ಶಿಕ್ಷಣ ಮತ್ತು ಸಮಾಜ

///ಶಿಕ್ಷಣ ಮತ್ತು ಸಮಾಜ

ಶಿಕ್ಷಣ ಮತ್ತು ಸಮಾಜ

ನುಡಿಮುತ್ತುಗಳು ೧

ಶಿಕ್ಷಣವೆಂದರೆ ಮೊದಲೇ ಮನುಷ್ಯನಲ್ಲಿ ಇರುವ ಪರಿಪೂರ್ಣತೆಯನ್ನು ಪ್ರಕಾಶಪಡಿಸುವುದು.

ನುಡಿಮುತ್ತುಗಳು ೨

ವಿದ್ಯಾಭ್ಯಾಸವೆಂದರೇನು? ಪುಸ್ತಕ ಪಾಂಡಿತ್ಯವೇ? ಅಲ್ಲ. ಹಲವು ವಿಧದ ಜ್ಞಾನಾರ್ಜನೆಯೇ? ಅದೂ ಅಲ್ಲ. ಯಾವ ತರಬೇತಿಯ ಮೂಲಕ ಇಚ್ಛಾಶಕ್ತಿಯ ಪ್ರವಾಹ ಮತ್ತು ಅಭಿವ್ಯಕ್ತಿಗಳು ನಿಯಂತ್ರಣಕ್ಕೆ ಒಳಗಾಗಿ ಫಲಕಾರಿಯಾಗುವವೋ ಅದೇ ಶಿಕ್ಷಣ.

ನುಡಿಮುತ್ತುಗಳು ೩

ನನ್ನ ದೃಷ್ಟಿಯಲ್ಲಿ ವಿದ್ಯಾಭ್ಯಾಸದ ಸಾರವೇ ಮನಸ್ಸಿನ ಏಕಾಗ್ರತೆ. ಬರಿಯ ವಿಷಯ ಸಂಗ್ರಹವಲ್ಲ. ನಾನು ಪುನಃ ವಿದ್ಯಾಭ್ಯಾಸವನ್ನು ಪ್ರಾರಂಭಿಸಬೇಕಾದರೆ, ಈ ನಿಟ್ಟಿನಲ್ಲಿ ನನಗೇನಾದರೂ ಸ್ವಲ್ಪ ಸ್ವಾತಂತ್ರ್ಯವಿದ್ದರೆ ನಾನು ವಿಷಯಗಳನ್ನು ಕಲಿತುಕೊಳುವುದಿಲ್ಲ. ನಾನು ಮೊದಲು ಮನಸ್ಸನ್ನು ಹೇಗೆ ಏಕಾಗ್ರಗೊಳಿಸುವುದು ಮತ್ತು ಅದನ್ನು ಹೇಗೆ ಹಿಂದಕ್ಕೆ ಸೆಳೆಯುವುದು ಎಂಬುದನ್ನು ಕಲಿತುಕೊಂಡು ಅನಂತರ ಒಂದು ಸರಿಯಾದ ಉಪಕರಣದಿಂದ ನನ್ನ ಇಚ್ಚಾಪ್ರಕಾರ ವಿಷಯಗಳನ್ನು ಸಂಗ್ರಹಿಸುತ್ತೇನೆ.

ನುಡಿಮುತ್ತುಗಳು ೪

ಯಾವ ಶಿಕ್ಷಣ ಜನಸಾಧಾರಣರನ್ನು ಜೀವನ ಸಂಗ್ರಾಮಕ್ಕೆ ಸಮರ್ಥರನ್ನಾಗಿ ಮಾಡುವುದಕ್ಕಾಗುವುದಿಲ್ಲವೊ, ಯಾವುದು ಮನುಷ್ಯನಿಗೆ ಚಾರಿತ್ರ್ಯಬಲ, ಸೇವಾತತ್ಪರತೆ, ಸಿಂಹಸಾಹಸಿಕತೆ ಇವುಗಳನ್ನು ಒದಗಿಸುವುದಿಲ್ಲವೊ ಅದು ಶಿಕ್ಷಣ ಎಂಬ ಹೆಸರಿಗೆ ಯೋಗ್ಯವೇನು? ಜೀವನದಲ್ಲಿ ವ್ಯಕ್ತಿ ತನ್ನ ಕಾಲಿನ ಮೇಲೆ ತಾನು ನಿಂತುಕೊಳ್ಳುವ ಸಾಮರ್ಥ್ಯವನ್ನು ಯಾವುದು ನೀಡುವುದೋ ಅದೇ ನಿಜವಾದ ಶಿಕ್ಷಣ.

ನುಡಿಮುತ್ತುಗಳು ೫

ಈ ಜ್ಞಾನವೆಂಬುದು ಮನುಷ್ಯನಲ್ಲಿಯೇ ಅಡಗಿರುವುದು. ಹೊರಗಿನಿಂದ ಯಾವ ಜ್ಞಾನವೂ ಬರುವುದಿಲ್ಲ. ಅದೆಲ್ಲವೂ ಒಳಗೇ ಇರುವುದು... ನ್ಯೂಟನ್ನನು ಗುರುತ್ವಾಕರ್ಷಣವನ್ನು ಕಂಡುಹಿಡಿದನೆಂದು ನಾವು ಹೇಳುತ್ತೆವಲ್ಲವೇ? ಅದೇನು ಎಲ್ಲಿಯೋ ಒಂದು ಮೂಲೆಯಲ್ಲಿ ಕುಳಿತುಕೊಂಡು ನ್ಯೂಟನ್ನನು ತನ್ನನ್ನು ಕಂಡು ಹಿಡಿಯುವುದಕ್ಕೆ ಬರುವನೆಂದು ಕಾಯುತ್ತಿದ್ದಿತೇನು? ಅದು ಆತನ ಮನಸ್ಸಿನಲ್ಲಿಯೇ ಇದ್ದಿತು, ಸಮಯ ಬಂದಿತು, ಆಗ ಅದು ಬಯಲಾಯಿತು, ಎಂದರೆ ಆತನಿಗೆ ಜ್ಞಾನ ಹೊಳೆಯಿತು. ಜಗತ್ತುಗಳಿಸಿರುವ ಜ್ಞಾನವೆಲ್ಲವೂ ಮನಸ್ಸಿನಿಂದ ಬಂದುದೇ. ಜಗತ್ತಿನ ಅನಂತ ಪುಸ್ತಕ ಭಂಡಾರವೆಲ್ಲ ನಿಮ್ಮ ಮನಸ್ಸಿನಲ್ಲಿಯೇ ಇದೆ. ಬಾಹ್ಯಪ್ರಪಂಚವೆಂಬುದು ಸೂಚನೆ ಮಾತ್ರ, ಅದು ನಿಮ್ಮ ಮನಸ್ಸನ್ನು ವಿಚಾರ ಮಾಡುವಂತೆ ಪ್ರೇರೇಪಿಸುವುದು.

ನುಡಿಮುತ್ತುಗಳು ೭

ಪ್ರತಿಯೊಬ್ಬರೂ ಆಜ್ಞಾಪಿಸುವವರೆ. ಆಜ್ಞಾಧಾರಕರಾಗಲು ಯಾರೂ ಇಚ್ಛಿಸುವುದಿಲ್ಲ. ಹಿಂದಿನಕಾಲದ ಬ್ರಹ್ಮಚರ್ಯಾಶ್ರಮ ಈಗ ಇಲ್ಲದಿರುವುದೇ ಇದಕ್ಕೆ ಕಾರಣ. ಮೊದಲು ಅಪ್ಪಣೆ ಪಾಲಿಸುವುದನ್ನು ಕಲಿಯಿರಿ. ಆಜ್ಞೆ ಕೊಡುವುದು ಅನಂತರ ಬರುವುದು. ಮೊದಲು ಹೇಗೆ ಸೇವಕನಾಗಬೇಕೆಂಬುದನ್ನು ಕಲಿಯಿರಿ. ಅನಂತರ ಸ್ವಾಮಿಯವಾಗಲೂ ಯೋಗ್ಯರಾಗುವಿರಿ.

ನುಡಿಮುತ್ತುಗಳು ೮

ವಿದ್ಯೆ, ವಿದ್ಯೆ, ವಿದ್ಯೆಯೊಂದೇ. ಅನೇಕ ಐರೋಪ್ಯ ದೇಶಗಳಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅತಿ ದೀನರಿಗೂ ಅಲ್ಲಿ ಲಭಿಸಿರುವ ಸೌಕರ್ಯ ಮತ್ತು ವಿದ್ಯೆ ಇವುಗಳನ್ನು ಕಂಡಾಗ, ನನ್ನ ದೇಶದ ಬಡಜನರ ಸ್ಥಿತಿಯು ನನಗೆ ನೆನಪಾಗಿ, ನಾನು ಕಂಬನಿಯನ್ನು ಸುರಿಸುತ್ತಿದ್ದೆ. ಈ ವ್ಯತ್ಯಾಸ ಹೇಗೆ ಆಯಿತು? ನನಗೆ ಸಿಕ್ಕಿದ ಉತ್ತರವೇ, ವಿದ್ಯೆ.

ನುಡಿಮುತ್ತುಗಳು ೯

ಆರ್ಯ ಜನಾಂಗದಲ್ಲಿ ಭರತಖಂಡ ಅವನತಿಯಲ್ಲಿರುವುದಕ್ಕೆ ಏನನ್ನಾದರೂ ಕಾರಣವನ್ನು ನೀವು ಕೊಡಬಲ್ಲಿರಾ? ಇಲ್ಲಿ ಬುದ್ಧಿಗೆ ಬರಗಾಲವೆ, ಕೌಶಲ್ಯಕ್ಕೆ ಬರಗಾಲವೆ? ಇಲ್ಲಿನ ಕಲೆ, ಗಣಿತಶಾಸ್ತ್ರ, ತತ್ತ್ವ ಇವನ್ನೂ ನೋಡಿ 'ಹೌದು ಎನ್ನಬಲ್ಲಿರಾ? ಈಗ ಪ್ರಗತಿಪರ ರಾಷ್ಟ್ರಗಳೊಡನೆ ಅಗ್ರಭಾಗದಲ್ಲಿ ನಿಲ್ಲಬೇಕಾದರೆ ಬೇಕಾಗಿರುವುದು ಶತಮಾನಗಳಿಂದ ಇದ್ದ ತಾಮಸಿಕ ಸ್ಥಿತಿಯಿಂದ ಪಾರಾಗಿ ಜಾಗ್ರತರಾಗುವುದು. .... ಭರತಖಂಡದ ಜನಾಂಗದ ಆದರ್ಶವೇ ತ್ಯಾಗ ಮತ್ತು ಸೇವೆ. ಇವೆರಡನ್ನು ಚೆನ್ನಾಗಿ ರೂಢಿಸಿ, ಉಳಿದುವೆಲ್ಲ ತಮಗೆ ತಾವೇ ಹೊಂದಿಕೊಳ್ಳುವುವು.

ನುಡಿಮುತ್ತುಗಳು ೧೦

ಎಲ್ಲವನ್ನೂ ಪರಿಹಾಸ್ಯಮಾಡುವ ಹುಡುಗಾಟಿಕೆಯ ರೋಗ ನಮ್ಮ ರಾಷ್ಟ್ರಜೀವನದ ರಕ್ತವನ್ನು ಹೊಕ್ಕಿವೆ. ಮೊದಲು ಅದನ್ನು ತ್ಯಜಿಸಿ. ಧೀರರಾಗಿ, ಶ್ರದ್ಧಾವಂತರಾಗಿ, ಉಳಿದುದೆಲ್ಲಾ ಸ್ವಾಭಾವಿಕವಾಗಿ ಸಿದ್ಧಿಸುವುದು.

