ಯುವಶಕ್ತಿಗೆ ಸರಳ ಸೂತ್ರ

/, Public Articles/ಯುವಶಕ್ತಿಗೆ ಸರಳ ಸೂತ್ರ

ಯುವಶಕ್ತಿಗೆ ಸರಳ ಸೂತ್ರ

ಯೌವನ ನಮ್ಮ ಜೀವಿತಾವಧಿಯಲ್ಲಿನ ಅದ್ಭುತವಾದ ಕಾಲಾವಧಿ. ಅಪರಿಮಿತವಾದ ಶಕ್ತಿ, ಸೃಜನಶೀಲತೆ ಮತ್ತು ಚೈತನ್ಯದ ಚಿಲುಮೆ ಉಕ್ಕಿ ಹರಿಯುವ ಉತ್ತುಂಗದ ಕಾಲ ಅದು. ನೂರಾರು | ಯುವಜನರು ಎಲ್ಲ ರಂಗಗಳಲ್ಲೂ ಸಾಧನೆ ಮಾಡುತ್ತಿರುವುದನ್ನು ನಾವಿಂದು ಕಾಣುತ್ತಿದ್ದೇವೆ. ಜನಸಂಖ್ಯೆಯ ದೃಷ್ಟಿಯಲ್ಲಿ ಭಾರತ ಉತ್ತಮವಾದ ಯುವಪಡೆಯನ್ನೇ ಹೊಂದಿದೆ. ದೇಶದಲ್ಲಿರುವ ಸುಮಾರು ಶೇ 78ರಷ್ಟು ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಲಕ್ಷಾಂತರ ಸಂಖ್ಯೆಯಲ್ಲಿರುವ ಈ ನಮ್ಮ ಯುವಜನರಲ್ಲಿ ಎಷ್ಟು ಅಪಾರವಾದ ಸಾಮರ್ಥ್ಯ ಹುದುಗಿರಬಹುದು ಎಂಬುದನ್ನು ಕಲ್ಪಿಸಿಕೊಂಡರೆ, ಒಂದು ರಾಷ್ಟ್ರವಾಗಿ ಯಾವ ಬಗೆಯ ಸವಾಲನ್ನು ಬೇಕಾದರೂ ನಾವು ಎದುರಿಸಲು ಸಾಧ್ಯ ಎಂಬ ಸತ್ಯ ನಮಗೆ ವೇದ್ಯವಾಗುತ್ತದೆ. ಆದರೆ, ಭೌತಿಕವಾಗಿ ಅಷ್ಟೇ ಅಲ್ಲ ವಿಶ್ವದ ಮುಂಚೂಣಿ ರಾಷ್ಟ್ರಗಳಲ್ಲಿ ಒಂದಾಗಿ ನಿಲ್ಲುವ ನಿಟ್ಟಿನಲ್ಲಿ ನಮ್ಮ ಆಲೋಚನೆಗಳನ್ನು ಸಾಕಾರಗೊಳಿಸಬಲ್ಲ ಈ ಅಪಾರವಾದ ಶಕ್ತಿಯ ಅರಿವು ನಮಗಿದೆಯೇ?

ಅತ್ಯಂತ ಸುಲಭವಾಗಿ ಪ್ರಭಾವಕ್ಕೆ ಒಳಗಾಗುವ ಯೌವನ ಎಂಬ ಕಾಲಘಟ್ಟದಲ್ಲಿ ನಮಗೆ ಆದರ್ಶಪ್ರಾಯರಾಗಿ ಕಾಣುವ ವ್ಯಕ್ತಿಗಳನ್ನು ಅನುಕರಿಸಲು ನಾವು ಮುಂದಾಗುತ್ತೇವೆ. ಎಷ್ಟೇ ಕಷ್ಟದ ಕೆಲಸವಾದರೂ ಕೈಗೆತ್ತಿಕೊಳ್ಳಲು ಹವಣಿಸುತ್ತೇವೆ. ಈ ಪ್ರಪಂಚದಲ್ಲಿ ಏನನ್ನು ಬೇಕಾದರೂ ಸಾಧಿಸಬಲ್ಲೆವು ಎಂದು ನಂಬಿಕೊಂಡಿರುತ್ತವೆ. ಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರದಿಂದ ಸುಲಭವಾಗಿ ಪ್ರೇರೇಪಿತರಾಗಿಬಿಡುತ್ತೇವೆ.

