ಕೇವಲ ಭಗವತ್ ಕೇಂದ್ರಿತವಾಗಿದ್ದ ಧರ್ಮವನ್ನು ಮಾನವಕೇಂದ್ರಿತವನ್ನಾಗಿಯೂ ಪರಿವರ್ತಿಸಿದವರು ಸ್ವಾಮಿ ವಿವೇಕಾನಂದರು. ಸುಪ್ರಸಿದ್ಧ ಸಾಹಿತಿಗಳಾದ ಡಾ.ಜಿ.ಎಸ್. ಶಿವರುದ್ರಪ್ಪನವರು ವಿವೇಕಾನಂದರ ಈ ಧಾರ್ಮಿಕ ಕ್ರಾಂತಿಯನ್ನು ಕುರಿತು ಚರ್ಚಿಸಿದ್ದಾರೆ ಈ ಲೇಖನದಲ್ಲಿ.

ಸುಧಾರಣೆಯ ಮೂರು ಪ್ರಕ್ರಿಯೆಗಳು

ಯಾವುದೇ ಪರಂಪರೆಯ ಬಗ್ಗೆ ಒಬ್ಬ ನಿಜವಾದ ವಿಚಾರವಂತನು ತೋರುವ ಪ್ರತಿಕ್ರಿಯೆಗಳು ಸ್ಥೂಲವಾಗಿ ಮೂರು ಬಗೆಯವಾಗಿರುತ್ತವೆ ಎಂದು ಹೇಳಬಹುದು: ಒಂದು, ಶುದ್ಧೀಕರಣ ಪ್ರಕ್ರಿಯೆ; ಎರಡು, ನಿರಾಕರಣ ಪ್ರಕ್ರಿಯೆ; ಮೂರು, ಸುಧಾರಣಾ ಪ್ರಕ್ರಿಯೆ. ನಮ್ಮ ಪರಂಪರೆಯೊಳಗಿನ ನಿಜವಾದ ಆಚಾರ-ವಿಚಾರ-ನಂಬಿಕೆಗಳ ಮೇಲೆ ಕ್ರಮಕ್ರಮೇಣ ಅವೈಚಾರಿಕ ಹಾಗೂ ಕುರುಡುನಂಬಿಕೆಗಳ ಹಾವಸೆ ಹಬ್ಬಿ ಮೂಲ ವಿಚಾರಗಳು ಅಪವ್ಯಾಖ್ಯಾನಕ್ಕೆ ಒಳಗಾಗುವ, ಅಥವಾ ಮೂಲ ವಿಚಾರಗಳೆ ಮರೆಯಾಗುವ ಒಂದು ಸ್ಥಿತಿ ಪ್ರಾಪ್ತವಾದಾಗ, ನಿಜವಾದ ವಿಚಾರವಂತನು ಅವುಗಳಿಗೆ ಮೆತ್ತಿದ ಕೊಳೆಯನ್ನು ತೊಳೆದು, ಮೊದಲ ವಿಚಾರದ ಮೌಲಿಕತೆ ಪುನಃ ಪ್ರಕಾಶನಗೊಳ್ಳುವಂತೆ ಮಾಡುವ ಪ್ರಯತ್ನವನ್ನು ಶುದ್ಧೀಕರಣ ಪ್ರಕ್ರಿಯೆ ಎನ್ನಬಹುದು. ಆದರೆ ಒಂದು ಕಾಲದ ಆಚಾರ ವಿಚಾರಗಳು, ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ಸಿಕ್ಕು ಜೀವ ವಿರೋಧಿಯೂ, ಸ್ವಾರ್ಥಮೂಲವೂ ಆದ ಶೋಷಕ ಮಾಧ್ಯಮಗಳಾದಾಗ ನಿಜವಾದ ವಿಚಾರವಂತನು ಅವುಗಳನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸಬೇಕಾಗುತ್ತದೆ. ಇದನ್ನೆ ನಿರಾಕರಣ ಪ್ರಕ್ರಿಯೆ ಎನ್ನಬಹುದು. ಮೂರನೆಯದು ಸುಧಾರಣ ಪ್ರಕ್ರಿಯೆ : ಹಿಂದಿನ ಮೌಲಿಕವಾದ ತಿಳಿನಳಿಕೆಯ ಆಕೃತಿಗಳನ್ನು ವರ್ತಮಾನದ ಅಗತ್ಯಗಳಿಗೆ ತಕ್ಕಂತೆ ಮಾರ್ಪಡಿಸಿ ಹಾಗೂ ವ್ಯಾಖ್ಯಾನಿಸಿ, ನಮಗೆ ಸಂಗತವಾಗುವಂತೆ ಬಳಸಿಕೊಳ್ಳುವುದು. ಸ್ವಾಮಿ ವಿವೇಕಾನಂದರ ವೈಚಾರಿಕತೆಯಲ್ಲಿ ಈ ಮೂರೂ ಪ್ರಕ್ರಿಯೆಗಳೂ ಕ್ರಿಯಾಶೀಲವಾಗಿರುವುದನ್ನು ನಾವು ಗುರುತಿಸಬಹುದು.

ಧರ್ಮದಲ್ಲಿ ಮಾನವೀಯತೆ

ಸ್ವಾಮೀಜಿ ಚಿಕಾಗೋ ನಗರದ ಸರ್ವಧರ್ಮಸಮ್ಮೇಳನದ ವೇದಿಕೆಯ ಮೇಲೆ ಹಾಗೂ ಅನಂತರದ ಬೇರೆಬೇರೆಯ ಉಪನ್ಯಾಸಗಳಲ್ಲಿ ಹಿಂದೂ ಧರ್ಮದ ಮೌಲಿಕವಾದ ಚಿಂತನೆಗಳನ್ನು ಒಂದು ಬಗೆಯ ಧೀರೋದಾತ್ತತೆಯಿಂದ ವ್ಯಾಖ್ಯಾನಿಸಿದ್ದಾರೆ. ಆ ಸಮ್ಮೇಳನದ ಸಭಾಸದರನ್ನು ಉದ್ದೇಶಿಸಿ ಸಂಬೋಧಿಸಿದ ಕ್ರಮವೇ ನಿಜವಾದ ಧರ್ಮದ ವ್ಯಾಖ್ಯಾನವಾಗಿದೆ. ವಿವೇಕಾನಂದರು ‘ಅಮೆರಿಕಾದ ನನ್ನ ಸಹೋದರ ಸಹೋದರಿಯರೆ’ ಎಂದು ಸಂಬೋಧಿಸಿ, ಆ ಮಹಾಸಭಾಸದರ ಹೃದಯವನ್ನು ಗೆದ್ದುಬಿಟ್ಟರು. ಯಾವ ಧರ್ಮ ಜಗತ್ತಿನ ಜನತೆಯನ್ನು ಕೇವಲ ಸ್ತ್ರೀಪುರುಷರು ಮಾತ್ರವೆಂದು ನೋಡದೆ, ಅವರನ್ನು ತನ್ನ ಸಹೋದರ ಸಹೋದರಿಯರೆಂದು ಕಾಣುವ ಒಂದು ನಿಲುವನ್ನು ಪಡೆದುಕೊಂಡಿದೆಯೋ, ಅದು ನಿಜವಾಗಿಯೂ ಮಹತ್ತಾದ ಧರ್ಮವೇ ಸರಿ ಎಂಬುದು ಅಜ್ಞಾತವಾದ ರೀತಿಯಲ್ಲಿ ಆ ಸಮ್ಮೇಳನದ ಜನಾಂತರಂಗವನ್ನು ಸ್ಪರ್ಶಿಸಿಬಿಟ್ಟಿತು. ತಮ್ಮ ತಮ್ಮ ಧರ್ಮಗಳೇ ಶ್ರೇಷ್ಠವೆಂದು ತಿಳಿದು, ಅದನ್ನು ಪ್ರತಿಪಾದಿಸುವುದೆ ಮುಖ್ಯ ಉದ್ದೇಶವಾಗಿದ್ದ ಪ್ರತಿನಿಧಿಗಳ ನಡುವೆ, ನಿಜವಾದ ಧರ್ಮ ಮನುಷ್ಯರ ನಡುವಣ ಬಾಂಧವ್ಯಗಳನ್ನು ಗುರುತಿಸುವ ಸಾಧನ ಎಂಬುದನ್ನು ಪರೋಕ್ಷವಾಗಿ ಮನವರಿಕೆ ಮಾಡಿ ಕೊಟ್ಟನಂತರ ಸ್ವಾಮೀಜಿ ಹೇಳಿದ ಮತ್ತೊಂದೆರಡು ಮುಖ್ಯವಾದ ಮಾತುಗಳೆಂದರೆ: ‘ನಾವು ಸರ್ವಮತ ಸಹಿಷ್ಣುತೆಯನ್ನು ಒಪ್ಪುತ್ತೇವೆ. ಅಷ್ಟೇ ಅಲ್ಲ, ಸಕಲ ಧರ್ಮಗಳೂ ಸತ್ಯವೆಂದು ನಂಬುತ್ತೇವೆ. ಭಿನ್ನ ಭಿನ್ನ ನೆಲೆಗಳಿಂದ ಹುಟ್ಟಿದ ನದಿಗಳು ಬೇರೆ ಬೇರೆಯ ದಿಕ್ಕುಗಳಿಗೆ ಹರಿದರೂ ಕಡೆಗೆ ಅವೆಲ್ಲ ಕಡಲನ್ನು ಸೇರುವಂತೆ, ಈ ಜಗತ್ತಿನ ಮನುಷ್ಯರು ಅನುಸರಿಸುವ ವಿವಿಧ ಪಥಗಳೆಲ್ಲವೂ ಕಡೆಗೆ ಒಬ್ಬನೇ ಆದ ಪರಮಾತ್ಮನನ್ನು ಸೇರುತ್ತವೆ.’

ಸರ್ವಧರ್ಮಸಮ್ಮೇಳನದ ಸಂದರ್ಭದಲ್ಲಿ ಸ್ವಾಮೀಜಿ ಮಂಡಿಸಿದ ಈ ವೈಚಾರಿಕತೆಯ ನಿಲುವುಗಳು ಶ್ರೀರಾಮಕೃಷ್ಣರು ತಮ್ಮ ಸಾಕ್ಷಾತ್ಕಾರದ ಮೂಲಕ ಕಂಡು ಬೋಧಿಸಿದವುಗಳೇ. ನಿಜವಾದ ಧರ್ಮಕ್ಕೆ ಇರಬೇಕಾದ ಮಾನವಪ್ರೀತಿ, ಎಲ್ಲ ಧರ್ಮಗಳೂ ಸತ್ಯ ಎಂಬ ಗ್ರಹಿಕೆ, ಮತಗಳೆಲ್ಲವೂ ಪಥಗಳು ಎನ್ನುವ ನಿಲುವು, ಈ ಹೊತ್ತಿನ ಜಗತ್ತಿಗೆ ಎಷ್ಟು ಅಗತ್ಯವಾದ ಸತ್ಯಗಳು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಯುಗಸಂದೇಶ

‘ಮತಗಳೆಲ್ಲವೂ ಪಥಗಳು’ ಎಂಬ ಮಾತು ಮೇಲೆ ನೋಡಲು ತೀರಾ ಸರಳವೆಂಬಂತೆ ತೋರಿದರೂ ಮತ್ತು ಪರಂಪರಾಗತವಾದ ಹಿಂದೂ ಧರ್ಮದ ಒಳಗೆ ಅದು ಅಂತರ್ಗತವಾಗಿದ್ದರೂ, ಅದರ ಮೌಲಿಕತೆಯನ್ನು ಶ್ರೀರಾಮಕೃಷ್ಣ ಪರಮಹಂಸರಂತೆ, ಹಿಂದೂ ಧರ್ಮದ ಹಿನ್ನೆಲೆಯಲ್ಲಿ ಮಾತ್ರವಲ್ಲ, ಜಾಗತಿಕವಾದ ವಿವಿಧ ಧರ್ಮಗಳ ಮೂಲಮಾನದಲ್ಲೂ ತಮ್ಮ ಅಧ್ಯಾತ್ಮ ಪ್ರಯೋಗಶಾಲೆಯಲ್ಲಿ ಪರೀಕ್ಷಿಸಿ ಸಾಕ್ಷಾತ್ಕರಿಸಿಕೊಳ್ಳುವ ಪ್ರಯತ್ನವನ್ನು ಯಾರೂ ಮಾಡಿರಲಿಲ್ಲ ಆದಕಾರಣವೇ ಈ ಸನಾತನ ಸತ್ಯವು ಪರಮಹಂಸರ ಮೂಲಕ ವ್ಯಾಖ್ಯಾನಗೊಂಡು ಒಂದು ‘ಯುಗಸಂದೇಶ’ದ ಮಹತ್ವವನ್ನು ಪಡೆದುಕೊಂಡಿತು. ತಮ್ಮ ತಮ್ಮ ಮತಗಳೇ ಶ್ರೇಷ್ಠವೆಂಬ, ಅನ್ಯ ಧರ್ಮಗಳು ಅಷ್ಟೇನೂ ಶ್ರೇಷ್ಠವಲ್ಲವೆಂಬ ತಿಳಿವಳಿಕೆಯ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು ಪರಮಹಂಸರ ಈ ಮಹಾಸತ್ಯವನ್ನು ಅನನ್ಯವಾದ ರೀತಿಯಲ್ಲಿ ಚಿಕಾಗೋ ಸಮ್ಮೇಳನದಲ್ಲಿ ಪುನರ್ಭವಗೊಳಿಸಿದರು.

ಜನಸಮುದಾಯದ ಬಗ್ಗೆ ಕಳಕಳಿ

ಹಿಂದೂಧರ್ಮದ ಈ ಮಹಾತತ್ವಗಳನ್ನು ಕುರಿತು ಉಜ್ವಲವಾಗಿ ಪಶ್ಚಿಮದ ಜಗತ್ತಿನಲ್ಲಿ ವ್ಯಾಖ್ಯಾನಿಸಿದ ಸ್ವಾಮಿ ವಿವೇಕಾನಂದರು, ಇದೇ ಧರ್ಮ ಹಾಗೂ ಅದರ ಉದಾತ್ತ ವಿಚಾರಗಳು ಭಾರತದ ಪರಿಸರದಲ್ಲಿ ಹೇಗೆ ನಿಷ್ಪ್ರಯೋಜಕವಾಗಿದ್ದವು, ಅಥವಾ ಅಪವ್ಯಾಖ್ಯಾನಕ್ಕೆ ಒಳಗಾಗಿದ್ದವು ಎಂಬುದನ್ನು ಬಲ್ಲವರಾಗಿದ್ದರು. ಆದುದರಿಂದಲೆ ‘ಮನುಷ್ಯತ್ವದ ಘನತೆಯನ್ನು ಹಿಂದೂಧರ್ಮದಷ್ಟು ದೊಡ್ಡದಾಗಿ ಮತ್ತಾವ ಧರ್ಮವೂ ಎತ್ತಿ ಹಿಡಿಯುವುದಿಲ್ಲ; ಹಾಗೆಯೆ ದೀನದಲಿತರ ಕೊರಳನ್ನು ಹಿಂದೂಧರ್ಮದ ಹಾಗೆ ಮತ್ತಾವದೂ ಮೆಟ್ಟುವುದಿಲ್ಲ’ ಎಂಬ ಸತ್ಯವನ್ನು ಈ ದೇಶದ ಜನಕ್ಕೆ ಹೇಳಲು ಮರೆಯಲಿಲ್ಲ. ಅಷ್ಟೆ ಅಲ್ಲ, ಈ ದೇಶದ ವಾಸ್ತವ ಪರಿಸ್ಥಿತಿಯನ್ನು ಅವರು ಪರಿವ್ರಾಜಕರಾಗಿ ದೇಶಪರ್ಯಟನೆ ಮಾಡಿದ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಕಂಡು ಈ ದೇಶದ ಜನತೆಯ ಮೊದಲ ಅಗತ್ಯ ಯಾವುದು ಎಂಬುದನ್ನು ಅವರಂತೆ ಕಂಡುಕೊಂಡವರು ಯಾರೂ ಇರಲಿಲ್ಲ. ಈ ದೇಶದ ಸಮುದಾಯವು, ಒಂದು ಕಡೆ ರಾಜ ಮಹಾರಾಜರುಗಳ ಐಷಾರಾಮ ಪ್ರವೃತ್ತಿ ಗಳಿಂದ, ಹಳೆಯ ಆಚಾರ-ವಿಚಾರಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡು ಜನರನ್ನು ಶೋಷಿಸುತ್ತಿದ್ದ ಹಾಗೂ ದಾರಿ ತಪ್ಪಿಸುತ್ತಿದ್ದ ‘ಪುರೋಹಿತಷಾಹೀ’ ತಂತ್ರಗಳಿಂದ -ನಿರ್ಲಕ್ಷ್ಯಕ್ಕೆ ಒಳಗಾಗಿತ್ತು.

ಧರ್ಮ ಎಂದರೆ, ಮನುಷ್ಯನ ವಾಸ್ತವ ಬದುಕನ್ನು ಸುಧಾರಿಸುತ್ತ, ಅವನೊಳಗಿನ ಪರಮಾರ್ಥದ ಹಂಬಲವನ್ನು ಜಾಗ್ರತಗೊಳಿಸುತ್ತ, ಮಾನವ ಪ್ರೇಮವನ್ನು ವಿಸ್ತರಿಸುತ್ತ ಅವನನ್ನು ಸಹಜೀವಿಗಳ ಸೇವೆಯಲ್ಲಿ ತೊಡಗಿಸುವುದು – ಎನ್ನುವುದು ವಿವೇಕಾನಂದರಿಗೆ ಪ್ರಿಯವಾದ ಕಲ್ಪನೆಯಾಗಿದೆ.

ಒಂದು ರಾಷ್ಟ್ರದ ಹಣೆಯ ಬರಹವು ನಿರ್ಧಾರಿತವಾಗುವುದು ಕೇವಲ ಒಬ್ಬಿಬ್ಬರು ಮಹಾವ್ಯಕ್ತಿಗಳಿಂದ ಅಲ್ಲ; ಅದರ ಜನ ಸಮುದಾಯದಲ್ಲಿ ಸಂಭವಿಸುವ ಎಚ್ಚರದಿಂದ. ಆದರೆ ಈ ಜನಸಮುದಾಯವೇ, ಅನಕ್ಷರತೆ-ಬಡತನ-ಮೂಢನಂಬಿಕೆಗಳಿಂದ ತುಂಬಿರುವಾಗ, ಈ ಜನತೆಯಲ್ಲಿ ಎಚ್ಚರವನ್ನು ಹುಟ್ಟಿಸಿ ಅವರನ್ನು ಮೊದಲು ಮನುಷ್ಯರನ್ನಾಗಿ ಮಾಡುವುದು ಹೇಗೆ? “ಈ ಜನಸಾಮಾನ್ಯರನ್ನು ಹೀಗೆ ನಿರ್ಲಕ್ಷಿಸಿರುವುದೇ ಒಂದು ರಾಷ್ಟ್ರೀಯ ಮಹಾಪಾಪ’ವಲ್ಲವೆ ಎಂಬ ಚಿಂತನೆಗಳು ಅವರ ಪರ್ಯಟನದ ಸಂದರ್ಭದಲ್ಲಿ ಸ್ವಾಮೀಜಿಯ ಅಂತರಂಗವನ್ನು ಕಲಕಿದ ಸಂಗತಿಗಳಾಗಿದ್ದವು. ಆದ ಕಾರಣವೇ ಕನ್ಯಾಕುಮಾರಿಯ ನಡುಗಡ್ಡೆಯ ವಿವಿಕ್ತವೂ ಪ್ರಶಾಂತವೂ ಆದ ಬಂಡೆಯ ಮೇಲೆ ಕೂತ, ಶ್ರೀರಾಮಕೃಷ್ಣ ಪರಮಹಂಸರ ಕೃಪೆಯಿಂದ ನಿರ್ಮಿಕಲ್ಪ ಸಮಾಧಿಯನ್ನು ಪಡೆದ ಈ ಸಂನ್ಯಾಸಿಯ ಧ್ಯಾನದ ವಸ್ತು ‘ದೇವ’ರಾಗದೆ ಮನುಷ್ಯನನ್ನು, ಆತನ ವಾಸ್ತವಸ್ಥಿತಿಯನ್ನು ಕುರಿತದ್ದಾಗಿತ್ತು ಎನ್ನುವುದು ಪ್ರತ್ಯೇಕವಾಗಿ ಗುರುತಿಸಿಕೊಳ್ಳಬೇಕಾದ ಅಂಶವಾಗಿದೆ. ‘ನಾವು ಇಷ್ಟೊಂದು ಜನ ಸಂನ್ಯಾಸಿಗಳು ನಾಡಿನ ತುಂಬ ತಿರುಗುತ್ತ, ತತ್ವ ಬೋಧನೆ ಮಾಡುತ್ತ ಏನು ಮಾಡಿದ್ದೇವೆ? ಇದೆಲ್ಲ ಎಂಥ ಹುಚ್ಚುತನ! ಅಜ್ಞಾನ ದಾರಿದ್ರ್ಯಗಳಿಂದ ಕೇವಲ ಪಶುಗಳಂತೆ ಬದುಕುತ್ತಿರುವ ಈ ನಾಡಿನ ಜನರಿಗೆ ನಾವೇನು ಮಾಡಿದ್ದೇವೆ? ನಾವು ಹಳ್ಳಿ ಹಳ್ಳಿಗಳಿಗೂ ಹೋಗಬೇಕು. ಜನಕ್ಕೆ ಶಿಕ್ಷಣ ನೀಡಬೇಕು. ಜನಸಾಮಾನ್ಯರನ್ನು ಮೇಲೆತ್ತಬೇಕು.’ ಈ ಮಾನವಕೇಂದ್ರಿತ ಕಾಳಜಿಗಳು, ವಿವೇಕಾನಂದರು ಪ್ರಸಾರ ಮಾಡಲಪೇಕ್ಷಿಸಿದ ಹೊಸಧರ್ಮದ ಬುನಾದಿಯಾಗಿವೆ. “ಒಬ್ಬ ವಿಧವೆಯ ಕಣ್ಣೀರನ್ನು ಒರೆಸಲಾರದ, ಒಂದು ಅನಾಥ ಶಿಶುವಿಗೆ ಒಂದು ತುತ್ತು ಅನ್ನವನ್ನು ಕೊಡಲಾಗದ ದೇವರಲ್ಲೂ ಧರ್ಮದಲ್ಲೂ ನನಗೆ ನಂಬಿಕೆಯಿಲ್ಲ.” ಎಂದು ಘೋಷಿಸಿದರು. “ಸ್ವರ್ಗವಿದೆಯೋ ಇಲ್ಲವೋ, ನರಕವಿದೆಯೋ ಇಲ್ಲವೋ ಇದೆಲ್ಲ ಯಾರಿಗೆ ಬೇಕು? ನಮ್ಮೆದುರಿಗೆ ದುಃಖಭೂಯಿಷ್ಠವಾದೊಂದು ಪ್ರಪಂಚವಿದೆ, ಆ ದುಃಖವನ್ನು ಕಡಿಮೆ ಮಾಡಲು ಬುದ್ಧನಂತೆ ಒಂದಿಷ್ಟು ಪ್ರಯತ್ನ ಮಾಡಿರಿ’-ಇದು ಅವರ ನಿಲುವು. ನಿಜವಾದ ಕ್ರಾಂತಿಕಾರಿಯಾದವನ್ನು ಈ ಬಗೆಯ ವಾಸ್ತವ ಪ್ರಜ್ಞೆಯುಳ್ಳ ಮಹಾಮಾನವತಾವಾದಿಯಾಗಿರುತ್ತಾನೆ, ಅಪಾರವಾದ ಅನುಕಂಪದಿಂದ ಜನರ ನೋವಿಗೆ ಸ್ಪಂದಿಸಬಲ್ಲವನಾಗಿರುತ್ತಾನೆ. ವಿವೇಕಾನಂದರು ಅಂಥ ಕ್ರಾಂತಿಕಾರೀ ಸಂತರಾಗಿದ್ದಾರೆ.

ಮನುಷ್ಯ ನಿರ್ಮಾಣವೇ ಧರ್ಮದ ಉದ್ದೇಶ

ದೇವರಾಗಲೀ ಧರ್ಮವಾಗಲೀ ಇರುವುದು ಮೂಲತಃ ಮನುಷ್ಯರಿಗಾಗಿ ಹಾಗೂ ಮನುಷ್ಯರ ಶ್ರೇಯಸ್ಸಿಗಾಗಿ. ವಿವೇಕಾನಂದರು ಧರ್ಮದ ನಿರ್ವಚನ ಮಾಡುತ್ತ
Religion is Man-making ಎಂದು ಹೇಳಿದರು. ನಿಜವಾದ ಮನುಷ್ಯನನ್ನು ನಿರ್ಮಾಣ ಮಾಡುವುದೇ ಧರ್ಮದ ಉದ್ದೇಶ. ತನ್ನ ಸ್ವಂತಿಕೆಯನ್ನು ಕಳೆದುಕೊಂಡ, ಅವೈಚಾರಿಕತೆಯಲ್ಲಿ ಸ್ಥಗಿತಗೊಂಡ ಮನುಷ್ಯನನ್ನು, ವಿವೇಚನೆಯನ್ನುಳ್ಳ ಮನುಷ್ಯನನ್ನಾಗಿ, ಧೈರ್ಯಶಾಲಿಯಾದ ಮನುಷ್ಯನನ್ನಾಗಿ, ಸಹಜೀವಿ ಗಳಿಗೆ ಸ್ಪಂದಿಸುವ ಮನುಷ್ಯನನ್ನಾಗಿ, ದೈವಶ್ರದ್ಧೆಯುಳ್ಳ ಮನುಷ್ಯನನ್ನಾಗಿ ನಿರ್ಮಾಣ ಮಾಡುವಂಥದ್ದು ಧರ್ಮ. ಅಂದರೆ ಅದು ಮಾನವ ಕೇಂದ್ರಿತ ಕಾಳಜಿಗಳನ್ನುಳ್ಳ ಧರ್ಮದ ಕಲ್ಪನೆ; ಕೇವಲ ದೈವಕೇಂದ್ರಿತ ಕಾಳಜಿಗಳನ್ನುಳ್ಳ ಧರ್ಮದ ಕಲ್ಪನೆ ಅಲ್ಲ. ಈ ಮಾತನ್ನು ಸ್ವಲ್ಪ ವಿವರಿಸುವುದು ಅಗತ್ಯ ಎಂದು ತೋರುತ್ತದೆ: ಧರ್ಮದ ಕಲ್ಪನೆಗಳನ್ನು ಸ್ಥೂಲವಾಗಿ ಎರಡು ವಿಧ ಅನ್ನಬಹುದು: ಒಂದು ದೈವಕೇಂದ್ರಿತ, ಮತ್ತೊಂದು ಮಾನವ ಕೇಂದ್ರಿತ.

ದೈವ ಹಾಗೂ ಮಾನವ ಕೇಂದ್ರಿತ ಧರ್ಮ

ದೈವಕೇಂದ್ರಿತ ಧಾರ್ಮಿಕ ನಿಲುವಿನ ಪ್ರಕಾರ ಮನುಷ್ಯನ ಮೊದಲ ಗುರಿ ದೈವ ಸಾಕ್ಷಾತ್ಕಾರ, ಆದಕಾರಣ ಈ ಲೋಕದಿಂದ ಪಾರಾಗಿ ಅಥವಾ ದೂರವಾಗಿ, ಏಕಾಂಗಿಯಾಗಿ ತನ್ನ ನಿರಂತರ ಸಾಧನೆಯಿಂದ ಸಾಕ್ಷಾತ್ಕಾರವನ್ನು ಪಡೆದುಕೊಳ್ಳುವುದು. ಈ ದೈವಕೇಂದ್ರಿತ ದೃಷ್ಟಿಗೆ ಸಾಮಾಜಿಕ ದುಃಖ, ಸಂಕಟಗಳಾಗಲಿ, ಬಡತನವಾಗಲಿ, ಶೋಷಣೆಯಾಗಲಿ ಅಷ್ಟು ಮುಖ್ಯವಲ್ಲ. ಸಾಧಕನಾದವನು ಈ ಲೋಕದ ನೋವು-ಸಂಕಟಗಳನ್ನೆಲ್ಲ ಸಹಿಸಿಕೊಂಡು ಭಗವತ್ಪರವಾದ ವ್ಯಾಕುಲವನ್ನು ಬೆಳೆಯಿಸಿಕೊಳ್ಳಬೇಕು. ನೋವು ಬಡತನ ಇತ್ಯಾದಿಗಳೇನಿದ್ದರೂ ವ್ಯಕ್ತಿತ್ವದ ದೃಢತೆಯನ್ನು ಪರೀಕ್ಷಿಸುವ ನಿಕಷಗಳು.

ಆದರೆ ಮಾನವಕೇಂದ್ರಿತ ಧಾರ್ಮಿಕ ನಿಲುವು ಮುಖ್ಯವಾಗಿ ತನ್ನ ಆತ್ಮಸಾಕ್ಷಾತ್ಕಾರದ ಜತೆಯಲ್ಲಿ, ಅಥವಾ ಆತ್ಮ ಸಾಕ್ಷಾತ್ಕಾರಕ್ಕಿಂತ, ಸುತ್ತಣ ಜಗತ್ತಿನ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುತ್ತ, ಸೇವೆಯ ಮೂಲಕ ತನ್ನ ಮೊಕ್ಷವನ್ನು ಸಾಧಿಸಿಕೊಳ್ಳಬಹುದೆಂಬ ಶ್ರದ್ಧೆಯನ್ನು ಪ್ರತಿಪಾದಿಸುತ್ತದೆ. ಧರ್ಮ ಎಂದರೆ, ಮನುಷ್ಯನ ವಾಸ್ತವ ಬದುಕನ್ನು ಸುಧಾರಿಸುತ್ತ, ಅವನೊಳಗಿನ ಪರಮಾರ್ಥದ ಹಂಬಲವನ್ನು ಜಾಗ್ರತಗೊಳಿಸುತ್ತ, ಮಾನವ ಪ್ರೇಮವನ್ನು ವಿಸ್ತರಿಸುತ್ತ ಅವನನ್ನು ಸಹಜೀವಿಗಳ ಸೇವೆಯಲ್ಲಿ ತೊಡಗಿಸುವುದು-ಎನ್ನುವುದು ವಿವೇಕಾನಂದರಿಗೆ ಪ್ರಿಯವಾದ ಕಲ್ಪನೆಯಾಗಿದೆ. ಧ್ಯಾನ-ಪೂಜೆ -ಪ್ರಾರ್ಥನೆ ಮೊದಲಾದವುಗಳ ಮೂಲಕ ಮುಕ್ತಿ ಲಾಭ ಮಾಡಿಕೊಳ್ಳಬೇಕೆನ್ನುವುದೇ ಬದುಕಿನ ಆದರ್ಶವೆಂದು ತಿಳಿದಿತ್ತು ಸಾಂಪ್ರದಾಯಿಕ ಸಂನ್ಯಾಸೀ ಪರಂಪರೆ. ಜೀವರ ಸೇವೆಯ ಮೂಲಕವಾಗಿಯೂ ಸಾಧಕ ತನ್ನ ಮುಕ್ತಿಯನ್ನು ಸಾಧಿಸಬಹುದು ಎಂಬ ಹೊಸ ಎಚ್ಚರಕ್ಕೆ ಅದನ್ನು ಹೊರಳಿಸಿ ಆಭಿನವ ಸಂನ್ಯಾಸೀ ಪರಂಪರೆಯೊಂದರ ನಿರ್ಮಾಣಕ್ಕೆ ಕಾರಣವಾದರು ಸ್ವಾಮಿ ವಿವೇಕಾನಂದರು. ಅವರ ವೈಚಾರಿಕಕ್ರಾಂತಿಯ ಪರಿಣಾಮವೇ ಶ್ರೀರಾಮಕೃಷ್ಣ ಮಹಾಸಂಘ ಹಾಗೂ ಅದರ ಪ್ರತಿನಿಧಿಯಂತಿರುವ ಆಶ್ರಮಗಳು ಹಾಗೂ ಮಠಗಳು.

ಧರ್ಮವು ಕೇವಲ ಮುಕ್ತಿಸಾಧನವಾಗಿಯಾಗಲಿ ಕೇವಲ ಗೊಡ್ಡು ಆಚರಣೆಗಳ ಸಂಗ್ರಹವಾಗಿಯಾಗಲಿ ಉಳಿಯದೆ ಅದು ಸಾಮಾಜಿಕ ಸ್ಥಿತಿಗತಿಗಳಿಗೆ ಸ್ಪಂದಿಸುವಂತೆ ಮಾಡಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ.