ಶ್ರದ್ಧೆ ಮತ್ತು ಶಕ್ತಿ

///ಶ್ರದ್ಧೆ ಮತ್ತು ಶಕ್ತಿ

ಶ್ರದ್ಧೆ ಮತ್ತು ಶಕ್ತಿ

ನುಡಿಮುತ್ತುಗಳು ೧

ಯಾರಿಗೆ ಆತ್ಮವಿಶ್ವಾಸ ಇಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಯಾರಿಗೆ ದೇವರಲ್ಲಿ ಭಕ್ತಿ ಇಲ್ಲವೋ ಅವನನ್ನು ನಾಸ್ತಿಕನೆನ್ನುತ್ತಿದ್ದುವು. ನವೀನ ಧರ್ಮವು ಯಾರು ಆತ್ಮವಿಶ್ವಾಸಹೀನರೋ, ಅವರನ್ನು ನಾಸ್ತಿಕರೆಂದು ಸಾರುತ್ತದೆ.( ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ. ೨.೨೪೯)

ನುಡಿಮುತ್ತುಗಳು ೨

ಜಗತ್ತಿನ ಇತಿಹಾಸವು ಅತ್ಮಶ್ರದ್ಧೆಯುಳ್ಳ ವ್ಯಕ್ತಿಗಳ ಚರಿತ್ರೆ. ಈ ಅತ್ಮಶ್ರದ್ಧೆ ಸುಪ್ತವಾಗಿರುವ ದಿವ್ಯತೆಯನ್ನು ವ್ಯಕ್ತಗೊಳಿಸುವುದು. ನೀವು ಏನನ್ನು ಬೇಕಾದರೂ ಸಾಧಿಸಬಹುದು. ನೀವು ಆ ಮಹಾಶಕ್ತಿಯನ್ನು ವ್ಯಕ್ತಗೊಳಿಸುವುದಕ್ಕೆ ಸಾಕಾದಷ್ಟು ಪ್ರಯತ್ನಿಸದೆ ಇದ್ದಾಗ ಮಾತ್ರ ನಿರಾಶರಾಗುವಿರಿ. ವ್ಯಕ್ತಿಯಾಗಲೀ, ದೇಶವಾಗಲೀ ಎಂದು ಆತ್ಮಶ್ರದ್ಧೆಯನ್ನು ಕಳೆದುಕೊಳ್ಳುವುದೋ ಆಗಲೇ ನಾಶವಾದಂತೆ. (ಕೃ. ಶ್ರೇ. ೭.೩೬೩.)

ನುಡಿಮುತ್ತುಗಳು ೩

ಶ್ರದ್ಧೆ ! ಶ್ರದ್ಧೆ ! ಆತ್ಮಶ್ರದ್ಧೆ ! ಶ್ರದ್ಧೆ ! ಶ್ರದ್ಧೆ ! ಈಶ್ವರನಲ್ಲಿ ಶ್ರದ್ಧೆ ! ಇದೇ ಮಹಾತ್ಮ್ಯೆಯ ಮೂಲ. ನೀವು ನಿಮ್ಮ ಮೂವತ್ತಮೂರು ಕೋಟಿ ದೇವತೆಗಳನ್ನು ನಂಬಿ, ಜೊತೆಗೆ ಪಾಶ್ಚಾತ್ಯರಿಂದ ಆಮದು ಮಾಡಿಕೊಂಡಿರುವ ದೇವತೆಗಳನ್ನು ನಂಬಿದರೂ ನಿಮ್ಮಲ್ಲಿ ಅತ್ಮಶ್ರದ್ಧೆ ಇಲ್ಲದೇ ಇದ್ದರೆ ನಿಮಗೆ ಉದ್ಧಾರವಿಲ್ಲ. ಮೊದಲು ಅತ್ಮಶ್ರದ್ಧೆ ಇರಲಿ. (ಕೃ. ಶ್ರೇ.೩.೭೪.)