ಅಂತಹ ಯುವಶಕ್ತಿ ಇರಿಸಬೇಕಾದ ಮಾರ್ಗವನ್ನು ಅರಿಯುವ ಮೊದಲು, ಪ್ರಚಂಡವಾದ ವೈರುಧ್ಯಗಳನ್ನು ಹೊಂದಿರುವ ನಮ್ಮ ದೇಶದ ಸ್ಥಿತಿಗತಿಯನ್ನು ಮೊದಲು ನಾವು ಅರ್ಥ ಮಾಡಿಕೊಳ್ಳೋಣ. ಒಂದೆಡೆ ಅಪರಿಮಿತವಾದ ಅಭ್ಯುದಯ ಮತ್ತು ಸಂಪತ್ತು ನಮಗೆ ಕಾಣುತ್ತಿದ್ದರೆ, ಮತ್ತೊಂದೆಡೆ ದೇಶದ ಮೂರನೇ ಒಂದು ಭಾಗದಷ್ಟು ಜನ ದಿನಕ್ಕೆ ಒಂದೇ ತುತ್ತಿನ ಕೂಳುಂಡು ಬದುಕುತ್ತಿದ್ದಾರೆ. ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ವೈಜ್ಞಾನಿಕ ಸಾಧನೆ ನಮ್ಮ ಕಣ್ಣಿಗೆ ರಾಚುತ್ತಿದೆ. ಆದರೆ, ಗ್ರಾಮೀಣ ಭಾರತದ ಶೇ 20ರಷ್ಟು ಮಂದಿ ಮಾತ್ರ ನೈರ್ಮಲ್ಯ ಸೌಲಭ್ಯ ಹೊಂದಿದ್ದಾರೆ ಮತ್ತು ಅವರಲ್ಲಿ ಶೇ. 30ರಷ್ಟು ಜನರಿಗಷ್ಟೇ ಸೂಕ್ತ ಕುಡಿಯುವ ನೀರಿನ ಸೌಲಭ್ಯ ಸಿಗುತ್ತಿದೆ. ಇಂದಿಗೂ ನಮ್ಮ ಹಳ್ಳಿಗಳ ಸುಮಾರು ಶೇ. 42ರಷ್ಟು ಮಕ್ಕಳು ಶಾಲೆಯತ್ತ ಮುಖ ಮಾಡಲು ಸಾಧ್ಯವಾಗುತ್ತಿಲ್ಲ. ಕುಟುಂಬದವರ ಹೊಟ್ಟೆ ಹೊರೆಯಲು ಬಹಳಷ್ಟು ಮಂದಿ ಹೊಲಗದ್ದೆಗಳಲ್ಲಿ ಕಾರ್ಖಾನೆಗಳಲ್ಲಿ ಬಾಲ | ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ವಿಶ್ವದ ಎಲ್ಲ ಬಗೆಯ ತಾಂತ್ರಿಕ ಮತ್ತು ಸಾಫ್ಟ್‌ವೇರ್ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ನಮಗೆ ಸಾಧ್ಯ ಆಗಿದೆ. ಆದಾಗ್ಯೂ ವಿಶ್ವದ ಶೇ 25ರಷ್ಟು ಬಡವರು ನಮ್ಮ ದೇಶದಲ್ಲೇ ಇದ್ದಾರೆ.

ಕ್ರೀಡೆ, ಸಂಗೀತ, ಕಲೆ, ತಂತ್ರಜ್ಞಾನ ಮತ್ತು ಸಂಪತ್ತು ಸೃಷ್ಟಿಯಲ್ಲಿ ಸಾಕಷ್ಟು ಯುವ ಸಾಧಕರು ನಮ್ಮ ಕಣ್ಣ ಮುಂದೆ ಇದ್ದಾರೆ. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಮಾತ್ರ ಕೆಲವೇ ಕೆಲವು ಯುವ ನಾಯಕರು ಮುಂಚೂಣಿಯಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿ ಸಕ್ರಿಯವಾದ ಸಾಮಾಜಿಕ, ಆರ್ಥಿಕ, ಮೂಲ ಸೌಲಭ್ಯ, ರಾಜಕೀಯ ಮತ್ತು ಬಡತನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನಿಜಕ್ಕೂ ಸವಾಲಿನ ಸಂಗತಿಯೇ ಸರಿ. ಅಂತಹ ಸವಾಲುಗಳನ್ನು ಎದುರಿಸಲು ಅಪಾರವಾದ ಶಕ್ತಿ, ನವೀನ ದೃಷ್ಟಿಕೋನ, ಘನವಾದ ಚಿಂತನೆ ಮತ್ತು ಅತಿಮಾನುಷ ಪ್ರಯತ್ನಗಳು ಬೇಕಾಗುತ್ತವೆ. ಇಂತಹ ಸವಾಲುಗಳನ್ನೆಲ್ಲ ಎದುರಿಸಲು ಬೇಕಾದ ಶಕ್ತಿ ಸಾಮರ್ಥ್ಯ ನಮ್ಮ ಯುವ ಜನಾಂಗಕ್ಕೆ ಇದೆ ಎಂದು ನಾವು ಎದೆ ತಟ್ಟಿಕೊಂಡನೋ ಹೇಳಬಹುದು. ಜೊತೆಗೆ, ಈ ಸವಾಲುಗಳು ನಮ್ಮ ಯುವಜನರ ಆದ್ಯತೆಯ ಪಟ್ಟಿಯಲ್ಲಿ ಸ್ಥಾನವನ್ನೇ ಪಡೆದಿಲ್ಲ ಎಂಬ ಕಟು ವಾಸ್ತವವನ್ನೂ ನಾವು ಒಪ್ಪಿಕೊಳ್ಳಲೇಬೇಕಾಗುತ್ತದೆ. ಹಾಗಿದ್ದರೆ ಆರ್ಥಿಕ, ತಾಂತ್ರಿಕ, ಸಂಗೀತ, ಸಿನಿಮಾ ಮತ್ತು ಕ್ರೀಡಾ ಕ್ಷೇತ್ರದವರನ್ನೇ ಆದರ್ಶ ಎಂದುಕೊಂಡಿರುವ ನಮ್ಮ ಯುವಜನರು ರಾಷ್ಟ್ರ ನಿರ್ಮಾಣದತ್ತ ಮುಖ ಮಾಡುವಂತೆ ಮಾಡುವುದಾದರೂ ಹೇಗೆ? ನಾವು ಎದುರಿಸುತ್ತಿರುವ ಅಸಂಖ್ಯಾತ ಸಮಸ್ಯೆಗಳ ಪರಿಹಾರ ಮಾರ್ಗದಲ್ಲಿ ಅವರನ್ನು ಒಳಗೊಳ್ಳುವುದು ಹೇಗೆ? ಇದನ್ನೆಲ್ಲ ಕಾರ್ಯರೂಪಕ್ಕೆ ತರಲು ಸೂಕ್ತವಾದ ಮಾರ್ಗ ನಮಗೆ ಗೋಚರಿಸದಿರುವ ಈ ಸಂದರ್ಭದಲ್ಲಿ, ಯುವಜನರನ್ನು ಮತ್ತು ಸುತ್ತಮುತ್ತಲಿನ ಪರಿಸರವನ್ನು ಮೊದಲು ನಾವು ಅರಿಯುವ ಪ್ರಯತ್ನ ಮಾಡಬೇಕು.

ಸ್ವಾತಂತ್ರ್ಯಾನಂತರ ದೇಶ ಅಗಾಧವಾದ ಆರ್ಥಿಕ ಸ್ಥಿತ್ಯಂತರಗಳನ್ನು ಕಂಡಿದೆ. ಯುವಜನರು ಪ್ರಬಲವಾದ ಕೊಳ್ಳುಬಾಕ ಸಂಸ್ಕೃತಿ ಮತ್ತು ವಾಣಿಜೀಕರಣದ ಆಕರ್ಷಣೆಗೆ ಸಿಲುಕಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣ ಗಳಿಸುವವರೇ ನಿಜವಾದ ಸಾಧಕರು, ಅಂತಹವರ ಸಾಲಿನಲ್ಲಿ ತಾವು ಸೇರಿದಾಗ ಮಾತ್ರ ತಮ್ಮದು ಯಶಸ್ವಿ ಜೀವನ ಎಂಬ ನಂಬಿಕೆ ಅವರಲ್ಲಿದೆ. ಅವರನ್ನು ಅಲ್ಲಿಂದ ಹೊರಳಿಸಿ, ಅಶಕ್ತರು ಮತ್ತು ಅವಕಾಶ ವಂಚಿತರ ಪರವಾಗಿ ಕೆಲಸ ಮಾಡುವ ಸಾಮಾಜಿಕ ಉದ್ಯಮಿ’ಗಳಾಗುವಂತೆ ಪ್ರೇರೇಪಿಸುವುದು ನಿಜಕ್ಕೂ ಅತಿ ದೊಡ್ಡ ಸವಾಲು. ಇಂದಿನ ಅತ್ಯಾಧುನಿಕ ಆವಿಷ್ಕಾರಗಳ ಲಾಭವು ಬರೀ ಸಂಪತ್ತು ಸೃಷ್ಟಿಗೆ ಮಾತ್ರವಲ್ಲ ಸಮಾನತೆ ಪ್ರತಿಪಾದನೆಗೆ, ಪಕ್ಷಪಾತರಹಿತ ಸಮಾಜ ನಿರ್ಮಾಣಕ್ಕೆ, ಸಾಮಾಜಿಕ ಮತ್ತು ಆರ್ಥಿಕವಾಗಿ ಹೆಚ್ಚು ಸಮಂಜಸ ಆಗುವಂತೆ ಮಾಡಲು ಸಹ ಅದನ್ನು ಬಳಸಿಕೊಳ್ಳಬೇಕು ಎಂಬುದನ್ನು ಯುವಜನರಿಗೆ ಅರ್ಥ ಮಾಡಿಸುವುದರಲ್ಲೇ ಸಮಸ್ಯೆಗೆ ನಿಜವಾದ ಪರಿಹಾರ ಅಡಗಿದೆ. ಈ ಬಗ್ಗೆ ನಾನು ಹೆಚ್ಚು ಆಳವಾಗಿ ಚಿಂತಿಸಿದಂತಲ್ಲ, 100 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಯುವಜನರಿಗೆ ಕೊಟ್ಟಿದ್ದ ಕರೆಯೇ ಇದಕ್ಕೆಲ್ಲ ತಕ್ಕ ಉತ್ತರ ಎಂಬುದನ್ನು ನಾನು ಮನಗಾಣುತ್ತೇನೆ.

ಸಮಸ್ತ ಅಸ್ತಿತ್ವದ ಸಮಸ್ಯೆಯನ್ನು ಅತ್ಯಂತ ಸರಳವಾಗಿ ಸ್ವಾಮೀಜಿ ವಿವರಿಸಿದ್ದಾರೆ. “ತ್ಯಾಗ’ ಮತ್ತು ‘ಸೇವೆ’ ಎಂಬ ಘನವಾದ ಉದ್ದೇಶಗಳನ್ನು ಅಳವಡಿಸಿಕೊಳ್ಳುವ ಮೂಲಕ ರಾಷ್ಟ್ರ ಪುನರ್ ನಿರ್ಮಾಣ ಮಾಡಲು ಯುವಜನರಿಗೆ ಸಾಧ್ಯ ಎಂದು ಅವರು ಪ್ರತಿಪಾದಿಸಿದ್ದರು. ಅತ್ಯಂತ ಸೂಕ್ಷ್ಮದರ್ಶಿತ್ವ ಹೊಂದಿದವರಿಗೆ ಇದು ಒಂದು ‘ಆಧ್ಯಾತ್ಮ ಅನ್ವೇಷಣೆ’ಯ ಮಾರ್ಗ ಸಹ ಎಂದು ಭಾವಿಸಿದ್ದರು. ಆದರೆ ಮಾನವನ ಸಾಧನೆಯ ಕೃಣಿಕತೆ ಮತ್ತು ಭೌತಿಕ ಸಂಪತ್ತಿನ ನಶ್ವರತೆಯು ಈ ಚಿಂತನೆಗೆ ಅತೀತವಾದುದು. ಅದಕ್ಕಾಗಿ ನಮ್ಮ ಮಿತಿಗಳ ಒಳಗೆ ನಾವು ತಲುಪಬೇಕಾದ ಉನ್ನತ ಸ್ಥಿತಿಗೆ ಅಗತ್ಯವಾದ

ಒಂದು ಆದರ್ಶದ ಮಾರ್ಗವನ್ನು ನಮಗೆ ತೋರುವ ಪ್ರಯತ್ನವನ್ನು ಸ್ವಾಮೀಜಿ ಮಾಡಿದರು. ಎಲ್ಲಕ್ಕಿಂತ ಹೆಚ್ಚಾಗಿ ಯುವಜನರು ಸಂವೇದನೆಯ ಸಾಮರ್ಥ್ಯ ಹೊಂದಬೇಕು, ತುಳಿತಕ್ಕೆ ಒಳಗಾದವರು ಮತ್ತು ಬಡವರ ಕಷ್ಟಗಳಿಗೆ ಸ್ಪಂದಿಸಬೇಕು ಎಂಬುದು ಅವರ ಬಯಕೆಯಾಗಿತ್ತು. ಹೀಗೆ ಮಾಡುವುದರಿಂದ ನಮ್ಮ ಮನಸ್ಸು ಅಂತಹವರಿಗಾಗಿ ಮಿಡಿಯುತ್ತದೆ. ಈ ಮೂಲಕ ಅದಮ್ಯವಾದ ಶಕ್ತಿ ನಮ್ಮಲ್ಲಿ ಸಂಚಾರವಾಗುತ್ತದೆ, ಆಗ ನಾವು ಕೇವಲ ನಮ್ಮ ಒಳಿತಿನ ಬಗ್ಗೆ ಮಾತ್ರ ಚಿಂತಿಸದೆ, ನಾವೊಬ್ಬರು ಸಮಾಜ ಸೇವಕರು ಎಂದುಕೊಳ್ಳುತ್ತೇವೆ. ಸಹೋದರರ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಆಂತರಿಕ ಶಕ್ತಿ ಮತ್ತು ಇಚ್ಛಾಶಕ್ತಿಯನ್ನು ಬಳಸಿಕೊಳ್ಳುತ್ತೇವೆ ಎಂಬುದು ಸ್ವಾಮೀಜಿಯ ನಂಬಿಕೆಯಾಗಿತ್ತು. ಇದೆಲ್ಲವನ್ನೂ ಸಾಧಿಸಲು ಯುವಜನರಿಂದ ಅವರು ಬಯಸಿದ ಒಂದೇ ಒಂದು ಅರ್ಹತ ಎಂದರೆ ಅದ್ಭುತವಾದ ಸಂವೇದನಾ ಸಾಮರ್ಥ್ಯ ಮಾತ್ರ. ಆದರೆ ಅಂತಹ ಸಂವೇದನೆಯನ್ನೂ ಮೀರಿ ಕ್ರಿಯಾತ್ಮಕವಾಗಿ ತೊಡಗಿಕೊಳ್ಳ ಬಯಸುವವರಿಗಾಗಿ ಪಾವಿತ್ರ್ಯ, ಸಹನೆ ಮತ್ತು ದೃಢ ನಿಶ್ಚಯ (ಅವಿರತ ಪಯತ್ನ) ಎಂಬ ಪ್ರಭಾವಿ ಮಂತ್ರವೂ ಅವರ ಬಳಿ ಇತ್ತು. ಈ ಮೂರೂ ಸಮಾಜ ಸೇವೆಯಲ್ಲಿ ತೊಡಗುವ ಎಲ್ಲ ಯುವ ಆಕಾಂಕ್ಷಿಗಳೂ ಹೊಂದಿರಲೇಬೇಕಾದ ಗುಣಗಳು ಎಂಬುದು ನನ್ನ ಅನಿಸಿಕೆ, ಆಲೋಚನೆ ಮತ್ತು ಕ್ರಿಯೆಯಲ್ಲಿ ಪಾವಿತ್ರ ಕಾಯು ಕೊಳ್ಳಬೇಕು. ಸಮಾಜ ಯಾವಾಗಲೂ ಅರ್ಥ ಮಾಡಿಕೊಳ್ಳಲು ವಿಳಂಬ ಮಾಡುವ ಸಮುದಾಯ ಅಭಿವೃದ್ಧಿ ಕಾರ್ಯಗಳ ಸಾಮರ್ಥ್ಯವನ್ನು ಗ್ರಹಿಸುವ ಸಹನೆ ಬೆಳೆಸಿಕೊಳ್ಳಬೇಕು. ದೇಶದ ಸಂಕೀರ್ಣ ಸ್ಥಿತಿಯಲ್ಲಿ ದುಡಿಯಲು ಅಗತ್ಯವಾದ ದೃಢ ನಿಶ್ಚಯ ನಮಗಿರಬೇಕು ಎಂಬುದು ಇದರರ್ಥ. ವಿಭಿನ್ನವಾದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಯಲ್ಲಿ ಕೆಲಸ ಮಾಡುವಾಗ ಸಾಕಷ್ಟು ದೃಢ ಸಂಕಲ್ಪ ಇಲ್ಲದವರು ಸುಲಭವಾಗಿ ನಿಶ್ಯಕ್ತರಾಗುತ್ತಾರೆ ಮತ್ತು ಉತ್ಸಾಹ ಶೂನ್ಯರಾಗುತ್ತಾರೆ.

ಸರಳ ಸೂತ್ರ

ಫಲಿತಾಂಶಕ್ಕೆ ಅಭಿಮುಖರಾದ ಇಂದಿನ ಯುವಜನರಿಗೆ ಸ್ವಾಮೀಜಿಯ ಬಳಿ ಒಂದು ಸರಳವಾದ ಸೂತ್ರ ಇದೆ. ಈ ನಿಟ್ಟಿನಲ್ಲಿ, ನಾವು ಮಾಡಬಹುದಾದ ಮೂರು ಬಗೆಯ ಸೇವೆಗಳನ್ನು ಅವರು ಪಟ್ಟಿ ಮಾಡಿದ್ದಾರೆ. ಅದರಲ್ಲಿ ಮೊದಲನೆಯದು ದೈಹಿಕವಾದ ಸೇವೆ. ಅಂದರೆ ಅಶಕ್ತರ ದೇಹಾರೋಗ್ಯದ ಸಂರಕ್ಷಣೆ ಮತ್ತು ದೈಹಿಕ ನರಳಾಟದ ಸುಧಾರಣೆಗೆ ಅಗತ್ಯವಾದ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವುದು. ಅದಕ್ಕಾಗಿ ಆಸ್ಪತ್ರೆಗಳು, ಅನಾಥಾಲಯಗಳು, ವೃದ್ದಾಶ್ರಮಗಳನ್ನು ನಡೆಸುವುದು, ಆದಾಯ ತಂದುಕೊಡುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದು. ಮುಂದಿನ ಉನ್ನತ ಹಂತ ಬೌದ್ದಿಕ ಸೇವೆ. ಶಾಲಾ ಕಾಲೇಜುಗಳನ್ನು ನಡೆಸುವುದು, ಜಾಗೃತಿ ಮತ್ತು ಸಬಲೀಕರಣ ಕಾರ್ಯಕ್ರಮಗಳನ್ನು ಈ ಹಂತ ಒಳಗೊಂಡಿದೆ. ಅಂತಿಮವಾದ ಮತ್ತೊಂದು ಹಂತವೆಂದರೆ ಅತ್ಯಂತ ಉನ್ನತ ಮಟ್ಟವಾದ ಆಧ್ಯಾತ್ಮಿಕ ಸೇವೆ. ಈ ಬಗೆಯ ಸೇವಾ ಕೈಂಕರ್ಯಗಳನ್ನು ಕೈಗೊಳ್ಳುವಾಗ ಎದುರಾಗುವ ಅಪಾಯಗಳ ಬಗ್ಗೆ ನಮ್ಮನ್ನು ಎಚ್ಚರಿಸಲು ಸಹ ಸ್ವಾಮೀಜಿ ಮರೆತಿಲ್ಲ. ಮಾನವನ ಅಹಂ ಮತ್ತು ಸಮಸ್ಯೆಗಳನ್ನು ಸೃಷ್ಟಿಸುವಲ್ಲಿ ಅದರ ಅಸಾಧಾರಣ ಸಾಮರ್ಥ್ಯವನ್ನು ಅವರು ಚೆನ್ನಾಗಿಯೇ ಗ್ರಹಿಸಿದ್ದರು. ನಾವು ಹೇಗಿರಬೇಕೋ ಅದಕ್ಕಿಂತ ಉನ್ನತ ಮಟ್ಟದಲ್ಲಿ ನಮ್ಮನ್ನು ನಾವು ಕೂರಿಸಿಕೊಳ್ಳುವ ಬಗ್ಗೆಯೂ ಪದೇ ಪದೇ ಅವರು ಎಚ್ಚರಿಕೆ ನೀಡಿದ್ದಾರೆ. ‘ಪೀಠದ ಮೇಲೆ ನಿಂತು ಬಡವನತ್ತ ಒಂದಿಷ್ಟು ಹಣ ಒಗೆಯುವುದು ಸರಿಯಲ್ಲ’ ಎಂಬ ಅವರ ಉಕ್ತಿಯಂತೂ ದಂತಕತೆಯೇ ಆಗಿದೆ. ಸೇವಾ ಕಾರ್ಯ ಕೈಗೆತ್ತಿಕೊಳ್ಳುವುದು ಕೇವಲ ಸಮಾಜದ

ಉದ್ದಾರಕ್ಕಷ್ಟೇ ಅಲ್ಲ, ಅಂತಹ ಕಾರ್ಯ ನಡೆಸುವವರ ವಿಕಸನ ಮತ್ತು ಬೆಳವಣಿಗೆಯ ಸಲುವಾಗಿಯೂ ಅದು ಅಗತ್ಯ, ಸಮಾಜ ಸೇವೆಯ ಈ ಮಾರ್ಗವು ಆಧ್ಯಾತ್ಮಿಕ ವಿಕಸನದ – ಅಂತಿಮ ಹಂತವೂ ಹೌದು ಎಂದು ಅವರು ತಿಳಿದಿದ್ದರು. ‘ಜನಸೇವೆಯೇ ಜನಾರ್ದನನ ಸೇವೆ’ ಎಂಬ ಸ್ವಾಮೀಜಿಯ ಅದ್ಭುತವಾದ ಸಲಹಯಲ್ಲಂತೂ, ಅವರ ಎಲ್ಲ ಬಗೆಯ ಅತ್ಯುನ್ನತ ತತ್ವಚಿಂತನೆಯೂ ಅತ್ಯಂತ ಸರಳವಾಗಿ ಮಿಳಿತಗೊಂಡಿದೆ. ಈ ಹೇಳಿಕೆ ಒಂದು ಭಾವನಾತ್ಮಕವಾದ ನಿವೇದನೆಯಂತಿದ್ದು, ಸೇವಾ ಕಾರ್ಯವನ್ನು ಕೈಗೆತ್ತಿಕೊಳ್ಳಲು ಪ್ರೇರೇಪಣೆ ನೀಡುತ್ತದೆ.

ಸ್ವಾಮಿ ವಿವೇಕಾನಂದರು ಮತ್ತು ಅವರ ಸಂದೇಶಗಳನ್ನು ನಮ್ಮ ಯುವಜನರಲ್ಲಿ ಅಂತರ್ಗತ ಮಾಡಿಸುವುದು ಇಂದು ದೇಶ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಮುಖಾಮುಖಿಯಾಗಲು ಇರುವ ಅತ್ಯಂತ ಸರಳವಾದ ಮಾರ್ಗ. ಪ್ರತಿ ಯುವಶಕ್ತಿಯೂ ತನ್ನೊಳಗಿನಿಂದಲೇ ಕಾರ್ಯಾರಂಭ ಮಾಡಬೇಕು. ಅಂತಹ ಕಾರ್ಯಕ್ಕಾಗಿ ತಮ್ಮ ವ್ಯಕ್ತಿತ್ವವನ್ನು ಸಿದ್ಧಗೊಳಿಸಿಕೊಳ್ಳಬೇಕು. ದೈಹಿಕವಾಗಿ ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ನಾವು ಆ ಕಾರ್ಯಕ್ಕೆ ಬದ್ಧರಾಗಿದ್ದೇವೆ ಎಂಬ ಭರವಸೆ ಮೂಡಿಸುವಂತೆ ಇರಬೇಕು. ಯುವಜನರಿಗೆ ಸಮಾಜ ಸೇವೆಗಿಂತ ಉತ್ತಮವಾದ ಮಾರ್ಗದರ್ಶನ ಬೇರೆ | ಯಾವುದಿದೆ? ಆದರೆ ಸಮಾಜ ಸೇವೆಯು, ಲೌಕಿಕ ಹೊಣೆಗಾರಿಕೆಯನ್ನು ತ್ಯಜಿಸಿ ಯಾವುದೋ ಕುಗ್ರಾಮದಲ್ಲಿ ಉಪವಾಸ ಕುಳಿತ ಮಾತ್ರಕ್ಕೆ ತಾನೇ ತಾನಾಗಿ ಆಗಿಬಿಡುವ ಕ್ರಿಯೆಯಲ್ಲ, ಸಾಮಾಜಿಕ ಪ್ರಜ್ಞೆಯನ್ನು ಬಡಿದೆಬ್ಬಿಸಿ, ಅದನ್ನು ಪ್ರಾಯೋಗಿಕವಾದ ಕ್ರಿಯೆಯಲ್ಲಿ ತೊಡಗಿಸುವ ಮೂಲಕ ಈ ಕಾರ್ಯ ಆರಂಭವಾಗುತ್ತದೆ. ಇಂತಹ ಚಟುವಟಿಕೆಗಳಲ್ಲಿ ತೊಡಗುವವರು ಇತರರ ಅಗತ್ನಗಳು ಮತ್ತು ಮಿತಿಗಳನ್ನು ಗಮನದಲ್ಲಿ ಇರಿಸಿಕೊಂಡಿರಬೇಕಾಗುತ್ತದೆ. ಹೀಗೆ ನಮ್ಮೊಳಗಿನಿಂದಲೇ ಆರಂಭವಾಗುವ ಈ ಕಾರ್ಯ ಕ್ರಮೇಣ ಅರ್ಹ ವ್ಯಕ್ತಿಗಳನ್ನೂ ಒಳಗೊಳ್ಳುತ್ತದೆ. ಇದು ನಮ್ಮ ಸಾಮಾಜಿಕ ಕಾರ್ಯಗಳ ಯಶಸ್ಸು ಮತ್ತು ಪ್ರಾಯೋಗಿಕತೆಗಾಗಿ ಯುವಜನರಿಗೆ ಸ್ವಾಮೀಜಿ ವಿವರಿಸಿರುವ ಒಂದು ಮಾರ್ಗ.

ಪ್ರತಿಯೊಬ್ಬರೂ ತಾವು ಏನಾಗಿರುವರೋ (ತಂತ್ರಜ್ಞಾನಿ ವಿಜ್ಞಾನಿ ಎಂಜಿನಿಯರ್, ವೈದ್ಯ ಇತ್ಯಾದಿ) ಆ ಕಾರ್ಯದಲ್ಲಿ ಇದ್ದುಕೊಂಡೇ ಸೇವಾ ಕಾರ್ಯದಲ್ಲಿ ತೊಡಗಬಹುದು. ನಮ್ಮ ಬದುಕಿನ ಪುಟ್ಟ ವೃತ್ತದಲ್ಲೇ ಏನನ್ನು ಬೇಕಾದರೂ ಸಾಧಿಸಲು ಸಾಕಷ್ಟು ಅವಕಾಶಗಳಿವೆ. ಸಣ್ಣ ಸಣ್ಣ ಬದಲಾವಣೆಗಳು ದೊಡ್ಡ ಕಾರ್ಯಕ್ಕೆ ಮುನ್ನುಡಿ ಬರೆಯುತ್ತವೆ. ಒಬ್ಬ ಒಳ್ಳೆಯ ಮತ್ತು ಪ್ರಾಮಾಣಿಕ ತಂತ್ರಜ್ಞಾನಿ, ವಿಜ್ಞಾನಿ, ಎಂಜಿನಿಯರ್ ಅಥವಾ ವೈದ ಆಗಿರುವುದೇ ಉತ್ತಮ ಕಾರ್ಯದ ಆರಂಭ, ಇಚ್ಚಾಶಕ್ತಿ ಹೊಂದಿದ, ಸಮರ್ಥರಾದ, ಲೌಕಿಕ ಜಂಜಾಟಗಳಿಂದ ಮುಕ್ತರಾದ, ಕೌಟುಂಬಿಕ ಬೇಡಿಕೆಗಳಿಗೆ ಸೀಮಿತವಾಗದ ಅದೃಷ್ಟಶಾಲಿಗಳು ಶಾಶ್ವತ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದು ಮತ್ತು ಸಮಾಜ ಸೇವೆಯನ್ನು ಪೂರ್ಣಕಾಲಿಕವಾಗಿ ಮುನ್ನಡೆಸಲು ಮುಂದಾಗಬಹುದು. ವೃತ್ತಿ ಬದುಕಿಗೆ ಸೀಮಿತ ಆಗದೆ ನಮ್ಮ ನಮ್ಮ ಪರಿಮಿತಿಗಳಲ್ಲೇ ಸಾಮಾಜಿಕ ಕ್ಷೇತ್ರಕ್ಕೂ ನಮ್ಮ ಕಾರ್ಯವನ್ನು ವಿಸ್ತರಿಸಿಕೊಳ್ಳುವ ಮೂಲಕ, ಸಾವಿರಾರು ಅರ್ಹ ಮತ್ತು ಆಸಕ್ತ ಯುವಜನರ ಗುಣಮಟ್ಟದ ಸಮಯವನ್ನು ಘನವಾದ ಕಾರ್ಯಗಳಲ್ಲಿ ತೊಡಗಿಸಬಹುದು. ಹೀಗೆ, ಸಾಮಾಜಿಕ ಚಟುವಟಿಕೆಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ನಮ್ಮ ಸುತ್ತಮುತ್ತಲಿನವರ ಸಮಸ್ಯೆಗಳಿಗೆ ಮಾತ್ರವಲ್ಲ, ನಮ್ಮೊಳಗಿನ ಸಮಸ್ಯೆಗಳು ಮತ್ತು ಗೊಂದಲಗಳಿಗೆಗೂ ನಾವು – ಉತ್ತರ ಕಂಡುಕೊಳ್ಳಬಹುದು ಎಂಬ ಸತ್ಯ ಅಂತಿಮವಾಗಿ ನಮಗೆ ಗೋಚರಿಸುತ್ತದೆ.

By |2018-08-09T01:34:32+00:00August 9th, 2018|Kannada, Public Articles|0 Comments

About the Author:

Dr. Ramaswami Balasubramaniam (Balu) is a development scholar, author, public policy advocate, leadership trainer and activist, known for his pioneering development work with rural and tribal people in Saragur of Heggadadevana kote taluk, near Mysore in Karnataka, India.He founded Swami Vivekananda Youth Movement (SVYM), a development organization based in Saragur when he was 19. After spending 26 years in development work among rural and tribal people, he pursued academic degrees in leadership, organisational development and public policy. He was the Frank H T Rhodes Professor at Cornell University between 2012 to 2014, and continues to hold academic positions in other universities. His book I, the citizen is a compilation of narratives and reflections of a development activist and was released in 2015 by the Prime Minister's office. He is also the Chairman of Grassroots Research And Advocacy Movement (GRAAM)at Vivekananda Institute for Leadership Development, Mysore.