ನುಡಿಮುತ್ತುಗಳು ೧೧

ಹೀನಸ್ಥಿತಿಯಲ್ಲಿರುವ ನಮ್ಮ ಬಡವರಿಗೆ ನಾವು ಮಾಡಬೇಕಾದ ಮುಖ್ಯಕರ್ತವ್ಯವೆ, ಅವರಿಗೆ ವಿದ್ಯೆಯನ್ನು ಕೊಟ್ಟು ಅವರನ್ನು ಪುನಃ ಮನುಷ್ಯರನ್ನಾಗಿ ಮಾಡುವುದು... ಅವರಿಗೆ ಉನ್ನತ ವಿಚಾರಗಳನ್ನು ಕೊಡಿ. ಅವರಿಗೆ ಬೇಕಾಗಿರುವ ಸಹಾಯ ಅದೊಂದೇ. ಅನಂತರ ಇವುಗಳ ಪರಿಣಾಮವಾಗಿ ಉಳಿದುದೆಲ್ಲ ಬಂದೆ ಬರುವುದು. ರಾಸಾಯನಿಕ ವಸ್ತುಗಳನ್ನು ಮಿಶ್ರ ಮಾಡುವುದಷ್ಟೇ ನಮ್ಮ ಕೆಲಸ. ಹರಳುಗಟ್ಟುವಿಕೆ ಪ್ರಕೃತಿನಿಯಮದಂತಾಗುತ್ತದೆ... ಬೆಟ್ಟ ಮಹಮ್ಮದನ ಸಮೀಪಕ್ಕೆ ಬರದೇ ಇದ್ದರೆ ಮಹಮ್ಮದನೇ ಬೆಟ್ಟದ ಸಮೀಪಕ್ಕೆ ಬರಬೇಕು. ಬಡಹುಡುಗನು ವಿದ್ಯಾವ್ಯಸಂಗಕ್ಕೆ ಬರಲಾಗದಿದ್ದಾರೆ ವಿದ್ಯೆಯೇ ಅವನ ಬಳಿಗೆ ಹೋಗಬೇಕು.

ನುಡಿಮುತ್ತುಗಳು ೧೨

ಯಾವ ಬಗೆಯ ಶಿಕ್ಷಣದಿಂದ ಶೀಲಾ ರೂಪುಗೊಳ್ಳುವುದೊ, ಮನಶ್ಶಕ್ತಿ ವೃದ್ಧಿಯಾಗುವುದೊ, ಬುದ್ಧಿ ವಿಕಾಸಗೊಳ್ಳುವುದೊ ಮತ್ತು ಯಾವುದರಿಂದ ನಮ್ಮ ಸ್ವಂತ ಕಾಲ ಮೇಲೆ ನಾವು ನಿಂತು ಕೊಳ್ಳಬಲ್ಲೆವೊ ಅಂತಹ ಶಿಕ್ಷಣ ನಮಗೆ ಅವಶ್ಯಕ.

ನುಡಿಮುತ್ತುಗಳು ೧೩

ಯಾವ ಶಿಕ್ಷಣದಿಂದ ನಮ್ಮ ಇಚ್ಛಾಶಕ್ತಿಯು ಅನೇಕ ಪೀಳಿಗೆಗಳಿಂದ ಬಲಾತ್ಕಾರವಾಗಿ ಹತ್ತಿಕ್ಕಲ್ಪಟ್ಟು ಈಗ ಮೃತಪ್ರಾಯವಾಗಿರುವುದೋ ಅದು ಶಿಕ್ಷಣವೆ? ನೀವೇ ಆಲೋಚಿಸಿರಿ. ಯಾವುದರ ದುಷ್ಪ್ರಭಾವದಿಂದ ಹೊಸ ಚೈತನ್ಯದಾಯಕ ವಿಚಾರಗಳ ಮಾತು ಹಾಗಿರಲಿ, ಅಂತಹ ಹಳೆಯ ವಿಚಾರಗಳು ಕೂಡಾ ಒಂದೊಂದಾಗಿ ಅಳಿದು ಹೋಗುತ್ತಿವೆಯೋ, ಯಾವುದು ಮನುಷ್ಯನನ್ನು ಯಂತ್ರಸದೃಶನನ್ನಾಗಿ ಮಾಡಿರುವುದೋ ಅದೆಂತಹ ಶಿಕ್ಷಣ? ನನ್ನ ಅಭಿಪ್ರಾಯದಲ್ಲಿ ಚಾಲಿತ ಯಂತ್ರದಂತೆ ಒಳ್ಳೆಯವರಾಗಿರುವುದಕ್ಕಿಂತಲೂ ಸ್ವಂತ ಇಚ್ಛಾಶಕ್ತಿ ಮತ್ತು ಬುದ್ಧಿಶಕ್ತಿಗಳ ಪ್ರೇರಣೆಯಿಂದ ದಾರಿತಪ್ಪಿದರೂ ಅದು ಹೆಚ್ಚು ಶ್ರೇಯಸ್ಕರ.

ನುಡಿಮುತ್ತುಗಳು ೧೪

ವೇದಾಂತದೊಡನೆ ಮಿಳಿತಗೊಂಡಿರುವ ಪಾಶ್ಚಾತ್ಯ ವಿಜ್ಞಾನ, ಬ್ರಹ್ಮಚಾರ್ಯವೆ ಆಸರೆಯಾದ ಧ್ಯೇಯ ಮತ್ತು ನಮ್ಮ ಆತ್ಮದಲ್ಲಿ ದೃಢವಾದ ಶ್ರದ್ಧೆ ಮತ್ತು ನಂಬಿಕೆ -ಇವು ನಮಗೆ ಬೇಕಾಗಿರುವುದು ....... ಮನುಷ್ಯನಲ್ಲಿಯೇ ಎಲ್ಲಾ ಜ್ಞಾನವೂ ಇದೆ ಎಂದು ವೇದಾಂತ ಹೇಳುವುದು-ಚಿಕ್ಕ ಹುಡುಗನಲ್ಲಿ ಕೂಡ ಈ ಜ್ಞಾನ ಇದೆ-ಏನಿದ್ದರೂ ಅದನ್ನು ಜಾಗ್ರತಗೊಳಿಸಬೇಕು ಅಷ್ಟೆ. ಶಿಕ್ಷಕನ ಕೆಲಸ ಇಷ್ಟು ಮಾತ್ರವೇ.. ಆದರೆ ಎಲ್ಲದರ ಮೂಲ ಧರ್ಮದಲ್ಲಿದೆ. ಧರ್ಮ ಅನ್ನದಂತೆ ಉಳಿದುವೆಲ್ಲಾ ಪಲ್ಯಗಳಂತೆ. ಕೇವಲ ಪಲ್ಯವನ್ನೇ ತಿಂದರೆ ಅಜೀರ್ಣವಾಗುವುದು. ಹಾಗೆಯೇ ಬರೇ ಅನ್ನವನ್ನೇ ತಿಂದರೂ ಅಜೀರ್ಣವಾಗುವುದು.

ನುಡಿಮುತ್ತುಗಳು ೧೫

ಕಟ್ಟುನಿಟ್ಟಾದ ಬ್ರಹ್ಮಚರ್ಯದ ಅಭ್ಯಾಸದಿಂದ ಎಲ್ಲ ವಿದ್ಯೆಯ ಕಲಿಕೆ ಅತ್ಯಲ್ಪ ಕಾಲದಲ್ಲೇ ಕರತಲಾಮಲಕವಾಗುತ್ತದೆಂಬುದನ್ನು ನೀವು ಗಮನಿಸಿಲ್ಲವೆ? ಒಮ್ಮೆಯಷ್ಟೇ ಓದಿದ್ದನ್ನು ಅಥವಾ ಕೇಳಿದ್ದನ್ನು ಮರೆಯದೆ ಇರುವಂಥ ಜ್ಞಾಪಕಶಕ್ತಿ ಬ್ರಹ್ಮಚರ್ಯದಿಂದ ಬರುವುದು. ನಮ್ಮ ದೇಶದಲ್ಲಿ ಬ್ರಹ್ಮಚರ್ಯದ ಅಭಾವದಿಂದ ಎಲ್ಲವೂ ವಿನಾಶದ ಅಂಚಿನಲ್ಲಿರುವುದು.

ನುಡಿಮುತ್ತುಗಳು ೧೬

ನನ್ನ ವಿದ್ಯಾಭ್ಯಾಸದ ಆದರ್ಶವೆಂದರೆ ಗುರುಗೃಹವಾಸ. ಗುರುವಿನ ಪ್ರತ್ಯಕ್ಷ ಜೀವನದ ಮೇಲ್ಪಂಕ್ತಿ ಇಲ್ಲದೆ ನಿಜವಾದ ವಿದ್ಯಾಭ್ಯಾಸವಿಲ್ಲ. ನಮ್ಮ ವಿಶ್ವವಿದ್ಯಾನಿಲಯಗಳನ್ನೇ ತೆಗೆದುಕೊಳ್ಳಿ. ಐವತ್ತು ವರುಷಗಳಿಂದ ಅವುಗಳೇನು ಮಾಡಿರುವುವು? ಸ್ವತಂತ್ರವಾಗಿ ಆಲೋಚಿಸ ಬಲ್ಲ ಒಬ್ಬನೇ ಒಬ್ಬ ವ್ಯಕ್ತಿಯನ್ನೂ ಅವು ಸೃಷ್ಟಿಸಿಲ್ಲ. (ಈ ಮಾತನ್ನು ಸ್ವಾಮೀಜಿಯವರು ನುಡಿದದ್ದು 1897ರಲ್ಲಿ, ಮದ್ರಾಸಿನಲ್ಲಿ) ವಿಶ್ವವಿದ್ಯಾನಿಲಯಗಳು ಪರೀಕ್ಷೆಗಳನ್ನು ನಡೆಸುವ ಮಂಡಲಿಗಳಾಗಿವೆ. ಎಲ್ಲರ ಹಿತಕ್ಕಾಗಿ ತ್ಯಾಗ ಮಾಡಬೇಕೆಂಬ ಭಾವನೆ ನಮ್ಮ ದೇಶದಲ್ಲಿ ಇನ್ನೂ ಬೆಳೆದಿಲ್ಲ.

ನುಡಿಮುತ್ತುಗಳು ೧೭

ಸತ್ಯವು ಯಾವ ಸಮಾಜಕ್ಕೂ, ಅದು ಪುರಾತನವಾಗಲಿ, ಆಧುನಿಕವಾಗಲಿ ಬಾಗುವುದಿಲ್ಲ. ಸಮಾಜವು ಸತ್ಯಕ್ಕೆ ಮನ್ನಣೆಯನ್ನು ತೋರಬೇಕು, ಇಲ್ಲವೆ ಅಳಿಯಬೇಕು. ಸಮಾಜವು ಸತ್ಯಕ್ಕೆ ಹೊಂದಿಕೊಳ್ಳಬೇಕು, ಸತ್ಯವೂ ಸಮಾಜಕ್ಕೆ ಹೊಂದಿಕೊಳ್ಳುವುದಲ್ಲ .... ಯಾವ ಸಮಾಜದಲ್ಲಿ ಶ್ರೇಷ್ಠ ಸತ್ಯಗಳು ಅನುಷ್ಠಾನಸಾಧ್ಯವಾಗಬಲ್ಲವೋ ಅದೇ ಶ್ರೇಷ್ಠವಾದ ಸಮಾಜ ಎಂಬುದೇ ನನ್ನ ಅಭಿಪ್ರಾಯ. ಸಮಾಜವು ಶ್ರೇಷ್ಠ ಸತ್ಯಗಳ ಅನುಷ್ಠಾನಕ್ಕೆ ಇನ್ನೂ ಯೋಗ್ಯವಾಗಿಲ್ಲದೇ ಇದ್ದರೆ ಅದನ್ನು ಯೋಗ್ಯವಾಗುವಂತೆ ಮಾಡಿ. ಎಷ್ಟು ಬೇಗ ಮಾಡಿದರೆ ಅಷ್ಟೂ ಒಳ್ಳೆಯದು.

ನುಡಿಮುತ್ತುಗಳು ೧೮

ಜನಗಳ ಬಂಧನಗಳನ್ನು ಸಾಧ್ಯವಾದಷ್ಟು ಬಿಡಿಸಿ ಎಂದು ನಾನು ಹೇಳುವುದು.... ಸಮಾಜದ ಹಿತಕ್ಕಾಗಿ, ಎಂದು ನಿಮ್ಮ ಸಮಸ್ತ ಸುಖವನ್ನು ತ್ಯಾಗ ಮಾಡುವಿರೋ, ಅಂದು ನೀವು ಬುದ್ಧನಂತಾಗುವಿರಿ, ಮುಕ್ತರಾಗುವಿರಿ.

ನುಡಿಮುತ್ತುಗಳು ೧೯

ಪ್ರತಿಯೊಂದು ವ್ಯಕ್ತಿಯನ್ನು ಮತ್ತು ಪ್ರತಿಯೊಂದು ರಾಷ್ಟ್ರವನ್ನು ಏಳಿಗೆಗೆ ತರುವುದಕ್ಕೆ ಇವು ಮೂರು ವಿಷಯಗಳು ಅತ್ಯಾವಶ್ಯಕ.

1. ಒಳ್ಳೆಯತನದ ಶಕ್ತಿಯಲ್ಲಿ ಅಚಲವಾದ ವಿಶ್ವಾಸ.
2. ಅಸೂಯೆ ಅನುಮಾನಗಳು ಇಲ್ಲದೆ ಇರುವುದು.
3. ಯಾರು ಒಳ್ಳೆಯವರಾಗುವುದಕ್ಕೆ ಮತ್ತು ಒಳ್ಳೆಯದನ್ನು ಮಾಡುವುದಕ್ಕೆ ಪ್ರಯತ್ನಪಡುವರೋ ಅವರಿಗೆಲ್ಲಾ ಸಹಾಯ ಮಾಡುವುದು.

ನುಡಿಮುತ್ತುಗಳು ೨೦

ನಿಮ್ಮ ಆದರ್ಶ ಜಡವಸ್ತುವಾದರೆ, ನೀವೂ ಜಡವಾಗುವಿರಿ. ನೋಡಿ! ನಮ್ಮ ಆದರ್ಶ ಆತ್ಮ. ಅದೊಂದೇ ಶಾಶ್ವತ. ಉಳಿದವು ಯಾವುದೂ ಅಲ್ಲ. ಅದರಂತೆಯೇ ನಾವೂ ಶಾಶ್ವತವಾಗಿ ಬಾಳುವೆವು.

ನುಡಿಮುತ್ತುಗಳು ೨೧

ಹಿಂದೂ ಧಾರ್ಮಿಕವಾಗಿ ಕುಡಿಯುವನು, ಧಾರ್ಮಿಕವಾಗಿ ಮಲಗುವನು, ಧಾರ್ಮಿಕವಾಗಿ ನಡೆಯುವನು, ಧಾರ್ಮಿಕವಾಗಿ ಮದುವೆಯಾಗುವನು, ಧಾರ್ಮಿಕವಾಗಿ ದರೋಡೆ ಮಾಡುವನು....... ಜಗತ್ತಿಗೆ ಕೊಡುವುದಕ್ಕೆ ಪ್ರತಿಯೊಂದು ಜನಾಂಗಕ್ಕೂ ಒಂದು ಸಂದೇಶವಿದೆ. ಎಲ್ಲಿಯವರೆವಿಗೂ ಆ ಸಂದೇಶಕ್ಕೆ ಧಕ್ಕೆ ಬರುವುದಿಲ್ಲವೋ ಅಲ್ಲಿಯವರೆವಿಗೂ ಎಷ್ಟು ಕಷ್ಟ ಬಂದರೂ ಆ ಜನಾಂಗ ಬಾಳುವುದು. ಎಂದು ಅದರ ಸಂದೇಶ ನಾಶವಾಗುವುದೋ ಅಂದು ಆ ಜನಾಂಗ ತತ್ತರಿಸಿ ಕುಸಿಯುವುದು.

ನುಡಿಮುತ್ತುಗಳು ೨೨

ಶುದ್ಧ ಚಾರಿತ್ರ್ಯವೇ ಜನಾಂಗದ ಜೀವಾಳ. ಲಂಪಟತನವೇ ಜನಾಂಗದ ನಾಶದ ಮೊದಲ ಚಿಹ್ನೆ ಎಂಬುದು ನಿಮಗೆ ಇತಿಹಾಸದಲ್ಲಿ ಕಾಣುವುದಿಲ್ಲವೆ? ಎಂದು ಅದು ಜನಾಂಗದಲ್ಲಿ ತಲೆದೋರುವುದೋ ಆಗಲೇ ಜನಾಂಗದ ನಾಶ ಸನ್ನಿಹಿತವಾದಂತೆ.

ನುಡಿಮುತ್ತುಗಳು ೨೩

ನಾವೀಗ ಮೃಗಗಳಿಗಿಂತ ಹೆಚ್ಚು ನೀತಿವಂತರಾಗಿಲ್ಲ. ಸಮಾಜದ ಚಾವಟಿಯ ಏಟಿಗೆ ಮಾತ್ರ ನಾವು ಅಂಜುತ್ತಿರುವೆವು. ಸಮಾಜವು ಇಂದು 'ನೀವು ಕದ್ದರೆ ನಿಮ್ಮನ್ನು ಶಿಕ್ಷಿಸುವುದಿಲ್ಲ' ಎಂದರೆ ಇತರರ ಆಸ್ತಿಯನ್ನು ದೋಚಲು ಒಡನೆಯೇ ಧಾವಿಸುವೆವು. ನಮ್ಮನ್ನು ನೀತಿವಂತರನ್ನಾಗಿ ಮಾಡಿರುವವನು ಪೊಲೀಸಿನವನು. ಸಾಮಾಜಿಕ ಅಭಿಪ್ರಾಯವೇ ನಮ್ಮ ನೀತಿಗೆ ಕಾರಣವಾಗಿದೆ. ಹಾಗೆ ನೋಡಿದರೆ ಪ್ರಾಣಿಗಳಿಗಿಂತ ನಾವೇನೂ ಬಹಳ ಮೇಲಿಲ್ಲ.

ನುಡಿಮುತ್ತುಗಳು ೨೪

ಬಹುಪಾಲು ಪಂಗಡಗಳೆಲ್ಲ ಅಲ್ಪಕಾಲಿಕ. ನೀರಿನ ಗುಳ್ಳೆಗಳಂತೆ ಎದ್ದು ಮಾಯವಾಗುತ್ತವೆ. ಏಕೆಂದರೆ ಅವುಗಳ ಮುಂದಾಳುಗಳಲ್ಲಿ ಚಾರಿತ್ರ್ಯಶುದ್ಧಿಯುಳ್ಳವರು ಅಪರೂಪ. ಎಂದಿಗೂ ವಿಚಲಿತವಾಗದ ನಿಃಸ್ವಾರ್ಥಪ್ರೇಮ-ಇದೊಂದೇ ಚಾರಿತ್ರ್ಯವನ್ನು ರೂಢಿಸಬಲ್ಲದು. ನಾಯಕನಲ್ಲಿ ಚಾರಿತ್ರ್ಯಶುದ್ಧಿ ಇಲ್ಲದೇ ಇದ್ದರೆ ಯಾರೂ ಅವನಿಗೆ ವಿಧೇಯರಾಗಿರುವುದಿಲ್ಲ. ಯಾರಲ್ಲಿ ಚಾರಿತ್ರ್ಯಶುದ್ಧಿ ಇದೆಯೋ ಅವರಿಗೆ ಜನರು ಎಂದೆಂದಿಗೂ ವಿಧೇಯರಾಗಿರುವರು ; ಹಾಗೂ ಅವರಲ್ಲಿ ವಿಶ್ವಾಸ ತಾಳುವರು. ಒಂದು ಆದರ್ಶವನ್ನು ತೆಗೆದುಕೊಂಡು ಸಾಧನೆ ಮಾಡಿ, ಸಹನೆಯಿಂದ ಹೋರಾಡಿ, ಕೊನೆಗೆ ನಿಮಗೆ ಬೆಳಕು ಬರುವುದು.

ನುಡಿಮುತ್ತುಗಳು ೨೫

ಧರ್ಮದಿಂದ ಸಮಾಜಕ್ಕೆ ಏನು ಪ್ರಯೋಜನ ಎಂದು ನಮ್ಮನ್ನು ಕೇಳುವವರಿದ್ದಾರೆ. ಸತ್ಯವನ್ನು ಪರೀಕ್ಷಿಸುವುದಕ್ಕೆ ಸಮಾಜ ಒಂದು ಒರೆಗಲ್ಲೆಂದು ಅವರು ಭಾವಿಸುವರು. ಇದು ಕುತರ್ಕ. ಸಮಾಜವೆಂಬುದು ನಮ್ಮ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಒಂದು ತಾತ್ಕಾಲಿಕ ಅವಸ್ಥೆಯಷ್ಟೆ............ ಸಾಮಾಜಿಕ ಸ್ಥಿತಿಯೇ ಶಾಶ್ವತವೆಂದಾದರೆ ಮಗುವು ಯಾವಾಗಲೂ ಮಗುವಿನಂತೆಯೇ ಇರುವಂತಾಗುತ್ತಿತ್ತು. ಎಂದಿಗೂ ಪರಿಪೂರ್ಣವಾದ ವಯಸ್ಕ-ಶಿಶು ಇರುವುದಿಲ್ಲ ಅದು ಪದಗಳ ವಿರೋಧಾಭಾಸ. ಆದ್ದರಿಂದ ಪರಿಪೂರ್ಣವಾದ ಸಮಾಜ ಎಂಬುದು ಇರಲು ಸಾಧ್ಯವಿಲ್ಲ. ಮಾನವನು ತನ್ನ ಮೊದಲ ಸ್ಥಿತಿಯನ್ನು ಮೀರಿ ಬೆಳೆದೇ ಬೆಳೆಯುತ್ತಾನೆ....... ನನ್ನ ಗುರುಗಳು ಹೀಗೆ ಹೇಳುತ್ತಿದ್ದರು: 'ನೀನು ನಿನ್ನ ಹೃದಯ ಕಮಲವು ಅರಳುವಂತೆ ಏತಕ್ಕೆ ಯತ್ನಿಸಬಾರದು? ಆಗ ದುಂಬಿಗಳು ತಮಗೆ ತಾವೇ ಅದರೆಡೆಗೆ ಬರುವುವು.'

ನುಡಿಮುತ್ತುಗಳು ೨೬

ಇತರರ ಕೆಟ್ಟತನವನ್ನೇ ಗಮನಿಸುತ್ತಿರಬೇಡಿ. ದುಷ್ಟತನವು ದೌರ್ಬಲ್ಯದಿಂದ, ಅಜ್ಞಾನದಿಂದ ಆದುದು. ಜನರಿಗೆ ಅವರು ದುರ್ಬಲರು ಎಂದು ಹೇಳಿ ಪ್ರಯೋಜನವೇನು? ಟೀಕೆ ಮಾಡುವುದು, ಧ್ವಂಸ ಮಾಡುವುದು ಇವುಗಳಿಂದ ಪ್ರಯೋಜನವಿಲ್ಲ. ನಾವು ಅವರಿಗೆ ಮತ್ತಾವುದಾದರೂ ಉತ್ತಮವಾಗಿರುವುದನ್ನು ಕೊಡಬೇಕಾಗಿದೆ. ಪವಿತ್ರತೆ ನಿಮ್ಮ ಆಜನ್ಮ ಸಿದ್ಧ ಹಕ್ಕು ಎಂದು ಹೇಳಬೇಕು.

ನುಡಿಮುತ್ತುಗಳು ೨೭

'ಸುಧಾರಣೆಗೊಳ್ಳಬೇಕು ನೀವು' ಎಂದು ನಾನು ಹೇಳುವುದಿಲ್ಲ. ಆದರೆ ಮುಂದುವರಿಯಿರಿ ಎನ್ನುತ್ತೇನೆ. ಸುಧಾರಣೆಯಾಗಬೇಕಾದಷ್ಟು ಕೆಟ್ಟಿರುವುದು ಯಾವುದೂ ಇಲ್ಲ. ಹೊಂದಾಣಿಕೆಯೇ ಜೀವನದ ರಹಸ್ಯ ಜೀವವಿಕಾಸಕ್ಕೆ ಆಧಾರವಾಗಿರುವ ತತ್ತ್ವ. ಜೀವನಿಗೂ ಮತ್ತು ಇವನನ್ನು ನಾಶಪಡಿಸಲು ಯತ್ನಿಸುವ ಪರಿಸರಕ್ಕೂ ನಡೆಯುವ ಘರ್ಷಣೆಯಿಂದಲೇ ಹೊಂದಾಣಿಕೆ ಹುಟ್ಟುವುದು. ಯಾರು ಚೆನ್ನಾಗಿ ಹೊಂದಿಕೊಂಡು ಹೋಗುವರೋ ಅವರೇ ದೀರ್ಘಕಾಲ ಬಾಳುವರು. ನಾನು ಇದನ್ನು ಬೋಧಿಸದೇ ಇದ್ದರೂ ಸಮಾಜ ಬದಲಾಗುತ್ತಿದೆ. ಅದು ಬದಲಾಗಲೇಬೇಕು.

ನುಡಿಮುತ್ತುಗಳು ೨೮

ಪ್ರೇಮ, ನಿಷ್ಕಾಪಟ್ಯ ಮತ್ತು ಸಹನೆ ಇವುಗಳಲ್ಲದೆ ಬೇರೇನೂ ಬೇಕಿಲ್ಲ. ಜೀವನವೆಂದರೆ ಬೆಳವಣಿಗೆ, ಅಂದರೆ ವಿಕಾಸ; ವಿಕಾಸವೆಂದರೆ ಪ್ರೇಮ. ಆದ್ದರಿಂದ ಪ್ರೇಮಮಯವಾದುದೆಲ್ಲ ಜೀವನ, ಪ್ರೇಮವೇ ಜೀವನದ ಏಕೈಕ ನಿಯಮ, ಸ್ವಾರ್ಥಪರತೆಯೆ ಮೃತ್ಯು. ಈ ಮಾತು ಇಹದಲ್ಲಿಯೂ ಮತ್ತು ಪರದಲ್ಲಿಯೂ ಸತ್ಯ. ಪರೋಪಕಾರ ಮಾಡುವುದೇ ಜೀವನ ಚಿಹ್ನೆ. ಪರೋಪಕಾರ ಮಾಡದೇ ಇರುವುದೇ ಸಾವು. ನೀವು ನೋಡುವ ಶೇಕಡಾ 99 ಮಂದಿ ನರಪಾಶುಗಳು ಸತ್ತಂತೆಯೇ. ಅವರು ಪ್ರೇತಸ್ವರೂಪರು. ನನ್ನ ಮಗು! ಯಾರು ಇನ್ನೊಬ್ಬರನ್ನು ಪ್ರೀತಿಸುವನೋ ಅವನು ಮಾತ್ರ ಬದುಕಿರುವನು.

ನುಡಿಮುತ್ತುಗಳು ೨೯

ಒಂದು ಕಡೆ ಆಧುನಿಕ ಭಾರತ 'ನಾವು ಪಾಶ್ಚಾತ್ಯರ ಭಾವನೆ, ಭಾಷೆ, ಆಹಾರ, ಉಡಿಗೆ, ತೊಡಿಗೆ, ಆಚಾರ, ವ್ಯವಹಾರ ಮುಂತಾದುವನ್ನು ಅನುಕರಿಸಿದರೆ, ಪಾಶ್ಚಾತ್ಯರಷ್ಟು ಬಲಾಢ್ಯರೂ ಮತ್ತು ಪರಾಕ್ರಮ ಶಾಲಿಗಳೂ ಆಗುವೆವು' ಎಂದು ಹೇಳುತ್ತಿರುವುದು. ಪ್ರಾಚೀನ ಭಾರತ ಮತ್ತೊಂದು ಕಡೆ, 'ಮೂರ್ಖರೆ! ಅಂಧ ಅನುಕರಣೆಯಿಂದ ಹೆರರ ಭಾವನೆ ಎಂದಿಗೂ ನಿಮ್ಮದಾಗದು. ಸ್ವಶಕ್ತಿಯಿಂದ ಸಂಪಾದಿಸಿದಲ್ಲದೆ ಯಾವುದೂ ನಿಮ್ಮದಾಗದು. ಸಿಂಹದ ತೊಗಲನ್ನು ಧರಿಸಿದ ಮಾತ್ರಕ್ಕೆ ಕತ್ತೆ ಸಿಂಹವಾಗುವುದೆ?' ಎನ್ನುತ್ತಿರುವುದು.

ನುಡಿಮುತ್ತುಗಳು ೩೦

ಒಂದು ಕಡೆ ಆಧುನಿಕ ಭಾರತವು 'ಪಾಶ್ಚಾತ್ಯರು ಏನನ್ನು ಮಾಡುತ್ತಿರುವರೋ ಅದು ನಿಜವಾಗಿಯೂ ಒಳ್ಳೆಯದು. ಇಲ್ಲದೆ ಇದ್ದರೆ, ಅವರು ಹೇಗೆ ಅಷ್ಟು ಪ್ರತಿಷ್ಠಿತರಾಗಿರುವರು?' ಎನ್ನುತ್ತಿರುವುದು ಪ್ರಾಚೀನ ಭಾರತ 'ಬಾಲಕರೆ ನೋಡಿ! ಮಿಂಚಿನ ಬೆಳಕು ಕಣ್ಣು ಕೋರೈಸುವಂಥದ್ದು. ಆದರೆ ಕ್ಷಣಕಾಲ ಮಾತ್ರ ಅದು ಬೆಳಗುವುದು, ಜೋಪಾನವಾಗಿರಿ!' ಎನ್ನುವುದು.

ನುಡಿಮುತ್ತುಗಳು ೩೧

ಪಾಶ್ಚಾತ್ಯರಲ್ಲಿ ಸಾಮಾಜಿಕ ಜೀವನ ಒಂದು ನಗೆಯ ಬುಗ್ಗೆಯಂತೆ ಇದೆ. ಆದರೆ ಅದರ ಕೆಳೆಗೆ ಇರುವುದು ಗೋಳು. ಅದೊಂದು ದುರಂತದಲ್ಲಿ ಕೊನೆಗಾಣುವುದು. ತಮಾಷೆ ನಗು ಇವೆಲ್ಲ ಮೇಲೆ ಮಾತ್ರ. ಆದರೆ ನಿಜವಾಗಿ ಅದರಲ್ಲಿ ತುಂಬಿರುವುದು ಯಾತನೆ. ಆದರೆ ಇಲ್ಲಿ ಭರತಖಂಡದಲ್ಲಿ ಹೊರಗೆಲ್ಲ ದುಃಖ, ಸಂಕಟ ; ಆದರೆ ಒಳಗೆ ಸ್ವಚ್ಛಂದ, ಆನಂದ.

ನುಡಿಮುತ್ತುಗಳು ೩೨

ಉಪನಿಷತ್ತಿನ ಕಾಲದಲ್ಲಿಯೇ ನಾವು ಪ್ರಪಂಚಕ್ಕೆ ಸವಾಲನ್ನು ಹಾಕಿರುವೆವು. ಅದೆಂದರೆ : 'ಸಂತತಿಯಿಂದಲ್ಲ, ಧನದಿಂದಲ್ಲ, ತ್ಯಾಗದಿಂದ ಮಾತ್ರ ಅಮೃತತ್ವವನ್ನು ಪಡೆಯಲು ಸಾಧ್ಯ.' ಜನಾಂಗಗಳಾದ ಮೇಲೆ ಜನಾಂಗಗಳು ಬದುಕಿನ ಸವಾಲನ್ನು ಸ್ವೀಕರಿಸಿ ಪ್ರಪಂಚದ ಸಮಸ್ಯೆಯನ್ನು ಬಗೆಹರಿಸಲು ಆಸೆಯ ಮಟ್ಟದಲ್ಲಿ ತಮ್ಮ ಕೈಲಾದಷ್ಟೂ ಪ್ರಯತ್ನಿಸಿವೆ. ಅವುಗಳೆಲ್ಲಾ ಹಿಂದೆ ವಿಫಲವಾಗಿವೆ. ಕಾಂಚನ ಮತ್ತು ಅಧಿಕಾರ ಲಾಲಸೆಯಿಂದ ಬರುವ ದೌರಾತ್ಮ್ಯ ಮತ್ತು ದುಃಖದ ಭಾರಕ್ಕೆ ಸಿಕ್ಕಿ ಇವುಗಳೆಲ್ಲಾ ನಾಶವಾಗಿ ಹೋಗಿವೆ. ಹೊಸ ಪೀಳಿಗೆಗಳು ಇನ್ನೇನು ಬೀಳಲು ತತ್ತರಿಸುತ್ತಿವೆ. ಯುದ್ಧವಿರಬೇಕೆ, ಶಾಂತಿ ಇರಬೇಕೆ ಎಂಬ ಸಮಸ್ಯೆ ಬಗೆಹರಿಯಬೇಕಾಗಿದೆ. ಸಹಿಷ್ಣುತೆ ಉಳಿಯುತ್ತದೆಯೇ ಅಥವಾ ಅಸಹಿಷ್ಣುತೆಯೆ ಎಂಬುದನ್ನು ನಿಶ್ಚಯಿಸಬೇಕಾಗಿದೆ. ಒಳ್ಳೆಯದು ಉಳಿಯುತ್ತದೆಯೇ ಅಥವಾ ಕೆಟ್ಟದ್ದೆ? ಬಾಹುಬಲವೇ ಇಲ್ಲ ಬುದ್ಧಿಶಕ್ತಿಯೇ? ಲೌಕಿಕತೆಯೇ ಅಥವಾ ಅಧ್ಯತ್ಮಿಕತೆಯೇ ಎಂಬುದು ನಿರ್ಣಯವಾಗಬೇಕಾಗಿದೆ. ನಾವು ನಮ್ಮ ಸಮಸ್ಯೆಯನ್ನು ಯುಗಯುಗಗಳ ಹಿಂದೆಯೇ ಬಗೆಹರಿಸಿಕೊಂಡಿರುವೆವು... ನಮ್ಮ ಪರಿಹಾರೋಪಾಯವೇ ಅಲೌಕಿಕತೆ, ತ್ಯಾಗ.

By |2018-10-12T19:37:51+00:00September 5th, 2018|Kannada, Kannada Quotes|0 Comments

About the Author: