ಮೂಲ: ಸ್ವಾಮಿ ತಥಾಗತಾನಂದ ಅನು: ಸಿ.ಪಿ.ಕೃಷ್ಣಕುಮಾರ್ ಅಮೆರಿಕದ ನ್ಯೂಯಾರ್ಕ್ ವೇದಾಂತ ಸೊಸೈಟಿಯ ಅಧ್ಯಕ್ಷರಾಗಿರುವ ಪೂಜ್ಯ ಸ್ವಾಮಿ ತಥಾಗತಾನಂದರು ಪ್ರಬುದ್ಧ ಭಾರತ ಹಾಗೂ ವೇದಾಂತ ಕೇಸರಿ ಪತ್ರಿಕೆಗಳಲ್ಲಿ ಅನೇಕ ಲೇಖನಗಳನ್ನು ಬರೆದಿರುವರು. ಈ ಲೇಖನದ ಅನುವಾದವನ್ನು ಖ್ಯಾತಸಾಹಿತಿಗಳಾದ ಮೈಸೂರಿನ ಡಾ.ಸಿ.ಪಿ.ಕೃಷ್ಣಕುಮಾರ್ ಅವರು ಮಾಡಿಕೊಟ್ಟಿರುತ್ತಾರೆ.

 

ಸ್ವಾಮಿ ವಿವೇಕಾನಂದರು ದೇಹತ್ಯಾಗ ಮಾಡುವ ಮುನ್ನ ಒಂದು ದಿನ ಮಠದಲ್ಲಿ ಕೆಲಸ ಮಾಡುತ್ತಿದ್ದ ಸಂತಾಲ ಕೂಲಿಗಳಿಗೆ ಊಟ ಹಾಕಿಸಬೇಕೆಂದು ಆಸೆಪಟ್ಟರು. ಅವರು ಒಂದು ಭರ್ಜರಿ ಔತಣ ಮಾಡಿಸಿದರು. ಸಂತಾಲರು ಇಂತಹ ಭಕ್ಷ್ಯಗಳನ್ನೆಂದೂ ಸವಿದಿರಲಿಲ್ಲ. ಸಹಜವಾಗಿಯೇ ಅವರಿಗೆ ಬಹಳ ಸಂತೋಷವಾಯಿತು. ಸ್ವಾಮೀಜಿ ಹೇಳಿದರು: “ನೀವೇ  ನಾರಾಯಣರು. ಇಂದು ನಾನು ನಾರಾಯಣನಿಗೆ ಉಣಿಸಿದ್ದೇನೆ.” ಸ್ವಾಮಿಜಿ ಶಿಷ್ಯರನ್ನು ಕುರಿತು ಹೇಳಿದರು: “ಅವರು ಪರಮಾತ್ಮನ ಮೂರ್ತರೂಪಗಳೆಂದೇ ನಾನು ಕಂಡುಕೊಂಡೆ. ಇಂಥ ಸರಳತೆಯನ್ನು, ಇಂಥ ಪ್ರಾಮಾಣಿಕ ನಿಷ್ಕಪಟ ಪ್ರೀತಿಯನ್ನು ನಾನೆಲ್ಲೂ ಕಂಡಿಲ್ಲ. ಮಠವನ್ನು ಮಾರಿ, ದೀನದರಿದ್ರರಿಗೆ ಹಣವನ್ನು ಹಂಚಿಬಿಡಬೇಕೆಂದು ಒಮ್ಮೊಮ್ಮೆ ನನಗೆ ಆಸೆಯಾಗುತ್ತದೆ.”

ಪ್ರಾರ್ಥನೆಯೆಂದರೆ ಭಗವಂತನೊಡನೆ ಸಂವಾದ. ಭಗವಂತ ನಮ್ಮ ಬದುಕಿನ ಸಾರ, ದಿವ್ಯಜೀವನದ ತರ್ಕಬದ್ದತೆಯನ್ನು ಕುರಿತು ಸ್ವಾಮೀಜಿ ಹೇಳಿದರು: “ಪ್ರಾಣಿಗಳು ತಮ್ಮ ಇಂದ್ರಿಯಗಳನ್ನು ಬಳಸುವುದಕ್ಕಿಂತಲೂ ಹೆಚ್ಚಾಗಿ ಮಾನವ ತನ್ನ ಬುದ್ಧಿಯನ್ನು ಬಳಸುವುದು ಕಂಡು ಬರುತ್ತದೆ. ತನ್ನ ಬೌದ್ಧಿಕ ಸ್ವಭಾವಕ್ಕಿಂತ ಮಿಗಿಲಾಗಿ ತನ್ನ ಆಧ್ಯಾತ್ಮಿಕ ಸ್ವಭಾವವನ್ನು ಮಾನವ ಅನುಭವಿಸುವುದನ್ನು ಕಾಣುತೇವೆ. ಆದ್ದರಿಂದ ಅವನ ಅತ್ಯುನ್ನತ ಜ್ಞಾನ ಆಧ್ಯಾತ್ಮಿಕ ಜ್ಞಾನವಾಗಿರಬೇಕು, ಈ ಜ್ಞಾನದೊಡನೆ ಆನಂದವು ಬರುತ್ತದೆ.” (ವಿವೇಕಾನಂದರ ಕೃತಿಶ್ರೇಣಿ, ಸಂಪುಟ ೬, ಪುಟ,೩೭೭) ವಿವೇಕಾನಂದರ ಪ್ರಕಾರ, ಪ್ರತಿಯೊಬ್ಬರೂ ಮೂಲಭೂತವಾಗಿ ದಿವ್ಯ ಚೇತನರೇ, ಪ್ರತಿಯೊಂದು ಹೃದಯದಲ್ಲೂ ಸ್ವಾಮಿಜಿ ದಿವ್ಯ ಚೇತನದ ಕಿಡಿಯನ್ನು ಕಂಡು, ಅದನ್ನೊಂದು ಮಹಾಜ್ವಾಲೆಯನ್ನಾಗಿ ಮಾಡಲು ಹೆಣಗಿದರು. ಅವರಿಗೆ ಪ್ರೇಮವೇ ದೇವರು. ಪ್ರೇಮವಾಗಿ ಮತ್ತು ವಿಶ್ವದ ಮೂಲ ಪ್ರೇರಣೆಯಾಗಿ ದೇವರೇ ಈ ಜಗತ್ತಿನ ಹಿಂದಿರುವ ಮತ್ತು ಅತೀತವಾದ ಸಂಕರ್ಷಣ ಶಕ್ತಿಯಾಗಿರಬೇಕು. ದೇವರು ಪ್ರೇಮವೂ ಹೌದು; ಪ್ರೇಮದ ಅನಂತವಾದ ಆಕರವೂ ಹೌದು-ಅಲ್ಲಿಂದ ಸಹಾನುಭೂತಿ, ಪ್ರೀತಿ, ಕರುಣೆ ಮುಂತಾದುವುಗಳ ಪ್ರವಾಹಗಳು ಮಾನವನ ಎದೆಯನ್ನು ತುಂಬಿ ಕೆಳಮುಖವಾಗಿ ಹರಿಯುತ್ತಿವೆ. ಆದ್ದರಿಂದ, ನಿಜವಾದ  ಸೇವೆ ಪ್ರೇಮದ ಮೂಲಕ ಮಾತ್ರ ಸಾಧ್ಯ; ನಿಜವಾದ ಸೇವೆಯೆ ನಿಜವಾದ ಪ್ರೇಮದ ಅಳತೆಗೋಲು, ಭಕ್ತಿಯ ಮತ್ತು ಇಡೀ ವಿಶ್ವವನ್ನು ಕುರಿತ ನಿಃಸ್ವಾರ್ಥ ಪ್ರೀತಿಯ ನಿಲುವಿನಲ್ಲಿ ಕರ್ಮ ಮಾಡಿದಾಗ, ಅದು ನಮ್ಮ ಜೀವನದ ಅತ್ಯುನ್ನತ ಧೈಯಕ್ಕೆ ಲಾಭದಾಯಕವಾಗುವ ಆಧ್ಯಾತ್ಮಿಕ ಸಾಧನೆಯ ರೂಪ ತಳೆಯುತ್ತದೆ.

ಸ್ವಾಮಿಜಿಯ ಪಾಲಿಗೆ ಪ್ರೇಮವೊಂದು ತ್ರಿಕೋನ. ಅಪ್ಪಟಪ್ರೇಮವು ನಿಃಸ್ವಾರ್ಥತೆ, ನಿರ್ಭಿತಿಗಳನ್ನೂ ಪ್ರೇಮಕ್ಕಾಗಿ ಪ್ರೇಮದ ಭಾವನೆಯನ್ನೂ ಪ್ರೇಮಿಸುವವನ ಹೃದಯದಲ್ಲಿ ಖಂಡಿತವಾಗಿ ಉಂಟು ಮಾಡುತ್ತದೆ. ದೇವರನ್ನು ಪ್ರೀತಿಸುವುದೆಂದರೆ ಅವನ ಸಂಕಲ್ಪವನ್ನು ಪ್ರೀತಿಸಿದಂತೆ ಎಂದು ವಿವೇಕಾನಂದರು ಒತ್ತಿ ಹೇಳಿದರು. “ಪ್ರಾರ್ಥನೆಯೆಂದರೆ ಪ್ರೀತಿಸುವುದಷ್ಟೆ.” ಅವರು ಬೃಂದಾವನದ ಗೊಲ್ಲತಿಯರಾದ ಗೋಪಿಯರನ್ನು ಹೊಗಳಿ ಮಾತನಾಡುತಿದ್ದರು; ಏಕೆಂದರೆ ಗೋಪಿಯರದು ಪ್ರೇಮದ ವ್ಯಾಪಾರವಾಗಿರಲಿಲ್ಲ. ಪ್ರೇಮ ನಮ್ಮ ಮನಸ್ಸನ್ನು ಶುದ್ದೀಕರಿಸುತ್ತದೆ; ಪ್ರೇಮ ಅಥವಾ ಭಕ್ತಿ ನಮ್ಮನ್ನು ಗುರಿಮುಟ್ಟಿಸಬೇಕಾದರೆ ಅದನ್ನು ಜ್ಞಾನದಿಂದ ಹದಗೊಳಿಸಬೇಕು. ಪ್ರಾರ್ಥನೆಗೆ ಓಗೊಡುವುದು ನಮ್ಮ ಸ್ವಂತ ಸಂಕಲ್ಪವೇ; ಏಕೆಂದರೆ ಆತ್ಮಕ್ಕೆ ಅನಂತ ಶಕ್ತಿಗಳಿವೆ ಎಂದು ವಿವರಿಸಿದರು ಸ್ವಾಮಿಜಿ. ಪ್ರಾರ್ಥನೆಯ ಶಕ್ತಿಯನ್ನು ಕುರಿತು ಅವರು ಹೇಳಿದರು: “ಪ್ರಾರ್ಥನೆಯಿಂದ ಸುಪ್ತ ಶಕ್ತಿಗಳು ಸುಲಭವಾಗಿ ಎಚ್ಚರಗೊಳ್ಳುತ್ತವೆ; ಪ್ರಜ್ಞಾಪೂರ್ವಕವಾಗಿ ಕೈಗೊಂಡಾಗ ಎಲ್ಲ ಆಸೆಗಳನ್ನೂ ತಣಿಸಿಕೊಳ್ಳಬಹುದು; ಆದರೆ ಅಪ್ರಜ್ಞಾ ಪೂರ್ವಕವಾಗಿ ಕೈಗೊಂಡಾಗ, ಹತ್ತರಲ್ಲಿ ಒಂದು ತೃಪ್ತಿಗೊಳ್ಳಬಹುದಷ್ಟೆ. ಆದರೂ ಇಂಥ ಪ್ರಾರ್ಥನೆ ಸ್ವಾರ್ಥಪರವಾದುದರಿಂದ ಅದನ್ನು ನಿವಾರಿಸಬೇಕು.”

ಸ್ವಾಮಿಜಿಯವರು ತಮ್ಮ ಜೀವನದ ಕರಾಳ ದಿನಗಳಲ್ಲಿ ಕೂಡ, ತಮ್ಮ ಲೌಕಿಕ ಲಾಭಕ್ಕಾಗಿ ಮಾತೆಯನ್ನು ಪ್ರಾರ್ಥಿಸುವಂತೆ ಶ್ರೀರಾಮಕೃಷ್ಣರು ಹೇಳಿದಾಗಲೂ, ವಿವೇಚನೆ, ತ್ಯಾಗ, ಜ್ಞಾನ ಹಾಗೂ ಭಗವದನುರಕ್ತಿಗಾಗಿ ಪ್ರಾರ್ಥನೆ ಮಾಡಿದರು. ಜಗತ್ತಿನ ಜನತೆಯ ಕಷ್ಟಕಾರ್ಪಣ್ಯಗಳಿಗೆ ಮರುಗುವಷ್ಟು ವಿಶಾಲವಾಗಿತ್ತು ಅವರ ಹೃದಯ. ತಮ್ಮ ಭಾವನೆಯಲ್ಲಿ ಪಾಲ್ಗೊಳ್ಳುವಂತೆ ಮತ್ತು ಜನತೆಯನ್ನು ಪ್ರೀತಿಸುವಂತೆ ಅವರು ನಮಗೂ ಕರೆ  ಕೊಟ್ಟರು. ಅಳಸಿಂಗರಿಗೆ ಬರೆದ ಒಂದು ಪತ್ರದಲ್ಲಿ ಅವರು ಹೇಳಿದರು: “ಕರುಣಾಳು ಬಾ ಬೆಳಕೆ, ಕೈಹಿಡಿದು ನಡೆಸೆನ್ನನು’ ಎಂದು ಪ್ರಾರ್ಥಿಸೋಣ; ಕತ್ತಲೆಯಲ್ಲಿ ಕಿರಣವೊಂದು ಬರುತ್ತದೆ; ಮಾರ್ಗದರ್ಶನ ಮಾಡಿಸಲು ಹಸ್ತವೊಂದು ಚಾಚಿ ಕೊಳ್ಳುತ್ತದೆ. ನಾನು ಸದಾ ನಿಮಗಾಗಿ ಪ್ರಾರ್ಥಿಸುತ್ತೇನೆ; ನೀವು ನನಗಾಗಿ ಪ್ರಾರ್ಥಿಸಬೇಕು. ದಾರಿದ್ರ್ಯ, ಪುರೋಹಿತಶಾಹಿ ಹಾಗೂ ದಬ್ಬಾಳಿಕೆಯಲ್ಲಿ ಸಿಕ್ಕಿಬಿದ್ದಿರುವ ಭಾರತದ ಲಕ್ಷಾಂತರ ಮಂದಿ ದೀನದಲಿತರಿಗಾಗಿ ನಾವು ಪ್ರತಿಯೊಬ್ಬರೂ ಹಗಲಿರುಳೂ ಪ್ರಾರ್ಥಿಸೋಣ- ಅವರಿಗಾಗಿ ಹಗಲಿರುಳೂ ಪ್ರಾರ್ಥಿಸೋಣ.”

ಮನುಕುಲದ ಕಲ್ಯಾಣಕ್ಕಾಗಿ ಪ್ರತಿಯೊಬ್ಬರೂ ಅನುಸರಿಸಬೇಕಾದ ಸಾಧನವಾಗಿ ಪ್ರೀತಿಯ ಆವಶ್ಯಕತೆಯನ್ನು ಕುರಿತು ಅವರು ಹೇಳಿದರು: “ದೈವೀಪ್ರೇಮದಿಂದ ಉನ್ಮತ್ತರಾದವರು ಜಗತ್ತಿಗೆ ಬೇಕು. ನಿಮ್ಮನ್ನೇ ನೀವು ನಂಬಬೇಕು, ಅನಂತರ ದೇವರನ್ನು ನೀವು ನಂಬುತ್ತೀರಿ. ಜಗತ್ತಿನ ಚರಿತ್ರೆಯೆಂದರೆ ಶ್ರದ್ಧೆಯುಳ್ಳ ಆರು ಮಂದಿಯ ಮತ್ತು ಪರಿಶುದ್ಧ ಶೀಲವುಳ್ಳ ಆರು ಮಂದಿಯ ಚರಿತ್ರೆ ನಮಗೆ ಬೇಕಾದ್ದು ಮೂರು ಅಂಶಗಳು: ಅನುಭವಿಸುವ ಹೃದಯ, ಯೋಚಿಸುವ ಮೆದುಳು ಮತ್ತು ಕೆಲಸಮಾಡುವ ಕೈಗಳು, ನಿಮ್ಮನ್ನು ನೀವು ಒಂದು ಸ್ಪೂರ್ತಿಕೇಂದ್ರವಾಗಿ ಮಾಡಿಕೊಳ್ಳಿ, ಜಗತ್ತಿಗಾಗಿ ಅನುಕಂಪ ತಳೆಯಿರಿ, ಒಳ್ಳೆಯ ಕೆಲಸಗಳು ಜಗತ್ತಿನ ಮೇಲೆ ಟನ್‌ಗಟ್ಟಲೆ ಸುರಿಯಲ್ಪಡುವ ದ್ವೇಷಕ್ರೋಧಗಳಿಂದ ಸದಾ ನಾಶಗೊಳ್ಳುತಿರುತ್ತವೆ. ನೀವು ಶುದ್ಧರಾಗಿದ್ದರೆ, ನೀವು ಶಕ್ತರಾಗಿದ್ದರೆ, ನೀವು ಒಬ್ಬರೇ ಆದರೂ ಇಡೀ ಜಗತ್ತಿಗೇ ಸಮಾನರಾಗುತ್ತೀರಿ, ಪ್ರೇಮವನ್ನು ತಳೆಯಿರಿ, ಅದು ಎಂದೂ ವಿಫಲವಾಗಿಲ್ಲ; ಅನಂತರ ಮೆದುಳು ಆಲೋಚಿಸುತ್ತದೆ, ಕೈ ಧರ್ಮವನ್ನಾಚರಿಸುತ್ತದೆ.”

ಭಗವಂತನ ನಿಜವಾದ ಭಕ್ತ ಒಂದು ಶಕ್ತಿ; ಏಕೆಂದರೆ, ಅವನು ಸಂಪೂರ್ಣ ವಿಭಿನ್ನವಾದ ದೃಷ್ಟಿಯೊಂದನ್ನು ಬೆಳೆಸಿಕೊಳ್ಳುತ್ತಾನೆ ಮತ್ತು ಭಗವಂತನನ್ನು ಎಲ್ಲೆಡೆಯಲ್ಲೂ ಕಾಣುತ್ತಾನೆ. ಆದರೆ ಲೋಕಾಯತ ದರ್ಶನದಲ್ಲಿ ನಂಬಿಕೆಯಿಟ್ಟಿರುವ ಸಾಮಾನ್ಯ ಜನ ಭಗವಂತನ ಬಗ್ಗೆ ಯಾವುದೇ ಪ್ರೀತಿಯನ್ನು  ಬೆಳೆಸಿಕೊಳ್ಳುವುದು ಕಷ್ಟವಾಗುತ್ತದೆ. ಆದ್ದರಿಂದ ಅವರು ನಮ್ಮ ಈ ಉದ್ವಿಗ್ನ ಪ್ರಪಂಚದಿಂದ ದೂರವಿದ್ದುಕೊಂಡು ಅನಂತವಾದ ಆನಂದದ ಅನ್ವೇಷಣೆಯತ್ತ ತಮ್ಮ ಲಕ್ಷ್ಯವನ್ನು ತಿರುಗಿಸಬೇಕೆಂದು ಅವರಿಗೆ ಹಿತವಚನ ಹೇಳಬೇಕಾಗುತ್ತದೆ. ಈ ದಿಶೆಯಲ್ಲಿ ಸ್ವಾಮಿಜಿಯವರು ಪತ್ರವೊಂದರಲ್ಲಿ ಹೇಳಿದ್ದಾರೆ: “ಈ  ಜನ ಮಾಡುವ ಹಾಗೆ ಚೇತನವನ್ನು ಭೌತೀಕರಿಸುವುದರ  ಬದಲು-ಎಂದರೆ ಭೌತಕ್ಕೆ ಅಧ್ಯಾತ್ಮವನ್ನೆಳೆಯುವುದರ ಬದಲು-ಜಡವನ್ನು ಚೇತನವಾಗಿ ಪರಿವರ್ತಿಸಿ, ಅನಂತರ ಸೌಂದರ್ಯ ಶಾಂತಿ ಪಾವಿತ್ರ್ಯಗಳ ಜಗತ್ತಿನ ಸಕೃದ್ದರ್ಶನವನ್ನು ದಿನಕ್ಕೊಮ್ಮೆಯಾದರೂ ಪಡೆಯಿರಿ ಮತ್ತು ಅದರಲ್ಲಿ ಹಗಲಿರುಳೂ ಬದುಕಲು ಪ್ರಯತ್ನಿಸಿ. ನಿಗೂಢವಾದ ಯಾವುದನ್ನೇ ಆಗಲಿ ಅರಸಬೇಡಿ, ನಿಮ್ಮ ಕಾಲ್ಬೆರಳಿನಿಂದಲೂ ಸ್ಪರ್ಶಿಸಬೇಡಿ. ನಿಮ್ಮ ಆತ್ಮಗಳು ಹಗಲಿರುಳೂ ಎಡೆಬಿಡದೆ ಭಗವಂತನ ಚರಣಗಳತ್ತ ಅವನ ಸಿಂಹಾಸನ ನಿಮ್ಮ ಹೃದಯದಲ್ಲೆ ಇದೆ ಮೇಲೇರುತ್ತಿರಲಿ; ದೇಹ ಮುಂತಾದುವನ್ನೆಲ್ಲ ಅವುಗಳ ಪಾಡಿಗೆ ಬಿಟ್ಟುಬಿಡಿ, ಜೀವನ ಕ್ಷಣಭಂಗುರವಾದುದು; ಸ್ವಪ್ನಸದೃಶವಾದುದು; ಯೌವನ, ಸೌಂದರ್ಯಗಳು ಹಗಲಿರುಳೂ ಬಾಡುತ್ತಿವೆ. ಭಾವಿಸುತ್ತ ಹೋಗಿ: “ನೀನೇ ನನ್ನ ತಂದೆ, ನನ್ನ ತಾಯಿ, ನನ್ನ ಪತಿ, ನನ್ನ ಪ್ರಿಯ, ನನ್ನ ಪ್ರಭು, ನನ್ನ ಭಗವಂತ. ನೀನಲ್ಲದೆ ಮತ್ತೇನೂ ನನಗೆ ಬೇಕಾಗಿಲ್ಲ, ನೀನಲ್ಲದೆ ಏನೂ ಬೇಕಾಗಿಲ್ಲ. ನನ್ನಲ್ಲಿ ನೀನು, ನಿನ್ನಲ್ಲಿ ನಾನು, ನಾನೇ ನೀನು, ನೀನೇ ನಾನು.”(ವಿವೇಕಾನಂದರ ಕೃತಿಶ್ರೇಣಿ, ಸಂಪುಟ ೪, ಪುಟ.೧೬೫)

ಪ್ರೇಮವನ್ನು ತನ್ನ ಸಾಧನೆಯನ್ನಾಗಿ ಮಾಡಿಕೊಂಡಿರುವ ನಿಜವಾದ ಭಕ್ತ ತನ್ನ ಪ್ರಭುವಿನ ಔದಾಲ್ಯ, ಶಕ್ತಿಗಳಲ್ಲಿ ಅಪಾರ ನಂಬಿಕೆಯಿಡಬೇಕು. ಈ ವಿಷಯದಲ್ಲಿ ಸ್ವಾಮಿಜಿ ಅದೇ ಪತ್ರದಲ್ಲಿ ಹೇಳಿದ್ದಾರೆ: “ಅನಿಷ್ಟದ ಭೀತಿಯಲ್ಲಿ ನನ್ನ ದೇವರೇ, ನನ್ನೊಲವೇ ಎಂದು ಹೇಳಿ; ಮೃತ್ಯುದಂಷ್ಟ್ರದಲ್ಲಿ ನನ್ನ ದೇವರೇ, ನನ್ನೊಲವೇ ಎಂದು ಹೇಳಿ: ಭೂಮಿಯಲ್ಲಿರುವ ಎಲ್ಲ ಕೆಡುಕಿನಲ್ಲೂ ನನ್ನ ದೇವರೇ, ನನ್ನೊಲವೇ ಎಂದು ಹೇಳಿ, ‘ನೀನು ಇಲ್ಲಿದ್ದೀಯೆ, ನಾನು ನಿನ್ನನ್ನು ಕಾಣುತ್ತಿದ್ದೇನೆ. ನೀನು ನನ್ನೊಡನಿದ್ದೀಯೆ, ನಾನು ನಿನ್ನನ್ನು ಅನುಭವಿಸುತ್ತಿದ್ದೇನೆ. ನಾನು ನಿನ್ನವನು, ನನ್ನನ್ನು ತೆಗೆದುಕೊ, ನಾನು ಪ್ರಪಂಚದವನಲ್ಲ. ನಿನ್ನವನು; ಆದ್ದರಿಂದ ನನ್ನನ್ನು ಬಿಡಬೇಡ’, ವಜ್ರದ ಗಣಿಯನ್ನು ಬಿಟ್ಟು ಗಾಜಿನ ಮಣಿಗಳಿಗಾಗಿ ಹೋಗಬೇಡಿ. ಈ ಜೀವನವೊಂದು ದೊಡ್ಡ ಅವಕಾಶ. ಏನು! ಪ್ರಾಪಂಚಿಕ ಸುಖಗಳನ್ನರಸುವಿರಾ! ಅವನು ಎಲ್ಲ ಆನಂದದ ಚಿಲುಮೆ. ಅತ್ಯುನ್ನತವಾದುದನ್ನು ಅರಸಿ, ಅತ್ಯುನ್ನತವಾದುದಕ್ಕೆ ಗುರಿಯಿಡಿ; ಅತ್ಯುನ್ನತವಾದುದನ್ನು ತಲುಪುತ್ತೀರಿ.”

(ಮೂಲ: ವಿವೇಕಪ್ರಭ ಜನವರಿ 2006)