ನುಡಿಮುತ್ತುಗಳು ೪

ಆತ್ಮನಿಗೆ ಅಸಾಧ್ಯವಾದುದು ಏನಾದರೂ ಇದೆ ಎಂದು ಎಂದೂ ತಿಳಿಯಬೇಡಿ. ಹಾಗೆ ಹೇಳುವದೇ ನಾಸ್ತಿಕತೆ. ಪಾಪವೇನಾದರೂ ಇದ್ದರೆ, ನೀವು ನಿರ್ಬಲರೆಂದೂ, ಉಳಿದವರು ನಿರ್ಬಲರೆಂದೂ, ಹೇಳುವುದೇ ಮಹಾಪಾಪ. (ಕೃ. ಶ್ರೇ.೨.೨೫೬.)

ನುಡಿಮುತ್ತುಗಳು ೫

ನೀವು ಇಚ್ಛಿಸುವುದೆಲ್ಲಾ ಪ್ರಾಪ್ತವಾಗುವುದು. ದುರ್ಬಲರೆಂದು ಯೋಚಿಸಿದರೆ ದುರ್ಬಲವಾಗುವಿರಿ. ಶಕ್ತಿವಂತರೆಂದು ಯೋಚಿಸಿದರೆ ಶಕ್ತಿವಂತರಾಗುವಿರಿ.(ಕೃ. ಶ್ರೇ.೩.೨೪.)

ನುಡಿಮುತ್ತುಗಳು ೬

ಸ್ವತಂತ್ರರಾಗಿ, ಯಾರಿಂದಲೂ ಏನನ್ನೂ ನಿರೀಕ್ಷಿಸಬೇಡಿ. ಇದುವರೆಗೆ ನಿಮಗೆ ಆಗಿರುವುದನ್ನು ಪರೀಕ್ಷೆಮಾಡಿ ನೋಡಿದರೆ, ಎಂದೆಂದಿಗೂ ಬಾರದ ಇನ್ನೊಬ್ಬರ ಸಹಾಯಕ್ಕಾಗಿ ನೀವು ನೆಚ್ಚಿ ಕುಳಿತುದು ನಿರರ್ಥಕವೆಂಬುದು ನಿಮಗೆ ಗೊತ್ತಾಗುವುದರಲ್ಲಿ ನನಗೆ ಸಂದೇಹವಿಲ್ಲ. ಬಂದ ಸಹಾಯವೆಲ್ಲವೂ ಕೂಡ ನಿಮ್ಮಿಂದಲೇ.(ಕೃ. ಶ್ರೇ.೨.೨೭೧.)

ನುಡಿಮುತ್ತುಗಳು ೭

'ಇಲ್ಲ' 'ಸಾಧ್ಯವಿಲ್ಲ' ಎಂದು ಎಂದೂ ಹೇಳಬೇಡಿ. ಏಕೆಂದರೆ ನಾವು ಅನಾದಿ, ಅನಂತರು. ನಿಮ್ಮ ಸಹಜಸ್ವಭಾವದೊಂದಿಗೆ ಹೋಲಿಸಿದರೆ ಕಾಲದೇಶಗಳೂ ಗಣನೆಗೆ ಬರುವುದಿಲ್ಲ. ಏನನ್ನಾದರೂ, ಯಾವುದನ್ನಾದರೂ ನೀವು ಮಾಡಬಲ್ಲಿರಿ. ನೀವು ಸರ್ವಶಕ್ತರು. (ಕೃ. ಶ್ರೇ.೨.೨೪೮)

ನುಡಿಮುತ್ತುಗಳು ೮

ನೀವೆಲ್ಲ ಭಗವಂತನ ಮಕ್ಕಳು. ಅಮೃತಾನಂದದಲ್ಲಿ ಭಾಗಿಗಳು; ಪರಿಶುದ್ಧಾತ್ಮರು ನೀವು, ಪರಿಪೂರ್ಣರು ನೀವು. ನೀವೆಲ್ಲರೂ ಜಗದ ಪವಿತ್ರಾತ್ಮರು. ಪಾಪಿಗಳು ಎಂದು ಮಾನವರನ್ನು ಕರೆಯುವುದೇ ಪಾತಕ, ಮಾನವ ಸ್ವಭಾವಕ್ಕೆ ಬಗೆಯುವ ಮಹಾ ದ್ರೋಹ. ಸಿಂಹಗಳೇ ಬನ್ನಿ. ನೀವು ಕುರಿಗಳು ಎಂಬ ಭ್ರಾಂತಿಯನ್ನು ಕೊಡುಹಿ. ಅಮೃತಾತ್ಮರು ನೀವು, ಮುಕ್ತಾತ್ಮರು ನೀವು, ಆನಂದಮಯರು ನೀವು, ನಿತ್ಯಾತ್ಮರು ನೀವು.(ಕೃ. ಶ್ರೇ.೧..೧೩.)

ನುಡಿಮುತ್ತುಗಳು ೯

ಹೋರಾಟಗಳನ್ನು ಮತ್ತು ತಪ್ಪುಗಳನ್ನು ಲೆಕ್ಕಿಸಬೇಡಿ. ಹಸು ಸುಳ್ಳು ಹೇಳುವುದನ್ನು ನಾನು ಕೇಳಿಲ್ಲ. ಆದರೆ ಅದೊಂದು ಹಸು, ಅಷ್ಟೆ. ಅದೆಂದಿಗೂ ಮನುಷ್ಯನಲ್ಲ. ಸೋಲುವುದು, ಸ್ವಲ್ಪ ಹಿಂದೆ ಜಾರುವುದು, ಇವನ್ನು ನೀವು ಗಮನಿಸಬೇಕಾಗಿಲ್ಲ. ಸಾವಿರ ವೇಳೆ ಆದರ್ಶವನ್ನು ಹಿಡಿದುಕೊಳ್ಳಿ. ಸಾವಿರ ಸಲ ಸೋತರೂ ಮತ್ತೊಮ್ಮೆ ಪ್ರಯತ್ನಿಸಿ. (ಕೃ. ಶ್ರೇ.೨.೮೮.)

ನುಡಿಮುತ್ತುಗಳು ೧೦

ದೌರ್ಬಲ್ಯಕ್ಕೆ ಪರಿಹಾರ ದೌರ್ಬಲ್ಯವನ್ನು ಕುರಿತು ಆಲೋಚಿಸುವುದಲ್ಲ. ಆದರೆ ಶಕ್ತಿಯನ್ನು ಕುರಿತು ವಿಚಾರ ಮಾಡುವುದು. ಜನರಿಗೆ ಆಗಲೇ ಅವರಲ್ಲಿರುವ ಶಕ್ತಿಯ ವಿಚಾರವಾಗಿ ಬೋಧನೆ ಮಾಡಿ. (ಕೃ. ಶ್ರೇ.೨..೨೪೮.)

ನುಡಿಮುತ್ತುಗಳು ೧೧

ಯಾವುದಾದರೊಂದು ಪದವು ಉಪನಿಷತ್ತುಗಳ ಮಹಾಗಣಿಯಿಂದ ಸಿಡಿಮದ್ದಿನಂತೆ ಹಾರುತ್ತಿದ್ದರೆ, ಸಿಡಿಮದ್ದಿನಂತೆ ಅಜ್ಞಾನಿಗಳ ಮೇಲೆ ಸಿಡಿಯುತ್ತಿದ್ದರೆ, ಅದೇ ಅಭೀಃ ಎಂಬ ಪದ. ಬೋಧಿಸಬೇಕಾದ ಒಂದೇ ಒಂದು ಧರ್ಮವೆಂದರೆ ಅಭೀಃ ಅಥವಾ ನಿರ್ಭೀತಿ ಎಂಬ ಧರ್ಮ.(ಕೃ. ಶ್ರೇ.೩.೪೯.)

ನುಡಿಮುತ್ತುಗಳು ೧೨

ನಾನು ಉಪನಿಷತ್ತುಗಳನ್ನು ಮಾತ್ರ ಬೋಧಿಸುತ್ತೇನೆ. ನೀವು ಪರೀಕ್ಷಿಸಿದರೆ ಉಪನಿಷತ್ತಲ್ಲದೆ ನಾನು ಬೇರೇನನ್ನೂ ಹೇಳಿಲ್ಲ ಎಂದು ಗೊತ್ತಾಗುವುದು. ಉಪನಿಷತ್ತುಗಳಲ್ಲಿಯೂ ಒಂದು ಭಾವನೆಯನ್ನು ಮಾತ್ರ ಬೋಧಿಸಿರುವೆನು, ಅದೇ ಬಲ. ವೇದ ವೇದಾಂತಗಳ ಸಾರವೆಲ್ಲ ಆ ಒಂದು ಪದದಲ್ಲಿದೆ. (ಕೃ. ಶ್ರೇ.೮.೪೨೨.)

ನುಡಿಮುತ್ತುಗಳು ೧೩

ನನ್ನ ತರುಣ ಸ್ನೇಹಿತರೇ, ಮೊದಲು ಬಲಿಷ್ಠರಾಗಿ. ಇದು ನನ್ನ ಬುದ್ಧಿವಾದ. ಗೀತಾಧ್ಯಯನಕ್ಕಿಂತ ಫುಟ್ ಬಾಲ್ ಆಟದಿಂದ ಮುಕ್ತಿಗೆ ಹತ್ತಿರ ಹೋಗುವಿರಿ. ಇವು ಕೆಚ್ಚಿನ ಮಾತುಗಳು. ಆದರೂ ನಾನು ಇದನ್ನು ನಿಮಗೆ ಹೇಳಬೇಕಾಗಿದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನಿಮ್ಮ ನ್ಯೂನತೆ ನನಗೆ ಗೊತ್ತಿದೆ. ನನಗೆ ಸ್ವಲ್ಪ ಅನುಭವವಾಗಿದೆ. ನಿಮ್ಮ ಬಾಹುಗಳ ಮಾಂಸಖಂಡದಲ್ಲಿ ಸ್ವಲ್ಪ ಹೆಚ್ಚು ಶಕ್ತಿ ಇದ್ದರೆ, ನೀವು ಗೀತೆಯನ್ನು ಇನ್ನೂ ಚೆನ್ನಾಗಿ ತಿಳಿದುಕೊಳ್ಳಬಲ್ಲಿರಿ.(ಕೃ. ಶ್ರೇ.೩.೧೨೦.)

ನುಡಿಮುತ್ತುಗಳು ೧೪

ಪ್ರತಿಯೊಬ್ಬನನ್ನೂ ಈ ಒಂದು ಪ್ರಶ್ನೆಯನ್ನು ಕೇಳುತ್ತೇನೆ: ನೀವು ಬಲಿಷ್ಠರಾಗಿರುವಿರಾ? ಬಲಿಷ್ಠರೆಂದು ಭಾವಿಸುವಿರಾ? ಸತ್ಯ ಮಾತ್ರ ಬಲವನ್ನು ನೀಡಬಲ್ಲದೆಂಬುದು ನನಗೆ ಗೊತ್ತಿದೆ... ಭವರೋಗಕ್ಕೆ ಔಷಧವೇ ಶಕ್ತಿ. (ಕೃ. ಶ್ರೇ.೨.೧೩೧.)

ನುಡಿಮುತ್ತುಗಳು ೧೫

ಇದೊಂದು ದೊಡ್ಡ ಸತ್ಯ ; ಶಕ್ತಿಯೇ ಜೀವನ, ದುರ್ಬಲತೆಯೇ ಮರಣ, ಶಕ್ತಿಯೇ ಪರಮಾನಂದ, ಅಖಂಡಜೀವನ, ಅಮರತ್ವ. ದುರ್ಬಲತೆಯೇ ಅನವರತ ದುಃಖ, ತಳಮಳ, ದುರ್ಬಲತೆಯೇ ಮರಣ.(ಕೃ. ಶ್ರೇ.೬.೨೪೪.)

ನುಡಿಮುತ್ತುಗಳು ೧೬

ಜಯ ಹೊಂದಬೇಕಾದರೆ ಅತ್ಯದ್ಭುತವಾದ ಇಚ್ಛಾಶಕ್ತಿ ಛಲ ಇವುಗಳು ಬೇಕು. 'ಸಾಗರವನ್ನೇ ಕುಡಿಯುತ್ತೇನೆ' 'ಪರ್ವತಗಳು ಧೂಳಿದೂಸರವಾಗುವುವು, ನನ್ನ ಇಚ್ಛಾಶಕ್ತಿಯಿಂದ' ಎನ್ನುವನು ಛಲಗಾರ. ಅಂತಹ ಶಕ್ತಿ ಇರಲಿ, ಅಂತಹ ಶಪಥವಿರಲಿ. ಕಷ್ಟಪಟ್ಟು ಸಾಧನೆ ಮಾಡಿ. ನೀವು ಗುರಿಯನ್ನು ಸೇರಿಯೇ ಸೇರುತ್ತೀರಿ. (ಕೃ. ಶ್ರೇ.೨.೩೬೩.)

ನುಡಿಮುತ್ತುಗಳು ೧೭

ನಮಗೆ ಇಂದು ಅವಶ್ಯವಾಗಿ ಬೇಕಾಗಿರುವುದು ಜನ, ಜನ. ಉಳಿದುವೆಲ್ಲ ಅನಂತರ ಬರುವುವು. ವೀರ್ಯವಾನ್, ತೇಜಸ್ವಿ, ಶ್ರದ್ಧಾಸಂಪನ್ನ, ಕೊನೆಯವರೆಗೂ ನಿಷ್ಕಪಟಿಗಳಾದ ಯುವಕರು ಬೇಕಾಗಿದ್ದಾರೆ. ಇಂತಹ ನೂರು ಜನರು ಸಿಕ್ಕಿದರೆ ಪ್ರಪಂಚವನ್ನೇ ಬದಲಾಯಿಸಬಹುದು.(ಕೃ. ಶ್ರೇ.೩.೧೦೩.)

ನುಡಿಮುತ್ತುಗಳು ೧೮

ಈ ದೇಶದಲ್ಲಿ ನಗಾರಿಗಳನ್ನು ತಯಾರಿಸುವುದಿಲ್ಲವೇನು? ಭರತಖಂಡದಲ್ಲಿ ಕೊಂಬು, ಕಹಳೆಗಳು, ನಗಾರಿಗಳು ಸಿಗುವುದಿಲ್ಲವೇನು? ಹುಡುಗರೆಲ್ಲಾ ಇವುಗಳು ಮೊಳಗುವ ಧೀರ ಗಂಭೀರ ಧ್ವನಿಯನ್ನು ಕೇಳುವಂತೆ ಮಾಡಿ. ಬಾಲ್ಯದಿಂದ ಕೋಮಲವಾದ ಅನುರಾಗದ ಹಾಡುಗಳನ್ನು ಕೇಳಿ ಕೇಳಿ, ದೇಶವೆಲ್ಲಾ ಹೆಣ್ಣಿಗರ ದೇಶವಾಗಿ ಪರಿಣಮಿಸಿದೆ.(ಕೃ. ಶ್ರೇ.೮.೨೨೯.)

ನುಡಿಮುತ್ತುಗಳು ೧೯

ಅಜ್ಞಾನಾಂಧಕಾರದಲ್ಲಿ ತೊಳಲುವುದಕ್ಕಿಂತ ಮೃತ್ಯುವು ಲೇಸು. ಸೋಲನ್ನು ಒಪ್ಪಿಕೊಂಡು ಬಾಳುವುದಕ್ಕಿಂತ ಸಮರದಲ್ಲಿ ಮಡಿಯುವುದು ಲೇಸು.(ಕೃ. ಶ್ರೇ.೨.೬೩.)

ನುಡಿಮುತ್ತುಗಳು ೨೦

ಬನ್ನಿ! ಏನಾದರೂ ಒಂದು ಶೌರ್ಯದ ಕೆಲಸವನ್ನು ಮಾಡಿ. ಸಹೋದರನೆ, ನಿನಗೆ ಮುಕ್ತಿ ಸಿಕ್ಕದೇ ಇದ್ದರೆ ಏನು? ಕೆಲವು ವೇಳೆ ನರಕಕ್ಕೆ ಇಳಿದರೇನಂತೆ?

ಮನಸಿ ವಚಸಿ ಕಾಯೇ ಪುಣ್ಯಪೀಯೂಷಪೂರ್ಣಾಃ
ತ್ರಿಭುವನಮುಪಕಾರಶ್ರೇಣಿಭೀಃ ಪ್ರೀಣಯನ್ತಃ |
ಪರಗುಣಪರಮಾಣುಂ ಪರ್ವತೀಕೃತ್ಯ ನಿತ್ಯಂ
ನಿಜಹೃದಿ ವಿಕಸಂನ್ತಃ ಸಂನ್ತಿ ಸಂನ್ತಃ ಕಿಯಂನ್ತಃ ||
'ಕಾಯಾವಾಚಾ ಮನಸಾ ಪವಿತ್ರರಾದ ಕೆಲವು ಮಹಾತ್ಮರು ಇರುವರು. ಅವರು ತಮ್ಮ ಅನೇಕ ಉಪಕಾರಗಳಿಂದ ಭುವನತ್ರಯವನ್ನು ಮೆಚ್ಚಿಸಿರುವರು. ಅನ್ಯರಲ್ಲಿ ಕಣಮಾತ್ರವಿರುವ ಒಳ್ಳೆಯದನ್ನು ಪರ್ವತೋಪಮವಾಗಿ ಕಂಡು, ತಮ್ಮ ಹೃದಯವನ್ನು ವಿಕಾಸಗೊಳಿಸುವರು' ಎಂಬ ನೀತಿ ಸುಳ್ಳೇನು?
(ಕೃ. ಶ್ರೇ.೪.೩೨೨)

ನುಡಿಮುತ್ತುಗಳು ೨೧

ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ಕಷ್ಟಪಟ್ಟಲ್ಲದೆ ಏನನ್ನಾದರೂ ಮಾಡಲು ಸಾಧ್ಯವೇ? ಉದ್ಯೋಗಿನಂ ಪುರುಷಸಿಂಹಮುಪೈತಿ ಲಕ್ಷ್ಮೀಃ - ಕಾರ್ಯೋನ್ಮುಖನಾಗಿರುವ ಪುರುಷಸಿಂಹನನ್ನು ಲಕ್ಷ್ಮಿಯು ಆಶ್ರಯಿಸುವಳು. ಹಿಂತಿರುಗಿ ನೋಡುವ ಆವಶ್ಯಕತೆ ಇಲ್ಲ. ಮುಂದೆ ನೋಡಿ! ನಮಗೆ ಅನಂತ ಶಕ್ತಿ, ಅನಂತ ಉತ್ಸಾಹ, ಅನಂತ ಧೈರ್ಯ, ಅನಂತ ತಾಳ್ಮೆ ಬೇಕು. ಆಗ ಮಾತ್ರ ಮಹತ್ಕಾರ್ಯಗಳನ್ನು ನಾವು ಸಾಧಿಸಬಹುದು. (ಕೃ. ಶ್ರೇ.೪.೪೭೨.)

ನುಡಿಮುತ್ತುಗಳು ೨೨

ನಿರಾಶರಾಗಬೇಡಿ . ಹಿರಿದ ಅಲಗಿನ ಮೇಲೆ ನಡೆದಂತೆ ಮಾರ್ಗ ಕಠಿಣ. ಆದರೂ ನಿರಾಶರಾಗಬೇಡಿ. ಏಳಿ, ಜಾಗ್ರತರಾಗಿ, ಆದರ್ಶವನ್ನು ಗುರಿಯನ್ನು ಕಾಣಿರಿ. (ಕೃ. ಶ್ರೇ.೨.೬೪.)

ನುಡಿಮುತ್ತುಗಳು ೨೩

ಅಳುವುದೇಕೆ ಸಹೋದರನೆ? ನಿನಗೆ ಮರಣವಿಲ್ಲ, ರೋಗವಿಲ್ಲ. ಅಳುವುದೇಕೆ ಸಹೋದರನೆ? ನಿನಗೆ ದುಃಖವಿಲ್ಲ, ದಾರಿದ್ರ್ಯವಿಲ್ಲ. ಅಳುವುದೇಕೆ ಸಹೋದರನೆ? ನಿನಗೆ ಬದಲಾವಣೆಯಿಲ್ಲ, ಸಾವಿಲ್ಲ, ಅಖಂಡ ಅಸ್ತಿತ್ವವೇ ನೀನಾಗಿರುವೆ... ಆತ್ಮನಲ್ಲಿ ಪ್ರತಿಷ್ಠಿತನಾಗು.(ಕೃ. ಶ್ರೇ.೭.೩೦೦.)

ನುಡಿಮುತ್ತುಗಳು ೨೪

ತಮ್ಮ ಮನಸ್ಸಿಗೆ ತೋರಿದುದನ್ನು ಜನರು ಹೇಳಿಕೊಳ್ಳಲಿ. ನೀವು ಮಾತ್ರ ನಿಮ್ಮ ದೃಢನಿಶ್ಚಯದಂತೆ ನಡೆಯಿರಿ. ಜಗತ್ತು ನಿಮ್ಮ ಕಾಲಿಗೆ ಬೀಳುವುದು. ಇದರಲ್ಲಿ ಸಂದೇಹವಿಲ್ಲ. ಅವರು 'ಈ ಮನುಷ್ಯನ ಮೇಲೆ ಅಥವಾ ಆ ಮನುಷ್ಯನ ಮೇಲೆ ವಿಶ್ವಾಸವಿಡಿ ಎಂದು ಹೇಳುತ್ತಾರೆ. ಆದರೆ ಮೊದಲು ನಿಮ್ಮ ಮೇಲೆ ವಿಶ್ವಾಸವಿಡಿ ಎಂದು ನಾನು ಹೇಳುತ್ತೇನೆ. ನಾವು ಮುಂದುವರಿಯುವ ರೀತಿ ಇದು. ಮೊದಲು ನಿಮ್ಮಲ್ಲಿ ವಿಶ್ವಾಸವಿರಲಿ. ಎಲ್ಲಾ ಶಕ್ತಿಯೂ ನಿಮ್ಮಲ್ಲಿದೆ. ಇದನ್ನು ತಿಳಿದುಕೊಳ್ಳಿ, ಅನಂತರ ಪ್ರಕಟಪಡಿಸಿ. 'ನಾನು ಎಲ್ಲವನ್ನೂ ಮಾಡಬಲ್ಲೆ' ಎಂದು ಹೇಳಿ. ಹಾವು ಕಚ್ಚಿದರೂ ಕೂಡ ನಾವು ದೃಢ ಮನಸ್ಸಿನಿಂದ ಅದನ್ನು ನಿರಾಕರಿಸಿದರೆ ಅದರ ವಿಷಪರಿಣಾಮವನ್ನು ಹೋಗಲಾಡಿಸಬಹುದು. (ಕೃ. ಶ್ರೇ.೪.೧೮೩.)

ನುಡಿಮುತ್ತುಗಳು ೨೫

ಒಂದು ಸಲ ನಾನು ಕಾಶಿಯಾಲಿದ್ದಾಗ ಊರಾಚೆ ಓಡಾಡುತ್ತಿದ್ದೆ. ಅಲ್ಲಿ ಒಂದು ಕಡೆ ದೊಡ್ಡ ಕೆರೆ ಇತ್ತು. ಅದರ ಪಕ್ಕದಲ್ಲಿ ಒಂದು ದೊಡ್ಡ ಗೋಡೆ ಇತ್ತು, ಅಲ್ಲಿ ಬಹಳ ಕೋತಿಗಳು ಇದ್ದುವು. ಕಾಶಿಯ ಕೋತಿಗಳಂತೂ ಭೀಮಾಕಾರವಾಗಿರುವುವು. ಕೆಲವು ವೇಳೆ ಉಗ್ರಾಸ್ವಭಾವವನ್ನು ತಾಳುವುವು. ಅವು ನನ್ನನ್ನು ಆ ಮಾರ್ಗದಲ್ಲಿ ಹೋಗಬಿಡಕೂಡದೆಂಬ ಸಂಕಲ್ಪಮಾಡಿದವು. ನಾನು ಅಲ್ಲಿ ಹೋಗುತ್ತಿದ್ದಾಗ ಕಿರಿಚಾಡಿ ನನ್ನ ಕಾಲನ್ನು ಹಿಡಿದುಕೊಂಡವು. ಅವು ಹತ್ತಿರ ಬಂದಂತೆ ನಾನು ಓಡಲು ಯತ್ನಿಸಿದೆ, ಆದರೆ ನಾನು ವೇಗವಾಗಿ ಓಡಿದಂತೆ ಅವೂ ವೇಗವಾಗಿ ಓಡಿಬಂದು ನನ್ನನ್ನು ಕಚ್ಚಲು ಯತ್ನಿಸಿದವು. ಅವುಗಳಿಂದ ಪಾರಾಗುವಂತೆಯೇ ಕಾಣಲಿಲ್ಲ. ಆಗ ಒಬ್ಬ ಅಪರಿಚಿತನು ನನ್ನನ್ನು ನೋಡಿ 'ಮೂರ್ಖರನ್ನು ಎದುರಿಸು' ಎಂದು ನನಗೆ ಕೂಗಿ ಹೇಳಿದ. ನಾನು ಹಿಂತಿರುಗಿ ಕಪಿಗಳನ್ನು ಎದುರಿಸಿದೆ. ಅವೆಲ್ಲ ಪಲಾಯನಗೈದವು. ಇದು ಇಡೀ ಜೀವನಕ್ಕೆ ಒಂದು ಪಾಠದಂತಿದೆ-ಭಯಾನಕವಾದುದನ್ನು ಎದುರಿಸಿ. ಧೈರ್ಯವಾಗಿ ಎದುರಿಸಿ.(ಕೃ. ಶ್ರೇ.೬.೩೯೯.)

ನುಡಿಮುತ್ತುಗಳು ೨೬

ಎದ್ದು ನಿಂತು ಹೋರಾಡಿ. ಎಂದಿಗೂ ಒಂದು ಹೆಜ್ಜೆಯನ್ನೂ ಹಿಂದೆ ಇಡಬೇಡಿ. ಇದೆ ಆದರ್ಶ. ಏನಾದರೂ ಆಗಲಿ ಹೋರಾಡಬೇಕು. ನಕ್ಷತ್ರಗಳೇ ತಮ್ಮ ಗತಿಯನ್ನು ಬದಲಾಯಿಸಲಿ, ಇಡೀ ಜಗತ್ತೇ ನಮಗೆ ವಿರೋಧವಾಗಿ ನಿಲ್ಲಲಿ. ಚಿಂತೆಯಿಲ್ಲ. ಮರಣವೆಂದರೆ ಬಟ್ಟೆಯ ಬದಲಾವಣೆಯಂತಷ್ಟೆ. ಅದರಿಂದೇನು? ಹೋರಾಡಿ. ಹೇಡಿಗಳಾದರೆ ನೀವು ಏನನ್ನೂ ಸಾಧಿಸಲಾರಿರಿ. ಈ ಜಗತ್ತಿನ ದೇವರುಗಳನ್ನೆಲ್ಲ ನೀವು ಪ್ರಾರ್ಥಿಸುವಿರಿ. ನಿಮ್ಮ ದುಃಖ ಕೊನೆಗೊಂಡಿದೆಯೆ? ...ನೀವು ಗೆದ್ದಮೇಲೆ ದೇವರು ನಿಮ್ಮ ಸಹಾಯಕ್ಕೆ ಬರುತ್ತಾನೆ. ಆದ ಕಾರಣ ಇದರಿಂದ ಏನು ಪ್ರಯೋಜನ? ಮೌಢ್ಯತೆಗೆ ಬಾಗುವುದು, ನಿಮ್ಮ ದುರ್ಬಲ ಮನಸ್ಸು ಹೇಳಿದಂತೆ ಕೇಳುವುದು, ಆತ್ಮನಿಗೆ ಯೋಗ್ಯವಲ್ಲ. ಇದೊಂದು ಸಾವಿನ ಆಟ... ನೀವು ಅನಂತಾತ್ಮರು, ಜನನ ಮರಣಾತೀತರು. ನೀವು ಅನಂತಾತ್ಮರಾಗಿರುವುದರಿಂದ ಗುಲಾಮರಾಗುವುದು ಯೋಗ್ಯವಲ್ಲ. ಉತ್ತಿಷ್ಠರಾಗಿ, ಜಾಗೃತರಾಗಿ, ಎದ್ದು ನಿಂತು ಹೋರಾಡಿ.(ಕೃ. ಶ್ರೇ.೭.೧೦೧)

 

By |2018-10-11T13:59:38+00:00September 5th, 2018|Kannada, Kannada Quotes|0 Comments

About the Author: