ನುಡಿಮುತ್ತುಗಳು ೧

ಮೃಗಸದೃಶನಾದವನನ್ನು ಮಾನವನನ್ನಾಗಿ ಮಾಡುವ, ಮಾನವನನ್ನು ದೇವನನ್ನಾಗಿ ಮಾಡುವ ಭಾವನೆಯೇ ಧರ್ಮ.

ನುಡಿಮುತ್ತುಗಳು ೨

ಮನುಷ್ಯ ಮತ್ತು ದೇವರು ಎಂಬುದರ ನಿರೂಪಣೆ ಹೀಗಿದೆ : ಮನುಷ್ಯ ಅನಂತ ವೃತ್ತದಂತೆ. ಅದರ ಸುತ್ತಳತೆ ಎಲ್ಲಿಯೂ ಇಲ್ಲ. ಕೇಂದ್ರ ಮಾತ್ರ ಒಂದು ಕಡೆ ಇದೆ. ದೇವರು ಅನಂತ ವೃತ್ತದಂತೆ,ಅವನ ಸುತ್ತಳತೆ ಎಲ್ಲಿಯೂ ಇಲ್ಲ, ಕೇಂದ್ರ ಎಲ್ಲಾ ಕಡೆಯಲ್ಲಿಯೂ ಇದೆ.

ನುಡಿಮುತ್ತುಗಳು ೩

ದೇವರಿಗೂ ಸೈತಾನನಿಗೂ ಇರುವ ವ್ಯತ್ಯಾಸವೇ ನಿಃಸ್ವಾರ್ಥತೆ ಮತ್ತು ಸ್ವಾರ್ಥಪರತೆಯಲ್ಲಿದೆ. ಸೈತಾನನಿಗೆ ದೇವರಷ್ಟೇ ಜ್ಞಾನವಿದೆ, ಆದರೆ ಪಾವಿತ್ರ್ಯತೆ ಇಲ್ಲ. ಅದಕ್ಕೆ ಅವನು ಸೈತಾನನಾಗಿರುವುದು. ಆಧುನಿಕ ಪ್ರಪಂಚಕ್ಕೂ ಇದನ್ನೇ ಅನ್ವಯಿಸಿ. ಪವಿತ್ರತೆಯೇ ಇಲ್ಲದ ವಿಪರೀತ ಜ್ಞಾನ ಮತ್ತು ಶಕ್ತಿ ಮನುಷ್ಯರನ್ನು ಸೈತಾನರನ್ನಾಗಿ ಮಾಡುವುವು.

ನುಡಿಮುತ್ತುಗಳು ೪

ಪುಣ್ಯ ನಮ್ಮನ್ನು ಉದ್ಧರಿಸುವುದು, ಪಾಪ ನಮ್ಮನ್ನು ಅವನತಿಗೆ ಒಯ್ಯುವುದು. ಮಾನವನು ಮೂರು ಗುಣಗಳಿಂದಾಗಿರುವನು. ಅವು ಮೃಗೀಯ, ಮಾನವೀಯ, ಹಾಗೂ ದೈವೀಗುಣಗಳು. ಯಾವುದು ನಿನ್ನಲ್ಲಿ ದೈವಿಕತೆಯನ್ನು ವೃದ್ಧಿ ಮಾಡುವುದೋ ಅದೇ ಪುಣ್ಯ; ಯಾವುದು ನಿನ್ನಲ್ಲಿ ಮೃಗೀಯತೆಯನ್ನು ವೃದ್ಧಿಮಾಡುವುದೋ ಅದೇ ಪಾಪ. ನೀನು ಮೃಗೀಯ ಸ್ವಭಾವವನ್ನು ನಾಶಮಾಡಿ ಮಾನವನಾಗಬೇಕು ; ಅಂದರೆ ನಿನ್ನಲ್ಲಿ ಪ್ರೀತಿ ವಿಶ್ವಾಸ ದಾನ ಮುಂತಾದುವುಗಳು ಇರಬೇಕು. ನಂತರ ನೀನು ಅದನ್ನೂ ದಾಟಬೇಕು. ಸಚ್ಚಿದಾನಂದ ಸ್ವರೂಪನಾಗಬೇಕು. ಸುಡದ ಬೆಂಕಿಯಂತೆ ಇರಬೇಕು ; ಅದ್ಭುತವಾಗಿ ಪ್ರೇಮಮಯಿಯಾಗಿರಬೇಕು. ಆದರೆ ಮಮತೆಯ ದೌರ್ಬಲ್ಯ ಇರಬಾರದು, ಹಾಗೂ ದುಃಖದ ಬೇಗೆಯಿರಬಾರದು.

ನುಡಿಮುತ್ತುಗಳು ೫

ನಿಃಸ್ವಾರ್ಥತೆಯೇ ದೇವರು. ಓರ್ವನು ಚಿನ್ನದ ಅರಮನೆಯಲ್ಲಿ ರಾಜಾಸನದ ಮೇಲೆ ಕುಳಿತುಕೊಂಡು ನಿಃಸ್ವಾರ್ಥನಾಗಿರಬಹುದು. ಆಗ ಆತನು ಈಶ್ವರನಲ್ಲಿ ವಾಸವಾಗಿರುತ್ತಾನೆ. ಮತ್ತೋರ್ವನು ಒಂದು ಗುಡಿಸಲಿಲ್ಲ ವಾಸಮಾಡುತ್ತಾ, ಚಿಂದಿಯನ್ನು ಹೊದ್ದುಕೊಂಡು, ಪ್ರಪಂಚದಲ್ಲಿ ತನ್ನದೆಂಬುದಾವುದೂ ಇಲ್ಲದೆ ರಿಕ್ತನಾಗಿರಬಹುದು. ಆದರೂ ಆತನು ಸ್ವಾರ್ಥಪರನಾಗಿದ್ದಲ್ಲಿ, ಆತನು ಈ ಪ್ರಪಂಚದಲ್ಲಿ ಮುಳುಗಿರುವವನು.

ನುಡಿಮುತ್ತುಗಳು ೬

ನೀವು ಧಾರ್ಮಿಕರಾಗುತ್ತಿರುವಿರಿ ಎನ್ನುವುದಕ್ಕೆ ಮೊದಲನೆ ಗುರುತೆ ನೀವು ಹೆಚ್ಚು ಉಲ್ಲಾಸಭರಿತರಾಗಿರುವುದು. ಒಬ್ಬ ಜೋಲು ಮುಖಹಾಕಿ ಕೊಂಡಿದ್ದರೆ ಅವನಿಗೆ ಏನೋ ಅಗ್ನಿ ಮಾಂದ್ಯವಿರಬಹುದೇ ಹೊರತು ಎಂದಿಗೂ ಅದು ಧಾರ್ಮಿಕತೆಯ ಕುರುಹಲ್ಲ... ದುಃಖ ಪಾಪದಿಂದಾದುದು, ಮತ್ತಾವುದರಿಂದಲೂ ಅಲ್ಲ. ಹ್ಯಾಪುಮೋರೆ ಹಾಕಿ ಕೊಂಡಿರುವವರೊಡನೆ ನಿಮಗೇನು ಕೆಲಸ? ಅದು ಭಯಂಕರವಾದುದು. ಅಳುಮೋರೆ ಇದ್ದರೆ ಅಂದು ಹೊರಗೆ ಹೋಗಬೇಡಿ . ಕೋಣೆಯಲ್ಲೇ ಕುಳಿತುಕೊಳ್ಳಿ. ಈ ರೋಗವನ್ನು ಪ್ರಪಂಚಕ್ಕೆ ಹರಡುವುದಕ್ಕೆ ನಿಮಗೆ ಯಾವ ಅಧಿಕಾರವಿದೆ?

ನುಡಿಮುತ್ತುಗಳು ೭

ಜಗತ್ತಿನ ಇತಿಹಾಸದಿಂದ ಮಹಾಪುರುಷರ ಶಕ್ತಿಯ ಮೂಲವು ಎಲ್ಲಿದೆ ಎಂಬುದು ಗೊತ್ತಾಗಿಲ್ಲವೆ? ಅದು ಎಲ್ಲಿತ್ತು? ಅವರ ಬುದ್ಧಿ ಶಕ್ತಿಯಲ್ಲಿತ್ತೇನು? ಅವರಲ್ಲಿ ಯಾರಾದರೂ ಸೂಕ್ಷ್ಮತರ್ಕದ ಮೇಲೆ ಅಥವಾ ತತ್ತ್ವಗ್ರಂಥದ ಮೇಲೆ ಚಮತ್ಕಾರವಾದ ಪುಸ್ತಕವನ್ನು ಬರೆದರೆ? ಒಬ್ಬರೂ ಇಲ್ಲ. ಅವರು ಎಲ್ಲೋ ಸ್ವಲ್ಪ ಮಾತನಾಡಿದರು. ಕ್ರಿಸ್ತನಂತೆ ನೀವು ಇತರರಿಗಾಗಿ ಮರುಗಬಲ್ಲವರಾದರೆ ಕ್ರಿಸ್ತರಾಗುವಿರಿ. ಬುದ್ಧನಂತೆ ಹಾಗೆ ಮಾಡಿದರೆ ಬುದ್ಧರಾಗುವಿರಿ. ಹೃದಯವಂತಿಕೆಯೇ ಜೀವಶಕ್ತಿ ಮತ್ತು ಪೌರುಷ. ಇದಿಲ್ಲದೆ ಬುದ್ಧಿಯ ಕಸರತ್ತು ಎಷ್ಟಿದ್ದರೂ ದೇವರನ್ನು ಸೇರುವುದಕ್ಕೆ ಆಗುವುದಿಲ್ಲ.

ನುಡಿಮುತ್ತುಗಳು ೮

ಒಂದು ಮಾತಿನಲ್ಲಿ ಹೇಳುವುದಾದರೆ, ವೇದಾಂತದ ಆದರ್ಶವೇ, ಮಾನವನ ನೈಜಸ್ಥಿತಿಯನ್ನು ಅರಿಯುವುದು. ನಿನ್ನ ಕಣ್ಣೆದುರಿಗೆ ಇರುವ ದೇವರ ವ್ಯಕ್ತರೂಪವಾದ ಸಹೋದರ ಮಾನವನನ್ನೇ ಪೂಜಿಸಲು ಆಗದೆ ಇದ್ದರೆ, ಅವ್ಯಕ್ತನಾದ ದೇವರನ್ನು ನೀನು ಹೇಗೆ ಪೂಜಿಸಬಲ್ಲೆ ಎಂಬುದೇ ವೇದಾಂತದ ಸಂದೇಶ.

ನುಡಿಮುತ್ತುಗಳು ೯

ನೀವು ನಿಜವಾಗಿಯೂ ಪರಿಶುದ್ಧರಾಗಿದ್ದರೆ ಹೊರಗೆ ಕಳಂಕವನ್ನು ಹೇಗೆ ನೋಡುತ್ತೀರಿ? ಏಕೆಂದರೆ ಯಾವುದು ಅಂತರಂಗದಲ್ಲಿದೆಯೋ ಅದೇ ಬಾಹ್ಯದಲ್ಲಿದೆ. ನಮ್ಮಲ್ಲಿ ಮಲಿನತೆಯಿಲ್ಲದೆ ಹೊರಗೆ ಮಲಿನತೆಯನ್ನು ನೋಡಲಾರೆವು. ಇದು ವೇದಾಂತದ ಒಂದು ಅನುಷ್ಠಾನ ಭಾಗ. ನಾವೆಲ್ಲ ಇದನ್ನು ನಮ್ಮ ಜೀವನದಲ್ಲಿ ಆಚರಣೆಗೆ ತರಲು ಪ್ರಯತ್ನಿಸುತ್ತೇವೆ ಎಂಬ ಭರವಸೆ ನನಗಿದೆ.

ನುಡಿಮುತ್ತುಗಳು ೧೦

ನಿಮ್ಮ ದೈವತ್ವವೇ ದೇವರಿಗೆ ಪ್ರಮಾಣ, ನೀವು ಒಬ್ಬ ಮಹಾ ಪುರುಷರಲ್ಲದೇ ಇದ್ದರೆ ದೇವರ ವಿಚಾರವಾಗಿ ಸತ್ಯವಾದುದು ಯಾವುದೂ ಇರುತ್ತಿರಲಿಲ್ಲ. ನೀವು ದೇವರಲ್ಲದೆ ಇದ್ದರೆ ಮತ್ತಾವ ದೇವರೂ ಎಂದೂ ಇರಲಿಲ್ಲ ಮುಂದೆಯೂ ಇರುವುದಿಲ್ಲ. ಇದೇ ನಾವು ಅನುಸರಿಸಬೇಕಾದ ಆದರ್ಶವೆಂದು ವೇದಾಂತ ಸಾರುವುದು. ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ದೇವಾಂಶ ಪುರುಷರಾಗಬೇಕು. ನೀವು ಆಗಲೇ ಅದಾಗಿರುವಿರಿ. ಅದನ್ನು ನೀವು ತಿಳಿದುಕೊಳ್ಳಬೇಕಷ್ಟೆ. ಆತ್ಮನಿಗೆ ಅಸಾಧ್ಯವಾದುದು ಏನಾದರೂ ಇದೆ ಎಂದು ಎಂದೂ ತಿಳಿಯಬೇಡಿ. ಹಾಗೆ ಹೇಳುವುದೇ ನಾಸ್ತಿಕತೆ. ಪಾಪವೇನಾದರೂ ಇದ್ದರೆ, ನೀವು ನಿರ್ಬಲರೆಂದೂ, ಉಳಿದವರು ನಿರ್ಬಲರೆಂದೂ ಹೇಳುವುದೇ ಮಹಾಪಾಪ.

ನುಡಿಮುತ್ತುಗಳು ೧೧

ವೇದಾಂತವಾದರೋ, ದೇವರಲ್ಲದ ವಸ್ತು ಮತ್ತಾವುದೂ ಇಲ್ಲ ಎನ್ನುತ್ತದೆ.... ಜೀವಂತನಾಗಿರುವ ದೇವರು ನಿಮ್ಮಲ್ಲಿರುವನು. ಆದರೂ ಕೆಲಸಕ್ಕೆ ಬಾರದ ಕಟ್ಟುಕಥೆ ನಂಬಿ ಚರ್ಚು ಗುಡಿ ಇವನ್ನು ಕಟ್ಟುತ್ತಿರುವಿರಿ. ಮನುಜ ದೇಹದಲ್ಲಿರುವ ಜೀವಾತ್ಮವೊಂದೆ ನಾವು ಪೂಜಿಸಬೇಕಾದ ವಸ್ತು. ಎಲ್ಲ ಪ್ರಾಣಿಗಳ ದೇಹವೂ ಕೂಡ ದೇವರ ಗುಡಿಯೇನೋ ಹೌದು. ಆದರೆ ಮಾನವನದು ಅತ್ಯುತ್ತಮವಾದುದು, ಕಟ್ಟಡಗಳಲ್ಲಿ ತಾಜ್‌ಮಹಲ್ ಇದ್ದಂತೆ. ಅದರಲ್ಲಿ ನನಗೆ ಪೂಜಿಸಲು ಆಗದೆ ಇದ್ದರೆ ಉಳಿದ ಎಂತಹ ದೇವಸ್ಥಾನಗಳಿಂದಲೂ ಪ್ರಯೋಜನವಿಲ್ಲ.

ನುಡಿಮುತ್ತುಗಳು ೧೨

ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ; ಆಚರಣೆಯಲ್ಲಿ. ಒಳ್ಳೆಯವನಾಗಿರುವುದು ಮತ್ತು ಒಳ್ಳೆಯದನ್ನು ಮಾಡುವುದು-ಇದೇ ಧರ್ಮದ ಸರ್ವಸ್ವ. ಕೇವಲ 'ದೇವರೇ' 'ದೇವರೇ' ಎಂದು ಕೂಗುವವನಲ್ಲ, ಆ ತಂದೆಯ ಇಚ್ಛೆಯನ್ನು ಕಾರ್ಯಗತಗೊಳಿಸುವವನು ಅವನಿಗೆ ಪರಿಯನು.

ನುಡಿಮುತ್ತುಗಳು ೧೩

ಯಾವುದು ನಮ್ಮ ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ದೌರ್ಬಲ್ಯಕ್ಕೆ ಕಾರಣವೋ ಅದನ್ನು ನಿಮ್ಮ ಕಾಲು ಬೆರಳುಗಳಿಂದಲೂ ಮುಟ್ಟಬೇಡಿ. ಮನುಷ್ಯನ ಅಂತರಂಗದಲ್ಲಿ ಸ್ವಾಭಾವಿಕವಾಗಿ ಹುದುಗಿರುವ ಶಕ್ತಿಯನ್ನು ವ್ಯಕ್ತಗೊಳಿಸುವುದೇ ಧರ್ಮ. ಅನಂತ ಶಕ್ತಿಯ ಸ್ಪ್ರಿಂಗು ಸುರುಳಿಸುತ್ತಿಕೊಂಡು ನಮ್ಮ ಪುಟ್ಟದೇಹದಲ್ಲಿರುವುದು. ಅದು ಹರಡುತ್ತಿದೆ.... ಇದೇ ಮಾನವನ ಇತಿಹಾಸ, ಅವನ ಧರ್ಮ, ನಾಗರಿಕತೆ ಅಥವಾ ಪ್ರಗತಿ.

ನುಡಿಮುತ್ತುಗಳು ೧೪

ಮನುಷ್ಯನಿಗೆ ಶಾಂತಿ ನೆಮ್ಮದಿಯನ್ನು ತರುವುದೇ ಧರ್ಮದ ಮೂಲ ಉದ್ದೇಶ. ನಂತರ ಸುಖವಾಗಿರಬಹುದೆಂದು ಈ ಜೀವನದಲ್ಲಿ ಯಾತನೆಯನ್ನನುಭವಿಸುವುದು ಜಾಣತನವಲ್ಲ. ಯಾರೇ ಆಗಲಿ ಈಗ ಇಲ್ಲಿ ಸುಖಸಂತೋಷದಿಂದಿರಬೇಕು. ಯಾವ ಧರ್ಮ ಇವುಗಳನ್ನು ತರಬಲ್ಲದೋ ಅದೇ ಮಾನವಜನಾಂಗದ ನಿಜವಾದ ಧರ್ಮ.

ನುಡಿಮುತ್ತುಗಳು ೧೫

ಧರ್ಮವು ಯಾವಾಗಲಾದರೂ ಜಯಪ್ರದವಾಗಬೇಕಾದರೆ ಅದಕ್ಕೆ ಆರ್ಥಿಕ ಬೆಲೆ ಇರಬೇಕು. ಸಾವಿರಾರು ಮತಗಳು ಪರಸ್ಪರ ಅಧಿಕಾರಕ್ಕಾಗಿ ಹೋರಾಡುತ್ತಿರುತ್ತವೆ. ಯಾವುವು ಆರ್ಥಿಕ ಸಮಸ್ಯೆಯನ್ನು ಪರಿಹರಿಸಬಲ್ಲವೋ ಅವು ಮಾತ್ರ ಜಯಪ್ರದವಾಗುವುವು. ಮನುಷ್ಯನು ಹೊಟ್ಟೆ ಹೇಳಿದಂತೆ ಕೇಳುವನು. ಅವ್ನು ನಡೆಯುವಾಗ ಮುಂದೆ ಹೊಟ್ಟೆ ಹೋಗುವುದು. ಅನಂತರ ಅವನ ತಲೆ ಹೋಗುವುದು. ನೀವು ಅದನ್ನು ನೋಡಿಲ್ಲವೇ? ತಲೆ ಮುಂದೆ ಹೋಗಬೇಕಾದರೆ ಅದಕ್ಕೆ ಬಹಳ ಕಾಲ ಹಿಡಿಯುವುದು.... ಮಕ್ಕಳ ಕನಸುಗಳು ಮಾಯವಾಗಿ ವಸ್ತುಗಳನ್ನು ಸಹಜಸ್ಥಿತಿಯಲ್ಲಿ ತಿಳಿದುಕೊಳ್ಳುವ ಹೊತ್ತಿಗೆ ತಲೆಯು ಮುಂದಾಗುತ್ತದೆ. ನಿಮ್ಮ ತಲೆ ಮುಂದೆ ಹೋಗುವ ಹೊತ್ತಿಗೆ ನೀವೇ ಪ್ರಪಂಚವನ್ನು ಬಿಡಬೇಕಾಗುವುದು.

ನುಡಿಮುತ್ತುಗಳು ೧೬

ರಸಾಯನಶಾಸ್ತ್ರ ಮುಂತಾದ ಭೌತವಿಜ್ಞಾನಗಳು ಹೇಗೆ ಭೌತಿಕ ವಿಷಯಗಳನ್ನು ಹೇಳುವುವೋ ಹಾಗೆಯೇ ಧರ್ಮವು ತಾತ್ತ್ವಿಕ ವಿಷಯಗಳನ್ನು ಹೇಳುವುದು. ರಸಾಯನ ಶಾಸ್ತ್ರವನ್ನು ಕಲಿಯಬೇಕಾದರೆ ವ್ಯಕ್ತಿಯು ಪ್ರಕೃತಿಯೆಂಬ ಪುಸ್ತಕಕ್ಕೆ ಹೋಗಬೇಕು. ಆದರೆ ಧರ್ಮವನ್ನು ನಿಮ್ಮ ಮನಸ್ಸಿನಿಂದ ಮತ್ತು ಹೃದಯದಿಂದಲೇ ಕಲಿಯಬೇಕಾಗಿದೆ. ಸಂತರು ಭೌತ ವಿಜ್ಞಾನಗಳ ವಿಷಯದಲ್ಲಿ ತಜ್ಞರಲ್ಲ. ಏಕೆಂದರೆ ಅವರು ಅಧ್ಯಯನ ಮಾಡುವುದು ತಮ್ಮ ಅಂತರಂಗವನ್ನು ಮಾತ್ರ. ವಿಜ್ಞಾನಿಗೆ ಅನೇಕ ವೇಳೆ ಧಾರ್ಮಿಕ ವಿಷಯಗಳು ಗೊತ್ತಿರುವುದಿಲ್ಲ. ಏಕೆಂದರೆ ಅವನು ಬಾಹ್ಯ ಪ್ರಕೃತಿಯನ್ನು ಮಾತ್ರ ಅಧ್ಯಯನ ಮಾಡುವುದು.

ನುಡಿಮುತ್ತುಗಳು ೧೭

ಅನೇಕ ಜನರು ಹೀಗೆ ಹೇಳುವರು: 'ನಾನು ಧಾರ್ಮಿಕನಾಗಬೇಕೆಂದು ಇದ್ದೆ ; ನಾನು ಇವುಗಳನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕೆಂದು ಇದ್ದೆ. ಆದರೆ ನನಗೆ ಸಾಧ್ಯವಾಗಲಿಲ್ಲ. ಆದಕಾರಣವೇ ನಾನು ಏನನ್ನೂ ನಂಬುವುದಿಲ್ಲ. ' ವಿದ್ಯಾವಂತರಲ್ಲಿಯೂ ಅನೇಕ ಜನರು ಹೀಗೆ ಹೇಳುವವರು ಇರುವರು. ಬಹಳ ಮಂದಿ ಹೀಗೂ ಹೇಳುವರು, ' ನಾನು ಇಡೀ ಜೀವನದಲ್ಲಿ ಧಾರ್ಮಿಕನಾಗಬೇಕೆಂದು ಯತ್ನಿಸಿದೆ, ಆದರೆ ಅದರಲ್ಲಿ ಏನೂ ಇಲ್ಲ.' ಆದರೆ ಈ ವಿಷಯವನ್ನೂ ನೀವು ಗಮನಿಸುತ್ತೀರಿ ; ಒಬ್ಬ ರಸಾಯನಶಾಸ್ತ್ರಜ್ಞ, ದೊಡ್ಡ ವಿಜ್ಞಾನಿ ಇರುವನು ಎಂದು ಭಾವಿಸಿ. ಅವನ ಬಳಿಗೆ ನೀವು ಹೋಗಿ 'ನಾನು ರಸಾಯನಶಾಸ್ತ್ರದಲ್ಲಿ ಏನನ್ನೂ ನಂಬುವುದಿಲ್ಲ, ಏಕೆಂದರೆ ನಾನು ಇದುವರೆಗೆ ರಸಾಯನಶಾಸ್ತ್ರಜ್ಞನಾಗಬೇಕೆಂದು ಪ್ರಯತ್ನಿಸಿದೆ, ಸಾಧ್ಯವಾಗಲಿಲ್ಲ; ಅದರಲ್ಲಿ ಏನೂ ಇಲ್ಲ' ಎಂದರೆ, ಆ ವಿಜ್ಞಾನಿ ನೀನು ಯಾವಾಗ ಪ್ರಯತ್ನಿಸಿದೆ ಎನ್ನುವನು. 'ನಾನು ಮಲಗಲು ಹೋಗುವಾಗ ಓ ರಸಾಯನಶಾಸ್ತ್ರವೇ, ಬಾ ನನ್ನ ಬಳಿಗೆ ಎಂದೆ. ಆದರೂ ಅದು ಬರಲಿಲ್ಲ.' ಎನ್ನುವಿರಿ. ಹೀಗೆಯೇ ಧರ್ಮದಲ್ಲಿ ಕೂಡ. ರಸಾಯನಶಾಸ್ತ್ರಜ್ಞ ನಕ್ಕು ಹೀಗೆ ಹೇಳುತ್ತಾನೆ: 'ಓ ಅದಲ್ಲ ಮಾರ್ಗ, ನೀನು ಪ್ರಯೋಗಶಾಲೆಗೆ ಹೋಗಿ, ಆಸಿಡ್, ಆಲ್ಕಲಿ ಇವುಗಳೊಡನೆ ಪ್ರಯೋಗ ಮಾಡು. ನಿನ್ನ ಕೈಯನ್ನು ಏಕೆ ಮಧ್ಯೆ ಮಧ್ಯೆ ಸುಟ್ಟುಕೊಳ್ಳಲಿಲ್ಲ? ಅದೇ ತಾನಾಗಿ ನಿನಗೆ ಕಲಿಸುತ್ತಿತ್ತು' ಧರ್ಮಕ್ಕೂ ಇಷ್ಟು ಶ್ರಮಡುತ್ತೀರಾ? ಪ್ರತಿಯೊಂದು ವಿಜ್ಞಾನ ಶಾಸ್ತ್ರವನ್ನು ಕಲಿಯಬೇಕಾದರೂ ಒಂದು ಮಾರ್ಗವಿದೆ. ಧರ್ಮವನ್ನು ಕೂಡ ಇದರಂತೆಯೇ ಅಭ್ಯಾಸ ಮಾಡಬೇಕು.

ನುಡಿಮುತ್ತುಗಳು ೧೮

ಬಾಹ್ಯಶಕ್ತಿಯ ಅಭಿವ್ಯಕ್ತಿ ಮೂಲವಾದ ಯುರೋಪು, ಅಧ್ಯಾತ್ಮವನ್ನು ತನ್ನ ಜೀವನದ ಮುಖ್ಯ ಆಧಾರವಾಗಿ ಮಾಡಿಕೊಳ್ಳದೇ ಹೋದರೆ ಇನ್ನು ಐವತ್ತು ವರ್ಷಗಳಲ್ಲಿ ನಿರ್ನಾಮವಾಗುವುದು. ಯುರೋಪನ್ನು ಸಂರಕ್ಷಿಸುವುದೇ ಉಪನಿಷತ್ತಿನ ಧರ್ಮ. (ಸ್ವಾಮೀಜಿಯವರು ಈ ಮಾತನ್ನು ನುಡಿದದ್ದು 1897ರಲ್ಲಿ).

ನುಡಿಮುತ್ತುಗಳು ೧೯

ನಾವು ಮಾನವವರ್ಗವನ್ನು ಎಲ್ಲಿ ವೇದಗಳು, ಬೈಬಲ್, ಖೊರಾನ ಇಲ್ಲವೋ ಅಲ್ಲಿಗೆ ಕರೆದೊಯ್ಯಬೇಕು. ಆದರೂ ಕೂಡ ವೇದ, ಬೈಬಲ್ ಮತ್ತು ಖೊರಾನುಗಳ ಸಾಮರಸ್ಯದಿಂದ ಇದನ್ನು ಸಾಧಿಸಬೇಕಾಗಿದೆ. ಮಾನವವರ್ಗಕ್ಕೆ ಭಿನ್ನಧರ್ಮಗಳು ಏಕತೆಯೇ ತಾನಾಗಿರುವ ಒಂದೇ ಧರ್ಮದ ಅನಂತ ಅಭಿವ್ಯಕ್ತಿಗಳೆಂಬುದನ್ನು ಕಲಿಸಬೇಕು. ಇದರಿಂದ ಪ್ರತಿಯೊಬ್ಬನೂ ತನಗೆ ಯಾವುದು ಉತ್ತಮ ಮಾರ್ಗವೋ ಅದನ್ನು ಆರಿಸಿಕೊಳ್ಳಬಹುದು.

ನುಡಿಮುತ್ತುಗಳು ೨೦

ಶುದ್ಧಚಾರಿತ್ರ್ಯವುಳ್ಳವನಾಗು, ಧೈರ್ಯವಂತನಾಗು. ಅಂತಃಕರಣ ಪೂರಿತನಾಗು- ಕಟ್ಟುನಿಟ್ಟಿನ ನೀತಿವಂತನಾಗಿರಬೇಕು. ಜೀವದ ಹಂಗನ್ನು ತೊರೆಯುವಂತಹ ಧೈರ್ಯವಂತನಾಗಿರಬೇಕು. ಮತ ತತ್ತ್ವಗಳಿಂದ ನಿನ್ನ ತಲೆಯನ್ನು ಕೆಡಿಸಿಕೊಳ್ಳಬೇಡ. ಹೇಡಿಗಳು ಮಾತ್ರ ಪಾಪ ಮಾಡುವರು. ಧೀರರು ತಮ್ಮ ಮನಸ್ಸಿನಲ್ಲಿ ಕೂಡ ಎಂದಿಗೂ ಪಾಪವನ್ನು ಮಾಡುವುದಿಲ್ಲ.

 

ನುಡಿಮುತ್ತುಗಳು ೨೧

ನೀತಿಯ ವಿಷಯವಾಗಿ ನಿರೂಪಿಸಲಾಗುವ ಏಕಮಾತ್ರ ವ್ಯಾಖ್ಯೆಯೆಂದರೆ, 'ಯಾವುದು ಸ್ವಾರ್ಥದಿಂದ ಕೂಡಿದುದೋ ಅದು ಅನೈತಿಕ, ಯಾವುದು ಸ್ವಾರ್ಥಶೂನ್ಯವೋ ಅದು ನೈತಿಕ.'

 

ನುಡಿಮುತ್ತುಗಳು ೨೨

ಒಬ್ಬನು ಬಹಳ ಚಮತ್ಕಾರವಾದ ಭಾಷೆಯಲ್ಲಿ, ಸುಂದರವಾದ ಭಾವನೆಗಳನ್ನು ವಿವರಿಸಬಹುದು. ಆದರೆ ಇದು ಜನರನ್ನು ಆಕರ್ಷಿಸುವುದಿಲ್ಲ. ಮತ್ತೊಬ್ಬನು ಚೆನ್ನಾಗಿ ಮಾತನಾಡುವುದೂ ಇಲ್ಲ; ಅದರಲ್ಲಿ ಸುಂದರವಾದ ಭಾವನೆಗಳೂ ಇರುವುದಿಲ್ಲ. ಆದರೂ ಕೂಡ ಅವನ ಪ್ರತಿಯೊಂದು ಚಲನೆಯೂ ಕೂಡ ಶಕ್ತಿಯಿಂದ ತುಂಬಿರುತ್ತದೆ. ಇದೇ ಓಜಸ್ಸಿನ ಶಕ್ತಿ... ಬ್ರಹ್ಮಚರ್ಯವ್ರತವನ್ನು ಪರಿಪಾಲಿಸುವ ಸ್ತ್ರೀ ಮತ್ತು ಪುರುಷರು ಮಾತ್ರ ಓಜಸ್ಸನ್ನು ಮೇಲೇಳುವಂತೆ ಮಾಡಿ ಆ ಶಕ್ತಿಯನ್ನು ಮೆದುಳಿನಲ್ಲಿ ಸಂಗ್ರಹಿಸಿಡಬಹುದು. ಆದಕಾರಣವೇ ಬ್ರಹ್ಮಚರ್ಯವನ್ನು ಅತ್ಯಂತ ಪವಿತ್ರವಾದ ಶೀಲವೆಂದು ಪರಿಗಣಿಸಿರುವುದು. ಬ್ರಹ್ಮಚರ್ಯವ್ರತವನ್ನು ಪರಿಪಾಲಿಸದೆ ಇದ್ದರೆ ಆಧ್ಯಾತ್ಮಿಕತೆ ಮಾಯವಾಗುವುದು, ಮಾನಸಿಕ ಪಟುತ್ವ ಕುಗ್ಗುವುದು, ನೈತಿಕಶಕ್ತಿ ತಗ್ಗುವುದು ಎಂದು ಮಾನವನಿಗೆ ವೇದ್ಯವಾಗುತ್ತದೆ. ಆದಕಾರಣವೇ ಆಧ್ಯಾತ್ಮಿಕ ಪ್ರತಿಭಾವಂತರಿಗೆ ಜನ್ಮವಿತ್ತ ಎಲ್ಲಾ ಧಾರ್ಮಿಕ ಸಂಸ್ಥೆಗಳೂ ಪೂರ್ಣ ಬ್ರಹ್ಮಚರ್ಯವನ್ನು ಒತ್ತಿ ಹೇಳುವುದು ನಮಗೆ ಕಂಡು ಬರುವುದು.

 

ನುಡಿಮುತ್ತುಗಳು ೨೩

ನೀತಿ ಯಾವಾಗಲೂ 'ನಾನಲ್ಲ ನೀನು' ಎನ್ನುವುದು. ಅದರ ಉದ್ದೇಶ ಮಮಕಾರವಲ್ಲ, ಮಮಕಾರದ ನಿರಾಕರಣೆ. ಇಂದ್ರಿಯದ ಮೂಲಕ ಅನಂತಶಕ್ತಿಯನ್ನು ಮತ್ತು ಆನಂದವನ್ನು ಪಡೆಯಲು ಯತ್ನಿಸುವಾಗ ಬಾಚಿ ತಬ್ಬಿಕೊಂಡಿರುವ ನಾನೆಂಬುವ ಭ್ರಾಂತಿ-ಭಾವನೆಗಳನ್ನು ತ್ಯಜಿಸಬೇಕು ಎನ್ನುವುದು ನೀತಿಯ ನಿಯಮ. ನಿನ್ನನ್ನು ಕೊನೆಯಲ್ಲಿರಿಸಿಕೊಂಡು ಇತರರು ನಿನಗಿಂತ ಮುಂಚೆ ಇರುವಂತೆ ನೋಡಿಕೊಳ್ಳಬೇಕು. ಇಂದ್ರಿಯಗಳು 'ಮೊದಲು ನಾನು' ಎನ್ನುವುವು. ನೀತಿ 'ನಾನು ಕೊನೆಯಲ್ಲಿರಬೇಕು' ಎನ್ನುವುದು. ಎಲ್ಲಾ ನೀತಿ ನಿಯಮಾವಳಿಗಳು ನಿಂತಿರುವುದು ತ್ಯಾಗದ ಮೇಲೆ ; ಭೌತಿಕ ಜಗತ್ತಿನಲ್ಲಿ ಅಹಂಕಾರದ ಪೋಷಣೆಯಲ್ಲಿ ಅಲ್ಲ, ಅದರ ಧ್ವಂಸದ ಮೇಲೆ. ಆ ಅನಂತವು ಭೌತಿಕ ಪ್ರಪಂಚದ ಮೂಲಕ ಎಂದಿಗೂ ವ್ಯಕ್ತವಾಗಲಾರದು. ಇದು ಸಾಧ್ಯವೂ ಇಲ್ಲ. ಭಾವಿಸಲಸಾಧ್ಯವಾದುದು ಇದು.

 

ನುಡಿಮುತ್ತುಗಳು ೨೪

ಪ್ರಯೋಜನದೃಷ್ಟಿಯು ಮಾನವರ ನೈತಿಕ ಸಂಬಂಧವನ್ನು ವಿವರಿಸಲಾರದು. ಮೊದಲನೆಯದಾಗಿ ಪ್ರಯೋಜನದೃಷ್ಟಿಯಿಂದ ನಮಗೆ ಯಾವ ನೀತಿ ನಿಯಮವೂ ದೊರಕುವುದಿಲ್ಲ.... ಅತೀಂದ್ರಿಯ ವಸ್ತುವಿನ ಗ್ರಹಣ, ಅನಂತತೆಯೆಡೆಗೆ ನಿರಂತರ ಹೋರಾಟ, ಇವುಗಳ ಅನುಷ್ಠಾನ-ಇವೆಲ್ಲ ಸಾಧ್ಯವಾದುದುದಲ್ಲ, ನಿಷ್ಪ್ರಯೋಜಕ ಮತ್ತು ಇವುಗಳನ್ನು ತ್ಯಜಿಸಿ ಎನ್ನುವನು ಪ್ರಯೋಜನದೃಷ್ಟಿಯವನು. ಆದರೆ ಈ ಧೋರಣೆಯೊಂದಿಗೇ ನೀತಿಯನ್ನು ಅನುಸರಿಸಿ ಸಮಾಜಕ್ಕೆ ಒಳ್ಳೆಯದನ್ನು ಮಾಡಿ ಎನ್ನುವನು. ನಾವೇಕೆ ಒಳ್ಳೇಯದನ್ನು ಮಾಡಬೇಕು? ಮತ್ತೊಬ್ಬರಿಗೆ ಒಳ್ಳೆಯದನ್ನು ಮಾಡುವುದು ಗೌಣ. ನಮಗೆ ಒಂದು ಆದರ್ಶವಿರಬೇಕು. ನೀತಿಯೇ ಗುರಿಯಲ್ಲ, ಅದು ಗುರಿಯಡೆಗೆ ಒಯ್ಯುವ ಒಂದು ದಾರಿ. ಗುರಿಯೇ ಇಲ್ಲದೆ ಇದ್ದರೆ ನಾವೇಕೆ ನೀತಿವಂತರಾಗಿರಬೇಕು? ಇತರರಿಗೆ ನಾವೇಕೆ ಒಳ್ಳೆಯದನ್ನು ಮಾಡಬೇಕು? ಏತಕ್ಕೆ ಹಿಂಸಿಸಬಾರದು? ವಿಷಯಸುಖವೇ ಮಾನವನ ಗುರಿಯಾದರೆ, ನಾನು ಸುಖವಾಗಿದ್ದು ಮತ್ತೊಬ್ಬನನ್ನು ಅಸುಖಿಯನ್ನಾಗಿ ಏಕೆ ಮಾಡಬಾರದು? ಇದನ್ನು ಯಾವುದು ತಡೆಯುವುದು? ಎರಡನೆಯದಾಗಿ ಪ್ರಯೋಜನದೃಷ್ಟಿ ಅಷ್ಟು ವಿಶಾಲವಾದುದಲ್ಲ, ತೀರಾ ಸಂಕುಚಿತವಾದದ್ದು.... ಹೆಚ್ಚೆಂದರೆ ಪ್ರಯೋಜನದೃಷ್ಟಿಯ ಸಿದ್ಧಾಂತವು, ಈಗಿನ ಸಾಮಾಜಿಕ ಸ್ಥಿತಿಯಲ್ಲಿ ಮಾತ್ರ ಕೆಲಸಕ್ಕೆ ಬರಬಹುದು. ಇದರಾಚೆ ದೊರೆತ ನೀತಿನಿಯಮಾವಳಿಗಳು ಮನುಷ್ಯನ ಅನಂತ ಸ್ವಭಾವವನ್ನು ಒಳಗೊಳ್ಳುತ್ತವೆ. ಅದು ವ್ಯಕ್ತಿಯನ್ನು ಸ್ವೀಕರಿಸುವುದು. ಆದರೆ ಅದರ ಸಂಬಂಧ ಅನಂತದೊಂದಿಗೆ ಮಾತ್ರ. ಅದು ಸಮಾಜವನ್ನೂ ಸ್ವೀಕರಿಸುವುದು. ಏಕೆಂದರೆ ಹಲವು ವ್ಯಕ್ತಿಗಳ ಮೊತ್ತವೇ ಸಮಾಜ.