು ಪಡೆಯಬಹುದೋ, ಅದರಂತೆಯೇ ಅದಕ್ಕಿಂತ ಹೆಚ್ಚಾಗಿ ನಾವು ಆಧ್ಯಾತ್ಮಿಕ ಸತ್ಯವನ್ನು ಗ್ರಹಿಸಬಹುದೆಂಬುದೇ ಯೋಗಿಗಳ ಮುಖ್ಯ ಅಭಿಪ್ರಾಯ. ಜೀವಾತ್ಮ ಪರಮಾತ್ಮರೆಂಬ ಧಾರ್ಮಿಕ ಸತ್ಯವನ್ನು ಬಾಹ್ಯೇಂದ್ರಿಯಗಳಿಂದ ನಾವು ಗ್ರಹಿಸಲಾರೆವು. ನನ್ನ ಕಣ್ಣಿನಿಂದ ದೇವರನ್ನು ನಾನು ನೋಡಲಾರೆ. ಅಥವಾ ಕೈಗಳಿಂದ ಅವನನ್ನು ಮುಟ್ಟಲು ಸಾಧ್ಯವಿಲ್ಲ. ಅತೀಂದ್ರಿಯ ವಸ್ತುವನ್ನು ನಾವು ಆಲೋಚಿಸುವುದು ಸಾಧ್ಯವಿಲ್ಲವೆಂಬುದು ನಮಗೆ ಗೊತ್ತಿದೆ. ಯಾವ ನಿರ್ಧಾರಕ್ಕೂ ಬರದ ಒಂದೆಡೆಯಲ್ಲಿ ಯುಕ್ತಿ ನಮ್ಮನ್ನು ತ್ಯಜಿಸುವುದು. ಸಾವಿರಾರು ವರ್ಷಗಳಿಂದ ಪ್ರಪಂಚದಲ್ಲಿ ನಡೆಯುತ್ತಿರುವಂತೆ ನಾವು ಕೂಡ ಬದುಕಿರುವವರೆಗೂ ವಿಚಾರದಲ್ಲಿ ಕಳೆಯಬಹುದು. ಇದರಿಂದ ಧಾರ್ಮಿಕ ಸತ್ಯವನ್ನು ಸಮರ್ಥಿಸುವುದಕ್ಕೆ ಅಥವಾ ವಿರೋಧಿಸುವುದಕ್ಕೆ ನಾವು ಅಸಮರ್ಥರಾಗುತ್ತೇವೆ. ಇದೇ ಅದರ ಪರಿಣಾಮ.  ನಾವು ಪ್ರತ್ಯಕ್ಷವಾಗಿ ನೋಡಿದುದನ್ನು ತಳಹದಿಯಾಗಿ ಮಾಡಿಕೊಂಡು ಅದರ ಆಧಾರದ ಮೇಲೆ ನಾವು ವಿಚಾರ ಮಾಡುತ್ತೇವೆ. ಇದರಿಂದ ಇಂದ್ರಿಯ ಗ್ರಹಣದ ಮೇರೆಯಲ್ಲಿ ಮಾತ್ರ ಯುಕ್ತಿ ಕೆಲಸ ಮಾಡಬಲ್ಲದು ಎಂಬುದು ನಿಜವಾಯಿತು. ಇದನ್ನು ಮೀರಿ ಹೋಗಲಾರದು. ಆದಕಾರಣ ಆತ್ಮ ಸಾಕ್ಷಾತ್ಕಾರಕ್ಕೆ ಪ್ರವೇಶ ಇಂದ್ರಿಯ ಗ್ರಹಣಾತೀತವಾಗಿದೆ. ಮಾನವನು ಇಂದ್ರಿಯ ಅನುಭವಕ್ಕೆ ಅತೀತನಾಗಿ ಯುಕ್ತಿಯನ್ನೂ ಕೂಡ ಮೀರಿ ಹೋಗಬಲ್ಲನು  ಎಂದು ಯೋಗಿಗಳು ಸಾರುತ್ತಾರೆ. ಮಾನವನಿಗೆ ತನ್ನ ಯುಕ್ತಿಯನ್ನು ಮೀರಿ ಹೋಗಬಲ್ಲ ಶಕ್ತಿ ಇದೆ. ಈ ಶಕ್ತಿ ಪ್ರತಿಯೊಬ್ಬ ಮಾನವನಲ್ಲಿಯೂ ಇದೆ. ಪ್ರತಿಯೊಂದು ಪ್ರಾಣಿಯಲ್ಲಿಯೂ ಇದೆ. ಯೋಗಾಭ್ಯಾಸದಿಂದ ಈ ಶಕ್ತಿ ಜಾಗ್ರತವಾಗುತ್ತದೆ. ಆಗ ಮಾನವನು ಯುಕ್ತಿಯ ಸಾಧಾರಣ ಮೇರೆಯನ್ನು ಮೀರುವನು. ಆಗ ಯುಕ್ತಿಯನ್ನು ಮೀರಿರುವ ಪರಮ ವಸ್ತುವನ್ನು ಸಂದರ್ಶಿಸುವನು.
ಧರ್ಮ ಎಂದರೆ ಕೇವಲ ಚರ್ಚಿಗೆ ಹೋಗುವುದಲ್ಲ. ಹಣೆಯ ಮೇಲೆ ಮತಚಿಹ್ನೆಯನ್ನು ಧರಿಸುವುದಲ್ಲ, ವಿಚಿತ್ರ ರೀತಿಯ ಉಡುಪನ್ನು ಧರಿಸುವುದೂ ಅಲ್ಲ. ಕಾಮನ ಬಿಲ್ಲಿನ ಬಣ್ಣಗಳೆಲ್ಲವನ್ನೂ ನೀವು ಬಳಿದು ಕೊಳ್ಳಬಹುದು. ನಿಮ್ಮ ಹೃದಯ ತೆರೆಯದೆ ಇದ್ದರೆ, ಅವರನ್ನು ಸಾಕ್ಷಾತ್ಕಾರ ಮಾಡಿಕೊಳ್ಳದೆ ಇದ್ದರೆ, ಎಲ್ಲವೂವ್ಯರ್ಥ. ಹೃದಯ ಪರಿಶುದ್ಧವಾಗಿದ್ದಾರೆ, ಮತ್ತಾವ ಬಣ್ಣವೂ ಬೇಕಾಗಿಲ್ಲ. ಇದೇ ನಿಜವಾದ ಧರ್ಮ ಸಾಕ್ಷಾತ್ಕಾರ. ಎಲ್ಲಿಯವರೆಗೂ ಬಣ್ಣ ಮುಂತಾದವು ನಮಗೆ ಸಹಾಯ ಮಾಡುವುವೋ ಅಲ್ಲಿಯವರೆಗೆ ಅವು ಒಳ್ಳೆಯವು. ಆದರೆ ಅವು ನಮಗೆ ಸಹಾಯ ಮಾಡುವುದರ ಬದಲು, ಪ್ರಗತಿಗೆ ಆತಂಕ ಉಂಟುಮಾಡುವ ಸಂಭವವಿದೆ. ಜನರು ಧರ್ಮವೆಂದರೆ ಕೇವಲ ಬಾಹ್ಯಾಚರಣೆ ಎಂದು ಭಾವಿಸುವರು. ದೇವಸ್ಥಾನಕ್ಕೆ ಹೋಗುವುದೇ ಒಂದು ಧರ್ಮವಾಗಿ ಬಿಡುವುದು. ಪುರೋಹಿತನಿಗೆ ಏನಾದರೂ ದಾನ ಧರ್ಮ ಮಾಡುವುದೇ ಧರ್ಮವಾಗಿ ಬಿಡುವುದು. ಇದೇ ಅಪಾಯ. ವಿನಾಶಹೇತು. ಇದನ್ನು ತಕ್ಷಣ ಅಡಗಿಸಬೇಕು. ಬಾಹ್ಯೇಂದ್ರಿಯಗಳ ಜ್ಞಾನಕೂಡ ಧರ್ಮವಲ್ಲವೆಂದು ನಮ್ಮ ಶಾಸ್ತ್ರ ಸಾರುವುದು. ಅವಿಕಾರಿಯಾದುದನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದೇ ಧರ್ಮ. ಅದೇ ಎಲ್ಲರಿಗೂ ಧರ್ಮ. ಯಾರು ಪ್ರಜ್ಞಾತೀತ ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಂಡಿರುವರೋ, ಯಾರು ತಮ್ಮಲ್ಲಿ ಆತ್ಮ ಸಾಕ್ಷಾತ್ಕಾರ ಮಾಡಿಕೊಂಡಿರುವರೊ, ಯಾರು ದೇವರನ್ನು ಸ್ವತಃ ಕಂಡಿರುವರೋ, ಪ್ರತಿಯೊಂದರಲ್ಲಿಯೂ ದೇವರನ್ನು ಮಾತ್ರ ನೋಡುವರೊ, ಅವರೇ ಋಷಿಗಳು. ಋಷಿಗಳಾಗುವವರೆಗೆ ನಿಮಗೆ ಧಾರ್ಮಿಕ ಜೀವನವಿಲ್ಲ. ಆಗ ಮಾತ್ರ ನಿಮಗೆ ನಿಜವಾದ ಧರ್ಮ ಪ್ರಾರಂಭವಾಗುವುದು. ಈಗ ಅದಕ್ಕೆ ಸಿದ್ಧತೆ ಮಾತ್ರ. ಆಗ ಧರ್ಮೋದಯವಾಗುವುದು. ಈಗ ಕೇವಲ ಪಾಂಡಿತ್ಯದ ಕಸರತ್ತು ಮತ್ತು ಶರೀರದಂಡನೆ ಮಾತ್ರ ಆಗುತ್ತಿದೆ.
ಉಪನಿಷತ್ತಿನ ಒಬ್ಬ ಪುರಾತನ ಋಷಿ ಬ್ರಹ್ಮನ ವಿಷಯವನ್ನು ತಿಳಿಯುವುದಕ್ಕೆ ತನ್ನ ಮಗನನ್ನು ಕಳುಹಿಸಿದನು. ಮಗ ಹಿಂತಿರುಗಿ ಬಂದ ಮೇಲೆ ತಂದೆ, “ನೀನೇನು ಕಲಿತೆ” ಎಂದು ಕೇಳಿದನು. ಮಗ “ಎಷ್ಟೋ ವಿಷಯಗಳನ್ನು ಕಲಿತೆ” ಎಂದನು. ತಂದೆ, “ಅದರಿಂದ ಪ್ರಯೋಜನವಿಲ್ಲ, ಪುನಃ ಹಿಂತಿರುಗಿ ಹೋಗು” ಎಂದನು. ಹಿಂತಿರುಗಿ ಬಂದ ಮೇಲೆ ತಂದೆ ಪುನಃ ಅದೇ ಪ್ರಶ್ನೆಯನ್ನು ಕೇಳಿದನು. ಮಗ ಹಿಂದೆ ಹೇಳಿದಂತೆ “ಬಗೆ ಬಗೆಯ ವಿದ್ಯೆಗಳನ್ನು ಕಲಿತಿರುವೆ” ಎಂದನು. ಅವನು ಪುನಃ ಹೋಗ ಬೇಕಾಯಿತು. ಮತ್ತೊಂದು ವೇಳೆ ಹಿಂತಿರುಗಿ ಬಂದ ಮೇಲೆ ಅವನ ಮುಖದಲ್ಲಿ ಕಾಂತಿ ಕೋರೈಸುತ್ತಿತ್ತು. ತಂದೆ ಎದ್ದು ನಿಂತು, “ಹಾ! ಮಗು, ಬ್ರಹ್ಮನನ್ನು ತಿಳಿದವನಂತೆ ನಿನ್ನ ಮುಖ ಕಳೆಯಿಂದ ಕೂಡಿರುವುದು” ಎಂದನು. ನೀವು ದೇವರನ್ನು ಕಂಡರೆ ಮುಖ ಬದಲಾಗುವುದು. ಧ್ವನಿ ಬದಲಾಗುವುದು. ಇಡಿಯ ಆಕಾರವೇ ಬದಲಾಗುವುದು. ನೀವು ಮಾನವ ಕೋಟಿಗೆ ಮಹಾಕಲ್ಯಾಣ ಪ್ರದರಾಗುವಿರಿ. ಇದೇ ಋಷಿತ್ವ, ನಮ್ಮ ಧರ್ಮದ ಆದರ್ಶ. ಈ ಉಪನ್ಯಾಸ, ತತ್ವ, ಯುಕ್ತಿ, ದ್ವೈತ ಅದ್ವೈತ ವೇದಾಂತ ಇವೆಲ್ಲವೂ ಗೌಣ, ಸಿದ್ಧತೆ ಮಾತ್ರ. ಆದರೆ ಸಾಕ್ಷಾತ್ಕಾರ ಮುಖ್ಯ. ವೇದ, ವ್ಯಾಕರಣ, ಜ್ಯೋತಿಷ್ಯ ಮುಂತಾದವು ಎಲ್ಲಾ ಗೌಣ. ಯಾವುದರ ಮೂಲಕ ಅಕ್ಷರವು ಸಾಕ್ಷಾತ್ಕಾರವಾಗುವುದೋ ಅದೇ ಪರಮಜ್ಞಾನ. ಯಾರು ಸಾಕ್ಷಾತ್ಕಾರವನ್ನು ಪಡೆದಿರುವರೋ ಅವರೇ ವೇದರ್ಷಿಗಳು. ಋಷಿ ಎಂಬುದು ಒಂದು ಅವಸ್ಥೆಯ ಹೆಸರು. ನಮ್ಮಲ್ಲಿ ಪ್ರತಿಯೊಬ್ಬ ನಿಜವಾದ ಹಿಂದೂವೂ ಒಂದಲ್ಲ ಒಂದು ದಿನ ಹಾಗೆ ಆಗಬೇಕು. ಹಾಗೆ ಆಗುವುದನ್ನೇ ಮುಕ್ತಿ ಎನ್ನುವುದು. ಸಿದ್ಧಾಂತಗಳಲ್ಲಿ ನಂಬಿಕೆಯಾಗಲಿ, ಸಹಸ್ರಾರು ದೇವಾಲಯಗಳಿಗೆ ಹೋಗುವುದಾಗಲಿ ಪ್ರಪಂಚದ ನದಿಗಳಲ್ಲೆಲ್ಲಾ ಸ್ನಾನಮಾಡುವುದಾಗಲಿ ಅಲ್ಲ. ಮಂತ್ರದ್ರಷ್ಟನಾಗುವುದರಿಂದ, ಋಷಿಯಾಗುವುದರಿಂದ ಮಾತ್ರ ಮುಕ್ತಿ ಅಥವಾ ಸ್ವಾತಂತ್ರ್ಯ ಲಭಿಸುತ್ತದೆ.
ನೀವು ಆತ್ಮ ಎಂಬುದನ್ನು ಸಾಕ್ಷಾತ್ಕಾರ ಮಾಡಿಕೊಂಡಿರುವಿರಾ? ಹೌದು ನನಗೆ ಆಗಿದೆ ಎಂದರೆ, ಅದರ ಅರ್ಥವೇನು? ಆತ್ಮನು ಈ ದೇಹವೆಂಬ ಮಾಂಸದ ಮುದ್ದೆಯೇ ಅಥವಾ ಅನಂತವಾದ ನಿತ್ಯ ಮಂಗಳವಾದ ಸ್ವಯಂಪ್ರಭೆಯಿಂದ ಕೂಡಿದ ಅಮೃತಾತ್ಮನೆ? ನೀವು ಪ್ರಪಂಚದಲ್ಲೆ ಶ್ರೇಷ್ಠ ತತ್ತ್ವಜ್ಞಾನಿ ಆಗಿರಬಹುದು. ಆದರೆ ಎಲ್ಲಿಯವರೆಗೆ ನಾನೇ ದೇಹ ಎಂಬ ಭಾವನೆ ಇದೆಯೋ ಅಲ್ಲಿಯವರೆಗೆ ನೀವು ನಿಮ್ಮ ಕಾಲ ಕೆಳಗೆ ಹರಿದಾಡುವ ಸಣ್ಣ ಕಿಟಕ್ಕಿಂತ ಮೇಲಲ್ಲ. ನಿಮಗೆ ಕ್ಷಮೆ ಇಲ್ಲ. ನಿಮ್ಮದು ಮಹಾಪರಾಧ ನಿಮಗೆ ತತ್ತ್ವವೆಲ್ಲ ಗೊತ್ತಿದೆ, ಆದರೂ ನೀವು ದೇಹವೆಂದು ಪರಿಗಣಿಸುವಿರಿ! ನೀವು ದೇಹ! ದೇವತೆಗಳು ಆಗುವಿರಿ! ಅದೊಂದು ಧರ್ಮವೇ?
ಧರ್ಮವೆಂದರೆ ಆತ್ಮವನ್ನು ಅತ್ಮನಂತೆ ಅರಿಯುವುದು. ಈಗ ನಾವೇನು ಮಾಡುತ್ತಿರುವೆವು? ಅದಕ್ಕೆ ವಿರುದ್ಧವಾದುದನ್ನು. ಆತ್ಮನನ್ನು ದೇಹವೆಂದು ಭಾವಿಸುತ್ತಿರುವೆವು. ಆ ಅಮೃತಾತ್ಮನಿಂದ ನಾವು ಮೃತ್ಯು ಮತ್ತು ಪಂಚಭೂತಗಳನ್ನು ನಿರ್ಮಿಸುತ್ತೇವೆ; ಜಡವಾದ ಅಚೇತನವಾದ ಪಂಚಭೂತಗಳಿಂದ ನಾವು ಆತ್ಮನನ್ನು ನಿರ್ಮಿಸುತ್ತಿರುವೆವು. ತಲೆಯ ಮೇಲೆ ನಿಂತುಕೊಳ್ಳುವುದರಿಂದ ಅಥವಾ ಒಂದು ಕಾಲಿನ ಮೇಲೆ ನಿಂತುಕೊಳ್ಳುವುದರಿಂದ ಅಥವಾ ಮೂರು ತಲೆಗಳಿರುವ ಐದು ಸಾವಿರ ದೇವರ ಪೂಜೆಯಿಂದ ನಿಮಗೆ ಬ್ರಹ್ಮಜ್ಞಾನ ಲಭಿಸುವುದಾದರೆ ಒಳ್ಳೆಯದು…! ನಿಮಗೆ ಹೇಗೆ ಬೇಕೋ ಹಾಗೆ ಮಾಡಿ. ಅದಕ್ಕೆ ವಿರೋಧವಾಗಿ ಹೇಳುವುದಕ್ಕೆ ಯಾರಿಗೂ ಏನು ಅಧಿಕಾರವಿಲ್ಲ. ಅದಕ್ಕೇ ಕೃಷ್ಣ ಹೇಳುವುದು, ನಿನ್ನ ಮಾರ್ಗ ಉತ್ತಮವಾಗಿದ್ದರೆ, ಮತ್ತೊಬ್ಬನ ಮಾರ್ಗ ಎಷ್ಟೇ ಹೀನವಾಗಿದ್ದರೂ, ಅದು ತಪ್ಪು ಎಂದು ಹೇಳುವುದಕ್ಕೆ ನಿನಗೆ ಅಧಿಕಾರವಿಲ್ಲ ಎಂದು.
ಧರ್ಮ ಎಂದರೆ ಒಂದು ವಿಧವಾದ ಬೆಳವಣಿಗೆ, ಅದು ಕೆಲಸಕ್ಕೆ ಬಾರದ ಪದಪುಂಜವಲ್ಲ ಎಂಬುದನ್ನು ಗಮನಿಸಬೇಕಾಗಿದೆ. ಎರಡು ಸಾವಿರ ವರ್ಷಗಳ ಹಿಂದೆ ಒಬ್ಬ ದೇವರನ್ನು ನೋಡಿದ- ಮೋಸಸ್ ಉರಿಯುತ್ತಿರುವ ಪೊದೆಯಲ್ಲಿ ದೇವರನ್ನು ನೋಡಿದ. ಅವನು ದೇವರನ್ನು ನೋಡಿದಾಗ ಏನು ಮಾಡಿದನೋ ಅದು ನಿಮ್ಮನ್ನು ಉದ್ಧರಿಸಬಲ್ಲದೇ? ಯಾರು ದೇವರನ್ನು ನೋಡಿದರೂ ಅದರಿಂದ ನಿಮಗೆ ಎಳ್ಳಿನಷ್ಟೂ ಪ್ರಯೋಜನವಾಗದು. ಅದು ನಿಮ್ಮನ್ನೂ ಕೂಡ ಹಾಗೆ ಮಾಡುವಂತೆ ಪ್ರಚೋದಿಸಬಹುದೇ ಹೊರತು ಬೇರೇನೂ ಇಲ್ಲ. ದಾರಿಯಲ್ಲಿರುವ ಕೈಮರದಂತೆ ಇವು. ಒಬ್ಬ ಊಟ ಮಾಡಿದರೆ ಮತ್ತೊಬ್ಬನಿಗೆ ಹೊಟ್ಟೆ ತುಂಬುವುದಿಲ್ಲ. ನೀವೇ ದೇವರನ್ನು ನೋಡಬೇಕಾಗಿದೆ. ದೇವರ ಸ್ವಭಾವ ಏನು? ಅವನಿಗೆ ಒಂದು ದೇಹದಲ್ಲಿ ಮೂರು ತಲೆಗಳಿವೆಯೇ, ಅಥವಾ ಆರು ದೇಹಗಳಲ್ಲಿ ಐದು ತಲೆಗಳಿವೆಯೇ ಎಂಬುದಕ್ಕಾಗಿ ಹೋರಾಡುತ್ತಿರುವರು. ನೀವು ದೇವರನ್ನು ನೋಡಿರುವಿರಾ? ಇಲ್ಲ. ಅವನನ್ನು ಎಂದಾದರೂ ನೋಡುತ್ತೇವೆ ಎಂಬುದನ್ನೂ ಅವರು ನಂಬುವುದಿಲ್ಲ. ಎಂತಹ ತಿಳಿಗೇಡಿಗಳು ನಾವು! ನಿಜವಾಗಿಯೂ ನಾವು ಹುಚ್ಚರೇ!
ಆದರೆ ಒಂದು ವಿಷಯವನ್ನು ನೀವು ಗಮನದಲ್ಲಿಡಬೇಕು. ಯಾರು ಶ್ರದ್ಧೆಗೂ ಭಂಗವನ್ನು ತರಬೇಡಿ. ಧರ್ಮವು ಸಿದ್ಧಾಂತಗಳಲ್ಲಿ ಇಲ್ಲ ಎನ್ನುವುದು ನಿಮಗೆ ಗೊತ್ತಿರಬೇಕು.  ದೇವರಂತೆ ಇರುವುದು, ದೇವರಂತೆ ಆಗುವುದು, ಇದೇ ಧರ್ಮ. ಸಾಕ್ಷಾತ್ಕಾರವೇ ಧರ್ಮ. ಮಾನವರೆಲ್ಲ ಹುಟ್ಟು ವಿಗ್ರಹಾರಾಧಕರು. ಅತಿ ಕೀಳು ಮನುಷ್ಯರು ಮೃಗ. ಅತಿ ಮೇಲೆ ಇರುವ ಮನುಷ್ಯನು ಪೂರ್ಣಾತ್ಮ. ಇವರಿಬ್ಬರ ಮಧ್ಯೆ ಇರುವವರೆಲ್ಲ ಶಬ್ದ, ಬಣ್ಣ ಸಿದ್ಧಾಂತ, ಕ್ರಿಯಾವಿಧಿ ಮುಂತಾದುವುಗಳ ಮೂಲಕ ಆಲೋಚಿಸಬೇಕಾಗಿದೆ.
ನೀವು ವಿಗ್ರಹಾರಾಧಕರಲ್ಲ ಎನ್ನುವುದಕ್ಕೆ ಒಂದು ಪರೀಕ್ಷೆಯೆಂದರೆ “ನಾನು”ಎಂದಾಗ ನಿಮಗೆ ದೇಹದ ಭಾವನೆ ಬರುವುದೋ ಇಲ್ಲವೋ ಎಂಬುದು. ದೇಹದ ಭಾವನೆ ಬಂದರೆ ನೀವು ಇನ್ನೂ ವಿಗ್ರಹಾರಾಧಕರು. ಧರ್ಮವು ಕೇವಲ ಪಾಂಡಿತ್ಯದ ಕಸರತ್ತು ಅಲ್ಲ; ಅದು ಸಾಕ್ಷಾತ್ಕಾರ. ನೀವು ದೇವರ ವಿಷಯವನ್ನು ಇನ್ನೂ ತರ್ಕಿಸುತ್ತಿದ್ದರೆ ಮೂರ್ಖರು. ಅಜ್ಞಾನಿಯು ಪ್ರಾರ್ಥನೆಯಿಂದ ಮತ್ತು ಭಕ್ತಿಯಿಂದ ತತ್ತ್ವಜ್ಞಾನಿಯನ್ನೂ ಮೀರಿ ಹೋಗಬಲ್ಲನು. ದೇವರನ್ನು ಅರಿಯಬೇಕಾದರೆ ಯಾವ ತತ್ತ್ವಜ್ಞಾನವೂ ಬೇಕಾಗಿಲ್ಲ. ನಾವು ಇತರರ ಶ್ರದ್ಧೆಗೆ ಭಂಗವನ್ನು ತರಕೂಡದು. ಇದು ನಮ್ಮ ಕರ್ತವ್ಯ. ಧರ್ಮ ಎನ್ನುವುದು ಒಂದು ಅನುಭೂತಿ. ಎಲ್ಲಕ್ಕಿಂತ ಹೆಚ್ಚಾಗಿ, ಎಲ್ಲದರಲ್ಲಿಯೂ ನಿಸ್ಪೃಹರಾಗಿರಿ. ದೇಹ ಭಾವನೆಯೇ ದುಃಖಕ್ಕೆ ಕಾರಣ. ಏಕೆಂದರೆ ಇದು ಆಸೆಗೆ ಕಾರಣವಾಗುವುದು. ಬಡವ ಹಣವನ್ನು ನೋಡುವನು, ಹಣ ತನಗೆ ಬೇಕೆಂದು ಭಾವಿಸುವನು. ಯಾವಾಗಲೂ ಸಾಕ್ಷಿಯಾಗಿರಿ. ಎಂದಿಗೂ ಪ್ರತಿಕ್ರಿಯೆ ತೋರಿಸಬೇಡಿ. ಮಾನವನು ದೇವರಿಗೆ ಕೊಡಬಹುದಾದ ಒಳ್ಳೆಯ ಹೆಸರೇ ಸತ್ಯ ಎಂಬುದು. ಸತ್ಯವು ಸಾಕ್ಷಾತ್ಕಾರದ ಫಲ. ಆದಕಾರಣ ಅದನ್ನು ನಿಮ್ಮೊಳಗೇ ಅರಸಿ. ಎಲ್ಲಾ ಶಾಸ್ತ್ರಗಳಿಂದ, ಆಕಾರಗಳಿಂದ ಪಾರಾಗಿ ನಿಮ್ಮ ಆತ್ಮವನ್ನು ಮಾತ್ರ ನೋಡಿ. ನಾವು ಗ್ರಂಥಗಳಿಂದ ಭ್ರಾಂತರಾಗುವೆವು, ಹುಚ್ಚರಾಗುವೆವು ಎನ್ನುವನು ಶ್ರೀಕೃಷ್ಣ. ಪ್ರಕೃತಿಯ ದ್ವಂದ್ವದಿಂದ ಪಾರಾಗಿ. ನೀವು ಬಾಹ್ಯ ಆಚಾರ ತಂತ್ರಗಳು ಇವೇ ಧರ್ಮ ಎಂದು ಭಾವಿಸಿದರೆ ಬಂಧನದಲ್ಲಿರುವಿರಿ. ಇತರರಿಗೆ ಸಹಾಯ ಮಾಡಲು ಅವುಗಳಲ್ಲಿ ಭಾಗಿಯಾಗಿ. ಆದರೆ ಜೋಪಾನ, ಅವು ಬಂಧನವಾಗದಂತೆ ನೋಡಿಕೊಳ್ಳಿ. ಧರ್ಮ ಒಂದು, ಆದರೆ ಅದು ಹಲವು ಬಗೆಯಾಗಿ ವ್ಯಾಪಿಸಿದೆ. ಪ್ರತಿಯೊಬ್ಬರೂ ತಮ್ಮ ಬೋಧನೆಯನ್ನು ನೀಡಲಿ, ಆದರೆ ಅನ್ಯಧರ್ಮಗಳಲ್ಲಿ ತಪ್ಪು ಕಂಡುಹಿಡಿಯಬೇಡಿ. ನಿಮಗೆ ಸತ್ಯ ಬೇಕಾದರೆ ನೀವು ಎಲ್ಲಾ ಆಕಾರಗಳಿಂದಲೂ ಪಾರಾಗಬೇಕು. ಭಗವಂತನ ಜ್ಞಾನಾಮೃತವನ್ನು ಉನ್ಮತ್ತರಾಗುವವರೆಗೆ ಪಾನಮಾಡಿ. “ಸೋಹಂ-ನಾನೇ ಅವನು” ಎಂಬುದನ್ನು ಅರಿತವನು ಚಿಂದಿ ಬಟ್ಟೆಯನ್ನು ಹೊದ್ದುಕೊಂಡಿದ್ದರೂ ಸುಖಿ. ಅನಂತಶಕ್ತಿಯ ಮೂಲಕ್ಕೆ ಹೋಗಿ ಅನಂತಶಕ್ತಿಯನ್ನು ಹೊಂದಿ ಬನ್ನಿ. ಗುಲಾಮನಾದವನು ಸತ್ಯಾನ್ವೇಷಣೆಗೆ ಹೊರಡುವನು; ಮುಕ್ತನಾಗಿ ಹಿಂದಿರುಗುವನು.

ಧಾರ್ಮಿಕ ವೈಶಾಲ್ಯತೆ 

ಮಾನವನ ಮನಸ್ಸು ವಿಶಾಲವಾದಂತೆ ಅವನ ಆಧ್ಯಾತ್ಮಿಕ ಚಿಂತನೆಯೂ ವಿಶಾಲವಾಗುತ್ತದೆ. ಮನುಷ್ಯನ ಭಾವನೆ ಜಗತ್ತಿನ ಮೂಲೆಮೂಲೆಗೂ ಮುಟ್ಟಿದೆ, ಅದನ್ನು ಸಂಗ್ರಹಿಸಿ ಇಡಲಿಕ್ಕಾಗದ ಸಮಯ ಇಂದು ಬಂದಿದೆ. ಕೇವಲ ಭೌತಿಕ ಸಹಾಯದ ಮೂಲಕ ಇಡೀ ಪ್ರಪಂಚದ ಸಂಬಂಧವನ್ನು ಬೆಳೆಸಿರುವೆವು. ಆದುದರಿಂದ ಜಗತ್ತಿನ ಭವಿಷ್ಯಧರ್ಮಗಳು ವಿಶ್ವವ್ಯಾಪಿಯಾಗ ಬೇಕು. ವಿಶಾಲವಾಗಬೇಕು.
ಧರ್ಮದ ಮುಂದಿನ ಆದರ್ಶವು ಪ್ರಪಂಚದಲ್ಲಿ ಈಗ ಇರುವ ಶ್ರೇಷ್ಠವಾದುದು ಮತ್ತು ಶುಭವಾದುದನ್ನೆಲ್ಲಾ ಅಳವಡಿಸಿಕೊಂಡು ಮುಂದೆ ಇನ್ನೂ ವಿಕಾಸವಾಗುವುದಕ್ಕೆ ಸಾಕಷ್ಟು ಅವಕಾಶವನ್ನು ಕೊಡುವಂತಿರಬೇಕು. ಹಿಂದೆ ಇದ್ದ ಒಳ್ಳೆಯದನ್ನೆಲ್ಲಾ ಸಂರಕ್ಷಿಸಬೇಕು. ಆಗಲೇ ಇರುವ ನಿಧಿಯನ್ನು ಮುಂದೆ ಹೆಚ್ಚು ಮಾಡಲು ಅವಕಾಶ ಯಾವಾಗಲೂ ಇರಬೇಕು. ಧರ್ಮವು ಎಲ್ಲವನ್ನೂ ಒಳಗೊಳ್ಳುವಂತಿರಬೇಕು. ಇತರರನ್ನು ಅವರ ದೇವರು ತಮಗಿಂತ ಬೇರೆ ಎಂದು ನಿಕೃಷ್ಟಾದೃಷ್ಟಿಯಿಂದ ನೋಡಕೂಡದು. ನನ್ನ ಜೀವನದಲ್ಲೇ ನಾನು ದೇವರನ್ನು ನಂಬದ ಎಷ್ಟೋ ಆಧ್ಯಾತ್ಮಿಕ ಜೀವನಗಳನ್ನು ನೋಡಿರುವೆನು; ಎಷ್ಟೋ ವಿಚಾರವಂತರನ್ನು ನೋಡಿದ್ದೇನೆ. ಅಂದರೆ ಅವರು ಯಾವುದನ್ನು ನಾವು ದೇವರೆಂದು ಕರೆಯುತ್ತೇವೆಯೋ ಅದನ್ನು ನಂಬದೆ  ಇರಬಹುದು. ಬಹುಶಃ ನಾವು ತಿಳಿದುಕೊಂಡಿರುವುದಕ್ಕಿಂತ ಹೆಚ್ಚಾಗಿ ಅವರು ದೇವರನ್ನು ತಿಳಿದುಕೋಡಿರಬಹುದು. ನಿರ್ಗುಣ, ಸುಗುಣ, ಅನಂತ, ನೀತಿ ನಿಯಮಗಳು ಅಥವಾ ಆದರ್ಶ ಮನುಷ್ಯ, ಇವೆಲ್ಲವೂ ಧರ್ಮದ ವಿವರಣೆಯಲ್ಲಿ ಬರುವುವು. ಧರ್ಮ ಹೀಗೆ ವಿಶಾಲವಾದರೆ ಮಾನವನ  ಕಲ್ಯಾಣಕ್ಕೆ ಅವುಗಳು ಶಕ್ತಿ ನೂರುಮಡಿ ಹೆಚ್ಚಿದಂತಾಗುತ್ತದೆ. ಅಧ್ಬುತಶಕ್ತಿಯುಳ್ಳ ಧರ್ಮಗಳು ಪ್ರಪಂಚಕ್ಕೆ ಒಳ್ಳೆಯದನ್ನು ಮಾಡುವುದಕ್ಕಿಂತ ಹೆಚ್ಚಾಗಿ ಕೆಟ್ಟುದನ್ನು ಮಾಡಿವೆ. ಇದಕ್ಕೆ ಕಾರಣ ಆ ಧರ್ಮಗಳ ಸಂಕುಚಿತ ಭಾವನೆ.
  ನಾವು ಆಕಾಶದಷ್ಟು ವಿಶಾಲವಾಗಿರಬೇಕು, ಸಾಗರದಷ್ಟು ಆಳವಾಗಿರಬೇಕು. ಅಜ್ಞೇಯತಾವಾದಿಯ ವೈಶಾಲ್ಯ ಇರಬೇಕು. ಸಹಿಷ್ಣುತೆ ಎಂಬುದಕ್ಕೆ ಅಹಂಕಾರದಿಂದ ಕೂಡಿದ ಮಾನವನು    ಬೇರೆ ಒಂದು ಅರ್ಥವನ್ನು ಕಲ್ಪಿಸಿದ್ದಾನೆ. ಅದು ತಾನು ಇತರರಿಗಿಂತ ಎತ್ತರದಲ್ಲಿ ಇದ್ದೇನೆ ಎಂದು ಭಾವಿಸಿ ಇತರರನ್ನು  ಕನಿಕರ ದೃಷ್ಟಿಯಿಂದ ನೋಡುವುದು. ಇದು ಮನಸ್ಸಿನ ಶೋಚನೀಯ ಸ್ಥಿತಿ. ನಾವೆಲ್ಲ ಒಂದೇ ಗುರಿಯೆಡೆಗೆ ಹೋಗುತ್ತಿರುವೆವು. ಆದರೆ ನಮ್ಮ ನಮ್ಮ ಸ್ವಭಾವಕ್ಕೆ ಅನುಗುಣವಾದ ಬೇರೆ ಬೇರೆ ದಾರಿಗಳಲ್ಲಿ ಹೋಗುತ್ತಿರುವೆವು, ಅಷ್ಟೇ. ನಮ್ಮ ಮನಸ್ಸು ಬಹುಮುಖಿ ಯಾಗಬೇಕು, ನಮ್ಮ ಶೀಲದಲ್ಲಿ ವೈವಿಧ್ಯ ಇರಬೇಕು. ನಾವು  ಇನ್ನೊಬ್ಬನನ್ನು ಸಹಿಸುವುದು ಮಾತ್ರವಲ್ಲ, ಅದಕ್ಕಿಂತ ಕಷ್ಟವಾಗಿರುವುದನ್ನು ಮಾಡಬೇಕು; ಅವನೊಡನೆ ಸಹಾನುಭೂತಿಯನ್ನು ತೋರಿ, ಅವನ ಮಾರ್ಗದಲ್ಲಿ ನಡೆದು ಅವನು ಹೇಗೆ  ದೇವರನ್ನು ಅನುಭವಿಸುತ್ತಾನೊ ಹಾಗೆ ಅನುಭವಿಸಬೇಕು. ಪ್ರತಿಯೊಂದು ಧರ್ಮದಲ್ಲಿಯೂ ಎರಡು ಭಾಗಗಳಿವೆ. ಒಂದು ಇತಿಮಾರ್ಗ, ಮತ್ತೊಂದು ನೇತಿಮಾರ್ಗ. ನೀವು ತಂದೆ, ಹೋಲಿಘೋಸ್ಟ್, ಮತ್ತು ಕ್ರಿಸ್ತ ಇವರ ಮೂಲಕ ಮುಕ್ತಿ ಎಂದು ಹೇಳುವಾಗ ನಾನು ನಿಮ್ಮ ಅಭಿಪ್ರಾಯವನ್ನು ಒಪ್ಪುತ್ತೇನೆ. ಒಳ್ಳೆಯದು, ನಾನು ಕೂಡ ಇದನ್ನು ಒಪ್ಪುತ್ತೇನೆ ಎನ್ನುವೆನು. ಆದರೆ ನೀವು, ಬೇರೆ ನಿಜವಾದ ಧರ್ಮವೇ  ಇಲ್ಲ, ಬೇರೆ ಅವತಾರವೇ ಇಲ್ಲ ಎಂದಾಗ “ನಿಲ್ಲಿ, ನೀವು ಇತರರನ್ನು ಅಲ್ಲಗಳೆದಾಗ, ಇತರರನ್ನು ನೀವು ನಿಮ್ಮೊಡನೆ ಸೇರಿಸದೆ ಇದ್ದಾಗ ನಾನು ನಿಮ್ಮ ಅಭಿಪ್ರಾಯವನ್ನು ಒಪ್ಪುವುದಿಲ್ಲ” ಎನ್ನುವೆನು. ಪ್ರತಿಯೊಂದು ಧರ್ಮವೂ ಒಂದು ಸಂದೇಶವನ್ನು ಜಗತ್ತಿಗೆ ಕೊಡಬೇಕಾಗಿದೆ; ಮಾನವನಿಗೆ ಒಂದು ಉಪದೇಶವನ್ನು ಬೋಧಿಸಬೇಕಾಗಿದೆ. ಆದರೆ ಒಂದು ಧರ್ಮ ಇತರರನ್ನು ಅಲ್ಲಗಳೆದಾಗ, ಇತರರಿಗೆ ಆಶಾಂತಿಯನ್ನುಂಟುಮಾಡುವಾಗ ಅದು ನಿಷೇಧಾತ್ಮಕವಾದ ಅಪಾಯಕರವಾದ ಮಾರ್ಗವನ್ನು ಅನುಸರಿಸುವುದು, ಅದಕ್ಕೆ ಎಲ್ಲಿ ಮೊದಲು ಮಾಡಬೇಕು ಎಲ್ಲಿ ಕೊನೆಗಾಣಿಸಬೇಕು ಎಂಬುದು ಗೊತ್ತಿರುವುದಿಲ್ಲ.
ಪ್ರಪಂಚದವರೆಲ್ಲ ಒಂದೇ ಧರ್ಮವನ್ನು, ಒಂದೇ ಬಗೆಯ ಪೂಜೆಯನ್ನು. ಒಂದೇ ಬಗೆಯ ನೀತಿಯನ್ನು ಒಪ್ಪಿಕೊಂಡರೆ  ಅದೇ ಪ್ರಪಂಚಕ್ಕೆ ಒದಗಬಹುದಾದ ಮಹಾ ದುರ್ಗತಿ. ಇದು ಎಲ್ಲಾ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಕುಠಾರಪ್ರಾಯವಾಗುವುದು. ಯಾವುದನ್ನು ಶ್ರೇಷ್ಠಧರ್ಮವೆಂದು ನಾವು ಭಾವಿಸುವೆವೋ ಅದನ್ನು ನ್ಯಾಯವಾದ ಮಾರ್ಗದಿಂದಲೋ ಅನ್ಯಾಯವಾದ ಮಾರ್ಗದಿಂದಲೋ  ಎಲ್ಲರೂ ಒಪ್ಪಿಕೊಳ್ಳುವಂತೆ ಮಾಡಿ, ಧರ್ಮವು ಶೀಘ್ರವಾಗಿ ನಾಶವಾಗುವಂತೆ ಮಾಡುವುದಕ್ಕಿಂತ ಪ್ರತಿಯೊಬ್ಬರೂ ತಾವು ಯಾವುದನ್ನು ಶ್ರೇಷ್ಠ ಆದರ್ಶ ಎಂದು ಭಾವಿಸುವರೋ ಅದಕ್ಕೆ ಇರುವ ಆತಂಕಗಳನ್ನು ನಿವಾರಿಸಿ, ಒಂದೇ ಧರ್ಮವು ಜಗತ್ತಿನಲ್ಲಿ ಸ್ಥಾಪಿತವಾಗದಂತೆ ನೋಡಿಕೊಳ್ಳಲು ಪ್ರಯತ್ನಿಸಬೇಕು.
ಭಗವಂತನಲ್ಲಿ ಅಥವಾ ಪ್ರತಿಯೊಬ್ಬ ಮಾನವನ ನೈಜ ಸ್ವಭಾವವಾದ ದಿವ್ಯತೆಯಲ್ಲಿ ಒಂದಾಗುವುದೇ ಮಾನವಕೋಟಿಯ ಏಕಮಾತ್ರ ಗುರಿ ಮತ್ತು ಎಲ್ಲಾ ಧರ್ಮಗಳ ಗಂತವ್ಯ ಗುರಿ ಒಂದೇ ಆದರೂ ಮಾನವರ ಸ್ವಭಾವಕ್ಕೆ ತಕ್ಕಂತೆ ಮಾರ್ಗಗಳು ಬೇರೆ ಬೇರೆಯಾಗಿರಬಹುದು.
ಒಂದು ಧರ್ಮವು ಮಾನವಕೋಟಿಯ ಹೆಚ್ಚಿನ ಜನರನ್ನು ತೃಪ್ತಿಪಡಿಸಬೇಕಾದರೆ, ಇಂತಹ ವಿಭಿನ್ನ ಪ್ರಕೃತಿಯವರಿಗೆಲ್ಲ ಸಹಾಯಕವಾಗಿರಬೇಕು. ಇದು ಎಲ್ಲಿ ಸಾಧ್ಯವಿಲ್ಲವೊ ಅಲ್ಲಿ ಇರುವ ಧರ್ಮ ಸಂಕುಚಿತವಾಗುವುದು. ಪ್ರೀತಿಯನ್ನು ಮತ್ತು ಭಕ್ತಿಯನ್ನು ಬೋಧಿಸುವ ಒಂದು ಪಂಥಕ್ಕೆ ಹೋದಿರಿ ಎಂದು ಭಾವಿಸೋಣ. ಅವರು ಹಾಡುವರು, ಅಳುವರು, ಭಕ್ತಿಯನ್ನು ಭೋದಿಸುವರು. ಆದರೆ ನೀವು “ಸ್ನೇಹಿತನೆ, ಇದೇನೊ ಸರಿ, ನನಗೆ ಇದಕ್ಕಿಂತ ಸ್ವಲ್ಪ ಶಕ್ತಿವರ್ಧಕವಾಗಿರುವುದು ಬೇಕು; ನನಗೆ ಸ್ವಲ್ಪ ತತ್ತ್ವ ಬೇಕು, ಯುಕ್ತಿ ಬೇಕು, ನಾನು ಪ್ರತಿಯೊಂದನ್ನೂ ಕ್ರಮವಾಗಿ ವಿಚಾರ ಸರಣಿಯ ಮೂಲಕ ತಿಳಿಯಲಿಚ್ಛಿಸುವೆ” ಎಂದರೆ, “ತೊಲಗು” ಎನ್ನುವರೂ ಅವರು. ತೊಲಗಿ ಆಚೆ ಎಂದು ಹೇಳುವುದು ಮಾತ್ರವಲ್ಲ, ಸಾಧ್ಯವಾದರೆ ನಿಮ್ಮನ್ನು ಪರಲೋಕಕ್ಕೆ ಕಳುಹಿಸಲೂ ಸಿದ್ಧರಾಗಿರುವರು. ಇದರ ಪರಿಣಾಮವಾಗಿ ಏನಾಗುವುದೆಂದರೆ ಆ ಪಂಥವು  ಕೇವಲ ಭಾವಜೀವಿಗಳಿಗೆ ಮಾತ್ರ ಸಹಾಯ ಮಾಡಬಲ್ಲುದು; ಇತರರಿಗೆ ಸಹಾಯ ಮಾಡದಿರುವುದು ಮಾತ್ರವಲ್ಲ, ಅವರನ್ನು ನಾಶಮಾಡಲು  ಹವಣಿಸುವುದು, ಇತರರಿಗೆ ಸಹಾಯಮಾಡದಿರುವುದು ಮಾತ್ರವಲ್ಲ, ಅವರ ಪ್ರಾಮಾಣಿಕತೆಯನ್ನೂ ನಂಬದಿರುವುದು. ಅನಂತರ ತತ್ತ್ವಜ್ಞಾನಿಗಳಿರುವರು; ಅವರು ಭರತಖಂಡ ಮತ್ತು ಪ್ರಾಚ್ಯ ಧರ್ಮದ ವಿಷಯವನ್ನು ಕುರಿತು ಮಾತನಾಡುವರು; ದೊಡ್ಡ ದೊಡ್ಡ ಐವತ್ತು ಮಾತ್ರೆಗಳುಳ್ಳ ಮಾನಸಿಕ ಶಾಸ್ತ್ರದ ಪದಗಳನ್ನು ಉಪಯೋಗಿಸುವರು. ನನ್ನಂತಹ ಒಬ್ಬ ಸಾಧಾರಣ ಮನುಷ್ಯ ಅವರ ಹತ್ತಿರ ಹೋಗಿ ಆಧ್ಯಾತ್ಮಿಕ ಪ್ರವೃತ್ತಿಯವನಾಗಲು ನನಗೆ ಏನನ್ನಾದರೂ ಹೇಳುತ್ತೀರಾ? ಎಂದು ಪ್ರಶ್ನೆ ಮಾಡಿದರೆ, ಅವರು ಮೊದಲು ಮಾಡುವುದು ನಿಮ್ಮನ್ನು ನೋಡಿ ನಗುವುದು. “ಓ ಬುದ್ಧಿಯಲ್ಲಿ ನೀನು ನಮಗಿಂತ ಬಹಳ ಕೀಳು, ತತ್ತ್ವವನ್ನು ಹೇಗೆ ತಿಳಿಯಬಲ್ಲೆ?” ಎನ್ನುವರು. ಇವರೇ ಮೇಧಾವಿಗಳು, ಉಚ್ಚವರ್ಗದ ತಾತ್ತ್ವಿಕರು. ಬಂದ ದಾರಿಯಲ್ಲಿ ಹಿಂತಿರುಗಿ ಹೋಗುವುದಕ್ಕೆ ಹೇಳುವರು. ಅನಂತರ ಯೋಗಿಗಳ ಪಂಗಡದವರು ಇರುವರು. ಹಲವು ಲೋಕಗಳು, ಮನಸ್ಸಿನ ಹಲವು ಸ್ಥಿತಿಗಳು, ಮನಶ್ಶಕ್ತಿ ಯಾವುಯಾವುದನ್ನು ಸಾಧಿಸಬಲ್ಲುದು ಎಂಬ ಈ ವಿಷಯಗಳನ್ನು ಕುರಿತು ಅವರು ಮಾತನಾಡುವರು. ನೀವು ಸಾಧಾರಣ ಮನುಷ್ಯರಾಗಿದ್ದು ಅವರನ್ನು “ನಾನು ಏನಾದರೂ ಒಳ್ಳೆಯದನ್ನು ಮಾಡುವುದಕ್ಕೆ ಸಾಧ್ಯವಿದ್ದರೆ ಹೇಳಿ, ನಾನು ಹೆಚ್ಚು ಕಲ್ಪನಜೀವಿಯಲ್ಲ, ನನಗೆ ಯೋಗ್ಯವಾದುದನ್ನು ಕೊಡಬಲ್ಲಿರಾ” ಎಂದು ಕೇಳಿದರೆ ಅವರು ನಗುವರು. “ಕೇಳಿ ಆ ಮೂರ್ಖನ ಮಾತನ್ನು, ಅವನಿಗೆ ಏನೂ ಗೊತ್ತಿಲ್ಲ. ಅವನ ಬಾಳು ವ್ಯರ್ಥ” ಎನ್ನುವರು. ಇದು ಪ್ರಪಂಚದಲ್ಲೆಲ್ಲ ನಡೆಯುತ್ತಿದೆ. ವಿಭಿನ್ನ ಪಂಥಗಳನ್ನು ಸಾಧಿಸುವ ಈ ತೀವ್ರಗಾಮಿಗಳನ್ನೆಲ್ಲ ಒಂದು ಕೋಣೆಯಲ್ಲಿ ಸೇರಿಸಿ ಅವರ ಸುಂದರವಾದ ಅಣಕಿಸುವ ಭಾವಚಿತ್ರವನ್ನು ತೆಗೆಯಬೇಕೆಂದು ನನಗೆ ಇಚ್ಛೆಯಾಗುತ್ತದೆ!
ಒಬ್ಬರು ಮತ್ತೊಬ್ಬರನ್ನು ನೋಡಿ ನಗಬಹುದು. ಆದರೆ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಒಂದು ಸ್ಥಾನವಿದೆ. ಹಲವು ಜನರು ಹಲವು ರೀತಿ. ಇದು ಆವಶ್ಯಕ. ಒಂದು ಆದರ್ಶ ಧರ್ಮ ಎಂದಾದರೂ ಇರುವುದಾದರೆ ಅದು, ಇಂತಹ ವಿಭಿನ್ನ ಭಾವದವರನ್ನೆಲ್ಲಾ ಪೋಷಿಸುವಷ್ಟು ವಿಶಾಲವಾಗಿರಬೇಕು, ಉದಾರವಾಗಿರಬೇಕು. ತಾತ್ತ್ವಿಕನಿಗೆ ತತ್ತ್ವಶಕ್ತಿಯನ್ನು ನೀಡುವಂತಹದಿರಬೇಕು. ಭಕ್ತನಿಗೆ ಭಕ್ತನ ಹೃದಯವನ್ನು ನೀಡುವಂತಹದಿರಬೇಕು. ಆಚಾರಪರನಿಗೆ ಅದ್ಭುತ ಚಿಹ್ನೆ ಏನೇನನ್ನು ಒದಗಿಸಬಹುದೋ ಅದನ್ನೆಲ್ಲ ನೀಡುವಂತಹದಿರಬೇಕು. ಕವಿಗೆ ಬೇಕಾದಷ್ಟು ಕಲ್ಪನೆಗಳ ಜೊತೆಗೆ ಇನ್ನೂ ಹಲವು ವಸ್ತುಗಳನ್ನು ನೀಡುವಂತಹದಿರಬೇಕು. ಇಂತಹ ವಿಶಾಲ ಧರ್ಮವನ್ನು ನಿರ್ಮಿಸಬೇಕಾದರೆ ಧರ್ಮಗಳ ಮೂಲಕ್ಕೆ ಹೋಗಿ ಅವುಗಳೆಲ್ಲವನ್ನೂ ಸ್ವಾಗತಿಸಬೇಕು.